Connect with us

ದಿನದ ಸುದ್ದಿ

ದಾವಣಗೆರೆ | ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ವಿನೂತನ ಕ್ರಮ : ಕೋವಿಡ್ ನಿಯಂತ್ರಣಕ್ಕಾಗಿ ಗ್ರಾಮಗಳ ದತ್ತು ಸ್ವೀಕಾರಕ್ಕೆ ಖಾಸಗಿ ವೈದ್ಯರಿಗೆ ಡಿಸಿ ಮನವಿ

Published

on

ಸುದ್ದಿದಿನ,ದಾವಣಗೆರೆ : ಕೋವಿಡ್ ಸೋಂಕು ಗ್ರಾಮ ಮಟ್ಟದಲ್ಲಿ ವೇಗವಾಗಿ ಹರಡುತ್ತಿದ್ದು, ಇದನ್ನು ತಡೆಗಟ್ಟಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಗ್ರಾಮಗಳನ್ನು ದತ್ತು ಪಡೆದು, ಸತತ 10 ದಿನಗಳ ಕಾಲ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ, ರೋಗಪತ್ತೆ, ಚಿಕಿತ್ಸೆ ನಿರ್ಧರಣೆಗೆ ಜಿಲ್ಲೆಯಲ್ಲಿರುವ ಖಾಸಗಿ ವೈದ್ಯರು ಸಹಕರಿಸುವ ಮೂಲಕ ಜಿಲ್ಲೆಯ ಋಣ ತೀರಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಮನವಿ ಮಾಡಿದರು.

ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಕೋವಿಡ್ ಸೋಂಕಿತರ ಆರೋಗ್ಯ ಮೇಲ್ವಿಚಾರಣೆ ಮಾಡುವ ಸಂಬಂಧ ವೈದ್ಯರುಗಳ ನಿಯೋಜನೆ ಕುರಿತಂತೆ ಬುಧವಾರ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ 2ನೇ ಅಲೆ ಅವಧಿಯಲ್ಲಿ ನಿರೀಕ್ಷೆಗಿಂತ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಅನೇಕರು ನಮ್ಮ ಕಣ್ಣಮುಂದೆಯೇ ಮರೆಯಾಗುತ್ತಿದ್ದಾರೆ. ಸದ್ದಿಲ್ಲದೆ ಸೋಂಕು, ಬಡವರು, ಶ್ರೀಮಂತರು, ನಿರ್ಗತಿಕರು ಎನ್ನದೆ ಬಹಳಷ್ಟು ಜನರನ್ನು ಬಲಿತೆಗೆದುಕೊಳ್ಳುತ್ತಿದೆ.

ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿಯೇ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಇದಕ್ಕೆ ಕಾರಣ ಹೋಂ ಐಸೋಲೇಷನ್‍ನ ಅಸಮರ್ಪಕ ವ್ಯವಸ್ಥೆ. ಹಳೆ ದಾವಣಗೆರೆ ಪ್ರದೇಶದಲ್ಲಿ ಜನರು ಸೋಂಕಿನ ಭೀತಿಯಿಲ್ಲದೆ, ನಿತ್ಯವೂ ಅಗತ್ಯ ವಸ್ತಗಳ ಖರೀದಿ ನೆಪದಲ್ಲಿ ಜನಸಂದಣಿಯಲ್ಲಿ ಬೆರೆಯುವುದು ಕಂಡುಬರುತ್ತಿದ್ದು, ಯಾವಾಗ ಸೋಂಕು ಸ್ಫೋಟಗೊಳ್ಳುತ್ತದೆಯೋ ಎನ್ನುವ ಆತಂಕವಿದೆ. ದಾವಣಗೆರೆ ಜಿಲ್ಲೆ ವೈದ್ಯಕೀಯ ಕ್ಷೇತ್ರದಲ್ಲಿ ಇಡೀ ರಾಜ್ಯದಲ್ಲಿಯೇ ಖ್ಯಾತಿ ಹೊಂದಿದೆ.

ಅನೇಕಾನೇಕ ತಜ್ಞ ವೈದ್ಯರುಗಳು ಜಿಲ್ಲೆಯಲ್ಲಿದ್ದು, ಸಾರ್ವಜನಿಕರಿಗೆ ಸೇವೆ ನೀಡುತ್ತಿದ್ದಾರೆ. ದೇಶದಲ್ಲಿ ಈ ಹಿಂದೆ ಸಂಭವಿಸಿದ ಲಾತೂರ್ ಭೂಕಂಪ, ಕಂಡು ಕೇಳರಿಯದ ಪ್ರವಾಹ, ಕೊಡಗಿನಲ್ಲಿ ಅತಿವೃಷ್ಟಿಯಿಂದ ಉಂಟಾದ ಭೂಕುಸಿತ ಸಂದರ್ಭಗಳಲ್ಲಿ ಜಿಲ್ಲೆಯ ಖಾಸಗಿ ವೈದ್ಯರ ತಂಡ, ದುರಂತ ಸ್ಥಳಗಳಿಗೆ ತೆರಳಿ, ಜನರ ಪ್ರಾಣ ರಕ್ಷಣೆ ಮಾಡಿದ ನಿದರ್ಶನವಿದ್ದು, ಹೀಗಾಗಿ ಜಿಲ್ಲೆಯ ವೈದ್ಯರ ಬಗ್ಗೆ ನಮಗೆ ಹೆಮ್ಮೆ ಇದೆ. ಸದ್ಯ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಗ್ರಾಮಗಳಲ್ಲಿ ವೇಗವಾಗಿ ವ್ಯಾಪಿಸುತ್ತಿದ್ದು, ಜಿಲ್ಲೆ ಕಷ್ಟಕರ ಪರಿಸ್ಥಿತಿ ಎದುರಿಸುತ್ತಿದೆ.

ಲಾಕ್‍ಡೌನ್ ಪರಿಣಾಮವಾಗಿ ನಗರ, ಪಟ್ಟಣಗಳಿಂದ ಗ್ರಾಮಗಳಿಗೆ ಹಿಂದಿರುಗಿದ ಜನರಿಂದ ಸೋಂಕು ವ್ಯಾಪಕವಾಗುತ್ತಿದೆ. ಗ್ರಾಮಗಳಲ್ಲಿ ಜನರಿಗೆ ರೋಗದ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲ. ಜನರು ತಪ್ಪು ಕಲ್ಪನೆ ಹಾಗೂ ಭೀತಿಯಿಂದ ರೋಗ ಲಕ್ಷಣಗಳಿದ್ದರೂ ಪರೀಕ್ಷೆ ಮಾಡಿಸಿಕೊಳ್ಳದೆ, ರೋಗ ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ.

ಇಂತಹವರು ರೋಗವನ್ನು ಬೇರೆಯವರಿಗೆ ಹರಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಶೇ. 40 ರಷ್ಟು ಪ್ರಕರಣಗಳು ಗ್ರಾಮೀಣ ಪ್ರದೇಶಗಳಿಂದ ವರದಿಯಾಗುತ್ತಿವೆ. ಹೀಗಾಗಿ ಕೋವಿಡ್ ಸೋಂಕಿನ ಕುರಿತು ಗ್ರಾಮೀಣ ಜನರಲ್ಲಿ ಸರಿಯಾದ ತಿಳುವಳಿಕೆ, ಅರಿವು ಮೂಡಿಸಬೇಕಿದೆ, ಇದರ ಜೊತೆಗೆ ಅವರಲ್ಲಿನ ತಪ್ಪು ಕಲ್ಪನೆಗಳನ್ನು ತೊಡೆದುಹಾಕಿ, ಅವರಲ್ಲಿ ಚಿಕಿತ್ಸೆಯ ಬಗ್ಗೆ ಹಾಗೂ ಸರ್ಕಾರ ನಿಮ್ಮೊಂದಿಗಿದೆ ಎನ್ನುವ ವಿಶ್ವಾಸವನ್ನು ಮೂಡಿಸಬೇಕಿದೆ.

ಇದಕ್ಕಾಗಿ ಜಿಲ್ಲೆಯ ಎಲ್ಲ ಖಾಸಗಿ ವೈದ್ಯರ ಸಹಕಾರ ಈಗ ಅತ್ಯಗತ್ಯವಾಗಿದೆ. ಜಿಲ್ಲೆಯ ಗ್ರಾಮಗಳಲ್ಲಿ ಸರ್ಕಾರಿ ವೈದ್ಯರು, ಅಂಗನವಾಡಿ, ಆಶಾ ಕಾರ್ಯಕರ್ತರು, ಕಂದಾಯ ಇಲಾಖೆಯ ಸಿಬ್ಬಂದಿಗಳು ಈಗಾಗಲೆ ಲಭ್ಯರಿದ್ದು, ಇದರೊಂದಿಗೆ ಖಾಸಗಿ ವೈದ್ಯರನ್ನು ಒಳಗೊಂಡ ತಂಡವನ್ನು ರಚಿಸಲಾಗುವುದು. ಈ ತಂಡಕ್ಕೆ ಅಗತ್ಯ ಕೋವಿಡ್ ಕಿಟ್, ಸ್ಥಳದಲ್ಲಿಯೇ ಸೋಂಕು ಪತ್ತೆಹಚ್ಚಲು ರ್ಯಾಪಿಡ್ ಆಂಟಿಜನ್ ಟೆಸ್ಟ್ ಕಿಟ್, ಔಷಧಿಗಳು ಸೇರಿದಂತೆ ಎಲ್ಲ ಸೌಲಭ್ಯ ಒದಗಿಸಲಾಗುವುದು.

ಅಲ್ಲದೆ ವಾಹನದ ವ್ಯವಸ್ಥೆಯನ್ನು ಕೂಡ ಮಾಡಲಾಗುವುದು. ಖಾಸಗಿ ವೈದ್ಯರುಗಳು ಗ್ರಾಮ ಪಂಚಾಯತ್ ಮಟ್ಟದಲ್ಲಿ ಗ್ರಾಮಗಳನ್ನು ದತ್ತು ತೆಗೆದುಕೊಂಡು, ಸತತವಾಗಿ 10 ದಿನಗಳ ಕಾಲ ನಿಗದಿತ ಅವಧಿಯಲ್ಲಿ ಸೇವಾ ಮನೋಭಾವದೊಂದಿಗೆ ಸಹಕಾರ ನೀಡಿದಲ್ಲಿ, ಕೋವಿಡ್ ಅನ್ನು ಗ್ರಾಮ ಮಟ್ಟದಲ್ಲಿ ತಡೆಗಟ್ಟಲು ಸಾಧ್ಯವಿದೆ.

ಗ್ರಾಮಗಳು ಉಳಿದರೆ, ಇಡೀ ದೇಶ ಉಳಿದಂತೆ. ಯಾವುದೇ ಗ್ರಾಮದಲ್ಲಿ 15 ರಿಂದ 20 ಜನರಲ್ಲಿ ಸೋಂಕು ಇರುವುದು ದೃಢಪಟ್ಟಲ್ಲಿ ಆಯಾ ಗ್ರಾಮದ ಶಾಲೆ ಅಥವಾ ಸಮುದಾಯ ಭವನದಲ್ಲಿಯೇ ಕೋವಿಡ್ ಕೇರ್ ಸೆಂಟರ್ ತೆರೆದು, ಸೋಂಕಿತರಿಗೆ ಸೂಕ್ತ ವೈದ್ಯಕೀಯ ನೆರವು ನೀಡಲು ಜಿಲ್ಲಾಡಳಿತ ಸಿದ್ಧವಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಹೇಳಿದರು.

ತಂಡ ಕಾಯನಿರ್ವಹಣೆ ಬಗೆ

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಿಜಯ್ ಮಹಾಂತೇಶ್ ಅವರು ಗ್ರಾಮಗಳ ದತ್ತು ಸ್ವೀಕಾರ ಕುರಿತ ಕಾರ್ಯಕ್ರಮದ ವಿವರಣೆ ನೀಡಿ, ಖಾಸಗಿ ವೈದ್ಯರು ಕನಿಷ್ಟ 2 ತಿಂಗಳು ಗ್ರಾಮಗಳ ದತ್ತು ಸ್ವೀಕರಿಸಬೇಕು. ಖಾಸಗಿ ಹಾಗೂ ಸರ್ಕಾರಿ ವೈದ್ಯರನ್ನು ಒಳಗೊಂಡ ನಿಯೋಜಿತ ತಂಡಗಳು ದತ್ತು ಸ್ವೀಕೃತ ಗ್ರಾಮಗಳಿಗೆ ಭೇಟಿ ನೀಡಿ, ಅಲ್ಲಿನ ಜನರಲ್ಲಿ ವಿಶ್ವಾಸ ಮೂಡಿಸಬೇಕು.

ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸೋಂಕು ಲಕ್ಷಣ ಹೊಂದಿರುವ ವ್ಯಕ್ತಿಗಳನ್ನು ಗುರುತಿಸಿ, ಅವರ ಪ್ರಾಥಮಿಕ ಸಂಪರ್ಕಿತರ ಪಟ್ಟಿ ಸಿದ್ಧಪಡಿಸಿಕೊಳ್ಳಬೇಕು, ರೋಗ ಲಕ್ಷಣಗಳುಳ್ಳ ಜನರಿಗೆ ರ್ಯಾಪಿಡ್ ಟೆಸ್ಟ್ ಮಾಡಬೇಕು. ಸೋಂಕು ದೃಢಪಟ್ಟವರ ಆರೋಗ್ಯ ಸ್ಥಿತಿಗತಿ ಹಾಗೂ ಸೋಂಕಿನ ತೀವ್ರತೆಗೆ ಅನುಗುಣವಾಗಿ ಹೋಂ ಐಸೋಲೇಷನ್, ಕೋವಿಡ್ ಕೇರ್ ಸೆಂಟರ್ ಅಥವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಕುರಿತು ನಿರ್ಧರಿಸಬೇಕು.

ಇದನ್ನೂ ಓದಿ | ದಾವಣಗೆರೆ | ಹಾಪ್ ಕಾಮ್ಸ್ ವತಿಯಿಂದ ಮನೆಬಾಗಿಲಿಗೆ ತರಕಾರಿ

ಗ್ರಾಮೀಣರು ತಪ್ಪು ತಿಳುವಳಿಕೆಯಿಂದ ಮಾರ್ಗಸೂಚಿ ಪಾಲಿಸದೆ ಉಡಾಫೆಯಿಂದ ವರ್ತಿಸುತ್ತಿದ್ದಾರೆ. ಕೋವಿಡ್ ಸೋಂಕು ಲಕ್ಷಣ ಪ್ರಾರಂಭವಾಗಿ 5 ದಿನಗಳ ಒಳಗಾಗಿ ಸೋಂಕಿತರಿಗೆ ಚಿಕಿತ್ಸೆ ಪ್ರಾರಂಭವಾಗಬೇಕು, ಇಲ್ಲದಿದ್ದರೆ ಅಂತಹ ವ್ಯಕ್ತಿಯ ಜೀವಕ್ಕೇ ಅಪಾಯ ಎಂಬುದನ್ನು ಮರೆಯಬಾರದು.

ಈ ನಿಟ್ಟಿನಲ್ಲಿ ಗ್ರಾಮೀಣ ಜನರಲ್ಲಿ ಅರಿವು ಮೂಡಿಸಿ, ಸರ್ಕಾರಿ ವ್ಯವಸ್ಥೆಯೊಂದಿಗೆ ಖಾಸಗಿ ವೈದ್ಯರ ನೆರವು ಅತ್ಯಗತ್ಯವಾಗಿದೆ, ಖಾಸಗಿ ವೈದ್ಯರು ಇದಕ್ಕೆ ಸಹಕರಿಸುವ ಮೂಲಕ ಜಿಲ್ಲೆಯನ್ನು ಕೋವಿಡ್ ಸೋಂಕಿನಿಂದ ಮುಕ್ತಗೊಳಿಸಲು ಮುಂದಾಗಬೇಕು. ಇದಕ್ಕಾಗಿ ಅಗತ್ಯವಿರುವ ಎಲ್ಲ ನೆರವನ್ನು ಒದಗಿಸಲಾಗುವುದು ಎಂದರು.

ಸಹಕಾರಕ್ಕೆ ಸದಾ ಸಿದ್ಧ

ದಾವಣಗೆರೆ ಜಿಲ್ಲೆಯ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಡಾ. ಸೋಮಶೇಖರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಬಹಳಷ್ಟು ಜನರು ನಾವು ವೈದ್ಯರಿದ್ದೇವೆ. ವೈದ್ಯರು, ನರ್ಸ್‍ಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಅಗತ್ಯವಿರುವ ಸಿಬ್ಬಂದಿಗಳ ತಂಡವನ್ನು ರಚಿಸಿ, ಗ್ರಾಮಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಲು ಸೂಕ್ತ ರೂಪರೇಷೆಗಳನ್ನು ಕೈಗೊಂಡಲ್ಲಿ, ಇದಕ್ಕೆ ಜಿಲ್ಲೆಯ ಎಲ್ಲ ವೈದ್ಯರು ಸಹಕಾರ ನೀಡಲು ಸಿದ್ಧರಿದ್ದೇವೆ.

ಜನರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ, ಇದರಿಂದ ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಪ್ರಾಣ ಭಯ ಇದ್ದರೂ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ನರ್ಸಿಂಗ್ ಅಸೋಸಿಯೇಷನ್, ದಂತ ವೈದ್ಯರ ಸಂಘ ಸೇರಿದಂತೆ ವಿವಿಧ ವೈದ್ಯಕೀಯ ಕ್ಷೇತ್ರಗಳ ಸಂಘಗಳ ಪ್ರತಿನಿಧಿಗಳು, ಜಿಲ್ಲಾಡಳಿತದ ಕರೆಗೆ ಸ್ಪಂದಿಸಿ, ಕೋವಿಡ್ ನಿಯಂತ್ರಣಕ್ಕೆ ಯಾವುದೇ ಸೇವೆ ಸಲ್ಲಿಸಲು ಸದಾ ಸಿದ್ಧರಿದ್ದೇವೆ ಎನ್ನುವ ಭರವಸೆಯನ್ನು ಇದೇ ಸಂದರ್ಭದಲ್ಲಿ ನೀಡಿದರು.

ಸಭೆಯಲ್ಲಿ ದಾವಣಗೆರೆ ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಡಿಹೆಚ್‍ಒ ಡಾ. ನಾಗರಾಜ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್, ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ನಟರಾಜ್, ಸೇರಿದಂತೆ ವಿವಿಧ ಅಧಿಕಾರಿಗಳು, ನಗರದ ವಿವಿಧ ಆಸ್ಪತ್ರೆಗಳ ವೈದ್ಯರುಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ತೋತಾಪುರಿ ಮಾವಿನ ಹಣ್ಣುಗಳಿಗೆ ಆಂಧ್ರಪ್ರದೇಶದಲ್ಲಿ ನಿಷೇಧ ; ತೆರವುಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಪತ್ರ

Published

on

ಸುದ್ದಿದಿನಡೆಸ್ಕ್:ಕರ್ನಾಟಕದ ತೋತಾಪುರಿ ಮಾವಿನ ಹಣ್ಣುಗಳಿಗೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲಾಧಿಕಾರಿ ವಿಧಿಸಿರುವ ನಿಷೇಧ ಆದೇಶ ರದ್ದು ತೆರವುಗೊಳಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಮೂಲಕ ಮನವಿ ಮಾಡಿದ್ದಾರೆ.

ಇದು ಮುಂದಿನ ದಿನಗಳಲ್ಲಿ ತರಕಾರಿಗಳು ಮತ್ತು ಇತರ ಕೃಷಿ ಸರಕುಗಳ ಅಂತಾರಾಜ್ಯ ಸಾಗಾಣೆಗೆ ಅಡ್ಡಿ ಉಂಟುಮಾಡುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ನಿರ್ಬಂಧವು ಸಾವಿರಾರು ರೈತರ ಜೀವನ ಉಪಾಯದ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಐಎಎಸ್ – ಐಪಿಎಸ್ ಅಧಿಕಾರಿಗಳ ವರ್ಗಾವಣೆ ; ಆದೇಶ

Published

on

ಬೆಂಗಳೂರು ನಗರ ಕಾರ್ಯಪಡೆಯ ಎಡಿಜಿಪಿಯಾಗಿ ನೇಮಕಗೊಂಡಿರುವ ಐಪಿಎಸ್‌ ಅಧಿಕಾರಿ ರೂಪಾ ಡಿ. ಅವರು ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದರು.

ಸುದ್ದಿದಿನಡೆಸ್ಕ್:ರಾಜ್ಯ ಸರ್ಕಾರ ಇಂದು ಕೆಲವು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಐಪಿಎಸ್ ಅಧಿಕಾರಿ ಡಿ. ರೂಪಾ ಅವರನ್ನು ಬೆಂಗಳೂರು ಮೆಟ್ರೋ ಪಾಲಿಟನ್ ಟಾಸ್ಕ್‌ಪೋರ್ಸ್ ಎಡಿಜಿಪಿ ಯಾಗಿ ವರ್ಗಾವಣೆ ಮಾಡಿದೆ.

ಕೆಎಸ್‌ಆರ್‌ಟಿಸಿ ಮಹಾನಿರ್ದೆಶಕರನ್ನಾಗಿ ಅಕ್ರಂ ಪಾಶಾ ಅವರನ್ನು ನೇಮಕ ಮಾಡಲಾಗಿದೆ. ಇದೇ ವೇಳೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರನ್ನು ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು ನಗರ ಕಾರ್ಯಪಡೆಯ ಎಡಿಜಿಪಿಯಾಗಿ ನೇಮಕಗೊಂಡಿರುವ ಐಪಿಎಸ್‌ ಅಧಿಕಾರಿ ರೂಪಾ ಡಿ. ಅವರು ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಪ್ರಕರಣ ; ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ ಮನವಿ

Published

on

ಸುದ್ದಿದಿನಡೆಸ್ಕ್:ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದ ಬಗ್ಗೆ ಮಧ್ಯಸ್ಥಿಕೆ ವಹಿಸುವಂತೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಸಂತ್ರಸ್ಥರು ಮತ್ತು ಅವರ ಕುಟುಂಬಗಳಿಗೆ ಪಾರದರ್ಶಕತೆ ನ್ಯಾಯ ದೊರಕುವಂತಾಗಲು ತನಿಖೆಯ ಮೇಲ್ವಿಚಾರಣೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಸಂತ್ರಸ್ಥರಿಗೆ ನ್ಯಾಯ ಒದಗಿಸುವುದು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ತಡೆಯುವುದು ಎಲ್ಲರ ಕರ್ತವ್ಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ನಡುವೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಿಂದ ಸಮಸ್ಯೆಗೆ ಒಳಗಾದ ಮಕ್ಕಳ ವಿವರವನ್ನು ಕೋರಿ ಸಿಐಡಿಗೆ ಮಕ್ಕಳ ಹಕ್ಕು ಆಯೋಗ ನೋಟಿಸ್ ಜಾರಿ ಮಾಡಿದೆ.

ಸಾರ್ವಜನಿಕ ದೂರು ಆಧರಿಸಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಆಯೋಗ ಈ ಬಗ್ಗೆ ಹೆಚ್ಚಿನ ನಿಖರ ಮಾಹಿತಿ ನೀಡುವಂತೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending