ದಿನದ ಸುದ್ದಿ
ಖಾಲಿ ಇರುವ 990 ಇಂಜಿನಿಯರ್ ಹುದ್ದೆಗಳಿಗೆ ಹೊರಗುತ್ತಿಗೆ ನೇಮಕ : ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ
ಸುದ್ದಿದಿನ,ಧಾರವಾಡ: ಲೋಕೋಪಯೋಗಿ ಇಲಾಖೆಯಲ್ಲಿ ಕಿರಿಯ ಇಂಜಿನೀಯರ್‍ಗಳು ಹಾಗೂ ಸಹಾಯಕ ಇಂಜಿನೀಯರ್‍ಗಳ ಬಡ್ತಿ, ನಿವೃತ್ತಿ ಮತ್ತಿತರ ಕಾರಣಗಳಿಂದ ಸುಮಾರು 990 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ತಾತ್ಕಾಲಿಕವಾಗಿ ಡಿಪ್ಲೋಮಾ ಮತ್ತು ಬಿಇ ಪದವಿ ಪಡೆದಿರುವ ಅರ್ಹ ಯುವಕರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರಾದ ಗೋವಿಂದ ಕಾರಜೋಳ ಅವರು ಹೇಳಿದರು.
ನಗರದ ಸರ್ಕಿಟ್ ಹೌಸ್‍ನಲ್ಲಿ ಮಂಗಳವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಲೋಕೋಪಯೋಗಿ ಇಲಾಖೆಯಲ್ಲಿ ಇಂಜಿನೀಯರ್‍ಗಳ ಕೊರತೆಯನ್ನು ತುರ್ತಾಗಿ ಸರಿದೂಗಿಸಲು ಹೊರಗುತ್ತಿಗೆ ಏಜೆನ್ಸಿಗಳ ಮೂಲಕ ಡಿಪ್ಲೋಮಾ ಮತ್ತು ಪದವೀಧರ ಇಂಜಿನೀಯರ್‍ಗಳನ್ನು ನೇಮಿಸಿಕೊಳ್ಳಲು ಇಂದು ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೂಚಿಸಲಾಗಿದೆ. ಸರ್ಕಾರದ ಅಧಿಕೃತ ಮಾನವ ಸಂಪನ್ಮೂಲ ಏಜೆನ್ಸಿಗಳಿಗೆ ಆಧ್ಯತೆ ನೀಡಲಾಗುವುದು. ಈ ಕ್ರಮದಿಂದ ಸ್ಥಳೀಯ ಯುವಕರು ಹಾಗೂ ಅರ್ಹ ಪದವಿಧರ ಇಂಜಿನೀಯರ್‍ಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಇಲಾಖೆಯ ಕಾರ್ಯಚಟುವಟಿಕೆಗಳಿಗೆ ಸಹಾಯವಾಗಲಿದೆ ಎಂದರು.
ರಾಜ್ಯದಲ್ಲಿ ಕಳೆದ 2019-20ನೇ ಸಾಲಿನಲ್ಲಿ 7 ಸಾವಿರ ಕೋಟಿ ರೂ. ಹಾಗೂ ಪ್ರಸಕ್ತ 2020-21ನೇ ಸಾಲಿನಲ್ಲಿ ಜುಲೈನಿಂದ ಅಕ್ಟೋಬರ್ ಅವಧಿಯಲ್ಲಿ ಸುಮಾರು 3,500 ಕೋಟಿ ರೂ. ಮೌಲ್ಯದ ರಸ್ತೆ, ಸೇತುವೆ, ಕಟ್ಟಡಗಳು ಪ್ರವಾಹದಿಂದ ಹಾನಿಗೀಡಾಗಿವೆ. ಲೋಕೋಪಯೋಗಿ ಇಲಾಖೆ ಅಷ್ಟೇ ಅಲ್ಲದೆ ಒಟ್ಟಾರೆಯಾಗಿ 2019-20ನೇ ಸಾಲಿನಲ್ಲಿ ರಾಜ್ಯದಲ್ಲಿ 35 ಸಾವಿರ ಕೋಟಿ ರೂ. ಹಾಗೂ 2020-21ನೇ ಸಾಲಿನಲ್ಲಿ ಸುಮಾರು 25 ಸಾವಿರ ಕೋಟಿ ರೂ. ಮೌಲ್ಯದ ಮನೆ, ರಸ್ತೆ, ಸೇತುವೆ, ನೀರಾವರಿ ಕಾಲುವೆ, ಅಚ್ಟುಕಟ್ಟು ರಸ್ತೆ, ಸಾರ್ವಜನಿಕ ಆಸ್ತಿ ಪಾಸ್ತಿ, ಬೆಳೆಗಳು ಸೇರಿ ಈವರೆಗೆ ಸುಮಾರು 60 ಸಾವಿರ ಕೋಟಿ ರೂ. ಹಾನಿಯಾಗಿದೆ.
ಪರಿಹಾರ ಕಾರ್ಯ ನಿರಂತರವಾಗಿ ನಡೆದಿದೆ. ಕಳೆದ ವರ್ಷ ರಸ್ತೆಗಳ ತಾತ್ಕಾಲಿಕ ದುರಸ್ತಿಗೆ 750 ಕೋಟಿ ರೂ. ಹಾಗೂ ಈ ವರ್ಷ ಈಗಾಗಲೇ 600 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ರಸ್ತೆ ನಿರ್ವಹಣೆ, ಗುಂಡಿ ತುಂಬುವ ಕಾಮಗಾರಿಗಳು ನಡೆಯುತ್ತಿವೆ. 7348 ಕಿ.ಮೀ. ಜಿಲ್ಲಾ ಮುಖ್ಯರಸ್ತೆಯ ತಗ್ಗು ಗುಂಡಿ ಮುಚ್ಚುವ ಕಾರ್ಯದಲ್ಲಿ ಶೇ.70 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಇರುವ ಕಾಮಗಾರಿಗಳನ್ನು ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ. 3890 ಕಿ.ಮೀ. ರಾಜ್ಯ ಹೆದ್ದಾರಿ ತಗ್ಗು ಗುಂಡಿ ತುಂಬುವ ಕಾಮಗಾರಿಯಲ್ಲಿ ಶೇ.77 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.
2019-20ನೇ ಸಾಲಿನಲ್ಲಿ 202.24 ಕೋಟಿ ರೂ. ವೆಚ್ಚದಲ್ಲಿ ವಿವಿಧ 835 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಅವುಗಳಲ್ಲಿ 831 ಕಾಮಗಾರಿಗಳು ಪೂರ್ಣಗೊಂಡಿವೆ. 162.23 ಕೋಟಿ ರೂ.ಖರ್ಚು ಮಾಡಲಾಗಿದೆ. 2020-21 ನೇ ಸಾಲಿನಲ್ಲಿ ಒಟ್ಟು 2733 ಕಿ.ಮೀ. ರಸ್ತೆ 466 ಕಲ್ವರ್ಟ ಹಾಗೂ ಸೇತುವೆಗಳು ಹಾನಿಗೀಡಾಗಿ ಸುಮಾರು 2514 ಕೋಟಿ ರೂ. ನಷ್ಟವಾಗಿದೆ. ಪ್ರಸ್ತುತ ತುರ್ತು ದುರಸ್ತಿಗಾಗಿ 254 ಕೋಟಿ ರೂ.ಗಳನ್ನು ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ.
ಈ ಅನುದಾನದಲ್ಲಿ 472ಕಿ.ಮೀ. ರಸ್ತೆ ಹಾಗೂ 163 ಸೇತುವೆ, ಕಟ್ಟಡ, ಸಿ.ಡಿ. ಗಳನ್ನು ಆಧ್ಯತೆ ಮೇಲೆ ನಿರ್ಮಿಸಲಾಗುತ್ತಿದೆ. 2020-21ನೇ ಸಾಲಿನಲ್ಲಿ ಉತ್ತರ ವಲಯದ 1939.67 ಕಿ.ಮೀ. ಉದ್ದದ 76 ಜಿಲ್ಲಾ ಮುಖ್ಯ ರಸ್ತೆಗಳನ್ನು ರಾಜ್ಯ ಹೆದ್ದಾರಿಗಳನ್ನಾಗಿ ಹಾಗೂ 4303.07 ಕಿ.ಮೀ. ಉದ್ದದ 471 ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ಮುಖ್ಯರಸ್ತೆಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಇದರಿಂದ ಸರಾಸರಿ ರಾಜ್ಯ ಹೆದ್ದಾರಿ ಶೇ.28.65 ಹಾಗೂ ಜಿಲ್ಲಾ ಮುಖ್ಯರಸ್ತೆ ಶೇ.31.89 ರಷ್ಟು ಹೆಚ್ಚಳವಾಗಿದೆ. ಲೋಕೋಪಯೋಗಿ ಇಲಾಖೆಯ ಉತ್ತರ ವಲಯದ ವ್ಯಾಪ್ತಿಯಲ್ಲಿ ಬರುವ
ಕೆಎಸ್‍ಟಿಡಿಸಿಗೆ ನಿರೀಕ್ಷಣಾ ಮಂದಿರಗಳ ನಿರ್ವಹಣೆ : ಲೋಕೋಪಯೋಗಿ ಇಲಾಖೆಯ ಉತ್ತರ ವಲಯದ ವ್ಯಾಪ್ತಿಯಲ್ಲಿ ಬರುವ ಬಾದಾಮಿ ಗೆಸ್ಟ್‍ಹೌಸ್, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಹುಬ್ಬಳ್ಳಿಯ ಹಳೇಯ ನಿರೀಕ್ಷಣಾ ಮಂದಿರಗಳು, ಜೋಗ, ಕಣಕುಂಬಿ, ಸವದತ್ತಿ, ಉಳವಿ, ಕ್ಯಾಸೆಲ್‍ರಾಕ್‍ನಲ್ಲಿರುವ ಒಟ್ಟು 11 ನಿರೀಕ್ಷಣಾ ಮಂದಿರಗಳ ಪ್ರವಾಸಿ ಸ್ಥಳದಲ್ಲಿದ್ದು, ಇವುಗಳ ನಿರ್ವಹಣೆ ಹಾಗೂ ಉಸ್ತುವಾರಿಯನ್ನು ಪ್ರಾಯೋಗಿಕವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‍ಟಿಡಿಸಿ) ಕ್ಕೆ ವಹಿಸಲು ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ವಿಜಯಪುರದ ವಿಮಾನ ನಿಲ್ದಾಣಕ್ಕೆ ಭೂಮಿ ಪೂಜೆ : ವಿಜಯಪುರ ನಗರದ ಹೊರ ವಲಯದಲ್ಲಿ ಸುಮಾರು 220 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ವಿಮಾನನಿಲ್ದಾಣ ಕಾಮಗಾರಿಗೆ ಗ್ರಾ.ಪಂ. ಚುನಾವಣೆ ನೀತಿ ಸಂಹಿತೆ ಮುಕ್ತಾಯವಾದ ಕೂಡಲೇ ಭೂಮಿಪೂಜೆ ನೆರವೇರಿಸಲಾಗುವುದು. ಈ ವಿಮಾನ ನಿಲ್ದಾಣ ಅಭಿವೃದ್ಧಿಯಿಂದ ಉತ್ತರ ಕರ್ನಾಟಕದ ಹುಬ್ಬಳ್ಳಿ ಹಾಗೂ ಬೆಳಗಾವಿ ವಿಮಾನ ನಿಲ್ದಾಣಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದೆ ಹಾಗೂ ವಿಜಯಪುರ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಉಪಮುಖ್ಯಮಂತ್ರಿಗಳು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಲೋಕೋಪಯೋಗಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಬಿ.ಗುರುಪ್ರಸಾದ, ಉತ್ತರ ವಲಯದ ಮುಖ್ಯ ಇಂಜಿನೀಯರ್ ಶಂಕರಗೌಡ ಪಾಟೀಲ, ಧಾರವಾಡ ವಿಭಾಗದ ಅಧೀಕ್ಷಕ ಇಂಜಿನೀಯರ್ ಶಿವಾನಂದ ನಾಯಕ್, ಕಾರ್ಯನಿರ್ವಾಹಕ ಇಂಜಿನೀಯರ್ ಎಸ್.ಬಿ. ಚೌಡಣ್ಣವರ ಮತ್ತಿತರರು ಉಪಸ್ಥಿತರಿದ್ದರು.
ಲೋಕೋಪಯೋಗಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ: ಧಾರವಾಡದಲ್ಲಿ ಇಂದು ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರಾದ ಗೋವಿಂದ ಕಾರಜೋಳ ಅವರ ಅಧ್ಯಕ್ಷತೆಯಲ್ಲಿ ಇಂದು ಲೋಕೋಪಯೋಗಿ ಮುಖ್ಯ ಅಭಿಯಂತರರ ಕಚೇರಿಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಯಿತು.
ಇಲಾಖೆಯ ಸರ್ಕಾರದ ಕಾರ್ಯದರ್ಶಿ ಬಿ. ಗುರುಪ್ರಸಾದ, ಮುಖ್ಯ ಅಭಿಯಂತರ ಶಂಕರಗೌಡ ಪಾಟೀಲ, ಅಧೀಕ್ಷಕ ಇಂಜಿನಿಯರ್ ಶಿವಾನಂದ ನಾಯ್ಕ, ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಬಿ. ಚೌಡಣ್ಣವರ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.
‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ
ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದೇವನಗರಿ ಸುದ್ದಿದಿನ ಪತ್ರಿಕೆಯ ದೀಪಾವಳಿ ವಿಶೇಷಾಂಕ- 2026 ರ ಕತೆ – ಕವಿತೆ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ ಹಾಗೂ ಶ್ಯಾಮ್ ಪ್ರಕಾಶನ, ನವಿಲೇಹಾಳು ವತಿಯಿಂದ ದೀಪಾವಳಿ ವಿಶೇಷಾಂಕ-2026 ರ ಕತೆ ಮತ್ತು ಕವಿತೆ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಕತಾ ಸ್ಪರ್ಧೆಯಲ್ಲಿ ಅನಂತ್ ಕುಣಿಗಲ್ ಅವರ ́ಸಂಸʼ ಕತೆಗೆ ಪ್ರಥಮ ಬಹುಮಾನ,. ರವಿ ಮಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ದ್ವಿತೀಯ ಬಹುಮಾನ ಹಾಗೂ ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕರಾದ ಗೋವರ್ಧನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಜೇಯ ಸಿಂಹ ಕೆ.ವಿ. ಅವರ ʼಮಾರ್ಜಕದ ಶ್ರೀಮುಡಿʼ, ಟಿ.ಆರ್. ಪ್ರಕಾಶ ಭಾಗವತ ಅವರ ʼಸಮಾಧಿʼ , ರಘುನಂದನ್ ಅವರ ʼಹೀಗೊಂದು ಕಛೇರಿʼ , ಡಾ||. ಮಿರ್ಜಾ ಬಷೀರ್ ಅವರ ʼ ಒಂದು ಸದ್ದಿಲ್ಲದ ಕ್ರಾಂತಿʼ, ಸುಜಾತ ಎಸ್. ಎನ್ ರೆಡ್ಡಿ ಅವರ ʼ ಸತ್ಯ ದರ್ಶನʼ, ಚಂದ್ರಿಕಾ ನಾಗರಾಜ್ ಹಿರಿಯಡಕ ಅವರ ʼ ವೆಂಕಟನ ಸ್ವೆಟರ್, ರೈಹಾನ ಅವರ ʼಬಾವಿಗೆ ಬಿದ್ದರೂʼ, ಒಟ್ಟು ಈ ಏಳುಕತೆಗಳು ತೀರ್ಪುಗಾರ ಮೆಚ್ಚುಗೆ ಪಡೆದಿವೆ.
ಕತಾ ಸ್ಪರ್ಧೆಯ ತೀರ್ಪುಗಾರರಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕತೆಗಾರ ಹಾಗೂ ನಿವೃತ್ತ ಪ್ರಾಧ್ಯಾಪಕ ಅಮರೇಶ ನುಗಡೋಣಿ, ಹೊಸಪೇಟೆ, ಕವಿ ಕತೆಗಾರ , ಜಿ. ಮುದ್ದುವೀರಸ್ವಾಮಿ, ದಾವಣಗೆರೆ, ಕತೆಗಾರ್ತಿ ಹಾಗೂ ಕನ್ನಡ ಪ್ರಾಧ್ಯಾಪಕಿ, ಸುಜಾತ ಚಲಾವಾದಿ, ತಾಳಿಕೋಟೆ, ಕತೆಗಾರ ಹಾಗೂ ಅಕ್ಷರ ಸಂಗಾತ ಮಾಸ ಪತ್ರಿಕೆಯ ಸಂಪಾದಕ ಡಾ. ಟಿ ಎಸ್. ಗೊರವರ, ಗಜೇಂದ್ರಘಡ ಇವರು ಕಾರ್ಯನಿವಹಿದ್ದರು ಎಂದು ಮಾಹಿತಿ ನೀಡಿದ್ಧಾರೆ.
ಪ್ರಥಮ ಬಹುಮಾನ ಹತ್ತು ಸಾವಿರ ರೂ (10000 ರೂ ) ನಗದು, ದ್ವೀತೀಯ ಬಹುಮಾನ ಐದು ಸಾವಿರ ನಗದು, (5000 ರೂ), ತೃತೀಯ ಬಹುಮಾನ ಮೂರು ಸಾವಿರ (3000) ರೂ ನಗದು ಹಾಗೂ ಪ್ರಮಾಣ ಪತ್ರವನ್ನು ಬಹುಮಾನಿತರಿಗೆ ನೀಡಲಾಗುವುದು.
ಕವಿತೆ ಸ್ಪರ್ಧೆ ಫಲಿತಾಂಶ
ಕವಿತೆ ಸ್ಪರ್ಧೆಯಲ್ಲಿ ಆನಂದ ಕುಂಚನೂರ ಅವರ ʼ ಬೆತ್ತಲೆ ಶಿಖರʼ ಕವಿತೆಗೆ ಪ್ರಥಮ ಬಹುಮಾನ, ಅಜಯ್ ಅಂಗಡಿ ಅವರ ʼಒಂದು ಶ್ರಾವಣ ಸಂಜೆಗೆʼ ದ್ವಿತೀಯ ಬಹುಮಾನ, ಭಾಗ್ಯ ಜ್ಯೋತಿ ಹಿರೇಮಠ ಅವರ ʼ ಗೋಡೆ ಕವಿತೆಗೆ ತೃತೀಯ ಬಹುಮಾನ ದೊರೆತಿದೆ.
ಫೈಜ್ನಟ್ರಾಜ್ ಅವರ ʼಅವ್ವ ತಟ್ಟಿದ ರೊಟ್ಟಿಯಲ್ಲಿ ಬೆರಳಿನ ಗುರುತುʼ, ಹೊನ್ನಪ್ಪ. ನೀ. ಕರೆಕನ್ನಮ್ಮನವರ ಅವರ ʼಒಂಟಿಯಾನದ ಸರಕುʼ, ಕವಿತ ಎ.ವಿ ಅವರ ʼಬಂದಿದ್ದಾರೆ ಸಿಕ್ಕಿಲ್ಲʼ, ರಮ್ಯ ಕೆ.ಜಿ. ಅವರ ʼಬಿಡಿಸಿಕೊಳ್ಳುತ್ತದೊಂದು ಚಿತ್ರ,ʼ, ಮುರ್ತುಜಾ ಬೇಗಂ ಕೊಡಗಲಿ ಅವರ ʼಒಂದು ಕನ್ನಡಿ ಮೂರು ಬಿಂಬಗಳುʼ, ಮನಸ್ವಿ ಎಂ ಸ್ವಾಮಿ ಅವರ ʼ ರಾಜಧಾನಿಯಲ್ಲಿ ರಾಜʼ, ವೀಣಾ ರಾವ್ ಅವರ ʼಬಣ್ಣಗಳ ಆಚೆಗೆʼ ಒಟ್ಟು ಏಳು ಕವಿತೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.
ಕವಿತೆ ಸ್ಪರ್ಧೆಯ ತೀರ್ಪುಗಾರರಾಗಿ ಕವಿ ಚಂದ್ರಶೇಖರ ತಾಳ್ಯ, ಹೊಳಲ್ಕೆರೆ, ಕವಯಿತ್ರಿ ಸವಿತಾ ನಾಗಭೂಷಣ, ಶಿವಮೊಗ್ಗ, ಕವಿ ವಿಲ್ಸನ್ ಕಟೀಲು ಅವರು ಕಾರ್ಯನಿರ್ವಹಿಸಿದ್ದರು.
ಪ್ರಥಮ ಬಹುಮಾನ ಐದು ಸಾವಿರ ರೂ (5000 ರೂ ) ನಗದು, ದ್ವೀತೀಯ ಬಹುಮಾನ ಮೂರು ಸಾವಿರ ನಗದು, (3000 ರೂ), ತೃತೀಯ ಬಹುಮಾನ ಎರಡು ಸಾವಿರ (2000) ರೂ ನಗದು ಹಾಗೂ ಪ್ರಮಾಣ ಪತ್ರವನ್ನು ಬಹುಮಾನಿತರಿಗೆ ಇದೇ ಅಕ್ಟೋಬರ್ 24 ರಂದು ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ʼ ನಡೆಯುವ ದೀಪಾವಳಿ ವಿಶೇಷಾಂಕ-2026 ರ ಬಿಡುಗಡೆ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ: 9980346243 ಸಂಪರ್ಕಿಸಲು ಈ ಮೂಲಕ ತಿಳಿಸಲಾಗಿದೆ.

ದಿನದ ಸುದ್ದಿ
ನನ್ನ ನೆಚ್ಚಿನ ಪುಸ್ತಕ ವಿಮರ್ಶೆ ಸ್ಪರ್ಧೆ ; ವಿದ್ಯಾರ್ಥಿಗಳಿಗೆ ಬಹುಮಾನ
ಸುದ್ದಿದಿನ,ದಾವಣಗೆರೆ:ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.
ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್. ಪ್ರಥಮ ಬಹುಮಾನವಾಗಿ ಒಂದು ಸಾವಿರ, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ರೂ. 750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ. ಎಸ್. ರೂ. 500 ನಗದು ಬಹುಮಾನ ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು.
ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು, ಓದಿನ ಮೂಲಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243


