ದಿನದ ಸುದ್ದಿ
ಕಾರ್ನಾಡ್ ನಡೆ ಒಪ್ಪುವಂತದ್ದಲ್ಲ: ಮಹೇಶ್ ಚಂದ್ರ ಗುರು ವಿರೋಧ

ನಾನು ನಗರದ ನಕ್ಸಲೀಯ ಎಂಬ ಬೋರ್ಡ್ ಹಾಕಿಕೊಂಡು ಗೌರಿದಿನ ಕಾರ‌್ಯಕ್ರಮದಲ್ಲಿ ಕಾಣಿಸಿಕೊಂಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರು ಈಗ ವಿವಾದದಲ್ಲಿ ಸಿಕ್ಕಿದ್ದಾರೆ.
ಕಾರ್ನಾಡರ ನಡೆ ಕುರಿತು ಪ್ರಗತಿಪರ ಚಳವಳಿಗಳು, ಹೋರಾಟಗಳಲ್ಲಿ ಗುರುತಿಸಿಕೊಂಡಿರುವ ಪ್ರೊ. ಮಹೇಶ್ ಚಂದ್ರ ಗುರು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಹಿಂಸೆಯನ್ನು ಪ್ರತಿಪಾದಿಸುವವರ ಜೊತೆ ವಿಚಾರವಾದಿಗಳು ಗುರುತಿಸಿಕೊಳ್ಳಬಾರದು
ಇತ್ತೀಚೆಗೆ ಕಲಬುರ್ಗಿಯಲ್ಲಿ ಜರುಗಿದ ಗೌರಿ ಲಂಕೇಶರ ಮೊದಲ ವರ್ಷದ ಸ್ಮರಣೆ ಸಂದರ್ಭದಲ್ಲಿ ನಾಡಿನ ಹಿರಿಯ ಕಲಾವಿದ ಹಾಗೂ ಜನಪರ ಚಿಂತಕ ಶ್ರೀ ಗಿರೀಶ್ ಕಾರ್ನಾಡ್ ’ನಾನು ನಗರದ ನಕ್ಸಲೀಯ’ ಎಂಬ ಫಲಕವನ್ನು ಹಾಕಿಕೊಂಡಿರುವುದನ್ನು ಮಾಧ್ಯಮಗಳಲ್ಲಿ ಓದಿ ತಿಳಿದುಕೊಂಡಿದ್ದೇನೆ. ಇವರಿಗೆ ಮತ್ತೊಬ್ಬ ಪ್ರತಿಭಾವಂತ ಚಿಂತಕ ಹಾಗೂ ಕಲಾವಿದ ಈ ಫಲಕವನ್ನು ತೊರಿಸುತ್ತಿರುವ ಚಿತ್ರ ಕೂಡ ಮಾಧ್ಯಮಗಳಲ್ಲಿ ವರದಿಯಾಗಿದೆ.
ಇದು ನಿಜಕ್ಕೂ ಭಾರತೀಯ ಬಹು ಸಂಸ್ಕೃತಿ ಮತ್ತು ಸಂವಿಧಾನಾತ್ಮಕ ಆಶಯಗಳಿಗೆ ವಿರುದ್ಧವಾಗಿದೆ. ಭಾರತದ ಬಹುಜನರು ಬುದ್ಧನ ಮಾರ್ಗದರ್ಶನದಲ್ಲಿ ಪ್ರಜಾಸತ್ತಾತ್ಮಕ ಹಾಗೂ ಅಹಿಂಸಾತ್ಮಕ ಮಾರ್ಗಗಳ ಮೂಲಕ ತಮ್ಮ ಮೂಲಭೂತ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದಾರೆ.
ಸ್ವಾತಂತ್ರ ಚಳುವಳಿ ಕೂಡ ಅಹಿಂಸಾ ಮಾರ್ಗದಲ್ಲಿ ಅತ್ಯಂತ ಯಶಸ್ವಿಯಾಗಿ ಗಾಂಧಿ ನೇತೃತ್ವದಲ್ಲಿ ಜರುಗಿತು. ’ಬ್ರಿಟೀಷರ ಬಂದೂಕು ಶಕ್ತಿಯನ್ನು ಗಾಂಧಿಯವರ ಅಹಿಂಸಾತ್ಮಕ ಲೇಖನ ಶಕ್ತಿ ಮಣಿಸಿತು’ ಎಂಬ ಅಭಿಮಾನದ ಮಾತುಗಳನ್ನು ಹಿಂದಿನ ಪ್ರಧಾನಿ ಚರ್ಚಿಲ್ ಹೇಳಿದ್ದಾರೆ. ಅಂಬೇಡ್ಕರ್ ತಮ್ಮ ’ಬುದ್ಧ ಮತ್ತು ಮಾರ್ಕ್ಸ್’ ಎಂಬ ಕೃತಿಯಲ್ಲಿ ’ಮಾರ್ಕ್ಸ್‌ವಾದಿಗಳು ಹಿಂಸಾಮಾರ್ಗದಲ್ಲಿ ಮುನ್ನಡೆದು ಸಮಾನತೆ ಗಳಿಸಬಹುದು, ಆದರೆ ಭ್ರಾತೃತ್ವವನ್ನು ಕೊಂದು ಗಳಿಸುವ ಸಮಾನತೆ ಮೌಲ್ಯರಹಿತವಾಗಿದೆ ಮತ್ತು ಅಸಮರ್ಥನೀಯವಾಗಿದೆ’ ಎಂಬ ಮಾತುಗಳನ್ನು ಹೇಳಿರುವುದು ಸಾರ್ವಕಾಲಿಕ ಪ್ರಸ್ತುತತೆ ಹೊಂದಿದೆ.
ಯುದ್ಧದಿಂದ ಜಗತ್ತನ್ನು ಉಳಿಸಲು ಬುದ್ಧಮಾರ್ಗ ಮತ್ತು ಅನಭಿವೃದ್ಧಿಯಿಂದ ಅಭಿವೃದ್ಧಿಯೆಡೆಗೆ ಜಗತ್ತನ್ನು ಮುನ್ನಡೆಸಲು ಅಂಬೇಡ್ಕರ್‌ರವರ ಅಂತ್ಯೋದಯ ಮಾದರಿ ಇಂದು ಅನಿವಾರ್ಯವಾಗಿದೆ ಎಂಬ ಸತ್ಯವನ್ನು ವಿಶ್ವಸಂಸ್ಥೆ ಮನಗಂಡಿದೆ. ಮಾನವ ಬದುಕಿನ ಎಲ್ಲ ಕ್ಷೇತ್ರಗಳಲ್ಲಿಯೂ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ, ಸರ್ವಜನರ ಅಭ್ಯುದಯಗಳಿಗೆ ಪೂರಕವಾದ ವಿಶ್ವಶ್ರೇಷ್ಠ ಸಂವಿಧಾನವನ್ನು ಅಂಬೇಡ್ಕರ್ ರಚಿಸಿದ್ದಾರೆ. ನೂತನ ಸಹಸ್ರಮಾನದಲ್ಲಿ ಜಾಗತೀಕರಣವೆಂದರೆ ಮಾನವೀಕರಣವೆಂದೇ ಅರ್ಥೈಸಬೇಕು.
ಸರ್ವಧರ್ಮಗಳು ಮತ್ತು ಜನಾಂಗಗಳು ಶಾಂತಿಯಿಂದ ಸಹಬಾಳ್ವೆ ನಡೆಸಲು ಪ್ರಜಾಪ್ರಭುತ್ವ, ಬಹುತ್ವ, ಬಂಧುತ್ವ, ಧರ್ಮ ನಿರಪೇಕ್ಷತೆ, ರಕ್ತಪಾತ ರಹಿತವಾದ ಪರಿವರ್ತನೆ ಇಂದು ಅತ್ಯವಶ್ಯಕ. ಗೌರಿ ಲಂಕೇಶ್ ಪ್ರಜಾಸತ್ತಾತ್ಮಕ ಹಾಗೂ ಅಹಿಂಸಾತ್ಮಕ ಹೋರಾಟಗಳನ್ನು ಪ್ರಜ್ಞಾಪೂರ್ವಕವಾಗಿ ಬೆಂಬಲಿಸಿ ದೇಶದ ಇತಿಹಾಸದಲ್ಲಿ ಶ್ರೇಷ್ಠ ಸ್ಥಾನವನ್ನು ಗಳಿಸಿದ್ದಾರೆ. ಅವರು ನಕ್ಸಲೀಯರನ್ನು ರಕ್ತಪಾತ ಕೇಂದ್ರಿತ ಹೋರಾಟವನ್ನು ಬಿಟ್ಟು ಮುಖ್ಯವಾಹಿನಿಗೆ ಬಂದು ಶಾಂತಿ ಮಾರ್ಗದಲ್ಲಿ ಉದ್ಧಾರವಾಗಿ ಎಂದು ಕರೆ ನೀಡಿದರು.
ಗೌರಿ ಲಂಕೇಶರ ಬಗ್ಗೆ ಅತೀವ ಪ್ರೀತಿ ಮತ್ತು ಅಭಿಮಾನ ಹೊಂದಿರುವ ಗಿರೀಶ್ ಕಾರ್ನಾಡ್ ’ನಾನೂ ನಗರದ ನಕ್ಸಲೀಯ’ ಎಂಬ ಫಲಕವನ್ನು ಇತ್ತೀಚಿನ ಸಭೆಯಲ್ಲಿ ಪ್ರದರ್ಶಿಸಿರುವುದು ಭಾರತದ ಸಂವಿಧಾನ ಮತ್ತು ಬಹುತ್ವಗಳಿಗೆ ನಿಜವಾಗಿಯೂ ಅಪಚಾರವುಂಟಾಗಿದೆ. ಪ್ರಕಾಶ್‌ರಾಜ್‌ರವರು ಕೂಡ ನಕ್ಸಲೀಯ ಸಿದ್ಧಾಂತವನ್ನು ಹೀಗೆ ಬಹಿರಂಗವಾಗಿ ಸಮರ್ಥಿಸುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ನಗರದಲ್ಲಿರಲಿ ಅಥವಾ ಹಳ್ಳಿಯಲ್ಲಿರಲಿ ’ನಾವೆಲ್ಲರೂ ಮನುಷ್ಯರು – ಮಾನವತಾವಾದವೇ ಜಗತ್ತನ್ನು ಉಳಿಸುವ ಮಹಾ ಶಕ್ತಿ’ ಎಂಬ ಸಂದೇಶವನ್ನು ವಿಚಾರವಾದಿಗಳು ಮತ್ತು ಜನಪರ ಹೋರಾಟಗಾರರು ಎಲ್ಲೆಡೆ ಎಲ್ಲರಿಗೂ ನೀಡುವುದು ಅತ್ಯವಶ್ಯಕ.
ಬಲಪಂಥೀಯ ರಾಜಕಾರಣ ಮತ್ತು ನಕ್ಸಲೀಯ ಹೋರಾಟಗಳು ದೇಶದ ಶಾಂತಿ, ಸುವ್ಯವಸ್ಥೆ, ಸಾಮರಸ್ಯ ಮತ್ತು ಪ್ರಗತಿಗಳಿಗೆ ಸಾಕಷ್ಟು ಹಿನ್ನಡೆ ಉಂಟು ಮಾಡಿವೆ. ಇಂದು ಜಗತ್ತನ್ನು ಉಳಿಸುವ ಮತ್ತು ಉದ್ಧರಿಸುವ ಸಲುವಾಗಿ ನಾವೆಲ್ಲರೂ ಬುದ್ಧನ ಮಧ್ಯಮಾರ್ಗವನ್ನು ಅನುಸರಿಸುವುದು ಅನಿವಾರ್ಯ. ಗಾಂಧಿ, ಅಂಬೇಡ್ಕರ್, ಲೋಹಿಯಾ, ಪೆರಿಯಾರ್, ನಾರಾಯಣ ಗುರು ಮೊದಲಾದ ದಾರ್ಶನಿಕರು ನಮಗೆ ಇಂದು ಅನುಕರಣೀಯ ವ್ಯಕ್ತಿಗಳು ಮತ್ತು ಶಕ್ತಿಗಳಾಗಬೇಕು.
(ಲೇಖಕರು-
ಡಾ.ಬಿ.ಪಿ.ಮಹೇಶ ಚಂದ್ರ ಗುರು
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಶೈಕ್ಷಣಿಕ ಮಂಡಳಿ ಸದಸ್ಯರು)

ದಿನದ ಸುದ್ದಿ
ಶೀಘ್ರದಲ್ಲೇ ದೈಹಿಕ ಶಿಕ್ಷಕರ ನೇಮಕ : ಸಚಿವ ಎಸ್. ಮಧು ಬಂಗಾರಪ್ಪ

ಸುದ್ದಿದಿನ ಡೆಸ್ಕ್ : ಪ್ರಾಥಮಿಕ ಶಾಲಾ ವಿಭಾಗದಲ್ಲಿ ಖಾಲಿ ಇರುವ 2120 ದೈಹಿಕ ಶಿಕ್ಷಕರು ಹಾಗೂ ಪ್ರೌಢಶಾಲಾ ವಿಭಾಗದಲ್ಲಿ 2500 ಹುದ್ದೆಗಳ ಭರ್ತಿ ಪ್ರಸ್ತಾವನೆ ಆರ್ಥಿಕ ಇಲಾಖೆಯ ಸಮಾಲೋಚನೆಯಲ್ಲಿದೆ.
ಪದವಿ ಪೂರ್ವ ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರನ್ನು ಆದಷ್ಟು ಶೀಘ್ರದಲ್ಲಿ ನೇಮಕ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ವಿಧಾನಪರಿಷತ್ತಿಗೆ ಸೋಮವಾರ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ

ಸುದ್ದಿದಿನ, ಚನ್ನಗಿರಿ (ಬಸವಾಪಟ್ಟಣ) : ಭಾರತೀಯ ಸಮಾಜದಲ್ಲಿ ಮೀಸಲಾತಿಯಿಂದ ಮಾತ್ರ ಮಹಿಳಾ ಪ್ರಗತಿ ಸಾಧ್ಯವಿಲ್ಲ. ಅವಳಿಗೆ ಪುರುಷನಂತೆ ಸಮಾನವಾದ ಪ್ರಾತಿನಿಧ್ಯ ನೀಡಿದಲ್ಲಿ ಮಾತ್ರವೇ ಮಹಿಳಾ ಪ್ರಗತಿ ಸಾಧ್ಯ. ಆಗ ಮಾತ್ರವೇ ಸದೃಢವಾದ ಭಾರತ ನಿರ್ಮಾಣವಾಗಲು ಸಾಧ್ಯ ಎಂದು ಸಂತೆಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಜ್ಯೋತಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತ ಸಪ್ತಾಹದ ಅಡಿಯಲ್ಲಿ ‘ಭಾರತೀಯ ಸಮಾಜ ಹಾಗೂ ರಾಷ್ಟ್ರದ ಪ್ರಗತಿಯಲ್ಲಿ ಮಹಿಳೆಯರ ಪ್ರಾಮುಖ್ಯತೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಮಹಿಳೆಗೆ ಎಲ್ಲಿಯವರೆಗೆ ಮುಕ್ತವಾದ ಪ್ರಾತಿನಿಧ್ಯ ಲಭಿಸುವುದಿಲ್ಲವೋ ಅಲ್ಲಿಯವರೆಗೆ ಎಷ್ಟೇ ಕಾಯ್ದೆ, ಕಾನೂನುಗಳು ಜಾರಿಯಾದರೂ ಮಹಿಳೆಯರ ಬದುಕಿನಲ್ಲಿ ಸಮಗ್ರ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪ್ರಾಂಶುಪಾಲರಾದ ಡಾ.ಎಂ.ಆರ್. ಲೋಕೇಶ್ ಅವರು ಮಾತನಾಡಿ ಭಾರತೀಯ ಸಮಾಜದಲ್ಲಿ ಹೆಣ್ಣು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವುದು ಕೇವಲ ಆರ್ಥಿಕತೆಯಿಂದ ಸಾಧ್ಯವಿಲ್ಲ ಎಂದರು.
ನೈತಿಕತೆ, ಸಂಸ್ಕಾರವು ಕೂಡ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿಯೇ ಶರಣರು ಗಂಡು-ಹೆಣ್ಣು ಎಂಬ ಬೇಧವನ್ನು ಮೆಟ್ಟಿ ನಿಂತು ‘ಒಳಗೆ ಸುಳಿವ ಆತ್ಮ ಹೆಣ್ಣು ಅಲ್ಲ, ಗಂಡು ಅಲ್ಲ’ ಎಂಬ ತಾತ್ವಿಕತೆಯ ಮೂಲಕ ಸರ್ವರನ್ನು ಸಮಾನವಾಗಿ ಕಾಣುವಂತಹ ಸಮಾಜಕ್ಕಾಗಿ ಶ್ರಮಿಸಿದರು. ಭಾರತದ ನೆಲದಲ್ಲಿ ಶರಣರು, ದಾರ್ಶನಿಕರು ರೂಪಿಸಿಕೊಟ್ಟ ಮಾರ್ಗದಲ್ಲಿ ನಡೆದು ಇಂದಿನ ಮಹಿಳೆಯರು ಸಬಲರಾಗಬೇಕು ಎಂಬುದಾಗಿ ತಿಳಿಸಿದರು.
ಸಮಾಜಶಾಸ್ತ್ರದ ಮುಖ್ಯಸ್ಥರಾದ ಡಾ.ಎ.ಡಿ.ಬಸವರಾಜ್ ಅವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಕಾರ‌್ಯಕ್ರಮದಲ್ಲಿ ಬೋಧಕರಾದ ಹನುಮಂತಪ್ಪ, ಪ್ರಕಾಶ್, ಮಧುಸೂಧನ್, ರೆಹಮತ್ಬಿ, ಸಂದೀಪ್ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ಗೋವಿಂದರೆಡ್ಡಿ ಅವರು ನಿರೂಪಿಸಿದರು. ವಿದ್ಯಾರ್ಥಿನಿ ಸೌಂದರ್ಯ ಸ್ವಾಗತಿಸಿದರು, ಯಶೋಧ, ಸಹನಾ ಪ್ರಾರ್ಥಿಸಿದರು, ರಕ್ಷಿತ ವಂದಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್

ಸುದ್ದಿದಿನ,ದಾವಣಗೆರೆ : ಸಂವಿಧಾನ ಪೂರ್ವದ ಭಾರತದ ಸ್ಥಿತಿಗತಿ ಹಾಗೂ ಸಂವಿಧಾನದ ನಂತರ ಭಾರತದಲ್ಲಾದ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಬದಲಾವಣೆಗ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಹಾಗೆಯೇ ಸಂವಿಧಾನ ರಚನೆ ಮಾಡುವ ಸಮಯದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮುಂದಿದ್ದ ಬಿಕ್ಕಟ್ಟುಗಳನ್ನು ಏಕಾಂತಗಿರಿ ಟ್ರಸ್ಟ್ ನ ಕಾರ್ಯದರ್ಶಿ ಡಾ.ಕೆ.ಎ.ಓಬಳೇಶ್ ಅವರು ತಿಳಿಸಿಕೊಟ್ಟರು.
ನಗರದ ಪ್ರೇರಣ ಮಕ್ಕಳ ಆರೈಕೆ ಕೇಂದ್ರದಲ್ಲಿ ವಿ.ಬಿ.ಪಿ ಫೌಂಡೇಷನ್ ಹಾಗೂ ಏಕಾಂತಗಿರಿ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನಾಚರಣೆಯನ್ನು ಭಾನುವಾರ ಆಚರಿಸಲಾಯಿತು.
ಕಾರ‌್ಯಕ್ರಮದಲ್ಲಿ ದೇವನಗರಿ ಸುದ್ಧಿದಿನ ಪತ್ರಿಕೆಯ ಸಂಪಾದಕರಾದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು, ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನದ ಕಳಶದಂತಿರುವ ಸಂವಿಧಾನ ಪೀಠಿಕೆಯ ಮಹತ್ವವನ್ನು ಪರಿಚಯಿಸುವ ಮೂಲಕ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸ್ಕೈ ಲೈನ್ ಸಂಸ್ಥೆಯ ಸಂಸ್ಥಾಪಕರಾದ ಬಾಲಚಂದ್ರ ಅವರು ಸಂವಿಧಾನ ಇರುವ ಕಾಲದಲ್ಲಿಯೇ ದಲಿತರು, ದಮನಿತರು ಹಾಗೂ ಮಹಿಳೆಯರ ಸ್ಥಿತಿಯು ಅತ್ಯಂತ ಶೋಚನೀಯವಾಗಿದೆ. ಆದರೆ ಸಂವಿಧಾನವಿಲ್ಲದ ಭಾರತವನ್ನು ನಾವು ಊಹಿಸಿಕೊಳ್ಳುವುದು ಕಷ್ಟ ಸಾಧ್ಯ ಎಂಬುದಾಗಿ ತಿಳಿಸಿದರು.
ಪ್ರೇರಣ ಆರೈಕೆ ಕೇಂದ್ರದ ಶಿಕ್ಷಕರಾದ ಕುಮಾರ್ ಅವರು ಮಾತನಾಡಿ, ಸರ್ವರನ್ನು ಸಮಾನವಾಗಿ ಕಾಣುವ ಸಂವಿಧಾನವು ನಮ್ಮೆಲ್ಲರ ಪವಿತ್ರ ಗ್ರಂಥ ಎಂಬುದಾಗಿ ತಿಳಿಸಿದರು. ಕುಮಾರಿ ಪೂಜಾ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ‌್ಯಕ್ರಮದಲ್ಲಿ ಪ್ರೇರಣ ಸಂಸ್ಥೆಯ ಮಕ್ಕಳು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
