ದಿನದ ಸುದ್ದಿ
ಅರಣ್ಯ ಕಾಯ್ದೆ ತಿದ್ದುಪಡಿಗಳನ್ನು ಹಿಂತೆಗೆದುಕೊಳ್ಳಬೇಕು : ಅರಣ್ಯ ಮಂತ್ರಿಗಳಿಗೆ ಬೃಂದಾ ಕಾರಟ್ ಪತ್ರ
ಇದು ಕೇಂದ್ರೀಕರಣ, ವ್ಯಾಪಾರೀಕರಣ, ಖಾಸಗೀಕರಣ ಮತ್ತು ಅಪರಾಧೀಕರಣದ ನೀಲನಕ್ಷೆ
ಅರಣ್ಯ ಕಾಯ್ದೆ, 1927ಕ್ಕೆ ಸರಕಾರ ಸೂಚಿಸಿರುವ ಕರಡು ತಿದ್ದುಪಡಿಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅವನ್ನು ಹಿಂತೆದುಕೊಳ್ಳಬೇಕು. ಅದರ ಬದಲಿಗೆ, ಈ ಕಾಯ್ದೆಯನ್ನು ಅರಣ್ಯ ಹಕ್ಕುಗಳ ಕಾಯ್ದೆ ಮತ್ತು ಬುಡಕಟ್ಟು ಸಮುದಾಯಗಳು ಎದುರಿಸುತ್ತಿರುವ ಚಾರಿತ್ರಿಕ ಅನ್ಯಾಯಗಳನ್ನು, ಈಗ ಒಂದೆಡೆಯಲ್ಲಿ ಅಭಿವೃದ್ಧಿಯ ಹೆಸರಲ್ಲಿ, ಮತ್ತೊಂದೆಡೆಯಲ್ಲಿ ಸಂರಕ್ಷಣೆಯ ಹೆಸರಲ್ಲಿ ಆಧುನಿಕ ಸ್ವರೂಪಗಳಲ್ಲಿ ಎಸಗುತ್ತಿರುವ ಅನ್ಯಾಯಗಳನ್ನು ಸರಿಪಡಿಸಲು ಯತ್ನಿಸಿರುವ ಇತರ ಕಾಯ್ದೆಗಳಿಗೆ ಸರಿಹೊಂದುವ ರೀತಿಯಲ್ಲಿ ತರುವುದೇ ಅರಣ್ಯ ಸಂರಕ್ಷಣೆಯ ಹಿತರಕ್ಷಣೆಯ ದೃಷ್ಟಿಯಿಂದ ಉತ್ತಮ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಿ ಪ್ರಕಾಶ ಜಾವ್ಡೇಕರ್ ಅವರಿಗೆ ಜುಲೈ 9 ರಂದು ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಈ ಮಂತ್ರಾಲಯ ಚರ್ಚೆಗೆ ಬಿಡುಗಡೆ ಮಾಡಿರುವುದು ಅರಣ್ಯ ಕಾಯ್ದೆ, 1927ಕ್ಕೆ ತಿದ್ದುಪಡಿಗಳ ಮೊದಲ ಕರಡನ್ನು ಮಾತ್ರವಾದರೂ, ಲೋಕಸಭೆಯಲ್ಲಿ ಜೂನ್ 28ರಂದು ಪ್ರಕಾಶ್ ಜಾವ್ಡೇಕರ್ ಈ ಕುರಿತು ಸಲ್ಲಿಸಿರುವ ಲಿಖಿತ ಹೇಳಿಕೆ ಬಹಳಷ್ಟು ದಾರಿ ತಪ್ಪಿಸುವಂತದ್ದು. “ನೀವು ತಿದ್ದುಪಡಿಗಳನ್ನು ಸಮರ್ಥಿಸಿ ಕೊಂಡಿದ್ದೀರಿ. ಈ ಕಾಯ್ದೆಯಲ್ಲಿರುವ ಅತ್ಯಂತ ದಮನಕಾರಿ ಕ್ರಮಗಳನ್ನು ಅಷ್ಟೇನೂ ಮುಖ್ಯವಲ್ಲ ಎಂದು ಬದಿಗೆ ಸರಿಸುವ ಪ್ರಯತ್ನ ಮಾಡಿದ್ದೀರಿ, ಅದರಲ್ಲೂ ಬುಡಕಟ್ಟು ಸಮುದಾಯಗಳ ಹಕ್ಕುಗಳನ್ನು ದಮನಮಾಡುತ್ತಿರುವುದನ್ನು ಉಪೇಕ್ಷಿಸಿದ್ದೀರಿ. ಆದ್ದರಿಂದ ಈ ತಿದ್ದುಪಡಿಗಳ ಬಗ್ಗೆ ಹೆಚ್ಚು ವಿವರವಾದ ವಿಮರ್ಶೆಯನ್ನು ತಮಗೆ ಕೊಡುವುದು ಅಗತ್ಯ ಎಂದು ನನಗನಿಸಿದೆ. ಇದು ಸಂಸತ್ತಿಗೆ ಒಂದು ಹೆಚ್ಚು ಸರಿಯಾದ ಚಿತ್ರವನ್ನು ಕೊಡಲು ನೆರವಾಗಬಹುದು” ಎಂದು ಈ ಪತ್ರವನ್ನು ಬರೆದಿರುವುದಕ್ಕೆ ಕಾರಣವನ್ನು ತಿಳಿಸುತ್ತ ಬೃಂದಾ ಕಾರಟ್ ಹೇಳಿದ್ದಾರೆ.
1927ರ ಅರಣ್ಯ ಕಾಯ್ದೆ ಬ್ರಿಟಿಶ್ ವಸಾಹತುಶಾಹಿಗಳಿಗೆ ಭಾರತದ ಅರಣ್ಯಗಳ ಮೇಲೆ ಅವರ ಸರಕಾರದ ಒಡೆತನವನ್ನು ಸ್ಥಾಪಿಸುವ ಒಂದು ಸಾಧನವಾಗಿತ್ತು. ಈ ಕಾಯ್ದೆಯ ಮೂಲಕ ಅವರು ಬುಡಕಟ್ಟು ಸಮುದಾಯಗಳು ಅತಿಕ್ರಮಣಕಾರರು ಎಂದು ಸಾರಿದರು. ಈ ಸಮುದಾಯಗಳ ವಿರುದ್ಧ ಚಾರಿತ್ರಿಕ ಅನ್ಯಾಯಗಳಿಗೆ ಈ ಮೂಲಕ ಕಾನೂನಿನ ಮಂಜೂರಾತಿಯನ್ನು ಪಡೆಯಲಾಯಿತು. ಈಗ ಸೂಚಿಸಿರುವ ತಿದ್ದುಪಡಿಗಳು, ಕೆಲವು ಸಂಪೂರ್ಣ ಹೊಸದಾದ ವಿಭಾಗಗಳನ್ನೂ ಹೊಂದಿದ್ದು, ಈ 91 ಅಂಶಗಳು ಅರಣ್ಯ ಸಂರಕ್ಷಣೆಯನ್ನು ಮಿಲಿಟರೀಕರಿಸಿ ಬ್ರಿಟಿಶರನ್ನೂ ಮೀರಿಸಿವೆ, ಅವರು ಧೈರ್ಯಸಾಲದೆ ಮಾಡದಿರುವುದನ್ನೂ ಮಾಡ ಹೊರಟಿದೆ.
ಈ ತಿದ್ದುಪಡಿಗಳು ಬುಡಕಟ್ಟು ಬದುಕಿನ ಪ್ರತಿಯೊಂದು ಆಯಾಮವನ್ನೂ ಅಪರಾಧೀಕರಿಸಿವೆ, ಅರಣ್ಯ ಅಧಿಕಾರಶಾಹಿಗೆ ವಾರಂಟ್ ನೀಡದೆಯೇ ಬಂಧಿಸುವ, ಕಾನೂನು ಜಾರಿಗೊಳಿಸಲು ಶಸ್ತ್ರಾಸ್ತ್ರಗಳ ಬಳಕೆಗೂ ಲಂಗುಲಗಾಮಿಲ್ಲದ ಅಧಿಕಾರಗಳನ್ನು ಕೊಟ್ಟಿದೆ. ಪ್ರಸ್ತಾವಿತ ರಾಷ್ಟ್ರೀಯ ಅರಣ್ಯ ಮಂಡಳಿಯಲ್ಲಿ ಸೇನಾಪಡೆಗಳ ಮುಖ್ಯಸ್ಥರನ್ನು ಒಬ್ಬ ಸದಸ್ಯರಾಗಿ ಸೂಚಿಸಿರುವುದು ಈ ದಮನಕಾರೀ ನಿಲುವಿನ ಸಂಕೇತವಾಗಿದೆ. ಬಹುಶಃ ಭಾರತದ ಸೇನಾಧಿಪತಿಗಳು ಈಗ ದೇಶದ ಗಡಿಗಳ ಬದಲು ಅರಣ್ಯಗಳನ್ನು ರಕ್ಷಿಸುವುದು ಹೇಗೆ ಎಂಬ ಚರ್ಚೆಗೆ ಸಮಯ ಕೊಡಬೇಕಾಗಿದೆ ಎಂದು ಈ ಬಗ್ಗೆ ಬರೆಯುತ್ತ ಬೃಂದಾ ಅವರು ಗೇಲಿ ಮಾಡಿದ್ದಾರೆ.
ಇನ್ನೊಂದೆಡೆಯಲ್ಲಿ, ಅರಣ್ಯಗಳ ನಿರ್ವಹಣೆಗೆ, ಸಂರಕ್ಷಣೆಗೆ, ಕಾಯ್ದುಕೊಳ್ಳಲಿಕ್ಕೆ ಮತ್ತು ಬುಡಕಟ್ಟು ಹಕ್ಕುಗಳಿಗೆ ಎಷ್ಟೊಂದು ಅನಿವಾರ್ಯವಾದ ಗ್ರಾಮಸಭೆಗಳ, ಅದರಲ್ಲೂ ಬುಡಕಟ್ಟು ಪ್ರದೇಶಗಳಲ್ಲಿನ ಗ್ರಾಮಸಭೆಗಳ ಪಾತ್ರವನ್ನು ಅಳಿಸಿ ಬಿಡಲಾಗಿದೆ ಎಂಬುದನ್ನು ಎತ್ತಿ ತೋರುತ್ತ ಬೃಂದಾ ಕಾರಟ್ ಈ ತಿದ್ದುಪಡಿಗಳು ಕೇಂದ್ರೀಕರಣ, ವ್ಯಾಪಾರೀಕರಣ ಮತ್ತು ಅಪರಾಧೀಕರಣದ ಒಂದು ನೀಲನಕ್ಷೆ ಎಂದು ಟೀಕಿಸಿದ್ದಾರೆ. ಅರಣ್ಯ ಸಂರಕ್ಷಣೆ ಈ ತಿದ್ದುಪಡಿಗಳ ಘೋಷಿತ ಗುರಿ.
ಆದರೆ ಇವು ಆ ಗುರಿಸಾಧನೆಗೆ ನೆರವಾಗುವುದಿಲ್ಲ. ತದ್ವಿರುದ್ಧವಾಗಿ, ಇವು ಅರಣ್ಯ ಹಕ್ಕುಗಳ ಕಾಯ್ದೆಯಲ್ಲಿ, 2006ರಲ್ಲಿ ತಿದ್ದುಪಡಿಗೊಂಡ ವನ್ಯ ಪ್ರಾಣಿಗಳ ರಕ್ಷಣಾ ಕಾಯ್ದೆಯಲ್ಲಿ, ಪರಿಶಿಷ್ಟ ಪ್ರದೇಶಗಳಿಗೆ ಪಂಚಾಯತ್ ವಿಸ್ತರಣೆ ಕಾಯ್ದೆ(ಪಿಎಇಎಸ್‌ಎಎ), ಭೂಸ್ವಾಧೀನ ಮತ್ತು ಮರುವಸತಿ ಕಾಯ್ದೆ,2013ರಲ್ಲಿ ಮಾತ್ರವಲ್ಲ, ಸಂವಿಧಾನದ ಶೆಡ್ಯೂಲ್ 5 ಮತ್ತು 6ರಲ್ಲಿ ಮಾನ್ಯ ಮಾಡಿರುವ ಬುಡಕಟ್ಟುಗಳು ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳ ಈಗಿರುವ ಹಕ್ಕುಗಳನ್ನು ಅಳಿಸಿ ಹಾಕುತ್ತವೆ.
ಮೇಲೆ ಹೇಳಿದಂತೆ, ಈ ತಿದ್ದುಪಡಿಗಳು ಹೇಗೆ ಕೇಂದ್ರೀಕರಣ, ವ್ಯಾಪಾರೀಕರಣ ಮತ್ತು ಅಪರಾಧೀಕರಣದ ನೀಲನಕ್ಷೆ ಎಂಬುದಕ್ಕೆ ವಿವರಗಳನ್ನೂ ಈ ಪತ್ರ ಒಳಗೊಂಡಿದೆ. ಇನ್ನೂ ಗಮನಾರ್ಹ ಸಂಗತಿಯೆಂದರೆ, ಬುಡಕಟ್ಟು ಜನಗಳ ಹಕ್ಕುಗಳ ಪ್ರಶ್ನೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ ಎಂಬುದನ್ನು ಪ್ರಕಾಶ ಜಾವ್ಡೇಕರ್ ಅವರಿಗೆ ಬೃಂದಾ ಕಾರಟ್ ಈ ಪತ್ರದಲ್ಲಿ ನೆನಪಿಸಬೇಕಾಗಿ ಬಂದಿದೆ.
“ಆದ್ದರಿಂದ ಈ ತಿದ್ದುಪಡಿಗಳು, ಒಟ್ಟಿನಲ್ಲಿ, ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಕೆ ಮತ್ತು ನಿರ್ದಿಷ್ಟವಾಗಿ ಬುಡಕಟ್ಟು ಜನಗಳ ಹಕ್ಕುಗಳನ್ನು, ಒಟ್ಟಾರೆಯಾಗಿ ಪಾರಂಪರಿಕ ಅರಣ್ಯವಾಸಿಗಳ ಹಕ್ಕುಗಳನ್ನು ರಕ್ಷಿಸುವ ಕಾನೂನು ಚೌಕಟ್ಟಿಗೆ ವ್ಯತಿರಿಕ್ತವಾಗಿವೆ. ಅಲ್ಲದೆ, ಬುಡಕಟ್ಟು ಹಕ್ಕುಗಳು ತಮ್ಮ ಮಂತ್ರಾಲಯದ ಕಾರ್ಯವ್ಯಾಪ್ತಿಗೆ ಸೇರಿದ್ದಲ್ಲ, ಅವು ಬುಡಕಟ್ಟು ವ್ಯವಹಾರಗಳ ಮಂತ್ರಾಲಯದ ವ್ಯಾಪ್ತಿಗೆ ಸೇರಿದವುಗಳು. ಆದರೂ ಈ ತಿದ್ದುಪಡಿಗಳ ಮೂಲಕ ತಮ್ಮ ಮಂತ್ರಾಲಯ ಬುಡಕಟ್ಟು ಹಕ್ಕುಗಳಿಗೆ ಸಂಬಂಧಪಟ್ಟ ಎಲ್ಲ ಶಾಸನಗಳನ್ನು ಮೀರಿ ನಿಲ್ಲಲು, ಅವನ್ನೆಲ್ಲ ಈ ಪ್ರಸ್ತಾವಿತ ಕಾಯ್ದೆಗೆ ಅಧೀನಗೊಳಿಸಲು ಪ್ರಯತ್ನಿಸುತ್ತಿದೆ. ಇದು ಯಾವುದೇ ರೀತಿಯಲ್ಲಿ ಒಪ್ಪತಕ್ಕಂತದ್ದಲ್ಲ” ಎಂದು ಬೃಂದಾ ಕಾರಟ್ ಪ್ರಕಾಶ ಜಾವ್ಡೇಕರ್ ಅವರಿಗೆ ಬರೆದ ಪತ್ರದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
( ಈ ವಾರದ ಜನಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನನ್ನ ನೆಚ್ಚಿನ ಪುಸ್ತಕ ವಿಮರ್ಶೆ ಸ್ಪರ್ಧೆ ; ವಿದ್ಯಾರ್ಥಿಗಳಿಗೆ ಬಹುಮಾನ
ಸುದ್ದಿದಿನ,ದಾವಣಗೆರೆ:ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.
ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್. ಪ್ರಥಮ ಬಹುಮಾನವಾಗಿ ಒಂದು ಸಾವಿರ, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ರೂ. 750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ. ಎಸ್. ರೂ. 500 ನಗದು ಬಹುಮಾನ ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು.
ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು, ಓದಿನ ಮೂಲಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚಿತ್ರದುರ್ಗ | ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಡಿ.ಡಿ ಬಿ.ಮಲ್ಲಿಕಾರ್ಜುನ, ಕ್ರೈಸ್ ಇ.ಡಿ ಬಿ.ಶಿವಸ್ವಾಮಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ಚಿತ್ರದುರ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ಶಾಲೆಗಳಿಗೆ (ಕ್ರೈಸ್) ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡದೆ ವಂಚಿಸುತ್ತಿರುವ ಶ್ರೀ ಶಿರಡಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಚಿತ್ರದುರ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಶಿವಸ್ವಾಮಿ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ವಸತಿ ಶಾಲೆಗಳಿಗೆ ಅಧಿಕೃತ ಟೆಂಡರುದಾರರಾದ ಶ್ರೀ ಶಿರಡಿ ಸಾಯಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರು ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡದೆ ಇರುವ ಅಧಿಕೃತ ಮಾಹಿತಿ ತಿಳಿದು, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ ಇವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರಾಂಶುಪಾಲರುಗಳಿAದ ಮಾಹಿತಿಹಕ್ಕು ಅಡಿಯಲ್ಲಿ ಪಡೆದ ದೃಢೀಕೃತ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಆಹಾರ ಸಾಮಾಗ್ರಿ ಸರಬರಾಜಿನಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿರುತ್ತವೆ.
ಆದ ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ನಾವು ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಪ್ರತ್ಯುತ್ತರವನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ದಿನಾಂಕ: 21-04-2026 ರಂದು ಜ್ಞಾಪನವನ್ನು ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ದೂರು ಅರ್ಜಿಗೆ ಸಂಬAಧಿಸಿದAತೆ ತನಿಖಾ ವರದಿಯನ್ನಾಗಲಿ ಅಥವಾ ಪ್ರತ್ಯುತ್ತರವನ್ನಾಗಲಿ ನೀಡಿರುವುದಿಲ್ಲ.
ಈ ಬಗ್ಗೆ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರಿಗೆ ದೂರು ನೀಡಲಾಗಿತ್ತು. ಆದರೆ ಇವರು ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ
ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ಆಶ್ರಯ, ತಾಲೂಕು ವಿಶ್ವಕರ್ಮ ಸೇವಾ ಸಮಾಜ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಜಂಟಿ ವತಿಯಿಂದ ಆಯೋಜಿಸಿರುವ ‘ವಿಶ್ವಕರ್ಮ ಜಯಂತಿ’ ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ರವಿಶಂಕರ್ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಜಿ. ಸುರೇಂದ್ರ ಮೂರ್ತಿ ಅವರು ವಹಿಸಲಿದ್ದಾರೆ. ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ರೇವಣ್ಣ, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್ ಎನ್., ಪದಾಧಿಕಾರಿಗಳಾದ ಈಶ್ವರಾಚಾರ್, ಚೇತನ್ ಮೂರ್ತಿ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಲಿದ್ದು, ಬಳಿಕ ಅಲ್ಲಿಂದ ತಾಲೂಕು ಆಡಳಿತ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ.
ವಿಶೇಷವೆಂದರೆ, ಪ್ರಕಾಶಕರು ಹಾಗೂ ಆಯೋಜಕರ ಆಸಕ್ತಿಯ ಮೇರೆಗೆ ‘ನಿರಾಕಾರ ವಿಶ್ವಕರ್ಮ’ ಕೃತಿಯನ್ನು ತಿಂಗಳ ಅಂತರದಲ್ಲಿ ಮೂರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸೆಪ್ಟೆಂಬರ್ 17ರಂದು ಕೆ.ಆರ್.ನಗರದಲ್ಲಿ ಕೃತಿ ಬಿಡುಗಡೆಯಾದರೆ, ಸೆಪ್ಟೆಂಬರ್ 20ರಂದು ಬೆಂಗಳೂರಿನ ತಾತಗುಣಿಯ ವಿಶ್ವಕರ್ಮ ನಗರದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳಿಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಹಾಗೆಯೇ, ನವೆಂಬರ್ 22ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾವ್ಯಸ್ಪಂದನ ಪ್ರಕಾಶನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿಯೂ ಈ ಕೃತಿ ಬಿಡುಗಡೆಯಾಗಲಿದೆ.
ಮಾನವ ನಾಗರಿಕತೆಯ ಇತಿಹಾಸವನ್ನು ತೆರೆದರೆ, ಅದರ ಪ್ರತಿಯೊಂದು ಪುಟದ ಹಿಂದೆಯೂ ಶ್ರಮಿಸಿದ ಅನಾಮಿಕ ಕೈಗಳು ಕಾಣಿಸುತ್ತವೆ. ಆ ಕೈಗಳು ಕಲ್ಲನ್ನು ಕೆತ್ತಿ ದೇವಸ್ಥಾನವಾಗಿಸಿವೆ, ಕಬ್ಬಿಣವನ್ನು ಬಡಿದು ಆಯುಧವಾಗಿಸಿವೆ, ಮರಕ್ಕೆ ರೂಪ ಕೊಟ್ಟು ಬಾಗಿಲಾಗಿಸಿವೆ, ಮಣ್ಣಿಗೆ ಜೀವ ತುಂಬಿ ಮಡಕೆಯಾಗಿಸಿವೆ; ಹಾಗೆಯೇ ಬಣ್ಣಗಳ ಮೂಲಕ ಅಚ್ಚಳಿಯದ ಭಾವನೆಗಳನ್ನು ಮೂಡಿಸಿವೆ. ಆ ಸೃಷ್ಟಿಶೀಲ ಕೈಗಳಿಗೆ ಬಹುಶಃ ಇತಿಹಾಸದ ಅಧಿಕೃತ ಪುಟಗಳಲ್ಲಿ, ರಾಜ-ಮಹಾರಾಜರ ಕಥೆಗಳ ನಡುವೆ ದೊಡ್ಡ ಅಕ್ಷರಗಳಲ್ಲಿ ಹೆಸರು ಸಿಕ್ಕಿಲ್ಲದಿರಬಹುದು. ಆದರೆ ಅವರು ನಿರ್ಮಿಸಿದ ಕಲೆ, ಶಿಲ್ಪ, ವಾಸ್ತು, ಉಪಕರಣ ಮತ್ತು ಸೌಂದರ್ಯವೇ ನಮ್ಮ ನಾಗರಿಕತೆಯ ಉಸಿರಾಗಿ, ಜೀವಂತ ಸಾಕ್ಷಿಗಳಾಗಿ ಇಂದಿಗೂ ಉಳಿದಿವೆ. ಅಂತಹ ಸೃಜನಶೀಲ ಕೈಗಳ ಸಮೂಹ ಸ್ಮೃತಿಯನ್ನು, ಪರಂಪರೆಯನ್ನು ಮತ್ತು ಇತಿಹಾಸವನ್ನು ಅರಿಯುವ ಅರ್ಥಪೂರ್ಣ ಪ್ರಯತ್ನವನ್ನು ನಿರಾಕಾರ ವಿಶ್ವಕರ್ಮ ಕೃತಿಯಲ್ಲಿ ಲೇಖಕರಾದ ಚಂದ್ರಶೇಖರ ಗಂಧನಹಳ್ಳಿ ಅವರು ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


