ದಿನದ ಸುದ್ದಿ
ದುಡಿಯುವ ಮಹಿಳೆಯರ ಹೋರಾಟಕ್ಕೆ ಶಕ್ತಿ ತುಂಬಿದ್ದ ಕಾಂII ಹೆಚ್‌ಕೆಆರ್
- ಕೆ.ರಾಘವೇಂದ್ರ ನಾಯರಿ,ಕಾರ್ಮಿಕ ಮುಖಂಡ,& ಪ್ರದಾನ ಕಾರ್ಯದರ್ಶಿ,ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘ,ದಾವಣಗೆರೆ
ಈ ನಾಡು ಕಂಡ ಅದ್ಭುತ ಕಾರ್ಮಿಕ ನಾಯಕ ಕಾಮ್ರೇಡ್ ಹೆಚ್.ಕೆ.ರಾಮಚಂದ್ರಪ್ಪ ಅವರು ದಿನಾಂಕ 08-05-2021 ರಂದು ನಿಧನರಾಗಿದ್ದಾರೆ. ಕಳೆದ 17 ವರ್ಷಗಳಿಂದ ಅವರ ಆಪ್ತ ಒಡನಾಡಿಯಾಗಿದ್ದ ಕೆನರಾ ಬ್ಯಾಂಕ್ ಉದ್ಯೋಗಿ ಕಾಂII ಕೆ.ರಾಘವೇಂದ್ರ ನಾಯರಿ ಅವರು ಕಾಂIIಹೆಚ್‌ಕೆಆರ್ ಕುರಿತಾಗಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
- ದುಡಿಯುವ ವರ್ಗದ ಧೀಮಂತ ನಾಯಕ ಕಾಂII ಹೆಚ್‌ಕೆಆರ್ – ಅಸ್ತಂಗತ
- ಹೋರಾಟವನ್ನೇ ಉಸಿರಾಗಿಸಿಕೊಂಡಿದ್ದ ಕ್ರಾಂತಿಕಾರಿ ನಾಯಕ – ಕಾಂII ಹೆಚ್‌ಕೆಆರ್
- ಆರು ದಶಕಗಳ ದಣಿವರಿಯದ ಜೀವ ಚಿರ ವಿಶ್ರಾಂತಿಗೆ
ದಾವಣಗೆರೆ ಎಂದರೆ ಕಾರ್ಮಿಕರ ಹೋರಾಟಕ್ಕೆ ಹೆಸರುವಾಸಿಯಾದ ನೆಲ. ಈ ಮಣ್ಣಿನ ಗುಣವೇ ಸಂಘಟನೆ, ಹೋರಾಟ, ಚಳುವಳಿಗಳಿಗೆ ಪ್ರೇರಣೆ ನೀಡುತ್ತದೆ ಅಂತನಿಸುತ್ತದೆ. ಏಕೆಂದರೆ ಕರ್ನಾಟಕದಲ್ಲಿ ಕಾರ್ಮಿಕರ ಹೋರಾಟ ಎಂದೊಡನೆ ತಟ್ಟಂತೆ ನೆನಪಾಗುವುದೇ ದಾವಣಗೆರೆ. ಕಾರ್ಮಿಕ ಸಂಘಟನೆ ಮಾತ್ರವಲ್ಲದೇ ಭಾರತೀಯ ಕಮ್ಯುನಿಸ್ಟ್ ಪಕ್ಷವನ್ನು ಉಚ್ಛ್ರಾಯ ಸ್ಥಿತಿಗೆ ತಂದಂತಹ ಊರು ಕೂಡಾ ದಾವಣಗೆರೆ.
ಇಂತಹ ಕ್ರಾಂತಿಕಾರಿ ಗುಣಗಳನ್ನು ಹೊಂದಿದ್ದಂತಹ ದಾವಣಗೆರೆಯಲ್ಲಿ ದಿವಂಗತ ಕಾಮ್ರೇಡ್ ಪಂಪಾಪತಿಯವರ ಗರಡಿಯಲ್ಲಿ ಬೆಳೆದು ದುಡಿಯುವ ವರ್ಗದ ಧೀಮಂತ ನಾಯಕನಾಗಿ ಬೆಳೆದು ಕಾರ್ಮಿಕರ ಕಷ್ಟ ಸುಖಗಳನ್ನೇ ತನ್ನ ಉಸಿರಾಗಿಸಿಕೊಂಡು ಬೆಳೆದ ಕಾರ್ಮಿಕ ನಾಯಕನೇ ಕಾಮ್ರೇಡ್ ಹೆಚ್.ಕೆ.ರಾಮಚಂದ್ರಪ್ಪ.
ಭಾರತೀಯ ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕನಾಗಿ, ಅಸಂಘಟಿತ ವರ್ಗದ ದುಡಿಯುವ ಜನರ ಹೋರಾಟಗಳಿಗೆ ದೊಡ್ಡ ಶಕ್ತಿಯಾಗಿ ಹಾಗೂ ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಮಾರ್ಗದರ್ಶಕರಾಗಿದ್ದ ಕಾಂII ಹೆಚ್.ಕೆ.ರಾಮಚಂದ್ರಪ್ಪ ಅವರು 08-05-2021 ರಂದು ನಿಧನರಾದರು.
ಅವರ ನಿಧನ ಕಾರ್ಮಿಕ ವಲಯಕ್ಕೆ ಅದರಲ್ಲೂ ಬಹುಮುಖ್ಯವಾಗಿ ಅಸಂಘಟಿತ ಕಾರ್ಮಿಕ ವಲಯಕ್ಕೆ ಬಹುದೊಡ್ಡ ಆಘಾತವನ್ನು ತಂದೊಡ್ಡಿದೆ. ಹೆಚ್.ಕೆ.ರಾಮಚಂದ್ರಪ್ಪ ಅವರು ವಿಶೇಷವಾಗಿ ಅಂಗನವಾಡಿ ನೌಕರರು, ಬಿಸಿಯೂಟ ನೌಕರರು, ಆಶಾ ಕಾರ್ಯಕರ್ತರ ಸಂಘಟನೆ ಹಾಗೂ ಇನ್ನೂ ಹಲವಾರು ಕಾರ್ಮಿಕ ಸಂಘಟನೆಗಳಿಗೆ ಧ್ವನಿಯಾಗಿ ತಮ್ಮ ಜೀವನವನ್ನೇ ಕಾರ್ಮಿಕರ ಪರವಾದ ಹೋರಾಟಗಳಿಗೆ ಸಮರ್ಪಿಸಿಕೊಂಡಿದ್ದರು.
ತಮ್ಮ ಮುಂದಿನ ಹೋರಾಟಗಳಿಗೆ ಮುಂದೆ ನಾಯಕ ಯಾರು ಎನ್ನುವ ಪ್ರಶ್ನೆ ದುಡಿಯುವ ವರ್ಗದ ಮುಂದಿದೆ ಎಂದರೂ ತಪ್ಪಾಗಲಾರದು. ಬಹುಷಃ ಅವರ ಆರು ದಶಕಗಳ ದಣಿವರಿಯದ ಹೋರಾಟದ ಜೀವನದಲ್ಲಿ ಸದಾ ಕಾಲ ಒಡನಾಡಿಯಾಗಿದ್ದ ಕಾಂII ಆನಂದ್ ರಾಜ್ ಅವರ ಮಾರ್ಗದರ್ಶನದಲ್ಲಿ ಕಾಂII ಅವರಗೆರೆ ಉಮೇಶ್ ಹೆಚ್.ಜಿ. ಹಾಗೂ ಕಾಂII ಅವರಗೆರೆ ಚಂದ್ರು ಹಾಗೂ ಮತ್ತಿತರರು ಹೆಚ್‌ಕೆಆರ್ ಅವರು ನಡೆಸಿಕೊಂಡು ಬಂದ ಹೋರಾಟದ ಕ್ರಾಂತಿಕಾರಿ ರಥವನ್ನು ಮುಂದಕ್ಕೆ ಕೊಂಡೊಯ್ಯುವ ಕೆಲಸವನ್ನು ಮಾಡುವ ಮೂಲಕ ಕಾರ್ಮಿಕ ವರ್ಗಕ್ಕೆ ನ್ಯಾಯ ಒದಗಿಸಬೇಕಾಗಿದೆ.
ಸೈದ್ಧಾಂತಿಕವಾಗಿ ಅತ್ಯಂತ ಪ್ರಭಾವಶಾಲಿಯಾಗಿದ್ದ ಹೆಚ್‌ಕೆಆರ್ ಅವರು ವಿಶಾಲ ದೃಷ್ಟಿ ಕೋನವನ್ನು ಹೊಂದಿದ್ದ ನಾಯಕರಾಗಿದ್ದರು. ದುಡಿಯುವ ವರ್ಗದ ಅದರಲ್ಲೂ ಪ್ರಮುಖವಾಗಿ ಅಂಗನವಾಡಿ, ಬಿಸಿಯೂಟ, ಆಶಾ, ಕಟ್ಟಡ ಕಾರ್ಮಿಕರು, ಕೈಗಾರಿಕಾ ವಲಯದ ಕಾರ್ಮಿಕರು, ಆಟೋ ಚಾಲಕರು, ಸಾ ಮಿಲ್ ಕಾರ್ಮಿಕರು, ಪುಟ್‌ಪಾತ್ ವ್ಯಾಪಾರಸ್ಥರು, ಹೋಟೆಲ್ ಕಾರ್ಮಿಕರು, ಮನೆಗೆಲಸದವರು ಹೀಗೆ ಹತ್ತು ಹಲವು ಕಾರ್ಮಿಕ ಸಂಘಟನೆಗಳಿಗೆ ಇವರೇ ಉಸಿರಾಗಿದ್ದರು, ಶಕ್ತಿಯಾಗಿದ್ದರು.
ಸಂಘಟಿತ ವಲಯದ ಬ್ಯಾಂಕ್ ನೌಕರರು, ವಿಮಾ ನೌಕರರು, ರೈಲ್ವೇ ನೌಕರರು, ದೂರಸಂಪರ್ಕ ನಿಗಮದ ನೌಕರರು, ಅಂಚೆ ನೌಕರರು ಮುಂತಾದವರ ಸಂಘಟನೆಗಳಿಗೆ ಮಾರ್ಗದರ್ಶಕರಾಗಿದ್ದರು ಮತ್ತು ಅವರ ಯಾವತ್ತೂ ಹೋರಾಟಗಳಿಗೆ ಸದಾ ಪ್ರೋತ್ಸಾಹ ನೀಡಿ ನೆರವಾಗುತ್ತಿದ್ದರು. ಅಲ್ಲಿನ ಯುವ ನಾಯಕರುಗಳನ್ನು ಸೈದ್ಧಾಂತಿಕವಾಗಿ ಬೆಳೆಸಲು ಮತ್ತು ಎಡಪಂಥೀಯ ವಿಚಾರಧಾರೆಯನ್ನು ಮೈಗೂಡಿಸಿಕೊಂಡು ಪ್ರಬಲ ಹೋರಾಟಗಾರರನ್ನಾಗಿ ರೂಪಿಸಲು ವಿಶೇಷ ಮುತುವರ್ಜಿವಹಿಸುತ್ತಿದ್ದರು.
1943 ರ ಪೆಬ್ರವರಿ 2 ರಂದು ಹರಪನಹಳ್ಳಿ ತಾಲೂಕಿನ ಉಚ್ಛಂಗಿದುರ್ಗದಲ್ಲಿ ಕೆಂಪಣ್ಣ ಮತ್ತು ಕೆಂಪಮ್ಮ ದಂಪತಿಗಳ ಮಗನಾಗಿ ಜನಿಸಿದ ಹೆಚ್‌ಕೆಆರ್ ಅವರು ವಿದ್ಯಾರ್ಥಿದೆಸೆಯಲ್ಲಿಯೇ ಉತ್ತಮ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡಿದ್ದರು. 1960 ರಲ್ಲಿ ದಾವಣಗೆರೆಯ ಚಂದ್ರೋದಯ ಮಿಲ್‌ನಲ್ಲಿ ಕೆಲಸಕ್ಕೆ ಸೇರಿದರು.
ಆ ಸಂದರ್ಭದಲ್ಲಿ ಅಲ್ಲಿ ಕಾರ್ಮಿಕರ ಮೇಲೆ ನಡೆಯುತ್ತಿದ್ದ ಶೋಷಣೆ, ದಬ್ಬಾಳಿಕೆ, ದೌರ್ಜನ್ಯವನ್ನು ಪ್ರತಿಭಟಿಸಿದರು. ಇವರ ಹೋರಾಟದ ಮನೋಭಾವನೆಯನ್ನು ಸೂಕ್ಷ್ಮವಾಗಿ ಗಮನಿಸಿದ ಕಾಂII ಪಂಪಾಪತಿ, ಕಾಂII ಸುರೇಶ್, ಕಾಂIIಶೇಖರಪ್ಪ ಇವರನ್ನು ಕಮ್ಯುನಿಸ್ಟ್ ತೆಕ್ಕೆಗೆ ಸೇರಿಸಿಕೊಂಡರು. ಅಲ್ಲಿಂದ ಅವರ ಹೋರಾಟದ ಜೀವನ ಆರಂಭವಾಯಿತು.
ಎಲ್ಲಿ ಕಾರ್ಮಿಕರ ಮೇಲೆ ದಬ್ಬಾಳಿಕೆ ನಡೆಯುತ್ತಿತ್ತೋ ಅಲ್ಲಿ ಹೆಚ್‌ಕೆಆರ್ ಹಾಜರಿರುತ್ತಿದ್ದರು. ವೈಯಕ್ತಿಕ ಬದುಕಿನ ಹಿತಾಸಕ್ತಿಗಳನ್ನು ಕಡೆಗಣಿಸಿ ಕಾರ್ಮಿಕರ ಹಕ್ಕುಗಳಿಗಾಗಿ, ಕಾರ್ಮಿಕರ ನ್ಯಾಯಬದ್ಧವಾದ ಬೇಡಿಕೆಗಳ ಈಡೇರಿಕೆಗಾಗಿ ಕಟಿಬದ್ಧರಾಗಿ ನಿಂತರು. ಚಳುವಳಿ, ಹೋರಾಟ ಇವರ ಜೀವನದ ಅವಿಭಾಜ್ಯ ಅಂಗವಾಯಿತು. ಎ.ಐ.ಟಿ.ಯು.ಸಿ. ಸಂಘಟನೆಯ ಕೆಂಪು ಬಾವುಟದ ಆಶ್ರಯದಲ್ಲಿ ಅಸಂಘಟಿತ ಕಾರ್ಮಿಕರ, ದುಡಿಯುವ ಮಹಿಳೆಯರ, ರೈತ ಕಾರ್ಮಿಕರ, ವಿದ್ಯಾರ್ಥಿಗಳ, ದುರ್ಬಲವರ್ಗದವರ, ಕೊಳಚೆ ಪ್ರದೇಶಗಳ ನಿವಾಸಿಗಳ ಪರವಾದ ಹೋರಾಟಕ್ಕೆ ಧುಮುಕಿದರು.
ಕಾರ್ಲ್ ಮಾರ್ಕ್ಸ್, ಲೆನಿನ್ ಅವರುಗಳ ತತ್ವ ಸಿದ್ಧಾಂತ ಮೂಲಕ ತಮ್ಮ ಮನಸ್ಸನ್ನು ಹದಗೊಳಿಸಿಕೊಂಡರು. ಶೋಷಣೆರಹಿತ ಸಮ ಸಮಾಜದ ನಿರ್ಮಾಣದ ಕನಸು ಕಂಡರು. ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡಿ ಅಸಂಘಟಿತ ಕಾರ್ಮಿಕರನ್ನು ಸಂಘಟಿಸಿದರು. ಈ ಹೋರಾಟದ ಹಾದಿಯಲ್ಲಿ ಅನೇಕ ನೋವು, ಸಂಕಷ್ಟ, ಅವಮಾನ, ಅಪಮಾನಗಳನ್ನು ಎದುರಿಸಬೇಕಾಯಿತು. ಬಂಡವಾಳಷಾಹಿ ವ್ಯವಸ್ಥೆಯ ಕೆಂಗಣ್ಣಿಗೆ ಗುರಿಯಾಗಿ ಜೈಲುವಾಸವನ್ನೂ ಅನುಭವಿಸಬೇಕಾಯಿತು. ಅವರ ಕುಟುಂಬವರ್ಗ ಇನ್ನಿಲ್ಲದ ಕಷ್ಟಕ್ಕೆ ತುತ್ತಾಗಬೇಕಾಯಿತು.
ಆದರೂ ಅವರು ಎದೆಗುಂದದೇ ಹೋರಾಟದ ಹಾದಿಯಲ್ಲಿ ಮುಂದುವರೆದರು. ಪಂಪಾಪತಿಯವರು 1978, 1983, 1985 ರಲ್ಲಿ ದಾವಣಗೆರೆ ಶಾಸಕರಾಗಿ ಆಯ್ಕೆಯಾಗುವಲ್ಲಿ ಹೆಚ್‌ಕೆಆರ್ ಶ್ರಮ ಬಹಳಷ್ಟಿತ್ತು. ಪಂಪಾಪತಿಯವರ ಜೊತೆ ಜೊತೆಗೆ ರಾಜಕೀಯವಾಗಿ ಇವರೂ ಬೆಳೆದರು. 1974 ರಿಂದ ಸತತವಾಗಿ 21 ವರ್ಷಗಳ ಕಾಲ ದಾವಣಗೆರೆ ನಗರಸಭಾ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಅನೇಕ ಜನಪರವಾದ ಆಡಳಿತವನ್ನು ನೀಡಿದರು.
ಕಮ್ಯುನಿಸ್ಟ್ ಆಡಳಿತದ ವೈಭವವನ್ನು ದಾವಣಗೆರೆಯ ಹಳೆತಲೆಮಾರಿನ ಜನರು ಈಗಲೂ ಹೆಮ್ಮೆಯಿಂದ ನೆನೆಯುತ್ತಾರೆ. ಮೇ 1 ವಿಶ್ವ ಕಾರ್ಮಿಕ ದಿನಾಚರಣೆ ಬಂತೆಂದರೆ ದಾವಣಗೆರೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತಿತ್ತು. ಹತ್ತಾರು ಸಾವಿರ ಕಾರ್ಮಿಕರ ಮೆರವಣಿಗೆ, ಮುಗಿಲು ಮುಟ್ಟುವಂತಹ ಕಾರ್ಮಿಕರ ಘೋಷಣೆಗಳು ಕಾರ್ಮಿಕರ ದಿನಾಚರಣೆಗೆ ಕೆಳೆಕಟ್ಟುವಂತಿತ್ತು.
ಅದೇ ಮೇ ತಿಂಗಳಿನಲ್ಲಿಯೇ ಕಾಮ್ರೇಡ್ ಹೆಚ್.ಕೆ.ರಾಮಚಂದ್ರಪ್ಪ ಅವರು ಅಸ್ತಂಗತರಾಗಿದ್ದು ಕಾಕತಾಳೀಯವೇ ಸರಿ. ಕಮ್ಯುನಿಸ್ಟ್ ಸಿದ್ಧಾಂತ ಮತ್ತು ಕಾರ್ಮಿಕರ ಪರವಾದ ಹೋರಾಟದ ಮನೋಭಾವವನ್ನು ಅವರು ತಮ್ಮ ಉಸಿರಿರುವವರೆಗೂ ಬಿಡಲಿಲ್ಲ. ಇವರ ಜನಪ್ರಿಯತೆಯನ್ನು ಬಳಸಿಕೊಳ್ಳಲು ಅನೇಕ ರಾಜಕೀಯ ಪಕ್ಷಗಳು ಇವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸಿದ್ದರು. ಇವರ ಕಣ್ಣೆದುರೇ ಅನೇಕ ಕಮ್ಯುನಿಸ್ಟ್ ನಾಯಕರುಗಳು ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಬೇರೆ ಬೇರೆ ರಾಜಕೀಯ ಪಕ್ಷಗಳಿಗೆ ಸೇರಿದರು.
ಒಂದು ವೇಳೆ ಇವರು ಕೂಡಾ ಬೇರೆ ಯಾವುದಾದರೂ ಪ್ರಬಲ ರಾಜಕೀಯ ಪಕ್ಷಕ್ಕೆ ಸೇರಿದ್ದೇ ಹೌದಾಗಿದ್ದರೆ ಖಂಡಿತವಾಗಿಯೂ ಸಂಸದರಾಗಿಯೋ ಶಾಸಕರಾಗಿಯೋ ಆಯ್ಕೆಗೊಳ್ಳುವುದು ಶತಸಿದ್ಧವಾಗಿತ್ತು ಎಂದು ಅವರ ಸಮಕಾಲೀನ ಮಿತ್ರರೇ ಹೇಳುತ್ತಾರೆ. ಆದರೆ ಹೆಚ್‌ಕೆಆರ್ ಅವರು ಕಲ್ಲುಬಂಡೆಯಂತೆ ಕಮ್ಯುನಿಸ್ಟ್ ಪಕ್ಷದ ಜೊತೆ ನಿಂತರು. ತತ್ವ, ಸಿದ್ಧಾಂತಗಳಿಗೆ ಕಟಿಬದ್ಧರಾಗಿದ್ದ ಹೆಚ್‌ಕೆಆರ್ ಅವರು ತಮ್ಮ ಕಮ್ಯುನಿಸ್ಟ್ ನಿಲುವನ್ನು ಯಾವುದೇ ಕಾರಣಕ್ಕೂ ಬದಲಾಯಿಸಲಿಲ್ಲ ಎನ್ನುವುದು ಸೂರ್ಯನಷ್ಟೇ ಸತ್ಯ.
ಇವರ ಹೋರಾಟದ ಜೀವನವನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಇವರನ್ನು ಗೌರವಿಸಿ, ಅಭಿನಂದಿಸಿ, ಸನ್ಮಾನಿಸಿ ಪ್ರಶಸ್ತಿಗಳನ್ನು ನೀಡಿವೆ. ಅದರಲ್ಲಿ ಮುಖ್ಯವಾಗಿ ಚಿತ್ರದುರ್ಗದ ಶ್ರೀ ಮುರುಘಾ ಮಠವು ಪ್ರತೀ ವರ್ಷ ಕೊಡಮಾಡುವ ಪ್ರತಿಷ್ಠಿತ “ಶೂನ್ಯ ಪೀಠ ಚನ್ನಬಸವ ಪ್ರಶಸ್ತಿಯನ್ನು 2015 ರಲ್ಲಿ ಕೊಡಲಾಗಿತ್ತು.
ಪ್ರಶಸ್ತಿಯು ರೂ.25000/- ನಗದು ಹಣವನ್ನೂ ಹೊಂದಿತ್ತು. ಹೆಚ್‌ಕೆಆರ್ ಅವರು ಆ ಪ್ರಶಸ್ತಿಯ ನಗದು ಹಣವನ್ನು ಪ್ರಶಸ್ತಿ ಪ್ರದಾನ ವೇದಿಕೆಯಲ್ಲಿಯೇ ಶ್ರೀ ಮಠದ ಸಮಾಜಮುಖಿ ಕಾರ್ಯಗಳಿಗೆ ದೇಣಿಗೆಯಾಗಿ ನೀಡಿದ್ದು ಅವರ ಔದಾರ್ಯತೆಯನ್ನು ತೋರಿಸುತ್ತದೆ ಮತ್ತು ಸೇರಿದ್ದ ಸಾವಿರಾರು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.
ಇನ್ನು ಕಾಮ್ರೇಡ್ ಹೆಚ್.ಕೆ.ರಾಮಚಂದ್ರಪ್ಪನವರನ್ನು ರಾಜ್ಯಾದ್ಯಂತ ಎಲ್ಲರೂ ಪಕ್ಷಾತೀತವಾಗಿ ಗೌರವಿಸುತ್ತಿದ್ದರು. ಯಾವುದೇ ಸರಕಾರಿ ಕಛೇರಿಗಳಿಗೆ ಇವರು ಭೇಟಿ ನೀಡಿದಾಗ ಅಧಿಕಾರಿಗಳು ಎದ್ದು ನಿಂತು ಇವರಿಗೆ ಗೌರವ ಕೊಡುತ್ತಿದ್ದರು. 2015ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ದಾವಣಗೆರೆಗೆ ಬರುವ ಕಾರ್ಯಕ್ರಮವಿತ್ತು. ಐಟಿಐ ಕಾಲೇಜಿನಲ್ಲಿ ಹೆಲಿಕಾಪ್ಟರ್ ಬಂದಿಳಿಯಿತು.
ಸಹಜವಾಗಿಯೇ ಸಾವಿರಾರು ಅಭಿಮಾನಿಗಳು, ರಾಜಕೀಯ ಧುರೀಣರು ನೆರೆದಿದ್ದರು. ಹೆಚ್‌ಕೆಆರ್ ನೇತೃತ್ವದಲ್ಲಿ ಒಂದಿಷ್ಟು ಕಾರ್ಮಿಕರು ಕೂಡಾ ತಮ್ಮ ಮನವಿಯನ್ನು ಸಲ್ಲಿಸಲು ಕಾಯುತ್ತಿದ್ದರು. ಸಿದ್ದರಾಮಯ್ಯನವರು ಹೆಲಿಕಾಪ್ಟರ್ ಇಳಿದು ಎಲ್ಲರ ಕಡೆಗೆ ಒಮ್ಮೆ ದೃಷ್ಟಿಹಾಯಿಸಿದರು. ಸೀದಾ ಅವರು ಬಂದಿದ್ದು ಹೆಚ್‌ಕೆಆರ್ ಬಳಿಗೆ. ಎನ್ರೀ ರಾಮಚಂದ್ರಪ್ಪ ಅವರೇ ಚೆನ್ನಾಗಿದ್ದೀರಾ ಎಂದು ಹೆಗಲ ಮೇಲೆ ಕೈ ಹಾಕಿ ಆತ್ಮೀಯವಾಗಿ ಮಾತನಾಡಿಸಿ ಮನವಿಪತ್ರವನ್ನು ತೆಗೆದುಕೊಂಡರು.
ಹೆಚ್‌ಕೆಆರ್ ಅವರು ಅಂಗನವಾಡಿ ಕಾರ್ಯಕರ್ತದ ಗೌರವಧನವನ್ನು ಹೆಚ್ಚಿಸುವಂತೆ ಮನವಿ ಮಾಡಿದರು. ಅದರಂತೆಯೇ ಸಿದ್ದರಾಮಯ್ಯನವರು ಮುಂದಿನ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತರ ಗೌರವಧನವನ್ನು ಹೆಚ್ಚಿಸಿದ್ದರು. ಹೀಗೆ ಅಜಾತಶತ್ರುವಿನಂತೆ ಎಲ್ಲರ ಗೌರವಕ್ಕೆ ಪಾತ್ರರಾದ ಧೀಮಂತ ವ್ಯಕ್ತಿತ್ವ ಅವರದಾಗಿತ್ತು.
ಅವರು ನಿಧನರಾದ ಸಂದರ್ಭದಲ್ಲಿ ಅವರ ಅಂತಿಮ ದರ್ಶನ ಪಡೆಯಲು ಅವರ ಬಂಧು ಬಾಂಧವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕ ಬಂಧುಗಳು ಕೊರೋನಾ ಭಯವನ್ನು ಲೆಕ್ಕಿಸದೇ ಧಾವಿಸಿದ್ದು ಅವರ ಜನಪ್ರಿಯತೆಯನ್ನು ಸಾರಿ ಸಾರಿ ಹೇಳುತಿತ್ತು. ಅಂಗನವಾಡಿ ಹಾಗೂ ಬಿಸಿಯೂಟ ಸಂಘಟನೆಗಳ ಮಹಿಳಾ ಕಾರ್ಮಿಕರಂತೂ ತಮ್ಮ ಸ್ವಂತ ಸಹೋದರನನ್ನೋ ತಂದೆಯನ್ನೋ ಕಳೆದುಕೊಂಡಂತೆ ಬಿಕ್ಕಿ ಬಿಕ್ಕಿ ಅಳುತಿದ್ದುದು ಮನಕಲುಕುವಂತಿತ್ತು.
ಹೆಚ್‌ಕೆಆರ್ ಅವರ ಉಸಿರು ನಿಂತಿರಬಹುದು. ಆದರೆ ಅವರ ಹೆಸರು ಲಕ್ಷಾಂತರ ಕಾರ್ಮಿಕರ ಮನದಲ್ಲಿ ಹಚ್ಚಹಸಿರಾಗಿ ಮುಂದಿನ ಹೋರಾಟಗಳಿಗೆ ಸ್ಪೂರ್ತಿಯಾಗಿರುವುದರಲ್ಲಿ ಯಾವುದೇ ಸಂದೇಹವಿಲ್ಲ.
ಕಾಂII ಹೆಚ್‌ಕೆಆರ್ ಚಿರಾಯುವಾಗಲಿ...
ಕಾಂII ಹೆಚ್‌ಕೆಆರ್ ಅಮರ ರಹೇ…
(ಲೇಖಕರು:ಕೆ.ರಾಘವೇಂದ್ರ ನಾಯರಿ,
ಕಾರ್ಮಿಕ ಮುಖಂಡ,
& ಪ್ರದಾನ ಕಾರ್ಯದರ್ಶಿ,
ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘ,
ದಾವಣಗೆರೆ
ಮೊ: 9844314543
mail id : krnairycbeu@gmail.com)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚಿತ್ರದುರ್ಗ | ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಡಿ.ಡಿ ಬಿ.ಮಲ್ಲಿಕಾರ್ಜುನ, ಕ್ರೈಸ್ ಇ.ಡಿ ಬಿ.ಶಿವಸ್ವಾಮಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ಚಿತ್ರದುರ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ಶಾಲೆಗಳಿಗೆ (ಕ್ರೈಸ್) ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡದೆ ವಂಚಿಸುತ್ತಿರುವ ಶ್ರೀ ಶಿರಡಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಚಿತ್ರದುರ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಶಿವಸ್ವಾಮಿ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ವಸತಿ ಶಾಲೆಗಳಿಗೆ ಅಧಿಕೃತ ಟೆಂಡರುದಾರರಾದ ಶ್ರೀ ಶಿರಡಿ ಸಾಯಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರು ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡದೆ ಇರುವ ಅಧಿಕೃತ ಮಾಹಿತಿ ತಿಳಿದು, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ ಇವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರಾಂಶುಪಾಲರುಗಳಿAದ ಮಾಹಿತಿಹಕ್ಕು ಅಡಿಯಲ್ಲಿ ಪಡೆದ ದೃಢೀಕೃತ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಆಹಾರ ಸಾಮಾಗ್ರಿ ಸರಬರಾಜಿನಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿರುತ್ತವೆ.
ಆದ ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ನಾವು ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಪ್ರತ್ಯುತ್ತರವನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ದಿನಾಂಕ: 21-04-2026 ರಂದು ಜ್ಞಾಪನವನ್ನು ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ದೂರು ಅರ್ಜಿಗೆ ಸಂಬAಧಿಸಿದAತೆ ತನಿಖಾ ವರದಿಯನ್ನಾಗಲಿ ಅಥವಾ ಪ್ರತ್ಯುತ್ತರವನ್ನಾಗಲಿ ನೀಡಿರುವುದಿಲ್ಲ.
ಈ ಬಗ್ಗೆ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರಿಗೆ ದೂರು ನೀಡಲಾಗಿತ್ತು. ಆದರೆ ಇವರು ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ
ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ಆಶ್ರಯ, ತಾಲೂಕು ವಿಶ್ವಕರ್ಮ ಸೇವಾ ಸಮಾಜ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಜಂಟಿ ವತಿಯಿಂದ ಆಯೋಜಿಸಿರುವ ‘ವಿಶ್ವಕರ್ಮ ಜಯಂತಿ’ ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ರವಿಶಂಕರ್ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಜಿ. ಸುರೇಂದ್ರ ಮೂರ್ತಿ ಅವರು ವಹಿಸಲಿದ್ದಾರೆ. ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ರೇವಣ್ಣ, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್ ಎನ್., ಪದಾಧಿಕಾರಿಗಳಾದ ಈಶ್ವರಾಚಾರ್, ಚೇತನ್ ಮೂರ್ತಿ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಲಿದ್ದು, ಬಳಿಕ ಅಲ್ಲಿಂದ ತಾಲೂಕು ಆಡಳಿತ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ.
ವಿಶೇಷವೆಂದರೆ, ಪ್ರಕಾಶಕರು ಹಾಗೂ ಆಯೋಜಕರ ಆಸಕ್ತಿಯ ಮೇರೆಗೆ ‘ನಿರಾಕಾರ ವಿಶ್ವಕರ್ಮ’ ಕೃತಿಯನ್ನು ತಿಂಗಳ ಅಂತರದಲ್ಲಿ ಮೂರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸೆಪ್ಟೆಂಬರ್ 17ರಂದು ಕೆ.ಆರ್.ನಗರದಲ್ಲಿ ಕೃತಿ ಬಿಡುಗಡೆಯಾದರೆ, ಸೆಪ್ಟೆಂಬರ್ 20ರಂದು ಬೆಂಗಳೂರಿನ ತಾತಗುಣಿಯ ವಿಶ್ವಕರ್ಮ ನಗರದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳಿಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಹಾಗೆಯೇ, ನವೆಂಬರ್ 22ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾವ್ಯಸ್ಪಂದನ ಪ್ರಕಾಶನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿಯೂ ಈ ಕೃತಿ ಬಿಡುಗಡೆಯಾಗಲಿದೆ.
ಮಾನವ ನಾಗರಿಕತೆಯ ಇತಿಹಾಸವನ್ನು ತೆರೆದರೆ, ಅದರ ಪ್ರತಿಯೊಂದು ಪುಟದ ಹಿಂದೆಯೂ ಶ್ರಮಿಸಿದ ಅನಾಮಿಕ ಕೈಗಳು ಕಾಣಿಸುತ್ತವೆ. ಆ ಕೈಗಳು ಕಲ್ಲನ್ನು ಕೆತ್ತಿ ದೇವಸ್ಥಾನವಾಗಿಸಿವೆ, ಕಬ್ಬಿಣವನ್ನು ಬಡಿದು ಆಯುಧವಾಗಿಸಿವೆ, ಮರಕ್ಕೆ ರೂಪ ಕೊಟ್ಟು ಬಾಗಿಲಾಗಿಸಿವೆ, ಮಣ್ಣಿಗೆ ಜೀವ ತುಂಬಿ ಮಡಕೆಯಾಗಿಸಿವೆ; ಹಾಗೆಯೇ ಬಣ್ಣಗಳ ಮೂಲಕ ಅಚ್ಚಳಿಯದ ಭಾವನೆಗಳನ್ನು ಮೂಡಿಸಿವೆ. ಆ ಸೃಷ್ಟಿಶೀಲ ಕೈಗಳಿಗೆ ಬಹುಶಃ ಇತಿಹಾಸದ ಅಧಿಕೃತ ಪುಟಗಳಲ್ಲಿ, ರಾಜ-ಮಹಾರಾಜರ ಕಥೆಗಳ ನಡುವೆ ದೊಡ್ಡ ಅಕ್ಷರಗಳಲ್ಲಿ ಹೆಸರು ಸಿಕ್ಕಿಲ್ಲದಿರಬಹುದು. ಆದರೆ ಅವರು ನಿರ್ಮಿಸಿದ ಕಲೆ, ಶಿಲ್ಪ, ವಾಸ್ತು, ಉಪಕರಣ ಮತ್ತು ಸೌಂದರ್ಯವೇ ನಮ್ಮ ನಾಗರಿಕತೆಯ ಉಸಿರಾಗಿ, ಜೀವಂತ ಸಾಕ್ಷಿಗಳಾಗಿ ಇಂದಿಗೂ ಉಳಿದಿವೆ. ಅಂತಹ ಸೃಜನಶೀಲ ಕೈಗಳ ಸಮೂಹ ಸ್ಮೃತಿಯನ್ನು, ಪರಂಪರೆಯನ್ನು ಮತ್ತು ಇತಿಹಾಸವನ್ನು ಅರಿಯುವ ಅರ್ಥಪೂರ್ಣ ಪ್ರಯತ್ನವನ್ನು ನಿರಾಕಾರ ವಿಶ್ವಕರ್ಮ ಕೃತಿಯಲ್ಲಿ ಲೇಖಕರಾದ ಚಂದ್ರಶೇಖರ ಗಂಧನಹಳ್ಳಿ ಅವರು ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!
ಸುದ್ದಿದಿನ, ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ತನ್ನ 3 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿದೆ. `ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಸಹಕಾರ’ ಎಂಬ ಧ್ಯೇಯದೊಂದಿಗೆ ಆರಂಭವಾದ ಈ ಯೋಜನೆ ಇಂದು ಕೋಟ್ಯಂತರ ಕುಟುಂಬಗಳ ಬದುಕಿಗೆ ಬೆಳಕಾಗಿದೆ.
ಹೌದು! 2023ರ ಆಗಸ್ಟ್‌ನಲ್ಲಿ ಜಾರಿಗೆ ಬಂದ ಈ ಯೋಜನೆಯಡಿ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಪ್ರತಿ ತಿಂಗಳು 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್‌ಗೆ ದೊಡ್ಡ ಆಸರೆಯಾಗಿದೆ ಎಂದೇ ಹೇಳಬಹುದು.
http://Visit : www.suddidina.com
ಗೃಹಜ್ಯೋತಿ ಯೋಜನೆಯ ಸಾಧನೆಯ ಗಿರಿ:
ಇಂಧನ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ರಾಜ್ಯದ್ಯಂತ ಬರೋಬ್ಬರಿ 1.65 ಕೋಟಿ. ಫಲಾನುಭವಿಗಳು ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆ, ಸೇವಾಸಿಂಧು ಪೋರ್ಟಲ್‌ನಲ್ಲಿ ಒಟ್ಟು 1,76,69,368 ಜನರು ನೋಂದಾಯಿಸಿಕೊಂಡಿದ್ದರೆ. ಒಟ್ಟು 2,06,65,451 ಗೃಹಬಳಕೆ ವಿದ್ಯುತ್ ಗ್ರಾಹಕರಿದ್ದಾರೆ. ಅಂದರೆ ಶೇ.85ಕ್ಕಿಂತ ಹೆಚ್ಚು ಗ್ರಾಹಕರು ಈ ಯೋಜನೆಯಡಿ ನೋಂದಾಯಿಸಿಕೊಂಡು ಲಾಭ ಪಡೆಯುತ್ತಿದ್ದಾರೆ.
ಆರ್ಥಿಕವಾಗಿ ನೋಡುವುದಾದರೆ, 2023ರ ಆಗಸ್ಟ್‌ನಿಂದ 2026ರ ಜುಲೈ ವರೆಗೆ, ಕಳೆದ ಮೂರು ವರ್ಷಗಳಲ್ಲಿ ಸರ್ಕಾರವು ಫಲಾನುಭವಿಗಳಿಗೆ ಒಟ್ಟು ₹28,759.54 ಕೋಟಿ ರೂಪಾಯಿ ಸಬ್ಸಿಡಿ ಬಿಡುಗಡೆ ಮಾಡಿದೆ. ಇದು ಸರ್ಕಾರದ ಬದ್ಧತೆ ಮತ್ತು ಜನಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ.
ಕುಟುಂಬದ ಬಜೆಟ್‌ಗೆ ಆಸರೆ, ಉಜ್ವಲ ಭವಿಷ್ಯಕ್ಕೆ ಬುನಾದಿ:
ಪ್ರತಿ ತಿಂಗಳು 1000 ದಿಂದ 1500 ರೂಪಾಯಿಗಳವರೆಗೆ ವಿದ್ಯುತ್ ಬಿಲ್ ಕಟ್ಟುತ್ತಿದ್ದ ಸಾಮಾನ್ಯ ಕುಟುಂಬಗಳಿಗೆ ಈಗ ಆ ಹಣ ಸಂಪೂರ್ಣವಾಗಿ ಉಳಿತಾಯವಾಗುತ್ತಿದೆ. ಈ ಉಳಿತಾಯದ ಹಣವನ್ನು ಅವರು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಇತರ ಅಗತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಗೃಹಿಣಿಯರಿಗೆ ಇದು ಆರ್ಥಿಕವಾಗಿ ದೊಡ್ಡ ನೆರವಾಗಿದೆ.
ಕೇವಲ ಉಚಿತ ವಿದ್ಯುತ್ ನೀಡುವುದಷ್ಟೇ ಅಲ್ಲ, ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದ್ದು, ರಾಜ್ಯದ ಜನರ ಜೀವನಮಟ್ಟ ಸುಧಾರಿಸಿದೆ. ಗೃಹ ಜ್ಯೋತಿ ಯೋಜನೆಯು ಕೇವಲ ಒಂದು ಯೋಜನೆಯಾಗಿ ಉಳಿಯದೆ, ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕುಟುಂಬಗಳನ್ನು ಈ ಯೋಜನೆಯಡಿ ತರಲು ಇಂಧನ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.




