Connect with us

ಲೈಫ್ ಸ್ಟೈಲ್

ಎತ್ತುಗಳಲ್ಲಿ ಕೊಂಬಿನ ಕ್ಯಾನ್ಸರ್..!

Published

on

  • ಡಾ.ಎನ್.ಬಿ.ಶ್ರೀಧರ,ಶಿವಮೊಗ್ಗ

ಕ್ಯಾನ್ಸರ್ ಎಂದರೆ ಗುಣವಾಗದ ಕಾಯಿಲೆ ಎಂದು ಎಲ್ಲರಿಗೂ ದುಸ್ವಪ್ನ. ಅನೇಕ ರೈತರು ಜಾನುವಾರುಗಳಲ್ಲಿ ಕ್ಯಾನ್ರ‍್ರೇ? ಎಂದು ಉದ್ಘಾರ ತೆಗೆಯುತ್ತಾರೆ. ಹಲವಾರು ಬಗೆಯ ಕ್ಯಾನ್ಸರ್‌ಗಳು ಜಾನುವಾರುಗಳಲ್ಲಿ ಸಾಮಾನ್ಯ. ಅವುಗಳಲ್ಲಿ ಕೊಂಬಿನ ಕ್ಯಾನ್ಸರ್ ಒಂದು. ಎತ್ತುಗಳಲ್ಲಿ ಅಂದವಾದ ಕೊಂಬಿದ್ದರೆ ಅದಕ್ಕೆ ಒಂದು ತರಹದ ಶೋಭೆ. ಆದರೆ ಈ ಕೊಂಬುಗಳಿಗೇ ಕ್ಯಾನ್ಸರ್ ಬಂದು ಬಿಟ್ಟರೆ ? ರೈತರ ಗತಿ ಹರೋ ಹರ.

ಉಳುಮೆಗೆ ಉಪಯೋಗಿಸುವ ಎತ್ತುಗಳ ತಳಿಗಳಾದ ಹಳ್ಳಿಕಾರ್, ಕಿಲಾರ್, ಅಮೃತ್ ಮಹಲ್, ದೇವಣಿ ಇತ್ಯಾದಿ ಉತ್ತಮ ಹಾಗೂ ದುಬಾರಿ ಎತ್ತುಗಳನ್ನು ಭಾಧಿಸುವ ಈ ಕಾಯಿಲೆ ಅಂಕಿ ಅಂಶಗಳ ಪ್ರಕಾರ ಶೇ 1 ರಷ್ಟು ಜಾನುವಾರುಗಳಲ್ಲಿ ಅದರಲ್ಲೂ ಎತ್ತುಗಳಲ್ಲಿ ಬರುತ್ತದೆ ಎಂಬುದು ಅತಂಕಕಾರಿ ವಿಷಯ. ಕೊಂಬಿನ ಕ್ಯಾನ್ಸರ್ ಬಂದ ಎತ್ತುಗಳ ಚಿಕಿತ್ಸೆ ಕಷ್ಟಕರವಾದ ವಿಷಯವಾಗಿರುವುದರಿಂದ ರೈತರಿಗೆ ಈ ಕಾಯಿಲೆ ತುಂಬಾ ಆರ್ಥಿಕ ಸಂಕಷ್ಟ ತಂದೊಡ್ಡುತ್ತದೆ. ಅವರಿಗೆ ಮಾಹಿತಿ ನೀಡುವುದೇ ಈ ಲೇಖನದ ಉದ್ದೇಶ.

ಕಾರಣಗಳು

ಮುಖ್ಯವಾದ ವಿಷಯವೆಂದರೆ ಇಲ್ಲಿಯವರೆಗೂ ಸಹ ಕೊಂಬಿನ ಕ್ಯಾನ್ಸರ್ ಹೇಗೆ ಮತ್ತು ಯಾಕೆ ಬರುತ್ತದೆ ಎಂಬುದು ಪ್ರಶ್ನಾರ್ಹವಾಗಿಯೇ ಉಳಿದಿದೆ. ಇದು ಅನುವಂಶೀಯವಾಗಿ ಕೆಲವು ತಳಿಯ ಎತ್ತುಗಳಲ್ಲಿ ಬರುತ್ತದೆ. ಅದರಲ್ಲೂ ದೇಶೀ ತಳಿಗಳು ಇದಕ್ಕೆ ಜಾಸ್ತಿ ತುತ್ತಾಗುತ್ತವೆ. ದಪ್ಪ ಕೋಡು ಹೊಂದಿದ ಕಾಂಕ್ರೇಜ್, ದೇವಣಿ ಮತ್ತು ಗಿರ್ ತಳಿಯಲ್ಲಿ ಇದು ಬಹಳ ಸಾಮಾನ್ಯ.

ಉತ್ತರ ಕರ್ನಾಟಕದಲ್ಲಿ ಉಳುಮೆಗೆ ಉಪಯೋಗಿಸುವ ಎತ್ತುಗಳ ತಳಿಗಳಾದ ಹಳ್ಳಿಕಾರ್, ಕಿಲಾರ್, ಅಮೃತ್ ಮಹಲ್ ಇತ್ಯಾದಿಗಳಲ್ಲಿ ಇದರ ಸಂಭವ ಜಾಸ್ತಿ. ಕೋಣಗಳಲ್ಲೂ ಸಹ ಈ ಕಾಯಿಲೆ ಬರಬಹುದು. ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಎತ್ತುಗಳಲ್ಲಿ ಇದು ಕಡಿಮೆ.

ಇದನ್ನೂ ಓದಿ | ಸಾಮಾಜಿಕ ಜಾಲತಾಣಗಳು ಮತ್ತು ಸುಳ್ಳು ಸುದ್ದಿಗಳು..!

ಮತ್ತೊಂದು ಮುಖ್ಯವಾದ ವಿಷಯವನ್ನು ರೈತರು ಗಮನಿಸಬೇಕಾದ್ದೆಂದರೆ, ಉಳುಮೆಗೆ ಉಪಯೋಗಿಸುವ ಎತ್ತುಗಳಲ್ಲಿ ಈ ಸಮಸ್ಯೆ ಜಾಸ್ತಿ. ಏಕೆಂದರೆ ಎತ್ತನ್ನು ಗಾಡಿಗೆ ಕಟ್ಟಿದಾಗ ಅಥವಾ ಉಳುಮೆಗೆ ಬಳಸುವಾಗ ನೊಗ ಪದೇ ಪದೆ ಕೊಂಬಿನ ಬುಡಕ್ಕೆ ಉಜ್ಜುತ್ತಿದ್ದಲ್ಲಿ ಅದರಿಂದ ಈ ಕಾಯಿಲೆಯ ಸಂಭವ ಹೆಚ್ಚು.

ಕೆಲವು ರೈತರು ಎತ್ತಿನ ಕೊಂಬು ಸುಂದರವಾಗಿ ಕಾಣಿಸಲೆಂದು, ಅದನ್ನು ಮೇಲಿಂದ ಮೇಲೆ ಕೆತ್ತುತ್ತಾರೆ. ಅಲ್ಲದೇ ವಿವಿಧ ಬಗೆಯ ಬಣ್ಣಗಳನ್ನೂ ಸಹ ಹಚ್ಚುತ್ತಾರೆ. ಇದರಿಂದ ಕೊಂಬಿನ ಕ್ಯಾನ್ಸರಿನ ಸಾಧ್ಯತೆ ಜಾಸ್ತಿ. ಇದಲ್ಲದೇ ಹಲವಾರು ಪತ್ತೆಯಾಗದ ಕಾರಣಗಳಿಂದಲೂ ಸಹ ಈ ಪಿಡುಗು ಎತ್ತುಗಳನ್ನು ಬಾಧಿಸಬಹುದು.

ಲಕ್ಷಣಗಳು

ಈ ಕಾಯಿಲೆ ಉದ್ದ ಕೊಂಬಿನ ಎತ್ತುಗಳಲ್ಲಿ ಸಾಮಾನ್ಯವಾಗಿ ಬರುತ್ತದೆ. ಪ್ರಾರಂಭಿಕ ಹಂತದಲ್ಲಿ ಕೋಡಿನ ಬುಡದಲ್ಲಿ ಮೇಣದಂತಹ ವಾಸನಾಯುಕ್ತ ಸ್ರಾವ ಶುರುವಾಗುತ್ತದೆ. ಕೆಲವೊಮ್ಮೆ ಮೂಗಿನಿಂದ ಸಣ್ಣದಾಗಿ ರಕ್ತ ಸ್ರಾವವೂ ಸಹ ಪ್ರಾರಂಭವಾಗಬಹುದು.

ಕೊಂಬಿನ ಬುಡದ ಒಳಗಿನಿಂದ ಗಡ್ಡೆಯು ಬೆಳೆಯಲು ಪ್ರಾರಂಭಿಸುತ್ತಿದ್ದ0ತೆ, ಎತ್ತು ನೋವಿನಿಂದ ಪದೇ ಪದೇ ಕೊಂಬುಗಳನ್ನು ಗೋಡೆಗೆ ಉಜ್ಜಲು ಪ್ರಾರಂಭಿಸುತ್ತದೆ. ತಲೆಯನ್ನು ಪದೇ ಪದೇ ಅಡ್ಡಡ್ಡ ಅಲುಗಾಡಿಸುತ್ತಾ ಗೋಡೆ ಇತ್ಯಾದಿಗಳಿಗೆ ಡಿಕ್ಕಿ ಹೊಡೆಯಲು ಪ್ರಾರಂಭಿಸುತ್ತದೆ. ಅಲ್ಲದೇ ಎತ್ತುಗಳು ತಲೇಯನ್ನು ಯಾವಾಗಲೂ ಕೆಳಗೆ ಹಾಕಿಕೊಂಡು ನಿಲ್ಲಬಹುದು.

ನಂತರ ಕ್ರಮೇಣವಾಗಿ ಕೊಂಬು ಬಾಗಲು ಪ್ರಾರಂಭಿಸುತ್ತದೆ. ಕೊಂಬಿನ ಬುಡ ಚರ್ಮಕ್ಕೆ ಅಂಟಿದ ಸ್ಥಳದಲ್ಲಿ ಸಣ್ಣದಾಗಿ ಪ್ರಾರಂಭವಾಗುವ ಗಾಯ, ಕ್ರಮೇಣ ದೊಡ್ಡದಾಗುತ್ತಾ ಹೋಗುತ್ತದೆ. ಸೂಕ್ತ ಸಮಯದಲ್ಲಿ ಉತ್ತಮವಾದ ಚಿಕಿತ್ಸೆ ದೊರೆಯದೇ ಹೋದಲ್ಲಿ, ಕೊಂಬಿನ ಸುತ್ತ ವೃತ್ತಾಕಾರವಾದ ಗಾಯವಾಗಿ, ವೃಣವಾಗಿ, ಕೊಂಬು ಬಿದ್ದು ಹೋಗಬಹುದು. ಅಲ್ಲದೇ ತೀವೃವಾದ ರಕ್ತ ಸ್ರಾವವಾಗುವುದರಿಂದ ಜಾನುವಾರು ರಕ್ತ ಹೀನತೆಯಿಂದ ಬಳಲುತ್ತದೆ. ನಂತರ ಎತ್ತು ನಿಶ್ಯಕ್ತಗೊಂಡು ಮರಣವನ್ನಪ್ಪಬಹುದು.

ಪತ್ತೆ ಹಚ್ಚುವಿಕೆ ವಿಧಾನ

ಈ ಕಾಯಿಲೆಯನ್ನು ಪತ್ತೆಹಚ್ಚುವುದು ಪ್ರಾರಂಭಿಕ ಹಂತದಲ್ಲಿ ಕಷ್ಟಕರ. ಕ್ಯಾನ್ಸರ್ ಗಡ್ಡೆಯು ಬೆಳೆಯುತ್ತಿದ್ದಂತೆ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸಬಹುದು. ರೋಗ ಲಕ್ಷಣವನ್ನು ಅವಲಂಬಿಸಿ ಕಾಯಿಲೆಯನ್ನು ಪತ್ತೆ ಹಚ್ಚುವ ವಿಧಾನವೊಂದೇ ಸಧ್ಯಕ್ಕೆ ಸುಲಭಕ್ಕೆ ಲಭ್ಯವಿರುವ ವಿಧಾನ. ಕ್ಷಕಿರಣ ವಿಧಾನದಿಂದಲೂ ಸಹ ಪತ್ತೆ ಹಚ್ಚಬಹುದಾದರೂ ಸಹ ಎಲ್ಲ ಕಡೆ ಈ ಸೌಲಭ್ಯ ಲಭ್ಯವಿಲ್ಲ. ಬಾಧೆಗೊಳಗಾಗಿರುವ ಕೊಂಬಿನ ಬುಡದ ಅಂಗಾAಶದ ಬಯಾಪ್ಸಿಯನ್ನು ಪರೀಶೀಲಿಸಿದರೂ ಸಹ ರೋಗ ಪತ್ತೆಯಾದೀತು.

ಚಿಕಿತ್ಸೆ

ಕ್ಯಾನ್ಸರ್ ಎಂದರೆ ಮನುಷ್ಯರಲ್ಲಿಯೇ ಉತ್ತಮವಾದ ಚಿಕಿತ್ಸೆ ಇಲ್ಲ. ಅದರಲ್ಲೂ ಪತ್ತೆ ಹಚ್ಚಲು ಕಷ್ಟಕರವಾದ ಈ ಪಿಡುಗಿನ ಚಿಕಿತ್ಸೆ ಕಷ್ಟಕರವೇ ನಿಜ. ಆದರೆ ರೋಗದ ಪ್ರಾರಂಭಿಕ ಹಂತದಲ್ಲಿ ಇಡೀ ಕೋಡನ್ನು ಬುಡ ಸಮೇತ ತಜ್ಞ ನುರಿತ ಶಸ್ತಚಿಕಿತ್ಸಾ ತಜ್ಞ ಪಶುವೈದ್ಯರು ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆದು ಹಾಕಿದಲ್ಲಿ ಎತ್ತಿನ ಜೀವವನ್ನು ಕಾಪಾಡಬಹುದು.

ಇದಕ್ಕೆ ರೈತರ ಇದಕ್ಕೆ ರೈತರ ಸಹಕಾರ ಬಹಳ ಮುಖ್ಯ ಬಹಳಷ್ಟು ರೈತರು ಎತ್ತಿನ ಕೊಂಬನ್ನು ತೆಗೆದರೆ ಅದರ ಅಂದಗೆಟ್ಟು ಅದರ ಬೆಲೆ ಹೊರಟು ಹೋಗುತ್ತದೆಂದು ಶಸ್ತ್ರ ಚಿಕಿತ್ಸೆಗೆ ಹಿಂಜರಿಯುತ್ತಾರೆ. ಎತ್ತಿನ ಜೀವಕ್ಕಿಂತ ಅದರ ಅಂದ ಮುಖ್ಯವಲ್ಲ ಎಂಬುದು ತಿಳಿದಿರಲಿ. ಇದು ಔಷಧಗಳಿಂದ ಗುಣಪಡಿಸಲು ಅಸಾಧ್ಯವೆಂದು ಹೇಳಬಹುದಾದ ಒಂದು ಕಾಯಿಲೆ.

ತಡೆಗಟ್ಟುವಿಕೆ

ರೈತರು ಅವರ ಎತ್ತುಗಳ ಕೊಂಬನ್ನು ನಿಯಮಿತವಾಗಿ ಗಮನಿಸುತ್ತಾ ಇರಬೇಕು. ಯಾವುದೇ ಕಾರಣಕ್ಕೂ ಅಂದ ಅಥವಾ ಬೆಲೆ ಹೆಚ್ಚಿಸಲು ಕೊಂಬನ್ನು ಕೆತ್ತುವುದು, ಬಣ್ಣ ಹಚ್ಚುವುದು ಇತ್ಯಾದಿ ಕಾರ್ಯಗಳನ್ನು ಮಾಡಬಾರದು. ಎತ್ತುಗಳನ್ನು ಉಳುಮೆಗೆ ಅಥವಾ ಗಾಡಿಗೆ ಕಟ್ಟುವಾಗ ನೊಗ ಕೊಂಬಿನ ಬುಡಕ್ಕೆ ಉಜ್ಜದಂತೆ ಎಚ್ಚರ ವಹಿಸುವುದು ಒಳಿತು.

ಪ್ರಾರಂಭಿಕ ಹಂತದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿದರೆ ಉತ್ತಮ ಪರಿಣಾಮ ಸಿಗಬಹುದು. ಚಿಕಿತ್ಸೆ ತಡವಾದಷ್ಟೂ ಗುಣವಾಗುವ ಸಾಧ್ಯತೆ ಕ್ಷೀಣಿಸುವುದು. ಕೊಂಬಿನ ಬುಡದಿಂದ ಸ್ರಾವವಾಗುತ್ತಿದ್ದಲ್ಲಿ ಮನೆಮದ್ದಿನ ಸಹವಾಸಕ್ಕೆ ಮತ್ತು ನಾಟಿ ವೈದ್ಯರ ಸಹವಾಸಕ್ಕೆ ಹೋಗದೇ ತಜ್ಞ ಪಶುವೈದ್ಯರನ್ನು ಶೀಘ್ರವೇ ಸಂಪರ್ಕಿಸಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕ್ಯಾನ್ಸ್ ಚಲನಚಿತ್ರೋತ್ಸವ | ಭಾರತದ ನಿರ್ಮಾಪಕಿ ಪಾಯಾಲ್ ಕಪಾಡಿಯಾಗೆ ಗ್ರಾಂಡ್ ಪ್ರಿಕ್ಸ್ ಪ್ರಶಸ್ತಿ

Published

on

ಸುದ್ದಿದಿನ ಡೆಸ್ಕ್ : ಫ್ರಾನ್ಸ್‌ನಲ್ಲಿ ನಡೆದಿರುವ ಕ್ಯಾನ್ಸ್ ಚಿತ್ರೋತ್ಸವದಲ್ಲಿ ಭಾರತದ ಚಿತ್ರ ನಿರ್ಮಾಪಕಿ ಪಾಯಲ್ ಕಪಾಡಿಯಾ, ಗ್ರಾಂಡ್ ಪ್ರಿಕ್ಸ್, ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಇಬ್ಬರು ನರ್ಸ್‌ಗಳ ಜೀವನ ಸುತ್ತಲಿನ ಕಥಾವಸ್ತು ಹೊಂದಿರುವ ’ಆಲ್ ವಿ ಇಮ್ಯಾಜಿನ್ ಆಜ್ ಲೈಟ್’ ಚಿತ್ರ ಪಾಮೆ ಡೋರ್ ವರ್ಗದಲ್ಲಿ ನಾಮನಿರ್ದೇಶಿತಗೊಂಡಿದ್ದು, ಈ ವರ್ಗದ 2ನೇ ಸ್ಥಾನವಾದ ಗ್ರಾಂಡ್ ಪ್ರಿಕ್ಸ್‌ಗೆ ಪಾತ್ರವಾಯಿತು.

ಇದರೊಂದಿಗೆ ಭಾರತ ಈ ಉತ್ಸವದಲ್ಲಿ ಚಿತ್ರ ನಿರ್ಮಾಣಕ್ಕಾಗಿ 2, ನಟನೆಗಾಗಿ 1, ಹಾಗೂ ಛಾಯಾಗ್ರಹಣಕ್ಕಾಗಿ 1ಹೀಗೆ ಒಟ್ಟು 4 ಗೌರವಗಳನ್ನು ಪಡೆದಂತಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಈ ಸಾಧನೆಗಾಗಿ ಪಾಯಲ್ ಕಪಾಡಿಯಾ ಅವರನ್ನು ಅಭಿನಂದಿಸಿದ್ದಾರೆ.

ಎಫ್‌ಟಿಐಐನ ಹಳೆಯ ವಿದ್ಯಾರ್ಥಿ ಪಾಯಲ್ ಕಪಾಡಿಯಾ ಅವರ ವಿಶೇಷವಾದ ಕೌಶಲ್ಯ ಭಾರತೀಯ ಹೊಸ ತಲೆಮಾರಿನ ನಿರ್ಮಾಪಕರಿಗೆ ಸ್ಫೂರ್ತಿಯಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ಕ್ರೀಡೆ

ಬೆಳಗಿನ ಸುದ್ದಿ ಮುಖ್ಯಾಂಶಗಳು

Published

on

ಬೆಳಗಿನ ಸುದ್ದಿ ಮುಖ್ಯಾಂಶಗಳು

  1. ರಾಜ್ಯ ವಿಧಾನಪರಿಷತ್ತಿನ 6 ಸ್ಥಾನಗಳಿಗೆ ಮುಂದಿನ ತಿಂಗಳ 3 ರಂದು ಚುನಾವಣೆ ನಡೆಯಲಿದೆ. ದ್ವೈವಾರ್ಷಿಕ ಚುನಾವಣೆಗೆ ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನೆ ಕಾರ್ಯ ಪೂರ್ಣಗೊಂಡಿದ್ದು, ಒಟ್ಟು 91ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಇಂದು ಕೊನೆಯ ದಿನವಾಗಿದೆ.
  2. ದೇಶದ ಉತ್ತರದ ರಾಜ್ಯಗಳಲ್ಲಿ ನಿನ್ನೆ ತೀವ್ರ ಬಿಸಿಗಾಳಿ ವಾತಾವರಣ ಉಂಟಾಗಿತ್ತು. ಮುಂದಿನ 4 ದಿನಗಳಲ್ಲಿ ವಾಯವ್ಯ ಪೂರ್ವ ಹಾಗೂ ಮಧ್ಯಭಾರತದ ಬಯಲು ಪ್ರದೇಶಗಳಲ್ಲಿ ತೀವ್ರ ಬಿಸಿಗಾಳಿ ವಾತಾವರಣವಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಸೂಚಿಸಿದೆ.
  3. ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಪ್ರದೇಶಾದ್ಯಂತ 40 ರಿಂದ 55 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ. ಸಮುದ್ರ ಉಕ್ಕೇರಲಿದ್ದು, ಮುಂಜಾಗ್ರತಾ ಕ್ರಮವಾಗಿ ಬುಧವಾರದವರೆಗೆ ಸಮುದ್ರಕ್ಕೆ ಇಳಿಯಬಾರದು ಎಂದು ಮೀನುಗಾರರಿಗೆ ಉತ್ತರಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚನೆ ನೀಡಿದ್ದಾರೆ.
  4. ತೈವಾನ್‌ನ ಅಧ್ಯಕ್ಷ ಹುದ್ದೆ ಆಯ್ಕೆಯಾಗಿರುವ ಲೈ ಛಿಂಗ್-ತೆ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರು ಜನವರಿಯಲ್ಲಿ ನಡೆದ ಚುನಾವಣೆಯಲ್ಲಿ ಜಯ ಸಾಧಿಸಿದ್ದಾರೆ. ಕಳೆದ 4 ವರ್ಷಗಳಿಂದ ದೇಶದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ 64 ವರ್ಷದ ಲೈ ಅವರು, ತೈವಾನ್‌ನ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಹೇಳಿದ್ದಾರೆ.
  5. ಶ್ರೀಲಂಕಾದ ಸೀತಾಮಾತೆ ಮಂದಿರ-ಸೀತಾ ಇಳಿಯಾದಲ್ಲಿ ನಿನ್ನೆ ಕುಂಬಾಭಿಷೇಕ ಶ್ರದ್ಧಾ-ಭಕ್ತಿ ಸಡಗರ ಸಂಭ್ರಮಗಳಿಂದ ಜರುಗಿತು. ಅಯೋಧ್ಯೆಯ ಸರಯೂ ನದಿಯಿಂದ ತರಲಾಗಿದ್ದ ಸುಮಾರು 25ಲೀಟರ್ ಪವಿತ್ರ ಜಲದಿಂದ ಮಂದಿರದ ಗೋಪುರಕ್ಕೆ ಅಭಿಷೇಕ ನೆರವೇರಿಸಲಾಯಿತು. ಭಾರತ-ನೇಪಾಳ, ಶ್ರೀಲಂಕಾ ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿದ್ದ ಭಕ್ತಾದಿಗಳು ಈ ದೃಶ್ಯವನ್ನು ಕಣ್ಮನಗಳಲ್ಲಿ ತುಂಬಿಕೊಂಡರು.
  6. ಭಾರತದ ಗ್ರಾಂಡ್ ಮಾಸ್ಟರ್ ಅರವಿಂದ್ ಚಿದಂಬರಂ ಶಾರ್ಜಾ ಮಾಸ್ಟರ್‍ಸ್ ಚೆಸ್ ಪಂದ್ಯಾವಳಿಯಲ್ಲಿ ಅತಿಥೇಯ ಶಾರ್ಜಾದ ಎ.ಆರ್. ಸುಲೆಹ್ ಸಲೀಂ ಅವರನ್ನು ಪರಾಭವಗೊಳಿಸಿ 4.5ಅಂಕಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ.
  7. ಗುವಾಹಾಟಿಯಲ್ಲಿ ನಿನ್ನೆ ರಾತ್ರಿ ನಡೆಯಬೇಕಿದ್ದ ರಾಜಸ್ಥಾನ ರಾಯಲ್ಸ್ ಹಾಗೂ ಕೊಲ್ಕೊತ್ತಾ ನೈಟ್ ರೈಡರ್‍ಸ್ ನಡುವಿನ ಐಪಿಎಲ್ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತು. ಕೆಲಕಾಲ ಮಳೆ ಬಂದು ನಿಂತ ನಂತರ ನಡೆದ ಟಾಸ್ ಗೆದ್ದ ಕೊಲ್ಕತ್ತಾ ತಂಡ ಫೀಲ್ಡಿಂಗ್ ಆಯ್ದುಕೊಂಡಿತ್ತು. ಆದರೆ ಪುನಃ ಮಳೆ ಬಂದ ಹಿನ್ನೆಲೆ ಪಂದ್ಯ ರದ್ದುಗೊಳಿಸಲಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ತಂತ್ರಜ್ಞಾನ ಮೋಡಿ : ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

Published

on

  • ಡಾ. ಚಂದ್ರಪ್ಪ ಎಚ್, ಸಹಾಯಕ ಪ್ರಾಧ್ಯಾಪಕರು, ಭೌತವಿಜ್ಞಾನ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು, ಚಿತ್ರದುರ್ಗ

90ರ ದಶಕದಿಂದೀಚೆಗೆ, ಎಲ್ಲೆಡೆ ಸದ್ದಿಲ್ಲದೇ ಕ್ರಮೇಣ ಒಕ್ಕರಿಸತೊಡಗಿದೆ ಆಧುನಿಕ ಯಾಂತ್ರಿಕೃತ ಬದುಕು.

ಜನಸಾಮಾನ್ಯರ ಅರಿವಿನ-ಪರಿಧಿ ತಿಳಿಗೊಳ್ಳುವುದರ ಮೊದಲೇ ಊಹಿಸಲಾರದಷ್ಟು ಮಟ್ಟಿಗೆ ಇಂದು, ಸ್ವಚ್ಛಂದ ಹಳ್ಳಿ-ಸೊಬಗಿನ ಕೂಡು-ಕುಟುಂಬದ, ಮೈ-ಮನಸ್ಸು ತುಂಬಿದ, ಪರಿಶುದ್ಧ ಜೀವನ ಪ್ರೀತಿ, ಉತ್ಸಾಹ, ಮಮತೆಯನ್ನು ಇನ್ನಿಲ್ಲವಾಗಿಸಿದೆ ಎನಿಸುತ್ತದೆಯಲ್ಲವೆ?

ಹೇಗೆಂದರೆ, ಕಲ್ಪಿಸಿಕೊಂಡರೂ ಕಣ್ಣೆದುರಿಗೆ ತೆರೆದಿಡುವ ಅಮೂಲ್ಯ ಬದುಕು, ಅದೆಷ್ಟು ಬೇಗ ದಿಕ್ಕು-ದೆಸೆಯಿಲ್ಲದೆ ಕಣ್ಣು-ಕಟ್ಟಿದ ಸ್ಪರ್ಧೆಗಿಳಿದ ಕುದುರೆಯಂತೆ ಅಲೆಯುವಂತಾಗಿದೆ! ಅರೆಕ್ಷಣ, ಮೈಮನ ಕಸಿವಿಸಿಗೊಳ್ಳುತ್ತೆ! ಜೀವ ಮರುಗುತ್ತೆ. ಮತ್ತೆ ಮತ್ತೆ ಆ ಬಾಲ್ಯ, ಹಳ್ಳಿ ಬದುಕನ್ನ ಅರಸಿ ಬಯಸುತ್ತೆ! ಜನತೆ, ಹಳ್ಳಿಯಲ್ಲಿನ ಗಿಡ-ಮರ, ಪಶು-ಪಕ್ಷಿ, ಹಳ್ಳ-ಕೊಳ್ಳ, ಬೆಟ್ಟ-ಗುಡ್ಡ ಮುಂತಾದ ಪರಿಸರದ ಸಕಲ ಜೀವಿಗಳೊಂದಿಗೆ ಒಂದಾಗಿ ನಲ್ಮೆಯಿಂದ ಪರಿಶುದ್ಧ ಮನದಿ, ಭೂ ತಾಯಿ, ತಿಳಿ-ನೀಲಿ ಆಗಸ, ಮಳೆ, ಗಾಳಿ, ಬೆಳಕನ್ನ ಇನ್ನಿಲ್ಲದೆ ಅಪ್ಪಿ, ಅತ್ಯಂತ ಸಂತಸ-ಖುಷಿಯಿಂದ, ಇರುವ ಪರಿಸ್ಥಿತಿಗೆ ಒಗ್ಗಿ , ಬದುಕು ರೂಪಿಸಿಕೊಂಡು ಜೀವನೋತ್ಸಾಹ ತಳೆಯುತ್ತಿದ್ದರು.

ನಿಜ ಹೇಳಬೇಕೆಂದರೆ, ಪರಿಸರವೇ ಪಾಠ; ಭೂ ತಾಯಿಯೇ ಹಾಸಿಗೆ; ಆಗಸವೇ ಹೊದಿಕೆಯಾಗಿ, ದುಡಿದ, ದಣಿವರಿದ ಮನದಿ, ಕಣ್ತುಂಬಿ ನೆಮ್ಮದಿಯ ನಿಟ್ಟುಸಿರುಗೈವ ಕ್ಷಣಗಳು ಅದಾಗಿತ್ತು!

ಹಳ್ಳಿಯಲ್ಲಿನ ಆಟೋಟಗಳು, ತಮಾಷೆಯ ಕ್ಷಣಗಳು, ಆಟಿಕೆಗಳು, ಸಾಮಾನುಗಳು, ಹಬ್ಬ-ಹರಿದಿನಗಳು, ಜಾತ್ರೆ-ಸಂತೆಗಳು, ಒಕ್ಕಲು ಸಮಯದ ಸುಗ್ಗಿಯ ಮಧುರ ಕ್ಷಣಗಳು ಇತ್ಯಾದಿ ಜನತೆಯ ಮುಗ್ಧ -ಮನಸ್ಸು ಮತ್ತು ಹೊಳೆವ ಮುಖದಲ್ಲಿ, ನಿಷ್ಕಲ್ಮಶ ಮಂದಹಾಸ ಮೂಡಿಸಿ, ಬೆಲೆ ಕಟ್ಟಲಾಗದ ಖುಷಿಯ ಕ್ಷಣಗಳನ್ನು ಸದಾ ಅವರಲ್ಲಿ ಕಂಗೊಳಿಸುತ್ತಿದ್ದವು.

ಎಲ್ಲರೂ ದುಡಿವವರು; ಎಲ್ಲರೂ ಭಾಗಿಯಾಗುವವರು; ಎಲ್ಲರೊಳಗೊಂದಾಗಿ ಬಾಳುವವರು; ಎಲ್ಲರಲ್ಲೂ ಧನ್ಯತಾ ಭಾವ; ಆದರಣೀಯತೆ, ಪೂಜ್ಯತಾ-ಭಾವ ತುಂಬಿತ್ತು! ಅಂತಃಕರಣೆ, ಕರುಣೆ, ಪ್ರೀತಿ-ವಿಶ್ವಾಸ, ತಕ್ಕಮಟ್ಟಿಗೆ ಮಾನವೀಯತೆ ಬದುಕ-ಪ್ರೀತಿ ಹೆಚ್ಚಿಸಿತ್ತು!

ಈಗಾಗಲೇ, ನಾವು ಯಾವ ಸ್ಥಿತಿ ತಲುಪಿದ್ದೇವೆಂದರೆ: ಶಾಲಾ ರಜೆಯ ದಿನಗಳಲ್ಲಿ, ಈಗಿನ ಮಕ್ಕಳಿಗೆ ಆ ಕಾಲದ ಹಳ್ಳಿಗಳ ಜೀವನ ಪರಿಚಯಿಸಲು ಗೊಟಗೋಡಿಯ ರಾಕ್ ಗಾರ್ಡನ್ – ಹಾವೇರಿ, ಹೆರಿಟೇಜ್ ವಿಲೇಜ್ – ಮಣಿಪಾಲ, ಅಲ್ಲಲ್ಲಿ ಸಾರ್ವಜನಿಕ ಉದ್ಯಾನವನ, ಹಾಗೂ ಇತರೆ ಕೆಲವು ಮ್ಯೂಸಿಯಮ್ ಗಳತ್ತ ಮುಖ ಮಾಡಿಬೇಕೆ ಹೊರತು ನೈಜ ಚಿತ್ರಣ ಪ್ರಸ್ತುತ ಹಳ್ಳಿಗಾಡಿನಲ್ಲೂ ಕಾಣಸಿಗದು! ಸ್ವತಃ ಹಳ್ಳಿಗರೇ ಪರಿತಪಿಸುವ ಸ್ಥಿತಿ.

ಕಾರಣ ಇಷ್ಟೆ: ತಂತ್ರಜ್ಞಾನದ ಆವಿಷ್ಕಾರ ಮತ್ತು ಎಲ್ಲ ಕ್ಷೇತ್ರಗಳಲ್ಲೂ ಹೊಕ್ಕಿರುವ ಅದರ ಗಾಢವಾದ ಛಾಯೆ. ಇಡೀ ‘ಪ್ರಪಂಚವೇ ಒಂದು ಹಳ್ಳಿ’ (Global Village) ಯಾಗಿ ಮಾರ್ಪಟ್ಟಿರುವ ಭಾವನೆ. ವಿಶೇಷವಾಗಿ, ದೂರವಾಣಿ, ಇಂಟರ್ನೆಟ್, ಯುಟ್ಯೂಬ್, ನೇರ ಮೆದುಳಿಗೆ ಕೈ ಹಾಕಿರುವ ಸಾಮಾಜಿಕ ಜಾಲತಾಣಗಳ ಡ್ರಗ್ಸ್ ರೀತಿಯ ಮಾನಸಿಕ ಮೋಹ ಬೆಂಬಿಡದೆ ಇಂದಿನ ಆಧುನಿಕ ಜನತೆಯ ಚಿಂತನಾರ್ಹ ಯೋಚನಾ ಶಕ್ತಿ, ಆರೋಗ್ಯ , ಕೌಟುಂಬಿಕ ಮೌಲ್ಯಗಳು, ಮಾನವೀಯ ಗುಣಗಳು ಹಾಗೂ ಒಟ್ಟಾರೆ ಜೀವನ ಶೈಲಿಯನ್ನೇ ಅಕ್ಷರಸಃ ನುಂಗಿಹಾಕಿವೆ! ಅಲ್ಲದೆ, ಇದು ಇಂದಿನ ಅನಿವಾರ್ಯವೆಂಬಂತೆ ಕಠೋರ ಸನ್ನಿವೇಶ ಹುಟ್ಟುಹಾಕಿವೆ.

ಒಂದೆಡೆ, ‘ಅತೀಯಾದ ಅಮೃತವೂ ವಿಷ’ವೆನ್ನುವಂತೆ, ಹಾಗೂ ಊಟದಲ್ಲಿ ‘ರುಚಿಗೆ ತಕ್ಕಷ್ಟು ಉಪ್ಪಿ’ರುವಂತೆ ಹಲವು ಒಳಿತು-ಕೆಡುಕಗಳ ನಡುವೆ ಎಲ್ಲವೂ ಹಿತಮಿತವಾಗಿ ಬಳಕೆಯಲ್ಲಿದ್ದರೆ ಚೆನ್ನ. ಅಲ್ವೇ? ಮೈ ಮನ ಆರೋಗ್ಯಕರವಾಗಿರುತ್ತೆ; ಜೀವನ ಉತ್ಸಾಹದಿಂದ ಕೂಡಿರುತ್ತೆ.
ಜೊತೆಗೆ, ಇತ್ತೀಚೆಗೆ ಜಗತ್ತಿನೆಲ್ಲೆಡೆ ಭಾರೀ ಸಂಚಲನ ಸೃಷ್ಟಿಸಿರುವ ‘ಕೃತಕ ಬುದ್ಧಿಮತ್ತೆ’ (Artificial Intelligence – AI) ಹಾಗೂ ‘ಬಯೋಚಿಪ್’ ತಂತ್ರಜ್ಞಾನಗಳು. ಈ ಎರಡೂ ತಂತ್ರಜ್ಞಾನಗಳು ಬಹುತೇಕ ಮನುಷ್ಯನನ್ನ ಸಹ ಒಂದು ಸರಕಾಗಿ ನೋಡುವ ದೂರದೃಷ್ಟಿ ಹೊಂದಿವೆ ಎಂದರೆ ತಪ್ಪಾಗಲಿಕ್ಕಿಲ್ಲ! ತೀರ ಇತ್ತೀಚೆಗೆ, ತಂತ್ರಜ್ಞಾನ ಜಗತ್ತಿನ ಹೆಸರಾಂತ ಉದ್ಯಮಿ: ಎಲಾನ್ ಮಸ್ಕ್ ತಮ್ಮ ‘ನ್ಯೂರಾಲಿಂಕ್’ (Neuralink) ಸಂಸ್ಥೆಯ ಮೂಲಕ ಪ್ರಪಂಚದ ಮೊಟ್ಟ ಮೊದಲ ಪ್ರಯತ್ನವಾಗಿ ಆರೋಗ್ಯವಂತ ವ್ಯಕ್ತಿಯೊಬ್ಬರ ಮೆದುಳಿನಲ್ಲಿ ಪ್ರಾಯೋಗಿಕ – ‘ಮೊದಲ ಬಯೋಚಿಪ್’ ಅಳವಡಿಸಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ! ಇದುವರೆಗೂ, ಮೊಬೈಲ್ ನಲ್ಲಿ ಕೇವಲ ‘ಮೆಮೊರಿ ಕಾರ್ಡ್’ ಬಳಸಿ, ಅದರಲ್ಲಿ ಸಂಗ್ರಹಿಸಿದ ಮಾಹಿತಿ ಬೇಕೆಂದಾಗ ಆಲಿಸುವ, ನೋಡುವ ಪರಿಪಾಠದ ಪರಿಚಯವಿದ್ದ ನಮಗೆ, AI ಹಾಗೂ Biochip ತಂತ್ರಜ್ಞಾನಗಳ ಅವತಾರಗಳು ಊಹೆಗೂ ಮೀರಿದ್ದು ಅನ್ಸುತ್ತೆ ಕೂಡ.

ಆಗ, ಜಗತ್ತು ಹೇಗಿರಬೇಡ? ತಂತ್ರಜ್ಞಾನ ತೊರೆದು ಮನುಷ್ಯ, ಜೀವನ ಕಲ್ಪಿಸಿಕೊಳ್ಳಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಅದು, ಕೇವಲ ಮನುಷ್ಯನ ಅವಶ್ಯಕತೆಗಳಿಗೆ ಪೂರಕವಾಗಿರಬೇಕೆ ಹೊರತು; ಆತನನ್ನ ಆಳುವ ಸ್ಥಿತಿ ತಲುಪಬಾರದು! ಮುಂದಿನ ದಿನಗಳಲ್ಲಿ, ಮನುಷ್ಯ ಎದುರಿಸಬಹುದಾದ ಭಯಾನಕ ತಂತ್ರಜ್ಞಾನ ಸಂಕೋಲೆಗಳನ್ನು ಕುರಿತು ಚರ್ಚಿಸುವ ಅಗತ್ಯ ಇಂದಿನ ತುರ್ತು ಅನಿವಾರ್ಯ. ಆದರೆ, ಎಲ್ಲವೂ ಸಲೀಸಾಗಿ ಕೈಗೆಟುಕುವ ಇಂದಿನ ದಿನಗಳಲಿ, ಅತಿಯಾಗಿ ಮಿತಿಮೀರಿರುವ ಅನುಕೂಲಗಳು ಅಮೂಲ್ಯ ಖುಷಿಯ ಕ್ಷಣಗಳನ್ನು ಎಂದಿಗೂ ನೀಡಲಾರವು.

ಬದಲಿಗೆ, ಪ್ರತಿಷ್ಠೆಯ ಹೆಮ್ಮರಗಳಾಗಿ, ಜನತೆ ನಾಲ್ಕು ದಿನದ ಈ ಬಾಳಲಿ ಏನೋ ಬಹುದೊಡ್ಡ ಸಾಧನೆಗೈದವರಂತೆ, ಯಂತ್ರಮಾನವರಂತೆ ಬೀಗುವವರೆ!!? ಮೂಲಭೂತವಾಗಿ, ಮಾನವ ಸಹಿತ ಸಕಲ ಜೀವ-ಸಂಕುಲವೂ ವಾಸಯೋಗ್ಯ ಸ್ವಚ್ಛಂದ ಭೂಮಿ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಭೂಮಿಯಲ್ಲಿ, ಮಣ್ಣಿನ ಫಲವತ್ತತೆ ಹಾಗೂ ನೀರು ಸಂರಕ್ಷಿಸದೆ; ಗಿಡ-ಮರ ಬೆಳೆಸದೆ; ಹಸಿರು ಹೆಚ್ಚಿಸದೆ, ಮತ್ತು ಪರಿಸರ ಸಮತೋಲನ ಕಾಪಾಡದೆ; ಕೇವಲ ತಂತ್ರಜ್ಞಾನ ತಲೆಯಲಿ ಹೊತ್ತು, ಮನುಷ್ಯ ಉತ್ತಮ ಆಹಾರ, ಆರೋಗ್ಯ ಮತ್ತು ಜೀವನ ಕಟ್ಟಿಕೊಳ್ಳಲು ಎಂದಿಗೂ ಸಾಧ್ಯವಿಲ್ಲ. ಸಮರೋಪಾದಿಯಲ್ಲಿ, ಜನತೆ ಸ್ವ ಇಚ್ಛೆಯಿಂದ ಹಳ್ಳಿ-ಹಳ್ಳಿಗಳಿಂದ, ನಗರಗಳು, ಬೆಟ್ಟ-ಗುಡ್ಡಗಳಲ್ಲೆಡೆ ಬೃಹತ್ ಸಂಖ್ಯೆಯಲ್ಲಿ ಸಸಿಗಳನ್ನ ನೆಟ್ಟು, ಪಾಲನೆ-ಪೋಷಣೆಗೈಯ್ಯುವ ಚಳುವಳಿ ರೂಪದ ಆಂದೋಲನ ದೇಶಾದ್ಯಂತ ಅತ್ಯಂತ ತ್ವರಿತವಾಗಿ ಕೈಗೂಡಬೇಕು. ಈ ನಿಟ್ಟಿನಲ್ಲಿ, ಎಲ್ಲರೂ ಕೈಜೋಡಿಸಬೇಕು.

(ಲೇಖಕರು : ಡಾ. ಚಂದ್ರಪ್ಪ ಎಚ್, ಸಹಾಯಕ ಪ್ರಾಧ್ಯಾಪಕರು, ಭೌತವಿಜ್ಞಾನ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು, ಚಿತ್ರದುರ್ಗ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending