ಭಾವ ಭೈರಾಗಿ
ಕವಿತೆ | ಸೂಲಗಿತ್ತಿ ನರಸಮ್ಮ
ನಾರಿಯರ ಬಾಳನುದ್ಧರಿಸಲು
ಅವತಾರಿಸಿ ಬಂದ ಅಮ್ಮ
ನಾಡಿನ ಮೂಲೆ ಮೂಲೆಗಳಲ್ಲಿ
ಹೆಸರುವಾಸಿ ನರಸಮ್ಮ.
ತುಮಕೂರಿನ ಪಾವಗಡದ
ಕೃಷ್ಣಾಪುರದಿ ಹುಟ್ಟಿದೆ
ಅಲೆಮಾರಿಯ ಅಂಜಿನಪ್ಪನ
ಮನೆಯ ಮೆಟ್ಟಿದೆ.
ಜೀವಭಾಷೆ ತೆಲುಗು
ಮನೆಯಲ್ಲಿ ಆಡಿ ಬೆಳೆದೆ
ಜೀವನದ ಭಾಷೆ ಕನ್ನಡವ
ಜಗದಲ್ಲಿ ಕೊಂಡಾಡಿದೆ.
ಹನ್ನೆರಡು ಮಕ್ಕಳನ್ನು
ಹೆತ್ತು ಹೊತ್ತು ಸಾಕಿದೆ
ಇಪ್ಪತ್ತೆರಡು ಮೊಮ್ಮಕ್ಕಳನ್ನು
ಅಕ್ಕರೆಯಲ್ಲಿ ಪೊರೆದೆ.
ಮರಿಗೆಮ್ಮಜ್ಜಿಯಿಂದ ಹೆರಿಗೆ
ಮಾಡಿಸುವ ವಿದ್ಯೆ ತಿಳಿದೆ
ಗಿಡಮೂಲಿಕೆಗಳ ಸತ್ವವ
ಬುಡಬುಡಿಕೆರಿಂದ ಕೇಳಿದೆ.
ಹನುಮಕ್ಕಳ ಹೆರಿಗೆ ಮಾಡಿಸಿ
ಜನರನು ಚಕಿತಗೊಳಿಸಿದೆ
ಹದಿನೈದು ಸಾವಿರಕ್ಕೂ ಹೆಚ್ಚು
ಸಹಜ ಹೆರಿಗೆಯ ಮಾಡಿಸಿದೆ.
ಅನಕ್ಷರಸ್ಥಳಾದರು ಗೌರವ
ಡಾಕ್ಟರೇಟ್ ಪದವಿ ಪಡೆದೆ
ಅಕ್ಷರಸ್ಥರು ಹೆಮ್ಮೆ ಪಡುವಂತೆ
ಪದ್ಮಶ್ರೀ ಪುರಸ್ಕೃತಳಾದೆ.
ನೂರಾರು ಪುರಸ್ಕಾರಗಳಿಗೆ
ಭಾಜನಳಾದೆ ನರಸಮ್ಮ
ನೂರರ ಗಡಿ ದಾಟುವ
ಮುನ್ನವೇ ಮರೆಯಾದೆಯಮ್ಮ.
– ಶಿವಮೂರ್ತಿ.ಹೆಚ್
ಭಾವ ಭೈರಾಗಿ
ಕವಿತೆ | ಎದೆಯಾಚೆಗಿನ ತಲ್ಲಣ

- ಎಸ್. ರಾಜುಕವಿ ಸೂಲೇನಹಳ್ಳಿ
ರಸ್ತೆಯ ಇಕ್ಕೆಲಗಳಲ್ಲಿ ಯಾರದ್ದೋ ಜಾಗದಲ್ಲಿ
ಪರದೆಯ ಕಟ್ಟಿ ಬದುಕು
ಸಾಗಿಸುವ ಕುಟುಂಬಗಳು
ಕೂಗುಗಳಿವೆ ಕೇಳುವವರಿಲ್ಲ
ಚೆಂದದ ಯೋಜನೆಗಳಿವೆ
ಲೆಕ್ಕಕ್ಕೆ ಸೇರಿ ಮಧ್ಯದಲಿ
ಭಕ್ಷಕರ ಕೈ ಸೇರುತ್ತಿವೆ
ಇವಕ್ಕೆ ಕೈ ಚಾಚುವರೇ ಅಧಿಕ
ಪಿಂಚಣಿಗಾಗಿ ವರ್ಷದ ವೇತನ
ಅಡವಿಟ್ಟ ಜೀವಗಳಿಗೆ ತನ್ನಯ
ಉಸಿರು ನಿಲ್ಲುವಂತೆ ಮಾಡುವ
ದುರ್ಬಲ ವ್ಯವಸ್ಥೆ ಹಾಹಾಕಾರಿ
ಮಾನವರೇ ಎಲ್ಲ ಮರೆತಿಹರು
ಸೌಲಭ್ಯಗಳ ಹೆಸರೊಳಗೆ
ಹದ್ದಿನ ರೀತಿ ತಿನ್ನುವ ಶೂರರು
ಯಾರಿಗೆ ನ್ಯಾಯ ದೇವತೆಯೇ
ಕಣ್ಣೀರು ಹಾಕುತಿಹಳು ಶಿವನೇ
ಎಂತಹ ಕ್ರೂರ ಸ್ಥಿತಿ ಬಂದಿದೆ
ಹಸುಗೂಸು ಕಂದಮ್ಮಗಳ
ಮೇಲೆ ಮಾರಣಹೋಮ
ಬಲತ್ಕಾರಗಳು ಖಂಡಿಸುವರಿಲ್ಲ
ಸೂರಿಗಾಗಿ ಬಡಿದಾಡುವವರೇ
ಸಂಪತ್ತಿನ ಹುಚ್ಚುತನ
ಪ್ರೇಮವ ದೂರ ತಳ್ಳಿತು
ಯಾತಕ್ಕಾಗಿ ಈ ರೋದನೆ
ಇರುವುದೊಂದೇ ಜೀವ
ಯಾರಿಗೆ ಯಾರಿಲ್ಲ ಶೂನ್ಯವೇ
ಬಾಲ್ಯದಿ ಸುಖವ ಕಾಣದ
ಪುಟಾಣಿಗಳು ದುಡಿದು
ನಲುಗುತ್ತಿವೆ ಸಂತೈಸುವರಿಲ್ಲ
ಏನಿದು ಮುಜುಗರವು
ಅತಿಯಾದ ಧನದ ದಾಹಕ್ಕೆ
ಬಲಿಗಳಾಗಿ ಮಣ್ಣು ಸೇರಿತಿಹರು
ವಿನಾಶವೇ ಎಲ್ಲೆಡೆ ಪಸರಿದೆ
ಎಂದೂ ಈ ಘನ ಘೋರ
ಕೃತ್ಯಗಳಿಗೆ ಮುಕ್ತಿ ದೊರೆವದು
ಸರ್ವರಲಿ ಸಮಾನತೆ ಎದ್ದು ಹಂಬಲಿಸುವ ತನಕ ಸಿಗದು
ಅವರವರ ಪಾಲಿನದ್ದು ಕೊಡುವ ಆದೇಶಗಳು
ನೀತಿ ನಿಯತ್ತಿನಿಂದ ಪಾಲಿಸುವ
ಕಟ್ಟು ನಿಟ್ಟಿನ ಕ್ರಮ ಬಂದರಷ್ಟೇ
ನನ್ನ ಕಳ ಕಳಿ ಸಲ್ಲುವುದು
(ಎಸ್. ರಾಜುಕವಿ ಸೂಲೇನಹಳ್ಳಿ
ಕಾದಂಬರಿಕಾರ
ಮೊ: 9741566313)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಭಾವ ಭೈರಾಗಿ
ಮೋಡ ಹನಿಗೂಡುವ ಮುನ್ನ..!

- ಡಾ. ಸಿದ್ರಾಮ ಕಾರಣಿಕ,ಬರಹಗಾರರು, ಧಾರವಾಡ
ಸಾಹಿತ್ಯ ಎನ್ನುವುದು ಸಮಾಜದ ಪ್ರತಿಬಿಂಬ ಎನ್ನಲಾಗುತ್ತಿದೆ. ಸಮಾಜದಲ್ಲಿ ಕಂಡುಂಡ ಅನುಭವಗಳನ್ನೇ ಒಬ್ಬ ಬರಹಗಾರ ತನ್ನ ಬರಹದಲ್ಲಿ ಒಡಮೂಡಿಸುತ್ತಾನೆ. ರಮ್ಯ ಸಾಹಿತ್ಯದಲ್ಲಿ ಕಾಲ್ಪನಿಕತೆಗೆ ಹೆಚ್ಚು ಒತ್ತು ನೀಡಲಾಗಿದ್ದರೂ ಅಲ್ಲಿಯೂ ಸಮಾಜವನ್ನು ಬಿಟ್ಟು ಬರಹಗಾರ ಬೇರೆ ಏನನ್ನೂ ಬರೆಯಲಾರ.
ಯುವ ಕವಿಗಳ ಕವಿತೆಗಳಲ್ಲಿ ಕಾಲ್ಪನಿಕತೆಗೆ ಹೆಚ್ಚು ಅವಕಾಶ ಇರುವುದನ್ನು ನೋಡಬಹುದು. ವಾಸ್ತವಕ್ಕಿಂತ ಕಲ್ಪನೆಗೆ ಹೆಚ್ಚು ಮೊರೆ ಹೋಗುತ್ತಾರೆ. ಆ ವಯಸ್ಸೇ ಅಂಥದ್ದು. ಯುವಕವಿಗಳ ಮನಸ್ಸಿನಲ್ಲಿ ವಿಶೇಷವಾಗಿ ಪ್ರೀತಿ-ಪ್ರೇಮದ ಕಲ್ಪನೆಗಳು ಹೆಚ್ಚು. ಸಮಾಜದ ಸಮಸ್ಯೆಗಳ ಬಗ್ಗೆ ಅವರ ಗಮನ ಇದ್ದರೂ ಅದು ಅಷ್ಟೊಂದು ಪ್ರಾಮುಖ್ಯತೆ ಪಡೆದುಕೊಳ್ಳುವುದಿಲ್ಲ. ಒಂದು ಸಂಕಲನದಲ್ಲಿ ಕೇವಲ ಒಂದೆರಡು ಕವಿತೆಗಳನ್ನು ಸಮಾಜದ ಕುರಿತಾಗಿ ಇದ್ದು, ಉಳಿದ ಕವಿತೆಗಳು ಪ್ರೀತಿ-ಪ್ರೇಮದ ಉಯ್ಯಾಲೆಯಲ್ಲಿ ತೇಲಾಡುತ್ತ ಇರುತ್ತವೆ.
ದಾವಣಗೆರೆಯ ಷಕೀಬ್ ಕಣದ್ಮನೆ, ನನಗೆ ಗುರುತು-ಪರಿಚಯವಿಲ್ಲದ ಹುಡುಗ. ತನ್ನ ಕವನ ಸಂಕಲನಕ್ಕೆ ಮುನ್ನುಡಿ ಬೇಕೆಂದು ಗೆಳೆಯನ ಮೂಲಕ ಕೇಳಿಕೊಂಡಾಗ ನನಗೆ ಇಲ್ಲವೆನ್ನಲಾಗಲಿಲ್ಲ. ನಾನು ಮೊದಲಿನಿಂದಲೂ ಯುವ ಬರಹಗಾರರನ್ನು ಪ್ರೋತ್ಸಾಹಿಸುತ್ತ ಬಂದವನು. ಏನಾದರೂ ಬರೆಯಿರಿ ; ಮೊದಲು ಬರೆಯುವುದನ್ನು ರೂಢಿ ಮಾಡಿಕೊಳ್ಳಿ ಎಂದು ಹೇಳುತ್ತ ಬಂದವನು ನಾನು. ಹೀಗಾಗಿ ಸಹಜವಾಗಿಯೇ ಷಕೀಬ್ ಕಣದ್ಮನೆಯವರ ಕವಿತೆಗಳ ಕಟ್ಟನ್ನು ಕೈಗೆ ತೆಗೆದುಕೊಂಡೆ. ಯುವ ಮನಸ್ಸಿನ ಷಕೀಬ್ ಕಣದ್ಮನೆ ತುಂಬ ಉತ್ಸಾಹಿ ಯುವಕ ಎನ್ನುವುದು ಅವರ ಕವಿತೆಗಳ ಓದಿನಿಂದ ತಿಳಿಯಿತು.
ಸಹಜವಾಗಿಯೇ ಇಲ್ಲಿಯ ಬಹುತೇಕ ಕವಿತೆಗಳು ಪ್ರೀತಿ-ಪ್ರೇಮದ ಸುತ್ತಲೇ ಸುತ್ತಿದರೂ ಸಮಾಜದ ವಾಸ್ತವವನ್ನು ಕಂಡುಂಡ ಅನುಭವಗಳೂ ಆದ್ಯತೆ ಪಡೆದುಕೊಂಡಿವೆ. ರೈತ, ಕನ್ನಡತನ, ನಾಡು-ನುಡಿ, ವೀರ ಯೋಧರು, ಭಾರತೀಯತೆ, ಧರ್ಮ ಮೊದಲಾದ ವಿಷಯಗಳ ಮೇಲೂ ಕವಿತೆಗಳು ಪ್ರಸ್ತುತ ಸಂಕಲನದಲ್ಲಿ ಎಡೆ ಪಡೆದುಕೊಂಡಿವೆ. ಆದರೆ ಯಾವುದರ ಬಗ್ಗೆಯೂ ಹುಚ್ಚು ಆವೇಶವಿಲ್ಲ. ಎಲ್ಲವನ್ನೂ ಸಹಜವಾಗಿ ತೆಗೆದುಕೊಳ್ಳುವ ಮನೋಭಾವ ಎದ್ದು ಕಾಣುತ್ತದೆ.
ಅಂದರೆ ಬಂಡಾಯದ ಆಶಯಗಳು ತುಂಬ ವಿರಳ ಎನ್ನಬಹುದು. ನವೋದಯ ಸಂಪ್ರದಾಯದಲ್ಲಿ ಇಲ್ಲಿಯ ಕವಿತೆಗಳು ಸ್ಥಾನ ಪಡೆದುಕೊಂಡಿವೆ.
“ಧರ್ಮ ಧರ್ಮವೆಂದು ಹೊಡೆದಾಡುವರು
ಧರ್ಮದ ತತ್ವ ತಿಳಿಯದವರು
ಧರ್ಮದ ಸಾರವನ್ನು ಸಾರಿದರು
ಧರ್ಮವನ್ನು ಸ್ಥಾಪಿಸಿದವರು” (ಮೋಹ-ದಾಹ)
ಎನ್ನುವ ಮೂಲಕ ಭಾರತ ದೇಶದಲ್ಲಿ ಧರ್ಮ-ಧರ್ಮಗಳ ನಡುವೆ ದ್ವೇಷದ ವಾತಾವರಣ ಕಂಡುಬರುವುದನ್ನು ಗುರುತಿಸಿರುವ ಕವಿ ಧರ್ಮದ ಬಗ್ಗೆ ಹೊಡೆದಾಡುವುದು ವ್ಯರ್ಥ ಎಂಬ ಭಾವವನ್ನು ಹೊರ ಹಾಕುತ್ತಾರೆ.
ಬುದ್ಧ, ಬಸವಣ್ಣನ ನಾಡಿನಲ್ಲಿ ಈ ರೀತಿಯ ಹಿಂಸಾಚಾರ ಸರಿಯಲ್ಲ ಎನ್ನುವುದು ಕವಿಯ ಆಶಯವಾಗಿದೆ. ಯಾಕೆಂದರೆ ಭಾರತವೆಂದರೆ ಸಾಮರಸ್ಯದ ನಾಡೆಂದು ಹೆಸರು ಪಡೆದುಕೊಂಡಿದೆ. ವಿವಿಧತೆಯಲ್ಲಿ ಏಕತೆಯನ್ನು ಸಾರಿದ ಪುಣ್ಯಸ್ಥಳವಾಗಿದೆ ಎಂದು ಹೇಳಲಾಗುತ್ತದೆ.
“ಪ್ರೀತಿ ವಿಶ್ವಾಸಕ್ಕೆ ಪ್ರಾಣ ಕೊಡುವವರಿದ್ದಾರಿಂದು
ತಿಳಿಯಿರೆಲ್ಲರೂ ಭಾರತ ಹೃದಯವಂತರ ನಾಡೆಂದು
ಹೆಮ್ಮೆಯಿಂದ ಹೇಳುವೆ ನಾ
ಹಿಂದೂಸ್ಥಾನಿನ ಕಂದನೆಂದುು” (ಹಿಂದೂಸ್ಥಾನಿನ ಕಂದ)ಎನ್ನುವ ಮೂಲಕ ಭಾರತದ ಪರಂಪರೆ ಎಂಥದ್ದು ಎಂಬ ಪರಿಚಯವನ್ನು ಇಲ್ಲಿ ಕವಿಮನ ನೆನೆದಿದೆ.
“ದಯಮಾಡಿ ನೀ ಒಪ್ಪು
ಒಬ್ಬ ದೇಶಪ್ರೇಮಿ ಟಿಪ್ಪು
ಮತಾಂಧನೆದು ಮಾಡಬೇಡಿ ತಪ್ಪು
ಮೈಸೂರಿನ ಸುಲ್ತಾನ
ಬ್ರಿಟಿಷರಿಗೆ ಸೈತಾನ “(ಕರುನಾಡಿನ ವೀರ)
ಎಂದುಕೊಳ್ಳುತ್ತ ಎಲ್ಲವನ್ನು ಸಮರಸದಿಂದ ನೋಡುವ ಕವಿ ಇಲ್ಲಿ ಟಿಪ್ಪು ಸುಲ್ತಾನನನ್ನೂ ನೆನಪಿಸಿಕೊಂಡಿದ್ದಾರೆ. ಟಿಪ್ಪುವನ್ನು ಕೆಲವರು ಮತಾಂಧನೆಂದು ಹೇಳುತ್ತಾರೆ. ಆದರೆ ಟಿಪ್ಪು ನಿಜವಾಗಿಯೂ ದೇಶಪ್ರೇಮಿ ಎನ್ನುವ ಭಾವ ಇಲ್ಲಿ ಕಂಡುಬರುತ್ತದೆ ; ಇದು ನಿಜವೂ ಹೌದು.
“ಬುದ್ಧಿಜೀವಿಗಳೇ ಬುದ್ಧಿಗೇಡಿತನ ತೋರುವಾಗ
ಮೌಢ್ಯ ಮಾರಕ ಅರಿಯದಾಗಿದೆ
ಹುಳುಕು ಕೊಳಕು ಕೊಚ್ಚೆ ಮನಗಳ
ಮನುಜರಾಗಿ ಮನುಷ್ಯತ್ವ ಸಾರಿ
ಜಾತಿಮತದ ಗೀಳು ಮರೆತು
ದಯಮಾಡಿ ಬಾಳಲು ಬಿಡಿ ಎಲ್ಲರೊಳಗೊಂದಾಗಿ” (ಹೀಗೇಕೆ…?) ಅಂದರೆ ಕೆಲವು ಬುದ್ಧಿಜೀವಿಗಳು ಎನಿಸಿಕೊಂಡವರು ಜಾತಿಮತದ ಹೆಸರಿನಲ್ಲಿ ಕೆಸರೆರಚಾಟ ನಡೆಸುತ್ತಿದ್ದು ; ಇದು ಸಲ್ಲದು. ನಾವೆಲ್ಲರೂ ಒಂದು, ಮನುಷ್ಯತ್ವದ ಮನುಜರಾಗೋಣ ಎನ್ನುವ ಮೂಲಕ ಕವಿ ಮನ ಇಲ್ಲಿ ಸಾಮರಸ್ಯದ ಬದುಕಿಗೆ ಹಾರೈಸಿದೆ.
ಪ್ರೀತಿ-ಪ್ರೇಮದ ಬಗ್ಗೆಯೂ ಕವಿ ಹೆಚ್ಚಿನ ಆಸ್ಥೆಯನ್ನು ಹೊಂದಿದ್ದಾರೆ. ತಾನು ಪ್ರೀತಿಸುವ ಹುಡುಗಿ ಎಂಥವಳೆಂದು ಹೇಳುತ್ತ,
“ಮುತ್ತಿನಂಥ ನಮ್ ಕನ್ನಡಾನೇ ಮಾತಾಡ್ತಾಳೆ
ಬಣ್ಣಲಿ ಸ್ವಲ್ಪ ಕಪ್ಪು ಆದ್ರ ಮನ್ಸಲ್ಲಿ ಮಾತಲ್ಲಿ ಗುಣದಲ್ಲಿ ಬೆಳ್ಳಿ
ಇವಳೇ ನನ್ನ ಹೃದಯ ಕದ್ದ ಕಳ್ಳಿ
ಕನಸಲ್ಲಿ ಬಂದೋದಾಗ ನಾಗವಲ್ಲಿ
ಕಣ್ಮುಂದೆ ಕಂಡಾಗ ಮಿಂಚುಳ್ಳಿ “( ಮಿಂಚುಳ್ಳಿ )
ಎನ್ನುವ ಮೂಲಕ ತಮ್ಮ ಕನಸಿನ ರಾಣಿಯನ್ನು ವರ್ಣಿಸುತ್ತಾರೆ. ಇದ್ದುದ್ದನ್ನು ಇದ್ದಂತೆ ಹೇಳುವ ಈ ಪರಿ ನಿಜಕ್ಕೂ ಶ್ಲಾಘನೀಯ. ಅವರು ಪ್ರೀತಿಸಿದ ಹುಡುಗಿ ಅವರಿಗೆ ದೊರೆಯಲಿ ಎಂದು ಹಾರೈಸುವೆ. ಯಾಕೆಂದರೆ ಕವಿ ಆಕೆಯನ್ನು ಸಿಕ್ಕಾಪಟ್ಟೆ ಪ್ರೀತಿಸುತ್ತಾರೆ.
“ಹ್ಯಾಂಗ ಮರೆಯಲಿ ಗೆಳತಿ
ನಿನ್ನ ನಾ ಹ್ಯಾಂಗ ಮರೆಯಲಿ
ಕುಂತರೂ ನಿಂದೆ ನೆನಪು
ನಿಂತರೂ ನಿಂದೆ ನೆನಪು
ನನ್ನ ಮನಸೂರೆ ಮಾಡಿತು
ಆ ನಿನ್ನ ಕಣ್ಣ ಹೊಳಪು
ಹ್ಯಾಂಗ ಮರೆಯಲಿ ಗೆಳತಿ
ನಿನ್ನ ನಾ ಹ್ಯಾಂಗ ಮರೆಯಲಿ”ಎಂದು ಕವಿ ಅಲವತ್ತುಕೊಂಡಿದ್ದಾರೆ.
ಆದರೆ ತನಗೆ ಕವಿತೆ ಬರೆಯಲು ಪ್ರೇರಣೆ ನೀಡಿದ್ದು ಮಾತ್ರ ತನ್ನ ತಂಗಿಯೇ ಎಂಬುದನ್ನು ಕವಿ ಇಲ್ಲಿ ಸ್ಪಷ್ಟಪಡಿಸುತ್ತಾರೆ. ಕಾವ್ಯ ರಚಿಸು ಎಂದು ಹೇಳಿ,
“ನಾ ಕವಿಯಾಗಲು ಸ್ಫೂರ್ತಿಯಾದವಳು
ಇಂಪಾದ ಸಂಗೀತಕ್ಕೆ ಶೃತಿಯಾದವಳು
ಚಂದ್ರನ ಬೆಳದಿಂಗಳಂತೆ ಮಿಂಚುವಳಿವಳು
ಅವಳೇ ನನ್ನ ಪ್ರೀತಿಯ ತಂಗಿ ತಂಜುಮ್” (ತಂಜುಮ್) ಎನ್ನುವ ಮೂಲಕ ತನ್ನ ತಂಗಿ ತಂಜುಮ್ಳೇ ತನ್ನ ಕಾವ್ಯ ಬರವಣಿಗೆಗೆ ಸ್ಫೂರ್ತಿ ಎಂದು ಕವಿ ಹೇಳಿಕೊಂಡಿದ್ದಾರೆ. ಹೀಗೆ ಕವಿ ತನ್ನ ಮನದಾಳವನ್ನು ಬೇರೆ ಬೇರೆ ಭಾವಗಳಲ್ಲಿ ಕವಿತೆಯಾಗಿಸಿ ಈ ಸಂಕಲನವನ್ನು ಹೊರತರುತ್ತಿದ್ದಾರೆ. ಇಲ್ಲಿರುವ ಹಲವಾರು ಕವಿತೆಗಳು ಭಿನ್ನ ಭಿನ್ನ ನಿಲುವಿನಲ್ಲಿ ಮೂಡಿನಿಂತಿವೆ.
ಜ್ಞಾನಪೀಠಗಳ ಹೃದಯ, ಸೈನಿಕರಿಗೆ ನಮನ, ಭಾರತೀಯ, ಬರ, ಅನ್ನದಾತರಿಗೊಂದು ಸಲಾಂ, ಕಲಿಕೆಗೆ ಕೊನೆ ಇಲ್ಲ, ಕಡಕ್ ನೈನ್ ಟೀ, ಮುಗ್ಧ ಮನಸು, ನನ್ನೂರು ನವಿಲೂರು, ಮಮತೆಯ ಮಡಿಲು, ಬೆತ್ತಲು, ಕೊನೆ ನಿರ್ಣಯ, ಮೌನ ರಾಗ ಮೊದಲಾದ ಕವಿತೆಗಳು ಗಮನ ಸೆಳೆಯುತ್ತವೆ.
ಉದಯೋನ್ಮುಖ ಕವಿಯಾಗಿ ಹೊರಹೊಮ್ಮುತ್ತಿರುವ ಷಕೀಬ್ ಕಣದ್ಮನೆ ಇನ್ನೂ ಹೆಚ್ಚು ಹೆಚ್ಚು ಓದಿನ ಮೂಲಕ ವಾಸ್ತವವನ್ನು ಗ್ರಹಿಸಿ ಇನ್ನೂ ಹೆಚ್ಚೆಚ್ಚು ಕವಿತೆಗಳನ್ನು ರಚಿಸಲಿ, ಪದಗಳ ಲಾಲಿತ್ಯವನ್ನು ಮೈಗೂಡಿಸಿಕೊಂಡು ಒಳ್ಳೆಯ ಕವಿಯಾಗಲಿ, ಕನ್ನಡ ಸಾಹಿತ್ಯ ಲೋಕದಲ್ಲಿ ಅವರ ಹೆಸರು ಮುನ್ನೆಲೆಗೆ ಬರಲಿ ಎಂದು ಹಾರೈಸುತ್ತೇನೆ.
(ಷಕೀಬ್ ಎಸ್.ಕಣದಮನೆ ನವಿಲೇಹಾಳ್ ಅವರ ‘ಮೋಹದ ಮೋಡಗಳು‘ ಕವನಸಂಕಲನದ ಮುನ್ನುಡಿ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಭಾವ ಭೈರಾಗಿ
ಕವಿತೆ | ಬದಲಾವಣೆ ಕಾಣದ ಹೊಸವರ್ಷ

ಎಷ್ಟು ವರ್ಷಗಳು ಉರುಳಿದರೇನು
ಬದಲಾಗದ ಈ ಭಾರತದಲ್ಲಿ
ಋತುಗಳು ಬದಲಾದಂತೆ
ಹೊಸ ವರ್ಷವೆಂಬ ನಾಮದಡಿಯಲ್ಲಿ
ಮತ್ತೆ ಮತ್ತೆ ಸ್ವಾಗತಿಸಿ
ಸಂಭ್ರಮಿಸುತ್ತಿದ್ದೇವೆ…
ಬದಲಾಗಿರುವುದು ಮಾತ್ರ
ಬಣ್ಣ ಬಣ್ಣದ ಮಾತುಗಳು
ಬಣ್ಣ ಬಣ್ಣದ ಪೋಷಾಕುಗಳು
ವರ್ಣಮಯ ಚಿತ್ರಗಳು
ಶತಶತಮಾನಗಳು ಜಾರಿವೆ
ಹೊಸ ವರ್ಷವೆಂಬ
ಅದೆಷ್ಟೋ ನಾಳೆಗಳಲ್ಲಿ
ಇನ್ನೂ ಜೀವಂತವಿರುವ ದಿನಗಳಲ್ಲಿ
ಬದಲಾವಣೆಯೇ ಕಾಣದ
ಧರ್ಮಗಳು
ಸಮಾನತೆಯ ಪಾಲಿಸದ
ಜಾತಿಗಳು
ಸಹಬಾಳ್ವೆಯೇ ಇಲ್ಲದ
ಸಮಾಜಗಳು
ಬೇರು ಸಹಿತ ನಶಿಸದ
ಮೂಢ ನಂಬಿಕೆಗಳು
ಮತ್ತದೇ ಹೊಸ ವರ್ಷ
ಮತ್ತದೇ ಸಂಭ್ರಮ
ಹಾಳು ಸಂಪ್ರದಾಯಗಳು ಎಂದಿನಂತೆ
ಯುಗ ಯುಗಾಂತರಗಳು ಮಾಸಿವೆ
ದಿನಕರನ ಏರಿಳಿತಗಳಲ್ಲಿ
ಹೊಸ ವರ್ಷವೆಂಬ ಹಿನ್ನಾಳೆಗಳು
ಭಾಸ್ಕರನ ಉದಯವೇ ಬೆಳಗು
ಅಸ್ತಮವೇ ಮಂದಾತ್ರಿ
ಓದಿಲ್ಲ , ಬರಹವಿಲ್ಲ, ಜ್ಞಾನವಿಲ್ಲ
ಜೀವನ ಪರ್ಯಂತ
ಜೀತದಿಂದಲೇ ಬದುಕು
ನೂತನ ವರ್ಷವೆಂಬುದು
ಆಗಸದ ಚಂದ್ರಮನಂತೆ
ಅಸಮಾನತೆ, ಜಾತಿವರ್ಣಗಳು ಸಿದ್ಧ
ಇಂದು, ಸರ್ವರೂ ಜ್ಞಾನಿಗಳು
ಪಂಡಿತರು, ಬುದ್ಧಿವಂತರು
ಆದರೂ ಜಾತಿಭೇದ, ವರ್ಣಭೇದ
ಆಹಾರ ಭೇದ, ಭಾಷೆಭೇದ
ಮತ್ತೇಕೆ ಹೊಸವರ್ಷವೆಂಬ ನಾಟಕ
ಆಚರಿಸಿ ಪಾಶ್ಚಾತ್ಯ ಸಂಸ್ಕೃತಿ
ಬದಲಾಗಲಿ ಅವರಂತೆ ಸಂತತಿ
ಬದಲಾಗಿ ತೋರಿಸಲಿ ಭಾರತ
ಹೊಸವರ್ಷಕ್ಕೆ ಸಲ್ಲಲಿ ಸಂತಸ
–ಮಹದೇವ್ ಬಿಳುಗಲಿ
9611339024
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಂದ ಸಂಗೀತ ನೃತ್ಯ ತರಬೇತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ಜಗಳೂರು | ಮ್ಯಾಸ ನಾಯಕ ಬುಡಕಟ್ಟು ಜನಾಂಗದ ಸಮಿತಿಯಿಂದ ದೇವರ ಎತ್ತುಗಳಿಗೆ ಮೇವು ಸಂಗ್ರಹಣೆ
-
ದಿನದ ಸುದ್ದಿ6 days ago
ಹುಬ್ಬಳ್ಳಿ- ಧಾರವಾಡ ಬೈಪಾಸ್ ರಸ್ತೆಯಲ್ಲಿ ಸಂಚಾರಿ ನಿಯಮಗಳ ಪಾಲನೆಗೆ ಕಟ್ಟುನಿಟ್ಟಿನ ಕ್ರಮ : ಜಿಲ್ಲಾಧಿಕಾರಿ ನಿತೇಶ ಪಾಟೀಲ
-
ದಿನದ ಸುದ್ದಿ6 days ago
ಸಂತೇಬೆನ್ನೂರು | ರಾಷ್ಟ್ರಪತಿ ಪದಕ ಪ್ರಶಸ್ತಿ ವಿಜೇತ ನಿವೃತ್ತ ಎ.ಸಿ.ಪಿ ರುದ್ರಪ್ಪ ಎಮ್ ಎನ್. ಅವರಿಗೆ ಗ್ಯಾಲಕ್ಸಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಭಿನಂದನಾ ಕಾರ್ಯಕ್ರಮ
-
ದಿನದ ಸುದ್ದಿ5 days ago
ದಾವಣಗೆರೆ | 120 ಕೋಟಿ ವೆಚ್ಚದಲ್ಲಿ ನೂತನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ನಿರ್ಮಾಣ : ಸಂಸದ ಜಿ.ಎಂ.ಸಿದ್ದೇಶ್ವರ
-
ದಿನದ ಸುದ್ದಿ5 days ago
ಕೆಎಸ್ಆರ್ಟಿಸಿ ನೌಕರರು ಆತಂಕಕ್ಕೆ ಒಳಗಾಗುವುದು ಬೇಡ : ಸಾರಿಗೆ ಸಚಿವ ಲಕ್ಷ್ಮಣ ಸವದಿ ಭರವಸೆ
-
ದಿನದ ಸುದ್ದಿ6 days ago
ಮಹಾಜನ್ ವರದಿಯೇ ಅಂತಿಮ ; ಉದ್ಭವ್ ಠಾಕ್ರೆ ಉದ್ಧಟ ನುಡಿಗೆ ಯಡಿಯೂರಪ್ಪ ತಿರುಗೇಟು
-
ದಿನದ ಸುದ್ದಿ6 days ago
ಈ ಶೈಕ್ಷಣಿಕ ವರ್ಷದಿಂದ ಹೊಸ ಕೇಂದ್ರೀಯ ವಿದ್ಯಾಲಯ ಆರಂಭಕ್ಕೆ ಕ್ರಮ : ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ