ದಿನದ ಸುದ್ದಿ
ಕೋವಿಡ್ ಶವಗಳಿಗೆ ಮಿಡಿಯುವ ಕವಿ ಹೃದಯ..!

- ಪಂಜು ಗಂಗೊಳ್ಳಿ, ವ್ಯಂಗ್ಯಚಿತ್ರಕಾರ
ಉತ್ತರಪ್ರದೇಶ ಲಕ್ನೋದ 45 ವರ್ಷ ಪ್ರಾಯದ ವರ್ಷಾ ವರ್ಮಾ ಒಬ್ಬ ಕವಯಿತ್ರಿ. ಆದರೆ, ಇವರ ಕವಿ ಹೃದಯ ಇತರರ ನೋವು ನಲಿವುಗಳಿಗೆ ಸ್ಪಂಧಿಸಿ ಕವನಗಳನ್ನು ಬರೆದು ಸುಮ್ಮನಾಗುವಂತಹ ಸಾಮಾನ್ಯ ಹೃದಯವಲ್ಲ! ಇವರು ದೀಪಕ್ ಮಹಾಜನ್ ಎಂಬ 60 ವರ್ಷ ಪ್ರಾಯದ ಸರ್ಕಾರಿ ನೌಕರ ಮತ್ತು ಮಹಮ್ಮದ್ ಅಝರ್ ಹುಸೇನ್ ಎಂಬ 26 ವರ್ಷದ ಒಬ್ಬ ಸಾಮಾಜಿಕ ಕಾರ್ಯಕರ್ತರ ಜೊತೆ ಸೇರಿ ಲಕ್ನೋ ನಗರದಲ್ಲಿ ಕೋವಿಡ್ ಸೋಂಕು ತಗಲಿ ಸಾಯುವ ಅನಾಥರಿಗೆ ಗೌರವಯುತವಾದ ಅಂತ್ಯ ಸಂಸ್ಕಾರವನ್ನು ನೀಡುತ್ತಿದ್ದಾರೆ.
ನಿರ್ಗತಿಕರು ಮಾತ್ರವಲ್ಲ, ಸಾಕಷ್ಟು ಬಂಧು ಬಳಗವಿರುವವರೂ ಸೋಂಕು ತಗಲಿ ಸತ್ತರೆ ಅನಾಥರಂತೆ ಚಿತಾಗಾರ ಸೇರುವುದು ಸಾಮಾನ್ಯವಾಗುತ್ತಿರುವ ಕೋವಿಡ್ ನ ಈ ಬಿಕ್ಕಟ್ಟಿನ ದಿನಗಳಲ್ಲಿ ವರ್ಷಾ ವರ್ಮಾ ಮತ್ತು ಅವರ ಸಂಗಡಿಗರ ಈ ಕಾರ್ಯ ಮನಕಲಕುವಂತಹದ್ದು. ಮಾರ್ಚಿನಿಂದ ಈವರೆಗೂ ಇವರು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ ಆನೇಕ ಕೋವಿಡ್ ಶವಗಳ ಅಂತ್ಯಕ್ರಿಯೇ ನಡೆಸಿದ್ದಾರೆ.
ವಾಸ್ತವದಲ್ಲಿ, ವರ್ಷಾ ವರ್ಮಾ ಮತ್ತು ಅವರ ಸಂಗಡಿಗರು ಎರಡೂವರೆ ವರ್ಷಗಳ ಹಿಂದಿನಿಂದಲೇ ಅನಾಥ ಶವಗಳ ಅಂತ್ಯ ಸರ್ಕಾರ ನಡೆಸುವ ಕೆಲಸವನ್ನು ಶುರು ಮಾಡಿದ್ದರು. ಈ ಕೆಲಸಕ್ಕೆಂದೇ ಇವರು 2017 ರಲ್ಲಿ ‘ದಿವ್ಯ ಸೇವಾ ಫೌಂಡೇಷನ್’ ಎಂಬ ಒಂದು ಸಾಮಾಜಿಕ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ.
ಸಾಮಾನ್ಯವಾಗಿ ಪೋಲಿಸರು ಅನಾಥ ಶವಗಳನ್ನು ಬಟ್ಟೆಯಲ್ಲಿ ಸುತ್ತಿ ತೆರೆದ ಗಾಡಿಗಳಲ್ಲಿ ಹಾಕಿ ಚಿತಾಗಾರಕ್ಕೆ ಕೊಂಡೊಯ್ಯುತ್ತಾರೆ. ಆದರೆ, ವರ್ಮಾ ಈ ಅನಾಥ ಶವಗಳನ್ನು ಗೌರವಯುತವಾದ ಚಟ್ಟದ ಮೇಲಿರಿಸಿ, ಚಿಕ್ಕದೊಂದು ಬಸ್ಸಿನೊಳಗಿಟ್ಟು ಸಕಲ ಮರ್ಯಾದೆಗಳ ಮೂಲಕ ಅವುಗಳ ಅಂತ್ಯ ಕ್ರಿಯೆ ನಡೆಸುತ್ತಾರೆ. ಹೀಗೆ ಈವರೆಗೆ ಮೂವರೂ ಸೇರಿ 800 ಕ್ಕೂ ಹೆಚ್ಚಿನ ಅನಾಥರ ಶವಗಳಿಗೆ ಗೌರವಯುತವಾದ ಮುಕ್ತಿ ನೀಡಿದ್ದಾರೆ.
ವರ್ಷಾ ವರ್ಮಾರ ಪತಿ ರಾಕೇಶ್ ವರ್ಮಾ ಉತ್ತರಪ್ರದೇಶ ಸರ್ಕಾರದ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಒಬ್ಬ ಎಂಜಿನಿಯರ್. 14 ವರ್ಷದ ಮಗಳು ನಂದಿನಿ ವರ್ಮಾ. “ಈ ನತದೃಷ್ಟರು ಹೇಗೇಗೋ ಬದುಕಿ ತಮ್ಮ ಜೀವನ ಕಳೆದಿರುತ್ತಾರೆ.ಆದರೆ, ಅವರ ಬದುಕಿನ ಪಯಣದ ಕೊನೆಯನ್ನಾದರೂ ತುಸು ಗೌರಯುತವಾಗಿಸುವುದಕ್ಕೆ ನೆರವಾಗುವ ಮೂಲಕ ನನ್ನ ಮನಸ್ಸಿಗೇನೋ ಒಂದು ರೀತಿಯ ಸಮಾಧಾನ ಸಿಗುತ್ತದೆ. ಈ ಕೆಲಸದಿಂದ ನನಗೆ ಸಿಗುವ ಪ್ರತಿಫಲ ಇದೊಂದೇ” ಎನ್ನುತ್ತಾರೆ ವರ್ಷಾ. ತನ್ನ ತಾಯಿಯ ಕೆಲಸಗಳನ್ನು ನೋಡಿ ಬೆಳೆದ ನಂದಿನಿಯೂ ಮುಂದೆ ತಾನೂ ತಾಯಿಯಂತೆ ಸಾಮಾಜಿಕ ಕಾರ್ಯಕರ್ತೆಯಾಗುತ್ತೇನೆ ಅನ್ನುತ್ತಾಳೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರೈತರು- ಕೇಂದ್ರ ಸರ್ಕಾರದ ನಡುವಿನ 10ನೇ ಸುತ್ತಿನ ಮಾತುಕತೆ ನಾಳೆಗೆ ಮುಂದೂಡಿಕೆ

ಸುದ್ದಿದಿನ,ನವದೆಹಲಿ : ಇಂದು ನಡೆಯಬೇಕಾಗಿದ್ದ ರೈತ ಮುಖಂಡರು ಮತ್ತು ಕೇಂದ್ರದ ಮಂತ್ರಿಗಳ ನಡುವಿನ 10ನೇ ಸುತ್ತಿನ ಮಾತುಕತೆ ಜ. 20ರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.
ಕೃಷಿ ಸಚಿವ ನರೇಂದ್ರ ಸಿಂಗ್ ತಡರಾತ್ರಿ ರೈತ ಮುಖಂಡರಿಗೆ ಬರೆದಿರುವ ಪತ್ರದಲ್ಲಿ, ತಳ್ಳಿ ಹಾಕಲಾದ ಕಾರಣಗಳಿಂದಾಗಿ ಇಂದು ಸಭೆ ನಡೆಸಲಾಗುತ್ತಿಲ್ಲ ಎಂದು,’ ಜ. 20ರಂದು ಮಧ್ಯಾಹ್ನ 2 ಗಂಟೆಗೆ ವಿಜ್ಞಾನ್ ಭವನದಲ್ಲಿ ಸಭೆ ನಡೆಸಲಾಗುವುದು” ಎಂದು ತಿಳಿಸಲಾಗಿದೆ.
ಮಧ್ಯಪ್ರದೇಶದ ತಮ್ಮ ಕ್ಷೇತ್ರದ ವೀಕ್ಷಣೆಗೆ ತೆರಳಿದ್ದ ಕೃಷಿ ಸಚಿವ ನರೇಂದ್ರ ಸಿಮಗ್ ತೋಮರ್ ಸೋಮವಾರ ತಡರಾತ್ರಿ ದೆಹಲಿಗೆ ಮರಳಿದರು. ಗ್ವಾಲಿಯರ್ನಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ರೈತ ಸಂಘಟನೆಗಳು ಕಾಯ್ದೆಗಳಲ್ಲಿರುವ ನಿರ್ದಿಷ್ಟ ರಿಯಾಯಿತಿಗಳ ಕುರಿತು ಚರ್ಚಿಸುವುದಕ್ಕೆ ಮನಸ್ಸು ಮಾಡುತ್ತಿಲ್ಲ. ಪಟ್ಟು ಸಡಿಸಲು ಸಿದ್ಧರೇ ಇಲ್ಲ. ನಾಳೆ ಸಭೆ ಇದೆ. ಅಲ್ಲಿ ರೈತ ಸಂಘಟನೆಗಳು ಪರ್ಯಾಯ ಸಾಧ್ಯತೆಗಳ ಕುರಿತು ಚರ್ಚಿಸುವ ನಂಬಿಕೆ ಇದೆ. ಹಾಗಾದರೆ ನಾವು ಪರಿಹಾರ ಕಂಡುಕೊಳ್ಳಲು ಸಾಧ್ಯ” ಎಂದಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ದಾವಣಗೆರೆ | ಗಣರಾಜ್ಯೋತ್ಸವ ಪೂರ್ವಸಿದ್ಧತಾ ಸಭೆ

ಸುದ್ದಿದಿನ,ದಾವಣಗೆರೆ : 72 ನೇ ಗಣರಾಜ್ಯೋತ್ಸವ ಪೂರ್ವಸಿದ್ಧತಾ ಸಭೆಯು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ಜ.19 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಜಿಲ್ಲಾಧಿಕಾರಿಗಳು ಮಾತನಾಡಿ, ರಾಷ್ಟ್ರ ಹಬ್ಬವಾದ ಗಣರಾಜ್ಯೋತ್ಸವ ಕಾರ್ಯಕ್ರಮ ಅರ್ಥಪೂರ್ಣವಾಗಿರಲಿ. ದೇಶದ ಗಣರಾಜ್ಯಕ್ಕಾಗಿ ಶ್ರಮಿಸಿದ ಎಲ್ಲಾ ಮಹನೀಯರನ್ನು ನೆನೆಯುವ ದಿನ ಇದಾಗಿದ್ದು, ಅವರ ಶ್ರಮ, ತ್ಯಾಗ, ಬಲಿದಾನಗಳಿಗೆ ನಾವು ಗೌರವ ಸಮರ್ಪಿಸೋಣ ಎಂದರು.
ಜನವರಿ 26 ರ ಬೆಳಿಗ್ಗೆ 09 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಲಿದೆ. ಎಲ್ಲಾ ಇಲಾಖಾ ಮುಖ್ಯಸ್ಥರು ತಮ್ಮ ತಮ್ಮ ಕಚೇರಿಗಳಲ್ಲಿ ಧ್ವಜಾರೋಹಣ ನೆರೆವೇರಿಸಿ ಬೆಳಿಗ್ಗೆ 09 ಗಂಟೆಯೊಳಗಾಗಿ ಕ್ರೀಡಾಂಗಣದಲ್ಲಿ ಹಾಜರಿರಬೇಕು. ಅಂದು ಯಾವುದೇ ಕಾರಣಕ್ಕೂ ಸರ್ಕಾರಿ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ರಜೆ ಎಂದು ಭಾವಿಸದೇ ತಪ್ಪದೇ ಹಾಜರಿರಬೇಕು.
ಕೋವಿಡ್ ಹಿನ್ನಲೆಯಲ್ಲಿ ಈ ಬಾರಿ ಸರಳವಾಗಿ ಗಣರಾಜೋತ್ಸವ ಆಯೋಜಿಸಲಾಗಿದ್ದು ಕೋವಿಡ್ ನಿಯಮಗಳನ್ನು ಪಾಲಿಸಬೇಕು, ಯಾವುದೇ ಸಾಂಸ್ಕøತಿಕ ಕಾರ್ಯಕ್ರಮಗಳು ಇರುವುದಿಲ್ಲ, ಹಾಗೂ ಗಣರಾಜ್ಯೋತ್ಸವ ಆಚರಣೆ ಸಂಭಂಧ ಸರ್ಕಾರ ನೀಡುವ ಮಾರ್ಗಸೂಚಿಗಳಿಗನುಗುಣವಾಗಿ ಕಾರ್ಯಕ್ರಮ ಆಚರಿಸಲಾಗುವುದು ಎಂದರು
ಪ್ಲಾಸ್ಟಿಕ್ ಧ್ವಜ ಮತ್ತು ಪ್ಲಾಸ್ಟಿಕ್ ಹೂಗುಚ್ಚಗಳನ್ನು ಮತ್ತು ಪ್ಲಾಸ್ಟಿಕ್ ನೀರಿನ ಬಾಟಲ್ಗಳನ್ನು ಯಾವುದೇ ಕಾರಣಕ್ಕೂ ತರುವಂತಿಲ್ಲ. ಇಡೀ ಕಾರ್ಯಕ್ರಮದ ಮೇಲುಸ್ತುವಾರಿಯನ್ನು ಅಪರ ಜಿಲ್ಲಾಧಿಕಾರಿ, ಉಪ ವಿಭಾಗಧಿಕಾರಿ, ತಹಶೀಲ್ದಾರರು, ಪೊಲೀಸ್ ಉಪ ಅಧೀಕ್ಷಕರು, ಮಹಾನಗರಪಾಲಿಕೆ ಆಯುಕ್ತರು ಇವರುಗಳು ನೋಡಿಕೊಂಡು ಕಾರ್ಯಕ್ರಮ ಅರ್ಥಪೂರ್ಣಗೊಳಿಸಲು ಸಹಕರಿಸಬೇಕು.
ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಧ್ವಜ ಸಂಹಿತಿಯನ್ನು ಕಾಪಾಡಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆಯವರು ಎಲ್ಲಾ ಶಾಲೆಗಳಲ್ಲಿ 7.30 ಕ್ಕೆ ಧ್ವಜಾರೋಹಣ ನಡೆಯುವಂತೆ ನೋಡಿಕೊಳ್ಳಬೇಕು ಹಾಗೂ ನಗರದ ಪ್ರಮುಖ ವೃತ್ತಗಳಿಗೆ ಸಂಭಂಧಿಸಿದ ಇಲಾಖೆಗಳು ದೀಪಾಲಂಕಾರ ಮಾಡಿಸಬೇಕು, ಪಥ ಸಂಚಲನೆಯಲ್ಲಿ ಭಾಗವಹಿಸುವ ತಂಡಗಳಿಗೆ ಕೇಸರಿ, ಬಿಳಿ,ಹಸಿರು ಮಾಸ್ಕ್ಗಳನ್ನು ಖಾದಿ ಗ್ರಾಮೋದ್ಯೋಗ ಇಲಾಖೆಯವರು ವ್ಯವಸ್ಥೆ ಮಾಡಬೇಕೆಂದರು ಎಂದರು.
ಈ ಹಿಂದೆ ಮಳೆಗಾಲದ ಸಮಯದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ನೀರು ನಿಂತು ಕಾರ್ಯಕ್ರಮಕ್ಕೆ ಅಡಚಣೆಯಾದ ಸಂಧರ್ಭಗಳಿದ್ದು ಕ್ರೀಡಾಂಗಣದಲ್ಲಿ ಜಲ್ಲಿ ಮತ್ತು ಮರಳನ್ನು ಹಾಕಿಸಿ ನೆಲವನ್ನು ಸಜ್ಜುಗೊಳಿಸಬೇಕು ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಗಾಮ ಪಂಚಾಯತಿಗಳು, ಸ್ಥಳೀಯ ಸಂಸ್ಥೆಗಳು ಹಾಗೂ ಶಾಲೆಗಳಲ್ಲಿ ಧ್ವಜಾರೋಹಣದ ನಂತರ ಧ್ವಜವನ್ನು ಸಾಯಂಕಾಲದವರೆಗೆ ವ್ಯವಸ್ಥಿತವಾಗಿ ನೋಡಿಕೊಳ್ಳುವಂತೆ ಎಲ್ಲಾ ಗ್ರಾಮ ಪಂಚಾಯತಿಯ ಕಾರ್ಯದಶಿಗಳು ಹಾಗೂ ಶಾಲಾ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಮಾತನಾಡಿ, ಪ್ರತೀ ವರ್ಷದಂತೆ ಈ ವರ್ಷವೂ ಕಾರ್ಯಕ್ರಮವನ್ನು ನಿಗದಿಪಡಿಸಿದ ಇಲಾಖೆಯವರು ತಮಗೆ ವಹಿಸಿರುವ ಜವಾಬ್ದಾರಿಯನ್ನು ನಿರ್ವಹಿಸಬೇಕು. ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಹಾಗೂ ಪ್ರಮುಖ ಖಾಸಗಿ ಕಚೇರಿಗಳ ಮೇಲೆ ಜ.25 ಮತ್ತು 26 ರಂದು ವಿದ್ಯುತ್ ದೀಪಾಲಂಕಾರ ಮಾಡಿಸಬೇಕು ಎಂದರು.
ಕಾರ್ಯಕ್ರಮಕ್ಕೆ ಪೂರಕವಾಗಿ ಮಹಾನಗರಪಾಲಿಕೆಯವರು ವೇದಿಕೆ ನಿರ್ಮಾಣ, ಕುರ್ಚಿ, ಶಾಮಿಯಾನ, ಧ್ವನಿ ವರ್ಧಕ, ಕಾರ್ಪೆಟ್, ಹೂವಿನ ಹಾರ ವ್ಯವಸ್ಥೆಯನ್ನು ಮಾಡಬೇಕು. ತೋಟಗಾರಿಕೆ ಇಲಾಖೆಯವರು ವೇದಿಕೆ ಮುಂಭಾಗ ಹೂ ಅಲಂಕಾರ ಮತ್ತು ಹೂವಿನ ಕುಂಡಗಳನ್ನು ಇರಿಸಬೇಕು.
ಉಪ ವಿಭಾಗಧಿಕಾರಿಗಳು ಶಿಷ್ಠಾಚಾರದಂತೆ ಆಹ್ವಾನ ಪತ್ರಿಕೆಯನ್ನು ಪರಿಶೀಲಿಸಿ, ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಬೇಕು. ತಾ.ಪಂ ಕಾರ್ಯನಿರ್ವಾಹಣಾಧಿಕಾರಿಗಳು ಮುದ್ರಿಸಿ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಕ್ರೀಡಾಂಗಣದಲ್ಲಿ ಪೊಲೀಸ್ ಇಲಾಖೆಯವರು ಭದ್ರತೆ ಮತ್ತು ಸುರಕ್ಷತೆಯನ್ನು ಒದಗಿಸಬೇಕು. ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಭೂ-ವಿಜ್ಞಾನ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರುಗಳು ಉಪಹಾರದ ವ್ಯವಸ್ಥೆ ಮಾಡಬೇಕು.
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿ/ನೌಕರರಿಗೆ ನೀಡಲಾಗುವ ಸರ್ವೋತ್ತಮ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಈ ಕಾರ್ಯಕ್ರಮಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕೆಂದ ಅವರು ಎಲ್ಲ ಇಲಾಖೆಗಳ ಅಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಶಿಸ್ತಿನಿಂದ ನಿರ್ವಹಿಸುವ ಮೂಲಕ ಗಣರಾಜ್ಯೋತ್ಸವವನ್ನು ಯಶಸ್ವಿಗೊಳಿಸಬೇಕೆಂದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ವಿಶ್ವನಾಥ ಮುದಜ್ಜಿ, ಸಮಾಜ ಕಲ್ಯಾಣಾಧಿಕಾರಿ ರೇಷ್ಮಾ ಕೌಸರ್,ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ.ಜಿ, ಡಿಡಿಪಿಐ ಪರಮೇಶ್ವರಪ್ಪ, ಆಹಾರ ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಜಿಎಸ್ ಟಿ ಪರಿಹಾರದಲ್ಲಿ ರಾಜ್ಯಕ್ಕೆ ಅಂದಾಜು 27 ಸಾವಿರ ಕೋಟಿ ಖೋತಾ ಆಗಬಹುದು : ಸಿದ್ದರಾಮಯ್ಯ

ಸುದ್ದಿದಿನ,ಬೆಂಗಳೂರು : ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯುಪಿಎ ಸರ್ಕಾರದ ಹತ್ತು ವರ್ಷಗಳಲ್ಲಿ ಕರ್ನಾಟಕಕ್ಕೆ ನೀಡಿದ್ದ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ. ಯುಪಿಎಗಿಂತ ತಮ್ಮ ಸರ್ಕಾರ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ನೀಡಿದೆ ಎಂದು ಒಂದಷ್ಟು ಸುಳ್ಳು ಅಂಕಿ-ಅಂಶಗಳನ್ನು ಮುಂದಿಟ್ಟು ಹೇಳಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕಿಡಿಕಾರಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ವ್ಯಾಪಾರದಲ್ಲಿ ನುರಿತ ಗುಜರಾತಿಗಳು ಲೆಕ್ಕದಲ್ಲಿ ಪಕ್ಕಾ ಎನ್ನುವ ಅಭಿಪ್ರಾಯ ಇದೆ. ಆದರೆ ಆ ರಾಜ್ಯದವರಾದ ಪ್ರಧಾನಿ ಮತ್ತು ಗೃಹಸಚಿವರು ಬಾಯಿಬಿಟ್ಟರೆ ಸುಳ್ಳು ಲೆಕ್ಕಗಳೇ ಉದುರುತ್ತವೆ. ಗೃಹಸಚಿವ ಅಮಿತ್ ಶಾ ಅವರು ಮತ್ತೊಮ್ಮೆ ಸುಳ್ಳುಗಳ ಮೂಟೆ ಉರುಳಿಸಿಹೋಗಿದ್ದಾರೆ. ಈಗ ನಾನು ಹೇಳುವ ಲೆಕ್ಕವನ್ನು ಅವರು ಗಮನವಿಟ್ಟು ಕೇಳಬೇಕು ಮತ್ತು ತಾಳ್ಮೆಯಿಂದ ಉತ್ತರ ಕೊಡಬೇಕು.
ಮೊದಲನೆಯದಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುವ ದುಡ್ಡು ಭಿಕ್ಷೆ ಅಲ್ಲ, ಅದು ನ್ಯಾಯಬದ್ದವಾಗಿ ನಮಗೆ ಸಿಗಬೇಕಾಗಿರುವ ಪಾಲು. ಕರ್ನಾಟಕ ಪ್ರತಿವರ್ಷ ಅಂದಾಜು 2,20,000 ಕೋಟಿ ರೂಪಾಯಿಯಷ್ಟು ತೆರಿಗೆ-ಸುಂಕ ಮೂಲಕ ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ಅದರಲ್ಲಿ ಹಣಕಾಸು ಆಯೋಗದ ಶಿಫಾರಸಿನ ಸೂತ್ರದಂತೆ ಆ ತೆರಿಗೆ ಹಣದಲ್ಲಿ ಶೇಕಡಾ 42ರಷ್ಟು ಹಣವನ್ನು ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಹಿಂದಿರುಗಿ ಕೊಡಬೇಕು. ಆದರೆ ಬಿಜೆಪಿ ಆಡಳಿತದ ಕಾಲದಲ್ಲಿ ನಮಗೆಂದೂ ಶೇಕಡಾ 42ರಷ್ಟು ಪಾಲು ಸಿಕ್ಕಿಲ್ಲ ಎಂದರು.
ಯುಪಿಎ ಆಡಳಿತದ ಕಾಲದಲ್ಲಿ (2010/11- 2013/14) ಹಣಕಾಸು ಆಯೋಗ ಕರ್ನಾಟಕಕ್ಕೆ ಕೇಂದ್ರ ತೆರಿಗೆಗಳ ಪಾಲು ನಿಗದಿಪಡಿಸಿದ್ದು ರೂ.45, 713 ಕೋಟಿ, ನಾವು ಪಡೆದದ್ದು ರೂ.47,036 ಕೋಟಿ. ಇದು ನಿಗದಿಪಡಿಸಿದ್ದಕ್ಕಿಂತ ರೂ.1.323 ಕೋಟಿ (ಶೇಕಡಾ 2.9ರಷ್ಟು) ಹೆಚ್ಚು. ಬಿಜೆಪಿ ಆಡಳಿತದ ಕಾಲದಲ್ಲಿ (2014-15 2019-20) 13 ಮತ್ತು 14ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ನಿಗದಿಪಡಿಸಿದ್ದ ತೆರಿಗೆ ಪಾಲು ರೂ.2,03,039 ಕೋಟಿ, ಸಿಕ್ಕಿದ್ದು ಕೇವಲ ರೂ.1,65 963 ಕೋಟಿ ರೂಪಾಯಿ ಮಾತ್ರ, ಅಂದರೆ ರೂ.48,768 ಕೋಟಿ (ಶೇಕಡಾ 18.2ರಷ್ಟು) ಕಡಿಮೆ.
2019-20ರ ವರ್ಷಕ್ಕೆ ಕರ್ನಾಟಕಕ್ಕೆ ಹಣಕಾಸು ಆಯೋಗ ನಿಗದಿಪಡಿಸಿದ್ದ ತೆರಿಗೆ ಪಾಲು ರೂ.48, 768 ಕೋಟಿ, ನಮಗೆ ಸಿಕ್ಕಿರುವುದು ರೂ.30.919 ಕೋಟಿ ಮಾತ್ರ. ಇದರ ಜೊತೆಗೆ ಹತ್ತು ವರ್ಷಗಳ ಹಿಂದಿನ ಮತ್ತು ಈ ಹಣಕಾಸು ವರ್ಷದ ಕೇಂದ್ರ ಸರ್ಕಾರದ ಬಜೆಟ್ ಗಾತ್ರದಲ್ಲಿನ ಹೆಚ್ಚಳವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ರಾಜ್ಯ ಬಜೆಟ್ ಪ್ರಕಾರ 2020-21ನೇ ಹಣಕಾಸು ವರ್ಷದಲ್ಲಿ ನಿರೀಕ್ಷಿತ ತೆರಿಗೆ ಪಾಲು ರೂ.28,591 ಕೋಟಿ. ನನ್ನ ಪ್ರಕಾರ ಪ್ರಸಕ್ತ ವರ್ಷ ಮೊತ್ತ ರೂ.15,017 ಕೋಟಿಗೆ ಇಳಿದರೂ ಅಚ್ಚರಿ ಇಲ್ಲ. ಹೀಗಾದರೆ ಇದು 2019-20ರಲ ನಿರೀಕ್ಷೆಗಿಂತ ರೂ.33,751 ಕೋಟಿ ಇಲ್ಲವೇ ರಾಜ್ಯ ಬಜೆಟ್ ಅಂದಾಜಿಗಿಂತ ರೂ.24 789ರಷ್ಟು ಕಡಿಮೆ ಯಾಗುತ್ತದೆ.
ಜಿಎಸ್ ಟಿ ಪರಿಹಾರದಲ್ಲಿ ಕರ್ನಾಟಕಕ್ಕೆ ದೊಡ್ಡ ಅನ್ಯಾಯವಾಗಿದೆ. ಇತ್ತೀಚಿನ ಅಂದಾಜಿನ ಪ್ರಕಾರ ಜಿಎಸ್ ಟಿ ಪರಿಹಾರದಲ್ಲಿ ಅಂದಾಜು 25ರಿಂದ 27 ಸಾವಿರ ಕೋಟಿ ಖೋತಾ ಆಗಬಹುದು. ಕೇಂದ್ರ ಸರ್ಕಾರ ಇತ್ತೀಚೆಗೆ 18-19,000 ಕೋಟಿಯಷ್ಟೇ ಪರಿಹಾರ ನೀಡುವುದಾಗಿ ಹೇಳಿತ್ತು.
ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಲಿರುವ ಅನುದಾನ ರೂ.31,570 ಕೋಟಿಗಳಷ್ಟಾಗಬಹುದೆಂದು ನಿರೀಕ್ಷಿಸಲಾಗಿತ್ತು. ಈಗಿನ ಲೆಕ್ಕಾಚಾರದ ಪ್ರಕಾರ ಇದು ರೂ.17,372 ಕೋಟಿ ಗಳಷ್ಟಾಗಬಹುದು. ಇದರಿಂದ ರೂ.14,198 ಕೋಟಿ ಖೋತಾ ಆಗಲಿದೆ. ರಾಜ್ಯದ ಹಣಕಾಸು ಪರಿಸ್ಥಿತಿಗೆ ಇದು ಮಾರಕ ಹೊಡೆತ ಎಂದು
ಒಟ್ಟಾರೆಯಾಗಿ ಕರ್ನಾಟಕ ರಾಜ್ಯ ಕಳೆದ ವರ್ಷಕ್ಕಿಂತ ಸುಮಾರು 50,000 ಕೋಟಿಯಷ್ಟು ಕಡಿಮೆ ಅನುದಾನ ಪಡೆಯಬಹುದು ಇದನ್ನು ಆಧರಿಸಿ ಪ್ರಸಕ್ತ ಹಣಕಾಸು ವರ್ಷದ ಆದಾಯ ರೂ.1,80,217 ಕೋಟಿ ಗಳಾಗಬಹುದೆಂದು ರಾಜ್ಯ ಬಜೆಟ್ ನಲ್ಲಿ ನಿರೀಕ್ಷಿಸಲಾಗಿತ್ತು. ಕೇಂದ್ರ ಅನುದಾನದ ಕಡಿತದಿಂದಾಗಿ ಇದು ರೂ.1,14,758 ಕೋಟಿಗೆ ಇಳಿಯುವ ನಿರೀಕ್ಷೆ ಇದೆ.
ದಶಕಗಳಿಂದ ನಮ್ಮ ಒಟ್ಟು ಸಾಲ ಸುಮಾರು ರೂ.3.2ಲಕ್ಷ ಕೋಟಿಗಳೆಂದು ಅಂದಾಜು ಮಾಡಲಾಗಿದೆ. ಆದರೆ ಈಗಿನ ಒಂದೇ ವರ್ಷದಲ್ಲಿ ಸುಮಾರು ರೂ.90,000 ಕೋಟಿ ಸಾಲ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಬಿಜೆಪಿ ಸರ್ಕಾರ ಕರ್ನಾಟಕವನ್ನು ಶಾಶ್ವತ ಸಾಲಗಾರ ರಾಜ್ಯವನ್ನಾಗಿ ಮಾಡಲು ಹೊರಟಿದೆ.
ಕೇಂದ್ರದಿಂದ ಸಿಗಬೇಕಾಗಿರುವ ತೆರಿಗೆ ಪಾಲು ಮತ್ತು ಅನುದಾನದ ಖೋತಾದಿಂದಾಗಿ ಆರ್ಥಿಕ ನಷ್ಟಕ್ಕೀಡಾಗಿರುವ ಕರ್ನಾಟಕಕ್ಕೆ ವಿಶೇಷ ಅನುದಾನದ ರೂಪದಲ್ಲಿ ರೂ.5,495 ಕೋಟಿ ನೀಡಬೇಕೆಂದು ಹಣಕಾಸು ಆಯೋಗ ಶಿಫಾರಸು ಮಾಡಿತ್ತು. ಈ ಅನುದಾನದ ನೆರವಿಗೂ ಕರ್ನಾಟಕದಿಂದ ಆಯ್ಕೆಯಾಗಿ ಹೋಗಿರುವ ಈಗಿನ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಡ್ಡಗಾಲು ಹಾಕಿದ್ದಾರೆ.
ಕಾಂಗ್ರೆಸ್ ಪಕ್ಷದ ವಿರುದ್ಧ ಈ ರೀತಿ ತಿರುಚಿದ ಅಂಕಿಅಂಶಗಳನ್ನು ಮುಂದಿಟ್ಟುಕೊಂಡು ಆರೋಪಗಳನ್ನು ಮಾಡುವ ಮೊದಲು ಕೇಂದ್ರ ಹೋಮ್ ಮಿನಿಸ್ಟರ್ ಅಮಿತ್ ಶಾ ಅವರು ಮತ್ತೊಮ್ಮೆ ತಮ್ಮ ಹೋಂವರ್ಕ್ ಸರಿಯಾಗಿ ಮಾಡಿಕೊಂಡು ಬರಬೇಕೆಂದು ಅವರಿಗೆ ಸಲಹೆ ನೀಡುತ್ತೇನೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ5 days ago
ಬೆಳಗ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು, ಸಂಜೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ್ರು ನಾಗೇಶ್..!
-
ದಿನದ ಸುದ್ದಿ5 days ago
ಕೋವಿದ್ ಪ್ರಭಾವಳಿಯಲ್ಲಿ ಪ್ರಭುತ್ವದ ಕ್ರೌರ್ಯ
-
ಲೈಫ್ ಸ್ಟೈಲ್5 days ago
ಪಕ್ಷಿ ಪರಿಚಯ | ಬೆಳ್ಗಣ್ಣ
-
ದಿನದ ಸುದ್ದಿ6 days ago
“ನೀನು ಅಪ್ಪನಿಗೆ ಹುಟ್ಟಿದಿಯಾ ಅನ್ನೋದಕ್ಕೆ ಸಾಕ್ಷಿ ಏನು..?” : ಸಚಿವ ಈಶ್ವರಪ್ಪ
-
ದಿನದ ಸುದ್ದಿ6 days ago
ಸಚಿವ ಸಂಪುಟ ವಿಸ್ತರಣೆ : ಏಳು ಹೊಸ ಸಚಿವರ ಹೆಸರು ಫೈನಲ್ ಗೊಳಿಸಿದ ಯಡಿಯೂರಪ್ಪ
-
ಲೈಫ್ ಸ್ಟೈಲ್5 days ago
ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಪರಿಹಾರ ; ಮಿಸ್ ಮಾಡ್ದೆ ಓದಿ..!
-
ದಿನದ ಸುದ್ದಿ5 days ago
ದಲಿತರಿಗೆ ಪರ್ಯಾಯ ಸಂಸ್ಕೃತಿ ಇಲ್ಲವೆ..?
-
ದಿನದ ಸುದ್ದಿ6 days ago
ರೈತರ ಹೋರಾಟದಲ್ಲಿ ರೈತರೊಂದಿಗೆ ನಿಂತ ವಾಷಿಂಗ್ ಮಷಿನ್ಗಳು..!