Connect with us

ದಿನದ ಸುದ್ದಿ

ಕೋವಿದ್19-ಪಾಠ ಕಲಿಯದ ಸಮಾಜ, ದಾರಿ ತಿಳಿಯದ ಸರ್ಕಾರ..!

Published

on

  • ನಾ ದಿವಾಕರ

ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲೇ ಭಾರತ ಮತ್ತೊಮ್ಮೆ ಸಾಂಕೇತಿಕ ಆಚರಣೆಗಳಿಗೆ ಮೊರೆ ಹೋಗುತ್ತಿದೆ. ಕರ್ನಾಟಕ ಸರ್ಕಾರ ಮಾಸ್ಕ್ ದಿನಾಚರಣೆ ಆಚರಿಸುವ ಮೂಲಕ ಜಾಗೃತಿ ಮೂಡಿಸಲು ಮುಂದಾಗುತ್ತಿದೆ. ಕೇಂದ್ರ ಸರ್ಕಾರ ಯೋಗದಿನವನ್ನು ಮನೆಯಲ್ಲೇ ಆಚರಿಸಲು ನಿರ್ಧರಿಸಿದೆ.

ಜೂನ್ 1 ರಿಂದ ಆರ್ಥಿಕ ಪುನಶ್ಚೇತನದ ದೃಷ್ಟಿಯಿಂದ ಲಾಕ್ ಡೌನ್ ಸಡಿಲಗೊಳಿಸಿರುವುದು ಕೊರೋನಾ ಕ್ಷಿಪ್ರ ಗತಿಯಲ್ಲಿ ವ್ಯಾಪಿಸಲು ನೆರವಾಗುತ್ತಿರುವುದು ಸ್ಪಷ್ಟ. ಅರ್ಥವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡುವ ದೃಷ್ಟಿಯಿಂದ ಲಾಕ್ ಡೌನ್ ಸಡಿಲಗೊಳಿಸಿರುವುದನ್ನು ಆಕ್ಷೇಪಿಸಲಾಗುವುದಿಲ್ಲ. ಆದರೆ ಜನಸಾಮಾನ್ಯರ ಬದುಕು ದುಸ್ತರವಾಗಿರುವ ಸಂದರ್ಭದಲ್ಲಿ ಆರೋಗ್ಯ ರಕ್ಷಣೆಯ ಬಗ್ಗೆಯೂ ಗಮನಹರಿಸುವುದು ಅತ್ಯವಶ್ಯ.

ಎರಡು ತಿಂಗಳ ಕಟ್ಟುನಿಟ್ಟಿನ ಲಾಕ್ ಡೌನ್ ಅವಧಿಯಲ್ಲಿ ಜನರು ಮತ್ತು ಸರ್ಕಾರಗಳು ಸಾಕಷ್ಟು ಪಾಠ ಕಲಿಯಬಹುದಿತ್ತು. ಒಂದು ಸಾಂಕ್ರಾಮಿಕ ರೋಗ ಹೇಗೆ ಇಡೀ ವ್ಯವಸ್ಥೆಯ ಬುಡವನ್ನೇ ಅಲುಗಾಡಿಸಿಬಿಡುತ್ತದೆ ಎನ್ನುವುದನ್ನು ಸರ್ಕಾರ ಈ ವೇಳೆಗೆ ಅರ್ಥಮಾಡಿಕೊಂಡಿರಬೇಕು. ಸ್ವತಂತ್ರ ಭಾರತದಲ್ಲಿ ಯಾವ ಸರ್ಕಾರಗಳೂ ಎದುರಿಸದ ಸಂದರ್ಭವನ್ನು ಇಂದು ನಾವು ಎದುರಿಸುತ್ತಿದ್ದೇವೆ.

ಈ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆಗೆ ಅನುಭವದ ಕೊರತೆ ಎದ್ದು ಕಾಣುವುದು ಸಹಜ. ಅಧಿಕಾರದಲ್ಲಿರುವ ಸರ್ಕಾರಗಳಲ್ಲಿ ಗೊಂದಲ ಇರುವುದೂ ಸಹಜ. ಈ ಆತಂಕ ಮತ್ತು ಗೊಂದಲಗಳನ್ನು ನಿವಾರಿಸುವ ಮಾರ್ಗೋಪಾಯಗಳು ನಮ್ಮ ನಡುವೆಯೇ ಇವೆ. ಸರ್ಕಾರದ ಮತ್ತು ಜನತೆಯ ಕಣ್ಣು ಕಿವಿ ಸಕ್ರಿಯವಾಗಿರಬೇಕಷ್ಟೇ.

ಕೊರೋನಾ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡಿಕೊಳ್ಳುವುದು ಅತಿ ಮುಖ್ಯವಾದ ಎಚ್ಚರಿಕೆಯ ಮಾರ್ಗ. ಆದರೆ ಲಾಕ್ ಡೌನ್ ಸಡಿಲಿಕೆಯಾದ ಕೂಡಲೇ ಜನರು ಧರಿಸುತ್ತಿರುವ ಮಾಸ್ಕ್ ಸಹ ಸಡಿಲವಾಗಿ, ಕುತ್ತಿಗೆಗೆ ಜಾರುತ್ತಿರುವುದನ್ನು ಎಲ್ಲೆಡೆ ಕಾಣಬಹುದು. ಯುವ ಜನತೆ ಈ ನಿಟ್ಟಿನಲ್ಲಿ ಬಹುದೊಡ್ಡ ಅಪರಾಧಿಗಳಂತೆ ಕಾಣುತ್ತಾರೆ.

ಶೇ 80ರಷ್ಟು ಜನರು ಮಾಸ್ಕ್ ಧರಿಸದೆಯೇ ಓಡಾಡುವುದನ್ನು ಎಲ್ಲೆಡೆ ಕಾಣಬಹುದು. ಮಾರುಕಟ್ಟೆಗಳಲ್ಲಿ, ಸಂತೆಪೇಟೆಗಳಲ್ಲಿ ಯಾವುದೇ ವ್ಯಾಪಾರಿ ಮಾಸ್ಕ್ ಧರಿಸುವುದನ್ನು ಕಾಣಲಾಗುವುದಿಲ್ಲ. ಹೆಚ್ಚು ಜಾಗೃತರಾಗಬೇಕಾದ ವಿದ್ಯಾರ್ಥಿ ಯುವಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಲ್ಲಿ ವಿಫಲರಾಗುತ್ತಿದ್ದಾರೆ. ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸಲಾಗುವುದು ಎನ್ನುವ ಎಚ್ಚರಿಕೆ ಬಹುಶಃ ಹಾಳೆಯ ಮೇಲೆ ಉಳಿದಿದೆ. ಮಾರುಕಟ್ಟೆಯ ಮಳಿಗೆಗಳತ್ತ ಒಮ್ಮೆ ಗಮನ ಹರಿಸಿದರೆ ದಂಡದ ಹೊಳೆಯೇ ಹರಿದುಬಿಡುತ್ತದೆ.

ಲಾಕ್ ಡೌನ್ ಅವಧಿಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ವಾಹನಗಳು ಈಗ ಸ್ತಬ್ಧವಾಗಿವೆ. ಅಂಗಡಿ ಮುಂಗಟ್ಟುಗಳ ಮುಂದೆ ಅನುಸರಿಸಬೇಕಾದ ದೈಹಿಕ ಅಂತರದ ನಿಯಮಗಳು ಮಾಯವಾಗಿವೆ. ಸಮಾರಂಭಗಳಿಗೆ ವಿಧಿಸಿದ್ದ ನಿರ್ದಿಷ್ಟ ಜನರ ಹಾಜರಿಯ ನಿಯಮ ಬಹುಶಃ ಅಧಿಕಾರಶಾಹಿಯ ನಿರ್ಲಕ್ಷ್ಯತೆ ಮತ್ತು ಪಕ್ಷಪಾತ ಧೋರಣೆಗೆ ಬಲಿಯಾಗಿದೆ.

ಸುತ್ತಲೂ ನಡೆಯುತ್ತಿರುವ ವಿವಾಹ, ನಿಶ್ಚಿತಾರ್ಥ ಮುಂತಾದ ಸಮಾರಂಭಗಳನ್ನು ಗಮನಿಸಿದರೆ ಸರ್ಕಾರದ ನಿಯಮಗಳು ಜಾರಿಯಲ್ಲಿವೆಯೇ ಎಂದು ಅನುಮಾನ ಮೂಡುತ್ತದೆ. ಇನ್ನು ಈ ನಿಯಮಗಳನ್ನು ಉಲ್ಲಂಘಿಸುವುದರಲ್ಲಿ ನಮ್ಮ ರಾಜಕೀಯ ನಾಯಕರೇ ಮುಂಚೂಣಿಯಲ್ಲಿದ್ದಾರೆ. ರಾಜ್ಯ ಆರೋಗ್ಯ ಸಚಿವರೇ ಮುಂದಾಳತ್ವ ವಹಿಸಿರುವುದನ್ನು ಕಂಡಿದ್ದೇವೆ.

ಕಾನೂನು ನಿಯಮ ರೂಪಿಸುವ ಜನಪ್ರತಿನಿಧಿಗಳೇ ನಿಯಮ ಉಲ್ಲಂಘಿಸಿದರೆ ಜನಸಾಮಾನ್ಯರು ಹೇಗೆ ಪಾಲಿಸಲು ಸಾಧ್ಯ ? ಮಾಸ್ಕ್ ದಿನಾಚರಣೆ ಆಚರಿಸುವ ಮುನ್ನ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಕುರಿತು ಯೋಚಿಸಬೇಕಲ್ಲವೇ ? ಸರ್ಕಾರ ಒಂದಾದಮೇಲೊಂದರಂತೆ ಕರಾಳ ಶಾಸನಗಳನ್ನು ಜಾರಿಗೊಳಿಸುತ್ತಾ ರೈತರ, ಕಾರ್ಮಿಕರ, ಬಡ ಜನರ ಕತ್ತುಹಿಸುಕುತ್ತಿರುವ ಸಂದರ್ಭದಲ್ಲಿ ಪ್ರತಿಭಟನಕಾರರು ಸರ್ಕಾರದ ನಿಯಮಗಳನ್ನು ಬದ್ಧತೆಯಿಂದ ಅನುಸರಿಸುತ್ತಿದ್ದಾರೆ. ಆದರೆ ನಿಯಮ ರೂಪಿಸುವ ಸಚಿವರು, ರಾಜಕೀಯ ನಾಯಕರು ಉಲ್ಲಂಘಿಸುತ್ತಿದ್ದಾರೆ. ಇದು ಹೊಣೆಗೇಡಿತನದ ಪರಮಾವಧಿ ಅಲ್ಲವೇ ?

ಕೃಷಿ ಕ್ಷೇತ್ರವನ್ನೇ ಸಾರಾ ಸಗಟಾಗಿ ಹರಾಜು ಹಾಕಲು ಸಜ್ಜಾಗಿರುವ ಸರ್ಕಾರದ ನೀತಿಯ ವಿರುದ್ಧ ದನಿ ಎತ್ತುವ ರೈತ ಸಮುದಾಯದ ಪ್ರತಿಭಟನೆಗೆ , ಲಾಕ್ ಡೌನ್ ನಿಯಮ ಮುಂದಿಟ್ಟುಕೊಂಡು, ಅವಕಾಶ ನೀಡದ ಸರ್ಕಾರ ರಾಜಕೀಯ ನಾಯಕರ ಕೌಟುಂಬಿಕ ಸಮಾರಂಭಗಳಿಗೆ, ಪಕ್ಷದ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದು ಸರ್ಕಾರದ ಹೊಣೆಗೇಡಿತನ ಅಲ್ಲವೇ ?

ಕೋವಿದ್ ವಿರುದ್ಧದ ಹೋರಾಟದಲ್ಲಿ ಮುಂದಾಳತ್ವ ವಹಿಸಬೇಕಾದ ಆರೋಗ್ಯ ಸಚಿವರು ಯಾವುದೇ ಲಾಕ್ ಡೌನ್ ನಿಯಮ ಪಾಲಿಸದೆ ಮೆರವಣಿಗೆ ನಡೆಸುತ್ತಾರೆ. ಮತ್ತೊಬ್ಬ ಶಾಸಕರು ನೂರಾರು ಜನರನ್ನು ಸೇರಿಸಿ ಮಗಳ ಮದುವೆ ನಡೆಸುತ್ತಾರೆ. ಮುಖ್ಯಮಂತ್ರಿಯೇ ಕೊರೋನಾ ಹೋಗಲಾಡಿಸಲು ಧನ್ವಂತರಿ ಹೋಮ ನಡೆಸುತ್ತಾರೆ. ಈ ರೀತಿಯ ಹೊಣೆಗೇಡಿತನದ ನಡುವೆ ಜನಸಾಮಾನ್ಯರಿಂದ ನಿಯಮ ಪಾಲನೆ ಅಪೇಕ್ಷಿಸುವುದಾದರೂ ಹೇಗೆ ?

ಲಾಕ್ ಡೌನ್ ಕೊರೋನಾ ಹರಡುವುದನ್ನು ತಡೆಗಟ್ಟುವ ಒಂದು ಮಾರ್ಗ ಮಾತ್ರ ಎನ್ನುವುದು ಸರ್ಕಾರಕ್ಕೂ ತಿಳಿದಿದೆ. ಕೊರೋನಾ ವಿರುದ್ಧ ಹೋರಾಡಲು ಬೇಕಿರುವುದು ವೈದ್ಯಕೀಯ ಸೌಲಭ್ಯ ಮತ್ತು ಜನಸಾಮಾನ್ಯರ ಜಾಗೃತಿ. ಈ ಜಾಗೃತಿ ಮೂಡಿಸಲು ಸಾಕಷ್ಟು ಮಾನವ ಶ್ರಮವೂ ಅಗತ್ಯ. ಒಂದು ದಿನ ಎಲ್ಲರೂ ಮಾಸ್ಕ್ ಧರಿಸಿದರೆ ಅಂದು ಶಂಖ ಜಾಗಟೆ ಸದ್ದು ಮಾಡಿದಂತೆಯೇ ಆಗುತ್ತದೆ.

ಅಥವಾ ಧನ್ವಂತರಿ ಹೋಮದಿಂದ ಕೊರೋನಾ ಹೋಗುವುದೇ ಆಗಿದ್ದರೆ ಎರಡು ತಿಂಗಳ ಕಾಲ ದೇವಸ್ಥಾನಗಳ ಬಾಗಿಲು ಬಡಿದಿದ್ದೇಕೆ ? ಮೊದಲ ದಿನವೇ ಎಲ್ಲೆಡೆ ಹೋಮ ನಡೆಸಿದ್ದರೆ ಭಾರತದಲ್ಲಿ 9000 ಜನರ ಪ್ರಾಣವಾದರೂ ಉಳಿಯುತ್ತಿತ್ತಲ್ಲವೇ ? ದೇವಸ್ಥಾನದ ದರ್ಶನವಿಲ್ಲದೆಯೂ ಮನುಷ್ಯ ಬದುಕಬಹುದು ಎಂದು ನಿರೂಪಿಸಿರುವ ಆ ಸೂಕ್ಷ್ಮ ವೈರಾಣುವಿನ ವಿರುದ್ಧ ಹೋಮ ಯಜ್ಞದ ಮೂಲಕ ಹೋರಾಡುವುದನ್ನು ನೋಡಿದರೆ ನಮಗಿಂತಲೂ ಕೊರೋನಾ ಹೆಚ್ಚು ಬುದ್ಧಿಮತ್ತೆ ಹೊಂದಿದೆ ಎನ್ನಬಹುದೇನೋ !

ಯಾವುದೇ ಸರ್ಕಾರಕ್ಕೆ ಒಂದು ಸಾರ್ವಜನಿಕ ನೀತಿ ನಿಯಮಗಳನ್ನು ರೂಪಿಸುವ ಮುನ್ನ ಸಮಾಜದ ಗ್ರಹಿಕೆಯ ಸಾಮಥ್ರ್ಯದ ಅರಿವೂ ಇರಬೇಕು. ನಮ್ಮ ಸುತ್ತಲಿನ ಸಮಾಜ ವೈಜ್ಞಾನಿಕ ಅಂಶಗಳನ್ನು ಎಷ್ಟರ ಮಟ್ಟಿಗೆ ಅರ್ಥಮಾಡಿಕೊಳ್ಳುತ್ತದೆ ಎನ್ನುವ ಪ್ರಜ್ಞೆಯೂ ಆಡಳಿತ ವ್ಯವಸ್ಥೆಗೆ ಇರಬೇಕು.

ಸರ್ಕಾರದ ವತಿಯಿಂದ ಕೊರೋನಾ ಹೋಗಲಾಡಿಸಲು ಹೋಮ ಯಜ್ಞ ನಡೆಸಿ, ಸಾಮಾನ್ಯ ಜನರಿಗೆ ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಪಾಡಿಕೊಳ್ಳಿ ಎಂದು ಹೇಳಿದರೆ ಹೇಗೆ ತಾನೇ ಕೇಳಿಯಾರು ? ಅವರೂ ದೇವಸ್ಥಾನಗಳ ಮೊರೆ ಹೋಗುತ್ತಾರೆ.

ಜ್ಯೋತಿಷಿಗಳ, ಪಂಡಿತರ ಮೊರೆ ಹೋಗುತ್ತಾರೆ. ಮೂರು ತಿಂಗಳಿಂದ ವ್ಯಾಪಾರ ಇಲ್ಲದೆ ಬಸವಳಿದಿರುವ ದೇವಾಲಯಗಳಿಗೆ ಲಾಭ ಹೆಚ್ಚಾಗುತ್ತದೆ. ವೈಚಾರಿಕತೆ ಸಾಯುತ್ತದೆ. ಕೊರೋನಾ ಶಾಶ್ವತವಾಗಿ ನಮ್ಮ ನಡುವೆ ಉಳಿಯುತ್ತದೆ. ಈ ಪರಿಜ್ಞಾನ ಸರ್ಕಾರಕ್ಕೆ, ಅಧಿಕಾರಶಾಹಿಗೆ ಇರಬೇಕಲ್ಲವೇ ?

ಮೂರು ತಿಂಗಳ ನಂತರ ಕೊರೋನಾ ಸಮಾಜದ ಎಲ್ಲ ವರ್ಗಗಳನ್ನೂ ಕಾಡುತ್ತಿದೆ. ಭಾರತದ 600ಕ್ಕೂ ಹೆಚ್ಚು ಜಿಲ್ಲೆಗಳಿಗೆ ವ್ಯಾಪಿಸಿದೆ. ಗ್ರಾಮಗಳಿಗೂ ವ್ಯಾಪಿಸುತ್ತಿದೆ. ನಗರ ಪ್ರದೇಶಗಳಲ್ಲಿ ಹಿತವಲಯಗಳನ್ನೂ ಪ್ರವೇಶಿಸಿದೆ. ಇತ್ತೀಚಿನ ದಿನಗಳಲ್ಲಿ ಸಿ ಆರ್ ಪಿ ಎಫ್ ಯೋಧರು, ಪೊಲೀಸ್ ಸಿಬ್ಬಂದಿ, ಸರ್ಕಾರಿ ನೌಕರರು, ಆಶಾ ಕಾರ್ಯಕರ್ತೆಯರು, ವೈದ್ಯರು, ಶುಶ್ರೂಷಕಿಯರು ಹೀಗೆ ಕೊರೋನಾ ವಾರಿಯರ್ಸ್ ಎಂದು ಹೆಮ್ಮೆಯಿಂದ ಕರೆಯಲ್ಪಡುವವರಿಗೂ ಕೊರೋನಾ ಸೋಂಕು ಕಾಡುತ್ತಿದೆ.

ಇದು ಆಡಳಿತ ವ್ಯವಸ್ಥೆಯ ನಿರ್ಲಜ್ಜ ನಿರ್ಲಕ್ಷ್ಯದ ದ್ಯೋತಕ ಎನಿಸುವುದಿಲ್ಲವೇ ? ಮುಂಚೂಣಿಯಲ್ಲಿ ನಿಂತು ಕೊರೋನಾ ಹರಡದಂತೆ ಎಚ್ಚರ ವಹಿಸುವ ಸಿಬ್ಬಂದಿಗೆ ಸೂಕ್ತ ರಕ್ಷಣಾ ಉಪಕರಣಗಳನ್ನು ಒದಗಿಸಿದ್ದಲ್ಲಿ ಈ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿತ್ತಲ್ಲವೇ ?

ತನ್ನೊಳಗಿನ ಕೊರತೆಯ ಪರಿಜ್ಞಾನ ಇಲ್ಲದಿದ್ದರೆ ಅಥವಾ ಇದ್ದರೂ ಸ್ವೀಕರಿಸುವ ಮನಸ್ಥಿತಿ ಇಲ್ಲದಿದ್ದರೆ ಯಾವುದೇ ವ್ಯಕ್ತಿಯೂ ಊರ್ಜಿತವಾಗುವುದಿಲ್ಲ. ಇದು ಒಂದು ದೇಶದ ಸರ್ಕಾರ, ಆಡಳಿತ ವ್ಯವಸ್ಥೆಗೂ ಅನ್ವಯಿಸುತ್ತದೆ. ಭಾರತ ಸರ್ಕಾರ ಇದೇ ಪ್ರಮಾದ ಎಸಗುತ್ತಿದೆ.

ಕೊರೋನ ವೈರಾಣುವಿನ ಸಮುದಾಯ ಪ್ರಸರಣ ಮಾರ್ಚ್ ತಿಂಗಳಲ್ಲೇ ಅರಂಭವಾಗಿದೆ ಎಂದು ಹಲವಾರು ವೈದ್ಯಕೀಯ ತಜ್ಞ ವರದಿಗಳು ಹೇಳುತ್ತಲೇ ಇದ್ದರೂ ನಿರಾಕರಿಸುತ್ತಲೇ ಇರುವ ಸರ್ಕಾರ , ಸಮುದಾಯ ಪ್ರಸರಣದ ವಿರುದ್ಧ ಹೋರಾಡಲು ಅಗತ್ಯವಾದ ರೂಪುರೇಷೆಗಳನ್ನೂ ರೂಪಿಸದೆ ಜನಸಾಮಾನ್ಯರನ್ನು ಅಪಾಯದ ಕೂಪಕ್ಕೆ ತಳ್ಳುತ್ತಿದೆ. ಭಾರತದಲ್ಲಿ ಅಥವಾ ಕರ್ನಾಟಕದಲ್ಲಿ ಇತರೆಡೆಗೆ ಹೋಲಿಸಿದರೆ ಸಾವಿನ ಪ್ರಮಾಣ, ಸೋಂಕಿನ ಪ್ರಮಾಣ ಕಡಿಮೆ ಇದೆ ಎಂದು ಬೆನ್ನುತಟ್ಟಿಕೊಳ್ಳಲು ಇದು ಐಪಿಎಲ್ ಕ್ರಿಕೆಟ್ ಪಂದ್ಯ ಅಲ್ಲ, ಅಲ್ಲವೇ ?

ಇದು ಅಮಾಯಕ ಜೀವಗಳ ಪ್ರಶ್ನೆ. ಅಸಹಜ ಸಾವಿನ ಪ್ರಶ್ನೆ. 9000 ಸಾವುಗಳು ಸಾವೇ ಅಲ್ಲ ಎನ್ನಲಾಗುವುದೇ ? ಒಂದು ಜೀವ ಅಸಹಜವಾಗಿ ಅಸುನೀಗಿದರೂ ಮಿಡಿಯುವ ಮನಸು ಮಾತ್ರ ಸಂಯಮಶೀಲ ಸಮಾಜವನ್ನು ಕಟ್ಟಲು ಸಾಧ್ಯ, ಸಂವೇದನಾಶೀಲ ಸಮಾಜವನ್ನು ರೂಪಿಸಲು ಸಾಧ್ಯ. ಒಂದು ಚುನಾಯಿತ ಸರ್ಕಾರಕ್ಕೂ ಇದೇ ವ್ಯವಧಾನ, ಸಂಯಮ, ಸಂವೇದನೆ ಇರಬೇಕು.

ಸಾವನ್ನು ಲೆಕ್ಕಿಸದ ಸರ್ಕಾರ ಮಾರುಕಟ್ಟೆಯ ದಲ್ಲಾಳಿಯಂತೆ ಕಾಣುತ್ತವೆ. ಭಾರತದಂತಹ ಸಮಾಜದಲ್ಲಿ ಇಂತಹ ಸರ್ಕಾರಗಳು ಇನ್ನೂ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುತ್ತವೆ. ಪ್ರಾಥಮಿಕ ಆರೋಗ್ಯ ರಕ್ಷಣೆಯ ಪರಿವೆಯೇ ಇಲ್ಲದ ಅಸಂಖ್ಯಾತ ಜನಸಮುದಾಯ ನಮ್ಮ ನಡುವೆ ಇದೆ ಏಕೆಂದರೆ ಈ ಅರಿವು ಮೂಡಿಸುವ ಪ್ರಯತ್ನವನ್ನು ನಮ್ಮ ಸರ್ಕಾರಗಳು ಮಾಡಿಯೇ ಇಲ್ಲ.

ಇಂತಹ ಒಂದು ಸಂದರ್ಭದಲ್ಲಿ ನಾವು ಕೊರೋನಾದಂತಹ ಮಾರಣಾಂತಿಕ ಪಿಡುಗು ಎದುರಿಸುತ್ತಿದ್ದೇವೆ. ಮೂರು ತಿಂಗಳ ಅವಧಿಯಲ್ಲಿ ಜನಸಾಮಾನ್ಯರೂ ಸಾಕಷ್ಟು ಪಾಠ ಕಲಿಯಬಹುದಿತ್ತು. ಆದರೆ ಸುಶಿಕ್ಷಿತರೂ ಪಾಠ ಕಲಿತಿಲ್ಲ ಎನ್ನುವುದು ಮೇಲ್ನೋಟಕ್ಕೇ ತಿಳಿಯುತ್ತಿದೆ. ಸಭೆ, ಸಮಾರಂಭ, ಕೌಟುಂಬಿಕ ಸಂಭ್ರಮಗಳಿಗೆ ಸೇರುವ ಜನದಟ್ಟಣೆಯನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ.

ಜಿಲ್ಲಾಧಿಕಾರಿಗಳೋ, ಪೊಲೀಸ್ ಆಯುಕ್ತರೋ ಶಿಫಾರಸು ಮಾಡಿಬಿಟ್ಟರೆ ಎಷ್ಟು ಜನರನ್ನು ಬೇಕಾದರೂ ಜಮಾಯಿಸಬಹುದು ಎನ್ನುವ ಭ್ರಷ್ಟ ಚಿಂತನೆಯ ನಡುವೆಯೇ ಈ ಸಮಾರಂಭಗಳು ನಡೆಯುತ್ತಿವೆ. ಆದರೆ ಕೊರೋನಾ ವೈರಾಣುವಿಗೆ ಇದರ ಪರಿಜ್ಞಾನ ಇರುವುದಿಲ್ಲ. ಮದುವೆ ಮನೆಯಲ್ಲಿ ಹರಡುವ ವೈರಾಣು ಧನ್ವಂತರಿ ಹೋಮದ ನಡುವೆಯೂ ಹರಡುತ್ತದೆ ರಾಜಕೀಯ ಸಭೆಯಲ್ಲೂ ಹರಡುತ್ತದೆ. ಬಹುಪಾಲು ಜನರು ಮಾಸ್ಕ್ ಧರಿಸುವುದನ್ನು ಮರೆತಿದ್ದಾರೆ, ದೈಹಿಕ ಅಂತರ ಸಂಪೂರ್ಣ ಇಲ್ಲವಾಗಿದೆ.

ಇದನ್ನು ಜಾರಿಗೊಳಿಸುವುದು ಹೇಗೆ ? ಇದು ಸರ್ಕಾರದ ಮುಂದಿರುವ ಸವಾಲು. ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸುವುದಾಗಿ ಘೋಷಿಸಲಾಗಿದ್ದರೂ ಇದನ್ನು ಗಮನಿಸುವವರಾರು ? ಅಷ್ಟು ಪೊಲೀಸ್ ಸಿಬ್ಬಂದಿ ನಮ್ಮಲ್ಲಿದೆಯೇ ? ಲಾಕ್ ಡೌನ್ ಅವಧಿಯಲ್ಲಿ ಲಭ್ಯವಿದ್ದ ಪೊಲೀಸ್ ಸಿಬ್ಬಂದಿ ಈಗ ತಮ್ಮ ನಿತ್ಯ ಕರ್ತವ್ಯದಲ್ಲಿ ನಿರತರಾಗಿರುತ್ತಾರೆ.

ಆಸ್ಪತ್ರೆಗಳಲ್ಲೂ ಈ ನಿಯಮಗಳ ಉಲ್ಲಂಘನೆಯಾಗುತ್ತಿರುವುದನ್ನು ಗಮನಿಸಬಹುದು. ಇಲ್ಲಿ ಜನತೆಗೆ ಬುದ್ಧಿ ಇಲ್ಲ ಎನ್ನುವುದೊಂದೇ ಮಂತ್ರವಾಗಬಾರದು. ಜನರಲ್ಲಿ ವಿಶ್ವಾಸ ಮೂಡಿಸುವಂತಹ ಜಾಗೃತಿಯ ಪ್ರಯತ್ನಗಳು ನಡೆಯುತ್ತಿವೆಯೇ ಎಂದು ಯೋಚಿಸಬೇಕಾಗುತ್ತದೆ. ನಿಯಮ ಪಾಲನೆಯನ್ನು ಗಮನಿಸುವ ಸಿಬ್ಬಂದಿಯನ್ನು ನಿಯೋಜಿಸಲಾಗಿದೆಯೇ ಎನ್ನುವುದೂ ಮುಖ್ಯವಾಗುತ್ತದೆ.

ಸರ್ಕಾರಕ್ಕೆ ಎಲ್ಲೆಡೆಯೂ ಕಾಡುವುದು ಸಿಬ್ಬಂದಿಯ ಕೊರತೆ. ಆರೋಗ್ಯ ಕ್ಷೇತ್ರದಲ್ಲಿ ವೈದ್ಯರ ಕೊರತೆಯೇ ತೀವ್ರವಾಗಿದೆ. ಇಡೀ ಭಾರತದಲ್ಲಿ ಒಟ್ಟು 19 ಲಕ್ಷ ಆಸ್ಪತ್ರೆಯ ಹಾಸಿಗೆಗಳಿವೆ, 95 ಸಾವಿರ ಐಸಿಯು ಹಾಸಿಗೆಗಳಿವೆ, 47 ಸಾವಿರ ವೆಂಟಿಲೇಟರ್ ಗಳಿವೆ. ಇವುಗಳ ಪೈಕಿ ಶೇ 60ರಷ್ಟು ಖಾಸಗಿ ಆಸ್ಪತ್ರೆಗಳಲ್ಲಿವೆ. ಶೇ 74ರಷ್ಟು ವೈದ್ಯರು ನಗರಗಳಲ್ಲಿನ ಶೇ 28ರಷ್ಟು ಜನತೆಗೆ ಸೇವೆ ಸಲ್ಲಿಸುತ್ತಿದ್ದಾರೆ.

ಇನ್ನುಳಿದ ಶೇ 26ರಷ್ಟು ವೈದ್ಯರು ಶೇ 72 ಜನರ ಕಾಳಜಿ ವಹಿಸಬೇಕಿದೆ. ಒಂದು ಅಂದಾಜಿನ ಪ್ರಕಾರ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ನಕಲಿ ವೈದ್ಯರಿದ್ದಾರೆ. ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲೂ ಸಿಬ್ಬಂದಿಯ ಸಂಖ್ಯೆ ಅವಶ್ಯಕತೆಗೆ ಅನುಗುಣವಾಗಿಲ್ಲ ಎನ್ನುವುದು ಸ್ಪಷ್ಟ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಕೊರೋನಾ ಸಂದರ್ಭದಲ್ಲೂ ಯಾವುದೇ ಪ್ರಯತ್ನ ನಡೆಯದಿರುವುದು ಈ ದೇಶದ ದುರಂತ.

ಈ ಗೊಂದಲಗಳು ಮತ್ತು ನಿರಾಕರಣೆಯ ರಾಜಕಾರಣದ ನಡುವೆಯೇ ದೇಶ ಸಹಜ ಸ್ಥಿತಿಗೆ ಮರಳುತ್ತಿದೆ. ಜನಸಾಮಾನ್ಯರ ಆತಂಕಗಳನ್ನು ಎಂದಿಗೂ ಗಂಭೀರವಾಗಿ ಪರಿಗಣಿಸದ ನಮ್ಮ ದೇಶದ ಆಡಳಿತ ವ್ಯವಸ್ಥೆ ಕೊರೊನಾ ಸಂದರ್ಭದಲ್ಲೂ ಇದೇ ನೀತಿ ಅನುಸರಿಸುತ್ತಿದೆ. ಗಡಿ ಸಂಘರ್ಷ, ಯುದ್ಧೋನ್ಮಾದ, ಆತ್ಮನಿರ್ಭರತೆ ಇವೆಲ್ಲದರ ನಡುವೆಯೂ ನಾವು ಒಂದು ವಿನಾಶಕಾರಿ ವೈರಾಣುವಿನೊಡನೆ ಸೆಣಸಬೇಕಿದೆ.

ಹೆಚ್ಚುತ್ತಿರುವ ಸಾವು, ಸೋಂಕಿತರ ಸಂಖ್ಯೆ ಜನಸಾಮಾನ್ಯರನ್ನು ಆತಂಕಕ್ಕೆ ದೂಡಿದೆ. ಈ ಆತಂಕದ ನಡುವೆಯೇ ಜನರು ಬದುಕು ಸವೆಸಬೇಕಿದೆ. ಬಹುಶಃ ಶಾಲಾ ಮಕ್ಕಳೂ ಈ ಸನ್ನಿವೇಶವನ್ನು ಎದುರಿಸಲಿದ್ದಾರೆ. ಒಂದು ದೇಶದ ಆರೋಗ್ಯ ವ್ಯವಸ್ಥೆ ಸುಸ್ಥಿತಿಯಲ್ಲಿ ಇಲ್ಲದಿದ್ದರೆ ಏನಾಗುತ್ತದೆ ಎಂಬ ಪ್ರಶ್ನೆಗೆ ಕೊರೋನಾ ಉತ್ತರ ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕವಿ ನೆನಪು: ನಾಡೋಜ ಡಾ.ಸಿದ್ಧಲಿಂಗಯ್ಯ- ಆನ್‌ಲೈನ್ ವೆಬಿನಾರ್ ಕಾರ್ಯಕ್ರಮ

Published

on

ಸುದ್ದಿದಿನ ಡೆಸ್ಕ್ : ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ ಇದರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹರಪನಹಳ್ಳಿ ಕನ್ನಡ ವಿಭಾಗ ಇದರ ಸಹಯೋಗದಲ್ಲಿ ‘ಕವಿ ನೆನಪು: ನಾಡೋಜ ಡಾ.ಸಿದ್ಧಲಿಂಗಯ್ಯ’ ಆನ್‌ಲೈನ್ ವೆಬಿನಾರ್ ಕಾರ್ಯಕ್ರಮವನ್ನು ಭಾನುವಾರ ಆಯೋಜಿಸಲಾಗಿತ್ತು.

ಗಂಗಾವತಿಯ ಗಾಯಕಿ ಕು.ರಂಜನಿ ಆರತಿಯವರು ಡಾ.ಸಿದ್ಧಲಿಂಗಯ್ಯ ಅವರ ಕವಿತೆಯ ಗಾಯನದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಸಾಹಿತಿಗಳು, ಚಿಂತಕರು ಆದ ಡಾ.ಎಚ್.ಟಿ.ಪೋತೆಯವರು ಕವಿ ಡಾ.ಸಿದ್ಧಲಿಂಗಯ್ಯ ಅವರ ಬದುಕು, ಹೋರಾಟ ಹಾಗೂ ಸಾಹಿತ್ಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕನ್ನಡ ಉಪನ್ಯಾಸಕರಾದ ಡಾ.ಕೆ.ಎ.ಓಬಳೇಶ್ ಅವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಎನ್.ಎಂ.ನಾಗರಾಜ್ ಅವರು ಉಪಸ್ಥಿತರಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ.ಎಸ್.ಷಣ್ಮುಖನಗೌಡ ಅವರು ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕರಾದ ಶ್ರೀ ಕೆ.ಎಂ.ಹುಚ್ಚರಾಯಪ್ಪ ಅವರು ಸ್ವಾಗತಿಸಿದರು, ಉಪನ್ಯಾಸಕ ಮಂಜುನಾಥ್ ವಂದಿಸಿದರು. ಕಾಲೇಜಿನ ಎಲ್ಲಾ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಜುಲೈ 5 ರವರೆಗೆ ಲಾಕ್‍ಡೌನ್ ಮುಂದುವರಿಕೆ : ಏನಿರತ್ತೆ..? ಏನಿರಲ್ಲ..?

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಸತತವಾಗಿ ಏರಿಕೆಯಾಗುತ್ತಿರುವುದರಿಂದ ಜೂ.21 ರ ಬೆಳಿಗ್ಗೆ 6 ಗಂಟೆಯಿಂದ ಜುಲೈ 5 ರ ಬೆಳಿಗ್ಗೆ 5 ಗಂಟೆಯವರೆಗೆ ಲಾಕ್‍ಡೌನ್ ಮುಂದುವರೆಯಲಿದ್ದು ಕೋವಿಡ್-19ರ ಮಾರ್ಗಸೂಚಿಗಳ ಪಾಲನೆಯ ಷರತ್ತಿಗೆ ಒಳಪಟ್ಟು ಬಸ್‍ಗಳ ಆಸನದ ಗರಿಷ್ಠ ಶೇ.50ರ ಸಾಮಥ್ರ್ಯದೊಂದಿಗೆ ಬಸ್ ಸಂಚಾರಕ್ಕೆ ಅನುಮತಿಸಿದೆ.ಪ್ರಯಾಣಿಕರು ಬಸ್‍ಗಳಲ್ಲಿ ನಿಂತು ಪ್ರಯಾಣಿಸಲು ಅವಕಾಶವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.

ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಹಿನ್ನೆಲೆ ಹೊರಡಿಸಲಾಗಿರುವ ನಿರ್ಬಂಧ/ಮಾರ್ಗಸೂಚಿಗಳ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರತಿ ದಿನ ರಾತ್ರಿ 7 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ರಾತ್ರಿ ಕಫ್ರ್ಯೂ ಇರಲಿದ್ದು, ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ವಾರಂತ್ಯದ ಕಫ್ರ್ಯೂ ಜಾರಿ ಮಾಡಲಾಗಿದೆ. ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ.6.37 ರಷ್ಟಿದ್ದು ಮುಂದಿನ ಎರಡು ಮೂರು ದಿನಗಳಲ್ಲಿ ಶೇ.5 ರೊಳಗೆ ತರಲು ಪ್ರಯತ್ನಿಸಲಾಗುತ್ತಿದೆ.

ಹೊಸ ನಿಬಂಧನೆಗಳನ್ವಯ ಕೆಲವು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಸರ್ಕಾರದ ಆದೇಶದಂತೆ ಬಿಡುಗಡೆ ಮಾಡಿದ್ದು, ಜು.5 ರವರೆಗೆ ಜಾರಿಯಲ್ಲಿರುತ್ತದೆ. ಎಲ್ಲಾ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಆದರೆ, ಸರಕು ಸಾಗಾಣಿಕೆ ವಾಹನಗಳಿಗೆ ಸಂಚಾರಕ್ಕೆ ಅವಕಾಶವಿರುವ ಹಿನ್ನಲೆಯಲ್ಲಿ ಸದರಿ ವಾಹನಗಳು ಸರಕುಗಳನ್ನು ರಶೀದಿಯಲ್ಲಿ ನಮೂಧಿತ ವಿಳಾಸದ ಅಂಗಡಿ ಮತ್ತು ಗೋದಾಮುಗಳಲ್ಲಿ ಇಳಿಸಲು ಮತ್ತು ತೆಗೆದುಕೊಂಡು ಹೋಗಲು ಮಾತ್ರ ದಿನ ಪೂರ್ತಿ ಅವಕಾಶ ನೀಡಲಾಗಿದೆ.

ಕೃಷಿ ಉಪಕರಣ ಬಾಡಿಗೆ ಕೇಂದ್ರಗಳಿಗೆ, ಯಂತ್ರೋಪಕರಣಗಳಿಗೆ ಸಂಬಂಧಿಸಿದ ಅಂಗಡಿಗಳು ಮತ್ತು ಗೋದಾಮುಗಳು ಸೇರಿದಂತೆ ಎಲ್ಲಾ ಕೃಷಿ ಮತ್ತು ತತ್ಸಂಬಂಧಿತ ಕಾರ್ಯಚಟುವಟಿಕೆಗಳಿಗೆ ಅನುಮತಿಸಿದೆ ಹಾಗೂ ಸಿಬ್ಬಂದಿಗಳು ಕೃಷಿ ಕೈಗಾರಿಕಾ ಸಂಸ್ಥೆಗಳು ನೀಡಿದ ಅರ್ಹ ಗುರುತಿನ ಚೀಟಿ, ಅಧಿಕೃತ ಪತ್ರವನ್ನು ತೋರಿಸುವ ಮೂಲಕ ಓಡಾಡುವುದಕ್ಕೆ ಅನುಮತಿಸಿದೆ.

ಕೃಷಿ ಚಟುವಟಿಕೆಗಳಿಗೆ ಅನುವಾಗುವಂತೆ ಅಗತ್ಯ ವಸ್ತುಗಳಾದ ಬೀಜ, ಗೊಬ್ಬರ, ಕೀಟ ನಾಶಕಗಳು, ಕೃಷಿ ಕೋಯ್ಲು ಯಂತ್ರೋಪಕರಣಗಳ ಸಾಗಣೆ ಮತ್ತು ಸಂಬಂಧಿಸಿದ ಅಂಗಡಿಗಳನ್ನು ಸೋಮವಾರ ದಿಂದ ಶುಕ್ರವಾರದವರೆಗೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಸಲು ಅನುಮತಿಸಿದೆ.

ಸಾರ್ವಜನಿಕರು ತುರ್ತು ಅಗತ್ಯ ಚಟುವಟಿಕೆಗಳಿಗೆ ವಾಹನಗಳಲ್ಲಿ ಸಂಚರಿಸಲು ಅವಕಾಶ ನೀಡಿದೆ. ಅನಗತ್ಯವಾಗಿ ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ. ನಿಗಧಿತ ಮದುವೆ ಕಾರ್ಯಕ್ರಮಗಳನ್ನು ನಡೆಸಲು, ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆದು ಗರಿಷ್ಠ 40 ಹತ್ತಿರದ ಸಂಬಂಧಿಗಳು ಮಾತ್ರ ಭಾಗವಹಿಸಿ ಅವರುಗಳ ಮನೆಯಲ್ಲಿ ಮದುವೆ ಕಾರ್ಯಕ್ರಮ ನಡೆಸಲು ಅವಕಾಶ ನೀಡಲಾಗಿದೆ. ಈ ಮದುವೆಗಳಲ್ಲಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ನಿರ್ಬಂಧಿಸಲಾಗಿದೆ. ಉಳಿದ ಎಲ್ಲಾ ಸಾಮಾಜಿಕ, ಧಾರ್ಮಿಕ ಸಭೆ ಸಮಾರಂಭಗಳನ್ನು ನಿರ್ಬಂಧಿಸಲಾಗಿದೆ.

ಅಂತ್ಯಸಂಸ್ಕಾರ ಅಥವಾ ಶವ ಸಂಸ್ಕಾರಗಳಲ್ಲಿ ಗರಿಷ್ಟ 5 ಜನರಿಗೆ ಮಾತ್ರ ಭಾಗವಹಿಸಲು ಅನುಮತಿಸಿದೆ. ದಾವಣಗೆರೆ ಜಿಲ್ಲೆಗೆ ಅಗಮಿಸುವವರನ್ನು ಪ್ರತೀ ಚಕ್ ಪೋಸ್ಟ್‍ಗಳಲ್ಲಿ ವಿಚಾರಣೆ ನಡೆಸಿ, ಜಿಲ್ಲೆಯಲ್ಲಿಯೇ ವಾಸ್ತವ್ಯ ಹೂಡುವುದಾದಲ್ಲಿ ಎಲ್ಲಿ ತಂಗುತ್ತಾರೆ ಎಂಬ ಬಗ್ಗೆ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆನ್ನು ಪಡೆದುಕೊಳ್ಳುವುದು ಹಾಗೂ ಹೊರ ಜಿಲ್ಲೆಯಿಂದ ಆಗಮಿಸುವವರು ಕಡ್ಡಾಯವಾಗಿ 14 ದಿನಗಳ ಕಾಲ ಹೋಂ ಕ್ವಾರಂಟೈನ್‍ನಲ್ಲಿ ಇರತಕ್ಕದ್ದು.

ವಾಹನ ಬಳಕೆಯನ್ನು ತುರ್ತು ವೈದ್ಯಕೀಯ ಸೇವೆಗಳಿಗೆ ಮಾತ್ರ ಬಳಸಬಹುದು, ವೈದ್ಯಕೀಯ ದಾಖಲೆಗಳನ್ನು ಚೆಕ್ ಪೋಸ್ಟ್‍ಗಳಲ್ಲಿ ತೋರಿಸತಕ್ಕದ್ದು. ಇತರೆ ಎಲ್ಲಾ ಖಾಸಗಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ವೈದ್ಯಕೀಯ ಹಾಗೂ ಆಯುಷ್ ಹಾಗೂ ಪಶು ವೈದ್ಯಕೀಯ ಆಸ್ಪತ್ರೆಗಳು ಸೇರಿದಂತೆ ತುರ್ತು ಸೇವೆಗಳ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಕರ್ತವ್ಯ ನಿಮಿತ್ತ ಓಡಾಟಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ಆದರೆ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ತಪಾಸಣಾ ಸಿಬ್ಬಂಧಿಗಳಿಗೆ ಹಾಜರುಪಡಿಸಬೇಕಾಗುತ್ತದೆ.

ಖಾಸಗಿ ಭದ್ರತಾ ಸೇವೆಗಳಿಗೆ ಅನುಮತಿಸಲಾಗಿದೆ. ಕ್ಲಿನಿಕ್, ಆಸ್ಪತ್ರೆ, ಲಸಿಕೆ ಹಾಗೂ ಪರೀಕ್ಷೆ ಉದ್ದೇಶಗಳಿಗೆ ಕನಿಷ್ಟ ವೈದ್ಯಕೀಯ ದಾಖಲೆಗಳು, ವೈದ್ಯ ಸಲಹಾ ಚೀಟಿ, ಆಸ್ಪತ್ರೆಯಲ್ಲಿ ದಾಖಲಾದ ವಿವರಗಳ ರುಜುವಾತಿನೊಂದಿಗೆ ಸಂಚರಿಸಲು ಅನುಮತಿಸಿದೆ. ಹೋಟೆಲ್, ರೆಸ್ಟೋರೆಂಟ್‍ಗಳು, ಉಪಹಾರ ಗೃಹಗಳು ಪಾರ್ಸಲ್ ಸೇವೆಗಳನ್ನು ಗ್ರಾಹಕರ ಮನೆ ಬಾಗಿಲಿಗೆ ವಿತರಿಸಲು ಮಾತ್ರ ಅನುಮತಿಸಲಾಗಿದೆ. ಯಾವುದೇ ರೀತಿಯ ಪಾರ್ಸ್‍ಲ್‍ಗಳನ್ನು ಗ್ರಾಹಕರು ನೇರವಾಗಿ ಖರೀದಿಸಲು ಅವಕಾಶವಿರುವುದಿಲ್ಲ.

ಕೋವಿಡ್-19ಕ್ಕೆ ಸಂಬಂಧಿಸಿದ ಕಾರ್ಯಕ್ಕೆ ನಿಯೋಜಿಸಿದ ಎಲ್ಲಾ ಕಛೇರಿಗಳು, ಅಧಿಕಾರಿಗಳು ಹಾಗೂ ಸಿಬ್ಬಂಧಿಗಳು ಸರ್ಕಾರದ ಆದೇಶದಂತೆ ಮೇ.7 ರಂತೆ ಕಾರ್ಯನಿರ್ವಹಿಸಬಹುದು. ಆದರೆ, ಈ ಕಚೇರಿಗಳಿಗೆ ಸಾರ್ವಜನಿಕರ ಭೇಟಿಯನ್ನು ನಿರ್ಬಂಧಿಸಲಾಗಿದೆ. ಜಿಲ್ಲೆಯಲ್ಲಿ ಕಚೇರಿ ವೇಳೆಯನ್ನು ಮೀರಿ ತಮ್ಮ ಕರ್ತವ್ಯಗಳಿಗೆ ಹಾಜರಾಗುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಜಿಲ್ಲೆಯ ನ್ಯಾಯಾಂಗದ ಅಧಿಕಾರಿ, ಸಿಬ್ಬಂದಿಗಳು ತಮ್ಮ ಅಧಿಕೃತ ಗುರುತಿನ ಚೀಟಿಯನ್ನು ತೋರಿಸಿ ಸಂಚರಿಸುವುದಕ್ಕೆ ಅನುಮತಿಸಿದೆ.

ಭಾರತ ಸರ್ಕಾರದ, ಅದರ ಸ್ವಾಯತ್ತ, ಅಧೀನ ಸಂಸ್ಥೆಗಳ ಮತ್ತು ಸಾರ್ವಜನಿಕ ನಿಗಮಗಳ ಕಛೇರಿಗಳಾದ ದೂರಸಂಪರ್ಕ, ಅಂಚೆ ಕಛೇರಿ, ಬ್ಯಾಂಕುಗಳು, ಆರ್‍ಬಿಐ ನಿಯಂತ್ರಿತ ಹಣಕಾಸು ಸಂಸ್ಥೆಗಳು, ರೈಲ್ವೇ ಮತ್ತು ತತ್ಸಂಬಂಧಿತ ಕಾರ್ಯಾಚರಣೆಗಳು ಕನಿಷ್ಟ ಸಿಬ್ಬಂದಿಗಳೊಂದಿಗೆ ಮಾತ್ರ ಕಾರ್ಯನಿರ್ವಹಿಸತಕ್ಕದ್ದು.
ಟ್ಯಾಕ್ಸ್ ಅಡಿಟರ್ ಹಾಗೂ ಟ್ಯಾಕ್ಸ್ ಪ್ರಾಕ್ಟಿಷನರಗಳ ಕಚೇರಿಗಳು ಕಾರ್ಯನಿರ್ವಹಿಸಲು ಅನುಮತಿಸಿದೆ.

ಸರ್ಕಾರೇತರ ಸಂಸ್ಥೆಗಳ ಕಚೇರಿಗಳು, ಇತರೆ ಎಲ್ಲಾ ಕಚೇರಿಗಳ ಸಿಬ್ಬಂದಿಗಳು ಮನೆಯಿಂದಲೇ ಕೆಲಸ ನಿರ್ವಹಿಸಬಹುದು. ತುರ್ತು ಸೇವೆಗಳಿಗೆ ಸಂಬಂಧಪಟ್ಟ ಇಲಾಖೆಗಳನ್ನು ಹೊರತುಪಡಿಸಿ ಉಳಿದ ಸರ್ಕಾರಿ ಹಾಗೂ ಅರೆ ಸರ್ಕಾರಿ ಮತ್ತು ಖಾಸಗಿ ಕಚೇರಿಗಳ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂಧಿಗಳು ಮನೆಯಿಂದಲೇ ಕೆಲಸ ನಿರ್ವಹಿಸುವುದು.

ಹಾಲು, ಡೈರಿ, ಹಾಲಿನ ಬೂತು, ಪಶು ಆಹಾರ ಅಂಗಡಿಗಳು, ಕಿರಾಣಿ ಅಂಗಡಿಗಳು, ದಿನಸಿ, ಹಣ್ಣು ತರಕಾರಿಗಳು, ಮಾಂಸ ಮತ್ತು ಮೀನು ಹಾಗೂ ಎಲ್ಲಾ ಮದ್ಯದ ಅಂಗಡಿಗಳು ಮತ್ತು ಸಿಎಲ್-4 ಸನ್ನದು ಹೊಂದಿರುವ ಕ್ಲಬ್‍ಗಳಲ್ಲಿ ಪಾರ್ಸ್‍ಲ್ ಸೇವೆ ಮಾತ್ರ ಅವಕಾಶ.

ಕಟ್ಟಡ ಕಾಮಗಾರಿ, ದುರಸ್ತಿಗೆ ಸಂಬಂಧಿಸಿದ ವಸ್ತುಗಳನ್ನು ಪೂರೈಸುವ ಎಲ್ಲಾ ಅಂಗಡಿಗಳು (ಸಿಮೆಂಟ್, ಕಬ್ಬಿಣ, ಪೇಂಟ್ಸ್, ಹಾರ್ಡವೇರ್, ಗ್ಲಾಸ್, ಪ್ಲೆ-ವುಡ್, ಸಾಮಿಲ್ಸ್, ಎಲೆಕ್ಟ್ರೀಕಲ್ಸ್, ಪೈಪ್ಸ್, ಟೈಲ್ಸ್/ಮಾರ್ಬಲ್ಸ್, ಸ್ಯಾನಿಟರಿ ವೇರ್ಸ್), ಕನ್ನಡಕದ ಅಂಗಡಿಗಳು, ಪಡಿತರ ನ್ಯಾಯಬೆಲೆ ಅಂಗಡಿಗಳು ಕೋವಿಡ್-19 ನಿರ್ವಹಣೆಯ ಸಂಬಂಧ ಹೊರಡಿಸಲಾದ ರಾಷ್ಟ್ರೀಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೆ ಒಳಪಟ್ಟು ಸೋಮವಾರ ದಿಂದ ಶುಕ್ರವಾರದವರೆಗೆ ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ತೆರೆಯಲು ಅನುಮತಿಸಲಾಗಿದೆ.

ಔಷಧಿ ಅಂಗಡಿಗಳು ಹಾಗೂ ಅಗತ್ಯ ಸೇವೆಗಳಾದ ಅಂಬುಲೆನ್ಸ್ ಅಗ್ನಿಶಾಮಕ ಮತ್ತು ಇತರೆ ತುರ್ತು ವೈದ್ಯಕೀಯ ಸೇವೆಗಳು, ವಿದ್ಯುತ್, ಪೆಟ್ರೋಲ್ ಪಂಪ್, ಅಮ್ಲಜನಕ ಉತ್ಪದಾನ ಘಟಕ, ನೀರು, ನೈರ್ಮಲ್ಯ ಸೇವೆಗಳಿಗೆ ಅನುಮತಿಸಲಾಗಿದೆ.
ಗರಿಷ್ಠ 02 ಪ್ರಯಾಣಿಕರ ಸಾಮಥ್ರ್ಯದೊಂದಿಗೆ ಆಟೋ ರಿಕ್ಷಾ ಮತ್ತು ಟ್ಯಾಕ್ಸಿಗಳು ಸಂಚರಿಸಲು ಅನುಮತಿಸಿದೆ.

ಕೋವಿಡ್-19 ರ ರಾಷ್ಟ್ರೀಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೆ ಒಳಪಟ್ಟು ವಾಕಿಂಗ್ ಮತ್ತು ಜಾಗಿಂಗ್ ಉದ್ದೇಶಕ್ಕಾಗಿ ಮಾತ್ರ ಉದ್ಯಾನವನಗಳನ್ನು ಬೆಳಿಗ್ಗೆ 5 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ತೆರೆಯಲು ಅನುಮತಿಸಿದೆ. ಆದರೆ, ಯಾವುದೇ ಗುಂಪು ಚಟುವಟಿಕೆಗಳಿಗೆ ಅವಕಾಶವಿಲ್ಲ.

ಆರೋಗ್ಯ ಕ್ಷೇತ್ರದ ಕೌಶಲ್ಯ ತರಬೇತಿ ಹಾಗೂ ಘನತ್ಯಾಜ್ಯ ನಿರ್ವಹಣೆ ಸಂಬಂಧಿತ ತರಬೇತಿಗೆ ಅವಕಾಶ. ಇಂದಿರಾ ಕ್ಯಾಂಟೀನ್ ತೆರೆಯಲು, ದಿನಪತ್ರಿಕೆ, ದೃಶ್ಯಮಾಧ್ಯಮಗಳ ಸೇವೆಗಳಿಗೆ ಹಾಗೂ ಎಲ್ಲಾ ರೀತಿಯ ಸರಕುಗಳ ಸಾಗಾಣಿಕೆಗೆ ಮತ್ತು ಖಾಲಿ ವಾಹನಗಳಿಗೆ ಅನುಮತಿಸಲಾಗಿದೆ. ವಿಶೇಷವಾಗಿ ಅಮ್ಲಜನಕ ತರುವ ವಾಹನಗಳನ್ನು ತಡೆರಹಿತ ಸಾಗಾಟವನ್ನು ಅನುಮತಿಸಲಾಗಿದೆ.

ನಿರ್ಗತಿಕರ ಕೇಂದ್ರ, ವೃದ್ದಾಶ್ರಮ, ಬಾಲಮಂದಿರ, ಬಾಲಾಶ್ರಮ, ಅನಾಥಶ್ರಮ ಇವುಗಳಿಗೆ ಅನುಮತಿಸಲಾಗಿದೆ. ಅಂತರ ರಾಜ್ಯ ಮತ್ತು ಅಂತರ ಜಿಲ್ಲಾ ವ್ಯಕ್ತಿಗಳ ಸಂಚಾರವನ್ನು ಮೇ.7ರ ಸರ್ಕಾರದ ಆದೇಶದಂತೆ ಅನುಮತಿಸಲಾಗಿದೆ.

ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಹಾಪ್-ಕಾಮ್ಸ್ ಮೂಲಕ ಮಾತ್ರ ಸಾರ್ವಜನಿಕರಿಗೆ ತರಕಾರಿಗಳನ್ನು ಹಾಗೂ ಹಣ್ಣುಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ಮಾರಾಟ ಮಾಡಲು ಅನುಮತಿಸಿದೆ. ಹಾಪ್-ಕಾಮ್ಸ್ ಲಭ್ಯವಿಲ್ಲದಿರುವ ಪ್ರದೇಶಗಳಲ್ಲಿ ಆಯುಕ್ತರು, ಮಹಾನಗರಪಾಲಿಕೆ ಮತ್ತು ಸಂಬಂಧಪಟ್ಟ ತಹಶೀಲ್ದಾರರು ಸ್ಥಳೀಯವಾಗಿ ಸೀಮಿತ ಸಂಖ್ಯೆಯಲ್ಲಿ ತಳ್ಳುವ ಗಾಡಿಯ ಮೂಲಕ ಮನೆ ಬಾಗಿಲಿಗೆ ತರಕಾರಿಗಳನ್ನು ಹಾಗೂ ಹಣ್ಣುಗಳನ್ನು ಮಾರಾಟ ವ್ಯವಸ್ಥೆ ಮಾಡಲು ಅನುಮತಿಸಿದೆ.

ಅಡುಗೆ ಅನಿಲ ಕಾರ್ಯನಿರ್ವಹಣೆಯನ್ನು ಮನೆ ಬಾಗಿಲಿಗೆ ತಲುಪಿಸುವ ಷರತ್ತಿಗೊಳಪಟ್ಟು ಕಾರ್ಯನಿರ್ವಹಣೆಯನ್ನು ಅನುಮತಿಸಲಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಸಗಟು ಮಾರಾಟಗಾರರು ತರಕಾರಿ ಹಾಗೂ ಹಣ್ಣುಗಳನ್ನು ಖರೀದಿಸಲು ಹಾಗೂ ಬೇರೆಡೆ ಸಾಗಿಸಲು ಯಾವುದೇ ನಿರ್ಬಂಧನವಿರುವುದಿಲ್ಲ. ಇ-ಕಾಮರ್ಸ್, ಹೋಮ್ ಡೆಲಿವರಿ ಸೇವೆಗಳ ಮುಖಾಂತರ ಎಲ್ಲಾ ವಸ್ತುಗಳನ್ನು ಮನೆಗೆ ಸರಬರಾಜು ಮಾಡಲು ಅನುಮತಿಸಲಾಗಿದೆ.

ಎಲ್ಲಾ ವಿಧದ ಉತ್ಪಾದಿತ ಘಟಕಗಳು ಸಂಸ್ಥೆಗಳು, ಕೈಗಾರಿಕೆಗಳು, ಕೋವಿಡ್ ನಿಯಮವಾಳಿಯ ಮೇಲೆ ಶೇ.50 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬಹುದು. ಹಾಗೂ ಗಾರ್ಮೆಟ್ಸ್ ಗಳಲ್ಲಿ ಶೇ.30ರ ಸಿಬ್ಬಂದಿಯೊಂದಿಗೆ ಕೋವಿಡ್ ಕ್ರಮವನ್ನು ಅನುಸರಿಸಿ ಕಾರ್ಯನಿರ್ವಹಿಸಬಹುದಾಗಿದೆ. ವಿನಾಯತಿ ನೀಡಿರುವ ಅಗತ್ಯ ಚಟುವಟಿಕೆಗಳಲ್ಲಿ ಕೋವಿಡ್-19ರ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕೆಂದು ತಿಳಿಸಿದರು.

ಈ ಮೇಲೆ ತಿಳಿಸಿದ ಮಾರ್ಗಸೂಚಿ ಅಥವಾ ನಿಬಂಧನೆಗಳನ್ನು ಉಲ್ಲಂಘಿಸಿದ ಪಕ್ಷದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಜಿಲ್ಲೆಯಲ್ಲಿ ಪಾಸಿಟಿವಿಟಿ ಮತ್ತು ಡೆತ್ ರೇಟ್ ಜಾಸ್ತಿ ಇದ್ದು, ಇದನ್ನು ಕಡಿಮೆಗೊಳಿಸಲು ಜಿಲ್ಲಾಡಳಿತ ಕಾರ್ಯನ್ಮೂಖವಾಗಿದ್ದು, ಈ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಹಣಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಡಿಹೆಚ್‍ಓ ಡಾ.ನಾಗರಾಜ್ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಭದ್ರಾನಾಲೆಯಿಂದ ಅನಧಿಕೃತವಾಗಿ ನೀರೆತ್ತುವರ ವಿರುದ್ಧ ಕ್ರಮ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ : ಭದ್ರಾ ಬಲದಂಡೆ ನಾಲೆ ಹಾಗೂ ಅದಕ್ಕೆ ಸಂಬಂಧಿಸಿದ ಇತರೆ ನಾಲೆಗಳಲ್ಲಿ ಅನಧಿಕೃತವಾಗಿ ವಿದ್ಯುತ್ ಪಂಪ್‍ಸೆಟ್, ಡಿಸೇಲ್ ಪಂಪ್‍ಸೆಟ್‍ಗಳನ್ನು ಅಳವಡಿಸಿಕೊಂಡು ನೀರೆತ್ತುವವರ ವಿರುದ್ಧ ನಿಗಮದ ವತಿಯಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ನೀರಾವರಿ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿ.ಆರ್. ಪ್ರಾಜೆಕ್ಟ್‍ನ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಎಚ್ಚರಿಕೆ ನೀಡಿದ್ದಾರೆ.

ಭದ್ರಾ ಯೋಜನೆಯ ಭದ್ರಾ ಬಲದಂಡೆ ನಾಲೆ, ಎಡದಂಡೆ ನಾಲೆ, ಆನವೇರಿ ಶಾಖಾ ನಾಲೆ, ಮಲೆಬೆನ್ನೂರು ಶಾಖಾ ನಾಲೆ, ದಾವಣಗೆರೆ ಶಾಖಾ ನಾಲೆ ಮತ್ತು ಹರಿಹರ ಶಾಖಾ ನಾಲೆಗಳಿಗೆ ಜಲಾಶಯದಿಂದ ನೀರನ್ನು ಹರಿಸಲಾಗುತಿದ್ದು, ಭದ್ರಾ ಜಲಾಶಯದ ಅಚ್ಚುಕಟ್ಟುದಾರರಲ್ಲದ ರೈತರು ನಾಲೆಗಳಲ್ಲಿ ಅನಧಿಕೃತವಾಗಿ ವಿದ್ಯುತ್ ಪಂಪಸೆಟ್, ಡಿಸೇಲ್ ಪಂಪಸೆಟ್, ಹಾಗೂ ಇತರೆ ನೀರೆತ್ತುವ ಉಪಕರಣಗಳನ್ನು ಅಳವಡಿಸಿಕೊಂಡು ನೀರೆತ್ತುತ್ತಿರುವುದರಿಂದ ಅಚ್ಚುಕಟ್ಟು ಕೊನೆಯ ಭಾಗದ ರೈತರುಗಳಿಗೆ ಸಮರ್ಪಕವಾಗಿ ನೀರನ್ನು ಹರಿಸಲು ಸಾಧ್ಯವಾಗಿರುವುದಿಲ್ಲ ಎಂದು ಅಚ್ಚುಕಟ್ಟು ರೈತರು ದೂರನ್ನು ನೀಡಿದ್ದು, ಉಚ್ಚ ನ್ಯಾಯಲಯದ ರಿಟ್ ಅರ್ಜಿ ಸಂಖ್ಯೆ:15744/2019 ಪಿಐಎಲ್ ರಂತೆ ಪ್ರಕರಣ ದಾಖಲಾಗಿರುತ್ತದೆ.

ಉಚ್ಛ ನ್ಯಾಯಾಲಯವು 2019ರ ನವೆಂಬರ್ 04 ರಂದು, ಭದ್ರಾ ಕಾಲುವೆಗಳಲ್ಲಿ ಅನಧಿಕೃತವಾಗಿ ಅಳವಡಿಸಲಾಗಿರುವ ವಿದ್ಯುತ್ ಪಂಪ್‍ಸೆಟ್, ಡಿಸೇಲ್ ಪಂಪ್‍ಸೆಟ್ ಹಾಗೂ ಇತರೆ ನೀರೆತ್ತುವ ಸಲಕರಣೆಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಆದೇಶಿಸಿರುತ್ತದೆ.

ಇದನ್ನೂ ಓದಿ | ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ಆಹಾರ ಕಿಟ್ ವಿತರಣೆ

ನ್ಯಾಯಲಯದ ಆದೇಶದಂತೆ ಭದ್ರಾ ನಾಲೆಗಳಲ್ಲಿ ಅನಧಿಕೃತವಾಗಿ ಅಳವಡಿಸಲಾಗಿದ್ದ ಪಂಪ್‍ಸೆಟ್ ಗಳನ್ನು ತೆರವುಗೊಳಿಸದೇ ಇರುವುದರಿಂದ ನ್ಯಾಯಾಲಯವು 2021ರ ಮೇ.5 ರಂದು ನ್ಯಾಯಾಂಗ ನಿಂದನೆ ಆರೋಪದ ಆದೇಶವನ್ನು ಹೊರಡಿಸಿರುತ್ತದೆ. ಹೀಗಾಗಿ 2021 ರ ಮೇ. 05 ರ ದಿನಾಂಕದವರೆಗೆ ಇದ್ದಂತಹ ಅನಧಿಕೃತ ಪಂಪ್‍ಸೆಟ್‍ಗಲನ್ನು ತೆರವುಗೊಳಿಸಿರುವುದನ್ನು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿರುತ್ತದೆ.

ಮುಂದಿನ ದಿನಗಳಲ್ಲಿ ಭದ್ರಾ ಬಲದಂಡೆ ನಾಲೆ ಹಾಗೂ ಅದಕ್ಕೆ ಸಂಬಂಧಿಸಿದ ಇತರೆ ನಾಲೆಗಳಲ್ಲಿ ಅನಧಿಕೃತವಾಗಿ ವಿದ್ಯುತ್ ಪಂಪ್‍ಸೆಟ್, ಡಿಸೇಲ್ ಪಂಪ್‍ಸೆಟ್‍ಗಳನ್ನು ಅಳವಡಿಸಿಕೊಂಡು ನೀರೆತ್ತುವವರ ವಿರುದ್ಧ ನಿಗಮದ ವತಿಯಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ನೀರಾವರಿ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿ.ಆರ್. ಪ್ರಾಜೆಕ್ಟ್‍ನ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending