ಭಾವ ಭೈರಾಗಿ
ಮನುಷ್ಯ ಏಕಾಂಗಿಯಾಗುತ್ತಿದ್ದಾನೆಯೇ?

ಮನುಷ್ಯನು ಸಹ ಜೀವಿ ಹಾಗೂ ಸಂಘ ಜೀವಿಯೂ ಎಂದು, ಮೊದಲಿನಿಂದಲೂ ಸಹ ಜೀವನ ನಡೆಸಲು ಇಷ್ಟಪಡುತ್ತಾನೆ ಒಬ್ಬಂಟಿಯಾಗಿರಲು ಅವನ ಮನಸ್ಸು ಒಪ್ಪುವುದಿಲ್ಲ. ಎಂದು ಹಿಂದಿನ ಕಾಲದಲ್ಲಿ ಹೇಳಬಹುದಿತ್ತು. ಆದರೆ ಇಂದಿನ ದಿನಗಳಲ್ಲಿ ಎಲ್ಲವೂ ತಲೆಕೆಳಗಾಗಿ ಸಂಘಜೀವಿಯಾದ ಮನುಷ್ಯನು ಏಕಾಂಗಿಯಾಗಿ ತನ್ನ ಪಾಡಿಗೆ ತಾನು ಜೀವನ ನಡೆಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ. ತನ್ನ ಕೆಲಸಗಳಿಗೆ ಅಥವಾ ಅನಿವಾರ್ಯ ಸನ್ನಿವೇಶ ಬಂದೊದಗಿದ್ದಲ್ಲಿ ಮಾತ್ರ ಎಲ್ಲರನ್ನು ಆಮಂತ್ರಿಸಿ, ಬೆರೆತು ನಂತರ ಮರೆತು ಪುನಃ ಏಕಾಂಗಿಯಾಗಿ ಜೀವಿಸುತ್ತಿರುವುದು ಸಾಮಾನ್ಯವಾಗಿದೆ.
ಹಿಂದಿನ ಕಾಲದಲ್ಲಿ ಎಳೆಯರಾಗಿದ್ದಾಗ ಮಕ್ಕಳು ತಮ್ಮ ಅಕ್ಕಪಕ್ಕದ ಮನೆಯಲ್ಲಿರುವ ಮಕ್ಕಳನ್ನು ಸ್ನೇಹ ಮಾಡಿಕೊಂಡು ಗೋಲಿ, ಲಗೋರಿ, ಚಿನ್ನಿ ದಾಂಡ್ಲು, ಕಬ್ಬಡಿ, ಹೀಗೆ ನಾನಾ ತರಹದ ಆಟವನ್ನು ಆಡುತ್ತಾ ಗೆಳೆಯರೊಂದಿಗೆ ಕಾಲ ಕಳೆದು ಅಕಸ್ಮಾತ್ ಯಾರೂ ಇಲ್ಲದಿದ್ದ ಪಕ್ಷದಲ್ಲಿ ಅಪ್ಪ ಅಮ್ಮನ ಜೊತೆಯಲ್ಲಿ, ಅಣ್ಣ, ತಮ್ಮ ಮತ್ತು ತಂಗಿ, ಇವರೊಂದಿಗೆ ಆಟವಾಡಿ ನಲಿಯುತ್ತಾ ಆಟದ ಜೊತೆಗೆ ಪಾಠವನ್ನು ಕಲಿಯುತ್ತಾ ತನ್ನ ಬಾಲ್ಯದ ದಿನಗಳನ್ನು ಕಳೆಯುತ್ತಿದ್ದುದ್ದನ್ನು ನೋಡಿದ್ದೇವೆ. ದೊಡ್ಡವರಾದಂತೆ ಶಾಲೆ ಕಾಲೇಜಿಗೆ ಸೇರಿ ಅಲ್ಲಿಯ ಸಹಪಾಠಿಗಳ ಜೊತೆಗೆ ಆಟವಾಡಿ ಸಿನಿಮಾ ನಾಟಕದಂತಹ ಮನೋರಂಜನೆ ಪಡೆದು, ಓದು ಮುಗಿದ ನಂತರ ಕಾಲೇಜಿನ ಸಹಪಾಠಿಗಳು ಬೇರೆ ಬೇರೆ ಕೆಲಸಕ್ಕೆ ಸೇರಿದಾಗ ಯಾವ ಸ್ನೇಹಿತರೂ ಇಲ್ಲದೆ ಸ್ವಲ್ಪ ಸಮಯ ಬೇಸರವಾಗುವುದೆಂದು, ಹಳೆಯ ಸಹಪಾಠಿಗಳ ಒಡನಾಟವನ್ನು ಮರೆಯಲಾಗದೆ ತನ್ನ ಹಳೆಯ ಸ್ನೇಹಿತರಿಗೆ ದೂರವಾಣಿ ಮೂಲಕ ಸಂಪರ್ಕವನ್ನು ಇಟ್ಟುಕೊಳ್ಳಬಯಸುವವರು ಇರುವುದರಿಂದ ಕಾಲೇಜಿನ ಶಿಕ್ಷಣ ಮುಗಿಯುವವರೆಗೂ ಏಕಾಂಗಿಯಾಗಿರುವ ಅನುಭವವೇ ಇಲ್ಲದಂತೆ ಆಗಿರುತ್ತದೆ. ಆದರೆ ಈಗ ಕಾಲವು ಸಂಪೂರ್ಣ ಬದಲಾಗಿದೆ. ಶಾಲೆಯಲ್ಲಿರುವ ತನಕ ಆಟ ಪಾಠಗಳು, ಮನೆಗೆ ಬಂದ ತಕ್ಷಣ ಇದೆಲ್ಲವೂ ಮಾಯವಾಗುತ್ತದೆ. ತಂದೆ ತಾಯಿ ಕೆಲಸಕ್ಕೆ ಹೋದಲ್ಲಿ ಮಕ್ಕಳು ಪಕ್ಕದ ಮನೆಯಲ್ಲಿ ಇರುವ ಸನ್ನಿವೇಶ ಸೃಷ್ಠಿಯಾಗಿದೆ. ಆದರೆ ಇತ್ತೀಚೆಗೆ ಎಲ್ಲವೂ ತಲೆಕೆಳಗಾಗಿ, ಅನೇಕ ಕಡೆ ಕೆಲವು ಹುಡುಗರು ಮೂರು ಕಡ್ಡಿಗಳನ್ನು ಅಥವಾ ಕಲ್ಲುಗಳನ್ನು ತಮ್ಮ ಮನೆಯ ಮುಂದೆ ಇಟ್ಟುಕೊಂಡು ಕ್ರಿಕೆಟ್ ಆಟವನ್ನು ಮಾತ್ರ ಆಡುತ್ತಿದ್ದು, ಬೇಸರವಾದರೆ ಅದನ್ನು ಬಿಟ್ಟು ಮೊಬೈಲ್ಗಳಲ್ಲಿ ಆಟವಾಡುವುದು ಇತ್ತೀಚಿನ ಹವ್ಯಾಸವಾಗಿದೆ.
ಬೆಂಗಳೂರು ಮತ್ತು ಇತರೆ ನಗರಗಳಲ್ಲಿ ಅನೇಕ ಬಡಾವಣೆಗಳು ತಲೆ ಎತ್ತಿದ್ದು, ಎಲ್ಲಿಂದಲೋ ಜನಗಳು ಬಂದು ವಾಸಮಾಡುತ್ತಿರುವುದರಿಂದ ಇವರಿಗೆ ಪಕ್ಕದ ಮನೆಯ ಸಂಪರ್ಕ ಕೂಡ ಇರುವುದಿಲ್ಲ. ಹೊಸ ಜನಗಳು ಹೊಸ ಪ್ರದೇಶ ಯಾರು? ಹೇಗೋ? ಎಂಬ ಆತಂಕವು ಮನೆ ಮಾಡಿ ಯಾರ ಸಂಪರ್ಕವನ್ನು ಬೆಳೆಸಿಕೊಳ್ಳಲು ಹೋಗುವುದಿಲ್ಲ. ತಾವಾಯಿತು ತಮ್ಮ ಉದ್ಯೋಗವಾಯಿತು ಎಂಬಂತೆ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಒಬ್ಬರ ಸಂಪರ್ಕ ಇನ್ನೊಬ್ಬರಿಗೆ ಇಲ್ಲದಂತಾಗಿ ಎಲ್ಲರೂ ಏಕಾಂಗಿ ಬದುಕನ್ನು ಸಾಗಿಸುವಂತಹ ಸನ್ನಿವೇಶ ಬಲವಂತವಾಗಿ ಮನುಷ್ಯನ ಮೇಲೆ ಹೇರಿದಂತಾಗಿರುವುದು ಕಟು ಸತ್ಯ. ಹೊಸ ಬಡಾವಣೆಗಳಲ್ಲಿ ಪಕ್ಕದ ಮನೆಗಳಲ್ಲಿ ಏನಾದರೂ ಸಾವು ಸಂಭವಿಸಿದರೂ ಹೋಗಿ ನೋಡವುದೇ ಇಲ್ಲದಂತಾಗಿದ್ದು, ತಮ್ಮ ಮನೆಯ ಮಹಡಿ ಮೇಲೆ ನಿಂತು ಕಾರ್ಯಗಳನ್ನು ನೋಡುತ್ತಿರುವುದು ಕಂಡು ಬಂದಿರುವ ದೃಶ್ಯಗಳು. ದೂರದ ಊರಿನಿಂದ ಬಂದಿರುವ ನೆಂಟರು ಅಥವಾ ಸ್ನೇಹಿತರು ಬಂದು ಎಲ್ಲಾ ಕಾರ್ಯಕ್ರಮಗಳನ್ನು ಮುಗಿಸುವಂತ ಪರಿಸ್ಥಿತಿ ಬಂದೊದಗಿರುವುದು ಮನುಷ್ಯನು ಏಕಾಂಗಿಯಾಗುತ್ತಿರುವುದಕ್ಕೆ ನಿದರ್ಶನವಾಗಿದೆ.
ಹಳೆಯ ಪಟ್ಟಣ ಹಳ್ಳಿಗಳಲ್ಲಿ ವಾಸಿಸುವವರು ಮಾತ್ರ ಇನ್ನೂ ಸ್ವಲ್ಪ ಭಿನ್ನವಾದ ರೀತಿಯ ಜೀವನ ಸಾಗಿಸುತ್ತಿರುವುದು ಕಂಡು ಬಂದಿದ್ದು, ಆದರೂ ಹಳ್ಳಿ ಹಾಗೂ ಸಣ್ಣ ಸಣ್ಣ ಪಟ್ಟಣದಲ್ಲಿರುವ ಯುವಕರು ಯುವತಿಯರು ಜೀವನೋಪಾಯಕ್ಕೆ ದೊಡ್ಡ ನಗರಗಳಲ್ಲಿ ಕೆಲಸಕ್ಕೆ ಸೇರಿಕೊಂಡು ಬೆಳಿಗ್ಗೆ ಪಟ್ಟಣಕ್ಕೆ ಬಂದರೆ ಮನೆಗೆ ವಾಪಸಾಗುವುದು ಸೂರ್ಯ ಮುಳುಗಿ ದೀಪ ಬೆಳಗಿದ ನಂತರವಷ್ಟೇ. ಹೀಗಿದ್ದಾಗ ಯಾರನ್ನೂ ಮಾತನಾಡಿಸದ ಸನ್ನಿವೇಶ ಬಂದಿದೆ. ಹಾಗಾಗಿ ಪರಿಚಯವಿದ್ದರೂ ಕೆಲಸದ ಒತ್ತಡದಿಂದ ಹೆಚ್ಚಿಗೆ ಒಟ್ಟಾಗಿ ಕಾಲ ಕಳೆಯಲು ಆಗುವುದಿಲ್ಲ. ಎಲ್ಲರಿಗೂ ಅವರದೇ ಆದ ಸಂಸಾರ ತಾಪತ್ರಯ, ವೈಯುಕ್ತಿಕ ದ್ವೇಷ ಹೀಗೆ ಹಲವಾರು ಕಾರಣಗಳಿಂದ ಒಬ್ಬರೊನ್ನೊಬ್ಬರು ಬೆರೆತು ಮಾತಾಡಿ ಕಾಲ ಕಳೆಯುವಂತಹ ದಿನಗಳು ನೋಡಲು ಎಲ್ಲೂ ಕಾಣ ಸಿಗುವುದಿಲ್ಲ. ಹಳ್ಳಿಗಳಲ್ಲಿ ಬೇಸಾಯದ ಕೆಲಸ ಮುಗಿದಿದ್ದರೆ ಬಿಡುವಿನ ವೇಳೆಯಲ್ಲಿ ಕೆಲವು ಸ್ನೇಹಿತರುಗಳು ಒಂದುಗೂಡಿ ಮಾತಾಡುತ್ತಾ ಕಾಲ ಕಳೆಯಬಹುದು.
ಕಾಲೇಜು ಓದು ಮುಗಿಸಿ ಕೆಲಸಕ್ಕೆ ಸೇರಿದ ನಂತರ ವಾತಾವರಣವೇ ಸಂಪೂರ್ಣ ಬದಲಾವಣೆಯಾಗಿದ್ದು, ಕೆಲಸ ಮಾಡುವ ಸ್ಥಳಗಳಲ್ಲಿ ದೊರೆಯುವ ಸ್ನೇಹಿತರ ಮನೋಭಾವವೇ ಬೇರೆ ರೀತಿಯದ್ದಾಗಿರುತ್ತದೆ. ಕಾಲೇಜಿನಲ್ಲಿ ಸ್ನೇಹಿತರೊಡನೆ ಆಟವಾಡಿದ್ದಂತೆ ಕೆಲಸದ ಜೊತೆಗಾರರೊಡನೆ ಆಟ ಆಡುವುದಕ್ಕೆ ಆಗುವುದಿಲ್ಲ. ಕಾಲೇಜಿನ ದಿನಗಳಲ್ಲಿ ಯಾವ ರೀತಿಯ ಯೋಚನೆ ಇಲ್ಲದೆ ಬಹಳ ಖುಷಿಯಿಂದ “ವಿದ್ಯಾರ್ಥಿ ಜೀವನವೇ ಚಿನ್ನದ ಜೀವನ ಇದ್ದಂತೆ” ಎಂದು ಎಲ್ಲರೊಡನೆ ಬೆರೆತು ಹಾಡಿ ಕುಣಿದು ಕುಪ್ಪಳಿಸಿ ಆಟವಾಡುವಂತಹ ಸನ್ನಿವೇಶ ಇಲ್ಲಿ ಬರುವುದೇ ಇಲ್ಲ. ಎಲ್ಲರಿಗೂ ಅವರದ್ದೇ ಆದ ಸಂಸಾರದ ಜವಾಬ್ದಾರಿಯು ಹೆಗಲೇರಿರುತ್ತದೆ. ಇದರ ಜೊತೆಗೆ ಕೆಲಸದ ಒತ್ತಡ, ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗುವ ತವಕ, ವಾಹನದ ದಟ್ಟಣೆ ಪ್ರದೇಶಗಳಲ್ಲಿ ಸರಿಯಾದ ಸಮಯಕ್ಕೆ ಕೆಲಸಕ್ಕೆ ಹೋಗುವುದೇ ಒಂದು ದೊಡ್ಡ ಸಾಧನೆಯಾಗಿರುತ್ತದೆ. ಕೆಲಸದ ಸಮಯದಲ್ಲಿ ಸಿಗುವ ಬಿಡುವಿನ ವೇಳೆ ಎಂದರೆ ಊಟದ ಸಮಯ ಕೇವಲ 30 ರಿಂದ 45 ನಿಮಿಷಗಳು ಇರಬಹುದು. ಆದರೆ ಇಷ್ಟು ಕ್ಲುಪ್ತ ಸಮಯದಲ್ಲಿ ಊಟ ಮಾಡಿ ಹೋಗುವುದಕ್ಕೆ ಸಾಲುವುದಿಲ್ಲ. ಮನೆಯಿಂದ ಊಟದ ಡಬ್ಬಿ ತೆಗೆದುಕೊಂಡು ಹೋಗಿದ್ದರೆ ಮಾತ್ರ ಎಲ್ಲರ ಜೊತೆ ಬೆರೆತು ಮಾತಾಡುತ್ತಾ ಊಟ ಮಾಡಿ ಇರುವ ಸ್ವಲ್ಪ ಸಮಯದಲ್ಲಿ ವಿರಮಿಸಬಹುದು. ಊಟ ಮಾಡಲು ಹೋಟೆಲನ್ನು ಅವಲಂಬಿಸಿದ್ದರೆ ಸ್ವಲ್ಪ ವಿರಾಮವೂ ಸಿಗುವುದಿಲ್ಲ. ಬೆಳಿಗ್ಗೆ ಹೋದರೆ ವಾಪಸ್ ಬರುವುದೇ ರಾತ್ರಿಯಾಗಿರುತ್ತದೆ. ಇಂತಹ ಸನ್ನಿವೇಶಗಳಲ್ಲಿ ಆಟ ಹಾಡು ಎಲ್ಲವೂ ಮರೆತಂತೆ ಆಗಿರುತ್ತದೆ. ವಾರಕ್ಕೊಂದು ರಜೆ ಸಿಕ್ಕಿದರೆ ಅದನ್ನು ಮನೆಯಲ್ಲಿರುವ ಬೇರೆ ಕೆಲಸ ನಿರ್ವಹಿಸುವುದಕ್ಕೆ ಸಾಲುವುದಿಲ್ಲ.
ವಿವಾಹವಾಗಿದ್ದರೆ ಮಾತ್ರ ತನ್ನ ಪತ್ನಿಯೇ ಸ್ನೇಹಿತೆ ಅಥವಾ ಸಂಗಾತಿ ಎಂಬುದಾಗಿ ಜೊತೆಯಲ್ಲಿ ಕಾಲ ಕಳೆಯಬಹುದು. ಒಳ್ಳೆಯ ಮಡದಿ ದೊರೆತು ಎಲ್ಲರಲ್ಲೂ ಹೊಂದಿಕೊಂಡು ಹೋಗುವಂತಹ ಮನಸ್ಸುಳ್ಳವಳಾದರೆ ಮಾತ್ರ ತಾನು ಏಕಾಂಗಿ ಎಂಬುದನ್ನು ಮರೆತು ಸಂತೋಷದಿಂದ ಕಾಲ ಕಳೆಯಬಹುದು. ಇಲ್ಲದಿದ್ದರೆ ಮದುವೆಯಾದರೂ ಏಕಾಂಗಿಯಂತೆ ಬದುಕನ್ನು ಸಾಗಿಸಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಕಛೇರಿಯಲ್ಲಿ ಒಂದು ರೀತಿಯ ಕೆಲಸದ ಕಿರಿ ಕಿರಿಯಾಗಿ, ಮನೆಯಲ್ಲಿ ಮಡದಿಯ ಕಿರಿಕಿರಿ ಉಂಟಾದರೆ ಎಲ್ಲಿ ಹೋಗಿ ಬದುಕುವುದು ಎಂಬ ಆಲೋಚನೆ ಹಾಗೂ ಜೀವನದಲ್ಲಿಯೇ ಜಿಗುಪ್ಸೆ ಉಂಟಾಗುತ್ತದೆ. ಮಕ್ಕಳಿಗಾಗಿ ಎಲ್ಲವನ್ನೂ ಸಹಿಸಿಕೊಂಡು ಜೀವನವನ್ನು ದೂಡುವಂತ ಸನ್ನಿವೇಶ ನಿರ್ಮಾಣವಾದರೂ ಆಶ್ಚರ್ಯವಿಲ್ಲ. ಇದರ ಜೊತೆಗೆ ಹೆತ್ತವರ ಯೋಗಕ್ಷೇಮ, ಮಡದಿ ಮಕ್ಕಳ ಯೋಗಕ್ಷೇಮ ಇವೆಲ್ಲವನ್ನೂ ನೋಡಿ ಕೊಳ್ಳುವುದೇ ಒಂದು ಸಾಹಸದಂತೆ ಆಗಿರುತ್ತದೆ. ಕಛೇರಿಯಿಂದ ಬಂದೊಡನೇ ಶಾಪಿಂಗ್ಗೆ ಮಕ್ಕಳಿಗೆ ಮೈಯಲ್ಲಿ ಹುಷಾರಿಲ್ಲದಿದ್ದರೆ ವೈದ್ಯರನ್ನು ನೋಡಲು ಹೋಗಬೇಕಾದ ಪ್ರಸಂಗ ಬರಬಹುದು. ಇವೆಲ್ಲ ಕಾರ್ಯಗಳು ಮುಗಿಯುವ ಹೊತ್ತಿಗೆ ಸುಸ್ತಾಗಿ ಹಾಸಿಗೆ ಕಂಡರೆ ಸಾಕು ಎಂಬಂತೆ ಆಗಿದ್ದರೆ ಏನೂ ಕೇಳದೆ ಸೇರಿದ್ದನ್ನು ತಿಂದು ಹೋಗಿ ಮಲಗಿಬಿಡಬಹುದು. ಏನೂ ಕೆಲಸವಿಲ್ಲದಿದ್ದರೆ ಮನೋರಂಜನೆಗಾಗಿ ದೂರದರ್ಶನವನ್ನು ವೀಕ್ಷಿಸುತ್ತಾ ಕಾಲ ಕಳೆಯಬಹುದು. ಹೀಗಾಗಿ ಯಾರೊಬ್ಬರ ಒಡನಾಟವೂ ಸಿಗುವುದಿಲ್ಲ. ಸಿಕ್ಕಿದರೂ ಅಪರೂಪವಾಗಿರುತ್ತದೆ. ಸಾಲು ಸಾಲು ರಜೆ ಸಿಕ್ಕಿದರೆ ತನ್ನ ಸಂಸಾರದವರೊಡನೆ ದೂರ ಪ್ರವಾಸ ಕೈಗೊಂಡು, ತನ್ನ ಸಂಸಾರದ ಸದಸ್ಯರ ಜೊತೆ ಮಾತ್ರ ಸುತ್ತಾಡಿ ಬರಬಹುದು. ಆರ್ಥಿಕವಾಗಿ ಸದೃಡನಾಗಿದ್ದರೆ ರಜಾ ದಿನಗಳಲ್ಲಿ ಪ್ರವಾಸ ಕೈಗೊಳ್ಳ ಬಹುದು. ಬರುವ ಸಂಬಳದಲ್ಲಿ ಸಂಸಾರ ನಿರ್ವಹಣೆ ಮಾಡಬೇಕು, ಇದರ ಜೊತೆಗೆ ಮಕ್ಕಳ ವಿದ್ಯಾಭ್ಯಾಸದ ಖರ್ಚು, ಹಬ್ಬಗಳಲ್ಲಿ ಮಕ್ಕಳಿಗೆ ಹೊಸ ಬಟ್ಟೆ ಖರೀದಿಸಲು ಆಗುವ ಖರ್ಚು, ಮನೆಯವರಿಗೆ ಆರೋಗ್ಯ ಎರುಪೇರಾದರೆ ವೈದ್ಯಕೀಯ ವೆಚ್ಚ ಇವೆಲ್ಲವನ್ನೂ ಸರಿದೂಗಿಸಬೇಕಾದ ಪ್ರಸಂಗ ಇರುತ್ತದೆ. ಇವೆಲ್ಲದರ ನಡುವೆ ಪ್ರವಾಸದ ಖರ್ಚುನ್ನು ಹೊಂದಿಸಲು ಬಹಳ ಕಷ್ಟವಾಗಿ ಮನೆಯ ಸಂಸಾರದ ಖರ್ಚು ಸರಿದೂಗಿದರೆ ಸಾಕು ಎಂದು ಯಾವ ಪ್ರವಾಸವೂ ಬೇಡ ಎಂದು ಕೈಚೆಲ್ಲಬಹುದು.
ಈಗಿನ ಕಾಲದಲ್ಲಿ ವಿಜ್ಞಾನ ಮುಂದುವರೆದು ಮನೆ ಮನೆಯಲ್ಲಿಯೂ ಟಿ.ವಿ. ನೂರಾರು ಚಾನಲ್ ಗಳು ವಿಧ ವಿಧವಾದ ಕಾರ್ಯಕ್ರಮಗಳು ಪ್ರಸಾರವಾಗುತ್ತಿರುವುದರಿಂದ ಎಲ್ಲರೂ ಟಿ.ವಿಗೆ ದಾಸರಾಗಿರುವ ಸನ್ನಿವೇಶ ಸೃಷ್ಠಿಯಾಗಿದೆ. ಒಳ್ಳೆಯ ಕಾರ್ಯಕ್ರಮ ಪ್ರಸಾರವಾಗುತ್ತಾ ಇರುವ ಸಮಯದಲ್ಲಿ ಅಪರೂಪಕ್ಕೆ ಯಾರಾದರೂ ಸ್ನೇಹಿತರು ಅಥವಾ ನೆಂಟರೋ ಬಂದರೆ ಈ ಕಡೆ ಕಾರ್ಯಕ್ರಮ ನೋಡಲು ಆಸೆ ಸ್ನೇಹಿತರನ್ನು ಮಾತಾಡಿಸಬೇಕಾಗಿರುವ ಅನಿವಾರ್ಯ ಸನ್ನಿವೇಶ ಬಂದು ಏಕಪ್ಪಾ ಇವರು ಈ ಹೊತ್ತಿನಲ್ಲಿ ಬಂದರೂ ಎಂದು ಪಶ್ಚಾತ್ತಾಪ ಪಟ್ಟರೂ ಆಶ್ಚರ್ಯವಿಲ್ಲ. ಟಿ.ವಿಯ ಮುಂದೆ ಕುಳಿತರೆ ಯಾರೂ ಬೇಡ ಎಂಬ ಮನೋಭಾವ ಬಂದು ಬಿಟ್ಟಿರುತ್ತದೆ. ಪ್ರಪಂಚದ ಆಗುಹೋಗುಗಳು ಜೊತೆಗೆ ಮನರಂಜನೆ ಕಾರ್ಯಕ್ರಮಗಳು ಒಂದೇ ಸಮನೆ ಬಿತ್ತರವಾಗುತ್ತಿರುವಾಗ ಬೇರೆ ಜನಗಳ ಒಡನಾಟವೇಕೆ ಎಂಬ ಮನೋಭಾವ ಬಂದಿದೆ. ಇದೂ ಸಾಲದೆಂಬಂತೆ ಪ್ರತಿಯೊಬ್ಬರ ಬಳಿಯಲ್ಲೂ ಮೊಬೈಲ್ ಬಂದಿರುವುದರಿಂದ ಎಲ್ಲರೂ ತಮ್ಮದೇ ಆದ ಲೋಕದಲ್ಲಿ ಮೈಮರೆತಿರುತ್ತಾರೆ. ಬೆಳಿಗಿನಿಂದ ದಿನಪೂರ್ತಿ ದೂರದರ್ಶನದ ಕಾರ್ಯಕ್ರಮಗಳು, ಫೇಸ್ ಬುಕ್, ವಾಟ್ಸಾಪ್ ಹಾಗೂ ಇನ್ನಿತರೆ ಸಂದೇಶ ರವಾನಿಸುವ ಮಾದ್ಯಮಗಳು ಹಾಡು, ನೃತ್ಯ ಸಿನಿಮಾ ಕ್ರೀಡೆ ಹೀಗೆ ಅನೇಕ ಮನರಂಜನೆ ಕೈಯಲ್ಲೇ ನೋಡಬೇಕಾದರೆ ಬೇರೆಯವರ ಸಹವಾಸ ನಮಗೇಕೆ ಬೇಕು ಎನ್ನುವ ಮನೋಭಾವನೆ ಮನೆ ಮಾಡಿರುತ್ತದೆ. ಏಕಾಂಗಿ ಯಾಗಿ ಕಾರ್ಯಕ್ರಮ ವೀಕ್ಷಿಸುತ್ತಾ ಕುಳಿತು ಹೊತ್ತಿಗೆ ಸರಿಯಾಗಿ ಊಟ ತಿಂಡಿ ಕುಳಿತಲ್ಲಿಗೆ ಬರುವುದರಿಂದ ಬೇರೆ ಯೋಚನೆಯನ್ನು ಕನಸು ಮನಸ್ಸಿನಲ್ಲಿಯೂ ಮಾಡದಂತ ಸನ್ನಿವೇಶ ಬಂದಿದ್ದು, ಮನುಷ್ಯನು ಏಕಾಂಗಿಯಾಗಿ ತನ್ನದೇ ಆದ ಲೋಕದಲ್ಲಿ ವಿಹರಿಸುವಂತೆ ಆಗಿದೆ. ವಿದ್ಯಾರ್ಥಿಯ ರಾದಿಯಾಗಿ ಎಲ್ಲರೂ ಇದಕ್ಕೆ ಮಾರುಹೋಗಿದ್ದು, ಬೇರೆಯವರೊಡನೆ ಕಲೆತು ಆಟ ಆಡುವುದು ಅಪರೂಪವಾಗಿದೆ. ಮೊಬೈಲ್ನಲ್ಲಿಯೇ ಅಥವಾ ಕಂಪ್ಯೂಟರ್ನಲ್ಲಿ ಯಾವುದಾದರೂ ಗೇಮನ್ನು ಆಡುತ್ತಾ ಕಾಲ ಕಳೆಯುವ ಅದೆಷ್ಟೋ ಮಂದಿಗೆ ಏಕಾಂಗಿ ಬದುಕೇ ಹಿತವಾಗಿರುವಂತೆ ಗೋಚರಿಸುತ್ತಿದೆ.
ಒಟ್ಟಿನಲ್ಲಿ ಹೇಳುವುದಾದರೆ ವಿಜ್ಞಾನದ ಅವಿಷ್ಕಾರದಿಂದ ಪ್ರಪಂಚದ ಆಗುಹೋಗುಗಳನ್ನು ಎಲ್ಲರೂ ತಮ್ಮ ತಮ್ಮ ಅಂಗೈಯಲ್ಲಿರುವ ಮೊಬೈಲ್ನಲ್ಲಿ ನೋಡುವಂತಹ ಅವಕಾಶ ಒದಗಿಬಂದಿರುವುದರಿಂದ ಪ್ರಪಂಚವೇ ಕಿರಿದಾಗುತ್ತಾ ಇದೆಯೇನೋ ಎಂಬಂತೆ ಭಾಸವಾಗಿದ್ದು, ಅದಕ್ಕೆ ತಕ್ಕಂತೆ ಸಂಘ ಜೀವಿಯಾಗಿದ್ದ ಮನುಷ್ಯನು ಇತ್ತೀಚಿನ ದಿನಗಳಲ್ಲಿ ಏಕಾಂಗಿಯಾಗುತ್ತಿರುವುದು ನಿಜಕ್ಕೂ ವಿಷಾದನೀಯ ವಾದ ಸಂಗತಿಯಾಗಿದೆ.
ಲೇಖಕರು: ಎನ್.ಮುರಳೀಧರ್
ಕಾವ್ಯನಾಮ: ಮುರಳಿಮಂಗಲಧರೆ
ವಕೀಲರು
ನೆಲಮಂಗಲ

ದಿನದ ಸುದ್ದಿ
ಕವಿತೆ | ಮಣ್ಣ ಮಕ್ಕಳು

- ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ
ಮಣ್ಣ ಮಕ್ಕಳು ನಾವು
ಹಗಳಿರುಳೆನ್ನದೆ ಬೆವರು ಬಸಿದು
ಹಸಿದ ಹೊಟ್ಟೆಯಲಿ ಉಸಿರು ಹಿಡಿದವರು
ಕಸದಲಿ ರಸ ತೆಗದು ಬದುಕಿನುದ್ದಕ್ಕೂ ಉಳ್ಳವರ
ಕಸುಬಿಗೆ ಆಳಾದವರು ಸವಳು ನೀರಲಿ ಮೈತೊಳೆದು
ಚಿಂದಿ ಅಂಗಿಯಲಿ ಶಾಲೆಗೆ ದಾಖಲಾದವರು.
ಬರಿಗಾಲಲಿ ಕಾಡು ದಾರಿಯಲಿ ಮೈಲು ದೂರ ನಡೆದು
ನೆಗ್ಗಿಲ ಮುಳ್ಳು ತುಳಿದವರು ; ನಿಬ್ಬು ನೆಗ್ಗಿದ ಪೆನ್ನಿನಲಿ
ಹೆಸರು ಬರೆಯಲು ಕಲಿತವರು ಹರಿದ ಪಠ್ಯದಲಿ ಅಕ್ಷರ ಹುಡುಕಿ ಒಡೆದ ಪ್ಲೇಟಿನಲಿ ಬರೆದವರು.
ತೂತು ಬಿದ್ದ ಸೂರಿನಲಿ ಇಣುಕಿದ ಚುಕ್ಕಿ ಚಂದ್ರಮರ ನೋಡಿ
ವಿದ್ಯುತ್ ದೀಪದ ಕನಸು ಕಂಡವರು
ಮೋಸ ವಂಚನೆಗೆ ಬಗ್ಗದೆ ಶೋಷಣೆಗೆ ಸಿಡಿದವರು
ಮಣ್ಣ ಮಕ್ಕಳು ನಾವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಬಿ.ಶ್ರೀನಿವಾಸ ಅವರ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಕೃತಿಯ ಕುರಿತು

ಸಂಡೂರಿನ ಜನರ ಮುದುಡಿದ ಅಂಗಿಯ ಮೇಲೆ,ಹೆಂಗಸರು ಮಾಸಿದ ಸೀರೆಯ ಸೆರಗಿನ ಮೇಲೆ ಬಿ.ಶ್ರೀನಿವಾಸ ಅಕ್ಷರ ಬಿಡಿಸುತ್ತಾರೆ.
ಅನ್ನದ ಅಗುಳು,ಧೂಳು,ಕಾಗದದ ಚೂರು,ಆಟಿಕೆ ಸಾಮಾನು,ಕಿಡ್ನಿ,ಈ ಸಣ್ಣವು ಗಳಲ್ಲಿ ಜೀವಸಾಕ್ಷಿ ಹುಡುಕುವ ಕಥೆಗಳಿವು.ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಅನ್ನದ ಅಗಳು,ಕಾಗದದ ಚೂರನ್ನು ಎತ್ತಿಹಿಡಿಯುವ ಗೆಳೆಯ ಶ್ರೀನಿವಾಸ *ಧೂಳನ್ನೇ ಅಕ್ಷರಗಳನ್ನಾಗಿಸಿದ ಲೇಖಕ.
- ಬಸವರಾಜ ಹೂಗಾರ
ಇಲ್ಲಿನ ಹುಚ್ಚರ ಕತೆಗಳನ್ನು ಓದುವಾಗ ಕುಂ.ವೀ.ಯವರ ಹಾಗೂ ಸಾದತ್ ಹಸನ್ ಮಾಂಟೋ ಅವರ ಹುಚ್ಚರ ಕತೆಗಳು ನೆನಪಾಗುತ್ತವೆ.ಇಲ್ಲಿನ ನತದೃಷ್ಟರ ಬದುಕನ್ನು ಹಿಡಿದಿಡಲು ಲೇಖಕರು ಕಂಡುಕೊಂಡಿರುವ ಅಭಿವ್ಯಕ್ತಿ ವಿನ್ಯಾಸ ವಿಶಿಷ್ಟವಾಗಿದೆ. ಬರಹಗಳು ದೀರ್ಘವಾಗಿಲ್ಲ. ಚುಟುಕಾಗಿವೆ. ಕವನಗಳೊ, ಗದ್ಯಗಳೊ ಎಂದು ಹೇಳಲಾಗದ ರೂಪದಲ್ಲಿವೆ.
ಗಾಢವಾದ ಅರ್ಥವನ್ನು ಕೆಲವೇ ಸಾಲುಗಳಲ್ಲಿ ವ್ಯಂಗ್ಯ ಮತ್ತು ವಿಡಂಬನೆಗಳಲ್ಲಿ ಹಿಡಿಯಲು ಯತ್ನಿಸುತ್ತವೆ.
ಇಲ್ಲಿರುವ ಲೋಕದ ನೋವಿಗೆ ಮಿಡಿವ ಸಂವೇದನೆ,ಓದುವ ಓದುಗರನ್ನೂ ಆವರಿಸಿಕೊಂಡು,ಚಿಂತನೆಗೆ ಹಚ್ಚುತ್ತದೆ.ಓದುತ್ತ,ಓದುತ್ತಾ ನಿಟ್ಟುಸಿರು ಹೊಮ್ಮುತ್ತದೆ.ಮನಸ್ಸು ಮಂಕಾಗುತ್ತದೆ.ಇಂತಹ ಬರಹಗಳನ್ನು ಕೊಟ್ಟಿರುವ ಶ್ರೀನಿವಾಸ ತಮ್ಮ ಅಂತಃಕರಣ ,ಚೂಪಾದ ಗ್ರಹಿಕೆ,ಆಳವಾದ ಸಂವೇದನೆಗಳನ್ನು ಇತರೆ ಪ್ರಕಾರಗಳಲ್ಲಿಯೂ ಪ್ರಕಟಿಸುವ ಜರೂರಿಯಿದೆ.
- ಡಾ.ರಹಮತ್ ತರೀಕೆರೆ
ಒಬ್ಬ ಮನುಷ್ಯ ಮತ್ತೊಬ್ಬನನ್ನು ಕಿತ್ತು ತಿನ್ನಬಾರದು.ಹೊಟ್ಟೆಪಾಡಿಗಾಗಿ ನಿರ್ವಹಿಸುವ ಪ್ರತಿ ಕೆಲಸವೂ ಸೃಜನಶೀಲವಾಗಿರಬೇಕು-ಎಂಬ ಧಾವಂತದಲ್ಲಿ ಹುಟ್ಟಿದ ಮನದ ಪ್ರಕ್ರಿಯೆಗಳಿಗೆಲ್ಲ ಇಲ್ಲಿ ಹರಡಿಕೊಂಡಿವೆ.
- ಬಿ.ಶ್ರೀನಿವಾಸ,ಕೃತಿ ಲೇಖಕ
ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು ನೊಂದವರ ಮನದಲ್ಲಿ ಅಲ್ಪಾವಧಿ ಗುರುತು ಮೂಡಿಸಬಹುದು ನಿಮ್ಮ ಈ ಪುಸ್ತಕ ಮತ್ತು ಅದರಲ್ಲಿರುವ ಎಷ್ಟೋ ವಿಚಾರಗಳು ನನ್ನನ್ನು ಡಿಸ್ಟರ್ಬ್ ಮಾಡಿವೆ. ಕೇವಲ ವಾಟ್ಸಾಪ್ ಲೈನ್ ಸಾಕಾಗಲ್ಲ ಎದುರುಗಡೆ ಕುಳಿತು ಇನ್ನು ಹೆಚ್ಚು ತಿಳಿದುಕೊಳ್ಳಬೇಕೇನಿಸುತ್ತದೆ. ಸಂಡೂರಿನ ದಾರುಣ ಚಿತ್ರಗಳನ್ನು,ಕೋರ್ಟಿನ ಚಿತ್ರಗಳನ್ನು,ಬದುಕಿನ ಚಿತ್ರಗಳನ್ನು ಕಣ್ಣಿಗೆ ರಾಚುವಂತೆ ಮೂಡಿಸಿದ್ದೀರಿ.
ಸಾವಿಗಿಂತ ಹಸಿವು ಬಹಳ ಕ್ರೂರಿ ಎನ್ನುವುದು: ನೋವಿನ ಬದಲು ಹಸಿವಿನ ಏಟುಗಳು ಬೀಳಬೇಕಿತ್ತು ಎನ್ನುವ ಸಾಲುಗಳಂತೂ Geographical Hungrey ಪುಸ್ತಕ ನೆನಪಿಸುತ್ತವೆ. ಸೊಂಡೂರಿನ ಚಿತ್ರಗಳ ಮೂಡಿಸಿದೆ ಗಾಢ ವಿಷಾದತೆ, ನನ್ನನ್ನು ಹೊರಬರಲು ಬಿಡುತ್ತಿಲ್ಲ.
“ಉಳ್ಳವರು ಹೊತ್ತ ಮೂಟೆಗಳಲ್ಲಿ ಬಡವರ ಹಸಿವಿನದ್ದೇ ಭಾರ”ಇವೆಲ್ಲ ಹಸಿವನ್ನು ಅನುಭವಿಸಿದವರಿಗೆ ಮಾತ್ರ ಸರಿಯಾಗಿ ಅರ್ಥವಾಗುವ ಸಾಲುಗಳು.
ಇನ್ನು ,ಕೋರ್ಟಿನ ಚಿತ್ರಗಳು, ಎಷ್ಟು ಜನ ಇರ್ತಾರೆ ಇವನ್ನೆಲ್ಲ ಸೂಕ್ಷ್ಮ ವಾಗಿ ತಿಳಿದುಕೊಳ್ಳುವವರು ?
ಶಾಲೆ ಹಿಂದೆ ತಿರುಗಬಾರದು ಕೋರ್ಟ್ ಕಚೇರಿ ಮುಂದೆ ತಿರುಗಬಾರದು ಎಂದು ನಮ್ಮ ಜನಪದರು ಹೇಳ್ವ ಮಾತು ಎಷ್ಟೋ ಸಲ ಸತ್ಯ ಎನಿಸುತ್ತದೆ.
ನೀವು ಹಿಡಿದಿಟ್ಟ ಬದುಕಿನ ಚಿತ್ರಗಳಲ್ಲಿನ “ಶವಪೆಟ್ಟಿಗೆ ಸಣ್ಣದಿದ್ದಷ್ಟು ಹೊರುವುದು ಬಹಳ ಕಷ್ಟ “ಎಂಬ ಮಾತಂತೂ ಚಿಕ್ಕಮಕ್ಕಳ ತಂದೆತಾಯಿಯರ ಕಣ್ಣಲ್ಲಿ ನೀರು ತರಿಸುವುದು.
ತಲೆ ಮ್ಯಾಲೆ ಮಲ ಸುರುವಿಕೊಂಡೆವಲ್ಲ ಸರ್ ಅವತ್ತೇ… ನಾವ್ ಹುಟ್ಟಿದ್ದು ಎನ್ನುವ ಸವಣೂರಿನ ಭಂಗಿಯ ಮಾತನ್ನು ಎಷ್ಟು ಅರ್ಥಗರ್ಭಿತವಾಗಿ ಸೋ ಕಾಲ್ಡ್ ಸೊಸೈಟಿಗೆ ಮುಟ್ಟಿ ನೋಡಿಕೊಳ್ಳುವಂತೆ ಬರೆದಿದ್ದೀರಿ. ಆಕೆ ಏನನ್ನೋ ಆಯ್ಕೆ ಮಾಡಿಕೊಂಡಿದ್ದಾಳೆ ಎಂಬ ವಿಚಾರಗಳು ಕೇವಲ ವಿಚಾರಗಳಲ್ಲ ,ಬದುಕಿನ ಸತ್ಯ ಚಿತ್ರಣಗಳು ದಿನ ನಿತ್ಯ ನಮ್ಮ ನಡುವೆ ನಡೆಯುವಂತವು.ಅವನ್ನು ಕಾಣುವಂತ ದೃಷ್ಟಿ ಇದ್ದವರಿಗೆ ಮಾತ್ರ ಇವು ಕಾಣುತ್ತವೆ ಸರ್ .
ನಿಮ್ಮ ನೈಜ ದೃಷ್ಟಿಗೆ ದನ್ಯವಾದಗಳು ಸರ್, ಉಳಿದದ್ದು ಎದುರು ಬದುರು ಕುಳಿತು ಮಾತಾಡೋಣ
- ಡಾ.ರಾಮಚಂದ್ರ ಹಂಸನೂರು, ಬೆಟಗೇರಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಅಂತಃಕರಣೆಯ ಹುಡುಕುತ್ತಾ..

- ಬಿ.ಶ್ರೀನಿವಾಸ
ಒಂದು ಊರಿನ ಮೌನ ಅರ್ಥವಾಗಬೇಕಾದರೆ, ದುಃಖ ಅರ್ಥವಾಗಬೇಕಾದರೆ ನಾವು ಏನನ್ನು ಮಾಡಬೇಕು? ನಾವು ಹೇಗೆ ಬದುಕಬೇಕು? ಗಾಯಗೊಂಡ ಬೆಟ್ಟ-ಗುಡ್ಡ ,ನದಿ ತೊರೆಗಳ ಬತ್ತಿಹೋದ ನೆಲದ ಕಣ್ಣಿಂದ ಪ್ರಾಣಿ-ಪಕ್ಷಿಗಳ ಆ ದೈನೇಸಿ ನೋಟಗಳಿಂದ ತಪ್ಪಿಸಿಕೊಳ್ಳುವುದಾದರೂ ಹೇಗೆ? ಪ್ರೀತಿ ,ಸಹಾನುಭೂತಿ ಗಳನ್ನು ಕಳೆದುಕೊಂಡವರು ಮಾತ್ರ ನಮ್ಮ ಸುತ್ತಮುತ್ತಲ ಬದುಕು ನರಕ ಸದೃಶವಾಗಿದ್ದರೂ ನೆಮ್ಮದಿಯಿಂದ ಉಣ್ಣ ಬಲ್ಲರು. ನಿದ್ರಿಸಬಲ್ಲರು, ಬರೆಯಬಲ್ಲರು.
ಬಳ್ಳಾರಿ ಜಿಲ್ಲೆಯ ಸೊಂಡೂರು ಮತ್ತು ಸುತ್ತಮುತ್ತಲಿನ ಪ್ರದೇಶದ ಬಹುತೇಕ ಹಳ್ಳಿಗಳು ರೋಗಗ್ರಸ್ತ ಪೀಡಿತರಂತೆ ಕಾಣುತ್ತಿವೆ .ಕಳೆದ ದಶಕದ ಅವಧಿಯೊಂದರಲ್ಲಿ ನಡೆದ ಗಣಿಗಾರಿಕೆಯಿಂದಾಗಿ ಇಡೀ ಪ್ರದೇಶ ಶಾಶ್ವತ ಬರಪೀಡಿತ ಪ್ರದೇಶವಾಗಿ ಬಿಟ್ಟಿದೆ. ಅದಿರು ಸಾಗಾಣಿಕೆಯ ಹೆಚ್ಚಳದಿಂದಾಗಿ ಕಾರ್ಬನ್ ಡೈಯಾಕ್ಸೈಡ್ ಆಸ್ಫೋಟಿಸಿದೆ. ಅಪರೂಪದ ಗಿಡ-ಮರಗಳು, ಪಕ್ಷಿಗಳು ,ಅಳಿವಿನಂಚಿಗೆ ತಳ್ಳಲ್ಪಟ್ಟಿವೆ.
ಶಾಲೆಗಳು ಮಕ್ಕಳಿಲ್ಲದೆ ಮುಚ್ಚಲ್ಪಟ್ಟವು. ಅದಿರು ಹೊತ್ತ ಲಾರಿಗಳಲ್ಲಿ ಮಕ್ಕಳ ಅಕ್ಷರಗಳನ್ನು ತುಂಬಿ ಕಳುಹಿಸಲಾಯಿತು. ಜನರು ಇಂತಹ ಬದುಕಿಗೆ ಹೊಂದಿಕೊಳ್ಳದೆ ಅನ್ಯ ಮಾರ್ಗವೇ ಇರಲಿಲ್ಲ. ಸತತ ಒಂದೂವರೆ ದಶಕಕ್ಕೂ ಹೆಚ್ಚು ಕಾಲ ನಡೆದ ಗಣಿಗಾರಿಕೆಯಿಂದಾಗಿ ಜನರ ಸಾಕ್ಷರತೆಯ ಪ್ರಮಾಣ ಮತ್ತು ಜೀವನಾಯುಷ್ಯ ಪ್ರಮಾಣ ಪಾತಾಳಕ್ಕೆ ಕುಸಿದಿದೆ . ರಕ್ತಹೀನತೆಯಿಂದ ಬಳಲುವ ಮಹಿಳೆಯರ ಸಂಖ್ಯೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಗಿಂತಲೂ ಜಾಸ್ತಿಯಾಗಿದೆ. 5 ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣವು ಅಧಿಕವಾಗಿದೆ.
ಇಲ್ಲಿನ ಸಂಪನ್ಮೂಲ ಇರುವುದೇ ತಮ್ಮ ಭೋಗ ವಿಲಾಸಕ್ಕೆ ಎಂದು ರಾಜಕೀಯವರ್ಗ,ಉದ್ಯಮಿಗಳು ಮತ್ತು ಕೆಲ ಆಡಳಿತಶಾಹಿ ಅಧಿಕಾರಿಗಳು ತಿಳಿದುಕೊಂಡಿದ್ದರು ಬಳ್ಳಾರಿ ಜಿಲ್ಲೆ ಇರುವುದೇ ಲೋಲುಪತೆ ಗೋಸ್ಕರ ಇಲ್ಲಿ ಹಣವೊಂದಿದ್ದರೆ ಏನೆಲ್ಲಾ ಸಾಧಿಸಬಹುದು ಮತಗಳನ್ನು ಮತದಾರರನ್ನು ಕೊಂಡುಕೊಳ್ಳಬಹುದು, ರಾಜಕೀಯ ಚುನಾವಣಾ ಪ್ರಚಾರಕ್ಕೆ ದಿನವೊಂದಕ್ಕೆ ಲಕ್ಷದಂತೆ ತಿಂಗಳುಗಟ್ಟಲೆ ಪ್ರಚಾರ ಮಾಡಿದ ಸಿನಿತಾರೆಯರಿಗೇನೂ ಕಡಿಮೆ ಇಲ್ಲ.ಸಂಪನ್ಮೂಲಗಳ ಹಗಲು ದರೋಡೆ ರಾಜಾರೋಷವಾಗಿ ನಡೆದುಹೋಯಿತು.
ಈ ಊರುಗಳಲ್ಲಿ ಬುಡುಬುಡುಕಿಯವರಿದ್ದರು, ಹಗಲುವೇಷಗಾರರು, ನಕ್ಕುನಗಿಸುವ ಹಾಡುಗಾರರು, ಬಯಲಾಟದವರು,ಕುರ್ರಮಾಮುಡು ವಸ್ತುನ್ನಾಡು…ಟಿಮ್ ಟಿಮ್….ಎನ್ನುತ್ತ ಬರುವವರು,ಗಿಣಿಶಾಸ್ತ್ರ ಹೇಳುವವರು ,ಬಣ್ಣಬಣ್ಣದ ಹರಳು ಮಾರುವ ಮಹಾ ಗಟ್ಟಿಗಿತ್ತಿಯರು, ಕಾಡಿನ ಗರ್ಭ ಹೊಕ್ಕು ಒಣ ಮರದ ಕಟ್ಟಿಗೆ ತಂದು, ಹೊತ್ತು ಮಾರಿ ಜೀವಿಸುವ ಲಂಬಾಣಿ ಯಾಡಿಗಳಿದ್ದರು. ಜೊತೆಗೆ ಅವರ ಉಡಿಗಳಲ್ಲಿ ಕಾರಿ, ಕವಳಿ,ಪುಟ್ಲಾಸು, ಬಿಕ್ಕಿ ಹಣ್ಣಿನಂತಹ ಹಣ್ಣುಗಳು ಇರುತ್ತಿದ್ದವು.
ಆಹಾರ ಸಂಪಾದನೆಯ ಬೇರೆ ಮೂಲಗಳೇ ಗೊತ್ತಿಲ್ಲದ ಇವರಿಗೆ ಭಿಕ್ಷೆಯೊಂದೇ ಉಳಿದಿರುವ ಮಾರ್ಗ. ಇವರುಗಳೆಲ್ಲಾ ಸಮಾಜದ ಕಣ್ಣಿನಲ್ಲಿ ಅಪರಾಧಿಗಳಂತೆ ಕಾಣುತ್ತಿರುವುದು ಪರಿಸ್ಥಿತಿಯ ವ್ಯಂಗ್ಯ .ಇವರನ್ನು ಇವರ ಕಲೆಯನ್ನು ಗೌರವಿಸುವ ಒಂದು ಸಮುದಾಯವೇ ನಾಶವಾಗಿಹೋಯಿತು.ರೊಕ್ಕಾ ಕೊಟ್ಟರೆ ಏನು ಬೇಕಾದುದನ್ನು ಪಡೆಯಬಹುದೆಂಬ ಅಹಂ-ಭಾವಹೀನ ಮನುಷ್ಯರನ್ನು ಸೃಷ್ಟಿಸುತ್ತಾ ನಡೆದಿದೆ.
ಸೊಂಡೂರು -ಬಳ್ಳಾರಿ ಜಿಲ್ಲೆಯ ಮಲೆನಾಡು .ಪುಟ್ಟ ಕಾಶ್ಮೀರ. ಬೆಟ್ಟ ಗುಡ್ಡಗಳಿಂದ ಆವೃತವಾದ ಸುಂದರನಾಡು .ಅತಿ ಫಲವತ್ತಾದ ಮಣ್ಣು ತುಂಬಿದ ನೆಲ. ಜಲಮೂಲಗಳುಳ್ಳ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ, ಸೊಂಡೂರಿನ ಸುತ್ತಮುತ್ತ ಸುಮಾರು 40 ಕಿಲೋಮೀಟರ್ ಉದ್ದದ, 15 ಕಿಲೋಮೀಟರುಗಳಷ್ಟು ಅಗಲದ ಬೆಟ್ಟಗಳಲ್ಲಿ ಕಬ್ಬಿಣ, ತಾಮ್ರ ಮತ್ತು ಮ್ಯಾಂಗನೀಸ್ ಅದಿರಿನ ಗಣಿಗಳಿವೆ. ಇಲ್ಲಿ ದೊರೆಯುವ ಹೆಮಟೈಟ್ ಉತ್ತಮ ದರ್ಜೆಯ ಕಬ್ಬಿಣದ ಅದಿರು. ಹಾಗೆಯೇ ಮ್ಯಾಂಗನೀಸ್ ಕೂಡ ಡೇರಸ್ ಫಿಲೈಟ್ ಎಂಬ ಕಲ್ಲುಗಳಲ್ಲಿ ಹೇರಳವಾಗಿ ದೊರೆಯುತ್ತದೆ.
ಇದೇ ರೀತಿಯ ಸಂಪತ್ತು ಬೇರೆ ಕಡೆಗಳಲ್ಲಿ ಸಿಗುವುದಿಲ್ಲ ಎಂದಲ್ಲ. ವಿಶ್ವದರ್ಜೆಯ ಶ್ರೇಷ್ಠ ಮಟ್ಟದ ಮ್ಯಾಂಗನೀಸ್ ಅದಿರಿನ ನಿಕ್ಷೇಪಗಳು ಸುಬ್ರಾಯನಹಳ್ಳಿ ,ರಾಮಘಡಗಳಂತಹ ಹಳ್ಳಿಗಳ ಶಿಖರಗಳಲ್ಲಿ ದೊರೆಯುತ್ತವೆ. ಈ ಅದಿರಿನ ವಿಶೇಷವೆಂದರೆ ಬಹುತೇಕ ಅದಿರುಗಳಲ್ಲಿ ಸೇರಿಹೋಗಿರುವ ಫಾಸ್ಪೇಟ್ ಮತ್ತು ಸಲ್ಫರ ನಿಗದಿತ ಅಂಶಕ್ಕಿಂತ ಕಡಿಮೆ ಇರುವುದರಿಂದ ಇಲ್ಲಿನ ಮ್ಯಾಂಗನೀಸ್ ವಿಶ್ವ ಪ್ರಸಿದ್ಧವಾಗಿದೆ ಹಾಗಾಗಿ ಇಲ್ಲಿನ ಅದಿರಿಗೆ ವಿಶೇಷ ಬೇಡಿಕೆ.
ಬಳ್ಳಾರಿ ಜಿಲ್ಲೆಯ ಸೊಂಡೂರು ಕೇವಲ ಒಂದು ಊರು,ಪ್ರದೇಶ ಆಗಿರಬಹುದು .ಆದರೆ ಆತ ಊರಿನ ದುರಂತ ಇಡೀ ಪ್ರಪಂಚವನ್ನೇ ಪ್ರತಿನಿಧಿಸುವುದರ ಸಂಕೇತ. ಗಣಿಗಾರಿಕೆ ಆರಂಭವಾದಾಗಲೇ ಊರಿನ ಅವನತಿಯ ಆರಂಭವಾಯಿತು. ಯಥೇಚ್ಛವಾಗಿ ಗಣಿಗಾರಿಕೆಗೆ ಸರ್ಕಾರವೇ ಅನುಮತಿ ನೀಡುವಾಗ ಅದರ ಹೆಸರಿನಲ್ಲಿ ರಾಜಕಾರಣಿಗಳು ಅಕ್ರಮ ಗಣಿಗಾರಿಕೆ ನಡೆಸುವಾಗಲಂತೂ ಊರು ಆಹುತಿಯಾಗಿ ಬಿಟ್ಟಿತ್ತು. ಮನುಷ್ಯರು ಕೂಲಿಯ ಯಂತ್ರಗಳಾಗಿ ಹೋದರು.
ಮನುಷ್ಯನೇ ಸಂಶೋಧಿಸಿದ ಮೂಲ ಕಸುಬುಗಳಾದ ಕೃಷಿ ,ಬಡಗಿತನ, ಕ್ರೀಡೆ ಹಾಗೂ ಮೈಥುನಗಳು ಸಹ ಕೇವಲ ಯಾಂತ್ರಿಕವೆಂಬಂತೆ ಆಗಿಹೋದವು.ಎಷ್ಟೋ ದಿನಗಟ್ಟಲೆ,ತಿಂಗಳುಗಟ್ಟಲೆ, ಗಣಿಗಾರಿಕೆ ಬೆಟ್ಟಗಳ ತುತ್ತತುದಿಯಲ್ಲಿ ನಡೆಯುತ್ತಿತ್ತು.ಕೂಲಿಯವರೂ ಅಷ್ಟೂ ದಿನಗಳ ಕಾಲ ಅಲ್ಲಿಯೇ ಇರಬೇಕಾಗುತ್ತಿತ್ತು. ಕೂಲಿಯ ಹೆಣ್ಣು ಗಂಡುಗಳು ಅದಿರಿನ ನಿಕ್ಷೇಪದ ಬಯಲಿನಲ್ಲಿಯೇ ಮೈಥುನಕ್ಕಿಳಿದುಬಿಡುತ್ತಿದ್ದರು.ಮಕ್ಕಳು ಉಣ್ಣುವ ಅನ್ನದಲ್ಲಿ ಕೆಂಪುಧೂಳು ಸೇರಿಸಿಯೇ ಉಣ್ಣಬೇಕಾಗುತ್ತತ್ತು. ಕಂಟೇನರುಗಳಲ್ಲಿಯೇಇವರ ಜೀವನ ಮುಗಿದುಹೋಗಿರುತ್ತಿತ್ತು.ಮನುಷ್ಯ ಹೀಗೂ ಬದುಕಬಲ್ಲ ಎಂಬುದನ್ನು ಯಾರೂ ಕೂಡ ಯೋಚಿಸಲಿಲ್ಲ.
ಗಣಿ ಸಾವ್ಕಾರಗಳು ಸಾಮಾನ್ಯ ಜನರ ಕಣ್ಣಿಗೆ ಇಂದಿಗೂ ವೈಭೋಗದ ತುಣುಕುಗಳ ಹಾಗೆ ಕಾಣಿಸುತ್ತಿದ್ದಾರೆ. ಜನರನ್ನು ,ಅವರ ಗಮನವನ್ನು ಬೇರೆಡೆಗೆ ಸೆಳೆಯದಂತೆ ಎಷ್ಟು ಪ್ರಯತ್ನಗಳು ನಡೆದಿರುತ್ತವೆ ಎಂದರೆ, ಊರಿನಲ್ಲಿ ಎಲೆಕ್ಷನ್ ಇರಲಿ ,ಇಲ್ಲದಿರಲಿ ,ಧಣಿ- ರಾಜಕಾರಣಿಯ ವಿವಿಧ ರೀತಿಯ ಬಣ್ಣಬಣ್ಣದ ಕಟೌಟುಗಳು ದಾರಿಯುದ್ದಕ್ಕೂ ರಾರಾಜಿಸುತ್ತವೆ. ಪ್ರತಿವಾರವೂ ಕಟೌಟ್ಗಳು ಬದಲಾಗುತ್ತಲೇ ಇರುತ್ತದೆ.
ಇನ್ನು ಕೆಲ ಸಾಹುಕಾರ ಗಳಂತೂ ತಾವೇ ಆಧುನಿಕ ಶ್ರೀ ಕೃಷ್ಣದೇವರಾಯ ಎಂದು ಭಾವಿಸಿ ,ಅವನಂತೆಯೇ ವೇಷಧರಿಸಿ ನಿಂತು ಬೃಹತ್ ಕಟೌಟುಗಳನ್ನು ನಗರದ ವಿವಿಧ ಕಡೆಗಳಲ್ಲಿ ನಿಲ್ಲಿಸಲಾಯಿತು.ಬಳ್ಳಾರಿಯ ಗಣಿಧಣಿಗಳದ್ದೂ ಇನ್ನೊಂದು ರೀತಿ.ಮುಂಜಾನೆಯ ಟಿಫನ್ನಿಗೆ ಬೆಂಗಳೂರಿನ ಎಂ.ಟಿ.ಆರ್.ಹೋಟೆಲ್ಲಿಗೆ ಹೆಲಿಕಾಪ್ಟರ್ ನಲ್ಲಿ ಹೋದರೆ,ಅದಕ್ಕೂ ಮುನ್ನ ಹೆಲಿಕಾಪ್ಟರ್ ನಲ್ಲಿ ಹೈದರಾಬಾದ್ ವರೆಗೂ ವಾಕಿಂಗ್ ಹೋಗುವವರಿದ್ದರು.ವಿಮಾನದಲ್ಲಿ ಮಧ್ಯಾನ್ಹದ ಊಟಕ್ಕೆ ಬೊಂಬಾಯಿಗೆ ಹೋಗುತ್ತಿದ್ದರು.ರಾತ್ರಿ ಮತ್ತೆಲ್ಲಿಗೋ…!ಎಷ್ಟೋ ಜನ ಸಿನಿಮಾದವರು ರಾತ್ರೋರಾತ್ರಿ ಬಂದುಹೋಗುವುದನ್ನು ನೋಡಿದವರು ಇದ್ದರು.
ಲೋಲುಪತೆಗೆ ಜನರ ಬದುಕನ್ನೆ ಆಹುತಿ ತೆಗೆದುಕೊಂಡ ಧಣಿಗಳು,ಕೊನೆಗೆ ಜನರು ತಮ್ಮ ಕಡೆಗೆ ದೃಷ್ಟಿ ಹರಿಸಲೆಂದು ಸದಾ ಒಂದಿಲ್ಲೊಂದು ಸುದ್ದಿಯಿಂದ ಜನರನ್ನು ಭ್ರಮಾಲೋಕದಲ್ಲಿ ತಿರುಗುವಂತೆ ನೋಡಿಕೊಂಡರು.”ಸಾಮೂಹಿಕ ಮದುವೆ”ಗಳಂತಹ ಕೃತ್ರಿಮ ಕಾರ್ಯಕ್ರಮಗಳಿಗೆ ಕೈ ಹಾಕಿದರು.ಆ ಮೂಲಕ ಅಲ್ಲಿ ಬಂದ ವಧು-ವರರಿಗೆ ತಾಳಿ- ಬಟ್ಟೆ ಕೊಡುವುದರ ಮೂಲಕ “ದಾನಶೂರ”ರು ಎನಿಸಿಕೊಂಡರು.ಆದರೆ ಇಂತಹ ವಿವಾಹಗಳು ಹೆಸರಿನಲ್ಲಿ ಜನರು ಪ್ರಶ್ನೆ ಕೇಳುವುದನ್ನು,ಆಲೋಚನೆಯನ್ನೆ ಮಾಡದಿರುವ ಹಾಗೆ,ಅರ್ಥಮಾಡಿಕೊಳ್ಳುವ ಅವರು ಗುಣವನ್ನೆ ನಾಶಪಡಿಸಲಾಯಿತು.ಇಂತಹ ಗಣಿಧಣಿಗಳ ಭಿಕ್ಷೆಗೆ ಕೆಲ ಮಠಾಧೀಶರು ಕೈಚಾಚಿದರು.
ಜನರ ಬದುಕು ಕುಸಿಯಲು ಎಷ್ಟೊಂದು ಜನ ಒಂದಾದರು?
ನೆನೆಸಿಕೊಂಡರೆ ರೋಷ ಆವೇಶವೂ ಅಂತಕರುಣೆಯೂ ಒಟ್ಟಿಗೆಉಕ್ಕಿಬರುತ್ತದೆ.
ಜಿಲ್ಲೆಯ ಗಡಿಪ್ರದೇಶದ ಒಂದು ಬಹುಮುಖ್ಯವಾದ ಹಳ್ಳಿ ಕಮ್ಮತ್ತೂರು. ಈ ಊರಿನಲ್ಲಿ ನಡೆದಷ್ಟು ಗಣಿಗಾರಿಕೆ ಮತ್ತು ಡಿಪ್ಪಿಂಗ್ ಬೇರೆಲ್ಲೂ ನಡೆದಿರಲಿಕ್ಕಿಲ್ಲ .ಊರಿನ ಮನೆ ಗಳಿಗಿಂತಲೂ ಅಧಿಕವಾದ ಸ್ಟಾಕ್ ಯಾರ್ಡ್ಗಳು ನಿರ್ಮಾಣವಾದವು. ಧೂಳಿನಿಂದಾಗಿ ಮತ್ತು ವಿಪರೀತ ಶಬ್ದದಿಂದಾಗಿ ಅಸ್ತಮಕ್ಕೆ, ಕಿವುಡುತನಕ್ಕೆ ಬಲಿಯಾದವರಿಗೆ ಲೆಕ್ಕವಿಲ್ಲ. ಅಪರಿಮಿತ ಗಣಿಗಾರಿಕೆಯ ಪ್ರಭಾವದಿಂದಾಗಿ ಆಕ್ಸಿಜನ್ ಪ್ರಮಾಣ ಕುಸಿತ ಕಂಡಿತು. ಇಡೀ ಊರಿಗೆ ಊರೇ ಐಸಿಯುನಲ್ಲಿ ಇರುವಂತೆ ಭಾಸವಾಗುತ್ತಿದೆ.ಇಂತಹ ಎಷ್ಟೋ ಹಳ್ಳಿಗಳು ಉಸಿರಾಡಲು ಕಷ್ಟಪಡುತ್ತಿವೆ.
ಒಂದು ಕಾಲದ ರೈತ ಹೊಲ, ಗದ್ದೆ, ಮಣ್ಣನ್ನು ಪೂಜಿಸುತ್ತಿದ್ದ. ಆರಾಧಿಸುತ್ತಿದ್ದ .ಗುಡ್ಡಬೆಟ್ಟ ಸೂರ್ಯ ಚಂದ್ರ ತಾರೆಯರೇ ಆತನ ದೇವರುಗಳಾಗಿದ್ದವು. ದುಡಿಮೆಯೇ ಆತನ ಸಂಪತ್ತು. ಇಂತಹ ಕುಟುಂಬಗಳು ಇಲ್ಲದ, ಪ್ರಕೃತಿಯೂ ಇಲ್ಲದ ,ಅಭಿಶಾಪದ ಊರುಗಳಲ್ಲಿ ಶಾಪಗ್ರಸ್ತರಂತೆ ಮತ್ತೊಮ್ಮೆ ಯುದ್ಧಕ್ಕೆ ಹೊರಟ ಕೆಂಪು ಸೈನಿಕರಂತೆ ಇಲ್ಲಿನ ಜನ ಕಾಣಿಸುತ್ತಾರೆ.
ಎಲ್ಲಾ ಮುಗಿದ ಮೇಲೆ ಊರ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ದಿನಾಂಕ: 6 -10-2016 ರಂದು ಸರ್ಕಾರ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿ ಆದೇಶಿಸಿತು.
ಕಾಲವೀಗ ತಣ್ಣಗೆ ನಿಶ್ಯಬ್ದ..!
ಯಾರದ್ದೋ ಹೆಣವೊಂದು ಸದ್ದಿಲ್ಲದೆ ಬಿದ್ದುಕೊಂಡಿರುವ, ಇನ್ನೂ ಯಾರೋ ಬರುವವರಿದ್ದಾರೆ ಎಂದು ಹೆಣವನ್ನು ಎತ್ತದೆ, ಕಾದು ಕುಳಿತಿರುವಂತೆ ಸೊಂಡೂರಿನ ಬೀದಿಗಳಿವೆ.
ಬಡತನದ ರೇಖೆಗಳನ್ನೆಲ್ಲಾ ಮೈಮೇಲೆ ಹೊದ್ದು ಕುಳಿತವರಂತೆ ಕಾಣುವ ಮುದುಕರು ,ಸಾಯಲಿಕ್ಕೂ ಆಗದೆ ಬದುಕಲೂ ಆಗಿದೆ, ದುಸ್ಥಿತಿಗೆ ಕಾರಣವನ್ನು ಹುಡುಕುತ್ತಿರುವವರ ಹಾಗೆ ಹಣೆಗೆ ಕೈ ಹಚ್ಚಿ ಕುಳಿತ ದೃಶ್ಯಗಳು ಹೃದಯವನ್ನು ಕಲಕುತ್ತದೆ .ಇದು ನಾಗರಿಕ ಸಮಾಜವೊಂದು ತನ್ನದೇ ಊರಿನ ಸಮುದಾಯವನ್ನು ಚಿತ್ರಹಿಂಸೆಗೆ ಒಳಪಡಿಸಿದ ಹಾಗೆ.ನಾನು ಕಂಡು ಮಾತನಾಡಿಸಿದರವಲ್ಲಿ ” ನನ್ನ ಹಣೆಬರಹ…ನೋಡಪಾ, ಅಲಸಂದಿ,ಅವರೆ,ಜ್ವಾಳ,ನವಣಿ,
ಸಜ್ಜಿ ಬೆಳೀತಿದ್ದೆ. ಏಪೆಂಪ್ಸಿಗೆ ಹಾಕಿ ರೊಕ್ಕ ಎಣಿಸ್ಕಂಡು ಬರ್ತಿದ್ದೆ.ಮಕ್ಕಳು ಮೀರಿ ಎಲ್ಲ ಆರಾಮಾಗಿದ್ವಿ…ಮೈನ್ಸು ಮೈನ್ಸೂ ಅಂತಂದು ಮೈಯೆಲ್ಲಾ ತಗಂಬುಡ್ತು ನನ್ನಪ್ಪನೆ” ಎಂದು ವಿಷಾದದಿಂದ ಹೇಳುತ್ತಾರೆ.
ದೂರದ ಊರುಗಳ ಗೆಳೆಯರಿಗೆ ಸೊಂಡೂರು ಎನ್ನುವುದು ಸುಂದರ ಸ್ವಪ್ನದ ಹಾಗೆ, ಕಾಡುತ್ತಲೇ ಇರುತ್ತದೆ. ಗಣಿಗಾರಿಕೆಯಿಂದ ರಾಜ್ಯ,ದೇಶ ವ್ಯಾಪಿ ಸುದ್ದಿಯಾಗಿ, ಅಂತರಾಷ್ಟ್ರೀಯ ಪ್ರಖ್ಯಾತಿಯನ್ನು ಗಳಿಸಿಬಿಟ್ಟಿತು. ಈಗಲೂ ‘ಚುನಾವಣೆ ‘ಎಂಬ ಶಬ್ದ ಕೇಳಿದರೆ ಸಾಕು, ಜನರ ಕಣ್ಣಲ್ಲಿ ಹೊಳಪು ಮೂಡುತ್ತದೆ. ಬಾಯಲ್ಲಿ ನೀರೂರುತ್ತದೆ. ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಹಬ್ಬ ಎಂದು ನಾವು ಭಾವಿಸಿದ್ದು ,ಇಲ್ಲಿ ಅಣಕದಂತೆ ಭಾಸವಾಗುತ್ತಿದೆ.
*******
ಆದರೆ ,ಅಭಿವೃದ್ಧಿಯ ದೃಷ್ಟಿಯಿಂದ ಹೊರಗಿನ ಪ್ರಪಂಚಕ್ಕೆ ಸಾಕಷ್ಟು ಶ್ರೀಮಂತ, ಎಲ್ಲಾ ಬ್ರಾಂಡೆಡ್ ಕಂಪನಿಗಳ ಅಂಗಡಿಗಳಿರುವ ಹೊಸಪೇಟೆ-ಬಳ್ಳಾರಿಯಂತಹ ಊರುಗಳಲ್ಲಿ ಸ್ಟಾರ್ ಹೋಟೆಲ್ಗಳು ನಡೆಯುತ್ತಿವೆ. ಸೊಂಡೂರಿನ ಗಾಂಧಿ ಕರಕುಶಲ ಕೈಗಾರಿಕಾ ಕೇಂದ್ರಕ್ಕೂ ಬೀಗ ಬಿದ್ದಿದೆ.
ಹೌದು, ಅಭಿವೃದ್ಧಿಯೆಂದರೆ ಈ ಪ್ರದೇಶಗಳ ಜನತೆ ಹಸಿವಿನಿಂದ ಸ್ವಾತಂತ್ರ್ಯ ಪಡೆದಿದ್ದಾರೆಯೆ ?ಲಿಂಗ ಅಸಮಾನತೆಯಿಂದ ಸಾಮಾಜಿಕ ಅಸಮಾನತೆಯ,ಅವಮಾನಳಿಂದ ಸ್ವಾತಂತ್ರ್ಯ ಪಡೆದಿದ್ದಾರೆಯೆ ?ಎನ್ನುವ ಅಮರ್ತ್ಯಸೇನರು ಕೇಳುವ ಪ್ರಶ್ನೆಗಳನ್ನು ಕೇಳಿಕೊಂಡರೆ…ಎಲ್ಲಾ ಪ್ರಶ್ನೆಗಳಿಗೂ “ಇಲ್ಲ”ಎಂಬ ರೆಡಿ ಉತ್ತರ ದೊರಕುವುದು.
ಈ ಎಲ್ಲಾ ಸ್ವಾತಂತ್ರ್ಯಗಳನ್ನು ಯಾರೋ ಕೊಡಲು ಸಾಧ್ಯವಿಲ್ಲ.ಅವರು ಪಡೆದುಕೊಳ್ಳುವ ಸಾಮರ್ಥ್ಯವನ್ನು ನಿರ್ಮಾಣ ಮಾಡುವುದು ನಮ್ಮ ನಿಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ.
***
ವಯಸ್ಸಾಗಿ ಮುದುಕರಾದಾಗ ಮೂಲೆಯಲ್ಲಿ ಎಲ್ಲೋ ಒಂದು ಕಡೆ ಕುಳಿತು ಅಂತರ್ಮುಖಿಗಳಾಗಿಬಿಡುವುದು ವಯೋಸಹಜ ಗುಣ. ಆದರಿಲ್ಲಿ ಮಕ್ಕಳೂ ಅಂತರ್ಮುಖಿಗಳಾದರೆ… ?ಕಥೆಗಳು ಬೆಂಕಿಯ ಕೆನ್ನಾಲಗೆ ಹಾಗೆ ಸುಡುತ್ತಿವೆ. ಈ ಜನಗಳು ಅನುಭವಿಸಿದ, ಅನುಭವಿಸುತ್ತಿರುವ ಕರಾಳ ನೋವುಗಳನ್ನು ಹಿಡಿದಿಡಲು ಒಂದು ಜೀವನ ಸಾಕಾಗುವುದಿಲ್ಲ ಎನಿಸುತ್ತಿದೆ.
ಇಲ್ಲಿನ ಎಲ್ಲಾ ಅಕ್ಷರಗಳು ವರ್ತಮಾನದ ಒತ್ತಡಗಳಿಂದಲೇ ಬಂದಿರುವುವು ಎಂದೇ ಭಾವಿಸಿದ್ದೇನೆ. ಹಿಂದಿನಿಂದಲೂ ನನ್ನನ್ನು ಕಾಡುತ್ತಿದ್ದ ಘಟನೆಗಳು, ನಂತರದಲ್ಲಿ ಗಣಿಗಾರಿಕೆಯೆಂಬ ಪೀಕ್ ಅವಧಿಯಲ್ಲಿನ ಘಟನೆಗಳು ,ಜನರ ಬದುಕು, ನಂತರದ ದಿನಗಳಲ್ಲಿ ಅಕ್ರಮ ಗಣಿಗಾರಿಕೆಯಿಂದ ಬೀದಿಪಾಲಾದ ಕುಟುಂಬಗಳ ರೋದನವನ್ನು ಕೆಲಮಟ್ಟಿಗಾದರೂ ತಿಳಿಸಬೇಕಿತ್ತು.
ಬರಹಗಾರನೊಬ್ಬ ಯಾಕೆ ಬರೆಯುತ್ತಾನೆ ಎಂಬುದನ್ನು ಪೂರ್ಣ ಅರ್ಥಮಾಡಿಸಿದ್ದು ಈ ಬರಹಗಳೆ.ಎದೆಯ ಮೂಲೆಯಲ್ಲಿ ಅಡಗಿದ್ದ ಭಾವಗಳು ಕಾಡಿದಾಗಲೆಲ್ಲ ಸಣ್ಣ ಸಣ್ಣ ಚೀಟಿಗಳಲ್ಲಿ ಬರೆದು,ಇತ್ತೀಚೆಗೆ ಮೊಬೈಲಿನಲ್ಲಿ ಟೈಪಿಸಿ ಕೊಂಡು ನಿರಾಳವಾಗುತ್ತಿದ್ದೆ.ಬಹಳ ವರ್ಷಗಳ ಹಿಂದಿನಿಂದಲೂ ಹಿಡಿದಿಟ್ಟುಕೊಂಡಿದ್ದ ಕರಾಳ ಸತ್ಯಗಳನ್ನು ಬರೆಯುವಾಗ ಕಣ್ಣು ಮುಂಜಾದದ್ದು,ಎದೆ ಭಾರವಾದದ್ದೂ ಇದೆ.ಸಾಮಾನ್ಯ ಕೃಷಿಕನೋರ್ವ ಕಣ್ಣೆದುರೇ ಹುಚ್ಚನಾಗಿ ತಿರುಗಾಡುವಾಗ ತುಂಬಾ ಡಿಸ್ಟರ್ಬ್ ಆಗಿದ್ದಿದೆ.
ಹೀಗೆ ನನ್ನನ್ನು ,ಡಿಸ್ಟರ್ಬ್ ಮಾಡಿದ ಈ ಭಾವಗಳು ನನ್ನ ಎದೆಯಿಂದ ಹಾರಿ ಹೀಗೆ ಹೊರಬರುವ ತನಕವೂ ಸಮಾಧಾನವಿದ್ದಿಲ್ಲ.ನಾನು ಸಾಮಾಜಿಕ ಜವಾಬ್ದಾರಿಯೊಂದಿಗೆ ನನಗನಿಸಿದ ಭಾವಗಳನ್ನು ಹೊರಹಾಕಿರುವೆ…..ನಿಟ್ಟುಸಿರಿನೊಂದಿಗೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
