ದಿನದ ಸುದ್ದಿ
ಕೋವಿಡ್ -19 | ಲಾಕ್ ಡೌನ್ ನಿಂದ ಉಂಟಾಗುವ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಮುನ್ನೋಟ..!
- ಕ್ರಾಂತಿರಾಜ್ ಒಡೆಯರ್ ಎಂ, ಸಹಾಯಕ ಪ್ರಾಧ್ಯಾಪಕರು, ಮೈಸೂರು
ಸಂದರ್ಭ 1
ಬೇರೆ ಬೇರೆ ರಾಜ್ಯಗಳಿಂದ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದಿದ್ದ ವಲಸೆ ಕಾರ್ಮಿಕರು ಕೋವಿಡ್ 19 ಲಾಕ್ ಡೌನ್ ನಿಂದ ಕೆಲಸವಿಲ್ಲದೇ ಜೀವನೋಪಾಯ ಕಷ್ಟವಾಗಿ, ತಮ್ಮ ತಮ್ಮ ಊರುಗಳಿಗೆ ಹೊರಡಲು ರೈಲ್ವೆ ಹಾಗು ಬಸ್ಸು ನಿಲ್ದಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸೇರಿದ್ದ ವಲಸೆ ಕಾರ್ಮಿಕರ ಕುರಿತು ನಮ್ಮ ರಾಜ್ಯದ ಮುಖ್ಯಮಂತ್ರಿ ಯೆಡಿಯೂರಪ್ಪನವರು, ಕಾರ್ಮಿಕರು ವಾಪಸು ಹೋಗದಂತೆ ಕಳಕಳಿಯ ಮನವಿ ಮಾಡಿಕೊಂಡರೂ, ಮುಖ್ಯಮಂತ್ರಿಗಳ ಮನವಿಗೆ ಸ್ಪಂಧಿಸದ ವಲಸೆ ಕಾರ್ಮಿಕರು, ತಾವು 2 ತಿಂಗಳಿನಿಂದ ಅನುಭವಿಸುತ್ತಿರುವ ಯಾತನೆ ಸಾಕು.
ಈಗಲಾದರೂ ತಮ್ಮ ತಮ್ಮ ಊರುಗಳಿಗೆ ಸೇರಿಕೊಳ್ಳೋಣ ಎಂದು ಕೆಲವರು ಈಗಾಗಲೇ ತಮ್ಮ ಊರು ಸೇರಿಕೊಂಡಿದ್ದರೆ, ಹಲವರು ತಮ್ಮ ಗೂಡು ಸೇರಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ಸಂದರ್ಭ 2
ಒಂದು ವಾರದ ಹಿಂದೆ ಟಿ ವಿ ಯಲ್ಲಿ ನೋಡಿದ್ದು. ಮುಂಬೈಯಿಂದ ಉತ್ತರ ಪ್ರದೇಶಕ್ಕೆ ಕಾಲ್ನಡಿಗೆಯಲ್ಲಿ ಹೊರಟಿದ್ದ ವಲಸೆ ಕಾರ್ಮಿಕನಿಗೆ ಪತ್ರಕರ್ತ ಕೇಳಿದ ಪ್ರಶ್ನೆ, “ಸರ್ಕಾರ ನಿಮಗಾಗಿ ರೈಲಿನ ವ್ಯವಸ್ಥೆ ಮಾಡಿದೆ.
ನೀವು ಏಕೆ ನಡೆದು ಹೋಗ್ತಿದ್ದೀರಾ? ಲಾಕ್ ಡೌನ್ ಮುಗಿದ ಮೇಲೆ ವಾಪಸ್ ಇಲ್ಲಿಗೆ ಬರುತ್ತೀರಾ?” ಎಂಬ ಹಲವಾರು ಪ್ರಶ್ನೆಗಳಿಗೆ ವಲಸೆ ಕಾರ್ಮಿಕ ಕೊಟ್ಟ ಉತ್ತರ, “ನಮಗೆ ಅಕ್ಷರ ಜ್ಞಾನ ಇಲ್ಲ, ಈ ಮೊಬೈಲ್ ಬಳಸಲು ಸಹ ಬರಲ್ಲ, ಅವರ ಇವರ ಬಳಿ ಕಾಡಿ ಬೇಡಿ ಅನ್ ಲೈನ್ ಅರ್ಜಿ ಸಲ್ಲಿಸಿದ್ದೆ ಅದು ರಿಜೆಕ್ಟ್ ಆಗಿದೆ, ಮತ್ತೆ ಯಾರು ಅರ್ಜಿ ಹಾಕಲು ಸಹಾಯ ಮಾಡಲಿಲ್ಲ, ಅದಕ್ಕೆ ನಡೆದುಕೊಂಡೆ ಹೋಗ್ತಿದ್ದಿನಿ.ಊರಲ್ಲಿ ಅಪ್ಪನಿಗೆ ವ್ಯವಸಾಯಕ್ಕೆ ಸಹಾಯ ಮಾಡಿಕೊಂಡು ಇರ್ತೀನಿ ವಿನಾ ಇಲ್ಲಿ ಬಂದು ಇನ್ನೊಮ್ಮೆ ನರಕಯಾತನೆ ಅನುಭವಿಸಲು ಇಷ್ಟ ಇಲ್ಲ”.
ಸಂದರ್ಭ 3
ಮೈಸೂರಿನ ಹೆಮ್ಮೆಯ ಉದ್ದಿಮೆಗಳಾದ ಸಥರನ್ ಸ್ಟಾರ್ ಹೋಟೆಲ್ ಹಾಗು ರೀಡ್ ಅಂಡ್ ಟೇಲರ್ ಕಂಪನಿಗಳು ಲಾಕ್ ಡೌನ್ ನಿಂದ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದು, ದೇಶದ ಆರ್ಥಿಕ ಸ್ಥಿತಿಗತಿಯು ಅನಿಶ್ಚಿತತೆಯಿಂದ ಕೂಡಿದ್ದು, ಮುಂದೇನು ಮಾಡಬೇಕೆಂಬ ದಾರಿ ತೋಚದೆ, ಉದ್ದಿಮೆಗಳನ್ನು ಮುಚ್ಚಿದ್ದು, ಸುಮಾರು 2000 ಕಾರ್ಮಿಕರು ಬೀದಿಪಾಲಾದಂತಾಗಿದೆ.
ಈ ಸಮಸ್ಯೆ ಕೇವಲ ವಲಸೆ ಕಾರ್ಮಿಕರು ಹಾಗು ಕೆಲವು ಕಂಪೆನಿಗಳದ್ದಲ್ಲ. ದೇಶದ ಎಲ್ಲ ಆರ್ಥಿಕ ವಲಯಗಳಿಗೂ ಹರಡಿರುವ ಸಮಸ್ಯೆ. ಭಾರತದಲ್ಲಿ ಸರಿ ಸುಮಾರು 67% ರಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಹಲವು ಸಂಸ್ಥೆಗಳ ಸಮೀಕ್ಷೆಗಳು ಹೇಳುತ್ತವೆ.
ಈ ಸಂದರ್ಭದಲ್ಲಿ ಆಗಿರುವ ಬದಲಾವಣೆಗಳಿಂದ ದೇಶದಲ್ಲಿ ದೊಡ್ಡ ಮಟ್ಟದ ಆರ್ಥಿಕ ಹಾಗು ಸಾಮಾಜಿಕ ಸಮಸ್ಯೆಗಳು ಉಂಟಾಗಲಿದ್ದು, ನಮ್ಮ ಆಡಳಿತ ವ್ಯವಸ್ಥೆಯು ಸಮಸ್ಯೆ ಹೋಗಲಾಡಿಸಲು ಸರಿಯಾದ ಮಾರ್ಗೋಪಾಯಗಳನ್ನು ಕಂಡುಕೊಳ್ಳದ್ದಿದ್ದರೆ, ದೇಶವು ಸರಿಪಡಿಸಲಾಗದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಲಿದೆ. ಕೋವಿಡ್ 19 ಲಾಕ್ ಡೌನ್ ನಿಂದ ದೇಶದ ಆರ್ಥಿಕ ವಲಯಗಳ ಮೇಲೆ ಉಂಟಾಗುವ ಸಾಮಾಜಿಕ ಹಾಗು ಆರ್ಥಿಕ ಪರಿಣಾಮಗಳನ್ನು ಅವಲೋಕಿಸುವುದಾದರೆ..
ಸಣ್ಣ, ಮಧ್ಯಮ ಹಾಗು ಬೃಹತ್ ಉದ್ದಿಮೆಗಳ ಮೇಲೆ ಉಂಟಾಗುವ ಪರಿಣಾಮ
ಲಾಕ್ ಡೌನ್ ನಿಂದ ಉದ್ದಿಮೆಗಳು ಸಂಪೂರ್ಣ ಮುಚ್ಚಿದ್ದು, ಐಟಿ, ಬಿಟಿ ವಲಯಗಳೇನೋ ಕಾರ್ಮಿಕರಿಗೆ ಮನೆಯಿಂದಲೇ ಕೆಲಸ ನಿರ್ವಹಿಸುವ ಸೌಲಭ್ಯವನ್ನು ಕಲ್ಪಿಸಿದ್ದು, ಈ ವ್ಯವಸ್ಥೆ ಇನ್ನೂ 6 ತಿಂಗಳು ಮುಂದುವರೆಯುವ ಮುನ್ಸೂಚನೆಯನ್ನು ಹಲವು ಕಂಪನಿಗಳು ನೀಡಿವೆ.
ಆದರೆ ಉತ್ಪಾದನಾ ವಲಯವು ಬೇಡಿಕೆ ಇಲ್ಲದೇ, ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿದ್ದು, ಈ ವಲಯದ ಮುಂದಿನ ದಿನಗಳು ಅನಿಶ್ಚಿತತೆಯಿಂದ ಕೂಡಿದೆ. ಕೆಲಸ ಕಳೆದುಕೊಂಡ ಕಾರ್ಮಿಕರಲ್ಲಿ ಹಲವರು ಈಗಾಗಲೇ ತಮ್ಮ ತಮ್ಮ ಊರುಗಳನ್ನು ಸೇರಿಕೊಂಡಿದ್ದು, ಇನ್ನೂ ಹಲವರು ತಮ್ಮ ಊರು ಸೇರಿಕೊಳ್ಳುವ ಪ್ರಕ್ರಿಯೆಯಲ್ಲಿದ್ದು, ತಮ್ಮ ಜೀವನೋಪಾಯಕ್ಕೆ ತಮ್ಮ ತಮ್ಮ ಹಳ್ಳಿಗಳಲ್ಲೇ ಹಲವು ಆರ್ಥಿಕ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದು, ಮುಂದೊಂದು ದಿನ ದೇಶದ ಆರ್ಥಿಕ ವ್ಯವಸ್ಥೆ ಸರಿಹೋದರೂ, ಇವರು ತಮ್ಮ ಹಳೇ ಕೆಲಸಗಳಿಗೆ ಮರಳುವುದು ಕಷ್ಟಸಾಧ್ಯ.
ಇದರಿಂದ ಈ ವಲಯಕ್ಕೆ ಕಾರ್ಮಿಕರ ಕೊರತೆ ಉಂಟಾಗಲಿದ್ದು, ಉದ್ದಿಮೆಗಳಿಗೆ ತಗಲುವ ಕಾರ್ಮಿಕರ ವೆಚ್ಚ ಹೆಚ್ಚಾಗಲಿದ್ದು, ಇದರಿಂದ ಈ ವಲಯ ತಯಾರಿಸುವ ಉತ್ಪನ್ನಗಳ ಬೆಲೆ ಹೆಚ್ಚಾಗಲಿದ್ದು, ಗ್ರಾಹಕರ ಮೇಲೆ ಬೆಲೆ ಏರಿಕೆಯ ಬರೆ ಬೀಳುವುದು ಗ್ಯಾರಂಟಿ. ಮತ್ತೊಂದು ಸಮಸ್ಯೆ ಎಂದರೆ, ಕಾರ್ಖಾನೆಗಳ ಮಾಲೀಕರು ಈಗಾಗಲೇ ಅನುಭವಿಸಿರುವ ನಷ್ಟವನ್ನು ಸರಿದೂಗಿಸಿಕೊಳ್ಳಲು, ಬೇರೆ ದಾರಿ ತೋಚದೆ ಇದೇ ಕೆಲಸದಲ್ಲಿ ಉಳಿಯುವ ಕಾರ್ಮಿಕರಿಂದ ಕಡಿಮೆ ಸಂಬಳಕ್ಕೆ ಹೆಚ್ಚು ಕೆಲಸ ಮಾಡಿಸಿ ಶೋಷಣೆ ಮಾಡುವ ದಿನಗಳನ್ನು ಶೀಘ್ರದಲ್ಲೇ ನೋಡುತ್ತೇವೆ.
ಶಿಕ್ಷಣ ವಲಯದ ಮೇಲೆ ಉಂಟಾಗುವ ಪರಿಣಾಮ
ನಮ್ಮ ದೇಶದ ಆರ್ಥಿಕ ವ್ಯವಸ್ಥೆಯಲ್ಲಿನ ಬೇಡಿಕೆ ಕುಂಠಿತದಿಂದಾಗಿ ಉದ್ದಿಮೆಗಳು ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕುತ್ತಿದ್ದು, ಬೇಡಿಕೆ ಮರಳಲು ಇನ್ನೂ 3 ರಿಂದ 4 ವರ್ಷಗಳು ಬೇಕಾಗಬಹುದು. ಈ ಸಂದರ್ಭದಲ್ಲಿ, ಪ್ರಸ್ತುತ ವರ್ಷದಲ್ಲಿ ಹಾಗೂ ಮುಂದಿನ ಕೆಲವು ವರ್ಷಗಳಲ್ಲಿ ಪದವಿ ಪಡೆದು ಉದ್ಯೋಗದ ಕನಸು ಕಟ್ಟಿಕೊಳ್ಳುವ ವಿದ್ಯಾರ್ಥಿಗಳನ್ನು ನೆನೆಸಿಕೊಂಡರೆ ಅಯ್ಯೋ ಎನಿಸುತ್ತದೆ. ಇವರು ಉದ್ಯೋಗ ಪಡೆದು ಜೀವನದಲ್ಲಿ ನೆಲೆಯೂರುವ ದಿನಗಳು ಮುಂದೆ ಹೋದಷ್ಟು, ಇವರ ಸ್ವಾಭಿಮಾನದ ಜೀವನದ ಕನಸು, ಮದುವೆ ಆಸೆಗಳು ಮುಂದೂಡಲಾಗಿ, ಜೀವನದ ಸಹಜ ಪ್ರಕ್ರಿಯೆಗಳಿಗೆ ಹಾಗು ಹಣಕಾಸಿನ ಸಂಪಾದನೆಗೆ ಅಡ್ಡದಾರಿಯನ್ನು ಹಿಡಿಯಬಹುದಾದ ಸಂದರ್ಭ ಬರಬಹುದು.
ಸರ್ಕಾರ ನಿರ್ವಹಿಸಬೇಕಾದ ಪಾತ್ರ
ಜಾನ್ ಮೇನಾರ್ಡ್ ಕೇನ್ಸ್ ಎಂಬ ಇಂಗ್ಲೆಂಡ್ ದೇಶದ ಶ್ರೇಷ್ಠ ಆರ್ಥಿಕ ತಜ್ಞ ಅವನ The theory of Empolyment, Interest and Money ಹಾಗೂ The Role of the Government ಎನ್ನುವ ಪುಸ್ತಕದಲ್ಲಿ ದೇಶಗಳು ಆರ್ಥಿಕ ಸಂಕಷ್ಟದಲ್ಲಿ ಯಾವ ರೀತಿಯ ಆರ್ಥಿಕ ನೀತಿಗಳನ್ನು ರೂಪಿಸಬೇಕು ಎಂದು ಹೇಳುತ್ತಾ, “ಆರ್ಥಿಕ ದುಸ್ಥಿತಿಯಲ್ಲಿ ಆಳುವ ಸರ್ಕಾರಗಳು, ಯಾವುದಾದರೂ ಮೂಲಗಳಿಂದ ಹಣವನ್ನು ತಂದು ಆರ್ಥಿಕ ವ್ಯವಸ್ಥೆಯ ತಳ ಪದರಕ್ಕೆ (ಕುಟುಂಬಗಳಿಗೆ ಹಾಗು ಕಾರ್ಮಿಕ ಸಮೂಹ) ನೇರ ಹಂಚಬೇಕು.ಇದರಿಂದ ಕಾರ್ಮಿಕರನ್ನು ಅವರವರ ಕೆಲಸಗಳಲ್ಲಿ ಜೀವಂತವಾಗಿಟ್ಟುಕೊಳ್ಳುವುದಲ್ಲದೇ, ಉತ್ಪನ್ನಗಳಿಗೆ ಬೇಡಿಕೆಯನ್ನೂ ಹುಟ್ಟಿಸಬಹುದಾಗಿದ್ದು, ದೊಡ್ಡಮಟ್ಟದ ಆರ್ಥಿಕ ಕುಸಿತದಿಂದ ದೇಶವನ್ನು ರಕ್ಷಿಸಬಹುದು” ಎಂದು ಹೇಳುತ್ತಾನೆ. ಇಂದಿನ ಸಂದರ್ಭದಲ್ಲಿ ಜಾನ್ ಮೇನಾರ್ಡ್ ಕೇನ್ಸ್ ನ ಆರ್ಥಿಕ ಸಿದ್ಧಾಂತವು ಪ್ರಸ್ತುತವೆನಿಸುತ್ತದೆ.
ಆದರೆ ನಮ್ಮ ಸರ್ಕಾರದ ಆರ್ಥಿಕ ಪ್ಯಾಕೇಜ್ ನೋಡಿದಾಗ, ಕಡಿಮೆ ಪ್ರಮಾಣದ ಹಣಕಾಸಿನ ಪ್ಯಾಕೇಜ್ ಆರ್ಥಿಕ ವ್ಯವಸ್ಥೆಯ ಕೆಳಸ್ತರಕ್ಕೆ ಮೀಸಲಿಟ್ಟಿದ್ದು, ದೊಡ್ಡ ಮಟ್ಟದ ಹಣ ಮೇಲಿನ ಸ್ತರಕ್ಕೆ ಮೀಸಲಿಟ್ಟಿದೆ.
ಇದರಿಂದ ಇಂದಿನ ಆರ್ಥಿಕ ಸಮಸ್ಯೆ ಬಗೆಹರಿಯದು ಎಂಬುದು ನನ್ನ ಅನಿಸಿಕೆ. ಇಂದು ನಮಗೆ ಬೇಕಿರುವುದು “BOTTOM TO TOP ECONOMIC APPROACH” ಹೊರತು “TOP TO BOTTOM ECONOMIC APPROACH” ಅಲ್ಲ. ಆಳುವ ಸರ್ಕಾರಗಳು ಲಭ್ಯವಿರುವ ಆರ್ಥಿಕ ಸಿದ್ದಾಂತಗಳನ್ನು ಅಧ್ಯಯಿಸಿ ಸಂದರ್ಭಕ್ಕೆ ಸರಿಯಾದ ಆರ್ಥಿಕ ನೀತಿಗಳನ್ನು ರೂಪಿಸಬೇಕೆಂಬುದು ನನ್ನ ಅನಿಸಿಕೆ.
(ಲೇಖಕರು :ಕ್ರಾಂತಿರಾಜ್ ಒಡೆಯರ್ ಎಂ
ಸಹಾಯಕ ಪ್ರಾಧ್ಯಾಪಕರು
ವ್ಯವಹಾರ ನಿರ್ವಹಣಾ ವಿಭಾಗ
ಸೇಪಿಯೆಂಟ್ ಕಾಲೇಜು
ಮೈಸೂರು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್‌ಲೈನ್ ರಸ್ತೆಯಲ್ಲಿ ನಡೆದಿದೆ.
23 ವರ್ಷದ ಅಂಜಲಿ ಕೊಲೆಯಾದ ಯುವತಿಯಾಗಿದ್ದು, ರಾಜೀವ್ ಬಂಧಿತ ಆರೋಪಿ. ಕಳೆದ ಮೂರು-ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಪರಿಚಯವಾಗಿ ಸ್ನೇಹ ಬೆಳೆದು, ಬಳಿಕ ಅದು ಪ್ರೀತಿಗೆ ತಿರುಗಿತ್ತು.
ಆದರೆ ರಾಜೀವ್‌ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ ಅಂಜಲಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಕುಟುಂಬಸ್ಥರನ್ನು ಒಪ್ಪಿಸಲು ರಾಜೀವ್ ಪ್ರಯತ್ನಿಸಿದ್ದರೂ ಫಲಿಸಿರಲಿಲ್ಲ. ಇತ್ತೀಚೆಗೆ ಪೋಷಕರ ಒತ್ತಾಯಕ್ಕೆ ಮಣಿದ ಅಂಜಲಿ ರಾಜೀವ್‌ನಿಂದ ದೂರವಾಗಲು ಆರಂಭಿಸಿದ್ದಳು. ಇಂದು ಸಂಜೆ ಅಂಜಲಿಯನ್ನು ಊಟದ ನೆಪದಲ್ಲಿ ಕರೆಸಿಕೊಂಡಿದ್ದ ರಾಜೀವ್, ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ರಾಜೀವ್ ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಇರಿದಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃ*ತಪಟ್ಟಿದ್ದಾಳೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್‌ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ
ಸುದ್ದಿದಿನ ಡೆಸ್ಕ್:ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಸಂಸ್ಥೆಯಡಿ ಪ್ರಿಯಾ ಸುದೀಪ್ ನಿರ್ಮಿಸಿದ ಮೊದಲ ಚಿತ್ರ ‘ಮ್ಯಾಂಗೋ ಪಚ್ಚ’. ಸಂಚಿತ್ ಸಂಜೀವ್ ಅಭಿನಯದ ಈ ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ.
ಈ ಸೋಲನ್ನು ಹಿಂದಕ್ಕೆ ಹಾಕಿ, ಪ್ರಿಯಾ ಸುದೀಪ್ ಇನ್ನಷ್ಟು ಹೊಸ ಕಥೆಗಳನ್ನು ತೆರೆಗೆ ತರುವುದಕ್ಕೆ, ಹೊಸ ಚಿತ್ರಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಕಥೆಗಾರರಿಗೆ ಆಹ್ವಾನ ನೀಡಿದ್ದಾರೆ. ‘ನಾವು ಹುಡುಕುತ್ತಿರುವುದು ಕೇವಲ ಕಥೆಗಳಲ್ಲ. ಮನಸ್ಸುಗಳನ್ನು ಮುಟ್ಟುವ ಭಾವನೆಗಳು, ಚಿಂತನೆಗೆ ಹಚ್ಚುವ ವಿಚಾರಗಳು ಮತ್ತು ಪರದೆಯ ಮೇಲೆ ಹೊಸ ಇತಿಹಾಸ ಬರೆಯುವ ಕಲ್ಪನೆಗಳು.
ನಿಮ್ಮ ಬಳಿ ಮೌಲಿಕ ಕಥೆ-ಚಿತ್ರಕಥೆ ಇದ್ದರೆ ಅಥವಾ ವಿಶಿಷ್ಟ ಕಥಾ ಪರಿಕಲ್ಪನೆ ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಮತ್ತು ಸೃಜನಾತ್ಮಕತೆಯನ್ನು ಹೊಂದಿರುವ ಲೇಖಕರು, ಕಥೆಗಾರರು ಮತ್ತು ಸೃಜನಶೀಲ ಮನಸ್ಸುಗಳನ್ನು ನಾವು ಸ್ವಾಗತಿಸುತ್ತೇವೆ. ಎಲ್ಲಾ ಪ್ರಕಾರಗಳು ಮತ್ತು ಎಲ್ಲಾ ಮಾದರಿಗಳಲ್ಲಿನ ಕಥಾ ಸಲ್ಲಿಕೆಗಳನ್ನು ನಾವು ಸ್ವಾಗತಿಸುತ್ತೇವೆ. ನಿಮ್ಮ ಕಥೆಯೇ ಮುಂದಿನ ದೊಡ್ಡ ಪ್ರಯಾಣದ ಆರಂಭವಾಗಬಹುದು’ ಎಂದು ಪ್ರಿಯಾ ಸುದೀಪ್, ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಜೊತೆಗೆ ಒಂದು ಮೊಬೈಲ್ ಸಂಖ್ಯೆಯನ್ನು ಸಹ ಹಂಚಿಕೊಂಡಿದ್ದಾರೆ. ಆದರೆ, ಕರೆ ಮಾಡುವಂತಿಲ್ಲ. ಚಾಟ್ ಮಾತ್ರ ಮಾಡಬಹುದು. ಕಥೆಗಳಿದ್ದರೆ 6663307434 ಸಂಖ್ಯೆಯನ್ನು ಸಂಪರ್ಕಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದುರಂತ | ಮೇಲ್ಛಾವಣಿ ಕುಸಿದು ಮೂವರು ಸಾವು
ಸುದ್ದಿದಿನ,ರಾಯಚೂರು: ಕಟ್ಟಡದ ಮೇಲ್ಛಾವಣಿಯ ಸಜ್ಜಾ ಏಕಾಏಕಿ ಕುಸಿದು ಬಿದ್ದು ಮೂವರು ಯುವಕರು ಮೃತಪಟ್ಟ ದುರ್ಘಟನೆ ಭಾನುವಾರ ಜಿಲ್ಲೆಯ ದೇವದುರ್ಗ ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪ ಸಂಭವಿಸಿದೆ.
ಮೃತರನ್ನು ದೇವದುರ್ಗ ತಾಲೂಕಿನ ಸಮುದ್ರ ಗ್ರಾಮದ ರವಿಚಂದ್ರ (35), ಕ್ಯಾದಿಗೆರಾ ಗ್ರಾಮದ ನಾಗರಾಜ್ (30) ಹಾಗೂ ಕೊತ್ತಿಗುಡ್ಡದ ಅರ್ಜುನ್ (21) ಎಂದು ಗುರುತಿಸಲಾಗಿದೆ.
ಕಟ್ಟಡದ ಅವಶೇಷಗಳಡಿ ಸಿಲುಕಿ ರವಿಚಂದ್ರ ಹಾಗೂ ನಾಗರಾಜ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅರ್ಜುನ್ ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿಯ ಪ್ರಕಾರ, ಯುವಕರು ತಾವೇ ನಿರ್ಮಿಸಿದ್ದ ‘ಅಂತ್ಯವಾಯ್ತು’ ಎಂಬ ಕಿರುಚಿತ್ರದ ಪೋಸ್ಟರ್ ಅಂಟಿಸಲು ಕಟ್ಟಡದ ಬಳಿ ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ.
ಕಟ್ಟಡದ ಮೇಲ್ಛಾವಣಿಯ ಒಂದು ಭಾಗವು, ಅದಕ್ಕೆ ಜೋಡಣೆಯಾಗಿದ್ದ ಕಬ್ಬಿಣದ ಮೆಟ್ಟಿಲುಗಳ ಸಹಿತ ಕುಸಿದು ಬಿದ್ದಿದೆ. ಘಟನೆಯಲ್ಲಿ ಉಮೇಶ್, ಪ್ರಭು ಹಾಗೂ ಅಭಿಷೇಕ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಘಟನಾ ಸ್ಥಳಕ್ಕೆ ದೇವದುರ್ಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯ ನಂತರ ನಿಖರ ಕಾರಣ ತಿಳಿಯಲಿದೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ದೇವದುರ್ಗ ಶಾಸಕಿ ಕರೆಮ್ಮ ನಾಯಕ ಭೇಟಿ ನೀಡಿ, ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ23 hours agoಪಲ್ಸ್ ಪೋಲಿಯೋದಿಂದ ಯಾವುದೇ ಮಗು ವಂಚಿತವಾಗದಂತೆ ಕ್ರಮವಹಿಸಿ: ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್
-
ದಿನದ ಸುದ್ದಿ8 hours agoನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ
-
ದಿನದ ಸುದ್ದಿ22 hours agoದುರಂತ | ಮೇಲ್ಛಾವಣಿ ಕುಸಿದು ಮೂವರು ಸಾವು
-
ದಿನದ ಸುದ್ದಿ5 hours agoಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ

