ಬಹಿರಂಗ
ಸಂವಿಧಾನ ಚೌಕಟ್ಟಿನಲ್ಲೇ ಪ್ರಜಾತಂತ್ರದ ಹರಣ
- ನಾ ದಿವಾಕರ
ಪ್ರಜೆಗಳ ಸಾರ್ವಭೌಮತ್ವ ಮತ್ತು ಸ್ವಾವಲಂಬಿ ದೇಶದ ಕನಸುಗಳನ್ನು ಹೊತ್ತು ವಿಶ್ವದ ಶ್ರೇಷ್ಠ ಸಂವಿಧಾನವನ್ನು ಅಂಗೀಕರಿಸಿದ ಸ್ವತಂತ್ರ ಭಾರತದಲ್ಲಿ ಅಧಿಕಾರ ರಾಜಕಾರಣ ಸ್ವಾಭಿಮಾನಿ ಜನಪ್ರತಿನಿಧಿಗಳನ್ನು ಹುಟ್ಟುಹಾಕಬೇಕಿತ್ತು. ಜನಪರ ಕಾಳಜಿ, ಸಂವಿಧಾನ ಬದ್ಧತೆ, ಪ್ರಜಾತಂತ್ರದ ಬಗ್ಗೆ ಗೌರವ ಮತ್ತು ಸಾಂವಿಧಾನಿಕ ನಿಯಮ ಹಾಗೂ ಮೌಲ್ಯಗಳಲ್ಲಿ ಶ್ರದ್ಧೆ ಈ ಲಕ್ಷಣಗಳು ಮಾತ್ರ ಇಂತಹ ಸ್ವಾಭಿಮಾನಿ ಪ್ರತಿನಿಧಿಗಳನ್ನು ಸೃಷ್ಟಿಸಲು ಸಾಧ್ಯ. ದುರಂತ ಎಂದರೆ 70 ವರ್ಷಗಳ ಸ್ವತಂತ್ರ ಭಾರತ ಅಧಿಕಾರ ರಾಜಕಾರಣದ ಅಂಗಳದಲ್ಲಿ ಪರಾವಲಂಬಿ ಪ್ರತಿನಿಧಿಗಳನ್ನು ಸೃಷ್ಟಿಸಿದೆ. ಮಾರಿಕೊಂಡ ಸರಕುಗಳನ್ನು ಸೃಷ್ಟಿಸಿದೆ. ಸ್ವಾಭಿಮಾನ ಶೂನ್ಯ ಧನದಾಹಿಗಳನ್ನು ಸೃಷ್ಟಿಸಿದೆ. ಅಧಿಕಾರ ಮೋಹಿಗಳನ್ನು ಸೃಷ್ಟಿಸಿದೆ.
ಭಾರತ ತನ್ನ ಭೌಗೋಳಿಕ ಸ್ವಾತಂತ್ರ್ಯದ ರಕ್ಷಣೆಗೆ ಅಗತ್ಯವಾದ ಎಲ್ಲ ರಕ್ಷಣಾ ಪರಿಕರಗಳನ್ನೂ ಸೃಷ್ಟಿಸಿಕೊಂಡಿದೆ. ವಿಶ್ವದ ಯಾವುದೇ ಪ್ರಬಲ ರಾಷ್ಟ್ರಗಳನ್ನು ಎದುರಿಸಲು ಭಾರತದ ಸೇನೆ ಮತ್ತು ಶಸ್ತ್ರಾಸ್ತ್ರ ಸಂಗ್ರಹಾಗಾರ ಸಿದ್ಧವಾಗಿದೆ. ಬಾಹ್ಯ ಶತ್ರುಗಳು ಭಾರತದ ಮೇಲೆ ದಾಳಿ ನಡೆಸುವುದು ಸುಲಭವಲ್ಲ ಎನ್ನುವುದೂ ವಿಶ್ವ ಸಮುದಾಯಕ್ಕೆ ತಿಳಿದಿದೆ.
ಈ ಭೌಗೋಳಿಕ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವ ಸಮಸ್ತ ಭಾರತೀಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿರಲಿಕ್ಕೂ ಸಾಕು. ಆದರೆ ದೇಶ ಎನ್ನುವ ಪರಿಕಲ್ಪನೆ ಭೂಪಟದಲ್ಲಿನ ರೇಖೆಗಳಿಗಷ್ಟೇ ಸೀಮಿತವಾಗುವುದಿಲ್ಲ. ಸುರಕ್ಷಿತ ಗಡಿ ರೇಖೆಗಳು ಭೌಗೋಳೀಕ ದೇಶವನ್ನು ರಕ್ಷಿಸುತ್ತವೆ, ಬೌದ್ಧಿಕ ದೇಶವನ್ನು ರಕ್ಷಿಸಲು ನಮ್ಮ ಅಂತಃಸತ್ವ ಮತ್ತು ಅಂತಃಶಕ್ತಿ ಸುಸ್ಥಿರವಾಗಿರುವುದು ಅವಶ್ಯ.
ಈ ಅಂತಃಶಕ್ತಿ ಅಥವಾ ಅಂತಃಸತ್ವ ಇರುವುದು ನಮ್ಮ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಬದುಕಿನಲ್ಲಿ. ಈ ಮೂರೂ ವಲಯಗಳನ್ನು ಪ್ರತಿನಿಧಿಸುವ ಪ್ರತಿನಿಧಿಗಳನ್ನು ನಮ್ಮ ನಡುವಿನಿಂದಲೇ ನಾವು ಕಾಲದಿಂದ ಕಾಲಕ್ಕೆ ಆಯ್ಕೆ ಮಾಡಿ ಶಾಸನ ಸಭೆಗಳಿಗೆ ಕಳಿಸುತ್ತಿದ್ದೇವೆ. ಈ ಪ್ರತಿನಿಧಿಗಳು ವಿಧಾನಸಭೆಗಳಲ್ಲಿ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕುಳಿತು, ಚರ್ಚೆ ನಡೆಸಿ ಕೈಗೊಳ್ಳುವ ತೀರ್ಮಾನಗಳು ಈ ದೇಶದ ಬೌದ್ಧಿಕ ಅಂತಃಸತ್ವವನ್ನು, ಸಾಮಾಜಿಕ ಸ್ವಾಸ್ಥ್ಯವನ್ನು, ರಾಜಕೀಯ ಸುಸ್ಥಿರತೆಯನ್ನು ನಿರ್ಧರಿಸುತ್ತವೆ.
ಸ್ವಾತಂತ್ರ್ಯಾನಂತರದ ಮೊದಲ ನಾಲ್ಕು ದಶಕಗಳಲ್ಲಿ ನಿರ್ಮಿಸಲಾದ ಸ್ವಾವಲಂಬಿ ಭಾರತ ಇಂದು ಪರಾವಲಂಬನೆಯತ್ತ ವಾಲುತ್ತಿರುವುದನ್ನು ನೋಡಿದರೆ, ಈ ದೇಶದ ಪ್ರಜೆಗಳ ಆಯ್ಕೆ ತಪ್ಪಾಗಿರುವುದು ಸ್ಪಷ್ಟವಾಗುತ್ತದೆ.
2013ರಲ್ಲಿ ಚುನಾಯಿತ ಉದಾರವಾದಿ ಪ್ರಜಾತಂತ್ರ ರಾಷ್ಟ್ರವಾಗಿದ್ದ ಭಾರತ ಇಂದು ಚುನಾಯಿತ ನಿರಂಕುಶಾಧಿಪತ್ಯದ ರಾಷ್ಟ್ರವಾಗಿದೆ ಎಂದು ಜಾಗತಿಕ ಸಂಸ್ಥೆಯೊಂದು ಹೇಳಿದೆ. ಈ ಅಭಿಪ್ರಾಯ ಯಾವುದೋ ಒಂದು ಸಂಸ್ಥೆಯಿಂದ ವ್ಯಕ್ತವಾಗಿರುವುದರಿಂದ ತಳ್ಳಿಹಾಕುವುದು ಸುಲಭ. ಆದರೆ ಭಾರತದ ವಸ್ತುಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುವ ಯಾವುದೇ ಪ್ರಜ್ಞಾವಂತರಿಗೆ, ದೇಶದಲ್ಲಿ ಪ್ರಜಾತಂತ್ರದ ಅವಸಾನ ಸಮೀಪಿಸುತ್ತಿರುವುದು ಸ್ಪಷ್ಟವಾಗುತ್ತದೆ.
ದಿಶಾ ರವಿ ತೀರ್ಪಿನ ನಂತರ ಭಾರತದ ನ್ಯಾಯಾಂಗ ವ್ಯವಸ್ಥೆ ಕೊಂಚ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. ಸರ್ಕಾರದ ವಿರುದ್ಧ ಅಥವಾ ಸರ್ಕಾರದ ಆಡಳಿತ ನೀತಿಗಳ ವಿರುದ್ಧ ಟೀಕೆ ಮಾಡುವುದು ದೇಶದ್ರೋಹ ಎನಿಸಿಕೊಳ್ಳುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಆದರೆ ಸರ್ಕಾರದ ಆಡಳಿತ ನೀತಿಗಳನ್ನು ಟೀಕಿಸಲು, ವಿಮರ್ಶಿಸಲು ಇರುವ ಎಲ್ಲ ವೇದಿಕೆಗಳನ್ನೂ ನಿಯಂತ್ರಿಸುವ ಕಾನೂನುಗಳನ್ನು ರೂಪಿಸಲಾಗುತ್ತಿದೆ. ಈ ಬೆಳವಣಿಗೆ ನ್ಯಾಯಾಂಗದ ಪರಾಮರ್ಶೆಗೆ ಒಳಪಟ್ಟರೆ ಮಾತ್ರ ಸಾಂವಿಧಾನಿಕ ಹಕ್ಕುಗಳ ರಕ್ಷಣೆ ಸಾಧ್ಯ. ಡಿಜಿಟಲ್ ಸುದ್ದಿ ವೇದಿಕೆಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರಿಸಲಾಗುವ ಸುದ್ದಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಚಿಸಿರುವ ಆರು ಸದಸ್ಯರ ಸಚಿವರ ಕೂಟ ತನ್ನ ವರದಿಯನ್ನು ಸಲ್ಲಿಸಿದ್ದು, ಈ ವರದಿಯಲ್ಲಿ ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸುವ ಹಲವು ಸಲಹೆಗಳನ್ನು ನೀಡಲಾಗಿದೆ.
ಕೋವಿದ್ 19 ಸಂದರ್ಭದಲ್ಲೇ ಆರು ಬಾರಿ ಸಭೆ ನಡೆಸಿರುವ ಈ ಸಚಿವರ ಕೂಟದಲ್ಲಿ ವಿದೇಶಾಂಗ ಸಚಿವರು, ಕಾನೂನು ಸಚಿವರು ಪ್ರಮುಖ ಪಾತ್ರ ವಹಿಸಿದ್ದಾರೆ.
ಸರ್ಕಾರದ ಪರ ವಹಿಸದ ಪತ್ರಕರ್ತರನ್ನು, ಪತ್ರಿಕಾ ಸಮೂಹ ಮತ್ತು ಮಾಧ್ಯಮಗಳನ್ನು ಹೇಗೆ ಸೆಳೆಯಬೇಕು ಎನ್ನುವುದರ ಬಗ್ಗೆ ಕೆಲವು ಸಚಿವರು ಸಲಹೆಗಳನ್ನು ನೀಡಿದ್ದು, ಈ ನಿಟ್ಟಿನಲ್ಲಿ ಸುದ್ದಿ ಪ್ರಸರಣವನ್ನು ನಿಯಂತ್ರಿಸುವ ಬಗ್ಗೆ ಈಗಾಗಲೇ ‘ ಗೋದಿ ಮೀಡಿಯಾ ’ ಎಂದೇ ಹೆಸರಾಗಿರುವ ವಂದಿಮಾಗಧ ಮಾಧ್ಯಮಗಳಿಂದಲೇ ಸಲಹೆ ಪಡೆಯಲಾಗಿದೆ.
ಪತ್ರಕರ್ತರನ್ನು, ಸರ್ಕಾರದ ಪರ, ವಿರೋಧಿ ಮತ್ತು ತಟಸ್ಠ ಎಂದು ಮೂರು ವರ್ಗಗಳನ್ನಾಗಿ ವಿಂಗಡಿಸುವಂತೆ ಓರ್ವ ಸಚಿವರು ಸಲಹೆ ನೀಡಿದ್ದರೆ, ಮತ್ತೊಬ್ಬರು ಮಾಧ್ಯಮಗಳಲ್ಲಿ ಸರ್ಕಾರದ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಸೃಷ್ಟಿಸುವ 50 ಪತ್ರಕರ್ತರನ್ನು ಗುರುತಿಸಿ ಅವರ ಮೇಲೆ ನಿಗಾ ವಹಿಸಲು ಸಲಹೆ ನೀಡಿದ್ದಾರೆ ಎಂದು ವರದಿಯಾಗಿದೆ.
ಈ ವರದಿಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಲಾಗುವುದಿಲ್ಲ. ಏಕೆಂದರೆ ಕರ್ನಾಟಕವನ್ನೂ ಸೇರಿದಂತೆ ಹಲವು ರಾಜ್ಯ ಸರ್ಕಾರಗಳು ಸರ್ಕಾರಿ ನೌಕರರಲ್ಲಿ ಇರಬಹುದಾದ ಕ್ರಿಯಾಶೀಲತೆ ಮತ್ತು ಸೃಜನಶೀಲತೆಯ ಕತ್ತು ಹಿಸುಕುವಂತಹ ಕಾನೂನುಗಳನ್ನು ಜಾರಿಗೊಳಿಸಿವೆ. ಕಳೆದ ವರ್ಷ ರಾಜ್ಯ ಬಿಜೆಪಿ ಸರ್ಕಾರ ಹೊರಡಿಸಿದ ಆದೇಶದ ಅನ್ವಯ ಯಾವುದೇ ಸರ್ಕಾರಿ ನೌಕರರು ಪೂರ್ವಾನುಮತಿ ಇಲ್ಲದೆ ಸಿನಿಮಾಗಳಲ್ಲಿ, ಟಿ ವಿ ಧಾರಾವಾಹಿಗಳಲ್ಲಿ ನಟಿಸುವಂತಿಲ್ಲ, ಯಾವುದೇ ರೀತಿಯ ಪುಸ್ತಕ ಪ್ರಕಟಿಸುವಂತಿಲ್ಲ, ಕೇಂದ್ರ ಮತ್ತು ಯಾವುದೇ ರಾಜ್ಯ ಸರ್ಕಾರಗಳ ಆಡಳಿತ ನೀತಿಗಳನ್ನು ಟೀಕಿಸಿ ಲೇಖನಗಳನ್ನು ಬರೆಯುವಂತಿಲ್ಲ.
ಮೊದಲಿನಿಂದಲೂ ಈ ರೀತಿಯ ಸೇವಾ ನಿಯಮ ಜಾರಿಯಲ್ಲಿತ್ತಾದರೂ ಕರ್ನಾಟಕ ನಾಗರಿಕ ಸೇವಾ ಕಾಯ್ದೆಯಲ್ಲಿ ನಿರ್ಬಂಧಗಳನ್ನು ನಮೂದಿಸಲಾಗಿರಲಿಲ್ಲ. ಕರ್ನಾಟಕದ ಇತಿಹಾಸದಲ್ಲಿ ಅನೇಕ ಅಧ್ಯಾಪಕರು, ಶಿಕ್ಷಕರು, ಸರ್ಕಾರಿ ನೌಕರರು ತಮ್ಮ ಕಾವ್ಯ , ಕಾದಂಬರಿ, ಕಥೆ ಮತ್ತು ಇತರ ರೀತಿಯ ಬರಹಗಳ ಮೂಲಕ ಜನಜಾಗೃತಿ ಮೂಡಿಸುತ್ತಲೇ ಬಂದಿದ್ದಾರೆ. ಸರ್ಕಾರಗಳ ಜನವಿರೋಧಿ ಆಡಳಿತ ನೀತಿಗಳ ವಿರುದ್ಧ ಜನಜಾಗೃತಿ ಮೂಡಿಸುತ್ತಲೇ ಬಂದಿದ್ದಾರೆ. ಇಂದು ಸರ್ಕಾರದ ವಿರುದ್ಧ ಮಾತನಾಡುವುದೇ ದೇಶದ್ರೋಹ ಎನ್ನುವ ಆಡಳಿತ ವ್ಯವಸ್ಥೆಯ ಧೋರಣೆ ಗಟ್ಟಿಯಾಗುತ್ತಿರುವ ಸಂದರ್ಭದಲ್ಲಿ ಈ ರೀತಿಯ ನಿಯಮಗಳು ಸೃಜನಶೀಲ ಮನಸುಗಳನ್ನು ನಿಷ್ಕ್ರಿಯಗೊಳಿಸಿಬಿಡುತ್ತವೆ.
ಸರ್ಕಾರದ ಜನವಿರೋಧಿ, ಸಮಾಜವಿರೋಧಿ ನೀತಿಗಳನ್ನೂ ಟೀಕೆ ಮಾಡದಂತೆ ಸರ್ಕಾರಿ ನೌಕರರ ಮೇಲೆ ನಿರ್ಬಂಧ ಹೇರಲಾಗಿದೆ. ಈಗ ಸಾಮಾಜಿಕ ಮಾಧ್ಯಮಗಳ ಮೇಲೆ ಸರ್ಕಾರದ ಕಾಕದೃಷ್ಟಿ ಬಿದ್ದಿದೆ. ಆಡಳಿತ ವ್ಯವಸ್ಥೆಯನ್ನು ಪ್ರಶ್ನಾತೀತವನ್ನಾಗಿ ಮಾಡುವ ಇಂತಹ ನಿಯಮಗಳು ಭಾರತವನ್ನು ನಿರಂಕುಶಾಧಿಪತ್ಯದತ್ತ ಕೊಂಡೊಯ್ಯುತ್ತಿರುವುದು ಸ್ಪಷ್ಟ.
ಇತ್ತೀಚೆಗೆ ಭಾರತದ ವಿದೇಶಾಂಗ ಸಚಿವಾಲಯ ಹೊರಡಿಸಿದ ಆದೇಶವೊಂದರ ಅನುಸಾರ ಸಾರ್ವಜನಿಕ ಹಣದಿಂದ ನಿರ್ವಹಿಸಲ್ಪಡುವ ಭಾರತದ ಯಾವುದೇ ವಿಶ್ವವಿದ್ಯಾಲಯಗಳ ಪ್ರೊಫೆಸರ್ ಗಳು, ಅಧ್ಯಾಪಕರು ಅಂತರ ರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ನಡೆಸುವ ಮುನ್ನ ಸಚಿವಾಲಯದ ಅನುಮತಿ ಪಡೆಯುವುದು ಕಡ್ಡಾಯ ಮಾಡಲಾಗಿದೆ.
ಭಾರತದ ಆಂತರಿಕ ವಿಚಾರಗಳ ಬಗ್ಗೆ ವಿಚಾರಸಂಕಿರಣ ನಡೆಸುವುದಕ್ಕೆ ಬಹುತೇಕ ನಿರ್ಬಂಧ ಹೇರಲಾಗಿದ್ದು, ಜಮ್ಮು ಕಾಶ್ಮೀರ, ಈಶಾನ್ಯ ರಾಜ್ಯಗಳು, ಭಾರತದ ಗಡಿ ರೇಖೆಗಳು ಹೀಗೆ ಹಲವು ವಿಚಾರಗಳನ್ನು ಆಂತರಿಕ ವಿಚಾರಗಳ ಪರಿಧಿಯಲ್ಲೇ ಪರಿಗಣಿಸಲಾಗುತ್ತದೆ.
ದೆಹಲಿಯಲ್ಲಿ ನಡೆಯುತ್ತಿರುವ ರೈತ ಮುಷ್ಕರವನ್ನೂ ಭಾರತ ಸರ್ಕಾರ ಆಂತರಿಕ ವಿಚಾರ ಎಂದೇ ಭಾವಿಸುತ್ತದೆ. ಸೂಕ್ಷ್ಮ ವಿಚಾರಗಳನ್ನೂ ಈ ಚೌಕಟ್ಟಿನಲ್ಲೇ ಪರಿಗಣಿಸಲಾಗುವುದರಿಂದ, ಇಂದಿನ ಆಡಳಿತ ವ್ಯವಸ್ಥೆಯನ್ನು ಗಮನಿಸಿದರೆ ಕೋಮುವಾದ, ಮತಾಂಧತೆ, ಹಿಂದುತ್ವ, ಜಾತಿ ದೌರ್ಜನ್ಯ ಇವೆಲ್ಲವೂ ವಿಚಾರ ಸಂಕಿರಣಗಳಿಂದ ಹೊರಗುಳಿಯುವ ವಿಷಯಗಳೇ ಆಗಿಬಿಡುತ್ತವೆ.
ಇದು ಬಹುಮಟ್ಟಿಗೆ ವಿಚಾರ ಮಂಥನದ ಹಕ್ಕನ್ನು ಹತ್ತಿಕ್ಕುವ ಪ್ರಯತ್ನ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈಗಾಗಲೇ ವಿಶ್ವವಿದ್ಯಾಲಯಗಳಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ, ಸಮಾಜೋ ಸಾಂಸ್ಕೃತಿಕ ವಿಚಾರಗಳ ಬಗ್ಗೆ ವಿಚಾರ ಸಂಕಿರಣಗಳನ್ನು ನಡೆಸುವುದು ಅಸಾಧ್ಯವೇ ಆಗಿಹೋಗಿದೆ.
ಸರ್ಕಾರಿ ನೌಕರರು, ವೈದ್ಯರು, ವಿಜ್ಞಾನಿಗಳು, ಸಂಶೋಧಕರು, ಜಂಟಿ ಕಾರ್ಯದರ್ಶಿಗಿಂತಲೂ ಉನ್ನತ ಹುದ್ದೆ ಹೊಂದಿರುವವರು, ವಿಶ್ವವಿದ್ಯಾಲಯದ ಅಧ್ಯಾಪಕ ವರ್ಗ, ಬೋಧನಾ ಸಿಬ್ಬಂದಿ ಹೀಗೆ ಎಲ್ಲರೂ ಸಹ ಅಂತರ ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸುವ ಮುನ್ನ ಕೇಂದ್ರ ಸರ್ಕಾರದ ಅನುಮತಿ ಕಡ್ಡಾಯವಾಗಿ ಪಡೆಯಬೇಕಾಗುತ್ತದೆ. ವಿದೇಶಿ ಗಣ್ಯರ ಉಪಸ್ಥಿತಿ ಇಲ್ಲದ ವಿಚಾರ ಸಂಕಿರಣಗಳಿಗೂ ಈ ನಿಯಮ ಅನ್ವಯಿಸುತ್ತದೆ.
ಆನ್ ಲೈನ್ ಸಭೆಗಳನ್ನು ನಡೆಸುವ ಸಂದರ್ಭದಲ್ಲಿ ಬಳಸಲಾಗುವ ಆನ್ ಲೈನ್ ವೇದಿಕೆಗಳು ವಿದೇಶಿ ಕಂಪನಿಗಳ ನಿಯಂತ್ರಣದಲ್ಲಿದ್ದ ಪಕ್ಷದಲ್ಲಿ, ಉದಾಹರಣೆಗೆ ಝೂಂ, ಅದರ ಕೊಂಡಿಯನ್ನು ವಿದೇಶಾಂಗ ಸಚಿವಾಲಯಕ್ಕೆ ಒದಗಿಸುವಂತೆ ಸೂಚಿಸಲಾಗಿದೆ.
ಒಂದು ಕಾರ್ಮಿಕ ಮುಷ್ಕರವನ್ನು, ರೈತ ಹೋರಾಟವನ್ನು, ವಿದ್ಯಾರ್ಥಿಗಳ ಸಂಘರ್ಷವನ್ನು ಬೆಂಬಲಿಸುವುದೇ ದೇಶದ್ರೋಹಿ ಕೃತ್ಯ ಎನ್ನುವ ವಿಕೃತ ಮನೋಭಾವ ಇಂದಿನ ಆಡಳಿತ ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿರುವುದು ಜೆಎನ್‍ಯು ಘಟನೆಗಳಿಂದಲೇ ಸ್ಪಷ್ಟವಾಗಿದೆ. ದೇಶದ ಬೌದ್ಧಿಕ ಸಂಪತ್ತು ಮತ್ತು ಸಂಪನ್ಮೂಲಗಳನ್ನು ಮತ್ತಷ್ಟು ವೃದ್ಧಿಗೊಳಿಸುವಲ್ಲಿ ಪ್ರಧಾನ ಪಾತ್ರ ವಹಿಸುವ ಶೈಕ್ಷಣಿಕ ವಲಯವನ್ನು, ವಿಶೇಷವಾಗಿ ವಿಶ್ವವಿದ್ಯಾಲಯಗಳನ್ನು ನಿಯಂತ್ರಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಚಿಂತನ-ಮಂಥನ ಪ್ರಕ್ರಿಯೆಯನ್ನೇ ಅವಸಾನದ ಅಂಚಿಗೆ ಕೊಂಡೊಯ್ಯುತ್ತಿವೆ. ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸಾಂವಿಧಾನಿಕ ಹಕ್ಕು ಕ್ರಮೇಣ ಮರೀಚಿಕೆಯಾಗುತ್ತಿರುವುದು ಸ್ಪಷ್ಟ.
ಈ ಬೆಳವಣಿಗೆ ಅಪೇಕ್ಷಣೀಯವಲ್ಲ ಆದರೆ ಅನಿರೀಕ್ಷಿತವೂ ಅಲ್ಲ. 1990ರ ದಶಕದ ರಾಮಮಂದಿರ ವಿವಾದ, ಧರ್ಮ ಸಂಸತ್ತು, ವಾಜಪೇಯಿ ಸರ್ಕಾರದ ಸಂದರ್ಭದಲ್ಲಿನ ಸಂವಿಧಾನ ಪರಾಮರ್ಶೆಯ ಕಸರತ್ತು ಮತ್ತು ಇತರ ರಾಜಕೀಯ ಬೆಳವಣಿಗೆಗಳು ಇವತ್ತಿನ ಪರಿಸ್ಥಿಗೆ ಪೂರಕವಾಗಿಯೇ ಇದ್ದವು. ಸ್ಪಷ್ಟ ಬಹುಮತ ಇಲ್ಲದಿದ್ದುದು ಒಂದು ಅಡ್ಡಗೋಡೆಯಾಗಿತ್ತು. 2014ರ ಚುನಾವಣೆಗಳಲ್ಲಿ ಭಾರತದ ಪ್ರಜ್ಞಾವಂತ ಮತದಾರರು, ಆಯ್ಕೆಯ ಪರ್ಯಾಯ ಇಲ್ಲದೆ ನೀಡಿದ ಸ್ಪಷ್ಟ ಬಹುಮತ ಇಂದು ನಾವೇ ಸೃಷ್ಟಿಸಿಕೊಂಡ ಪೆಡಂಭೂತದಂತೆ ನಮ್ಮೆದುರು ನಿಂತಿದೆ.
ಇಂದಿಗೂ ಸಹ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಂವಿಧಾನ ವಿರೋಧಿ ಕ್ರಮಗಳನ್ನು, ಕಾಯ್ದೆ ಕಾನೂನುಗಳನ್ನು ಮೌನವಾಗಿ ಸಹಿಸಿಕೊಳ್ಳುವ ನಿಷ್ಕ್ರಿಯ ಜನಸಮೂಹ ಒಂದೆಡೆ ಇದ್ದರೆ ಮತ್ತೊಂದೆಡೆ ಈ ಜನವಿರೋಧಿ ಕ್ರಮಗಳನ್ನು ಸಮರ್ಥಿಸಿಕೊಳ್ಳುವ ಬೃಹತ್ ಜನಸಮೂಹ ನಮ್ಮ ನಡುವೆ ಇದೆ.
ಸಮೂಹ ಸನ್ನಿಗೊಳಗಾಗಿರುವ ಈ ಸಮರ್ಥಕ ಪಡೆ, ಆಳುವ ವರ್ಗಗಳಿಗಿಂತಲೂ ಹೆಚ್ಚು ಅಪಾಯಕಾರಿಯಾಗಿ ಕಾಣುತ್ತಿದೆ. ಸಮಸ್ತ ಜನಕೋಟಿಯ ಜೀವನೋಪಾಯಕ್ಕೇ ಸಂಚಕಾರ ತರುವಂತಹ ತೈಲ ಬೆಲೆ ಹೆಚ್ಚಳ, ಭವಿಷ್ಯದ ಪೀಳಿಗೆಯ ಉಜ್ವಲ ಬದುಕಿಗೆ ಸಂಚಕಾರ ತರುವ ಎಗ್ಗಿಲ್ಲದ ಖಾಸಗೀಕರಣ ಮತ್ತು ದೇಶದ ಸಂಪತ್ತು-ಸಂಪನ್ಮೂಲದ ಮಾರಾಟ, ಇಂತಹ ಗಂಭೀರ ಸಮಸ್ಯೆಗಳೂ ಈ ಸನ್ನಿಗೊಳಗಾದ ಜನತೆಯನ್ನು ಜಾಗೃತಗೊಳಿಸುತ್ತಿಲ್ಲ. ವ್ಯಕ್ತಿ ಆರಾಧನೆ, ಸ್ವ ಹಿತಾಸಕ್ತಿ, ಸಂಕುಚಿತ ದೃಷ್ಟಿಕೋನ ಮತ್ತು ಸಮಷ್ಟಿ ಪ್ರಜ್ಞೆಯ ಕೊರತೆ ಒಂದು ಸಮಾಜವನ್ನು ಹೇಗೆ ನಿಷ್ಕ್ರಿಯಗೊಳಿಸುತ್ತದೆ ಎನ್ನುವುದಕ್ಕೆ 21ನೆಯ ಶತಮಾನದ ಆತ್ಮ ನಿರ್ಭರ ಭಾರತ ಅಜರಾಮರ ಸಾಕ್ಷಿಯಾಗಲಿದೆ.
ಇಂದು ಅಭಿವ್ಯಕ್ತಿಯ ಎಲ್ಲ ಮಾರ್ಗಗಳೂ ಗ್ರಾಂಥಿಕವಾಗಿ ಮುಕ್ತವಾಗಿವೆ. ಸಂವಿಧಾನ ದತ್ತ ಮೂಲಭೂತ ಹಕ್ಕುಗಳು ಯಥಾಸ್ಥಿತಿಯಲ್ಲಿ ಸಮಸ್ತ ಪ್ರಜೆಗಳಿಗೂ ಲಭ್ಯವಿದೆ. ಏಕೆಂದರೆ ಸಂವಿಧಾನದ ಯಾವ ಪರಿಚ್ಚೇದಗಳೂ ತಿದ್ದುಪಡಿಯಾಗಿಲ್ಲ. ಹಾಗಾಗಿ ನಾವು ಸಂವಿಧಾನವನ್ನು ಎದೆಗವುಚಿಕೊಂಡು ಮನೆಮನೆಗೆ ಹಂಚುತ್ತಿದ್ದೇವೆ.
ಇದು ಸ್ತುತ್ಯಾರ್ಹ ಕಾರ್ಯ. ಅತಿಹೆಚ್ಚು ಜನರು ಸಂವಿಧಾನವನ್ನು ಓದಿ, ಗ್ರಹಿಸಿ, ಮನನ ಮಾಡಿಕೊಂಡಷ್ಟೂ ಪ್ರಜಾತಂತ್ರದ ಬೇರುಗಳು ಗಟ್ಟಿಯಾಗುತ್ತವೆ. ನಮ್ಮ ಹಕ್ಕುಗಳು ಏನು ಮತ್ತು ಏಕೆ ನೀಡಲ್ಪಟ್ಟಿವೆ ಎನ್ನುವುದನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಇದು ಅವಶ್ಯವೂ ಹೌದು.
ಆದರೆ ಹೀಗೆ ಸಂವಿಧಾನವನ್ನು ಒಂದು ಕೈಯ್ಯಲ್ಲಿ ಎದೆಗವುಚಿಕೊಂಡೇ ತಮ್ಮ ಮತ್ತೊಂದು ಕೈಯ್ಯನ್ನು ಪ್ರಜೆಗಳ ಸಾಂವಿಧಾನಿಕ ಹಕ್ಕುಗಳನ್ನು ವಾಮಮಾರ್ಗಗಳ ಮೂಲಕ ಕಸಿದುಕೊಳ್ಳುತ್ತಿರುವ, ಪ್ರಜಾತಂತ್ರ ಮೌಲ್ಯಗಳ ಕತ್ತು ಹಿಸುಕುತ್ತಿರುವ , ಆಳುವ ವರ್ಗಗಳ ಹೆಗಲ ಮೇಲೆ ಹಾಕಿ ನಡೆಯುತ್ತಿರುವ ಜನಪ್ರತಿನಿಧಿಗಳನ್ನು ಹೇಗೆ ಬಣ್ಣಿಸುವುದು ? ಜೆಎನ್‍ಯು, ಪೌರತ್ವ ತಿದ್ದುಪಡಿ ಕಾಯ್ದೆ, ಶಹೀನ್‍ಭಾಗ್, ರೈತ ಮುಷ್ಕರ ಮತ್ತು ದಿಶಾ ರವಿ ಪ್ರಕರಣದವರೆಗೂ ಪ್ರಜಾತಂತ್ರ ಮೌಲ್ಯಗಳ ಕತ್ತುಹಿಸುಕುವ ಪ್ರಯತ್ನಗಳು ಅವ್ಯಾಹತವಾಗಿ ನಡೆಯುತ್ತಲೇ ಇವೆ. ಇದು ಮಿತಿ ಮೀರಿ ಹೋಗುತ್ತಿರುವುದರಿಂದಲೇ ಸುಪ್ರೀಂಕೋರ್ಟ್ ಸಹ “ ಸರ್ಕಾರ ಅಥವಾ ಸರ್ಕಾರದ ಆಡಳಿತ ನೀತಿಗಳನ್ನು ಟೀಕಿಸುವುದು ದೇಶದ್ರೋಹ ಎನಿಸುವುದಿಲ್ಲ ” ಎಂದು ಹೇಳಿದೆ.
ಆದಾಗ್ಯೂ ಈ ದಮನಕಾರಿ ನೀತಿಗಳು ಮುಂದುವರೆಯುತ್ತಲೇ ಇವೆ. ಸರ್ಕಾರಿ ನೌಕರರನ್ನು ಮತ್ತು ಸಾರ್ವಭೌಮ ಪ್ರಜೆಗಳನ್ನು, ಲೇಖಕರನ್ನು, ಬರಹಗಾರರನ್ನು, ಕಲಾವಿದರನ್ನು ಕಾಯ್ದೆ, ನಿಯಮ, ಕಾನೂನುಗಳ ಮೂಲಕ ಚಿಂತನಹೀನರನ್ನಾಗಿ ಮಾಡುವ, ಕ್ರಿಯಾಶೀಲತೆಯಿಂದ ವಂಚಿಸುವ, ಸೃಜನಶೀಲತೆಯಿಂದ ವಿಮುಖರಾಗುವಂತೆ ಮಾಡುವ, ಒಂದು ಆಡಳಿತ ವ್ಯವಸ್ಥೆಯಲ್ಲಿ ನಾವಿದ್ದೇವೆ.
ಈ ಆಡಳಿತ ವ್ಯವಸ್ಥೆಯನ್ನು ಒಪ್ಪಿಕೊಂಡು ತಮ್ಮ ಸ್ವಾರ್ಥ ಸಾಧನೆಗಾಗಿ, ಅಧಿಕಾರ ರಾಜಕಾರಣದ ಹಂಬಲಕ್ಕಾಗಿ, ಸ್ವ-ಕಲ್ಪಿತ ಸೈದ್ಧಾಂತಿಕ ಬದ್ಧತೆಯ ನೆರಳಲ್ಲಿ ಸಂವಿಧಾನ ವಿರೋಧಿ ಆಡಳಿತ ನೀತಿಗಳನ್ನು ಬೆಂಬಲಿಸುವ ಜನಪ್ರತಿನಿಧಿಗಳು ಪ್ರಜೆಗಳ ದೃಷ್ಟಿಯಲ್ಲಿ ದ್ರೋಹಿಗಳಾಗಿ ಕಾಣುತ್ತಿದ್ದಾರೆ.
ಗಡಿ ಸುರಕ್ಷತೆ, ರಕ್ಷಣಾ ವ್ಯವಸ್ಥೆಯ ಸಬಲೀಕರಣ ಮತ್ತು ಶತ್ರು ರಾಷ್ಟ್ರಗಳನ್ನು ಹಿಮ್ಮೆಟ್ಟಿಸುವ ಆತ್ಮಸ್ಥೈರ್ಯ ಭೌಗೋಳಿಕವಾಗಿ ದೇಶವನ್ನು ರಕ್ಷಿಸುತ್ತದೆ. ಆದರೆ ಪ್ರಜಾಸತ್ತಾತ್ಮಕ ಮೌಲ್ಯಗಳೇ ದುರ್ಬಲವಾಗುತ್ತಿರುವಾಗ ದೇಶ ಆಂತರಿಕವಾಗಿ ಶಿಥಿಲವಾಗುತ್ತಾ ಹೋಗುತ್ತದೆ. ರಾಫೇಲ್, ಕ್ಷಿಪಣಿ, ಅಣುಬಾಂಬುಗಳು ಬಡತನ, ಅಪೌಷ್ಟಿಕತೆಯನ್ನು ಹೋಗಲಾಡಿಸುವುದೂ ಇಲ್ಲ, ಸಾಮಾಜಿಕ ಸಮಾನತೆಯನ್ನು ಕಾಪಾಡುವುದೂ ಇಲ್ಲ, ಸಾಂಸ್ಕೃತಿಕ ವೈವಿಧ್ಯತೆಯನ್ನು ಸಂರಕ್ಷಿಸುವುದೂ ಇಲ್ಲ.
ಇದನ್ನು ಸಾಧಿಸಬೇಕಾದರೆ ನಮ್ಮ ಸಂವಿಧಾನದ ಅಂತಃಸತ್ವ ಉಳಿಯಬೇಕು, ತಳಮಟ್ಟದಲ್ಲಿ ಉಳಿಯಬೇಕು, ಸಾರ್ವಭೌಮ ಪ್ರಜೆಗಳ ನಡುವೆ ಉಳಿಯಬೇಕು, ಗ್ರಾಂಥಿಕವಾಗಿ ಉಳಿದರೆ ಸಾಲದು. ಜನರ ನಾಡಿಮಿಡಿತವನ್ನೇ ಗ್ರಹಿಸಲಾರದಷ್ಟು ಭ್ರಷ್ಟರಾಗಿರುವ ಜನಪ್ರತಿನಿಧಿಗಳಿಗೆ ಈ ವಾಸ್ತವದ ಅರಿವು ಮೂಡಬೇಕು. ಆಗ ಮಾತ್ರ ನಾವು ಸಂವಿಧಾನವನ್ನು ಕೈಯ್ಯಲ್ಲಿ ಹಿಡಿದು ಎದೆಗವುಚಿಕೊಂಡು ಅಂಬೇಡ್ಕರರತ್ತ ನಡೆಯುವ ಅರ್ಹತೆ ಪಡೆಯಲು ಸಾಧ್ಯ.
ಸುದ್ದಿದಿನ. ಕಾಂ|ವಾಟ್ಸಾಪ್|9980346243

ಅಂಕಣ
ಕೆಪಿಸಿಸಿಯ ನೂತನ ಸಾರಥಿ ಬಿ.ಕೆ. ಹರಿಪ್ರಸಾದ್ ರಾಜಕೀಯ ಪಯಣ
ಕರ್ನಾಟಕ ಕಾಂಗ್ರೆಸ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದಾಗಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಂಡ ಬಳಿಕ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಈ ಮಹತ್ವದ ಜವಾಬ್ದಾರಿಯನ್ನು ಬಿ.ಕೆ. ಹರಿಪ್ರಸಾದ್ ಅವರಿಗೆ ನೀಡಿದೆ.
ಈ ನೇಮಕ ಕೇವಲ ಸಂಘಟನಾತ್ಮಕ ಬದಲಾವಣೆಯಲ್ಲ. ಕರ್ನಾಟಕ ಕಾಂಗ್ರೆಸ್‌ನ ಮುಂದಿನ ರಾಜಕೀಯ ದಿಕ್ಕು, ಪಕ್ಷದ ಒಳಾಂಗಣ ಸಮತೋಲನ ಮತ್ತು ಭವಿಷ್ಯದ ಚುನಾವಣಾ ತಂತ್ರಗಳಿಗೆ ಇದು ಪ್ರಮುಖ ಸೂಚನೆಯಾಗಿದೆ. ಹಲವು ದಶಕಗಳ ರಾಜಕೀಯ ಅನುಭವ, ಸಂಘಟನಾ ಕೌಶಲ್ಯ ಮತ್ತು ಹೈಕಮಾಂಡ್‌ಗೆ ನಿಕಟ ಸಂಪರ್ಕ ಹೊಂದಿರುವ ಹರಿಪ್ರಸಾದ್ ಅವರು ಈಗ ರಾಜ್ಯ ಕಾಂಗ್ರೆಸ್‌ನ ನೂತನ ಸಾರಥಿಯಾಗಿ ಹೊರಹೊಮ್ಮಿದ್ದಾರೆ.
ಆರಂಭಿಕ ಜೀವನ ಮತ್ತು ಶಿಕ್ಷಣ
ಬಿ.ಕೆ. ಹರಿಪ್ರಸಾದ್ ಅವರು 1954ರ ಜುಲೈ 29ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎ. ಕೆಂಪಯ್ಯ ಹಾಗೂ ತಾಯಿ ಕೆ. ಗುಣಾವತಿ. ಬಾಲ್ಯದಿಂದಲೇ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳತ್ತ ಆಸಕ್ತಿ ಹೊಂದಿದ್ದ ಅವರು ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಲ್ಲಿ ಬಿ.ಕಾಂ ಪದವಿ ಶಿಕ್ಷಣ ಪಡೆದರು. ವಿದ್ಯಾರ್ಥಿ ಜೀವನದಲ್ಲಿಯೇ ಕಾಂಗ್ರೆಸ್ ಚಟುವಟಿಕೆಗಳೊಂದಿಗೆ ಗುರುತಿಸಿಕೊಂಡ ಅವರು ಮುಂದೆ ಪೂರ್ಣಾವಧಿ ರಾಜಕಾರಣಿಯಾಗಿ ಬೆಳೆದರು.
ವಿದ್ಯಾರ್ಥಿ ರಾಜಕಾರಣದಿಂದ ರಾಷ್ಟ್ರೀಯ ಮಟ್ಟದ ನಾಯಕತ್ವದವರೆಗೆ
ಹರಿಪ್ರಸಾದ್ ಅವರ ರಾಜಕೀಯ ಬದುಕು ವಿದ್ಯಾರ್ಥಿ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಸಂಘಟನೆಗಳಿಂದ ಆರಂಭವಾಯಿತು. ಸಂಘಟನಾ ರಾಜಕಾರಣದಲ್ಲಿ ತೋರಿದ ಸಾಮರ್ಥ್ಯದಿಂದ ಅವರು ಶೀಘ್ರದಲ್ಲೇ ಪಕ್ಷದ ಹಿರಿಯ ನಾಯಕರ ಗಮನ ಸೆಳೆದರು.
ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲೂ ಕಾಂಗ್ರೆಸ್ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ ಅವರು, ಹಲವು ರಾಜ್ಯಗಳ ಕಾಂಗ್ರೆಸ್ ವ್ಯವಹಾರಗಳ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ. ಪಕ್ಷದ ಹೈಕಮಾಂಡ್‌ನೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ನಾಯಕರಲ್ಲಿ ಹರಿಪ್ರಸಾದ್ ಪ್ರಮುಖರು ಎಂದು ಪರಿಗಣಿಸಲಾಗುತ್ತದೆ.
ಬಿ.ಕೆ. ಹರಿಪ್ರಸಾದ್ ಅವರು ಹಲವು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 1990ರಿಂದಲೇ ಅವರು ರಾಷ್ಟ್ರೀಯ ರಾಜಕಾರಣದಲ್ಲಿ ಸಕ್ರಿಯ ಪಾತ್ರ ವಹಿಸುತ್ತಾ ಬಂದಿದ್ದಾರೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪರವಾಗಿ ಹಲವು ವಿಷಯಗಳ ಬಗ್ಗೆ ಧ್ವನಿ ಎತ್ತಿದ ಅವರು ಸಂಸತ್ತಿನ ಚರ್ಚೆಗಳಲ್ಲಿ ಗಮನ ಸೆಳೆದಿದ್ದರು.
ಅವರು ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ಪ್ರತಿಪಕ್ಷಗಳ ಒಕ್ಕೂಟದ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿ ಎನ್‌ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ವಿರುದ್ಧ ಪೈಪೋಟಿ ನಡೆಸಿದ್ದರು. ಸೋಲು ಕಂಡಿದ್ದರೂ ರಾಷ್ಟ್ರೀಯ ರಾಜಕೀಯದಲ್ಲಿ ಅವರ ಸ್ಥಾನಮಾನ ಮತ್ತಷ್ಟು ಬಲವತ್ತಾಯಿತು.
1999ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿಯ ಹಿರಿಯ ನಾಯಕ ಅನಂತ್ ಕುಮಾರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಜಯ ಸಾಧಿಸಲು ಸಾಧ್ಯವಾಗದಿದ್ದರೂ ಅವರು ಕಾಂಗ್ರೆಸ್‌ನ ಪ್ರಮುಖ ಮುಖವಾಗಿ ಗುರುತಿಸಿಕೊಂಡರು.
ಸಂಘಟನಾ ರಾಜಕಾರಣದಲ್ಲಿ ಹೆಚ್ಚು ಸಕ್ರಿಯರಾಗಿದ್ದ ಕಾರಣ, ಚುನಾವಣಾ ಗೆಲುವಿಗಿಂತ ಪಕ್ಷ ನಿರ್ಮಾಣದಲ್ಲಿ ಅವರ ಪಾತ್ರವೇ ಹೆಚ್ಚು ಗಮನ ಸೆಳೆಯಿತು.
ಕಾಂಗ್ರೆಸ್ ಸಂಘಟನೆಯಲ್ಲಿ ‘ಟಾಸ್ಕ್ ಮಾಸ್ಟರ್’
ಕಾಂಗ್ರೆಸ್ ಪಕ್ಷದಲ್ಲಿ ಹರಿಪ್ರಸಾದ್ ಅವರನ್ನು ಸಂಘಟನಾ ತಜ್ಞ ಎಂದು ಕರೆಯಲಾಗುತ್ತದೆ. ಪಕ್ಷ ಎದುರಿಸಿದ ಸಂಕಷ್ಟದ ಸಂದರ್ಭಗಳಲ್ಲಿ ಹಲವು ರಾಜ್ಯಗಳಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಿ ಸಂಘಟನೆಯನ್ನು ಬಲಪಡಿಸಿದ ಅನುಭವ ಅವರಿಗೆ ಇದೆ.
ಇತ್ತೀಚಿನ ಅವಧಿಯಲ್ಲಿ ಅವರು ಹರಿಯಾಣ ಕಾಂಗ್ರೆಸ್ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾಜ್ಯ ರಾಜಕೀಯದ ಸೂಕ್ಷ್ಮ ಸಮೀಕರಣಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಮತ್ತು ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಸಾಧಿಸುವ ಶೈಲಿ ಅವರ ವಿಶೇಷತೆ ಎಂದು ಪಕ್ಷದ ನಾಯಕರು ಹೇಳುತ್ತಾರೆ.
ಕರ್ನಾಟಕ ಕಾಂಗ್ರೆಸ್‌ನಲ್ಲಿ ಹರಿಪ್ರಸಾದ್ ಅವರು ಹಲವು ದಶಕಗಳಿಂದ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಪಕ್ಷದ ಒಳಗಿನ ಭಿನ್ನಾಭಿಪ್ರಾಯಗಳ ಸಂದರ್ಭದಲ್ಲೂ ಅವರು ಸಮತೋಲನ ಸಾಧಿಸುವ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಅವರು, 2022 ರಿಂದ 2023ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸರ್ಕಾರದ ನೀತಿಗಳ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸುವ ಮೂಲಕ ಅವರು ಗಮನ ಸೆಳೆದಿದ್ದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ
2026ರಲ್ಲಿ ಕರ್ನಾಟಕ ರಾಜಕೀಯದಲ್ಲಿ ನಡೆದ ನಾಯಕತ್ವ ಬದಲಾವಣೆಯ ಬಳಿಕ ಮುಖ್ಯಮಂತ್ರಿ ಹುದ್ದೆಯನ್ನು ಡಿ.ಕೆ. ಶಿವಕುಮಾರ್ ವಹಿಸಿಕೊಂಡರು. ಇದರ ಪರಿಣಾಮವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಪಕ್ಷದೊಳಗೆ ಹಲವು ನಾಯಕರ ಹೆಸರುಗಳು ಕೇಳಿಬಂದಿದ್ದರೂ ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಬಿ.ಕೆ. ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಿತು.
ಈ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹೈಕಮಾಂಡ್ ಸಂಘಟನಾ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿ ಪರಿಗಣಿಸಿದೆ. ಪಕ್ಷದ ಸರ್ಕಾರ ಮತ್ತು ಪಕ್ಷ ಸಂಘಟನೆಯ ನಡುವೆ ಸಮತೋಲನ ಕಾಯ್ದುಕೊಳ್ಳಲು ಹರಿಪ್ರಸಾದ್ ಅವರ ಅನುಭವ ನೆರವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಬಿ.ಕೆ. ಹರಿಪ್ರಸಾದ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಹಿಂದೆ ಹಲವು ರಾಜಕೀಯ ಕಾರಣಗಳಿವೆ. ಮೊದಲನೆಯದಾಗಿ, ಅವರು ಯಾವುದೇ ಒಂದು ಗುಂಪಿಗೆ ಸೀಮಿತವಾಗದ ನಾಯಕ ಎಂಬ ಚಿತ್ರಣ ಹೊಂದಿದ್ದಾರೆ. ಎರಡನೆಯದಾಗಿ, ಸಂಘಟನಾ ಅನುಭವ ಅಪಾರವಾಗಿದೆ. ಮೂರನೆಯದಾಗಿ, ಹೈಕಮಾಂಡ್‌ಗೆ ಅತ್ಯಂತ ವಿಶ್ವಾಸಾರ್ಹ ನಾಯಕರಲ್ಲಿ ಒಬ್ಬರು. ನಾಲ್ಕನೆಯದಾಗಿ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳು ಮತ್ತು ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಸಾಮರ್ಥ್ಯ ಅವರಿಗಿದೆ ಎಂದು ಕಾಂಗ್ರೆಸ್ ನಾಯಕತ್ವ ನಂಬಿದೆ.
ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಅವರ ಮುಂದಿರುವ ಸವಾಲುಗಳು ಸಣ್ಣದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಸಂಘಟನೆಯನ್ನು ಸದೃಢವಾಗಿಡುವುದು ದೊಡ್ಡ ಜವಾಬ್ದಾರಿ. ಕಾರ್ಯಕರ್ತರ ಅಸಮಾಧಾನ, ಸಚಿವ ಸ್ಥಾನಾಕಾಂಕ್ಷಿಗಳ ಒತ್ತಡ, ಪ್ರಾದೇಶಿಕ ಸಮೀಕರಣಗಳು ಮತ್ತು ಜಾತಿ ಆಧಾರಿತ ರಾಜಕೀಯ ಬೇಡಿಕೆಗಳನ್ನು ಸಮತೋಲನಗೊಳಿಸಬೇಕಾಗಿದೆ.
ಇದರ ಜೊತೆಗೆ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಕಾಂಗ್ರೆಸ್ ಸಂಘಟನೆಯನ್ನು ನಿರಂತರ ಚಟುವಟಿಕೆಯಲ್ಲಿ ಇರಿಸುವುದು ಅವರ ಪ್ರಮುಖ ಗುರಿಯಾಗಲಿದೆ.
ಹರಿಪ್ರಸಾದ್ ಅವರು ಹೆಚ್ಚು ಪ್ರಚಾರಪ್ರಿಯ ರಾಜಕಾರಣಿಯಲ್ಲ. ಸಂಘಟನೆಯೊಳಗೆ ಕೆಲಸ ಮಾಡುವ ನಾಯಕ ಎಂಬ ಹೆಗ್ಗಳಿಕೆ ಅವರಿಗೆ ಇದೆ. ಕಾರ್ಯಕರ್ತರೊಂದಿಗೆ ನೇರ ಸಂಪರ್ಕ, ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಮತ್ತು ತಾಳ್ಮೆಯ ರಾಜಕೀಯ ಅವರ ಕಾರ್ಯಶೈಲಿಯ ಮುಖ್ಯ ಲಕ್ಷಣಗಳು.
ಅವರ ರಾಜಕೀಯ ಜೀವನದಲ್ಲಿ ಅನೇಕ ಏರಿಳಿತಗಳು ಬಂದಿದ್ದರೂ ಪಕ್ಷದ ಮೇಲಿನ ನಿಷ್ಠೆ ಪ್ರಶ್ನಾತೀತವಾಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಹಲವು ಬಾರಿ ಅವರಿಗೆ ಪ್ರಮುಖ ಜವಾಬ್ದಾರಿಗಳನ್ನು ನೀಡಿದೆ.
ರಾಜಕೀಯದ ಜೊತೆಗೆ ಸರಳ ಜೀವನಶೈಲಿಗೆ ಹೆಸರುವಾಸಿಯಾಗಿರುವ ಹರಿಪ್ರಸಾದ್ ಅವರು ಉಷಾ ಅವರೊಂದಿಗೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಅವರಿಗೆ ಒಬ್ಬ ಪುತ್ರಿಯಿದ್ದಾರೆ. ಕುಟುಂಬ ಜೀವನವನ್ನು ರಾಜಕೀಯದಿಂದ ಸಾಧ್ಯವಾದಷ್ಟು ದೂರ ಇಡುವ ನಾಯಕ ಎಂಬ ಹೆಸರನ್ನು ಅವರು ಗಳಿಸಿದ್ದಾರೆ.
ಭವಿಷ್ಯದ ರಾಜಕೀಯ ಪಾತ್ರ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಹರಿಪ್ರಸಾದ್ ಅವರ ರಾಜಕೀಯ ಜೀವನದ ಮತ್ತೊಂದು ಮಹತ್ವದ ಅಧ್ಯಾಯವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರ ಮತ್ತು ಪಕ್ಷ ಸಂಘಟನೆಯ ನಡುವೆ ಸಮನ್ವಯ ಸಾಧಿಸುವಲ್ಲಿ ಅವರ ಪಾತ್ರ ನಿರ್ಣಾಯಕವಾಗಲಿದೆ.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಮಟ್ಟದ ತಂತ್ರ ರೂಪಿಸುವುದು, ಕಾರ್ಯಕರ್ತರ ಬಲವರ್ಧನೆ, ಚುನಾವಣಾ ಸಿದ್ಧತೆ ಮತ್ತು ಹೈಕಮಾಂಡ್‌ನೊಂದಿಗೆ ಸಮನ್ವಯ ಸಾಧಿಸುವ ಪ್ರಮುಖ ಹೊಣೆಗಾರಿಕೆ ಅವರ ಮೇಲಿದೆ. ಈ ಎಲ್ಲ ಸವಾಲುಗಳನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಕರ್ನಾಟಕ ಕಾಂಗ್ರೆಸ್‌ನ ಮುಂದಿನ ರಾಜಕೀಯ ಭವಿಷ್ಯ ಬಹುಮಟ್ಟಿಗೆ ಅವಲಂಬಿತವಾಗಿದೆ.
ಸುಮಾರು ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಕಾಂಗ್ರೆಸ್ ಸಂಘಟನೆಯಲ್ಲಿ ದುಡಿದಿರುವ ಬಿ.ಕೆ. ಹರಿಪ್ರಸಾದ್ ಇಂದು ಕರ್ನಾಟಕ ಕಾಂಗ್ರೆಸ್‌ನ ಅತ್ಯುನ್ನತ ಸಂಘಟನಾ ಹುದ್ದೆಯನ್ನು ಅಲಂಕರಿಸಿದ್ದಾರೆ. ವಿದ್ಯಾರ್ಥಿ ರಾಜಕಾರಣದಿಂದ ಆರಂಭವಾದ ಅವರ ಪಯಣ ರಾಜ್ಯಸಭೆ, ರಾಷ್ಟ್ರೀಯ ಸಂಘಟನೆ, ವಿಧಾನ ಪರಿಷತ್ ಮತ್ತು ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನವರೆಗೆ ತಲುಪಿದೆ.
ಅನುಭವ, ಸಂಘಟನಾ ಕೌಶಲ್ಯ, ರಾಜಕೀಯ ಪ್ರೌಢಿಮೆ ಮತ್ತು ಪಕ್ಷದ ಮೇಲಿನ ನಿಷ್ಠೆ ಎಂಬ ನಾಲ್ಕು ಅಂಶಗಳು ಅವರ ರಾಜಕೀಯ ವ್ಯಕ್ತಿತ್ವದ ಪ್ರಮುಖ ಗುರುತುಗಳಾಗಿವೆ. ಕರ್ನಾಟಕ ಕಾಂಗ್ರೆಸ್ ಹೊಸ ರಾಜಕೀಯ ಹಾದಿಯಲ್ಲಿ ಸಾಗುತ್ತಿರುವ ಈ ಸಂದರ್ಭದಲ್ಲಿ, ಬಿ.ಕೆ. ಹರಿಪ್ರಸಾದ್ ಅವರ ನಾಯಕತ್ವ ಪಕ್ಷಕ್ಕೆ ಹೊಸ ಶಕ್ತಿ ತುಂಬುತ್ತದೆಯೇ ಎಂಬುದನ್ನು ರಾಜ್ಯದ ರಾಜಕೀಯ ಕುತೂಹಲದಿಂದ ಗಮನಿಸುತ್ತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ನೀಟ್ ಸೃಷ್ಟಿಸಿದ ಅವಾಂತರಗಳು ಮತ್ತು ಅದರ ಬಹುಮುಖಿ ಬಿಕ್ಕಟ್ಟುಗಳು: ಒಂದು ವಿಮರ್ಶಾತ್ಮಕ ನೋಟ
~ಡಾ.ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಭಾರತದ ವೈದ್ಯಕೀಯ ಶಿಕ್ಷಣ ರಂಗದಲ್ಲಿ ಏಕರೂಪತೆ ಮತ್ತು ಪಾರದರ್ಶಕತೆಯನ್ನು ತರುವ ಆಶಯದೊಂದಿಗೆ ಜಾರಿಗೆ ಬಂದರೂ, ಪ್ರಾಯೋಗಿಕವಾಗಿ ಅದು ದೇಶದ ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ನೆಲೆಗಳಲ್ಲಿ ತೀವ್ರ ಸ್ವರೂಪದ ಬಿಕ್ಕಟ್ಟುಗಳನ್ನು ಸೃಷ್ಟಿಸಿದೆ. ಕೇವಲ ಒಂದು ತಾಂತ್ರಿಕ ಪ್ರವೇಶ ಪರೀಕ್ಷೆಯಾಗಿ ಕಾಣುವ ಈ ವ್ಯವಸ್ಥೆಯು, ವಾಸ್ತವದಲ್ಲಿ ಭಾರತದ ಬಹುಸಂಸ್ಕೃತಿ ಮತ್ತು ಒಕ್ಕೂಟ ತತ್ತ್ವದ ಆಳವಾದ ರಚನೆಗಳ ಮೇಲೆ ಪ್ರಹಾರ ನಡೆಸುತ್ತಿದೆ. ಗುಣಮಟ್ಟದ ಶಿಕ್ಷಣದ ಹೆಸರಿನಲ್ಲಿ ತರಲಾದ ಈ ಕೇಂದ್ರೀಕೃತ ಮಾದರಿಯು ಹೇಗೆ ಸಾಮಾನ್ಯ ವಿದ್ಯಾರ್ಥಿ ಸಮೂಹವನ್ನು ಶೈಕ್ಷಣಿಕ ಪ್ರಕ್ರಿಯೆಯಿಂದ ಹೊರದೂಡುತ್ತಿದೆ, ಪ್ರಾದೇಶಿಕ ಸ್ವಾಯತ್ತತೆಯನ್ನು ಧ್ವಂಸಗೊಳಿಸುತ್ತಿದೆ ಮತ್ತು ಸಾಂಪ್ರದಾಯಿಕ ಶ್ರೇಣೀಕೃತ ಅಸಮಾನತೆಗಳನ್ನು ಆಧುನಿಕ ರೂಪದಲ್ಲಿ ಮರುಸ್ಥಾಪಿಸುತ್ತಿದೆ ಎಂಬುದನ್ನು ಸಾಮಾಜಿಕ ನ್ಯಾಯ ಮತ್ತು ವಿಮರ್ಶಾತ್ಮಕ ಸಿದ್ಧಾಂತಗಳ ಹಿನ್ನೆಲೆಯಲ್ಲಿ ವಿವರವಾಗಿ ವಿಶ್ಲೇಷಿಸಬೇಕಾಗಿದೆ.
1. ತಾರತಮ್ಯದ ಆರ್ಥಿಕ ಮತ್ತು ಪಠ್ಯಕ್ರಮದ ನೆಲೆಗಳು (Socio-Economic and Curricular Discrimination)
ನೀಟ್ ಪರೀಕ್ಷೆಯು “ಎಲ್ಲರಿಗೂ ಸಮಾನ ಅವಕಾಶ” ಎಂಬ ಭ್ರಮೆಯನ್ನು ಸೃಷ್ಟಿಸುತ್ತದೆಯಾದರೂ, ಅದರ ಒಳಗಣ್ಣು ಕೇವಲ ಒಂದು ನಿರ್ದಿಷ್ಟ ವರ್ಗದ ಪರವಾಗಿ ಕೆಲಸ ಮಾಡುತ್ತಿದೆ. ಈ ಪರೀಕ್ಷಾ ಪದ್ಧತಿಯು ಭಾರತೀಯ ಸಮಾಜದಲ್ಲಿ ಹೊಸದೊಂದು ಆರ್ಥಿಕ ತಾರತಮ್ಯವನ್ನು ಕಾನೂನುಬದ್ಧಗೊಳಿಸಿದೆ. ಇಂದು ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕೇವಲ ವಿದ್ಯಾರ್ಥಿಯ ಪ್ರತಿಭೆಯನ್ನಷ್ಟೇ ಅವಲಂಬಿಸಿಲ್ಲ, ಬದಲಿಗೆ ಆ ಪೋಷಕರ ಆರ್ಥಿಕ ಸೌಲಭ್ಯವನ್ನು ಅವಲಂಬಿಸಿದೆ. ಲಕ್ಷಾಂತರ ರೂಪಾಯಿ ಶುಲ್ಕ ವಸೂಲಿ ಮಾಡುವ ಕಾರ್ಪೊರೇಟ್ ಕೋಚಿಂಗ್ ಉದ್ಯಮದ (Coaching Industry) ಹಬ್‌ಗಳಾದ ಹಲವಾರು ಪ್ರತಿಷ್ಠಿತ ಕೇಂದ್ರಗಳಿಗೆ ಪ್ರವೇಶ ಪಡೆಯಲು ಸಾಧ್ಯವಾಗದ ಬಡ ಮತ್ತು ಕೆಳಮಧ್ಯಮ ವರ್ಗದ ಗ್ರಾಮೀಣ ವಿದ್ಯಾರ್ಥಿಗಳು ಸ್ಪರ್ಧೆಯ ಆರಂಭಿಕ ಹಂತದಲ್ಲೇ ಸೋಲಿಸಲ್ಪಡುತ್ತಿದ್ದಾರೆ. ಇದರೊಂದಿಗೆ, ಪಠ್ಯಕ್ರಮದ ತಾರತಮ್ಯವು ಈ ಬಿಕ್ಕಟ್ಟನ್ನು ಮತ್ತಷ್ಟು ತೀವ್ರಗೊಳಿಸಿದೆ. ದೇಶದ ವೈವಿಧ್ಯಮಯ ರಾಜ್ಯಗಳು ತಮ್ಮದೇ ಆದ ಸಾಂಸ್ಕೃತಿಕ ಮತ್ತು ಪ್ರಾದೇಶಿಕ ಅಗತ್ಯಗಳಿಗನುಗುಣವಾಗಿ ರೂಪಿಸಿಕೊಂಡ ರಾಜ್ಯ ಪಠ್ಯಕ್ರಮಗಳನ್ನು (State Syllabus) ಸಂಪೂರ್ಣವಾಗಿ ನಿರ್ಲಕ್ಷಿಸಿ, ಕೇವಲ ಸಿಬಿಎಸ್ಇ (NCERT) ಪಠ್ಯಕ್ರಮವನ್ನು ಮಾತ್ರ ಮಾನದಂಡವಾಗಿರಿಸಿಕೊಳ್ಳಲಾಗಿದೆ. ಇದು ಪ್ರಾದೇಶಿಕ ಭಾಷಾ ಮಾಧ್ಯಮಗಳಲ್ಲಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಓದಿದ ಸಮಾಜದ ಕಟ್ಟಕಡೆಯ ವಿದ್ಯಾರ್ಥಿಗಳನ್ನು ವೈದ್ಯಕೀಯ ಶಿಕ್ಷಣದ ಕನಸಿನಿಂದಲೇ ವಂಚಿಸುವ ವ್ಯವಸ್ಥಿತ ತಾರತಮ್ಯವಾಗಿದೆ.
2. ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವ್ಯವಸ್ಥೆಯ ವಿಶ್ವಾಸಾರ್ಹತೆಯ ಕುಸಿತ
ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆಯು ಅತ್ಯಂತ ಸುರಕ್ಷಿತ ಮತ್ತು ಭ್ರಷ್ಟಾಚಾರ ಮುಕ್ತ ಎಂಬ ವಾದವನ್ನು ನೀಟ್ ಪರೀಕ್ಷೆಯ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆಗಳು (Paper Leaks) ಮತ್ತು ಅಕ್ರಮಗಳು ಸಂಪೂರ್ಣವಾಗಿ ಬೆತ್ತಲೆಗೊಳಿಸಿವೆ. ಇಡೀ ದೇಶಕ್ಕೆ ಒಂದೇ ಪರೀಕ್ಷೆ ಎಂಬ ಹಠದ ಪರಿಣಾಮವಾಗಿ, ಪ್ರಶ್ನೆ ಪತ್ರಿಕೆಗಳು ವ್ಯವಸ್ಥಿತ ಜಾಲಗಳ ಮೂಲಕ ಕೋಟ್ಯಂತರ ರೂಪಾಯಿಗಳಿಗೆ ಮಾರಾಟವಾಗುತ್ತಿರುವುದು ಪರೀಕ್ಷಾ ಮಂಡಳಿಗಳ ಸಾಂಸ್ಥಿಕ ವಿಫಲತೆಯನ್ನು ಎತ್ತಿ ತೋರಿಸುತ್ತದೆ. ಪ್ರಾಮಾಣಿಕವಾಗಿ ಹಗಲಿರುಳು ಶ್ರಮಿಸಿದ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಭವಿಷ್ಯವು, ಕಪ್ಪುಹಣ ಮತ್ತು ರಾಜಕೀಯ ಪ್ರಭಾವ ಬಳಸಿ ಪ್ರಶ್ನೆ ಪತ್ರಿಕೆಯನ್ನು ಮೊದಲೇ ಖರೀದಿಸುವ ಪ್ರಭಾವಿ ತರಬೇತಿ ಕೇಂದ್ರಗಳು ಹಾಗೂ ದಲ್ಲಾಳಿಗಳ ಪಾಲಾಗುತ್ತಿದೆ. ಇಂತಹ ವ್ಯವಸ್ಥಿತ ಹಗರಣಗಳು ಕೇವಲ ಅರ್ಹ ವಿದ್ಯಾರ್ಥಿಗಳಿಗೆ ಮಾಡುವ ಅನ್ಯಾಯವಷ್ಟೇ ಅಲ್ಲ; ಇಡೀ ಶೈಕ್ಷಣಿಕ ಆಡಳಿತದ ಮೇಲಿರುವ ಸಾರ್ವಜನಿಕ ವಿಶ್ವಾಸಾರ್ಹತೆಯನ್ನೇ ಧ್ವಂಸಗೊಳಿಸಿವೆ. ಪಾರದರ್ಶಕತೆಯ ಹೆಸರಿನಲ್ಲಿ ತರಲಾದ ವ್ಯವಸ್ಥೆಯು ಇಂದು ಭ್ರಷ್ಟಾಚಾರದ ಅತಿ ದೊಡ್ಡ ಆಡುಂಬೊಲವಾಗಿ ಮಾರ್ಪಟ್ಟಿರುವುದು ಈ ಪರೀಕ್ಷಾ ಮಾದರಿಯ ನೈತಿಕ ಪತನಕ್ಕೆ ಸಾಕ್ಷಿಯಾಗಿದೆ.
3. ವ್ಯವಸ್ಥೆ ಸೃಷ್ಟಿಸಿದ ಆತ್ಮಹತ್ಯೆಗಳು ಮತ್ತು ಮಾನಸಿಕ ಹಿಂಸೆ (Institutional Tragedies and Mental Trauma)
ನೀಟ್ ಹೇರಿರುವ ಕಠಿಣ ಪರೀಕ್ಷಾ ಸ್ವರೂಪ ಮತ್ತು ಪದೇಪದೇ ಉಂಟಾಗುವ ಸಾಂಸ್ಥಿಕ ಲೋಪಗಳು ದೇಶದ ಯುವ ಸಮುದಾಯದ ಮೇಲೆ ಅಭೂತಪೂರ್ವ ಮಾನಸಿಕ ಒತ್ತಡವನ್ನು ಸೃಷ್ಟಿಸಿವೆ. ಇವು ಕೇವಲ ವೈಯಕ್ತಿಕ ವೈಫಲ್ಯದ ಸಾವುಗಳಲ್ಲ, ಬದಲಿಗೆ ಇವುಗಳನ್ನು “ಸಾಂಸ್ಥಿಕ ಕೊಲೆಗಳು” (Institutional Murders) ಎಂದು ಕರೆಯಬೇಕಾಗುತ್ತದೆ. ವಿದ್ಯಾರ್ಥಿಯೊಬ್ಬನ ಸುದೀರ್ಘ ವರ್ಷಗಳ ಶ್ರಮ, ಅರ್ಹತೆ ಮತ್ತು ಇಡೀ ಬದುಕಿನ ಸಾಮರ್ಥ್ಯವನ್ನು ಕೇವಲ ಮೂರು ಗಂಟೆಗಳ ಒಂದು ಅಮಾನವೀಯ ವಸ್ತುನಿಷ್ಠ (MCQ) ಪರೀಕ್ಷೆಯಲ್ಲಿ ನಿರ್ಧರಿಸುವ ಕ್ರೂರ ನಡೆ ಇದು. ಕೃಷಿ ಅಥವಾ ಶ್ರಮಿಕ ಹಿನ್ನೆಲೆಯಿಂದ ಬಂದ ಪೋಷಕರು ತಮ್ಮ ಇಡೀ ಜೀವಮಾನದ ದುಡಿಮೆಯನ್ನು ಸಾಲದ ರೂಪದಲ್ಲಿ ಸುರಿದು ಮಕ್ಕಳನ್ನು ಓದಿಸುತ್ತಿರುವಾಗ, ಆ ಸಾಲದ ಹೊರೆ, ಪರೀಕ್ಷಾ ಅಕ್ರಮಗಳ ಆತಂಕ ಮತ್ತು ಸಾಮಾಜಿಕ ನಿರೀಕ್ಷೆಗಳು ವಿದ್ಯಾರ್ಥಿಗಳ ಮೇಲೆ ಅತಿಯಾದ ಮಾನಸಿಕ ಹಿಂಸೆಯಾಗಿ ರೂಪಾಂತರಗೊಳ್ಳುತ್ತವೆ. ತಮಿಳುನಾಡಿನ ಅನಿತ್ಯಾಳಿಂದ ಹಿಡಿದು ದೇಶದ ನೂರಾರು ಪ್ರತಿಭಾವಂತ ಗ್ರಾಮೀಣ ವಿದ್ಯಾರ್ಥಿ ಹಾಗೂ ಕೋಟಾದಲ್ಲಿ ತರಬೇತಿ ಪಡೆಯುತ್ತಿದ್ದ ಅಭ್ಯರ್ಥಿಗಳ ಸಾಲು ಸಾಲು ಆತ್ಮಹತ್ಯೆಗಳು ಈ ಕಠಿಣ ಶೈಕ್ಷಣಿಕ ವ್ಯವಸ್ಥೆಯ ಕ್ರೂರತೆಗೆ ಸಾಕ್ಷಿಯಾಗಿವೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವುದನ್ನು ಇಡೀ ಬದುಕಿನ ಸೋಲು ಎಂಬಂತೆ ಬಿಂಬಿಸುವ ಇಂತಹ ಮಾರುಕಟ್ಟೆ ಕೇಂದ್ರಿತ ವ್ಯವಸ್ಥೆಯು, ಶಿಕ್ಷಣದ ಮೂಲ ಆಶಯವಾದ ವ್ಯಕ್ತಿತ್ವ ವಿಕಸನವನ್ನು ಕೊಲೆ ಮಾಡಿ ಯುವ ಮನಸ್ಸುಗಳಲ್ಲಿ ಕೀಳರಿಮೆ ಹಾಗೂ ತೀವ್ರ ಖಿನ್ನತೆಯನ್ನು ಬಿತ್ತುತ್ತಿದೆ.
4. ಪ್ರಾದೇಶಿಕ ಪ್ರಾಬಲ್ಯ ಮತ್ತು ಒಕ್ಕೂಟ ವ್ಯವಸ್ಥೆಯ ಮೇಲಿನ ಪ್ರಹಾರ
ಭಾರತೀಯ ಸಂವಿಧಾನದ ಆಶಯದಂತೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಜಂಟಿ ಪಟ್ಟಿಯಲ್ಲಿದ್ದು (Concurrent List), ಪ್ರಾದೇಶಿಕ ಅಗತ್ಯಗಳಿಗೆ ತಕ್ಕಂತೆ ನೀತಿಗಳನ್ನು ರೂಪಿಸಿಕೊಳ್ಳುವ ಹಕ್ಕು ರಾಜ್ಯ ಸರ್ಕಾರಗಳಿಗಿದೆ. ಆದರೆ ನೀಟ್ ಪದ್ಧತಿಯು ರಾಜ್ಯಗಳ ಈ ಸಾಂವಿಧಾನಿಕ ಹಕ್ಕುಗಳನ್ನು ಸಂಪೂರ್ಣವಾಗಿ ಹರಣ ಮಾಡಿದೆ. ರಾಜ್ಯ ಸರ್ಕಾರಗಳು ತಮ್ಮ ತೆರಿಗೆದಾರರ ಹಣದಿಂದ, ತಮ್ಮದೇ ಭೂಮಿಯಲ್ಲಿ ನಿರ್ಮಿಸಿದ ವೈದ್ಯಕೀಯ ಕಾಲೇಜುಗಳ ಸೀಟುಗಳ ಮೇಲಿನ ನಿಯಂತ್ರಣವನ್ನು ಕೇಂದ್ರದ ಏಜೆನ್ಸಿಯೊಂದು ಕಸಿದುಕೊಂಡಿರುವುದು ಒಕ್ಕೂಟ ವ್ಯವಸ್ಥೆಯ (Federalism) ಮೇಲಿನ ಗಂಭೀರ ಪ್ರಹಾರವಾಗಿದೆ. ಇದರ ಪರಿಣಾಮವಾಗಿ, ಸ್ಥಳೀಯ ಭಾಷೆ, ಸಂಸ್ಕೃತಿ ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಗಳ ಅರಿವಿಲ್ಲದ ಭಿನ್ನ ಪ್ರಾಂತ್ಯಗಳ ವಿದ್ಯಾರ್ಥಿಗಳು ದಕ್ಷಿಣದ ಅಥವಾ ನಿರ್ದಿಷ್ಟ ರಾಜ್ಯಗಳ ಗ್ರಾಮೀಣ ಕೋಟಾಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸ್ಥಳೀಯ ರೋಗಿಗಳೊಂದಿಗೆ ಭಾಷಾ ಸಂವಹನ ನಡೆಸಲಾಗದ ಇಂತಹ ವೈದ್ಯರಿಂದಾಗಿ ಗ್ರಾಮೀಣ ಸಾರ್ವಜನಿಕ ಆರೋಗ್ಯ ರಕ್ಷಣಾ ವ್ಯವಸ್ಥೆಯು (Public Healthcare) ಸಂಪೂರ್ಣವಾಗಿ ದುರ್ಬಲಗೊಳ್ಳುತ್ತಿದೆ. ಸ್ಥಳೀಯ ಸಮುದಾಯಗಳ ಅಗತ್ಯಗಳಿಗೆ ಸ್ಪಂದಿಸುವ ಮತ್ತು ಗ್ರಾಮೀಣ ಭಾಗಗಳಲ್ಲಿ ಸೇವೆ ಸಲ್ಲಿಸಲು ಸಿದ್ಧರಿರುವ ವೈದ್ಯರ ಲಭ್ಯತೆಯನ್ನು ಕಡಿತಗೊಳಿಸುವ ಮೂಲಕ ಈ ವ್ಯವಸ್ಥೆಯು ಪ್ರಾದೇಶಿಕ ಜನಸಂಖ್ಯಾಶಾಸ್ತ್ರ ಮತ್ತು ಆರೋಗ್ಯ ಸಮತೋಲನವನ್ನು ಏರುಪೇರು ಮಾಡಿದೆ.
5. ಜಾತೀಯತೆಯ ಕರಾಳತೆ ಮತ್ತು ಯಜಮಾನಿಕೆಯ ಮರುಸ್ಥಾಪನೆ (Perpetuation of Caste Hegemony)
ಸಮಕಾಲೀನ ಸನ್ನಿವೇಶದಲ್ಲಿ ನೀಟ್ ಪರೀಕ್ಷೆಯು “ಮೆರಿಟ್” (Meritocracy) ಮತ್ತು “ಪ್ರತಿಭೆ” ಎಂಬ ಅತ್ಯಂತ ಆಕರ್ಷಕ ಮುಖವಾಡವನ್ನು ಧರಿಸಿ ಬಂದಿದೆ. ಆದರೆ, ವಿಮರ್ಶಾತ್ಮಕವಾಗಿ ನೋಡಿದಾಗ ಈ ‘ಮೆರಿಟ್’ ಎನ್ನುವುದು ಕೇವಲ ವೈಯಕ್ತಿಕ ಸಾಮರ್ಥ್ಯವಲ್ಲ, ಬದಲಿಗೆ ಅದು ತಲೆಮಾರುಗಳಿಂದ ಒಂದು ನಿರ್ದಿಷ್ಟ ವರ್ಗವು ಅನುಭವಿಸಿಕೊಂಡು ಬಂದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬಂಡವಾಳದ (Cultural Capital) ಹೊಸ ರೂಪವೇ ಹೊರತು ಬೇರೇನಲ್ಲ. ಶತಶತಮಾನಗಳಿಂದ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿ, ಈಗಷ್ಟೇ ಮೊದಲ ತಲೆಮಾರಿನ ಶಿಕ್ಷಣ ಪಡೆಯುತ್ತಿರುವ ದಲಿತ, ಹಿಂದುಳಿದ ಮತ್ತು ಬುಡಕಟ್ಟು ಸಮುದಾಯಗಳ ವಿದ್ಯಾರ್ಥಿಗಳಿಗೆ ಆಧುನಿಕ ಇಂಗ್ಲಿಷ್ ತರಬೇತಿ, ದುಬಾರಿ ಕೋಚಿಂಗ್ ಅಥವಾ ಇತ್ತೀಚಿನ ಪತ್ರಿಕೆ ಸೋರಿಕೆಯಂತಹ ಕರಾಳ ದಂಧೆಗಳ ರಹಸ್ಯ ಜಾಲಗಳಿಗೆ ಪ್ರವೇಶ ಪಡೆಯುವ ಸಾಮಾಜಿಕ ಹಿನ್ನೆಲೆ ಇರುವುದಿಲ್ಲ. ನೀಟ್ ವ್ಯವಸ್ಥೆಯು ಇಂತಹ ಐತಿಹಾಸಿಕ ಅಸಮಾನತೆಗಳನ್ನು ಸಂಪೂರ್ಣವಾಗಿ ಕಣ್ಣುಮುಚ್ಚಿ ಕುಳಿತು, ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವ ಮೂಲಕ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ ಆಶಯಗಳನ್ನು ತಾಂತ್ರಿಕವಾಗಿ ತಲೆಕೆಳಗು ಮಾಡುತ್ತಿದೆ. ಇದರ ಪರಿಣಾಮವಾಗಿ, ವೈದ್ಯಕೀಯ ಕ್ಷೇತ್ರವು ಸಮಾಜದ ಬಹುಪಾಲು ಶ್ರಮಿಕ ಮತ್ತು ತಳಸಮುದಾಯಗಳ ಕೈತಪ್ಪಿ, ಮತ್ತೆ ಕೇವಲ ಆಯ್ದ ಕೆಲವು ಉನ್ನತ ವರ್ಗಗಳ ಯಜಮಾನಿಕೆಯ (Hegemony) ತಾಣವಾಗಿ ಬದಲಾಗುತ್ತಿದೆ. ಇದು ಸಾಂಪ್ರದಾಯಿಕ ಜಾತೀಯತೆಯ ಶ್ರೇಣೀಕೃತ ಕರಾಳತೆಯನ್ನು ಅತ್ಯಂತ ಸೂಕ್ಷ್ಮ ಹಾಗೂ ಆಧುನಿಕ ಶೈಕ್ಷಣಿಕ ನಿಯಮಗಳ ಮೂಲಕ ಪುನರುತ್ಪಾದಿಸುವ ಅಪಾಯಕಾರಿ ನೆಲೆಯಾಗಿದೆ.
6. ಸಮನ್ವಯದ ದಾರಿ….
ನೀಟ್ ಸೃಷ್ಟಿಸಿರುವ ಈ ಸಾಂಸ್ಥಿಕ, ಆರ್ಥಿಕ ಮತ್ತು ಸಾಮಾಜಿಕ ಅವಾಂತರಗಳು ನಮಗೆ ಶಿಕ್ಷಣ ವ್ಯವಸ್ಥೆಯ ಮರುಚಿಂತನೆಯ ತುರ್ತು ಅಗತ್ಯವನ್ನು ನೆನಪಿಸುತ್ತವೆ. ಪ್ರಜಾಪ್ರಭುತ್ವದ ನಿಜವಾದ ಆಶಯವಿರುವುದು ಕೇವಲ ಕಾಗದದ ಮೇಲಿನ ತಾಂತ್ರಿಕ “ಏಕರೂಪತೆ”ಯಲ್ಲಲ್ಲ, ಬದಲಿಗೆ ಭಿನ್ನ ಹಿನ್ನೆಲೆಯ ಜನರನ್ನು ಒಳಗೊಳ್ಳುವ “ಸಮಾನತೆ” ಮತ್ತು “ಸಾಮಾಜಿಕ ನ್ಯಾಯ”ದಲ್ಲಿ ಮಾತ್ರ. ಕೇವಲ ಬಂಡವಾಳಶಾಹಿ ಮಾರುಕಟ್ಟೆಯ, ಕೋಚಿಂಗ್ ಮಾಫಿಯಾಗಳ ಮತ್ತು ಪ್ರಶ್ನೆ ಪತ್ರಿಕೆ ಮಾರಾಟ ಮಾಡುವ ಕರಾಳ ಜಾಲಗಳ ಹಿತಾಸಕ್ತಿಯನ್ನು ಕಾಯುವ ಇಂತಹ ಪ್ರವೇಶ ಪರೀಕ್ಷೆಗಳು ವೈದ್ಯಕೀಯ ಕ್ಷೇತ್ರವನ್ನು ಕೇವಲ ವ್ಯಾಪಾರೀಕರಣದ ಕೇಂದ್ರವನ್ನಾಗಿ ಮಾಡುತ್ತವೆಯೇ ಹೊರತು ಮಾನವೀಯತೆಯುಳ್ಳ ವೈದ್ಯರನ್ನು ಸೃಷ್ಟಿಸಲಾರವು. ಈ ಹಿನ್ನೆಲೆಯಲ್ಲಿ, ಪ್ರಾದೇಶಿಕ ಸ್ವಾಯತ್ತತೆ, ಬಹುತ್ವ ಮತ್ತು ತಳಸಮುದಾಯಗಳ ಶೈಕ್ಷಣಿಕ ಹಕ್ಕುಗಳನ್ನು ರಕ್ಷಿಸಲು ನೀಟ್ ಮಾದರಿಯ ಕೇಂದ್ರೀಕೃತ ಪರೀಕ್ಷೆಗಳ ತಾರತಮ್ಯದ ನೆಲೆಗಳನ್ನು ತಕ್ಷಣವೇ ಮರುಪರಿಶೀಲಿಸಬೇಕಾಗಿದೆ; ಇಲ್ಲದಿದ್ದರೆ ಇದು ದೇಶದ ಒಕ್ಕೂಟ ರಚನೆ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ತುಂಬಲಾರದ ನಷ್ಟವನ್ನು ಉಂಟುಮಾಡುವುದು ಖಂಡಿತ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಸಮರ್ಥ್ ಶಾಮನೂರು ಪ್ರಯಾಸದ ಗೆಲುವು ಮತ್ತು ಮುಂದಿನ ಸವಾಲುಗಳು
~ಗೋವರ್ಧನ ನವಿಲೇಹಾಳು
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಪ್ರಯಾಸದ ಗೆಲುವು ಸಾಧಿಸಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ಖಾಲಿಯಾದ ಈ ಕ್ಷೇತ್ರವು ಕುಟುಂಬದ ರಾಜಕೀಯ ಉತ್ತರಾಧಿಕಾರ, ಅಲ್ಪಸಂಖ್ಯಾತರ ಅಸಮಾಧಾನ ಮತ್ತು ಪಕ್ಷಾಂತರದ ಆರೋಪಗಳ ನಡುವೆ ತೀವ್ರ ಸ್ಪರ್ಧೆಯನ್ನು ಕಂಡಿತು. ಸುಮಾರು 5,708 ಮತಗಳ ಅಂತರದಿಂದ ಗೆದ್ದ ಸಮರ್ಥ್ ಅವರು ಶಾಮನೂರು ಕುಟುಂಬದ ಮೂರನೇ ಪೀಳಿಗೆಯ ಪ್ರತಿನಿಧಿಯಾಗಿ ವಿಧಾನಸಭೆಗೆ ಪ್ರವೇಶಿಸಿದ್ದಾರೆ. ಈ ಗೆಲುವು ಕಾಂಗ್ರೆಸ್‌ಗೆ ಸಂತೋಷದ ಸುದ್ದಿಯಾದರೂ, ಎಸ್‌ಡಿಪಿಐ ಪಡೆದ ಗಣನೀಯ 18,975 ಮತಗಳು ಮತ್ತು ಬಿಜೆಪಿಯ ತೀವ್ರ ಪೈಪೋಟಿ ರಾಜಕೀಯ ಸಮೀಕರಣಗಳಲ್ಲಿ ಹೊಸ ತಿರುವುಗಳನ್ನು ಸೂಚಿಸುತ್ತವೆ.
ಈ ಉಪಚುನಾವಣೆಯು ಕೇವಲ ಕ್ಷೇತ್ರೀಯ ಘಟನೆಯಾಗಿರದೆ, ಕರ್ನಾಟಕ ರಾಜಕೀಯದಲ್ಲಿ ಅಲ್ಪಸಂಖ್ಯಾತರ ಮತಬ್ಯಾಂಕ್, ಕುಟುಂಬ ರಾಜಕೀಯ ಮತ್ತು ಪ್ರತಿಪಕ್ಷದ ತಂತ್ರಗಳ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಯಿತು. ಶಾಮನೂರು ಕುಟುಂಬದ ದೀರ್ಘಕಾಲದ ಸೇವೆಯನ್ನು ಜನರು ಮೆಚ್ಚಿದ್ದರೂ, ಕಾಂಗ್ರೆಸ್‌ನಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನಿರಾಕರಣೆಯಿಂದಾಗಿ ಉಂಟಾದ ಅಸಮಾಧಾನವು ಎಸ್‌ಡಿಪಿಐಗೆ ಅವಕಾಶ ಮಾಡಿಕೊಟ್ಟಿತು. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರು ತೀವ್ರ ಪ್ರಚಾರ ನಡೆಸಿದ್ದರೂ, ಕಾಂಗ್ರೆಸ್‌ನ ಅಭಿವೃದ್ಧಿ ಕಾರ್ಯಗಳು ಮತ್ತು ಐದು ಗ್ಯಾರಂಟಿಗಳ ಪ್ರಭಾವವು ಗೆಲುವಿಗೆ ನೆರವಾಯಿತು. ಆದರೆ ಈ ಗೆಲುವು ಸುಲಭವಾಗಿರಲಿಲ್ಲ; ಅದು ಎಲ್ಲಾ ಪಕ್ಷಗಳಿಗೂ ಪಾಠವನ್ನು ಕಲಿಸುತ್ತದೆ.
ಸಮರ್ಥ್ ಶಾಮನೂರು ಅವರ ಮುಂದಿನ ನಡೆ
ಕಿರಿಯ ವಯಸ್ಸಿನಲ್ಲಿ (ದೇಶದ ಎರಡನೇ ಅತಿ ಕಿರಿಯ ಶಾಸಕರಾಗಿ) ಗೆದ್ದ ಸಮರ್ಥ್ ಅವರು ತಮ್ಮ ಅಜ್ಜರ ರಾಜಕೀಯ ಪರಂಪರೆಯನ್ನು ಮುಂದುವರಿಸುವ ಜವಾಬ್ದಾರಿಯಲ್ಲಿದ್ದಾರೆ. ಮುಂದಿನ ನಡೆಯು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೇಂದ್ರೀಕರಣಗೊಳ್ಳಬೇಕು. ದಾವಣಗೆರೆಯಂತಹ ನಗರ-ಗ್ರಾಮೀಣ ಮಿಶ್ರ ಕ್ಷೇತ್ರದಲ್ಲಿ ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ಬಲಪಡಿಸುವುದು ಮುಖ್ಯ. ಶಾಮನೂರು ಕುಟುಂಬದ ಹೆಸರು ಅಭಿವೃದ್ಧಿಗೆ ಸಮಾನವಾಗಿದೆ; ಇದನ್ನು ಮುಂದುವರಿಸಿ, ಎಲ್ಲಾ ಸಮುದಾಯಗಳ ನಡುವೆ ಸೇತುವೆಯಾಗಬೇಕು.
ವಿಶೇಷವಾಗಿ ಅಲ್ಪಸಂಖ್ಯಾತರ ಅಸಮಾಧಾನವನ್ನು ನಿವಾರಿಸುವುದು ಅಗತ್ಯ. ಟಿಕೆಟ್ ವಿವಾದದ ನಂತರ ಉಂಟಾದ ಬಿರುಕುಗಳನ್ನು ತುಂಬುವ ಮೂಲಕ ಏಕತೆಯ ಸಂದೇಶ ನೀಡಬೇಕು. ಯುವಕರಾಗಿರುವುದರಿಂದ ಆಧುನಿಕ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ಪಾರದರ್ಶಕ ಆಡಳಿತದ ಮೂಲಕ ಹೊಸ ಚಿಂತನೆ ತರಬಹುದು. ರಾಜಕೀಯದಲ್ಲಿ ವೈಯಕ್ತಿಕ ದಾಳಿ ಬದಲು ನಿರ್ಮಾಣಾತ್ಮಕ ವಿಮರ್ಶೆಯನ್ನು ಪ್ರೋತ್ಸಾಹಿಸುವುದು ಅವರ ಯಶಸ್ಸಿಗೆ ಕಾರಣವಾಗುತ್ತದೆ. ಜನಸಂಪರ್ಕವನ್ನು ನಿರಂತರವಾಗಿ ಉಳಿಸಿಕೊಂಡು, ಕ್ಷೇತ್ರದ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಪ್ರಸ್ತುತಪಡಿಸುವುದು ಅವರ ಮುಂದಿನ ಗುರಿಯಾಗಬೇಕು. ಗೆಲುವು ಕುಟುಂಬದ ಆಸ್ತಿಯಲ್ಲ, ಜನರ ವಿಶ್ವಾಸದ ಫಲ; ಇದನ್ನು ಕಾಯ್ದುಕೊಳ್ಳುವುದು ದೊಡ್ಡ ಸವಾಲು.
ಬಿಜೆಪಿಯ ಮುಂದಿನ ಸವಾಲುಗಳು
ಬಿಜೆಪಿ ಈ ಚುನಾವಣೆಯಲ್ಲಿ ತೀವ್ರ ಪೈಪೋಟಿ ನೀಡಿದ್ದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್‌ನ ಒಳಜಗಳಗಳನ್ನು ಬಳಸಿಕೊಳ್ಳುವ ಅವಕಾಶವನ್ನು ಪೂರ್ಣವಾಗಿ ಬಳಸಿಕೊಳ್ಳಲು ವಿಫಲವಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ. ಮುಂದೆ ಬಿಜೆಪಿಗೆ ಸವಾಲುಗಳು ಹಲವು: ಮೊದಲನೆಯದು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ನಡುವೆ ವಿಶ್ವಾಸಾರ್ಹತೆಯನ್ನು ಕಟ್ಟುವುದು. ಧ್ರುವೀಕರಣದ ತಂತ್ರಗಳು ಸೀಮಿತ ಯಶಸ್ಸು ನೀಡುತ್ತವೆ ಎಂಬುದು ಈ ಫಲಿತಾಂಶ ಸೂಚಿಸುತ್ತದೆ.
ಕ್ಷೇತ್ರದಲ್ಲಿ ಸ್ಥಳೀಯ ನಾಯಕರನ್ನು ಬಲಪಡಿಸುವುದು, ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಜನಸಂಪರ್ಕ ಹೆಚ್ಚಿಸುವುದು ಅಗತ್ಯ. ರಾಜ್ಯ ಮಟ್ಟದಲ್ಲಿ ಪ್ರತಿಪಕ್ಷದ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಾ, ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವುದು ಮುಂದಿನ ಚುನಾವಣೆಗಳಲ್ಲಿ ನೆರವಾಗುತ್ತದೆ. ಈ ಗೆಲುವು ಕಾಂಗ್ರೆಸ್‌ಗೆ ಎಚ್ಚರಿಕೆಯಾಗಿದ್ದರೆ, ಬಿಜೆಪಿಗೆ ಕ್ರಿಯಾಶೀಲತೆಯ ಅಗತ್ಯವನ್ನು ತೋರಿಸುತ್ತದೆ.
ಎಸ್‌ಡಿಪಿಐ ಮುಂದಿನ ಸವಾಲು
ಎಸ್‌ಡಿಪಿಐ ಈ ಚುನಾವಣೆಯಲ್ಲಿ ಗಮನಾರ್ಹ ಮತಗಳನ್ನು ಪಡೆದು ತನ್ನ ಉಪಸ್ಥಿತಿಯನ್ನು ಸಾಬೀತುಪಡಿಸಿದೆ. ಅಲ್ಪಸಂಖ್ಯಾತರ, ವಿಶೇಷವಾಗಿ ಮುಸ್ಲಿಂ ಸಮುದಾಯದ ಅಸಮಾಧಾನವನ್ನು ಬಳಸಿಕೊಂಡು ತನ್ನ ಮತಬ್ಯಾಂಕ್‌ನ್ನು ವಿಸ್ತರಿಸಿದೆ. ಆದರೆ ಇದು ಸವಾಲುಗಳನ್ನೂ ತಂದಿದೆ. ಮುಂದೆ ಎಸ್‌ಡಿಪಿಐಗೆ ಬ್ರಾಡ್ ಆಪೀಲ್ ಅಗತ್ಯ – ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ, ಆರ್ಥಿಕ-ಸಾಮಾಜಿಕ ನ್ಯಾಯ, ಶಿಕ್ಷಣ ಮತ್ತು ಉದ್ಯೋಗದಂತಹ ವಿಷಯಗಳಲ್ಲಿ ಎಲ್ಲರಿಗೂ ಸ್ಪಂದಿಸುವ ಧೋರಣೆ ಬೆಳೆಸಬೇಕು.
ಚುನಾವಣಾ ಅನಿಯಮಗಳ ಆರೋಪಗಳು ಮತ್ತು ಮುಖ್ಯ ಪಕ್ಷಗಳ ನಡುವಿನ ತಂತ್ರಗಳ ನಡುವೆ ಸಿಲುಕದೆ, ಸ್ವತಂತ್ರ ರಾಜಕೀಯವನ್ನು ಬಲಪಡಿಸುವುದು ಮುಖ್ಯ. ದೀರ್ಘಕಾಲದ ಯಶಸ್ಸಿಗೆ ಸಮುದಾಯಗಳ ನಡುವಿನ ಸೇತುವೆಯಾಗುವುದು ಅಗತ್ಯ; ಇಲ್ಲದಿದ್ದರೆ ಮತ ವಿಭಜನೆಯ ಆರೋಪಗಳು ಮುಂದುವರಿಯುತ್ತವೆ.
ಈ ಫಲಿತಾಂಶವು ಭಾರತೀಯ ಜನತಂತ್ರದ ಜೀವಂತತೆಯನ್ನು ತೋರಿಸುತ್ತದೆ. ಗೆಲುವು ಸಂಭ್ರಮಿಸುವುದರ ಜೊತೆಗೆ, ಸೋಲಿನಿಂದ ಪಾಠ ಕಲಿಯುವುದು ಎಲ್ಲಾ ಪಕ್ಷಗಳ ಕರ್ತವ್ಯ. ಸಮರ್ಥ್ ಶಾಮನೂರು ಅವರು ತಮ್ಮ ಯುವಕರ ಉತ್ಸಾಹ ಮತ್ತು ಕುಟುಂಬ ಪರಂಪರೆಯನ್ನು ಸಂಯೋಜಿಸಿ, ಎಲ್ಲಾ ವರ್ಗಗಳ ಜನರ ಸೇವೆಗೆ ಮುಂದಾಗಬೇಕು. ಕಾಂಗ್ರೆಸ್ ಅಂತರ್ಗತ ಏಕತೆಯನ್ನು ಬಲಪಡಿಸಬೇಕು. ಬಿಜೆಪಿ ಮತ್ತು ಎಸ್‌ಡಿಪಿಐ ತಮ್ಮ ತಂತ್ರಗಳನ್ನು ಪುನರ್ ಪರಿಶೀಲಿಸಿ, ಜನಕೇಂದ್ರಿತ ರಾಜಕೀಯಕ್ಕೆ ಮರಳಬೇಕು.
ದಾವಣಗೆರೆ ದಕ್ಷಿಣದ ಜನರು ಅಭಿವೃದ್ಧಿ ಮತ್ತು ಸಾಮರಸ್ಯವನ್ನು ಬಯಸುತ್ತಾರೆ. ಹೊಸ ಶಾಸಕರು ಈ ನಿರೀಕ್ಷೆಯನ್ನು ಪೂರೈಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸುತ್ತೇವೆ. ರಾಜಕೀಯವು ಸೇವೆಯಾಗಬೇಕೇ ವಿನಾ ಕುಟುಂಬ ಅಥವಾ ಸಮುದಾಯ ದ್ವೇಷದ ಆಟವಾಗಬಾರದು. ಈ ಉಪಚುನಾವಣೆಯ ಪಾಠಗಳು ರಾಜ್ಯದ ಭವಿಷ್ಯದ ಚುನಾವಣೆಗಳಿಗೆ ದಾರಿ ತೋರಿಸುತ್ತವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days agoಹೊಳಲ್ಕೆರೆ | ಸ್ಪೀಚ್ ಸಂಸ್ಥೆ ಸಂಸ್ಥಾಪಕ ಹೆಚ್.ರಾಮಚಂದ್ರಪ್ಪ ನಿಧನ ; ಇಂದು ಅಂತ್ಯಕ್ರಿಯೆ
-
ಅಂಕಣ7 days agoಕವಿತೆ | ದೇವರ ಹೂವು
-
ದಿನದ ಸುದ್ದಿ5 days ago10 ಮುಖ್ಯ ಅಂಶಗಳನ್ನು ಪಾಲಿಸಿ ; ಸಕ್ಕರೆ ಕಾಯಿಲೆಗೆ ಗುಡ್ ಬೈ ಹೇಳಿ..
-
ದಿನದ ಸುದ್ದಿ5 days agoರಾಷ್ಟ್ರೀಯ ಖಾದ್ಯ ತೈಲ ಅಭಿಯಾನ – ಎಣ್ಣೆಕಾಳು ಕಾರ್ಯಕ್ರಮದಡಿ ಸೌಲಭ್ಯ: ಅರ್ಜಿ ಆಹ್ವಾನ
-
ದಿನದ ಸುದ್ದಿ4 days agoವಸತಿ ಯೋಜನೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ5 days agoಉಚಿತ ಕೋಳಿ ಸಾಕಾಣಿಕೆ ತರಬೇತಿ: ಅರ್ಜಿ ಆಹ್ವಾನ
-
ದಿನದ ಸುದ್ದಿ5 days agoಕೃಷಿ ಪಂಡಿತ ಹಾಗೂ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ: ಅರ್ಜಿ ಆಹ್ವಾನ
-
ದಿನದ ಸುದ್ದಿ1 day agoದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

