ರಾಜಕೀಯ
ಬಿಜೆಪಿ, ಕಾಂಗ್ರೆಸ್ ಮತ್ತು ಹಿಂದುತ್ವ..!
ಕಾಂಗ್ರೆಸ್ ಮೃದು ಹಿಂದುತ್ವವಾದಿಯೇ?- ಹೌದು, ಕಾಂಗ್ರೆಸ್ ಜಾತಿವಾದಿಯೇ?- ಹೌದು. ಕಾಂಗ್ರೆಸ್ ಭ್ರಷ್ಟ ಪಕ್ಷವೇ?- ಹೌದು. ಆದರೂ ಕಾಂಗ್ರೆಸ್ ಮತ್ತು ಬಿಜೆಪಿ ಎರಡನ್ನೂ ಒಂದೇ ತಕ್ಕಡಿಯಲ್ಲಿ ಇಟ್ಟು ನೋಡುವುದನ್ನು ನಾನು ನಾನು ಒಪ್ಪುವುದಿಲ್ಲ. ಬಿಜೆಪಿ, ಮತ್ತು ಅದರ ಜುಟ್ಟು ಹಿಡಿದಿರುವ ಆರೆಸ್ಸೆಸ್ ಧರಿಸಿರುವುದು ಸಾಂಸ್ಕೃತಿಕ ಮುಖವಾಡ, ಅದರ ಒಳಗಿರುವ ನೈಜಮುಖ ಜನಾಂಗವಾದಿ ಫ್ಯಾಸಿಸಂ.
ಅಂದರೆ, ಈ ದೇಶದ ಸಂಪೂರ್ಣ ಹಿಡಿತ ಕೆಲವೇ ಕೆಲವು ಜನಾಂಗಗಳಿಗೆ/ವರ್ಗಗಳಿಗೆ/ಜಾತಿಗಳಿಗಳ ಕೈಯಲ್ಲಿ ಇರಬೇಕೆಂದು ಬಯಸಿ ಅದನ್ನು ಜಾರಿಗೊಳಿಸಲು ನೂರು ವರ್ಷಗಳ ಹಿಂದೆಯೇ (1921ರಲ್ಲಿ) ಮೂಂಜೆಯನ್ನು ಜರ್ಮನಿಗೆ ಕಳಿಸಿ, ಅದೇ ಪ್ರಕಾರವಾಗಿ ಸಂಘಟನೆ ಕಟ್ಟಿದ ಇತಿಹಾಸ ಅದಕ್ಕಿದೆ. ಈ ಮೇಲಿನ ಉದ್ದೇಶಕ್ಕೆ ಆರೆಸ್ಸೆಸ್ – ಬಿಜೆಪಿಗೆ ತಡೆಯುಂಟು ಮಾಡುತ್ತಿರುವುದೇ 1950ರಲ್ಲಿ ಈ ದೇಶ ಒಪ್ಪಿಕೊಂಡ ಸಂವಿಧಾನ.
ಇದಕ್ಕೆ ಹೋಲಿಸಿದರೆ ಕಾಂಗ್ರೆಸ್ ಗೆ ಮೇಲಿನ ಯಾವ ಹಿಡನ್ ಅಜೆಂಡಾವಾಗಲೀ, ಮುಖವಾಡವಾಗಲೀ ಇಲ್ಲ. ದೇಶದ ಸಂವಿಧಾನವನ್ನು ತಿದ್ದುಪಡಿ ಮೂಲಕ ಬಂಡವಾಳಿಗರ ಲಾಭಕ್ಕೆ ಅನುವು ಮಾಡಿಕೊಡಲು ಕಾಂಗ್ರೆಸ್ ಬಯಸುತ್ತದೆಯೇ ಹೊರತು ಬಿಜೆಪಿಯಂತೆ ಒಂದು ಹೊಸ ಜನಾಂಗೀಯ ನಾಗರಿಕತೆ ಕಟ್ಟಲು ಸಂವಿಧಾನವನ್ನೇ ಬುಡಮೇಲು ಮಾಡುವ ಯಾವ ಉದ್ದೇಶಗಳೂ ಕಾಂಗ್ರೆಸ್ ಗೆ ಇಲ್ಲ.
ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಂಡು ಇತರೆ ಎಷ್ಟೋ ಪಕ್ಷಗಳನ್ನು ಉಳಿಸಬಹುದಿತ್ತು, ಬೆಳೆಸಬಹುದಿತ್ತು. ಆದರೆ ಭಾರತದ ರಾಜಕೀಯ ಇತಿಹಾಸದಲ್ಲಿ ಕಾಂಗ್ರೆಸ್ ಜೊತೆ ಸೇರಿದ ಮಿತ್ರಪಕ್ಷಗಳು ಬಹಳ ಸಲ ವಂಚನೆಗೊಳಗಾಗಿವೆ. ಇದೆಲ್ಲಾ ನಿಜವೇ ಆದರೂ ಇದಾವುದೂ ಸಹ ಬಿಜೆಪಿ, ಆರೆಸ್ಸೆಸ್‍ನ ಹಿಡನ್ ಅಜೆಂಡಾಕ್ಕೆ ಸರಿಸಾಟಿಯಲ್ಲ. ಗುದ್ದಾಡಿಕೊಂಡೇ ಕಾಂಗ್ರೆಸನ್ನು ಮಣಿಸಬಹುದು. ಆದರೆ ಒಮ್ಮೆ ಇಡೀ ದೇಶದ ಸಂಪೂರ್ಣ ಜುಟ್ಟು ಆರೆಸ್ಸೆಸ್ ಕೈಗೆ ಸಿಕ್ಕಿದರೆ ದೇಶದ ಅಳಿದುಳಿತ ಸಂಸ್ಥೆಗಳೂ ಸರ್ವನಾಶವಾಗುತ್ತವೆ. ಅದು ತರಲಿರುವ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ನೀತಿಗಳು ದೇಶದ ಬಹುಜನರ ಪಾಲಿಗೆ ಮರಣಶಾಸನವಾಗಿರುತ್ತವೆ. ಒಂದು ಅತ್ಯಂತ ಅನಾಗರಿಕವಾದ ಗುಲಾಮಗಿರಿ ವ್ಯವಸ್ಥೆ ಬಂದೊದಗಲಿದೆ.
ರಾಜಕೀಯ ಭಾಷೆಯಲ್ಲಿ ಇದನ್ನು ಫ್ಯಾಸಿಸಂ ಎಂದು ಹೇಳುತ್ತೇವಾದರೂ ಆರೆಸ್ಸೆಸ್ ಭಾರತದಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಫ್ಯಾಸಿಸಂ ಸ್ವರೂಪ ಟೋಟಲಿ ಬೇರೆಯದೇ ರೀತಿಯದ್ದು. ಹಿಟ್ಲರ್, ಮುಸಲೋನಿ ಯಾರೂ ಅದರ ಎದುರು ನಿಲ್ಲುವುದಿಲ್ಲ. ಇಸ್ರೇಲ್ ಕೂಡಾ ನಾಚಿಕೊಳ್ಳುತ್ತದೆ.
ನಿಮಗೆ ತಿಳಿದಿರಲಿ ಆರೆಸ್ಸೆಸ್ ಹಿಂದುತ್ವದ ಮೂಲಕ ಹೊಸ ನಾಗರಿಕತೆಯೊಂದನ್ನು ನಿಜಗೊಳಿಸುವ ಮಾತಾಡುತ್ತಿದೆ. ಏನದು ಆರೆಸ್ಸೆಸ್ ತರಲು ಬಯಸಿರುವು ನಾಗರಿಕತೆ? ಕಾಂಗ್ರೆಸ್, ಕಮ್ಯುನಿಷ್ಟ್, ಬಿಎಸ್ ಪಿ ಯಾರೆಂದರೆ ಯಾರೂ ಈ ‘ನಾಗರಿಕತೆ’ ಹೆಸರಿನ ಅನಾಗರಿಕೆತೆ ಏನು ಎಂಬ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ. ಆರೆಸ್ಸೆಸ್ ತರಬಯಸಿರುವು ಆ ನಾಗರಿಕತೆಯಲ್ಲಿ ಇಂದು ಪ್ರತಿಪಕ್ಷಗಳೆಂದು ಭಾವಿಸಿಕೊಂಡಿರುವ ಯಾವ ಪಕ್ಷಗಳೂ ಕನಿಷ್ಠ ಅಸ್ತಿತ್ವವನ್ನೂ ಹೊಂದಿರುವುದಿಲ್ಲ, ಸಂವಿಧಾನದ ಪೀಠಿಕೆಯನ್ನು ಬಲಿಪೀಠಕ್ಕೆ ಅರ್ಪಿಸಲಾಗಿರುತ್ತದೆ, ಡೆಮಕ್ರಸಿಯ ಯಾವ ಉದಾರತೆಯೂ ಉಸಿರಿಟ್ಟುಕೊಂಡಿರುವುದಿಲ್ಲ, ಸಂಸ್ಕೃತಿ ಸಂಪೂರ್ಣ ಏಕರೂಪಿಯಾಗಿರುತ್ತದೆ, ಸಮಾಜ ಪಿರಮಿಡ್ಡಾಗಿರುತ್ತದೆ, ಪ್ರಭುತ್ವ ಬಿಗಿಯಾಗಿರುತ್ತದೆ. ಭಿನ್ನ-ಎನಿಸುವ ಎಲ್ಲವನ್ನೂ ನಿರ್ದಯವಾಗಿ ಹತ್ತಿಕ್ಕಲಾಗುತ್ತದೆ.
ಇಂತಹ ಒಂದು ‘ಹೊಸ ನಾಗರಿಕತೆಯ’ ಕಲ್ಪನೆ ಕಾಂಗ್ರೆಸ್ಸಿಗೆ ಇಲ್ಲವೆಂದೇ ನನ್ನ ಅನಿಸಿಕೆ. ಈ ಮೇಲೆ ಹೇಳಿದ ಆರೆಸ್ಸೆಸ್ಸಿನ ಅಜೆಂಡಾಗಳಿಗೆ ಎಷ್ಟೋ ಸಲ ಕಾಂಗ್ರೆಸ್ ಪೂರಕವಾಗಿಯೇ ವರ್ತಿಸಿದೆ ಎಂಬುದೂ ನಿಜ. ಆದರೆ ಅದರ ಪರಿಣಾಮವಾಗಿಯೇ ಇಂದು ಅದು ಹೀನಾಯ ಸ್ಥಿತಿ ಅನುಭವಿಸುತ್ತಿರುವುದು.
ದುರಂತವೆಂದರೆ ಕಾಂಗ್ರೆಸನ್ನೂ ಒಳಗೊಂಡಂತೆ ಎಲ್ಲಾ ರಾಜಕೀಯ ಪಕ್ಷಗಳು ತಂತಮ್ಮ ಅಸ್ತಿತ್ವವೊಂದನ್ನೇ ಧ್ಯೇಯವಾಗಿಟ್ಟುಕೊಂಡು ಯೋಚಿಸುತ್ತಿವೆಯೇ ವಿನಃ ಈ ದೇಶದ ಭವಿಷ್ಯದ ಬಗ್ಗೆ ಅವುಗಳ ಬದ್ಧತೆಯ ಬಗ್ಗೆ ಅನುಮಾನ ಕಾಡುತ್ತಿದೆ.
ಹೆಚ್ಚಿಲ್ಲ ಒಂದೇ ತಿಂಗಳು ಬಾಕಿ ಇದೆ. ಒಂದೋ ಈ ಪಕ್ಷಗಳ ವಿವೇಕ ಈ ದೇಶವನ್ನು ಉಳಿಸಬೇಕು ಇಲ್ಲವೇ ಈ ದೇಶದ ಹಳ್ಳಿ,ಸ್ಲಂಗಳಲ್ಲಿ ವಾಸಿಸುವ ಜನಕೋಟಿ, ಬದುಕಿನ ವಾಸ್ತವಗಳ ಅರಿವಿರುವ ಯುವಜನತೆ ಯಾವ ಪ್ರಲೋಭನೆಗೂ ಒಳಗಾಗದೇ ತೋರುವ ಎಚ್ಚರ ಈ ದೇಶವನ್ನು ಉಳಿಸಬೇಕು. ಎರಡೂ ಕೈ ಕೊಟ್ಟರೆ ಭಾರತದ ಪ್ರಜಾಪ್ರಭುತ್ವದ ಚರಮಗೀತೆ ಹಾಡೋಣ..ಸಿದ್ಧರಾಗಿ..!
–ಹರ್ಷಕುಮಾರ್ ಕುಗ್ವೆ
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಹೊಳಲ್ಕೆರೆ | ಸ್ಪೀಚ್ ಸಂಸ್ಥೆ ಸಂಸ್ಥಾಪಕ ಹೆಚ್.ರಾಮಚಂದ್ರಪ್ಪ ನಿಧನ ; ಇಂದು ಅಂತ್ಯಕ್ರಿಯೆ
ಸುದ್ದಿದಿನ,ಚಿತ್ರದುರ್ಗ:ಜಿಲ್ಲೆಯ ಬ್ಯಾಂಕ್ ಕಾಲೋನಿಯ ಸ್ಪೀಚ್ ಸಂಸ್ಥೆಯ ಸಂಸ್ಥಾಪಕರು ಹಾಗೂ ಎರಡು ಅವಧಿಗೆ ಹೊಳಲ್ಕೆರೆ ತಾಲ್ಲೂಕಿನ ಅರೇಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಹೆಚ್.ರಾಮಚಂದ್ರಪ್ಪ (59 ವರ್ಷ) ಶನಿವಾರ ಬೆಳಗ್ಗೆ 10:35 ಕ್ಕೆ ಅನಾರೋಗ್ಯದಿಂದ ನಿಧನರಾದರು.
ಮೃತರು ಪತ್ನಿ, ಸಹೋದರ, ಸಹೋದರಿಯರು ಸೇರಿದಂತೆ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ. ಇವರ ಅಂತ್ಯ ಕ್ರಿಯೆಯನ್ನು ಹೊಳಲ್ಕೆರೆ ಸಮೀಪದ ನೆಹರು ಕಾಲೋನಿಯ ಜಮೀನಿನಲ್ಲಿ ಇಂದು (ಭಾನುವಾರ, ಜೂನ್ 07 ರಂದು ಮಧ್ಯಾಹ್ನ 2 ಗಂಟೆಗೆ) ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಸಂಪರ್ಕ ಮೊಬೈಲ್ ಸಂಖ್ಯೆ : 9740114246
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಆಶ್ರಯ ಯೋಜನೆ – ಆವಧಿ ವಿಸ್ತರಣೆ
ಸುದ್ದಿದಿನ,ದಾವಣಗೆರೆ : 2025-26 ನೇ ಸಾಲಿನ ಪ್ರಧಾನ ಮಂತ್ರಿ ಆವಾಸ್ (ನಗರ) 2.0 ಯೋಜನೆಯಡಿ ನಿವೇಶನ ಮತ್ತು ವಸತಿ ರಹಿತ ಫಲಾನುಭವಿಗಳ ಅರ್ಜಿಗಳನ್ನು ಸಲ್ಲಿಸಲು ಜೂನ್ 30 ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.
ದಾವಣಗೆರೆ ಮಹಾ ನಗರಪಾಲಿಕೆ ವ್ಯಾಪ್ತಿಯಲ್ಲಿನ ಅರ್ಹ ನಿವೇಶನ ಹಾಗೂ ವಸತಿ ರಹಿತ ಅಂಗವಿಕಲರು, ಹಿರಿಯ ನಾಗರಿಕರು, ಒಂಟಿ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದವರು, ಹಿಂದುಳಿದ, ಅಲ್ಪಸಂಖ್ಯಾತ ವರ್ಗದವರು, ತೃತೀಯ ಲಿಂಗಿಗಳು, ಸ್ವಚ್ಛತಾ ಕಾರ್ಮಿಕರು, PM SVanidhi (ಪಿ ಎಂ -ಸ್ವ ನಿಧಿ )ಯೋಜನೆಯಡಿ ಗುರುತಿಸಲ್ಪಟ್ಟ ಬೀದಿ ವ್ಯಾಪಾರಿಗಳು ಮತ್ತು ಪ್ರಧಾನ ಮಂತ್ರಿ ವಿಶ್ವ ಕರ್ಮ ಯೋಜನೆಯಡಿ ಗುರುತಿಸಿದ ಕುಶಲ ಕರ್ಮಿಗಳು, ಅಂಗನವಾಡಿ ಕಾರ್ಯಕರ್ತರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ವಲಸೆ ಬಂದ ಕುಟುಂಬದವರು ಅಗತ್ಯ ದಾಖಲೆಗಳೊಂದಿಗೆ ತಮ್ಮ ಅರ್ಜಿಗಳನ್ನು http://pmayurban.gov.in ಆನ್ಲೈನ್ ವೆಬ್ ಸೈಟ್ ನಲ್ಲಿ ಸಲ್ಲಿಸಬಹುದು ಅಥವಾ ಖುದ್ದಾಗಿ ಮಹಾನಗರ ಪಾಲಿಕೆಯ ಆಶ್ರಯ ಶಾಖೆಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬಹುದು ಎಂದು ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರಾದ ಡಾ.ಮಹಾಂತೇಶ್ ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಬಡವರ ಕಲ್ಯಾಣವೇ ನಮ್ಮ ಆಡಳಿತದ ಕೇಂದ್ರಬಿಂದು : ಸಿಎಂ ಡಿಕೆಶಿ
ಸುದ್ದಿದಿನ,ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಜನಪರ ಆಡಳಿತಕ್ಕೆ ಆದ್ಯತೆ ನೀಡುವುದಾಗಿ ಘೋಷಿಸಿದ್ದು, ಯುವಕರು, ವಿದ್ಯಾರ್ಥಿಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಮೊದಲ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳ ತ್ವರಿತ ಪರಿಹಾರವೇ ತಮ್ಮ ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.
ರಾಜ್ಯದಾದ್ಯಂತ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಉಚಿತ ಬಸ್ ಪಾಸ್ ಯೋಜನೆ ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಜೊತೆಗೆ ಯುವಜನರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ “ಭಾರತ್ ಜೋಡೋ ಯುವ ಸಂಘ”ಗಳ ರಚನೆಗೆ ಸರ್ಕಾರ ಮುಂದಾಗಲಿದೆ ಎಂದು ಹೇಳಿದರು. ಈ ಸಂಘಟನೆಗಳು ಸಾಮಾಜಿಕ ಸೌಹಾರ್ದತೆ ಮತ್ತು ಯುವಜನರ ಸಬಲೀಕರಣಕ್ಕೆ ನೆರವಾಗಲಿವೆ ಎಂದು ಅಭಿಪ್ರಾಯಪಟ್ಟರು.
ನಗರ ಹಾಗೂ ಗ್ರಾಮೀಣ ಪ್ರದೇಶಗಳ ಮೂಲಸೌಕರ್ಯ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದ ಮುಖ್ಯಮಂತ್ರಿ, ವಿಶೇಷವಾಗಿ ಬೆಂಗಳೂರಿನ ಹದಗೆಟ್ಟ ರಸ್ತೆಗಳ ದುರಸ್ತಿ ಮತ್ತು ಡಾಂಬರೀಕರಣ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಜನರು ಎದುರಿಸುತ್ತಿರುವ ನಾಗರಿಕ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.
ಮನೆ ನಿರ್ಮಾಣ ಹಾಗೂ ಆಸ್ತಿ ದಾಖಲೆಗಳಿಗೆ ಸಂಬಂಧಿಸಿದ ಎ-ಖಾತಾ ಮತ್ತು ಬಿ-ಖಾತಾ ಸಮಸ್ಯೆಗಳ ಪರಿಹಾರಕ್ಕೂ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು. ಜನಸಾಮಾನ್ಯರ ಬದುಕಿಗೆ ನೇರವಾಗಿ ಸಂಬಂಧಿಸಿದ ವಿಷಯಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವುದು ತಮ್ಮ ಜೀವನದ ಮಹತ್ವದ ಜವಾಬ್ದಾರಿಯಾಗಿದೆ ಎಂದು ಹೇಳಿದ ಅವರು, ಸಂವಿಧಾನದ ಮೌಲ್ಯಗಳನ್ನು ಕಾಪಾಡಿಕೊಂಡು ಎಲ್ಲ ವರ್ಗಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು. ರಾಜ್ಯದ ಅಭಿವೃದ್ಧಿಗೆ ಜನರ ಸಹಕಾರ ಅಗತ್ಯವಾಗಿದ್ದು, ಪಾರದರ್ಶಕ ಮತ್ತು ಉತ್ತರದಾಯಿ ಆಡಳಿತ ನೀಡುವುದು ತಮ್ಮ ಸಂಕಲ್ಪವಾಗಿದೆ ಎಂದು ಹೇಳಿದರು.
“ಜನರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುವ ಸರ್ಕಾರವನ್ನು ನೀಡುತ್ತೇವೆ. ಯುವಕರು, ರೈತರು, ಮಹಿಳೆಯರು ಮತ್ತು ಬಡವರ ಕಲ್ಯಾಣವೇ ನಮ್ಮ ಆಡಳಿತದ ಕೇಂದ್ರಬಿಂದುವಾಗಿರುತ್ತದೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days agoಹೊಳಲ್ಕೆರೆ | ಸ್ಪೀಚ್ ಸಂಸ್ಥೆ ಸಂಸ್ಥಾಪಕ ಹೆಚ್.ರಾಮಚಂದ್ರಪ್ಪ ನಿಧನ ; ಇಂದು ಅಂತ್ಯಕ್ರಿಯೆ
-
ಅಂಕಣ7 days agoಕವಿತೆ | ದೇವರ ಹೂವು
-
ದಿನದ ಸುದ್ದಿ5 days ago10 ಮುಖ್ಯ ಅಂಶಗಳನ್ನು ಪಾಲಿಸಿ ; ಸಕ್ಕರೆ ಕಾಯಿಲೆಗೆ ಗುಡ್ ಬೈ ಹೇಳಿ..
-
ದಿನದ ಸುದ್ದಿ5 days agoರಾಷ್ಟ್ರೀಯ ಖಾದ್ಯ ತೈಲ ಅಭಿಯಾನ – ಎಣ್ಣೆಕಾಳು ಕಾರ್ಯಕ್ರಮದಡಿ ಸೌಲಭ್ಯ: ಅರ್ಜಿ ಆಹ್ವಾನ
-
ದಿನದ ಸುದ್ದಿ4 days agoವಸತಿ ಯೋಜನೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ5 days agoಉಚಿತ ಕೋಳಿ ಸಾಕಾಣಿಕೆ ತರಬೇತಿ: ಅರ್ಜಿ ಆಹ್ವಾನ
-
ದಿನದ ಸುದ್ದಿ5 days agoಕೃಷಿ ಪಂಡಿತ ಹಾಗೂ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ: ಅರ್ಜಿ ಆಹ್ವಾನ
-
ದಿನದ ಸುದ್ದಿ1 day agoದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

