Connect with us

ದಿನದ ಸುದ್ದಿ

ಜಾಗೃತಿಯಿಂದ ಮಾತ್ರ ಎಚ್.ಐ.ವಿ ಹಾಗೂ ಏಡ್ಸ್ ನಿಯಂತ್ರಣ ಸಾಧ್ಯ: ಡಾ.ಕೆ.ಎಚ್.ಗಂಗಾಧರ್

Published

on

ಸುದ್ದಿದಿನ, ದಾವಣಗೆರೆ : ಯುವಜನತೆ ಎಚ್.ಐ.ವಿ ( HIV ) ಹಾಗೂ ಏಡ್ಸ್ ( AIDS ) ರೋಗಕ್ಕೆ ಬಲಿಯಾಗುತ್ತಿದ್ದು, ಜಾಗೃತಿಯಿಂದ ಮಾತ್ರ ಈ ಮಾರಕ ಖಾಯಿಲೆಯನ್ನು ನಿಯಂತ್ರಿಸಬಹುಸು ಎಂದು ದಾವಣಗೆರೆ ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ಡಾ||ಕೆ.ಎಚ್.ಗಂಗಾಧರ್ ಅವರು ತಿಳಿಸಿದರು.

ನಗರದ ಎ.ವಿ.ಕಮಲಮ್ಮ ಪದವಿಪೂರ್ವ ಕಾಲೇಜಿನಲ್ಲಿ ವಿ.ಬಿ.ಪಿ.ಫೌಂಡೇಶನ್, ಏಕಾಂತಗಿರಿ ಟ್ರಸ್ಟ್ ಹಾಗೂ ಮಹಿಳಾ ಮತ್ತು‌ ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ‘ವಿಶ್ವ ಏಡ್ಸ್ ದಿನ’ ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ||ಕೆ.ಎಚ್.ಗಂಗಾಧರ್ ಅವರು ಏಡ್ಸ್ ಹರಡುವ ವಿಧಾನದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ಪ್ರಸ್ತಾವಿಕ ಮಾತುಗಳನ್ನಾಡಿದ ಏಕಾಂತಗಿರಿ ಟ್ರಸ್ಟ್ ಕಾರ್ಯದರ್ಶಿ ಡಾ.ಕೆ.ಎ.ಓಬಳೇಶ್ ಅವರು ಕಾಲೇಜು ಹಂತದ ವಿದ್ಯಾರ್ಥಿಗಳಿಗೆ ಎಚ್.ಐ.ವಿ ಬಗ್ಗೆ ಅರಿವಿನ ಕೊರತೆಯ ಕಾರಣದಿಂದ ಹೆಚ್ಚು ಯುವಜನತೆ ಏಡ್ಸ್ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಆದ ಕಾರಣ ವಿ.ಬಿ.ಪಿ ಫೌಂಡೇಶನ್ ಹಾಗೂ ಏಕಾಂತಗಿರಿ ಟ್ರಸ್ಟ್ ಸಹಯೋಗದಲ್ಲಿ ಹಲವಾರು ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂಬುದಾಗಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ರಾಮನಾಯ್ಕ್ ಅವರು ಮಾತನಾಡಿ, ಬಾಲ್ಯ ವಿವಾಹದಿಂದ ಹೆಣ್ಣುಮಕ್ಕಳು ಎದುರಿಸುತ್ತಿರುವ ಬಿಕ್ಕಟ್ಟುಗಳು ಹಾಗೂ ಕಾನೂನು ಕ್ರಮಗಳ ಬಗ್ಗೆ ಅರಿವು ಮೂಡಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಶ್ರೀಮತಿ ಪ್ರಿಯದರ್ಶಿನಿ ಇವರು ಮಾತನಾಡಿ, ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ಸಂವಿಧಾನಿಕ ಅವಕಾಶಗಳ ಬಗ್ಗೆ ಮಾಹಿತಿಯನ್ನು ವ್ಯಕ್ತಪಡಿಸಿದರು.
ವಿ.ಬಿ.ಪಿ.ಫೌಂಡೇಶನ್ ಸಂಸ್ಥಾಪಕರಾದ ಶಿವಕುಮಾರ್ ಮೇಗಳಮನೆಯವರು ಮಾತನಾಡಿ ಸಾಮಾಜಿಕವಾಗಿ ಎಚ್.ಐ.ವಿ‌ ಹಾಗೂ ಏಡ್ಸ್ ಪೀಡಿತರು ಅನುಭವಿಸುತ್ತಿರುವ ಸಂಕಷ್ಟಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ಶಂಭು ಹೊಸಮನಿಯವರು ವಿಶ್ವ ಏಡ್ಸ್ ದಿನದ ಭಾಗವಾಗಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕಾಲೇಜಿನ‌ ಪ್ರಾಂಶುಪಾಲರಾದ ಶ್ರೀ ಎ.ಬಿ.ಶಿವನಗೌಡ ಅವರು ಮಾತನಾಡಿ ಎಚ್.ಐ.ವಿ ಅತ್ಯಂತ ಮಾರಕ ಖಾಯಿಲೆಯಾಗಿದ್ದು, ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಇಂತಹ ಜಾಗೃತಿ ಕಾರ್ಯಕ್ರಮಗಳು ಶಾಲಾ ಕಾಲೇಜುಗಳಿಗೆ ಮಾತ್ರ ಸೀಮಿತವಾಗದೆ ಸಮಾಜದ ಪ್ರತಿಯೊಬ್ಬ ಪ್ರಜೆಗಳಿಗೂ ತಲುಪುವಂತೆ ಕಾರ್ಯಪ್ರವೃತ್ತವಾಗಲಿ ಎಂಬುದಾಗಿ ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕರಾದ ಡಾ.ಗೀತಾ ಎಂ.ಸಿ, ಮಂಜುಳಾ ಟಿ, ರವಿ ಬಣಕಾರ್ ಭಾಗಿಯಾಗಿದ್ದರು. ಕಾಲೇಜಿನ ವಿದ್ಯಾರ್ಥಿನಿಯರಾದ ಚಂಪಕ ಕೆ.ವಿ ಸ್ವಾಗತಿಸಿದರು, ಪೂಜಾ ಕೆ.ಎನ್ ವಂದಿಸಿದರು, ಆರತಿ ಕೆ.ಎಸ್. ಹಾಗೂ ಮಾಲಾ ಎಂ. ಎಸ್. ನಿರೂಪಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಾಳೆ ಹರಿಹರ ರೈಲು ನಿಲ್ದಾಣದಲ್ಲಿ ವಾರ್ಷಿಕ ವಿಪತ್ತು ನಿರ್ವಹಣೆ ಅಣುಕು ಅಭ್ಯಾಸ

Published

on

ಸುದ್ದಿದಿನ, ಹರಿಹರ :ಇದೇ 14 ರಂದು ಗುರುವಾರ (ನಾಳೆ) ಹರಿಹರ ರೈಲು ನಿಲ್ದಾಣದಲ್ಲಿ ವಾರ್ಷಿಕ ವಿಪತ್ತು ನಿರ್ವಹಣೆಯ ಅಣುಕು ಅಭ್ಯಾಸವನ್ನು ಬೆಳಗ್ಗೆ 8:30 ಕ್ಕೆ ನಡೆಸಲಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್‌ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳ ಸಮನ್ವಯದಲ್ಲಿ ಅಣಕು ಅಭ್ಯಾಸವು ನಡೆಸಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಟ ದಿಲೀಪ್ ರಾಜ್ ಆ ಒಂದು ತಪ್ಪು ಪ್ರಾಣಕ್ಕೆ ಮುಳುವಾಯ್ತು

Published

on

ಸುದ್ದಿದಿನಡೆಸ್ಕ್:ಕನ್ನಡ ಚಿತ್ರರಂಗದ ಖ್ಯಾತ ನಟ ದಿಲೀಪ್ ರಾಜ್ (47) ಅವರ ಅಕಾಲಿಕ ನಿಧನವು ಇಡೀ ಸ್ಯಾಂಡಲ್‌ವುಡ್ ಅನ್ನು ದಿಗ್ಭ್ರಮೆಗೊಳಿಸಿದೆ. ಕೇವಲ 47 ವರ್ಷ ವಯಸ್ಸಿನ ಈ ಪ್ರತಿಭಾನ್ವಿತ ಕಲಾವಿದ ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಆದರೆ ಅವರ ಈ ಸಾವಿನ ಹಿಂದೆ ಒಂದು ಬೇಸರದ ಸಂಗತಿಯೂ ಅಡಗಿದೆ, ಅದೇನೆಂದರೆ ಅವರ ಆರೋಗ್ಯದ ಕುರಿತು ತೋರಿದ ಒಂದು ನಿರ್ಲಕ್ಷ್ಯ!

ನಟ ನಿರ್ಮಾಪಕ ದಿಲೀಪ್ ರಾಜ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದು, ಇಡೀ ಸ್ಯಾಂಡಲ್‌ವುಡ್ ದಿಗ್ಭ್ರಮೆಗೊಂಡಿದೆ. ಕೆಲವು ದಿನಗಳ ಹಿಂದೆ ಗೋವಾ ಪ್ರವಾಸದಲ್ಲಿದ್ದಾಗಲೇ ಅವರಿಗೆ ಆಗಾಗ ಎದೆನೋವು ಕಾಣಿಸಿಕೊಂಡಿತ್ತು, ಆದರೆ ಪ್ರವಾಸದ ಖುಷಿಯಲ್ಲಿದ್ದ ಅವರು ಅದನ್ನ ಗಂಭೀರವಾಗಿ ಪರಿಗಣಿಸಿರಲಿಲ್ಲ.. ಬೆಂಗಳೂರಿಗೆ ಮರಳಿದ ನಂತರ ಇಂದು ವೈದ್ಯಕೀಯ ತಪಾಸಣೆಗೆ ಅಪಾಯಿಂಟ್‌ಮೆಂಟ್ ಕೂಡ ಫಿಕ್ಸ್ ಆಗಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು;

ತಪಾಸಣೆಗೆ ಹೋಗುವ ಮುನ್ನವೇ ರಾತ್ರಿ ತೀವ್ರ ಎದೆನೋವು ಕಾಣಿಸಿಕೊಂಡು ಕುಮಾರಸ್ವಾಮಿ ಲೇಔಟ್‌ನ ಅಪೋಲೋ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.ನೋವು ಕಾಣಿಸಿಕೊಂಡ ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದರೆ ಇಂದು ಪರಿಸ್ಥಿತಿ ಬೇರೆಯೇ ಇರುತ್ತಿತ್ತು ಎಂದು ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.
ನಟ ದಿಲೀಪ್ ರಾಜ್ ಅವರು ಕೆಲವೇ ದಿನಗಳ ಹಿಂದೆ ಗೋವಾಗೆ ಪ್ರವಾಸ ತೆರಳಿದ್ದರು.

ಅಲ್ಲಿ ಗೆಳೆಯರೊಂದಿಗೆ ಕಾಲ ಕಳೆಯುವಾಗಲೇ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು ಎನ್ನಲಾಗುತ್ತಿದೆ. ಅಂದೇ ಹೃದಯವು ಅಪಾಯದ ಮುನ್ಸೂಚನೆ ನೀಡಿದ್ದರೂ, ದಿಲೀಪ್ ಅವರು ಅದನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ತೋರಿದ್ದರು. ಗೋವಾ ಟ್ರಿಪ್‌ನಲ್ಲಿದ್ದಾಗಲೇ ಆಗಾಗ ನೋವು ಕಾಣಿಸಿಕೊಂಡರೂ, ಅವರು ಅದನ್ನು ಕೇರ್ ಮಾಡಿರಲಿಲ್ಲ.

ಬೆಂಗಳೂರಿಗೆ ಮರಳಿದ ನಂತರ ಅವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ನಿರ್ಧರಿಸಿದ್ದರು. ವಿಪರ್ಯಾಸವೆಂದರೆ, ಇಂದು ಅವರು ಆಸ್ಪತ್ರೆಗೆ ತೆರಳಿ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕಿತ್ತು ಮತ್ತು ಅದಕ್ಕಾಗಿ ವೈದ್ಯರ ಅಪಾಯಿಂಟ್‌ಮೆಂಟ್ ಕೂಡ ಫಿಕ್ಸ್ ಆಗಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು. ನಿನ್ನೆ ರಾತ್ರಿ ಕೂಡ ಧಾರಾವಾಹಿ ಕಲಾವಿದರ ಜೊತೆ ಫೋನ್‌ನಲ್ಲಿ ಆತ್ಮೀಯವಾಗಿ ಮಾತನಾಡಿದ್ದ ನಟನಿಗೆ, ಮಧ್ಯರಾತ್ರಿ ತೀವ್ರವಾದ ಎದೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ತೆರಳುವ ಮುನ್ನವೇ ಅವರು ಏಕಾಏಕಿ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಾವಿನಲ್ಲೂ ಒಂದಾದ ಪ್ರೇಮಿಗಳು: ಪ್ರೇಮಿಯ ಪಕ್ಕದಲ್ಲೇ ಪ್ರೇಯಸಿಯ ಅಂತ್ಯಸಂಸ್ಕಾರ!

Published

on

ಸುದ್ದಿದಿನ,ಕುಂಬಳೆ: ಪ್ರೀತಿ ಎನ್ನುವುದು ಸಾವಿನ ನಂತರವೂ ಶಾಶ್ವತ ಎಂಬುದಕ್ಕೆ ಕೇರಳದ ಕಾಸರಗೋಡಿನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ನಿಶ್ಚಿತಾರ್ಥವಾಗಿದ್ದ ಯುವಕ ಮೃತಪಟ್ಟ ಬೆನ್ನಲ್ಲೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿಯ ಅಂತ್ಯಸಂಸ್ಕಾರವನ್ನು ಆಕೆಯ ಇಚ್ಛೆಯಂತೆ ಯುವಕನ ಸಮಾಧಿಯ ಪಕ್ಕದಲ್ಲೇ ನೆರವೇರಿಸಲಾಗಿದೆ.

ನಡೆದಿದ್ದೇನು?

ಕಿದೂರು ಕುಂಟಂಗೇರಡ್ಕದ ಪ್ರಫುಲ್ಲ (26) ಮತ್ತು ತಮಿಳುನಾಡು ನಿವಾಸಿಯಾದ ಬ್ಯಾಂಕ್ ನೌಕರ ಮಣಿ ಎಂಬವರಿಗೆ ನಾಲ್ಕು ತಿಂಗಳ ಹಿಂದೆ ಅದ್ಧೂರಿಯಾಗಿ ಮದುವೆ ನಿಶ್ಚಿತಾರ್ಥ ನಡೆದಿತ್ತು. ಇನ್ನೇನು ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಎನ್ನುವಷ್ಟರಲ್ಲಿ, ಒಂದು ತಿಂಗಳ ಹಿಂದೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಮಣಿ ಮೃತಪಟ್ಟಿದ್ದರು.

ಡೆತ್ ನೋಟ್‌ನಲ್ಲಿತ್ತು ಕೊನೆಯ ಆಸೆ

ತನ್ನ ಭಾವಿ ಪತಿಯ ಅಗಲಿಕೆಯಿಂದ ತೀವ್ರವಾಗಿ ನೊಂದಿದ್ದ ಪ್ರಫುಲ್ಲ, ಕಳೆದ ಭಾನುವಾರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿಗೂ ಮುನ್ನ ಆಕೆ ಬರೆದಿದ್ದ ಡೆತ್ ನೋಟ್ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ. “ನನ್ನ ಮೃತದೇಹವನ್ನು ಮಣಿಯ ಸಮಾಧಿಯ ಸಮೀಪದಲ್ಲೇ ಅಂತ್ಯಸಂಸ್ಕಾರ ಮಾಡಬೇಕು” ಎಂದು ಆಕೆ ತನ್ನ ಕೊನೆಯ ಆಸೆಯನ್ನು ಬರೆದಿಟ್ಟಿದ್ದರು.

ತಮಿಳುನಾಡಿನಲ್ಲಿ ಅಂತ್ಯಕ್ರಿಯೆ

ಯುವತಿಯ ಆಸೆಯಂತೆ ಉಭಯ ಕುಟುಂಬದವರು ಮಾತುಕತೆ ನಡೆಸಿದರು. ಅದರಂತೆ ನಿನ್ನೆ ಕಾಸರಗೋಡಿನಿಂದ ಪ್ರಫುಲ್ಲರ ಮೃತದೇಹವನ್ನು ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ವಳ್ಳಿಯೂರು ಎಂಬಲ್ಲಿಗೆ ಕೊಂಡೊಯ್ಯಲಾಯಿತು. ಅಲ್ಲಿ ಮಣಿಯ ಸಮಾಧಿಯ ಪಕ್ಕದಲ್ಲೇ ಪ್ರಫುಲ್ಲರ ಅಂತ್ಯಸಂಸ್ಕಾರವನ್ನು ನೆರವೇರಿಸುವ ಮೂಲಕ ಪ್ರೇಮಿಗಳಿಬ್ಬರನ್ನು ಸಾವಿನಲ್ಲೂ ಒಂದಾಗಿಸಲಾಯಿತು.

ಅಂತ್ಯಸಂಸ್ಕಾರದ ವೇಳೆ ಎರಡೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದು, ಮರುಗುವ ಪ್ರೇಮಕಥೆಗೆ ಕಂಬನಿಯ ವಿದಾಯ ಹೇಳಿದರು. ಈ ವಿಡಿಯೋ ಮತ್ತು ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಜೋಡಿಯ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending