Connect with us

ಲೈಫ್ ಸ್ಟೈಲ್

ನಮ್ಮನೆಗೂ ಕರೆಂಟ್ ಬಂತು..!

Published

on

  • ಡಾ.ಎನ್.ಬಿ.ಶ್ರೀಧರ

ಭಾಗ -01

“ಅಯ್ಯಯ್ಯೋ.ಕರೆಂಟಾ…ನಮ್ ಮನೇಗಂತೂ ಬ್ಯಾಡವೇ ಬ್ಯಾಡ… ಸ್ವಿಚ್ ಆಫ಼್ ಮಾಡದೇ ಮುಟ್ಟಿದ್ದ್ರೆ …ಸರ್ …ಅಂತ ಮೈಯಲ್ಲಿನ ರಕ್ತ ಎಲ್ಲಾ ಎಳ್ಕಳತ್ತೆ..ಮೈಯಲ್ಲಿನ ನರಗಳಲ್ಲಿ ಹರಿದು ಶಕ್ತಿಯನ್ನೆಲ್ಲಾ ಹಿಂಡಿ ಹಿಪ್ಪೆ ಮಾಡುತ್ತೆ.. ಪಂಪಿನಿಂದ ಎತ್ತಿದ ನೀರಲ್ಲಿ ಸತ್ವಾನೇ ಇರಲ್ಲ.. ಬರಿ ಸಪ್ಪೆ…. ಅದರ ಸಹವಾಸ ಸಾಕು”… ಇದು ವಿದ್ಯುಚ್ಚಕ್ತಿ (ಇನ್ಮುಂದೆ ಕರೆಂಟು) ಬಗ್ಗೆ 1985 ರ ಕಾಲದಲ್ಲಿನ ಹಿರಿಯರೊಬ್ಬರ ಅಂಬೋಣ.

ಉತ್ತರ ಕನ್ನಡದ ಅನೇಕ ಹಳ್ಳಿಗಳಂತೇ ನಮ್ಮೂರಿಗೂ ಸಹ 1985 ರವರೆಗೂ ಸಹ ಕರೆಂಟೇ ಇರಲಿಲ್ಲ. ನಾವೆಲ್ಲಾ ಗದ್ದೆಗಳಲ್ಲಿ ಕಾಡು ಹಂದಿಗಳು ಬಂದು ಬೆಳೆ ಹಾಳು ಮಾಡದಂತೆ ಕಾಯಲು ಗದ್ದೆ ತೋಟಗಳ ಮಧ್ಯೆ ಮಾಳಗಳಲ್ಲಿ ಲಾಟೀನು ದೀಪದಲ್ಲಿ ಓದಿದ್ದೇ ಜಾಸ್ತಿ. ಈ ಮಾಳ ಎಂದರೇನು ಎಂಬುದು ಮಲೆನಾಡಿಗರನ್ನು ಬಿಟ್ಟು ಬೇರೆ ಕೆಲವರಿಗೆ ಅರ್ಥವಾಗಲಿಕ್ಕಿಲ್ಲ.

ಗದ್ದೆಯನ್ನು ಕಾಡು ಹಂದಿಗಳಿಂದ ಕಾಯಲು ಅವುಗಳಿಗೆ ಮನುಷ್ಯರ ಭಯ ಇರಲಿ ಎಂದು ರಚಿಸಿದ ಸುಮಾರು 10 ಅಡಿ ಎತ್ತರದಲ್ಲಿ, ಹಾವು, ಕಪ್ಪೆ, ಇಲಿಗಳ ಕಾಟದಿಂದ ರಕ್ಷಣೆ ಪಡೆಯಲು ಮರದ ಕಂಬಗಳನ್ನು ಉಪಯೋಗಿಸಿ, ಅಡಿಕೆ ಸೋಗೆಗಳನ್ನು ಹಾಕಿ ಮಳೆಗೆ ಸೋರದಂತೆ ಕಟ್ಟಿದ ಆಕಾಶ ಚಪ್ಪರ ಎನ್ನಬಹುದೇನೋ.

ರಾತ್ರಿ ಊಟವಾದ ಮೇಲೆ ಸುರಿಯುತ್ತಿರುವ ಮಳೆಯಲ್ಲಿ ಗದ್ದೆ ಬದುಗಳಲ್ಲಿ ನಡೆದು ಹೋಗಿ ಲಾಟೀನುಗಳ ಸಹಾಯದಿಂದ ತಡರಾತ್ರಿಯವರೆಗೆ ಓದುವುದು ನನಗೆ ರೂಢಿಯಾಗಿತ್ತು. ಕೆಲವೊಮ್ಮೆ ಈ ಮಾಳದ ಮಾಡಿನಲ್ಲಿ ನಮ್ಮ ಹಾಗೇ ಬೆಚ್ಚನೆ ವಾಸಸ್ಥಳಕ್ಕಾಗಿ ಅಥವಾ ಅವುಗಳ ಅಹಾರವಾದ ಇಲಿ ಬೇಟೆಗಾಗಿ ಬಂದು ಕೆಲವು ನಾಗಸ್ನೇಹಿತರು ತಲೆ ಹೊರಹಾಕಿ, ಸೀಳಿದ ನಾಲಿಗೆಯನ್ನು ಲೊಚ ಲೊಚನೇ ಚಮಕಿಸಿ ನಮ್ಮ ಜೀವ ಬಾಯಿಗೆ ಬರುವ ಹಾಗೇ ಮಾಡಿದ್ದಿದೆ.

ಲಾಟೀನಿನ ಬೆಳಕಿಗೆ ಆಕರ್ಷಿತವಾದ ವಿವಿಧ ಬಣ್ಣದ ಮಿಡತೆಗಳನ್ನೋ ಅಥವಾ ಕಾಡು ಹುಳಗಳನ್ನೋ ತಿನ್ನಲೆಂದೋ ಬಂದ ಅಸಹ್ಯ ರೂಪದ ಹಲ್ಲಿಗಳು ಪಿಷ್ಟಿ ಹಾಕಿ ಹಾಸಿಕೆಯನ್ನೆಲ್ಲಾ ಅಸಹ್ಯ ಮಾಡುತ್ತಿದ್ದವು. ಒಮ್ಮೊಮ್ಮೆ ತಲೆಯ ಮೇಲೆಯೇ ಬಿದ್ದು ಬಗ್ಗೋಣ ಪಂಚಾಂಗದ ಹಲ್ಲಿ ಶಕುನದ “ತಲೆಯ ಮೇಲೆ ಬಿದ್ದರೆ ಮರಣ” ಬೆನ್ನಿನ ಮೇಲೆ ಬಿದ್ದರೆ ಅಪಘಾತ” ಎಂಬಿತ್ಯಾದಿಗಳನ್ನು ಅಪರಾತ್ರಿಯಲ್ಲಿ ನೆನಪಿಸಿದ್ದಿದೆ.

ಹಾಳಾಗಿ ಹೋಗಲಿ.. ಅವುಗಳು ಪುತ ಪುತನೇ ಉದುರಿಸುವ ಬುಳಿ ಕಂದು ಮಿಶ್ರಿತ ಇಕ್ಕೆಗಳು ಪುಸ್ತಕದ ಮೇಲೆ ಬಿದ್ದು ಪುಸ್ತಕದ ಅಂದ ಕೆಡಿಸುವುದಲ್ಲದೇ, ಅವುಗಳ ಗಬ್ಬು ಅಸಹ್ಯ ವಾಸನೆಯಿಂದ ವ್ಯಾಕ್.. ಎನಿಸುತ್ತಿದ್ದವು.

ಕುಂಬ್ಳಜ್ಜಿ ಎಂದು ಹಳ್ಳಿ ಭಾಷೆಯಲ್ಲಿ ಕರೆಯುವ ವಾಸನಾಯುಕ್ತ ಜೀರುಂಡೆ ಲಾಟಿನಿನ್ ಬೆಳಕಿಗೆ ಆಕರ್ಷಿತವಾಗಿ ಮೈತಾಕಿದಾಗ ದಿನವಾದರೂ ಉಳಿಯುವ ಅದರ ಅಸಹ್ಯ ಗಬ್ಬು ವಾಸನೆ, ಸಂಜೆಯಾದೊಣೆ ರೆಂವ್, ರೆಂವ್ ಅಂತ ಶಬ್ಧ ಮಾಡಿ ತಲೆ ಚಿಟ್ಟು ಹಿಡಿಸುವ ಹುಳ ಹುಪ್ಪಟೆಗಳು, ಇವುಗಳನ್ನು ತಿಂದು ಹೊಟ್ಟೆ ಡುಮ್ಮಣ್ಣನಾಗಲು ಬರುವ ಕಪ್ಪೆಗಳು, ಈ ಕಪ್ಪೆಗಳನ್ನು ಬೆನ್ನಟ್ಟಿ ಬರುವ ನಾನಾ ತರದ ಹಾವುಗಳು, ಈ ಹಾವುಗಳನ್ನು ಹೇಗಾದರೂ ಹೊಂಚುಹಾಕಿ ಹಿಡಿದು ಮುಕ್ಕಲು ಕಾದು ಕುಳಿತ ಗಿಡುಗಗಳು ಪರಿಸರದ ಆಹಾರ ಸರಪಳಿಗೆ ಅತ್ಯುತ್ತಮ ಜೀವಂತ ನೈಜ ಉದಾಹರಣೆಗಳಾಗಿದ್ದವು.

ಈ ಮಾಳವಿದ್ದ ಮೇಲೆ ಅದಕ್ಕೊಂದು ಜೋಡಿ ಜೀವವಾಗಿ ಒಂದು ಹೊಡಸಲು ಇರಲೇ ಬೇಕು. ಹೊಡಸಲು ಅಂದರೆ ಮಳೆಗಾಲದಲ್ಲಿ ಕಂಬಳಿಗಳನ್ನು ಒಣಹಾಕಲು ಬಳಸುವ ನೇತಾಡುವ ಮಂಚದಂತಿರುವ ಆಕೃತಿ. ಮಳೆಯ ರಭಸಕ್ಕೆ ಎಲ್ಲರೂ ಈ ಹೊಡಸಲಿನ ಸುತ್ತಮುತ್ತ ಗಟ್ಟಿಯಾಗಿ ತಳವೂರಿ ಹಲಸಿನ ಬೀಜ, ಗೇರು ಬೀಜಗಳನ್ನು ಅಡಿಯ ಬೆಂಕಿಯ ಕೆಂಡದಲ್ಲಿ ಬೇಯಿಸಿ ತಿನ್ನುತ್ತಾ ಡರ್ರ್ ಎಂದು ತೇಗಿ ಹಳೆಯ ರೈಲು ಇಂಜಿನ್ನಿನಂತೆ “ಟುಸ್.. ಟುಸ್ ಡ್ರುಸ್.. ಎಂದು ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಯಥಾನುಶಕ್ತಿ ವಾಯುಪ್ರಕೋಪಗಳನ್ನು ನೀಗಿಸಿಕೊಳ್ಳುವುದು ಮಲೆನಾಡಿಗರಿಗೆ ಸಾಮಾನ್ಯ.

ಹಲಸಿನ ಬೀಜಗಳು ಒಮ್ಮೊಮ್ಮೆ ಸ್ವಲ್ಪ ಹಸಿಯಾಗಿದ್ದರೆ “ಡಂ” ಎಂದು ಸಶಬ್ಧವಾಗಿ ಸಿಡಿದು ಕೆಂಡದುಂಡೆಗಳನ್ನು ಬೂಧಿಯ ಸಮೇತ ಅಕ್ಕ ಪಕ್ಕಕ್ಕೆ ಚಲ್ಲುತ್ತಿದ್ದವು. ಅದಕ್ಕೆ ಹಲಸಿನ ಬೀಜಗಳಿಗೆ ಕಬ್ಬಿಣದ ತಂತಿಯಿಂದ ತೂತು ಮಾಡಿ ಒಳಗೆ ಗ್ಯಾಸು ಸೇರದಂತೆ ಮಾಡಿ ನಿಗಿ ನಿಗಿ ಕೆಂಡದಲ್ಲಿ ಬೇಯಿಸುತ್ತಿದ್ದರು.

ಹಲಸಿನ ಕಾಯಿಯ ಹಪ್ಪಳವನ್ನು ಈ ಕೆಂಡದ ಮೇಲೆ ಇಟ್ಟು ಅದು ಹಿತ ಮಿತವಾಗಿ ಅರಳಿದೊಡನೆ ಅದಕ್ಕೊಂದಿಷ್ಟು ಕೊಬ್ಬರಿ ಎಣ್ಣೆ ಸವರಿ ಕರಂ.. ಕುರುಂ ಎನ್ನುತ್ತಾ ತಿಂದು ಒಂದು ಕುಡತೆ ಸಕ್ಕರೆ ಹಾಕದ ಚಪ್ಪೆ ಚಾ ಕುಡಿದರೆ ಅದೆಂತದೋ ತೃಪ್ತಿ. ಇನ್ನು ಗೇರುಬೀಜಗಳನ್ನು ಈ ಹೊಡಸಲಿನ ಬೆಂಕಿಯಲ್ಲಿ ಹಾಕಿ ಅದು ಬಿಡುವ ಎಣ್ಣೆಯಿಂದ ಅಗ್ನಿಯ ಕೆನ್ನಾಲಿಗೆ ಆಕಡೆ ಈ ಕಡೆ ಟಾಸ್ ಪುಸ್ ಎನ್ನುತ್ತಾ ಚಾಚುತ್ತಿದ್ದರೆ ಅದನ್ನು ಜಡಿಮಳೆಯಲ್ಲಿ ನೋಡುವುದೇ ಚಂದ.

ಆ ಕಾಲಕ್ಕೆ ಆಗಷ್ಟೇ ಪ್ರಾರಂಭವಾಗಿದ್ದ ರಮಾನಂದ ಸಾಗರರ ರಾಮಾಯಣ ಧಾರಾವಾಹಿಯನ್ನು ವಿದ್ಯುತ್ ಇರುವ ನೆಂಟರ ಮನೆಗೆ ಹೋಗಿ ಅಲ್ಲಿರುವ ಟಿವಿಯಲ್ಲಿ ಮಸುಕು ಮಸುಕಾಗಿ ಬರುತ್ತಿರುವ ರಾಮಾಯಣದ ಪಾತ್ರಗಳನ್ನು ನೋಡುವುದಕ್ಕೆ ಏನೆಲ್ಲಾ ನೆಪಗಳು !!.ಕರೆಂಟನ್ನು ನಮ್ಮ ಮನೆಗೂ ಹಾಕಿಸಬೇಕೆಂಬ ಉತ್ಕಟ ಆಸೆಗೆ ಇದೂ ಒಂದು ಕಾರಣವಿರಬಹುದು.

ನಮ್ಮೂರಿಗಿಂತ ದೂರದ ಅನೇಕ ಹಳ್ಳಿಗೆಲ್ಲಾ ಕರೆಂಟು ಹರಿದಾಗ ನಮ್ಮೂರಿಗೂ ಯಾಕೆ ಕರೆಂಟು ಬರಬಾರದು ಅನಿಸಿತು. ಸಾತೊಡ್ಡಿ, ದೇಹಳ್ಳಿ, ಬಳಗಾರು, ಬೀರಗದ್ದೆಗಳೆಂಬ ಊರುಗಳಿಗೆ ದಿನಕ್ಕೆ ಒಮ್ಮೆ ಮಾತ್ರ ಒಂದು ಬಸ್ಸು ಇದ್ದು ಅಲ್ಲಿಯ ಜನರೆಲ್ಲಾ ಬೇಸಿಗೆಯಲ್ಲೇ ಮಳೆಗಾಲಕ್ಕೆ ಅವಶ್ಯವಿರುವ ಎಲ್ಲಾ ವಸ್ತುಗಳನ್ನು ತಲೆಹೊರೆಯ ಮೇಲೆಯೇ ಸಾಗಿಸಬೇಕಿತ್ತು.

ಈ ಎಲ್ಲಾ ಹಳ್ಳಿಗಳಿಗೆ ಯಾವುದೋ ಸ್ಕೀಮಿನಲ್ಲಿ ವಿದ್ಯುತ್ ನೀಡಿ ಬಿಟ್ಟಿದ್ದರು. ವಿದ್ಯುತ್ ವೈರುಗಳು ಕರೆಂಟು ಕಂಬಗಳ ತಲೆಯ ಮೇಲೆ ನೇತಾಡುತ್ತಾ ಆ ಹಳ್ಳಿಗಳನ್ನು ಸೇರಿ ಅಲ್ಲಿ ಸ್ವಿಚ್ಚು ಹಾಕಿದ ಕೂಡಲೇ ಟಕ್ಕನೇ ಹತ್ತಿಕೊಂಡು ಮಹದಾಶ್ಚರ್ಯ ಮೂಡುತ್ತಿತ್ತು.

ನೂರಾರು ಅಡಿ ಆಳದ ಬಾವಿಯಿಂದ ಗುರ್ರೆಂದು ಶಬ್ಧ ಮಾಡುತ್ತಾ ನೀರೆತ್ತುವ ಪಂಪುಸೆಟ್ಟುಗಳು, ಕೇಜಿಗಟ್ಟಲೆ ಅಕ್ಕಿಯನ್ನು ಅನಾಯಾಸವಾಗಿ ಗರ ಗರನೇ ರುಬ್ಬಿ ಬಿಸಾಕುವ ಗ್ರೈಂಡರುಗಳು, ಐದಾರು ಗೆರಟೆ ತುಂಬಾ ಇರುವ ತೆಂಗಿನ ಕಾಯಿಯ ತಿರುಳನ್ನು ಕ್ಷಣ ಮಾತ್ರದಲ್ಲಿ ರೊಂಯ್ ಎಂದು ಚಟ್ನಿ ಮಾಡಿ ಹಾಕುವ ಮಿಕ್ಸಿಗಳು, ಗುಡಾಣ ಹೊಟ್ಟೆಯ ಸದಾ “ಗುಂಯ್” ಎನ್ನುತ್ತಿರುವ ಟ್ರಾನ್ಸ್‍ಫಾರ್ಮರುಗಳು ಪ್ರಶ್ನಾರ್ಥಕವಾಗಿ ಸೋಜಿಗದ ವಸ್ತುಗಳಾಗಿ ಆಶ್ಚರ್ಯ ಹುಟ್ಟಿಸುತ್ತಿದ್ದವು.

ಆದರೆ ಈ ವಿದ್ಯುತ್ತಿನ ಆಯಸ್ಸು ಮಳೆಗಾಲ ಬರುವ ವರೆಗೆ ಮಾತ್ರ ಎನ್ನುವುದನ್ನು ಅಲ್ಲಿನ ಜನ ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡು ಬಿಟ್ಟಿದ್ದರು. ಧೋ.. ಧೋ.. ಎಂದು ಎಡೆಬಿಡದೇ ಸುರಿಯುವ ಮಳೆಗಾಲದಲ್ಲಿ ಮರಗಳೆಲ್ಲಾ ಕರೆಂಟು ಕಂಬಗಳ ತಂತಿಗಳ ಮೇಲಾ ಲಗಾಟಿ ಹೊಡೆದು ಒಮ್ಮೆಯೇ ಹತ್ತು ಹದಿನೈದು ಕಂಬಗಳು ಧರಾಶಾಯಿಯಾದವು ಎಂದರೆ ಆ ವರ್ಷ ಮಳೆಗಾಲದಲ್ಲಿ ಪುನ: ಚಿಮಣಿ ಬುರುಡೆ ಲಾಟೀನುಗಳೇ ಗತಿ.

ಪಿಯುಸಿ ಸಮಯದಲ್ಲಿ ಕೊಟ್ಟಿಗೆಯ ಕೆಲಸ ಮುಗಿಸಿಯೇ ಕಾಲೇಜಿಗೆ ಹೋಗುವ ವೇಳೆಗೆ ಕೆಲ ಸಮಯ ತಡವಾಗುತ್ತಿತ್ತು. ಈಗಿನಂತೆ ಕೊಟ್ಟಿಗೆಗೆ ಚಪ್ಪಡಿ ಏನೂ ಇರಲಿಲ್ಲ. ದೊಡ್ಡ ಹೊಂಡ ಗುಂಡಿಗಳ ಮೇಲೆ ಮರಗಿಡಗಳಿಂದ ಸೊಪ್ಪಿನ ಬೆಟ್ಟದಿಂದ ತಂದ ಸೊಪ್ಪುಗಳನ್ನು ಹಾಸಿ ಜಾನುವಾರು ಮಲಗಲು ಅನುವು ಮಾಡಲಾಗುತ್ತಿತ್ತು. ಅವುಗಳ ಸಗಣಿ, ಮೂತ್ರ ಈ ಹೊಂಡಗಳಲ್ಲಿ ಸಂಗ್ರಹವಾಗುತ್ತಿತ್ತು.

ಈ ಹೊಂಡಗಳಲ್ಲಿರುವ ಕೊಳೆದ ಸೊಪ್ಪು ಸದೆ ಸೇರಿ ವಿಚಿತ್ರ “ಪರಿಮಳ” ಹೊರಹೊಮ್ಮುತ್ತಿತ್ತು. ಇದನ್ನು ಸ್ವಚ್ಚ ಮಾಡಿ, ಸ್ನಾನ ಮುಗಿಸಿ, ಪಿಟಿ ಕ್ಲಾಸಿಗೆ ಹೋಗಬೇಕಾದರೆ ಏನಾದರೂ ತಡವಾದರೆ ಪಿಟಿ ಮಾಸ್ತರ್ ಶೀಟಿ ಬೆಲ್ಟ್ ಏಟು ಖಚಿತ. ಎಮ್ಮೆಗಳು ಅವುಗಳ ಮೂತ್ರದಲ್ಲಿ ಬಾಲ ಅದ್ದಿ ರಫ಼್ ಅಂತ ಬೀಸಿದರೆ ಮೈಯೆಲ್ಲಾ ಒಂದು ರೀತಿಯ ಗಮಲು ವಾಸನೆಯಿಂದ ಅಸಹ್ಯವಾಗುತ್ತಿತ್ತು. ಆಗ ಮೇಷ್ಟ್ರು “ಏ ದನಾ ಕಾಯವ್ನೇ.. ಈವತ್ತೂ ಲೇಟೇನೋ?!! ಅಂತ ತರಾಟೆಗೆ ತೆಗೆದು ಕೊಳ್ಳೋದು ಗ್ಯಾರಂಟಿ ಅಂತ ಭಯ. ಈ ಪಿಟಿ ಮೇಷ್ಟ ’ಹೊಡೆತ” ತಾಳಲಾರದೇ ಕೆಲವು ಹುಡುಗರು ಶಾಲೆಯನ್ನೇ ಬಿಟ್ಟಿದ್ದಾರೆ ಎನ್ನುವುದೂ ಒಂದು ಸುದ್ಧಿ.

ಎಲ್ಲರ ಮನೆಯಲ್ಲಿರುವ ಕರೆಂಟೆಂಬ ಮಾಯೆ ನಮ್ಮಲ್ಲಿರಬೇಕಾಗಿತ್ತು ಎಂಬ ಹಪ ಹಪಿ ಪ್ರಾರಂಭವಾದೊಡನೆ ಸಿಕ್ಕ ಸಿಕ್ಕ ಕರೆಂಟು ಕಂಬಗಳೆಲ್ಲಾ ರವಿವರ್ಮನ ಕುಂಚದ ಕಲೆಯ ಅದ್ಭುತ ಕಲಾಕೃತಿಗಳ ಗೋಚರಿಸತೊಡಗಿದವು. ಅದಕ್ಕೆ ನೇತಾಕಿದ ಆಗಾಗ ಅಕ್ಕ ಪಕ್ಕದ ಮರಗಳಿಗೆ ತಾಗಿ ಜೊರ್ ಎಂದು ಶಬ್ಧ ಮಾಡುವ ಅಲ್ಯುಮಿನಿಯಂ ವೈರುಗಳು ಹರಿಪ್ರಿಯಾಳ ಮುಂಗುರಳಂತೆ ಮೋಹಕವಾಗಿ ಮನಸೂರೆ ಮಾಡುತ್ತಿದ್ದವು.

ಬೇಕಾದೊಡನೆ ಬಂದು ಬಿಡಲು ಕರೆಂಟು ಅಷ್ಟು ಸುಲಭಕ್ಕೆ ಸಿಗುವ ವಸ್ತುವೇ? ಸೀದಾ ಕರೆಂಟಾಫೀಸಿಗೆ ನಡೆಯಿತು ನನ್ನ ಆಕೃತಿ. ಅಲ್ಲೊಬ್ಬ ದಢೂತಿ ಕೆಂಪನೇ ಮನುಷ್ಯ ಕೆಂಪು ಮಾನವರ ತರ ಆಗ ತಾನೆ ಸಮುದ್ರ ಸ್ನಾನ ಮಾಡಿ ಬಂದ ವ್ಯಕ್ತಿ ಕೂತಿದ್ದ. ನಮಗೂ ಕರೆಂಟು ಬೇಕೆಂಬ ನನ್ನ ಅದ್ಭುತ ಅಹವಾಲನ್ನು ಹೇಳಿಕೊಂಡೆ.

ಕಿವಿಯಲ್ಲಿ ಕಡ್ಡಿಯೊಂದಕ್ಕೆ ಸ್ವಲ್ಪ ಹತ್ತಿಯನ್ನು ಹಾಕಿ ಮೀಟಿ ಮೀಟಿ ಅದೇನೋ ವಸ್ತುವನ್ನು ತೆಗೆದು ಮೂಸಿ ಮೂಸಿ ಬಿಸಾಕುತ್ತಿದ್ದ ಆ ವ್ಯಕ್ತಿಯ ಮುಂದಿನ ಬೋರ್ಡು ನೋಡಿದೆ. ಅದರಲ್ಲಿ ಅದೆಂತದೋ ಹೆಸರು ಬರೆದು ಸೆಕ್ಷನ್ ಆಫೀಸರ್ ಎಂದು ಪೇಂಟಿನಲ್ಲಿ ಬರೆದಿತ್ತು. ಅತ್ಯಂತ ಅಸಡ್ಡೆಯಿಂದ ಆ ವ್ಯಕ್ತಿ “ನಿಮ್ಮೂರಿಗೆ ಕರೆಂಟಾ? ಇನ್ನೈದು ವರ್ಷ ಬಿಟ್ಕಂಡ್ ಬನ್ನಿ. ನಿಮ್ಮ ಕ್ಯೂ ಬರಕ್ಕೆ ಇನ್ನೂ ಅಷ್ಟು ವರ್ಷ ಆಗ್ತದೆ” ಎಂದು ಈಗೆಲ್ಲಾ ಆನ್ಲೈನ್ ಬಹಳ ಕಷ್ಟ ಎಂದೊರಲುವ ಕಛೇರಿ ಗುಮಾಸ್ತರ ತರ ಉಡಾಪೆಯಿಂದ ಉತ್ತರಿಸಿದ.

ಛಲಬಿಡದ ತ್ರಿವಿಕ್ರಮನಂತೆ ದಿನಾ ಕಾಲೇಜಿಗೆ ಹೋಗಿ ವಾಪಸ್ಸು ಬರುತ್ತಾ ಕರೆಂಟು ಕಛೇರಿಗೆ ಪೆನ್ಶನ್ನು ಬರದ ತಬರನಂತೆ ಎಡತಾಕತೊಡಗಿದೆ. ಕೊನೆಗೂ ನನ್ನ ಕಾಟ ತಡೆಯಲಾರದೇ ಆ ಸೆಕ್ಷನ್ನು ಆಫೀಸರ್ರು ಹತ್ತು ಹಲವು ಪುಟಗಳ ಒಂದು ಅರ್ಜಿ ಫಾರಮ್ಮನ್ನು ಹಲವು ಕಡೆ ಇಂಟು ಮಾರ್ಕು ಹಾಕಿ ನಮ್ಮಪ್ಪನ ಹತ್ತಿರ ಸಹಿ ಮಾಡುವಂತೆಯೂ ಹಾಗೂ ಒಂದಿಷ್ಟು ದುಡ್ಡನ್ನು ಕರೆಂಟು ಇಲಾಖೆಗೆ ಕಟ್ಟುವಂತೆ ಆಜ್ಞೆ ಹೊರಡಿಸಿದ.

ನಾನು ಅರ್ಜಿಯನ್ನು ಶಬರಿಯು ರಾಮನು ಕಚ್ಚಿ ಬಿಸಾಕಿದ ಹಣ್ಣನ್ನು ಜತನದಿಂದ ಎತ್ತಿಕೊಂಡಂತೆ ಎತ್ತಿಕೊಂಡು ಬಂದು ಮನೆಗೆ ತಂದೆ. ಘನಘೋರ ಚರ್ಚೆಯ ನಂತರ ಕರೆಂಟಿನ ಸಾಧಕ ಬಾಧಕಗಳನ್ನು ವಿಚಾರಿಸಿದ ನಂತರ ಕರೆಂಟೊಂದು ಅತ್ಯವಶ್ಯಕ ವಸ್ತುವೆಂದು ಅದು ಮನೆಯಲ್ಲಿದ್ದರೆ ಅನುಕೂಲವೆಂಬ ತೀರ್ಮಾನವಾಗಿ ಅಪ್ಪನ ಸಹಿ ಬಿದ್ದ ನಂತರ ಪುನ: ಅರ್ಜಿಯು ಕರೆಂಟಾಫಿಸಿಗೆ ಬಂದು ದುಡ್ಡು ತುಂಬಿಸಿಕೊಂಡು ಸೆಕ್ಷನ್ನಾಫಿಸರಿನ ಮುಂದೆ ಮಂಡಿಯೂರಿತು.

ಅದರ ತಲೆಯ ಮೇಲೆ ಗೆಜ಼ೆಟಡ್ ಅಧಿಕಾರಿಯಾದ ಆತ ಹಸಿರಿಂಕಿನಲ್ಲಿ ದಸ್ಕತ್ತು ಹಾಕಿ ಪಕ್ಕದ ಗುಮಾಸ್ಥನಿಗೆ ರವಾನಿಸಿದ. ನಾನು ಅಳುಕುತ್ತಲೇ ಮತ್ತೊಮ್ಮೆ ಹೋಗಿ ಕರೆಂಟು ಕೊಡಲು ಇನ್ನೆಷ್ಟು ದಿನಗಳಾಗಬಹುದೆಂದು ಕೇಳಿಕೊಂಡೆ. ಆತ ಸರ್ರನೇ ರೇಗಿ “ ಈಗಷ್ಟೇ ಅರ್ಜಿ ಕೊಟ್ಟಿದ್ದಿಯಾ.. ಆಗ್ಲೇ ಕರೆಂಟು ಬೇಕೋ ನಿಂಗೆ. ಪೇಟೆಂದ ಒಂದು ಹತ್ತು ಕೆಜಿ ತಗೊಂಡು ಹೋಗು. ಇನ್ನೈದು ವರ್ಷ ಬಿಟ್ಟು ಬಾ” ಎನ್ನುತ್ತಾ ನನ್ನ ಅರ್ಜಿಯ ಮೇಲೆ ನನ್ನ ವೇಟಿಂಗ್ ಸಂಖ್ಯೆ ಹಾಕಿ ಕೊಟ್ಟ.

ಈ ಕರೆಂಟು ಆಸೆ ಯಾಕೆ ಹುಟ್ಟಿಕೊಂಡ್ತೋ ಗೊತ್ತಿಲ್ಲ. ನಾನು ಸಂಪೂರ್ಣ ಪರಧ್ಯಾನಿಯಾದೆ. ಕಾಲೇಜಿಗೆ ಸೈಕಲ್ಲಿನಲ್ಲಿ ಹೋಗುವಾಗ ದೇಹಳ್ಳಿ ರಸ್ತೆಯ ಬದಿಯಲ್ಲೇ ಹಾದು ಹೋಗುವ ಹೊಸ ಕರೆಂಟು ಕಂಬಗಳು ಆಸೆ ಉಕ್ಕಿಸುತ್ತಿದ್ದವು. ರಾತ್ರಿ ಕನಸಿನಲ್ಲಿ ನಮ್ಮನೆಗೂ ಕರೆಂಟು ಬಂದಾಂಗೆ, ಸ್ವಿಚ್ಚು ಹಾಕಿದ ಕೂಡಲೇ ಟಕ್ಕನೆ ಹೊಸ ಟ್ಯೂಬು ಲೈಟು ಹತ್ತಿದ ಹಾಗೇ ತರಾವರಿ ಕನಸು ಬೀಳತೊಡಗಿದವು. ಸೆಕ್ಷನ್ನಾಫೀಸರು ಏನೇ ಬಯ್ದರೂ ಸಹ ಈ ಕರೆಂಟಿನಾಸೆ ನನ್ನನ್ನು ಕರೆಂಟಾಫೀಸಿನ ಕಡೆ ಪದೇಪದೇ ಕರೆದುಕೊಂಡು ಹೋಗುತ್ತಿತ್ತು. ಹೀಗೆಯೇ ಪಾದಯಾತ್ರೆ ನಡೆದಾಗ ನನ ಕಾಟ ತಡೆಯದೇ ಆತ ಒಂದು ಎಸ್ಟಿಮೇಟ್ ತಯಾರಿಸಿಯೇ ಬಿಟ್ಟ.

ಅದರಲ್ಲಿ ನಮ್ಮ ಮನೆಯಿಂದ ನಾಲ್ಕು ಕಿಲೋಮಿಟರ್ ದೂರದಿಂದ ಇರುವ ಟ್ರಾನ್ಸ್‍ಫಾರ್ಮರಿನಿಂದ ವೈರುಗಳನ್ನು ಎಳೆದು ತರಬೇಕೆಂದೂ ಕಂಬ, ವೈರು, ತಂತಿ ಕೂಲಿ ಸೇರಿ ಅನೇಕ ಲಕ್ಷಗಳಾಗುತ್ತವೆಯೆಂದೂ, ಅಲ್ಲಿ ವರೆಗೆ ಲೈನು ಬರುವುದರಿಂದ ವೋಲ್ಟೇಜು ಕಡಿಮೆಯಾಗಿ ದೀಪ ಕುರುಡು ಕೆರೋಸಿನ್ನು ದೀಪದಂತೆ ಉರಿಯುವುದೆಂದೂ, ಇದಕ್ಕೆಲ್ಲಾ ಸುಮಾರು ೫ ಲಕ್ಷಗಳ ಖರ್ಚು ಬರುವುದೆಂದೂ, ಒಂದೇ ಮನೆಯಿರುವುದರಿಂದ ಇಷ್ಟೆಲ್ಲಾ ಖರ್ಚು ಮಾಡುವುದು ವ್ಯರ್ಥವೆಂಬ ರೀತಿಯಲ್ಲಿ ಹಸಿರು ಇಂಕಿನ ಶರಾ ಬರೆದು ಇಟ್ಟಿದ್ದ.

ಅಯ್ಯೋ ದೇವ್ರೆ? ಇದೇನಿದು? ಕರೆಂಟನ್ನು ಅಷ್ಟು ದೂರದಿಂದ ತರಬೇಕೇ? ತಂದರೂ ಸಹ ನಮ್ಮನೆಲಿ ಬೆಳಕು ಡಿಮ್ಮೇ? ಪಂಪಿನ ಮೋಟರ್ರು ತಿರುಗಲ್ವೇ? ನಮ್ಮನೆಗೆ ಕರೆಂಟು ಬರಲು ಇಷ್ಟೆಲ್ಲಾ ಕಸರತ್ತು ಇದೆಯೇ? ಎಂಬೆಲ್ಲಾ ಯಕ್ಷಪ್ರಶ್ನೆಗಳು ಕಾಡತೊಡಗಿದವು. ನಮ್ಮನೆಯ ಹತ್ತಿರದಲ್ಲೇ ದೊಡ್ಡ ದೊಡ್ಡ ಕಂಬಗಳ ಮೇಲೆ ಹಾದು ಹೋದ ತಂತಿಯ ಮೂಲಕ ಹಾದುಹೋಗುವ ತಂತಿಗಳಿಂದ ನಮ್ಮನೆಗೆ ಕರೆಂಟು ಯಾಕೆ ಕೊಡಬಾರದು ಎಂಬುದು ನನಗೆ ಚಿದಂಬರ ರಹಸ್ಯವಾಗಿತ್ತು.
ಇದಕ್ಕೆ ಸೆಕ್ಷನ್ನಾಫೀಸರ್ರು ಚೆನ್ನಾಗಿ ಉತ್ತರ ನೀಡಿದ್ದ.

ನಮ್ಮನೆ ಪಕ್ಕದಲ್ಲಿ ಹಾದು ಹೋಗುವುದು 11 ಕೆವಿಯ ಭಯಂಕರ ವೋಲ್ಟೆಜು ಇರುವ ಲೈನಾಗಿದ್ದು ಅದರಿಂದೆಲ್ಲಾ ಕರೆಂಟು ತಗಳ್ಳಕ್ಕೆ ಆಗಲ್ವಂತೆ.ಅದು ಜೋಗದಿಂದ ಸೀದಾ ಬಂದ ಲೈನಾಗಿದ್ದರಿಂದ ಅದು ಬೆಂಗಳೂರಿಗೇ ಸೇರಿಯೇ ನಿಲ್ಲುವುದಂತೆ. ಅದಕ್ಕೆ ಅಲ್ಲಿ ದೊಡ್ಡ ದೊಡ್ಡ ಟ್ರಾನ್ಸ್‍ ಫಾರ್ರ್ಮರುಗಳನ್ನು ಹಾಕಿ ಕರೆಂಟನ್ನು ಕಡಿಮೆ ಗೊಳಿಸಿ ಹಂಚುತ್ತಾರಂತೆ ಎಂದೆಲ್ಲಾ ತಲೆ ಬುಡ ಗೊತ್ತಾಗದ ತಾಂತ್ರಿಕ ವಿಷಯದಿಂದ ಆ ಲೈನಿನಿಂದ ನಮಗೆ ಕರೆಂಟು ಬರಲ್ಲ. ಅದಕ್ಕೆ ಪ್ರತ್ಯೇಕ ಟ್ರಾನ್ಸಫಾರ್ಮರು ಹಾಕಿ ತರಬೇಕು ಎನ್ನುವ ಮಹತ್ವದ ವಿಷಯದ ಅರಿವಾಯ್ತು. ಇಲ್ಲಿಂದ ಶುರುವಾಗಿದ್ದು ಮಹಾ ಭಗೀರಥ ಪ್ರಯತ್ನ..

ಮುಂದುವರೆಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

ಬೆಳಗಿನ ಸುದ್ದಿ ಮುಖ್ಯಾಂಶಗಳು

Published

on

ಬೆಳಗಿನ ಸುದ್ದಿ ಮುಖ್ಯಾಂಶಗಳು

  1. ರಾಜ್ಯ ವಿಧಾನಪರಿಷತ್ತಿನ 6 ಸ್ಥಾನಗಳಿಗೆ ಮುಂದಿನ ತಿಂಗಳ 3 ರಂದು ಚುನಾವಣೆ ನಡೆಯಲಿದೆ. ದ್ವೈವಾರ್ಷಿಕ ಚುನಾವಣೆಗೆ ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನೆ ಕಾರ್ಯ ಪೂರ್ಣಗೊಂಡಿದ್ದು, ಒಟ್ಟು 91ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಇಂದು ಕೊನೆಯ ದಿನವಾಗಿದೆ.
  2. ದೇಶದ ಉತ್ತರದ ರಾಜ್ಯಗಳಲ್ಲಿ ನಿನ್ನೆ ತೀವ್ರ ಬಿಸಿಗಾಳಿ ವಾತಾವರಣ ಉಂಟಾಗಿತ್ತು. ಮುಂದಿನ 4 ದಿನಗಳಲ್ಲಿ ವಾಯವ್ಯ ಪೂರ್ವ ಹಾಗೂ ಮಧ್ಯಭಾರತದ ಬಯಲು ಪ್ರದೇಶಗಳಲ್ಲಿ ತೀವ್ರ ಬಿಸಿಗಾಳಿ ವಾತಾವರಣವಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಸೂಚಿಸಿದೆ.
  3. ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಪ್ರದೇಶಾದ್ಯಂತ 40 ರಿಂದ 55 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ. ಸಮುದ್ರ ಉಕ್ಕೇರಲಿದ್ದು, ಮುಂಜಾಗ್ರತಾ ಕ್ರಮವಾಗಿ ಬುಧವಾರದವರೆಗೆ ಸಮುದ್ರಕ್ಕೆ ಇಳಿಯಬಾರದು ಎಂದು ಮೀನುಗಾರರಿಗೆ ಉತ್ತರಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚನೆ ನೀಡಿದ್ದಾರೆ.
  4. ತೈವಾನ್‌ನ ಅಧ್ಯಕ್ಷ ಹುದ್ದೆ ಆಯ್ಕೆಯಾಗಿರುವ ಲೈ ಛಿಂಗ್-ತೆ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರು ಜನವರಿಯಲ್ಲಿ ನಡೆದ ಚುನಾವಣೆಯಲ್ಲಿ ಜಯ ಸಾಧಿಸಿದ್ದಾರೆ. ಕಳೆದ 4 ವರ್ಷಗಳಿಂದ ದೇಶದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ 64 ವರ್ಷದ ಲೈ ಅವರು, ತೈವಾನ್‌ನ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಹೇಳಿದ್ದಾರೆ.
  5. ಶ್ರೀಲಂಕಾದ ಸೀತಾಮಾತೆ ಮಂದಿರ-ಸೀತಾ ಇಳಿಯಾದಲ್ಲಿ ನಿನ್ನೆ ಕುಂಬಾಭಿಷೇಕ ಶ್ರದ್ಧಾ-ಭಕ್ತಿ ಸಡಗರ ಸಂಭ್ರಮಗಳಿಂದ ಜರುಗಿತು. ಅಯೋಧ್ಯೆಯ ಸರಯೂ ನದಿಯಿಂದ ತರಲಾಗಿದ್ದ ಸುಮಾರು 25ಲೀಟರ್ ಪವಿತ್ರ ಜಲದಿಂದ ಮಂದಿರದ ಗೋಪುರಕ್ಕೆ ಅಭಿಷೇಕ ನೆರವೇರಿಸಲಾಯಿತು. ಭಾರತ-ನೇಪಾಳ, ಶ್ರೀಲಂಕಾ ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿದ್ದ ಭಕ್ತಾದಿಗಳು ಈ ದೃಶ್ಯವನ್ನು ಕಣ್ಮನಗಳಲ್ಲಿ ತುಂಬಿಕೊಂಡರು.
  6. ಭಾರತದ ಗ್ರಾಂಡ್ ಮಾಸ್ಟರ್ ಅರವಿಂದ್ ಚಿದಂಬರಂ ಶಾರ್ಜಾ ಮಾಸ್ಟರ್‍ಸ್ ಚೆಸ್ ಪಂದ್ಯಾವಳಿಯಲ್ಲಿ ಅತಿಥೇಯ ಶಾರ್ಜಾದ ಎ.ಆರ್. ಸುಲೆಹ್ ಸಲೀಂ ಅವರನ್ನು ಪರಾಭವಗೊಳಿಸಿ 4.5ಅಂಕಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ.
  7. ಗುವಾಹಾಟಿಯಲ್ಲಿ ನಿನ್ನೆ ರಾತ್ರಿ ನಡೆಯಬೇಕಿದ್ದ ರಾಜಸ್ಥಾನ ರಾಯಲ್ಸ್ ಹಾಗೂ ಕೊಲ್ಕೊತ್ತಾ ನೈಟ್ ರೈಡರ್‍ಸ್ ನಡುವಿನ ಐಪಿಎಲ್ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತು. ಕೆಲಕಾಲ ಮಳೆ ಬಂದು ನಿಂತ ನಂತರ ನಡೆದ ಟಾಸ್ ಗೆದ್ದ ಕೊಲ್ಕತ್ತಾ ತಂಡ ಫೀಲ್ಡಿಂಗ್ ಆಯ್ದುಕೊಂಡಿತ್ತು. ಆದರೆ ಪುನಃ ಮಳೆ ಬಂದ ಹಿನ್ನೆಲೆ ಪಂದ್ಯ ರದ್ದುಗೊಳಿಸಲಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ತಂತ್ರಜ್ಞಾನ ಮೋಡಿ : ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

Published

on

  • ಡಾ. ಚಂದ್ರಪ್ಪ ಎಚ್, ಸಹಾಯಕ ಪ್ರಾಧ್ಯಾಪಕರು, ಭೌತವಿಜ್ಞಾನ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು, ಚಿತ್ರದುರ್ಗ

90ರ ದಶಕದಿಂದೀಚೆಗೆ, ಎಲ್ಲೆಡೆ ಸದ್ದಿಲ್ಲದೇ ಕ್ರಮೇಣ ಒಕ್ಕರಿಸತೊಡಗಿದೆ ಆಧುನಿಕ ಯಾಂತ್ರಿಕೃತ ಬದುಕು.

ಜನಸಾಮಾನ್ಯರ ಅರಿವಿನ-ಪರಿಧಿ ತಿಳಿಗೊಳ್ಳುವುದರ ಮೊದಲೇ ಊಹಿಸಲಾರದಷ್ಟು ಮಟ್ಟಿಗೆ ಇಂದು, ಸ್ವಚ್ಛಂದ ಹಳ್ಳಿ-ಸೊಬಗಿನ ಕೂಡು-ಕುಟುಂಬದ, ಮೈ-ಮನಸ್ಸು ತುಂಬಿದ, ಪರಿಶುದ್ಧ ಜೀವನ ಪ್ರೀತಿ, ಉತ್ಸಾಹ, ಮಮತೆಯನ್ನು ಇನ್ನಿಲ್ಲವಾಗಿಸಿದೆ ಎನಿಸುತ್ತದೆಯಲ್ಲವೆ?

ಹೇಗೆಂದರೆ, ಕಲ್ಪಿಸಿಕೊಂಡರೂ ಕಣ್ಣೆದುರಿಗೆ ತೆರೆದಿಡುವ ಅಮೂಲ್ಯ ಬದುಕು, ಅದೆಷ್ಟು ಬೇಗ ದಿಕ್ಕು-ದೆಸೆಯಿಲ್ಲದೆ ಕಣ್ಣು-ಕಟ್ಟಿದ ಸ್ಪರ್ಧೆಗಿಳಿದ ಕುದುರೆಯಂತೆ ಅಲೆಯುವಂತಾಗಿದೆ! ಅರೆಕ್ಷಣ, ಮೈಮನ ಕಸಿವಿಸಿಗೊಳ್ಳುತ್ತೆ! ಜೀವ ಮರುಗುತ್ತೆ. ಮತ್ತೆ ಮತ್ತೆ ಆ ಬಾಲ್ಯ, ಹಳ್ಳಿ ಬದುಕನ್ನ ಅರಸಿ ಬಯಸುತ್ತೆ! ಜನತೆ, ಹಳ್ಳಿಯಲ್ಲಿನ ಗಿಡ-ಮರ, ಪಶು-ಪಕ್ಷಿ, ಹಳ್ಳ-ಕೊಳ್ಳ, ಬೆಟ್ಟ-ಗುಡ್ಡ ಮುಂತಾದ ಪರಿಸರದ ಸಕಲ ಜೀವಿಗಳೊಂದಿಗೆ ಒಂದಾಗಿ ನಲ್ಮೆಯಿಂದ ಪರಿಶುದ್ಧ ಮನದಿ, ಭೂ ತಾಯಿ, ತಿಳಿ-ನೀಲಿ ಆಗಸ, ಮಳೆ, ಗಾಳಿ, ಬೆಳಕನ್ನ ಇನ್ನಿಲ್ಲದೆ ಅಪ್ಪಿ, ಅತ್ಯಂತ ಸಂತಸ-ಖುಷಿಯಿಂದ, ಇರುವ ಪರಿಸ್ಥಿತಿಗೆ ಒಗ್ಗಿ , ಬದುಕು ರೂಪಿಸಿಕೊಂಡು ಜೀವನೋತ್ಸಾಹ ತಳೆಯುತ್ತಿದ್ದರು.

ನಿಜ ಹೇಳಬೇಕೆಂದರೆ, ಪರಿಸರವೇ ಪಾಠ; ಭೂ ತಾಯಿಯೇ ಹಾಸಿಗೆ; ಆಗಸವೇ ಹೊದಿಕೆಯಾಗಿ, ದುಡಿದ, ದಣಿವರಿದ ಮನದಿ, ಕಣ್ತುಂಬಿ ನೆಮ್ಮದಿಯ ನಿಟ್ಟುಸಿರುಗೈವ ಕ್ಷಣಗಳು ಅದಾಗಿತ್ತು!

ಹಳ್ಳಿಯಲ್ಲಿನ ಆಟೋಟಗಳು, ತಮಾಷೆಯ ಕ್ಷಣಗಳು, ಆಟಿಕೆಗಳು, ಸಾಮಾನುಗಳು, ಹಬ್ಬ-ಹರಿದಿನಗಳು, ಜಾತ್ರೆ-ಸಂತೆಗಳು, ಒಕ್ಕಲು ಸಮಯದ ಸುಗ್ಗಿಯ ಮಧುರ ಕ್ಷಣಗಳು ಇತ್ಯಾದಿ ಜನತೆಯ ಮುಗ್ಧ -ಮನಸ್ಸು ಮತ್ತು ಹೊಳೆವ ಮುಖದಲ್ಲಿ, ನಿಷ್ಕಲ್ಮಶ ಮಂದಹಾಸ ಮೂಡಿಸಿ, ಬೆಲೆ ಕಟ್ಟಲಾಗದ ಖುಷಿಯ ಕ್ಷಣಗಳನ್ನು ಸದಾ ಅವರಲ್ಲಿ ಕಂಗೊಳಿಸುತ್ತಿದ್ದವು.

ಎಲ್ಲರೂ ದುಡಿವವರು; ಎಲ್ಲರೂ ಭಾಗಿಯಾಗುವವರು; ಎಲ್ಲರೊಳಗೊಂದಾಗಿ ಬಾಳುವವರು; ಎಲ್ಲರಲ್ಲೂ ಧನ್ಯತಾ ಭಾವ; ಆದರಣೀಯತೆ, ಪೂಜ್ಯತಾ-ಭಾವ ತುಂಬಿತ್ತು! ಅಂತಃಕರಣೆ, ಕರುಣೆ, ಪ್ರೀತಿ-ವಿಶ್ವಾಸ, ತಕ್ಕಮಟ್ಟಿಗೆ ಮಾನವೀಯತೆ ಬದುಕ-ಪ್ರೀತಿ ಹೆಚ್ಚಿಸಿತ್ತು!

ಈಗಾಗಲೇ, ನಾವು ಯಾವ ಸ್ಥಿತಿ ತಲುಪಿದ್ದೇವೆಂದರೆ: ಶಾಲಾ ರಜೆಯ ದಿನಗಳಲ್ಲಿ, ಈಗಿನ ಮಕ್ಕಳಿಗೆ ಆ ಕಾಲದ ಹಳ್ಳಿಗಳ ಜೀವನ ಪರಿಚಯಿಸಲು ಗೊಟಗೋಡಿಯ ರಾಕ್ ಗಾರ್ಡನ್ – ಹಾವೇರಿ, ಹೆರಿಟೇಜ್ ವಿಲೇಜ್ – ಮಣಿಪಾಲ, ಅಲ್ಲಲ್ಲಿ ಸಾರ್ವಜನಿಕ ಉದ್ಯಾನವನ, ಹಾಗೂ ಇತರೆ ಕೆಲವು ಮ್ಯೂಸಿಯಮ್ ಗಳತ್ತ ಮುಖ ಮಾಡಿಬೇಕೆ ಹೊರತು ನೈಜ ಚಿತ್ರಣ ಪ್ರಸ್ತುತ ಹಳ್ಳಿಗಾಡಿನಲ್ಲೂ ಕಾಣಸಿಗದು! ಸ್ವತಃ ಹಳ್ಳಿಗರೇ ಪರಿತಪಿಸುವ ಸ್ಥಿತಿ.

ಕಾರಣ ಇಷ್ಟೆ: ತಂತ್ರಜ್ಞಾನದ ಆವಿಷ್ಕಾರ ಮತ್ತು ಎಲ್ಲ ಕ್ಷೇತ್ರಗಳಲ್ಲೂ ಹೊಕ್ಕಿರುವ ಅದರ ಗಾಢವಾದ ಛಾಯೆ. ಇಡೀ ‘ಪ್ರಪಂಚವೇ ಒಂದು ಹಳ್ಳಿ’ (Global Village) ಯಾಗಿ ಮಾರ್ಪಟ್ಟಿರುವ ಭಾವನೆ. ವಿಶೇಷವಾಗಿ, ದೂರವಾಣಿ, ಇಂಟರ್ನೆಟ್, ಯುಟ್ಯೂಬ್, ನೇರ ಮೆದುಳಿಗೆ ಕೈ ಹಾಕಿರುವ ಸಾಮಾಜಿಕ ಜಾಲತಾಣಗಳ ಡ್ರಗ್ಸ್ ರೀತಿಯ ಮಾನಸಿಕ ಮೋಹ ಬೆಂಬಿಡದೆ ಇಂದಿನ ಆಧುನಿಕ ಜನತೆಯ ಚಿಂತನಾರ್ಹ ಯೋಚನಾ ಶಕ್ತಿ, ಆರೋಗ್ಯ , ಕೌಟುಂಬಿಕ ಮೌಲ್ಯಗಳು, ಮಾನವೀಯ ಗುಣಗಳು ಹಾಗೂ ಒಟ್ಟಾರೆ ಜೀವನ ಶೈಲಿಯನ್ನೇ ಅಕ್ಷರಸಃ ನುಂಗಿಹಾಕಿವೆ! ಅಲ್ಲದೆ, ಇದು ಇಂದಿನ ಅನಿವಾರ್ಯವೆಂಬಂತೆ ಕಠೋರ ಸನ್ನಿವೇಶ ಹುಟ್ಟುಹಾಕಿವೆ.

ಒಂದೆಡೆ, ‘ಅತೀಯಾದ ಅಮೃತವೂ ವಿಷ’ವೆನ್ನುವಂತೆ, ಹಾಗೂ ಊಟದಲ್ಲಿ ‘ರುಚಿಗೆ ತಕ್ಕಷ್ಟು ಉಪ್ಪಿ’ರುವಂತೆ ಹಲವು ಒಳಿತು-ಕೆಡುಕಗಳ ನಡುವೆ ಎಲ್ಲವೂ ಹಿತಮಿತವಾಗಿ ಬಳಕೆಯಲ್ಲಿದ್ದರೆ ಚೆನ್ನ. ಅಲ್ವೇ? ಮೈ ಮನ ಆರೋಗ್ಯಕರವಾಗಿರುತ್ತೆ; ಜೀವನ ಉತ್ಸಾಹದಿಂದ ಕೂಡಿರುತ್ತೆ.
ಜೊತೆಗೆ, ಇತ್ತೀಚೆಗೆ ಜಗತ್ತಿನೆಲ್ಲೆಡೆ ಭಾರೀ ಸಂಚಲನ ಸೃಷ್ಟಿಸಿರುವ ‘ಕೃತಕ ಬುದ್ಧಿಮತ್ತೆ’ (Artificial Intelligence – AI) ಹಾಗೂ ‘ಬಯೋಚಿಪ್’ ತಂತ್ರಜ್ಞಾನಗಳು. ಈ ಎರಡೂ ತಂತ್ರಜ್ಞಾನಗಳು ಬಹುತೇಕ ಮನುಷ್ಯನನ್ನ ಸಹ ಒಂದು ಸರಕಾಗಿ ನೋಡುವ ದೂರದೃಷ್ಟಿ ಹೊಂದಿವೆ ಎಂದರೆ ತಪ್ಪಾಗಲಿಕ್ಕಿಲ್ಲ! ತೀರ ಇತ್ತೀಚೆಗೆ, ತಂತ್ರಜ್ಞಾನ ಜಗತ್ತಿನ ಹೆಸರಾಂತ ಉದ್ಯಮಿ: ಎಲಾನ್ ಮಸ್ಕ್ ತಮ್ಮ ‘ನ್ಯೂರಾಲಿಂಕ್’ (Neuralink) ಸಂಸ್ಥೆಯ ಮೂಲಕ ಪ್ರಪಂಚದ ಮೊಟ್ಟ ಮೊದಲ ಪ್ರಯತ್ನವಾಗಿ ಆರೋಗ್ಯವಂತ ವ್ಯಕ್ತಿಯೊಬ್ಬರ ಮೆದುಳಿನಲ್ಲಿ ಪ್ರಾಯೋಗಿಕ – ‘ಮೊದಲ ಬಯೋಚಿಪ್’ ಅಳವಡಿಸಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ! ಇದುವರೆಗೂ, ಮೊಬೈಲ್ ನಲ್ಲಿ ಕೇವಲ ‘ಮೆಮೊರಿ ಕಾರ್ಡ್’ ಬಳಸಿ, ಅದರಲ್ಲಿ ಸಂಗ್ರಹಿಸಿದ ಮಾಹಿತಿ ಬೇಕೆಂದಾಗ ಆಲಿಸುವ, ನೋಡುವ ಪರಿಪಾಠದ ಪರಿಚಯವಿದ್ದ ನಮಗೆ, AI ಹಾಗೂ Biochip ತಂತ್ರಜ್ಞಾನಗಳ ಅವತಾರಗಳು ಊಹೆಗೂ ಮೀರಿದ್ದು ಅನ್ಸುತ್ತೆ ಕೂಡ.

ಆಗ, ಜಗತ್ತು ಹೇಗಿರಬೇಡ? ತಂತ್ರಜ್ಞಾನ ತೊರೆದು ಮನುಷ್ಯ, ಜೀವನ ಕಲ್ಪಿಸಿಕೊಳ್ಳಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಅದು, ಕೇವಲ ಮನುಷ್ಯನ ಅವಶ್ಯಕತೆಗಳಿಗೆ ಪೂರಕವಾಗಿರಬೇಕೆ ಹೊರತು; ಆತನನ್ನ ಆಳುವ ಸ್ಥಿತಿ ತಲುಪಬಾರದು! ಮುಂದಿನ ದಿನಗಳಲ್ಲಿ, ಮನುಷ್ಯ ಎದುರಿಸಬಹುದಾದ ಭಯಾನಕ ತಂತ್ರಜ್ಞಾನ ಸಂಕೋಲೆಗಳನ್ನು ಕುರಿತು ಚರ್ಚಿಸುವ ಅಗತ್ಯ ಇಂದಿನ ತುರ್ತು ಅನಿವಾರ್ಯ. ಆದರೆ, ಎಲ್ಲವೂ ಸಲೀಸಾಗಿ ಕೈಗೆಟುಕುವ ಇಂದಿನ ದಿನಗಳಲಿ, ಅತಿಯಾಗಿ ಮಿತಿಮೀರಿರುವ ಅನುಕೂಲಗಳು ಅಮೂಲ್ಯ ಖುಷಿಯ ಕ್ಷಣಗಳನ್ನು ಎಂದಿಗೂ ನೀಡಲಾರವು.

ಬದಲಿಗೆ, ಪ್ರತಿಷ್ಠೆಯ ಹೆಮ್ಮರಗಳಾಗಿ, ಜನತೆ ನಾಲ್ಕು ದಿನದ ಈ ಬಾಳಲಿ ಏನೋ ಬಹುದೊಡ್ಡ ಸಾಧನೆಗೈದವರಂತೆ, ಯಂತ್ರಮಾನವರಂತೆ ಬೀಗುವವರೆ!!? ಮೂಲಭೂತವಾಗಿ, ಮಾನವ ಸಹಿತ ಸಕಲ ಜೀವ-ಸಂಕುಲವೂ ವಾಸಯೋಗ್ಯ ಸ್ವಚ್ಛಂದ ಭೂಮಿ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಭೂಮಿಯಲ್ಲಿ, ಮಣ್ಣಿನ ಫಲವತ್ತತೆ ಹಾಗೂ ನೀರು ಸಂರಕ್ಷಿಸದೆ; ಗಿಡ-ಮರ ಬೆಳೆಸದೆ; ಹಸಿರು ಹೆಚ್ಚಿಸದೆ, ಮತ್ತು ಪರಿಸರ ಸಮತೋಲನ ಕಾಪಾಡದೆ; ಕೇವಲ ತಂತ್ರಜ್ಞಾನ ತಲೆಯಲಿ ಹೊತ್ತು, ಮನುಷ್ಯ ಉತ್ತಮ ಆಹಾರ, ಆರೋಗ್ಯ ಮತ್ತು ಜೀವನ ಕಟ್ಟಿಕೊಳ್ಳಲು ಎಂದಿಗೂ ಸಾಧ್ಯವಿಲ್ಲ. ಸಮರೋಪಾದಿಯಲ್ಲಿ, ಜನತೆ ಸ್ವ ಇಚ್ಛೆಯಿಂದ ಹಳ್ಳಿ-ಹಳ್ಳಿಗಳಿಂದ, ನಗರಗಳು, ಬೆಟ್ಟ-ಗುಡ್ಡಗಳಲ್ಲೆಡೆ ಬೃಹತ್ ಸಂಖ್ಯೆಯಲ್ಲಿ ಸಸಿಗಳನ್ನ ನೆಟ್ಟು, ಪಾಲನೆ-ಪೋಷಣೆಗೈಯ್ಯುವ ಚಳುವಳಿ ರೂಪದ ಆಂದೋಲನ ದೇಶಾದ್ಯಂತ ಅತ್ಯಂತ ತ್ವರಿತವಾಗಿ ಕೈಗೂಡಬೇಕು. ಈ ನಿಟ್ಟಿನಲ್ಲಿ, ಎಲ್ಲರೂ ಕೈಜೋಡಿಸಬೇಕು.

(ಲೇಖಕರು : ಡಾ. ಚಂದ್ರಪ್ಪ ಎಚ್, ಸಹಾಯಕ ಪ್ರಾಧ್ಯಾಪಕರು, ಭೌತವಿಜ್ಞಾನ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು, ಚಿತ್ರದುರ್ಗ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ನಿಷೇಧ : ಸಚಿವ ದಿನೇಶ್ ಗುಂಡೂರಾವ್

Published

on

ಸುದ್ದಿದಿನ, ಬೆಂಗಳೂರು : ಕೃತಕ ಬಣ್ಣ ಬಳಸಿದ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯಾದ್ಯಂತ ನಿಷೇಧಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಆದಾಗ್ಯೂ, ಬಣ್ಣ ಹಾಗೂ ರಾಸಾಯನಿಕ ಹಾಕದೇ ಇರುವ ಈ ತಿನಿಸುಗಳ ಮಾರಾಟಕ್ಕೆ ನಿರ್ಬಂಧ ಇಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರಿಗೂ ಅಚ್ಚುಮೆಚ್ಚಾದ ಈ ಎರಡು ತಿನಿಸುಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡಲು ಬಳಸುವ ಕೃತಕ ಬಣ್ಣಗಳಲ್ಲಿ ಅಪಾಯಕಾರಿ ರಾಸಾಯನಿಕಗಳು ಇರುವುದು ಪರೀಕ್ಷೆಗಳಿಂದ ದೃಢಪಟ್ಟಿದೆ ಎಂದರು. ರಾಜ್ಯದ ಹಲವೆಡೆ ಬೀದಿಬದಿಯ ಗಾಡಿಗಳು, ಹೋಟೆಲ್‌ಗಳಲ್ಲಿ ತಯಾರಿಸಿದ ಗೋಬಿ ಮಂಚೂರಿ ತಿನಿಸಿನ 171ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 107ಮಾದರಿಗಳಲ್ಲಿ ಅಸುರಕ್ಷಿತ ರಾಸಾಯನಿಕಗಳು ಪತ್ತೆಯಾಗಿರುವುದು ಆತಂಕಕಾರಿಯಾಗಿದೆ ಎಂದರು.

ಕೃತಕ ಬಣ್ಣಗಳಲ್ಲಿರುವ ರೋಡೊಮೈನ್-ಬಿ ಮತ್ತು ಟಾಟ್ರಝೀನ್ ರಾಸಾಯನಿಕಗಳು ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಹುದು ಎನ್ನುವ ಅಂಶ ತಿಳಿದುಬಂದಿದೆ. ಬಣ್ಣ ಹಾಕಿದ ಗೋಬಿಮಂಚೂರಿ ಮತ್ತು ಕಾಟನ್‌ಕ್ಯಾಂಡಿಗಳನ್ನು ಮಾರಾಟ ಮಾಡುವವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಏಳು ವರ್ಷದರೆಗೆ ಜೈಲು ಶಿಕ್ಷೆ, 10 ಲಕ್ಷ ರೂಪಾಯಿವರೆಗೆ ದಂಡ ಅಥವಾ ಜೀವಾವಧಿ ಶಿಕ್ಷೆಗೂ ಅವಕಾಶವಿದೆ ಎಂದು ಸಚಿವರು ಎಚ್ಚರಿಕೆ ನೀಡಿದರು.

ಹೇಳಿಕೆ


  • ಬಣ್ಣ ಹಾಕಿರುವ ಈ ಎರಡು ತಿನಿಸುಗಳನ್ನು ಸೇವಿಸಬಾರದು ಎಂದು ಸಾರ್ವಜನಿಕರಿಗೂ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಲ್ಲದೇ, ಕಬಾಬ್, ಪಾನಿಪೂರಿ ಮೊದಲಾದ ತಿನಿಸುಗಳಲ್ಲೂ ಕೃತಕ ಬಣ್ಣಗಳ ಬಳಕೆ ಆಗುತ್ತಿದೆಯೇ ಎಂದು ಪರಿಶೀಲಿಸಲಾಗುತ್ತಿದೆ.

            | ಸಚಿವ ದಿನೇಶ್ ಗುಂಡೂರಾವ್


ಟ್ವೀಟ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending