ದಿನದ ಸುದ್ದಿ
ದಾವಣಗೆರೆ | ರೈತರ ಖಾತೆಗೆ ಬೆಳೆ ನಷ್ಟ ಪರಿಹಾರ ; ಡಿಸಿ, ತಹಶೀಲ್ದಾರ್ ಖಾತೆಗಳಲ್ಲಿ 666 ಕೋಟಿ ಹಣವಿದೆ : ಸಚಿವ ಕೃಷ್ಣ ಬೈರೇಗೌಡ
ಸುದ್ದಿದಿನ,ದಾವಣಗೆರೆ:ರಾಜ್ಯದಲ್ಲಿ ಹಿಂಗಾರು ಹಂಗಾಮಿನ ಅಕ್ಟೋಬರ್ ತಿಂಗಳಲ್ಲಿಯೇ ಶೇ 66 ರಷ್ಟು ಸುರಿದ ಅಧಿಕ ಮಳೆಯಿಂದ ರಾಜ್ಯದಲ್ಲಿ ಈವರೆಗೆ 56993 ಹೆಕ್ಟೇರ್ ಪ್ರದೇಶಕ್ಕೂ ಹೆಚ್ಚು ಪ್ರದೇಶದಲ್ಲಿ ಬೆಳೆಹಾನಿ ಉಂಟಾದ ವರದಿ ಇದ್ದು ಮುಂದಿನ ಮೂರು ದಿನಗಳಲ್ಲಿ ಜಂಟಿ ಬೆಳೆ ಸಮೀಕ್ಷೆ ನಡೆಸಿ ಹಾನಿಯಾದ ರೈತರಿಗೆ ಬರುವ ಹದಿನೈದು ದಿನಗಳಲ್ಲಿ ಡಿಬಿಟಿ ಮೂಲಕ ಬೆಳೆ ನಷ್ಟ ಪರಿಹಾರ ಒದಗಿಸಲಾಗುತ್ತದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ತಿಳಿಸಿದರು.
ಅವರು ಶುಕ್ರವಾರ ಜಗಳೂರು ತಾಲ್ಲೂಕಿನ ಸಂಗೇನಹಳ್ಳಿ ಕೆರೆ ಕೋಡಿ ವೀಕ್ಷಣೆ, ಹಿರೇಮಲ್ಲನಹೊಳೆಯಲ್ಲಿ ಹಾನಿಯಾದ ಮನೆ ವೀಕ್ಷಣೆ ಮತ್ತು ಬೆಳೆ ವೀಕ್ಷಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಹಿಂಗಾರು ಹಂಗಾಮಿನಲ್ಲಿ ಅಕ್ಟೋಬರ್ ತಿಂಗಳಲ್ಲಿಯೇ ಅತೀ ಹೆಚ್ಚು ಮಳೆಯಾಗಿದ್ದು ಪ್ರಾಥಮಿಕ ಅಂದಾಜು ಬೆಳೆ ನಷ್ಟಕ್ಕಿಂತ ಇನ್ನೂ ಹೆಚ್ಚಿನ ಬೆಳೆ ನಷ್ಟವಾಗಿರುವ ವರದಿ ನಿರೀಕ್ಷಿಸಲಾಗಿದ್ದು ಮೂರು ದಿನಗಳಲ್ಲಿ ಜಂಟಿ ಸಮೀಕ್ಷೆಯ ನಂತರ ಬೆಳೆ ನಷ್ಟದ ನಿಖರತೆ ತಿಳಿಯಲಿದೆ. ಇದಕ್ಕಾಗಿಯೇ ಶನಿವಾರ ಮುಖ್ಯಮಂತ್ರಿಗಳೊಂದಿಗೆ ಅಧಿಕ ಮಳೆಯಾದ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ನಡೆಸಿ ಸೂಚನೆ ನೀಡಲಾಗುತ್ತದೆ ಎಂದರು.
ಹಿಂಗಾರು ಹಂಗಾಮಿನಲ್ಲಿ 21 ಜನರ ಪ್ರಾಣಹಾನಿಯಾಗಿದ್ದು ಇದರಲ್ಲಿ 9 ಜನರು ಸಿಡಿಲಿನಿಂದ ಮರಣ ಹೊಂದಿದ್ದರೆ, 6 ಜನರು ಮನೆ ಕುಸಿತದಿಂದ ಸಾವನ್ನಪ್ಪಿದ್ದಾರೆ. 3 ರಿಂದ 4 ಜನರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಮುಂಗಾರು ಸೇರಿದಂತೆ ಇಲ್ಲಿಯವರೆಗೆ 121 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮುಂಗಾರು ಹಂಗಾಮಿನಲ್ಲಿ 2589 ಮತ್ತು ಹಿಂಗಾರಿನಲ್ಲಿ 121 ಮನೆಗಳು ಬಿದ್ದು ಹೋಗಿವೆ, ಇವರಿಗೆ ಮನೆ ಪರಿಹಾರದ ಜೊತೆಗೆ ಮನೆ ನಿರ್ಮಿಸಿಕೊಡಲಾಗುತ್ತದೆ. ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಕಟ್ಟಿದ ಮನೆ ಬಿದ್ದು ಹೋಗಿದ್ದಲ್ಲಿ ಎಸ್.ಡಿ.ಆರ್.ಎಫ್ ನಡಿ ಒಂದು ಲಕ್ಷ ಪರಿಹಾರ ನೀಡಲಾಗುತ್ತದೆ. ಮುಂಗಾರು ಹಂಗಾಮಿನಲ್ಲಿ 1.18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆನಷ್ಟವಾಗಿದ್ದು ಈಗಾಗಲೇ ಪರಿಹಾರ ನೀಡಲಾಗಿದ್ದು ಕೆಲವೇ ದಿನಗಳಲ್ಲಿ ಮುಂಗಾರು ಬೆಳೆನಷ್ಟ ಪರಿಹಾರ ಪಾವತಿ ಪೂರ್ಣವಾಗಲಿದೆ ಎಂದರು.
666 ಕೋಟಿ ಲಭ್ಯ
ಬೆಳೆಹಾನಿ, ಜೀವಹಾನಿ ಹಾಗೂ ಮನೆ ಬಿದ್ದುಹೋಗಿದ್ದಲ್ಲಿ ತಕ್ಷಣವೇ ಪರಿಹಾರ ನೀಡಲು ಜಿಲ್ಲಾಧಿಕಾರಿ, ತಹಶೀಲ್ದಾರರ ಖಾತೆಗಳಲ್ಲಿ 666 ಕೋಟಿಯಷ್ಟು ಹಣವಿದ್ದು ಪ್ರಕೃತಿ ವಿಕೋಪ ಎದುರಿಸಲು ಯಾವುದೇ ಅನುದಾನದ ಕೊರತೆ ಇರುವುದಿಲ್ಲ. ಕಷ್ಟ ಕಾಲದಲ್ಲಿ ಪರಿಹಾರ ನೀಡಿದಲ್ಲಿ ಉಪಯುಕ್ತವಾಗಲಿದೆ ಎಂದು ತ್ವರಿತವಾಗಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ದಾವಣಗೆರೆ ಜಿಲ್ಲೆಯಲ್ಲಿ ಹಿಂಗಾರಿನಲ್ಲಿ ಶೇ 190 ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ಅನೇಕ ಕೆರೆ, ಕಟ್ಟೆಗಳು ತುಂಬಿವೆ ಮತ್ತು ಬೆಳೆ ನಷ್ಟ ಉಂಟಾಗಿದೆ. ಬೆಳೆ ನಷ್ಟವಾದ ಬಗ್ಗೆ ಜಂಟಿ ಸಮೀಕ್ಷೆ ನಡೆಸಿ ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ.
ಹಿರೇಮಲ್ಲನಹೊಳೆ ಗ್ರಾಮದಲ್ಲಿ ಕೆರೆ ಕೋಡಿಯಲ್ಲಿ ಅನಧಿಕೃತವಾಗಿ ಮನೆಗಳನ್ನು ನಿರ್ಮಿಸಿದ್ದರಿಂದ ಇಲ್ಲಿನ ಮನೆಗಳಿಗೆ ನೀರು ನುಗ್ಗಿದ್ದು ಇಲ್ಲಿರುವ 35 ಮನೆಗಳನ್ನು ಬೇರೆ ಕಡೆ ಸ್ಥಳಾಂತರಿಸಲು ಸೂಚಿಸಲಾಗಿದ್ದು ಮನೆ ಪರಿಹಾರದ ಜೊತೆಗೆ ಬೇರೆಡೆ ನಿವೇಶನ ನೀಡಿ ಇವರಿಗೆ ಮನೆ ನಿರ್ಮಿಸಿಕೊಡಲಾಗುತ್ತದೆ. ಇವರಿಗೆ ಮುಂದಿನ ಎರಡು ತಿಂಗಳಲ್ಲಿ ಶಾಶ್ವತವಾದ ಪರಿಹಾರ ಕಂಡುಕೊಳ್ಳಲು ಸೂಚಿಸಲಾಗಿದೆ. ಮತ್ತು ಇದೇ ಗ್ರಾಮದಲ್ಲಿ ಮನೆಗಳು ಕುಸಿದಿದ್ದು ಈ ಮನೆಗಳಿಗೂ ಪರಿಹಾರದ ಜೊತೆಗೆ ಬದಲಿ ನಿವೇಶನ ಹಾಗೂ ಮನೆ ನಿರ್ಮಾಣ ಮಾಡಿಕೊಡಲು ತಿಳಿಸಲಾಗಿದೆ ಎಂದರು.
ದಾವಣಗೆರೆ ಜಿಲ್ಲೆಯಲ್ಲಿ ಮಾರ್ಚ್ ನಿಂದ ಮೇ ವರೆಗೆ ಜಿಲ್ಲೆಯಲ್ಲಿ ಸಂಪೂರ್ಣ ಹಾನಿಯಾದ 1 ಮನೆ, ಭಾಗಶಃ 35 ಮನೆಗಳು, 25 ಕುರಿಗಳು ಮೃತ, 251.8 ಹೆಕ್ಟೇರ್ ಬೆಳೆ ಹಾನಿಯಾಗಿದ್ದು ರೂ.11.24 ಲಕ್ಷ ಪರಿಹಾರ ನೀಡಿದೆ.
ಜೂನ್ ನಿಂದ ಸೆಪ್ಟೆಂಬರ್ ವರೆಗೆ 5 ಹಸು, 17 ಕುರಿಗಳು ಮೃತಪಟ್ಟಿದ್ದು ರೂ.2.71 ಲಕ್ಷ ಪರಿಹಾರ ನೀಡಲಾಗಿದೆ.
ಮನೆಗಳಲ್ಲಿ 85 ಪೂರ್ಣ ಹಾನಿ, 97 ಭಾಗಶಃ ಹಾನಿ, 109 ಅಲ್ಪ ಹಾನಿಯಾಗಿದ್ದು ಒಟ್ಟು 1,83,20,000 ರೂ.ಗಳ ಪರಿಹಾರ ನೀಡಿದೆ. ಹಾನಿಯಾದ ಮೂಲ ಸೌಕರ್ಯಗಳ ಅಭಿವೃದ್ದಿಗೆ ರೂ.2,14,95,000 ಗಳನ್ನು ಒದಗಿಸಲಾಗಿದೆ.
ಹಿಂಗಾರು ಹಂಗಾಮಿನಲ್ಲಿ ಅಕ್ಟೋಬರ್‍ನಲ್ಲಿ ಮನೆ ಗೋಡೆ ಬಿದ್ದು ಮೃತರ ಕುಟುಂಬಕ್ಕೆ ರೂ.5 ಲಕ್ಷ ಪರಿಹಾರ ನೀಡಿದೆ. ನ್ಯಾಮತಿ ತಾಲ್ಲೂಕಿನಲ್ಲಿ ಹಳ್ಳದಲ್ಲಿ ಕೊಚ್ಚಿ ಮೃತರಿಗೆ ವರದಿ ಬಂದ ತಕ್ಷಣ ಪರಿಹಾರ ಒದಗಿಸಲಾಗುತ್ತದೆ. 4 ಹಸುಗಳು, 16 ಕುರಿಗಳು ಮರಣ ಹೊಂದಿದ್ದು ರೂ.2.13 ಲಕ್ಷ ಪರಿಹಾರ ನೀಡಲಾಗಿದೆ. ಬೆಳೆ ಸಮೀಕ್ಷೆ ನಡೆಯುತ್ತಿದ್ದು ಸಮೀಕ್ಷೆ ನಂತರ ಪರಿಹಾರ ನೀಡಲಾಗುತ್ತದೆ. ಜಿಲ್ಲೆಯ ಎಲ್ಲಾ ತಹಶೀಲ್ದಾರರ ಖಾತೆಯಲ್ಲಿ ರೂ.1.68 ಕೋಟಿ ಮತ್ತು ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಯಲ್ಲಿ ರೂ.10.60 ಕೋಟಿ ಹಣವಿರುತ್ತದೆ.
ಸಚಿವರೊಂದಿಗೆ ಸಮೀಕ್ಷೆ ವೇಳೆ ಶಾಸಕರಾದ ಬಿ.ದೇವೇಂದ್ರಪ್ಪ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಸೇರಿದಂತೆ ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆ ಹರಿಹರ ರೈಲು ನಿಲ್ದಾಣದಲ್ಲಿ ವಾರ್ಷಿಕ ವಿಪತ್ತು ನಿರ್ವಹಣೆ ಅಣುಕು ಅಭ್ಯಾಸ
ಸುದ್ದಿದಿನ, ಹರಿಹರ :ಇದೇ 14 ರಂದು ಗುರುವಾರ (ನಾಳೆ) ಹರಿಹರ ರೈಲು ನಿಲ್ದಾಣದಲ್ಲಿ ವಾರ್ಷಿಕ ವಿಪತ್ತು ನಿರ್ವಹಣೆಯ ಅಣುಕು ಅಭ್ಯಾಸವನ್ನು ಬೆಳಗ್ಗೆ 8:30 ಕ್ಕೆ ನಡೆಸಲಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳ ಸಮನ್ವಯದಲ್ಲಿ ಅಣಕು ಅಭ್ಯಾಸವು ನಡೆಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ದಿಲೀಪ್ ರಾಜ್ ಆ ಒಂದು ತಪ್ಪು ಪ್ರಾಣಕ್ಕೆ ಮುಳುವಾಯ್ತು
ಸುದ್ದಿದಿನಡೆಸ್ಕ್:ಕನ್ನಡ ಚಿತ್ರರಂಗದ ಖ್ಯಾತ ನಟ ದಿಲೀಪ್ ರಾಜ್ (47) ಅವರ ಅಕಾಲಿಕ ನಿಧನವು ಇಡೀ ಸ್ಯಾಂಡಲ್‌ವುಡ್ ಅನ್ನು ದಿಗ್ಭ್ರಮೆಗೊಳಿಸಿದೆ. ಕೇವಲ 47 ವರ್ಷ ವಯಸ್ಸಿನ ಈ ಪ್ರತಿಭಾನ್ವಿತ ಕಲಾವಿದ ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಆದರೆ ಅವರ ಈ ಸಾವಿನ ಹಿಂದೆ ಒಂದು ಬೇಸರದ ಸಂಗತಿಯೂ ಅಡಗಿದೆ, ಅದೇನೆಂದರೆ ಅವರ ಆರೋಗ್ಯದ ಕುರಿತು ತೋರಿದ ಒಂದು ನಿರ್ಲಕ್ಷ್ಯ!
ನಟ ನಿರ್ಮಾಪಕ ದಿಲೀಪ್ ರಾಜ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದು, ಇಡೀ ಸ್ಯಾಂಡಲ್‌ವುಡ್ ದಿಗ್ಭ್ರಮೆಗೊಂಡಿದೆ. ಕೆಲವು ದಿನಗಳ ಹಿಂದೆ ಗೋವಾ ಪ್ರವಾಸದಲ್ಲಿದ್ದಾಗಲೇ ಅವರಿಗೆ ಆಗಾಗ ಎದೆನೋವು ಕಾಣಿಸಿಕೊಂಡಿತ್ತು, ಆದರೆ ಪ್ರವಾಸದ ಖುಷಿಯಲ್ಲಿದ್ದ ಅವರು ಅದನ್ನ ಗಂಭೀರವಾಗಿ ಪರಿಗಣಿಸಿರಲಿಲ್ಲ.. ಬೆಂಗಳೂರಿಗೆ ಮರಳಿದ ನಂತರ ಇಂದು ವೈದ್ಯಕೀಯ ತಪಾಸಣೆಗೆ ಅಪಾಯಿಂಟ್‌ಮೆಂಟ್ ಕೂಡ ಫಿಕ್ಸ್ ಆಗಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು;
ತಪಾಸಣೆಗೆ ಹೋಗುವ ಮುನ್ನವೇ ರಾತ್ರಿ ತೀವ್ರ ಎದೆನೋವು ಕಾಣಿಸಿಕೊಂಡು ಕುಮಾರಸ್ವಾಮಿ ಲೇಔಟ್‌ನ ಅಪೋಲೋ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.ನೋವು ಕಾಣಿಸಿಕೊಂಡ ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದರೆ ಇಂದು ಪರಿಸ್ಥಿತಿ ಬೇರೆಯೇ ಇರುತ್ತಿತ್ತು ಎಂದು ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.
ನಟ ದಿಲೀಪ್ ರಾಜ್ ಅವರು ಕೆಲವೇ ದಿನಗಳ ಹಿಂದೆ ಗೋವಾಗೆ ಪ್ರವಾಸ ತೆರಳಿದ್ದರು.
ಅಲ್ಲಿ ಗೆಳೆಯರೊಂದಿಗೆ ಕಾಲ ಕಳೆಯುವಾಗಲೇ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು ಎನ್ನಲಾಗುತ್ತಿದೆ. ಅಂದೇ ಹೃದಯವು ಅಪಾಯದ ಮುನ್ಸೂಚನೆ ನೀಡಿದ್ದರೂ, ದಿಲೀಪ್ ಅವರು ಅದನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ತೋರಿದ್ದರು. ಗೋವಾ ಟ್ರಿಪ್‌ನಲ್ಲಿದ್ದಾಗಲೇ ಆಗಾಗ ನೋವು ಕಾಣಿಸಿಕೊಂಡರೂ, ಅವರು ಅದನ್ನು ಕೇರ್ ಮಾಡಿರಲಿಲ್ಲ.
ಬೆಂಗಳೂರಿಗೆ ಮರಳಿದ ನಂತರ ಅವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ನಿರ್ಧರಿಸಿದ್ದರು. ವಿಪರ್ಯಾಸವೆಂದರೆ, ಇಂದು ಅವರು ಆಸ್ಪತ್ರೆಗೆ ತೆರಳಿ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕಿತ್ತು ಮತ್ತು ಅದಕ್ಕಾಗಿ ವೈದ್ಯರ ಅಪಾಯಿಂಟ್‌ಮೆಂಟ್ ಕೂಡ ಫಿಕ್ಸ್ ಆಗಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು. ನಿನ್ನೆ ರಾತ್ರಿ ಕೂಡ ಧಾರಾವಾಹಿ ಕಲಾವಿದರ ಜೊತೆ ಫೋನ್‌ನಲ್ಲಿ ಆತ್ಮೀಯವಾಗಿ ಮಾತನಾಡಿದ್ದ ನಟನಿಗೆ, ಮಧ್ಯರಾತ್ರಿ ತೀವ್ರವಾದ ಎದೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ತೆರಳುವ ಮುನ್ನವೇ ಅವರು ಏಕಾಏಕಿ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಾವಿನಲ್ಲೂ ಒಂದಾದ ಪ್ರೇಮಿಗಳು: ಪ್ರೇಮಿಯ ಪಕ್ಕದಲ್ಲೇ ಪ್ರೇಯಸಿಯ ಅಂತ್ಯಸಂಸ್ಕಾರ!
ಸುದ್ದಿದಿನ,ಕುಂಬಳೆ: ಪ್ರೀತಿ ಎನ್ನುವುದು ಸಾವಿನ ನಂತರವೂ ಶಾಶ್ವತ ಎಂಬುದಕ್ಕೆ ಕೇರಳದ ಕಾಸರಗೋಡಿನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ನಿಶ್ಚಿತಾರ್ಥವಾಗಿದ್ದ ಯುವಕ ಮೃತಪಟ್ಟ ಬೆನ್ನಲ್ಲೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿಯ ಅಂತ್ಯಸಂಸ್ಕಾರವನ್ನು ಆಕೆಯ ಇಚ್ಛೆಯಂತೆ ಯುವಕನ ಸಮಾಧಿಯ ಪಕ್ಕದಲ್ಲೇ ನೆರವೇರಿಸಲಾಗಿದೆ.
ನಡೆದಿದ್ದೇನು?
ಕಿದೂರು ಕುಂಟಂಗೇರಡ್ಕದ ಪ್ರಫುಲ್ಲ (26) ಮತ್ತು ತಮಿಳುನಾಡು ನಿವಾಸಿಯಾದ ಬ್ಯಾಂಕ್ ನೌಕರ ಮಣಿ ಎಂಬವರಿಗೆ ನಾಲ್ಕು ತಿಂಗಳ ಹಿಂದೆ ಅದ್ಧೂರಿಯಾಗಿ ಮದುವೆ ನಿಶ್ಚಿತಾರ್ಥ ನಡೆದಿತ್ತು. ಇನ್ನೇನು ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಎನ್ನುವಷ್ಟರಲ್ಲಿ, ಒಂದು ತಿಂಗಳ ಹಿಂದೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಮಣಿ ಮೃತಪಟ್ಟಿದ್ದರು.
ಡೆತ್ ನೋಟ್‌ನಲ್ಲಿತ್ತು ಕೊನೆಯ ಆಸೆ
ತನ್ನ ಭಾವಿ ಪತಿಯ ಅಗಲಿಕೆಯಿಂದ ತೀವ್ರವಾಗಿ ನೊಂದಿದ್ದ ಪ್ರಫುಲ್ಲ, ಕಳೆದ ಭಾನುವಾರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿಗೂ ಮುನ್ನ ಆಕೆ ಬರೆದಿದ್ದ ಡೆತ್ ನೋಟ್ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ. “ನನ್ನ ಮೃತದೇಹವನ್ನು ಮಣಿಯ ಸಮಾಧಿಯ ಸಮೀಪದಲ್ಲೇ ಅಂತ್ಯಸಂಸ್ಕಾರ ಮಾಡಬೇಕು” ಎಂದು ಆಕೆ ತನ್ನ ಕೊನೆಯ ಆಸೆಯನ್ನು ಬರೆದಿಟ್ಟಿದ್ದರು.
ತಮಿಳುನಾಡಿನಲ್ಲಿ ಅಂತ್ಯಕ್ರಿಯೆ
ಯುವತಿಯ ಆಸೆಯಂತೆ ಉಭಯ ಕುಟುಂಬದವರು ಮಾತುಕತೆ ನಡೆಸಿದರು. ಅದರಂತೆ ನಿನ್ನೆ ಕಾಸರಗೋಡಿನಿಂದ ಪ್ರಫುಲ್ಲರ ಮೃತದೇಹವನ್ನು ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ವಳ್ಳಿಯೂರು ಎಂಬಲ್ಲಿಗೆ ಕೊಂಡೊಯ್ಯಲಾಯಿತು. ಅಲ್ಲಿ ಮಣಿಯ ಸಮಾಧಿಯ ಪಕ್ಕದಲ್ಲೇ ಪ್ರಫುಲ್ಲರ ಅಂತ್ಯಸಂಸ್ಕಾರವನ್ನು ನೆರವೇರಿಸುವ ಮೂಲಕ ಪ್ರೇಮಿಗಳಿಬ್ಬರನ್ನು ಸಾವಿನಲ್ಲೂ ಒಂದಾಗಿಸಲಾಯಿತು.
ಅಂತ್ಯಸಂಸ್ಕಾರದ ವೇಳೆ ಎರಡೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದು, ಮರುಗುವ ಪ್ರೇಮಕಥೆಗೆ ಕಂಬನಿಯ ವಿದಾಯ ಹೇಳಿದರು. ಈ ವಿಡಿಯೋ ಮತ್ತು ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಜೋಡಿಯ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ3 days ago2.5 ಕೋಟಿ ಖರೀದಿಯಲ್ಲಿ ಅವ್ಯವಹಾರ ; ಆಯುಕ್ತೆ ಮಂಜುಶ್ರೀ ಸೇರಿ 6 ಅಧಿಕಾರಿಗಳ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ6 days agoದಾವಣಗೆರೆ | ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬೆಂಕಿ ರಹಿತ ಕುಕಿಂಗ್ ಕಾರ್ಯಕ್ರಮ
-
ದಿನದ ಸುದ್ದಿ7 days agoಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣಕ್ಕೆ ಉಚಿತ ಅವಕಾಶ : ಕೂಡಲೇ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ
-
ದಿನದ ಸುದ್ದಿ3 days agoದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸಮಾರೋಪ ಸಮಾರಂಭ
-
ಅಂಕಣ2 days agoಪ್ರಜಾಪ್ರಭುತ್ವ: ಸಮಾನತೆ, ಸಾಮಾಜಿಕ ನ್ಯಾಯ ಮತ್ತು ನೈತಿಕ ಹೊಣೆಗಾರಿಕೆ
-
ಕ್ರೀಡೆ7 days agoಹಿರಿಯ ಕ್ರಿಕೆಟ್ ಪಟು ಎನ್ಆರ್ಎಚ್ ರಮೇಶ್ ನಿಧನ
-
ದಿನದ ಸುದ್ದಿ2 days agoದಾವಣಗೆರೆ| ಅಪರಿಚಿತರು ನೀಡಿದ ಟೆಲಿಗ್ರಾಮ್ ಲಿಂಕ್ ಕ್ಲಿಕ್ ಮಾಡಿ 14 ಲಕ್ಷ ಕಳೆದುಕೊಂಡ ಉಪನ್ಯಾಸಕ
-
ದಿನದ ಸುದ್ದಿ3 days agoಮಾನಸಿಕ ಆರೋಗ್ಯ ಅರಿವು ಅಗತ್ಯ : ಡಾ. ಪ್ರಭು ಎಂ. ಬಿಸ್ಲೇರಿ

