Connect with us

ರಾಜಕೀಯ

ಆ ಮಹಾತ್ಯಾಗಿ ನುಡಿದ ಭವಿಷ್ಯ ಸುಳ್ಳಾಗಲಿಲ್ಲ

Published

on

ಕಾನ್ಷೀರಾಂ ಮತ್ತು ಮಾಯಾವತಿ

ಇಂದು ಅಕ್ಕ ಮಾಯಾವತಿಯವರ 64 ನೇ ಹುಟ್ಟು ಹಬ್ಬ. ಅವರಿಗೆ ಭೀಮ ಶುಭಾಶಯಗಳನ್ನು ಕೋರುತ್ತಾ..

  • ಮಹೇಶ್ ಸರಗೂರು

ಅದು 1977 ರ ಚಳಿಗಾಲದ ಸಮಯ. ದೆಹಲಿಯ ಚಳಿ ಎಂದರೆ ಕೇಳಬೇಕೆ? ಚಳಿ ಎಂದರೆ ಅಂತಿಂಥ ಚಳಿಯಲ್ಲ. ಅತ್ಯಂತ ಭೀಕರವಾದ ಚಳಿ. ನರನಾಡಿಗಳಲ್ಲಿ ನಡುಕ ಹುಟ್ಟಿಸುವ ಚಳಿ.ಇಂತಹ ವಿಪರೀತ ಚಳಿಯ ಅವಧಿಯಲ್ಲೂ ಕಾನ್ಷೀರಾಮ್ ಸಾಹೇಬರು ಬಾಂಸೆಫ್ ಸಂಘಟನೆಯನ್ನು ಹುಟ್ಟುಹಾಕಲು ಹಗಲಿರುಳು ಹೆಣಗುತ್ತಿದ್ದರು.

ಇಂತಹ ಸಮಯದಲ್ಲಿ ಒಂದು ದಿನ ಕಾನ್ಷೀರಾಮ್ ಸಾಹೇಬರು ಮನದಲ್ಲಿ ಅದೇನೋ ಒಂದು ಗಟ್ಟಿ ನಿರ್ಧಾರ ಮಾಡಿಕೊಂಡು ಮೇಲಕ್ಕೆದ್ದರು. ಕಿವಿಗೆ ಮತ್ತು ಕುತ್ತಿಗೆಗೆ ಉಲ್ಲನ್ ಸ್ಕಾರ್ಫ್ ಸುತ್ತಿಕೊಂಡು ಸಹೊದ್ಯೋಗಿಯೊಬ್ಬನನ್ನು ಜೊತೆಗೆ ಕರೆದುಕೊಂಡು ಹೊರನಡೆದರು. ಆಗ ಸಮಯ ರಾತ್ರಿ ಒಂಭತ್ತು ಗಂಟೆ.

ದೆಹಲಿಯ ಬಹುತೇಕ ಜನರು ಆ ಕೊರೆಯುವ ಚಳಿಗೆ ಹೆದರಿಕೊಂಡು, ಬೆಚ್ಚನೆಯ ಹಾಸಿಗೆಯಲ್ಲಿ ಮೈ ತುಂಬಾ ಹೊದ್ದುಕೊಂಡು ಮಲಗಿದ್ದರು. ಇಂತಹ ಸಮಯದಲ್ಲಿ ದೆಹಲಿಯ ಇಂದ್ರಪುರಿ ಪ್ರದೇಶವನ್ನು ಪ್ರವೇಶಿಸಿದ ಕಾನ್ಷೀರಾಮ್ ಸಾಹೇಬರು ಮತ್ತು ಅವರ ಸಹೋದ್ಯೋಗಿ ಇಕ್ಕಟ್ಟಾದ ಓಣಿಯಲ್ಲಿ ನಡೆದು ಮನೆಯೊಂದರ ಬಾಗಿಲು ಬಡಿದರು.

ಅದೇ ತಾನೇ ಊಟ ಮುಗಿಸಿ ಓದುತ್ತಿದ್ದ ಹೆಣ್ಣುಮಗಳೊಬ್ಬಳು ಇಂತಹ ಅಪರಾತ್ರಿಯಲ್ಲಿ ಅದ್ಯಾರು ಬಾಗಿಲು ಬಡಿಯುತ್ತಿರಬಹುದೆಂದು ಯೋಚಿಸುತ್ತಲೇ ಬಾಗಿಲು ತೆರೆದು ನೋಡಿದರೆ ಎದುರಿಗೆ ಕಾನ್ಷೀರಾಮ್ ಸಾಹೇಬರು ನಿಂತಿದ್ದರು.

ಬಾಗಿಲು ತೆರೆದ ಆ ಹೆಣ್ಣು ಮಗಳು ಬೇರಾರೂ ಆಗಿರಲಿಲ್ಲ. ಅವರೇ ಮಾಯಾವತಿ.
ಆಧುನಿಕ ಭಾರತದ ರಾಜಕೀಯ ಇತಿಹಾಸದಲ್ಲಿಯೇ ಅಚ್ಚರಿಯ ಪವಾಡ ಸೃಷ್ಟಿಸಿದ ಆ ಇಬ್ಬರು ಮಹಾಮಹಿಮರು ಒಬ್ಬರಿಗೊಬ್ಬರು ಎದುರುಗೊಂಡ ಮೊದಲ ಕ್ಷಣ ಅದಾಗಿತ್ತು.

ಅಕ್ಕ ಮಾಯಾವತಿಯವರಿಗೆ ಒಂದು ಕ್ಷಣ ಉಸಿರು ನಿಂತಂತಾಯಿತು. ಕಾರಣ ಅಲ್ಲಿ ನಿಂತವರು ವಾಸ್ತವವಾಗಿ ಕಾನ್ಷೀರಾಮ್ ಸಾಹೇಬರಾಗಿದ್ದರೂ ಅವರ ರೂಪ, ಪ್ರತಿರೂಪ ಸಾಕ್ಷಾತ್ ಭಗವಾನ್ ಬುದ್ದನಂತಿತ್ತು. ಭೋಧಿಸತ್ವ ಬಾಬಾಸಾಹೇಬ್ ಅಂಬೇಡ್ಕರ್ ರವರನ್ನು ಹೋಲುತ್ತಿತ್ತು.

ತನ್ನ ಕಣ್ಣನ್ನು ತಾನೇ ನಂಬದಾದ ಮಾಯಾವತಿಯವರು ಸಾವರಿಸಿಕೊಂಡು ಕಾನ್ಷೀರಾಮ್ ಸಾಹೇಬರನ್ನು ಮನೆಯೊಳಗೆ ಬರಮಾಡಿಕೊಂಡರು. ಕಾನ್ಷೀರಾಮ್ ಸಾಹೇಬರ ಆಕಸ್ಮಿಕ ಆಗಮನ ಮಾಯಾವತಿಯವರ ಮನೆಯಲ್ಲಿ ಮಿಂಚಿನ ಸಂಚಾರವನ್ನುಂಟುಮಾಡಿತ್ತು.

ಮಾಯಾವತಿಯವರ ತಂದೆತಾಯಿಗಳು ಗಡಬಡಿಸಿ ಬಂದು, ಆದರದಿಂದ ಸ್ವಾಗತಿಸಿ, ಪರಸ್ಪರ ಕ್ಷೇಮ ಸಮಾಚಾರ ವಿನಿಮಯ ಮಾಡಿಕೊಂಡರು. ಬಾಂಸೆಫ್ ಕೆಲಸದ ಮೂಲಕ ಅದಾಗಲೇ ಉತ್ತರ ಭಾರತದಾದ್ಯಂತ ಮನೆಮಾತಾಗಿದ್ದ ಕಾನ್ಷೀರಾಮ್ ಸಾಹೇಬರು ಇಂತಹ ಅಪರಾತ್ರಿ ಹೊತ್ತಲ್ಲಿ ಮನೆಗೆ ಬಂದಿದ್ದು ಪ್ರಭುದಾಸ್ ದಯಾಳ್ ಮತ್ತು ರಾಮರತಿಯವರಿಗೆ ಬಿಡಿಸಲಾಗದ ಒಗಟಿನಂತಾಗಿತ್ತು. ಏತಕ್ಕೆ ಬಂದಿದ್ದಾರೋ, ಏನು ಸುದ್ದಿ ತಂದಿದ್ದಾರೋ ಎಂಬ ಅಳುಕು ಅವರದಾಗಿತ್ತು.

ಅಂಬೇಡ್ಕರ್ ಆಶಯಗಳಿಗೆ ದ್ರೋಹವೆಸಗಿದ್ದೀರಿ

ಕಾನ್ಷೀರಾಮ್ ಸಾಹೇಬರು ಆ ಅಪರಾತ್ರಿಯಲ್ಲಿ ಮಾಯಾವತಿಯವರನ್ನು ಹುಡುಕಿಕೊಂಡು ಬರಲು ಕಾರಣವೊಂದಿತ್ತು. ಆ ಕಾರಣವೇನೆಂದರೆ, 1977 ರ ಸೆಪ್ಟೆಂಬರ್ ನಲ್ಲಿ ಸರ್ಕಾರದ ವತಿಯಿಂದ ದೆಹಲಿಯ Constitution club ನಲ್ಲಿ ಮೂರು ದಿನಗಳ ಕಾಲ ‘ಜಾತಿ ವಿನಾಶ’ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಅಂದಿನ ಕೇಂದ್ರ ಆರೋಗ್ಯ ಸಚಿವರಾಗಿದ್ದ ಮತ್ತು ಹೆಸರಾಂತ ಸಮಾಜವಾದಿ ನಾಯಕರಾಗಿದ್ದ ರಾಜ್ ನಾರಾಯಣ್ ರವರು ತಮ್ಮ ಭಾಷಣದಲ್ಲಿ ಅವಹೇಳನಕಾರಿಯಾದ ‘ಹರಿಜನ’ ಪದವನ್ನು ಪದೇ ಪದೇ ಬಳಸಿ ಮಾತನಾಡುತ್ತಿದ್ದರು.

ಅಲ್ಲೇ ಹಾಜರಿದ್ದ ಸರ್ಕಾರಿ ಶಿಕ್ಷಕಿ ಮಾಯಾವತಿಯವರು ಎದ್ದು ನಿಂತು ರಾಜ್ ನಾರಾಯಣ್ ರವರನ್ನು ತರಾಟೆಗೆ ತೆಗೆದುಕೊಂಡರು. ಪರಿಶಿಷ್ಟ ಜಾತಿಯವರಿಗೆ ಹರಿಜನರೆಂದು ಕರೆದು ಅಂಬೇಡ್ಕರ್ ಆಶಯಗಳಿಗೆ ದ್ರೋಹವೆಸಗಿದ್ದೀರಿ. ನಿಮ್ಮ ಘನತೆ ಮತ್ತು ಗೌರವಗಳನ್ನು ಮರೆತು ಬೇಜವಾಬ್ದಾರಿಯಿಂದ ಮಾತನಾಡಿದ್ದೀರಿ. ನೀವು ಈ ಕೂಡಲೇ ಬಹಿರಂಗ ಕ್ಷಮೆ ಕೇಳಬೇಕು ಎಂದು ಸಭೆಯಲ್ಲಿ ಕ್ಷಮೆ ಕೇಳಿಸಿ ಎಲ್ಲರ ಗಮನ ಸೆಳೆದಿದ್ದರು. ಈ ಘಟನೆಯಿಂದ ಮಾಯಾವತಿಯವರು ಎಲ್ಲರ ಕೇಂದ್ರ ಬಿಂದುವಾದರು.

ಇದೇ ಸಭೆಯಲ್ಲಿದ್ದ ಕೆಲವು ಬಾಂಸೆಫ್ ಕಾರ್ಯಕರ್ತರು ಮಾಯಾವತಿಯವರ ವಿಷಯವನ್ನು ಕಾನ್ಷೀರಾಮ್ ಸಾಹೇಬರಿಗೆ ವಿವರಿಸಿ, ಮಾಯಾವತಿಯವರು ನಮ್ಮ ಸಂಘಟನೆಯಲ್ಲಿದ್ದರೆ ಬಾಂಸೆಫ್ ಗೆ ಹೆಚ್ಚು ಬಲ ಬರುತ್ತದೆ ಎಂದು ತಿಳಿಸಿದರು. ಬಾಂಸೆಫ್ ಕಾರ್ಯಕರ್ತರ ಮಾತಿನಿಂದ ಉತ್ತೇಜಿತರಾದ ಕಾನ್ಷೀರಾಮ್ ಸಾಹೇಬರು ಮಾಯಾವತಿಯವರ ಅರಿವಿಗೆ ಬಾರದಂತೆ ಅವರ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಮಾಯಾವತಿಯವರ ಚಿಂತನೆಗಳನ್ನು ಗಮನವಿಟ್ಟು ಆಲಿಸಿದರು. ಅದಕ್ಕಾಗಿ ಮಾಯಾವತಿಯವರನ್ನು ಹುಡುಕಿಕೊಂಡು ಬಂದಿದ್ದರು.

ಐಎಎಸ್ ಅಧಿಕಾರಿಯಾಗಿ ಶೋಷಿತ ಜನಾಂಗಗಳ ಸೇವೆ ಮಾಡಬೇಕು

ಕಾನ್ಷೀರಾಮ್ ಸಾಹೇಬರು ಮಾಯಾವತಿಯವರ ಜೊತೆ ಸುಮಾರು ಒಂದು ಗಂಟೆಗಳ ಕಾಲ ಭಾರತದ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗತಿಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ಮಹಾತ್ಮ ಜ್ಯೋತಿಭಾಫುಲೆಯವರಿಂದಿಡಿದು ಬಾಬಾಸಾಹೇಬ್ ಅಂಬೇಡ್ಕರ್ ವರೆಗಿನ ಎಲ್ಲಾ ಮಹಾಪುರುಷರ ಹೋರಾಟವನ್ನು ಮತ್ತು ಅದರ ಮುಂದುವರಿಕೆಯ ಮಹತ್ವವನ್ನು ಮನಮುಟ್ಟುವಂತೆ ವಿವರಿಸಿ ಹೇಳಿದರು.

ಇದಾದ ಬಳಿಕ ಮಾಯಾವತಿಯವರ ಜೀವನದ ಆಸೆ ಆಕಾಂಕ್ಷೆಗಳನ್ನು, ದ್ಯೇಯೋದ್ದೇಶಗಳನ್ನು ಕೇಳಿ ತಿಳಿದುಕೊಂಡರು. ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ತಾನು ಐಎಎಸ್ ಅಧಿಕಾರಿಯಾಗಿ ಶೋಷಿತ ಜನಾಂಗಗಳ ಸೇವೆ ಮಾಡಬೇಕು ಎನ್ನುವುದು ನನ್ನ ಗುರಿ ಎಂದು ಮಾಯಾವತಿಯವರು ತಿಳಿಸಿದರು.

ನಂತರ ಹೊರಡುವ ಸಮಯದಲ್ಲಿ ಅಂತಿಮವಾಗಿ ಒಂದು ನಿರ್ಧಾರಕ್ಕೆ ಬಂದ ಕಾನ್ಷೀರಾಮ್ ಸಾಹೇಬರು ” ನೀನು ಅಂದುಕೊಂಡಂತೆ ಖಂಡಿತವಾಗಿ ನೀನು ಐಎಎಸ್ ಅಧಿಕಾರಿ ಆಗಬಹುದು. ಆ ಅರ್ಹತೆ ನಿನಗಿದೆ. ಅದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ನೀನು ಅಂದುಕೊಂಡಂತೆ ನಿನ್ನ ಜನರ ಸೇವೆ ಮಾಡುವುದು ಮಾತ್ರ ನಿಮ್ಮಿಂದ ಸಾಧ್ಯವಾಗುವುದಿಲ್ಲ.

ಕಾರಣ, ಒಬ್ಬ ಸರ್ಕಾರಿ ಅಧಿಕಾರಿಯಾಗಿ ನೀನು ಸರಕಾರ ನಡೆಸುವ ರಾಜಕಾರಿಣಿಗಳ ಇಚ್ಚೆಯಂತೆ ನಡೆಯಬೇಕಾಗುತ್ತದೆ. ಶ್ರೀಮಂತರ ನೋಟುಗಳಿಂದ ಬಡವರ ಓಟುಗಳನ್ನು ಖರೀದಿಸುವುದನ್ನೇ ಪ್ರಜಾಪ್ರಭುತ್ವ ಎಂದು ಪರಿಗಣಿಸಿರುವ ಭಾರತದಲ್ಲಿ ರಾಜಕೀಯ ನಾಯಕರ ಯೋಜನೆಗಳು ಮತ್ತು ಯೋಚನೆಗಳು ಜಾರಿಯಾಗುತ್ತವೆಯೇ ಹೊರತು ಐಎಎಸ್ ಅಧಿಕಾರಿಗಳ ಯೋಜನೆಗಳು ಮತ್ತು ಯೋಚನೆಗಳಲ್ಲ.

ಈಗ ನಮ್ಮ ಸಮಾಜದಲ್ಲಿ ಬೇಕಾದಷ್ಟು ಮಂದಿ ಐಎಎಸ್ ಅಧಿಕಾರಿಗಳಿದ್ದಾರೆ. ಆದರೆ ಅವರೆಲ್ಲ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದಾರೆ. ಅವರಿಂದ ಏನನ್ನೂ ನಿರೀಕ್ಷಿಸುವಂತಿಲ್ಲ. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಹೀಗಾಗಿ ನಮಗೆ ಬೇಕಾಗಿರುವುದು ಐಎಎಸ್ ಅಧಿಕಾರಿಗಳಲ್ಲ. ರಾಜಕೀಯ ನಾಯಕರು. ಐಎಎಸ್ ಅಧಿಕಾರಿಗಳಿಂದ ಸರಿಯಾಗಿ ಕೆಲಸ ಮಾಡಿಸಬಲ್ಲ, ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ಕುಳಿತು ಜನಪರ ಶಾಸನಗಳನ್ನು ರೂಪಿಸಬಲ್ಲ , ಅವುಗಳನ್ನು ಜಾರಿಗೊಳಿಸಬಲ್ಲ ಸಮರ್ಥ ರಾಜಕೀಯ ನಾಯಕರು.

ನಮ್ಮ ಸಮಾಜದಲ್ಲಿ ಇಂಥ ನಾಯಕರ ಕೊರತೆ ಇದೆ. ‌ನೀನು ಆ ಕೊರತೆಯನ್ನು ನೀಗಿಸಬೇಕು. ನಿನ್ನಲ್ಲಿ ಆ ಶಕ್ತಿಯಿದೆ. ನನ್ನ ಮಾತನ್ನು ನೀನು ನಂಬುವುದಾದರೆ, ನಿನ್ನಲ್ಲಿ ಇಂತದ್ದೊಂದು ಬಯಕೆ ಇದ್ದುದಾದರೆ ನಾನು ನಿನ್ನನ್ನು ಅಂಥ ಒಬ್ಬ ಸಮರ್ಥ ನಾಯಕಿಯನ್ನಾಗಿ ತಯಾರು ಮಾಡುತ್ತೇನೆ. ಆಗ ನೂರಾರು ಜನ ಐಎಎಸ್ ಅಧಿಕಾರಿಗಳು ತಮ್ಮ ಫೈಲುಗಳನ್ನು ಹಿಡಿದುಕೊಂಡು ಬಂದು ನಿನ್ನ ಆದೇಶಕ್ಕಾಗಿ ಕಾಯುತ್ತಾರೆ.

ಒಳ್ಳೆಯ ಮತ್ತು ಕೆಟ್ಟ ಕೆಲಸ ಎರಡನ್ನೂ ಮಾಡುವ ಶಕ್ತಿ ಹೊಂದಿರುವ ಐಎಎಸ್ ಅಧಿಕಾರಿಗಳಿಂದ ನೀನು ನಿನ್ನೆಲ್ಲ ಒಳ್ಳೆಯ ಕೆಲಸಗಳನ್ನೇ ಮಾಡಿಸಬಹುದು. ಅದಕ್ಕಾಗಿ ನೀನು ಒಬ್ಬ ಐಎಎಸ್ ಅಧಿಕಾರಿಯಾಗುವ ಬದಲು ಒಬ್ಬ ಸಮರ್ಥ ರಾಜಕೀಯ ನಾಯಕಿಯಾಗುವುದು ಒಳ್ಳೆಯದು. ಯಾವುದಕ್ಕೂ ಯೋಚಿಸಿ ಒಂದು ಸರಿಯಾದ ನಿರ್ಧಾರಕ್ಕೆ ಬಾ… ನೀನು ತೆಗೆದುಕೊಳ್ಳುವ ನಿರ್ಧಾರದಲ್ಲಿ ಬಹುಜನರ ಭವಿಷ್ಯ ಅಡಗಿದೆ ಎಂದು ಹೇಳಿ ಅಲ್ಲಿಂದ ಹೊರಟು ಹೋದರು.

ಮುಂದೆ ನಡೆದಿದ್ದೆಲ್ಲವೂ ನಮ್ಮ ಕಣ್ಣ ಮುಂದಿರುವ ಇತಿಹಾಸ. ನುಡಿದಂತೆ ನಡೆದು, ಯಕಶ್ಚಿತ್ ಶಾಲಾ ಶಿಕ್ಷಕಿಯೊಬ್ಬಳನ್ನು ಉತ್ತರಪ್ರದೇಶದಂತಹ ಅತಿದೊಡ್ಡ ರಾಜ್ಯದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿ, ದೇಶವೇ ಕೊಂಡಾಡುವಂತೆ ಅದ್ಬುತ ಕಾರ್ಯಗಳನ್ನು ಸಾಧಿಸಿ ತೋರಿಸಿದ ಪವಾಡ ಪುರುಷ ಕಾನ್ಷೀರಾಮ್. ಅಂದು ಆ ಮಹಾತ್ಯಾಗಿ ನುಡಿದ ಭವಿಷ್ಯ ಸುಳ್ಳಾಗಲಿಲ್ಲ. ಕಾರಣ, ಮಹಾಜ್ಞಾನಿಗಳ ಮಾತುಗಳು ಸುಳ್ಳಾಗಲು ಸಾದ್ಯವೇ ಇಲ್ಲ..!

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ತುಮಕೂರು:ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ತುಮಕೂರಿನಲ್ಲಿ ಒಟ್ಟು 50 ಎಕರೆ ಜಾಗವನ್ನು ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ ನೀಡಲಾಗಿದ್ದು ಇದು ಜಿಲ್ಲೆಯ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೂರಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ತುಮಕೂರಿನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಆದಷ್ಟು ಶೀಘ್ರವೇ ಕ್ರೀಡಾಂಗಣ ನಿರ್ಮಾಣ ಮುಗಿಸಿ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ ಪೂರೈಸಲಾಗುವುದು ಎಂದು ಹೇಳಿದ್ದಾರೆ. ಮೈಸೂರಿನಲ್ಲೂ ಕ್ರೀಡಾಂಗಣ ನಿರ್ಮಾಣಕ್ಕೆ ಕರ್ನಾಟಕ ಕ್ರಿಕೆಟ್ ಸಂಸ್ಥೆ ಬೇಡಿಕೆ ಮುಂದಿಟ್ಟಿದ್ದು ಮೈಸೂರಿನಲ್ಲೂ ಜಾಗ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಚೆನ್ನೈ-ಮುಂಬೈ ಇಂಡಸ್ಟ್ರೀಯಲ್ ಕಾರಿಡಾರ್ ಗಾಗಿ ಆರು ಹಂತದಲ್ಲಿ 20 ಸಾವಿರ ಎಕರೆ ಸ್ವಾಧೀನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ವಸಂತನರಸಾಪುರದಲ್ಲಿ ಏಷ್ಯಾದಲ್ಲಿಯೇ ಅತಿ ದೊಡ್ಡ ಟೌನ್ ಶಿಪ್ ಪ್ರಾರಂಭವಾಗಿದೆ ಎಂದು ತಿಳಿಸಿದ ಅವರು, ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಕೈಗಾರಿಕೆಗಳಿಗೆ ಮನವಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಹಿವಾಟುಗಳಲ್ಲಿ ಅಮೆರಿಕ ಡಾಲರ್ ಬದಲಾಯಿಸದಂತೆ ಬ್ರಿಕ್ಸ್ ರಾಷ್ಟ್ರಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಾಯ

Published

on

ಸುದ್ದಿದಿನಡೆಸ್ಕ್:ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಹೊಸ ಕರೆನ್ಸಿಯನ್ನು ಪರಿಚಯಿಸುವುದಾಗಲಿ ಅಥವಾ ವಹಿವಾಟುಗಳಲ್ಲಿ ಅಮೆರಿಕ ಡಾಲರ್ ಅನ್ನು ಬದಲಿಸಿ ಬೇರೆ ಕರೆನ್ಸಿಗಳನ್ನು ಬೆಂಬಲಿಸುವ ಕೆಲಸ ಮಾಡದಿರಲು ಬದ್ಧವಾಗಿರಬೇಕು, ಇಲ್ಲವಾದಲ್ಲಿ, 100 ಪ್ರತಿಶತ ಸುಂಕಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಾಯಿಸಿದ್ದಾರೆ.

ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ಅವರು, ಈ ದೇಶಗಳು ಯುಎಸ್ ಡಾಲರ್ ಅನ್ನು ಬದಲಿಸುವ ಕೆಲಸ ಮಾಡುವುದಿಲ್ಲ ಎಂಬ ಬದ್ಧತೆಯ ಅಗತ್ಯವಿದೆ. ಅಂತರಾಷ್ಟ್ರೀಯ ವ್ಯಾಪಾರದಲ್ಲಿ ಬ್ರಿಕ್ಸ್ ಅಮೆರಿಕಾ ಡಾಲರ್ ಅನ್ನು ಬದಲಿಸುವ ಯಾವುದೇ ಅವಕಾಶವಿಲ್ಲ, ಮತ್ತು ಇದನ್ನು ಪ್ರಯತ್ನಿಸುವ ಯಾವುದೇ ದೇಶ ಅಮೆರಿಕದೊಂದಿಗಿನ ಸಂಬಂಧಗಳಿಗೆ ವಿದಾಯ ಹೇಳಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇಂದು ವಿಶ್ವ ಏಡ್ಸ್ ದಿನ; ಎಚ್‌ಐವಿ ಚಿಕಿತ್ಸೆ – ನಿರ್ಮೂಲನೆ ಕುರಿತು ಜಾಗೃತಿ ಅಭಿಯಾನ

Published

on

ಸುದ್ದಿದಿನಡೆಸ್ಕ್:ಅಕ್ವೈರ್ಡ್ ಇಮ್ಯುನೊ ಡೆಫಿಷಿಯನ್ಸಿ ಸಿಂಡ್ರೋಮ್-ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಇಂದು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತಿದೆ.

ಎಚ್‌ಐವಿ ವಿರುದ್ಧದ ಹೋರಾಟದಲ್ಲಿ ಜನರು ಒಂದಾಗಲು ಮತ್ತು ಎಚ್‌ಐವಿ ಯೊಂದಿಗೆ ಬದುಕು ಸಾಗಿಸುತ್ತಿರುವವರಿಗೆ ಬೆಂಬಲ ಸೂಚಿಸಲು ಈ ದಿನವು ಅವಕಾಶವನ್ನು ಒದಗಿಸುತ್ತದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆಪಿ ನಡ್ಡಾ ಅವರು ಮಧ್ಯಪ್ರದೇಶದ ಇಂದೋರ್‌ನಲ್ಲಿಂದು ವಿಶ್ವ ಏಡ್ಸ್ ದಿನ 2024 ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಮುಖ್ಯಮಂತ್ರಿ ಡಾ.ಮೋಹನ್ ಯಾದವ್ ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ವರ್ಷದ ವಿಶ್ವ ಏಡ್ಸ್ ದಿನ, ಏಡ್ಸ್ ಕುರಿತು ಜಾಗೃತಿ ಮೂಡಿಸುವುದು, ಚಿಕಿತ್ಸಾ ವಿಧಾನಗಳನ್ನು ಉತ್ತೇಜಿಸುವುದು ಮತ್ತು ಎಚ್‌ಐವಿ-ಏಡ್ಸ್ ನಿಂದ ಪೀಡಿತರ ವಿರುದ್ಧದ ತಾರತಮ್ಯವನ್ನು ತೊಡೆದುಹಾಕುವುದರ ಮೇಲೆ ಕೇಂದ್ರೀಕರಿಸುತ್ತದೆ. ’ಸರಿಯಾದ ಮಾರ್ಗವನ್ನು ತೆಗೆದುಕೊಳ್ಳಿ’ ಎಂಬುದು 2024 ರ ಘೋಷವಾಕ್ಯವಾಗಿದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಎನ್‌ಎಸಿಓ, 1992 ರಿಂದ ಪ್ರತಿ ವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸುತ್ತಿದೆ. ಈ ಆಚರಣೆಗಳು 2030 ರ ವೇಳೆಗೆ ಏಡ್ಸ್ಅನ್ನು ನಿರ್ಮೂಲನೆಗೊಳಿಸುವ ಜಾಗತಿಕ ಗುರಿಯನ್ನು ಅನುಸರಿಸುತ್ತವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending