ದಿನದ ಸುದ್ದಿ
ವಿಡಿಯೋ | ಮಿಲಿಯನ್ ವೀವ್ಸ್ ದಾಟಿ ಮುನ್ನುಗ್ಗುತ್ತಿದೆ ಚಂದನ್ ಶೆಟ್ಟಿ ‘ಪಾರ್ಟಿ ಫ್ರೀಕ್’ ಹಾಡು
ಸುದ್ದಿದಿನ ಡೆಸ್ಕ್ : ಯೂನೈಟೆಡ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಮೂಡಿಬಂದ ಪಾರ್ಟಿ ಫ್ರೀಕ್ ಹಾಡು ಶನಿವಾರ ಯೂನೈಟೆಡ್ ಆಡಿಯೋಸ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಆಗಿದೆ. ಹಾಡಿನ ಬಗ್ಗೆ ಮಾಹಿತಿ ನೀಡುವ ಉದ್ದೇಶಕ್ಕೆ ಸುದ್ದಿಗೋಷ್ಟಿ ಕರೆದಿದ್ದ ತಂಡ, ಹಾಡಿನ ಹುಟ್ಟು ಮತ್ತು ಅದರ ಹಿನ್ನೆಲೆಯನ್ನು ಬಿಚ್ಚಿಟ್ಟಿತು. ಚೈತನ್ಯ ಲಕಂಸಾನಿ ಈ ಹಾಡಿಗೆ ಬಂಡವಾಳ ಹೂಡಿದ್ದಾರೆ.
ಮೂಲತಃ ಆಂಧ್ರದವರಾದ ಚೈತನ್ಯ, ಸಿನಿಮಾ ಕ್ಷೇತ್ರದಲ್ಲಿ ನೆಲೆಯೂರಬೇಕೆಂದು ಯೂನೈಟೆಡ್ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಮೊದಲಾರ್ಥವಾಗಿ ಕನ್ನಡ ಮತ್ತು ತೆಲುಗಿನಲ್ಲಿ ಹೊಸ ವರ್ಷಾಚರಣೆಗೆ ಉಡುಗೊರೆ ರೂಪದಲ್ಲಿ ಮತ್ತು ಬ್ಯಾನರ್ ಲಾಂಚ್ ಮಾಡುವ ಉದ್ದೇಶಕ್ಕೆ ಪಾರ್ಟಿ ಫ್ರೀಕ್ ಎಂಬ ಹಾಡನ್ನು ನಿರ್ಮಾಣ ಮಾಡಿದ್ದಾರೆ.
ಈ ಹಾಡಿಗೆ ಸಾಹಿತ್ಯ ಬರೆದು, ಸಂಗೀತ ನೀಡಿ ಧ್ವನಿಯನ್ನೂ ನೀಡಿರುವ ಚಂದನ್ ಶೆಟ್ಟಿ ಮಾತನಾಡಿ, ಒಂದು ವಾರದ ಹಿಂದಷ್ಟೇ ಈ ಆಡಿಯೋ ಸಂಸ್ಥೆ ಲಾಂಚ್ ಆಗಿದೆ. ಒಂದೇ ವಾರದಲ್ಲಿ ಯೂಟ್ಯೂಬ್‌ನಲ್ಲಿ ಒಳ್ಳೇ ರೀಚ್ ಸಿಕ್ಕಿದೆ. ಹೊಸಹೊಸ ಪ್ರತಿಭೆಗಳಿಗೋಸ್ಕರ ಈ ಚಾನೆಲ್ ತೆರೆಯಲಾಗಿದೆ.
ಇನ್ನು ಹಾಡಿನ ಬಗ್ಗೆ ಹೇಳುವುದಾದರೆ, 3 ದಿನಗಳ ಕಾಲ ಶೆರ್ಟನ್ ಹೊಟೇಲ್ನಲ್ಲಿ ಶೂಟಿಂಗ್ ಮಾಡಲಾಗಿದೆ. ಕನ್ನಡ ಮತ್ತು ತೆಲುಗಿನಲ್ಲಿ ಹಾಡು ಮೂಡಿಬಂದಿದ್ದು, ಈಗಾಗಲೇ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಂಸ್ಥೆ ಮೂಲಕ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ನಿರ್ಮಾಪಕರು ಮುಂದೆ ಬಂದಿದ್ದಾರೆ. ಇದರಿಂದ ನಮ್ಮ ಬೆಳವಣಿಗೆ ಜತೆಗೆ ಇಂಡಸ್ಟ್ರಿಯ ಬೆಳವಣಿಗೆಗೂ ಸಹಕಾರಿ. ಈ ಥರದ ನಿರ್ಮಾಪಕರು ಇಂಡಸ್ಟ್ರಿಗೆ ಬೇಕು ಎಂದರು.
ಇನ್ನು ಈ ಹಾಡಿಗೆ ಬಂಡವಾಳ ಹೂಡಿರುವ ಚೈತನ್ಯ ಲಕಂಸಾನಿ ಮಾತನಾಡಿ, ತುಂಬ ಕಿರು ಅವಧಿಯಲ್ಲಿ ಈ ಹಾಡನ್ನು ಸೃಷ್ಟಿ ಮಾಡಿದ್ದೇವೆ. ನಮ್ಮ ತಾಂತ್ರಿಕ ತಂಡಕ್ಕೆ ಧನ್ಯವಾದ. ಈ ಆಡಿಯೋ ಸಂಸ್ಥೆ ತೆರೆಯಲು ಮೂಲ ಉದ್ದೇಶ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದರ ಸಲುವಾಗಿ. ಯಾರಿಗೆ ಸಂಗೀತ ಮತ್ತು ಸಿನಿಮಾ ಆಸಕ್ತಿ ಇದೆಯೋ ಅವರಿಗೆ ನಮ್ಮ ಸಂಸ್ಥೆಯಿಂದ ಸ್ವಾಗತ ಎಂದರು.
ಇನ್ನು ಈ ಹಾಡಿನ ನಿರ್ಮಾಣದಲ್ಲಿ ಭಾಗವಾಗಿರುವ ನಟ ಧರ್ಮ ಸಹ ಹಾಡು ಮತ್ತು ಈ ಸಂಸ್ಥೆಯ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದರು.
‘ಸಿನಿಮಾ ಬಗ್ಗೆ ಮಾತನಾಡುತ್ತ ಯೂನೈಟೆಡ್ ಪ್ರೊಡಕ್ಷನ್ಸ್ ಬ್ಯಾನರ್ ರಿಜಿಸ್ಟರ್ ಆಯ್ತು. ಅದನ್ನು ರೀಚ್ ಮಾಡಿಸುವ ಸಲುವಾಗಿ ಚಂದನ್ ಶೆಟ್ಟಿ ಅವರಿಂದ ಆಲ್ಬಂ ಮಾಡುವ ಬಗ್ಗೆ ನಿರ್ಧಾರವಾಯ್ತು. ಆಗ ಯುನೈಟೆಡ್ ಆಡಿಯೋ ಕಂಪನಿ ತೆರೆದೆವು. ಈ ಸಂಸ್ಥೆಯಲ್ಲಿ ನಾನೂ ಸಹ ಪಾಲುದಾರನಾಗಿದ್ದೇನೆ. ಅಂದುಕೊಂಡಿದ್ದಕ್ಕಿಂತ ಚೆಂದವಾಗಿ ಹಾಡು ಮೂಡಿಬಂದಿದೆ. ಮುಂದಿನ ದಿನಗಳಲ್ಲಿ ಇದೇ ಸಂಸ್ಥೆಯಿಂದ ಸಿನಿಮಾ ಸಹ ನಿರ್ಮಾಣವಾಗಲಿದೆ ಎಂದರು.
ಪಾರ್ಟಿ ಫ್ರೀಕ್ ಹಾಡಿನ ಚಿತ್ರೀಕರಣಕ್ಕೆ ಬರೋಬ್ಬರಿ 36 ಲಕ್ಷ ಮೊತ್ತವನ್ನು ಖರ್ಚು ಮಾಡಲಾಗಿದೆ. ಮೂರು ದಿನದಲ್ಲಿ ಚಿತ್ರೀಕರಣ ಮುಗಿಸಿಕೊಂಡ ಈ ಹಾಡಿನಲ್ಲಿ 80ಕ್ಕೂ ಅಧಿಕ ರಷ್ಯನ್ ಡಾನ್ಸರ್ಗಳಿದ್ದಾರೆ. 100ಕ್ಕೂ ಅಧಿಕ ಇಲ್ಲಿನ ನೃತ್ಯಗಾರರಿದ್ದಾರೆ. ಟಾಲಿವುಡ್ ನೃತ್ಯ ನಿರ್ದೇಶಕಿ ಅನ್ನಿ ಮಾಸ್ಟರ್ ಜತೆಗೆ ನಿಶ್ವಿಕಾ ನಾಯ್ಡು, ನಿವೇದಿತಾ ಗೌಡ ಸಹ ಈ ಹಾಡಿನಲ್ಲಿದ್ದಾರೆ. ಛಾಯಾಗ್ರಹಣ ಶ್ರೀಶ ಕುದುವಳ್ಳಿ, ಭಜರಂಗಿ ಮೋಹನ್ ನೃತ್ಯ ನಿರ್ದೇಶನ, ರಂಜಿತ್ ಸಂಕಲನ ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬಿಎಸ್ಎಸ್ ಮೈಕ್ರೋ ಫೈನಾನ್ಸ್ ಲಿಮಿಟೆಡ್ ನಿಂದ ವಿದ್ಯಾರ್ಥಿ ವೇತನ ವಿತರಣೆ
ಸುದ್ದಿದಿನ,ದಾವಣಗೆರೆ:ಗುರಿ ಸಾಧಿಸಲು ಕಾರಣಗಳು ನೆಪವಾಗಬಾರದು. ಗುರಿಯನ್ನು ಬೆನ್ನು ಹತ್ತಿ ಗುರಿಮುಟ್ಟುವ ಕಡೆ ಗಮನ ಹರಿಸಿದರೆ ಯಶಸ್ಸು ತಾನಾಗಿ ದೊರೆಯುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಉಮಾ ಪ್ರಶಾಂತ್ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಬಿಎಸ್ಎಸ್ ಮೈಕ್ರೋ ಫೈನಾನ್ಸ್ ಲಿಮಿಟೆಡ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುವಜನತೆ ಮೊಬೈಲ್ ಬಳಸುವುದರಿಂದ ಆಗುವ ಅನಾನುಕೂಲಗಳು ಮತ್ತು ಹಿಂದಿನ ಯುವಜನತೆ ಅದನ್ನು ಒಳ್ಳೆಯ ಉದ್ದೇಶಕ್ಕಾಗಿ ಬಳಸಿಕೊಳ್ಳಬೇಕೆಂದು ಕರೆ ನೀಡಿದರು.
ವಿದ್ಯಾರ್ಥಿಗಳು ಕಷ್ಟಪಟ್ಟು ಓದುವುದರ ಮುಖಾಂತರ ತಮ್ಮ ಗುರಿಗಳನ್ನು ಸಾಧಿಸಲು ಸಾಧ್ಯವಿದೆ. ಪೋಷಕರು ಮಕ್ಕಳ ನಡವಳಿಕೆ ಮೇಲೆ ನಿಗಾ ವಹಿಸುವ ಅವಶ್ಯಕತೆ ಇದೆ ಎಂದ ಅವರು, ಇತ್ತೀಚಿಗೆ ನಡೆಯುತ್ತಿರುವ ಸೈಬರ್ ಕ್ರೈಂಗಳ ಬಗ್ಗೆ ಯುವಜನತೆಗೆ ಸಭೆಯಲ್ಲಿ ಮನವರಿಕೆ ಮಾಡಿದರು.
ಈ ಕಾರ್ಯಕ್ರಮದ ಮತ್ತೊಬ್ಬ ಅತಿಥಿಗಳಾದ ಬಿಎಸ್ಎಸ್ ಮೈಕ್ರೋ ಫೈನಾನ್ಸ್ ಲಿಮಿಟೆಡ್ ಸಿಓಓ ಎಸ್. ಪಂಚಾಕ್ಷರಿ ಮಾತನಾಡಿ, ಬಿ.ಎಸ್.ಎಸ್ ಸಂಸ್ಥೆಯು ತನ್ನ ಸಿಎಸ್ಆರ್ ಇಂಟಿಗ್ರೇಟಡ್ ಅಡಿಯಲ್ಲಿ ಆರೋಗ್ಯ, ಶಿಕ್ಷಣ, ಹೈನುಗಾರಿಕೆಗಳಲ್ಲಿ ಸಮಾಜಸೇವಾ ಕಾರ್ಯ ಮಾಡುತ್ತಿದ್ದು, ಅಗತ್ಯ ಪೂರಕ ವಸ್ತುಗಳ ವಿತರಣೆ ಮತ್ತು ಸಹಾಯ ಹಸ್ತದ ನೆರವು ನೀಡಲಾಗುತ್ತಿದೆ. ಸಮಜಾಮುಖಿ ಕೆಲಸಗಳಲ್ಲಿ ಒಂದಾದ ವಿದ್ಯಾರ್ಥಿ ವೇತನ ವಿತರಣೆ ಮುಖೇನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೆರವು ನೀಡಲಾಗುತ್ತಿದೆ ಎಂದರು.
ಮಹಿಳೆಯರು ಅವಶ್ಯಕತೆಗೆ ತಕ್ಕಷ್ಟು ಸಾಲವನ್ನು ಪಡೆದು ಮರುಪಾವತಿ ಶಿಸ್ತನ್ನು ಕಾಪಾಡಿಕೊಳ್ಳಬೇಕು ಮತ್ತು ಬಿಎಸ್ಎಸ್ ಮೈಕ್ರೋ ಫೈನಾನ್ಸ್ ಕೇವಲ ಸಾಲ ಸೌಲಭ್ಯವನ್ನು ಮಾತ್ರವಲ್ಲದೆ ಸಂಸ್ಥೆಯು ಎಲ್ಲಾ ಕಡೆಗೂ ಸಮಾಜಮುಖಿ ಕಾರ್ಯಗಳಾದ ಶಾಲಾ ಅಭಿವೃದ್ಧಿ ಕಾರ್ಯಕ್ರಮಗಳು, ಪ್ರವಾಹ ಪರಿಸ್ಥಿತಿಗಳು, ಬರಗಾಲ ಪರಿಸ್ಥಿತಿಗಳಲ್ಲಿ ಮತ್ತು ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ವ್ಯವಸ್ಥೆ, ಪೀಟೋಪಕರಣಗಳ ವ್ಯವಸ್ಥೆ, ಆಧುನಿಕ ಶಿಕ್ಷಣ ನೀಡಲು ಕಂಪ್ಯೂಟರ್ ಒದಗಿಸುವುದು ಸೇರಿದಂತೆ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಬಿಎಸ್ಎಸ್ ಸಂಸ್ಥೆಯ ಸಿಇಓ ಕುಮಾರ್, ಸಿಫ್ ಓ ಸುರತ್ ಬಚ್ಚು, ರಘು ಎನ್.ಸಿ., ಕೆ. ಸಿದ್ದು, ತಿಮ್ಮಾರಾಯಸ್ವಾಮಿ, ಎಸ್. ಗಿರೀಶ್, ಪಂಡಿತ್, ದೇವರಾಜ್ ಎಸ್., ಸತೀಶ ಡಿ.ಎಸ್., ಕಿರಣ್, ಪ್ರಶಾಂತ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಅಂತರಂಗ
ದಾವಣಗೆರೆ| ‘ಸಿರಿಯಜ್ಜಿ ಸಂಕಥನ’ ಪುಸ್ತಕ ಲೋಕರ್ಪಣೆ : ಜಾನಪದರನ್ನು ಅನಕ್ಷರಸ್ಥರೆನ್ನುವುದು ತಪ್ಪು : ಸಾಹಿತಿ ಕೃಷ್ಣಮೂರ್ತಿ ಹನೂರು
ಸುದ್ದಿದಿನ,ದಾವಣಗೆರೆ:ಜನಪದರು ನಿಜವಾದ ಇತಿಹಾಸವನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದ್ದಾರೆ.‘ಒಡಲ ಕಿಚ್ಚಿಗೆ ಈ ಕಿಚ್ಚು ಕಿರಿದು’ ಎಂಬುದಾಗಿ ಸತಿ ಸಹಗಮನ ಪದ್ಧತಿಯನ್ನೂ ಸಿರಿಯಜ್ಜಿ ವಿರೋಧಿಸಿದ್ದಳು ಹಾಗಾಗಿ ಜಾನಪದರನ್ನು ನಾವು ಅಕ್ಷರ ಬಾರದವರು ಅನಕ್ಷಸ್ಥರು ಎಂಬುದಾಗಿ ಹೇಳುವುದು ತಪ್ಪು ಎಂದು ಹಿರಿಯ ವಿದ್ವಾಂಸರಾದ ಕೃಷ್ಣಮೂರ್ತಿ ಹನೂರು ವಿಷಾದವ್ಯಕ್ತಪಡಿಸಿದರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿರಿಯಜ್ಜಿ ಪ್ರತಿಷ್ಠಾನ, ಮಾನವ ಬಂಧುತ್ವ ವೇದಿಕೆ ಹಾಗೂ ಅಮಿತ ಪ್ರಕಾಶನದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರಾಂಶುಪಾಲ ಎಂ.ಮಂಜಣ್ಣ ಅವರ ‘ಸಿರಿಯಜ್ಜಿ ಸಂಕಥನ’ ಪುಸ್ತಕ ಲೋಕರ್ಪಣೆ ಮಾಡಿ ಅವರು ಮಾತನಾಡಿದರು.
ಸಿರಿಯಜ್ಜಿ ಭೇಟಿ ಮಾಡಿ ಸುಮಾರು 50ವರ್ಷ ಆಯಿತು.ಬೆಳೆಗೆರೆ ಕೃಷ್ಣಶಾಸ್ತ್ರಿಗಳ ಜೊತೆಗೆ ಮೊದಲ ಬಾರಿಗೆ ಗುಡಿಸಲಿನ ಭೇಟಿ ಮಾಡಿದ್ದೆ. ಆಡಿನ ಹಾಲು ಕರೆದು ಜತೆಗೆ ಮುದ್ದೆ ಕೊಡುತ್ತಿದ್ದರು. ಅದು 76ರ ಈ ಇಳಿವಯಸ್ಸಿನಲ್ಲೂ ನನಗೆ ಶಕ್ತಿ ಕೊಟ್ಟಿದೆ. ಪಾಶ್ಚಾತ್ಯ ವಿದ್ವಾಂಸರು 1800 ಸಂದರ್ಭದಲ್ಲಿ ದೇಶದಲ್ಲಿ ಹುಡುಕಿ ಹೊತ್ತೊಯ್ಯುವ ಕೆಲಸ ಮಾಡಿದರು. ಇಲ್ಲಿನ ಸಂಸ್ಕೃತಿಯ ಬಗ್ಗೆ ಅವರಿಗೆ ಅಭಿಮಾನ ಇತ್ತು. ಬುಡಕಟ್ಟು ಹಟ್ಟಿಯ ಸಿರಿಯಜ್ಜಿ ದೊಡ್ಡ ವಿದ್ವಾಂಸರು. ಅರೆ ಬರ ಕನ್ನಡ ಓದಿ ಎಲ್ಲವೂ ಗೊತ್ತದೆ ಎನ್ನುತ್ತೇವೆ. ಆದರೆ, ಸಿರಿಯಜ್ಜಿ ತನ್ನ ಬೌದ್ಧಿಕ ಶಕ್ತಿಯನ್ನು ಏನೂ ಅಲ್ಲ ಎಂದು ಹೇಳುತ್ತಿದ್ದರು. ‘ಹತ್ತ ಮಕ್ಕಳ ಹೆತ್ತು ಕತ್ತಿಗೆ ಬಲಿಕೊಟ್ಟೆ’ ಎಂಬ ಮಾತು ದೊಡ್ಡದು. ಇದರಲ್ಲಿ ದೊಡ್ಡ ಸಂದೇಶ ಇತ್ತು ಎಂದು ಸ್ಮರಿಸಿದರು.
ಅವಳ ಹಾಡುಗಾರಿಕೆಯ ಕ್ರಮ ವಿಸ್ಮಯ ಮೂಡಿಸುತ್ತಿತ್ತು. ನೋವಿನ ವಾಕ್ಯದಲ್ಲಿ ಇರುವ ಅರ್ಥ ಬಹಳ ದೊಡ್ಡದು. ಚರಿತ್ರೆಯನ್ನು ನಾಲ್ಕು ಪದಗಳಲ್ಲಿ ವಿಶ್ಲೇಷಣೆ ಮಾಡಿದಳು. . 100ಕ್ಕೂ ಹೆಚ್ಚು ತ್ರಿಪದಿಯಲ್ಲಿ ಸಿರಿಯಜ್ಜಿ ಹಾಡಿದ್ದಾಳೆ. ಸಮಾಜಿಕ, ಐತಿಹಾಸಿಕ, ಸಂತೋಷದ ಸಂಗತಿ, ಮಳೆರಾಯನ ಕುರಿತು ಹಾಡು ಹೇಳಿದ್ದಾಳೆ. ಮದುವೆ ಸಂಭ್ರದ ಸಾವಿರಾರು ತ್ರಿಪದಿ ಅವಳಲ್ಲಿದ್ದವು.ಶಿಷ್ಟ ಮತ್ತು ಜಾನಪದ ಸಾಹಿತ್ಯ ಈ ಎರಡರಲ್ಲೂ ಕೆಟ್ಟದ್ದು ಒಳ್ಳೆಯದು ಇದೆ. ಇದರ ಬಗೆಗೆ ಇನ್ನೂಹೆಚ್ಚಿನ ಅಧ್ಯಯನ ನಡೆಸಿ ಪ್ರಾಧ್ಯಾಪಕರು ಚರ್ಚಿಸಬೇಕಿದೆ. ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ ಎಂದರು.
ಅನಕ್ಷರಸ್ಥರಲ್ಲಿ ಕೂಡ ವಿದ್ವಾಂಸರು ಇದ್ದಾರೆ. ಸಿರಿಯಜ್ಜಿ ರೀತಿಯವರು ಅಸಂಖ್ಯಾತರಷ್ಟು ಇದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿ ಮಾನವನನ್ನೇ ನಾಶ ಮಾಡುತ್ತಿದೆ. ಜನಪದರ, ಗ್ರಾಮೀಣ ಪ್ರದೇಶದ ಒಳಿತನ್ನು ಸ್ವೀಕರಿಸುವ ಮನೋಭಾವ ಉಳಿಸಿಕೊಳ್ಳೋಣ’.ಎ.ಕೆ.ರಾಮಾನುಜನ್, ಎಸ್.ಎಲ್.ಭೈರಪ್ಪ, ಗುಂಡೂರಾವ್, ಎಚ್.ಕೆ.ರಂಗನಾಥ್ ಸೇರಿ ಅನೇಕರು ಸಿರಿಯಜ್ಜಿ ಹುಡುಕಿಕೊಂಡು ಬಂದಿದ್ದರು. ಪ್ರಾಧ್ಯಾಪಕರು ಇದನ್ನು ಗುರುತಿಸಿ ಹೇಳಬೇಕು. ಮಕ್ಕಳಿಗೆ ಪಾಠ ಮಾಡಿದರೆ ಪ್ರಾಧ್ಯಾಪಕರ ಕಾರ್ಯ ಮುಗಿಯುದಿಲ್ಲ ಎಂದು ಕಿವಿಮಾತು ಹೇಳಿದರು.
ಅನಕ್ಷರಸ್ಥರು ಎಂದು ಹೇಳುವುದು ನಮ್ಮ ಅಜ್ಞಾನ ತೋರಿಸುತ್ತದೆ. ವಿಶ್ವವಿದ್ಯಾಲಯದ್ದು ಸೀಮಿತ ಪಠ್ಯ, ಜಾನಪದದ್ದು ಅಲಿಖಿತ ಸಂವಿಧಾನ, ಅಪರಿಮಿತ ಪಠ್ಯ ಇದು ಕೂಡ ಮುಖ್ಯ.‘ಸಾವಿರದ ಸಿರಿ ಬೆಳಕು’ ಹಂಪಿ ವಿಶ್ವವಿದ್ಯಾಲಯ ಹೊರತಂದಿದೆ. ಅಪ್ರಕಟಿತ ಗೀತೆಗಳು ಇನ್ನೂ ಇವೆ. ಅಕ್ಷರಕ್ಕೆ ಅಳಿವಿಲ್ಲ. ದೇಶದ ಉತ್ತಮ ಸಂಗತಿ, ಪಳಯುಳಿಕೆ ಅಮೆರಿಕಾ, ಇಂಗ್ಲೆಂಡ್ ನಲ್ಲಿವೆ.ಎಚ್ಚರಿಕೆ, ಗಮನ ಹರಿಸಬೇಕು ಪ್ರಾಧ್ಯಾಪಕರು. ಮಕ್ಕಳ ಆಸ್ತಿ ಯಾವುದು ಎಂಬುದನ್ನು ನಾವು ಮನವರಿಕೆ ಮಾಡಿಕೊಡಬೇಕಿದೆ ಎಂದು ಹಂಪಿ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಎಸ್.ಎಂ.ಮುತ್ತಯ್ಯ ಅಭಿಪ್ರಾಯಪಟ್ಟರು.
ಮನುಷ್ಯರೆಂಬಂತೆ ಸಮಾಜ ಕಾಣದ ಸಮುದಾಯದ ಮಹಿಳೆ ಬಗ್ಗೆ ನಡೆಸಿದ ಅಧ್ಯಯನಕ್ಕೆ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ. ಚಿಕ್ಕ ಸಂಗತಿಗೂ ನಿರ್ಬಂಧ ಹೇರುವ ಸಮುದಾಯದಲ್ಲಿ ದೊಡ್ಡ ಕಲಾವಿದೆಯೊಬ್ಬರೂ ಹೊರಹೊಮ್ಮಿದ ರೀತಿ ವಿಸ್ಮಯ ಮೂಡಿಸುತ್ತದೆ.ಸಿರಿಯಜ್ಜಿ ಸೃಷ್ಟಿಸಿದ್ದು ಸಾಹಿತ್ಯ ಅಲ್ಲ. ಇದು ಸಮುದಾಯಕ್ಕೆ ಪರಂಪರಾಗತವಾಗಿ ಬಂದದ್ದು. ಇದು ಕಾಡುಗೊಲ್ಲ ಮಾತ್ರವಲ್ಲ ಪಶುಪಾಲನಾ ಸಮುದಾಯದ ಅಸ್ಮಿತೆ ಕೂಡ ಹೌದು. ಕಾಡಲ್ಲಿ ಕುರಿ, ಜಾನುವಾರು ಕಾಯುತ್ತ ಬದುಕುತ್ತಿದ್ದ ಸಮುದಾಯದ ಕಲೆಗಳಿಗೆ ಮಾನ್ಯತೆ ಸಿಕ್ಕಿರಲಿಲ್ಲ. ಸಾಹಿತ್ಯ ಪರಂಪರೆಯಲ್ಲಿ ಜಾನಪದಕ್ಕೆ ಮಾನ್ಯತೆ ಸಿಕ್ಕಿದ್ದು ಜಿ.ಶಂ.ಪರಮಶಿವಯ್ಯ ಹಾಗೂ ಹಾ.ಮಾ.ನಾಯಕ ಸಾಕಷ್ಟು ಕಷ್ಟಪಟ್ಟಿದ್ದಾರೆ. ಜಾನಪದ ಸಾಹಿತ್ಯ ಕೂಡ ಸಂಶೋಧನೆಗೆ ಯೋಗ್ಯ ಕ್ಷೇತ್ರ ಮತ್ತು ವಸ್ತು ಎಂಬುದನ್ನು ಒಪ್ಪಿಸಲು ಸಾಕಷ್ಟು ಶ್ರಮಿಸಬೇಕಾಯಿತು ಎಂದು ಮೆಲುಕುಹಾಕಿದರು.
ಜಾನಪದ ಅಧ್ಯಯನ ವಿಸ್ತರಣೆ ಕಂಡ, ಮುಖ್ಯ ವಾಹಿನಿಯಲ್ಲಿ ಸ್ಥಾನ ಪಡೆದುಕೊಂಡ ಮೂರನೇ ಘಟ್ಟವಾಗಿ ಈ ಕೃತಿ ನೋಡಬೇಕು. ಶೈಕ್ಷಣಿಕ ಅಧ್ಯಯನದ ವಸ್ತವಾಗಿ ಸಿರಿಯಜ್ಜಿ ಪರಿಣಿಸಿ ಸಂಶೋಧನೆಗೆ ಒಳಪಡಿಸಿದ್ದಕ್ಕೆ ಹೆಮ್ಮೆ ಪಡಬೇಕು. ಜಾನಪದ ಅಧ್ಯಯನದ ಇತಿಹಾಸದಲ್ಲಿ ಹೊಸದೊಂದು ಪರ್ವ ಶುರು ಆಗಿದೆ.ಕಾಡು ಗೊಲ್ಲರಂತಹ ನಿರ್ಬಂಧಿತ ಸಮುದಾಯದ ಮಹಿಳೆಯೊಬ್ಬರು ಇಷ್ಟು ಎತ್ತರಕ್ಕೆ ಬೆಳೆಯುವ ಅವಕಾಶ ಸಿಕ್ಕಿದ್ದು ವಿಸ್ಮಯ. ಅವರ ಒಳಗಿನ ಆಸಕ್ತಿ, ಪ್ರಯತ್ನ ಹಾಗೂ ಕುಟುಂಬದ ಬೆಂಬಲದ ಕಾರಣಕ್ಕೆ ಅವಳಿಗೆ ಇದು ಸಾಧ್ಯ ಆಯಿತು. ಕಾಡಗೊಲ್ಲರ, ಸಾಂಸ್ಕೃತಿಕ ವೀರರ ಆರಾಧ್ಯ ದೈವ, ಬೇರೆ ಸಮುದಾಯದ ದೈವಗಳ ಬಗ್ಗೆ ಸಿರಿಯಜ್ಜಿ ಹಾಡಿದ್ದಾರೆ. ಹಾಡುವ ಸಾಹಿತ್ಯದಲ್ಲಿ ಭೇದ ಮಾಡಿಲ್ಲ. ಸಾಹಿತ್ಯದ ಪದ-ಪದದ ವಿವರಗಳನ್ನು ಅವಳು ನೀಡುತ್ತಿದ್ದಳು. ಕಾವ್ಯ ಅವಳ ಬದುಕಿನ ಭಾಗ ಆಗಿತ್ತು. ಹೀಗಾಗಿ ಅವಳು ನಿರರ್ಗಳವಾಗಿ ಹಾಡುತ್ತದ್ದಳು. ಆದರೆ, ಒಬ್ಬ ವ್ಯಕ್ತಿ ಇಷ್ಟು ಪದಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತದೆ ಎಂದರು.
ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಎ.ಬಿ.ರಾಮಚಂದ್ರಪ್ಪ, ಜಾನಪದ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ್ ಕಲಮರಹಳ್ಳಿ, ಸಿರಿಯಜ್ಜಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ, ಕಲಾವಿದೆ ಸಿರಿಯಮ್ಮ, ಜಿ.ಕೆ.ಪ್ರೇಮಾ, ಅಮಿತ ಪ್ರಕಾಶನದ ಶಾರದಮ್ಮ ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಹಳೆ ಪಿಂಚಣಿ ಪದ್ಧತಿ ಮರುಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ನಿರ್ಣಯ
ಸುದ್ದಿದಿನಡೆಸ್ಕ್:ಹಳೆ ಪಿಂಚಣಿ ಪದ್ಧತಿ ಮರು ಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ವಿವಿಧ ಹಂತಗಳಲ್ಲಿ ಹೋರಾಟ ಸೇರಿದಂತೆ ಇನ್ನಿತರೆ ನಿರ್ಣಯಗಳಿಗೆ ಬೆಂಬಲ ಸೂಚಿಸಲು ದಾವಣಗೆರೆಯಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸಭೆ ನಿರ್ಧರಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ತಿಳಿಸಿದ್ದಾರೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗದು ರಹಿತ ಚಿಕಿತ್ಸೆ ಯೋಜನೆಯ ತ್ವರಿತ ಜಾರಿಗೆ ಒತ್ತಾಯಿಸುವುದು, 2026ಕ್ಕೆ ಕೇಂದ್ರ ಸರ್ಕಾರದ ಮಾದರಿ ವೇತನಕ್ಕಾಗಿ ಹೋರಾಟ ರೂಪಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಿ ಆಂಡ್ ಆರ್ ನಿಯಮಕ್ಕೆ ತಿದ್ದುಪಡಿ ತರುವಂತೆ ಆಗ್ರಹಿಸಿ, ನಡೆಸಲಾಗುವ ಹೋರಾಟವನ್ನು ಬೆಂಬಲಿಸುವುದು, ವೈದ್ಯಕೀಯ ವೆಚ್ಚ ಮರುಪಾವತಿ ಬಿಲ್‌ಗಳಿಗೆ ಶೀಘ್ರವೇ ಹಣ ಬಿಡುಗಡೆ ಮಾಡಿಸುವ ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದು ಸಿ.ಎಸ್.ಷಡಕ್ಷರಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243