ದಿನದ ಸುದ್ದಿ
ಚನ್ನಗಿರಿ | ಕುಡಿಯುವ ನೀರಿಗೆ ರೂ.5.47 ಕೋಟಿ ಹಣ ಮಂಜೂರು: ಸಚಿವ ಭೈರತಿ ಬಸವರಾಜ್
ಸುದ್ದಿದಿನ,ದಾವಣಗೆರೆ : ಚನ್ನಗಿರಿ ಪಟ್ಟಣದ ಕುಡಿಯುವ ನೀರಿಗಾಗಿ ನಗರಾಭಿವೃದ್ದಿ ಇಲಾಖೆಯಿಂದ ರೂ.5.47 ಕೋಟಿ ಮಂಜೂರು ಮಾಡಲಾಗಿದೆ ಎಂದು ನಗರಾಭಿವೃದ್ದಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ ಹೇಳಿದರು.
ಚನ್ನಗಿರಿ ತಾಲ್ಲೂಕಿನ ತಣಿಗೆರೆ ಗ್ರಾಮದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸಂತೆಬೆನ್ನೂರು ಹೋಬಳಿ ಮಟ್ಟದ ಜನಸ್ಪಂದನ ಸಭೆಯಲ್ಲಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಕಳೆದ 3 ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಸರ್ಕಾರದಿಂದ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಕುಡಿಯುವ ನೀರಿನ ಯೋಜನೆಯಡಿ ಪ್ರತಿಯೊಂದು ಗ್ರಾಮದಲ್ಲೂ ಜನರ ಮನೆ ಮನೆಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು ಮುಂದಿನ ದಿನಗಳಲ್ಲಿ ಗ್ರಾಮಗಳಲ್ಲಿ ಜನರು ಕುಡಿಯುವ ನೀರಿಗಾಗಿ ಪರದಾಡುವುದು ತಪ್ಪಲಿದೆ ಎಂದರು.
ಸೋಮವಾರ ಈ ಭಾಗದಲ್ಲಿ ರೂ.28.79 ಕೋಟಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮಗಳು ನೆರವೇರಿದ್ದು, ಶಾಸಕರ ಕಾಳಜಿಯಿಂದಾಗಿ ತಾಲ್ಲೂಕು ಅಭಿವೃದ್ದಿ ಪಥದಲ್ಲಿ ಸಾಗುತ್ತಿದೆ ಎಂದ ಅವರು ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ನಾಯಕತ್ವದ ನಮ್ಮ ಸರ್ಕಾರ ರಾಜ್ಯದ ಸಮಗ್ರ ಅಭಿವೃದ್ದಿ ದೃಷ್ಟಿಯಲ್ಲಿಟ್ಟುಕೊಂಡು ಕರೋನಾ ಸಂದರ್ಭದಲ್ಲೂ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗದಂತೆ ಕಾರ್ಯಕ್ರಮಗಳನ್ನು ನೀಡಿದೆ ಎಂದರು.
ಇದನ್ನೂ ಓದಿ | ಚಿತ್ರದುರ್ಗ | ನೀರಾವರಿ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸರಿಯಿಲ್ಲ : ಸಮಿತಿ ಸಂಚಾಲಕರ ಅಭಿಮತ
ಈ ಜನಸ್ಪಂದನ ಕಾರ್ಯಕ್ರಮದ ಮುಖ್ಯ ಉದ್ದೇಶ ಗ್ರಾಮಗಳ ಅಭಿವೃದ್ಧಿಯಾಗಿದೆ. ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ, ದೇವಸ್ಥಾನಗಳ ಜೀರ್ಣೋದ್ದಾರ, ಸಮುದಾಯ ಭವನಗಳ ನಿರ್ಮಾಣ, ಶಾಲೆಗಳ ನವೀಕರಣಕ್ಕಾಗಿ ಸರ್ಕಾರದಿಂದ ರೂ28.79 ಲಕ್ಷವನ್ನು ಮಂಜೂರು ಮಾಡಲಾಗಿದೆ ಎಂದರು.
ರೈತರು, ಬಡವರು, ಮತ್ತು ದೀನದಲಿತರಿಗಾಗಿ ಕೃಷಿಯಂತ್ರೋಪಕರಣಗಳನ್ನು, ಹಾಗೂ ಕೈಗಾಡಿಗಳನ್ನು ಫಲಾನುಭವಿಗಳಿಗೆ ವಿತರಿಸಿದ ಅವರು, ಗ್ರಾಮದ ಜನರಿಗೆ ಆರ್ಥಿಕವಾಗಿ ಸಬಲರಾಗಬೇಕಾದರೆ ಸರ್ಕಾರದಿಂದ ಬರುವ ಅನುದಾನದ ಸೌಲಭ್ಯ ಪಡೆದು ಸದುಪಯೋಗ ಪಡೆದುಕೊಳ್ಳಬೇಕು. ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಪಡೆದು ವ್ಯವಸಾಯಕ್ಕೆ ರೈತರು ಬಳಸಿಕೊಳ್ಳಬಹುದು.
ಪಿ.ಎಂ.ಕಿಸಾನ್ ಯೋಜನೆಯಡಿಯಲ್ಲಿ ರೈತರಿಗೆ ಕೇಂದ್ರದಿಂದ ರೂ.6 ಸಾವಿರ ಮತ್ತು ರಾಜ್ಯ ಸರ್ಕಾರದಿಂದ ರೂ.4 ಸಾವಿರ ಹಣ ರೈತರ ಖಾತೆಗೆ ಜಮಾ ಮಾಡಲಾಗುತ್ತಿದೆ. ಹಾಗೂ ಕೃಷಿ ಇಲಾಖೆಯಿಂದ ಕೃಷಿ ಯಂತ್ರೋಪಕರಣಗಳನ್ನು ನಿಗದಿತ ಬಾಡಿಗೆ ರೂಪದಲ್ಲಿ ಪಡೆದು ವ್ಯವಸಾಯಕ್ಕೆ ಅನುಕೂಲ ಪಡೆಯಬಹುದು.
ಹಾಗೆಯೇ ಈ ಬಾರಿಯ ಬಜೆಟ್‍ನಲ್ಲಿ ನಾವು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು ದಾವಣಗೆರೆ ಜಿಲ್ಲೆಯ ಚಿಗಟೇರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಕಾಲೇಜು ಆರಂಭ ಮಾಡಲು ಚರ್ಚಿಸಲಾಗಿದೆ. ಹಾಗೂ ನಮ್ಮ ಜಿಲ್ಲೆಯಲ್ಲಿ ಕೃಷಿ ವಿಜ್ಞಾನ ಕಾಲೇಜು ಸ್ಥಾಪನೆಯಾಗಬೇಕು ಎಂದು ಅವರಲ್ಲಿ ಮನವಿ ಮಾಡಿದ್ದೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಎಸ್.ಡಿ.ಎಲ್. ನ ಅಧ್ಯಕ್ಷರು ಹಾಗೂ ಚನ್ನಗಿರಿ ಕ್ಷೇತ್ರದ ಶಾಸಕ ಕೆ.ಮಾಡಾಳ್ ವಿರುಪಾಕ್ಷಪ್ಪ, ಜನರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಹುಡುಕುವ ಬದಲಾಗಿ ಅವರೇ ಜನರ ಬಳಿ ಬಂದಾಗ ಸಮಸ್ಯೆಗಳು ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ತಿಳಿಯುತ್ತದೆ ಇದರಿಂದ ನಾವು ಮಾಡಬೇಕಾಗಿರುವ ಕೆಲಸದ ಅರಿವು ನಮಗಾಗುತ್ತದೆ ಎಂದರು.
ಅಧಿಕಾರಿಗಳ ಭೇಟಿಗೆ ಸಾಮಾನ್ಯ ಜನ ತೆರಳಿದರೆ ಗಂಟೆಗಟ್ಟಲೇ ಕಾಯುವ ಪರಿಸ್ಥಿತಿಯಿದೆ. ಬದಲಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜನರ ನಡುವೆ ಇದ್ದಲ್ಲಿ ಜನರ ಕಷ್ಟ-ಸುಖಗಳನ್ನು ಮಕ್ತವಾಗಿ ಗ್ರಹಿಸುವ ಮತ್ತು ಅವರ ಬೇಡಿಕೆಗಳನ್ನು ಈಡೇರಿಸಲು ಈ ಕಾರ್ಯಕ್ರಮದಿಂದ ಸಾಧ್ಯವಾಗಲಿದೆ.
ಸಂಧ್ಯಾ ಸುರಕ್ಷಾ, ವೃದ್ಧಾಪ್ಯ, ನಿರ್ಗತಿಕ ವಿಧವಾ ವೇತನ, ಅಂಗವಿಕಲರ ವೇತನ, ಮನಸ್ವಿನಿ ವೇತನ, ಅಕ್ರಮ ಸಕ್ರಮ ಯೋಜನೆ ನಿವೇಶನ ಹಕ್ಕು ಪತ್ರಗಳಿಗಾಗಿ ವಿ.ಎ, ಆರ್.ಐ ಬಳಿ ತಿಂಗಳಗಟ್ಟಲೇ ಅಲೆದಾಡುವ ಸಮಸ್ಯೆ ಇತ್ತು. ಇಂದು ಸರ್ಕಾರ ಮತ್ತು ಅಧಿಕಾರಿಗಳು ನಿಮ್ಮ ಬಳಿಗೆ ಬಂದು ಸುಮಾರು ರೂ. 37.70 ಲಕ್ಷಗಳ ವಿವಿಧ ಪ್ರಯೋಜನಗಳನ್ನು ವಿತರಿಸಲಾಗಿದೆ. ಹಾಗೂ 60 ವರ್ಷ ಮೇಲ್ಪಟ್ಟಂತಹ ಜನರನ್ನು ಅಧಿಕಾರಿಗಳೇ ಗುರುತು ಮಾಡಿ ಅವರಿಗೆ ಮುಂದಿನ ತಿಂಗಳಿಂದಲೇ ಮಾಶಾಸನ ನೀಡುವಂತೆ ನಿರ್ದೇಶನ ನೀಡಲಾಗಿದೆ ಎಂದರು.
ಇಂದು ಬಹಳ ಜನ ರೈತರು ಬಗರ್ ಹುಕುಂ ಸಾಗುವಳಿ ಮಾಡಿದ್ದು ಅಂತಹವರಿಗೆ ಸರ್ಕಾರದ ಜಮೀನನ್ನು ಕೊಡಲು ಅವಕಾಶವಿದ್ದರೆ ಹಾಗೂ ಅರಣ್ಯ ಇಲಾಖೆಯ ಆಕ್ಷೇಪಣೆ ಇಲ್ಲದಿದ್ದಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಮರಡಿ ಗ್ರಾಮದಲ್ಲಿ 1965-66 ನೇ ಸಾಲಿನಲ್ಲಿ ನೀಲಕಂಠಪ್ಪ ಎಂಬುವರು ಕೈಗಾರಿಕೆ ಸ್ಥಾಪನೆ ಉದ್ದೇಶದಿಂದ ಸುಮಾರು 40 ರಿಂದ 50 ಎಕರೆ ಜಮೀನನ್ನು ಮಂಜೂರು ಮಾಡಿಸಿಕೊಂಡಿದ್ದು ಇದುವರೆಗೂ ಯಾವುದೇ ಕೈಗಾರಿಕೆ ಸ್ಥಾಪನೆಯಾಗಿಲ್ಲ.
ಇಂದಿಗೂ ಆ ಪ್ರದೇಶ ಕೈಗಾರಿಕೆ ಪ್ರದೇಶವಾಗಿಯೇ ಉಳಿದಿದೆ. ಆ ಪ್ರದೇಶವನ್ನು ಬಗರ್ ಹುಕುಂ ಸಾಗುವಳಿದಾರರಿಗೆ ವಿತರಿಸಲು ಅವಕಾಶ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಬಹಳಷ್ಟು ಬಡ ಜನರು ಮರಣ ಹೊಂದಿದಲ್ಲಿ ಹೂಳಲು ಜಾಗವಿಲ್ಲದೆ ಪರದಾಡುವ ಸ್ಥಿತಿಯಿದೆ ಹಾಗಾಗಿ ಸರ್ಕಾರಿ ಜಮೀನು ಲಭ್ಯವಿರುವೆಡೆ ಗ್ರಾಮಕ್ಕೊಂದು ರುದ್ರಭೂಮಿ ನಿರ್ಮಾಣ ಮಾಡಲು ತಹಶೀಲ್ದಾರ್ ಅವರಿಗೆ ನಿರ್ದೇಶನ ನೀಡಲಾಗಿದೆ. ಮಾದರಿಯಾಗಿ ಮಂಗೇನಹಳ್ಳಿ ಗ್ರಾಮದಲ್ಲಿ ಸುಮಾರು ರೂ.50 ಲಕ್ಷ ವೆಚ್ಚದಲ್ಲಿ ರುದ್ರಭೂಮಿ ನಿರ್ಮಾಣ ಮಾಡಲಾಗಿದೆ.
ಪ್ರತಿ ಗ್ರಾಮದಲ್ಲಿ ತಲಾ ರೂ.20 ಲಕ್ಷ ವೆಚ್ಚದಲ್ಲಿ ಎಸ್ ಟಿ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತಿದೆ. ತಾಲ್ಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಲ್ಲ. ತಾಲ್ಲೂಕಿನಲ್ಲಿ ಕೆ.ಇ.ಬಿ ಯಿಂದ ತಂತಿಗಳು ಮತ್ತು ಹಳೆ ಕಂಬಗಳನ್ನು ಬದಲಾಯಿಸಿ ಹೊಸ ಟಿ.ಸಿ ಗಳನ್ನು ಸ್ಥಾಪಿಸಲು ಸುಮಾರು ರೂ.120 ಕೋಟಿ ಹಣ ಮಂಜೂರಾತಿ ಮಾಡಿಸಲಾಗಿದೆ ಎಂದರು.
ಸಂಸದರಾದ ಜಿ.ಎಂ. ಸಿದ್ದೇಶ್ವರ ಮಾತನಾಡಿ ಈ ಕಾರ್ಯಕ್ರಮದ ಮೂಲಕ ಜನರು ತಾಲ್ಲೂಕು ಮತ್ತು ಜಿಲ್ಲಾ ಕಚೇರಿಗಳ ಬಳಿ ಹಾಗೂ ವಿವಿಧ ಇಲಾಖೆಗಳಿಗೆ ಅಲೆದಾಡುವುದನ್ನು ತಪ್ಪಿಸಿ ಇಲಾಖೆಗಳೇ ನಿಮ್ಮ ಮನೆ ಬಾಗಿಲಿಗೆ ಬಂದು ವಿವಿಧ ಸರ್ಕಾರದ ಸೌಲಭ್ಯಗಳನ್ನು ಫಲಾನುಭವಿಗಳಿಗೆ ನೀಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯದಂತಹ ಕಾರ್ಯಕ್ರಮವನ್ನು ಆಯೋಜಿಸಿ ಅಲ್ಲಿನ ಗ್ರಾಮಗಳ ಜನರ ಸಮಸ್ಯೆಗಳನ್ನು ಪರಿಶೀಲಿಸಿದರೆ ಪರಿಹಾರ ನೀಡಲು ನೆರವಾಗುತ್ತದೆ.
ಸರ್ಕಾರದ ಮತ್ತೊಂದು ಯೋಜನೆಯಾದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಇಂತಹ ಕಾರ್ಯಕ್ರಮಗಳ ಮೂಲಕ ಸರ್ಕಾರ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರವಾಗಿ ಫಲಾನುಭವಿಗಳಿಗೆ ಸೌಲಭ್ಯ ನೀಡುತ್ತಿದೆ. ಜನರಿಗೆ ವೃದ್ಧಾಪ್ಯವೇತನ, ವಿಧವಾವೇತನ, ಅಂಗವಿಕಲರ ವೇತನ, ಮುಂತಾದ ಸೌಲಭ್ಯಗಳನ್ನು ಕಾಲವಿಳಂಬವಿಲ್ಲದೇ ಮಾಡಲು ಅನುಕೂಲವಾಗಿದೆ. ಸರ್ಕಾರವು ರೈತರಿಗಾಗಿ, ಬಡವರಿಗಾಗಿ ದೀನ-ದಲಿತರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಉಜ್ವಲ ಯೋಜನೆಯಡಿ ದೇಶದಲ್ಲಿ ಸುಮಾರು ರೂ.12 ಕೋಟಿ ಫಲಾನುಭವಿಗಳಿಗೆ ಉಚಿತ ಒಲೆ ಮತ್ತು ಗ್ಯಾಸ್ ಸೌಲಭ್ಯ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಅಧ್ಯೆಕ್ಷೆ ಕೆ.ವಿ.ಶಾಂತಕುಮಾರಿ, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರನಾಯ್ಕ್, ಚನ್ನಗಿರಿ ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಕವಿತಾ ಕಲ್ಲೇಶ್, ತಾಲ್ಲೂಕು ಪಂಚಾಯಿತಿ ಉಪಾಧ್ಯೆಕ್ಷೆ ಚಂದ್ರಮ್ಮ ರುದ್ರಪ್ಪ, ತಣಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಾಣಿ ಪ್ರಕಾಶ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಮುಖ್ಯ ಕಾರ್ಯನಿರ್ವಹಕಾಧಿಕಾರಿ ವಿಜಯ ಮಹಾಂತೇಶ ಬಿ ದಾನಮ್ಮನವರ್, ಉಪವಿಭಾಗಾಧಿಕಾರಿ ಮಮತ ಹೊಸಗೌಡರ, ಪ್ರಭಾರ ಪೊಲೀಸ್ ಉಪಾಧೀಕ್ಷಕ ಬಸವರಾಜ್ ಬಿ ಎಸ್, ಚನ್ನಗಿರಿ ತಹಶೀಲ್ದಾರ್ ಡಾ. ಪಟ್ಟರಾಜ ಗೌಡ ಮುಂತಾದವರು ಉಪಸ್ಥತಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ
ಸುದ್ದಿದಿನ ಡೆಸ್ಕ್:ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಸಂಸ್ಥೆಯಡಿ ಪ್ರಿಯಾ ಸುದೀಪ್ ನಿರ್ಮಿಸಿದ ಮೊದಲ ಚಿತ್ರ ‘ಮ್ಯಾಂಗೋ ಪಚ್ಚ’. ಸಂಚಿತ್ ಸಂಜೀವ್ ಅಭಿನಯದ ಈ ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ.
ಈ ಸೋಲನ್ನು ಹಿಂದಕ್ಕೆ ಹಾಕಿ, ಪ್ರಿಯಾ ಸುದೀಪ್ ಇನ್ನಷ್ಟು ಹೊಸ ಕಥೆಗಳನ್ನು ತೆರೆಗೆ ತರುವುದಕ್ಕೆ, ಹೊಸ ಚಿತ್ರಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಕಥೆಗಾರರಿಗೆ ಆಹ್ವಾನ ನೀಡಿದ್ದಾರೆ. ‘ನಾವು ಹುಡುಕುತ್ತಿರುವುದು ಕೇವಲ ಕಥೆಗಳಲ್ಲ. ಮನಸ್ಸುಗಳನ್ನು ಮುಟ್ಟುವ ಭಾವನೆಗಳು, ಚಿಂತನೆಗೆ ಹಚ್ಚುವ ವಿಚಾರಗಳು ಮತ್ತು ಪರದೆಯ ಮೇಲೆ ಹೊಸ ಇತಿಹಾಸ ಬರೆಯುವ ಕಲ್ಪನೆಗಳು.
ನಿಮ್ಮ ಬಳಿ ಮೌಲಿಕ ಕಥೆ-ಚಿತ್ರಕಥೆ ಇದ್ದರೆ ಅಥವಾ ವಿಶಿಷ್ಟ ಕಥಾ ಪರಿಕಲ್ಪನೆ ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಮತ್ತು ಸೃಜನಾತ್ಮಕತೆಯನ್ನು ಹೊಂದಿರುವ ಲೇಖಕರು, ಕಥೆಗಾರರು ಮತ್ತು ಸೃಜನಶೀಲ ಮನಸ್ಸುಗಳನ್ನು ನಾವು ಸ್ವಾಗತಿಸುತ್ತೇವೆ. ಎಲ್ಲಾ ಪ್ರಕಾರಗಳು ಮತ್ತು ಎಲ್ಲಾ ಮಾದರಿಗಳಲ್ಲಿನ ಕಥಾ ಸಲ್ಲಿಕೆಗಳನ್ನು ನಾವು ಸ್ವಾಗತಿಸುತ್ತೇವೆ. ನಿಮ್ಮ ಕಥೆಯೇ ಮುಂದಿನ ದೊಡ್ಡ ಪ್ರಯಾಣದ ಆರಂಭವಾಗಬಹುದು’ ಎಂದು ಪ್ರಿಯಾ ಸುದೀಪ್, ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಜೊತೆಗೆ ಒಂದು ಮೊಬೈಲ್ ಸಂಖ್ಯೆಯನ್ನು ಸಹ ಹಂಚಿಕೊಂಡಿದ್ದಾರೆ. ಆದರೆ, ಕರೆ ಮಾಡುವಂತಿಲ್ಲ. ಚಾಟ್ ಮಾತ್ರ ಮಾಡಬಹುದು. ಕಥೆಗಳಿದ್ದರೆ 6663307434 ಸಂಖ್ಯೆಯನ್ನು ಸಂಪರ್ಕಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದುರಂತ | ಮೇಲ್ಛಾವಣಿ ಕುಸಿದು ಮೂವರು ಸಾವು
ಸುದ್ದಿದಿನ,ರಾಯಚೂರು: ಕಟ್ಟಡದ ಮೇಲ್ಛಾವಣಿಯ ಸಜ್ಜಾ ಏಕಾಏಕಿ ಕುಸಿದು ಬಿದ್ದು ಮೂವರು ಯುವಕರು ಮೃತಪಟ್ಟ ದುರ್ಘಟನೆ ಭಾನುವಾರ ಜಿಲ್ಲೆಯ ದೇವದುರ್ಗ ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪ ಸಂಭವಿಸಿದೆ.
ಮೃತರನ್ನು ದೇವದುರ್ಗ ತಾಲೂಕಿನ ಸಮುದ್ರ ಗ್ರಾಮದ ರವಿಚಂದ್ರ (35), ಕ್ಯಾದಿಗೆರಾ ಗ್ರಾಮದ ನಾಗರಾಜ್ (30) ಹಾಗೂ ಕೊತ್ತಿಗುಡ್ಡದ ಅರ್ಜುನ್ (21) ಎಂದು ಗುರುತಿಸಲಾಗಿದೆ.
ಕಟ್ಟಡದ ಅವಶೇಷಗಳಡಿ ಸಿಲುಕಿ ರವಿಚಂದ್ರ ಹಾಗೂ ನಾಗರಾಜ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅರ್ಜುನ್ ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿಯ ಪ್ರಕಾರ, ಯುವಕರು ತಾವೇ ನಿರ್ಮಿಸಿದ್ದ ‘ಅಂತ್ಯವಾಯ್ತು’ ಎಂಬ ಕಿರುಚಿತ್ರದ ಪೋಸ್ಟರ್ ಅಂಟಿಸಲು ಕಟ್ಟಡದ ಬಳಿ ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ.
ಕಟ್ಟಡದ ಮೇಲ್ಛಾವಣಿಯ ಒಂದು ಭಾಗವು, ಅದಕ್ಕೆ ಜೋಡಣೆಯಾಗಿದ್ದ ಕಬ್ಬಿಣದ ಮೆಟ್ಟಿಲುಗಳ ಸಹಿತ ಕುಸಿದು ಬಿದ್ದಿದೆ. ಘಟನೆಯಲ್ಲಿ ಉಮೇಶ್, ಪ್ರಭು ಹಾಗೂ ಅಭಿಷೇಕ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಘಟನಾ ಸ್ಥಳಕ್ಕೆ ದೇವದುರ್ಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯ ನಂತರ ನಿಖರ ಕಾರಣ ತಿಳಿಯಲಿದೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ದೇವದುರ್ಗ ಶಾಸಕಿ ಕರೆಮ್ಮ ನಾಯಕ ಭೇಟಿ ನೀಡಿ, ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪಲ್ಸ್ ಪೋಲಿಯೋದಿಂದ ಯಾವುದೇ ಮಗು ವಂಚಿತವಾಗದಂತೆ ಕ್ರಮವಹಿಸಿ: ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್
ಜಿಲ್ಲೆಯಲ್ಲಿ 1.37 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ: ಡಿಎಚ್ಒ ಡಾ. ಷಣ್ಮುಖಪ್ಪ
ಸುದ್ದಿದಿನ,ದಾವಣಗೆರೆ: ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಪಲ್ಸ್ ಪೋಲಿಯೋ ವಿಶೇಷ ಅಭಿಯಾನದಲ್ಲಿ ಯಾವುದೇ ಒಂದು ಮಗುವೂ ಸಹ ಲಸಿಕೆಯಿಂದ ವಂಚಿತವಾಗದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಅವರು ಸೂಚಿಸಿದರು.
ಅವರು ಭಾನುವಾರ ಪಾಷನಗರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಬ್ದುಲ್ ರೆಹಮಾನ್ ಎಂಬ 4 ತಿಂಗಳ ಮಗುವಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಜಿಲ್ಲಾ ಮಟ್ಟದ ಪಲ್ಸ್ ಪೋಲಿಯೋ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶ ಸೇರಿದಂತೆ ಎಲ್ಲಾ ಭಾಗಗಳ ಅರ್ಹ ಮಕ್ಕಳಿಗೂ ಲಸಿಕೆ ತಲುಪಬೇಕು. ಆರೋಗ್ಯ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ ಎಸ್. ಅವರು ಮಾತನಾಡಿ, ಜಿಲ್ಲೆಯನ್ನು ಸಂಪೂರ್ಣ ಪೋಲಿಯೋ ಮುಕ್ತವಾಗಿಸಲು ಆರೋಗ್ಯ ಇಲಾಖೆ ಪಣತೊಟ್ಟಿದೆ. ಜಿಲ್ಲೆಯಲ್ಲಿ ಒಟ್ಟು 18,28,153 ಜನಸಂಖ್ಯೆಯಿದ್ದು, 3,79,338 ಮನೆಗಳಿವೆ. ಇವುಗಳಲ್ಲಿ ಗುರುತಿಸಲಾಗಿರುವ 5 ವರ್ಷದ ಒಳಗಿನ 1,37,339 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ವಿವರ ನೀಡಿದರು.
ಇದಕ್ಕಾಗಿ ಜಿಲ್ಲಾದ್ಯಂತ 1,090 ಲಸಿಕಾ ಬೂತ್ಗಳನ್ನು ಸ್ಥಾಪಿಸಲಾಗಿದೆ. ಬೂತ್ಗಳಲ್ಲಿ ಲಸಿಕೆ ಹಾಕುವುದರ ಜೊತೆಗೆ, ಜೂನ್ 29 ರಿಂದ ಜುಲೈ 1 ರವರೆಗೆ ಒಟ್ಟು 3 ದಿನಗಳ ಕಾಲ ಜಿಲ್ಲೆಯ ಎಲ್ಲಾ ಮನೆ-ಮನೆಗೆ ತೆರಳಿ 5 ವರ್ಷದ ಒಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗುವುದು. ಈ ಕಾರ್ಯಕ್ರಮವನ್ನು 2 ಹಂತಗಳಲ್ಲಿ 3 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಲಸಿಕಾ ಅಭಿಯಾನದ ಯಶಸ್ಸಿಗಾಗಿ ಮನೆ-ಮನೆ ಭೇಟಿ ತಂಡ, ಟ್ರಾನ್ಸಿಸ್ಟ್ (ಸಾರಿಗೆ ನಿಲ್ದಾಣಗಳ ತಂಡ) ಮತ್ತು ಸಂಚಾರಿ (ಮೊಬೈಲ್) ತಂಡ ಹೀಗೆ ಮೂರು ಪ್ರಮುಖ ವಿಭಾಗಗಳ ತಂಡಗಳನ್ನು ರಚಿಸಲಾಗಿದೆ. ನಿಯೋಜಿತ ಸಿಬ್ಬಂದಿ ಹಾಗೂ ಮೇಲ್ವಿಚಾರಕರು ಸಕ್ರಿಯವಾಗಿ ಕಾರ್ಯನಿರ್ವಹಿಸಲಿದ್ದು, ವಲಸೆ ಕಾರ್ಮಿಕರ ಮಕ್ಕಳು, ಹರವಿಗಿ ಹೋಗುವ ಕುಟುಂಬಗಳ ಮಕ್ಕಳು ಸೇರಿದಂತೆ ಒಂದೂ ಮಗುವು ಲಸಿಕೆಯಿಂದ ವಂಚಿತವಾಗದಂತೆ ಕಟ್ಟುನಿಟ್ಟಿನ ನಿಗಾ ಇಡಲಾಗುವುದು ಎಂದು ತಿಳಿಸಿದರು.
ಡಾ. ರೇಣುಕಾರಾಧ್ಯ ಆರ್.ಸಿ.ಹೆಚ್.ಒ ಅವರು ಮಾತನಾಡಿ, ಭಾರತವನ್ನು ಪೋಲಿಯೋ ಮುಕ್ತ ದೇಶವನ್ನಾಗಿಸಲಾಗಿದೆ ಆದರೆ ಪ್ರಸ್ತುತ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ 5 ಪೋಲಿಯೋ ಪ್ರಕರಣಗಳು ಪತ್ತೆಯಾಗಿವೆ. ಅಲ್ಲಿನ ನಾಗರಿಕರು ಭಾರತಕ್ಕೆ ಬಂದು ಹೋಗುವ ಸಾಧ್ಯತೆ ಇರುವುದರಿಂದ, ವೈರಸ್ ಮತ್ತೆ ಇಲ್ಲಿ ಹರಡಬಾರದು ಎಂಬ ಮುಂದಾಲೋಚನೆಯಿಂದ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ದೇಶಾದ್ಯಂತ ಈ ಪಲ್ಸ್ ಪೋಲಿಯೋ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪಲ್ಸ್ ಪೋಲಿಯೋ ನೊಡೆಲ್ ಅಧಿಕಾರಿ ಡಾ.ಚಂದ್ರಶೇಖರ್ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days agoದಾವಣಗೆರೆ | ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ
-
ದಿನದ ಸುದ್ದಿ18 hours agoಪಲ್ಸ್ ಪೋಲಿಯೋದಿಂದ ಯಾವುದೇ ಮಗು ವಂಚಿತವಾಗದಂತೆ ಕ್ರಮವಹಿಸಿ: ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್
-
ದಿನದ ಸುದ್ದಿ17 hours agoದುರಂತ | ಮೇಲ್ಛಾವಣಿ ಕುಸಿದು ಮೂವರು ಸಾವು
-
ದಿನದ ಸುದ್ದಿ3 hours agoನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ

