ದಿನದ ಸುದ್ದಿ
ಭಕ್ತ ಕನಕದಾಸ: ಚಲನಚಿತ್ರದಲ್ಲಿ ವಾಸ್ತವ ಮತ್ತು ಉತ್ಪ್ರೇಕ್ಷೆ
- ರಂಗನಾಥ ಕಂಟನಕುಂಟೆ
‘ಭಕ್ತ ಕನಕದಾಸ’(1960) ಆರು ದಶಕಗಳ ಹಿಂದೆ ನಿರ್ಮಾಣವಾಗಿರುವ ಚಲನಚಿತ್ರ. ಇದು ವೈ. ಆರ್. ಸ್ವಾಮಿ ನಿರ್ದೇಶನದ ಕನಕದಾಸರ ಜೀವನ ಕುರಿತಾದ ಕಪ್ಪು ಬಿಳುಪಿನ ಕನ್ನಡದ ಚಿತ್ರ. ಈ ಚಿತ್ರದಲ್ಲಿ ಕನಕದಾಸರ ಪಾತ್ರವನ್ನು ಡಾ. ರಾಜಕುಮಾರ್ ಅವರು ಅಭಿನಯಿಸಿದ್ದು ಚಿತ್ರ ಅದ್ಭುತವಾಗಿದೆ. ಕನಕನ ಭಕ್ತಿ ಬದುಕಿನ ವ್ಯಕ್ತಿತ್ವವನ್ನು ಕಟ್ಟಿಕೊಡಲು ಚಿತ್ರದಲ್ಲಿ ಯತ್ನಿಸಲಾಗಿದೆ.
ಕನ್ನಡದ ಆರಂಭ ಕಾಲದ ಚಿತ್ರಗಳ ‘ಯುಗಧರ್ಮ’ವನ್ನು ಅವಲೋಕಿಸಿದರೆ ಆ ಕಾಲಘಟ್ಟದಲ್ಲಿ ಪೌರಾಣಿಕ ಕಥೆಗಳು, ಐತಿಹಾಸಿಕ ಘಟನೆಗಳು ಮತ್ತು ವ್ಯಕ್ತಿಗಳನ್ನು ಕುರಿತು ಹೆಚ್ಚು ಭಕ್ತಿಪ್ರಧಾನ ಚಿತ್ರಗಳನ್ನು ನಿರ್ಮಿಸಲಾಗಿದೆ. ಉದಾಹರಣೆಗೆ ಬೇಡರ ಕಣ್ಣಪ್ಪ, ಓಹಿಲೇಶ್ವರ, ಸತ್ಯ ಹರೀಶ್ಚಂದ್ರ, ಭೂಕೈಲಾಸ, ಭಕ್ತ ಸಿರಿಯಾಳ, ಭಕ್ತ ಪ್ರಹ್ಲಾದ, ರೇಣುಕಾ ದೇವಿಮಹಾತ್ಮೆ ಹೀಗೆ ಅನೇಕ ಪೌರಾಣಿಕ ಕಥೆಗಳನ್ನು ಆಧರಿಸಿದ ಚಿತ್ರಗಳನ್ನು ನಿರ್ಮಿಸಲಾಗಿದೆ. ಈ ಚಿತ್ರಗಳಲ್ಲಿ ಹರಿದಿರುವುದು ‘ಭಕ್ತಿ’ಯ ತೊರೆಯೇ ಆಗಿದೆ.
ಹಾಗೆಯೇ ಮಯೂರ, ಕೃಷ್ಣದೇವರಾಯ, ಇಮ್ಮಡಿ ಪುಲಿಕೇಶಿ, ರಣಧೀರ ಕಂಠೀರವ ಮುಂತಾದ ಐತಿಹಾಸಿಕ ಚಿತ್ರಗಳನ್ನು ನಿರ್ಮಿಸಲಾಗಿದೆ. ಈ ಐತಿಹಾಸಿಕ ಚಿತ್ರಗಳಲ್ಲಿ ಕನ್ನಡ ನಾಡು ನುಡಿಗಳ ಬಗೆಗಿನ ‘ಅಭಿಮಾನ’ದ ಹೊಳೆಯೇ ಹರಿದಿದೆ. ಈ ಚಿತ್ರಗಳಲ್ಲಿ ವ್ಯಕ್ತವಾಗಿರುವ ಕನ್ನಡ ರಾಷ್ಟ್ರೀಯತೆಯ ವಿಚಾರಗಳು ಕೆಲವು ಭಾಷಿಕ ಮತ್ತು ಧಾರ್ಮಿಕ ಮೂಲಭೂತವಾದಿ ಮೇಲುಜಾತಿಗಳ ದೃಶ್ಟಿಯಿಂದ ಕೂಡಿವೆ. ಇದು ಬೇರೆಯದೇ ಚರ್ಚೆ.
ಇದಲ್ಲದೆ ಬಸವಣ್ಣ, ಪುರಂದರದಾಸ, ಕನಕದಾಸ ಮುಂತಾದ ಐತಿಹಾಸಿಕ ವ್ಯಕ್ತಿಗಳನ್ನು ಕೇಂದ್ರವಾಗಿಸಿಕೊಂಡು ಚಿತ್ರಗಳನ್ನು ನಿರ್ಮಿಸಲಾಗಿದೆ. ಇವು ಪ್ರಧಾನವಾಗಿ ಶೈವ ಮತ್ತು ವೈಶ್ಣವ ಭಕ್ತಿ ಪಂಥಗಳ ವಿವಿಧ ಧಾರೆಗಳ ಭಕ್ತರನ್ನು ಆಧರಿಸಿ ಚಿತ್ರಗಳನ್ನು ತಯಾರಿಸಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಐತಿಹಾಸಿಕ ವ್ಯಕ್ತಿಗಳನ್ನು ಪುರಾಣದ ಪಾತ್ರದಂತೆ ಚಿತ್ರಿಸಲು ಪ್ರಯತ್ನಿಸಲಾಗಿದೆ. ಆ ಮೂಲಕ ಯಕ್ಷಗಾನ ಮತ್ತು ಪೌರಾಣಿಕ ನಾಟಕಗಳ ನಂತರ ದೇವರನ್ನು ಬಹಳ ಪರಿಣಾಮಕಾರಿಯಾಗಿ ಜನರ ಕಣ್ಣೆದುರು ನಿಲ್ಲಿಸಲು ಚಲನಚಿತ್ರಗಳ ಮೂಲಕ ಪ್ರಯತ್ನಿಸಲಾಗಿದೆ.
ಅಂದರೆ ಹಲವು ಚಿತ್ರಗಳಲ್ಲಿ ಪುರಾಣದ ವಸ್ತುಗಳನ್ನು ಚಿತ್ರವಾಗಿಸುವ ಮೂಲಕ ದೇವರನ್ನು ಜನರ ಕಣ್ಣಿಗಿಳಿಸುವ ಕೆಲಸ ಮಾಡಲಾಗಿದೆ. ಹಾಗೆ ಕಣ್ಣಿಗಿಳಿದ ಪಾತ್ರಗಳಲ್ಲಿ ರಾಮ ಕೃಷ್ಣ ಮತ್ತು ಶಿವ ಮುಖ್ಯರು. ನಂತರ ಬಸವಣ್ಣ, ಪುರಂದರದಾಸ ಮತ್ತು ಇತರೆ ಅನೇಕ ಶರಣರು ಸಂತರೂ ಸೇರಿದ್ದಾರೆ. ಅಂತಹ ಭಕ್ತರಲ್ಲಿ ಕನಕನೂ ಒಬ್ಬ.
ನಮ್ಮ ಸಾಹಿತ್ಯ ಚರಿತ್ರೆಯಲ್ಲಿ ಕನಕನಿಗೆ ಕವಿಯಾಗಿ ಸ್ಥಾನವಿದ್ದರೂ ಅದಕ್ಕಿಂತ ಮಿಗಿಲಾಗಿ ಆದಿಕೇಶವನ ಭಕ್ತನಾಗಿ ಅವನನ್ನು ಸ್ತುತಿಸುತ್ತ ಕೀರ್ತನೆಗಳನ್ನು ರಚಿಸಿದ್ದರಿಂದ ‘ಭಕ್ತ ಕನಕದಾಸ’ನಾಗಿ ಹೆಚ್ಚು ಜನಜನಿತನಾಗಿದ್ದಾನೆ. ಅವನ ನಂತರದಲ್ಲಿ ಅದೆಶ್ಟೋ ಜನರು ಆತನ ಕೀರ್ತನೆಗಳನ್ನು ಹಾಡುತ್ತ ಅವನನ್ನು ಜೀವಂತವಾಗಿರಿಸುತ್ತ ಬಂದಿದ್ದಾರೆ. ಈ ಚಲನಚಿತ್ರವೂ ಕೂಡ ಕನಕನ ವ್ಯಕ್ತಿತ್ವವನ್ನು ಜೀವಂತವಾಗಿರಿಸುವ ಕೆಲಸವನ್ನೇ ಮಾಡಿದೆ.
ಹಾಗೆ ಜೀವಂತವಾಗಿಸುವ ಪ್ರಯತ್ನದಲ್ಲಿ ಕನಕನ ಜೀವನದ ಕೆಲವು ಘಟನೆಗಳನ್ನು ಐತಿಹ್ಯಗಳನ್ನು ಆಧಾರವಾಗಿಸಿಕೊಂಡು ಚಿತ್ರವನ್ನು ನಿರ್ಮಿಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಚಿತ್ರದಲ್ಲಿ ಐತಿಹಾಸಿಕ ಅಂಶಗಳಿಗಿಂತ ಐತಿಹ್ಯಗಳಿಗೆ ದಂತಕತೆಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಆ ಮೂಲಕ ಕನಕನನ್ನು ಮಹಾಜ್ಞಾನಿ ಮತ್ತು ಪವಾಡ ಪುರುಷನನ್ನಾಗಿ ಚಿತ್ರಿಸಲಾಗಿದೆ. ಮಾನವರೂ ತಮ್ಮ ಜೀವಿತ ಕಾಲದಲ್ಲಿ ಪವಾಡಗಳನ್ನು ಎಂದಿಗೂ ಮಾಡಲು ಬರುವುದಿಲ್ಲ. ಅದು ಕನಕನ ವಿಚಾರದಲ್ಲಿಯೂ ನಿಜ.
ಇಂದು ಜೀವಿಸುತ್ತಿರುವ ಯಾವುದೇ ಮಾನವರ ವಿಚಾರದಲ್ಲಿಯೂ ನಿಜ. ಆದರೆ ಕನಕನ ದೈವಭಕ್ತಿಯನ್ನು ಲೋಕಕ್ಕೆ ಸಾರುವ ಉತ್ಸಾಹದಲ್ಲಿ ದೇವರನ್ನು ಬೇಕೆಂದಾಗ ಧರೆಗಿಳಿಸುವ ಮಾಂತ್ರಿಕನಂತೆ ಚಿತ್ರಿಸಲಾಗಿದೆ. ಕನಕನು ವ್ಯಾಸರಾಯರ ಶಿಶ್ಯತ್ವದಲ್ಲಿದ್ದಾಗ ಇತರ ಶಿಶ್ಯರಿಗಿಂತ ಬಹಳ ಭಿನ್ನವೆಂದು ತೋರಿಸಲು ಒಡ್ಡಿದ ಎಲ್ಲ ಪರೀಕ್ಷೆಗಳು ಇದಕ್ಕೆ ಉದಾಹರಣೆಯಾಗಿವೆ. ಹಾಗೆಯೇ ಕನಕನಿಗೆ ಕಿಂಡಿಯ ಮೂಲಕ ದರ್ಶನ ನೀಡಿದ ಕೃಷ್ಣನ ಕತೆಯೂ ಇದೆ ಆಗಿದೆ. ವಾಸ್ತವದಲ್ಲಿ ಎಂದಿಗೂ ಅಸಾಧ್ಯವಾದ ದಂತಕತೆಗಳನ್ನು ಕನಕನ ಸುತ್ತ ಸೃಶ್ಟಿಸಲಾಗಿದೆ. ಈ ಜನಪ್ರಿಯ ಸಂಗತಿಗಳನ್ನೇ ಚಿತ್ರವೂ ಒಪ್ಪಿ ಅದನ್ನು ಪ್ರೇಕ್ಷಕರ ಮುಂದಿಟ್ಟಿದೆ. ಇದರ ಪರಿಣಾಮವಾಗಿ ಇಡೀ ಚಿತ್ರದಲ್ಲಿ ಕನಕನ ಬಗೆಗಿನ ಚಾರಿತ್ರಿಕ ಸಂಗತಿಗಳೇ ಕಳೆದುಹೋಗಿವೆ.
ಯಾವುದೇ ಸಂತ ಶರಣ ಭಕ್ತರ ಸುತ್ತ ಅತಿಮಾನುಶ ಕತೆಗಳನ್ನು ಪವಾಡ ಪ್ರಸಂಗಗಳನ್ನು, ದಂತಕತೆ ಐತಿಹ್ಯಗಳನ್ನು ಕಟ್ಟಲಾಗುತ್ತದೆ. ಆ ಮೂಲಕ ಸಂತರ ಶರಣ ವ್ಯಕ್ತಿತ್ವವನ್ನು ಔನ್ನತ್ಯಕ್ಕೇರಿಸುವ ಪ್ರಯತ್ನ ನಡೆಸಲಾಗುತ್ತದೆ. ಜನಸಮುದಾಯಗಳಿಗೆ ತಮ್ಮ ನಾಯಕನನ್ನು ಅಸಾಮಾನ್ಯನಾಗಿಸುವ ಉಮೇದಿನಲ್ಲಿ ಇಂತಹ ಕತೆಗಳನ್ನು ಸೃಶ್ಟಿಸಲಾಗುತ್ತದೆ. ಆದರೆ ಇದು ವಾಸ್ತವದಲ್ಲಿ ಅಸಾಧ್ಯ ಎಂದಾದ ಮೇಲೆ ಅವುಗಳ ಅಥೆಂಟಿಸಿಟಿಯೇ ಪ್ರಶ್ನಾರ್ಹವಾಗುತ್ತದೆ. ಹಾಗಾಗಿ ‘ಭಕ್ತ ಕನಕದಾಸ’ ಚಲನಚಿತ್ರ ಒಂದು ಚಿತ್ರವಾಗಿ ಉತ್ತಮವಾಗಿದೆ ಎಂದರೆ ಏನರ್ಥ? ಕನಕನ ವ್ಯಕ್ತಿತ್ವವನ್ನು ಚಾರಿತ್ರಿಕ ವಿಶಯಗಳಿಗೆ ಬದಲಾಗಿ ದಂತಕತೆಗಳ ಮೂಲಕ ಮರುಕಟ್ಟಿಕೊಳ್ಳಲು ಪ್ರಯತ್ನಿಸಿರುವುದರಲ್ಲಿಯೇ ಚಿತ್ರದ ಸಮಸ್ಯೆಯಿದೆ.
ಯಾಕೆಂದರೆ ದಂತಕತೆಗಳನ್ನು ಪ್ರಾಮಾಣಿಕವಾಗಿ ನಂಬುವುದರಲ್ಲಿ ಅಂತಹ ಸಮಸ್ಯೆ ಇರುವುದಿಲ್ಲ. ಬದಲಿಗೆ ಆ ದಂತಕತೆಗಳನ್ನೇ ಚಾರಿತ್ರಿಕ ಆಕರಗಳಾಗಿ ಮುಂದಿಡುತ್ತ ಹಲವು ವಾದಗಳ ಸಮರ್ಥನೆಗೆ ಇಳಿಯುವುದು ಬಹಳ ಮುಖ್ಯ ಸಮಸ್ಯೆ. ಅದರಲ್ಲಿಯೂ ಒಂದು ಇಡೀ ಸಮುದಾಯ ಅಂತಹ ದಂತಕತೆಗಳನ್ನೇ ನಿಜವೆಂದು ನಂಬಿ ಅದರ ಮೂಲಕ ತನ್ನ ಅಸ್ಮಿತೆಯನ್ನು ಕಂಡುಕೊಳ್ಳಲು ಯತ್ನಿಸುವುದು ಅಪಾಯಕಾರಿ ಕೂಡ. ಉದಾಹರಣೆಗೆ ಕನಕನ ಕೀರ್ತನೆಗಳನ್ನು ಗಮನಿಸಿದರೆ ಅವನೊಬ್ಬ ಜಾತ್ಯತೀತ ವ್ಯಕ್ತಿಯೆಂದು ಕಂಡುಬರುತ್ತದೆ.
ಆದರೆ ಇಂದು ಅವನನ್ನು ಕುರುಬ ಜಾತಿಗೆ ಮಾತ್ರ ಸೀಮಿತಗೊಳಿಸುವ ಪ್ರಯತ್ನವನ್ನು ಚುನಾವಣಾ ರಾಜಕಾರಣ ಮಾಡುತ್ತಿದೆ. ಇಂತಹ ರಾಜಕೀಯ ಪ್ರೇರಿತ ಜಾತಿ ಸಂಘಟನೆಗಳು ಕೂಡ ಒಂದು ಜಾತಿಗೆ ಸೀಮಿತಗೊಳಿಸಲು ಯತ್ನಿಸುತ್ತವೆ. ಕುರುಬಾಸ್.ಕೊ.ಇನ್ ಎಂಬ ಒಂದು ಯುಟೂಬ್ ಚಾನಲ್ ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ಕನಕನ ಜೀವನವನ್ನು ಪರಿಚಯಿಸುವ ಒಂದು ಆಡಿಯೋ ಇದ್ದು ಅದು ಕನಕನ ಜೀವನದ ಪರಿಚಯ ಮಾಡುತ್ತದೆ.
ಆದರೆ ಇಲ್ಲಿ ಕನಕನ ಐತಿಹಾಸಿಕ ವಿವರಗಳು ನೆಪಮಾತ್ರಕ್ಕೆ ಮಾತ್ರ ಇದ್ದು ಉಳಿದಂತೆ ಸಿನಿಮಾದ ದೃಶ್ಯಕತೆಗಳಲ್ಲಿ ಬಿಂಬಿತವಾಗಿರುವ ವಿಚಾರಗಳೇ ಕನಕನ ನೈಜ ಐತಿಹಾಸಿಕ ವಿವರಗಳು ಎಂದು ನಿರೂಪಿಸಲಾಗಿದೆ. ಯಾರೋ ಎಂದೋ ಎಲ್ಲೋ ಕಟ್ಟಿದ ದಂತಕತೆಗಳು ತಲೆಮಾರಿನಿಂದ ತಲೆಮಾರಿಗೆ ಹಬ್ಬಿ ಅವೇ ಐತಿಹಾಸಿಕ ಸಂಗತಿಗಳು ಎಂಬಂತೆ ಬಿಂಬಿತವಾಗುವುದು ಚರಿತ್ರೆಗೆ ಮಾಡುವ ಅಪಮಾನ. ಇಂದು ಕನಕನ ಕುರಿತಾದ ದಂತಕತೆಗಳೇ ಅವನ ಚರಿತ್ರೆಯಾಗಿ ಪ್ರಚಾರದಲ್ಲಿವೆ.
ಹಾಗಾಗಿ ಕನಕನ ವ್ಯಕ್ತಿತ್ವ ಮತ್ತು ಅಲ್ಲಿನ ಸಮಸ್ಯೆಗಳ ಬಿರುಕುಗಳನ್ನು ವರ್ತಮಾನ ಕಣ್ಣೋಟದಲ್ಲಿ ಅರಿಯಬೇಕಿದೆ. ಐತಿಹಾಸಿಕ ವ್ಯಕ್ತಿಯಾಗಿದ್ದ ಕನಕನನ್ನು ಪವಾಡ ಪುರುಷನನ್ನಾಗಿಸುವುದರ ಸಮಸ್ಯೆಯನ್ನು ನಾವಿಂದು ತಿಳಿಯಬೇಕಿದೆ. ಮೊದಲಿಗೆ, ಕನಕನನ್ನು ಪುರಾಣೀಕರಣ ಮಾಡಿರುವುದೇ ಒಂದು ಸಮಸ್ಯೆ. ಹೀಗೆ ಪುರಾಣೀಕರಣ ಮಾಡುವ ಪ್ರಯತ್ನವನ್ನು ಶತಮಾನಗಳಿಂದಲೂ ಮಾಡಿಕೊಂಡು ಬಂದಿದೆ. ಅಂದರೆ ಸಿನಿಮಾದಲ್ಲಿ ಮಾತ್ರ ಮೊದಲಿಗೆ ಸಂಭವಿಸಿರುವ ಘಟನೆಯಲ್ಲ.
ಈಗಾಗಲೇ ಕನಕನ ಸುತ್ತ ಹಲವು ಐತಿಹ್ಯಗಳು ಕಳೆದ ಅರ್ಧ ಸಹಸ್ರಮಾನದಲ್ಲಿ ಯಾವ ಯಾವುದೋ ಹಂತದಲ್ಲಿ ಹುಟ್ಟಿ ಬೆಳೆದು ಜನಜನಿತವಾಗಿದ್ದ ಸಂಗತಿಗಳನ್ನು ಜೋಡಿಸಿ ಚಿತ್ರೀಕರಿಸಲಾಗಿದೆ. ಹಾಗಾಗಿ ಕನಕನ ಬಗೆಗೆ ಇಂತಹ ಐತಿಹ್ಯಗಳೇ ಹೆಚ್ಚು ಜನಪ್ರಿಯವಾಗಿದ್ದು ಚಾರಿತ್ರಿಕ ಸಂಗತಿಗಳೇ ಅತ್ಯಂತ ಕಡಿಮೆಯಿವೆ. ದೈವೀಕರಣ ಇಲ್ಲವೇ ಪುರಾಣೀಕರಣದಲ್ಲಿ ಚರಿತ್ರೆಯ ವಸ್ತುಸ್ಥಿತಿಯನ್ನು ತಿರುಚಲಾಗುತ್ತದೆ. ಮತ್ತು ಸಮಾಜದಲ್ಲಿ ತಿರುಚಿದ ಸಂಗತಿಗಳೇ ಚರಿತ್ರೆಯ ಕಥನಗಳಾಗಿ ಸಂಘರ್ಶಗಳಿಗೂ ಕಾರಣವಾಗಬಹುದು.
ಒಬ್ಬ ಭಕ್ತನನ್ನು ಭಕ್ತನನ್ನಾಗಿ ನೋಡುವುದರಿಂದ ಹಲವು ಪ್ರಯೋಜನಗಳಿವೆ. ಬದಲಿಗೆ ಭಕ್ತನನ್ನು ಅತಿಮಾನುಶೀಕರಿಸಿದರೆ, ದೈವೀಕರಿಸಿದರೆ ಅದರಿಂದ ಹಲವು ಅಪಾಯಗಳಿವೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಚಾರಿತ್ರಿಕ ಸಂಗತಿಗಳು ಎಂದಿಗೂ ಪವಿತ್ರವಲ್ಲ. ಆದರೆ ಪುರಾಣದ ವಿಚಾರಗಳು ಪಾವಿತ್ರೀಕರಣಗೊಂಡು ಭಾವನಾತ್ಮಕ ಸಂಗತಿಗಳಾಗಿಬಿಟ್ಟರೆ ಅವು ಅಪಾಯವನ್ನು ಸೃಷ್ಟಿಸುತ್ತವೆ. ಒಮ್ಮೆ ಅವು ಪವೀತ್ರೀಕರಣಗೊಂಡು ಪ್ರಶ್ನಾತೀತ ಸಂಗತಿಗಳಾಗಿ ಬದಲಾದರೆ ಅವು ಮೂಲಭೂತವಾದಿ ವಿಚಾರಗಳಾಗಿ ಬದಲಾಗಿ ಯಾರೂ ವಿಮರ್ಶೆಗೆ ಒಳಪಡಿಸದಂತೆ ನಿರ್ಬಂಧ ವಿಧಿಸುತ್ತವೆ.
ಕುರಾನ್ ಬೈಬಲ್ ಭಗವದ್ಗೀತೆಗಳು ಹೀಗೆ ಪವಿತ್ರೀಕರಣಕ್ಕೆ ಒಳಗಾಗಿ ಪ್ರಶ್ನಾತೀತವಾಗಿಬಿಡುತ್ತಿವೆ. ಆದರೆ ಚಾರಿತ್ರಿಕ ಸಂಗತಿಗಳಾದರೆ ಅವು ಸದಾ ಸಂಶೋಧನೆಗೆ ಮರುವಿಮರ್ಶೆಗೆ ಒಳಪಡಬೇಕಾದ ಸಂಗತಿಗಳಾಗಿರುತ್ತವೆ. ಮತ್ತು ಮಾನವರು ತಮ್ಮ ಪ್ರಯತ್ನದಿಂದ ಅತ್ಯುತ್ತಮವಾದುದನ್ನು ಸಾಧಿಸಲು ಸಾಧ್ಯ ಎಂಬುದನ್ನು ತೋರಿಸಿಕೊಡಲು ಸಾಧ್ಯವಿರುತ್ತದೆ.
ಯಾವುದೇ ವ್ಯಕ್ತಿಯನ್ನು ಅತಿಮಾನುಶ ಇಲ್ಲವೇ ಕಾರಣಪುರುಶರಂತೆ ಬಿಂಬಿಸಿದರೆ ಅದು ಮಾನವಾತೀತ ಸಾಹಸವಾಗಿ ಅದು ಯಾವುದಕ್ಕೂ ಮಾದರಿಯಾಗಲಾರದು. ಹಾಗಾಗಿ ಚಾರಿತ್ರಿಕ ಸಂಗತಿಗಳು ಬದಿಗೆ ಸರಿದು ಪೌರಾಣಿಕರಣಗೊಂಡರೆ ಬದಲಾದ ಕಾಲಘಟ್ಟಗಳಲ್ಲಿ ಅಪಾಯಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ.
ಇಲ್ಲಿ ಇದನ್ನು ಇನ್ನಶ್ಟು ವಿವರಿಸಿಕೊಳ್ಳಬಹುದೆನಿಸುತ್ತದೆ. ಉದಾಹರಣೆಗೆ, ರಾಮಾಯಣದ ತಿರುಳಿನ ಮತ್ತು ಅಲ್ಲಿನ ಹಲವು ಪ್ರಸಂಗಗಳ ಬಗೆಗೆ ಪ್ರಶ್ನೆಯೆತ್ತಿದರೆ ಇಂದು ಅವು ನ್ಯಾಯಾಲಯದ ಕಟಕಟೆಯೇರುವ ಸನ್ನಿವೇಶಗಳೂ ಆಗಿ ಬದಲಾಗಿವೆ. ದೇಶದಲ್ಲಿ ಎಶ್ಟೋ ಅಂತಹ ಪ್ರಕರಣಗಳಿವೆ. ಯಾಕೆಂದರೆ ರಾಮಾಯಣ ಒಂದು ಪೌರಾಣಿಕ ಕೃತಿ. ಅದು ಒಂದು ಧರ್ಮದವರಿಗೆ ಇಂದು ಬಹಳ ಪವಿತ್ರವಾದ ಕಥನವಾಗಿ ಮಾರ್ಪಟ್ಟಿದೆ. ಅಲ್ಲಿರುವ ಎಲ್ಲ ಸಂಗತಿಗಳನ್ನು ಚಾರಿತ್ರಿಕ ಸಂಗತಿಗಳಂತೆ ಬಿಂಬಿಸಲಾಗುತ್ತಿದೆ. ಆದರೆ ಪುರಾಣಕೃತಿಯಲ್ಲಿನ ಎಲ್ಲ ಘಟನೆಗಳು ನಡೆದಿರಲೇಬೇಕೆಂದೇನಿಲ್ಲ.
ಅಲ್ಲಿ ಕಾಲ್ಪನಿಕ ಸಂಗತಿಗಳಿಗೂ ಅವಕಾಶವಿದೆ. ಇಲ್ಲವೇ ಎಲ್ಲವೂ ಕಾಲ್ಪನಿಕವೇ ಇರಬಹುದು. ಆದರೆ ಚರಿತ್ರೆಯ ಸಂಗತಿಗಳು ಹಾಗಲ್ಲ. ಅಲ್ಲಿ ಕಲ್ಪನೆಗೆ ಅವಕಾಶವಿಲ್ಲ. ಅವು ಘಟಿಸಿದ್ದು ಆದಶ್ಟು ವಾಸ್ತವಕ್ಕೆ ಹತ್ತಿರವಾಗಿ ಅವನ್ನು ಕಥಿಸುವ ಅಪೇಕ್ಷೆ ಇರುತ್ತದೆ. ಇವೆಲ್ಲ ಪುರಾಣದ ಪವೀತ್ರೀಕರಣದ ಅಪಾಯಗಳು. ಅಂದರೆ ದೀರ್ಘಕಾಲದಲ್ಲಿ ನಡೆಯುವ ಈ ಪ್ರಕ್ರಿಯೆ ಚರಿತ್ರೆಯ ಯಾವುದೋ ಒಂದು ದುಶ್ಟ ಕಾಲಘಟ್ಟದಲ್ಲಿ ವಿಪರೀತದ ಮತ್ತು ತಿರುಚಿದ ವಿಚಾರಗಳು ರಾಜಕೀಯಕ್ಕೆ ಬಳಕೆಯಾದರೆ ಸಮಾಜದಲ್ಲಿ ಸಂಘಶರ್Àಕ್ಕೆ ಕಾರಣವಾಗುತ್ತದೆ. ಇದು ಕೆಲವು ಸಾಂಸ್ಕøತಿಕ ನಾಯಕರ ವಿಚಾರದಲ್ಲಿ ನಿಜವಾಗುತ್ತಿದೆ. ಬಸವಣ್ಣ, ಕನಕದಾಸ ಮುಂತಾದವರ ವಿಚಾರದಲ್ಲಿ ಇದು ನಡೆಯುತ್ತಿದೆ.
ಬಸವಣ್ಣ ಶರಣರ ನೇತಾರನಾಗಿದ್ದವನು. ವಚನ ಚಳವಳಿಗೆ ನಾಯಕತ್ವ ನೀಡಿ ಅದನ್ನು ಮುನ್ನಡೆಸಿದ ಚಾರಿತ್ರಿಕ ವ್ಯಕ್ತಿ. ಆದರೆ ಇಂದು ಬಸವಣ್ಣ ದೇವರಾಗಿ ಪ್ರಶ್ನಾತೀತನಾಗಿಬಿಟ್ಟಿದ್ದಾನೆ. ಆತನ ಸುತ್ತ ನೂರಾರು ಮಠಾಧೀಶರು ಗರುಡ ಪಡೆಯಂತೆ ಕಾವಲಿದ್ದಾರೆ. ಇದು ಬಸವಣ್ಣನನ್ನು ಚಾರಿತ್ರಿಕ ವ್ಯಕ್ತಿಯಾಗಿದ್ದು ಆತನೂ ಎಲ್ಲರಂತೆ ಮಾನವನಾಗಿ ಬಾಳಿದವನು. ಅವನೂ ಹಲವು ತಪ್ಪು ವಿಚಾರಗಳನ್ನು ಮಂಡಿಸಿ ನಂತರ ತನ್ನನ್ನು ತಾನು ತಿದ್ದಿಕೊಂಡವನು. ಆದರೆ ಇದನ್ನು ಒಪ್ಪಲು ಸಿದ್ದರಿಲ್ಲದ ಪಡೆ ಬಸವಣ್ಣನ ಬಗೆಗೆ ಪ್ರಶ್ನೆಯೆತ್ತಿದರೆ ಅದು ಮುಗಿ ಬೀಳುತ್ತದೆ.
ಈಗಾಗಲೇ ಬಸವಣ್ಣನ ಸುತ್ತ ಎದ್ದಿದ್ದ ಹಲವು ವಿವಾದಗಳನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ.(ಧರ್ಮಕಾರಣ, ಮಹಾಚೈತ್ರ, ಚಿಕವೀರರಾಜೇಂದ್ರ, ಆನುದೇವ ಹೊರಗಣವನು ಇತ್ಯಾದಿ ಕೃತಿಗಳು ಪ್ರಕಟವಾದ ಸಂದರ್ಭದಲ್ಲಿ ಸೃಶ್ಟಿಯಾದ ವಿವಾದಗಳನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ. ಇಂತಹ ವಿವಾದಗಳು ಕನಕನ ಸುತ್ತ ಇನ್ನೂ ಸೃಶ್ಟಿಯಾಗಿಲ್ಲವಾದರೂ ಮುಂದೆ ಸೃಶ್ಟಿಯಾಗುವುದಿಲ್ಲ ಎಂದೇನಿಲ್ಲ. ಹಾಗಾಗಿ ಈ ಹಿಂದಿನ ವಿದ್ಯಮಾನಗಳಿಂದ ಸಮುದಾಯಗಳು ಪಾಠ ಕಲಿತು ಬಹಳ ಎಚ್ಚರಿಕೆಯಿಂದಲೇ ಹೆಜ್ಜೆಯಿಡಬೇಕಾಗುತ್ತದೆ.
ಸದ್ಯದ ಪರಿಸ್ಥಿತಿ ಕೊಂಚ ಬದಲಾದರೆ ಕನಕನ ವಿಚಾರದಲ್ಲಿಯೂ ನಿಜವಾಗಿಬಿಡುವ ಅಪಾಯವಿದೆ. ಹಾಗಾಗಿ ಸಮುದಾಯಗಳು ಓರ್ವ ಸಾಂಸ್ಕøತಿಕ ನಾಯಕನ ವ್ಯಕ್ತಿತ್ವವನ್ನು ಕಟ್ಟಿಕೊಳ್ಳುವ ಹೊತ್ತಿನಲ್ಲಿ ಬಹಳ ಎಚ್ಚರಿಕೆಯಿಂದ ಕಟ್ಟಿಕೊಳ್ಳಬೇಕಾಗುತ್ತದೆ. ಬಹಳ ಮುಕ್ತವಾದ ಮನಸ್ಸಿನ ಮತ್ತು ಆಧುನಿಕ ಜಗತ್ತಿನ ಆಲೋಚನೆಗಳಿಗೆ ಅನುಗುಣವಾಗಿ ವಿಚಾರಗಳನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಚರಿತ್ರೆಯನ್ನು ಪುನರ್ ರಚಿಸುವುದು ಎಂದರೆ ಗತವನ್ನು ಮತ್ತೆ ಕಟ್ಟಿಕೊಳ್ಳುವುದಲ್ಲ. ಬದಲಿಗೆ ಗತವನ್ನು ವರ್ತಮಾನದ ಮತ್ತುಭವಿಷ್ಯ ಬದುಕಿನ ಜೀವನ ಮೌಲ್ಯಗಳಿಗೆ ಅನುಗುಣವಾಗಿ ಕಟ್ಟಿಕೊಳ್ಳಬೇಕು.
ಅದಿಲ್ಲದೆ ನಿರ್ಬಂಧಿತ ಜಾತಿ ಸಮಾಜದ ಕಟ್ಟುಪಾಡುಗಳಿಗೆ ತಕ್ಕಂತೆ ಯಾವುದೇ ನಾಯಕರ ವ್ಯಕ್ತಿತ್ವವನ್ನು ಕಟ್ಟಿದರೆ ಅದರಿಂದ ಹೆಚ್ಚು ಪ್ರಯೋಜನವಿಲ್ಲ. ವಿಸ್ತಾರವಾಗಿ ಹಬ್ಬಬಹುದಾದ ಮರದ ಕೊಂಬೆಗಳನ್ನು ಕತ್ತರಿಸಿ ಗಿಡ್ಡವಾಗಿ ಬೆಳೆಸುವ ಬೊನ್ಸಾಯಿ ಮರಗಳಂತೆ ಸಮುದಾಯದ ಆಲೋಚನೆಗಳು ಕುಬ್ಜಗೊಳ್ಳುತ್ತವೆ. ಈಚಿನ ನಮ್ಮ ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಸಮುದಾಯಗಳನ್ನು ಮತ್ತಶ್ಟು ಸಂಕುಚಿತಗೊಂಡು ಕುಬ್ಜಗೊಳ್ಳುತ್ತಿರುವುದು ಕಾಣುತ್ತಿದೆ.
ಜಾತಿ ಕಟ್ಟುಪಾಡುಗಳನ್ನು ಮೀರಿ ಸಮುದಾಯಗಳು ಯೋಚಿಸುವುದನ್ನೇ ಮರೆತು ಅತ್ಯಂತ ಉಗ್ರ ಜಾತಿವಾದಿ ಸಮುದಾಯಗಳಾಗಿ ಬದಲಾಗುತ್ತಿವೆ. ಅಂತಹ ಹೊತ್ತಿನಲ್ಲಿ ಕನಕನ ವ್ಯಕ್ತಿತ್ವನ್ನು ಮತ್ತೆ ಕಟ್ಟಿಕೊಳ್ಳುವ ಸಮಾಜವು ಕನಕನಿಂದ ಕಲಿತು ಬಹಳ ಮುಕ್ತವಾಗಿ ಯೋಚಿಸುವುದನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕಿದೆ. ಆದ್ದರಿಂದ ಕನಕನಂತಹವರ ವ್ಯಕ್ತಿತ್ವನ್ನು ಆಧುನಿಕ ಕಾಲದಲ್ಲಿ ಮರು ಕಟ್ಟುವ ಸಂದರ್ಭದಲ್ಲಿ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ.
ಪ್ರಸ್ತುತ ಚಲನಚಿತ್ರದಲ್ಲಿ ಕನಕನ ವ್ಯಕ್ತಿತ್ವವನ್ನು ಗತದ ನೆಲೆಯಲ್ಲಿಯೇ ನಿಲ್ಲಿಸಲಾಗಿದೆ. ಆತನನ್ನು ಪರಮ ಭಕ್ತ ಎಂದು ಬಿಂಬಿಸುವ ಉತ್ಸಾಹದಲ್ಲಿ ಆತನ ಸುತ್ತ ಹಲವು ಐತಿಹ್ಯ ಮತ್ತು ದಂತಕತೆಗಳನ್ನು ಕಟ್ಟಲಾಗಿದೆ. ಆ ಕತೆಗಳನ್ನು ದಿಟವೆಂಬಂತೆ ನಂಬಿ ಅವುಗಳ ಮೂಲಕ ಕನಕನ ವ್ಯಕ್ತಿತ್ವವನ್ನು ಹಿಗ್ಗಿಸಲು ಪ್ರಯತ್ನಿಸಲಾಗಿದೆ. ಅಂತಹ ಐತಿಹ್ಯಗಳೇ ಚಿತ್ರದ ವಸ್ತು. ಉದಾಹರಣೆಗೆ ಕನಕನ ಹುಟ್ಟು, ತಿರುಪತಿ ತಿಮ್ಮಪ್ಪನ ವರ, ತಿಮ್ಮಪ್ಪನಾಯಕ ಕನಕನಾಗುವ ನಿಧಿಯ ಕತೆ, ಕೋಣ ಮಂತ್ರ ಪ್ರಸಂಗ, ಬಾಳೆ ಹಣ್ಣಿನ ಪ್ರಸಂಗ, ‘ನಾನು ಹೋದರೆ ಹೋದೆನು’, ಕನಕನ ಕಿಂಡಿ, ಸಾಲಿಗ್ರಾಮ ಪ್ರಸಂಗ ಹೀಗೆ ಹಲವು ಪ್ರಸಂಗಳು ಕನಕನ ಸುತ್ತ ಹೆಣೆದುಕೊಂಡಿವೆ.
ಇವನ್ನು ತಾರ್ಕಿಕವಾಗಿ ಮತ್ತು ಚಾರಿತ್ರಿಕವಾಗಿ ನಿಜ ಎಂದು ಸಾಬೀತು ಪಡಿಸಲು ಯಾವುದೇ ಆಕರಗಳಿಲ್ಲ. ಐತಿಹ್ಯಗಳೇ ಆಗಿವೆ. ಅವುಗಳಿಗೆ ಭಾವನಾತ್ಮಕ ನೆಲೆಯಿರುತ್ತದೆಯೇ ಹೊರತು ಯಾವುದೇ ನೈಜ ವಾಸ್ತವದ ನೆಲೆಯಿರುವುದಿಲ್ಲ. ಹಾಗಾಗಿ ಇವನ್ನು ಒಪ್ಪುವುದು ಕಷ್ಟ. ಅದರಲ್ಲಿಯೂ ಎಲ್ಲ ಪ್ರಸಂಗಳಲ್ಲಿಯೂ ದೇವರು ಪ್ರತ್ಯಕ್ಷವಾಗಿ ಭಕ್ತರಿಗೆ ದರ್ಶನ ನೀಡುತ್ತಾನೆ. ಇದು ಸಿನಿಮಾದಲ್ಲಿ ಮತ್ತು ಕಲ್ಪನೆಯಲ್ಲಿ ಮಾತ್ರ ಸಾಧ್ಯ. ವಿಶೇಶವೆಂದರೆ ಕನಕನ ಕೃತಿಗಳಲ್ಲಿ ಎಲ್ಲಿಯೂ ದೈವ ಪ್ರತ್ಯಕ್ಷವಾದ ಬಗೆಗೆ ವಿವರಗಳಿಲ್ಲ.
ಬದಲಿಗೆ ನಿರಂತರ ಧ್ಯಾನ, ಹುಡುಕಾಟಗಳು ಮತ್ತು ದೇವರನ್ನು ಕಾಣಬೇಕೆಂಬ ಹಂಬಲ ಇದೆಯೇ ಹೊರತು ಅಲ್ಲಿ ದೇವರ ದರ್ಶನದ ಆತ್ಯಂತಿಕ ಅನುಭವನದ ವಿವರಗಳಿಲ್ಲ. ಆದರೆ ಸಿನಿಮಾ ದೇವರೇ ದರ್ಶನ ನೀಡಿ ಕನಕನನ್ನು ಎಲ್ಲ ಕ್ಷಣಗಳಲ್ಲಿಯೂ ಕಾಪಾಡಿ ದೊಡ್ಡವನನ್ನಾಗಿ ಮಾಡುತ್ತದೆ. ಇವು ಜನರಲ್ಲಿ ಭಕ್ತಿ ರಸವನ್ನು ಪ್ರಚೋದಿಸಲು ನೆರವಾಗಬಹುದೇ ಹೊರತು ಜನರು ಅಂತಹ ಪ್ರಯೋಗ ಮಾಡಿ ದೇವರನ್ನು ಧರೆಗಳಿಸಲು ಸಾಧ್ಯವೇ ಇಲ್ಲ.
ಹಾಗಾಗಿ ಚಲನಚಿತ್ರ ಕಟ್ಟಿಕೊಡುವ ಕನಕನ ವ್ಯಕ್ತಿತ್ವ ಕಾಲ್ಪನಿಕ ಇಲ್ಲವೇ ಪವಾಡಮಯ ಪ್ರಸಂಗಗಳ ಕಟ್ಟುಕತೆಗಳ ಅನಾವರಣ ಎನ್ನಿಸುತ್ತದೆಯೇ ಹೊರತು ಅದು ಚಾರಿತ್ರಿಕ ಸತ್ಯವಂತೂ ಅಲ್ಲ. ಅಂದರೆ ಕನಕ ಚಾರಿತ್ರಿಕವಾಗಿ ಇದ್ದದ್ದು ನಿಜ. ಆದರೆ ಚಾರಿತ್ರಿಕ ವ್ಯಕ್ತಿಯಾಗಿದ್ದ ಕನಕನ ಸುತ್ತ ಕಟ್ಟಿಕೊಂಡಿರುವ ಕಥನಗಳು ಚಾರಿತ್ರಿಕವಲ್ಲ. ಹಲವು ಸಂತರ ಶರಣರ ಸುತ್ತ ಜನಸಮುದಾಯಗಳು ಕಟ್ಟಿಕೊಂಡಿರುವ ದಂತಕತೆಗಳಂತೆ ಕನಕನ ಸುತ್ತಲೂ ಕಟ್ಟಿಕೊಂಡಿವೆ. ಹಾಗೆ ಕಟ್ಟುವುದರ ಮೂಲಕ ಚರಿತ್ರಾತೀತನಾಗಿ ಕಲ್ಪಿಸಿಕೊಳ್ಳುವ ಪ್ರಯತ್ನ ಮಾಡಿವೆ.
ಇದು ನಮ್ಮ ದೇಶದ ಜಾಯಮಾನ ಕೂಡ. ಇಲ್ಲಿ ಚಾರಿತ್ರಿಕ ಸಂಗತಿಗಳನ್ನು ಚಾರಿತ್ರಿಕ ಸಂಗತಿಗಳಂತೆ ನೋಡದೆ ಅವನ್ನು ಪೌರಾಣೀಕರಿಸುವ ಪ್ರಯತ್ನ ಮಾಡಲಾಗಿರುತ್ತದೆ. ಅದು ಕನಕನ ವಿಚಾರದಲ್ಲಿಯೂ ನಿಜವಾಗಿದೆ. ಆಧುನಿಕ ಸಂವಹನ ಮಾಧ್ಯಮವಾದ ಚಲನಚಿತ್ರವೂ ಅದೇ ಕೆಲಸವನ್ನು ಮಾಡಿದೆ. ಇಂತಹ ಆಲೋಚನೆಯ ಕ್ರಮಗಳನ್ನು ಬದಲಿಸಿಕೊಂಡು ಸಾಧ್ಯವಾದಶ್ಟು ವಾಸ್ತವಕ್ಕೆ ಹತ್ತಿರವಾದ ರೀತಿಯಲ್ಲಿ ಸಾಧಕರ ವ್ಯಕ್ತಿತ್ವಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಇಂತಹ ಸಿನಿಮಾಗಳನ್ನು ಲಕ್ಶಾಂತರ ಜನರು ನೋಡಿದ್ದಾರೆ. ಅವರ ಮನಸ್ಸಿನಲ್ಲಿ ಕನಕನ ವ್ಯಕ್ತಿತ್ವ ಅಚ್ಚೊತ್ತಿದೆ.
ಅದರಲ್ಲಿ ಬಹುತೇಕರಿಗೆ ಚಿತ್ರ ಬಿಂಬಿಸುವ ಕನಕನ ಪವಾಡಮಯ ಬದುಕು ನೆನಪಿನಲ್ಲಿ ಉಳಿದಿರುತ್ತದೆಯೇ ಹೊರತು ಅದರಾಚೆಗೆ ಕನಕ ಚಿಂತಿಸಿದ ವಿಚಾರಗಳು ಅವರಿಗೆ ಪರಿಚಯವಾಗುವುದೇ ಇಲ್ಲ. ಮುಖ್ಯವಾಗಿ ಜಾತಿ-ಕುಲಗಳ ಸುತ್ತ ಆತನೆತ್ತಿದ್ದ ಪ್ರಶ್ನೆಗಳು ಜನರ ಮನಸ್ಸಿಗೆ ಇಳಿದು ಜಾತ್ಯತೀತವಾಗಿ ಯೋಚಿಸುವುದನ್ನೇ ಮಾಡುವುದಿಲ್ಲ. ಬದಲಿಗೆ ದೈವಾಂಶ ಸಂಭೂತ ಭಕ್ತ ಕನಕ ಕಲ್ಪಿತ ವ್ಯಕ್ತಿತ್ವ ಪರಿಚಯವಾಗುತ್ತದೆಯೇ ಹೊರತು ನೈಜ ಮತ್ತು ವಾಸ್ತವದ ಚಾರಿತ್ರಿಕ ಕನಕನ ವ್ಯಕ್ತಿತ್ವ ಅವರಲ್ಲಿ ಉಳಿಯುವುದೇ ಇಲ್ಲ.
ಹಾಗೆ ಚಾರಿತ್ರಿಕ ಕನಕನ ವ್ಯಕ್ತಿತ್ವ ಉಳಿಯದೇ ಹೋದರೆ, ವೈಚಾರಿಕತೆಯ ಬೀಜಗಳು ಮೊಳೆಯದೇ ಹೋದರೆ, ಅಲ್ಲಿ ಮೌಢ್ಯಗಳ ಬಿತ್ತನೆಯಾಗಿ ಅವೇ ಬೆಳೆದು ಪೊದೆಗಳು ಸೃಷ್ಟಿಯಾಗುತ್ತವೆ. ಆದ್ದರಿಂದ ಇಂದು ವೈಚಾರಿಕ ಸಂಗತಿಗಳ ಮೇಲೆ ಹರಡಿಕೊಂಡಿರುವ ಮುಸುಕನ್ನು ತೆರೆದು ಕನಕನನ್ನು ಅರಿಯಬೇಕಾಗುತ್ತದೆ. ಈ ದಿಸೆಯಲ್ಲಿ ಚಿತ್ರಬಿತ್ತುವ ವೈಚಾರಿಕ ಪ್ರಭಾವ ಅತ್ಯಂತ ಕಡಿಮೆಯೆಂದೇ ಹೇಳಬೇಕಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಶಿಕ್ಷಣ ಸಂಸ್ಥೆಗಳು ವೈಚಾರಿಕತೆ ; ವೈಜ್ಞಾನಿಕತೆಯ ಬೆಳಕು ಚೆಲ್ಲುವ ದೀಪಗಳಾಗಲಿ
ಸುದ್ದಿದಿನ,ಚನ್ನಗಿರಿ: ಪಟ್ಟಣದ ಬಸವ ಚೇತನ ಎಜುಕೇರ್ ಪ್ರಿ – ಪ್ರೈಮರಿ ಸ್ಕೂಲ್ ನಲ್ಲಿ “ಬಂಧುತ್ವ ಫೌಂಡೇಶನ್ ‘ ವತಿಯಿಂದ ಇಂದು ಶ್ರಾವಣಮಾಸದ ನಾಗರ ಪಂಚಮಿ ಪ್ರಯುಕ್ತ ” ಮಿಲ್ಕ್ ಫೆಸ್ಟ್”( ಹಾಲು ಹಬ್ಬ ) ಎಂಬ ಕಾರ್ಯಕ್ರಮವನ್ನು ಮಕ್ಕಳಿಗೆ ಹಾಲು ಕುಡಿಸುವುದರ ಮೂಲಕ ವಿನೂತನವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ರಾಘು ದೊಡ್ಡಮನಿಯವರು ನಾಗರ ಪಂಚಮಿ ಹಬ್ಬದಂದು ನಮ್ಮ ಜನರು ಕಲ್ಲುನಾಗರಕ್ಕೆ ಮತ್ತು ಹುತ್ತಗಳಿಗೆ ಹಾಲು ಎರೆಯುವ ಸಂಪ್ರದಾಯವಿದೆ ಆದರೆ ಹಾವುಗಳು ಎಂದಿಗೂ ಹಾಲು ಕುಡಿಯುವುದಿಲ್ಲ, ಹಾಲು ಅದರ ಆಹಾರವಲ್ಲ ಹೀಗಿರುವಾಗ ಹಾಲನ್ನು ಈ ರೀತಿಯಲ್ಲಿ ಪೋಲು ಮಾಡುವ ಬದಲಾಗಿ ಅದೇ ಹಾಲನ್ನು ಮಕ್ಕಳಿಗೆ, ಬಡವರಿಗೆ, ರೋಗಿಗಳಿಗೆ ನೀಡಬೇಕು.
ಹಾಲು ಅತ್ಯಂತ ಪೌಷ್ಟಿಕ ಆಹಾರವಾಗಿದ್ದು ಕರ್ನಾಟಕವೊಂದರಲ್ಲಿ ಪ್ರತಿವರ್ಷ ಸಾವಿರಾರು ಮಕ್ಕಳು ಅಪೌಷ್ಟಿಕತೆಯಿಂದ ಮರಣ ಹೊಂದುತ್ತಿದ್ದಾರೆ ಆದ್ದರಿಂದ ನಮ್ಮ ಜನರು ಈ ವಿಷಯವಾಗಿ ಜಾಗೃತರಾಗಬೇಕಿದೆ ಮತ್ತು ಸಮಾಜದಲ್ಲಿ ಹೆಚ್ಚು ಬದಲಾವಣೆ ತರಬಹುದಾದ ಬಹುದೊಡ್ಡ ಜವಾಬ್ದಾರಿ ಹೊಂದಿರುವ ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳು ಮಕ್ಕಳ ಮೂಲಕ ಜನ ಸಮುದಾಯಕ್ಕೆ ವೈಚಾರಿಕತೆ ಮತ್ತು ವೈಜ್ಞಾನಿಕತೆಯ ಬೆಳಕು ಚೆಲ್ಲುವ ದೀಪಗಳಂತೆ ಕೆಲಸ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು. ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಸಹನಾ, ಸಿಂಧೂ, ಬಿಂದು, ಮುಕ್ತ, ಶ್ವೇತ ಇತರರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದಿಮಾಗಿ ನಕ್ಸಲ್-ನಗರ ನಕ್ಸಲ್
~ರಹಮತ್ ತರೀಕೆರೆ, ಚಿಂತಕರು
ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.
ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.
ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.
ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.
ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.
ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.
ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.
ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.
ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸ್ವಾತಂತ್ರ್ಯವನ್ನು ಗೌರವಿಸಿ, ಭವಿಷ್ಯವನ್ನು ಪ್ರೇರೇಪಿಸೋಣ: ವಿವಿಐಎಸ್ನಲ್ಲಿ ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ
ಸುದ್ದಿದಿನ,ಬೆಂಗಳೂರು: ವಿಶ್ವ ವೆಂಕಟೇಶ್ವರ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ನಲ್ಲಿ “ಸ್ವಾತಂತ್ರ್ಯವನ್ನು ಗೌರವಿಸಿ, ಭವಿಷ್ಯವನ್ನು ಪ್ರೇರೇಪಿಸೋಣ” ಎಂಬ ಆಶಯದೊಂದಿಗೆ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕಟ್ಟಾ ಬಾಲಾಜಿ ಬಾಬು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ತಮ್ಮ ಪ್ರೇರಣಾದಾಯಕ ಭಾಷಣದಲ್ಲಿ ಅವರು, ದೇಶಭಕ್ತಿ ಕೇವಲ ಘೋಷಣೆಗಳಿಗೆ ಸೀಮಿತವಾಗದೆ, ಪ್ರತಿಯೊಬ್ಬರೂ ತಮ್ಮ ಮೂಲಭೂತ ಕರ್ತವ್ಯಗಳನ್ನು ಅರಿತು, ತಮ್ಮ ಸಾಮರ್ಥ್ಯ, ಆಸಕ್ತಿ ಹಾಗೂ ಅಭಿರುಚಿಗೆ ತಕ್ಕಂತೆ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುವುದರಲ್ಲಿ ಅಡಗಿದೆ ಎಂದು ಕರೆ ನೀಡಿದರು. ಪ್ರಾಮಾಣಿಕ ಪರಿಶ್ರಮ ಮತ್ತು ಜವಾಬ್ದಾರಿಯುತ ನಾಗರಿಕತ್ವವೇ ಬಲಿಷ್ಠ ಭಾರತದ ನಿರ್ಮಾಣಕ್ಕೆ ಅಡಿಪಾಯ ಎಂದರು.
ವಿದ್ಯಾರ್ಥಿಗಳ ಮನೋಜ್ಞ ಸಾಂಸ್ಕೃತಿಕ ಕಾರ್ಯಕ್ರಮಗಳು, ದೇಶಭಕ್ತಿ ಪ್ರದರ್ಶನಗಳು ಹಾಗೂ ಶಿಸ್ತುಬದ್ಧ ಮೆರವಣಿಗೆಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದವು. ಕೊಡಿಪಾಳ್ಯ ಮತ್ತು ಕೆಂಗೇರಿಯಲ್ಲಿ 445 ಮೀಟರ್ ಇರುವ ವಿಶೇಷ ಧ್ವಜದೊಂದಿಗೆ ವಿದ್ಯಾರ್ಥಿಗಳ ಮೆರವಣಿಗೆ ಗಮನ ಸೆಳೆಯಿತು. ಶತಪ್ರತಿಶತ ಫಲಿತಾಂಶ ಸಾಧಿಸಿದ ಬೋಧಕ ಸಿಬ್ಬಂದಿಯನ್ನು ಮತ್ತು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ನೇರ ಪ್ರಸಾರವೂ ನಡೆಯಿತು. 2,500 ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ವಿಶೇಷ ಮಧ್ಯಾಹ್ನದ ಊಟ ಮತ್ತು ಸಿಹಿತಿಂಡಿ ವ್ಯವಸ್ಥೆ ಮಾಡಲಾಗಿದ್ದು, ಒಗ್ಗಟ್ಟು ಮತ್ತು ದೇಶಪ್ರೇಮದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.
ಈ ಸಂದರ್ಭದಲ್ಲಿ ವಿವಿಐಎಸ್ ನ ಅಕಾಡೆಮಿಕ್ ಅಡ್ವೈಸರ್ ಡಾ. ರಾಜೇಶ್ವರಿ ದತ್ತಾತ್ರಿ, ವಿವಿ ವಿದ್ಯಾಸಂಸ್ಥೆಯ ಡೀನ್ ಶ್ರೀ ಕಿಶೋರ್ ಕಟ್ಟ, ಪ್ರಾಂಶುಪಾಲೆ ಶ್ರೀಮತಿ ಲಕ್ಷ್ಮಿ ಟಿ.ಎನ್, ಕೆಪಿಸಿ ಪಿಯು ಕಾಲೇಜು ಪ್ರಾಂಶುಪಾಲರಾದ ಡಾ. ಐ. ಚೆನ್ನಾರೆಡ್ಡಿ, ಸಿಬಿಎಸ್ಇ ಪ್ರಾಂಶುಪಾಲರಾದ ಪ್ರೊ. ಪ್ರಹ್ಲಾದ, ಉಪಪ್ರಾಂಶುಪಾಲರಾದ ಶ್ರೀ ಮದನ್ ರಾಜ್, ಪ್ರಾಂಶುಪಾಲರಾದ ಡಾ. ಸುರೇಶ್ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days agoಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ನವಿಲೇಹಾಳು ಗ್ರಾಮ ಪಂಚಾಯಿತಿಗೆ ಭೇಟಿ ; ಗ್ರಾಮಸಭೆ – ಗ್ರಾಮಾಭಿವೃದ್ಧಿಗೆ ಮನವಿ
-
ದಿನದ ಸುದ್ದಿ3 days agoನವಿಲೇಹಾಳು | 80ನೇ ಸ್ವಾತಂತ್ರ್ಯ ದಿನಾಚರಣೆ ; ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸಿಹಿ ಹಂಚಿ ಸಂಭ್ರಮ
-
ದಿನದ ಸುದ್ದಿ3 days agoಸ್ವಾತಂತ್ರ್ಯವೆಂದರೆ ಬರಿ ಹಕ್ಕಲ್ಲ ದೇಶದ ಬಗ್ಗೆ ಜವಾಬ್ದಾರಿ ಹೊಂದುವುದೂ ಕೂಡ : ಯೋಗೀಶ್ ಸಹ್ಯಾದ್ರಿ
-
ದಿನದ ಸುದ್ದಿ22 hours agoಶಿಕ್ಷಣ ಸಂಸ್ಥೆಗಳು ವೈಚಾರಿಕತೆ ; ವೈಜ್ಞಾನಿಕತೆಯ ಬೆಳಕು ಚೆಲ್ಲುವ ದೀಪಗಳಾಗಲಿ
-
ದಿನದ ಸುದ್ದಿ2 days agoಸ್ವಾತಂತ್ರ್ಯವನ್ನು ಗೌರವಿಸಿ, ಭವಿಷ್ಯವನ್ನು ಪ್ರೇರೇಪಿಸೋಣ: ವಿವಿಐಎಸ್ನಲ್ಲಿ ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ
-
ಅಂತರಂಗ23 hours agoದಿಮಾಗಿ ನಕ್ಸಲ್-ನಗರ ನಕ್ಸಲ್

