ದಿನದ ಸುದ್ದಿ
ವೈದ್ಯರು ಪ್ರಾಮಾಣಿಕವಾಗಿ ಸೇವೆ ಮಾಡಬೇಕು : ಸಂಸದ ಜಿಎಂ ಸಿದ್ದೇಶ್ವರ್
ಸುದ್ದಿದಿನ,ದಾವಣಗೆರೆ : ಬಡವರು ಖಾಯಿಲೆಗೆ ತುತ್ತಾಗಿ ಚಿಕಿತ್ಸೆ ಪಡೆಯಲು ಹೊಲ-ಮನೆಗಳನ್ನು ಮಾರಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವುದನ್ನು ತಡೆಯುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಾಯೋಜಕತ್ವದಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ತರಲಾಗಿದೆ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ್ ಹೇಳಿದರು.
ಸೋಮವಾರ ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಷ್ಟ್ರೀಯ ಆರೋಗ್ಯ ಅಭಿಯಾನ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ಆರೋಗ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಜನರ ದೃಷ್ಠಿಯಲ್ಲಿ ವೈದ್ಯರೇ ದೇವರು ಹಾಗಾಗಿ ವೈದ್ಯರು ಪ್ರಾಮಾಣಿಕವಾಗಿ ಸೇವೆ ಮಾಡಬೇಕು. ಸೇವಾವಲಯದಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬರು ಪ್ರಾಮಾಣಿಕ ಕೆಲಸ ಮಾಡಿದರೆ ಸೌಲಭ್ಯಗಳು ಜನರಿಗೆ ತಲುಪುತ್ತವೆ. ಕುಷ್ಠರೋಗ ಹಾಗೂ ಕ್ಷಯರೋಗದಂತಹ ಖಾಯಿಲೆಗಳ ನಿರ್ಮೂಲನೆಗಾಗಿ ಜಿಲ್ಲಾ ವೈದ್ಯರು ಶ್ರಮಿಸುತ್ತಿದಾರೆ, ಕ್ಷಯರೋಗ ಜಿಲ್ಲೆಯಲ್ಲಿ ಶೇ 20 ರಷ್ಟು ಕಡಿಮೆಯಾಗಿದೆ. ಅದಕ್ಕಾಗಿ ಕೇಂದ್ರ ಸರ್ಕಾರ ಕಂಚಿನ ಪದಕ ನೀಡಿ ಗೌರವಿಸಿದೆ. ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ವ್ಯವಸ್ಥಿತವಾಗಿ ಮುನ್ನಡೆಸಲು ಶ್ರಮಿಸೋಣ ಎಂದು ತಿಳಿಸಿದರು.
ಮನುಷ್ಯನಿಗೆ ಅನೇಕ ಖಾಯಿಲೆ ರೋಗಗಳು ಬರುವುದು ಸಹಜ ಆದರೆ ಅವುಗಳಿಗೆ ಸೂಕ್ತ ಚಿಕಿತ್ಸೆ ಪಡೆಯಲು ಬೇರೆ ಬೇರೆ ಆಸ್ಪತ್ರೆಗಳಿಗೆ ಹೋಗಿ ಹಣ ಕಳೆದುಕೊಂಡವರನ್ನು ಮತ್ತು ಚಿಕಿತ್ಸೆ ಪಡೆಯಲು ಸಾಧ್ಯವಾಗವರನ್ನು ನಾವು ಕಾಣಬಹುದು. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂತಹ ಪರಿಸ್ಥಿತಿ ನಿಭಾಯಿಸಲು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೊಳಿಸಿ, ಬಡತನ ರೇಖೆಗಿಂತ ಕೇಳಗಿರುವ ಕುಟುಂಬದ ಸದಸ್ಯರಿಗೆ ಐದು ಲಕ್ಷದ ವರೆಗೆ ಉಚಿತವಾಗಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಬಹುದಾಗಿದೆ.
ಉನ್ನತ ಮಟ್ಟದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಕಾರ್ಡ್ ಅನುಕೂಲವಾಗಲಿದೆ. ಕೋರೋನಾ ಸಂದರ್ಭದಲ್ಲಿ ಜೀವವೇ ಉಳಿಯದ ಪರಿಸ್ಥಿತಿ ಕಂಡಿದ್ದೇವೆ, ಆಗ ವೈದ್ಯರು ಜನರಿಗೆ ಸೂಕ್ತ ಮಾರ್ಗದರ್ಶನ ಮಾಡುವ ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ದೇಶದ ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗಿದೆ. ಬಡವರಿಗೆ ಒಂದುವರೆ ವರ್ಷಗಳ ಕಾಲ ಉಚಿತವಾಗಿ ಆಹಾರ ಒದಗಿಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ ಈ ಹಿಂದೆ ಚಿಗಟೇರಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬರುವುದಕ್ಕೆ ಜನರು ಭಯ ಪಡುತ್ತಿದ್ದರು, ಆದರೆ ಪ್ರಸ್ತುತ ವಾತವಾರಣ ಬದಲಾಗಿದೆ ಜಿಲ್ಲಾಸ್ಪತ್ರೆಯಲ್ಲಿ ಉತ್ತಮ ಸೇವೆ ದೊರೆಯುವ ಹಿನ್ನಲೆ ನಿತ್ಯವು ಸಾವಿರಾರು ಜನರು ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ. ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಹ ಇರಲಿಲ್ಲ ಈಗ ಅದನ್ನು ಕಲ್ಪಿಸಲಾಗಿದೆ. ಕೋವಿಡ್ ವೇಳೆಯಲ್ಲಿ ವೈದ್ಯರು ಹಗಲು-ರಾತ್ರಿ ಎನ್ನದೇ ನಿರ್ವಹಿಸಿದ ಕಾರ್ಯ ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ಸಾಂಕೇತಿಕವಾಗಿ ಮೂರು ಫಲಾನುಭವಿಗಳಿಗೆ ಡಿಜಿಟಲ್ ಹೆಲ್ತ್ ಕಾರ್ಡ್ ವಿತರಣೆ ಮಾಡಲಾಯಿತು. ಆರೋಗ್ಯ ಮೇಳದಲ್ಲಿ ಕುಟುಂಬ ಕಲ್ಯಾಣ ಯೋಜನೆ, ಕೋವಿಡ್ ಲಸಿಕೆ, ಆಯುರ್ವೇದ ಔಷಧಿ, ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಅರಿವು, ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ಸೇರಿದಂತೆ ಆರೋಗ್ಯ ಇಲಾಖೆಯ ವಿವಿಧ ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮೇಯರ್ ಆರ್.ಜಯಮ್ಮ, ತಹಶೀಲ್ದಾರ್ ಬಸವನಗೌಡ ಕೊಟ್ಟುರ್, ಮಾಜಿ ಶಾಸಕ ಬಸವರಾಜ್ನಾಯ್ಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾಗರಾಜ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಷಣ್ಮಖಪ್ಪ, ಆಯುಷ್ ಅಧಿಕಾರಿ ಶಂಕರಗೌಡ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಡಾ.ನೀಲಕಂಠ ನಾಯ್ಕ್, ಆರ್ಸಿಹೆಚ್ ಡಾ.ಮೀನಾಕ್ಷಿ, ಸರ್ವೇಕ್ಷಣಾಧಿಕಾರಿ ಡಾ.ಆರ್.ಜಿ.ರಾಘವನ್, ಡಾ.ಸುರೇಶ್ ಎನ್.ಬಾರ್ಕಿ, ಜಿಲ್ಲಾಸ್ಪತ್ರೆ ವೈದ್ಯರು, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾಹಿತಿ ಹಕ್ಕು ಅರ್ಜಿ ಸಲ್ಲಿಕೆ ಇನ್ಮುಂದೆ ಮತ್ತಷ್ಟು ಸುಲಭ: ‘ಸಕಾಲ’ ಸೇವೆಗೆ ಭೌತಿಕ ಆರ್ಟಿಐ ಅರ್ಜಿಗಳ ಸೇರ್ಪಡೆ, ಗ್ರಾಮ ಒನ್ನಲ್ಲೂ ಲಭ್ಯ
ಸುದ್ದಿದಿನ,ಬೆಂಗಳೂರು: ನಾಗರಿಕರಿಗೆ ಮಾಹಿತಿ ಹಕ್ಕು (ಆರ್ಟಿಐ) ಕಾಯ್ದೆಯನ್ನು ಇನ್ನಷ್ಟು ಸುಲಭವಾಗಿ ಬಳಸಲು ಹಾಗೂ ವ್ಯವಸ್ಥೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಕರ್ನಾಟಕ ಸರ್ಕಾರವು ಮಾನ್ಯ ಮುಖ್ಯಮಂತ್ರಿಯವರ ಅನುಮೋದನೆಯೊಂದಿಗೆ ಎರಡು ಪ್ರಮುಖ ಹಾಗೂ ನೂತನ ನಿರ್ಧಾರಗಳನ್ನು ಕೈಗೊಂಡಿದೆ.
ಭೌತಿಕ ಆರ್ಟಿಐ ಅರ್ಜಿಗಳ ದಾಖಲಾತಿ ಈಗ ‘ಸಕಾಲ’ ಸೇವೆ
ಅಂಚೆ ಅಥವಾ ಖುದ್ದಾಗಿ ಸಲ್ಲಿಸುವ ಭೌತಿಕ (ಕಾಗದದ ರೂಪದ) ಆರ್ಟಿಐ ಅರ್ಜಿಗಳನ್ನು ಸ್ವೀಕರಿಸಿದ ಸಾರ್ವಜನಿಕ ಪ್ರಾಧಿಕಾರವು 2 ದಿನಗಳ ಒಳಗಾಗಿ ಆರ್ಟಿಐ ಆನ್ಲೈನ್ ಪೋರ್ಟಲ್ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು.
ಇದನ್ನು ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ 2011 ರ ಅಡಿಯಲ್ಲಿ ಖಾತ್ರಿ ಸೇವೆಯಾಗಿ ಅಧಿಸೂಚಿಸಲಾಗಿದೆ. ಇದರಿಂದ ಪ್ರತಿಯೊಬ್ಬ ಅರ್ಜಿದಾರರಿಗೂ ಆನ್ಲೈನ್ ನೋಂದಣಿ ಸಂಖ್ಯೆ ದೊರೆಯಲಿದ್ದು, ಅರ್ಜಿಯ ಸ್ಥಿತಿಗತಿಯನ್ನು (Status) ಯಾವಾಗ ಬೇಕಾದರೂ ಪರಿಶೀಲಿಸಬಹುದು.
ಅರ್ಜಿಗಳು ಕಳೆದುಹೋಗುವ ಅಥವಾ ನಿರ್ಲಕ್ಷ್ಯಕ್ಕೆ ಒಳಗಾಗುವ ಸಾಧ್ಯತೆ ಇರುವುದಿಲ್ಲ. ನಿಯಮಿತ ۲ ದಿನಗಳಲ್ಲಿ ಪೋರ್ಟಲ್ನಲ್ಲಿ ದಾಖಲಿಸದಿದ್ದರೆ ನಾಗರಿಕರು ಸಕಾಲ ಕಾಯ್ದೆಯಡಿ ಪರಿಹಾರ ವೆಚ್ಚ ಪಡೆಯಲು ಅರ್ಹರಾಗಿರುತ್ತಾರೆ ಹಾಗೂ ಸಂಬಂಧಪಟ್ಟ ಅಧಿಕಾರಿಯೇ ಇದಕ್ಕೆ ಹೊಣೆಗಾರರಾಗುತ್ತಾರೆ.
ಎಲ್ಲಾ ಒನ್ ಕೇಂದ್ರಗಳಲ್ಲಿ ಆನ್ಲೈನ್ ಆರ್ಟಿಐ ಸೇವೆ ಲಭ್ಯ
ಇಂಟರ್ನೆಟ್ ಅಥವಾ ಕಂಪ್ಯೂಟರ್ ಬಳಕೆ ತಿಳಿಯದ ಸಾರ್ವಜನಿಕರನು ದೃಷ್ಟಿಯಲ್ಲಿಟ್ಟುಕೊಂಡು, ರಾಜ್ಯದ ಎಲ್ಲಾ ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿ ಆನ್ಲೈನ್ ಆರ್ಟಿಐ ಅರ್ಜಿ ಸಲ್ಲಿಸುವ ಸೌಲಭ್ಯವನ್ನು ವಿಸ್ತರಿಸಲಾಗಿದೆ.
ನಾಗರಿಕರು ತಮ್ಮ ಸಮೀಪದ ಕೇಂದ್ರಕ್ಕೆ ತೆರಳಿ ಸಿಬ್ಬಂದಿಯ ನೆರವಿನಿಂದ ಅರ್ಜಿ ಸಲ್ಲಿಸಬಹುದು.
ನಿಗದಿತ ಆರ್ಟಿಐ ಶುಲ್ಕ ಮತ್ತು ಕೇಂದ್ರದ ನಾಮಮಾತ್ರ ಸೇವಾ ಶುಲ್ಕವನ್ನು ಪಾವತಿಸಿ, ಸ್ಥಳದಲ್ಲೇ ಆನ್ಲೈನ್ ಸ್ವೀಕೃತಿ (Acknowledgement) ಪಡೆಯಬಹುದು.
ಗ್ರಾಮ ಪಂಚಾಯಿತಿ ಮಟ್ಟದ ‘ಗ್ರಾಮ ಒನ್’ ಕೇಂದ್ರಗಳ ಮೂಲಕ ಈಗ ಹಳ್ಳಿಯ ಪ್ರತಿಯೊಬ್ಬ ನಾಗರಿಕರಿಗೂ ಆನ್ಲೈನ್ ಆರ್ಟಿಐ ಸೌಲಭ್ಯ ತಲುಪಿದೆ.
ಪ್ರಮುಖ ಪ್ರಯೋಜನಗಳು
ಏಕರೂಪದ ವೇದಿಕೆ: ಭೌತಿಕ, ಆನ್ಲೈನ್ ಅಥವಾ ಸೇವಾ ಕೇಂದ್ರಗಳ ಮೂಲಕ ಬರುವ ಎಲ್ಲಾ ಅರ್ಜಿಗಳು ಒಂದೇ ವೇದಿಕೆಯಡಿ ಬರಲಿವೆ. ಪಾರದರ್ಶಕತೆ: ಆರ್ಟಿಐ ಕಾಯ್ದೆ 2005ರ ಕಾಲಮಿತಿಗಳ ಪಾಲನೆಯನ್ನು ಸುಲಭವಾಗಿ ಮೇಲ್ವಿಚಾರಣೆ ಮಾಡಬಹುದು.
ಇದರಿಂದ ಮಾಹಿತಿ ಅಧಿಕಾರಿಗಳಿಂದಾಗುವ ವಿಳಂಬವನ್ನು ಶೀಘ್ರವಾಗಿ ಗುರುತಿಸಬಹುದು.
ನಾಗರಿಕರಿಗೆ ತಮ್ಮ ಅರ್ಜಿಗಳ ವಿಶ್ವಾಸಾರ್ಹ ದಾಖಲೆ ಲಭ್ಯವಾಗುತ್ತದೆ.
ಸಾರ್ವಜನಿಕರು ನೇರವಾಗಿ ಆನ್ಲೈನ್ನಲ್ಲಾಗಲಿ ಅಥವಾ ತಮ್ಮ ಸಮೀಪದ ಸೇವಾ ಕೇಂದ್ರಗಳ (ಬೆಂಗಳೂರು ಒನ್/ಕರ್ನಾಟಕ ಒನ್/ಗ್ರಾಮ ಒನ್) ಮೂಲಕವಾಗಲಿ ಅರ್ಜಿ ಸಲ್ಲಿಸಿ ಈ ಸೌಲಭ್ಯದ ಗರಿಷ್ಠ ಪ್ರಯೋಜನ ಪಡೆದುಕೊಳ್ಳಲು ಅನುಕೂಲವಾಗಲಿದೆ ಎಂದು ಪ್ರಜಾ ಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಿನದ ಸುದ್ದಿ
ಕೆ.ಆರ್.ಐ.ಡಿ.ಎಲ್, ಮಾಯಕೊಂಡ ವ್ಯಾಪ್ತಿ ; 20 ಕೋಟಿ ಅನುದಾನ : ತನಿಖೆಗೆ ಒಳಪಡಿಸಲು ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಕೆಆರ್.ಐ.ಡಿ.ಎಲ್ ವಿಭಾಗ-2ರ ವ್ಯಾಪ್ತಿಗೆ 2023-24ನೇ ಸಾಲಿನಲ್ಲಿ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದಡಿ ದಾವಣಗೆರೆ ಜಿಲ್ಲೆ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬಿಡುಗಡೆಯಾದ ರೂ. 20 ಕೋಟಿ ಮೊತ್ತದ 51 ಕಾಮಗಾರಿಗಳನ್ನು ಸೂಕ್ತ ತನಿಖೆಗೆ ಒಳಪಡಿಸುವಂತೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ 2023-24ನೇ ಸಾಲಿನಲ್ಲಿ ಬಿಡುಗಡೆಯಾಗಿರುವ ರೂ. 20 ಕೋಟಿ ಅನುದಾನದಲ್ಲಿ ನಡೆದಿರುವ 51 ಕಾಮಗಾರಿಗಳ ಬಗ್ಗೆ ಅನುಮಾನ ಕಂಡುಬಂದಿದ್ದು, ಮಾಹಿತಿಹಕ್ಕು ಅಡಿಯಲ್ಲಿ ದಾಖಲೆ ಕೋರಿದಾಗ ಬಹುತೇಕ ಕಾಮಗಾರಿಗಳು ನಡೆದಿರುವುದಿಲ್ಲ ಎಂಬುದಾಗಿ ಹಿಂಬರಹ ನೀಡಿರುತ್ತಾರೆ. ಹೀಗಾಗಿ 51 ಕಾಮಗಾರಿಗೆ ಸಂಬಂಧಿಸಿದಂತೆ ನಿತೀನ್ ಎಸ್. ಜಾಧವ್, ಸಹಾಯಕ ಕಾರ್ಯಪಾಲಕ ಅಭಿಯಂತರು, ಕೆ.ಆರ್.ಐ.ಡಿ.ಎಲ್, ಮಾಯಕೊಂಡ ಇವರ ವಿರುದ್ಧ ಪ್ರಕರಣ ದಾಖಲಿಸಿ ರೂ. 20 ಕೋಟಿ ಮೊತ್ತದಲ್ಲಿ ನಡೆದಿರುವ 51 ಕಾಮಗಾರಿಗಳನ್ನು ನಿಯಮಾನುಸಾರ ತನಿಖೆಗೆ ಒಳಪಡಿಸುವಂತೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ದಿನದ ಸುದ್ದಿ
ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ನೀಡಿರುವ ಮುಂಬಡ್ತಿಯ ಸ್ಥಳ ನಿಯುಕ್ತಿಗೆ ಸಂಬAಧಿಸಿದ ಆನ್ಲೈನ್ ಕೌನ್ಸಿಲಿಂಗ್ನಲ್ಲಿ ಪಾರದರ್ಶಕತೆಯನ್ನು ಉಲ್ಲಂಘಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಅಡಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ಲೋಕಾಯುಕ್ತಗೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳನ್ನು ಸೇವಾ ಜೇಷ್ಠತೆ ಹಾಗೂ ಅರ್ಹತೆ ಆಧಾರದ ಮೇಲೆ ಅರ್ಹ ದ್ವಿತೀಯ ದರ್ಜೆ ಸಹಾಯಕರ ವೃಂದದಿAದ ಮುಂಬಡ್ತಿ ಮೂಲಕ ಭರ್ತಿ ಮಾಡಲು ಮುಂದಾಗಿದ್ದು, ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ದಿನಾಂಕ: 12-11-2025 ರಂದು ಆನ್ಲೈನ್ ಕೌನ್ಸಿಲಿಂಗ್ ನಡೆಸಿ, ಸ್ಥಳ ನಿಯುಕ್ತಿ ಮಾಡಿ, ಕೌನ್ಸಿಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಿಕೊಂಡ ಪ್ರಥಮ ದರ್ಜೆ ಸಹಾಯಕರ ಪಟ್ಟಿಯನ್ನು ಬಿಡುಗಡೆಗೊಸಲಾಗಿರುತ್ತದೆ.
ಆದರೆ ಕಾಲೇಜು ಶಿಕ್ಷಣ ಇಲಾಖೆಯಿಂದ ಹೊರಡಿಸಿರುವ ಪಟ್ಟಿಯಲ್ಲಿ ಆಯುಕ್ತರ ಕಛೇರಿ, ಬೆಂಗಳೂರು ಇಲ್ಲಿ 03 ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಯನ್ನು ಗುರುತಿಸಲಾಗಿರುತ್ತದೆ. ಆದರೆ ಆದೇಶ ಪ್ರತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕರ ಮುಂಬಡ್ತಿಯಲ್ಲಿ 10 ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಕಛೇರಿ, ಬೆಂಗಳೂರು ಇಲ್ಲಿಗೆ ಆಯ್ಕೆ ಮಾಡಿಕೊಂಡಿರುವ 10 ಅಭ್ಯರ್ಥಿಗಳಲ್ಲಿ 05 ಅಭ್ಯರ್ಥಿಗಳನ್ನು ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಮುಂಬಡ್ತಿ ನೀಡಿ ಯಥಾ ಪ್ರಕಾರ ಮುಂದುವರೆಸಲಾಗಿರುತ್ತದೆ.
ಹೀಗಾಗಿ ಸದರಿ ಮುಂಬಡ್ತಿ ಪ್ರಕ್ರಿಯೆಯು ನಿಯಮಬಾಹಿರವಾಗಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿ 10 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


