Connect with us

ದಿನದ ಸುದ್ದಿ

ದಾವಣಗೆರೆ | 17.50 ಕೋಟಿಯ ಸುಸಜ್ಜಿತ ರೈಲ್ವೆ ನಿಲ್ದಾಣ, ಡಿಸಿಎಂ ಬಡಾವಣೆಯಲ್ಲಿ ಆಧುನಿಕ ರೈಲ್ವೆ ಕೆಳ ಸೇತುವೆ ಹಾಗೂ ಸ್ಮಾರ್ಟ್ ಸಿಟಿಗೆ ಸ್ಮಾರ್ಟ್ ರೈಲ್ವೆ ನಿಲ್ದಾಣ : ಜಿ.ಎಂ.ಸಿದ್ದೇಶ್ವರ

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿ ಸೇರ್ಪಡೆ ಆದ ಮೇಲೆ ಸ್ಮಾರ್ಟ್ ಸಿಟಿಗೆ ಸರಿಹೊಂದುವ ರೈಲ್ವೆ ನಿಲ್ದಾಣ ಆಗಬೇಕು ಹಾಗೂ ತಿಂಗಳಲ್ಲಿ ಸರಾಸರಿ 1.5 ಕೋಟಿಯಷ್ಟು ವರಮಾನ ಬರುವ ದಾವಣಗೆರೆ ರೈಲ್ವೆ ನಿಲ್ದಾಣ ಅತ್ಯಾಧುನಿಕ ಕಟ್ಟಡ ಹೊಂದಬೇಕು ಎಂಬ ನನ್ನ ಆಶಯ ಇಂದು ಈಡೇರಿದೆ ಎಂದು ಸಂಸದರಾದ ಜಿ.ಎಂ.ಸಿದ್ದೇಶ್ವರ ತಿಳಿಸಿದರು.

ಡಿಸಿಎಂ ಬಡಾವಣೆ ಬಳಿಯ ನವೀಕೃತ ರೈಲ್ವೆ ಕೆಳ ಸೇತುವೆ (ಯುಆರ್‍ಬಿ) ಹಾಗೂ ರೈಲ್ವೆ ನಿಲ್ದಾಣದ ನೂತನ ಕಟ್ಟಡವನ್ನು ಉದ್ಘಾಟಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನನ್ನ ಲೋಕಸಭಾ ಅವಧಿಯಲ್ಲಿ ನನಗೆ ತೃಪ್ತಿ ನೀಡಿದ ಕೆಲಸಗಳಲ್ಲಿ ರೈಲ್ವೆ ನಿಲ್ದಾಣ ನಿರ್ಮಾಣವೂ ಕೂಡ ಒಂದು.

ಇದನ್ನೂ ಓದಿ | ಭಾರತದಲ್ಲಿ 89,129 ಹೊಸ ಕೋವಿಡ್ ಪ್ರಕರಣಗಳು ದಾಖಲು

ಕೋವಿಡ್ ಆರ್ಥಿಕ ಸಂಕಷ್ಟದ ನಡುವೆಯೂ ಕೂಡ ರೈಲ್ವೆ ಇಲಾಖೆಯ ಸಾಮಥ್ರ್ಯ ಸ್ವಲ್ಪವೂ ಕಡಿಮೆಯಾಗಿಲ್ಲ. ಕೋವಿಡ್ ನಿಂದ ಲಾಕ್‍ಡೌನ್ ಆದ ಸಮಯದಲ್ಲಿ ಹಗಲಿರುಳೆನ್ನದೇ ಕಾಯನಿರ್ವಹಿಸಿದ್ದ ರೈಲ್ವೆ ನೌಕರರಿಗೆ ಅಭಿನಂದಿಸಿದರು. ನಗರದಲ್ಲಿ ರೂ. 17.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನವೀಕೃತ ರೈಲ್ವೆ ನಿಲ್ದಾಣವನ್ನು ಮುಂದಿನ 2 ವರ್ಷಗಳಲ್ಲಿ ಜಿ ಪ್ಲಸ್ 2 ಮಾದರಿ ಕಟ್ಟಡವಾಗಿ ಪರಿವರ್ತಿಸುವ ಗುರಿ ಹೊಂದಿದ್ದೇವೆ ಎಂದರು.

ನಗರದಲ್ಲಿ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಆರಂಭವಾಗಿ ಇನ್ನೂ ಮುಗಿದಿಲ್ಲ. ಆದರೆ ರೈಲ್ವೆ ನಿಲ್ದಾಣ ಕೈಗೆತ್ತಿಕೊಂಡ ಒಂದು ವರ್ಷದಲ್ಲೇ ಪೂರ್ಣಗೊಳಿಸಲಾಗಿದೆ. ಇದಕ್ಕೆ ಕೇಂದ್ರದ ಮಾಜಿ ಸಚಿವ ಸುರೇಶ್ ಅಂಗಡಿ ಕಾರಣೀಭೂತರು ಎಂದು ಅವರನ್ನು ಸ್ಮರಿಸಿದರು.

ರೈಲ್ವೆ ನಿಲ್ದಾಣವನ್ನು ಕಲಾತ್ಮಕವಾಗಿ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಫುಟ್‍ಓವರ್ ಬ್ರಿಡ್ಜ್, ವಿಶಾಲವಾದ ಫ್ಲಾಟ್‍ಫಾರ್ಮ್ ಶೆಲ್ಟರ್, ಸ್ಟೇಷನ್ ಕಟ್ಟಡ, ಪಾರ್ಕಿಂಗ್ ಹಾಗೂ ಗಾರ್ಡನ್ ವ್ಯವಸ್ಥೆ, ಲಿಫ್ಟ್, ಪಿ.ಆರ್‍ಎಸ್ ಸೌಲಭ್ಯ, ವಿಐಪಿ ಲಾಡ್ಜ್, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಕಾಯುವ ಸಭಾಂಗಣ, ಅತ್ಯಾಧುನಿಕ ಮಿಸಲಾತಿ ವ್ಯವಸ್ಥೆ, ಬಸ್‍ಬೇ, ವಿಶ್ರಾಂತಿ ಕೊಠಡಿ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಹಾಗೂ ರೈಲ್ವೆ ಪ್ಲಾಟ್‍ಫಾರ್ಮ್ ಟಿಕೆಟ್ ಅನ್ನು ರೂ.10 ಕ್ಕೆ ಸೀಮಿತಗೊಳಿಸಲಾಗಿದೆ ಎಂದು ಸೂಚಿಸಿದರು.

ರೈಲ್ವೆ ಕಟ್ಟಡದ ಹೊರಗಡೆ ವಿಶಾಲವಾದ ಆಗಮನ ಮತ್ತು ನಿರ್ಗಮನ ರಸ್ತೆಗಳು, ವಾಹನ ನಿಲುಗಡೆ ಪ್ರದೇಶ, ಸೆಲ್ಪಿ ಪಾಯಿಂಟ್ (ಐ ಲವ್ ಡಿವಿಜಿ), ಆಟೋ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದ ಮುಖ್ಯ ಪ್ರವೇಶ ದ್ವಾರ ಎದುರಿಗೆ ನಿರ್ಮಿಸಿರುವ 100 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಹಾರುತ್ತಿರುವ ಬೃಹತ್ ರಾಷ್ಟ್ರಧ್ವಜ, ಸುಂದರವಾದ ಗೋಡೆ ನಿರ್ಮಾಣ, ಟಿಕೇಟ್ ಕೌಂಟರ್, ಅತ್ಯಧುನಿಕ ಶೌಚಾಲಯ ಸೇರಿದಂತೆ ವಿವಿಧ ಸವಲತ್ತುಗಳು ಪ್ರಯಾಣಿಕರಿಗೆ ಸಂತಸ ತರಲಿದೆ ಎಂದರು.

ರೈಲು ನಿಲ್ದಾಣದ ಆವರಣದಲ್ಲಿ ವಿಮಾನ ನಿಲ್ದಾಣದಲ್ಲಿರುವ ಬೆಳಕು ವಿನ್ಯಾಸ ಮಾದರಿಯಲ್ಲಿ ಎಲ್‍ಇಡಿ ಬಲ್ಬ್‍ಗಳನ್ನು ಅಳವಡಿಸಲಾಗಿದ್ದು, ಇದರಿಂದ ಬಹಳಷ್ಟು ವಿದ್ಯುತ್ ಉಳಿತಾಯವಾಗಲಿದೆ. ಹಾಗೂ ರೈಲು ನಿಲ್ದಾಣದ ನೂತನ ಕಟ್ಟಡದ ಮೇಲೆ ಇನ್ನೊಂದು ಮಹಡಿಯನ್ನು ನಿರ್ಮಿಸಿ, ಅಭಿವೃದ್ಧಿಗೊಳಿಸುವ ಬಗ್ಗೆ ಪ್ರಸ್ತಾಪ ಸಲ್ಲಿಸಲಾಗಿದೆ.

ಮುಂಬರುವ ದಿನಗಳಲ್ಲಿ ಅದಕ್ಕೂ ಮಂಜೂರಾತಿ ದೊರೆಯಲಿದೆ. ಕಟ್ಟಡ ನಿರ್ಮಾಣದ ನಂತರ ಮಹಡಿ ಮೇಲೆ ಸೌರ ಫಲಕಗಳನ್ನು ಅಳವಡಿಸಿ ನಿಲ್ದಾಣಕ್ಕೆ ಅಗತ್ಯ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ ಎಂದರು.ರೈಲು ನಿಲ್ದಾಣದ ಪಕ್ಕದ ಉಪವಿಭಾಗಾಧಿಕಾರಿ ಕಚೇರಿಯ ಜಾಗವನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಲು ಉದ್ದೇಶಿಸಲಾಗಿದೆ.

ಈ ಜಾಗಕ್ಕೆ ಪರ್ಯಾಯವಾಗಿ ರೈಲ್ವೆ ಇಲಾಖೆಯು ದೊಡ್ಡಬಾತಿ ಬಳಿ ಜಾಗ ನೀಡಲಿದೆ. ಉಪವಿಭಾಗಾಧಿಕಾರಿ ಕಚೇರಿ ನಿರ್ಮಿಸಲು ರೂ. 5 ಕೋಟಿ ಅನುದಾನವನ್ನು ಮುಖ್ಯಮಂತ್ರಿ ಮಂಜೂರು ಮಾಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲಿ ನೂತನ ಕಚೇರಿಯನ್ನು ನಿರ್ಮಿಸಲಾಗುವುದು. ಈಗಿರುವ ಉಪವಿಭಾಗಾಧಿಕಾರಿ ಕಚೇರಿ ಜಾಗದಲ್ಲಿ ರೈಲು ನಿಲ್ದಾಣಕ್ಕೆ ಪ್ರವೇಶ ದ್ವಾರ ನಿರ್ಮಿಸಲಾಗುವುದು. ಜೊತೆಗೆ ಪಾರ್ಕಿಂಗ್ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲಾಗುವುದು.

ಬಾಣಾವರದಿಂದ ದಾವಣಗೆರೆ ಮಾರ್ಗವಾಗಿ ಹುಬ್ಬಳ್ಳಿವರೆಗೆ ರೈಲ್ವೆ ಲೈನ್ ಎಲೆಕ್ಟ್ರಿಫಿಕೇಷನ್ ಗಾಗಿ 160 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೇ ದೇಶದಲ್ಲಿರುವ ಬಹುತೇಕ ಎಲ್ಲಾ ಮಾನವರಹಿತ ಲೆವೆಲ್ ಕ್ರಾಸಿಂಗ್‍ಗಳನ್ನು ತೆರವುಗೊಳಿಸಲಾಗಿದೆ. ಹಾಗೂ ಆತ್ಮನಿರ್ಭರ ಭಾರತ್ ಇದರ ಉದ್ದೇಶಗಳನ್ನು ಈಡೇರಿಸಲು ರೈಲ್ವೆ ಇಲಾಖೆ ಈಗಲೂ ಬದ್ಧವಾಗಿದೆ ಎಂದರು.

2012-13 ರಲ್ಲಿ ಪ್ರತಿದಿನ 4 ರಿಂದ 5 ಕಿ.ಮೀ ರೈಲ್ವೆ ಟ್ರ್ಯಾಕ್ ನಿರ್ಮಾಣ ಆಗ್ತಾ ಇತ್ತು. ಆದರೆ ಈಗ ಪ್ರತಿನಿತ್ಯ ಸರಾಸರಿ 23 ಕಿ.ಮೀ. ರೈಲ್ವೆ ಟ್ರ್ಯಾಕ್ ನಿರ್ಮಾಣ ಆಗುತ್ತಿದೆ. ಅಲ್ಲದೇ ಪ್ರಧಾನಮಂತ್ರಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 30 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸುಮಾರು 503 ಯೋಜನೆಗಳನ್ನು ಪೂರ್ಣಗೊಳಿಸುವ ಹಂತಕ್ಕೆ ತರಲಾಗಿದೆ.

ಹರಿಹರ ನಗರದ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇನೆ. ಹರಿಹರ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಕೋವಿಡ್ ಕಾರಣಕ್ಕೆ ಉಂಟಾದ ಆರ್ಥಿಕ ಸಂಕಷ್ಟದಿಂದ ಮಂಜೂರಾತಿ ಸಿಗಲು ವಿಳಂಬವಾಗಿದೆ. ಮುಂಬರುವ ದಿನಗಳಲ್ಲಿ ಮಂಜೂರಾತಿ ಸಿಗಲಿದೆ ಎಂದರು.

ಹಾಗೂ ಹರಿಹರದ ಅಮರಾವತಿ ಬಳಿ ರೈಲ್ವೆ ನಿಲ್ದಾಣಕ್ಕೆ 30 ಕೋಟಿ ವೆಚ್ಚದಲ್ಲಿ ಮೇಲು ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು ಶೀಘ್ರದಲ್ಲಿ ಉದ್ಘಾಟನೆ ಮಾಡಲಾಗುವುದು ಎಂದರು.

ಹನುಮನಹಳ್ಳಿ ರೈಲು ನಿಲ್ದಾಣದಲ್ಲಿ ರೈಲು ನಿಲುಗಡೆಯ ವ್ಯವಸ್ಥೆಯನ್ನು ಈ ಹಿಂದಿನಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ಜಿ.ಎಂ.ಐ.ಟಿ ಕಾಲೇಜಿನ ಸಮೀಪದ ಕರೂರಿನಲ್ಲಿನ 203ನೇ ರೈಲ್ವೆ ಗೇಟ್ ಬಳಿ ಜುಲೈನಲ್ಲಿ ರೈಲ್ವೆ ಕೆಳಸೇತುವೆ ನಿರ್ಮಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.

ರೂ. 15 ಕೋಟಿ ವೆಚ್ಚದಲ್ಲಿ ರೈಲು ನಿಲ್ದಾಣದ ಆಧುನೀಕರಣ, ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಹಾಗೂ ರೂ. 5 ಕೋಟಿ ವೆಚ್ಚದಲ್ಲಿ ಎಸ್ಕಲೇಟರ್ (ಚಲಿಸುವ ಮೆಟ್ಟಿಲು) ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಅದರಲ್ಲೂ ಎಸ್ಕಲೇಟರ್ ರಾಜ್ಯದ ಬೆಳಗಾವಿ, ಹುಬ್ಬಳ್ಳಿ, ಮಂಗಳೂರು, ಬೆಂಗಳೂರು, ಮೈಸೂರು ಬಿಟ್ಟರೆ ಇನ್ನಿತರ ಯಾವುದೇ ಜಿಲ್ಲೆಗಳಲ್ಲೂ ಇರಲಿಲ್ಲ. ಇದೀಗ ದಾವಣಗೆರೆಯಲ್ಲಿ ಆಗಿರುವುದು ಸಂತಸಕರ ಎಂದರು.

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದರುವ ಅಶೋಕ ರೈಲ್ವೆ ಗೇಟ್ ಬಳಿ ಅಂಡರ್ ಪಾಸ್ ನಿರ್ಮಿಸಲು ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಖಾಸಗಿ ಜಮೀನಿನ ಮಾಲೀಕರೊಂದಿಗೆ ಜಿಲ್ಲಾಡಳಿತ ಮಾತುಕತೆ ನಡೆಸಿದ್ದು, ಶೀಘ್ರವೇ ಪರ್ಯಾಯ ಜಾಗವನ್ನು ಕೊಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಗುವುದು. ಹರಿಹರದಲ್ಲಿ 47 ಎಕರೆ ಜಮೀನಿನಲ್ಲಿ ಎಥನಾಲ್ ಘಟಕವು ಶೀಘ್ರದಲ್ಲೆ ಸ್ಥಾಪನೆಯಾಗಲಿದೆ.

ಮಾಯಕೊಂಡದಿಂದ ಹರಿಹರದವರೆಗೆ ಈಗಾಗಲೇ ರೂ.250 ಕೋಟಿ ವೆಚ್ಚದಲ್ಲಿ ಡಬ್ಲಿಂಗ್ ಕಾಮಗಾರಿ ಪೂರ್ಣಗೊಂಡಿದೆ. ಮೆಗಾ ಜವಳಿ ಪಾರ್ಕ್ ನಿರ್ಮಿಸಲು 1038 ಎಕರೆ ಜಮೀನಿನ ಅಗತ್ಯವಿದ್ದು, ಇಲ್ಲಿಯವರೆಗೂ ಜಮೀನು ಸ್ವಾಧೀನ ನಡೆದಿಲ್ಲ. ಯಾವುದೇ ಕಾಮಗಾರಿ, ಯೋಜನೆಗಳನ್ನು ಪರಿಪೂರ್ಣಮಾಡಬೇಕೆಂದರೆ ಜಾಗದ ಕೊರತೆ ಇದೆ ಎಂದ ಅವರು ವೇಗವಾಗಿ ಬೆಳೆಯುತ್ತಿರುವ ನಗರಕ್ಕೆ ತಕ್ಕಂತೆ ವಿಮಾನ ನಿಲ್ದಾಣ ಆರಂಭಿಸಲು ಶ್ರಮಿಸಲಾಗುವುದು ಎಂದು ತಿಳಿಸಿದರು.

ಪ್ರಪಂಚದಲ್ಲಿಯೇ ನಾಲ್ಕನೇ ಅತಿದೊಡ್ಡ ರೈಲ್ವೆ ನೆಟ್‍ವರ್ಕ್ ಎಂಬ ಖ್ಯಾತಿಯನ್ನು ನಮ್ಮ ಇಂಡಿಯನ್ ರೈಲ್ವೆ ಹೊಂದಿದೆ. ಈ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿಗೆ ತಕ್ಕ ಹಾಗೆ ಸ್ಮಾರ್ಟ್ ರೈಲ್ವೆ ನಿಲ್ದಾಣ ಆಗಿರುವುದು ಸಂತೋಷವಾಗಿದೆ. ಪ್ರಸ್ತುತ ದೇಶದ ಶೇಕಡ 33 ರಷ್ಟು ಸರಕು ಸಾಗಾಟ ರೈಲ್ವೆ ಮೂಲಕ ನಡೆಯುತ್ತಿದೆ. ಇದನ್ನು 2030 ರ ವೇಳೆಗೆ ಶೇಕಡ 50 ಕ್ಕೆ ಮುಟ್ಟಿಸುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದೆ.

ಬೇಡಿಕೆಗೆ ಮುಂಚೆಯೇ ಮೂಲಸೌಕರ್ಯ ಸಾಮಥ್ರ್ಯವನ್ನು ಸೃಷ್ಟಿಸುವುದು ರಾಷ್ಟ್ರೀಯ ರೈಲ್ವೆ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, 2030 ರೊಳಗೆ ದೇಶಾದ್ಯಂತ ಬ್ರಾಡ್‍ಗೇಜ್‍ನ್ನು ಸಂಪೂರ್ಣ ಎಲೆಕ್ಟ್ರಿಫಿಕೇಷನ್ ಮಾಡುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದೆ. ಈಗಾಗಲೇ ಶೇಕಡ 58 ರಷ್ಟು ಎಲೆಕ್ಟ್ರಿಫಿಕೇಶನ್ ಕಾರ್ಯ ಪೂರ್ಣಗೊಂಡಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಹಾಪೌರರಾದ ಎಸ್.ಟಿ.ವೀರೇಶ್, ದೂಡ ಅಧ್ಯಕ್ಷರಾದ ಶಿವಕುಮಾರ್, ವಿಭಾಗೀಯ ಮುಖ್ಯ ವ್ಯವಸ್ಥಾಪಕರಾದ ರಾಹುಲ್ ಅಗರ್‍ವಾಲ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಮುಖಂಡರಾದ ಯಶವಂತರಾವ್ ಜಾದವ್, ವೀರೇಶ್ ಹನಗವಾಡಿ, ಲೋಕಿಕೆರೆ ನಾಗರಾಜ್, ಸುಧಾ ಜಯಪ್ರಕಾಶ್, ಲಿಂಗರಾಜ್ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

5 ವರ್ಷದಿಂದ PFಗೆ ಹಣ ಜಮಾ ಮಾಡಿಲ್ಲ, ಬಡ್ಡಿ ಸಿಗುತ್ತಾ? ಇಲ್ಲಿದೆ EPFO ನಿಯಮದ ಸ್ಪಷ್ಟ ಮಾಹಿತಿ!

Published

on

3 ವರ್ಷದ ನಂತರ ಬಡ್ಡಿ ನಿಲ್ಲುತ್ತದೆ ಎಂಬುದು ಹಳೆಯ ನಿಯಮ; 58 ವರ್ಷದವರೆಗೆ ಬಡ್ಡಿ ಗ್ಯಾರಂಟಿ, ಆದರೆ ಈ ತೆರಿಗೆ ನಿಯಮ ಗೊತ್ತಿರಲಿ

ಸುದ್ದಿದಿನ, ಬೆಂಗಳೂರು: ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (EPFO) ಚಂದಾದಾರರಲ್ಲಿ ಬಹುದಿನಗಳಿಂದ ಒಂದು ದೊಡ್ಡ ಗೊಂದಲವಿದೆ. ನಾನು ಕೆಲಸ ಬಿಟ್ಟಿದ್ದೇನೆ, ಕಳೆದ 5 ವರ್ಷಗಳಿಂದ ಪಿಎಫ್ ಖಾತೆಗೆ ಹಣ ಜಮೆಯಾಗಿಲ್ಲ, ಹಾಗಾದರೆ ನನ್ನ ಖಾತೆಗೆ ಇನ್ನೂ ಬಡ್ಡಿ ಸಿಗುತ್ತದೆಯೇ ಅಥವಾ ನನ್ನ ಹಣ ಹಾಗೆಯೇ ಉಳಿದುಕೊಳ್ಳುತ್ತದೆಯೇ?’ ಎಂಬುದು ಆ ಪ್ರಶ್ನೆ. ಈ ಪ್ರಶ್ನೆಗೆ ಇಪಿಎಫ್‌ಒ ನೇರವಾಗಿ ನೀಡಿರುವ ಉತ್ತರ – ಹೌದು, ಖಂಡಿತವಾಗಿಯೂ ಬಡ್ಡಿ ಸಿಗುತ್ತದೆ’.ಪಿಎಫ್‌ಗೆ ಹಣ ಜಮಾ ಮಾಡುವುದು ನಿಂತ ತಕ್ಷಣವೇ ಬಡ್ಡಿ ಬರುವುದು ನಿಂತುಹೋಗುತ್ತದೆ ಎಂಬುದು ಹಲವರಲ್ಲಿರುವ ತಪ್ಪು ಕಲ್ಪನೆ. ಆದರೆ ವಾಸ್ತವವೇ ಬೇರೆ.

http://Visit : www.suddidina.com

3 ವರ್ಷಗಳ ಹಳೆಯ ನಿಯಮದ ಅಸಲಿ ಸತ್ಯವೇನು?

ಈ ಗೊಂದಲಕ್ಕೆ ಕಾರಣ 2016ಕ್ಕಿಂತ ಮೊದಲು ಇದ್ದ ನಿಯಮ. ಹಳೆಯ ನಿಯಮದ ಪ್ರಕಾರ, ಒಂದು ಪಿಎಫ್ ಖಾತೆಗೆ ಸತತ 36 ತಿಂಗಳು (3 ವರ್ಷ) ಯಾವುದೇ ವಂತಿಗೆ ಜಮೆಯಾಗದಿದ್ದರೆ, ಅದನ್ನು `ನಿಷ್ಕ್ರಿಯ ಖಾತೆ’ (Inoperative Account) ಎಂದು ಪರಿಗಣಿಸಲಾಗುತ್ತಿತ್ತು ಮತ್ತು ಅಂತಹ ಖಾತೆಗೆ ಬಡ್ಡಿ ನೀಡುವುದನ್ನು ತಡೆಹಿಡಿಯಲಾಗುತ್ತಿತ್ತು. ಇದರಿಂದಾಗಿ ಲಕ್ಷಾಂತರ ಖಾತೆದಾರರ ಹಣಕ್ಕೆ ಬಡ್ಡಿ ಸಿಗದೆ ನಷ್ಟವಾಗುತ್ತಿತ್ತು.ಆದರೆ ಚಂದಾದಾರರ ಹಿತದೃಷ್ಟಿಯಿಂದ ಇಪಿಎಫ್‌ಒ 2016 ರಲ್ಲಿ ಈ ನಿಯಮಕ್ಕೆ ಮಹತ್ವದ ತಿದ್ದುಪಡಿ ತಂದಿದೆ. ಹೊಸ ಮತ್ತು ಪ್ರಸ್ತುತ ಜಾರಿಯಲ್ಲಿರುವ ನಿಯಮದ ಪ್ರಕಾರ, ಖಾತೆದಾರನಿಗೆ 58 ವರ್ಷ ವಯಸ್ಸಾಗುವವರೆಗೆ ಪಿಎಫ್ ಖಾತೆಯಲ್ಲಿರುವ ಹಣಕ್ಕೆ ನಿಯಮಿತವಾಗಿ ಚಕ್ರಬಡ್ಡಿ (Compounding Interest) ಜಮೆಯಾಗುತ್ತಲೇ ಇರುತ್ತದೆ. ನೀವು ಕೆಲಸದಲ್ಲಿದ್ದರೂ, ಇಲ್ಲದಿದ್ದರೂ ಇದು ಅನ್ವಯಿಸುತ್ತದೆ.

ಉದಾಹರಣೆ:

ಇದನ್ನು ಒಂದು ಉದಾಹರಣೆಯೊಂದಿಗೆ ನೋಡೋಣ. ಒಬ್ಬ ವ್ಯಕ್ತಿ ತಮ್ಮ 40ನೇ ವಯಸ್ಸಿನಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ, ತಮ್ಮ ಪಿಎಫ್ ಖಾತೆಯಲ್ಲಿದ್ದ 10 ಲಕ್ಷ ರೂಪಾಯಿಯನ್ನು ಹಿಂಪಡೆಯದೆ ಹಾಗೆಯೇ ಬಿಡುತ್ತಾರೆ ಎಂದುಕೊಳ್ಳಿ. ಅವರು ಮುಂದಿನ 5 ವರ್ಷಗಳ ಕಾಲ ಅಂದರೆ 45ನೇ ವಯಸ್ಸಿನವರೆಗೆ ಯಾವುದೇ ಹಣವನ್ನು ಜಮೆ ಮಾಡದಿದ್ದರೂ, ಅವರ ಖಾತೆಯಲ್ಲಿರುವ ಆ 10 ಲಕ್ಷ ರೂಪಾಯಿಗೆ ಇಪಿಎಫ್‌ಒ ಪ್ರತಿ ವರ್ಷ ಘೋಷಿಸುವ ಬಡ್ಡಿ ದರದಂತೆ (ಪ್ರಸ್ತುತ 8.25%) ಬಡ್ಡಿ ಸೇರ್ಪಡೆಯಾಗುತ್ತಲೇ ಹೋಗುತ್ತದೆ. ಇದು ಅವರಿಗೆ 58 ವರ್ಷ ತುಂಬುವವರೆಗೆ ಅಂದರೆ ಇನ್ನೂ 13 ವರ್ಷಗಳ ಕಾಲ ನಿರಂತರವಾಗಿ ಸಿಗುತ್ತದೆ. ಅದೇ ರೀತಿ 50ನೇ ವಯಸ್ಸಿನಲ್ಲಿ ಕೆಲಸ ಬಿಟ್ಟವರಿಗೆ 58 ವರ್ಷದವರೆಗೆ 8 ವರ್ಷಗಳ ಕಾಲ ಬಡ್ಡಿ ಸಿಗುತ್ತದೆ.

ಈ ಒಂದು ತೆರಿಗೆ ನಿಯಮವನ್ನು ಮಾತ್ರ ಮರೆಯಬೇಡಿ!

ನಿಮ್ಮ ಹಣಕ್ಕೆ ಬಡ್ಡಿ ಸಿಗುತ್ತದೆ ಎಂಬುದು ಖುಷಿಯ ವಿಚಾರವೇ, ಆದರೆ ಇಲ್ಲಿ ಒಂದು ಪ್ರಮುಖ ತೆರಿಗೆ ಎಚ್ಚರಿಕೆಯಿದೆ. ನೀವು ಕೆಲಸ ಮಾಡುತ್ತಿರುವಾಗ ನಿಮ್ಮ ಪಿಎಫ್ ಬಡ್ಡಿಗೆ ಸಂಪೂರ್ಣ ತೆರಿಗೆ ವಿನಾಯಿತಿ ಇರುತ್ತದೆ. ಆದರೆ ನೀವು ಕೆಲಸ ಬಿಟ್ಟ ನಂತರ ನಿಮ್ಮ ಖಾತೆಗೆ ಜಮೆಯಾಗುವ ಬಡ್ಡಿಯನ್ನು ಆದಾಯ ತೆರಿಗೆ ಇಲಾಖೆಯು `ಇತರ ಮೂಲಗಳಿಂದ ಬಂದ ಆದಾಯ’ (Income from Other Sources) ಎಂದು ಪರಿಗಣಿಸುತ್ತದೆ. ಆದ್ದರಿಂದ ಆ ಬಡ್ಡಿಯ ಮೊತ್ತವನ್ನು ನೀವು ನಿಮ್ಮ ವಾರ್ಷಿಕ ಆದಾಯದಲ್ಲಿ ತೋರಿಸಿ, ನಿಮ್ಮ ತೆರಿಗೆ ಸ್ಲ್ಯಾಬ್‌ಗೆ ಅನುಗುಣವಾಗಿ ತೆರಿಗೆ ಪಾವತಿಸಬೇಕಾಗುತ್ತದೆ.

ಖಾತೆದಾರರು ಏನು ಮಾಡಬೇಕು?

1. ಕೆಲಸ ಬದಲಾಯಿಸಿದ್ದರೆ: ಹಳೆಯ ಕಂಪನಿಯ ಪಿಎಫ್ ಹಣವನ್ನು ವಿತ್‌ಡ್ರಾ ಮಾಡುವ ಬದಲು, ನಿಮ್ಮ ಯುಎಎನ್ (UAN) ಮೂಲಕ ಹೊಸ ಕಂಪನಿಯ ಖಾತೆಗೆ ವರ್ಗಾವಣೆ (Transfer) ಮಾಡಿಕೊಳ್ಳಿ. ಇದರಿಂದ ನಿಮ್ಮ ಸೇವಾ ಅವಧಿ ನಿರಂತರವಾಗಿರುತ್ತದೆ.

2. ವೃತ್ತಿ ವಿರಾಮದಲ್ಲಿದ್ದರೆ: 58 ವರ್ಷದವರೆಗೆ ಹಣ ಸುರಕ್ಷಿತವಾಗಿ ಬೆಳೆಯುತ್ತದೆ. ಆದರೆ ನಿಮಗೆ ತುರ್ತು ಅಗತ್ಯವಿಲ್ಲದಿದ್ದರೆ, ಹೆಚ್ಚಿನ ಆದಾಯಕ್ಕಾಗಿ ಬೇರೆಡೆ ಹೂಡಿಕೆ ಮಾಡುವ ಬಗ್ಗೆಯೂ ಯೋಚಿಸಬಹುದು.

3. 58 ವರ್ಷದ ನಂತರ: ಖಾತೆದಾರನಿಗೆ 58 ವರ್ಷ ತುಂಬಿದ ನಂತರವೂ ಹಣವನ್ನು ಹಿಂಪಡೆಯದಿದ್ದರೆ ಮಾತ್ರ ಆ ಖಾತೆಯನ್ನು ಮತ್ತೆ `ನಿಷ್ಕ್ರಿಯ’ ಎಂದು ಪರಿಗಣಿಸಿ ಬಡ್ಡಿ ನೀಡುವುದನ್ನು ಶಾಶ್ವತವಾಗಿ ನಿಲ್ಲಿಸಲಾಗುತ್ತದೆ.ಆದ್ದರಿಂದ 5 ವರ್ಷದಿಂದ ಹಣ ಜಮೆಯಾಗದಿದ್ದರೂ ಚಿಂತಿಸಬೇಕಿಲ್ಲ, ನಿಮ್ಮ ಪಿಎಫ್ ಹಣ ಇಪಿಎಫ್‌ಒ ನಲ್ಲಿ ಸುರಕ್ಷಿತವಾಗಿ ಬಡ್ಡಿಯೊಂದಿಗೆ ಬೆಳೆಯುತ್ತಿದೆ.

Continue Reading

ದಿನದ ಸುದ್ದಿ

ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಇನ್ಮುಂದೆ ಓಲಾ, ಉಬರ್ ಆ್ಯಪ್‌ನಲ್ಲೇ ಬಿಎಂಟಿಸಿ ಬಸ್ ಟ್ರ್ಯಾಕಿಂಗ್ ಮತ್ತು ಟಿಕೆಟ್ ಬುಕಿಂಗ್!

Published

on

ಸೆಪ್ಟೆಂಬರ್ ಅಂತ್ಯಕ್ಕೆ ಹೊಸ ಸೇವೆ ಜಾರಿ; ಮುಂದಿನ ವಾರವೇ `ನಮ್ಮ ಬಿಎಂಟಿಸಿ 2.0' ಆ್ಯಪ್ ಲೋಕಾರ್ಪಣೆ, 200 ಹೊಸ ಮಿನಿ ಡೀಸೆಲ್ ಬಸ್ ಖರೀದಿಗೆ ಸಿದ್ಧತೆ

ಸುದ್ದಿದಿನ, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಲಕ್ಷಾಂತರ ಬಿಎಂಟಿಸಿ ಪ್ರಯಾಣಿಕರಿಗೆ ಸಾರಿಗೆ ಸಂಸ್ಥೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಬಸ್‌ಗಾಗಿ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯುವಂತಹ ಪರಿಸ್ಥಿತಿ ಇರುವುದಿಲ್ಲ. ಖಾಸಗಿ ರೈಡ್-ಹೇಲಿಂಗ್ ಆ್ಯಪ್‌ಗಳಾದ ಓಲಾ, ಉಬರ್, ರ‍್ಯಾಪಿಡೋ ನಂತಹ ಆ್ಯಪ್‌ಗಳಲ್ಲೇ ನೇರವಾಗಿ ಬಿಎಂಟಿಸಿ ಬಸ್‌ಗಳ ಲೈವ್ ಲೋಕೇಶನ್ ಟ್ರ್ಯಾಕ್ ಮಾಡಲು ಮತ್ತು ಟಿಕೆಟ್ ಬುಕ್ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಈ ಮಹತ್ವದ ಸೇವೆಯು ಇದೇ ಸೆಪ್ಟೆಂಬರ್ ಅಂತ್ಯದ ವೇಳೆಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.

http://Visit : www.suddidina.com

ಈ ಕುರಿತು ಮಾಹಿತಿ ನೀಡಿದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಘುನಂದನ್ ಮೂರ್ತಿ, ನಾವು ಹಲವು ಖಾಸಗಿ ರೈಡ್ ಅಗ್ರಿಗೇಟರ್ ಕಂಪನಿಗಳ ಜೊತೆ ನಿರಂತರ ಮಾತುಕತೆ ನಡೆಸುತ್ತಿದ್ದೇವೆ. ಇದಕ್ಕಾಗಿ ಶೀಘ್ರದಲ್ಲೇ ಒಂದು ಸಾಮಾನ್ಯ ಮಾನದಂಡದ ಒಪ್ಪಂದವನ್ನು (Standard Agreement) ಜಾರಿಗೆ ತರಲಿದ್ದೇವೆ. ಈ ಒಪ್ಪಂದದ ನಿಯಮಗಳಿಗೆ ಬದ್ಧರಾಗುವ ಯಾವುದೇ ಖಾಸಗಿ ಕಂಪನಿಯು ಬಿಎಂಟಿಸಿಯ ಲೈವ್ ಡೇಟಾವನ್ನು ಉಚಿತವಾಗಿ ಬಳಸಿಕೊಳ್ಳಬಹುದು. ಇದರಿಂದ ಪ್ರಯಾಣಿಕರಿಗೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆಯಾಗುವುದಿಲ್ಲ. ಕ್ಯಾಬ್ ಅಥವಾ ಆಟೋಗಳಿಂದ ಇಳಿದು ಮುಂದಿನ ಪ್ರಯಾಣಕ್ಕೆ ಬಸ್ ಹಿಡಿಯುವವರಿಗೆ ಇದು ಅತ್ಯಂತ ಸಹಕಾರಿಯಾಗಲಿದೆ ಎಂದು ಹೇಳಿದರು.

ನಮ್ಮ ಬಿಎಂಟಿಸಿ 2.0′ ಆ್ಯಪ್‌ನಲ್ಲಿ ಏನಿದೆ ಹೊಸತು?

ಖಾಸಗಿ ಆ್ಯಪ್‌ಗಳ ಜೊತೆ ಡೇಟಾ ಹಂಚಿಕೊಳ್ಳುವುದರ ಜೊತೆಗೆ, ಬಿಎಂಟಿಸಿ ತನ್ನ ಸ್ವಂತ ಮೊಬೈಲ್ ಅಪ್ಲಿಕೇಶನ್ ಅನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸುತ್ತಿದೆ. ನಮ್ಮ ಬಿಎಂಟಿಸಿ ಮೊಬೈಲ್ ಆ್ಯಪ್ 2.0′ ಅನ್ನು ಮುಂದಿನ ವಾರದ ಅಂತ್ಯದೊಳಗೆ ಲೋಕಾರ್ಪಣೆಗೊಳಿಸಲಾಗುವುದು. ಈ ಹಿಂದೆ ಆ್ಯಪ್ ಕುರಿತು ಪ್ರಯಾಣಿಕರು ನೀಡಿದ್ದ ದೂರುಗಳು ಮತ್ತು ತಾಂತ್ರಿಕ ದೋಷಗಳನ್ನು ಸಂಪೂರ್ಣವಾಗಿ ಸರಿಪಡಿಸಲಾಗಿದೆ. ಹೊಸ ಆ್ಯಪ್‌ನಲ್ಲಿ ಬಿಎಂಟಿಸಿ ನೆಟ್‌ವರ್ಕ್‌ನಲ್ಲಿ ಸಂಚರಿಸುವ ಪ್ರತಿಯೊಂದು ಬಸ್‌ನ ಲೈವ್ ಲೋಕೇಶನ್ ಅತ್ಯಂತ ನಿಖರವಾಗಿ ಲಭ್ಯವಾಗಲಿದೆ. ಪ್ರಸ್ತುತ ಬಿಎಂಟಿಸಿ ಬಳಿ 1,771 ಎಲೆಕ್ಟ್ರಿಕ್ ಬಸ್‌ಗಳು ಸೇರಿದಂತೆ ಒಟ್ಟು 6,938 ಬಸ್‌ಗಳಿವೆ. ಪ್ರತಿದಿನ ಸರಾಸರಿ 6,200 ಬಸ್‌ಗಳು ನಗರದಾದ್ಯಂತ ಕಾರ್ಯಾಚರಣೆ ನಡೆಸುತ್ತಿವೆ.

ಸಾರಿಗೆ ಸಚಿವರ ಮಹತ್ವದ ಸಭೆ ಮತ್ತು ನಿರ್ದೇಶನ: 

ವಿಧಾನಸೌಧದಲ್ಲಿ ಸಾರಿಗೆ ಸಚಿವ ಬೈರತಿ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾರಿಗೆ ಇಲಾಖೆ, ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

200 ಹೊಸ ಮಿನಿ ಬಸ್‌ಗಳ ಖರೀದಿ:

ಮೆಟ್ರೋ ಫೀಡರ್ ಸೇವೆ ಹಾಗೂ ನಗರದ ಕಿರಿದಾದ ರಸ್ತೆಗಳ ಸಂಪರ್ಕಕ್ಕಾಗಿ 200 ಹೊಸ 7 ಮೀಟರ್ ಉದ್ದದ ಮಿನಿ ಡೀಸೆಲ್ ಬಸ್‌ಗಳನ್ನು ಖರೀದಿಸಲು ಬಿಎಂಟಿಸಿ ನಿರ್ಧರಿಸಿದೆ. ಮೆಟ್ರೋ ನಿಲ್ದಾಣಗಳ ಸುತ್ತಮುತ್ತಲಿನ ಕಿರಿದಾದ ರಸ್ತೆಗಳಲ್ಲಿ ಈ ಚಿಕ್ಕ ಬಸ್‌ಗಳು ಸುಲಭವಾಗಿ ಸಂಚರಿಸಬಲ್ಲವು. ಸದ್ಯ 9 ಮತ್ತು 12 ಮೀಟರ್ ಉದ್ದದ 255 ಬಸ್‌ಗಳು ಮೆಟ್ರೋ ಫೀಡರ್ ಆಗಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾದ ನಾಲ್ಕು ನಿಗಮಗಳಿಗೆ 1,000 ಬಸ್ ಖರೀದಿ ಯೋಜನೆಯ ಭಾಗವಾಗಿ ಈ ಖರೀದಿ ನಡೆಯಲಿದೆ. ಮುಂದಿನ 6 ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.ಬನ್ನೇರುಘಟ್ಟ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಪಿಂಕ್ ಲೈನ್‌ನ 6 ನಿಲ್ದಾಣಗಳು ಸೇರಿದಂತೆ ಎಲ್ಲಾ ಮೆಟ್ರೋ ನಿಲ್ದಾಣಗಳಿಗೆ ಫೀಡರ್ ಸೇವೆ ವಿಸ್ತರಿಸಲು ಬಿಎಂಆರ್‌ಸಿಎಲ್ ಮತ್ತು ಸಂಚಾರ ಪೊಲೀಸರ ಜೊತೆ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ.

ಎಸಿ ಬಸ್ ಸೇವೆ ಹೆಚ್ಚಳಕ್ಕೆ ಸೂಚನೆ:

ಪಿಎಂ ಇ-ಡ್ರೈವ್ ಯೋಜನೆಯಡಿ ಬರಲಿರುವ 4,500 ಎಲೆಕ್ಟ್ರಿಕ್ ಬಸ್‌ಗಳ ಪೈಕಿ 200 ಮಿನಿ ಎಸಿ ಇ-ಬಸ್‌ಗಳನ್ನು ಎಲ್ಲಾ ಮೆಟ್ರೋ ನಿಲ್ದಾಣಗಳ 5 ಕಿ.ಮೀ ವ್ಯಾಪ್ತಿಯಲ್ಲಿ ಓಡಿಸುವಂತೆ ಸಚಿವರು ಸೂಚಿಸಿದ್ದಾರೆ. ಐಟಿ ಕಂಪನಿ ಉದ್ಯೋಗಿಗಳು ಖಾಸಗಿ ವಾಹನ ಬಳಕೆ ಕಡಿಮೆ ಮಾಡಿ ಸಾರ್ವಜನಿಕ ಸಾರಿಗೆ ಬಳಸುವಂತೆ ಪ್ರೇರೇಪಿಸಲು ಐಟಿ ಪಾರ್ಕ್‌ಗಳ ಮಾರ್ಗಗಳಲ್ಲಿ ಎಸಿ ಬಸ್ ಸೇವೆ ಹೆಚ್ಚಿಸಲು ಮತ್ತು ಐಟಿ ಸಂಸ್ಥೆಗಳ ಜೊತೆ ಮಾತುಕತೆ ನಡೆಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಜೊತೆಗೆ ಎಲ್ಲಾ ನಿಗಮಗಳಲ್ಲಿ ಆದಾಯ ಸೋರಿಕೆ ತಡೆದು ಅನಗತ್ಯ ವೆಚ್ಚ ಕಡಿತಗೊಳಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ಸಚಿವರು ಸೂಚಿಸಿದ್ದಾರೆ.

Continue Reading

ದಿನದ ಸುದ್ದಿ

ಬರ ನಿರ್ವಹಣೆಗೆ ಸಚಿವ ಸಂಪುಟ ಉಪಸಮಿತಿ ಸಭೆ – ದಾವಣಗೆರೆಯಲ್ಲಿ ಕುಡಿಯುವ ನೀರು, ಮೇವು ಕೊರತೆ ಬಗ್ಗೆ ಸಚಿವ ಮಲ್ಲಿಕಾರ್ಜುನ್ ಪ್ರಸ್ತಾಪ

Published

on

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸಭೆ; ತೋಟಗಾರಿಕೆ ಬೆಳೆಗಳಿಗೆ ವಿಶೇಷ ಪರಿಹಾರ ಪ್ಯಾಕೇಜ್‌ಗೆ ಒತ್ತಾಯ

ಸುದ್ದಿದಿನ,ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆಯಿಂದ ಎದುರಾಗಿರುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಮತ್ತು ಪರಿಹಾರ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವ ಕುರಿತು ವಿಧಾನಸೌಧದಲ್ಲಿ ಇಂದು ಸಚಿವ ಸಂಪುಟ ಉಪಸಮಿತಿ ಸಭೆ ನಡೆಯಿತು.

http://Visit : www.suddidina.com

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಭಾಗವಹಿಸಿದ್ದರು.

ಸಭೆಯಲ್ಲಿ ಮಾತನಾಡಿದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಬರದ ಛಾಯೆ ಆವರಿಸಿದ್ದು, ದಾವಣಗೆರೆ ಜಿಲ್ಲೆಯಲ್ಲೂ ಅಂತರ್ಜಲ ಮಟ್ಟ ಕುಸಿದು ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ತಿಳಿಸಿದರು. ಚನ್ನಗಿರಿ, ಹೊನ್ನಾಳಿ ಮತ್ತು ಜಗಳೂರು ಭಾಗದಲ್ಲಿ ಮೇವಿನ ಕೊರತೆ ಕಾಣಿಸಿಕೊಂಡಿದ್ದು, ಅಡಿಕೆ, ತೆಂಗು ಮತ್ತು ಬಾಳೆ ಸೇರಿದಂತೆ ತೋಟಗಾರಿಕೆ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ ಎಂದು ಸಭೆಯ ಗಮನಕ್ಕೆ ತಂದರು.

ತೋಟಗಾರಿಕೆ ಬೆಳೆಗಳಿಗೆ ಆಗಿರುವ ಹಾನಿಯನ್ನು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಬೆಳೆ ವಿಮೆ ಮತ್ತು ವಿಶೇಷ ಪರಿಹಾರ ಪ್ಯಾಕೇಜ್ ನೀಡಬೇಕು ಮತ್ತು ಹನಿ ನೀರಾವರಿಗೆ ಹೆಚ್ಚಿನ ಸಹಾಯಧನ ನೀಡಬೇಕು ಎಂದು ಅವರು ಸಭೆಯಲ್ಲಿ ಒತ್ತಾಯಿಸಿದರು. ಅಂತರ್ಜಲ ಮಟ್ಟ ಕುಸಿಯಲು ಕಾರಣಗಳ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅಧ್ಯಯನ ನಡೆಸಿ ಅಕ್ರಮ ಕೊಳವೆಬಾವಿ ಕೊರೆಯುವುದನ್ನು ನಿಯಂತ್ರಿಸಬೇಕು ಮತ್ತು ಜಲಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಜೊತೆಗೆ ಕೆರೆಗಳಿಗೆ ನೀರು ತುಂಬಿಸುವ, ಗೋಶಾಲೆಗಳನ್ನು ತೆರೆಯುವ ಮತ್ತು ಉದ್ಯೋಗ ಖಾತ್ರಿ ಕಾಮಗಾರಿಗಳನ್ನು ಹೆಚ್ಚಿಸುವ ಕುರಿತು ತುರ್ತು ಕ್ರಿಯಾ ಯೋಜನೆ ರೂಪಿಸಬೇಕು ಎಂದು ಮನವಿ ಮಾಡಿದರು.

ಬರ ಪೀಡಿತ ಪ್ರದೇಶಗಳನ್ನು ಗುರುತಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಸ್ಥಳೀಯ ಆಡಳಿತ ಹಾಗೂ ಎಲ್ಲ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಸಚಿವರು ತಿಳಿಸಿದರು.

ಸಭೆಯಲ್ಲಿ ಸಹಕಾರ ಸಚಿವ ಲಕ್ಷ್ಮಣ ಸವದಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

Trending