Connect with us

ದಿನದ ಸುದ್ದಿ

ಆಡಳಿತ ವ್ಯವಸ್ಥೆಗೆ ಬೇಕಿದೆ ತುರ್ತು ಚಿಕಿತ್ಸೆ

Published

on

  • ನಾ ದಿವಾಕರ

ನವ ಭಾರತದ ಆಡಳಿತ ವ್ಯವಸ್ಥೆ ಕ್ರಮೇಣ ತನ್ನ ಪ್ರಜಾತಂತ್ರ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ, ವ್ಯವಸ್ಥೆ ಕುಸಿಯುತ್ತಿದೆ, ಹದಗೆಡುತ್ತಿದೆ ಎಂದು ಕ್ಷಣಕ್ಷಣಕ್ಕೂ ಪರಿತಪಿಸುತ್ತಿದ್ದ ಪ್ರಜ್ಞಾವಂತ ನಾಗರಿಕರು ಇನ್ನು ಚಿಂತಿಸಬೇಕಿಲ್ಲ. ಏಕೆಂದರೆ ವ್ಯವಸ್ಥೆ ಕುಸಿದುಹೋಗಿದೆ.

ಪ್ರಜಾತಂತ್ರ ಮತ್ತು ಸಾಂವಿಧಾನಿಕ ಮೌಲ್ಯಗಳು ಇನ್ನೂ ಉಳಿದಿದೆ ಎನ್ನುವುದಾದರೆ ಅದು ಕೇವಲ ಗ್ರಾಂಥಿಕವಾಗಿ ಮಾತ್ರ ಎನ್ನುವುದು ಮನದಟ್ಟಾಗಿದೆ. ಮತ್ತಷ್ಟು ಕುಸಿದು ಪಾತಾಳಕ್ಕೆ ಹೋಗುವ ಮುನ್ನ ಎಚ್ಚೆತ್ತುಕೊಳ್ಳುವುದು ನಮ್ಮ ಮುಂದಿರುವ ಸವಾಲು. ಸ್ವತಂತ್ರ ಭಾರತ ತನ್ನ ಮೂಲ ತಳಪಾಯವನ್ನೇ ಕಳೆದುಕೊಂಡು ಬೆತ್ತಲಾಗುತ್ತಿರುವಂತೆಯೇ ದೇಶದ ಅಂತಃಸತ್ವವನ್ನು ಕಾಪಾಡುವ ಸ್ತಂಭಗಳು ಸತ್ವಹೀನವಾಗಿವೆ.

ಒಂದು ಪ್ರಜಾತಂತ್ರ ವ್ಯವಸ್ಥೆ ಊರ್ಜಿತವಾಗಲು ಮುಖ್ಯವಾಗಿ ಬೇಕಿರುವುದು ಆಡಳಿತ ನಿರ್ವಹಣೆ ನಡೆಸುವ ಸಾಂವಿಧಾನಿಕ ಸಂಸ್ಥೆಗಳ ಬದ್ಧತೆ ಮತ್ತು ಈ ಸಂಸ್ಥೆಗಳನ್ನು ನಿರ್ವಹಿಸುವ ವ್ಯಕ್ತಿಗಳ ಪ್ರಾಮಾಣಿಕತೆ. ಇವೆರಡೂ ಪರಸ್ಪರ ಪೂರಕವಾಗಿ ಇದ್ದಾಗ ಮಾತ್ರ ಪ್ರಜಾಸತ್ತೆ ತನ್ನ ಘನತೆ ಗೌರವ ಉಳಿಸಿಕೊಳ್ಳಲು ಸಾಧ್ಯ.

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಕಾರ್ಯವೈಖರಿ ಮತ್ತು ದಕ್ಷತೆ ಮತ್ತು ಈ ಸಾಂವಿಧಾನಿಕ ಅಂಗಗಳ ಮೂಲಕ ದೇಶದ ಸಾರ್ವಭೌಮ ಪ್ರಜೆಗಳನ್ನು ಪ್ರತಿನಿಧಿಸುವ ವ್ಯಕ್ತಿಗಳಲ್ಲಿನ ಸಾಂವಿಧಾನಿಕ ಪ್ರಜ್ಞೆ ಮತ್ತು ಪ್ರಾಮಾಣಿಕತೆ, ಇವು ಪ್ರಜಾತಂತ್ರ ವ್ಯವಸ್ಥೆಯ ಬುನಾದಿ. ಈ ಬುನಾದಿಯ ಮೇಲೆ ನಿಂತಿರುವ ಮೂರೂ ಆಡಳಿತ ಅಂಗಗಳು ಮತ್ತು ಇವುಗಳನ್ನು ಸದಾ ಜಾಗೃತಗೊಳಿಸಲು ಇರುವ ಮಾಧ್ಯಮ ವಲಯ ನಾಲ್ಕು ಸ್ತಂಭಗಳು.

ಭಾರತದ ದುರಂತ ಎಂದರೆ ನ್ಯಾಯಾಂಗವನ್ನು ಹೊರತುಪಡಿಸಿದರೆ ಉಳಿದೆಲ್ಲ ಅಂಗಗಳೂ ತಮ್ಮ ಅಂತಃಸತ್ವವನ್ನು ಕಳೆದುಕೊಂಡು ನಿಸ್ತೇಜವಾಗಿವೆ. ಒಂದೆರಡು ಪ್ರಸಂಗಗಳನ್ನು ಹೊರತುಪಡಿಸಿದರೆ ನ್ಯಾಯಾಂಗ ಇನ್ನೂ ಸಹ ಜನತೆಯ ವಿಶ್ವಾಸವನ್ನು ಉಳಿಸಿಕೊಂಡುಬಂದಿದೆ. ಆದರೆ ಇತ್ತೀಚಿನ ದಿನಗಳ ಕೆಲವು ಬೆಳವಣಿಗೆಗಳು ಆಶಾದಾಯಕವಾಗಿಲ್ಲ ಎಂದಷ್ಟೇ ಹೇಳಬಹುದು.

ಕಾರ್ಯಾಂಗದಲ್ಲಿ ಪ್ರಾಮಾಣಿಕತೆ ಉಳಿಯಲು ಅವಶ್ಯವಾಗಿ ಬೇಕಾದ ಶಾಸಕಾಂಗದ ದಕ್ಷತೆ ಮತ್ತು ಸಂವಿಧಾನ ಬದ್ಧತೆಯನ್ನು ಭಾರತದ ಆಳುವ ವರ್ಗಗಳು ಎಂದೋ ಕಳೆದುಕೊಂಡಿವೆ. ಇತ್ತೀಚಿನ ದಿನಗಳಲ್ಲಿ ದಕ್ಷತೆ ಎನ್ನುವ ಪದವೇ ಸಾಪೇಕ್ಷವಾಗುತ್ತಿದ್ದು, ಬದ್ಧತೆ ಸಂಪೂರ್ಣ ನಶಿಸಿಹೋಗಿದೆ.

ಪಕ್ಷ ನಿಷ್ಠೆಯನ್ನು ಬದಿಗಿಟ್ಟು, ವಸ್ತುನಿಷ್ಟವಾಗಿ ನೋಡಿದರೆ ಇದನ್ನು ಗ್ರಹಿಸುವುದು ಸುಲಭ. ಇಂದು ಭಾರತದ ಸಾರ್ವಭೌಮ ಪ್ರಜೆಗಳಾದ ನಾವು ಆಯ್ಕೆ ಮಾಡುತ್ತಿರುವ ಜನಪ್ರತಿನಿಧಿಗಳ ಹಿನ್ನೆಲೆ ಮತ್ತು ಅವರ ಧೋರಣೆಯನ್ನು (ಕೆಲವು ಅಪವಾದಗಳನ್ನು ಹೊರತುಪಡಿಸಿ) ಸೂಕ್ಷ್ಮವಾಗಿ ಗಮನಿಸಿದರೆ ಆಡಳಿತ ದಕ್ಷತೆಯ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳುವುದೇ ವ್ಯರ್ಥ ಎನಿಸುತ್ತದೆ.

ಒಂದು ವರದಿಯ ಪ್ರಕಾರ ಇತ್ತೀಚೆಗಷ್ಟೇ ಮುಗಿದ ಬಿಹಾರ ಚುನಾವಣೆಗಳಲ್ಲಿ ಶೇ 68ರಷ್ಟು ಚುನಾಯಿತ ಪ್ರತಿನಿಧಿಗಳು ಅಪರಾಧದ ಹಿನ್ನೆಲೆಯುಳ್ಳವರಾಗಿದ್ದಾರೆ. ಇದು ನಮಗೆ ಒಂದು ಗಂಭೀರ ವಿಚಾರ ಎನಿಸುತ್ತಲೇ ಇಲ್ಲ. ಏಕೆಂದರೆ ರಾಜಕಾರಣದಲ್ಲಿ ಅಪರಾಧದ ಹಿನ್ನೆಲೆ ಇಲ್ಲದವರ ಸಂಖ್ಯೆ ಕ್ಷೀಣಿಸುತ್ತಿದೆ. ಮತ್ತೊಂದೆಡೆ ಪಕ್ಷ ರಾಜಕಾರಣದ ಸ್ವಾರ್ಥ ಹಿತಾಸಕ್ತಿಗಳು ಅಪರಾಧಿಗಳಿಗೆ ಶ್ರೀರಕ್ಷೆ ಒದಗಿಸಲು ಸದಾ ಸಿದ್ಧವಾಗಿರುತ್ತವೆ.

ಆದರೂ ನಾವು, ಭಾರತ ಭ್ರಷ್ಟಾಚಾರ ಮುಕ್ತವಾಗಿದೆ ಎಂದು ಬೆನ್ನುತಟ್ಟಿಕೊಳ್ಳುತ್ತಿದ್ದೇವೆ. ಏಕೆಂದರೆ ಸಾಮಾನ್ಯ ಪರಿಭಾಷೆಯಲ್ಲಿ ಭ್ರಷ್ಟಾಚಾರ ಎಂದರೆ ಹಣಕಾಸು ಅವ್ಯವಹಾರ ಮಾತ್ರವೇ ನಿಷ್ಕರ್ಷೆಗೊಳಪಡುತ್ತದೆ. ನೈತಿಕ ಭ್ರಷ್ಟಾಚಾರವನ್ನು ನಾವೂ ಸಹ, ಅಂದರೆ ಪ್ರಜ್ಞೆ ಇರುವ ಪ್ರಜೆಗಳೂ ಸಹ, ಈ ಭ್ರಷ್ಟಾಚಾರದ ವ್ಯಾಪ್ತಿಗೆ ಒಳಪಡಿಸಿಲ್ಲ. ಹಾಗೊಮ್ಮೆ ನಾವು ಭಾವಿಸಿದರೆ ಇಂದು ಭಾರತದ ಶಾಸಕಾಂಗವನ್ನು ಪ್ರತಿನಿಧಿಸುವವರ ಪೈಕಿ ಶೇ 90ರಷ್ಟು ಪ್ರತಿನಿಧಿಗಳು ಅನರ್ಹರಾಗಿಬಿಡುತ್ತಾರೆ.

ಏಕೆಂದರೆ ಇಡೀ ಶಾಸಕಾಂಗವೇ ನೈತಿಕತೆಯನ್ನು ಕಳೆದುಕೊಂಡಿದೆ. ಸಣ್ಣ ಪುಟ್ಟ ವಂಚನೆಯಿಂದ ಹಿಡಿದು ಸಾಮೂಹಿಕ ಹತ್ಯಾಕಾಂಡ, ಅತ್ಯಾಚಾರ ಮತ್ತು ಭಯೋತ್ಪಾದನೆಯವರೆಗೂ ಎಲ್ಲ ಅಪರಾಧಗಳ ತುಣುಕುಗಳನ್ನು ನಮ್ಮ ಶಾಸನ ಸಭೆಗಳಲ್ಲಿ ಕಾಣಬಹುದಾದರೆ ಅದಕ್ಕೆ ಕಾರಣ ನಮ್ಮ ಗ್ರಹಿಕೆಯಲ್ಲಿನ ದೋಷ ಮತ್ತು ನಾಗರಿಕ ಪ್ರಜ್ಞೆಯ ಕೊರತೆ.

ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡುವ ಬಿಜೆಪಿಯ ಘೋಷಣೆ ಸಾಕಾರಗೊಳ್ಳುವುದು ಕಷ್ಟವೇನಲ್ಲ. ಶಾಸಕರ ಖರೀದಿ ಪ್ರಕ್ರಿಯೆ ಈಗ ಅಸಾಂವಿಧಾನಿಕ ಎನ್ನುವ ಕನಿಷ್ಟ ಪ್ರಜ್ಞೆಯನ್ನೂ ಕಳೆದುಕೊಂಡಿರುವ ನವ ಭಾರತದ ಸಮಾಜದಲ್ಲಿ ಇದು “ ಆಲಿಬಾಬಾ ಮತ್ತು 40 ಕಳ್ಳರು” ಕತೆಯಂತೆ ಅನಾವರಣಗೊಳ್ಳುತ್ತಾ ಹೋಗುತ್ತದೆ.

ಜನಾದೇಶಕ್ಕಿಂತಲೂ ಸರ್ಕಾರಗಳನ್ನು ರಚಿಸುವ ಸಂದರ್ಭದಲ್ಲಿನ ಧನಾದೇಶವೇ ಹೆಚ್ಚು ಪ್ರಾಶಸ್ತ್ಯ ಪಡೆಯುತ್ತಿರುವ ಒಂದು ವಿಕೃತ ಪ್ರಜಾತಂತ್ರದಲ್ಲಿ ನಾವು ಸುಖಿಸುತ್ತಿದ್ದೇವೆ. ಹಾಗಾಗಿ ಭ್ರಷ್ಟರು, ಕೊಲೆ ಆರೋಪ ಹೊತ್ತವರು, ಗೂಂಡಾಗಿರಿ ಮಾಡಿದವರು, ಕಪ್ಪುಹಣದ ವಾರಸುದಾರರು ಎಲ್ಲರೂ ಸಹ ತಮ್ಮ ಅಂತಿಮ ಆಶ್ರಯ ತಾಣವನ್ನು, ಅಂದರೆ ಆಡಳಿತಾರೂಢ ಪಕ್ಷಗಳನ್ನು, ಅರಸುತ್ತಲೇ ಚುನಾವಣೆ ಎನ್ನಲಾಗುವ ಪ್ರಜಾತಾಂತ್ರಿಕ ಪ್ರಹಸನದಲ್ಲಿ ಪಾಲ್ಗೊಳ್ಳುತ್ತಾರೆ.

ಕೆಲವು ಸೂಕ್ಷ್ಮ ಸಂಗತಿಗಳನ್ನು ಗಮನಿಸೋಣ

ಶಾಸಕರ ಖರೀದಿ ಅಥವಾ ಹರಾಜು ಪ್ರಹಸನ, ಹರಾಜು ಪ್ರಕ್ರಿಯೆಯಿಂದ ತಾಂತ್ರಿಕವಾಗಿ “ಜನಪ್ರತಿನಿಧಿ” ಎನ್ನಲಾಗುವ ಭೌತಿಕ ಸರಕುಗಳನ್ನು ರಕ್ಷಿಸಲು ರೆಸಾರ್ಟ್‍ಗಳಲ್ಲಿ ತಾತ್ಕಾಲಿಕವಾಗಿ ಶೇಖರಿಸಿಡುವುದು (ಈ ಕಸರತ್ತಿಗೆ ತಗಲುವ ವೆಚ್ಚವನ್ನು ಭರಿಸಲು ಒಬ್ಬ ಕಾರ್ಪೋರೇಟ್ ಅಥವಾ ರಿಯಲ್ ಎಸ್ಟೇಟ್ ಉದ್ಯಮಿ ಇರುತ್ತಾನೆ).

ಚುನಾಯಿತರಾದ ಕೆಲವೇ ತಿಂಗಳುಗಳ ನಂತರ ಜನಪ್ರತಿನಿಧಿಗಳು ತಮ್ಮ ಶಾಸಕ/ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಂದು ಪಕ್ಷದ ಲಾಂಛನ ಹೊತ್ತು ಅದೇ ಜನತೆಯಿಂದ ಪುನರಾಯ್ಕೆಯಾಗುವುದು (ಇಲ್ಲಿ ತೊಡಗಿಸಲಾಗುವ, ಹೆಚ್ಚಿನ ಚುನಾವಣಾ ವೆಚ್ಚ , ಅಂದರೆ ರಾಜಕೀಯ ಬಂಡವಾಳವನ್ನೂ ಸಹ ಕಾರ್ಪೋರೇಟ್ ಉದ್ಯಮಿಗಳು ಭರಿಸುತ್ತಾರೆ).

ಯಾವುದೋ ಹಗರಣದಲ್ಲಿ ಸಿಲುಕಿ ಇನ್ನೇನು ಶಿಕ್ಷೆಯಾಗುತ್ತದೆ ಎನ್ನುವ ಕ್ಷಣದಲ್ಲಿ ತಮ್ಮ ತವರುಮನೆ ತೊರೆದು ಆಡಳಿತಾರೂಢ ಪಕ್ಷಕ್ಕೆ ಜಿಗಿದು ಆರೋಪ ಮುಕ್ತರಾಗುವುದು ಮತ್ತು ಹೊಸ ಮನೆಯಲ್ಲಿ ಒಂದು ಉನ್ನತ ಹುದ್ದೆ ಪಡೆದು ಪ್ರಾಮಾಣಿಕತೆಯ ಪಾಠ ಪ್ರವಚನ ಮಾಡುವುದು.

ತಾವು ಬಯಸಿದ ಹುದ್ದೆ ಅಥವಾ ಅನುಕೂಲಗಳು ಸರ್ಕಾರದಲ್ಲಿ ದೊರೆಯದೆ ಹೋದರೆ ಒತ್ತಡದ ರಾಜಕಾರಣ ಮಾಡುವ ಮೂಲಕ ಸರ್ಕಾರಗಳನ್ನು ಅಸ್ಥಿರಗೊಳಿಸಿ ತಮ್ಮ ಸ್ಥಾನ/ಮಾನ ಕಾಪಾಡಿಕೊಳ್ಳಲು ಶ್ರಮಿಸುವುದು. –

ಇವೆಲ್ಲವೂ ಸ್ವತಂತ್ರ ಭಾರತದ ರಾಜಕೀಯ ಅವಿಷ್ಕಾರಗಳು ಮತ್ತು ಕಳೆದ ಹತ್ತು ಹನ್ನೆರಡು ವರ್ಷಗಳಲ್ಲಿ ಅಧಿಕೃತವಾಗಿ ಮಾನ್ಯತೆ ಪಡೆದಿರುವಂತಹ ವಿದ್ಯಮಾನಗಳು. ಅದರೂ ನಾವು ನಮ್ಮ ದೇಶ ಬಯಲುಶೌಚ ಮುಕ್ತವಾಗಿದೆ ಎಂದು ಬೆನ್ನುತಟ್ಟಿಕೊಳ್ಳುತ್ತಿದ್ದೇವೆ.

2016ರ ನೋಟು ಅಮಾನ್ಯೀಕರಣದ ನಂತರ ಭಾರತ ಕಪ್ಪುಹಣ ಮುಕ್ತವಾಗಿದೆ ಎಂದು ನಾವೇ ಜಗಜ್ಜಾಹೀರಾಗುವಂತೆ ಘೋಷಿಸಿಕೊಂಡಿರುವುದರಿಂದ ಚುನಾವಣೆಗಳಲ್ಲಿ ಹಂಚಲಾಗುವ ಹಣ, ಸೀರೆ, ಹೆಂಡ, ಟಿವಿ, ಲ್ಯಾಪ್ ಟಾಪ್, ಮೊಬೈಲ್, ಸೆಟ್ ಟಾಪ್ ಬಾಕ್ಸ್ ಇವೆಲ್ಲವೂ ಅಧಿಕೃತ ಖರ್ಚಿನ ವ್ಯಾಪ್ತಿಗೇ ಒಳಪಡುತ್ತವೆ. ಯಾರು ಎಷ್ಟು ಹಂಚಿದ್ದಾರೆ ಎನ್ನುವುದಷ್ಟೇ ಚರ್ಚೆಗೊಳಗಾಗುವುದೇ ಹೊರತು, ಈ ಹರಿದು ಹಂಚುವ ದುಷ್ಟ ಪರಂಪರೆಯ ವಿರುದ್ಧ ದನಿ ಎತ್ತುವ ಪರಿಜ್ಞಾನವನ್ನೂ ನಮ್ಮ ಸಮಾಜ ಕಳೆದುಕೊಂಡುಬಿಟ್ಟಿದೆ.

ಏಕೆಂದರೆ ಇಂತಹ ಪ್ರಕರಣಗಳನ್ನು ಆಲಿಸಿ, ವಿಚಾರಣೆ ನಡೆಸಿ, ಶಿಕ್ಷೆ ವಿಧಿಸುವಂತಹ ಒಂದು ನ್ಯಾಯ ವ್ಯವಸ್ಥೆಯನ್ನು ಆಳುವ ವರ್ಗಗಳು ರೂಪಿಸಿಯೇ ಇಲ್ಲ. ನಾಗರಿಕರು ಸಲ್ಲಿಸುವ ಅರ್ಜಿಗಳು ಸಾಕ್ಷ್ಯಾಧಾರಗಳಿಲ್ಲದೆ ಕಸದ ಬುಟ್ಟಿ ಸೇರುತ್ತವೆ. ಕಣ್ಣೆದುರಿನಲ್ಲೇ ದೇಹಗಳು ಸುಟ್ಟು ಕರಕಲಾದರೂ ಸಾಕ್ಷ್ಯ ಹೇಳಲಾಗದ ದೇಶದಲ್ಲಿ ಇಂತಹ ಕ್ಷುಲ್ಲಕ (?) ಘಟನೆಗಳಿಗೆ ಸಾಕ್ಷ್ಯ ಹೇಗೆ ತಾನೇ ದೊರೆಯಲು ಸಾಧ್ಯ ?

ನಮ್ಮ ವ್ಯವಸ್ಥೆಯೊಳಗಿನ ಈ ಅವ್ಯವಸ್ಥೆಯನ್ನು ಸರಿಪಡಿಸಲು, ಈ ದುರವಸ್ಥೆಯಿಂದ ಹೊರಬರಲು ಸಂವಿಧಾನದ ಎರಡು ಅಂಗಗಳು ಇನ್ನೂ ಸಾರ್ವಭೌಮ ಪ್ರಜೆಗಳ ಪಾಲಿಗೆ ಲಭ್ಯವಿದೆ. ಒಂದು ನ್ಯಾಯಾಂಗ ಮತ್ತೊಂದು ಮಾಧ್ಯಮ ವಲಯ. ನ್ಯಾಯಾಂಗ ವ್ಯವಸ್ಥೆಯಲ್ಲಿ , ಸಂಭವಿಸಿದ ಘಟನೆಗಿಂತಲೂ ಸಾಕ್ಷ್ಯಾಧಾರಗಳೇ ಪ್ರಧಾನವಾಗುವುದರಿಂದ ಕೆಲವೊಮ್ಮೆ ನಡೆದ ಅಪರಾಧಗಳು ನಡೆದೇ ಇಲ್ಲ ಎಂದು ತೀರ್ಪು ನೀಡಲಾಗುತ್ತದೆ.

ಇದನ್ನು ದೋಷ ಎನ್ನಲಾಗುವುದಿಲ್ಲ. ಏಕೆಂದರೆ ಸಾಂವಿಧಾನಿಕವಾಗಿ ಅಕ್ರಮ ಎಂದು ಪರಿಗಣಿಸಲ್ಪಡುವ ಯಾವುದೇ ಒಂದು ದುಷ್ಕೃತ್ಯಕ್ಕೆ ಅಥವಾ ಕುಕೃತ್ಯಕ್ಕೆ ಸಾಕ್ಷಿ ಪುರಾವೆ ಒದಗಿಸಬೇಕಿರುವುದು ಆಡಳಿತಾರೂಢ ಸರ್ಕಾರ. ಅಪರಾಧಿಗಳಿಗೆ ರಕ್ಷಣೆ ನೀಡುವುದರ ಮೂಲಕವೇ ಅಧಿಕಾರ ಅನುಭವಿಸುವ ಸರ್ಕಾರಗಳಿಂದ ಇದನ್ನು ನಿರೀಕ್ಷಿಸುವುದೂ ತಪ್ಪಲ್ಲವೇ ?

ಇನ್ನು ಈ ಸಾಕ್ಷ್ಯಾಧಾರಗಳನ್ನು ಒದಗಿಸುವ ನೈತಿಕ ಮತ್ತು ಸಾಂವಿಧಾನಿಕ ಹೊಣೆ ಮಾಧ್ಯಮಗಳ ಮೇಲಿರುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಭಾರತದ ಸುದ್ದಿ ಮಾಧ್ಯಮಗಳು ಮತ್ತು ವಿದ್ಯುನ್ಮಾನ ಸುದ್ದಿಮನೆಗಳು ಈ ನೈತಿಕತೆಯನ್ನು ಬಹುಮಟ್ಟಿಗೆ ಕಳೆದುಕೊಂಡಿವೆ.

ಕಳೆದ ಎರಡು ದಶಕಗಳಲ್ಲಿ ತಮ್ಮ ಸ್ವಂತಿಕೆ, ಸ್ವಾಯತ್ತತೆ ಮತ್ತು ಸ್ವಾಭಿಮಾನಿ ನೆಲೆಯನ್ನು ಕಳೆದುಕೊಂಡಿರುವ ಬಹುಪಾಲು ಮಾಧ್ಯಮ ಮನೆಗಳು ಕಾರ್ಪೋರೇಟ್ ಉದ್ಯಮಿಗಳ ಒಡೆತನದಲ್ಲಿರುವುದರಿಂದ, ಕಾರ್ಪೋರೇಟ್ ಪ್ರೇರಿತ ರಾಜಕಾರಣ ಮತ್ತು ರಾಜಕೀಯ ಪ್ರೇರಿತ ಔದ್ಯಮಿಕ ಹಿತಾಸಕ್ತಿಗಳ ನಡುವೆ ಸಿಲುಕಿ ತಮ್ಮ ನೈತಿಕ ಹೊಣೆಯನ್ನು ಮರೆತಿವೆ. ಹಾಗಾಗಿ ಈ ದೇಶದ ಸಾಮಾನ್ಯ ಪ್ರಜೆಗಳು ತಮ್ಮ ಮೇಲೆ ನಡೆಯುವ ದೌರ್ಜನ್ಯಗಳಿಗೆ, ತಮ್ಮ ಹಿತಾಸಕ್ತಿಯ ವಿರುದ್ಧ ನಡೆಯುವ ಅಕ್ರಮಗಳಿಗೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ಒಂದು ಮಾರ್ಗವನ್ನೇ ಕಳೆದುಕೊಂಡಂತಾಗಿದೆ.

ಕಳೆದ ಆರು ವರ್ಷಗಳಲ್ಲಿ, ಅಧಿಕಾರ ಪೀಠಕ್ಕೆ ಹತ್ತಿರುವಾಗುವುದೇ ಮಾಧ್ಯಮ ಮನೆಗಳ, ಸಮೂಹಗಳ ಆದ್ಯತೆಯಾಗಿರುವುದರಿಂದ ಸುದ್ದಿಮನೆಗಳ ಸಂಪಾದಕರು ತಮ್ಮ ಸಾಂಸ್ಥಿಕ ಮತ್ತು ವ್ಯಕ್ತಿಗತ ಸ್ವಾಯತ್ತತೆ ಹಾಗೂ ಸ್ವಾಭಿಮಾನ ಎರಡನ್ನೂ ಅಧಿಕಾರಸ್ಥರಿಗೆ ಒತ್ತೆ ಇಟ್ಟಿರುವುದನ್ನು ಗಮನಿಸುತ್ತಲೇ ಇದ್ದೇವೆ.

ಹೀಗಿರುವುದರಿಂದಲೇ ಮಾಧ್ಯಮ ಲೋಕದ ದಿಗ್ಗಜರಿಗೂ ಅಭಯಹಸ್ತ, ಶ್ರೀರಕ್ಷೆ, ಅಕ್ಷಯ ವಸ್ತ್ರ ಸದಾ ಸಿದ್ಧವಾಗಿರುತ್ತದೆ. ಇತ್ತೀಚಿನ ಅರ್ನಾಬ್ ಗೋಸ್ವಾಮಿ ಪ್ರಕರಣ ಒಂದು ನಿದರ್ಶನವಷ್ಟೇ. ಈ ಪ್ರಕರಣದಲ್ಲಿ ಗೋಸ್ವಾಮಿಗೆ ಜಾಮೀನು ದೊರೆತದ್ದು ಆಕ್ಷೇಪಾರ್ಹವೇನಲ್ಲ. ಜಾಮೀನು ಒಬ್ಬ ಆರೋಪಿಯ ಕಾನೂನಾತ್ಮಕ ಹಕ್ಕು ಎಂದೇ ಭಾವಿಸಲಾಗುತ್ತದೆ.

ಆದರೆ ಗೋಸ್ವಾಮಿಗೆ ದೊರೆತಷ್ಟೇ ಶೀಘ್ರಗತಿಯಲ್ಲಿ 80ರ ವೃದ್ಧ ಸ್ಟಾನ್ ಸ್ವಾಮಿಗೆ ಏಕೆ ಜಾಮೀನು ದೊರೆಯುವುದಿಲ್ಲ ಎನ್ನುವ ಪ್ರಶ್ನೆ ಜಟಿಲವಾಗಿಯೇ ಉಳಿಯುತ್ತದೆ. ಮತ್ತದೇ ಸಮಸ್ಯೆ, ಸಾಕ್ಷ್ಯಾಧಾರಗಳನ್ನು ಒದಗಿಸುವವರು ಯಾರು ಎನ್ನುವುದು.

ಆದರೆ ನಮ್ಮ ಮುಂದಿರುವ ಪ್ರಶ್ನೆ ಗೋಸ್ವಾಮಿ ಅಲ್ಲ. ಸ್ಟಾನ್ ಸ್ವಾಮಿ ಮತ್ತು ಅವರಂತೆಯೇ ಯಾವುದೇ ಅಪರಾಧ ಮಾಡದೆಯೇ, ಜಾಮೀನು ಸಹ ಪಡೆಯಲಾಗದೆ ಸೆರೆವಾಸ ಅನುಭವಿಸುತ್ತಿರುವ ನೂರಾರು ಕಾರ್ಯಕರ್ತರು, ಹೋರಾಟಗಾರರು, ವಿದ್ವಾಂಸರು ಮತ್ತು ಲೇಖಕ-ಕಲಾವಿದರು. ಇವರು ಸಮಸ್ತ ಭಾರತವನ್ನು ಪ್ರತಿನಿಧಿಸುವ ಮನಸ್ಸನ್ನು ಹೊತ್ತವರು.

ಇದು ನಮ್ಮ ಮುಂದಿನ ಜಟಿಲ ಸಮಸ್ಯೆಯ ಒಂದು ಅಂಶ ಮಾತ್ರ. ಪ್ರಧಾನವಾಗಿ ನಮ್ಮೆದುರು ಇರುವುದು ಈ ದೇಶದ ಸಾಮಾಜಿಕ-ರಾಜಕೀಯ ವ್ಯವಸ್ಥೆಯ ದೌರ್ಬಲ್ಯ ಮತ್ತು ಆ ದೌರ್ಬಲ್ಯ ಏನು ಎಂದು ಗ್ರಹಿಸಲು ಸಾಧ್ಯವಾಗದ ನಾಗರಿಕರ ದೌರ್ಬಲ್ಯ. ಸಂವಿಧಾನ ಮತ್ತು ಆಡಳಿತ ವ್ಯವಸ್ಥೆ ಕುಸಿಯುತ್ತಿದ್ದರೆ ಅದಕ್ಕೆ ಕಾರಣ ವ್ಯವಸ್ಥೆಯ ಅಡಿಪಾಯವೇ ದುರ್ಬಲವಾಗಿದೆ, ಆಧಾರ ಸ್ತಂಭಗಳು ಶಿಥಿಲವಾಗುತ್ತಿವೆ.

ಈ ಸ್ತಂಭಗಳಿಗೆ ಒಂದು ಭೌತಿಕ ಸ್ವರೂಪ ಇಲ್ಲ, ಅಲ್ಲವೇ ? ಈ ದೇಶದ 130 ಕೋಟಿಗೂ ಹೆಚ್ಚು ಜನರನ್ನು ಸಾಂಕೇತಿಕವಾಗಿ ಈ ಸ್ತಂಭಗಳು ಪ್ರತಿನಿಧಿಸುತ್ತವೆ. ಈ ಬೃಹತ್ ಜನಸಂಖ್ಯೆಯಲ್ಲಿ ಶೇ 10ರಷ್ಟು ಜನರಲ್ಲಿ ನಾಗರಿಕ ಪ್ರಜ್ಞೆ, ಸಾಂವಿಧಾನಿಕ ಮೌಲ್ಯಗಳ ಅರಿವು, ಪ್ರಜಾತಂತ್ರದ ರಕ್ಷಣೆಯ ಪರಿಜ್ಞಾನ ಮತ್ತು ಜಾಗೃತಿ ಮೂಡಿಸಿದಲ್ಲಿ ಈ ಜನಸಂಖ್ಯೆಯೇ ಬೃಹದಾಕಾರದ ಸ್ತಂಭವಾಗಿ ದೇಶದ ವ್ಯವಸ್ಥೆಯನ್ನು ಪಾತಾಳಕ್ಕೆ ಕುಸಿಯುವುದರಿಂದ ತಪ್ಪಿಸಲು ಸಾಧ್ಯ. ಈ ನಿಟ್ಟಿನಲ್ಲಿ ರಾಜಕಾರಣ ನಿಮಿತ್ತ ಮಾತ್ರ.
ರಾಜಕೀಯ ಪಕ್ಷಗಳು ನೆಪ ಮಾತ್ರ.

ಬದಲಾವಣೆ, ಕತ್ತಲಿನಿಂದ ಬೆಳಕಿನೆಡೆಗೆ ಮುನ್ನಡೆಸುವ ಬದಲಾವಣೆ, ಬೇಕೆಂದರೆ ಈ ನಿಮಿತ್ತಗಳಿಂದಾಚೆಗೂ ಪ್ರಯತ್ನಗಳು ಸಾಧ್ಯ. ಸದ್ಯದ ಪರಿಸ್ಥಿತಿಯಲ್ಲಿ ಅರೆ ಜ್ಞಾನದಿಂದಲೋ, ಅಜ್ಞಾನದಿಂದಲೋ ಉನ್ಮಾದಕ್ಕೊಳಗಾಗಿ, ಸಮೂಹ ಸನ್ನಿಗೆ ಬಲಿಯಾಗಿರುವ ಯುವ ಪೀಳಿಗೆಯನ್ನು ಈ ಪ್ರಯತ್ನಗಳಲ್ಲಿ ತೊಡಗುವಂತೆ ಮಾಡುವುದು ಪ್ರಜ್ಞಾವಂತ ನಾಗರಿಕ ಸಮಾಜದ ಆದ್ಯತೆಯಾಗಬೇಕು.ಆಲೋಚನೆ ಮಾಡೋಣವೇ ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನನ್ನ ನೆಚ್ಚಿನ ಪುಸ್ತಕ ವಿಮರ್ಶೆ ಸ್ಪರ್ಧೆ ; ವಿದ್ಯಾರ್ಥಿಗಳಿಗೆ ಬಹುಮಾನ

Published

on

ಸುದ್ದಿದಿನ,ದಾವಣಗೆರೆ:ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.

ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್.‌ ಪ್ರಥಮ ಬಹುಮಾನವಾಗಿ ಒಂದು ಸಾವಿರ, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ರೂ. 750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ. ಎಸ್‌. ರೂ. 500 ನಗದು ಬಹುಮಾನ ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು.

ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿಸೌಜ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು.

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು, ಓದಿನ ಮೂಲಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚಿತ್ರದುರ್ಗ | ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಡಿ.ಡಿ ಬಿ.ಮಲ್ಲಿಕಾರ್ಜುನ, ಕ್ರೈಸ್ ಇ.ಡಿ ಬಿ.ಶಿವಸ್ವಾಮಿ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ಚಿತ್ರದುರ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ಶಾಲೆಗಳಿಗೆ (ಕ್ರೈಸ್) ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡದೆ ವಂಚಿಸುತ್ತಿರುವ ಶ್ರೀ ಶಿರಡಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಚಿತ್ರದುರ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಶಿವಸ್ವಾಮಿ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ವಸತಿ ಶಾಲೆಗಳಿಗೆ ಅಧಿಕೃತ ಟೆಂಡರುದಾರರಾದ ಶ್ರೀ ಶಿರಡಿ ಸಾಯಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರು ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡದೆ ಇರುವ ಅಧಿಕೃತ ಮಾಹಿತಿ ತಿಳಿದು, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ ಇವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರಾಂಶುಪಾಲರುಗಳಿAದ ಮಾಹಿತಿಹಕ್ಕು ಅಡಿಯಲ್ಲಿ ಪಡೆದ ದೃಢೀಕೃತ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಆಹಾರ ಸಾಮಾಗ್ರಿ ಸರಬರಾಜಿನಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿರುತ್ತವೆ.

ಆದ ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ನಾವು ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಪ್ರತ್ಯುತ್ತರವನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ದಿನಾಂಕ: 21-04-2026 ರಂದು ಜ್ಞಾಪನವನ್ನು ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ದೂರು ಅರ್ಜಿಗೆ ಸಂಬAಧಿಸಿದAತೆ ತನಿಖಾ ವರದಿಯನ್ನಾಗಲಿ ಅಥವಾ ಪ್ರತ್ಯುತ್ತರವನ್ನಾಗಲಿ ನೀಡಿರುವುದಿಲ್ಲ.

ಈ ಬಗ್ಗೆ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರಿಗೆ ದೂರು ನೀಡಲಾಗಿತ್ತು. ಆದರೆ ಇವರು ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ

Published

on

ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್‌ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ಆಶ್ರಯ, ತಾಲೂಕು ವಿಶ್ವಕರ್ಮ ಸೇವಾ ಸಮಾಜ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಜಂಟಿ ವತಿಯಿಂದ ಆಯೋಜಿಸಿರುವ ‘ವಿಶ್ವಕರ್ಮ ಜಯಂತಿ’ ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ರವಿಶಂಕರ್‌ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್‌ ಜಿ. ಸುರೇಂದ್ರ ಮೂರ್ತಿ ಅವರು ವಹಿಸಲಿದ್ದಾರೆ. ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ರೇವಣ್ಣ, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್‌ ಎನ್., ಪದಾಧಿಕಾರಿಗಳಾದ ಈಶ್ವರಾಚಾರ್‌, ಚೇತನ್‌ ಮೂರ್ತಿ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಲಿದ್ದು, ಬಳಿಕ ಅಲ್ಲಿಂದ ತಾಲೂಕು ಆಡಳಿತ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ.

ವಿಶೇಷವೆಂದರೆ, ಪ್ರಕಾಶಕರು ಹಾಗೂ ಆಯೋಜಕರ ಆಸಕ್ತಿಯ ಮೇರೆಗೆ ‘ನಿರಾಕಾರ ವಿಶ್ವಕರ್ಮ’ ಕೃತಿಯನ್ನು ತಿಂಗಳ ಅಂತರದಲ್ಲಿ ಮೂರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸೆಪ್ಟೆಂಬರ್‌ 17ರಂದು ಕೆ.ಆರ್.ನಗರದಲ್ಲಿ ಕೃತಿ ಬಿಡುಗಡೆಯಾದರೆ, ಸೆಪ್ಟೆಂಬರ್‌ 20ರಂದು ಬೆಂಗಳೂರಿನ ತಾತಗುಣಿಯ ವಿಶ್ವಕರ್ಮ ನಗರದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳಿಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಹಾಗೆಯೇ, ನವೆಂಬರ್‌ 22ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾವ್ಯಸ್ಪಂದನ ಪ್ರಕಾಶನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿಯೂ ಈ ಕೃತಿ ಬಿಡುಗಡೆಯಾಗಲಿದೆ.

ಮಾನವ ನಾಗರಿಕತೆಯ ಇತಿಹಾಸವನ್ನು ತೆರೆದರೆ, ಅದರ ಪ್ರತಿಯೊಂದು ಪುಟದ ಹಿಂದೆಯೂ ಶ್ರಮಿಸಿದ ಅನಾಮಿಕ ಕೈಗಳು ಕಾಣಿಸುತ್ತವೆ. ಆ ಕೈಗಳು ಕಲ್ಲನ್ನು ಕೆತ್ತಿ ದೇವಸ್ಥಾನವಾಗಿಸಿವೆ, ಕಬ್ಬಿಣವನ್ನು ಬಡಿದು ಆಯುಧವಾಗಿಸಿವೆ, ಮರಕ್ಕೆ ರೂಪ ಕೊಟ್ಟು ಬಾಗಿಲಾಗಿಸಿವೆ, ಮಣ್ಣಿಗೆ ಜೀವ ತುಂಬಿ ಮಡಕೆಯಾಗಿಸಿವೆ; ಹಾಗೆಯೇ ಬಣ್ಣಗಳ ಮೂಲಕ ಅಚ್ಚಳಿಯದ ಭಾವನೆಗಳನ್ನು ಮೂಡಿಸಿವೆ. ಆ ಸೃಷ್ಟಿಶೀಲ ಕೈಗಳಿಗೆ ಬಹುಶಃ ಇತಿಹಾಸದ ಅಧಿಕೃತ ಪುಟಗಳಲ್ಲಿ, ರಾಜ-ಮಹಾರಾಜರ ಕಥೆಗಳ ನಡುವೆ ದೊಡ್ಡ ಅಕ್ಷರಗಳಲ್ಲಿ ಹೆಸರು ಸಿಕ್ಕಿಲ್ಲದಿರಬಹುದು. ಆದರೆ ಅವರು ನಿರ್ಮಿಸಿದ ಕಲೆ, ಶಿಲ್ಪ, ವಾಸ್ತು, ಉಪಕರಣ ಮತ್ತು ಸೌಂದರ್ಯವೇ ನಮ್ಮ ನಾಗರಿಕತೆಯ ಉಸಿರಾಗಿ, ಜೀವಂತ ಸಾಕ್ಷಿಗಳಾಗಿ ಇಂದಿಗೂ ಉಳಿದಿವೆ. ಅಂತಹ ಸೃಜನಶೀಲ ಕೈಗಳ ಸಮೂಹ ಸ್ಮೃತಿಯನ್ನು, ಪರಂಪರೆಯನ್ನು ಮತ್ತು ಇತಿಹಾಸವನ್ನು ಅರಿಯುವ ಅರ್ಥಪೂರ್ಣ ಪ್ರಯತ್ನವನ್ನು ನಿರಾಕಾರ ವಿಶ್ವಕರ್ಮ ಕೃತಿಯಲ್ಲಿ ಲೇಖಕರಾದ ಚಂದ್ರಶೇಖರ ಗಂಧನಹಳ್ಳಿ ಅವರು ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending