ದಿನದ ಸುದ್ದಿ
ಕೊಳಕು ಭಾರತವೂ ಭಾರತದ ಬೌದ್ಧಿಕ ತ್ಯಾಜ್ಯವೂ
- ನಾ ದಿವಾಕರ
ನಮ್ಮೊಳಗಿನ ಕೊಳಕು ನಮಗೆ ಕಾಣದಾದಾಗ, ಬೇರೆಯವರ ದೂಷಣೆ ನಮ್ಮಲ್ಲಿ ಆಕ್ರೋಶ ಮೂಡಿಸುತ್ತದೆ. ಡೊಲಾಂಡ್ ಟ್ರಂಪ್ ಭಾರತವನ್ನು ಕೊಳಕು ಎಂದು ಜರೆದಿರುವುದು ಭಾರತದಲ್ಲಿ ತೀವ್ರ ಟೀಕೆ, ಆಕ್ರೋಶಕ್ಕೆ ಗುರಿಯಾಗಿದೆ. ಇದಕ್ಕೆ ಕಾರಣ ನಾವು ನಮ್ಮೊಳಗಿನ ಹೊಲಸನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ನಾವು ಪರಿಶುದ್ಧರು ಎನ್ನುವ ಅಹಮಿಕೆ ನಮ್ಮನ್ನು ಆವರಿಸಿದೆ. ಸ್ವಚ್ಚ ಭಾರತ ಅಭಿಯಾನದ ನಂತರ ನಾವೇ ಮೊದಲು, ನಾವೇ ನಂಬರ್ ಒನ್ ಎನ್ನುವ ಸುದ್ದಿಮನೆಗಳ ಪರಿಭಾಷೆ ಪ್ರತಿಯೊಬ್ಬರಲ್ಲೂ ಕಾಣಿಸುತ್ತಿದೆ. ಕೊಂಚ ಆತ್ಮಾವಲೋಕನ ಮಾಡಿಕೊಂಡು ನಮ್ಮ ದೃಷ್ಟಿಯನ್ನು ಅತ್ತಿತ್ತ ಹರಿಸಿದರೆ ನಮ್ಮದು ಎಂತಹ ಸ್ವಚ್ಚ ಭಾರತ ಎಂದು ಅರಿವಾಗುತ್ತದೆ.
ಸರ್ಕಾರ ತನ್ನ ಹಿರಿಮೆ-ಗರಿಮೆಯನ್ನು ಹೆಚ್ಚಿಸಿಕೊಳ್ಳಲು, ತನ್ನ ಹಮ್ಮು ಬಿಮ್ಮುಗಳನ್ನು ತೋರಿಸಿಕೊಳ್ಳಲು ಘೋಷಿಸುವ ಯೋಜನೆಗಳು ಅಂಕಿಅಂಶಗಳ ಆಧಾರದ ಮೇಲೆ ಸಾಫಲ್ಯ ವೈಫಲ್ಯಗಳನ್ನು ಕಾಣುತ್ತವೆ. ವಾಸ್ತವ ಪರಿಸ್ಥಿತಿ ಭಿನ್ನವಾಗಿದ್ದು, ನಮ್ಮ ಕಣ್ಣ ಮುಂದೆಯೇ ಇರುತ್ತದೆ. ಶೌಚಾಲಯ ನಿರ್ಮಾಣವೇ ಸ್ವಚ್ಚಭಾರತವನ್ನು ಬಿಂಬಿಸುವ ಪ್ರಧಾನ ಮಾನದಂಡವಾಗಿದ್ದೇನೋ ಸರಿ. ಬಯಲು ಶೌಚಮುಕ್ತ ಭಾರತಕ್ಕಾಗಿ ಶ್ರಮಿಸುತ್ತಿರುವುದು ಸ್ವಾಗತಾರ್ಹ ಕ್ರಮ.
ಆದರೆ ಶೌಚಾಲಯದ ಬಳಕೆಯ ಪ್ರಮಾಣ ಎಷ್ಟಿದೆ, ಸರ್ಕಾರದ ಅನುದಾನ ಬಳಸಿ ನಿರ್ಮಿಸಲಾದ ಲಕ್ಷಾಂತರ ಶೌಚಾಲಯಗಳಲ್ಲಿ ಸ್ವಚ್ಚತೆ ಹೇಗಿದೆ, ನಿರ್ವಹಣೆಯ ಗುಣಮಟ್ಟ ಹೇಗಿದೆ, ಶೌಚಾಲಯ ಇರುವೆಡೆಯೆಲ್ಲಾ ನೀರಿನ ಸೌಕರ್ಯ ಇದೆಯೇ, ನೀರಿನ ಸೌಕರ್ಯ ಇರುವೆಡೆ ಚರಂಡಿಯ ವ್ಯವಸ್ಥೆ ಇದೆಯೇ. ಮಲಗುಂಡಿಗಳ ನಿರ್ವಹಣೆಯ ಗುಣಮಟ್ಟ ಹೇಗಿದೆ. ಈ ಎಲ್ಲ ಪ್ರಶ್ನೆಗಳೂ ಎದುರಾಗುತ್ತಿರುವಂತೆಯೇ ನಗರ ಪ್ರದೇಶಗಳಲ್ಲೇ ಮಲಗುಂಡಿಗಳಲ್ಲಿ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿರುವವರ ಅಸ್ಪೃಶ್ಯ ಸಮುದಾಯದ ಶೋಷಿತರ ಹೃದಯ ವಿದ್ರಾವಕ ಚಿತ್ರ ಕಣ್ಣೆದುರು ನಿಲ್ಲುತ್ತದೆ.
ಸ್ವಚ್ಚತೆ ಎನ್ನುವುದೇ ಸಾಪೇಕ್ಷ ವಿದ್ಯಮಾನವಾಗಿರುವುದು ಭಾರತದ ವೈಶಿಷ್ಟ್ಯ. ನಗರ ಪ್ರದೇಶಗಳಲ್ಲಿ ಕೇಂದ್ರ ಮಾರುಕಟ್ಟೆ ಬೀದಿ ಮತ್ತು ಹಿತವಲಯದ ಜನರು ಹೆಚ್ಚಾಗಿ ಬಳಸುವ ಮಾರುಕಟ್ಟೆ ಪ್ರದೇಶಗಳು, ಸೂಪರ್ ಮಾರುಕಟ್ಟೆ, ಮಾಲ್ ಗಳನ್ನು ಹೊಂದಿರುವ ರಸ್ತೆಗಳು, ಸರ್ಕಾರಿ ಕಚೇರಿ, ನ್ಯಾಯಾಲಯ ಮುಂತಾದ ಕಟ್ಟಡಗಳಿರುವ ಪ್ರದೇಶ ಇವೆಲ್ಲವೂ ಫಳಫಳ ಹೊಳೆಯತ್ತಿರುತ್ತವೆ.
ಹೊರವಲಯಗಳಲ್ಲಿ, ಬಡಾವಣೆಗಳಲ್ಲಿ ಕೊಳಕು ಹರಡಿರುತ್ತದೆ. ವರ್ತುಲ ರಸ್ತೆಗಳು ಅಕ್ಷರಶಃ ತ್ಯಾಜ್ಯದ ಬಿಡಾರಗಳಾಗಿರುತ್ತದೆ. ತ್ಯಾಜ್ಯ ವಿಲೇವಾರಿ ಎಂದರೆ ಕೇವಲ ಮನೆಗಳಿಗೆ ಮಾತ್ರ ಸೀಮಿತವಾದ ಕಾರ್ಯಾಚರಣೆಯಾಗಿರುವುದರಿಂದ ಹೊರವಲಯದ ರಸ್ತೆ ಬದಿಗಳಲ್ಲಿ ಬಿಸಾಡುವ ಒಣ ಮತ್ತು ಹಸಿ ಕಸದ ರಾಶಿ ಕೊಳೆತು ನಾರುವವರೆಗೂ ಹಾಗೆಯೇ ಬಿದ್ದಿರುತ್ತವೆ.
ತಮ್ಮ ಮನೆಗಳಲ್ಲಿ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸುವ ಹಿತವಲಯದ ಮಧ್ಯಮ ವರ್ಗದ ಸುಶಿಕ್ಷಿತರು ಹೊರವಲಯಗಳಲ್ಲಿ ನಡೆಸುವ ಭೋಜನ ಕೂಟಗಳ ಸಂದರ್ಭದಲ್ಲಿ, ಗುಂಡು ತುಂಡು ಪಾರ್ಟಿ ನಡೆಸುವ ಸಂದರ್ಭದಲ್ಲಿ ರಸ್ತೆ ಬದಿಯನ್ನೇ ಕಸದ ಗುಂಡಿ ಎಂದು ಭಾವಿಸಿ ಹೆಂಡದ ಬಾಟಲು, ಪಾರ್ಸೆಲ್ ತಂದ ಆಹಾರದ ಪ್ಯಾಕೆಟ್ ಗಳು, ಬಳಸಿ ಬಿಸಾಡುವ ಪೇಪರ್ ಅಥವಾ ಪ್ಲಾಸ್ಟಿಕ್ ಲೋಟಗಳು ಎಲ್ಲವನ್ನೂ ಬಿಸಾಡಿ ತಮ್ಮದೇ ಆದ ಸ್ವಚ್ಚ ಪರಿಸರಕ್ಕೆ ಮರಳುವುದು ಗುಟ್ಟಿನ ಮಾತೇನಲ್ಲ. ಪ್ರವಾಸಿ ತಾಣಗಳಲ್ಲಿ ಇದು ಸಾಮಾನ್ಯವಾಗಿ ಕಾಣಬಹುದಾದ ಸಂಗತಿ.
ಡೊಲಾಂಡ್ ಟ್ರಂಪ್ ಭಾರತವನ್ನು ಕೊಳಕು ಎಂದರೆ ಆಕ್ರೋಶಭರಿತರಾಗುವ ನಮಗೆ ನಮ್ಮ ದೇಶದ ನದಿಗಳು, ಜಲಸಂಪನ್ಮೂಲಗಳು, ಬೆಟ್ಟಗುಡ್ಡಗಳು, ಅರಣ್ಯ ಪ್ರದೇಶಗಳು ಎಷ್ಟು ಸ್ವಚ್ಚವಾಗಿವೆ ಎಂಬ ಪರಿವೆ ಇದೆಯೇ ? ಸಂಪ್ರದಾಯದ ಹೆಸರಿನಲ್ಲಿ, ಪರಂಪರೆಯ ಹೆಸರಿನಲ್ಲಿ, ನಂಬಿಕೆಯ ನೆಪವೊಡ್ಡಿ ನದಿಗಳನ್ನು ಕಲುಷಿತಗೊಳಿಸುತ್ತಿರುವ ನಾವು, ಕೈಗಾರಿಕೋದ್ಯಮದ ಬೆಳವಣಿಗೆಯ ಮೂಲಕವೂ ನದಿ ನೀರನ್ನು ಮಲಿನಗೊಳಿಸುತ್ತಿದ್ದೇವೆ.
ಗಂಗಾ ನದಿಯನ್ನು ಸ್ವಚ್ಚಗೊಳಿಸಿಬಿಟ್ಟರೆ ಇಡೀ ದೇಶದ ಜಲಸಂಪನ್ಮೂಲ ನೆಲೆಗಳು ಸ್ವಚ್ಚವಾಗಿಬಿಡುತ್ತವೆ ಎನ್ನುವ ಅಪ್ರಬುದ್ಧ ಚಿಂತನೆಯಲ್ಲಿರುವ ಕೇಂದ್ರ ಸರ್ಕಾರಗಳು ನಮಾಮಿ ಗಂಗೆ ಎಂದು ಹೇಳುವಾಗ, ತುಂಗೆ, ಕಾವೇರಿ, ಕೃಷ್ಣ, ಭದ್ರ, ಬ್ರಹ್ಮಪುತ್ರ ಎಲ್ಲವನ್ನೂ ಮರೆತುಬಿಡುತ್ತವೆ. ತಲಕಾವೇರಿಯ ತೀರ್ಥೋದ್ಭವದ ಸಂದರ್ಭದಲ್ಲಿ ತರ್ಪಣ ಬಿಡುವವರು, ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ಶ್ರಾದ್ಧ ಕ್ರಿಯಾವಿಧಿಗಳನ್ನು ನೆರವೇರಿಸುವವರು, ನದಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುವವರು ಇವರೆಲ್ಲರೂ ಕೊಳಕು ಭಾರತದ ರಾಯಭಾರಿಗಳಾಗಿ ಕಾಣಬೇಕಲ್ಲವೇ ?
ಸತ್ತವರ ಆತ್ಮಕ್ಕೆ ಶಾಂತಿ ಸಿಗಲೆಂದು ಶವದ ಬೂದಿಯನ್ನು ತಂದು ನದಿಗೆ ಎಸೆಯುವವರು ಸಾಂಕೇತಿಕವಾಗಿ ಆಚರಿಸಲೂ ಅವಕಾಶಗಳಿವೆ ಅಲ್ಲವೇ ? ಈ ಮೌಢ್ಯವನ್ನು ಬದಿಗಿರಿಸಿ, ನಂಬಿಕೆ ಇರುವವರಿಗೆ ಮಾನ್ಯತೆ ನೀಡುತ್ತಲೇ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಲ್ಲವೇ ? ಹರಿವ ನೀರಿನಲ್ಲಿ ಯಾವುದೇ ತ್ಯಾಜ್ಯ ಎಸೆದರೂ ಹರಿದು ಹೋಗಿಬಿಡುತ್ತದೆ ಅಡ್ಡಿಯಿಲ್ಲ ಎನ್ನುವ ವಿತಂಡ ವಾದವೇ ಭಾರತದ ಬಹುಪಾಲು ನದಿಗಳನ್ನು ಪುಣ್ಯ ಗಳಿಸುವ ಕೇಂದ್ರ ಕಚೇರಿಗಳನ್ನಾಗಿ ಮಾಡಿರುವುದು ದುರಂತ.
ನದಿಯಲ್ಲಿ ಮುಳುಗಿ ತಮ್ಮ ದೇಹದ ಮೇಲಿನ, ಒಳಗಿನ ಎಲ್ಲ ಮಲಿನ ದ್ರವ್ಯಗಳನ್ನೂ ನದಿ ಪಾಲು ಮಾಡುವವರು ಪಡೆಯುವ ಪುಣ್ಯ ಭವಿಷ್ಯದ ಪೀಳಿಗೆಗೆ ಪಾಪದ ಕೂಪಗಳನ್ನು ಸೃಷ್ಟಿಸುತ್ತದೆ ಎನ್ನುವ ಪರಿಜ್ಞಾನ ಸುಶಿಕ್ಷಿತರಲ್ಲೂ ಇಲ್ಲದಿರುವುದು ದುರಂತ ಅಲ್ಲವೇ ? ಸರ್ಕಾರಗಳು ಹಲವು ದಶಕಗಳ ಹಿಂದೆ ನಿಗದಿಡಪಸಿದಿರುವ ತ್ಯಾಜ್ಯ ವಿಲೇವಾರಿ ಘಟಕಗಳು ಮತ್ತು ತ್ಯಾಜ್ಯ ಸಂಗ್ರಹಾಗಾರಗಳು ಬಹುತೇಕ ನಗರಗಳಲ್ಲಿ ನಗರ ವಿಸ್ತರಣೆಯ ಪರಿಣಾಮವಾಗಿ ನಗರಗಳ ಮಧ್ಯಭಾಗಕ್ಕೆ ಸೇರಿಬಿಟ್ಟಿವೆ,.
ವಸತಿ ಬಡಾವಣೆಗಳ ನಡುವೆಯೇ ಇರುವ ಈ ಕಸದ ಗುಡ್ಡಗಳನ್ನು ಹೊರವಲಯಕ್ಕೆ ಸ್ಥಳಾಂತರಿಸುವುದು, ಬೆಟ್ಟಗಳಂತೆ ಬಿದ್ದಿರುವ ಕಸದ ರಾಶಿಯನ್ನು ಶೀಘ್ರಗತಿಯಲ್ಲಿ ಸಂಸ್ಕರಿಸುವುದು, ಸುತ್ತಲಿನ ಪರಿಸರದಲ್ಲಿ ಮಾಲಿನ್ಯ ಮತ್ತು ದುರ್ವಾಸನೆ ಹರಡದಂತೆ ಎಚ್ಚರವಹಿಸುವುದು ಈ ಯಾವುದೇ ಯೋಜನೆಗಳನ್ನು ಸರ್ಕಾರಗಳು ಈವರೆಗೂ ಹಮ್ಮಿಕೊಂಡಿಲ್ಲ. ಮೈಸೂರಿನಲ್ಲೇ ಸೂಯೆಜ್ ಫಾರ್ಮ್ ಎಂದು ಸುಂದರ ಹೆಸರಿನಿಂದ ಕರೆಯಲಾಗುವ ತ್ಯಾಜ್ಯದ ಗುಡ್ಡಗಳಿಂದ ಸುತ್ತಮುತ್ತಲಿನ ಬಡಾವಣೆಗಳ ಜನರು ಸಂಜೆಯಾದರೆ ಮೂಗು ಮುಚ್ಚಿ ಬದುಕುವಂತಾಗಿದೆ. ಇದರಿಂದ ಇತರ ರೋಗಗಳೂ ಹರಡುತ್ತವೆ ಎಂದು ಮೈಸೂರಿನ ಹಲವು ತಜ್ಞರು, ವಿಜ್ಞಾನಿಗಳು ಎಚ್ಚರಿಸುತ್ತಲೇ ಇದ್ದಾರೆ. ಬೆಂಗಳೂರಿನ ಬಿನ್ನಿಮಿಲ್ ಬಳಿ ಮತ್ತೊಂದು ಗುಡ್ಡ ಹಲವು ವರ್ಷಗಳಿಂದ ಸಂರಕ್ಷಣೆಗೊಳಗಾಗಿದೆ.
ಮತ್ತೊಂದೆಡೆ ಕೈಗಾರಿಕಾ ತ್ಯಾಜ್ಯಗಳು ನದಿಗಳನ್ನು ಸೇರುವುದು ನಮ್ಮ ದೇಶದಲ್ಲಿ ಒಂದು ಸಮಸ್ಯೆ ಎನಿಸಿಯೇ ಇಲ್ಲ. ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆಯನ್ನು ನೋಡಿದರೆ ಹರಪ್ಪ ಮೊಹೆಂಜಾದಾರೋ ನೆನಪಾಗುವಂತಿರುತ್ತವೆ. ಬೆಂಗಳೂರು, ಮೈಸೂರಿನಲ್ಲಿ ಮಳೆ ಬಂದಾಗಲೆಲ್ಲಾ ಪ್ರವಾಹದ ಹುಯಿಲೆಬ್ಬಿಸಲಾಗುತ್ತದೆ.
ಇದು ಜಲಪ್ರವಾಹವಲ್ಲ, ಚರಂಡಿಯಿಂದ ಹೊರ ಹರಿಯುವ ನೀರಿನ ಪ್ರವಾಹ, ಮಲಿನ ನೀರಿನ ಪ್ರವಾಹ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ರಾಜಕಾಲುವೆಗಳ ಒತ್ತುವರಿ, ಒಳಚರಂಡಿಯ ಕಳಪೆ ನಿರ್ವಹಣೆ, ಚರಂಡಿಯಲ್ಲಿ ಶೇಖರವಾಗಿರುವ ಕಸವನ್ನು ತೆಗೆಯದಿರುವುದು, ರಾಜಕಾಲುವೆಗಳಲ್ಲಿ ಬೆಳೆದಿರುವ ಗಿಡಗಂಟಿಗಳು ಮತ್ತು ಸುರಿದಿರುವ ಕಸದ ಪ್ರಮಾಣ ಇವೆಲ್ಲವೂ ನಗರಗಳನ್ನು ಕೊಚ್ಚೆಯ ನದಿಗಳನ್ನಾಗಿ ಮಾಡುತ್ತಿರುವುದನ್ನು ಮನರಂಜನೆಯಂತೆ ಟಿವಿ ಪರದೆಗಳ ಮೇಲೆ ನೋಡಿ ಆನಂದಿಸುತ್ತಿದ್ದೇವೆ.
ಇತ್ತೀಚೆಗೆ ಬೆಂಗಳೂರಿನ ವೃಷಭಾವತಿ ಕಾಲುವೆ ಒಡೆದುಹೋಗಿ ರಸ್ತೆಯೇ ಕುಸಿದಿರುವುದು ನಮ್ಮ ಸರ್ಕಾರಿ ಇಲಾಖೆಗಳ ಕಾಮಗಾರಿಯ ದಕ್ಷತೆಗೆ ಕನ್ನಡಿ ಹಿಡಿದಂತಿದೆ. ಈ ಎಲ್ಲ ಸಮಸ್ಯೆಗಳಿದ್ದರೂ ಸ್ವಚ್ಚ ಭಾರತದ ಯೋಜನೆಯಡಿ ಒಂದು ಪ್ರಶಸ್ತಿ ಪತ್ರ ಪಡೆದು ಆತ್ಮರತಿಯಲ್ಲಿ ಬೀಗುತ್ತಾ ಬೆನ್ನುತಟ್ಟಿಕೊಳ್ಳುವುದರಲ್ಲಿ ನಗರ ಪಾಲಿಕೆಗಳು, ಪುರಸಭೆಗಳು, ಸರ್ಕಾರಗಳು ನಿರತರಾಗಿವೆ. ನದಿಗಳ ಮಾಲಿನ್ಯಕ್ಕೆ ಅತಿ ಹೆಚ್ಚಿನ ಕೊಡುಗೆ ನೀಡುವ ಕೈಗಾರಿಕೆಗಳನ್ನು ನಿಯಂತ್ರಿಸುವ ಯಾವುದೇ ಆಡಳಿತ ಯಂತ್ರವನ್ನು ಕಾಣಲಾಗುತ್ತಿಲ್ಲ. ಕೈಗಾರಿಕಾ ತ್ಯಾಜ್ಯ, ವೈದ್ಯಕೀಯ ತ್ಯಾಜ್ಯ, ಈಗ ಕೊರೋನಾ ತ್ಯಾಜ್ಯ, ಮಾಸ್ಕ್ ಗಳು, ಕೈಗವುಸುಗಳು, ಸ್ಯಾನಿಟೈಸರ್ ಬಾಟಲಿಗಳು ಭಾರತದ ತ್ಯಾಜ್ಯ ಶಿಖರಗಳನ್ನು ಎತ್ತರಿಸುವ ಕಚ್ಚಾವಸ್ತುಗಳಾಗುತ್ತಿವೆ.
ಇದರ ನಡುವೆ ಭಾರತದಲ್ಲಿ ವಾಯು ಮಾಲಿನ್ಯದ ಬಗ್ಗೆ ಯಾವ ಸರ್ಕಾರವೂ ಚಿಂತಿಸುತ್ತಿಲ್ಲ. ಮೂಲತಃ ಡೊಲಾಂಡ್ ಟ್ರಂಪ್ ಟೀಕೆ ಮಾಡಿರುವುದು ದೆಹಲಿಯಲ್ಲಿನ ವಾಯು ಮಾಲಿನ್ಯವನ್ನು ಕುರಿತು. ಇದು ನಿಜವೂ ಹೌದು. ಬೆಂಗಳೂರು ದೆಹಲಿಗಿಂತಲೂ ಕಡಿಮೆಯೇನಿಲ್ಲ.
ವಾಹನ ದಟ್ಟಣೆ ಹೆಚ್ಚಾಗುತ್ತಿರುವುದು, ಅನಗತ್ಯ ವಾಹನ ಬಳಕೆ ಮತ್ತು ಕೈಗಾರಿಕಾ ಘಟಕಗಳಿಂದ ಹೊರಬರುವ ಇಂಗಾಲದ ಪ್ರಮಾಣ ಭಾರತದ ಎಲ್ಲ ಪ್ರಮುಖ ನಗರಗಳಲ್ಲೂ ಉಸಿರುಗಟ್ಟಿಸುವ ವಾತಾವರಣವನ್ನು ನಿರ್ಮಿಸುತ್ತಿದೆ. ವಾಯು ಮಾಲಿನ್ಯ ನಿಯಂತ್ರಣಕ್ಕಾಗಿಯೂ ಭಾರತದಲ್ಲಿ ಹಲವು ಕಾನೂನುಗಳಿವೆ. ಆದರೆ ಯಾವುದೂ ಪಾಲನೆಯಾಗುತ್ತಿಲ್ಲ. ಈ ದೇಶದಲ್ಲಿ ಕಾನೂನು ಉಲ್ಲಂಘನೆಯೂ ಸಹ ಶ್ರೇಣೀಕೃತವಾಗಿರುವುದರಿಂದ ಎಲ್ಲರಿಗೂ ಶಿಕ್ಷೆಯಾಗುವುದಿಲ್ಲ. ಹಥ್ರಾಸ್ ಪ್ರಕರಣದಲ್ಲಿ ಇದು ಅತ್ಯಾಚಾರಕ್ಕೂ ಅನ್ವಯವಾಗಿರುವುದನ್ನು ಕಾಣಬಹುದು.
ತ್ಯಾಜ್ಯ ವಿಲೇವಾರಿ ಎಂದರೆ ಮನೆಗಳಿಂದ ಸಂಗ್ರಹಿಸಿ ಒಂದೆಡೆ ಶೇಖರಿಸುವುದು, ರಸ್ತೆ ಬದಿಯ ತೊಟ್ಟಿಗಳಲ್ಲಿರುವುದನ್ನು ತ್ಯಾಜ್ಯಗುಡ್ಡದ ಮೇಲೆ ಸುರಿಯುವುದು ಇಷ್ಟು ಮಾತ್ರವೇನೋ ಎನ್ನುವಂತೆ ಕಾರ್ಯ ನಿರ್ವಹಿಸಲಾಗುತ್ತಿದೆ. ರಸ್ತೆ ಬದಿಗಳಲ್ಲಿನ ಕಸದ ತೊಟ್ಟಿಗಳ ದುರ್ನಾತ ನಾಲ್ಕಾರು ರಸ್ತೆಗಳಿಗೆ ಹರಡುವವರೆಗೂ ಅಲ್ಲಿಯೇ ಇರುತ್ತವೆ. ನಾವು ಅದನ್ನು ಹಾದು ಹೋಗುವಾಗ ಮೂಗು ಮುಚ್ಚಿಕೊಂಡು ಹೋಗುತ್ತೇವೆಯೇ ಹೊರತು, ಇದೇಕೆ ಹೀಗೆ ಎಂದು ಯೋಚಿಸುವುದಿಲ್ಲ.
ಏಕೆಂದರೆ ಕಸ ಹಾಕುವುದು ನಮ್ಮ ಕೆಲಸ, ತೆಗೆಯುವುದು ಅಲ್ಲ ಎನ್ನುವವರ ಸಂಖ್ಯೆ ನಮ್ಮಲ್ಲಿ ಹೆಚ್ಚಾಗಿದೆ. ಇದಕ್ಕೆ ಕಾರಣ ಜಾತಿ ವ್ಯವಸ್ಥೆ ಎಂದು ಹೇಳಬೇಕಿಲ್ಲ. ಕಸ ವಿಲೇವಾರಿಗೆ ಬರುವ ಕಾರ್ಮಿಕರ ಸಮವಸ್ತ್ರ ಮತ್ತು ಅವರ ದೈಹಿಕ ರಕ್ಷಣೆ ಮತ್ತು ಆರೋಗ್ಯ ರಕ್ಷೆಯ ಸಾಧನಗಳನ್ನು ನೋಡಿದರೆ ಎದೆ ಝಲ್ಲೆನ್ನುತ್ತದೆ. ಕೊರೋನಾ ಸಂದರ್ಭದಲ್ಲೂ ಇದೇ ರೀತಿಯಲ್ಲೇ ಕಾರ್ಯ ನಿರ್ವಹಿಸಿರುವುದನ್ನು ನೋಡಿದ್ದೇವೆ. ಈ ಕೊಳಕು ನಮ್ಮದೇ ಕೊಡುಗೆ ಅಲ್ಲವೇ ?
ಈ ಕಸದ ರಾಶಿಯನ್ನು, ದೊಡ್ಡ ಗಾತ್ರದ ಕಸದ ತೊಟ್ಟಿಗಳನ್ನು ಶುಚಿಗೊಳಿಸಲು ಯಂತ್ರಗಳನ್ನು ಬಳಸಬಹುದು. ಕಸ ಸಾಗಿಸುವ ವಾಹನಗಳನ್ನು ನಿತ್ಯ ಸ್ವಚ್ಚಗೊಳಿಸಬಹುದು. ಕಸದ ವಾಹನ ಎಂದರೆ ಪಕ್ಕದಲ್ಲಿ ನಿಲ್ಲಲಾರದಷ್ಟು ದುರ್ನಾತ ಹೊಂದಿರಲೇಬೇಕು ಎನ್ನುವ ನಿಯಮವೇನಾದರೂ ಇದೆಯೇ ? ನಮ್ಮಲ್ಲಿ ಶವ ಸಾಗಿಸುವ ವಾಹನ ಇದಕ್ಕಿಂತಲೂ ಹೆಚ್ಚು ಶುಚಿಯಾಗಿ ಕಾಣುತ್ತದೆ. ಕಸ ಸಾಗಿಸುವ ನೌಕರರು ದೊಡ್ಡ ಲಾರಿಗಳಲ್ಲಿ ಕಸದ ರಾಶಿಯ ಮೇಲೆ ಅಥವಾ ಅದರ ನಡುವೆ ಕುಳಿತು ಪ್ರಯಾಣ ಮಾಡುವ ದೃಶ್ಯವನ್ನು ಯಾವುದೇ ನಗರಗಳಲ್ಲಾದರೂ ಕಾಣಬಹುದು ?
ಏಕೆ ಹೀಗೆ ? ಅವರಿಗಾಗಿಯೇ ಪ್ರತ್ಯೇಕ ವಾಹನ ಒದಗಿಸಲಾಗುವುದಿಲ್ಲವೇ ? ಕಳ್ಳತನ, ಕೊಲೆ, ಸುಲಿಗೆ, ಅತ್ಯಾಚಾರ ಹೀಗೆ ಅಪರಾಧಗಳನ್ನೆಸಗಿದವರನ್ನು ಕರೆದೊಯ್ಯುವ ಪೊಲೀಸ್ ಇಲಾಖೆಯ ವಾಹನಗಳು ಎಷ್ಟು ಶುಚಿಯಾಗಿರುತ್ತವೆ ಅಲ್ಲವೇ ? ಯಾವುದೇ ತಪ್ಪು ಮಾಡದೆ ಮಾನವ ಸಮಾಜದ ಉತ್ತಮ ಆರೋಗ್ಯಕ್ಕಾಗಿ, ಸ್ವಚ್ಚ ಪರಿಸರಕ್ಕಾಗಿ ತಮ್ಮ ಜೀವ ಒತ್ತ ಇಟ್ಟು ದುಡಿಯುವ ಈ ಕಾರ್ಮಿಕರಿಗೆ ಸುಸಜ್ಜಿತ ವಾಹನ ನೀಡಲಾಗುವುದಿಲ್ಲವೇ ?
ಇದು ಸಾಧ್ಯ ಆದರೆ ಮಾಡುವ ಇಚ್ಚಾಶಕ್ತಿ ನಮ್ಮ ಆಡಳಿತ ವ್ಯವಸ್ಥೆಗೆ, ಆಳುವ ವರ್ಗಗಳಿಗೆ ಇಲ್ಲ. ಇಚ್ಚಾಶಕ್ತಿ ಇದ್ದರೂ ಜನುಮಕ್ಕಂಟಿದ ಜಾತಿ ಪ್ರಜ್ಞೆ ಅಡ್ಡಿಯಾಗುತ್ತದೆ. ಕಾರಣ ಈ ತ್ಯಾಜ್ಯದ ಗುಡ್ಡಗಳನ್ನೂ ಮೀರಿಸುವಷ್ಟು ಕೊಳಕು ನಮ್ಮ ಸಾಮಾಜಿಕ ವ್ಯವಸ್ಥೆಯೊಳಗೆ, ಜಾತಿ ಪ್ರಜ್ಞೆಯ ರೂಪದಲ್ಲಿ ಸೇರಿಕೊಂಡುಬಿಟ್ಟಿದೆ. ಮಲಗುಂಡಿಯಲ್ಲಿ ಬಿದ್ದು ಸಾಯುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದರೂ ಒಂದು ಕಠಿಣ ಕಾನೂನು ಜಾರಿಯಾಗಿಲ್ಲ, ಎರಡು ದಶಕಗಳ ಹಿಂದೆ ಮಲಗುಂಡಿ ಸ್ವಚ್ಚತೆಗೆ ಮಾನವ ಶ್ರಮ ಬಳಸುವಂತಿಲ್ಲ ಎಂದು ಕಠಿಣ ಕಾನೂನು ಜಾರಿಯಾಗಿದ್ದರೂ ಪಾಲಿಸುವವರಿಲ್ಲ.
ಇದು ಕೇವಲ ಮಲಗುಂಡಿಗೆ ಸಂಬಂಧಪಟ್ಟ ವಿಚಾರವಲ್ಲ. ಹಥ್ರಾಸ್ ಘಟನೆ ನಮ್ಮ ದೇಶದಲ್ಲಿ ಅಸ್ಪೃಶ್ಯತೆ ಎಂತಹ ಕ್ರೌರ್ಯವನ್ನು ಸೃಷ್ಟಿಸಿದೆ ಎನ್ನುವುದನ್ನು ನಿರೂಪಿಸಿದೆ. ಅಲ್ಲಿ ಇಡೀ ಆಡಳಿತ ವ್ಯವಸ್ಥೆಯೇ ಮಲಗುಂಡಿಯಂತೆ ಕಾಣಿಸುತ್ತಿದೆ. ಖೈರ್ಲಾಂಜಿಯಿಂದ ಹಥ್ರಾಸ್ ವರೆಗೆ ಇದನ್ನು ಗಮನಿಸುತ್ತಲೇ ಬಂದಿದ್ದೇವೆ. ಒಂದು ಅಸ್ಪೃಶ್ಯ ಜೀವ ಕಸದ ರಾಶಿಯ ಮೇಲಿರಲಿ, ಮಲಗುಂಡಿಯಲ್ಲಿರಲಿ, ಅನಾಥ ಶವದಂತೆ ಬಿದ್ದಿರಲಿ ನಮ್ಮ ಆಡಳಿತ ವ್ಯವಸ್ಥೆಯ ಮನಸು ವಿಚಲಿತವಾಗುವುದಿಲ್ಲ. ಆಡಳಿತ ವ್ಯವಸ್ಥೆಯ ಒಂದು ಭಾಗವಾಗಿದ್ದು, ಅಧಿಕಾರ ರಾಜಕಾರಣದ ಪ್ರಭಾವದಿಂದ ತಮ್ಮ ಸ್ವಂತಿಕೆಯನ್ನೂ ಕಳೆದುಕೊಂಡಿರುವ ಜನಪ್ರತಿನಿಧಿಗಳೂ ವಿಚಲಿತರಾಗುವುದಿಲ್ಲ.
ಹಥ್ರಾಸ್ ಸ್ವತಂತ್ರ ಭಾರತದ ಮೊದಲ ಕಪ್ಪು ಚುಕ್ಕೆಯಲ್ಲ. ಕೊನೆಯದೂ ಅಲ್ಲ. ಆದರೆ ಈ ಕಪ್ಪುಚುಕ್ಕೆ ನಮ್ಮ ದೃಷ್ಟಿಗೆ ಅಡ್ಡಬರದೆ ಹೋದರೆ ನಾವು ದೃಷ್ಟಿಹೀನರಾಗುವುದೇ ಲೇಸು. ಅತ್ಯಾಚಾರಕ್ಕೊಳಗಾದ ಅಸ್ಪೃಶ್ಯ ಸಮುದಾಯದ ಹೆಣ್ಣುಮಗಳ ಶವವನ್ನು ಕುಟುಂಬದವರಿಗೂ ನೀಡದೆ ಸುಟ್ಟುಹಾಕುವ ಒಂದು ಆಡಳಿತ ವ್ಯವಸ್ಥೆ ನಮ್ಮಲ್ಲಿದೆ. ಖೈರ್ಲಾಂಜಿ ಮತ್ತು ಕಂಬಾಲಪಲ್ಲಿಯಲ್ಲಿ ಮೇಲ್ಜಾತಿಯ ದುಷ್ಟ ಮನಸುಗಳು ಮಾಡಿದ್ದ ಕೃತ್ಯವನ್ನು ಹಥ್ರಾಸ್ ನಲ್ಲಿ ಮೇಲ್ಜಾತಿಯ ರಕ್ಷಕರಾಗಿ ಪೊಲೀಸ್ ಸಿಬ್ಬಂದಿ ನೆರವೇರಿಸಿದ್ದಾರೆ.
ಅಂದರೆ ಪ್ರಭುತ್ವದ ಒಂದು ಅಂಗ ಭಾರತದ ಜಾತಿ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಪಾಲಿಸುತ್ತಿದೆ. ಇನ್ನೊಂದು ಅಂಗ ರಕ್ಷಣೆ ನೀಡುತ್ತಿದೆ. ಈ ಘಟನೆ ನಮ್ಮೊಳಗಿನ ಜಾತಿ ಮನಸಿನ ಮಾಲಿನ್ಯವನ್ನು ಸಂಪೂರ್ಣವಾಗಿ ಹೊರಗೆಡಹಿದೆ. ಒಂದು ಅತ್ಯಾಚಾರ ಪ್ರಕರಣಕ್ಕೆ ಪ್ರತಿಕ್ರಯಿಸಲೂ,ಸ್ಪಂದಿಸಲೂ ಜಾತಿ ಒಂದು ಅಡ್ಡಗೋಡೆಯಂತೆ ತಡೆಯೊಡ್ಡುವುದು ನಮ್ಮೊಳಗಿನ ಹಸಿ ಮತ್ತು ಒಣಕಸದ ಸುಳಿವನ್ನು ನೀಡುವಂತಿದೆ.
ಸ್ವಚ್ಚ ಭಾರತ ಮತ್ತು ಶುಚಿತ್ವವನ್ನು ಶೌಚಾಲಯಗಳಿಂದ ಹೊರತಂದು ಮನೆಮನೆಗೂ ತಲುಪಿಸಬೇಕೆಂದರೆ ಭಾರತೀಯ ಸಮಾಜ ಈ ಜಾತಿ ಮನಸ್ಸಿನ ಕೊಳಕನ್ನು ಹೊರಹಾಕಬೇಕು. ಡೊಲಾಂಡ್ ಟ್ರಂಪ್ ಅವರ ಮಾತುಗಳು ರಾಜಕೀಯ ಲಾಭಕ್ಕಾಗಿ ನೀಡಿರುವ ಒಂದು ಹೇಳಿಕೆ. ಅದು ನಮ್ಮಲ್ಲಿ ಆಕ್ರೋಶ ಉಂಟುಮಾಡಬೇಕಾದ ಅನಿವಾರ್ಯತೆಯೂ ಇಲ್ಲ.
ಏಕೆಂದರೆ ಕೊರೋನಾ ವೈರಾಣುವಿನ ನಡುವೆ ಅವರು ಭಾರತಕ್ಕೆ ಭೇಟಿ ನೀಡಿದಾಗ ದೇಶಕ್ಕೆ ಆರ್ಥಿಕ ಅಭಿವೃದ್ಧಿಯ ಮಾದರಿಯನ್ನು ನೀಡಿದ ರಾಜ್ಯದಲ್ಲೇ, ರಸ್ತೆಯ ಇಕ್ಕೆಲಗಳಲ್ಲಿರುವ ಕೊಳಕನ್ನು ಮರೆಮಾಚಲು ನೂರು ಕೋಟಿ ರೂ ಖರ್ಚು ಮಾಡಿ ಗೋಡೆಗಳನ್ನು ನಿರ್ಮಿಸಲಾಗಿತ್ತು. ಇದು ವಿದೇಶಿ ಗಣ್ಯರೊಬ್ಬರನ್ನು ಸಂತುಷ್ಟಗೊಳಿಸಲು ನಿರ್ಮಿಸಿದ ಗೋಡೆ. ಆದರೆ ನಮ್ಮ ನಡುವೆಯೇ ನಾವೇ ನಿರ್ಮಿಸಿಕೊಂಡಿರುವ ಜಾತಿ ಗೋಡೆಗಳಲ್ಲಿ ಅಡಗಿರುವ ಕೊಳಕು, ಹೊಲಸು ಮತ್ತು ತ್ಯಾಜ್ಯ ಇವು ಬೌದ್ಧಿಕ ಸ್ವರೂಪದ್ದು ಎನ್ನುವುದನ್ನು ಮರೆಯಕೂಡದು.
ಈ ಬೌದ್ಧಿಕ ಕೊಳಕನ್ನು ಹೊರಹಾಕುವ ಮೂಲಕ ಅಥವಾ ದೇಶದ ಮೇಲ್ಜಾತಿ ಸಮುದಾಯದ ಮನದಾಳದಲ್ಲಿ ಸುಪ್ತವಾಗಿದ್ದು, ಗುಪ್ತಗಾಮಿನಿಯಂತೆ ಹರಿಯುತ್ತಿರುವ ಜಾತಿ ಪ್ರಜ್ಞೆ, ಜಾತಿ ಶ್ರೇಷ್ಠತೆಯ ಅಹಮಿಕೆ ಹಾಗು ಅಸ್ಪೃಶ್ಯತೆಯ ಬಗ್ಗೆ ಇರುವ ನಿಷ್ಕಾಳಜಿಯನ್ನು ತೊಡೆದುಹಾಕುವ ಮೂಲಕ ನಾವು ಡೊಲಾಂಡ್ ಟ್ರಂಪ್ ಅವರಿಗೆ ಸವಾಲು ಹಾಕಬಹುದು. ಒಂದು ಸಮಾಜ ಅಥವಾ ದೇಶ ಅಥವಾ ಒಂದು ದೇಹ ಶುಚಿ ಎನಿಸುವುದು, ಪರಿಶುದ್ಧ ಎನಿಸುವುದು, ಪ್ರಬುದ್ಧ ಎನಿಸುವುದು ಬಾಹ್ಯ ಸ್ವಚ್ಚತೆಯಿಂದಲ್ಲ, ಆಂತರಿಕ ಸ್ವಚ್ಚತೆಯಿಂದ.
ಈ ನಿಟ್ಟಿನಲ್ಲಿ ಭಾರತ ಇನ್ನು ಬಹುದೂರ ಸಾಗಬೇಕಿದೆ. ವಿಜ್ಞಾನ, ವೈಚಾರಿಕತೆ, ವಿವೇಕ, ವಿವೇಚನೆ ಇವೆಲ್ಲವನ್ನೂ ಒಳಗೊಂಡಂತೆ ಕಂಡರೂ ಭಾರತ ಕೊಳಕಾಗಿ ಕಾಣುತ್ತಿದೆ ಎಂದರೆ ಅದಕ್ಕೆ ಮೂಲ ಕಾರಣ ನಮ್ಮ ಬೌದ್ಧಿಕ ಮಾಲಿನ್ಯ. ಈ ಬೌದ್ಧಿಕ ಮಾಲಿನ್ಯದ ಮೂಲ ಇರುವುದು ಜಾತಿ ವ್ಯವಸ್ಥೆಯಲ್ಲಿ, ಜಾತಿ ಪ್ರಜ್ಞೆಯಲ್ಲಿ, ಜಾತಿ ಶ್ರೇಷ್ಠತೆಯಲ್ಲಿ. ಇದರಿಂದ ಹೊರಬರಲು ಟ್ರಂಪ್ ನೆನಪಿಸಬೇಕಿಲ್ಲ. ನಮ್ಮಲ್ಲಿ ಪ್ರಜ್ಞೆ ಜಾಗೃತವಾಗಬೇಕಷ್ಟೇ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ
ಸುದ್ದಿದಿನ,ದಾವಣಗೆರೆ: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್. ಬಸವಂತಪ್ಪ ಅವರಿಗೆ ಸಚಿವ ಸ್ಥಾನ ದೊರೆತಿರುವುದು ದಾವಣಗೆರೆ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಣಮಿಸಿದೆ. ಹಲವು ವರ್ಷಗಳಿಂದ ಪಕ್ಷದ ಸಂಘಟನೆಗೆ ಸಲ್ಲಿಸಿರುವ ಸೇವೆ, ಕ್ಷೇತ್ರದ ಅಭಿವೃದ್ಧಿಗೆ ನೀಡಿರುವ ಆದ್ಯತೆ ಹಾಗೂ ಜನಸಾಮಾನ್ಯರೊಂದಿಗೆ ಹೊಂದಿರುವ ನಿಕಟ ಸಂಪರ್ಕವನ್ನು ಪರಿಗಣಿಸಿ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಚಿವರಾಗಿ ಆಯ್ಕೆಯಾದ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಮಾಯಕೊಂಡ ಕ್ಷೇತ್ರ ಸೇರಿದಂತೆ ದಾವಣಗೆರೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಭ್ರಮ ಮನೆಮಾಡಿತು. ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು. ಬಸವಂತಪ್ಪ ಅವರ ನಿವಾಸದ ಎದುರು ಬೆಳಗ್ಗಿನಿಂದಲೇ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ಜಮಾಯಿಸಿ ಅಭಿನಂದನೆ ಸಲ್ಲಿಸಿದರು. ಮಹಿಳೆಯರು ಆರತಿ ಬೆಳಗಿ ಸ್ವಾಗತ ಕೋರಿದರೆ, ಯುವಕರು ಘೋಷಣೆಗಳನ್ನು ಕೂಗಿ ಸಂಭ್ರಮಾಚರಣೆ ನಡೆಸಿದರು.
ಕೆ.ಎಸ್. ಬಸವಂತಪ್ಪ ಅವರು ಹಲವು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದು, ರೈತರ ಸಮಸ್ಯೆಗಳು, ಕುಡಿಯುವ ನೀರಿನ ಯೋಜನೆಗಳು, ಗ್ರಾಮೀಣ ರಸ್ತೆ ಅಭಿವೃದ್ಧಿ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ವಿಶೇಷ ಆದ್ಯತೆ ನೀಡುವ ಮೂಲಕ ಜನರ ವಿಶ್ವಾಸ ಗಳಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿರುವ ಕಾರಣದಿಂದಲೇ ಅವರಿಗೆ ಸಚಿವ ಸ್ಥಾನ ದೊರೆತಿದೆ ಎಂಬ ಅಭಿಪ್ರಾಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಮಾಯಕೊಂಡ ಕ್ಷೇತ್ರವು ಕೃಷಿ ಪ್ರಧಾನ ಪ್ರದೇಶವಾಗಿದ್ದು, ಇಲ್ಲಿ ನೀರಾವರಿ, ರಸ್ತೆ, ಶಿಕ್ಷಣ, ಕೈಗಾರಿಕಾ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಯಂತಹ ಹಲವು ಸವಾಲುಗಳಿವೆ. ಸಚಿವ ಸ್ಥಾನ ದೊರೆತಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ವೇಗ ಸಿಗಲಿದೆ ಎಂಬ ನಿರೀಕ್ಷೆ ಜನರಲ್ಲಿ ಮೂಡಿದೆ. ವಿಶೇಷವಾಗಿ ರೈತರು, ಯುವಕರು ಹಾಗೂ ಮಹಿಳಾ ಸಂಘಟನೆಗಳು ಹೊಸ ಸಚಿವರಿಂದ ಹೆಚ್ಚಿನ ಅಭಿವೃದ್ಧಿ ಯೋಜನೆಗಳನ್ನು ನಿರೀಕ್ಷಿಸುತ್ತಿವೆ.
ಸಚಿವ ಸ್ಥಾನ ಘೋಷಣೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆ.ಎಸ್. ಬಸವಂತಪ್ಪ ಅವರು, “ಈ ಜವಾಬ್ದಾರಿ ನನಗೆ ದೊರೆತಿರುವುದು ವೈಯಕ್ತಿಕ ಗೌರವ ಮಾತ್ರವಲ್ಲ, ಮಾಯಕೊಂಡ ಕ್ಷೇತ್ರದ ಪ್ರತಿಯೊಬ್ಬ ಮತದಾರನಿಗೂ ಸಂದ ಗೌರವವಾಗಿದೆ. ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ನಾಯಕರು ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಜನರ ನಿರೀಕ್ಷೆಗಳನ್ನು ಈಡೇರಿಸುವುದು ನನ್ನ ಮೊದಲ ಆದ್ಯತೆಯಾಗಿರುತ್ತದೆ” ಎಂದು ಹೇಳಿದರು.
ರಾಜ್ಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರ ಜೊತೆಗೆ, ದಾವಣಗೆರೆ ಜಿಲ್ಲೆಗೆ ಹೆಚ್ಚಿನ ಅಭಿವೃದ್ಧಿ ಯೋಜನೆಗಳನ್ನು ತರಲು ಪ್ರಯತ್ನಿಸಲಾಗುವುದು ಎಂದು ಅವರು ಭರವಸೆ ನೀಡಿದರು. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ, ಶಾಲೆಗಳು ಮತ್ತು ಆಸ್ಪತ್ರೆಗಳ ಸೌಲಭ್ಯಗಳ ಸುಧಾರಣೆ, ಯುವಕರಿಗೆ ಉದ್ಯೋಗಾವಕಾಶಗಳ ಸೃಷ್ಟಿ ಹಾಗೂ ಮಹಿಳಾ ಸಬಲೀಕರಣ ಕಾರ್ಯಕ್ರಮಗಳಿಗೆ ವಿಶೇಷ ಗಮನ ಹರಿಸಲಾಗುವುದು ಎಂದು ತಿಳಿಸಿದರು.
ಪಕ್ಷದ ಜಿಲ್ಲಾ ಮುಖಂಡರು ಮಾತನಾಡಿ, ಬಸವಂತಪ್ಪ ಅವರ ಸಚಿವ ಸ್ಥಾನದಿಂದ ಜಿಲ್ಲೆಗೆ ಹೆಚ್ಚಿನ ಅನುದಾನ ಮತ್ತು ಅಭಿವೃದ್ಧಿ ಯೋಜನೆಗಳು ಹರಿದು ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆಡಳಿತಾತ್ಮಕ ಮಟ್ಟದಲ್ಲಿ ಜಿಲ್ಲೆಯ ವಿವಿಧ ಯೋಜನೆಗಳಿಗೆ ವೇಗ ಸಿಗಲಿದ್ದು, ಬಾಕಿ ಉಳಿದಿರುವ ಹಲವು ಕಾಮಗಾರಿಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.
ವಿವಿಧ ಸಂಘಟನೆಗಳ ಪ್ರತಿನಿಧಿಗಳು ಸಹ ಸಚಿವರಿಗೆ ಅಭಿನಂದನೆ ಸಲ್ಲಿಸಿ, ಜಿಲ್ಲೆಯ ಬಹುಕಾಲದ ಬೇಡಿಕೆಗಳಾದ ನೀರಾವರಿ ಯೋಜನೆಗಳ ವಿಸ್ತರಣೆ, ಕೈಗಾರಿಕಾ ಹೂಡಿಕೆ, ಸರ್ಕಾರಿ ಆಸ್ಪತ್ರೆಗಳ ಉನ್ನತೀಕರಣ, ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಗ್ರಾಮೀಣ ರಸ್ತೆ ಸುಧಾರಣೆಗೆ ಆದ್ಯತೆ ನೀಡುವಂತೆ ಮನವಿ ಮಾಡಿದರು.
ಸಾಮಾಜಿಕ ಜಾಲತಾಣಗಳಲ್ಲಿಯೂ ಬಸವಂತಪ್ಪ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತು. ಸಾರ್ವಜನಿಕರು, ರಾಜಕೀಯ ಮುಖಂಡರು, ವಿವಿಧ ಸಂಘಟನೆಗಳು ಹಾಗೂ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸಿ, ಸಚಿವರ ಹೊಸ ಜವಾಬ್ದಾರಿ ಯಶಸ್ವಿಯಾಗಲಿ ಎಂದು ಹಾರೈಸಿದರು.
ರಾಜಕೀಯ ವಿಶ್ಲೇಷಕರ ಅಭಿಪ್ರಾಯದಂತೆ, ರಾಜ್ಯ ಸಚಿವ ಸಂಪುಟದಲ್ಲಿ ಮಾಯಕೊಂಡ ಕ್ಷೇತ್ರಕ್ಕೆ ದೊರೆತಿರುವ ಈ ಪ್ರತಿನಿಧಿತ್ವವು ದಾವಣಗೆರೆ ಜಿಲ್ಲೆಯ ರಾಜಕೀಯ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವ ಜೊತೆಗೆ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಸಚಿವರ ಪಾತ್ರ ಮಹತ್ವದ್ದಾಗಿರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮಾಯಕೊಂಡ ಕ್ಷೇತ್ರದ ಜನರು ಸಚಿವ ಸ್ಥಾನವನ್ನು ಕೇವಲ ರಾಜಕೀಯ ಸಾಧನೆಯಾಗಿ ನೋಡದೇ, ಅಭಿವೃದ್ಧಿಯ ಹೊಸ ಅಧ್ಯಾಯದ ಆರಂಭವಾಗಿ ಪರಿಗಣಿಸುತ್ತಿದ್ದಾರೆ. ಕುಡಿಯುವ ನೀರು, ರಸ್ತೆ, ಕೃಷಿ, ಶಿಕ್ಷಣ, ಆರೋಗ್ಯ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಗಮನಾರ್ಹ ಬದಲಾವಣೆಗಳು ಆಗಲಿವೆ ಎಂಬ ಆಶಾಭಾವನೆ ವ್ಯಕ್ತವಾಗಿದೆ.
ಕೆ.ಎಸ್. ಬಸವಂತಪ್ಪ ಅವರ ಸಚಿವ ಸ್ಥಾನವು ಮಾಯಕೊಂಡ ಕ್ಷೇತ್ರ ಹಾಗೂ ದಾವಣಗೆರೆ ಜಿಲ್ಲೆಗೆ ಹೊಸ ಅವಕಾಶಗಳನ್ನು ತೆರೆದಿದೆ. ಜನರ ವಿಶ್ವಾಸಕ್ಕೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಸರ್ಕಾರ ಮತ್ತು ಜನರ ನಡುವೆ ಪರಿಣಾಮಕಾರಿ ಸೇತುವೆಯಾಗಿ ಕಾರ್ಯನಿರ್ವಹಿಸುವ ನಿರೀಕ್ಷೆ ಎಲ್ಲ ವಲಯಗಳಲ್ಲೂ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಅವರ ಆಡಳಿತಾತ್ಮಕ ನಿರ್ಧಾರಗಳು ಹಾಗೂ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಜಿಲ್ಲೆಯ ಭವಿಷ್ಯದ ದಿಕ್ಕನ್ನು ನಿರ್ಧರಿಸಲಿವೆ ಎಂಬ ಅಭಿಪ್ರಾಯ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್
ಸುದ್ದಿದಿನ,ದಾವಣಗೆರೆ: ದಾವಣಗೆರೆಯ ಹೆಮ್ಮೆಯ ಶಿಕ್ಷಣ ತಜ್ಞೆ, ಉದ್ಯಮಿ ಹಾಗೂ Parvatha Global Ventures LLP ಸಂಸ್ಥೆಯ ಸಂಸ್ಥಾಪಕಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (Founder & CEO) ಡಾ. ಪ್ರೀತಿ ಅವರು ರಾಷ್ಟ್ರ ಮಟ್ಟದ ಪ್ರತಿಷ್ಠಿತ “Param Bhushan National Excellence Award – 2026” ಪ್ರಶಸ್ತಿಯನ್ನು ಪಡೆದಿದ್ದಾರೆ.
ಶಿಕ್ಷಣ, ಆಡಳಿತ, ಮಾನವ ಸಂಪನ್ಮೂಲ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಸಮಾಜಸೇವೆಯಲ್ಲಿ ನೀಡಿದ ಅತ್ಯುತ್ತಮ ಕೊಡುಗೆಗಳನ್ನು ಪರಿಗಣಿಸಿ Jivran Foundation ವತಿಯಿಂದ ಈ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಡಾ. ಪ್ರೀತಿ ಅವರು ವಿದೇಶಿ ವೈದ್ಯಕೀಯ ಶಿಕ್ಷಣ (MBBS Abroad), ಉದ್ಯೋಗ ಮಾರ್ಗದರ್ಶನ, ಶಿಕ್ಷಣ ಸಲಹಾ ಸೇವೆಗಳು, ಕೌಶಲ್ಯಾಭಿವೃದ್ಧಿ ಹಾಗೂ ಯುವಜನರ ಸಬಲೀಕರಣ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಈ ಪ್ರಶಸ್ತಿ ಅವರ ಸಾಧನೆಗೆ ಮಾತ್ರವಲ್ಲದೆ, ಕರ್ನಾಟಕದ ಶಿಕ್ಷಣ ಮತ್ತು ಉದ್ಯಮ ಕ್ಷೇತ್ರಕ್ಕೂ ರಾಷ್ಟ್ರೀಯ ಮಟ್ಟದಲ್ಲಿ ದೊರೆತ ಗೌರವವಾಗಿದೆ.
ಈ ಸಂದರ್ಭದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಮಾಜದ ಗಣ್ಯರು, ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳು ಡಾ. ಪ್ರೀತಿ ಅವರಿಗೆ ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಲೆಂದು ಶುಭ ಹಾರೈಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ
ಸುದ್ದಿದಿನ ಡೆಸ್ಕ್:ಹಲವಾರು ವರ್ಷಗಳ ಕಾಲ ಬಂಗಾಳಿ ಟೆಲಿವಿಷನ್ನಲ್ಲಿ ಕೆಲಸ ಮಾಡಿದ ನಂತರ ಮತ್ತು ನಂತರ ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನವನ್ನು ವಿಸ್ತರಿಸಿದ ನಂತರ, ಅಭಿನೇತಾ ಸುಶೋಭನ್ ಸೋನು ರಾಯ್ ಅವರು ‘ಟೇಕ್ ಕೇರ್ ಭಾಲೋಬಾಸ’ ಚಿತ್ರದ ಮೂಲಕ ಬಂಗಾಳಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ‘ಜಾಯ್’ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ, ಇದು ಸ್ನೇಹ, ಸಂಬಂಧಗಳು ಮತ್ತು ಕಾಲಾನುಕ್ರಮದಲ್ಲಿ ವಿಕಸನಗೊಳ್ಳುವ ಭಾವನೆಗಳ ಸುತ್ತ ಕೇಂದ್ರೀಕೃತವಾಗಿರುವ ಕಥೆಯಲ್ಲಿನ ಒಬ್ಬ ಸ್ನೇಹಿತ.
ನಿರ್ದೇಶಕ ಪಿಜೂಷ್ ಸಾಹಾ ಅವರ ಮಾರ್ಗದರ್ಶನದಲ್ಲಿ ಸುಶೋಭನ್ ಅವರ ಅಭಿನಯ ಪ್ರಯಾಣವು ಪ್ರಾರಂಭವಾಯಿತು, ಅಲ್ಲಿ ಅವರು ಸುಮಾರು ಎರಡು ವರ್ಷಗಳ ಕಾಲ ಅಭಿನಯ ಕಾರ್ಯಾಗಾರಗಳಲ್ಲಿ ಭಾಗವಹಿಸಿದರು. ನಿಯಮಿತ ಆಡಿಷನ್ಗಳ ನಂತರ, 2019 ರಲ್ಲಿ ಅವರು ಆಕಾಶ್ ಆಠ್ ಚಾನೆಲ್ನ ‘ಆನಂದಮಯೀ ಮಾ’ ಧಾರಾವಾಹಿಯ ಮೂಲಕ ತಮ್ಮ ಟೆಲಿವಿಷನ್ ಚೊಚ್ಚಲ ಪ್ರವೇಶವನ್ನು ಮಾಡಿದರು, ಇದನ್ನು ಮರಣೋತ್ತರ ನಿರ್ದೇಶಕ ದೇವಿದಾಸ್ ಭಟ್ಟಾಚಾರ್ಯ ನಿರ್ದೇಶಿಸಿದ್ದರು, ಅದರಲ್ಲಿ ಅವರು ವೈಷ್ಣವ ಭಕ್ತನ ಪಾತ್ರವನ್ನು ನಿರ್ವಹಿಸಿದರು. ನಂತರ ಅವರು ಸ್ಟಾರ್ ಜಲ್ಸಾದ ‘ಮೋಹರ್’, ‘ಕೋರಾಪಾಖಿ’, ‘ತಿತ್ಲಿ’ ಮತ್ತು ‘ಖೇಲಾಘರ್’, ಜೊತೆಗೆ ಜೀ ಬಂಗ್ಲಾದ ‘ಜಮುನಾ ಢಾಕಿ’ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು, ಹೀಗೆ ಬಂಗಾಳಿ ಟೆಲಿವಿಷನ್ನಲ್ಲಿ ತಮ್ಮ ಕೆಲಸವನ್ನು ಮುಂದುವರೆಸಿದರು.
COVID-19 ಸಾಂಕ್ರಾಮಿಕ ಸಮಯದಲ್ಲಿ, ಅಭಿನಯದ ಕೆಲಸಗಳು ಸೀಮಿತವಾದಾಗ, ಸುಶೋಭನ್ ಮಾಡೆಲಿಂಗ್ಗೆ ತಿರುಗಿದರು. 2023 ರಿಂದ ಪ್ರಾರಂಭಿಸಿ, ಅವರು ಹಾಲಿಡೇ ಇನ್ ಹೋಟೆಲ್, ಡಾಬರ್, ಟೈಟಾನ್ ಐ+, ವೆಲಾಸಿಟಿ ಐವೇರ್, ಅಮೆಜಾನ್, ಸ್ಪೆನ್ಸರ್ಸ್, ಕ್ಯಾಂಪಸ್ ಶೂಸ್, ಬಿಗ್ ಬಜಾರ್, ಬಯೋಟಿಕ್ ಮತ್ತು ಫಿಯಾಮಾ ಡಿ ವಿಲ್ಸ್ ಸೇರಿದಂತೆ ಹಲವಾರು ಬ್ರಾಂಡ್ಗಳೊಂದಿಗೆ ಕೆಲಸ ಮಾಡಿದರು. 2025 ರಲ್ಲಿ, ಕೋಲ್ಕತ್ತಾದಲ್ಲಿ ನಡೆದ ‘ಎತ್ನಿಕ್ ಎಲಿಗನ್ಸ್ 2025’ ಸೌಂದರ್ಯ ಸ್ಪರ್ಧೆಯಲ್ಲಿ ಅವರು ಪ್ರಥಮ ರನ್ನರ್-ಅಪ್ ಆಗಿ ಆಯ್ಕೆಯಾದರು.
ಹೌರಾದಲ್ಲಿ ಜನಿಸಿ ಕೋಲ್ಕತ್ತಾದಲ್ಲಿ ಬೆಳೆದ ಸುಶೋಭನ್, ಸುಮಾರು ಮೂರೂವರೆ ವರ್ಷದ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ನಂತರ ತಾಯಿಯಿಂದ ಬೆಳೆಸಲ್ಪಟ್ಟರು. ಅವರು ಕೋಲ್ಕತ್ತಾದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು 2016 ರಲ್ಲಿ ದಮ್ ದಮ್ ಮೋತಿಜೀಲ್ ರವೀಂದ್ರ ಮಹಾವಿದ್ಯಾಲಯದಿಂದ ವಾಣಿಜ್ಯದಲ್ಲಿ ಬಿ.ಕಾಮ್ ಪದವಿಯನ್ನು ಪಡೆದರು. ಅಭಿನಯವನ್ನು ಮುಂದುವರಿಸುವ ಮೊದಲು, ಅವರು ಸುಮಾರು ಎರಡು ವರ್ಷಗಳ ಕಾಲ ಪಾಶ್ಚಾತ್ಯ ನೃತ್ಯದಲ್ಲಿ ತರಬೇತಿ ಪಡೆದರು ಮತ್ತು ರಂಗ ಪ್ರದರ್ಶನಗಳಲ್ಲಿ ಭಾಗವಹಿಸಿದರು.
‘ಟೇಕ್ ಕೇರ್ ಭಾಲೋಬಾಸ’ ಸುಶೋಭನ್ ಅವರ ಮೊದಲ ಬಂಗಾಳಿ ಫೀಚರ್ ಫಿಲ್ಮ್ನಲ್ಲಿ ಕಾಣಿಸಿಕೊಳ್ಳುವುದನ್ನು ಸೂಚಿಸುತ್ತದೆ. ಈ ಚಿತ್ರದಲ್ಲಿ, ಜಾಯ್ ಅವರು ಕೆಲವೊಮ್ಮೆ ಸಂಯಮದಿಂದಿರುವ, ಆದರೆ ಉಷ್ಣತೆ, ಸ್ನೇಹಪರತೆ ಮತ್ತು ಸಹಜತೆಯನ್ನು ಪ್ರದರ್ಶಿಸುವ ಪಾತ್ರವಾಗಿ ಚಿತ್ರಿಸಲಾಗಿದೆ, ಇದು ಸಂಬಂಧಗಳು ಮತ್ತು ದೈನಂದಿನ ಭಾವನೆಗಳ ಅನ್ವೇಷಣೆಗೆ ಕೊಡುಗೆ ನೀಡುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಅನುದಾನ ದುರುಪಯೋಗ | ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಡಾ. ಅಶೋಕ್ ಡಿ.ಆರ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ6 days agoತುರ್ತು ಕುಡಿಯುವ ನೀರಿನ ಯೋಜನೆ ; 7 ಕೋಟಿ ಅನುದಾನದಲ್ಲಿ ಅವ್ಯವಹಾರ : ತನಿಖೆಗೆ ಆದೇಶಿಸಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಗೆ ದೂರು
-
ದಿನದ ಸುದ್ದಿ6 days agoಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ
-
ದಿನದ ಸುದ್ದಿ4 days agoಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್
-
ದಿನದ ಸುದ್ದಿ21 hours agoಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ

