ಅಂತರಂಗ
ಮರೆಯಲಾಗದ ನಗುಮೊಗದ ಮೃದುಮಾತು

ಇಸವಿ ನೆನಪಿಲ್ಲ. ಅಖಿಲ ಭಾರತ ಯುವಜನ ಫೆಡರೇಶನ್ (ಎಐವೈಎಫ್) ಮತ್ತು ಎಐಎಸ್ಎಫ್ ಜಂಟಿಯಾಗಿ ರಾಜ್ಯಾದ್ಯಂತ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ಹಮ್ಮಿಕೊಂಡಿದ್ದವು. ನಾನಾಗ ಎಐವೈಎಫ್ ನಲ್ಲಿದ್ದೆ. ಯಡಿಯೂರಪ್ಪ ಮತ್ತು ರೆಡ್ಡಿಗಳು ಬಳ್ಳಾರಿಯಲ್ಲಿ ಗಣಿ ಲೂಟಿ ಮಾಡಿದ್ದು, ಅದನ್ನು ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಿ ಲೂಟಿಕೋರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ರಾಜ್ಯಾದ್ಯಂತ ಸಹಿ ಸಂಗ್ರಹ ಚಳವಳಿ ಜಾಥಾ ನಡೆಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಗಿರೀಶ್ ಕಾರ್ನಾಡರನ್ನು ಆಹ್ವಾನಿಸಲು ನಾನು ಮತ್ತು ಸಂಗಾತಿ ಸಾಥಿ ಸುಂದರೇಶ್ ಅವರ ಮನೆಗೆ ಹೋಗಿದ್ದೆವು. ಅವರ ಬಗ್ಗೆ ನಮಗೆ ಮಾಹಿತಿಯಿತ್ತೇ ಹೊರತು ನಾವೇನೂ ಅವರಿಗೆ ಚಿರಪರಿಚಿತರೇ ಆಗಿರಲಿಲ್ಲ.
ಹೀಗಿದ್ದರೂ ಅವರು ನಾವು ಮೊದಲೇ ಕರೆ ಮಾಡಿ ಹೋಗಿದ್ದರಿಂದ ನಮಗಾಗಿ ತಮ್ಮ ಮನೆಯ ಪಡಸಾಲೆಯಲ್ಲೇ ಕಾಯುತ್ತಿದ್ದರು. ಅದೆಷ್ಟು ಆತ್ಮೀಯವಾಗಿ ನಮ್ಮನ್ನು ಮಾತನಾಡಿಸಿದರೆಂದರೆ ನಾವು ಬಹಳಾ ವರ್ಷಗಳ ಸಂಬಂಧಿಕರೋ ಏನೋ ಎನ್ನುವಂತಿತ್ತು. ನಿಜ, ಚಳವಳಿಯಲ್ಲಿ ನಿರತರಾಗಿರುವರೆಲ್ಲರೂ, ಜನಪರವಾಗಿ, ದೇಶದ ಪರವಾಗಿ, ನ್ಯಾಯದ ಪರವಾಗಿ, ಸಮಾನತೆಗಾಗಿ, ಶೋಷಿತ ಜನರ ಪರವಾಗಿ ಚಿಂತಿಸುವವರು, ಕೆಲಸ ಮಾಡುವವರು, ನ್ಯಾಯಕ್ಕಾಗಿ ಬೀದಿಗೆ ಇಳಿಯುವವರು ಎಲ್ಲರೂ ಒಂದಲ್ಲಾ ಒಂದು ತರ ಸಂಬಂಧಿಕರೇ…. ಅವರ ಮುಗುಳುನಗೆ ಭರಿತ ಆತ್ಮೀಯ ಮಾತುಗಳು ಇವತ್ತು ಮತ್ತೆ ನನಗೆ ನೆನಪಾಗುತ್ತಿವೆ.
ಇತ್ತೀಚೆಗೆ ಈ ನೆಲದ ಸೌಹಾರ್ದ ಸಂಸ್ಕೃತಿ, ನಮ್ಮ ದೇಶದ ಪ್ರಜಾಪ್ರಭುತ್ವ, ಇಲ್ಲಿನ ಜನರ ಸ್ವತಂತ್ರ ಬದುಕು, ಎಲ್ಲವೂ ತೀವ್ರ ಅಪಾಯದಲ್ಲಿರುವಾಗ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಯಾವುದೇ ಸಮಾನಮನಸ್ಕರ ಪ್ರತಿಭಟನೆ, ಹೋರಾಟ, ಸಭೆಗಳಲ್ಲೂ ಅವರ ಉಪಸ್ಥಿತಿಯನ್ನು ನಾವು ಕಾಣುತ್ತಿದ್ದೆವು. ವಯಸ್ಸಾಗುತ್ತ ಅವರ ಆರೋಗ್ಯ ಹದಗಟ್ಟು ಮೂಗಿಗೆ ಪೈಪುಗಳನ್ನು ಹಾಕಿಕೊಂಡಿದ್ದರೂ ಸಹ, ಅವರು ಹಾಗೆ ಬಂದು ಹೇಳಬೇಕಾದ್ದನ್ನು ಹೇಳಿ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಸಮಾಜದ ಏಳ್ಗೆಯ ಕುರಿತು, ಅವರಿಗಿದ್ದ ಬದ್ಧತೆಯ ಪ್ರತೀಕವಿದು ಎಂದರೆ ತಪ್ಪಲ್ಲ. ಇಂತಹ ಸಾಹಿತಿ ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿದ್ದು ಅಚ್ಚರಿಯೇನಲ್ಲ. ಇಂದಿಗೂ ಸಂಘ ಪರಿವಾರದ ಕ್ರಿಮಿಗಳ ವಿಕೃತ ಮಾತುಗಳು ಮುಂದುವರಿದಿವೆ, ಅದು ಅವುಗಳು ಬೆಳೆದಿರುವ ಪರಿಸರದ ‘ಸಂಸ್ಕಾರ’ ತೋರಿಸುತ್ತದೆ.
ಅದೇನೇ ಇರಲಿ, ಮೇರು ವ್ಯಕ್ತಿತ್ವದ ಗಿರೀಶ್ ಕಾರ್ನಾಡ್ ಅವರ ಕೃತಿಗಳಿಂದಲೂ, ಅವರು ಹಲವು ಸಂದರ್ಭಗಳಲ್ಲಿ ಬೀದಿಗೆ ಇಳಿದು ಹೋರಾಟಗಾರರ ಜೊತೆ ಧ್ವನಿಗೂಡಿಸಿದ್ದರಿಂದಲೂ ಇನ್ನೂ ನೂರ್ಕಾಲ ಜನಮಾನಸದಲ್ಲಿ ಹಸಿರಾಗಿಯೇ ಉಳಿದಿರುತ್ತಾರೆ. ಯಾರೆಷ್ಟೇ ಅವರ ವಿಷಯದಲ್ಲಿ ವಿಕೃತಿ ಮೆರೆದರೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡರು ಸಾಹಿತ್ಯಲೋಕದಲ್ಲಿ, ಪ್ರಜ್ಞಾವಂತರ ಹೃದಯಗಳಲ್ಲಿ ವಿಜೃಂಭಿಸುತ್ತಲೇ ಇರುತ್ತಾರೆ, ಅವರ ಕೃತಿಗಳ ಮೂಲಕ.
ಗಿರೀಶ್ ಕಾರ್ನಾಡರಿಗೆ ಗೌರವಪೂರ್ಣ ನಮನಗಳು
– ಜ್ಯೋತಿ ಎ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಆತ್ಮಕತೆ | ಕೃಷ್ಣಪ್ಪನವರ ನಿಧನ : (09.06.1938 – 30.04.1997)

~ ರುದ್ರಪ್ಪ ಹನಗವಾಡಿ
ಭದ್ರಾವತಿಯಿಂದ ಬೆಂಗಳೂರಿಗೆ ಬಂದ ಕೃಷ್ಣಪ್ಪನವರು ಬಹುಜನ ಸಮಾಜ ಪಕ್ಷದ ಕೆಲಸ ನಿರ್ವಹಿಸುತ್ತಿದ್ದರೂ ಅವರ ರಕ್ತಮಾಂಸ ಬಸಿದು ಕಟ್ಟಿದ ಮೂಲಸಂಘಟನೆ ಡಿಎಸ್‌ಎಸ್ ಹಲವು ಗುಂಪುಗಳಾಗಿ ಒಬ್ಬರಿಗೊಬ್ಬರು ಅನುಮಾನಗಳಿಂದ ದೂರದೂರವಾಗಿದ್ದರು. ಇವರ ಜೊತೆ ಆತ್ಮೀಯ ಹೋರಾಟಗಾರರಾಗಿದ್ದ ಅನೇಕರು ಮಾತಿಲ್ಲದೆ ಅವರವರೇ ಕೊರಗುತ್ತಿದ್ದರು.
ಶಿವಮೊಗ್ಗ ಭದ್ರಾವತಿಯಲ್ಲಿ ಕೃಷ್ಣಪ್ಪನವರಿಗೆ ಎಲ್ಲಾ ಜಾತಿಯ, ಸಾಹಿತ್ಯ ಮತ್ತು ಸಾಂಸ್ಕೃತಿಕ ನಾಯಕರ ಬೆಂಬಲ, ಡಿಎಸ್‌ಎಸ್ ನ ಎಲ್ಲ ಹೋರಾಟಗಾರರಿಗೂ ಸಿಗುತ್ತಿತ್ತು. ಬೆಂಗಳೂರಿಗೆ ಬಂದ ನಂತರ ಆದ ಬೆಳವಣಿಗೆಗಳ ಬಗ್ಗೆ ಒಂದು ರೀತಿಯ ವಿಷಾದ ತುಂಬಿದ ಭಾವ ಕೃಷ್ಣಪ್ಪನವರಲ್ಲಿ ತುಂಬಿತ್ತು. ಆದರೂ ಅವರು ಮತ್ತೆ ಇದನ್ನು ಪುನಶ್ಚೇತನಗೊಳಿಸುವ ಕರ‍್ಯದಲ್ಲಿ ಹಗಲು ರಾತ್ರಿ ರಾಜ್ಯದ ವಿವಿಧೆಡೆಗೆ ಪ್ರಯಾಣ ಮಾಡುತ್ತ ವಿವಿಧ ಜಿಲ್ಲೆಗಳಿಗೆ ಹೋಗಿ ಡಿಎಸ್ ಎಸ್ ಸಂಘಟನೆಯ ಕರ‍್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಅವರು ಡಿಎಸ್‌ಎಸ್ ಸಂಘಟನೆಯಲ್ಲಿನ ಬೆಳವಣಿಗೆಗಳ ಬಗ್ಗೆ ಮಾಡಿದ ನಿರಾಶಾ ಕಾಲದಲ್ಲಿಯೇ ಛಲಬಿಡದ ವಿಕ್ರಮನಂತೆ ದಲಿತರನ್ನೆಲ್ಲ ಪುನಃ ಸಂಘಟಿಸಿ ಪುನಶ್ಚೇತನ ಗೊಳಿಸುವ ಬಗ್ಗೆ ಅವರ ಸಹಪಾಠಿ ಆರ್. ನಾಗರಾಜ್, ಅರ್ಕೇಶ್ ಮತ್ತು ನಾನು ಅವರ ಮನೆಯಲ್ಲಿ ಸೇರಿದಾಗ ಚರ್ಚಿಸುತ್ತಿದ್ದರು. ಮೈಸೂರಿನ ಮಹಾದೇವ ಬೆಂಗಳೂರಿನ ಸಿದ್ಧಲಿಂಗಯ್ಯ ಇವರುಗಳ ಸಂಬಂಧ ಬಹಳ ದೂರ ಸರಿದಿತ್ತು. ಅದನ್ನು ಪುನಃ ಪುನಶ್ಚೇತನಗೊಳಿಸುವುದಕ್ಕೆ ಬೇಕಾದ ಶ್ರಮ ಹಾಕಲು ಮಹಾದೇವನಿಗಾಗಲೀ, ಸಿದ್ಧಲಿಂಗಯ್ಯನಿಗಾಗಲೀ ಇರಲಿಲ್ಲ. ಹಾಗಾಗಿ ಮತ್ತೆ ಏಕಾಂಗಿಯಾಗಿಯೇ ಎಲ್ಲಾಕಡೆ ಇವರೊಬ್ಬರೇ ತಿರುಗಾಡಿ ಸಂಘಟಿಸಲು ಶ್ರಮಿಸುತ್ತಿದ್ದರು.
ಈ ಯೋಜನೆಯ ಭಾಗವಾಗಿ ಆಯೋಜಿಸಿದ್ದ ಅಂಬೇಡ್ಕರ್ ರ‍್ಯಾಲಿಯಲ್ಲಿ ಭಾಗವಹಿಸಲು, ಗದಗ ಜಿಲ್ಲಾ ಕೇಂದ್ರದಲ್ಲಿ ವ್ಯವಸ್ಥೆಗೊಳಿಸಿದ ಸಭೆಗೆ ಹೋಗಿದ್ದರು. ನಾನು ಯಲಹಂಕ ಆಫೀಸಿನ ಕೆಲಸ ಮುಗಿಸಿ ಮಧ್ಯಾಹ್ನ ಊಟಕ್ಕೆ ಅವರ ಮನೆಗೆ ಹೋದಾಗ ಮೇಷ್ಟರು ಗದಗ್‌ಗೆ ಹೋದ ಸುದ್ದಿ ತಿಳಿದಿತ್ತು. ಗದಗ್‌ನಲ್ಲಿ ಕೃಷ್ಣಪ್ಪನವರ ತಂಗಿಯ ಮಗಳು ಮೈತ್ರ‍್ರಾ ಕೂಡಾ ಇದ್ದುದು, ಮೈತ್ರಾಳ ಗಂಡ ಬ್ಯಾಂಕ್‌ವೊಂದರಲ್ಲಿ ಉದ್ಯೋಗಿಯಾಗಿದ್ದು, ಸಂಘಟನೆಯ ಜೊತೆ ಅವರನ್ನೆಲ್ಲಾ ನೋಡಿಕೊಂಡು ಬರುವರೆಂದು ಮಾತಾಡಿಕೊಂಡು ನಾನು ಮಧ್ಯಾಹ್ನ ಊಟ ಮುಗಿಸಿಕೊಂಡು ಮತ್ತೆ ಆಫೀಸಿಗೆ ಹೋಗಿದ್ದೆ. ಆದರೆ ಸಂಜೆ 5ರ ವೇಳೆಗೆ ಕೃಷ್ಣಪ್ಪನವರು ಗದಗ್‌ನಲ್ಲಿ ಹುಷಾರಿಲ್ಲದೆ ಆಸ್ಪತ್ರೆಯಲ್ಲಿರುವುದಾಗಿಯೂ ಗದಗ್‌ನಿಂದ ಫೋನ್ ಬಂದಿರುವುದಾಗಿಯೂ ನನ್ನ ಆಫೀಸಿಗೆ ಮಗಳು ಶಾಲಿನಿ ಫೋನ್ ಮಾಡಿದ್ದಳು. ಇಂದಿರಾ ಆಫೀಸ್ ಮುಗಿಸಿ ಮನೆಗೆ ಬರುವ ವೇಳೆಗೆ ನನ್ನ ಹೆಂಡತಿ ಗಾಯತ್ರಿಗೂ ಫೋನ್ ಮಾಡಿ ತಿಳಿಸಿದೆ. ಅರ್ಜೆಂಟಾಗಿ ನಾವು ಎಲ್ಲರೂ ಗದಗ್‌ಗೆ ಹೋಗಿ ಮೇಷ್ಟçರನ್ನ ಕರೆದುಕೊಂಡು ಬಂದು ಇಲ್ಲಿಯೇ ಶುಶ್ರೂಷೆ ಕೊಡಿಸುವ ಎಂದು ಮಾತಾಡಿಕೊಂಡು ರಾತ್ರಿಯೇ ಬೆಂಗಳೂರಿನಿಂದ ಹೊರಟು ಮಧ್ಯೆ ರಾತ್ರಿ ನಮ್ಮೂರ ಬಳಿ ನಿಂತು ನಮ್ಮ ಊರಿನವರಿಗೂ ವಿಷಯ ತಿಳಿಸಿ ಬೆಳಿಗ್ಗೆ 7 ಘಂಟೆಗೆ ಗದಗ ತಲುಪಿದೆವು.
ಬೆಂಗಳೂರು ಬಿಟ್ಟು ಹೊರಟಾಗ ಅವರ ಆರೋಗ್ಯದಲ್ಲಿನ ಸಮಸ್ಯೆ ಸ್ಪಷ್ಟವಾಗಿ ಏನೆಂದು ತಿಳಿಯದಿದ್ದರೂ-ಅವರ ಬಿಡುವಿಲ್ಲದ ತಿರುಗಾಟಕ್ಕೆ ತಡೆಹಾಕಿ ಆರೋಗ್ಯದ ಕಡೆ ಗಮನ ನೀಡಲು ಏನೆಲ್ಲ ಕ್ರಮ ಜರುಗಿಸಬೇಕೆಂದು ನನ್ನ ಹೆಂಡತಿ ಗಾಯತ್ರಿ ಇಂದಿರಾಗೆ ಸಲಹೆ ನೀಡುತ್ತಿದ್ದಳು. ಕೃಷ್ಣಪ್ಪನವರ ಆರೋಗ್ಯ ಕೆಡಿಸುವಂತಹ ಅಭ್ಯಾಸಗಳು ಅವರಿಗೆ ಮೊದಲಿನಿಂದಲೂ ಇರಲಿಲ್ಲ. ಡಿಎಸ್‌ಎಸ್‌ನ ಸಮಾವೇಶಗಳಲ್ಲೂ ಕೂಡ ಎಲ್ಲರಿಗೂ ಸ್ವಚ್ಛತೆ, ವ್ಯಾಯಾಮ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರಭಾವಿಸುತ್ತಿದ್ದರು. ಕೊಳಕುತನ, ಸೋಮಾರಿತನ ಬಾಲ್ಯದಿಂದಲೂ ಕೃಷ್ಣಪ್ಪನವರ ಬಳಿ ಸುಳಿದಿರಲಿಲ್ಲ. ಊಟ ಉಪಚಾರಗಳಲ್ಲೂ ಶಿಸ್ತುಬದ್ದರಾಗಿದ್ದು ಅವರಿಗೆ ಅನಾರೋಗ್ಯ ಎಂಬ ಮಾತು ಕೇಳಿರಲಿಲ್ಲ. ಈ ಕಾರಣದಿಂದ ಏನಾದರೂ ಆಗಿರಲಿ ಬಂದ ನಂತರ ಅವರನ್ನು ಹೆಚ್ಚು ತಿರುಗಾಡಲು ಬಿಡಬಾರದೆಂಬ ತೀರ್ಮಾನ ಮಾಡಿಕೊಂಡು ನಾವೆಲ್ಲ ಗದಗ್ ಕಡೆ ಹೊರಟಿದ್ದೆವು.
ಹೋದಾಕ್ಷಣ ಅವರನ್ನು ಐಸಿಯುನಲ್ಲಿ ನಾವು ಮೂವರೂ ಹೋಗಿ ನೋಡಿದೆವು. ಕಣ್ಣು ಬಿಟ್ಟು ನೋಡಿದ್ದನ್ನು ಬಿಟ್ಟರೆ ಬೇರೇನೂ ಮಾತಾಡಲಿಲ್ಲ. ಇಂತಹ ಪರಿಸ್ಥಿತಿಯನ್ನು ನಾವ್ಯಾರು ನಿರೀಕ್ಷಿಸಿರಲಿಲ್ಲ. ದಾರಿಯುದ್ದಕ್ಕೂ ಯೋಚಿಸಿಕೊಂಡು ಬಂದದ್ದಕ್ಕೂ ಇಲ್ಲಿನ ಪರಿಸ್ಥಿತಿ ನೋಡಿ ನಾವೆಲ್ಲಾ ಗರಬಡಿದಂತಾಗಿ ಕೂತಿದ್ದೆವು. ಗಾಯತ್ರಿ, ಇಂದಿರಾ ಮಾತಾಡದೆ ಉಸಿರಾಡುತ್ತಿದ್ದರು. ಮತ್ತೆ 10-15 ನಿಮಿಷಗಳಲ್ಲಿ ಪರಿಸ್ಥಿತಿ ಹದಗೆಡುತ್ತಿದೆ ಎಂದು ವಾರ್ಡ್ ಬಾಯ್ ಹೇಳಿದಾಗ ನಾವೆಲ್ಲ ಒಳಗೆ ಹೋದೆವು. ಬಂದ ಡಾಕ್ಟರ್ ನಮ್ಮನ್ನೆಲ್ಲ ಮತ್ತೆ ಹೊರಹೋಗಲು ಹೇಳಿ ಶುಶ್ರೂಷೆ ಮಾಡುತ್ತಿದ್ದರು. ಏನಾಯಿತು, ಹೇಗಾಯಿತು ಎಂದು ನಾವುಗಳೆಲ್ಲ ಸಾವರಿಸಿಕೊಳ್ಳುತ್ತಿರುವಾಗಲೇ ಮೇಷ್ಟರು ಕೊನೆಯುಸಿರೆಳೆದಿದ್ದರು. ಅಂದು ದಿನಾಂಕ 30-4-1997 ಬೆಳಗಿನ 8.30 ಇರಬಹುದು. ನಾವು ಬಂದು ನೋಡಿ ನಂತರ ಫ್ರೆಶ್ ಆಗಿ ನಂತರ ಏನು ಮಾಡುವುದು ಎಂದು ಯೋಚಿಸುವ ಮುನ್ನ ಇದೆಲ್ಲ ಆಗಿ ಹೋಗಿತ್ತು.
ಈಚೆ ಬಂದ ನನಗೆ ಸಾವನ್ನ ಹೀಗೆ ನೇರವಾಗಿ ಎದುರಿಸಿದ ಸಂದರ್ಭಗಳು ಇರಲಿಲ್ಲ. ಮುಂದಿನ ವಿಚಾರವನ್ನು ಯೋಚನೆ ಮಾಡುತ್ತಲೇ ಹತ್ತಿರದಲ್ಲಿದ್ದ ಟೆಲಿಫೋನ್ ಬೂತ್‌ನಿಂದ ಮೈಸೂರಿನಲ್ಲಿದ್ದ ಮಗಳು ಸೀಮಾ ಮತ್ತು ಬೆಂಗಳೂರಿನಲ್ಲಿದ್ದ ಶಾಲುಗೆ ಹಾಗೂ ಬೆಂಗಳೂರಿನ ವಿಧಾನಸೌಧದಲ್ಲಿ ಪಿಎಸ್ ಆಗಿದ್ದ ಬಸವಣ್ಯಪ್ಪನಿಗೆ ತಿಳಿಸಿ ಎಲ್ಲಾ ಡಿಎಸ್‌ಎಸ್ ಸ್ನೇಹಿತರಿಗೆ ತಿಳಿಸಲು ಹೇಳಿದೆ. ಹರಿಹರದಲ್ಲಿನ ಮೇಷ್ಟರ ತಮ್ಮಂದಿರಿಗೆ ಸುದ್ದಿ ತಿಳಿಸಿ ಬಂದೆ. ಸಿರಸಿಯಲ್ಲಿದ್ದ ಮೇಷ್ಟರ ಇನ್ನೊಬ್ಬ ತಮ್ಮ ಮಾರುತಿಗೆ ತಿಳಿಸಿ ಮೇಷ್ಟರ ಪಾರ್ಥಿವ ಶರೀರವನ್ನು ಹರಿಹರಕ್ಕೆ ತೆಗೆದುಕೊಂಡು ಹೋಗುವ ಬಗ್ಗೆ ವ್ಯವಸ್ಥೆ ಮಾಡಿದೆ. ಆಸ್ಪತ್ರೆಯ ರೀತಿನೀತಿಗಳನ್ನು ಮುಗಿಸಿ-ಸಮಾಧಿಯಾಗುವುದು ಇನ್ನೂ ಒಂದು ದಿನ ತಡವಾಗುವುದರಿಂದ ದೇಹಕ್ಕೆ ಬೇಕಾದ ರೀತಿಯಲ್ಲಿ ಇಂಜೆಕ್ಷನ್ ಕೊಡಿಸಿ ಸುಮಾರು 3-4 ಗಂಟೆಗೆ ಗದಗ ಬಿಟ್ಟು ಹರಿಹರ ಟೌನ್‌ನಲ್ಲಿದ್ದ ಮೇಷ್ಟರ ಮನೆಗೆ ಸಂಜೆ 7 ಗಂಟೆಯ ಸಮಯಕ್ಕೆ ತಲುಪಿದ್ದೆವು.
ರಾತ್ರಿ ಭಜನೆ ಮಾಡಲು ವ್ಯವಸ್ಥೆ ಮಾಡಿ ನಂತರ ಮೇಷ್ಟರ ಸಂಸ್ಕಾರ ಎಲ್ಲಿ ಏನು ಎಂದು ಅವರ ತಮ್ಮಂದಿರು ತಂಗಿಯರ ಜೊತೆ ಮಾತಾಡಿದಾಗ ಅದೆಲ್ಲ ತುಂಗಭದ್ರಾ ನದಿಯ ದಡದಲ್ಲಿ ಮಾಡುವುದು ಎಂದು ತಿಳಿಸಿದರು. ಈ ಬಗ್ಗೆ ದುಃಖದಲ್ಲಿ ಮುಳುಗಿದ್ದ ಇಂದಿರಾ ಜೊತೆ ಏನೂ ಮಾತಾಡುವ ಸ್ಥಿತಿಯಲ್ಲಿರಲಿಲ್ಲ. ಇದೇ ಚಿಂತೆಯಲ್ಲಿ ನಾನು ಮೂರು ಕಿ.ಮೀ. ದೂರದ ನಮ್ಮ ಊರಿಗೆ ಬಂದಿಳಿದೆ. ರಾತ್ರಿಯಲ್ಲಿ ನಿದ್ದೆ ಬಾರದೆ ಒದ್ದಾಡಿದೆ. ಹರಿಹರ ತುಂಗಾ ನದಿ ದಡದಲ್ಲಿ ಸಂಸ್ಕಾರ ಮಾಡುವ ಅವರ ನಿರ್ಧಾರವನ್ನು ತಿಳಿದು ಮನಸ್ಸಿಗೆ ಒಂದು ಚಿಂತೆಯಾಯಿತು. ಇಷ್ಟೊಂದು ಹೋರಾಟದ ಜೀವನ ನಡೆಸಿದ ಮನುಷ್ಯನ ನೆನಪು ನಾಳೆಗೆ ಭೌತಿಕವಾಗಿ ಕೊನೆಯಾಗುವ ಬಗ್ಗೆ ಚಿಂತೆಯಾಯಿತು. ನಾನು ನಮ್ಮ ಅಣ್ಣ ಅವ್ವ ಇವರ ಜೊತೆ ಚರ್ಚಿಸಿ-ನಮ್ಮ ತೋಟದ ಜಮೀನಿನಲ್ಲಿ ಸಮಾಧಿ ಮಾಡಿದರೆ ಹೇಗೆ ಎಂದು ಯೋಚಿಸಿ, ಬೆಳಿಗ್ಗೆ ಈ ನನ್ನ ಯೋಚನೆಯನ್ನು ಮೇಷ್ಟರ ತಮ್ಮ ಮಾರುತಿ ಬಳಿ ಚರ್ಚಿಸಿ ನಂತರ ಎಲ್ಲ ಅವರ ಸಂಬಂಧಿಗಳಿಗೂ ವಿಚಾರಿಸಿದೆ. ಅವರೆಲ್ಲರೂ ನನ್ನ ಸಲಹೆಗೆ ಒಪ್ಪಿದರು. ಅದರಂತೆ ಎಲ್ಲಾ ಡಿಎಸ್‌ಎಸ್‌ನ ಕರ‍್ಯಕರ್ತರಿಗೆ, ಅಧ್ಯಾಪಕರಿಗೆ, ರಾಜಕಾರಣಿಗಳಿಗೆ ತಿಳಿಸಿದೆವು. ಹರಿಹರದಿಂದ ನಮ್ಮೂರಿನಿಂದಲೇ ತರಿಸಿದ್ದ ಟ್ರಾಕ್ಟರ್‌ನಲ್ಲಿ ನಮ್ಮ ತೋಟದಲ್ಲಿ ಸುಮಾರು 4 ಗಂಟೆಯ ಸಮಯಕ್ಕೆ 1-5-1997ರಂದು ಕೃಷ್ಣಪ್ಪನವರ ಅಂತಿಮ ಕಾರ್ಯವನ್ನು ಮಾಡಿದೆವು. ಅಂತಿಮ ದರ್ಶನ ಪಡೆಯಲು ರಾಜ್ಯದಾದ್ಯಂತ ಪ್ರಗತಿಪರರು, ಡಿಎಸ್‌ಎಸ್ ಕರ‍್ಯಕರ್ತರು, ರಾಜಕಾರಣಿಗಳ ದಂಡೇ ಆಗಮಿಸಿತ್ತು. ಸಮಾಧಿಯಾದ ನಂತರ ಡಿಎಸ್‌ಎಸ್‌ನ ಎಲ್ಲಾ ಬಣಗಳ ಕರ‍್ಯಕರ್ತರೂ ಕೃಷ್ಣಪ್ಪನವರ ಹೋರಾಟದ ಆಶಯಗಳನ್ನು ಈಡೇರಿಸಲು ಅಂದು ಪ್ರಮಾಣ ಮಾಡುವ ಪ್ರತಿಜ್ಞೆ ಮಾಡಿ ನಿರ್ಗಮಿಸಿದ್ದರು.
1997ರಲ್ಲಿ ಕೃಷ್ಣಪ್ಪನವರ ನಿರ್ಗಮನದ ನಂತರ ಕರ್ನಾಟಕದ ದಲಿತ ಹೋರಾಟದ ಸಮಗ್ರ ಚಿತ್ರಣ ಹಲವು ಟಿಸಿಲುಗಳಾಗಿ ಹೊರಹೊಮ್ಮಿದ್ದವು. ನನ್ನ ಸರ್ಕಾರಿ ನೌಕರಿಯ ಜೊತೆ ಎಲ್ಲ ಬಣಗಳಲ್ಲಿ ನನಗೆ ಬಲ್ಲವರಿದ್ದರೂ ಯಾರೊಡನೆ ಒಡನಾಡುವುದು ಎಂಬ ಪ್ರಶ್ನೆ ಮೂಡುತ್ತಿತ್ತು. ಆದರೂ ಯಾರು ಏನೇ ಕರ‍್ಯಕ್ರಮ ಮಾಡುವಾಗ ಸಹಕಾರ ನೀಡಲು ಕೋರಿದರೆ ಮುಕ್ತ ಮನಸ್ಸಿನಿಂದ ಸಹಾಯ ಮಾಡುತ್ತಿದ್ದೆ.
ಕೃಷ್ಣಪ್ಪನವರ ನಿಧನಾನಂತರ ಬಿಎಸ್‌ಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಕಾನ್ಷಿರಾಮ್ ಅವರು ಯಲಹಂಕದಲ್ಲಿದ್ದ ಕೃಷ್ಣಪ್ಪನವರ ಮನಗೆ ಬಂದು ಇಂದಿರಾ ಮತ್ತು ಅವರ ಇಬ್ಬರು ಮಕ್ಕಳು ಶಾಲಿನಿ, ಸೀಮಾ ಅವರಿಗೆ ಸಾಂತ್ವನ ಹೇಳಿದರು. ತಕ್ಷಣದ ಅಗತ್ಯಗಳಿಗೆ ಎಂಬ ಕಾರಣದಿಂದಲೋ ಏನೋ ಎರಡು ಲಕ್ಷ ರೂಪಾಯಿಗಳನ್ನು ಇಂದಿರಾ ಅವರ ಕುಟುಂಬಕ್ಕೆ ನೀಡಿದ್ದರು. ಆದರೆ ಇಂದಿರಾ ಅವರು ನನಗೀಗ ಸರ್ಕಾರಿ ನೌಕರಿ ಇರುವ ಕಾರಣ ನೀಡಿ, ಅದನ್ನು ಕೃಷ್ಣಪ್ಪನವರ ಹೆಸರಿನಲ್ಲಿ ಮುಂದೆ ಸ್ಥಾಪಿಸಿದ ಟ್ರಸ್ಟ್ನ ಹೆಸರಿನಲ್ಲಿ ನಡೆಸುವ ಕರ‍್ಯಕ್ರಮಗಳಿಗೆ ಬಳಸಿಕೊಳ್ಳಲಾಗುವುದು ಎಂದು ಹೇಳಿ ಆ ಹಣವನ್ನು ಒಪ್ಪಿಕೊಂಡಿದ್ದರು. ಅದರಂತೆ ಕಾನ್ಷಿರಾಮ್ ಅವರು ನೀಡಿದ ಹಣ, 1997ರಲ್ಲಿ ಸ್ಥಾಪಿಸಿದ ಪ್ರೊ.ಬಿ. ಕೃಷ್ಣಪ್ಪ ಟ್ರಸ್ಟ್ನಲ್ಲಿ ಮೂಲಧನವಾಗಿ ಉಳಿದಿದೆ. ಕೃಷ್ಣಪ್ಪನವರ ಆಶಯದಂತೆ ಕರ‍್ಯಕ್ರಮಗಳನ್ನು ನಿರ್ವಹಿಸಿಕೊಂಡು ಕಳೆದ 24 ವರ್ಷಗಳಿಂದ ಬರುತ್ತಿದ್ದೇವೆ.
ಕೃಷ್ಣಪ್ಪನವರು ಕಾಲವಾದ ಎರಡು ತಿಂಗಳಲ್ಲಿ ಡಿಎಸ್‌ಎಸ್‌ನ ಅವರ ಅನುಯಾಯಿಗಳಲ್ಲಿ ನಾನು ಮತ್ತು ಇಂದಿರಾ ಮನವಿ ಮಾಡಿ ಕೃಷ್ಣಪ್ಪನವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸುವ ಬಗ್ಗೆ ಬೆಂಗಳೂರಿನಲ್ಲಿ ಪೂರ್ವಭಾವಿ ಸಭೆಯನ್ನು ಅರ್ಕೇಶ್ ಇದ್ದ ಸಿಆರ್‌ಪಿಎಫ್‌ನಲ್ಲಿನ ಒಂದು ಸಭಾಂಗಣದಲ್ಲಿ ಕರೆದಿದ್ದೆವು. ಆ ಸಭೆಗೆ ಸಾಕಷ್ಟು ಜನ ಬಾರದಿದ್ದರಿಂದ ಮತ್ತೊಂದು ಬಾರಿ ಎಲ್ಲರಿಗೂ ತಿಳಿಹೇಳಿ 9 ಅಥವಾ 11 ಜನರಿರುವ ಒಂದು ಟ್ರಸ್ಟ್ ಸ್ಥಾಪಿಸುವ ಬಗ್ಗೆ ಮತ್ತೆ ಸಭೆ ಕರೆದೆವು. ಎರಡನೇ ಸಭೆಯಲ್ಲಿ ಬಂದವರ ಅಭಿಪ್ರಾಯ ಪಡೆದು 11 ಜನರಲ್ಲಿ ದಲಿತ ಹೋರಾಟಗಾರರು, ಕೃಷ್ಣಪ್ಪನವರ ಕುಟುಂಬ ಮತ್ತು ಅವರ ಸಹಪಾಠಿಗಳನ್ನು ಸೇರಿದಂತೆ ಟ್ರಸ್ಟ್ ಸದಸ್ಯರ ಹೆಸರುಗಳನ್ನು ಅಂತಿಮಗೊಳಿಸಿದೆವು.
ನಾನು ಮತ್ತು ಇಂದಿರಾ ಮ್ಯಾನೇಜಿಂಗ್ ಟ್ರಸ್ಟಿಗಳು. ಕೃಷ್ಣಪ್ಪನವರ ಸಹಪಾಠಿಗಳಾಗಿದ್ದ ಆರ್. ನಾಗರಾಜ್ ಮತ್ತು ಕೃಷ್ಣಪ್ಪನವರ ಕಿರಿಯ ಸಹೋದರ ಬಿ. ಮಾರುತಿ, ನಮ್ಮ ಸಹೋದರ ಸಿ. ತಿಪ್ಪಣ್ಣ ಮತ್ತು ಉಳಿದಂತೆ ಡಿಎಸ್‌ಎಸ್‌ನಲ್ಲ್ಲಿದ್ದ ಕೃಷ್ಣಪ್ಪನವರ ಅನುಯಾಯಿಗಳಾದ ಚಿತ್ರದುರ್ಗದ ಜಯಣ್ಣ, ಶ್ರೀಧರ ಕಲಿವೀರ, ಮಾವಳ್ಳಿ ಶಂಕರ್, ಬಿಎಸ್‌ಪಿಯಲ್ಲಿದ್ದ ಮಾರಸಂದ್ರದ ಮುನಿಯಪ್ಪನವರ ಹೆಸರುಗಳನ್ನು ಅಂತಿಮಗೊಳಿಸಿದ್ದೆವು. ಎರಡು ಬಾರಿ ಎಲ್ಲರೂ ಸೇರಿ ನೋಂದಾಯಿಸಲು ಸಬ್ ರಿಜಿಸ್ಟಾçರ್ ಆಫೀಸಿಗೆ ಬರುವಂತೆ ದಿನಾಂಕ ನಿಗದಿ ಮಾಡಿದ್ದರೂ ಕೆಲವರು ಕೊನೆಯವರೆಗೂ ಬಾರದ ಕಾರಣ ಬಂದವರಲ್ಲಿ ಏಳು ಜನರಿರುವ ಟ್ರಸ್ಟ್ವೊಂದನ್ನು ದಿನಾಂಕ 28-11-97ರಲ್ಲಿ ಸ್ಥಾಪಿಸಿದೆವು. ಕೃಷ್ಣಪ್ಪನವರ ಆಶಯಗಳನ್ನು ಟ್ರಸ್ಟಿನ ಧ್ಯೇಯೋದ್ದೇಶಗಳಲ್ಲಿ ಉಲ್ಲೇಖಿಸಿ ನೊಂದಾಯಿಸಿದೆವು. ಅಂದಿನಿಂದ ಇಂದಿನವರೆಗೆ ಸುಮಾರು 24 ವರ್ಷಗಳಲ್ಲಿ ರಾಜ್ಯದಾದ್ಯಂತ ದಲಿತ ಹೋರಾಟಗಳಿಗೆ ಒತ್ತಾಸೆಯಾಗಿ, ಸಮಾನತೆ ಸಹೋದರತೆ ಸಾರುವ ಮಾನವೀಯ ಹೋರಾಟಗಳಲ್ಲಿ ಭಾಗವಹಿಸುತ್ತಾ, ಅಂತರ್ಜಾತಿ-ಅಂತರ್‌ಮತೀಯ ಮತ್ತು ಸರಳ ಮದುವೆಗಳನ್ನು ಮಾಡುತ್ತಾ ಜೊತೆಗೆ, ಕೃಷ್ಣಪ್ಪನವರು ಬರೆದಿದ್ದ ಹೋರಾಟದ ಕವನ ಮತ್ತು ವೈಚಾರಿಕ ಲೇಖನಗಳನ್ನು ಪ್ರಕಟಿಸಿ ಜನರಿಗೆ ತಲುಪಿಸುತ್ತಾ ಇಂದಿಗೂ ಜನಪರ ಚಳುವಳಿಗಳಲ್ಲಿ ಕೃಷ್ಣಪ್ಪ ಟ್ರಸ್ಟ್ ಸಕ್ರಿಯವಾಗಿದೆ. ಟ್ರಸ್ಟ್ನ ಕರ‍್ಯಕ್ರಮಗಳ ಭಾಗವಾದ ಕೃಷ್ಣಪ್ಪ ಸಮಾಧಿ ಸ್ಥಳ ಉದ್ಘಾಟನೆಗೆ ಬಿಎಸ್‌ಪಿಯ ಕಾನ್ಷಿರಾಮ್ ಅವರು ಹಿರಿಯ ನ್ಯಾಯವಾದಿ ಮತ್ತು ಮಾಜಿಮಂತ್ರಿಗಳಾಗಿದ್ದ ಎಲ್.ಜಿ. ಹಾವನೂರ ಅವರು, ಮಾಜಿಮಂತ್ರಿಗಳಾಗಿದ್ದ ಕಾಗೋಡು ತಿಮ್ಮಪ್ಪ ಅವರು 1997ರಲ್ಲಿ ಬಂದು ಉದ್ಘಾಟಿಸಿದ್ದರು. ಅಂದಿನಿಂದ ಇಂದಿನವರೆಗೆ ನೂರಾರು ಸಾಹಿತ್ಯ, ಸಂಸ್ಕೃತಿ, ನಾಟಕ, ಹೋರಾಟಗಳ ಸಭೆ ಸಮಾರಂಭಗಳನ್ನು ಕೃಷ್ಣಪ್ಪ ಸಮಾಧಿ ಸ್ಥಳದಲ್ಲಿ ಸಂಘಟಿಸುತ್ತಾ ಬಂದಿದೆ. ಮಂತ್ರಿಗಳು, ಮುಖ್ಯಮಂತ್ರಿಗಳು, ರಾಜ್ಯಪಾಲರಾದಿಯಾಗಿ ಜೊತೆಗೆ ನೂರಾರು ದಲಿತ ಹೋರಾಟಗಾರರು, ರಾಜಕಾರಣಿಗಳು ಅನೇಕ ಪ್ರಗತಿಪರರು, ರೈತ ಹೋರಾಟಗಾರರು ಗ್ರಾಮೀಣ ಜನರು ಸಮಾಧಿ ಸ್ಥಳದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುತ್ತಾರೆ.
2017ರಲ್ಲಿ ಸಮಾಧಿ ಸ್ಥಳದಲ್ಲಿ ಸರ್ಕಾರದ ಸಹಾಯದಿಂದ ಕೃಷ್ಣಪ್ಪ ಸ್ಮಾರಕ ಭವನ ನಿರ್ಮಿಸಿದ್ದು, ಅಲ್ಲಿ ಲೈಬ್ರರಿ ಮತ್ತು ಸ್ಮರಣಲೋಕವನ್ನು ಕೃಷ್ಣಪ್ಪನವರ ಹೋರಾಟದ ವಿವರಗಳನ್ನು ಒಳಗೊಂಡಂತೆ ಕಲೆ ಹಾಕಿದೆ. ಅನೇಕ ಪ್ರಗತಿಪರ ಕರ‍್ಯಕ್ರಮಗಳು ಜನಪರ ಗ್ರಾಮೀಣ ಜನರು ಅದರ ಸದುಪಯೋಗ ಪಡೆಯುತ್ತಿರುವುದು ಸಂತೋಷದ ಸಂಗತಿಯಾಗಿದೆ.
ಕೃಷ್ಣಪ್ಪನವರು ತೀರಿದ ಎರಡು ತಿಂಗಳಲ್ಲಿ ಯಲಹಂಕದಲ್ಲಿನ ಪ್ರಗತಿಪರರೊಡನೆ ಜೊತೆಗೂಡಿ ಕೃಷ್ಣಪ್ಪನವರ ಸ್ಮರಣ ಕರ‍್ಯಕ್ರಮ ಆಯೋಜಿಸಿದ್ದೆವು. ಆ ಸಭೆಗೆ ನಮ್ಮ ನಗರಸಭೆಯ ಸದಸ್ಯರು ಮತ್ತು ಅನೇಕ ಪ್ರಗತಿಪರರು ಕೈಜೋಡಿಸಿದ್ದರು. ಸಭೆಗೆ ಡಿಎಸ್‌ಎಸ್ ನಾಯಕರು ಮತ್ತು ಅಂದಿನ ವಿಧಾನಸಭಾ ಅಧ್ಯಕ್ಷರಾಗಿದ್ದ ಡಿ. ಮಂಜುನಾಥ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕೃಷ್ಣಪ್ಪನವರ ಹೋರಾಟ ಮತ್ತು ತ್ಯಾಗಗಳ ಬಗ್ಗೆ ನುಡಿನಮನ ಸಲ್ಲಿಸಿದ್ದರು.
ನಮ್ಮ ಊರಿನಿಂದ ಒಂದು ದೊಡ್ಡ ದಂಡೇ ಬ್ಯಾಂಡ್‌ಸೆಟ್ ಜೊತೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಬಸವಲಿಂಗಪ್ಪನವರ ಸಮಾಧಿ ಸ್ಥಳದಿಂದ ಯಲಹಂಕದಲ್ಲಿ ನಡೆಸುತ್ತಿದ್ದ ಕೃಷ್ಣಪ್ಪನವರ ಸ್ಮರಣ ಸಮಾರಂಭದವರೆಗೆ ಮೆರವಣಿಗೆ ಮಾಡಿಕೊಂಡು ಬಂದು ಕೃಷ್ಣಪ್ಪನವರ ಬದುಕು, ಹೋರಾಟ, ಡಿಎಸ್‌ಎಸ್ ಸಂಘಟನೆಯನ್ನು ಸ್ಥಾಪಿಸಿ ಹೋರಾಟ ಮಾಡಿದ ವಿವಿಧ ವಿಷಯಗಳ ಬಗ್ಗೆ ಅಂದಿನ ಸಭೆಯಲ್ಲಿ ಭಾಗವಹಿಸಿದವರೆಲ್ಲರೂ ಮಾತನಾಡಿ ಕೃಷ್ಣಪ್ಪನವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಸಿದ್ಧಾಂತ ಮತ್ತು ಪತ್ರಿಕೋದ್ಯಮ

- ಹರ್ಷಕುಮಾರ್ ಕುಗ್ವೆ, ಪತ್ರಕರ್ತ ಮತ್ತು ಆಕ್ಟಿವಿಸ್ಟ್
ಇದು ಸುಮಾರು 2002-03ರ ಸಂದರ್ಭ. ಶಿವಮೊಗ್ಗದಲ್ಲಿ ನಾವು ಹೋರಾಟಗಳಲ್ಲಿ ಸಕ್ರಿಯವಾಗಿದ್ದ ಕಾಲ. ಒಬ್ಬ ಪತ್ರಕರ್ತ ಮಿತ್ರರೊಂದಿಗೆ ಹೀಗೇ ಚರ್ಚೆ ನಡೆಯುತ್ತಿತ್ತು. ಅವರು ಪತ್ರಿಕೋದ್ಯಮದ ನ್ಯೂಟ್ರಾಲಿಟಿ ಕುರಿತು ಮಾತಾಡುತ್ತಾ, ʼನಾವು ಪತ್ರಕರ್ತರು ನಿಮ್ಮ ರೀತಿ ಯೋಚನೆ ಮಾಡೋದಕ್ಕೆ ಆಗಲ್ಲ. ನಾವು ಯಾವತ್ತೂ ಯಾವುದೇ ಸಿದ್ಧಾಂತಕ್ಕೆ ವಾಲಿಕೊಳ್ಳದೇ ತಟಸ್ಥತೆ ಕಾಪಾಡಬೇಕಾಗುತ್ತದೆʼ ಎಂದು ಹೇಳಿದರು. ʼಅವರ ಜೊತೆ ನಾನು ವಾದಿಸಿದೆ.
ಸರ್, ಸುಳ್ಳನ್ನೇ ಬಂಡವಾಳ ಮಾಡಿಕೊಂಡ ಸಿದ್ಧಾಂತಗಳು ರಾರಾಜಿಸುವಾಗ ಸತ್ಯವನ್ನು ಹುಡುಕಲು ಸಹ ಸಿದ್ಧಾಂತದ ಸಹಾಯ ಬೇಕಾಗುತ್ತದೆ. ಯಾವ ವ್ಯಕ್ತಿಯೂ ಸಿದ್ಧಾಂತದ ಹೊರಗಾಗಿ ಇರಲು ಸಾಧ್ಯವಿಲ್ಲ. ನನಗೆ ಸಿದ್ದಾಂತವೇ ಇಲ್ಲ ಎನ್ನುವ ವ್ಯಕ್ತಿಯನ್ನು ಕೂಡಾ ಅವನಿಗೆ ತಿಳಿದೋ ತಿಳಿಯದೆಯೋ ಒಂದಲ್ಲಾ ಒಂದು ಸಿದ್ದಾಂತ ಇಲ್ಲವೇ ಹಲವು ಸಿದ್ಧಾಂತಗಳು ನಿರ್ದೇಶಿಸುತ್ತಿರುತ್ತವಲ್ಲ.. ʼ ಎಂದ ನನ್ನ ಮಾತಿಗೆ ನಮಗೆ ಪತ್ರಕರ್ತರಿಗೆ ಹಾಗೆ ಯೋಚಿಸಲು ಬರುವುದಿಲ್ಲ. ನೀವು ಎಡ ಪಂಥ ಅಂತೀರಿ, ಅವರು ಬಲಪಂಥ ಅಂತಾರೆ, ನಾವು ಇವೆರಡರ ನಡುವೆ ಸತ್ಯ ಹುಡುಕ್ತೀವಿʼ ಎಂದೆಲ್ಲಾ ಹೇಳಿದರು. ಕೊನೆಗೆ ಯಾರೂ ರಾಜಿಯಾಗಲಿಲ್ಲ.
ಇದಾಗಿ ಹದಿನೈದು ವರ್ಷಗಳ ನಂತರ, 2019ರಲ್ಲಿ ಅದೇ ಪತ್ರಕರ್ತ ಸ್ನೇಹಿತರು ನಮ್ಮ ಜೊತೆ ಕೆಲಸ ಮಾಡುತ್ತಿದ್ದರು. ಅವರು ನರೇಂದ್ರ ಮೋದಿ ಸರ್ಕಾರದ ಆರ್ಥಿಕ ವಂಚನೆಗಳನ್ನು ಅದ್ಭುತ ರೀತಿಯಲ್ಲಿ ಅಂಕಿಅಂಶಗಳ ಸಮೇತ ಬಯಲು ಮಾಡುತ್ತಿದ್ದುದು ಕಂಡು ನನಗೆ ಅಚ್ಚರಿ ಮತ್ತು ಸಂತೋಷವಾಗಿತ್ತು. ಅಂದು ಅವರು ನಿಜಕ್ಕೂ ಸತ್ಯದ ಪರವಾಗಿದ್ದರು. ಆದರೆ ಅವರ ಬರೆಹಗಳನ್ನು ಯಾರಾದರೂ ಬಲಪಂಥೀಯರು ಓದಿದರೆ ಅವರಿಗೆ ಖಂಡಿತಾ ಇವರು ʼಎಡಪಂಥೀಯ ಸಿದ್ಧಾಂತಿʼ, ʼನಗರ ನಕ್ಸಲ್ʼ ಎಂದೆಲ್ಲಾ ಸುಲಭವಾಗಿ ಹಣೆಪಟ್ಟಿ ಕಟ್ಟಬಹುದಿತ್ತು. ಆದರೆ ಆ ಪತ್ರಕರ್ತ ಸ್ನೇಹಿತರು ನಿಜಕ್ಕೂ ಈ ದೇಶದ ಭವಿಷ್ಯದ ಬಗ್ಗೆ ತುಂಬಾ ಆತಂಕಗೊಂಡು, ಕಾಳಜಿಯಿಂದ ಕೆಲಸ ಮಾಡುತ್ತಿದ್ದರು. ಕೊನೆಗೆ ಅವರಿಗೂ ಸಹ ಅವರು ಹಿಂದೆ ಹೇಳಿದ್ದ ರೀತಿಯಲ್ಲಿ ತಟಸ್ಥವಾಗಿ ಪತ್ರಿಕೋದ್ಯಮ ನಡೆಸುವುದು ಸಾಧ್ಯವಿಲ್ಲ ಎಂಬ ಅರಿವಾಗಿರಬಹುದು ಎಂದುಕೊಂಡೆ. ಹೌದು ಪತ್ರಕತ್ರರಾದವರು ಮಾಡಲು ಇರುವ ಬಹಳ ಕೆಲಸಗಳ ನಡುವೆಯೂ ಅವರು ಅದ್ಯತೆಯನ್ನು ಗುರುತಿಸಿಕೊಂಡಿದ್ದರು.
ಪತ್ರಿಕೋದ್ಯಮದ ಬಗ್ಗೆ ಮಾತಾಡುವಾಗ ನಾವು ಒಂದು ಪ್ರಾಥಮಿಕ ಸಂಗತಿಯನ್ನು ತಿಳಿದುಕೊಳ್ಳಬೇಕು. ನಮ್ಮ ದೇಶದಲ್ಲಿ ಪತ್ರಿಕೋದ್ಯಮ ಆರಂಭವಾದ ಸಂದರ್ಭದಲ್ಲಿ ಯಾವೆಲ್ಲಾ ಭಾರತೀಯರು ಪತ್ರಿಕೆಗಳನ್ನು ಹೊರತರುತ್ತಿದ್ದರೋ ಅವರೆಲ್ಲರೂ ಕಟು ಸಿದ್ಧಾಂತಿಗಳಾಗಿದ್ದರು. ಸಾಮ್ರಾಜ್ಯವಾದದ ವಿರುದ್ಧದ ಸಿದ್ದಾಂತ ಅವರೆಲ್ಲರನ್ನು ಮುನ್ನಡೆಸುತ್ತಿತ್ತು. ಬಹುತೇಕ ಅವರೆಲ್ಲರೂ ಸ್ವಾತಂತ್ರ್ಯ ಹೋರಾಟಗಾರರು ಇಲ್ಲವೇ ಸ್ವಾಭಿಮಾನ ಚಳವಳಿಯ ಹೋರಾಟಗಾರರು, ನಾಯಕರು ಆಗಿದ್ದರು. ಅಂತಹ ಸ್ಪಷ್ಟ ಸೈದ್ಧಾಂತಿಕ ಬುನಾದಿಯಿಟ್ಟುಕೊಂಡು ಅವರೆಲ್ಲಾ ಬ್ರಿಟಿಷರ ವಿರುದ್ಧ ಪತ್ರಿಕೋದ್ಯಮ ನಡೆಸದಿದ್ದರೆ ಈ ದೇಶದ ಪತ್ರಿಕೋದ್ಯಮದ ಇತಿಹಾಸ ಅತ್ಯಂತ ಟೊಳ್ಳಾದ, ಬೂಸಾ ಇತಿಹಾಸವಾಗುತ್ತಿತ್ತು.
ಕೆಲ ಬ್ರಿಟಿಷ್ ಪತ್ರಕರ್ತರು ಹೇಗೆ ಬ್ರಿಟಿಷ್ ಅಧಿಕಾರಿಗಳ ಬೆಡ್ ರೂಮ್ ಸ್ಟೋರಿಗಳನ್ನು ಚಪ್ಪರಿಸಿಕೊಂಡು ಅದನ್ನೇ ಪತ್ರಿಕೋದ್ಯಮ ಎಂದು ಬೀಗುತ್ತಿದ್ದರೋ ಅಷ್ಟರಲ್ಲೇ ಭಾರತೀಯ ಪತ್ರಿಕೋದ್ಯಮ ಉಳಿದುಬಿಡುತ್ತಿತ್ತು. ಆದರೆ ಹೀಗೆ ಆಗಲು ಬಿಡದೇ ಉದಾತ್ತ ಧ್ಯೇಯಗಳ ಮೂಲಕ ದೇಶದ ಪತ್ರಿಕೋದ್ಯಮ ಬೆಳೆಸಿದ 19ನೆಯ ಶತಮಾನದ ಅಂತಹ ಧೀಮಂತ ಪತ್ರಕರ್ತರು ಹಲವರು. ಸುರೇಂದ್ರ ನಾಥ್ ಬ್ಯಾನರ್ಜಿ (ಬೆಂಗಾಲಿ ಪತ್ರಿಕೆ- 1879) ಪತ್ರಕರ್ತರಾಗಿ ಕೆಲಸ ಮಾಡುತ್ತಲೇ ಸತ್ಯ ಹೇಳಿದ ಕಾರಣಕ್ಕೆ ಬ್ರಿಟಿಷ್ ಸರ್ಕಾರ ಅವರನ್ನು ವರ್ನಾಕ್ಯುಲರ್ ಪ್ರೆಸ್ ಕಾಯ್ದೆಯ ಅಡಿ ಜೈಲಿಗಟ್ಟಿತ್ತು. ಸಂವಾದ ಕೌಮುದಿ ಎಂಬ ಪತ್ರಿಕೆ ನಡೆಸುತ್ತಿದ್ದ ರಾಜಾರಾಮ ಮೋಹನ್ ರಾಯ್ ಒಬ್ಬ ಸ್ಪಷ್ಟ ವಿಚಾರವಾದಿಯಾಗಿದ್ದರು.
ಅವರು ಈ ದೇಶದ ಅನಿಷ್ಟಗಳ ಕುರಿತೇ ತಮ್ಮ ಪತ್ರಿಕೆಯಲ್ಲಿ ಬರೆಯುತ್ತಾ ಹೋದರು. ಇದೇ ಕೆಲಸವನ್ನು ಮಹಾರಾಷ್ಟ್ರದಲ್ಲಿ ಮರಾಠಿ ಪತ್ರಿಕೆ ಆರಂಭಿಸಿದ ಜಂಬೇಕರ್ ಮಾಡಿದರು, ಅವರು ತಮ್ಮ ದರ್ಪಣ್ ಪತ್ರಿಕೆಯ ಮೂಲಕ ಸಾಮಾಜಿಕ ಅನಿಷ್ಟಗಳು ಕುರಿತು ಜಾಗೃತಿ ಮೂಡಿಸಿದರು- ಇವರನ್ನು ಮರಾಠಿ ಪತ್ರಿಕೋದ್ಯಮದ ಪಿತಾಮಹ ಎಂದು ಕರೆಯಲಾಗುತ್ತದೆ. ಬಂಗಾಳದಲ್ಲಿ ಹರೀಶ್ಚಂದ್ರ ರಾಯ್ ಎಂಬುವವರು ಬಂಗದರ್ಶನ್ ಎಂಬ ಪತ್ರಿಕೆ ತಂದರು; ಗುಜರಾತಿಯಲ್ಲಿ ʼಬಾಂಬೆ ಸಮಾಚಾರ್ʼ ಪತ್ರಿಕೆ ಆರಂಭಿಸಿದ ಫರ್ದುನ್ಜಿ ಮರ್ಜ್ ಬಾನ್ ಎಂಬುವವರು ಸಹ ಪತ್ರಿಕೆಯ ಮೂಲಕ ಸಮಾಜ ಸುಧಾರಣೆಗೆ ಒತ್ತು ಕೊಟ್ಟರು. ಇನ್ನು ಸ್ವಾತಂತ್ರ್ಯ ಹೋರಾಟಗಾರರಲ್ಲಿ ಬಾಲಗಂಗಾಧರ ತಿಲಕ್ ಕೇಸರಿ ಮತ್ತು ಮರಾಟಾ ಪತ್ರಿಕೆ ಹೊರಡಿಸುತ್ತಿದ್ದರು, ಗಾಂದೀಜಿಯವರು ಆಫ್ರಿಕಾದಲ್ಲಿದ್ದಾಗಲೇ ಇಂಡಿಯನ್ ಒಪಿನಿಯನ್ ಪತ್ರಿಕೆ ನಡೆಸುತ್ತಿದ್ದರೆ, ಭಾರತಕ್ಕೆ ಬಂದ ಮೇಲೆ ಯಂಗ್ ಇಂಡಿಯಾ ಮತ್ತು ಹರಿಜನ್ ಎಂಬ ಪತ್ರಿಕೆಗಳನ್ನು ಹೊರತಂದರು,
ಸುಭಾಷ್ ಚಂದ್ರ ಬೋಸ್ ಅವರು ಸ್ವರಾಜ್ ಪತ್ರಿಕೆಯ ಸಂಪಾದಕರಾಗಿದ್ದರು, ಲಾಲಾ ಲಜಪತ್ ರಾಯ್ ಅವರು ದ ಟ್ರಿಬ್ಯೂನ್ ಎಂಬ ಇಂಗ್ಲಿಷ್ ಪತ್ರಿಕೆ ತಂದರು, ಜೊತೆಗೆ ವಂದೆ ಮಾತರಂ ಎಂಬ ಉರ್ದು ಪತ್ರಿಕೆಯನ್ನೂ ಪ್ರಕಟಿಸುತ್ತಿದ್ದರು- ಇವುಗಳ ಮೂಲಕ ಸ್ವದೇಶಿ ಚಿಂತನೆಯನ್ನು ಅಥವಾ ಸಿದ್ಧಾಂತವನ್ನು ಪ್ರಚುರಪಡಿಸಿದರು, ಹೋಂರೂಲ್ ಚಳವಳಿಯ ಮುಂದಾಳು ಅನಿಬೆಸೆಂಟ್ ಅವರು ನ್ಯೂ ಇಂಡಿಯಾ ಪತ್ರಿಕೆ ತಂದರು, ಇನ್ನು ಮದನ್ ಮೋಹನ್ ಮಾಳವೀಯ ಅವರು ಮೋತಿಲಾಲ್ ನೆಹರೂ ಜೊತೆ ಸೇರಿಕೊಂಡು ದ ಲೀಡರ್ ಎಂಬ ಪತ್ರಿಕೆ ತಂದರೆ, ನಂತರ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯನ್ನೂ ಪುನರುಜ್ಜೀವಗೊಳಿಸಿದರು. ಇನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ʼಅಸ್ಪೃಶ್ಯರಿಗೆ ಈ ದೇಶದಲ್ಲಿ ಪತ್ರಿಕೆಯಿಲ್ಲʼ ಎಂದು ಘೋಷಿಸಿ ಮೊದಲಿಗೆ ಶಾಹು ಮಹಾರಾಜರ ಬೆಂಬಲದಿಂದ ಮೂಕನಾಯಕ ಪತ್ರಿಕೆ (1920) ತಂದರು; ನಂತರ ಬಹಿಷ್ಕೃತ ಭಾರತ (1927), ನಂತರ ಸಮತಾ (1928), ನಂತರ ಜನತಾ (1930) ಹಾಗೂ ಪ್ರಬುದ್ಧ ಭಾರತ (1956) ಪತ್ರಿಕೆಗಳನ್ನು ಹೊರಡಿಸಿ ನಿರಂತರವಾಗಿ ಅವುಗಳಲ್ಲಿ ಬರೆಯುತ್ತಾ ತಾವೊಬ್ಬ ಧೀಮಂತ ಪತ್ರಕರ್ತ ಎಂಬುದನ್ನೂ ನಿರೂಪಿಸಿದ್ದರು.
ಇವರನ್ನೆಲ್ಲಾ ಹೊರಗಿಟ್ಟು ಕೇವಲ ಬ್ರಿಟಿಷರು ತಂದ ಬೆಂಗಾಲ್ ಗೆಜೆಟ್ ನಂತವುಗಳನ್ನು ಮಾತ್ರವೇ ಭಾರತದ ಪತ್ರಿಕೋದ್ಯಮದ ಇತಿಹಾಸ ಎಂದು ಹೇಳಲು ಬರುತ್ತದೆಯೇ? ಈ ದೇಶದ ಪತ್ರಿಕೋದ್ಯಮದ ಇತಿಹಾಸದ ಸೈದ್ಧಾಂತಿಕ ಅಡಿಪಾಯ ಅತ್ಯಂತ ಭದ್ರವಾಗಿತ್ತು ಎಂಬುದಕ್ಕೆ ಇವೆಲ್ಲಾ ಸಾಕ್ಷಿಯಲ್ಲವೆ? ಅಲ್ಲಿ ಎಡಬಿಡಂಗಿತನಕ್ಕೆ, ಸೊ ಕಾಲ್ಡ್ ತಟಸ್ಥತೆಗೆ ಯಾವುದೇ ಅವಕಾಶವಿರಲಿಲ್ಲ. ಈ ದೇಶವನ್ನು ಕಾಡುತ್ತಿದ್ದ ಸಾಮ್ರಾಜ್ಯಶಾಹಿ ಮತ್ತು ಬ್ರಾಹ್ಮಣಶಾಹಿ ಶಕ್ತಿಗಳನ್ನು ನೇರವಾಗಿ ಎದುರಿಸಿಯೇ ಭಾರತದ ಪತ್ರಿಕೋದ್ಯಮ ನಡೆದುಕೊಂಡುಬಂದಿದೆ ಎಂಬುದಕ್ಕೆ ಮೇಲಿನ ಉದಾಹರಣೆಗಳೇ ಸಾಕ್ಷಿ.
ಸ್ವಾತಂತ್ರ್ಯಾನಂತರದಲ್ಲಿ, ನಮ್ಮ ಕರ್ನಾಟಕದಲ್ಲೇ ನಾವು ಯಾರನ್ನೆಲ್ಲಾ ಇಂದು ಧೀಮಂತ ಪತ್ರಕರ್ತರೆಂದು ಪರಿಗಣಿಸಿದ್ದೇವೆಯೋ, ಯಾರನ್ನೆಲ್ಲಾ ಆದರ್ಶ ಎಂದು ನೋಡುತ್ತೇವೆಯೋ ಅವರೆಲ್ಲರೂ ಅತ್ಯಂತ ಸ್ಪಷ್ಟ ಮತ್ತು ದೃಢವಾದ ಸಿದ್ಧಾಂತಿಗಳೇ ಆಗಿದ್ದರು ಎಂಬುದನ್ನು ಮರೆಯಬಾರದು. ಕರ್ನಾಟಕದ ಪತ್ರಿಕೋದ್ಯಮಕ್ಕೇ ಹೊಸ ಮೆರಗು ತಂದು ಸಂಚಲನ ಮೂಡಿಸಿದ ಪಿ. ಲಂಕೇಶ್ ಅವರು ಕಡಿಮೆ ಸಿದ್ಧಾಂತಿಯೇ? ಸ್ಪಷ್ಟ ಸೈದ್ಧಾಂತಿಕ ತಳಹದಿಯ ಪತ್ರಿಕೋದ್ಯಮವೇ ಅವರ ಆಕ್ಟಿವಿಸಂ ಆಗಿತ್ತು ಮಾತ್ರವಲ್ಲ ಪತ್ರಿಕೋದ್ಯಮದ ಮೂಲಕ ಸಾಮಾಜಿಕ ರಾಜಕೀಯ ಬದಲಾವಣೆಯನ್ನೂ ಮಾಡಲು ಸಾಧ್ಯ ಎಂದು ಪಿ ಲಂಕೇಶ್ ಒಂದು ಮಾದರಿಯನ್ನೇ ಸೃಷ್ಟಿಸಿದರು. ಅದು ಸಾಧ್ಯವಾಗಿದ್ದೇ ಅವರ ಕಟಿಬದ್ಧ ಸೈದ್ಧಾಂತಿಕ ನಿಲುವಿನಿಂದ.
ನಾಡು ಕಂಡ ಮತ್ತೊಬ್ಬ ಧೀಮಂತ ಪತ್ರಕರ್ತ ವಡ್ಡರ್ಸೆ ರಘುರಾಮ್ ಶೆಟ್ಟಿ ಕೂಡಾ ಗಟ್ಟಿ ತಾತ್ವಿಕ ನಿಲುವುಗಳ ಮೂಲಕ ನಾಡಿನ ಜನರನ್ನು ತಲುಪಿದರು. ಇನ್ನು 70-80ರ ದಶಕಗಳಲ್ಲಿ ಭಾರತೀಯ ಪತ್ರಿಕೋದ್ಯಮದ ಧೀಮಂತ ಪರಂಪರೆಯಲ್ಲಿ ಸಾಗಿದ ಹಲವಾರು ಕನ್ನಡ ಪತ್ರಿಕೆಗಳಿದ್ದವು- ಸುದ್ದಿ ಸಂಗಾತಿ, ಶೂದ್ರ, ಪಂಚಮ, ಸಮುದಾಯ, ಸಂಕ್ರಮಣ ಮುಂತಾದ ನಿಯತಕಾಲಿಕೆಗಳು ಕನ್ನಡಿಗರ ಅರಿವಿನ ವಿಸ್ತರಣೆಯಲ್ಲಿ ಕಡಿಮೆ ಕೆಲಸ ಮಾಡಿವೆಯೇ? ಹಾಗಾದರೆ ಇವೆಲ್ಲವೂ ಖಚಿತ ಸೈದ್ದಾಂತಿಕತೆಯಿಂದಲೇ ನಡೆಯಲಿಲ್ಲವೇ?
ಇನ್ನು ಕಳೆದ ಕೆಲವು ದಶಕಗಳಲ್ಲಿ, ಅಗ್ನಿ, ಹಾಯ್ ಬೆಂಗಳೂರು, ಗೌರಿ ಲಂಕೇಶ್ ವಾರಪತ್ರಿಗಳೂ ತಮ್ಮ ಛಾಪು ಮೂಡಿಸಿದವು. ಪಿ ಲಂಕೇಶರ ಸ್ಪೂರ್ತಿಯಲ್ಲೇ ದೊಡ್ಡ ದೊಡ್ಡ ಭ್ರಷ್ಟಾಚಾರ ಪ್ರಕರಣಗಳನ್ನು ಅನಾವರಣಗೊಳಿಸಿದವು. ಇದ್ದುದರಲ್ಲಿ ರವಿ ಬೆಳಗರೆ ಎಡಬಿಡಂಗಿಯಾಗಿ ಕ್ರೈಂ, ಸೆಕ್ಸ್ ಗಳನ್ನ ಅಸ್ತ್ರವಾಗಿಸಿಕೊಂಡು ಟ್ಯಾಬ್ಲಾಯ್ಡ್ ಪತ್ರಿಕೋದ್ಯಮವನ್ನು ಹಳ್ಳ ಹಿಡಿಸಿದರೂ ಹಾಯ್ ಬೆಂಗಳೂರು ಸಹ ಅನೇಕ ಬ್ರಷ್ಟಾಚಾರ ಹಗರಣಗಳನ್ನು ಬಯಲು ಮಾಡಿದ್ದು ಸತ್ಯ.
ಯಾವನ್ನು ನಾವು ದಿನಪತ್ರಿಕೆಗಳು ಅಥವಾ ವೃತ್ತ ಪತ್ರಿಕೆಗಳು ಎನ್ನುತ್ತೇವೆಯೋ ಇವುಗಳ ಆದ್ಯತೆ ದಿನನಿತ್ಯದ ಸುದ್ದಿಗಳನ್ನು ಜನರಿಗೆ ತಲುಪುವುದು ಮಾತ್ರವಾಗಿದ್ದ ಕಾರಣ ಬಹಳ ಪತ್ರಿಕೆಗಳಲ್ಲಿ ಸೈದ್ಧಾಂತಿಕತೆ ದೊಡ್ಡ ವಿಷಯವಾಗಲಿಲ್ಲ. ಆದರೆ ಅಂತಹ ಕಡೆಗಳಲ್ಲಿ ಸಹ ದೊಡ್ಡ ದೊಡ್ಡ ಸಿದ್ಧಾಂತಿಗಳು ಹತ್ತಾರು ವರ್ಷಗಳ ಕಾಲ ಕೆಲಸ ಮಾಡಿದ್ದರು ಮತ್ತು ತಮ್ಮ ಖಚಿತ ಅಭಿಪ್ರಾಯಗಳನ್ನು ಆ ವೇದಿಕೆಗಳ ಮೂಲಕ ಜನರಿಗೆ ತಲುಪಿಸುತ್ತಾ ಬಂದಿದ್ದರೆಂಬುದನ್ನು ನಾವು ಮರೆಯಕೂಡದು.
ಈಗ ಹೇಳಿ, ನಮ್ಮ ಪತ್ರಿಕೋದ್ಯಮಕ್ಕೆ ಸಿದ್ಧಾಂತ ಬೇಡವೆ, ಪತ್ರಕರ್ತರಾಗಿರುವವರು ಸೈದ್ಧಾಂತಿಕ ಸ್ಪಷ್ಟತೆ ಹೊಂದಿರಬಾರದೆ? ಆಕ್ಟಿವಿಸ್ಟುಗಳು ಪತ್ರಕರ್ತರಾಗುವುದು ಅಪರಾಧವೆ? ಪತ್ರಿಕೋದ್ಯಮ ಆಕ್ಟಿವಿಸಂಗೆ ಪೂರಕವಾಗಿರಬಾರದೆ? ಇಂದು ಬ್ರಾಹ್ಮಣ್ಯದ ದಿಗ್ವಿಜಯ ಮತ್ತೊಮ್ಮೆ ನಿಜವಾಗುವ ಕರಾಳ ಛಾಯೆ ಇಡೀ ದೇಶವನ್ನು ಆವರಿಸಿಕೊಂಡಿರುವಾಗ, ಬಾಬಾಸಾಹೇಬರು ಎಚ್ಚರಿಸಿದ್ದ ಆ ʼಪ್ರತಿಕ್ರಾಂತಿʼ ತನ್ನ ಕಬಂಧಬಾಹುಗಳನ್ನು ಚಾಚಿಕೊಂಡ ಎಲ್ಲವನ್ನೂ ನೊಣೆಯುತ್ತಿರುವಾಗ, ಅಪರಾಧವೇ ಅಧಿಕಾರವಾಗಿ ದೇಶದ ಪ್ರಮುಖ ಸಂಸ್ಥೆಗಳೆಲ್ಲವನ್ನೂ ನುಂಗಿ ನೀರುಕುಡಿದು ತಮ್ಮ ಅಂಕೆಯಲ್ಲಿ ತಂದುಕೊಂಡು ಇಡೀ ದೇಶದ ಜನರಿಗೆ ಕರಾಳತೆ ದರ್ಶನ ಮಾಡುತ್ತಾ ಭ್ರಷ್ಟಾಚಾರದ ವ್ಯಾಖ್ಯಾನವನ್ನೇ ತಿರುಗುಮರುಗು ಮಾಡುತ್ತಿರುವಾಗ ಸೊ ಕಾಲ್ಡ್ ತಟಸ್ಥತೆಯ ಬದನೇಕಾಯಿಯನ್ನು ನೆಚ್ಚಿಕೊಳ್ಳದೇ ನಿರ್ಧಾರಿತ ಜನಾಂದೋಲನಗಳಿಗೆ ಪೂರಕವಾಗಿ ಪತ್ರಿಕೋದ್ಯಮ ಮತ್ತು ಪತ್ರಕರ್ತರಾದವರು ಜೊತೆಗೂಡುವುದು ಬೇಡವೇ?
‘ಬೇಡ’ ಎಂಬ ಅಭಿಪ್ರಾಯ ನಿಮ್ಮದಾಗಿದ್ದರೆ ನಿಮ್ಮ ಬಳಿ ಹೇಳಲು ನನಗೆ ಏನೂ ಉಳಿದಿಲ್ಲ. ನೀವು ನಿಮ್ಮದೇ ಸುಖಾಸನದಲ್ಲಿ ನೆಮ್ಮದಿಯಾಗಿ ಪವಡಿಸಬಹುದು, ನನಗೇನೂ ಅಭ್ಯಂತರವಿಲ್ಲ. (ಬರಹ- ಹರ್ಷಕುಮಾರ್ ಕುಗ್ವೆ, ಪತ್ರಕರ್ತ ಮತ್ತು ಆಕ್ಟಿವಿಸ್ಟ್)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಮಹಿಳಾ ದಿನಾಚರಣೆ | ಸಾಧನೆಯ ಸುಗಂಧ, ಪ್ರೇರಣೆಯ ಬೆಳಕು

- ಡಾ. ವೆಂಕಟೇಶ ಬಾಬು ಎಸ್, ಸಹ ಪ್ರಾಧ್ಯಾಪಕರು, ದಾವಣಗೆರೆ
ಇಂದು ಮಹಿಳಾ ದಿನಾಚರಣೆ ಪ್ರಯುಕ್ತ ಎಲ್ಲಾ ಮಹಿಳೆಯರಿಗೆ ಶುಭಾಷಯಗಳು
ಪ್ರತಿಯೊಂದು ಮಹಿಳೆ ತನ್ನ ಜೀವನದಲ್ಲಿ ವಿವಿಧ ಹಂತಗಳನ್ನು ದಾಟುತ್ತಾ, ಆತ್ಮವಿಶ್ವಾಸ, ಪ್ರೇರಣೆ ಹಾಗೂ ಶಕ್ತಿ ಹೊಂದುವ ಪ್ರತಿರೂಪವಾಗಿರುತ್ತಾರೆ. ವಿಶ್ವ ಮಹಿಳಾ ದಿನವನ್ನು ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ, ಇದು ಮಹಿಳೆಯರ ಹಕ್ಕುಗಳು, ಸಾಧನೆಗಳು ಮತ್ತು ಅವರ ಜಗತ್ತಿನ ಮೇಲೆ ಬೀರಿದ ಪ್ರಭಾವವನ್ನು ಗೌರವಿಸುವ ಒಂದು ಅದ್ಭುತ ಅವಕಾಶ.
ಮಹಿಳೆಯರ ಬದುಕು ಕೇವಲ ಕುಟುಂಬದ ಕೇಂದ್ರದಲ್ಲಿಯೇ ಸೀಮಿತವಾಗಿಲ್ಲ; ಅವರು ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲೂ ಮಹತ್ತರ ಪಾತ್ರ ವಹಿಸುತ್ತಿದ್ದಾರೆ. ಅಮ್ಮನಾಗಿ, ಪತ್ನಿಯಾಗಿ, ಮಗುವಾಗಿ, ಸಂಸ್ಥಾಪಕಿಯಾಗಿ, ನಾಯಕಿಯಾಗಿ, ವೈಜ್ಞಾನಿಕರಾಗಿ, ಕ್ರೀಡಾಪಟುವಾಗಿ – ಎಲ್ಲಾ ಪಾತ್ರಗಳಲ್ಲೂ ಮಹಿಳೆಯರು ತಮ್ಮ ಅದ್ಭುತ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ.
ಈಗ ಮಹಿಳೆಯರು ತಮ್ಮ ಇಚ್ಛಾಶಕ್ತಿಯೊಂದಿಗೆ ಮತ್ತು ಶಿಕ್ಷಣದ ಹಾದಿಯ ಮೂಲಕ ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಇಂದು ಕಲ್ಪನಾ ಚಾವ್ಲಾ, ಮೇರೀ ಕೋಮ್, ಸುಧಾ ಮುರ್ತಿ, ಕಿರಣ್ ಮಜುಂದಾರ್ ಶಾ, ಫಾಲ್ಗುಣಿ ನಾಯರ್ ಮುಂತಾದ ಅನೇಕ ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡುತ್ತಿದ್ದಾರೆ.
ಮಹಿಳಾ ದಿನಾಚರಣೆ – ಇತಿಹಾಸ ಮತ್ತು ಹಿನ್ನೆಲೆ
ಮಹಿಳಾ ದಿನಾಚರಣೆ (International Women’s Day – IWD) ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ. ಇದು ಮಹಿಳೆಯರ ಹಕ್ಕುಗಳು, ಸಶಕ್ತೀಕರಣ, ಸಾಧನೆಗಳು ಮತ್ತು ಲಿಂಗ ಸಮಾನತೆಯ ಪ್ರಗತಿ ಕುರಿತು ಜಾಗೃತಿಯನ್ನು ಮೂಡಿಸುವ ಮಹತ್ವದ ದಿನ.
ಮಹಿಳಾ ದಿನಾಚರಣೆಯ ಇತಿಹಾಸ
ಮಹಿಳಾ ದಿನಾಚರಣೆಯ ಮೂಲವು 1900ರ ದಶಕದ ಪ್ರಾರಂಭದಲ್ಲಿ ಕೈಗೆತ್ತಿಕೊಳ್ಳಲಾದ ಮಹಿಳಾ ಹಕ್ಕುಗಳ ಹೋರಾಟಕ್ಕೆ ಸರಿಹೊಂದಿದೆ. ಈ ದಿನವನ್ನು ಆಚರಿಸಲು ಪ್ರೇರಣೆ ನೀಡಿದ ಪ್ರಮುಖ ಘಟನೆಗಳು ಹೀಗಿವೆ:
1. 1908 – ಮಹಿಳಾ ಹಕ್ಕುಗಳ ಹೋರಾಟ:
ಅಮೇರಿಕಾದ ನ್ಯೂಯಾರ್ಕ್ ನಗರದಲ್ಲಿ ಸಾವಿರಾರು ಮಹಿಳಾ ಕಾರ್ಮಿಕರು ಕಡಿಮೆ ಕೆಲಸದ ಘಂಟೆಗಳು, ಉತ್ತಮ ಸಂಬಳ ಮತ್ತು ಮತದಾನದ ಹಕ್ಕುಕ್ಕಾಗಿ ಪ್ರತಿಭಟನೆ ನಡೆಸಿದರು.
2. 1909 – ಮೊದಲ ಮಹಿಳಾ ದಿನಾಚರಣೆ:
ಫೆಬ್ರವರಿ 28, 1909 ರಂದು ಅಮೆರಿಕಾದ ಸೋಶಲಿಸ್ಟ್ ಪಾರ್ಟಿ ದೇಶದಾದ್ಯಂತ ಮಹಿಳಾ ದಿನವನ್ನು ಆಚರಿಸಿತು.
3. 1910 – ಅಂತಾರಾಷ್ಟ್ರೀಯ ಹೋರಾಟ:
ಡೆನ್ಮಾರ್ಕ್‌ನ ಕೊಪನ್‌ಹೇಗನ್ ನಲ್ಲಿ ನಡೆದ ಸೋಶಲಿಸ್ಟ್ ವುಮೆನ್ಸ್ ಕಾನ್ಫರೆನ್ಸ್ ನಲ್ಲಿ ಜರ್ಮನಿಯ ಕ್ಲಾರಾ ಜೆಟ್ಕಿನ್ ಅವರು ಪ್ರಪಂಚದಾದ್ಯಂತ ಮಹಿಳಾ ದಿನ ಆಚರಿಸುವ ಸಲಹೆ ನೀಡಿದರು.
4. 1911 – ಪ್ರಥಮ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ:
ಮೊದಲ ಬಾರಿ ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್ ದೇಶಗಳಲ್ಲಿ ಮಹಿಳಾ ದಿನವನ್ನು ಮಾರ್ಚ್ 19ರಂದು ಆಚರಿಸಲಾಯಿತು.
5. 1913 – ಮಾರ್ಚ್ 8ಕ್ಕೆ ದಿನಾಂಕ ಬದಲಾವಣೆ:
1913ರಿಂದ ಮಾರ್ಚ್ 8ನೇ ತಾರೀಖನ್ನು ಅಧಿಕೃತವಾಗಿ ಮಹಿಳಾ ದಿನಾಚರಣೆಗೆ ಮೀಸಲಾಗಿಸಲಾಯಿತು.
6. 1975 – ವಿಶ್ವ ಮಹಿಳಾ ವರ್ಷ:
UNO1975ನೇ ವರ್ಷವನ್ನು “ಅಂತರಾಷ್ಟ್ರೀಯ ಮಹಿಳಾ ವರ್ಷ” ಎಂದು ಘೋಷಿಸಿ, ಮಹಿಳಾ ದಿನವನ್ನು ಅಧಿಕೃತವಾಗಿ ಅಂಗೀಕರಿಸಿತು
7. 2011 – 100ನೇ ವಾರ್ಷಿಕೋತ್ಸವ:
2011ರಲ್ಲಿ ಮಹಿಳಾ ದಿನಾಚರಣೆ ಶತಮಾನೋತ್ಸವವನ್ನು ಪೂರೈಸಿತು.
ಮಹಿಳಾ ದಿನಾಚರಣೆಯ ಉದ್ದೇಶ
ಮಹಿಳಾ ದಿನವನ್ನು ಆಚರಿಸುವ ಪ್ರಮುಖ ಉದ್ದೇಶಗಳು:
✔ ಮಹಿಳಾ ಸಮಾನತೆ ಮತ್ತು ಹಕ್ಕುಗಳನ್ನು ಬಲಪಡಿಸುವುದು.
✔ ಮಹಿಳೆಯರ ಸಾಧನೆಗಳನ್ನು ಗುರುತಿಸಿ, ಗೌರವ ನೀಡುವುದು.
✔ ಅವರ ಸಮಸ್ಯೆಗಳನ್ನು ಅರಿತು, ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು.
✔ ಮಹಿಳಾ ಶಕ್ತಿ ಮತ್ತು ಸ್ವಾವಲಂಬನೆಯ ಕುರಿತು ಜಾಗೃತಿಯನ್ನು ಹರಡುವುದು.
ಮಹಿಳಾ ದಿನಾಚರಣೆ – ಇಂದಿನ ಪ್ರಸ್ತುತತೆ
ಇಂದಿನ ಹೊತ್ತಿನಲ್ಲಿ, ಮಹಿಳೆಯರು ಶಿಕ್ಷಣ, ಉದ್ಯಮ, ರಾಜಕೀಯ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಸೇವಾ ಕ್ಷೇತ್ರ ಮತ್ತು ಉದ್ಯಮಶೀಲತೆ ಎಲ್ಲೆಲ್ಲಿಯೂ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ಮಹಿಳಾ ದಿನವು “Gender Equality – ಲಿಂಗ ಸಮಾನತೆ”, “Break the Bias – ಲಿಂಗತಾತ್ವಿಕ ಭೇದಭಾವವನ್ನು ಕಳಚುವುದು”, “DigitALL: Innovation and technology for gender equality” ಮುಂತಾದ ವಿಶೇಷ ಥೀಮ್‌ಗಳೊಂದಿಗೆ ಪ್ರತಿವರ್ಷ ಜಾಗೃತಿಯನ್ನು ಮೂಡಿಸುತ್ತದೆ.
ಮಹಿಳೆಯರು ಬದುಕಿನ ಉತ್ಸಾಹ
ಮಹಿಳೆಯರು ತಮ್ಮ ಕುಟುಂಬ, ಸಮಾಜ ಮತ್ತು ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರಲ್ಲಿರುವ ಹೃದಯಸ್ಪರ್ಶಿ ಭಾವನೆ, ತ್ಯಾಗ, ಶ್ರಮ ಹಾಗೂ ಪ್ರೀತಿ ಅವರ ಬದುಕಿನ ಹಾದಿಯನ್ನು ಮಾದರಿಯಾಗಿ ಮಾಡುತ್ತದೆ. ಶಿಕ್ಷಣ, ಉದ್ಯೋಗ, ರಾಜಕೀಯ, ಕಲೆ, ಕ್ರೀಡೆ, ವಿಜ್ಞಾನ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ.
ಅನೇಕ ಮಹಿಳೆಯರು ಸಂಕಷ್ಟಗಳನ್ನು ಎದುರಿಸುತ್ತಾ, ಸಾಧನೆಗೆ ಹೊಸ ಪರಿಮಾಣ ನೀಡಿದ ಉದಾಹರಣೆಗಳಿವೆ. ಐದು ದಶಕಗಳ ಹಿಂದೆಯೂ ಮಹಿಳೆಯರು ಮನೆಯಲ್ಲಿ ಸೀಮಿತವಾಗಿದ್ದರೆ, ಇಂದು ಅವರು ಅಂತರಿಕ್ಷ ಯಾತ್ರೆ, ವ್ಯವಹಾರ ನಿರ್ವಹಣೆ, ಕಾನೂನು, ತಂತ್ರಜ್ಞಾನ, ಆಡಳಿತ ಮತ್ತು ರಾಜಕೀಯದಲ್ಲಿ ಮುಂಚೂಣಿಯಲ್ಲಿದ್ದಾರೆ.
ಸಾಧನೆಗಳ ಬೆಳಕು
1. ಶಿಕ್ಷಣ ಮತ್ತು ಸಶಕ್ತೀಕರಣ:
ಜಗತ್ತಿನ ಅನೇಕ ದೇಶಗಳಲ್ಲಿ ಈಗ ಮಹಿಳಿಯರಿಗೆ ಶಿಕ್ಷಣ ಹಕ್ಕುಗಳನ್ನು ಒದಗಿಸಲಾಗುತ್ತಿದೆ, ಇದರಿಂದ ಮಹಿಳೆಯರು ಸಮಾಜದ ಮುಖ್ಯಧಾರೆಯಲ್ಲಿರಲು ಸಾಧ್ಯವಾಗಿದೆ. ಭಾರತದಲ್ಲಿ ಸವಿತ್ರಿಬಾಯಿ ಫುಲೆ, ಇಂದಿರಾ ಗಾಂಧಿ, ಕಲ್ಪನಾ ಚಾವ್ಲಾ, ಮೇರೀ ಕೋಮ್ ಮುಂತಾದವರು ಮಹಿಳಾ ಶಿಕ್ಷಣ ಮತ್ತು ಸಶಕ್ತೀಕರಣದಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ.
2. ಉದ್ಯೋಗ ಹಾಗೂ ಉದ್ಯಮಶೀಲತೆ:
ಈಗ ಮಹಿಳೆಯರು ಉದ್ಯೋಗ ಮಾತ್ರವಲ್ಲದೆ, ಸ್ವಂತ ಉದ್ಯಮಗಳನ್ನು ನಿರ್ಮಿಸಿ ಉದ್ಯಮಶೀಲತೆ ತೋರಿಸುತ್ತಿದ್ದಾರೆ. ಫಾಲ್ಗುಣಿ ನಾಯರ್ (ನೈಕಾ), ಕಿರಣ್ ಮಜುಂದಾರ್ ಶಾ (ಬಯೋಕಾನ್), ವಂದನಾ ಲೂತರ (ಪೇಪರ್ ಶೈರಿ) ಮುಂತಾದವರು ಉದ್ಯಮ ವಲಯದಲ್ಲಿ ತಮ್ಮ ಅಚ್ಚಳಿಯದ ಗುರುತು ಮೂಡಿಸಿದ್ದಾರೆ.
3. ಕ್ರೀಡೆ ಮತ್ತು ಸಾಹಸ:
ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರು ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ. ಸೈನಾ ನೆಹ್ವಾಲ್, ಮೇರೀ ಕೋಮ್, ಪಿ.ವಿ. ಸಿಂಧು, ಮಿಥಾಲಿ ರಾಜ್ ಮುಂತಾದವರು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಮ್ಮೆ ಹೆಚ್ಚಿಸಿದ್ದಾರೆ.
4. ಸಮಾಜಸೇವೆ ಮತ್ತು ಪ್ರಭಾವ:
ಮಹಿಳೆಯರು ಕೇವಲ ತಮ್ಮ ವ್ಯಕ್ತಿಗತ ಜೀವನದಲ್ಲಷ್ಟೇ ಅಲ್ಲದೆ, ಸಮಾಜಸೇವೆಯಲ್ಲಿ ಕೂಡ ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಮದರ್ ತೆರೆಸಾ, ಸುಧಾ ಮುರ್ತಿ ಮುಂತಾದವರು ತಮ್ಮ ಸಮಾಜಮುಖಿ ಕಾರ್ಯಗಳಿಂದ ಲಕ್ಷಾಂತರ ಜನರಿಗೆ ಪ್ರೇರಣೆ ನೀಡಿದ್ದಾರೆ.
ಸಮಾಜದ ಹೊಣೆಗಾರಿಕೆ – ಮಹಿಳಾ ಸಮಾನತೆ ಮತ್ತು ಗೌರವ
ಮಹಿಳೆಯರನ್ನು ಗೌರವಿಸುವ, ಅವರ ಆತ್ಮವಿಶ್ವಾಸ ಹೆಚ್ಚಿಸುವ, ಅವರಿಗೆ ಸಮಾನ ಅವಕಾಶ ಒದಗಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮಹಿಳಾ ಸುರಕ್ಷತೆ, ಸಂವೇದನಾಶೀಲತೆ ಮತ್ತು ಗೌರವ ಹೊಂದಿದ ಸಮಾಜವನ್ನು ನಿರ್ಮಿಸುವುದು ಅನಿವಾರ್ಯ.
ನಮ್ಮ ಕರ್ತವ್ಯ – ಮಹಿಳಾ ಶಕ್ತಿಗೆ ಸಾಥ್
ಈ ಮಹಿಳಾ ದಿನಾಚರಣೆ ದಿನದಂದು ನಾವು ನಮ್ಮ ಜೀವನದಲ್ಲಿ ಶಕ್ತಿ, ಪ್ರೇರಣೆ, ಪ್ರೀತಿಯ ಬೆಳಕು ತುಂಬುವ ಮಹಿಳೆಯರಿಗೆ ಕೃತಜ್ಞತೆ ಸಲ್ಲಿಸೋಣ. ಅವರ ಸಾಧನೆಗಳನ್ನು ಗೌರವಿಸೋಣ ಮತ್ತು ಹೊಸ ತಲೆಮಾರಿನ ಮಹಿಳೆಯರಿಗೆ ಇನ್ನಷ್ಟು ಉತ್ಸಾಹ, ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸುವ ಮೂಲಕ ಅವರನ್ನು ಸಶಕ್ತಗೊಳಿಸೋಣ.
“ಮಹಿಳೆಯರ ಪ್ರಗತಿ – ರಾಷ್ಟ್ರದ ಪ್ರಗತಿ!”(ಲೇಖನ-ಡಾ. ವೆಂಕಟೇಶ ಬಾಬು ಎಸ್,ಸಹ ಪ್ರಾಧ್ಯಾಪಕರು, ದಾವಣಗೆರೆ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days ago
ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ, ಗಿಗ್, ಸಿನಿ ಹಾಗೂ ಮನೆಗೆಲಸ ಕಾರ್ಮಿಕರ ಕಲ್ಯಾಣಕ್ಕಾಗಿ ಅಧಿನಿಯಮ ಜಾರಿಗೆ ಕ್ರಮ : ಸಚಿವ ಸಂತೋಷ್ ಲಾಡ್
-
ಅಂಕಣ3 days ago
ಆತ್ಮಕತೆ | ಕೃಷ್ಣಪ್ಪನವರ ನಿಧನ : (09.06.1938 – 30.04.1997)
-
ದಿನದ ಸುದ್ದಿ5 days ago
500 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ತೆರೆಯಲು ಸರ್ಕಾರ ನಿರ್ಧಾರ
-
ದಿನದ ಸುದ್ದಿ4 days ago
ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 9360 ಪ್ರಕರಣ ಇತ್ಯರ್ಥ ; ವಿಚ್ಚೇದನ ಕೋರಿ ಸಲ್ಲಿಸಿದ್ದ 23 ಜೋಡಿ ವೈವಾಹಿಕ ಜೀವನ ಸುಖಾಂತ್ಯ
-
ದಿನದ ಸುದ್ದಿ6 days ago
ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರೆಣೆ
-
ದಿನದ ಸುದ್ದಿ5 days ago
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಕೊರತೆ : ಕರವೇ ಮನವಿ
-
ದಿನದ ಸುದ್ದಿ6 days ago
ಪಿಹೆಚ್‍ಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿವೇತನ : ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ದತ್ತಾಂಶ ನಿರ್ವಾಹಕ ಗ್ರೇಡ್ ಎ ಪರೀಕ್ಷೆಗೆ ಅರ್ಜಿ ಆಹ್ವಾನ