Connect with us

ದಿನದ ಸುದ್ದಿ

ಗ್ರಾಮೀಣ ಪತ್ರಕರ್ತರಿಗೆ ಜಿಲ್ಲಾ ಬಸ್ ಪಾಸ್: ಆನ್‌ಲೈನ್ ಅರ್ಜಿ ಆಹ್ವಾನ

Published

on

ಸುದ್ದಿದಿನ,ಬೆಂಗಳೂರು:ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿತ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ಯೋಜನೆಗೆ ಅರ್ಹ ಪತ್ರಕರ್ತರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಮುಖ್ಯಮಂತ್ರಿಗಳು 2024-25 ನೇ ಸಾಲಿನ ಆಯವ್ಯಯದಲ್ಲಿ ಈ ಯೋಜನೆ ಘೋಷಿಸಿದ್ದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ವಿದ್ಯುನ್ಮಾನ ಅಥವಾ ಮುದ್ರಣ ಮಾಧ್ಯಮಗಳಲ್ಲಿ ಪೂರ್ಣಾವಧಿಗೆ ನೇಮಕಗೊಂಡು 4 ವರ್ಷಗಳ ಸೇವಾನುಭವ ಹೊಂದಿರುವ ಪತ್ರಕರ್ತರು ಅರ್ಜಿ ಸಲ್ಲಿಸಬಹುದು. ನೇಮಕಾತಿ ಆದೇಶ/ವೇತನ ಪತ್ರ/ಬ್ಯಾಂಕ್ ಸ್ಟೇಟ್‌ಮೆಂಟ್ ಗಳಲ್ಲಿ ಯಾವುದಾದರೂ ದಾಖಲೆಗಳನ್ನು ಸೇವಾನುಭವಕ್ಕಾಗಿ ಒದಗಿಸಬೇಕು.

ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸುವ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಜಿಲ್ಲಾ ವ್ಯಾಪ್ತಿಗೆ ಉಚಿತವಾಗಿ ಸಂಚರಿಸಬಹುದು.ತಹಸೀಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರ ಒದಗಿಸಬೇಕು.

ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವ ವರದಿಗಾರರಿಗೆ ಪ್ರತಿ ತಾಲ್ಲೂಕಿಗೆ ಸಂಪಾದಕರು ಸೂಚಿಸುವ ಒಬ್ಬರಿಗೆ, ಜಿಲ್ಲಾ ಮಟ್ಟದ ಪತ್ರಿಕೆಗಳು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಒಬ್ಬರಿಗೆ, ಆರು ಪುಟಗಳಲ್ಲಿ ಪ್ರಕಟವಾಗುವ ಪ್ರಾದೇಶಿಕ ಪತ್ರಿಕೆಗಳು ಓರ್ವ ವರದಿಗಾರರು ಹಾಗೂ ಓರ್ವ ಫೋಟೋಗ್ರಾಫರ್ ಎಂಟು ಅಥವಾ ಹೆಚ್ಚು ಪುಟಗಳಲ್ಲಿ ಪ್ರಕಟವಾಗುವ ಪ್ರಾದೇಶಿಕ ಪತ್ರಿಕೆಗಳು ಇಬ್ಬರು ವರದಿಗಾರರು ಹಾಗೂ ಓರ್ವ ಫೋಟೋಗ್ರಾಫರ್‌ಗೆ ಬಸ್ ಪಾಸ್ ಪಡೆಯಲು ಅವಕಾಶವಿದೆ.

ಉಪಗ್ರಹ ಆಧಾರಿತ ವಿದ್ಯುನ್ಮಾನ ವಾಹಿನಿಗಳ ವರದಿಗಾರರು ತಾಲೂಕು ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಪ್ರತಿ ತಾಲ್ಲೂಕಿಗೆ ಓರ್ವ ಕ್ಯಾಮರಾಮ್ಯಾನ್ ಹಾಗೂ ಓರ್ವ ವರದಿಗಾರರು ಬಸ್ ಪಾಸ್ ಪಡೆಯಬಹುದಾಗಿದೆ.

ದಿನಪತ್ರಿಕೆಗಳು ಹಾಗೂ ಉಪಗ್ರಹ ಸುದ್ದಿ ವಾಹಿನಿಗಳ ಸಂಪಾದಕರು ನೀಡುವ ನೇಮಕಾತಿ ಪತ್ರ ಹಾಗೂ ಶಿಫಾರಸ್ಸು ಆಧರಿಸಿ ಅರ್ಹ ಪತ್ರಕರಿಗೆ ಬಸ್ ಪಾಸ್‌ಗಳನ್ನು ನೀಡಲಾಗುವುದು.

ಆಸಕ್ತ ಹಾಗೂ ಅರ್ಹ ಪತ್ರಕರ್ತರು ತಮ್ಮ ಸಮೀಪದ ಗ್ರಾಮ ಒನ್,ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ತೆರಳಿ ಸೇವಾಸಿಂಧು ಪೋರ್ಟಲ್‌‌ ‌ನಲ್ಲಿ ಆನ್‌ಲೈನ್ ಮೂಲಕ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು.ಅಪ್‌ಲೋಡ್ ಮಾಡಿದ ದಾಖಲೆಗಳು ಹಾಗೂ ಆನ್‌ಲೈನ್ ಅರ್ಜಿಯ ಮುದ್ರಿತ ಪ್ರತಿಯನ್ನು ತಮ್ಮ ಜಿಲ್ಲೆಯ ಜಿಲ್ಲಾ ವಾರ್ತಾಧಿಕಾರಿಗಳ ಕಚೇರಿಗೆ ಸ್ವಯಂ ದೃಢೀಕರಿಸಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಕವಿತೆ | ಒಂಟಿಯಾನದ ಸರಕು

Published

on

 

~ಹೊನ್ನಪ್ಪ. ನೀ. ಕರೆಕನ್ನಮ್ಮನವರ

 

ಗೌಜು ಗದ್ದಲವ ಸೀಳಿದ
ನಿಶ್ಯಬ್ದ ‘ಮೌನ’
ಹಾದಿಯಾಗಿ ಮಲಗಿದೆ
ತನ್ನೆದೆಗೆ ತಾ ಸಾಕ್ಷಿಯಾಗಿ
ತುಳಿದ ಹೆಜ್ಜೆಗಳ ಗೊಡವೆ ಬಿಟ್ಟು

ಕಣ್ಣಿಗಂಟಿದ ಬೆಳಕಷ್ಟೇ
ಗುರಿ ತೋರುವ ಕಂದೀಲು
ಕಾಣದೂರಿನ ಹಂಬಲಕೆ
ಸಂಪ್ರದಾಯದ ಚಾಳಿಸು
ಹಾಕಿಕೊಂಡೇ ಹೆಣ್ಣೆದೆಗೆ
ಇಣುಕುವ ಮೀಸೆಯಂಚಿನ
ತುಟಿಯ  ಕುಹಕಗಳು
ದೂರಿ ದೂರಿ ದೂರವೇ ನಿಲ್ಲುತ್ತವೆ
ರಸ್ತೆಯ ಇಕ್ಕೆಲಗಳ  ಮರದಂತೆ..
ನಗ್ನ ಸತ್ಯ ಅರಿಯದ ಪ್ರತಿಮೆಗಳಾಗಿ..!

ವಕಾಲತ್ತು ಹೂಡುವವರಾರಿಲ್ಲಿ..?
ಕಟಕಟೆಯಿಂದ ಜಾರಿ ಬಿದ್ದ
ಕೂಡಲೇ ತೀರ್ಪು ಆಡಿಕೊಳ್ಳುವವರ
ಬಾಯಲ್ಲಿ ಆಹುತಿಯಾಗುವುದಂತೆ..!

ಒಂದು ಪ್ರಶ್ನೆಯ ಉತ್ತರಕಿಲ್ಲಿ
ಸಾವಿರ ಪ್ರಶ್ನೆಗಳೇ ಹುಟ್ಟುತ್ತವೆ
ಕಿವುಡರಾಗಿಯೇ ನಡೆಯಬೇಕು
ಅಸಂಬದ್ಧತೆಯನ್ನು ಮೀರದ
ಈ ಲೋಕದೊಳಗೆ,

ಅದೆಷ್ಟು ಅಳೆದಳೆದು
ತೂಗಿದರೇನು
ಕೊನೆ ಇರದ ಈ ಏಕಾಂತ..?
ಆದರೂ ಒಂಟಿಯೇನಲ್ಲ ಬಿಡಿ
ನನ್ನೊಳಗೆ ನಾನಿರುವಾಗ..!

ಅಷ್ಟೇ ಏಕೆ..?
ಅಲ್ಲಿ ಯಾರದೋ ಕಾಲಿಗೆ ಸಿಕ್ಕು
ನಲುಗಿದ ಗುಲಾಬಿ ಎಸಳು
ನಡುರಸ್ತೆಯಲಿ ತಾಳಿ
ಕಿತ್ತುಕೊಂಡವನಿಂದ
ಕೈಜಾರಿ ಬಿದ್ದ ಕರಿಮಣಿ
ತೆವಲು ತೀರಿದ ಬಳಿಕ
ಇರಿದ ರಕ್ತದ ಕಲೆ
ದಾರಿಯುದ್ಧಕ್ಕೂ
ನನಗೆ ಜಾಹೀರಾತಾಗಿರುವಾಗ

ಕಾಲಿನಿಂದ  ನಡೆದವರಿಗಿಂತ
ತಲೆಯಿಂದ ನಡೆದವರೇ
ಹೆಚ್ಚು ಆಪ್ತ ಮೈಲುಗಲ್ಲುಗಳಾಗುತ್ತಾರೆ
ಈ ಸುಡುವ  ದಾರಿಯಲ್ಲಿ  ನನಗೀಗ..!

 

~ಹೊನ್ನಪ್ಪ. ನೀ. ಕರೆಕನ್ನಮ್ಮನವರ, ಶಿಕ್ಷಕರು,9986334154

 

Continue Reading

ದಿನದ ಸುದ್ದಿ

ಕಾರಾಗೃಹಗಳ ಇಲಾಖೆ ನೇಮಕಾತಿ ಪರೀಕ್ಷೆ : 4,697 ಅಭ್ಯರ್ಥಿಗಳು ಹಾಜರು

Published

on

ಸುದ್ದಿದಿನ,​ದಾವಣಗೆರೆ:ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಕಾರಾಗೃಹಗಳ ಇಲಾಖೆಯ ನೇಮಕಾತಿಗಾಗಿ ಇಂದು ನವೆಂಬರ್ 21 ನಡೆದ ಸ್ಪರ್ಧಾತ್ಮಕ ಪರೀಕ್ಷೆಗೆ ದಾವಣಗೆರೆ ನಗರದ 11 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 4,697 ಅಭ್ಯರ್ಥಿಗಳು ಹಾಜರಾಗಿದ್ದಾರೆ.

​ನಗರದ ವಿವಿಧ 11 ಪದವಿಪೂರ್ವ ಕಾಲೇಜುಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಪರೀಕ್ಷೆಗೆ ಒಟ್ಟು 6,505 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಇದರಲ್ಲಿ 4,697 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, 1,808 ಅಭ್ಯರ್ಥಿಗಳು ಗೈರುಹಾಜರಾಗಿದ್ದು ಸುಗಮವಾಗಿ ಪರೀಕ್ಷೆ ನಡೆದಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ತಿಳಿಸಿದ್ದಾರೆ.

Continue Reading

ದಿನದ ಸುದ್ದಿ

ದಾವಣಗೆರೆ ವಿಶ್ವವಿದ್ಯಾಲಯ ಕುಲಸಚಿವ ಎಸ್.ಬಿ ಘಂಟಿ ವಿರುದ್ಧ ಲೋಕಾಗೆ ದೂರು

Published

on

ದಾವಣಗೆರೆ, ಸುದ್ದಿದಿನ; ಸುಳ್ಳು ಮಾಹಿತಿ ನೀಡಿ ದಾವಣಗೆರೆ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರಾಗಿ ನಾಮ ನಿರ್ದೇಶನಗೊಂಡಿರುವ ಸುರೇಶ್ ಎಸ್, ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಂತೆಬೆನ್ನೂರು ಇವರು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುವ ಅವಧಿಯನ್ನು ಸೂಕ್ತ ತನಿಖೆಗೆ ಒಳಪಡಿಸಿ, ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿ ನಿಗಧಿತ ಕಾಲಾವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವರಾದ ಶ್ರೀ ಎಸ್.ಬಿ ಘಂಟಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ದಾವಣಗೆರೆ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಪದವಿ ಕಾಲೇಜುಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಒಟ್ಟು 8 ಹಿರಿಯ ಪ್ರಾಂಶುಪಾಲರುಗಳನ್ನು ಸೇವಾ ಹಿರಿತನದ ಆಧಾರದ ಮೇಲೆ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿರುತ್ತದೆ. ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿನ ಸದಸ್ಯತ್ವ ಸ್ಥಾನಕ್ಕೆ ಪ್ರಾಂಶುಪಾಲರಾಗಿ ಸಲ್ಲಿಸಿದ ಸೇವಾ ಹಿರಿತನವೇ ಪ್ರಮುಖ ಮಾನದಂಡವಾಗಿರುತ್ತದೆ.

ಆದರೆ ಸುರೇಶ್ ಎಸ್, ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಂತೆಬೆನ್ನೂರು ಇವರು ನೀಡಿರುವ ಮಾಹಿತಿಯಲ್ಲಿ ದಿನಾಂಕ: 31-05-2025 ರ ವೇಳೆಗೆ 11 ವರ್ಷ 5 ತಿಂಗಳು 11 ದಿನಗಳ ಕಾಲ ಪ್ರಾಂಶುಪಾಲರಾಗಿ ಸೇವೆಯನ್ನು ಸಲ್ಲಿಸಿರುವಂತೆ ವಿಶ್ವವಿದ್ಯಾಲಯಕ್ಕೆ ಮಾಹಿತಿ ನೀಡಿರುತ್ತಾರೆ. ಈ ಬಗ್ಗೆ ಅನುಮಾನ ವ್ಯಕ್ತವಾಗಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ದಾವಣಗೆರೆ ವಿಶ್ವವಿದ್ಯಾಲಯ ಇವರಿಂದ ಪಡೆದ ದೃಢೀಕೃತ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಸುರೇಶ್ ಎಸ್. ಇವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಳಲ್ಕೆರೆ ಇಲ್ಲಿ ದಿನಾಂಕ: 19-11-2019 ರಿಂದ 30-04-2022 ರವರೆಗೆ ಒಟ್ಟು 2 ವರ್ಷ 09 ತಿಂಗಳುಗಳ ಸೇವೆಯನ್ನು ಸಲ್ಲಿಸಿದ್ದು, ನಂತರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಂತೆಬೆನ್ನೂರು ಇಲ್ಲಿ ದಿನಾಂಕ: 26-11-2025 ರಿಂದ ಪ್ರಭಾರ ಪ್ರಾಂಶುಪಾಲರಾಗಿ ಸೇವೆಯನ್ನು ಮುಂದುವರೆಸಿರುತ್ತಾರೆ.

ದಿನಾಂಕ: 31-05-2026 ರ ವೇಳೆಗೆ ಸುರೇಶ್ ಎಸ್. ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಂತೆಬೆನ್ನೂರು ಇವರು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಒಟ್ಟು ಅವಧಿಯು 3 ವರ್ಷ, 3 ತಿಂಗಳು ಮಾತ್ರವೇ ಆಗಿರುತ್ತದೆ. ಆದರೆ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿಗೆ ನಾಮನಿದೇರ್ಶನಗೊಳ್ಳಲು ನೀಡಿದ ಮಾಹಿತಿಯಲ್ಲಿ ದಿನಾಂಕ: 31-05-2026 ರ ವೇಳೆಗೆ 11 ವರ್ಷ 5 ತಿಂಗಳು 11 ದಿನಗಳ ಕಾಲ ಪ್ರಾಂಶುಪಾಲರಾಗಿ ಸೇವೆಯನ್ನು ಸಲ್ಲಿಸಿರುವಂತೆ ಮಾಹಿತಿ ನೀಡಲಾಗಿರುತ್ತದೆ.

ಆದ್ದರಿಂದ ಅಧಿಕೃತ ದಾಖಲೆಗಳನ್ನು ಲಗತ್ತಿಸಿ ದಿನಾಂಕ: 11-09-2026 ರಂದು ಕುಲಸಚಿವರು, ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ ಇವರಿಗೆ ದೂರು ನೀಡಿ ಸುಳ್ಳು ಮಾಹಿತಿ ನೀಡಿ ದಾವಣಗೆರೆ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರಾಗಿ ನಾಮ ನಿರ್ದೇಶನಗೊಂಡಿರುವ ಸುರೇಶ್ ಎಸ್, ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಂತೆಬೆನ್ನೂರು ಇವರು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುವ ಅವಧಿಯನ್ನು ಸೂಕ್ತ ತನಿಖೆಗೆ ಒಳಪಡಿಸಿ, ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕೋರಲಾಗಿತ್ತು. ನಿಗಧಿತ ಕಾಲಾವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ದಿನಾಂಕ: 19-10-2026 ರಂದು ಜ್ಞಾಪನವನ್ನು ಸಹ ನೀಡಲಾಗಿರುತ್ತದೆ.

ಆದರೆ ದೂರು ಸಲ್ಲಿಸಿ 2 ತಿಂಗಳು ಕಳೆದರೂ ಕುಲಸಚಿವರು, ದಾವಣಗೆರೆ ವಿಶ್ವವಿದ್ಯಾಲಯ ಇವರು ಕೈಗೊಂಡ ಕ್ರಮದ ವರದಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ನಿರ್ಲಕ್ಷö್ಯ ತೋರಿದ್ದು, ಸುಳ್ಳು ಮಾಹಿತಿ ನೀಡಿದ ಅಧಿಕಾರಿಯನ್ನು ರಕ್ಷಿಸುವ ಪ್ರಯತ್ನಕ್ಕೆ ಮುಂದಾಗಿರುವುದು ಮೇಲ್ನೋನಿರ್ಲಕ್ಷ್ಯದಿರುವ ಕಾರಣ ಕುಲಸಚಿವ ಎಸ್.ಬಿ ಘಂಟಿ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂಬುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

Continue Reading

Trending