ದಿನದ ಸುದ್ದಿ
ಕರಾಳ ಶಾಸನಗಳ ಹೊಳೆಯಲ್ಲಿ ಮಾನವ ಹಕ್ಕುಗಳ ನಾವೆ
- ನಾ ದಿವಾಕರ
ನಾಗರಿಕ ಹಕ್ಕುಗಳು ಪ್ರಜಾತಂತ್ರ ವ್ಯವಸ್ಥೆಯ ಆಧಾರ ಸ್ತಂಭ. ಭಾರತ ಬ್ರಿಟೀಷ್ ವಸಾಹತು ಆಳ್ವಿಕೆಯಿಂದ ವಿಮೋಚನೆ ಹೊಂದಿದ ನಂತರ ಆಯ್ದುಕೊಂಡಿದ್ದು ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯನ್ನು. ಈ ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರ ವಹಿಸಿಕೊಳ್ಳುವ ಪ್ರತಿಯೊಂದು ಚುನಾಯಿತ ಸರ್ಕಾರ ಮಾನ್ಯತೆ ನೀಡಬೇಕಾದ್ದು ಈ ದೇಶದ ಸಂವಿಧಾನದ ಮೂಲ ತತ್ವಗಳಿಗೆ ಮತ್ತು ಪ್ರಜಾತಂತ್ರ ಮೌಲ್ಯಗಳಿಗೆ.
ಮಾನವ ಹಕ್ಕುಗಳು ಅಥವಾ ನಾಗರಿಕ ಹಕ್ಕುಗಳ ಪರಿಕಲ್ಪನೆ ಮಾನವ ಸಮಾಜ ಉಗಮವಾದ ದಿನದಿಂದಲೂ ಇದೆ. ಮಾನವ ತನ್ನ ಅಭ್ಯುದಯದ ಹಾದಿಯಲ್ಲಿ ತನ್ನ ಬದುಕುವ ಹಕ್ಕುಗಳನ್ನು ಪ್ರತಿಪಾದಿಸುತ್ತಲೇ ಆಧುನಿಕ ಯುಗವನ್ನು ತಲುಪಿದ್ದಾನೆ. ಸ್ವತಂತ್ರವಾಗಿ ಜೀವಿಸುವ ಮತ್ತು ಬದುಕನ್ನು ಕಟ್ಟಿಕೊಳ್ಳುವ ಹಕ್ಕುಗಳಿಗಾಗಿ ಮನುಕುಲ ಹೋರಾಡುತ್ತಲೇ ಬಂದಿದೆ.
ಆದರೆ ಈ ಮಾನವ ಹಕ್ಕುಗಳ ಪರಿಕಲ್ಪನೆಗೆ ಸಾಂಸ್ಥಿಕ ಮಾನ್ಯತೆ ಮತ್ತು ಸಾರ್ವತ್ರಿಕ ಸ್ವರೂಪ ದೊರೆತಿದ್ದು ಕೇವಲ 72 ವರ್ಷಗಳ ಹಿಂದೆ, ಡಿಸೆಂಬರ್ 10 1948ರಂದು. 20ನೆಯ ಶತಮಾನದ ಕ್ರಾಂತಿಕಾರಿ ಬೆಳವಣಿಗೆಗಳ ಹಿನ್ನೆಲೆಯಲ್ಲೇ ಸಂಭವಿಸಿದ ಎರಡು ಮಹಾಯುದ್ಧಗಳು ಮತ್ತು ಜಾಗತಿಕ ಸಂಪತ್ತಿನ ಹಂಚಿಕೆಗಾಗಿ ನಡೆದ ಈ ಯುದ್ಧಗಳಲ್ಲಿ ಬಲಿಯಾದ ಲಕ್ಷಾಂತರ ಅಮಾಯಕ ಜನರ ಜೀವಗಳು ಮಾನವ ಜಗತ್ತಿನ ಪ್ರಜ್ಞೆಯನ್ನು ಬಡಿದೆಬ್ಬಿಸಿತ್ತು.
ಎರಡನೆ ಮಹಾಯುದ್ಧದಲ್ಲಿ ಜರ್ಮನಿಯ ನಾಝಿಗಳ ಕ್ರೌರ್ಯಕ್ಕೆ ಬಲಿಯಾದ ಲಕ್ಷಾಂತರ ಯಹೂದಿಗಳು ಮತ್ತು ಮಹಾಸಮರದಲ್ಲಿ ಮಡಿದ ಕೋಟ್ಯಂತರ ಜನರು, ಅಣುಬಾಂಬ್ ಗೆ ಬಲಿಯಾದ ಜಪಾನಿನ ಅಮಾಯಕ ಜನತೆ ಈ ಎಲ್ಲ ಹಿಂಸಾತ್ಮಕ ಕೃತ್ಯಗಳು ಮಾನವ ಸಮಾಜದ ಘನತೆಗೆ ಧಕ್ಕೆ ತರುವಂತಹ ಬೆಳವಣಿಗೆಗಳಾಗಿದ್ದವು.
ಇದೇ ಸಂದರ್ಭದಲ್ಲಿ ವಿಶ್ವದಾದ್ಯಂತ ವಸಾಹತು ಆಳ್ವಿಕೆ ಕೊನೆಗೊಳ್ಳುತ್ತಿತ್ತು. ರಷ್ಯಾದ ಮಹಾಕ್ರಾಂತಿಯ ನೇರ ಪ್ರಭಾವ ಅನೇಕ ರಾಷ್ಟ್ರಗಳಲ್ಲಿ ಕಂಡುಬಂದಿದ್ದೇ ಅಲ್ಲದೆ ಸಾಮ್ರಾಜ್ಯಶಾಹಿಗಳಿಂದ, ವಸಾಹತು ಆಳ್ವಿಕೆಯಿಂದ ವಿಮೋಚನೆ ಹೊಂದಲು ಎಲ್ಲ ದೇಶಗಳೂ ಸಜ್ಜಾದವು. ಭಾರತವನ್ನೂ ಸೇರಿದಂತೆ ಹಲವು ರಾಷ್ಟ್ರಗಳು ತಮ್ಮದೇ ಆದ ಸ್ವತಂತ್ರ ಆಳ್ವಿಕೆಯ ಕನಸನ್ನು ಸಾಕಾರಗೊಳಿಸಲು ಸಾಧ್ಯವಾಯಿತು.
ಆದರೆ ಇದೇ ಸಂದರ್ಭದಲ್ಲಿ ಊಳಿಗಮಾನ್ಯ ವ್ಯವಸ್ಥೆಯ ಪಳೆಯುಳಿಕೆಗಳು ಬಂಡವಾಳ ವ್ಯವಸ್ಥೆಯಲ್ಲಿ ಉಳಿದುಕೊಂಡಿತ್ತು ರಷ್ಯಾ ಮತ್ತು ಚೀನಾ ಕ್ರಾಂತಿಯ ನಂತರ ಲ್ಯಾಟಿನ್ ಅಮೆರಿಕ, ಪೂರ್ವ ಯೂರೋಪ್ ಮತ್ತು ಆಫ್ರಿಕಾದ ದೇಶಗಳಲ್ಲಿ ಜನತೆ ಕ್ರಾಂತಿಕಾರಿ ಹೋರಾಟಗಳತ್ತ ಹೆಚ್ಚು ಒಲವು ತೋರಲಾರಂಭಿಸಿದ್ದರು. ಭಾರತದಲ್ಲೂ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ, ವಸಾಹತು ಆಳ್ವಿಕೆಯಿಂದ ವಿಮೋಚನೆ ಪಡೆದ ನಂತರವೂ, ಭೂ ಹೋರಾಟಗಳು ಹೆಚ್ಚಾದವು.
ಆಡಳಿತ ವ್ಯವಸ್ಥೆಯಲ್ಲಿ ತಮ್ಮ ದನಿಗೆ ಮಾನ್ಯತೆ ನೀಡಬೇಕೆನ್ನುವ ಜನಸಾಮಾನ್ಯರ, ದುಡಿಯುವ ವರ್ಗಗಳ ಆಗ್ರಹ ಎಲ್ಲೆಡೆ ಪ್ರತಿಧ್ವನಿಸತೊಡಗಿತ್ತು. ವಿಶ್ವದಾದ್ಯಂತ ಮಹಿಳೆಯರು, ಆದಿವಾಸಿಗಳು, ಅಭಿವೃದ್ಧಿ ವಂಚಿತರು, ಸಾಮಾಜಿಕವಾಗಿ ಶೋಷಣೆಗೊಳಗಾದವರು, ಸಮಾಜೋ ಆರ್ಥಿಕ ಪ್ರಗತಿಯಲ್ಲಿ ಅವಕಾಶವಂಚಿತರು ಮತ್ತು ಅಂಚಿಗೆ ತಳ್ಳಲ್ಪಟ್ಟ ಜನಸಮುದಾಯಗಳು ತಮ್ಮ ಹಕ್ಕುಗಳಿಗಾಗಿ ಹೋರಾಡಲಾರಂಭಿಸಿದರು. ಭಾರತದಲ್ಲಿ ಅಸ್ಪೃಶ್ಯತೆ ಮತ್ತು ಜಾತಿ ದೌರ್ಜನ್ಯ, ತಾರತಮ್ಯಗಳ ವಿರುದ್ಧ, ಆಫ್ರಿಕಾ ದೇಶಗಳಲ್ಲಿ, ಅಮೆರಿಕದಲ್ಲಿ ವರ್ಣಭೇದ ನೀತಿಯ ವಿರುದ್ಧ, ಕಪ್ಪು ಜನರ ಶೋಷಣೆಯ ವಿರುದ್ಧ ಜನಸಮುದಾಯಗಳ ಪ್ರತಿರೋಧದ ದನಿ ಹೆಚ್ಚಾಗತೊಡಗಿತ್ತು.
ಈ ಎಲ್ಲ ಹೋರಾಟಗಳು ತಾರ್ಕಿಕ ಅಂತ್ಯ ಕಂಡಿದ್ದು 1950-60ರ ದಶಕದಲ್ಲೇ ಆದರೂ ಇದರ ಒಳಸುಳಿವುಗಳು ಜಾಗತಿಕ ನೆಲೆಯಲ್ಲಿ ವ್ಯಕ್ತವಾಗತೊಡಗಿದ್ದು 1940ರ ದಶಕದ ಅಂತ್ಯದ ವೇಳೆಗೆ. ಸಾಮ್ರಾಜ್ಯಶಾಹಿ ಯುದ್ಧಗಳು ಉಂಟುಮಾಡಿದ ಹಾನಿ ಮತ್ತು ಜಗತ್ತಿನ ಸಾಮಾನ್ಯ ಜನತೆಯ ಮೇಲೆ ಇದರಿಂದ ಉಂಟಾದ ಭೀಕರ ಪರಿಣಾಮಗಳು ಶೋಷಿತ ಸಮುದಾಯಗಳನ್ನು ಎಚ್ಚರಿಸಿದ್ದವು. ವಸಾಹತುಶಾಹಿ ಆಳ್ವಿಕೆಯಿಂದ, ಸಾಮ್ರಾಜ್ಯಶಾಹಿ ಹಿಡಿತದಿಂದ ವಿಮೋಚನೆ ಪಡೆಯುವ ಉತ್ಸುಕತೆಯೊಡನೆಯೇ ಜಗತ್ತಿನ ಎಲ್ಲ ಪ್ರಜೆಗಳು ಸಮಾನ ಹಕ್ಕುಗಳೊಂದಿಗೆ ಬದುಕುವ ಒಂದು ವಾತಾವರಣವನ್ನು ಸೃಷ್ಟಿಸಲು ಕೆಲವು ಮನಸುಗಳು ಜಾಗೃತವಾಗಿದ್ದವು.
ಈ ಹಿನ್ನೆಲೆಯಲ್ಲೇ ರೂಪುಗೊಂಡ ಒಂದು ತಾತ್ವಿಕ ಪರಿಕಲ್ಪನೆ ಮಾನವ ಹಕ್ಕುಗಳು. ಎರಡನೆ ಮಹಾಯುದ್ಧದ ನಂತರದಲ್ಲಿ ಯುದ್ಧಗಳ ಭೀಕರತೆ ಮತ್ತು ಅದರಿಂದುಂಟಾಗುವ ಸಾವು ನೋವುಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವಿಶ್ವಶಾಂತಿಗಾಗಿ ರೂಪುಗೊಂಡ ವಿಶ್ವ ಸಂಸ್ಥೆಯು, ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಹಕ್ಕುಗಳಿರುವುದನ್ನು ಮನಗಂಡು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ಕರಡು ಸಿದ್ಧಪಡಿಸಲು ಒಂದು ಸಮಿತಿಯನ್ನು ರಚಿಸಿತ್ತು.
ಇದನ್ನು ಪ್ರತಿನಿಧಿಸುವುದೇ ಅಲ್ಲದೆ ಮೊದಲ ಅಧ್ಯಕ್ಷೆಯಾಗಿ ಕರಡು ಸಿದ್ಧಪಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದವರು 1933 ರಿಂದ 45ರವರೆಗೆ ಅಮೆರಿಕದ ಪ್ರಥಮ ಮಹಿಳಾ ಪ್ರಜೆಯಾಗಿದ್ದ, ಅಧ್ಯಕ್ಷ ರೂಸ್ ವೆಲ್ಟ್ ಅವರ ಪತ್ನಿ ಇಲೆನಾರ್ ರೂಸ್‍ವೆಲ್ಟ್. ಪೂರ್ವ ಪಶ್ಚಿಮಗಳ ಸಂಘರ್ಷದ ನೆಲೆಯಲ್ಲೇ ಒಂದು ಸರ್ವಸಮ್ಮತ ಮಾನವ ಹಕ್ಕುಗಳ ಒಡಂಬಡಿಕೆಯನ್ನು ಸಿದ್ಧಪಡಿಸುವಲ್ಲಿ ಇಲೆನಾರ್ ಯಶಸ್ವಿಯಾಗಿದ್ದರು.
ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ಜಾರಿಗೊಳಿಸಿದ ಹತ್ತು ವರ್ಷಗಳ ನಂತರ ವಿಶ್ವಸಂಸ್ಥೆಯ ಸಭೆಯೊಂದರಲ್ಲಿ “ ಮಾನವ ಹಕ್ಕುಗಳು ಎಲ್ಲಿ ಆರಂಭವಾಗುತ್ತವೆ ” ಎನ್ನುವ ವಿಷಯವನ್ನು ಕುರಿತು ಉಪನ್ಯಾಸ ನೀಡಿದ್ದ ರೂಸ್‍ವೆಲ್ಟ್ ಹೀಗೆ ಹೇಳುತ್ತಾರೆ :
“ ಮಾನವ ಹಕ್ಕುಗಳು ಮೂಲತಃ ಎಲ್ಲಿ ಆರಂಭವಾಗುತ್ತದೆ. ಸಣ್ಣ ಪುಟ್ಟ ಸ್ಥಳಗಳಲ್ಲಲಿ, ನಮ್ಮ ಮನೆಗಳ ಹತ್ತಿರ. ಇದು ಎಷ್ಟು ಸಣ್ಣ ಪ್ರಮಾಣದ್ದಾಗಿರುತ್ತದೆ ಎಂದರೆ ಇದನ್ನು ವಿಶ್ವ ಭೂಪಟದಲ್ಲಿ ಗುರುತಿಸಲಾಗುವುದಿಲ್ಲ. ಆದರೂ ಅದು ಪ್ರತಿಯೊಬ್ಬ ವ್ಯಕ್ತಿಯ ಪ್ರಪಂಚವೇ ಆಗಿರುತ್ತದೆ. ಆ ವ್ಯಕ್ತಿಯ ಬದುಕಿನ ನೆರೆಹೊರೆ, ವ್ಯಾಸಂಗ ಮಾಡುವ ಶಾಲೆ ಕಾಲೇಜು, ನೌಕರಿ ಮಾಡುವ ಕಾರ್ಖಾನೆ, ಕಚೇರಿ, ತೋಟ, ಎಸ್ಟೇಟ್ ಎಲ್ಲೆಡೆಯೂ ಇದು ಪ್ರಕಟವಾಗುತ್ತದೆ. ಪ್ರತಿಯೊಬ್ಬ ಮಹಿಳೆ, ಪುರುಷ ಮತ್ತು ಮಗು ಸಮಾನ ನ್ಯಾಯ ಕೇಳುವ, ಸಮಾನ ಅವಕಾಶಕ್ಕಾಗಿ ಹಂಬಲಿಸುವ, ಸಮಾನ ಘನತೆಗಾಗಿ ಹೋರಾಡುವ, ಯಾವುದೇ ತಾರತಮ್ಯವಿಲ್ಲದ ಈ ಜಾಗಗಳಿಗಾಗಿ ಮನುಷ್ಯ ಹಂಬಲಿಸುತ್ತಾನೆ. ಈ ಜಾಗಗಳಲ್ಲಿ ಈ ಹಕ್ಕುಗಳಿಗೆ ಅರ್ಥವಿಲ್ಲದೆ ಹೋದರೆ ಅವುಗಳಿಗೆ ಮತ್ತೆಲ್ಲಿಯೂ ಮಾನ್ಯತೆ ಇರುವುದಿಲ್ಲ. ತಮ್ಮ ಮನೆಯ ಸುತ್ತಮುತ್ತಲಿನ ವಾತಾವರಣದಲ್ಲಿ ಈ ಹಕ್ಕುಗಳನ್ನು ಕಾಪಾಡುವ ಪ್ರಯತ್ನವನ್ನು ಪ್ರತಿಯೊಬ್ಬ ಪ್ರಜೆಯೂ ಮಾಡದೆ ಹೋದರೆ ನಾವು ವಿಶಾಲ ವಿಶ್ವದ ಪ್ರಗತಿಯನ್ನು ನಿರೀಕ್ಷಿಸುವುದು ವ್ಯರ್ಥ ಎನಿಸುತ್ತದೆ ”.
ಇಲೆನಾರ್ ಅವರ ಮಾತುಗಳು ಇಂದು ಹೆಚ್ಚು ಪ್ರಸ್ತುತ ಎನಿಸುವುದಿಲ್ಲವೇ ? ಅದೂ ಭಾರತದ ಸಂದರ್ಭದಲ್ಲಿ. ಮಾನವ ಹಕ್ಕುಗಳು ಎನ್ನುವ ಒಂದು ಉದಾತ್ತ ಪರಿಕಲ್ಪನೆ ಇದೆ ಎನ್ನುವುದನ್ನೇ ಮರೆತಂತೆ ನಮ್ಮ ಸಮಾಜ ವರ್ತಿಸುತ್ತಿದೆ. ಸಂವಿಧಾನಾತ್ಮಕ ನಾಗರಿಕ ಹಕ್ಕುಗಳು ಪದೇ ಪದೇ ಉಲ್ಲಂಘನೆಯಾಗುತ್ತಲೇ ಇದ್ದರೂ, ದೇಶದ ಪ್ರಜೆಯ ಬದುಕುವ ಹಕ್ಕನ್ನೂ ಕಸಿದುಕೊಳ್ಳುತ್ತಿದ್ದರೂ, ಸಾರ್ವಭೌಮ ಪ್ರಜೆಗಳ ಮೂಲಭೂತ ಹಕ್ಕುಗಳ ನಿರಾಕರಣೆಯಾಗುತ್ತಿದ್ದರೂ, ಸಮೂಹ ಸನ್ನಿಗೊಳಗಾಗಿ ತಮ್ಮ ಸ್ವಪ್ರಜ್ಞೆಯನ್ನೇ ಕಳೆದುಕೊಂಡಂತಿರುವ ಭಾರತದ ಹಿತವಲಯದ ಮಧ್ಯಮ ವರ್ಗಗಳು ಭ್ರಮಾವಲಯದಲ್ಲಿ ತೇಲುತ್ತಿವೆ. ಈ ವರ್ಗಗಳಿಗೆ ಇಲೆನಾರ್ ಅವರ ನುಡಿಗಳು ಎಚ್ಚರಿಕೆಯ ಸಂದೇಶವಾಗಲೂಬಹುದು.
ಇಲೆನಾರ್ ಅವರ ಈ ಮಾತುಗಳಾಗಲೀ, ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯಾಗಲೀ ವಿಶ್ವದ ಯಾವುದೇ ದೇಶದಲ್ಲಿನ ಆಳುವ ವರ್ಗಗಳ ಧೋರಣೆಯನ್ನು ಬದಲಿಸಿಲ್ಲ. ಭಾರತವೂ ಅಪರಾಧವಲ್ಲ. ಸ್ವತಂತ್ರ ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಇತಿಹಾಸವನ್ನು ಶೋಧಿಸಿದರೆ ನಾವು ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯ ಗಣತಂತ್ರದಲ್ಲಿ ವಾಸಿಸುತ್ತಿದ್ದೇವೆಯೇ ಎಂಬ ಅನುಮಾನ ಮೂಡುತ್ತದೆ. 1970ರ ದಶಕದಲ್ಲಿ ಆರಂಭವಾದ ಕರಾಳ ಶಾಸನಗಳ ಪರ್ವ ಇಂದು ಪರಾಕಾಷ್ಠೆ ತಲುಪಿದೆ. ಇಂದು ಭಾರತದ ಸಾರ್ವಭೌಮ ಪ್ರಜೆಗಳು ಕರಾಳ ಶಾಸನಗಳ ಆಡಳಿತ ವ್ಯವಸ್ಥೆಯಲ್ಲಿ ಬದುಕು ಸವೆಸಬೇಕಿದೆ.
ಚುನಾಯಿತ ಸರ್ಕಾರಗಳು ವಿಧಾನಸಭೆ, ವಿಧಾನ ಮಂಡಲ , ಲೋಕಸಭೆ ಮತ್ತು ರಾಜ್ಯ ಸಭೆಗಳಲ್ಲಿ ಸಾಂವಿಧಾನಿಕ ನಿಯಮಗಳನ್ನೂ ಲೆಕ್ಕಿಸದೆ ಜನವಿರೋಧಿ ಶಾಸನಗಳನ್ನು ಜಾರಿಮಾಡುತ್ತಿವೆ. ಮಸೂದೆಗಳನ್ನು ಮಂಡಿಸದೆಯೇ ಅನುಮೋದಿಸುವ ಒಂದು ವಿಕೃತ ಪರಂಪರೆಗೆ ನಾವು ಸಾಕ್ಷಿಯಾಗುತ್ತಿದ್ದೇವೆ. ದೇಶದ ಶೇ 60ಕ್ಕೂ ಹೆಚ್ಚು ಜನತೆಯ ಬದುಕನ್ನು ರೂಪಿಸುವ ಕೃಷಿ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತರುವ ಮೂಲಕ ದೇಶದ ಕೃಷಿ ವಲಯವನ್ನು ಕಾರ್ಪೋರೇಟ್ ಉದ್ಯಮಿಗಳ ನಿಯಂತ್ರಣಕ್ಕೊಳಪಡಿಸುವ ಮೂರು ಕಾಯ್ದೆಗಳು ಯಾವುದೇ ಚರ್ಚೆ ಇಲ್ಲದೆ ಸಂಸತ್ತಿನ ಅನುಮೋದನೆ ಪಡೆಯುತ್ತದೆ. ಈ ಪ್ರಜಾತಂತ್ರದ ಅಣಕವನ್ನು ಪ್ರಶ್ನಿಸುವ ಹಕ್ಕು ನ್ಯಾಯಾಂಗಕ್ಕೆ ಇದ್ದರೂ ಮೌನವಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಸಾಮಾನ್ಯರ ಪ್ರತಿರೋಧದ ದನಿಗಳನ್ನು ಅಡಗಿಸಲು ಯುಎಪಿಎ ಕಾಯ್ದೆಯನ್ನು ಅವ್ಯಾಹತವಾಗಿ ಬಳಸುತ್ತಿವೆ. ಪ್ರತಿಯೊಂದು ವಿರೋಧಿ ದನಿಯಲ್ಲೂ ಭಯೋತ್ಪಾದಕರನ್ನು, ನಗರ ನಕ್ಸಲರನ್ನು ಕಾಣುವ ಆಳುವ ವರ್ಗಗಳು ಯುಎಪಿಎ ಎಂಬ ಕರಾಳ ಶಾಸನವನ್ನು ಬಳಸುವ ಮೂಲಕ ಪ್ರಜಾತಂತ್ರದ ಮೌಲ್ಯಗಳ ಅವಸಾನಕ್ಕೆ ನಾಂದಿ ಹಾಡುತ್ತಿವೆ. ಮೂಲತಃ ಪ್ರಭುತ್ವ ವಿರೋಧಿ ಅಭಿವ್ಯಕ್ತಿಯನ್ನು ನಿರ್ಬಂಧಿಸುವ ಈ ಕರಾಳ ಶಾಸನವನ್ನು ಎಡರಂಗ ಸರ್ಕಾರಗಳನ್ನೂ ಸೇರಿದಂತೆ ಯಾವುದೇ ಆಡಳಿತಾರೂಢ ರಾಜಕೀಯ ಪಕ್ಷವೂ ತಾತ್ವಿಕ ನೆಲೆಯಲ್ಲಿ ವಿರೋಧಿಸಿಲ್ಲ ಎನ್ನುವುದು ಗಮನಾರ್ಹ ಸಂಗತಿ. ಇತ್ತೀಚೆಗೆ ಕೇರಳದ ಎಡರಂಗ ಸರ್ಕಾರವೂ ಸಾಮಾಜಿಕ ತಾಣಗಳನ್ನು ನಿರ್ಬಂಧಿಸಲು ಯುಎಪಿಎ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಿ ನಂತರ ಹಿಂದೆ ಸರಿದಿದೆ.
ಆಡಳಿತಾರೂಢ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಟಾಡಾ, ಕೋಪ್ರಾ, ಯುಎಪಿಎ ಮುಂತಾದ ಕರಾಳ ಶಾಸನಗಳನ್ನು ಬಳಸುತ್ತಲೇ ಬಂದಿವೆ. ನ್ಯಾಯ ವ್ಯವಸ್ಥೆಯ ವಿಧಿ ವಿಧಾನಗಳನ್ನು ಅನುಸರಿಸದೆಯೇ ಪ್ರತಿರೋಧದ ದನಿಗಳನ್ನು, ಹೋರಾಟದ ದನಿಗಳನ್ನು ಅಡಗಿಸಲು ಈ ಶಾಸನಗಳು ಮುಕ್ತ ಅವಕಾಶ ನೀಡುತ್ತವೆ. ಎನ್ಕೌಂಟರ್ ಹತ್ಯೆಗಳು, ಪೊಲೀಸರ ದೌರ್ಜನ್ಯ ಮತ್ತು ಚಿತ್ರಹಿಂಸೆ ಯಾವುದೇ ನಿರ್ಬಂಧವಿಲ್ಲದೆ ನಡೆಯುತ್ತಿದೆ. ವರಾವರರಾವ್, ಗೌತಮ್ ನವಲಖ, ಸುಧಾ ಭರದ್ವಾಜ್, ಆನಂದ್ ತೇಲ್ತುಂಬ್ಡೆ, ಪ್ರೊ ಸಾಯಿಬಾಬಾ, ಉಮರ್ ಖಲೀದ್ ಹೀಗೆ ಕರಾಳ ಶಾಸನಗಳಿಗೆ ಬಲಿಯಾಗಿ ಸೆರೆವಾಸ ಅನುಭವಿಸುತ್ತಿರುವವರ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ. ವಿರೋಧ ಪಕ್ಷಗಳೂ ಸಹ ಈ ಕರಾಳ ಶಾಸನಗಳ ವಿರುದ್ಧ ಜನಾಂದೋಲನಗಳನ್ನು ರೂಪಿಸುತ್ತಿಲ್ಲ ಎನ್ನುವುದು ಚಿಂತೆಗೀಡುಮಾಡುವ ವಿಚಾರ.
ಇದರ ಪರಿಣಾಮವನ್ನು ಇಂದು ಕೃಷಿ ಮಸೂದೆಗಳ ಮೂಲಕ, ಗೋ ಹತ್ಯೆ ನಿಷೇಧದ ಮೂಲಕ, ಭೂ ಸ್ವಾಧೀನ ಕಾಯ್ದೆಗಳ ಮೂಲಕ ಅನುಭವಿಸುತ್ತಿದ್ದೇವೆ. ಸರ್ಕಾರಗಳ ಆಡಳಿತ ನೀತಿಗಳನ್ನು ಪ್ರಶ್ನಿಸುವುದೂ ಅಪರಾಧ ಎನಿಸಿಕೊಳ್ಳುವ ವಿಷಮ ಸನ್ನಿವೇಶದಲ್ಲಿ ಭಾರತ ಮುನ್ನಡೆಯುತ್ತಿದೆ. ದೆಹಲಿಯಲ್ಲಿ ಮುಷ್ಕರ ನಿರತರಾಗಿರುವ ರೈತ ಸಮುದಾಯದ ಮೇಲೆ ಕೇಂದ್ರ ಸರ್ಕಾರ ನಡೆಸಿದ ದೌರ್ಜನ್ಯ, ಎಲ್ಲ ಸಂಪರ್ಕ ಸಾಧನಗಳನ್ನೂ ಸ್ಥಗಿತಗೊಳಿಸುವ ಅಮಾನುಷ ಪ್ರವೃತ್ತಿ, ಒಂದು ಇಡೀ ರಾಜ್ಯದ ದಿಗ್ಬಂಧನ, ಪ್ರತಿಭಟಿಸುವ ನಾಗರಿಕರ ಅನಗತ್ಯ ಬಂಧನ ಇವೆಲ್ಲವೂ ದೇಶದ ರಾಜಧಾನಿಯಲ್ಲೇ ಕಂಡುಬರುತ್ತಿದೆ. ಆದರೂ ಈ ದೇಶದ ಪ್ರಜ್ಞಾವಂತ ಸಮಾಜ ಮೌನ ವಹಿಸುತ್ತದೆ.
ಪ್ರಜ್ಞೆ ಸತ್ತ ಸಮಾಜದಲ್ಲಿ ನಾವು ಮಾನವ ಹಕ್ಕುಗಳು ಎನ್ನುವ ಉದಾತ್ತ ಚಿಂತನೆಯ ಬೀಜಗಳನ್ನು ಬಿತ್ತಬೇಕಿದೆ. ಈಗಾಗಲೇ ವ್ಯವಸ್ಥಿತವಾಗಿ ಬಿತ್ತಲಾಗಿರುವ ದ್ವೇಷ ರಾಜಕಾರಣದ, ಮತಾಂಧತೆಯ, ಜಾತಿ ದ್ವೇಷದ ಮತ್ತು ಜನಾಂಗೀಯ ದ್ವೇಷದ ಬೀಜಗಳನ್ನು ಕಿತ್ತೆಸೆದು, ಹೊಸ ಜಗತ್ತಿಗೆ ನಾಂದಿ ಹಾಡಬೇಕಿದೆ. ನವ ಉದಾರವಾದ, ಸಾಂಸ್ಕೃತಿಕ ರಾಷ್ಟ್ರೀಯವಾದ ಮತ್ತು ಮತಾಂಧತೆ ಈ ದೇಶದ ಬೃಹತ್ ಸಮುದಾಯವನ್ನು ಆವರಿಸಿದ್ದು, ಸುಶಿಕ್ಷಿತ ವಲಯದ ಪ್ರಜ್ಞಾವಂತರೂ ಸಮೂಹ ಸನ್ನಿಗೊಳಗಾಗಿದ್ದಾರೆ. ಈ ಉನ್ಮತ್ತ ಮನಸುಗಳಿಗೆ ರೈತರ ಆಕ್ರಂದನ ದೇಶದ್ರೋಹದ ದನಿಯಂತೆ ಕೇಳಿಸುತ್ತದೆ, ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾಗುವ ಅಸ್ಪೃಶ್ಯ ಮಹಿಳೆಯರ ವೇದನೆ ನಿಕೃಷ್ಟವಾಗಿ ಕಾಣುತ್ತದೆ.
ಭಾರತ ಮತ್ತೊಮ್ಮೆ ಕಂಪನಿ ಆಡಳಿತಕ್ಕೆ ಒಳಪಡುವ ಕಾಲ ಸನ್ನಿಹಿತವಾಗುತ್ತಿದೆ. ಕಾರ್ಪೋರೇಟ್ ರಾಜಕಾರಣದ ಮಾರುಕಟ್ಟೆ ನೀತಿಗಳು ದೇಶದ ಎಲ್ಲ ಸಂಪನ್ಮೂಲಗಳನ್ನೂ ಹಣಕಾಸು ಬಂಡವಾಳದ ನಿಯಂತ್ರಣಕ್ಕೊಳಪಡಿಸಲು ಭೂಮಿಕೆಯನ್ನು ಸಿದ್ಧಪಡಿಸುತ್ತಿವೆ. ಇದರ ಒಂದು ಪ್ರಾತ್ಯಕ್ಷಿಕೆಯನ್ನು ಕೃಷಿ ಮಸೂದೆಗಳಲ್ಲಿ, ಭೂ ಸ್ವಾಧೀನ ಕಾಯ್ದೆಯಲ್ಲಿ ಕಾಣಲು ಸಾಧ್ಯ. ಈ ಜನವಿರೋಧಿ ಕಾರ್ಯನೀತಿಗಳ ವಿರುದ್ಧ ದನಿ ಎತ್ತುವವರ ಸಾಂವಿಧಾನಿಕ ಹಕ್ಕುಗಳು ದಮನಕ್ಕೊಳಗಾಗುತ್ತಿವೆ. ಆಹಾರ, ಶಿಕ್ಷಣ, ಆರೋಗ್ಯ ಮತ್ತು ಬದುಕುವ ಹಕ್ಕುಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ಈ ದೇಶದ ಪ್ರತಿಯೊಬ್ಬ ಪ್ರಜೆಯ ಮೇಲಿದೆ.
ಈ ಹಕ್ಕುಗಳನ್ನು ನಿರಾಕರಿಸುವ ಪ್ರಭುತ್ವದ ವಿರುದ್ಧ ದನಿ ಎತ್ತುವವರೊಡನೆ ನಾವು ನಿಲ್ಲಬೇಕಿದೆ. ಆಗಲೇ ಡಿಸೆಂಬರ್ 10ರ ಮಾನವ ಹಕ್ಕುಗಳ ದಿನಾಚರಣೆ ಅರ್ಥಪೂರ್ಣವಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!
ಸುದ್ದಿದಿನ, ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ತನ್ನ 3 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿದೆ. `ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಸಹಕಾರ’ ಎಂಬ ಧ್ಯೇಯದೊಂದಿಗೆ ಆರಂಭವಾದ ಈ ಯೋಜನೆ ಇಂದು ಕೋಟ್ಯಂತರ ಕುಟುಂಬಗಳ ಬದುಕಿಗೆ ಬೆಳಕಾಗಿದೆ.
ಹೌದು! 2023ರ ಆಗಸ್ಟ್‌ನಲ್ಲಿ ಜಾರಿಗೆ ಬಂದ ಈ ಯೋಜನೆಯಡಿ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಪ್ರತಿ ತಿಂಗಳು 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್‌ಗೆ ದೊಡ್ಡ ಆಸರೆಯಾಗಿದೆ ಎಂದೇ ಹೇಳಬಹುದು.
http://Visit : www.suddidina.com
ಗೃಹಜ್ಯೋತಿ ಯೋಜನೆಯ ಸಾಧನೆಯ ಗಿರಿ:
ಇಂಧನ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ರಾಜ್ಯದ್ಯಂತ ಬರೋಬ್ಬರಿ 1.65 ಕೋಟಿ. ಫಲಾನುಭವಿಗಳು ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆ, ಸೇವಾಸಿಂಧು ಪೋರ್ಟಲ್‌ನಲ್ಲಿ ಒಟ್ಟು 1,76,69,368 ಜನರು ನೋಂದಾಯಿಸಿಕೊಂಡಿದ್ದರೆ. ಒಟ್ಟು 2,06,65,451 ಗೃಹಬಳಕೆ ವಿದ್ಯುತ್ ಗ್ರಾಹಕರಿದ್ದಾರೆ. ಅಂದರೆ ಶೇ.85ಕ್ಕಿಂತ ಹೆಚ್ಚು ಗ್ರಾಹಕರು ಈ ಯೋಜನೆಯಡಿ ನೋಂದಾಯಿಸಿಕೊಂಡು ಲಾಭ ಪಡೆಯುತ್ತಿದ್ದಾರೆ.
ಆರ್ಥಿಕವಾಗಿ ನೋಡುವುದಾದರೆ, 2023ರ ಆಗಸ್ಟ್‌ನಿಂದ 2026ರ ಜುಲೈ ವರೆಗೆ, ಕಳೆದ ಮೂರು ವರ್ಷಗಳಲ್ಲಿ ಸರ್ಕಾರವು ಫಲಾನುಭವಿಗಳಿಗೆ ಒಟ್ಟು ₹28,759.54 ಕೋಟಿ ರೂಪಾಯಿ ಸಬ್ಸಿಡಿ ಬಿಡುಗಡೆ ಮಾಡಿದೆ. ಇದು ಸರ್ಕಾರದ ಬದ್ಧತೆ ಮತ್ತು ಜನಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ.
ಕುಟುಂಬದ ಬಜೆಟ್‌ಗೆ ಆಸರೆ, ಉಜ್ವಲ ಭವಿಷ್ಯಕ್ಕೆ ಬುನಾದಿ:
ಪ್ರತಿ ತಿಂಗಳು 1000 ದಿಂದ 1500 ರೂಪಾಯಿಗಳವರೆಗೆ ವಿದ್ಯುತ್ ಬಿಲ್ ಕಟ್ಟುತ್ತಿದ್ದ ಸಾಮಾನ್ಯ ಕುಟುಂಬಗಳಿಗೆ ಈಗ ಆ ಹಣ ಸಂಪೂರ್ಣವಾಗಿ ಉಳಿತಾಯವಾಗುತ್ತಿದೆ. ಈ ಉಳಿತಾಯದ ಹಣವನ್ನು ಅವರು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಇತರ ಅಗತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಗೃಹಿಣಿಯರಿಗೆ ಇದು ಆರ್ಥಿಕವಾಗಿ ದೊಡ್ಡ ನೆರವಾಗಿದೆ.
ಕೇವಲ ಉಚಿತ ವಿದ್ಯುತ್ ನೀಡುವುದಷ್ಟೇ ಅಲ್ಲ, ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದ್ದು, ರಾಜ್ಯದ ಜನರ ಜೀವನಮಟ್ಟ ಸುಧಾರಿಸಿದೆ. ಗೃಹ ಜ್ಯೋತಿ ಯೋಜನೆಯು ಕೇವಲ ಒಂದು ಯೋಜನೆಯಾಗಿ ಉಳಿಯದೆ, ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕುಟುಂಬಗಳನ್ನು ಈ ಯೋಜನೆಯಡಿ ತರಲು ಇಂಧನ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.

ದಿನದ ಸುದ್ದಿ
ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – 20 ಸಾವಿರ ಕೋಟಿ ರೂ. ವೆಚ್ಚದ 8 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರದ ಅಸ್ತು!
ಸುದ್ದಿದಿನ, ಹೊಸದಿಲ್ಲಿ: ದೇಶದ ರೈಲ್ವೆ ಮೂಲಸೌಕರ್ಯಕ್ಕೆ ಬೃಹತ್ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳ 20ಕ್ಕೂ ಹೆಚ್ಚು ಜಿಲ್ಲೆಗಳನ್ನು ಸಂಪರ್ಕಿಸುವ 20,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ 8 ಬಹು ಟ್ರ್ಯಾಕಿಂಗ್ (Multi-Tracking) ರೈಲು ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ (ಸೆ.09) ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಯೋಜನೆಗಳು ಪಿಎಂ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಅನುಷ್ಠಾನಗೊಳ್ಳಲಿವೆ.
http://Visit : www.suddidina.com
ಈ ಯೋಜನೆಗಳಿಂದ ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ಜಾಲವು ಬರೋಬ್ಬರಿ 1,200 ಕಿಲೋಮೀಟರ್‌ಗಳಷ್ಟು ವಿಸ್ತರಣೆಯಾಗಲಿದೆ. ಇದರಿಂದ 6,900ಕ್ಕೂ ಹೆಚ್ಚು ಗ್ರಾಮಗಳಿಗೆ ಸುಧಾರಿತ ಸಂಪರ್ಕ ಸಿಗಲಿದ್ದು, ರೈಲುಗಳ ಕಾರ್ಯಾಚರಣೆಯ ದಕ್ಷತೆ ಮತ್ತು ಸೇವಾ ವಿಶ್ವಾಸಾರ್ಹತೆ ಗಣನೀಯವಾಗಿ ಹೆಚ್ಚಾಗಲಿದೆ.
ಯಾವೆಲ್ಲ ಯೋಜನೆಗಳಿಗೆ ಅನುಮೋದನೆ?
ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದ ಪ್ರಮುಖ ಯೋಜನೆಗಳು ಹೀಗಿವೆ:
1. ಅರಾಕೋಣಂ-ರೇಣಿಗುಂಟಾ ಮತ್ತು ವೈಟ್‌ಫೀಲ್ಡ್-ಬಂಗಾರಪೇಟೆ ನಡುವೆ 3 ಮತ್ತು 4ನೇ ಮಾರ್ಗ: ಇದು ಕರ್ನಾಟಕ ಮತ್ತು ತಮಿಳುನಾಡು, ಆಂಧ್ರಪ್ರದೇಶಕ್ಕೆ ಅತ್ಯಂತ ಮಹತ್ವದ ಯೋಜನೆಯಾಗಿದೆ.
2. ಸಿಕಂದರಾಬಾದ್-ಕಾಜಿಪೇಟೆ ನಡುವೆ ಮಲ್ಟಿ ಟ್ರ್ಯಾಕಿಂಗ್: ತೆಲಂಗಾಣದ ಪ್ರಮುಖ ಮಾರ್ಗದ ದಟ್ಟಣೆ ಕಡಿಮೆ ಮಾಡಲಿದೆ.
3. ಹೊಸೂರು-ಓಮಲೂರು, ಸೇಲಂ-ಕರೂರ್-ದಿಂಡಿಗಲ್ ಜೋಡಿ ಹಳಿ ಯೋಜನೆ: ತಮಿಳುನಾಡು ಮತ್ತು ಕರ್ನಾಟಕದ ಗಡಿ ಭಾಗದ ಸಂಪರ್ಕವನ್ನು ಬಲಪಡಿಸಲಿದೆ.
4. ಖರಗ್‌ಪುರ-ಝಾರ್ಸುಗುಡ ಮತ್ತು ಕತ್ನಿ-ಪೆಂದ್ರ ರಸ್ತೆ ನಡುವೆ 4ನೇ ಮಾರ್ಗ ಮತ್ತು ಬಿಲಾಸ್‌ಪುರ್-ಪೆಂದ್ರ ರಸ್ತೆ ನಡುವೆ 3ನೇ ಮಾರ್ಗ: ಛತ್ತೀಸ್‌ಗಢ, ಒಡಿಶಾ, ಮಧ್ಯಪ್ರದೇಶದ ಕಲ್ಲಿದ್ದಲು ಮತ್ತು ಖನಿಜ ಸಾಗಣೆಗೆ ಸಹಕಾರಿಯಾಗಲಿದೆ.
ಈ ಎಲ್ಲಾ ಯೋಜನೆಗಳು ಕರ್ನಾಟಕ, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ, ಛತ್ತೀಸ್‌ಗಢ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳನ್ನು ಒಳಗೊಳ್ಳಲಿವೆ.
ಕರ್ನಾಟಕಕ್ಕೆ ಏನು ಲಾಭ?
ಈ ಬಹು ಟ್ರ್ಯಾಕಿಂಗ್ ಯೋಜನೆಗಳಿಂದ ಕರ್ನಾಟಕಕ್ಕೆ ಹಲವು ರೀತಿಯಲ್ಲಿ ಅನುಕೂಲವಾಗಲಿದೆ.ಕೈಗಾರಿಕೆಗಳಿಗೆ ಅನುಕೂಲ: ರಾಜ್ಯದ ಉಕ್ಕು ಕಾರ್ಖಾನೆಗಳಿಗೆ ಕಚ್ಚಾ ವಸ್ತುಗಳಾದ ಖನಿಜ ಸಾಗಿಸಲು ವಾಡಿ-ತಂದೂರು, ಮೋಟುಮಾರಿ-ವಿಷ್ಣುಪುರಂ ಮಾರ್ಗದಲ್ಲಿನ ಅಭಿವೃದ್ಧಿಯಿಂದ ಹೆಚ್ಚಿನ ಅನುಕೂಲವಾಗಲಿದೆ. ಹೂಟಗಿ, ಕೂಡಗಿ, ಯಾದ್ಲಾಪುರ, ಬಳ್ಳಾರಿ ಮತ್ತು ಯರಮರಸ್‌ನಲ್ಲಿರುವ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಸಾಗಣೆ ಇನ್ನಷ್ಟು ವೇಗ ಮತ್ತು ಸುಲಭವಾಗಲಿದೆ.
ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ದಟ್ಟಣೆ ಕಡಿಮೆ: ವೈಟ್‌ಫೀಲ್ಡ್-ಬಂಗಾರಪೇಟೆ ನಡುವಿನ 47 ಕಿ.ಮೀ ಉದ್ದದ 3 ಮತ್ತು 4ನೇ ಮಾರ್ಗವು ಅತ್ಯಂತ ದಟ್ಟಣೆಯ ಮನ್ಮಾಡ-ಹುಬ್ಬಳ್ಳಿ-ಬೆಂಗಳೂರು-ಜೋಳರಪೇಟೆ ವಿಭಾಗದಡಿ ಬರುತ್ತದೆ. ಇದು ಬೆಂಗಳೂರು-ಚೆನ್ನೈ ನಡುವಿನ ರೈಲು ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡಿ, ಹೆಚ್ಚಿನ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಿದೆ.
ಪ್ರವಾಸೋದ್ಯಮ ಮತ್ತು ಸರಕು ಸಾಗಣೆಗೆ ಉತ್ತೇಜನ: ಹೊಸೂರು-ಓಮಲೂರು ಜೋಡಿ ಹಳಿ ಮಾರ್ಗದಿಂದ ಕನ್ಯಾಕುಮಾರಿ, ರಾಮೇಶ್ವರಂನಂತಹ ಪುಣ್ಯಕ್ಷೇತ್ರಗಳಿಗೆ ತೆರಳುವ ಲಕ್ಷಾಂತರ ಯಾತ್ರಿಕರಿಗೆ ಅನುಕೂಲವಾಗಲಿದೆ. ಜೊತೆಗೆ ಬೆಂಗಳೂರು ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ಸರಕು ಸಾಗಣೆಯೂ ವೇಗವಾಗಲಿದೆ.ಒಟ್ಟಾರೆಯಾಗಿ, ಈ ಯೋಜನೆಗಳು ಕೇವಲ ರೈಲು ಮಾರ್ಗಗಳ ವಿಸ್ತರಣೆಯಷ್ಟೇ ಅಲ್ಲ, ದೇಶದ ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಪ್ರಾದೇಶಿಕ ಸಂಪರ್ಕಕ್ಕೆ ಹೊಸ ಶಕ್ತಿ ತುಂಬಲಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ದಿನದ ಸುದ್ದಿ
ಡಿಕೆಶಿ ಸರ್ಕಾರಕ್ಕೆ 100 ದಿನಗಳ ಸಂಭ್ರಮ – `ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜು
ಸುದ್ದಿದಿನ, ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ತನ್ನ ಆಡಳಿತದ 100 ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಶತಕದ ಸಂಭ್ರಮವನ್ನು ಆಚರಿಸಲು ರಾಜ್ಯ ಸರ್ಕಾರವು `ದೃಢ ಕರ್ನಾಟಕದ ಸಂಕಲ್ಪ – ಶತಕದ ಪಥ, ಪ್ರಗತಿಯ ರಥ’ ಎಂಬ ವಿಶೇಷ ಮತ್ತು ಅದ್ಧೂರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ಕಾರ್ಯಕ್ರಮವು ನಾಳೆ ಅಂದರೆ 2026ನೇ ಸೆಪ್ಟೆಂಬರ್ 10ರ ಗುರುವಾರ ಬೆಳಿಗ್ಗೆ 10 ಗಂಟೆಗೆ ವಿಧಾನಸೌಧದ ಪ್ರತಿಷ್ಠಿತ ಬ್ಯಾಂಕ್ವೇಟ್ ಸಭಾಂಗಣದಲ್ಲಿ ನಡೆಯಲಿದೆ. ಸರ್ಕಾರದ ನೂರು ದಿನಗಳ ಸಾಧನೆ, ಜನಪರ ಯೋಜನೆಗಳ ಅನುಷ್ಠಾನ ಮತ್ತು ಮುಂದಿನ ಅಭಿವೃದ್ಧಿಯ ದೂರದೃಷ್ಟಿಯನ್ನು ಜನರ ಮುಂದಿಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಗಣ್ಯರ ದಂಡು, ಸಿದ್ದರಾಮಯ್ಯರಿಂದ ಉದ್ಘಾಟನೆ:
ಈ ಶತದಿನೋತ್ಸವ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಇದು ಕಾಂಗ್ರೆಸ್ ಪಕ್ಷದಲ್ಲಿನ ಒಗ್ಗಟ್ಟು ಮತ್ತು ನಾಯಕತ್ವದ ನಿರಂತರತೆಯನ್ನು ಸಂಕೇತಿಸುತ್ತದೆ.
ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ಜಿ. ಪರಮೇಶ್ವರ್, ರಾಜ್ಯ ಸಂಪುಟದ ಎಲ್ಲಾ ಸಚಿವರು, ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ರಾಜ್ಯದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ಭಾಗವಹಿಸಲಿದ್ದಾರೆ. ಇದರ ಜೊತೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಸರ್ಕಾರದ ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ.
http://Visit : www.suddidina.com
ಫಲಾನುಭವಿಗಳೊಂದಿಗೆ ನೇರ ಸಂವಾದ – ಕಾರ್ಯಕ್ರಮದ ಪ್ರಮುಖ ಆಕರ್ಷಣೆ
ಈ ಕಾರ್ಯಕ್ರಮದ ಅತ್ಯಂತ ಪ್ರಮುಖ ಆಕರ್ಷಣೆ ಎಂದರೆ ಮುಖ್ಯಮಂತ್ರಿಗಳೊಂದಿಗೆ ಫಲಾನುಭವಿಗಳ ನೇರ ಸಂವಾದ. ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ, ಯುವನಿಧಿ ಮತ್ತು ಗೃಹಜ್ಯೋತಿ ಯೋಜನೆಗಳ ಫಲಾನುಭವಿಗಳು ಈ ವೇದಿಕೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ದೃಢ ಕರ್ನಾಟಕದ ಸಂಕಲ್ಪ
ಶತಕದ ಪಥ – ಪ್ರಗತಿಯ ರಥ100 ದಿನಗಳು.. ಇದು ಕೇವಲ ಆರಂಭವಷ್ಟೇ. ಜನರ ಆಶಯಗಳಿಗೆ ಸ್ಪಂದಿಸಿ, ರಾಜ್ಯದ ಸಮಗ್ರ ಅಭಿವೃದ್ಧಿಗೆ ವೇಗ ನೀಡುವ ಸಂಕಲ್ಪದೊಂದಿಗೆ ಕಳೆದ 100 ದಿನಗಳಲ್ಲಿ ಹಲವು ಮಹತ್ವದ ಹೆಜ್ಜೆಗಳನ್ನು ಇಡಲಾಗಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ, ಉದ್ಯೋಗ, ತಂತ್ರಜ್ಞಾನ, ಮೂಲಸೌಕರ್ಯ, ಶಿಕ್ಷಣ, ಕೃಷಿ ಹಾಗೂ… pic.twitter.com/NDViSWw6LV
— DK Shivakumar (@DKShivakumar) September 10, 2026
ಕೇವಲ ಗ್ಯಾರಂಟಿ ಯೋಜನೆಗಳಷ್ಟೇ ಅಲ್ಲದೆ, ಸಮಾಜದ ವಿವಿಧ ವರ್ಗಗಳ ಶ್ರಮಿಕರು ಮತ್ತು ಕಾರ್ಮಿಕರು ಕೂಡ ಈ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೃಷಿಕರು, ಆಟೋ ಚಾಲಕರು, ಹಮಾಲಿಗಳು, ಗಿಗ್ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪೌರಕಾರ್ಮಿಕರು ತಮ್ಮ ಬದುಕಿನಲ್ಲಿ ಸರ್ಕಾರದ ಯೋಜನೆಗಳಿಂದ ಆಗಿರುವ ಬದಲಾವಣೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಮುಕ್ತವಾಗಿ ಮಾತನಾಡಲಿದ್ದಾರೆ.
100 ದಿನಗಳಲ್ಲಿ ಸರ್ಕಾರವು ಕೈಗೊಂಡಿರುವ ಜನಪರ ನಿರ್ಧಾರಗಳು, ಅಭಿವೃದ್ಧಿ ಕಾಮಗಾರಿಗಳು ಮತ್ತು ಆಡಳಿತದಲ್ಲಿ ತಂದಿರುವ ಪಾರದರ್ಶಕತೆಯ ಬಗ್ಗೆ ಈ ವೇದಿಕೆಯಲ್ಲಿ ಚರ್ಚೆ ನಡೆಯಲಿದೆ. ಸರ್ಕಾರದ ಸಾಧನೆಗಳನ್ನು ಕೇವಲ ಭಾಷಣದ ಮೂಲಕವಲ್ಲ, ಬದಲಾಗಿ ಫಲಾನುಭವಿಗಳ ಬಾಯಿಂದಲೇ ಜನರಿಗೆ ತಲುಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.
ಮುಂದಿನ ದಿನಗಳಲ್ಲಿ ದೃಢ ಕರ್ನಾಟಕ’ ನಿರ್ಮಾಣದ ನಿಟ್ಟಿನಲ್ಲಿ ಸರ್ಕಾರದ ಮುಂದಿನ 5 ವರ್ಷಗಳ ಕಾರ್ಯಯೋಜನೆ ಮತ್ತು ರೂಪುರೇಷೆಗಳನ್ನು ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಕಟಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

-
ದಿನದ ಸುದ್ದಿ3 days agoಬರ ನಿರ್ವಹಣೆಗೆ ಸಚಿವ ಸಂಪುಟ ಉಪಸಮಿತಿ ಸಭೆ – ದಾವಣಗೆರೆಯಲ್ಲಿ ಕುಡಿಯುವ ನೀರು, ಮೇವು ಕೊರತೆ ಬಗ್ಗೆ ಸಚಿವ ಮಲ್ಲಿಕಾರ್ಜುನ್ ಪ್ರಸ್ತಾಪ
-
ದಿನದ ಸುದ್ದಿ3 days agoರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – 20 ಸಾವಿರ ಕೋಟಿ ರೂ. ವೆಚ್ಚದ 8 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರದ ಅಸ್ತು!
-
ದಿನದ ಸುದ್ದಿ3 days agoಡಿಕೆಶಿ ಸರ್ಕಾರಕ್ಕೆ 100 ದಿನಗಳ ಸಂಭ್ರಮ – `ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜು
-
ದಿನದ ಸುದ್ದಿ2 days agoಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!
-
ದಿನದ ಸುದ್ದಿ3 days agoಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಇನ್ಮುಂದೆ ಓಲಾ, ಉಬರ್ ಆ್ಯಪ್ನಲ್ಲೇ ಬಿಎಂಟಿಸಿ ಬಸ್ ಟ್ರ್ಯಾಕಿಂಗ್ ಮತ್ತು ಟಿಕೆಟ್ ಬುಕಿಂಗ್!
-
ದಿನದ ಸುದ್ದಿ3 days ago5 ವರ್ಷದಿಂದ PFಗೆ ಹಣ ಜಮಾ ಮಾಡಿಲ್ಲ, ಬಡ್ಡಿ ಸಿಗುತ್ತಾ? ಇಲ್ಲಿದೆ EPFO ನಿಯಮದ ಸ್ಪಷ್ಟ ಮಾಹಿತಿ!
-
ದಿನದ ಸುದ್ದಿ3 days agoಭದ್ರೆ ಆಗಮನದಿಂದ ರೈತರಲ್ಲಿ ಹೊಸ ಭರವಸೆ – ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ
-
ದಿನದ ಸುದ್ದಿ3 days agoವಿಶೇಷ ಚೇತನ ಮಕ್ಕಳು ದೇವರ ಮಕ್ಕಳು – ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್



