Connect with us

ದಿನದ ಸುದ್ದಿ

ಹೆಚ್ಚು ಬೆಳೆದು ಹೆಚ್ಚೆಚ್ಚು ಜನರಿಗೆ ‘ಇಬ್ಬಡ್ಲ’ದ ಹುಚ್ಚು ಹಿಡಿಸಿಬಿಡಬಹುದು

Published

on

  • ಹರೀಶ್ ಬಿ ಎಸ್, ಸಹಾಯಕ ಪ್ರಾಧ್ಯಾಪಕರು,ತೋಟಗಾರಿಕೆ ಮಹಾವಿದ್ಯಾಲಯ,ಮೈಸೂರು

ಕ್ಯಾಕ್ರಿಕೆ, ಕೆಕ್ಕರಿಕೆ, ಇಬ್ಬಡ್ಲ, ಬನಸ್ಪತೆ…… ಕೇಳಿದ್ದೀರಾ ಈ ಹೆಸರುಗಳನ್ನು? ಕೇರಳಿಗರು ಇದಕ್ಕೆ ಕಕ್ಕರಿ ಅಥವಾ ಪೊಟ್ಟು ವಳ್ಳರಿ ಎನ್ನುವರು. ಸವಿದವರಿಗಷ್ಟೇ ಗೊತ್ತು ಇದರ ರುಚಿ, ಅದೂ ಬಿರುಬೇಸಿಗೆಯಲ್ಲಿ. ದಾಹ ತಣಿಸುವ ಯಾವುದೇ ಹಣ್ಣಿನ ರಸ ಅಥವಾ ತಂಪು ಪಾನೀಯಗಳಿಗೆ ಸಾಟಿಯಾಗಿ ನಿಲ್ಲಬಲ್ಲದು ಈ ದೇಸೀ ಹಣ್ಣು. ಉತ್ತರ ಕನ್ನಡ, ಶಿವಮೊಗ್ಗ, ತುಮಕೂರು, ಚಿತ್ರದುರ್ಗ ಹಾಗೂ ಹಾಸನ ಜಿಲ್ಲೆಯ ಕೆಲವೆಡೆ ಕಾಣಸಿಗುತ್ತದೆ. ಬಿರುಬೇಸಿಗೆಯಲ್ಲಿ ಬಿರಿದ ಈ ಹಣ್ಣಿನ ಮಂದರಸ ಅದೆಷ್ಟು ಸೊಗಸು.

ಈಗ ನೆನೆದರೂ ಮತ್ತೆ ಮತ್ತೆ ಬೇಕೆನಿಸುತ್ತದೆ. ಕರ್ನಾಟಕದಲ್ಲಿ ಇದರ ಪಾನಕ, ಪಾಯಸ ಹೆಚ್ಚೆಂದರೆ ಬಿರಿದ ಹಣ್ಣಿನ ತಿರುಳಿಗೆ ಬೆಲ್ಲ ತೆಂಗಿನ ಕಾಯಿ ತುರಿ ಸೇರಿಸಿ ಸವಿಯುವುದು ವಾಡಿಕೆ. ಬೆಳೆಯುವ ರೈತರು ವಿರಳವಾಗಿರುವುದರಿಂದ ಹಾಗೂ ಒಮ್ಮೆ ರುಚಿ ಹತ್ತಿದವರು ಮತ್ತೆ ಮತ್ತೆ ಕೊಳ್ಳಲು ಮನಸು ಮಾಡುವುದರಿಂದ ತಹಸೀಲು/ಜಿಲ್ಲಾ ಕೆಂದ್ರಗಳು ಹಾಗೂ ನಗರಗಳಲ್ಲಿ ಹಳ್ಳಿಗಾಡಿನ ಈ ಅಪ್ಪಟ ದೇಸೀ ಹಣ್ಣಿಗೆ ಬೇಡಿಕೆ ನಿರಂತರ ಹೆಚ್ಚುತ್ತಿದೆ. ಕೇರಳದ ಕೆಲ ಹೆದ್ದಾರಿಗಳ ಇಕ್ಕೆಲಗಳಲ್ಲೂ ಇದರ ಜ್ಯೂಸ್ ಮಾರುವ ಸಾಲು ಸಾಲು ಮಳಿಗೆಗಳು. ಇದರ ಕೀರ್ತಿ ಬೆಳೆದ ಅಲ್ಲಿನ ಕೆಲ ಕೃಷಿಕರಿಗೆ ಸಲ್ಲಬೇಕು.

ಬಿರಿದ ಹಣ್ಣಿನ ಪರಿಮಳಕ್ಕೆ ಮನಸೋತವರೇ ಹೆಚ್ಚು. ಇದರ ಕಾಯಿಯನ್ನು ಕೂಡ ತರಕಾರಿಯಾಗಿ, ಸಲಾಡಾಗಿ, ಉಪ್ಪಿನಕಾಯಿಯಾಗಿ ಬಳಸಬಹುದು ಜೊತೆಗೆ ಹಣ್ಣಿನ ತಿರುಳು ಬಳಸಿ ಹೆಚ್ಚು ದಿನ ಶೇಖರಿಸಿಡಬಹುದಾದ ಸಿದ್ಧ ಪೇಯ, ಸ್ಕ್ವಾಷ್, ಜಾಮ್, ಸಾಬೂನು ಮುಂತಾದ ಸಿದ್ಧ ಉತ್ಪನ್ನಗಳನ್ನು ತಯಾರಿಸಿ ಕಾಸು ಮಾಡಬಹುದೆಂಬುದು ಹೆಚ್ಚು ಜನರಿಗೆ ತಿಳಿದಿರುವುದು ಅನುಮಾನದ ವಿಚಾರ.

ನಮ್ಮ ಅರಸೀಕೆರೆಯ ಸುತ್ತ-ಮುತ್ತ ಸಾಮಾನ್ಯವಾಗಿ ಇದನ್ನು ಮಳೆಗಾಲದ ಆರಂಭದಲ್ಲಿ ಬಿತ್ತಿ ಗೌರಿಹಬ್ಬದ ಹೊತ್ತಿಗೆ ಕೊಯಿಲು ಮಾಡಿ ಮಾರುವುದು ಸಂಪ್ರದಾಯ. ಬೇಡಿಕೆ ಗಣನೀಯವಾಗಿರುವುದರಿಂದ ಬೆಳೆದವರು ತುಸು ಹೆಚ್ಚೇ ಲಾಭ ಮಾಡುತ್ತಿದ್ದಾರೆ. ಇನ್ನು ಕೆಲವೆಡೆ
ಡಿಸೆಂಬರ್ ನಲ್ಲಿ ಬಿತ್ತಿ ಬೇಸಿಗೆಗೆ ಹಣ್ಣು ಬರುವಂತೆ ಬೆಳೆದು ಮಾರುತ್ತಾರೆ.

ಇದರ ವ್ಯವಸ್ಥಿತ ಕೃಷಿ, ಸಂಸ್ಕರಣೆ ಹಾಗೂ ಮಾರಾಟಕ್ಕೆ ವಿಪುಲ ಅವಕಾಶವಿರುವುದರಿಂದ ವಾಣಿಜ್ಯ ಮಟ್ಟದಲ್ಲಿ ಬೆಳೆಯಲೂಬಹುದು; ಕಿಸೆ ತುಂಬ ಕಾಸೂ ಮಾಡಬಹುದು. ನಾವು ತಡ ಮಾಡಿದರೆ ಕೇರಳಿಗರೇ ನಮ್ಮಲ್ಲೂ ಮಳಿಗೆ ಹಾಕಿ ಮಾರಿಬಿಡುವ ಸಾಧ್ಯತೆಯಿದೆ. ಅವರಿಗೆ ಈ ಅವಕಾಶ ಕೊಡುವ ಬದಲು ನಮ್ಮ ಕೃಷಿಕರೇ ಬೆಳೆದು ಬಳಸಿ ತಮ್ಮ ಹಾಗೂ ಗ್ರಾಹಕರ ಉದರ ತಂಪು ಮಾಡುವುದರ ಜೊತೆಗೆ ಒಂದಷ್ಟು ಲಾಭಮಾಡಿಕೊಳ್ಳಬಹುದಾಗಿದೆ. ಕಲ್ಲಂಗಡಿ, ಕರಬೂಜ, ಸೌತೆ ಇತ್ಯಾದಿ ಬೆಳೆಗಳನ್ನು ನಿಖರ ಕೃಷಿ ಪದ್ಧತಿಯಲ್ಲಿ ದಶಕದಿಂದ ಬೆಳೆಯುತ್ತಿರುವ ನಮ್ಮ ಕೃಷಿಕರಿಗೆ ಇದರ ಕೃಷಿ ಖಂಡಿತ ಕಷ್ಟವಾಗಲಾರದು.

ಮಾಗಿದಾಗ ಬಿರುಕು ಬಿಟ್ಟು ಅದಿರುವ ಪರಿಸರದ ತುಂಬೆಲ್ಲ ಪರಿಮಳ ಪಸರಿಸುವುದು ಇದರ ವಿಶೇಷವಾದಾರೂ ದಿನಾರ್ಧದಲ್ಲಿ ಇದರ ಆಯಸ್ಸು ಮುಗಿಯುವುದೇ ಇದರ ಕೃಷಿಯ ವಿಸ್ತರಣೆ ಮತ್ತು ಮಾರಾಟಕ್ಕಿರುವ ದೊಡ್ಡ ತೊಡಕು. ಹಣ್ಣನ್ನು ರೆಫ್ರಿಜರೇಟಿರನಲ್ಲಿ ಇಟ್ಟರೂ ಇದರ ಮೂಲ ಗುಣಮಟ್ಟ ಕಾಯ್ದುಕೊಳ್ಳಲಾಗದು.

ಹೆಚ್ಚು ಬೆಳೆದು ಹೆಚ್ಚೆಚ್ಚು ಜನರಿಗೆ ಇದರ ಹುಚ್ಚು ಹಿಡಿಸಬಹುದು. ಬೆಳೆದ ಹಣ್ಣು ಇನ್ನೂ ಉಳಿದರೆ ನಮ್ಮ ಶಹರಗಳ ರಸ್ತೆ ಬದಿಗಳಲ್ಲಿ, ಹೋಟೆಲುಗಳಲ್ಲಿ, ಹಾಸ್ಟೆಲುಗಳಲ್ಲಿ…… ಎಲ್ಲೆಂದರಲ್ಲಿ ಮಂದರಸ ಮಾಡಿ ಮಾರಿಬಿಡಬಹುದು. ಬೆಳೆದ ಉತ್ಪನ್ನದ ಪ್ರಮಾಣ ಇನ್ನೂ ಹೆಚ್ಚಾದಲ್ಲಿ ಜಾಮು, ಸ್ಕ್ವಾಷು, ಸಾಬೂನು……ಇನ್ನೂ ಏನೇನನ್ನೋ ಮಾಡಲು ಅವಕಾಶ ಇದ್ದೇ ಇದೆ. ಇದರ ಕೃಷಿ ಹಾಗೂ ಬಳಕೆಯ ಬಗೆಗೆ ತಿಳುವಳಿಕೆ ಇರುವವರು ಹುಡುಕಿದರೆ ಖಂಡಿತ ನಮ್ಮಲ್ಲೇ ಸಿಗುವರು. ಅವರ ಜ್ಞಾನದ ದಾಖಲೆ ಮತ್ತು ಅದರ ಬಳಕೆ ಮಾಡುವ ಜಾಣ್ಮೆ ನಮ್ಮದಾಗಬೇಕಷ್ಟೆ. ಬೆಳೆಯುವುದರಲ್ಲಿ ಮುಂದಿರುವ ನಾವು ಮಾರುವುದರಲ್ಲಿ ಮುಂದಾಗಬೇಕಾದ ಅನಿವಾರ್ಯತೆಯಿದೆ. ಆಗಷ್ಟೇ ಇಬ್ಬಡ್ಲದ ಕೃಷಿಯಿಂದ ಹೆಚ್ಚಿನ ಲಾಭವಾದೀತು.

ಸದ್ಯಕ್ಕೆ ಬಹುತೇಕ ಬೆಳೆಯುವವರೆ ಮುಂದಿನ ಬೆಳೆಗೆ ಇದರ ಬೀಜ ಉಳಿಸಿಕೊಳ್ಳುತ್ತಿರುವುದು ವಾಡಿಕೆ. ಹೆಚ್ಚು ಜನ ಬೆಳೆಯಲು ಪ್ರಾರಂಭಿಸಿದರೆ ಉತ್ತಮ ಗುಣಮಟ್ಟದ ಬೀಜಕ್ಕೂ ಬೇಡಿಕೆ ಬಂದೀತು. ಆಗಲೇ ಬೆಳೆದ ಅನುಭವ ಉಳ್ಳವರು ಬೀಜೋತ್ಪಾದನೆಯನ್ನೇ ಮಾಡಲು ಅವಕಾಶವಿದೆ; ಜೊತೆಗೆ ಹೆಚ್ಚಿನ ಲಾಭವನ್ನೂ ಕೂಡ.

ನಮ್ಮ ವಿವಿಗಳು ಅದೇಕೋ ಇದರ ಬಗೆಗಿನ ಸಂಶೋಧನೆ ಮತ್ತು ವಿಸ್ತರಣೆಯಲ್ಲಿ ಹಿಂದೆ ಬಿದ್ದುಬಿಟ್ಟಿವೆ. ಇನ್ನಾದರೂ ಎಚ್ಚೆತ್ತುಕೊಂಡು ಇದರ ಹಿಂದೆ ಅವು ಬೀಳಲಿ ಎಂಬುದು ನಮ್ಮ ಕೃಷಿಕರ ಆಶಯ.

ಸ್ಥಳೀಯ ಬೇಡಿಕೆ, ರುಚಿ ತೋರಿಸಿದರೆ ನಗರಿಗರಿಗೂ ಇಷ್ಟವಾಗುವ ಇಬ್ಬಡ್ಲ, ಕೆಕ್ಕರಿಕೆ, ಬನಸ್ಪತ್ರೆಯ ತಾಜಾ ಹಣ್ಣು ಹಾಗೂ ಸಂಸ್ಕರಿಸಿದ ಉತ್ಪನ್ನಗಳು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲೂ ರಾರಾಜಿಸಬಹುದು. ಏನಂತೀರಿ? ಮಾರುಕಟ್ಟೆಯಲ್ಲಿ ಸಿಕ್ಕರೆ ಮರೆಯದೆ ರುಚಿ ನೋಡಿ. ಇವುಗಳ ಕೃಷಿ ಮಾಡುವ ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಲೇಖಕರನ್ನು 0821 2970411 /9480557634 ನಂಬರಿನಲ್ಲಿ ಸಂಪರ್ಕಿಸಬಹುದಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸ್ವಾತಂತ್ರ್ಯವನ್ನು ಗೌರವಿಸಿ, ಭವಿಷ್ಯವನ್ನು ಪ್ರೇರೇಪಿಸೋಣ: ವಿವಿಐಎಸ್‌ನಲ್ಲಿ ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ

Published

on

ಸುದ್ದಿದಿನ,ಬೆಂಗಳೂರು: ವಿಶ್ವ ವೆಂಕಟೇಶ್ವರ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನಲ್ಲಿ “ಸ್ವಾತಂತ್ರ್ಯವನ್ನು ಗೌರವಿಸಿ, ಭವಿಷ್ಯವನ್ನು ಪ್ರೇರೇಪಿಸೋಣ” ಎಂಬ ಆಶಯದೊಂದಿಗೆ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕಟ್ಟಾ ಬಾಲಾಜಿ ಬಾಬು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ತಮ್ಮ ಪ್ರೇರಣಾದಾಯಕ ಭಾಷಣದಲ್ಲಿ ಅವರು, ದೇಶಭಕ್ತಿ ಕೇವಲ ಘೋಷಣೆಗಳಿಗೆ ಸೀಮಿತವಾಗದೆ, ಪ್ರತಿಯೊಬ್ಬರೂ ತಮ್ಮ ಮೂಲಭೂತ ಕರ್ತವ್ಯಗಳನ್ನು ಅರಿತು, ತಮ್ಮ ಸಾಮರ್ಥ್ಯ, ಆಸಕ್ತಿ ಹಾಗೂ ಅಭಿರುಚಿಗೆ ತಕ್ಕಂತೆ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುವುದರಲ್ಲಿ ಅಡಗಿದೆ ಎಂದು ಕರೆ ನೀಡಿದರು. ಪ್ರಾಮಾಣಿಕ ಪರಿಶ್ರಮ ಮತ್ತು ಜವಾಬ್ದಾರಿಯುತ ನಾಗರಿಕತ್ವವೇ ಬಲಿಷ್ಠ ಭಾರತದ ನಿರ್ಮಾಣಕ್ಕೆ ಅಡಿಪಾಯ ಎಂದರು.

ವಿದ್ಯಾರ್ಥಿಗಳ ಮನೋಜ್ಞ ಸಾಂಸ್ಕೃತಿಕ ಕಾರ್ಯಕ್ರಮಗಳು, ದೇಶಭಕ್ತಿ ಪ್ರದರ್ಶನಗಳು ಹಾಗೂ ಶಿಸ್ತುಬದ್ಧ ಮೆರವಣಿಗೆಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದವು. ಕೊಡಿಪಾಳ್ಯ ಮತ್ತು ಕೆಂಗೇರಿಯಲ್ಲಿ 445 ಮೀಟರ್ ಇರುವ ವಿಶೇಷ ಧ್ವಜದೊಂದಿಗೆ ವಿದ್ಯಾರ್ಥಿಗಳ ಮೆರವಣಿಗೆ ಗಮನ ಸೆಳೆಯಿತು. ಶತಪ್ರತಿಶತ ಫಲಿತಾಂಶ ಸಾಧಿಸಿದ ಬೋಧಕ ಸಿಬ್ಬಂದಿಯನ್ನು ಮತ್ತು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ನೇರ ಪ್ರಸಾರವೂ ನಡೆಯಿತು. 2,500 ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ವಿಶೇಷ ಮಧ್ಯಾಹ್ನದ ಊಟ ಮತ್ತು ಸಿಹಿತಿಂಡಿ ವ್ಯವಸ್ಥೆ ಮಾಡಲಾಗಿದ್ದು, ಒಗ್ಗಟ್ಟು ಮತ್ತು ದೇಶಪ್ರೇಮದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.

ಈ ಸಂದರ್ಭದಲ್ಲಿ ವಿವಿಐಎಸ್ ನ ಅಕಾಡೆಮಿಕ್ ಅಡ್ವೈಸರ್ ಡಾ. ರಾಜೇಶ್ವರಿ ದತ್ತಾತ್ರಿ, ವಿವಿ ವಿದ್ಯಾಸಂಸ್ಥೆಯ ಡೀನ್ ಶ್ರೀ ಕಿಶೋರ್ ಕಟ್ಟ, ಪ್ರಾಂಶುಪಾಲೆ ಶ್ರೀಮತಿ ಲಕ್ಷ್ಮಿ ಟಿ.ಎನ್, ಕೆಪಿಸಿ ಪಿಯು ಕಾಲೇಜು ಪ್ರಾಂಶುಪಾಲರಾದ ಡಾ. ಐ. ಚೆನ್ನಾರೆಡ್ಡಿ, ಸಿಬಿಎಸ್‌ಇ ಪ್ರಾಂಶುಪಾಲರಾದ ಪ್ರೊ. ಪ್ರಹ್ಲಾದ, ಉಪಪ್ರಾಂಶುಪಾಲರಾದ ಶ್ರೀ ಮದನ್ ರಾಜ್, ಪ್ರಾಂಶುಪಾಲರಾದ ಡಾ. ಸುರೇಶ್ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸ್ವಾತಂತ್ರ್ಯವೆಂದರೆ ಬರಿ ಹಕ್ಕಲ್ಲ ದೇಶದ ಬಗ್ಗೆ ಜವಾಬ್ದಾರಿ ಹೊಂದುವುದೂ ಕೂಡ : ಯೋಗೀಶ್ ಸಹ್ಯಾದ್ರಿ

Published

on

ಸುದ್ದಿದಿನ,ಚಿತ್ರದುರ್ಗ : ಸ್ವಾತಂತ್ರ್ಯವೆಂದರೆ ಕೇವಲ ಹಕ್ಕುಗಳ ಅನುಭವವಲ್ಲ, ದೇಶದ ಬಗ್ಗೆ ಜವಾಬ್ದಾರಿ ಹೊಂದುವುದೂ ಸಹ ಹೌದು. ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳನ್ನು ಸದಾ ಸ್ಮರಿಸಬೇಕು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು, ಶಿಸ್ತು, ಪ್ರಾಮಾಣಿಕತೆ ಮತ್ತು ದೇಶಪ್ರೇಮವನ್ನು ಬೆಳೆಸಿಕೊಂಡು ರಾಷ್ಟ್ರದ ಭವಿಷ್ಯದ ಉತ್ತಮ ನಾಗರಿಕರಾಗಬೇಕು ರೋಟರಿ ಕ್ಲಬ್ ಆಫ್ ಚಿತ್ರದುರ್ಗ ಅಧ್ಯಕ್ಷರಾದ ರೊ. ಯೋಗೀಶ್ ಸಹ್ಯಾದ್ರಿ ತಿಳಿಸಿದರು.

ನಗರದ ರೋಟರಿ ವಿದ್ಯಾಲಯದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮ, ಸಡಗರ ಹಾಗೂ ದೇಶಭಕ್ತಿಯ ವಾತಾವರಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಬಳಿಕ ಮಾತನಾಡಿದ ಅವರು ಮಾತನಾಡಿದರು.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತಿರುವುದು ಅನೇಕ ಮಹನೀಯರ ತ್ಯಾಗದ ಫಲ. ಮಹಾತ್ಮ ಗಾಂಧೀಜಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಅಸಂಖ್ಯಾತ ಹೋರಾಟಗಾರರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನು ಅರ್ಪಿಸಿದ್ದಾರೆ. ಅವರ ತ್ಯಾಗವನ್ನು ಸ್ಮರಿಸುವುದರ ಜೊತೆಗೆ, ಅವರು ಕಂಡ ಕನಸಿನ ಭಾರತವನ್ನು ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸದಾ ಸ್ಮರಿಸಿ, ಏಕತೆ, ಶಿಸ್ತು, ಶಿಕ್ಷಣ ಮತ್ತು ಸೇವೆಯ ಮೂಲಕ ಶ್ರೇಷ್ಠ ಭಾರತವನ್ನು ನಿರ್ಮಿಸುವ ಸಂಕಲ್ಪವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ಅವರು ಕರೆ ನೀಡಿದರು. ಎಲ್ಲಾ ವಿದ್ಯಾರ್ಥಿಗಳು ದೇಶದ ಹೆಮ್ಮೆ ಮತ್ತು ಭವಿಷ್ಯದ ಆಶಾಕಿರಣಗಳಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೊ. PHF. PDG. ಮಧುಪ್ರಸಾದ್ ಕೆ. ಅವರು ವಹಿಸಿದ್ದರು. ಅವರು ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ಉತ್ತಮ ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳುವುದು ಇಂದಿನ ಯುವಜನತೆಯ ಕರ್ತವ್ಯವಾಗಿದೆ. ಸ್ವಾತಂತ್ರ್ಯ ನಮಗೆ ಹಕ್ಕುಗಳನ್ನು ನೀಡಿದಂತೆ ಕರ್ತವ್ಯಗಳನ್ನೂ ನೀಡಿದೆ. ಸಂವಿಧಾನವನ್ನು ಗೌರವಿಸುವುದು, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು, ಪರಿಸರವನ್ನು ಸಂರಕ್ಷಿಸುವುದು, ಸಾರ್ವಜನಿಕ ಆಸ್ತಿಯನ್ನು ಕಾಪಾಡುವುದು ಹಾಗೂ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯನ್ನು ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ರೋಟರಿ ಟ್ರಸ್ಟ್ ನ ಖಜಾಂಚಿ ರೊ. ಸತ್ಯನಾರಾಯಣಾಚಾರ್,
ರೊ. ಜಿ.ಎ. ವಿಶ್ವನಾಥ್ ಬಾಬು, ರೋಟರಿ ಕ್ಲಬ್ ಆಫ್ ಚಿತ್ರದುರ್ಗದ ಸದಸ್ಯರು, ಹಾಗೂ ರೊ. ಶಂಕರಪ್ಪ, ಆಡಳಿತಾಧಿಕಾರಿ, ರೋಟರಿ ವಿದ್ಯಾಲಯ, ಉಪಸ್ಥಿತರಿದ್ದು , ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿ, ದೇಶದ ಪ್ರಗತಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ತಮ್ಮದೇ ಆದ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕುರಿತು ಭಾಷಣ ಮಾಡಲು ಅವಕಾಶ ನೀಡಲಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ದೇಶಭಕ್ತಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಹಾಗೂ ರಾಷ್ಟ್ರದ ಅಭಿವೃದ್ಧಿಯ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳ ಭಾಷಣಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.

ವಿದ್ಯಾರ್ಥಿಗಳ ಪೋಷಕರು ಕೂಡ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಉಮಾದೇವಿ ಹೆಚ್.ಎಂ. ಅವರು ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಶಿಕ್ಷಕಿ ಜ್ಯೋತಿ ಆರ್. ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಹಿರಿಯ ಶಿಕ್ಷಕಿ ಗೌರಮ್ಮ ಅವರು ವಂದನಾರ್ಪಣೆ ಸಲ್ಲಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ರೋಟರಿ ಪದಾಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಕೃತಜ್ಞತೆ ಸಲ್ಲಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನವಿಲೇಹಾಳು | 80ನೇ ಸ್ವಾತಂತ್ರ್ಯ ದಿನಾಚರಣೆ ; ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸಿಹಿ ಹಂಚಿ ಸಂಭ್ರಮ

Published

on

ಸುದ್ದಿದಿನ,ದಾವಣಗೆರೆ: ಜಿಲ್ಲೆಯ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ, ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನವಿಲೇಹಾಳು ಗ್ರಾಮದಲ್ಲಿ ಸಿಹಿ ಹಂಚುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಸಾರ್ವಜನಿಕರಿಗೆ ಸಿಹಿ ವಿತರಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯ ಮಹತ್ವ, ದೇಶದ ಏಕತೆ, ಸಾಮರಸ್ಯ ಹಾಗೂ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ಕುರಿತು ಸಂದೇಶ ನೀಡಲಾಯಿತು.

ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷರಾದ ಜಾಫರ್ ಅವರು ಮಾತನಾಡಿ, ಸ್ವಾತಂತ್ರ್ಯವೆಂಬುದು ಕೇವಲ ಆಚರಣೆಗೆ ಸೀಮಿತವಾಗದೆ, ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು, ನ್ಯಾಯ ಹಾಗೂ ಅಭಿವೃದ್ಧಿಯ ಅವಕಾಶ ದೊರೆಯುವಂತಾಗಬೇಕು. ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯಗಳನ್ನು ಕೋರಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending