ದಿನದ ಸುದ್ದಿ
ಕರೋನ ಬಿಕ್ಕಟ್ಟಿನಲ್ಲಿ ಮಕ್ಕಳಿಗೆ ಶಾಲೆ ಬೇಕೆ ಬೇಡವೇ..?
- ಯೋಗೇಶ್ ಮಾಸ್ಟರ್
ಬಹಳಷ್ಟು ಪೋಷಕರಿಗೆ ತಮ್ಮ ಮಕ್ಕಳ ಶಿಕ್ಷಣದ ಮುಂದುವರಿಕೆಯ ಬಗ್ಗೆ ಆತಂಕ ಪ್ರಾರಂಭವಾಗಿದೆ. ಕರೋನಾ ಪ್ರಕರಣಗಳು ನಮ್ಮ ದೇಶದಲ್ಲಿ ಮತ್ತು ರಾಜ್ಯದಲ್ಲಿ ಇಳಿಮುಖವಾಗಿಲ್ಲ. ಈಗ ಮಕ್ಕಳ ಶೈಕ್ಷಣಿಕ ವರ್ಷವೂ ಕೂಡಾ ಮುಂದಿದೆ. ಶಾಲೆಗೆ ಹೋಗುವುದರಿಂದ ಸೋಂಕು ತಗಲಬಹುದೆಂಬ ಭೀತಿ ಸಾಂದರ್ಭಿಕವಾಗಿದೆ ಕೂಡಾ.
ಮಕ್ಕಳ ವಯೋಮಾನಕ್ಕೆ ಅನುಗುಣವಾಗಿ ಶೈಕ್ಷಣಿಕ ವರ್ಷದ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುವುದು.
ಎನ್ ಸಿ ಇ ಆರ್ ಟಿ ಈ ಶೈಕ್ಷಣಿಕ ವರ್ಷಕ್ಕೆ ನಿಶಾಂಕ್ ಎಂದು ಕರೆಯಲಾಗುವ ಕ್ಯಾಲೆಂಡರನ್ನು ಒದಗಿಸಿದೆ.
ಮಕ್ಕಳು ಶಾಲೆಗೆ ಹೋಗದೆಯೇ ಆನ್ ಲೈನ್ ಶಿಕ್ಷಣವನ್ನು ಪಡೆಯುವುದರ ಬಗ್ಗೆ ತನ್ನ ಪಠ್ಯಕ್ರಮದಲ್ಲಿ ಮಾರ್ಪಾಡುಗಳನ್ನು ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವುದರ ಬಗ್ಗೆಯೂ ಕೂಡಾ ಶಿಕ್ಷಣ ಸಂಸ್ಥೆಗಳಿಗೆ ಮತ್ತು ಶಿಕ್ಷಕರಿಗೆ ಮಾರ್ಗದರ್ಶಿ ಸೂಚನೆಗಳನ್ನು ನೀಡಿದೆ.
ಅದರ ಪ್ರಕಾರ ಆಯಾ ಶಿಕ್ಷಣ ಸಂಸ್ಥೆಗಳು ತಮ್ಮ ಶಿಕ್ಷಕ ಸಿಬ್ಬಂದಿಯೊಡನೆ ಯೋಜನೆಗಳನ್ನು ರೂಪಿಸಿಕೊಂಡು ತಮ್ಮ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸಬಹುದಾಗಿದೆ.
ನಿಶಾಂಕ್ ಕಲಿಕೆಯ ಪ್ರತಿಫಲವನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರತಿವಾರಕ್ಕೂ ಯಾವ ರೀತಿಯಲ್ಲಿ ಪಠ್ಯಕ್ರಮವನ್ನು ಅನುಸರಿಸಬೇಕು ಮತ್ತು ಪಾಠವನ್ನು ಯೋಜಿಸಬೇಕು ಎಂದು ನಕಾಶೆಯನ್ನು ರೂಪಿಸಿದೆ. ಅದು ಈ ಮೊದಲು ಇದ್ದ ಪಠ್ಯಕ್ರಮವನ್ನು ಆಧರಿಸಿದ್ದು ಅದಕ್ಕೆ ಪೂರಕವಾಗಿರುವಂತಹ ಸವಾಲುಗಳನ್ನು, ವಿವರಗಳನ್ನು, ಅಧ್ಯಯನಕ್ಕೆ ಪೂರಕವಾಗಿರುವ ವಸ್ತುಗಳನ್ನು ಒಳಗೊಂಡಿರುತ್ತದೆ.
ಹಾಗಾಗಿ ಪೋಷಕರು ಕಂಗಾಲು ಪಡುವುದರ ಅಗತ್ಯವಿಲ್ಲ. ಹಾಗೆಯೇ ಮುಖ್ಯವಾಗಿ ಶಾಲೆಗೆ ನೇರವಾಗಿ ಹೋಗದಿದ್ದರೂ ಅಗತ್ಯವಿರುವ ದಾಖಲಾತಿಯನ್ನು ಮಾಡುವುದು, ಮರುದಾಖಲಾತಿ ಮಾಡಿಸುವುದು, ಶಾಲೆಗೆ ಅಗತ್ಯವಿರುವ ಶುಲ್ಕಗಳನ್ನು ಪಾವತಿ ಮಾಡುವುದು; ಇತ್ಯಾದಿ ಅಧಿಕೃತ ಮತ್ತು ಔಪಚಾರಿಕ ಕಛೇರಿಯ ಕರ್ತವ್ಯಗಳನ್ನು ನೆರವೇರಿಸಬೇಕು.
ಹಾಗೆಯೇ ತೀರಾ ಸಣ್ಣ ಮಕ್ಕಳಾಗಿದ್ದು, ಅಂಗನವಾಡಿ ಅಥವಾ ಪ್ರೀಕೆಜಿ, ಎಲ್ ಕೆ ಜಿ, ಯು ಕೆ ಜಿಗೆ ಹೋಗುವಂತಹ ವಯಸ್ಸಿನ ಮಕ್ಕಳಿಗಾದರೆ ಶಾಲೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಧಾರಾಳವಾಗಿ ಬಿಟ್ಟುಬಿಡಿ. ಒಂದನೆಯ ತರಗತಿಯ ಮಕ್ಕಳಿಗಾದರೆ ದಾಖಲಾತಿ, ಅಧಿಕೃತ ನೋಂದಣಿ ಇತ್ಯಾದಿಗಳ ಪ್ರಕ್ರಿಯೆಗಳ ಬಗ್ಗೆ ಗಮನ ಕೊಟ್ಟಿರಿ.
ಆರು ಅಥವಾ ಏಳನೆಯ ವಯಸ್ಸಿನ ಮಕ್ಕಳಿಗೆ ಶಾಲೆಯಲ್ಲಿ ಅಧಿಕೃತ ದಾಖಲು ಮಾಡಿದ್ದರೂ, ಭೌತಿಕವಾಗಿ ಶಾಲೆಗೆ ಹೋಗದಿದ್ದರೂ ಆ ಶಾಲೆಯಲ್ಲಿ ಅನುಸರಿಸುವ ಪಠ್ಯ ಮಾದರಿ ಅಥವಾ ಸಿಲಬಸ್‍ಗಳ ಬಗ್ಗೆ ತಿಳಿದುಕೊಂಡು ಮನೆಯಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ. ತಾವೇ ಹೇಳಿಕೊಡುವುದು. ಶಾಲೆಯವರು ಆನ್ ಲೈನ್ ತರಗತಿಗಳನ್ನು ಆ ಮಕ್ಕಳಿಗೂ ಮಾಡಿದ್ದರೆ ಉಪಯೋಗಿಸಿಕೊಳ್ಳುವುದು; ಇತ್ಯಾದಿ.
ಮುಖ್ಯವಾಗಿ ಮಕ್ಕಳಿಗೆ ಒತ್ತಡ ರಹಿತವಾಗಿ ಮತ್ತು ನಲಿ ಕಲಿ ಮಾದರಿಯ ಶಿಕ್ಷಣದ ಅಗತ್ಯವಿರುವುದರಿಂದ ಆಟದ ಮೂಲಕ ಪಾಠವಾಗುವಂತೆ ನಿಗಾ ವಹಿಸಿ. ಮನೆಯವರಿಗೂ ಕೂಡಾ ಮಕ್ಕಳಿಗೆ ಯೋಗ್ಯ ಸಮಯ ಅಥವಾ ಕ್ವಾಲಿಟಿ ಟೈಂ ಕೊಡುವುದಕ್ಕೆ ಸೂಕ್ತವಾದ ಅವಕಾಶವಿದು. ಒಂದು ವೇಳೆ ಉದ್ಯೋಗಸ್ಥ ಪೆÇೀಷಕರಾಗಿದ್ದರೆ ಅವರೂ ಕೂಡಾ ತಮ್ಮಲ್ಲಿ ಕೆಲವು ಸೂಕ್ತ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗಿದೆ. ಶಾಲೆಗೆ ಹೋಗುವುದು ನಿಂತರೂ ಶಿಕ್ಷಣ ನಿಲ್ಲಬಾರದು.
ಏಕೆಂದರೆ ಶಿಕ್ಷಣವೆನ್ನುವುದು ಪ್ರಕ್ರಿಯೆಯ ಸ್ವರೂಪದಲ್ಲಿದ್ದು, ಸತತ ರೂಢಿಗೊಳಿಸುವ ಮತ್ತು ತರಬೇತಿ ನೀಡುವ ಸ್ವರೂಪದ್ದಾಗಿರುತ್ತದೆ. ಕಲಿಕೆಯ ರೂಢಿ ಮತ್ತು ಕಲಿಕೆಯ ವಿಷಯಗಳ ಜೊತೆಗೆ ಸಂಪರ್ಕ ತಪ್ಪಬಾರದು. ಶಾಲೆಗೆ ಕಳಿಸುವುದಿಲ್ಲ ಎಂದ ಕೂಡಲೇ ಶಾಲೆಯೊಡನೆ ಸಂಪರ್ಕ ತಪ್ಪಿಸಬಾರದು. ಅಧಿಕೃತವಾದ ದಾಖಲಾತಿ ಅಲ್ಲಿರಬೇಕು.
ಭೌತಿಕವಾಗಿ ಶಾಲೆಗೆ ಹೋಗುವ ಅಗತ್ಯವಿರುವುದಿಲ್ಲ ಅಷ್ಟೇ. ಹಾಗೆಯೇ ಮಕ್ಕಳು ತಮ್ಮ ಕಲಿಕೆಯನ್ನು ತಮ್ಮ ಆಸಕ್ತಿ ಮತ್ತು ಅನುಕೂಲಕರವಾದ ಸಮಯದಲ್ಲಿಯೇ ಮುಂದುವರಿಸಲು ಯೋಜನೆಗಳನ್ನು ರೂಪಿಸಬೇಕು ಮತ್ತು ಆ ದಿನಚರಿಯು ಅಥವಾ ವೇಳಾಪಟ್ಟಿಯು ಸರಿಯಾಗಿ ಅನುಸರಣೆಯಾಗುತ್ತಿದೆ ಎಂಬುದರ ಬಗ್ಗೆ ಗಮನವಿರಬೇಕು.
ಆಚೆ ಈಚೆ ದಿನಚರಿ ಮತ್ತು ವೇಳಾಪಟ್ಟಿಯು ವ್ಯತ್ಯಾಸವಾದರೂ ಪೂರ್ತಿ ನಿರ್ಲಕ್ಷ್ಯಕ್ಕೆ ಒಳಗಾಗುವಂತೆ ಆಗಬಾರದು. ಶಾಲೆಗಳಲ್ಲಿ ಅಸೈನ್ಮೆಂಟ್‍ಗಳನ್ನು ಮತ್ತು ಹೋಂವರ್ಕ್‍ಗಳನ್ನು ಕೂಡಾ ಕೊಡುವುದರಿಂದ ಕಲಿಕೆಯು ಕುಂಠಿತವೇನಾಗುವುದಿಲ್ಲ.
ಎಂಟನೆಯ ತರಗತಿಯ ಮೇಲಾದರೆ, ಆ ಮಕ್ಕಳು ಮುಕ್ತಶಾಲೆಯಲ್ಲಿಯೂ ಕೂಡಾ ಓದಬಹುದು. ಎನ್ ಐ ಓ ಎಸ್ ಮತ್ತು ಖಾನ್ ಅಕಾಡೆಮಿ ಇತ್ಯಾದಿ ಓಪನ್ ಸ್ಕೂಲಿಂಗ್ ಸಿಸ್ಟಮ್ಮುಗಳು ಇವೆ. ಗೂಗಲ್ಲಿನಲ್ಲಿ ವಿವರಗಳನ್ನು ಪಡೆಯಿರಿ.
ಮಕ್ಕಳಿಗೆ ವೇಳಾಪಟ್ಟಿ ತಯಾರಿಸಿ
ನೀವು ನಿಮ್ಮ ಮಕ್ಕಳಿಗೆ ತಯಾರಿಸಿರುವ ವೇಳಾಪಟ್ಟಿಯಲ್ಲಿ ದೈಹಿಕ ವ್ಯಾಯಾಮಕ್ಕೆ ಅವಕಾಶವಾಗುವ ಚಟುವಟಿಕೆಗಳನ್ನು ಸೇರಿಸಿ. ಪ್ಲೇಸ್ಟೋರ್‍ಗಳಲ್ಲಿ ಫಿಟಿಫೈ ನಂತಹ ಸಾಕಷ್ಟು ಆ್ಯಪ್‍ಗಳಿವೆ. ಅರ್ಧ ಗಂಟೆಯಿಂದ ಹಿಡಿದು ಒಂದು ಗಂಟೆಯವರೆಗೂ ಬೇಕಾದಂತೆ ಸಮಯ ನಿಗದಿಪಡಿಸಿಕೊಂಡು ಶಾರೀರಿಕ ವ್ಯಾಯಾಮಗಳನ್ನು ಮಾಡಬಹುದು.
ಭಾಷೆ ಕಲಿಕೆಯ ಬಗ್ಗೆ ಒತ್ತುಕೊಡಿ.
ನಮ್ಮ ಪ್ರಾದೇಶಿಕ ಅಥವಾ ಮಾತೃಭಾಷೆಯ ಕಲಿಕೆಯ ಜೊತೆಗೆ ಅತ್ಯಗತ್ಯವಾಗಿ ಇಂಗ್ಲೀಷ್ ಭಾಷೆಯ ಕಲಿಕೆಗೆ ಹೆಚ್ಚಿನ ಮಹತ್ವ ನೀಡಿ. ಪ್ರತಿದಿನವೂ ಕನ್ನಡ ಮತ್ತು ಇಂಗ್ಲೀಷ್ ಭಾಷೆಯನ್ನು, ಅಗತ್ಯವಿದ್ದಲ್ಲಿ ಹಿಂದಿಯನ್ನೂ ಪಠ್ಯೇತರವಾಗಿ ಕೂಡಾ ಅಭ್ಯಾಸ ಮಾಡಿಸಿ. ಎರಡು ಪುಟಗಳು ಓದುವುದು, ಒಂದು ಪುಟ ಬರೆಯುವುದು, ಉಕ್ತಲೇಖನ ಅಂದರೆ ಡಿಕ್ಟೇಶನ್ ಕೊಡುವುದು, ವ್ಯಾಕರಣ, ಸ್ವಂತ ವಾಕ್ಯರಚನೆಗಳಿಗೆ ಪ್ರೋತ್ಸಾಹಿಸುವುದು; ಇತ್ಯಾದಿಗಳನ್ನೆಲ್ಲಾ ಮಾಡುವುದು ಸೂಕ್ತ. ಭಾಷೆಯಲ್ಲಿ ಅವರಿಗೆ ಆಸಕ್ತಿ ಮತ್ತು ಸಾಮರ್ಥ್ಯ ಬಂದರೆ ಉಳಿದ ವಿಷಯಗಳನ್ನು ಅವರೇ ಅಭ್ಯಾಸ ಮಾಡಲು ಸಾಧ್ಯವಾಗುತ್ತದೆ.
ಮೆದುಳಿಗೆ ಕಸರತ್ತು ನೀಡುವಂತಹ ಆಟಗಳನ್ನು ಆಡಿಸಿ. ಸುಡೊಕು, ಅಂಕಿ ಸಂಕಿ ಸ್ವಾರಸ್ಯವಿರುವಂತ ಆಟಗಳು, ಪದಬಂಧ ಇತ್ಯಾದಿಗಳನ್ನು ಆಡಿಸುವುದು. ಬರೆಯುವ ಆಟಗಳನ್ನು, ಓದುವ ಆಟಗಳನ್ನು ಆಡಿಸಿ. ಎಲ್ಲವನ್ನೂ ಒಂದೇ ದಿನ ಮಾಡಬೇಕೆಂದೇನಿಲ್ಲ. ಒಂದೊಂದು ದಿನ ಒಂದೊಂದು ಇರಲಿ. ಆದರೆ ಈ ನಲಿ ಕಲಿ, ಆಟ ಪಾಠ ಕಾರ್ಯಕ್ರಮ ನಿಲ್ಲದೇ ಇರಲಿ.
ಆಕ್ಟೀವ್ ಆನ್ ಲೈನ್ ತರಗತಿಗಳಲ್ಲಿ ಸಂಗೀತ ಗಾಯನ ಮತ್ತು ವಾದ್ಯಗಳನ್ನು ನುಡಿಸುವುದರ ಬಗ್ಗೆಯೂ ಕೂಡಾ ಉಚಿತ ತರಬೇತಿಗಳಿವೆ. ನೃತ್ಯದ ತರಗತಿಗಳಿವೆ. ಹಾಗೆಯೇ ಇತರ ಕರಕುಶಲ ವಸ್ತುಗಳ ಕುರಿತಾದ ತರಗತಿಗಳೂ, ಚಿತ್ರಬಿಡಿಸುವುದು, ಬಣ್ಣ ತುಂಬುವುದು; ಒಂದೆರಡಲ್ಲ, ಮಕ್ಕಳ ಯಾವುದೇ ಬಗೆಯ ಆಸಕ್ತಿಗೂ ಕೂಡಾ ನಮಗೆ ಮಾರ್ಗದರ್ಶನ ಸಿಗುತ್ತದೆ ಮತ್ತು ನೇರವಾಗಿ ತರಗತಿಗಳೇ ದೊರಕುತ್ತವೆ. ಆದರೆ ಅವುಗಳನ್ನು ನಮ್ಮ ವೇಳಾಪಟ್ಟಿಯಲ್ಲಿ ಅಳವಡಿಸಿಕೊಂಡು ಅನುಸರಿವುದು ನಮ್ಮ ಪಾಲಿನ ಬದ್ಧತೆಯಾಗಿರುತ್ತದೆ.
ವ್ಯಸನದಿಂದ ಬಿಡುಗಡೆ
ಫೋನ್ ವ್ಯಸನದಿಂದ ಮಕ್ಕಳನ್ನು ಬಿಡಿಸಬೇಕು ಎಂಬುದು ಬಹಳ ಪೋಷಕರು ಹೇಳುತ್ತಿರುತ್ತಾರೆ. ಮೊದಲು ಅವರು ಫೋನ್‍ಗಳ ವ್ಯಸನದಿಂದ ಹೊರಗೆ ಬಂದು ಮಕ್ಕಳೊಂದಿಗೆ ಜೊತೆ ಚಟುವಟಿಕೆಗಳಲ್ಲಿ ತೊಡಗುವುದನ್ನು ರೂಢಿಸಿಕೊಳ್ಳಬೇಕು. ಫೋನಿನ ಆಟಗಳಿಗಿಂತ ದೈಹಿಕವಾಗಿ ಪಾಲ್ಗೊಳ್ಳುವ ಆಟಗಳು ನಿಜಕ್ಕೂ ಮಕ್ಕಳಿಗೆ ಖುಷಿ ಕೊಡುತ್ತವೆ.
ನಮ್ಮ ಸಾಮಿಪ್ಯ ಮತ್ತು ನಮ್ಮ ಒಡನಾಟ ಹಾಗೂ ಚಟುವಟಿಕೆಗಳು ಫೋನಿಗಿಂದ ಆಕರ್ಷಕವಾಗಿದ್ದರೆ ಅವರು ಏಕೆ ಫೋನಿನ ಕಡೆಗೆ ಮುಖ ಮಾಡುತ್ತಾರೆ. ಮಕ್ಕಳಿಗೆ ಕುತೂಹಲ ಕೆರಳಿಸುವ ಮತ್ತು ಆನಂದ ನೀಡುವ ಯಾವುದೇ ಚಟುವಟಿಕೆಯಾಗಲಿ ಭಾಗವಹಿಸಲು ಆಸಕ್ತಿ ತೋರುತ್ತಾರೆ.
ನಮ್ಮ ಸಾಮಿಪ್ಯದಲ್ಲಿಯೂ ಮಕ್ಕಳು ಫೋನಿನ ಮೊರೆ ಹೋಗುತ್ತಾರೆಂದರೆ ನಮ್ಮ ಸಾಮಿಪ್ಯದ ಗುಣಮಟ್ಟವನ್ನು ನಾವು ಹೆಚ್ಚಿಸಿಕೊಳ್ಳಬೇಕು ಮತ್ತು ನಮ್ಮ ಚಟುವಟಿಕೆಗಳನ್ನು ಆಕರ್ಷಕಗೊಳಿಸಿಕೊಳ್ಳಬೇಕು ಎಂದೇ ಅರ್ಥ. ನಿರ್ಲಕ್ಷ್ಯ ತೋರಿದರೆ ಮಕ್ಕಳು ಸಂಪೂರ್ಣವಾಗಿ ಫೋನಿಗೆ ವ್ಯಸನಿಗಳಾಗುತ್ತಾರೆ. ಇದೂ ಕೂಡಾ ಮಾದಕ ವ್ಯಸನದಷ್ಟೇ ನಕಾರಾತ್ಮಕವಾದ ಪರಿಣಾಮಗಳನ್ನು ಮನಸ್ಸಿನ ಮೇಲೆ, ಸಂಬಂಧಗಳ ಮೇಲೆ, ಶೈಕ್ಷಣಿಕ ಪ್ರಗತಿಯ ಮೇಲೆ, ಕೊನೆಗೆ ದೇಹದ ಮೇಲೂ ಬೀರುತ್ತದೆ.
ಶೈಕ್ಷಣಿಕ ಕಲಿಕೆಯ ಜೊತೆ ಜೊತೆಗೆ ಜೀವನ ಕೌಶಲ್ಯದ ಶಿಕ್ಷಣವೂ ಕೂಡಾ ಮಕ್ಕಳಿಗೆ ಅಗತ್ಯವಾಗಿರುವುದೇ ಆಗಿದೆ. ಕಸುಬುಗಳು ಮತ್ತು ಉಪಕಸುಬುಗಳಾಗಬಹುದಾದಂತಹ ಕೌಶಲ್ಯದ ಚಟುವಟಿಕೆಗಳಲ್ಲಿ ಮಕ್ಕಳಲ್ಲಿ ಆಸಕ್ತಿ ಬೆಳೆಸಬಹುದು. ಬೇಕಿಂಗ್, ಗಾರ್ಡನಿಂಗ್, ಮರಗೆಲಸ, ಕುಂಬಾರಿಕೆ, ಬಣ್ಣ ಬಳಿಯುವುದು, ಹೈನುಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆ, ಕೃಷಿಯೇ ಮೊದಲಾದ ಕ್ಷೇತ್ರಗಳ ಬಗ್ಗೆ ಪರಿಚಯಾತ್ಮಕವಾದ ಚಟುವಟಿಕೆಗಳಲ್ಲಿ ತೊಡಗಿಸಿ.
ಆಯಾ ಪ್ರಾದೇಶಿಕ ಮತ್ತು ಕೌಟುಂಬಿಕ ಹಿನ್ನೆಲೆಗಳು ಪೂರಕವಾಗಿರುವಂತಹ ಕ್ಷೇತ್ರಗಳಲ್ಲಿ ಗಮನ ಹರಿಸುವಂತೆ ಪ್ರೋತ್ಸಾಹಿಸಿ. ಕಂಪ್ಯೂಟರ್ ಬಳಗೆಯ ಬಗ್ಗೆ ಸೂಕ್ತವಾದ ತರಬೇತಿ ನೀಡುವುದು ಬಹಳ ಒಳ್ಳೆಯದು. ಡಾಟಾ ಎಂಟ್ರಿ, ಟೈಪಿಂಗ್, ಅಕೌಂಟ್ಸ್, ಡಿಜಿಟಲ್ ಡಿಸೈನ್, ಇತ್ಯಾದಿ ಸಾಫ್ಟ್ ಸ್ಕಿಲ್‍ಗಳಲ್ಲಿ ತರಬೇತಿ ನೀಡಬಹುದು. ಯಾವುದೇ ಮಾಡಿದರೂ ವೇಳಾಪಟ್ಟಿಯಲ್ಲಿ ಅವುಗಳಿಗೆ ಸ್ಥಾನವಿರಲಿ ಮತ್ತು ನಿಯಮಿತವಾಗಿ ಅವುಗಳನ್ನು ಅನುಸರಿಸುತ್ತಿದ್ದಾರೆ ಎಂಬುದರ ಬಗ್ಗೆ ನಿಗಾ ಇರಲಿ.
ನೈತಿಕ ಶಿಕ್ಷಣ
ಇನ್ನು ನೈತಿಕ ಶಿಕ್ಷಣ ಬಹಳ ಮಹತ್ವದ್ದು. ನಾವು ಯಾವುದೇ ಬಿಕ್ಕಟ್ಟಿನ ಸ್ಥಿತಿಗಳಲ್ಲಿ ನಮ್ಮ ಆತಂಕಗಳನ್ನು ಹೇಗೆ ನಿಭಾಯಿಸಿಕೊಳ್ಳುತ್ತೇವೆ, ಇತರರೊಂದಿಗೆ ಹೇಗೆ ವರ್ತಿಸುತ್ತೇವೆ, ನಮ್ಮ ಸಂಬಂಧಗಳನ್ನು ಹೇಗೆ ಕಾಪಾಡಿಕೊಳ್ಳುತ್ತೇವೆ ಎಂಬ ಜೀವಂತ ಮಾದರಿಗಳನ್ನು ಮಕ್ಕಳ ಮುಂದಿಡುತ್ತಿರುತ್ತೇವೆ. ಅವರು ತಮಗೇ ಅರಿವಿಲ್ಲದಂತೆ ನಮ್ಮ ಮಾತುಗಳನ್ನು ಪ್ರತಿಧ್ವನಿಸುತ್ತಿರುತ್ತಾರೆ.
ನಮ್ಮ ವರ್ತನೆಗಳಿಗೆ ಪ್ರತಿವರ್ತನೆಗಳನ್ನು ತೋರುತ್ತಿರುತ್ತಾರೆ ಮತ್ತು ನಮ್ಮ ನಡೆ ನುಡಿಗಳನ್ನು ಸೂಕ್ಷ್ಮವಾಗಿ ತಮ್ಮದಾಗಿಸಿಕೊಳ್ಳುತ್ತಿರುತ್ತಾರೆ. ಅವುಗಳು ಸರಿಯಾಗಿದ್ದರೆ ಮುಂದೆ ಅವು ಒಳಿತಾಗಿ ಪರಿಣಮಿಸುತ್ತವೆ. ಸರಿಯಿರದಿದ್ದರೆ ಕೆಟ್ಟದಾಗಿ ಪರಿಣಮಿಸುತ್ತವೆ. ಒಟ್ಟಾರೆ ಅವರ ಮುಂದಿನ ವ್ಯಕ್ತಿತ್ವದ ಪ್ರಕಟಣೆ ಮತ್ತು ವರ್ತನೆಗಳ ಪ್ರದರ್ಶನಕ್ಕೆ ನಾವೇ ಪ್ರೇರಣೆಯಾಗಿರುತ್ತೇವೆ ಎಂಬ ಹೊಣೆಗಾರಿಕೆಯಂತೂ ನಮಗಿರಲಿ.
ಎಲ್ಲರೂ ಮನೆಯಲ್ಲಿ ಇರುವಂತಹ ಈ ಕಾಲದಲ್ಲಿ ದಾಂಪತ್ಯ ಸಂಘರ್ಷಗಳಿಗೆ ಅವಕಾಶವಿಲ್ಲದಿರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾದ ಅಂಶ. ಅಪ್ಪ ಅಮ್ಮ ಜಗಳದಲಿ ಕೂಸು ಬಡವಾಗಬಾರದು. ಈ ಎಚ್ಚರಿಕೆ ಇರಲಿ. ಅಪ್ಪ ಅಮ್ಮನ ಮನೆಯವರ ಬಗ್ಗೆ ನಕರಾತ್ಮಕವಾಗಿ ಮಾತಾಡುವುದು, ಅಮ್ಮ ಅಪ್ಪನ ಸಂಬಂಧಿಗಳ ಬಗ್ಗೆ ಆಡಿಕೊಳ್ಳುವುದು, ಪರಸ್ಪರ ದೋಷಾರೋಪಣೆ ಮಾಡುವುದು, ಅಥವಾ ಯಾವುದೇ ಬಗೆಯ ಸಂಘರ್ಷಗಳು ಮಗುವಿನ ಮನಸ್ಸಿನ ಮೇಲೆ ನಕಾರಾತ್ಮಕವಾದ ಪರಿಣಾಮವನ್ನೇ ಉಂಟುಮಾಡುವುದು. ಈ ಬಗ್ಗೆಯೂ ನಾವು ಎಚ್ಚರಿಕೆ ವಹಿಸಬೇಕಾಗಿದೆ.
ವಾಸ್ತವವಾಗಿ ಗಂಡ ಹೆಂಡತಿ ತಮ್ಮ ಮಕ್ಕಳಿಗೆ ಮಾದರಿಯಾಗುವಂತೆ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಕುಳಿತು ಸೌಜನ್ಯಪೂರ್ವಕವಾಗಿ ಮಾತಾಡಿಕೊಂಡು, ಚರ್ಚೆ ಮಾಡಿಕೊಂಡು, ಸಂವಾದಗಳನ್ನು ಮಾಡಿಕೊಂಡು ಬಗೆ ಹರಿಸಿಕೊಳ್ಳುವುದರಿಂದ ಮಕ್ಕಳಿಗೆ ಒಂದು ಒಳ್ಳೆಯ ಮಾದರಿ ದೊರಕಿದಂತಾಗುತ್ತದೆ.
ಅಷ್ಟೇ ಅಲ್ಲದೇ ಕ್ಷಮೆ ಕೇಳುವುದು, ಕೃತಜ್ಞತೆಗಳನ್ನು ಅರ್ಪಿಸುವುದು, ಕ್ಷಮಿಸುವುದು, ಪಶ್ಚಾತ್ತಾಪ ಪಡುವುದು; ಇತ್ಯಾದಿ ಸಂಬಂಧಗಳನ್ನು ಜೀವಂತವಾಗಿರಿಸಿಕೊಳ್ಳುವ ಮತ್ತು ಮುಂದುವರಿಸುವಂತಹ ಸಕಾರಾತ್ಮಕ ಗುಣಗಳ ಮಾದರಿಗಳನ್ನು ಮಕ್ಕಳಿಗೆ ಕಟ್ಟಿಕೊಡುವುದು ಅತ್ಯಂತ ಉತ್ತಮವಾದ ಕೆಲಸ.
ಅಂತರ್ಜಾಲದ ಸಂಪೂರ್ಣ ಬಳಕೆಗೆ ಸೂಕ್ತ ಕಾಲ:
ಡಿಜಿಟಲ್ ಕಲಿಕೆಗೆ ಮಿತಿ ಇಲ್ಲ. ವಿಶ್ವದ ಅತ್ಯುತ್ತಮ ತರಗತಿಗಳನ್ನು, ಮಾಹಿತಿಗಳನ್ನು ನಾವು ಪಡೆಯಬಹುದು. ವಿಶ್ವದ ಆಗುಹೋಗುಗಳನ್ನು ಗಮನಿಸುವ, ಉತ್ತಮವಾಗಿರುವ ಅಥವಾ ಅಗತ್ಯವಾಗಿರುವ ಕಾರ್ಯಕ್ರಮಗಳನ್ನು ಅನುಸರಿಸುವ ಮತ್ತು ಅನುಕರಿಸುವ ಪ್ರಯೋಗಗಳಿಗೂ ತೊಡಗಿಸಿಕೊಳ್ಳಬಹುದು.
ಸುಳ್ಳು ಸುದ್ಧಿಗಳು ಮತ್ತು ದ್ವೇಷ ಭಾವನೆಗಳಿಗೂ ಸಾಕಷ್ಟು ಪ್ರಮಾಣದಲ್ಲಿ ಮಾದ್ಯಮವಾಗಿರುವ ಈ ಅಂತರ್ಜಾಲದ ಬಗ್ಗೆ ಎಚ್ಚರ ವಹಿಸಬೇಕಾಗಿರುವುದೂ ಅಷ್ಟೇ ಅಗತ್ಯ. ಮಕ್ಕಳಿಗೂ ಜೂಮ್ ಅಥವಾ ಗೂಗಲ್ ಮೀಟಿಂಗಲ್ಲಿ ಅವಕಾಶಗಳನ್ನು ಕಲ್ಪಿಸಿ ಒಂದಿಷ್ಟು ಮಾತುಕತೆಯಾಡಿಸುವ, ತಮ್ಮ ವಿಷಯಗಳನ್ನು ಹಂಚಿಕೊಳ್ಳುವ ಚಟುವಟಿಕೆಗಳು ನಡೆದರೆ, ಮಕ್ಕಳು ತಮ್ಮ ತಮ್ಮಲ್ಲಿ ಪ್ರೇರಣೆಗಳನ್ನು ಹಂಚಿಕೊಳ್ಳುವವರಾಗುತ್ತಾರೆ.
ಬಡವರಿಗೆ ಮತ್ತು ಕೂಲಿ ಕಾರ್ಮಿಕರ ಮಕ್ಕಳಿಗೆ
ಮೇಲೆ ಹೇಳಿರುವಂತಹ ವ್ಯವಸ್ಥೆಯನ್ನು ಒದಗಿಸಿಕೊಳ್ಳಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ ಎಂಬ ಮಾತು ನಿಜ. ಅನಕ್ಷರಸ್ಥ ಸಮೂಹಗಳಿಗೆ, ಇಂತಹ ಸೌಲಭ್ಯಗಳಿಂದ ವಂಚಿತರಾಗಿರುವವರಿಗೆ ಸಮಾಜಮುಖಿ ಗೆಳೆಯರು ಮತ್ತು ಜೀವಪರ ಕಾಳಜಿಯ ಸಂಘಗಳು ಒಂದಿಷ್ಟು ಸಂಘಟಿತವಾಗಿ ಕೆಲಸ ಮಾಡಬೇಕು.
ಕರೋನಾದ ಬಿಕ್ಕಟ್ಟಿನ ಸಮಯದಲ್ಲಿ ಆಹಾರ ಮತ್ತು ಪ್ರಯಾಣ ಇತ್ಯಾದಿ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಕೆಲಸ ಮಾಡಿದಂತೆ, ಬಡ ಮಕ್ಕಳ ಮತ್ತು ನಿರ್ಲಕ್ಷಿತ ಸಮುದಾಯಗಳ ಮಕ್ಕಳ ಶಿಕ್ಷಣಕ್ಕೆ ಗಮನ ಕೊಡಬೇಕಾದ ಅಗತ್ಯವೂ ಮತ್ತು ಅನಿವಾರ್ಯತೆಯೂ ನಮ್ಮ ಮುಂದಿದೆ.
ಸಮಾನ ಆಶಯವುಳ್ಳ ಗೆಳೆಯರ ಸಣ್ಣ ಸಣ್ಣ ಗುಂಪುಗಳು, ಸಂಘ ಸಂಸ್ಥೆಗಳು ಮನಸ್ಸು ಮಾಡಿ ಕೈ ಜೋಡಿಸಿ ಹೊಣೆಹೊತ್ತರೆ ಅಸಾಧ್ಯವೇನಾಗುವುದಿಲ್ಲ.
ವಾಸ್ತವವಾಗಿ ಅವರು ಎದುರಿಸುತ್ತಿರುವ ಸಮಸ್ಯೆ ಮತ್ತು ಕೊರತೆಯನ್ನು ಅವರ ಮುಂದಿನ ಪೀಳಿಗೆಗಳು ಎದುರಿಸದಂತಹ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಂತೆಯೇ ಆಗುತ್ತದೆ.
ವ್ಯಕ್ತಿಗಳು ಒಗ್ಗೂಡಿದರೆ ಹಲವಾರು ಸಂಪನ್ಮೂಲ ವ್ಯಕ್ತಿಗಳ ನೆರವಿನಿಂದ ಯೋಜನೆಗಳನ್ನು ಸಿದ್ಧಪಡಿಸಬಹುದು. ಇಂತಹ ಸಮೂಹದ ಅಥವಾ ವರ್ಗಗಳ ಮಕ್ಕಳಿಗೆ ಶಿಕ್ಷಣವೆಂಬುದು ನಿಜಕ್ಕೂ ಜೀವನ ಭದ್ರತೆ ನೀಡುವಂತದ್ದಾಗಿರುತ್ತದೆ.
ಇಂಗ್ಲೀಷ್ ಕಲಿಕೆ, ಕಂಪ್ಯೂಟರ್ ಬಳಕೆ, ಜೀವನ ಕೌಶಲ್ಯಗಳ ತರಬೇತಿ, ಉತ್ಪಾದಕ ಚಿಂತನೆ ಮತ್ತು ಚಟುವಟಿಕೆಗಳ ಪರಿಚಯ ಮತ್ತು ತರಬೇತಿ ಅವರನ್ನು ಬಹಳಷ್ಟು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಕಾಪಾಡುತ್ತದೆ. ಜೀವನಮಟ್ಟವನ್ನು ಸುಧಾರಿಸಿಕೊಳ್ಳುವುದರಲ್ಲಿ ಈ ತರಬೇತಿಗಳು ಕಾಣ್ಕೆ ನೀಡುತ್ತವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!
ಸುದ್ದಿದಿನ, ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ತನ್ನ 3 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿದೆ. `ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಸಹಕಾರ’ ಎಂಬ ಧ್ಯೇಯದೊಂದಿಗೆ ಆರಂಭವಾದ ಈ ಯೋಜನೆ ಇಂದು ಕೋಟ್ಯಂತರ ಕುಟುಂಬಗಳ ಬದುಕಿಗೆ ಬೆಳಕಾಗಿದೆ.
ಹೌದು! 2023ರ ಆಗಸ್ಟ್‌ನಲ್ಲಿ ಜಾರಿಗೆ ಬಂದ ಈ ಯೋಜನೆಯಡಿ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಪ್ರತಿ ತಿಂಗಳು 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್‌ಗೆ ದೊಡ್ಡ ಆಸರೆಯಾಗಿದೆ ಎಂದೇ ಹೇಳಬಹುದು.
http://Visit : www.suddidina.com
ಗೃಹಜ್ಯೋತಿ ಯೋಜನೆಯ ಸಾಧನೆಯ ಗಿರಿ:
ಇಂಧನ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ರಾಜ್ಯದ್ಯಂತ ಬರೋಬ್ಬರಿ 1.65 ಕೋಟಿ. ಫಲಾನುಭವಿಗಳು ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆ, ಸೇವಾಸಿಂಧು ಪೋರ್ಟಲ್‌ನಲ್ಲಿ ಒಟ್ಟು 1,76,69,368 ಜನರು ನೋಂದಾಯಿಸಿಕೊಂಡಿದ್ದರೆ. ಒಟ್ಟು 2,06,65,451 ಗೃಹಬಳಕೆ ವಿದ್ಯುತ್ ಗ್ರಾಹಕರಿದ್ದಾರೆ. ಅಂದರೆ ಶೇ.85ಕ್ಕಿಂತ ಹೆಚ್ಚು ಗ್ರಾಹಕರು ಈ ಯೋಜನೆಯಡಿ ನೋಂದಾಯಿಸಿಕೊಂಡು ಲಾಭ ಪಡೆಯುತ್ತಿದ್ದಾರೆ.
ಆರ್ಥಿಕವಾಗಿ ನೋಡುವುದಾದರೆ, 2023ರ ಆಗಸ್ಟ್‌ನಿಂದ 2026ರ ಜುಲೈ ವರೆಗೆ, ಕಳೆದ ಮೂರು ವರ್ಷಗಳಲ್ಲಿ ಸರ್ಕಾರವು ಫಲಾನುಭವಿಗಳಿಗೆ ಒಟ್ಟು ₹28,759.54 ಕೋಟಿ ರೂಪಾಯಿ ಸಬ್ಸಿಡಿ ಬಿಡುಗಡೆ ಮಾಡಿದೆ. ಇದು ಸರ್ಕಾರದ ಬದ್ಧತೆ ಮತ್ತು ಜನಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ.
ಕುಟುಂಬದ ಬಜೆಟ್‌ಗೆ ಆಸರೆ, ಉಜ್ವಲ ಭವಿಷ್ಯಕ್ಕೆ ಬುನಾದಿ:
ಪ್ರತಿ ತಿಂಗಳು 1000 ದಿಂದ 1500 ರೂಪಾಯಿಗಳವರೆಗೆ ವಿದ್ಯುತ್ ಬಿಲ್ ಕಟ್ಟುತ್ತಿದ್ದ ಸಾಮಾನ್ಯ ಕುಟುಂಬಗಳಿಗೆ ಈಗ ಆ ಹಣ ಸಂಪೂರ್ಣವಾಗಿ ಉಳಿತಾಯವಾಗುತ್ತಿದೆ. ಈ ಉಳಿತಾಯದ ಹಣವನ್ನು ಅವರು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಇತರ ಅಗತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಗೃಹಿಣಿಯರಿಗೆ ಇದು ಆರ್ಥಿಕವಾಗಿ ದೊಡ್ಡ ನೆರವಾಗಿದೆ.
ಕೇವಲ ಉಚಿತ ವಿದ್ಯುತ್ ನೀಡುವುದಷ್ಟೇ ಅಲ್ಲ, ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದ್ದು, ರಾಜ್ಯದ ಜನರ ಜೀವನಮಟ್ಟ ಸುಧಾರಿಸಿದೆ. ಗೃಹ ಜ್ಯೋತಿ ಯೋಜನೆಯು ಕೇವಲ ಒಂದು ಯೋಜನೆಯಾಗಿ ಉಳಿಯದೆ, ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕುಟುಂಬಗಳನ್ನು ಈ ಯೋಜನೆಯಡಿ ತರಲು ಇಂಧನ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.

ದಿನದ ಸುದ್ದಿ
ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – 20 ಸಾವಿರ ಕೋಟಿ ರೂ. ವೆಚ್ಚದ 8 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರದ ಅಸ್ತು!
ಸುದ್ದಿದಿನ, ಹೊಸದಿಲ್ಲಿ: ದೇಶದ ರೈಲ್ವೆ ಮೂಲಸೌಕರ್ಯಕ್ಕೆ ಬೃಹತ್ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳ 20ಕ್ಕೂ ಹೆಚ್ಚು ಜಿಲ್ಲೆಗಳನ್ನು ಸಂಪರ್ಕಿಸುವ 20,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ 8 ಬಹು ಟ್ರ್ಯಾಕಿಂಗ್ (Multi-Tracking) ರೈಲು ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ (ಸೆ.09) ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಯೋಜನೆಗಳು ಪಿಎಂ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಅನುಷ್ಠಾನಗೊಳ್ಳಲಿವೆ.
http://Visit : www.suddidina.com
ಈ ಯೋಜನೆಗಳಿಂದ ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ಜಾಲವು ಬರೋಬ್ಬರಿ 1,200 ಕಿಲೋಮೀಟರ್‌ಗಳಷ್ಟು ವಿಸ್ತರಣೆಯಾಗಲಿದೆ. ಇದರಿಂದ 6,900ಕ್ಕೂ ಹೆಚ್ಚು ಗ್ರಾಮಗಳಿಗೆ ಸುಧಾರಿತ ಸಂಪರ್ಕ ಸಿಗಲಿದ್ದು, ರೈಲುಗಳ ಕಾರ್ಯಾಚರಣೆಯ ದಕ್ಷತೆ ಮತ್ತು ಸೇವಾ ವಿಶ್ವಾಸಾರ್ಹತೆ ಗಣನೀಯವಾಗಿ ಹೆಚ್ಚಾಗಲಿದೆ.
ಯಾವೆಲ್ಲ ಯೋಜನೆಗಳಿಗೆ ಅನುಮೋದನೆ?
ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದ ಪ್ರಮುಖ ಯೋಜನೆಗಳು ಹೀಗಿವೆ:
1. ಅರಾಕೋಣಂ-ರೇಣಿಗುಂಟಾ ಮತ್ತು ವೈಟ್‌ಫೀಲ್ಡ್-ಬಂಗಾರಪೇಟೆ ನಡುವೆ 3 ಮತ್ತು 4ನೇ ಮಾರ್ಗ: ಇದು ಕರ್ನಾಟಕ ಮತ್ತು ತಮಿಳುನಾಡು, ಆಂಧ್ರಪ್ರದೇಶಕ್ಕೆ ಅತ್ಯಂತ ಮಹತ್ವದ ಯೋಜನೆಯಾಗಿದೆ.
2. ಸಿಕಂದರಾಬಾದ್-ಕಾಜಿಪೇಟೆ ನಡುವೆ ಮಲ್ಟಿ ಟ್ರ್ಯಾಕಿಂಗ್: ತೆಲಂಗಾಣದ ಪ್ರಮುಖ ಮಾರ್ಗದ ದಟ್ಟಣೆ ಕಡಿಮೆ ಮಾಡಲಿದೆ.
3. ಹೊಸೂರು-ಓಮಲೂರು, ಸೇಲಂ-ಕರೂರ್-ದಿಂಡಿಗಲ್ ಜೋಡಿ ಹಳಿ ಯೋಜನೆ: ತಮಿಳುನಾಡು ಮತ್ತು ಕರ್ನಾಟಕದ ಗಡಿ ಭಾಗದ ಸಂಪರ್ಕವನ್ನು ಬಲಪಡಿಸಲಿದೆ.
4. ಖರಗ್‌ಪುರ-ಝಾರ್ಸುಗುಡ ಮತ್ತು ಕತ್ನಿ-ಪೆಂದ್ರ ರಸ್ತೆ ನಡುವೆ 4ನೇ ಮಾರ್ಗ ಮತ್ತು ಬಿಲಾಸ್‌ಪುರ್-ಪೆಂದ್ರ ರಸ್ತೆ ನಡುವೆ 3ನೇ ಮಾರ್ಗ: ಛತ್ತೀಸ್‌ಗಢ, ಒಡಿಶಾ, ಮಧ್ಯಪ್ರದೇಶದ ಕಲ್ಲಿದ್ದಲು ಮತ್ತು ಖನಿಜ ಸಾಗಣೆಗೆ ಸಹಕಾರಿಯಾಗಲಿದೆ.
ಈ ಎಲ್ಲಾ ಯೋಜನೆಗಳು ಕರ್ನಾಟಕ, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ, ಛತ್ತೀಸ್‌ಗಢ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳನ್ನು ಒಳಗೊಳ್ಳಲಿವೆ.
ಕರ್ನಾಟಕಕ್ಕೆ ಏನು ಲಾಭ?
ಈ ಬಹು ಟ್ರ್ಯಾಕಿಂಗ್ ಯೋಜನೆಗಳಿಂದ ಕರ್ನಾಟಕಕ್ಕೆ ಹಲವು ರೀತಿಯಲ್ಲಿ ಅನುಕೂಲವಾಗಲಿದೆ.ಕೈಗಾರಿಕೆಗಳಿಗೆ ಅನುಕೂಲ: ರಾಜ್ಯದ ಉಕ್ಕು ಕಾರ್ಖಾನೆಗಳಿಗೆ ಕಚ್ಚಾ ವಸ್ತುಗಳಾದ ಖನಿಜ ಸಾಗಿಸಲು ವಾಡಿ-ತಂದೂರು, ಮೋಟುಮಾರಿ-ವಿಷ್ಣುಪುರಂ ಮಾರ್ಗದಲ್ಲಿನ ಅಭಿವೃದ್ಧಿಯಿಂದ ಹೆಚ್ಚಿನ ಅನುಕೂಲವಾಗಲಿದೆ. ಹೂಟಗಿ, ಕೂಡಗಿ, ಯಾದ್ಲಾಪುರ, ಬಳ್ಳಾರಿ ಮತ್ತು ಯರಮರಸ್‌ನಲ್ಲಿರುವ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಸಾಗಣೆ ಇನ್ನಷ್ಟು ವೇಗ ಮತ್ತು ಸುಲಭವಾಗಲಿದೆ.
ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ದಟ್ಟಣೆ ಕಡಿಮೆ: ವೈಟ್‌ಫೀಲ್ಡ್-ಬಂಗಾರಪೇಟೆ ನಡುವಿನ 47 ಕಿ.ಮೀ ಉದ್ದದ 3 ಮತ್ತು 4ನೇ ಮಾರ್ಗವು ಅತ್ಯಂತ ದಟ್ಟಣೆಯ ಮನ್ಮಾಡ-ಹುಬ್ಬಳ್ಳಿ-ಬೆಂಗಳೂರು-ಜೋಳರಪೇಟೆ ವಿಭಾಗದಡಿ ಬರುತ್ತದೆ. ಇದು ಬೆಂಗಳೂರು-ಚೆನ್ನೈ ನಡುವಿನ ರೈಲು ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡಿ, ಹೆಚ್ಚಿನ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಿದೆ.
ಪ್ರವಾಸೋದ್ಯಮ ಮತ್ತು ಸರಕು ಸಾಗಣೆಗೆ ಉತ್ತೇಜನ: ಹೊಸೂರು-ಓಮಲೂರು ಜೋಡಿ ಹಳಿ ಮಾರ್ಗದಿಂದ ಕನ್ಯಾಕುಮಾರಿ, ರಾಮೇಶ್ವರಂನಂತಹ ಪುಣ್ಯಕ್ಷೇತ್ರಗಳಿಗೆ ತೆರಳುವ ಲಕ್ಷಾಂತರ ಯಾತ್ರಿಕರಿಗೆ ಅನುಕೂಲವಾಗಲಿದೆ. ಜೊತೆಗೆ ಬೆಂಗಳೂರು ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ಸರಕು ಸಾಗಣೆಯೂ ವೇಗವಾಗಲಿದೆ.ಒಟ್ಟಾರೆಯಾಗಿ, ಈ ಯೋಜನೆಗಳು ಕೇವಲ ರೈಲು ಮಾರ್ಗಗಳ ವಿಸ್ತರಣೆಯಷ್ಟೇ ಅಲ್ಲ, ದೇಶದ ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಪ್ರಾದೇಶಿಕ ಸಂಪರ್ಕಕ್ಕೆ ಹೊಸ ಶಕ್ತಿ ತುಂಬಲಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ದಿನದ ಸುದ್ದಿ
ಡಿಕೆಶಿ ಸರ್ಕಾರಕ್ಕೆ 100 ದಿನಗಳ ಸಂಭ್ರಮ – `ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜು
ಸುದ್ದಿದಿನ, ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ತನ್ನ ಆಡಳಿತದ 100 ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಶತಕದ ಸಂಭ್ರಮವನ್ನು ಆಚರಿಸಲು ರಾಜ್ಯ ಸರ್ಕಾರವು `ದೃಢ ಕರ್ನಾಟಕದ ಸಂಕಲ್ಪ – ಶತಕದ ಪಥ, ಪ್ರಗತಿಯ ರಥ’ ಎಂಬ ವಿಶೇಷ ಮತ್ತು ಅದ್ಧೂರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ಕಾರ್ಯಕ್ರಮವು ನಾಳೆ ಅಂದರೆ 2026ನೇ ಸೆಪ್ಟೆಂಬರ್ 10ರ ಗುರುವಾರ ಬೆಳಿಗ್ಗೆ 10 ಗಂಟೆಗೆ ವಿಧಾನಸೌಧದ ಪ್ರತಿಷ್ಠಿತ ಬ್ಯಾಂಕ್ವೇಟ್ ಸಭಾಂಗಣದಲ್ಲಿ ನಡೆಯಲಿದೆ. ಸರ್ಕಾರದ ನೂರು ದಿನಗಳ ಸಾಧನೆ, ಜನಪರ ಯೋಜನೆಗಳ ಅನುಷ್ಠಾನ ಮತ್ತು ಮುಂದಿನ ಅಭಿವೃದ್ಧಿಯ ದೂರದೃಷ್ಟಿಯನ್ನು ಜನರ ಮುಂದಿಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಗಣ್ಯರ ದಂಡು, ಸಿದ್ದರಾಮಯ್ಯರಿಂದ ಉದ್ಘಾಟನೆ:
ಈ ಶತದಿನೋತ್ಸವ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಇದು ಕಾಂಗ್ರೆಸ್ ಪಕ್ಷದಲ್ಲಿನ ಒಗ್ಗಟ್ಟು ಮತ್ತು ನಾಯಕತ್ವದ ನಿರಂತರತೆಯನ್ನು ಸಂಕೇತಿಸುತ್ತದೆ.
ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ಜಿ. ಪರಮೇಶ್ವರ್, ರಾಜ್ಯ ಸಂಪುಟದ ಎಲ್ಲಾ ಸಚಿವರು, ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ರಾಜ್ಯದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ಭಾಗವಹಿಸಲಿದ್ದಾರೆ. ಇದರ ಜೊತೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಸರ್ಕಾರದ ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ.
http://Visit : www.suddidina.com
ಫಲಾನುಭವಿಗಳೊಂದಿಗೆ ನೇರ ಸಂವಾದ – ಕಾರ್ಯಕ್ರಮದ ಪ್ರಮುಖ ಆಕರ್ಷಣೆ
ಈ ಕಾರ್ಯಕ್ರಮದ ಅತ್ಯಂತ ಪ್ರಮುಖ ಆಕರ್ಷಣೆ ಎಂದರೆ ಮುಖ್ಯಮಂತ್ರಿಗಳೊಂದಿಗೆ ಫಲಾನುಭವಿಗಳ ನೇರ ಸಂವಾದ. ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ, ಯುವನಿಧಿ ಮತ್ತು ಗೃಹಜ್ಯೋತಿ ಯೋಜನೆಗಳ ಫಲಾನುಭವಿಗಳು ಈ ವೇದಿಕೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ದೃಢ ಕರ್ನಾಟಕದ ಸಂಕಲ್ಪ
ಶತಕದ ಪಥ – ಪ್ರಗತಿಯ ರಥ100 ದಿನಗಳು.. ಇದು ಕೇವಲ ಆರಂಭವಷ್ಟೇ. ಜನರ ಆಶಯಗಳಿಗೆ ಸ್ಪಂದಿಸಿ, ರಾಜ್ಯದ ಸಮಗ್ರ ಅಭಿವೃದ್ಧಿಗೆ ವೇಗ ನೀಡುವ ಸಂಕಲ್ಪದೊಂದಿಗೆ ಕಳೆದ 100 ದಿನಗಳಲ್ಲಿ ಹಲವು ಮಹತ್ವದ ಹೆಜ್ಜೆಗಳನ್ನು ಇಡಲಾಗಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ, ಉದ್ಯೋಗ, ತಂತ್ರಜ್ಞಾನ, ಮೂಲಸೌಕರ್ಯ, ಶಿಕ್ಷಣ, ಕೃಷಿ ಹಾಗೂ… pic.twitter.com/NDViSWw6LV
— DK Shivakumar (@DKShivakumar) September 10, 2026
ಕೇವಲ ಗ್ಯಾರಂಟಿ ಯೋಜನೆಗಳಷ್ಟೇ ಅಲ್ಲದೆ, ಸಮಾಜದ ವಿವಿಧ ವರ್ಗಗಳ ಶ್ರಮಿಕರು ಮತ್ತು ಕಾರ್ಮಿಕರು ಕೂಡ ಈ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೃಷಿಕರು, ಆಟೋ ಚಾಲಕರು, ಹಮಾಲಿಗಳು, ಗಿಗ್ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪೌರಕಾರ್ಮಿಕರು ತಮ್ಮ ಬದುಕಿನಲ್ಲಿ ಸರ್ಕಾರದ ಯೋಜನೆಗಳಿಂದ ಆಗಿರುವ ಬದಲಾವಣೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಮುಕ್ತವಾಗಿ ಮಾತನಾಡಲಿದ್ದಾರೆ.
100 ದಿನಗಳಲ್ಲಿ ಸರ್ಕಾರವು ಕೈಗೊಂಡಿರುವ ಜನಪರ ನಿರ್ಧಾರಗಳು, ಅಭಿವೃದ್ಧಿ ಕಾಮಗಾರಿಗಳು ಮತ್ತು ಆಡಳಿತದಲ್ಲಿ ತಂದಿರುವ ಪಾರದರ್ಶಕತೆಯ ಬಗ್ಗೆ ಈ ವೇದಿಕೆಯಲ್ಲಿ ಚರ್ಚೆ ನಡೆಯಲಿದೆ. ಸರ್ಕಾರದ ಸಾಧನೆಗಳನ್ನು ಕೇವಲ ಭಾಷಣದ ಮೂಲಕವಲ್ಲ, ಬದಲಾಗಿ ಫಲಾನುಭವಿಗಳ ಬಾಯಿಂದಲೇ ಜನರಿಗೆ ತಲುಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.
ಮುಂದಿನ ದಿನಗಳಲ್ಲಿ ದೃಢ ಕರ್ನಾಟಕ’ ನಿರ್ಮಾಣದ ನಿಟ್ಟಿನಲ್ಲಿ ಸರ್ಕಾರದ ಮುಂದಿನ 5 ವರ್ಷಗಳ ಕಾರ್ಯಯೋಜನೆ ಮತ್ತು ರೂಪುರೇಷೆಗಳನ್ನು ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಕಟಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

-
ದಿನದ ಸುದ್ದಿ4 days agoಬರ ನಿರ್ವಹಣೆಗೆ ಸಚಿವ ಸಂಪುಟ ಉಪಸಮಿತಿ ಸಭೆ – ದಾವಣಗೆರೆಯಲ್ಲಿ ಕುಡಿಯುವ ನೀರು, ಮೇವು ಕೊರತೆ ಬಗ್ಗೆ ಸಚಿವ ಮಲ್ಲಿಕಾರ್ಜುನ್ ಪ್ರಸ್ತಾಪ
-
ದಿನದ ಸುದ್ದಿ4 days agoರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – 20 ಸಾವಿರ ಕೋಟಿ ರೂ. ವೆಚ್ಚದ 8 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರದ ಅಸ್ತು!
-
ದಿನದ ಸುದ್ದಿ4 days agoಡಿಕೆಶಿ ಸರ್ಕಾರಕ್ಕೆ 100 ದಿನಗಳ ಸಂಭ್ರಮ – `ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜು
-
ದಿನದ ಸುದ್ದಿ4 days agoಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!
-
ದಿನದ ಸುದ್ದಿ4 days ago5 ವರ್ಷದಿಂದ PFಗೆ ಹಣ ಜಮಾ ಮಾಡಿಲ್ಲ, ಬಡ್ಡಿ ಸಿಗುತ್ತಾ? ಇಲ್ಲಿದೆ EPFO ನಿಯಮದ ಸ್ಪಷ್ಟ ಮಾಹಿತಿ!
-
ದಿನದ ಸುದ್ದಿ4 days agoಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಇನ್ಮುಂದೆ ಓಲಾ, ಉಬರ್ ಆ್ಯಪ್ನಲ್ಲೇ ಬಿಎಂಟಿಸಿ ಬಸ್ ಟ್ರ್ಯಾಕಿಂಗ್ ಮತ್ತು ಟಿಕೆಟ್ ಬುಕಿಂಗ್!
-
ದಿನದ ಸುದ್ದಿ4 days agoಭದ್ರೆ ಆಗಮನದಿಂದ ರೈತರಲ್ಲಿ ಹೊಸ ಭರವಸೆ – ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ
-
ದಿನದ ಸುದ್ದಿ4 days agoವಿಶೇಷ ಚೇತನ ಮಕ್ಕಳು ದೇವರ ಮಕ್ಕಳು – ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್



