Connect with us

ದಿನದ ಸುದ್ದಿ

ಬಾಣಲೆಯಿಂದ ಬೆಂಕಿಗೆ : ಕೊರೊನಾ ರಣವೈದ್ಯ ಬೆಳಕಿಗೆ

Published

on

ಚಿತ್ರ: ಛತ್ತೀಸಗಢದ ಅರಣ್ಯದ ಮಧ್ಯೆ ಅದಾನಿ ಕಂಪನಿಯ ಕಲ್ಲಿದ್ದಲ ಗಣಿಗಾರಿಕೆಯ ದೃಶ್ಯ | ಕೃಪೆ :qz.com
  • ನಾಗೇಶ್ ಹೆಗಡೆ

ಕೊರೊನಾಮಾರಿ ಬರುವ ಮೊದಲು ಭಾರತದ ನದಿಗಳೆಲ್ಲ ಕೊಳಕು ಕೂಪಗಳಾಗಿದ್ದವು. ವಾಯುಮಾಲಿನ್ಯ ದಟ್ಟವಾಗಿತ್ತು. ಟ್ರಾಫಿಕ್ ಗದ್ದಲ ಅತಿಯಾಗಿತ್ತು. ಕಾರ್ಖಾನೆಗಳು, ಗಣಿಗಳು ಲಂಗುಲಗಾಮಿಲ್ಲದೇ ನಿಸರ್ಗ ಸಂಪತ್ತನ್ನು, ಕಾರ್ಮಿಕರನ್ನು ಶೋಷಣೆ ಮಾಡುತ್ತಿದ್ದವು. ಕೊರೊನಾ ಬಂದಮೇಲೆ ಎಲ್ಲಕಡೆ ಶಾಂತಿ ನೆಲೆಸಿತ್ತು. ಲಾಕ್ಡೌನ್ ಎಂಬ ಹಠಾತ್ ಎಡವಟ್ಟಿನಿಂದಾಗಿ ಅದೆಷ್ಟೊ ಲಕ್ಷ ಕಾರ್ಮಿಕರು ನೆಲೆತಪ್ಪಿ ಗುಳೆ ಹೊರಟು, ಘನಘೋರ ಸಂಕಷ್ಟಗಳಿಗೆ ತುತ್ತಾಗಿದ್ದನ್ನು ಬಿಟ್ಟರೆ , ಅಭಿವೃದ್ಧಿಯ ಭರಾಟೆಯಿಂದ ನಲುಗಿದ್ದ ನೆಲ-ನೀರು-ಗಾಳಿ-ವನ್ಯಜೀವ ಎಲ್ಲವೂ ತುಸು ಉಸಿರಾಡತೊಡಗಿದವು.

ಕೊರೊನಾ ನಂತರ ಹೊಸ ಭಾರತ ಉದಯಿಸಲಿದೆ ಎಂದು ನಮ್ಮಲ್ಲಿ ಅನೇಕರು ಸಣ್ಣ ಆಸೆಯನ್ನಿಟ್ಟುಕೊಂಡಿದ್ದರು. ಆದರೆ ಈಗಿನ ಸರಕಾರ ರಣವೈದ್ಯದ ವೈಖರಿ ನೋಡಿದರೆ, ಕಾಯಿಲೆಯ ನೆಪದಲ್ಲಿ ದುರ್ಬಲರನ್ನು (ಅಂದರೆ ಉದ್ಯೋಗ ಕಳಕೊಂಡವರನ್ನು, ನಡೆನಡೆದು ಸುಸ್ತಾದವರನ್ನು, ಹಸಿದವರನ್ನು) ಕಂದಕಕ್ಕೆ ದೂಡಿ ಮಣ್ಣು ಮುಚ್ಚಲು ಹೊರಟಂತೆ ಕಾಣುತ್ತದೆ. ನಮ್ಮಲ್ಲಿ ಹಕ್ಕಿಜ್ವರ ಬಂತೆಂದು ಹ್ಯಾಚರಿಯ ಸಾವಿರಾರು ಕೋಳಿಗಳನ್ನು ಕಂದಕಕ್ಕೆ ಹಾಕಿ ಮಣ್ಣು ಮುಚ್ಚಿದ ಹಾಗೆ.

(ಇಲ್ಲೊಂದು ಕ್ರೂರ ವ್ಯಂಗವಿದೆ: ಪ್ರಧಾನಿ ಮೋದಿಯವರು ಘೋಷಿಸಿದ 20 ಲಕ್ಷ ಕೋಟಿಯಲ್ಲಿ ಯಾವಯಾವ ಬಾಬ್ತಿಗೆ ಎಷ್ಟೆಷ್ಟು ಎಂಬುದನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಲ್ಕು ಟ್ರಾಂಚ್‌ (tranche)ಗಳಲ್ಲಿ ಹಂಚಿದ್ದಾರೆ. ನಾಲ್ಕನೆಯ ಕಂತಿನಲ್ಲಂತೂ ಗಣಿಗಾರಿಕೆ ವಿಸ್ತರಣೆಗೆ, ರಕ್ಷಣಾ ಉತ್ಪಾದನೆ, ವಿಮಾನಯಾನ, ಬಾಹ್ಯಾಕಾಶ ಸಾಹಸಕ್ಕೆ ಇತ್ಯಾದಿಯಂತೆ.

ಟ್ರಾಂಚ್ ಎಂದರೆ ಹೋಳು ಅಥವಾ ಭಾಗ. ಆದರೆ ನೀವು ಗೂಗಲ್ ಕನ್ನಡ ನಿಘಂಟಿನಲ್ಲಿ ಅದರ ಅರ್ಥವನ್ನು ಹುಡುಕಿದರೆ ಟ್ರಾಂಚ್ ಎಂದರೆ ‘ಕಂದಕ’ trench ಎಂಬ ತಪ್ಪು ಅರ್ಥವಿದೆ, ಬೇಕಿದ್ದರೆ ನೋಡಿ. ನಿಜಕ್ಕೂ 40 ಕೋಟಿ ಜನರನ್ನು ಕಂದಕಕ್ಕೆ ಬೀಳಿಸಿ ತಪ್ಪನ್ನೇ ಸರಿಯೆಂದು, trancheನ್ನೇ trench ಎಂದು ತೋರಿಸುವ ಹುನ್ನಾರವೆ?.)

ಹಳ್ಳಿಯ ಜನರು ಹಳ್ಳಿಗೇ ಮರಳಿ ವಲಸೆ ಬಂದಾಗ ಎಷ್ಟೊಂದು ವಿಧಗಳಲ್ಲಿ ಅವರಿಗೆ ನೆರವಾಗಲು ಸಾಧ್ಯವಿತ್ತು. ಅದರ ಕೆಲವು ಯಶಸ್ವೀ ಉದಾಹರಣೆಗಳು ನಮ್ಮಲ್ಲಿವೆ: ಮಹಾರಾಷ್ಟ್ರದಲ್ಲಿ ಹೀವ್ಡೆ ಬಝಾರ್ ಎಂಬ ಗ್ರಾಮವಿದೆ. ನಮ್ಮ ಕೋಲಾರದ ಯಾವುದೇ ಊರಿನ ಹಾಗೆ ಬರೀ 430 ಮಿ.ಮೀ. ಮಳೆ ಬೀಳುವ ಹಳ್ಳಿ.

1980ರ ದಶಕದಲ್ಲಿ ಬಹಳಷ್ಟು ಜನ ದಿಕ್ಕೆಟ್ಟು ಉದ್ಯೋಗ ಹುಡುಕಿ ಮುಂಬೈಗೋ ಪುಣೆಗೋ ಹೋದರು. ಆ ಊರಿನ ಪುಣ್ಯಾತ್ಮನೊಬ್ಬ ಸರಪಂಚನೆಂದು ಆಯ್ಕೆಯಾದ. ಮಳೆಕೊಯ್ಲು ಮಾಡಿಸಿದ. ಗಿಡಮರ ನೆಡಿಸಿದ. ಅಂತರ್ಜಲ ಹೆಚ್ಚಿತು. ಊರು ನಳನಳಿಸಿತು. ಕೃಷಿ, ಕುರಿಸಾಕಣೆ, ಡೇರಿ ಎಲ್ಲಕ್ಕೂ ಚೈತನ್ಯ ಬಂತು.

ಗುಳೆ ಹೋದವರು ಮರಳಿ ಬಂದರು. ಇಂದು ಆ ಊರಲ್ಲಿ (ನಂಬಿ ಇದನ್ನು) ಬಡತನದ ರೇಖೆಗಿಂತ ಕೆಳಗಿದ್ದ 135 ಕುಟುಂಬಗಳು ಮೇಲೆದ್ದು ಬಂದಿವೆ, 60 ಜನರು ದಶಲಕ್ಷಾಧೀಶರಾಗಿದ್ದಾರೆ. ಸರಕಾರಿ ಇಲಾಖೆಗಳ ಅಧಿಕಾರಿಗಳಿಗೆ ಈ ಊರೇ ಈಗ ಪ್ರವಾಸೀ ತಾಣವಾಗಿದೆ. ಬೇಕಿದ್ದರೆ Hewre Bazar ಎಂದು ಅಂತರಜಾಲದಲ್ಲಿ ಹುಡುಕಿ ನೋಡಿ.
ನಗರಮುಖೀ ವಲಸೆಯನ್ನು ಹೀಗೆ ಹಿಮ್ಮೊಗ ತಿರುಗಿಸಲು ಸಾಧ್ಯವೆಂದು ಮೊದಲು ತೋರಿಸಿದವರು ಅಣ್ಣಾ ಹಜಾರೆ ಮತ್ತು ರಾಜೇಂದ್ರ ಸಿಂಗ್.

ತಮ್ಮ ಊರಿನ ನೀರು, ನೆಲ, ಗಾಳಿ, ಬೆಳಕನ್ನೇ ಸಂಪತ್ತನ್ನಾಗಿ ಬಳಸಿಕೊಂಡು ಗ್ರಾಮದ ಸಮೃದ್ಧಿಗೆ ಕಾರಣರಾದ ಬೇರೆ ನೂರಾರು ಜನರ ಉದಾಹರಣೆಗಳು ನಮ್ಮಲ್ಲಿವೆ. ಕೊಯಮತ್ತೂರಿನ ಸಮೀಪದ ಒಡಂತ್ತುರೈ ಗ್ರಾಮ ತನ್ನ ಬಿಸಿಲಿನಿಂದ ಬರುವ ವಿದ್ಯುತ್ತನ್ನೇ ಮಾರಾಟ ಮಾಡುತ್ತ ಗ್ರಾಮಪಂಚಾಯತನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದೆ.

ಕಳೆದ ನಾಲ್ಕು ವರ್ಷಗಳಿಂದ ಆಮಿರ್ ಖಾನ್ ಆರಂಭಿಸಿದ ವಾಟರ್ ಕಪ್ ಮಳೆಕೊಯ್ಲಿನ ಸ್ಪರ್ಧೆಯಿಂದಾಗಿ ಮಹಾರಾಷ್ಟ್ರದಲ್ಲಿ ಅನೇಕ ಹಳ್ಳಿಗಳಲ್ಲಿ ಜಲ ಸಂವರ್ಧನೆ ಆಗಿದ್ದು, ಊರು ಬಿಟ್ಟು ಹೋದವರು ಮರಳಿ ಬರುತ್ತಿದ್ದಾರೆ. ಟ್ಯಾಂಕರ್ ನೀರನ್ನೇ ಆಧರಿಸಿದ್ದ ಬರಪೀಡಿತ ಹಳ್ಳಿಗಳು ಈಗ ತಮ್ಮ ಬಳಿಯ ಹೆಚ್ಚುವರಿ ನೀರನ್ನು ನಗರಕ್ಕೂ ಪೂರೈಸಲು ಮುಂದಾಗಿವೆ. ಇಂಧನ ವನಗಳನ್ನು ಸೃಷ್ಟಿಸಿ ನಗರಗಳಿಗೆ ಬಯೊಡೀಸೆಲ್ಲನ್ನೂ ಒದಗಿಸುವ ಕನಸು ಕಾಣುತ್ತಿದ್ದಾರೆ.

ಇಂಥ ಸ್ವಾವಲಂಬಿ ಗ್ರಾಮಗಳ ಒಂದು ಉದಾಹರಣೆಯೂ ಸರಕಾರದ ಗಮನಕ್ಕೆ ಬರಲೇ ಇಲ್ಲವೆ? ಗ್ರಾಮೀಣ ಜಲಸಂಪತ್ತನ್ನು ಹೆಚ್ಚಿಸುವ ಸರಳ ವಿಧಾನ ಅದಕ್ಕೆ ಗೊತ್ತೇ ಇಲ್ಲವೆ?
ಸರಕಾರ ಮನಸ್ಸು ಮಾಡಿದರೆ, ತಾಲ್ಲೂಕು ಮಟ್ಟದಲ್ಲೇ ಉತ್ತಮ ಗುಣಮಟ್ಟದ ಸಾಬೂನು, ಟೂಥ್ಪೇಸ್ಟ್, ಸೊಳ್ಳೆಪರದೆ, ಸೊಳ್ಳೆಬತ್ತಿ, ಶಾಂಪೂ, ಸುಗಂಧ ತೈಲ, ಪೇಯ, ಪ್ಯಾರಾಸಿಟೆಮಾಲ್, ಆಯುರ್ವೇದ ಔಷಧಗಳು, ಅಷ್ಟೇಕೆ ಗ್ರಾಮಗಳಿಗೆ ಬೇಕಾದ ಪ್ಲಾಸ್ಟಿಕ್ ಚಪ್ಪಲಿಗಳಿಂದ ಹಿಡಿದು ಕೃಷಿ ಸಲಕರಣೆ, ರಸಗೊಬ್ಬರಗಳ ಉತ್ಪಾದನೆಗೆ ಪ್ರೋತ್ಸಾಹ ನೀಡಬಹುದಿತ್ತು.

ಇವನ್ನೆಲ್ಲ ಬೃಹತ್, ನಗರಕೇಂದ್ರಿತ ಉದ್ಯಮಗಳ ಮುಷ್ಟಿಯಿಂದ ತಪ್ಪಿಸಿ ತಾಲ್ಲೂಕು ಮಟ್ಟಕ್ಕೆ ತಂದು ಸ್ಥಳೀಯರಿಗೆ ಉದ್ಯೋಗ ಸಿಗುವಂತೆ ಮಾಡಿ, ವಾಣಿಜ್ಯ ರಂಗದ ಅಸಲೀ ಸ್ವಾವಲಂಬನೆ ಸಾಧಿಸಬಹುದಿತ್ತು. ಅದರ ಬದಲಿಗೆ ಖನಿಜ ಮತ್ತು ಕಲ್ಲಿದ್ದಲ ಗಣಿಗಾರಿಕೆಗೆ ಹೆಬ್ಬಾಗಿಲು ತೆರೆಯಲಿದೆ.

ಕಲ್ಲಿದ್ದಲು ಎಂಬುದೇ ಮಹಾ ವಿಷವೃತ್ತ. ನಮ್ಮ ಎಲ್ಲ ಕಲ್ಲಿದ್ದಲ ನಿಕ್ಷೇಪಗಳೂ ಛತ್ತೀಸಗಢ, ಝಾರ್ಖಂಡ್, ಬಿಹಾರ್‌ನ ದಟ್ಟ ಅರಣ್ಯಗಳಲ್ಲಿವೆ. ಅಲ್ಲಿ ಆದಿವಾಸಿಗಳೂ ಮೂಲನಿವಾಸಿಗಳೂ ಇದ್ದಾರೆ. ಅವರನ್ನೆಲ್ಲ ಗುಡಿಸಿ ಒತ್ತಿ, ಜೀವಲೋಕವನ್ನು ಧ್ವಂಸ ಮಾಡಿ, ತೆರೆದ ಗಣಿಗಳ ಮೂಲಕ ಕಲ್ಲಿದ್ದಲನ್ನು ಸ್ಫೋಟಿಸಿ, (ಚಿತ್ರವನ್ನು ಗಮನಿಸಿ) ನೂರಾರು ಉಷ್ಣವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಿದರೆ ಹೊಮ್ಮುವ ಕಾರ್ಬನ್ ಡೈಆಕ್ಸೈಡ್‌ ಇಡೀ ಜಗತ್ತಿಗೇ ಮಾರಕ.

ಹಾರುಬೂದಿ, ಸೆಕೆ ಹೆಚ್ಚಳ, ಜಲಮಾಲಿನ್ಯ ಒಂದಲ್ಲ, ಎರಡಲ್ಲ. ಅಲ್ಲಿಂದ ಪಡೆದ ವಿದ್ಯುತ್ತು ನಗರಗಳ ಮಾಲ್‌ಗಳಿಗೆ.ಮತ್ತು ತರಾವರಿ ಯಂತ್ರಗಳಿಗೆ, ಕೊಳ್ಳುಬಾಕ ಶೋಕಿ ವಸ್ತುಗಳ ಉತ್ಪಾದನೆಗೆ ಹೋಗುತ್ತದೆ. ಅದರ ಲಾಭವೆಲ್ಲ ತಿರ್ಗಾ ಕೋಟ್ಯಧೀಶ ಉದ್ಯಮಿಗಳಿಗೆ.

ನಿಸರ್ಗ ಸಂಪತ್ತನ್ನು ಹೀಗೆ ಲೂಟಿ ಮಾಡಲು ದೊಡ್ಡ ಕಂಪನಿಗಳಿಗೆ ಅನುವು ಮಾಡಿಕೊಡಲೆಂದೇ ತೆರಿಗೆದಾರರ 50 ಸಾವಿರ ಕೋಟಿ ಮೀಸಲಿಡುವುದಾಗಿ ಸರಕಾರ ಘೋಷಿಸಿದೆ. ಅದಕ್ಕೆಂದು ಪರಿಸರ ಸಂರಕ್ಷಣೆಯ ಬಿಗಿ ಕಾನೂನುಗಳನ್ನು ಸಡಿಲ ಮಾಡುವ ಸಿದ್ಧತೆ ಆಗಲೇ ನಡೆದಿದೆ.

ನಿಸರ್ಗದ ದುರಂತ ಕತೆ ಹೀಗೆ. ಹಾಗಿದ್ದರೆ ಮನುಷ್ಯರ ಕತೆ? ಈ ರಣವೈದ್ಯ ಮಾಡಿದರೆ 40 ಕೋಟಿ ಬಡ, ಕಡುಬಡವರ ಹಾಗು ಆದಿವಾಸಿಗಳ ಸ್ಥಿತಿಗತಿ ಉತ್ತಮಗೊಂಡೀತೆ? ಅದೂ ಇಲ್ಲ.
ಮೂಲ ನಿವಾಸಿಗಳಿಗೆ ಅರಣ್ಯಾಧಾರಿತ ಉದ್ಯೋಗ ಕೊಡಲೆಂದು 6000 ಕೋಟಿ ಮೀಸಲಿದೆಯಂತೆ. ಅದರ ಕತೆ ಕೇಳಿ. ಅದು ಖಾಸಗಿಯ ಕಂಪನಿಗಳ ಜಂಟಿ ಯೋಜನೆಯಂತೆ. ಅಂದರೆ ಅರಣ್ಯಗಳಿಗೂ ಕೋಟ್ಯಧೀಶರು ಲಗ್ಗೆ ಇಡಲಿದ್ದಾರೆ. ಮೂಲನಿವಾಸಿಗಳ ಜಮೀನನ್ನು ಮುಗಿಸಿದ ನಂತರ ಮುಂದೇನು ಆದೀತೆಂದು ನಾವು ಊಹಿಸಬಹುದು.

ಆದಿವಾಸಿಗಳ ಕಲ್ಯಾಣವೇ ಮುಖ್ಯ ಗುರಿಯಾಗಿದ್ದಿದ್ದರೆ ಈಗಿರುವ ನರೇಗಾ ಸ್ಕೀಮನ್ನೇ ಸುಧಾರಿಸಿ ಅವರಿಗೂ ವಿಸ್ತರಿಸಬಹುದಿತ್ತು. ಗಿಡ ನೆಡುವ, ಬೇಲಿ ಕಂದಕಗಳಂಥ ಭದ್ರತಾ ಕೆಲಸವನ್ನು ಅವರೇ ಮಾಡಬಹುದಿತ್ತು. ಹಳ್ಳಿಗಳಲ್ಲೂ ನರೇಗಾ ದುಡಿಮೆಯ ಅವಧಿಯನ್ನು ಈಗಿನ 100 ದಿನಗಳ ಬದಲು 200-300 ಅಥವಾ ಅಗತ್ಯವಿದ್ದಷ್ಟು ದಿನಗಳಿಗೆ ವಿಸ್ತರಿಬಹುದಿತ್ತು. ಅದರತ್ತ ಆದ್ಯತೆಯೇ ಇಲ್ಲ.

ಅಷ್ಟೊಂದು ಜನರು ಹಳ್ಳಿಗಳಿಗೆ ಹಿಂದಿರುಗಿದ್ದಾರೆ. ಅವರಿಂದ ಎಷ್ಟೊಂದು ಗ್ರಾಮೀಣ ಅಭಿವೃದ್ಧಿಯ ಕೆಲಸ ಮಾಡಿಸಬಹುದಿತ್ತು. ಹಳ್ಳಿಗಳಿಗೆ ಹಿಂದಿರುಗಿದ ಆ ನತದೃಷ್ಟರಿಗೆ ಯಾವ ನೆರವೂ ಇಲ್ಲ. ನಗರ ನಿರ್ಮಾಣದಲ್ಲಿ ತೊಡಗಿದ್ದ ಅವರಲ್ಲಿ ಅನೇಕರು ಹಿಂದೆಲ್ಲ ಚುನಾವಣೆ ಬಂದಾಗ ತಮ್ಮದೇ ಖರ್ಚಿನಲ್ಲಿ ಊರಿಗೆ ಹೋಗಿ ಮತ ಹಾಕಿ ಈ ಸರಕಾರವನ್ನು ನಿಲ್ಲಿಸಿದವರು. ಪ್ರಧಾನಿಯವರ ಒಂದು ಅವಸರದ ಲಾಕ್‌ಡೌನ್‌ ಘೋಷಣೆಯಿಂದಾಗಿ ಇಡೀ ಜಗತ್ತೇ ಕಂಬನಿ ಮಿಡಿಯುವಂಥ ದುರ್ದೆಸೆಗೆ ಈಡಾದವರು. ಅವರ ಕೈ ಹಿಡಿಯುವ ಬದಲು ಬಹುಕೋಟ್ಯಧೀಶರ ಕೈ ಹಿಡಿಯಲು ಸರಕಾರ ಹೊರಟಿದೆ.

ದೇಶದ 20 ಕೋಟಿ ಮಹಿಳೆಯರ ಜನ್‌ಧನ್ ಖಾತೆಗೆ ತಿಂಗಳಿಗೆ 500 ರೂ. ಜೊತೆಗೆ 80 ಕೋಟಿ ಜನರಿಗೆ 6 ಕಿಲೊ ಧಾನ್ಯವನ್ನು ಮೂರು ತಿಂಗಳ ಅವಧಿಗೆ ಕೊಡುವುದಾಗಿ ಸರಕಾರ ಮಾರ್ಚ್‌ನಲ್ಲಿ ಹೇಳಿತ್ತು. ಅದನ್ನು ಇನ್ನೂ ಮೂರು ತಿಂಗಳಿಗೆ ವಿಸ್ತರಿಸಬಹುದಿತ್ತು. ಈ ತೀರಾ ಜುಜುಬಿ ಸಹಾಯದ ಮೊತ್ತವನ್ನು ಹೆಚ್ಚಿಸಬಹುದಿತ್ತು. ಹೆಚ್ಚಿಸುವುದು ಹಾಗಿರಲಿ, ಸರಕಾರದ್ದೇ ದಾಖಲೆಗಳ ಪ್ರಕಾರ ಈ ನೆರವೂ ಶೇ. 25ರಷ್ಟು ಜನರಿಗೆ ಮಾತ್ರ ತಲುಪಿದೆ. ಕೇವಲ 110 ಲಕ್ಷ ಟನ್ ಧಾನ್ಯ ಮಾತ್ರ ವಿತರಣೆಯಾಗಿದೆ.

ಹಾಗೆಂದು ನಮ್ಮ ದೇಶ ಅಷ್ಟೊಂದು ದರಿದ್ರ ಸ್ಥಿತಿಯಲ್ಲೇನೂ ಇಲ್ಲ. ತಜ್ಞರ ಲೆಕ್ಕಾಚಾರದ ಪ್ರಕಾರ ಕೆಲಸ ಕಳೆದುಕೊಂಡವರಿಗೆ ತಿಂಗಳಿಗೆ 7 ಸಾವಿರ ನಗದು ಮತ್ತು ದೇಶದ ಶೇ. 80ರಷ್ಟು ಜನಕ್ಕೆ ತಿಂಗಳಿಗೆ ಹತ್ತು ಕಿಲೊ ಧಾನ್ಯದಂತೆ ಆರು ತಿಂಗಳವರೆಗೆ ಉಚಿತವಾಗಿ ಕೊಟ್ಟಿದ್ದರೂ ನಮ್ಮ ಜಿಡಿಪಿಯ ಕೇವಲ 3%ರಷ್ಟು ವೆಚ್ಚವಾಗುತ್ತಿತ್ತು. ಅದನ್ನಂತೂ ಮಾಡಲಿಲ್ಲ. ತನ್ನ ಬಹುತೇಕ ವೈಫಲ್ಯಗಳಿಗೆ ರಾಜ್ಯಗಳನ್ನು ದೂರುವುದನ್ನು ಬಿಟ್ಟು ಸರಕಾರ ಏನನ್ನೂ ಮಾಡಲಿಲ್ಲ. ರಾಜ್ಯಗಳಿಗೂ ಸಿಗಬೇಕಾದ ಧನಸಹಾಯವನ್ನು ಪೂರ್ತಿ ನೀಡಲಿಲ್ಲ.

ಈಗ ಟ್ರಾಂಚ್ 3ರ ಕತೆ ಕೇಳಿ.
ಸಣ್ಣ ಮತ್ತು ಮಧ್ಯಮ ಉದ್ಯಮ(MSME)ಗಳು ಚೇತರಿಸಿಕೊಳ್ಳಲೆಂದು 3.7 ಲಕ್ಷ ಕೋಟಿ ಸಾಲ ಕೊಡುವುದಾಗಿ ಸರಕಾರ ಹೇಳಿದೆ. ಅದು ಆಮೇಲಾಗಲಿ, ಈವರೆಗೆ ಸಂದಾಯವಾಗಬೇಕಿದ್ದ 5 ಲಕ್ಷ ಕೋಟಿ ಬಾಕಿ ಹಣವನ್ನು ಮೊದಲು ಕೊಡ್ರಪ್ಪಾ ಎಂದು MSME ಗಳು ಕೇಳುತ್ತಿವೆ. ಅದಂತೂ ಬಾಕಿ ಇದೆ. ಈ ಹೊಸ ಸಾಲವನ್ನು ಪಡೆದು ಉತ್ಪಾದನೆ ಆರಂಭಿಸೋಣವೆಂದರೆ ಕಾರ್ಮಿಕರು ಎಲ್ಲಿದ್ದಾರೆ? ಅಂದಾಜು 12 ಕೋಟಿ ಕಾರ್ಮಿಕರು ಕೆಲಸ ಕಳೆದುಕೊಂಡು ತಂತಮ್ಮ ಹಳ್ಳಿಗಳಿಗೆ ಹೋಗಿದ್ದಾರೆ.

ಅವರು ಮರಳಿ ಬಾರದಂತೆ ಮಾಡಲು ಹೊಸ ಕಾರ್ಮಿಕ ನೀತಿಗಳನ್ನು ಜಾರಿಗೆ ತರಲು ಸರಕಾರ ಹೊರಟಿದೆ. ಕೆಲಸಗಾರರ ಹಕ್ಕುಗಳನ್ನೇ ಮೊಟಕುಗೊಳಿಸಿ ಅವರ ದುಡಿಮೆಯ ಅವಧಿಯನ್ನು 50% ಜಾಸ್ತಿ ಮಾಡುತ್ತಾರಂತೆ. ಸರಿ, ಕಾರ್ಮಿಕರು ಹೇಗೋ ಬಂದು ಉತ್ಪಾದನೆ ಆರಂಭಿಸಿದರೂ ಫ್ಯಾಕ್ಟರಿಯ ಉತ್ಪನ್ನಗಳನ್ನು ಖರೀದಿಸಲು ಜನರ ಬಳಿ ಹಣ ಎಲ್ಲಿದೆ? ಅದಕ್ಕೆ ಈಗ ಟ್ರಾಂಚ್‌ 4ನ್ನು ಹಣಕಾಸು ಸಚಿವೆ ಘೋಷಣೆ ಮಾಡಿದೆ.

ಹಣದ ಚಲಾವಣೆ ಹೆಚ್ಚಿಸಲೆಂದೇ ಎಗ್ಗಿಲ್ಲದ ಗಣಿಗಾರಿಕೆ, ಹೊಸ ವಿಮಾನ ನಿಲ್ದಾಣ ನಿರ್ಮಾಣ, ರಕ್ಷಣಾ ಸಾಮಗ್ರಿ ಉತ್ಪಾದನೆ, ಬಾಹ್ಯಾಕಾಶ ಎಲ್ಲವನ್ನೂ ಖಾಸಗಿ ಕಂಪನಿಗಳಿಗೆ ವಹಿಸುತ್ತಾರಂತೆ. ಲಾಕ್‌ಡೌನ್‌ ಸಡಿಲವಾಗುವ ಮೊದಲೇ ದೇಶದ ಹಿತಾಸಕ್ತಿಯನ್ನು ಕಾಯಬೇಕಿದ್ದ ನಿಯಮಗಳನ್ನೇ ಸಡಿಲ ಮಾಡಲಾಗುತ್ತಿದೆ.

ಅದಕ್ಕೇ, ‘ವಲಸಿಗರಿಗೆ ಮನೆ ತಲುಪಲು ಸಾಧ್ಯವಾಗುತ್ತಿಲ್ಲ; ಬಾಹ್ಯಾಕಾಶಕ್ಕೆ ಹೋಗಲು ಧನಿಕರಿಗೆ ಅನುಕೂಲ ಮಾಡುತ್ತಾರಂತೆ’ ಎಂದು ಜೈರಾಮ್ ರಮೇಶ್ ಕುಟುಕಿದ್ದಾರೆ. ಯಾರೆಷ್ಟೇ ಕುಟಕಿದರೂ ಪ್ರಭುತ್ವಕ್ಕೆ ವಂದಿಮಾಗಧರ ಮತ್ತು ಬಹುಕೋಟ್ಯಧೀಶರ ಭೋಪರಾಕ್ ಮಾತ್ರ ಕೇಳಿಸುತ್ತದೆ. ಕಂದಕಕ್ಕೆ ಕುಸಿದವರ ಆಕ್ರಂದನ ಮಾತ್ರ ಕೇಳಿಸುತ್ತಿಲ್ಲ.

ಅರಣ್ಯವಾಸಿಗಳನ್ನು ಹೊರಗಟ್ಟುವ ಗಣಿಗುತ್ತಿಗೆದಾರರ ಷಡ್ಯಂತ್ರದ ವಿರುದ್ಧ ಆದಿವಾಸಿಗಳ ಒಂದು ಸೊಗಸಾದ ಪ್ರತಿಭಟನಾ ಲಾವಣಿಯನ್ನು ಈ ಕೊಂಡಿಯಲ್ಲಿದೆ: ಕ್ಲಿಕ್ ಮಾಡಿ ನೋನೋಡಿ

https://www.youtube.com/watch?v=sFmsl7KrZn8

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಡಾ.ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸೇವಾಸಿಂಧು ಪೋರ್ಟಲ್ ಮೂಲಕ ಅಕ್ಟೋಬರ್.30 ರೊಳಗಾಗಿ ಸಲ್ಲಿಸಿ, ಸಲ್ಲಿಸಿದ ಅರ್ಜಿ ಮತ್ತು ದಾಖಲೆಗಳನ್ನು ಜಿಲ್ಲಾ ಸಂಯೋಜಕರು, ಡಾ.ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ನಿಗಮ, ದಾವಣಗೆರೆ ಇಲ್ಲಿಗೆ ಸಲ್ಲಿಸಲು ಹಾಗೂ ಮೊ.ಸಂ:9845801361, 8105976617 ನ್ನು ಸಂಪರ್ಕಿಸಲು ತಿಳಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗುರುಕುಲ ಶಾಲೆಯ ಮಕ್ಕಳೊಂದಿಗೆ ಬೆರೆತ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ

Published

on

ಸುದ್ದಿದಿನ,ದಾವಣಗೆರೆ:ಸಂಸದರಾದ ಪ್ರಭಾ ಮಲ್ಲಿಕಾರ್ಜುನ್ ಅವರು ನಗರದ ಗುರುಕುಲ ವಸತಿಯುತ ಶಾಲೆಯ ಮಕ್ಕಳೊಂದಿಗೆ ಬೆರೆತು ತಮ್ಮ ಲೋಕಸಭಾ ಸದಸ್ಯತ್ವದ ಅನುಭವದ ಜೊತೆಗೆ ಶಿಕ್ಷಣದ ಮಹತ್ವ ತಿಳಿಸಿದರಲ್ಲದೇ ಸಮಾಜದ ಸೇವೆಯ ಅನುಭವವನ್ನು ನೀಡಿ ಸ್ಫೂರ್ತಿ ತುಂಬಿದರು.

ಇತ್ತೀಚಿಗೆ ನಗರದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ನಿವಾಸಕ್ಕೆ ಗುರುಕುಲ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕ ವೃಂದದವರೊಂದಿಗೆ ಭೇಟಿ ನೀಡಿ, ಸಂಸದರಾಗಿ ಆಯ್ಕೆಯಾಗಿದ್ದಕ್ಕೆ ಶುಭ ಕೋರಿದರಲ್ಲದೇ, ಕೆಲ ಸಮಯ ಅವರೊಂದಿಗೆ ಲೋಕಸಭಾ ಕ್ಷೇತ್ರದ ಸೇವೆಯ ಬಗ್ಗೆ ಮಾತುಕತೆ ನಡೆಸಿದರು.

ಪ್ರಭಾ ಮಲ್ಲಿಕಾರ್ಜುನ ಅವರು, ವಿದ್ಯಾರ್ಥಿಗಳು ತಮ್ಮ ಆಸಕ್ತಿಗಳನ್ನು ಅನುಸರಿಸಿ, ಸಮಾಜಕ್ಕೆ ಹಿತಕರವಾಗಿ ಕೊಡುಗೆ ನೀಡುವ ಮಹತ್ವವನ್ನು ವಿವರಿಸಿದರು. ಅವರು ಮಕ್ಕಳ ಹಲವು ಪ್ರಶ್ನೆಗಳಿಗೆ ಸಮಾಧಾನಕರ ಉತ್ತರಗಳನ್ನು ನೀಡಿದರು.
ಇದರಿಂದ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮತ್ತು ಸಾಮಾಜಿಕ ಹೊಣೆಗಾರಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯನ್ನು ಹೊಂದಿದರು. ಇವರ ಮಾತುಗಳು ಪ್ರೋತ್ಸಾಹ ಮತ್ತು ಮಹತ್ವದ ಸಂದೇಶಗಳಿಂದ ತುಂಬಿದ್ದವು. ಅಲ್ಲದೇ ಮಕ್ಕಳಿಗೆ ಭವಿಷ್ಯದಲ್ಲಿ ಸ್ಫೂರ್ತಿಯಿಂದ ಉಜ್ವಲತೆಗೆ ಸಾಕ್ಷಿಯಾದವು.

ಓದುತ್ತಿರುವ ತರಗತಿಯ ಬಗ್ಗೆ ಎಲ್ಲ ಮಕ್ಕಳ ವಿಚಾರಿಸುತ್ತಾ, ಭವ್ಯ ಭವಿಷ್ಯದಲ್ಲಿ ಯಾವ ಸ್ಥಾನ ಇಚ್ಚಿಸುವಿರಾ ಎಂದು ಕೇಳುತ್ತಾ, ಶಿಕ್ಷಕ ವೃತ್ತಿಯೂ ಸಹ ಅಮೂಲ್ಯವಾಗಿದೆ. ಅಕ್ಷರ ಜ್ಞಾನ ನೀಡುವ ಕೆಲಸಕ್ಕೂ ಒತ್ತು ಕೊಡಬೇಕು. ಜನರ ಬಳಿಯೇ ಹೋಗಿ ಕಷ್ಟ, ನಷ್ಟಗಳ ವಿಚಾರಿಸಿ ಪರಿಹರಿಸುವುದೇ ನಿಜವಾದ ಸಮಾಜ ಸೇವೆ. ಅದುವೇ ಸಾಮಾಜಿಕ ನಾಯಕನ ಹೊಣೆಗಾರಿಕೆ. ಈ ರೀತಿ ನಿಮ್ಮ ಭವಿಷ್ಯದಲ್ಲೂ ಆಗಿ ಎಂದರು.

ಮಕ್ಕಳು ಸಂಸದರಾದ ಪ್ರಭಾ ಮಲ್ಲಿಕಾರ್ಜುನ ಅವರಿಗೆ ಸೆಲ್ಯೂಟ್ ಮೂಲಕ ಅವರ ಲೋಕಸಭಾ ಸ್ಥಾನ ಅಲಂಕರಿಸಿದ್ದಕ್ಕೆ ಹಾಗೂ ಅವರ ಸೇವೆಗೆ ಗೌರವ ಸೂಚಿಸಿದರು. ಇದಕ್ಕೆ ಪ್ರಭಾ ಮಲ್ಲಿಕಾರ್ಜುನ ತಾವೂ ಸೆಲ್ಯೂಟ್ ಮಾಡಿ ವಿದ್ಯಾರ್ಥಿಗಳಿಗೆ ಧನ್ಯವಾದ ತಿಳಿಸಿದರು. ಅಲ್ಲದೇ ವಿದ್ಯಾರ್ಥಿಗಳು ನೆನಪಿನ ಕಾಣಿಕೆಯಾಗಿ ಪ್ರಭಾ ಮಲ್ಲಿಕಾರ್ಜುನ ಭಾವಚಿತ್ರವುಳ್ಳ ಫೋಟೋ ನೀಡಿದರು.

ಈ ಸಂದರ್ಭದಲ್ಲಿ ಗುರುಕುಲ ವಸತಿಯುತ ಶಾಲೆ ಅಧ್ಯಕ್ಷ ಅಬ್ದುಲ್ ಆರ್., ಸಾನಿಯಾ ಜೆಹರ, ಶಿಕ್ಷಣ ಸಂಯೋಜಕರಾದ ಶ್ವೇತ.ಎಂ. ಹೆಚ್, ರೇಖಾ ಎಲ್. ಪಾಟೀಲ್, ಎಜಾಜ್ ಅಹ್ಮದ್, ಸಂದೀಪ್ ಪಿ., ಶಾಂತ ಡಿ.ಎಸ್., ರೇಖಾ ಎನ್.ಆರ್., ಸವಿತಾ ಕಾಟ್ವೆ, ಸಹ ಶಿಕ್ಷಕರಾದ ಬಸವರಾಜ್, ಸುಭಾಷ್ ಓ., ಸೈಯದ ಹಮೀಬಾ, ಸಾಯಿರಾ ಖಾನಮ್, ನೂರ್ ಜಹಾನ್, ಹಮೀದ ಬಾನು, ಹಾಗೂ ಗುರುಕುಲ ವಸತಿಯುತ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಮಕ್ಕಳ ದಿನಾಚರಣೆ ಅಂಗವಾಗಿ ಬಾಲಕರಿಗೆ ಹೊಯ್ಸಳ ಮತ್ತು ಬಾಲಕಿಯರಿಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸಿಗಾಗಿ ಹಾಗೂ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿದ ವ್ಯಕ್ತಿ ಹಾಗೂ ಸಂಸ್ಥೆಗೆ ಪ್ರಶಸ್ತಿ ಪತ್ರ ನೀಡಲು ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸ್ವೀಕೃತವಾಗದ ಕಾರಣ ಅರ್ಜಿ ಸಲ್ಲಿಸುವ ಅವಧಿಯನ್ನು ಅಕ್ಟೋಬರ್ 14 ರವರೆಗೆ ವಿಸ್ತರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ರಾಜನಾಯ್ಕ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending