ನೆಲದನಿ
ಕಂದಗಲ್ಲು ಓಬಕ್ಕನ ಸೋಬಾನೆ ಪದಗಳಲ್ಲಿ ಬಸವದರ್ಶನ
ಭಾರತದ ಚರಿತ್ರೆಯನ್ನು ತಿಳಿಯುವುದಕ್ಕೆ ಶಿಷ್ಟ ಸಾಹಿತ್ಯದಷ್ಟೆ ಮೌಖಿಕ ಸಾಹಿತ್ಯವೂ ಮಹತ್ವದ ದಾಖಲೆಯನ್ನು ಒದಗಿಸುತ್ತದೆ. ಈ ಮೌಖಿಕ ಚರಿತ್ರೆಯು ನೆಲಮೂಲ ಬದುಕಿನ ಪ್ರತಿದನಿಯಾಗಿದೆ. ಇಂತಹ ಮೌಖಿಕ ಚರಿತ್ರೆಯು ನೆಲದನಿಯಾಗಿ ತನ್ನ ಸಂವೇದನೆಗಳನ್ನು ಅನಾವರಣಗೊಳಿಸುತ್ತ ಬಂದಿದೆ. ಆದರೆ ನಾವು ನಮ್ಮ ಚರಿತ್ರೆಯನ್ನು ಅಧ್ಯಯನ ಮಾಡುವ ಸಂದರ್ಭದಲ್ಲಿ ನಮ್ಮ ಮನೆಯಲ್ಲಿಯೇ ಇರುವ ಚರಿತ್ರೆಯನ್ನು ಅರಿಯದೆ ಯಾರೋ ತಮ್ಮಿಚ್ಚೆಯಂತೆ ಬರೆದು ಸಿದ್ಧಪಡಿಸಿದ ದಾಖಲೆಯೆ ನಿಜವಾದ ಚರಿತ್ರೆಯೆಂದು ಭಾವಿಸಿ, ನಮ್ಮ ನಡುವೆ ಇರಬಹುದಾದ ವಾಸ್ತವ ಚರಿತ್ರೆಯನ್ನು ಲೆಕ್ಕಿಸದೆ ತಿರಸ್ಕಾರಕ್ಕೆ ಗುರಿಪಡಿಸಿದ್ದೇವೆ.
‘ಹಿತ್ತಲಗಿಡ ಮದ್ದಲ್ಲ’ ಎಂಬ ಮನಸ್ಥಿತಿಯು ಒಂದು ಕಾಲದಲ್ಲಿ ಮನೆ ಮಾಡಿಕೊಂಡಿತ್ತು. ಇದಕ್ಕೆ ಕಾರಣವೆಂದರೆ, ಈ ಪ್ರಕಾರದ ಸಾಹಿತ್ಯಕ್ಕೆ ಯಾವುದೇ ಮನ್ನಣೆ ಇಲ್ಲ ಎಂಬುದು ಬಹುತೇಕರ ನಂಬಿಕೆಯಾಗಿತ್ತು. ಆದರೆ ಇಂದು ಪಾಶ್ಚಿಮಾತ್ಯ ವಿಚಾರಧಾರೆಗಳ ಪ್ರಭಾವ ಹಾಗೂ ಕೆಲವು ವಿಶ್ವವಿದ್ಯಾಲಯಗಳು ಕೈಗೊಂಡಿರುವ ಅಲಕ್ಷಿತ ಸಮುದಾಯ ಕೇಂದ್ರಿತ (ಸಬಾಲ್ಟ್ರನ್) ಅಧ್ಯಯನದ ಫಲವಾಗಿ ಇಂದು ಗ್ರಾಮೀಣ ಬದುಕಿನಲ್ಲಿರುವ ಮೌಖಿಕ ಸಾಹಿತ್ಯದ ಬಗ್ಗೆ ಹೆಚ್ಚು ಒಲವುಗಳು ಬೆಳೆಯಲಾರಂಭಿಸಿವೆ. ಇದರಿಂದಾಗಿ ಮೌಖಿಕ ಚರಿತ್ರೆಯನ್ನು ಪ್ರಮುಖ ನೆಲೆಗೆ ತರುವ ಪ್ರಯತ್ನಗಳು ನಡೆಯುತ್ತಿವೆ.
ಗ್ರಾಮೀಣ ಜನತೆಯು ತಮ್ಮದೆ ಆದ ಬದುಕನ್ನು ಕಟ್ಟಿಕೊಂಡು, ತಮ್ಮ ಬದುಕಿನ ಬವಣೆಗಳನ್ನು ಮೌಖಿಕ ಸಾಹಿತ್ಯದಲ್ಲಿ ಮುಂದುವರೆಸಿಕೊಂಡು ಬಂದಿದ್ದಾರೆ. ಇಂತಹ ಗ್ರಾಮೀಣ ಬದುಕಿನಲ್ಲಿ ಅಂತರ್ಗತವಾಗಿರುವ ಚರಿತ್ರೆಯೊಂದನ್ನು ತಮ್ಮ ಸಾಹಿತ್ಯದಲ್ಲಿ ವ್ಯಕ್ತಪಡಿಸುವ ಜಾನಪದ ಹಾಡುಗಾರ್ತಿಯರಲ್ಲಿ ಕಂದಗಲ್ಲು ಓಬಕ್ಕನವರು ಒಬ್ಬರಾಗಿದ್ದಾರೆ.
ದಾವಣಗೆರೆ ತಾಲ್ಲೂಕು ಕಂದಗಲ್ಲು ಗ್ರಾಮದಲ್ಲಿ ನೆಲೆಸಿರುವ ಓಬಕ್ಕ ಸುಮಾರು ನೂರು ವರ್ಷಗಳ ಗಡಿಯಲ್ಲಿದ್ದಾರೆ. ತಮ್ಮ ಬದುಕಿನ ಒಂದು ಭಾಗವಾಗಿ ಸೋಬಾನೆ ಪದಗಳನ್ನು ಮೌಖಿಕವಾಗಿ ಹಾಡಿಕೊಂಡು ಬಂದ ಇವರು, ಜನಪದ ಸಾಹಿತ್ಯದ ಗಣ ಯನ್ನು ತಮಗರಿವಿಲ್ಲದಂತೆ ಕಾಪಾಡಿಕೊಂಡು ಬಂದಿದ್ದಾರೆ. ಪೀಳಿಗೆಯಿಂದ ಪೀಳಿಗೆಗೆ ಮೌಖಿಕವಾಗಿ ಮುಂದುವರೆದುಕೊಂಡು ಬಂದಿರುವ ಈ ಪ್ರಕಾರವು ಇಂದಿನ ಜಾಗತಿಕ ಭರಾಟೆಯಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳುವ ಹಂತಕ್ಕೆ ಬಂದು ನಿಂತಿದೆ.
ಓಬಕ್ಕನಿಗೆ ತಾನು ಕಾಪಾಡಿಕೊಂಡು ಬಂದಿರುವ ಈ ಸಾಹಿತ್ಯದ ಸೊಬಗನ್ನು ತನ್ನ ಮುಂದಿನ ಪೀಳಿಗೆಗೂ ಕಲಿಸಬೇಕೆಂಬ ಹಂಬಲವಿದೆ. ಆದರೆ ಇಂದಿನ ಜಾಯಮಾನದ ಮನಸುಗಳಿಗೆ ಇದು ವಲ್ಲದ ತುತ್ತಾಗಿದ್ದು, ನಮ್ಮ ಹೆಣ್ಣು ಮಕ್ಕಳು ಸಿನಿಮಾ ಧಾರಾವಾಹಿಗೆ ಜೋತುಬಿದ್ದಿರುವುದರ ಫಲವಾಗಿ ಸತ್ವಯುತವಾದ ತಮ್ಮ ಮನೆಯ ಸಾಹಿತ್ಯದ ಸೊಬಗನ್ನು ಹೊರಹಾಕಿ, ಅನ್ಯ ಸಂಸ್ಕಕೃತಿಯ ಅನುಕರಣೆ ಮತ್ತು ಸ್ವೀಕಾರದ ಕಾಲಘಟ್ಟದಲ್ಲಿದ್ದೇವೆ. ಇದಕ್ಕೆ ಪ್ರಮುಖವಾದ ಕಾರಣ ನಮ್ಮ ಸಂಸ್ಕಕೃತಿ, ಆಚಾರ, ವಿಚಾರಗಳಲ್ಲಿರುವ ಮೌಲ್ಯಗಳ ತಿಳುವಳಿಕೆಯ ಕೊರತೆಯು ಒಂದಾಗಿದೆ.
ಓಬಕ್ಕನಲ್ಲಿ ನೆಲೆಯೂರಿರುವ ಮೌಖಿಕ ಸಾಹಿತ್ಯದ ಸಾಮಥ್ರ್ಯವನ್ನು ಕುರಿತು ವಿಚಾರಿಸಿದಾಗ ನನಗೆ ದನಿಗೆ ಜೊತೆಗೂಡಿಸುವವರು ಸಿಕ್ಕರೆ ರಾತ್ರಿಯಿಡಿ ನಿರಂತರವಾಗಿ ತಾನು ಕಲಿತಿರುವ ಪದಗಳನ್ನು ಹಾಡುವುದಾಗಿ ಧೈರ್ಯದಿಂದ ಸವಾಲು ಹಾಕುತ್ತಿದ್ದರು. ಓಬಕ್ಕ ನೂರು ವರ್ಷದ ಆಜುಭಾಜಿನಲ್ಲಿದ್ದರೂ ತುಂಬು ಕ್ರಿಯಾಶೀಲತೆಯಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸುವುದರ ಜೊತೆಗೆ, ಇಂದಿನ ಮಹಿಳೆಯರು ತಮ್ಮ ಮನೆಯಲ್ಲಿ ಮಾಡುವಂತಹ ಸಣ್ಣಪುಟ್ಟ ಕಸೂತಿಯಂತಹ ಕೆಲಸಗಳನ್ನು ಅನುಕರಣೆಯಿಂದ ಕಲಿತು ವಿವಿಧ ಬಗೆಯ ಕಸೂತಿಯ ವಸ್ತುಗಳನ್ನು ತಯಾರಿಸುವ ಸಾಮಥ್ರ್ಯವನ್ನು ಹೊಂದಿದ್ದಾರೆ.
ಸುಮಾರು ಮೂವತ್ತನೇ ವಯಸ್ಸಿನಲ್ಲಿ ತನ್ನ ಗಂಡನನ್ನು ಕಳೆದುಕೊಂಡ ಓಬಕ್ಕ ಬದುಕನ್ನು ಧೈರ್ಯವಾಗಿ ಎದುರಿಸುವ ಎದೆಗಾರಿಕೆಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಓಬಕ್ಕನಿಗೆ ತಾನು ಕಲಿತಿರುವ ಪದಗಳನ್ನು ಇಂದು ಪ್ರದರ್ಶಿಸುವುದಕ್ಕೆ ಹಲವಾರು ಅಡೆತಡೆಗಳಿವೆ. ಅವುಗಳಲ್ಲಿ ಒಂದು, ತಾನು ವಂಶಪಾರಂಪರ್ಯವಾಗಿ ಉಳಿಸಿಕೊಂಡು ಬಂದಿರುವ ಪದಗಳನ್ನು ಹಾಡುವುದಕ್ಕೆ ದನಿಗೂಡಿಸುವಂತಹ ಸಮಾನ ಮನಸ್ಕರ ಕೊರತೆಯು ಒಂದಾಗಿದೆ. ಎರಡು, ನೂರರ ಗಡಿಯಲ್ಲಿರುವ ಇವರು ದನಿ ಎತ್ತಿ ಹಾಡುವಷ್ಟು ಸಾಮಥ್ರ್ಯವನ್ನು ಕಳೆದುಕೊಂಡಿದ್ದು, ಹೆಚ್ಚು ಸಮಯ ಹಾಡುವುದಕ್ಕೆ ಇವರ ದನಿಯಲ್ಲಿ ಸಾಮಥ್ರ್ಯವಿಲ್ಲ. ಹೀಗಾಗಿ ಇವರ ದನಿಯಲ್ಲಿ ನಡುಕವಿದೆ.
ಇದರಿಂದ ಇಂದು ಈ ಪದಗಳನ್ನು ಹಾಡುವುದಕ್ಕೆ ಅಡಚಣೆ ಉಂಟಾಗುತ್ತದೆ. ಮೂರು, ಇವರಿಗೆ ಪ್ರೊತ್ಸಾಹ ನೀಡಿ ಇವರ ಪದಗಳ ಮಹತ್ವವನ್ನು ಗುರುತಿಸುವವರ ಕೊರತೆಯಿದೆ. ನಾಲ್ಕು, ಇವರಲ್ಲಿನ ಈ ಸಾಹಿತ್ಯವನ್ನು ಆಸಕ್ತಿಯಿಂದ ತಿಳಿಯಬೇಕೆಂಬ ಹಂಬಲವುಳ್ಳವರ ಎದುರು ಹಾಡುವುದಕ್ಕೆ ಇವರಿಗೆ ಮುಜುಗರವಿದೆ. ಇದಕ್ಕೆ ಕಾರಣ ಇಂದಿನ ಕಾಲದಲ್ಲಿ ನಾವು ಹಾಡಿಕೊಂಡು ಬಂದಿರುವ ಹಾಡು (ಪದ)ಗಳಿಗೆ ಬೆಲೆಯಿಲ್ಲ ಎಂಬ ಕೀಳರಿಮೆಯ ಭಾವವನ್ನು ತಮ್ಮಲ್ಲಿ ಬೆಳೆಸಿಕೊಂಡಿದ್ದಾರೆ. ಹಾಗಾಗಿ ಈ ಪದಗಳನ್ನು ಸಂಗ್ರಹಿಸುವುದು ಹಾಗೂ ಇವರಿಗೆ ಸಂಗ್ರಹದ ಅಗತ್ಯತೆಯ ಅರಿವು ಮೂಡಿಸುವುದು ಕೂಡ ತ್ರಾಸದಾಯಕವಾದ ಕೆಲಸವಾಗಿದೆ.
ಇದು ಇಂದು ಈ ಮೌಖಿಕ ಸಾಹಿತ್ಯವನ್ನು ಕಡೆಗಣಿಸಿ ಆಧುನಿಕ ಸಂಗೀತ ಪ್ರಕಾರಕ್ಕೆ ಹೆಚ್ಚು ಜೋತುಬಿದ್ದಿರುವ ಪರಿಣಾಮದಿಂದಾಗಿ ಇಂತಹ ಸಾಹಿತ್ಯ ಪ್ರಕಾರವು ಇಂದು ಅವನತಿಯ ಅಂಚಿನಲ್ಲಿದೆ. ಓಬಕ್ಕನಂತಹ ಎಷ್ಟೋ ಜನಪದರಲ್ಲಿ ಕರಗತವಾಗಿರುವ ಸಾಹಿತ್ಯದ ಸೊಬಗು ಅಳಿವಿನಂಚಿನಲ್ಲಿದೆ.
ನಾನು ನನ್ನ ಬಾಲ್ಯದ ದಿನಗಳಿಂದಲೂ ಓಬಕ್ಕನನ್ನು ಹತ್ತಿರದಿಂದ ನೋಡಿದವನು. ಆದರೆ ನನಗೆ ಓಬಕ್ಕನ ಸಾಹಿತ್ಯದ ಮಹತ್ವ ದರ್ಶನವಾಗಿದ್ದು ನಾನು ಸಂಶೋಧನೆಗೆ ತೊಡಗಿಕೊಂಡ ಬಹುದಿನಗಳ ನಂತರ. ನನಗೆ ಓಬಕ್ಕ ಸಂಬಂಧದಲ್ಲಿ ಅಜ್ಜಿಯಾಗಬೇಕು ಎಂದುಕೊಂಡಿದ್ದೆ. ಆದರೆ ಓಬಕ್ಕನ ಪ್ರಕಾರ ನಾನು ಓಬಕ್ಕನಿಗೆ ತಮ್ಮನಾಗಿದ್ದೆ.
ನೂರು ವರ್ಷದ ಗಡಿಯಲ್ಲಿರು ಓಬಕ್ಕನಿಗೂ ಮೂವತ್ತರ ಗಡಿಯಲ್ಲಿರುವ ನನಗೂ ಅಕ್ಕ-ತಮ್ಮನ ಸಂಬಂಧ ಹೇಗೆ ಸಾಧ್ಯ ಎಂಬುದು ನನಲ್ಲಿ ಗೊಂದಲವನ್ನು ಮೂಡಿಸಿತ್ತು. ಆದರೆ ಓಬಕ್ಕ ಕಟ್ಟಿಕೊಡುವ ವಂಶವೃಕ್ಷದ ಪ್ರಕಾರ ಆಕೆಗೆ ನಾನು ತಮ್ಮನೆ ಆಗಿದ್ದೆ. ಈ ಕಾರಣದಿಂದಾಗಿ ನೂರರ ಪ್ರಾಯದ ಓಬಜ್ಜಿಯನ್ನು ಇಲ್ಲಿ ಓಬಕ್ಕ ಎಂಬುದಾಗಿಯೇ ಸಂಬೋಧಿಸುತ್ತಿದ್ದೇನೆ. ಓಬಕ್ಕನಲ್ಲಿ ಕರಗತವಾಗಿರುವ ಪದಗಳನ್ನು ಸಂಗ್ರಹ ಮಾಡುವಾಗ ನಾನು ಸಂಶೋಧನೆ ಮಾಡುತ್ತಿದ್ದೇನೆ. ನೀನು ಕಲಿತಿರುವ ಪದಗಳನ್ನು ಹಾಡು ಎಂದರೆ ಓಬಕ್ಕ ಹೇಳುವಂತಿರಲಿಲ್ಲ. ಇದಕ್ಕೆ ಕಾರಣ ತನ್ನ ಕಾಲದ ಪದಗಳು (ಸಾಹಿತ್ಯ) ಮಹತ್ವ ಕಳೆದುಕೊಂಡಿದೆ ಎಂಬ ಆತಂಕದಿಂದಲೊ ಅಥವಾ ಬದಲಾದ ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳುವ ಮಾನವ ಸಹಜ ಗುಣದಿಂದಲೊ ಓಬಕ್ಕ ಆಧುನಿಕ ಬದುಕಿನಲ್ಲಿ ಬೆರೆತುಕೊಂಡಿರುವ ಸಿನಿಮಾ ಮತ್ತು ಧಾರವಾಹಿ ಪ್ರಪಂಚಕ್ಕೆ ತನ್ನನ್ನು ತೆರೆದುಕೊಂಡಿದ್ದಳು.
ಇಂತಹ ಸಂದರ್ಭದಲ್ಲಿ ಓಬಕ್ಕನನ್ನು ಆಕೆಯ ಸಾಹಿತ್ಯ ಜಗತ್ತಿಗೆ ಕೊಂಡೊಯ್ಯಲು ವಿವಿಧ ತೆರನಾದ ಕಸರತ್ತುಗಳನ್ನು ಪ್ರದರ್ಶಿಸಬೇಕಾಯಿತು. ಕೊನೆಗೆ ನಿನಗೆ ವಯಸ್ಸಾಗಿದೆ, ನಿನ್ನ ಕಾಲದಲ್ಲಿ ಹಾಡುತ್ತಿದ್ದ ಪದಗಳನ್ನೆಲ್ಲ ಮರೆತಿರುವೆ. ನಿನಗೆ ‘ಅರವುಮರುವು’ ಎಂದಾಗ ತನ್ನ ಸಾಮಥ್ರ್ಯವನ್ನು ಪ್ರದರ್ಶಿಸುವ ನೆಲೆಯಲ್ಲಿ ಒಂದೊಂದಾಗಿಯೇ ತನ್ನ ಮನದ ಮೂಲೆಯಲ್ಲಿ ಕೇಂದ್ರಿಕರಿಸಿಕೊಂಡಿದ್ದ ಪದಗಳನ್ನು ಹಾಡುವ ಪ್ರಯತ್ನ ಮಾಡಿದರು.
ಓಬಕ್ಕನ ದನಿಯ ಸಮಸ್ಯೆಯನ್ನರಿತ ನಾನು ಅವರ ಬಳಿ ಒಂದೊಂದೆ ಸಾಲುಗಳನ್ನು ಸ್ಪಷ್ಟವಾಗಿ ತಿಳಿದುಕೊಂಡು ಬರೆಯಲು ಪ್ರಾರಂಭಿಸಿದೆ. ಒಂದು ಪದವನ್ನು ಸಂಪೂರ್ಣವಾಗಿ ಸಂಗ್ರಹಿಸಿದ ತರುವಾಯ ಅದರ ರಾಗ ಮತ್ತು ಲಯವನ್ನು ತಿಳಿಯುವ ಕಾತುರದಿಂದ ನಿಧಾನವಾಗಿ ಅವರಿಂದಲೇ ಪದಗಳನ್ನು ಹಾಡಿಸಿ, ಅವರ ಹಾಡಿನ ರಾಗವನ್ನು ಆಧುನಿಕ ವಿದ್ಯುನ್ಮಾನಗಳಲ್ಲಿ ಸಂಗ್ರಹಿಸಲು ಪ್ರಾರಂಭಿಸಿದೆ.
ಹೀಗೆ ಸಂಗ್ರಹಿಸಿದ ಪದಗಳಲ್ಲಿ ಬಸವಣ್ಣನ ಬದುಕಿಗೆ ಸಂಬಂಧಿಸಿದ ಕೆಲವು ಪದಗಳನ್ನು ಓಬಕ್ಕ ಹಾಡಿದ್ದರು. ನಾವು ಈಗಾಗಲೇ ಚರಿತ್ರೆಯ ಪಠ್ಯಗಳಲ್ಲಿ ಓದಿರುವುದಕ್ಕಿಂತ ಭಿನ್ನವಾದ ದರ್ಶನವೊಂದು ಓಬಕ್ಕನ ಪದಗಳಲ್ಲಿ ಕಂಡುಬಂದಿತು. ಆದ್ದರಿಂದ ಈ ನೆಲೆಯ ಜಾಡುಹಿಡಿದು ಜನಪದರ ಬದುಕಲ್ಲಿ ಕಂಡುಬರುವ ಸಮಾಜ ಸುಧಾರಕನಾದ ಬಸವಣ್ಣನ ಬದುಕನ್ನು ಅನಾವರಣಗೊಳಿಸುವ ನೆಲೆಯಲ್ಲಿ ‘ಓಬಕ್ಕನ ಬಸವದರ್ಶನ’ ಎಂಬ ಈ ಲೇಖನವನ್ನು ರಚಿಸುವ ಪ್ರಯತ್ನವನ್ನು ಇಲ್ಲಿ ಕೈಗೊಳ್ಳಲಾಗಿದೆ.
–2–
ಪ್ರಸ್ತುತ ಲೇಖನದಲ್ಲಿ ಓಬಕ್ಕ ಹಾಡಿದ ಸೋಬಾನೆ ಪದಗಳ (ಹಾಡು) ಮೂಲಕ ಜನಪದರು ಅಥವಾ ಸಾಮಾನ್ಯ ಜನತೆಯು ಸಮಾಜ ಸುಧಾರಕನಾದ ಬಸವಣ್ಣನನ್ನು ಕಾಣುವ ಬಗೆಯನ್ನು ಇಲ್ಲಿ ಚರ್ಚೆಗೆ ಒಳಪಡಿಸಲಾಗುವುದು. ನಮ್ಮ ಜನಪದ ಸಂಸ್ಕೃತಿ ಹಾಗೂ ಪರಂಪರೆಯಲ್ಲಿ ತಳವರ್ಗದ ಜನತೆಯ ಪರವಾಗಿ ಹೋರಾಡಿದ ಬಸವಣ್ಣನನ್ನು ಶಿವನ ಪ್ರತಿರೂಪವಾಗಿ ಸ್ವೀಕರಿಸಲಾಗಿದೆ.
ಇಲ್ಲಿ ಶಿವ ಬೇರೆಯಲ್ಲ, ಬಸವಣ್ಣ ಬೇರೆಯಲ್ಲ. ಇದಕ್ಕೆ ಕಾರಣ ಈ ನಾಡಿನ ಮೂಲ ಸಂಸ್ಕೃತಿಯು ಶೈವ ನೆಲೆಯದಾಗಿರುವುದು. ಹೀಗಾಗಿ ನಮ್ಮ ಜನಪದರು ಶಿವನ ಆರಾಧಕರಾಗಿ ಕಂಡುಬರುತ್ತಾರೆ. ತಮ್ಮ ಸಮುದಾಯದ ಜನತೆಯ ಪರವಾಗಿ ಹೋರಾಟ ನಡೆಸಿದ ಕ್ರಾಂತಿಕಾರರನ್ನು ಶಿವನ ಪ್ರತಿರೂಪವಾಗಿ ಕಾಣುತ್ತಾರೆ. ಆದ್ದರಿಂದ ಇಲ್ಲಿ ಶಿವ ಮತ್ತು ಬಸವಣ್ಣ ಒಂದೆಯಾಗಿ ಕಂಡುಬರುತ್ತಾರೆ. ತಳಸಮುದಾಯದ ಪ್ರಗತಿಗಾಗಿ ಬಸವಣ್ಣ ತನ್ನ ಹೋರಾಟವನ್ನು ನಡೆಸಿದ್ದು ಕ್ರಿ.ಶ 12ನೇ ಶತಮಾನದಲ್ಲಿ. ಆದರೆ ಬಸವಣ್ಣನ ಮೂಲ ಆಶಯಗಳನ್ನು ಸ್ಥಾಪಿತ ಹಿತಾಸಕ್ತಿಗಳು ಅವರ ಇಚ್ಚಾನುಸಾರವಾಗಿ ಬಳಸಿಕೊಂಡು, ಆತನ ವಿಚಾರಗಳ ಅಡಿಯಲ್ಲಿ ಮೂಲಭೂತವಾದ ಧರ್ಮವೊಂದನ್ನು ಸ್ಥಾಪಿಸಿಕೊಂಡು ಬಂದಿವೆ.
ಈ ಸ್ಥಾಪಿತ ಮೌಲ್ಯಗಳಿಂದಾಗಿ ಬಸವಣ್ಣನ ಉದಾರವಾದಿ ನಿಲುವುಗಳನ್ನು ಇಂದು ಹುಡುಕುವುದು ಕೂಡ ಸಾಧ್ಯವಾಗದಷ್ಟು ದೂರ ಸರಿದಿವೆ. ಆದರೆ ತನ್ನ ಹಿತಕ್ಕಾಗಿ ಹೊರಾಡಿದ ಗುರುವನ್ನು ನಿಜದ ನೆಲೆಯಲ್ಲಿ ಆರಾಧಿಸಿಕೊಂಡು ಬಂದಿರುವುದನ್ನು ಜನಪದ ಪರಂಪರೆಯಲ್ಲಿ ಇಂದಿಗೂ ಗುರುತಿಸಬಹುದಾಗಿದೆ.
ಜನಪದರು ಬಸವಣ್ಣನನ್ನು ತಮ್ಮ ವಿಮೋಚನೆಗಾಗಿ ಹೋರಾಡಿದ ದೇವರೆಂದು ಆರಾಧಿಸುವುದು ಮಾತ್ರವಲ್ಲ, ಬಸವಣ್ಣನ ಸಂಕಷ್ಟಗಳನ್ನು ತಮ್ಮ ನೋವುಗಳೆಂಬಂತೆ ಆತನ ನೋವುಗಳಿಗೆ ಮಿಡಿಯುತ್ತಾ ಬಂದಿದ್ದಾರೆ. ಈ ಮನೋಭಾವವು ಜನಪದರಲ್ಲಿನ ಹೃದಯ ವೈಶಾಲ್ಯವನ್ನು ಕಟ್ಟಿಕೊಡುತ್ತದೆ. ಇವರ ಈ ತುಡಿತ ಯಾವುದೇ ಸ್ವಾರ್ಥದಿಂದ ಕೂಡಿದ್ದಲ್ಲ, ಬದಲಾಗಿ ಇಲ್ಲಿ ಸಾಮಾಜಿಕ ಕಳಕಳಿ ಕಂಡುಬರುತ್ತದೆ.
ಶಿಷ್ಟ ಪರಂಪರೆಯು ಬಸವಣ್ಣನ ಮಹಿಮೆಯನ್ನು ತಮ್ಮ ಇಚ್ಚಾನುಸಾರ ವರ್ಣನಾತ್ಮಕ ನೆಲೆಯಲ್ಲಿ ಚಿತ್ರಿಸಿಕೊಂಡು, ಹಲವಾರು ಕಡೆಗಳಲ್ಲಿ ಪ್ರಕ್ಷಿಪ್ತಗಳನ್ನು ಉಂಟುಮಾಡಿದೆ. ಇದಕ್ಕೆ ಕಾರಣ ಸ್ಥಾಪಿತ ಹಿತಾಸಕ್ತಿಗಳಿಗೆ ಧಕ್ಕೆಯಾಗದಂತೆ ಕಾಪಾಡುವ ಮೂಲಕ ಅಸಮಾನತೆಯ ಸಾಮಾಜಿಕ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಬಂದಿರುವುದಾಗಿದೆ.
ಇಂತಹ ಪ್ರಕ್ಷಿಪ್ತ ಮಾದರಿಗಳನ್ನು ಹಲವಾರು ಶಿಷ್ಟ ಸಾಹಿತ್ಯ ಕೃತಿಗಳಲ್ಲಿ ಗುರುತಿಸಬಹುದಾಗಿದೆ. ಆದರೆ ಇದಕ್ಕೆ ಪರ್ಯಾಯ ನೆಲೆಯಲ್ಲಿ ಸಾಮಾನ್ಯ ಜನರ ಬದುಕಿಗಾಗಿ ಹೋರಾಡಿದ ಬಸವಣ್ಣನ ನೋವಿಗೆ ಜನಪದರು ತುಡಿಯುತ್ತ ಬಂದಿರುವ ಕೆಲವು ಸೋಬಾನೆ ಪದಗಳು ಈ ಮುಂದಿನಂತಿವೆ.
ಯಾರೇನೆಂದರು ನಿನಗೆ ಸದ್ಗುರು ದೇವ ||
ಬಾರ ದ್ರೋಹಿರಿ ಮನಗೆ
ಸದ್ಗರು ದೇವ | ನಿನಗ್ಯಾರೇನೆಂದರು ||
ಸಣ್ಣನಾಗಲಿ ಬಾಲ | ಲೋಲನಾಗಲಿ ಗುಣ
ಶೀಲನಾಗಲಿ ಮುಕ್ತಿ | ಕೀಲು ತೋರಿದೆ ಗುರುವೆ
ಸದ್ಗುರು ದೇವ | ನಿನಗ್ಯಾರೇನೆಂದರು ||
ಚಾರನೆಂಬುವರೇನು | ಸೂರನೆಂಬುವರೇನು
ಪರಮಾತ್ಮಕ ಸುವ್ವಿ
ಸದ್ಗುರು ದೇವ | ಯಾರೇನೆಂದರು ನಿನಗೆ ||
ಧರೆಯೊಳು ಕೂಡಲಿ | ಪುರದೊಳು ನೆಲೆಸಿರುವ
ವರಶ್ರೀಸಂಗಮ ಬಸವೇಸ್ಪುರಗೆ | ಯಾರೇನೆಂದರು
ಸದ್ಗುರು ದೇವ | ಯಾರೇನೆಂದರು ನಿನಗೆ ||
ಈ ಜನಪದ ಸಾಹಿತ್ಯವು ಬಸವಣ್ಣನ ಅಂತಿಮ ದಿನದ ಬದುಕಿನ ಸಂಕಷ್ಟಗಳನ್ನು ಅನಾವರಣಗೊಳಿಸುತ್ತದೆ. ಇಲ್ಲಿ ಬಸವಣ್ಣ ಮೌನ ತಾಳಿರುವುದಕ್ಕೆ ಹಲವಾರು ಕಾರಣಗಳಿವೆ. ತನ್ನ ಹೋರಾಟದ ಭಕ್ತಿಯ ಮಾರ್ಗವನ್ನು ಕುರಿತು ಬಸವಣ್ಣ ಹೇಳುವ ‘ಭಕ್ತಿಯೆಂಬುದು ಮಾಡಬಾರದು ಕಾಣ| ಗರಗಸವಿದ್ದಂತೆ’ ಎಂಬ ಮಾತು ಆತನ ಬದುಕಿನ ಸಂಕಷ್ಟಗಳನ್ನು ಕಟ್ಟಿಕೊಡುತ್ತದೆ.
ಇಲ್ಲಿ ತನ್ನ ಹೋರಾಟದ ಹಾದಿಯಲ್ಲಿ ಈತನು ಹಲವಾರು ಬಗೆಯ ನೋವನ್ನು ಅನುಭವಿಸಿರುತ್ತಾನೆ. ಒಂದೆಡೆ ಬ್ರಾಹ್ಮಣ್ಯವನ್ನು ಧಿಕ್ಕರಿಸುವ ಮೂಲಕ ಶೂದ್ರ ಸಮುದಾಯದ ಸಮಾನತೆಗಾಗಿ ಹೋರಾಟ ನಡೆಸುತ್ತಾನೆ. ಮತ್ತೊಂದೆಡೆ ಸಮಾಜದ ಪ್ರಬಲ ವರ್ಗವಾದ ಪುರೋಹಿತಶಾಹಿಯನ್ನು ಎದುರು ಹಾಕಿಕೊಳ್ಳುತ್ತಾನೆ.
ಈ ಸಂದರ್ಭದಲ್ಲಿ ರಾಜಾಶ್ರಯದಲ್ಲಿದ್ದ ಬಸವಣ್ಣನಿಗೆ ತಳಸಮುದಾಯದ ಪರವಾದ ಹೋರಾಟ ಮಾಡುವುದಕ್ಕೆ ಸ್ವತಂತ್ರ ಅಸ್ತಿತ್ವ ಇರಲಿಲ್ಲ. ಇಲ್ಲಿ ರಾಜನ ಆಜ್ಞೆಯನ್ನು ತಿರಸ್ಕರಿಸಿದರೆ ತನ್ನ ಪದವಿಯನ್ನು ಕಳೆದುಕೊಳ್ಳುವುದು ಮಾತ್ರವಲ್ಲ, ಕಠಿಣ ಶಿಕ್ಷೆಗೂ ಗುರಿಯಾಗಬೇಕಾದ ಸಂಕಷ್ಟದ ದಿನಗಳು ಬಸವಣ್ಣನ ಮುಂದಿದ್ದವು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತಾನು ಕಟ್ಟಿದ ಸಮಾನತೆಯ ಆಶಯಹೊತ್ತ ಅನುಭವ ಮಂಟಪವನ್ನು ಸಮಾನ ನೆಲೆಯಲ್ಲಿ ಮುನ್ನಡೆಸಬೇಕಾಗಿತ್ತು. ಇಂತಹ ಚಾರಿತ್ರಿಕ ಒತ್ತಡದ ಪರಿಸ್ಥಿತಿಯಲ್ಲಿನ ಬಸವಣ್ಣನ ಬದುಕನ್ನು ಕುರಿತು ಜನಪದರು ಆತನ ನೋವಿಗೆ ಮಿಡಿಯುತ್ತ ಬಂದಿದ್ದಾರೆ.
ಜಾನಪದವು ಶಿಷ್ಟ ಸಾಹಿತ್ಯ ಪರಂಪರೆಯಂತೆ ಬಸವಣ್ಣನ ಬದುಕನ್ನು ಹಾಗೂ ಆತನ ಹೋರಾಟದ ನೆಲೆಗಳನ್ನು ದೈವಾಂಶ ಸಂಭೂತ ನೆಲೆಯಲ್ಲಿ ವೈಭವಿಕರಿಸುವುದಿಲ್ಲ. ಜನಪದ ಪರಂಪರೆಯಲ್ಲಿ ಯಾವುದೇ ವೈಭವವಿಲ್ಲದೆ ಆತನ ವಾಸ್ತವ ಬದುಕನ್ನು ತಮ್ಮ ಮೌಖಿಕ ಸಾಹಿತ್ಯದಲ್ಲಿ ಅನಾವರಣಗೊಳಿಸುತ್ತಾರೆ. ಜನಪದರು ಬಸವಣ್ಣನನ್ನು ಶಿಷ್ಟ ಸಾಹಿತ್ಯದಿಂದ ರಚನೆಯಾದ ಚರಿತ್ರೆಯ ಮೂಲಕ ಅಧ್ಯಯನ ಮಾಡಿ ಕಂಡುಕೊಂಡವರಲ್ಲ. ಬದಲಾಗಿ ಕಾಲದಿಂದ ಕಾಲಕ್ಕೆ ಹರಿದುಬಂದ ಮೌಖಿಕ ಪರಂಪರೆಯಿಂದ ಆತನನ್ನು ಕಂಡುಕೊಂಡವರು.
ಹೀಗಾಗಿ ಇಲ್ಲಿ ಆತನ ನೋವು ನಲಿವುಗಳನ್ನು ಯಥಾ ಪ್ರಕಾರವಾಗಿ ಮುಂದುವರೆಸಿಕೊಂಡು ಬಂದಿದ್ದಾರೆ. ‘ಯಾರೇನೆಂದರು ನಿನಗೆ ಸದ್ಗುರು ದೇವ’ ಮತ್ತು ‘ಬಾರ ದ್ರೋಹಿರಿ ಮನಗೆ’ ಎಂಬ ನುಡಿಗಳು ಜನಪದರು ಕಂಡುಕೊಂಡಿರುವ ಬಸವ ದರ್ಶನವನ್ನು ಪ್ರತಿನಿಧಿಸುತ್ತವೆ. ಹೀಗಾಗಿ ಶಿಷ್ಟ ಸಾಹಿತ್ಯವು ಕಟ್ಟಿಕೊಡುವ ಚರಿತ್ರೆಗಿಂತ ಭಿನ್ನವಾದ ಚರಿತ್ರೆಯೊಂದು ನಮ್ಮ ಜಾನಪದರ ಬದುಕಿನೊಳಗೆ ಅಂತರ್ಗತವಾಗಿದೆ.
ಜನಪದರು ಬಸವಣ್ಣನ ನೋವು ನಲಿವುಗಳನ್ನು ಸಮಾನ ನೆಲೆಯಲ್ಲಿ ಚಿತ್ರಿಸಿಕೊಂಡು ಬಂದಿದ್ದಾರೆ. ಇಲ್ಲಿ ಆತನ ಕಲ್ಯಾಣ ಹಾಗೂ ಸರಸ ಸಲ್ಲಾಪಗಳು ಮಾನವ ಸಹಜ ನೆಲೆಯಲ್ಲಿ ವ್ಯಕ್ತವಾಗುತ್ತವೆ. ಬಸವಣ್ಣ ಮತ್ತು ಗಂಗಾಭಿಕೆಯ ಕಲ್ಯಾಣದ ಸಂದರ್ಭವನ್ನು ಹಾಗೂ ಅಲ್ಲಿನ ಸಲ್ಲಾಪದ ಕ್ಷಣಗಳನ್ನು ತಮ್ಮ ಬದುಕಿನೊಂದಿಗೆ ಸಮೀಕರಿಸಿಕೊಂಡು ಬಂದಿರುವುದನ್ನು ನಾವು ಜಾನಪದ ಪರಂಪರೆಯಲ್ಲಿ ಮಾತ್ರ ಗುರುತಿಸಬಹುದಾಗಿದೆ.
ಜನಪದರು ನಿರಂತರವಾಗಿ ಕಾಲದಿಂದ ಕಾಲಕ್ಕೆ ತಾವು ಆಚರಿಸಿಕೊಂಡು ಬಂದಿರುವ ಸಂಪ್ರದಾಯ, ಆಚರಣೆ, ಹಾಸ್ಯ, ವಿನೋದವನ್ನು ಬಸವಣ್ಣನ ಕಲ್ಯಾಣದೊಂದಿಗೆ ಸಮೀಕರಿಸಿಕೊಂಡು ಪದ ಕಟ್ಟಿ ಹಾಡುತ್ತಾ ಬಂದಿದ್ದಾರೆ. ಅದು ಓಬಕ್ಕನ ಸೋಬಾನೆ ಪದಗಳಲ್ಲಿ ಹೀಗೆ ವ್ಯಕ್ತವಾಗಿದೆ.
ಗುರುವಿನ ಮನೆಯಾಗೆ
ಅರುವಿನ ಲಯದಾಗೆ
ಅರುವಿನ ಮಂಟಪದ ಮನೆಯಾಗೆ
ಕರುಣ ಕನೆಂದುಕರೆವರು ಸೋಬಾನೆ||
ಬಸವಯ್ಯ ಶ್ರೀಗಂಗೆ
ಕುಶಲದಿಂ ಕರವಿಡಿದು | ಬಸವಣ್ಣ
ಬಂದು ಹಸೆಯಲ್ಲಿ ಕುಳಿತರು ಸೋಬಾನೆ||
ಪದ್ಮಲೋಚನೆ ಗಂಗೆ
ಎದ್ದು ಸೆರಗ ಬಿಗಿದು | ಮುದ್ದು ಬಸವಯ್ಯಗೆ
ಅರಿಶಿಣವ ಧರಿಸ್ಯಾಳೆ ಸೋಬಾನೆ ||
ಗಂಧ ಹಾಕುಸ್ತಿ ಹಿಡುಲಾಗ ಸೋಬಾನೆ
ಗಂಧ ಮೇಲಕ್ಕೆ ಎಳವುತ ಸೋಬಾನೆ
ಅಂದು ಆರುತಿಯಾ ಬೆಳಗುತ ಸೋಬಾನೆ
ಗಂಧ ಮೇಲಕ್ಕೆ ಎಳವುತ ಶ್ರೀಗಂಗೆ
ಬಂದು ಹಸೆಯಲ್ಲಿ ಕುಳಿತಳು ಸೋಬಾನೆ ||
ಬಸವಯ್ಯ ನೀನೊಮ್ಮೆ
ಎಣ್ಣೆ ಅರಿಶಿಣವ ಧರಿಸಪ್ಪ ಸೋಬಾನೆ
ಬಸವಯ್ಯ ಗಂಧ ಹಾಕುಸ್ತಿ ಹಿಡುಲಾಗ
ಅಂದು ಆರುತಿಯಾ ಬೆಳಗುತ
ಬಂದು ಹಸೆಯಲ್ಲಿ ಕುಳಿತರು ಸೋಬಾನೆ ||
ಬಂದು ಹಸೆಯಲ್ಲಿ ಕುಳಿತರು ಬಸವಣ್ಣ
ಸಸಿಮುಖಿಯರೆಲ್ಲ ನಗುತಾರೆ ಸೋಬಾನೆ ||
ಶರ್ತೆಶ ಕೋಟಿಗೆ ವರ್ಕಾಳ ಸಲಹುತ
ನಿತ್ಯಗೆ ಪರಮ ವಿರಕ್ತನಿಗೆ | ಭೂಗಳಿಯ ಕರ್ತನಿಗೆ
ಜೀವ ಕಮ್ಯಾರ್ತನಿಗೆ ಸೋಬಾನೆ
ಇವ ಸದ್ಗುರು ಬಸವದೇವನಿಗೆ ಸೋಬಾನೆ ||
ಅಂತರಂಗನ ಪೇಟೆ ಸಂತೆಗೊಗನ ತಂಗಿ
ಸಿಂತಿಸುತ ಕೊಂಡೆ ರತುನಾವ ಸೋಬಾನೆ ||
ಸಿಂತುಸುತ ಕೊಂಡೆ ರತುನಾದ ಬೆಳಕಿಲಿ
ಕಾಂತೆ ಕೇಳಮ್ಮ ಕೌತುಕವ ಸೋಬಾನೆ ||
ರತುನಾದ ಬೆಳಕಲಿ ಕಾಂತೆ ಕೇಳಮ್ಮ
ಕೌತುಕವ ಶ್ರೀಗುರು ಬಸವಂಗೆ | ಶಿವನ ಕುಮಾರಂಗೆ
ನಾಗಭೂಷಣ ನಮಿತನಿಗೆ ಸೋಬಾನೆ ||
ಸದ್ಗುರು ಬಸವಯ್ಯ ದೇವನಿಗೆ
ಸತ್ಯ ಸದ್ಗುರುವಂಗೆ | ನಿತ್ಯಸುಳ್ಳಾಡಿ ದಿನಗಳಿದೆ
ಮತ್ತುಟ್ಟೊ ಬಾದೆ ಬಿಡದಮ್ಮ ಸೋಬಾನೆ ||
ಪ್ರಸ್ತುತ ದಿನಗಳಲ್ಲಿ ಸ್ಥಾಪಿತ ನೆಲೆಗೆ ತಳ್ಳಿರುವ ಬಸವಣ್ಣನನ್ನು ಒಂದು ಜಾತಿಯ ನಾಯಕನೆಂದು ಬಿಂಬಿಸುವ ಮೂಲಕ ಉಳಿದಂತ ಸಮುದಾಯಗಳು ‘ಇವ ನಮ್ಮವನಲ್ಲ’ ಎನ್ನುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಇದಕ್ಕೆ ಬಸವಣ್ಣನ ಸುತ್ತ ಸುತ್ತುವರೆದಿರುವ ಮೂಲಭೂತವಾದ ಧೋರಣೆಯು ಪ್ರಮುಖ ಕಾರಣವಾಗಿದೆ. ಈ ಮೂಲಭೂತವಾದಿ ನೆಲೆಗಳು ಜೀವ ತಳೆಯುವುದು ಶಿಷ್ಟ ಸಮುದಾಯದಲ್ಲಿ ಮತ್ತು ಆಧುನಿಕ ಸಂದರ್ಭದ ಶಿಕ್ಷಿತ ಸಮುದಾಯದಲ್ಲಿ. ಆದರೆ ಈ ಅಸಮಾನತೆಯ ಧೋರಣೆಗಳು ಜನಪದರಲ್ಲಿ ವ್ಯಕ್ತವಾಗಿರುವುದು ಕಂಡುಬರುವುದಿಲ್ಲ. ಇದು ಜನಪದರಲ್ಲಿರುವ ವಿಶ್ವಮಾನವ ಪ್ರಜ್ಞೆಯನ್ನು ಅನಾವರಣಗೊಳಿಸುತ್ತದೆ. ಸಮಾಜದ ಒಳಿತಿಗಾಗಿ ನಿಸ್ವಾರ್ಥದಿಂದ ಹೋರಾಡಿದವರು ಯಾರೇ ಆಗಿರಲಿ, ಅವನು ಯಾವುದೇ ಜಾತಿ, ಸಮುದಾಯಕ್ಕೆ ಸೇರಿದ್ದರು ಸಹ ಅವನನ್ನು ತಮ್ಮ ನಾಯಕನೆಂದು, ದೈವವೆಂದು ಆರಾಧಿಸುತ್ತಾರೆ. ಈ ಕಾರಣದಿಂದ ಮೂಲತಃ ಬ್ರಾಹ್ಮಣನಾದ ಶಿವಶರಣ ಬಸವಣ್ಣನನ್ನು ಕೂಡ ಶಿವ ಸ್ವರೂಪಿಯಾಗಿ ಕಂಡುಕೊಡಿದ್ದಾರೆ. ಆತನ ನೋವು ನಲಿವುಗಳನ್ನು ತಮ್ಮ ನೋವು ನಲಿವುಗಳೊಂದಿಗೆ ಸಮೀಕರಿಸಿಕೊಂಡು ಪದಕಟ್ಟಿ ಹಾಡುತ್ತ ಬಂದಿದ್ದಾರೆ.
ಜಾನಪದರು ಸೃಷ್ಟಿಸಿಕೊಂಡು ಬಂದಿರುವ ಈ ಮೇಲಿನ ಹಾಡಿನಲ್ಲಿ ಬಸವಣ್ಣ ಎಲ್ಲಿಯೂ ರಾಜಪ್ರಭುತ್ವದ ಪ್ರತಿನಿಧಿಯಾಗಿ ಕಂಡುಬರುವುದಿಲ್ಲ.
ಜಾನಪದರ ಬದುಕಿನೊಳಗಿನ ಸಾಮಾನ್ಯ ವ್ಯಕ್ತಿಯಾಗಿ ಪ್ರತಿನಿಧಿಸುತ್ತಾನೆ. ಇಲ್ಲಿ ಬಸವಣ್ಣ ಮತ್ತು ಗಂಗಾಬಿಕೆಯರ ಕಲ್ಯಾಣವನ್ನು ಶಿವ ಮತ್ತು ಗಂಗೆಯರೊಂದಿಗೆ ಸಮೀಕರಿಸಿಕೊಂಡು ಬಂದಿದ್ದಾರೆ. ಇದು ಜನಪದ ಪರಂಪರೆಯಲ್ಲಿನ ವಿಶಿಷ್ಟ ದರ್ಶನವಾಗಿ ಕಂಡುಬರುತ್ತದೆ. ಶಿಷ್ಟ ಪರಂಪರೆಯು ಎಲ್ಲವನ್ನು ಹೊಡೆದು ನೋಡುವಂತಹ ಮೂಲಭೂತವಾದಿ ಗುಣಗಳನ್ನು ಸೃಷ್ಟಿಸುತ್ತ ಬಂದಿರುವ ಸಂದರ್ಭದಲ್ಲಿ, ಇದಕ್ಕೆ ಪರ್ಯಾಯವೆಂಬಂತೆ ಜನಪದ ಪರಂಪರೆಯು ಎಲ್ಲವನ್ನು ಸಮೀಕರಿಸಿಕೊಂಡು ಬಂದಿರುವುದನ್ನು ಈ ಪದಗಳಲ್ಲಿ ಗುರುತಿಸಬಹುದಾಗಿದೆ. ಇದು ಶಿಷ್ಟ ಪರಂಪರೆಗೆ ಜನಪದ ಪರಂಪರೆಯು ಒಡ್ಡುತ್ತ ಬಂದಿರುವ ಪ್ರತಿರೋಧದ ನೆಲೆಯೂ ಹೌದು. ಶಿಷ್ಟರು ಅಸಮಾನತೆಯ ವಿರುದ್ಧ ಹೋರಾಡಿದ ಬಸವಣ್ಣನ್ನು ಒಂದು ಜಾತಿ, ಸಮುದಾಯಕ್ಕೆ ಕೇಂದ್ರಿಕರಿಸುವ ಮೂಲಕ ಅನಾರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡುತ್ತ ಬಂದಿದ್ದಾರೆ. ಆದರೆ ಜನಪದರು ಸಮಾಜ ಸುಧಾರಕ ಬಸವಣ್ಣನನ್ನು ಶಿವನೊಂದಿಗೆ ಸಮೀಕರಿಸುವ ಮೂಲಕ ಗುಪ್ತಗಾಮಿನಿಯಂತೆ ಆರೋಗ್ಯಕರವಾದ ಸಮಾಜವನ್ನು ಕಟ್ಟುತ್ತ ಬಂದಿದ್ದಾರೆ. ಹೀಗಾಗಿಯೆ ಇಂದಿಗೂ ಬಸವಣ್ಣ ತಳಸಮುದಾಯದ ಜನತೆಯ ಅಂತರಾಳದಲ್ಲಿ ನೆಲೆಯೂರಿದ್ದಾನೆ.
ಇದೇ ಪದ (ಹಾಡು) ದಲ್ಲಿ ಕೊನೆಯದಾಗಿ ಕಂಡುಬರುವ ಸಾಲು ಜನಪದರ ಸ್ವಾಮಿ ನಿಷ್ಠೆಯನ್ನು ಎತ್ತಿಹಿಡಿಯುತ್ತದೆ. ‘ಸತ್ಯ ಸದ್ಗುರುವಂಗೆ ನಿತ್ಯಸುಳ್ಳಾಡಿ ದಿನಗಳಿದೆ ಮತ್ತುಟ್ಟೊ ಬಾದೆ ಬಿಡದಮ್ಮ ಸೋಬಾನೆ’ ಎಂಬುದು ಇವರ ಸ್ವಾಮಿನಿಷ್ಠೆಯ ಪ್ರತೀಕವಾಗಿದೆ. ಈ ನಿಷ್ಠೆಯಿಂದಾಗಿಯೇ ತಳಸಮುದಾಯವು ಮೂಲಭೂತವಾದಿಗಳು ತಮ್ಮ ಅನುಕೂಲಕ್ಕಾಗಿ ಸೃಷ್ಠಿಸಿರುವ ಕಪಟ ತಂತ್ರಗಳನ್ನು ತಮ್ಮ ಬದುಕಿನ ಭಾಗವೆಂಬಂತೆ ಅನಿವಾರ್ಯವಾಗಿ ಮುಂದುವರೆಸಿಕೊಂಡು ಬಂದಿದ್ದಾರೆ.
ಬಸವಣ್ಣನ ವಿಚಾರಗಳನ್ನು ಮೀರಿದರೆ, ಆತನ ತತ್ವ ಚಿಂತನೆಗಳಿಗೆ ವಿರುದ್ಧವಾಗಿ ನಡೆದುಕೊಂಡರೆ ಮುಂದಿನ ಜನ್ಮದಲ್ಲೂ ಇದೇ ನರಕವನ್ನು ಅನುಭವಿಸಬೇಕಾಗುತ್ತದೆ ಎಂಬುದು ಇವರ ನಂಬಿಕೆಯಾಗಿದೆ. ಹೀಗಾಗಿಯೇ ಬಸವಣ್ಣನ ಮೂಲ ತತ್ವ ಸಿದ್ಧಾಂತಗಳು ಇಂದಿಗೂ ಜೀವಂತಿಕೆಯನ್ನು ಪಡೆದುಕೊಂಡಿದ್ದು, ಇವನ್ನು ತಮ್ಮ ಬದುಕಿನ ಒಂದು ಭಾಗವೆಂಬಂತೆ ಮುಂದುವರೆಸಿಕೊಂಡು ಬಂದಿದ್ದಾರೆ.
ಆದರೆ ಮೂಲಭೂತವಾದಿ ಮನಸ್ಥಿತಿಗಳು ಬಸವಣ್ಣನ ವಿಚಾರಧಾರೆಗಳನ್ನು ತೊಡೆದುಹಾಕಿ, ಆತನ ಪ್ರತಿಮೆಯ ಮೂಲಕವೇ ಮೂಲಭೂತವಾದ ಧರ್ಮವೊಂದನ್ನು ಪ್ರತಿಷ್ಠಾಪಿಸಿಕೊಂಡು ರಾಜರೋಷವಾಗಿ ವೈಚಾರಿಕತೆಯ ಹರಿಕಾರನಾದ ಬಸವಣ್ಣನಿಗೆ ಅಪಮಾನವೆಸಗುತ್ತಿದ್ದಾರೆ. ಇಲ್ಲಿ ಜನಪದರು ಬಸವನಿಗೆ ಸುಳ್ಳಾಡಿದರೆ, ತಪ್ಪಾಗಿ ನಡೆದುಕೊಂಡರೆ ನಮಗೆ ಶಿಕ್ಷೆ ತಪ್ಪಿದ್ದಲ್ಲ ಎಂಬುದಾಗಿ ತಮ್ಮೆಲ್ಲ ಕಾರ್ಯಗಳನ್ನು ಆತ್ಮವಿಮರ್ಶೆ ಮಾಡಿಕೊಂಡರೆ, ಶಿಷ್ಟ ಸಮುದಾಯವು ತಾವು ಮಾಡುತ್ತಿರುವ ಕಾರ್ಯ ಬಸವನಿಗೆ ಸಂಪೂರ್ಣ ವಿರುದ್ಧವಾದುದೆಂದು ತಿಳಿದಿದ್ದರೂ ಇವರೆಲ್ಲಿಯೂ ಇಂತಹ ಆತ್ಮವಿಮರ್ಶೆಗೆ ಮುಂದಾಗಿರುವ ನಿದರ್ಶನಗಳು ಚರಿತ್ರೆಯಲ್ಲಾಗಲಿ, ಇವರ ಧರ್ಮಗ್ರಂಥ, ಪುರಾಣಗಳಲ್ಲಾಗಲಿ ಕಂಡುಬರುವುದಿಲ್ಲ. ಇದು ಜನಪದರು ಕಂಡುಕೊಂಡಿರುವ ಬಸವದರ್ಶನ, ಹಾಗೆಯೇ ಅವರ ಜೀವನ ದರ್ಶನವಾಗಿದೆ.
ಜನಪದರು ಅಕ್ಷರ ವಂಚಿರಾದರೂ ಲೋಕಜ್ಞಾನವನ್ನು ದಾರ್ಶನಿಕ ನೆಲೆಯಲ್ಲಿ ಅರಿತುಕೊಂಡವರು. ಇಲ್ಲಿನ ಹಾಡಿನಲ್ಲಿ ಕಂಡುಬರುವಂತೆ ಬಸವಣ್ಣನು ಬಿಜ್ಜಳನ ಆಸ್ಥಾನದಲ್ಲಿ ಆರ್ಥಿಕ ಮಂತ್ರಿಯಾಗಿದ್ದ ವಾಸ್ತವವನ್ನು ಅರಿತುಕೊಂಡಿದ್ದಾರೆ. ಆದರೆ ಈ ಸತ್ಯ ಜನಪದರಿಗೆ ತಿಳಿದಿದ್ದಾದರೂ ಹೇಗೆ ಎಂಬ ಅನುಮಾನ ಕಾಡುತ್ತದೆ. ಅಷ್ಟೇ ಅಲ್ಲದೆ ಇವರು ಬಸವಣ್ಣನನ್ನು ಕೇವಲ ಮಂತ್ರಿಯಾಗಿ ನೋಡುವುದಿಲ್ಲ. ಬಸವಣ್ಣನನ್ನು ಅಧಿಕಾರದ ನೆಲೆಯಲ್ಲಿ ನೋಡದೆ ಸಮಾನತೆಯನ್ನು ಸಾರಿದ ಕ್ರಾಂತಿ ಪುರುಷನಾಗಿ ನೋಡುತ್ತಾರೆ. ಹೀಗಾಗಿಯೇ ಇಲ್ಲಿ ಬಸವಣ್ಣನನ್ನು ಕುರಿತು ವಣ ್ಸುವಾಗ ‘ಗುರುವಿನ ಮನೆಯಾಗೆ ಅರುವಿನ ಲಯದಾಗೆ, ಅರುವಿ ಮಂಟಪದ ಮನೆಯಾಗೆ ಕರುಣ ಕನೆಂದು ಕರೆವರು’ ಎಂಬುದಾಗಿ ಆತನ ಬದುಕಿನ ಚಿತ್ರಣವನ್ನು ಕಟ್ಟಿಕೊಡುತ್ತಾರೆ. ಈ ಮಂತ್ರಿಯಾದ ಬಸವಣ್ಣನನ್ನು ತಮ್ಮ ಬದುಕಿಗೆ ಹತ್ತಿರವಾದ ನೆಲೆಯಲ್ಲಿ ಜನಪದರು ಸೃಷ್ಟಿಸಿಕೊಂಡಿದ್ದಾರೆ. ಗುರುವಿನ ಮನೆ ಮತ್ತು ಅರುವಿನ ಲಯ ಎಂಬ ಜನಪದರ ಪರಿಕಲ್ಪನೆಯು ಅನುಭವ ಮಂಟಪದ ಕುರಿತಾಗಿದೆ. ಜನಪದರಿಗೆ ಅನುಭವ ಮಂಟಪವು ಗುರುವಿನ ಮನೆಯಷ್ಟೆ ಅಲ್ಲದೆ ಅರಿವಿನ ತಾಣವು ಹೌದು. ಈ ಸೃಷ್ಟಿಯು ನಾವು ಲಿಖಿತ ಚಾರಿತ್ರಿಕ ದಾಖಲೆಗಳಾದ ವಚನಗಳು ಹಾಗೂ ಶಾಸನಗಳಲ್ಲಿ ಬಸವಣ್ಣನನ್ನು ನೋಡಿರುವುದಕ್ಕಿಂತ ಭಿನ್ನವಾದ ಬಸವ ದರ್ಶನವು ಜನಪದರಲ್ಲಿ ಕಂಡುಬರುತ್ತದೆ.
ಚಿನ್ನದ ಸಿಂಬೆಯ ಸುತ್ತಿ ರನ್ನದ ಕೊಡವ ತಗುದೆ
ಜಲದಿ ಲಗ್ಣಿಯ ಮಗುವಳೆ ಸೋಬಾನೆ ||
ಜಲದಿ ಲಗ್ಣಿಯ ಮಗುವ ಶರಣ ಯ ಕಂಡೆ
ಶಿವಶರಣರು ಜಪವ ಮರೆತಾರೆ ಸೋಬಾನೆ ||
ಶಿವಶರಣರು ಜಪವಿನ್ನು ಮರೆತು ಕೇಳ್ಯಾರೆ
ಯಾವ ಜಂಗಮರ ಮಗಳಮ್ಮ ಸೋಬಾನೆ ||
ಜಂಗಮರ ಸೊಸಿಯಯ್ಯ ಲಿಂಗ ಉಳ್ಳರು ಮಗಳು
ಬಿಂಗಿಬ್ರಹ್ಮನ ಕಿರಿ ತಂಗಿ ಸೋಬಾನೆ ||
ಬಿಂಗಿನೇ ಬ್ರಹ್ಮರ ಕಿರಿ ತಂಗಿ ಗುರುಗಳೇ
ನೀವ್ ಬನ್ನಿರಿ ನಮ್ಮ ಅರಮನೀಗೆ ಸೋಬಾನೆ ||
ಲಿಂಗೇನ ಉಳ್ಳರೇ ನಿಜವುಳ್ಳ ಭಕ್ತರೇ
ಸಂಗಮನಯ್ಯ ಬಸವಣ್ಣ ಸೋಬಾನೆ ||
ಸಂಗುಮನಯ್ಯ ಬಸವಣ್ಣ ಮೂವರೇ
ಬಂದಾರು ಗಿರಿರಾಜರ ಅರಮನೆಗೆ ಸೋಬಾನೆ ||
ಎಂದು ಬರದ ಬಸವಣ್ಣ ಈಗ್ಯಾಕೆ ಬಂದ್ಯಪ್ಪ
ಕುಂದಾರಗೊಳ್ಳ ಮಣ ಗೊಳ್ಳ ಸೋಬಾನೆ ||
ಕುಂದ್ರಾಕೆ ಬಂದಿಲ್ಲ ನಿದ್ರಾಕೆ ಬಂದಿಲ್ಲ
ಸಣ್ಣಳು ಗಿರಿಜಮ್ಮನ ಕೇಳಾ ಬಂದೆ ಸೋಬಾನೆ ||
ತುಪ್ಪನ್ನ ಉಣ್ಣವಳೆ ಪಟ್ಟೆಸೀರೆ ಉಡುವೋಳೆ
ಪಟ್ಟೆ ಮಂಚುದುಲೆ ಮಲಗೋಳೆ ಸೋಬಾನೆ ||
ಪಟ್ಟೇನೆ ಮಂಚುದುಲೇ ಮಲಗುವಳೆ ಗಿರಿಜಮ್ಮ
ಚಿಕ್ಕೊಳು ಗಿರಿಜಮುನ ಕೊಡುಲಾರೆ ಸೋಬಾನೆ ||
ಹಾಲನ್ನ ಉಣ್ಣವಳೇ ಸಾಗಿಸೀರುಡುವೋಳೆ
ಸಾಮ ಮಂಚುದುಲೆ ಮಲಗೋಳೆ ಸೋಬಾನೆ ||
ಸಾಮೇನೆ ಮಂಚುದುಲೆ ಮಲಗೋಳೆ ಗಿರಿಜಮ್ಮ
ಸಣ್ಣಳು ಗಿರಿಜಮುನ ಕೊಡುಲಾರೆ ಸೋಬಾನೆ ||
ಹಟ್ಯಾಗೆ ಗಿರಿಜಮ್ಮ ಕುಟ್ಟುತೇನ್ ಪಾಡ್ಯಾಳೆ
ಅಪ್ಪೋಜಿ ನನ್ನ ಕೊಡುತಾರೆ ಸೋಬಾನೆ ||
ಅಪ್ಪೋಜಿ ನನ್ನ ಕೊಡುತಾರೆ ಕೈಲಾಸದ
ಎಪ್ಪತ್ತೊಂದ್ ಜಡಿಯ ತ್ರಬಸಿಗೆ ಸೋಬಾನೆ ||
ಒಣ್ಯಾಗೆ ಗಿರಿಜಮ್ಮ ಹಾಡುತೇನ್ ಪಾಡ್ಯಾಳೆ
ಅಣ್ಣೋಜಿ ನನ್ನ ಕೊಡುತಾರೆ ಸೋಬಾನೆ ||
ಅಣ್ಣೋಜಿ ನನ್ನ ಕೊಡುತಾರೆ ಕೈಲಾಸದ
ಹನ್ನೊಂದೇ ಜಡೆಯ ತ್ರಬಸಿಗೆ ಸೋಬಾನೆ ||
ಊರಾಗೆ ಮನೆಯಿಲ್ಲ ಅಡುವ್ಯಾಗೆ ಹೊಲವಿಲ್ಲ
ಎತ್ತ ಕಟ್ಟುವರ ಅರಮನೆ ಸೋಬಾನೆ ||
ಎತ್ತೇನೆ ಕಟ್ಟುವ್ರ ಅರಮನೆ ಗಿರಿಜಮ್ಮ
ಅವ್ರನ ನೀನು ಭ್ರಮಿಸಿದ ಸೋಬಾನೆ ||
ಹೋಳಿಗೆ ಕರ್ಜಿಕಾಯಿ ಜೋಳಿ ತುಂಬೈದಾವೆ
ಹೋಳಿಗೆ ಮೂರುಲೋಕ ಸಲುವೈದಾವೆ ಸೋಬಾನೆ ||
ಹೋಳಿಗೆ ಮೂರುಲೋಕ ಸಲುವ್ಯಾವೆ ಕೈಲಾಸದ
ಮುಕ್ಕಣ್ಣ ನೀನು ಜರುದಿಯೋ ಸೋಬಾನೆ ||
ಚಕ್ಕುಲಿ ಕರ್ಜಿಕಾಯಿ ಕಕ್ಕುಸುತುಂಬೈದಾವೆ
ಕಕ್ಕುಸು ಮೂರುಲೋಕ ಸಲಿವ್ಯಾವೆ ಸೋಬಾನೆ ||
ಕಕ್ಕಸ ಮೂರುಲೋಕ ಸಲುವ್ಯಾವೆ ಕೈಲಾಸದ
ಮಾದೇವ್ರು ನೀನು ಜರುದಿಯೋ ಸೋಬಾನೆ ||
ಚಿನ್ನದ ಸರ ಹರಿದಿರಿ ಕೆನ್ನೆಮೇಲ್ ಹೊಡದೀರಿ
ಬಿಟ್ಟು ಬನ್ನಿ ಗಿರಿಜೆ ಗಿರಿದೂರ ಸೋಬಾನೆ ||
ಮುತ್ತಿನ ಸರ ಹರಿದಿರಿ ನೆತ್ತಿಮ್ಯಾಲ್ ಹೊಡದೀರಿ
ಬಿಟ್ಟು ಬನ್ನಿ ಗಿರಿಜೆ ಗಿರಿದೂರ ಸೋಬಾನೆ ||
ಈ ಹಿಂದೆ ತಿಳಿಸಿದಂತೆ ಜಾನಪದರು ಶಿವ ಮತ್ತು ಬಸವಣ್ಣನನ್ನು ಬೇರೆ ಬೇರೆಯಾಗಿ ನೋಡುವುದಿಲ್ಲ. ಇವರಿಬ್ಬರನ್ನು ಒಂದೆಯಾಗಿ ಸ್ವೀಕರಿಸಿದ್ದಾರೆ. ಶಿವ, ಬಸವಣ್ಣ ಹಾಗೂ ಗಿರಿಜೆಯ ಪ್ರಸ್ತಾಪವಿರುವ ಈ ಹಾಡಿನಲ್ಲಿ ಶಿವಶರಣನಾದ ಬಸವಣ್ಣನನ್ನು ಶಿವ ಸ್ವರೂಪಿಯಾಗಿಸಿರುವುದನ್ನು ಕಾಣಬಹುದಾಗಿದೆ. ಮಾನವನ ಸಹಜ ಬದುಕಿನ ನೆಲೆಯಲ್ಲಿ ಚಿತ್ರಿತವಾಗಿರುವ ಬಸವನನ್ನು ಜಾನಪದ ಪರಂಪರೆಯಲ್ಲಿ ಗುರುತಿಸಬಹುದಾಗಿದೆ. ಶಿವ ಮತ್ತು ದಕ್ಷಬ್ರಹ್ಮರ ಕಥೆಯನ್ನು ಹೋಲುವ ಈ ಜಾನಪದ ಹಾಡಿನಲ್ಲಿ ಬಸವನನ್ನು ಸಮೀಕರಿಸಿಕೊಂಡು ಬಂದಿದ್ದಾರೆ. ಇಲ್ಲಿ ಶಿವ ಪಾರ್ವತಿಯರ ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಚಿತ್ರಣಗಳನ್ನು ಅನಾವರಣಗೊಳಿಸುವ ಸಂದರ್ಭದಲ್ಲಿ ಬಸವಣ್ಣನ್ನು ಸಮೀಕರಿಸಿಕೊಂಡಿರುವ ಬಗೆಯು ವಿಶೇಷವಾಗಿ ಕಂಡುಬರುತ್ತದೆ. ಇದು ಜಾನಪದ ಬದುಕಿನ ದಾರ್ಶನಿಕ ಆಯಾಮವಾಗಿ ಕಂಡುಬರುತ್ತದೆ.
ಜಾನಪದ ಬದುಕಿನಲ್ಲಿ ದರ್ಶನಗೊಳ್ಳುವ ಬಸವಣ್ಣ ಯಾವುದೇ ಜಾತಿ, ಮತ, ಪಂಥಕ್ಕೆ ಸೀಮಿತವಾಗುವುದಿಲ್ಲ. ಇಲ್ಲಿ ಇವನೊಬ್ಬ ವಿಶ್ವಮಾನವನಾಗಿ ಮುಖಾಮುಖಿಯಾಗುತ್ತಾನೆ. ನಾವು ಹೀಗಾಗಲೇ ಓದಿ ತಿಳಿದಿರುವ ಬಸವಣ್ಣನಿಗಿಂತ ಭಿನ್ನವಾದ ಬಸವಣ್ಣ ನಮ್ಮ ಮೌಖಿಕ ಪರಂಪರೆಯಲ್ಲಿ ಕಂಡುಬರುತ್ತಾನೆ. ನಮ್ಮ ಲಿಖಿತ ಪಠ್ಯ, ಶಾಸನ ಹಾಗೂ ಚರಿತ್ರೆಯ ಗ್ರಂಥಗಳು ಬಸವಣ್ಣನನ್ನು ಒಬ್ಬ ಮಂತ್ರಿಯಾಗಿ, ಯುದ್ದ, ಹೋರಾಟದ ಭಾಗವಾಗಿ ಮಾತ್ರ ಪರಿಚಯಿಸುತ್ತವೆ. ಆದರೆ ಅದರಾಚೆಗಿನ ಮಾನವ ಸಹಜವಾದ ಬಸವಣ್ಣನನ್ನು ನಾವು ಈ ಪ್ರಕಾರಗಳಲ್ಲಿ ನೋಡಲು ಸಾಧ್ಯವೇ ಇಲ್ಲ. ಆದರೆ ಮೌಖಿಕ ಪ್ರಕಾರದಲ್ಲಿ ಬಸವಣ್ಣ ರಾಜಪ್ರಭುತ್ವದಿಂದ ಹೊರಬಂದು ಮಾನವ ಸಹಜ ನೆಲೆಯಲ್ಲಿ ಕಂಡುಬರುತ್ತಾನೆ. ಜನಪದ ಪರಂಪರೆಯಲ್ಲಿ ಕಂಡುಬರುವ ಈ ಮಾನವ ಸಹಜ ಬಸವ ದರ್ಶನಕ್ಕೆ ಕಾರಣವೂ ಇದೆ. ಜನಪದ ಬದುಕು ಪ್ರಕೃತಿ ಸಹಜವಾಗಿರುವಂತದ್ದು. ಇಲ್ಲಿ ಯಾರು ರಾಜನಾದರೇನು ಸಾಮಾನ್ಯ ಜನತೆಗೆ ಇದರಿಂದ ಯಾವುದೇ ಪ್ರಯೋಜನವಾಗಿರುವುದು ಕಂಡುಬರುವುದಿಲ್ಲ. ಗ್ರಾಮೀಣ ಭಾಗದಲ್ಲಿ ಒಂದು ಗಾದೆ ಮಾತಿದೆ; ‘ಯಾರು ಮಂತ್ರಿಯಾದರೇನು ರಾಗಿ ಬೀಸುವುದು ತಪ್ಪುವುದಿಲ್ಲ’, ಹಾಗೆಯೇ ‘ರಾಮರಾಜ್ಯದಲ್ಲೂ ರಾಗಿ ಬೀಸುವುದು ತಪ್ಪಿದ್ದಲ್ಲ’ ಎಂಬ ಗಾದೆಮಾತುಗಳು ಸಾಮಾನ್ಯ ಜನತೆಯ ಬದುಕಿನ ಸ್ಥಿತಿಯನ್ನು ಪ್ರತಿನಿಧಿಸುತ್ತದೆ. ಅದರಂತೆ ಜಾನಪದರಿಗೆ ರಾಜಪ್ರಭುತ್ವ ಮುಖ್ಯವಾಗುವುದಿಲ್ಲ. ಸಾಮಾನ್ಯ ಜನತೆಯ ಪರವಾಗಿ ಹೋರಾಡಿದ ಸಾಂಸ್ಕøತಿಕ ನಾಯಕ ಮುಖ್ಯವಾಗುತ್ತಾನೆ. ಈ ಕಾರಣದಿಂದಾಗಿಯೇ ನಮ್ಮ ಜನಪದರು ಮಲೆಮಾದೇಶ್ವರ, ಮಂಟೇಸ್ವಾಮಿ, ಜುಂಜಪ್ಪ, ಗಾದ್ರಿಪಾಲನಾಯಕ, ಕುಮಾರ ರಾಮರಂತಹ ಸಾಂಸ್ಕøತಿಕ ನಾಯಕರನ್ನು ಸ್ಮರಿಸುತ್ತ ಬಂದಿದ್ದಾರೆಯೇ ಹೊರತು ರಾಜ್ಯಭಾರ ಮಾಡಿದ ಬಿಜ್ಜಳ, ಕೃಷ್ಣದೇವರಾಯರಂತಹ ರಾಜರನ್ನು ಮುಖ್ಯವೆಂದು ಪರಿಗಣ ಸಿರುವುದು ಕಂಡುಬರುವುದಿಲ್ಲ. ಈ ಕಾರಣದಿಂದಾಗಿಯೇ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಬಸವಣ್ಣನಿಗಿಂತ ಮುಖ್ಯವಾಗಿ ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದ ಮಾನವ ಸಹಜ ವ್ಯಕ್ತಿಯಾದ ಬಸವಣ್ಣನನ್ನು ಆರಾಧಿಸುತ್ತ ಬಂದಿದ್ದಾರೆ.
ಶಿಷ್ಟ ಪರಂಪರೆಯು ಬಸವಣ್ಣನನ್ನು ರಾಜಪ್ರಭುತ್ವದ ಒಂದು ಭಾಗವಾಗಿಯೇ ಚಿತ್ರಿಸಿಕೊಂಡು ಬಂದಿದೆ. ಇವರಿಗೆ ಮಾನವ ಸಹಜವಾದ ಬಸವ ಮುಖ್ಯವಾಗುವುದಿಲ್ಲ.
ಅಷ್ಟೇ ಅಲ್ಲದೇ ಈ ಶಿಷ್ಟ ಪ್ರಕಾರವು ಬಸವನನ್ನು ಜಾತಿ, ಮತ, ಪಂಥಗಳಾಚೆ ಹೋಗಲು ಬಿಡುವುದಿಲ್ಲ. ಜಾತಿ, ಮತ, ಪಂಥಗಳನ್ನು ಮೀರಿ ಸಮಾಜದ ಸುಧಾರಣೆಗಾಗಿ ಶ್ರಮಿಸಿದ ಬಸವನನ್ನು ಬಲವಂತವಾಗಿ ಸ್ಥಾಪಿತ ವ್ಯವಸ್ಥೆಯ ಅಡಿಯಲ್ಲಿ ಬಂಧಿಸುವ ತಂತ್ರಗಾರಿಕೆ ಶಿಷ್ಟ ಸಾಹಿತ್ಯದ ಒಂದು ಭಾಗವಾಗಿ ಕಂಡುಬರುತ್ತದೆ. ಆದರೆ ಬಸವಣ್ಣನ ಮೂಲ ಆಶಯಗಳು ಮಾತ್ರ ಜಾನಪದ ಬದುಕಿನೊಳಗೆ ಯಥಾ ಪ್ರಕಾರವಾಗಿ ಮುಂದುವರೆದಿವೆ. ಬಸವ ಇನ್ನು ಜೀವಂತವಾಗಿರುವುದಾದರೆ ಅದು ಜಾನಪದರ ಬದುಕಿನಲ್ಲಿ ಮಾತ್ರ ಎಂಬುದನ್ನು ಈ ಮೇಲೆ ಉಲ್ಲೇಖಿಸಿರುವ ಸೋಬಾನೆ ಹಾಡುಗಳಲ್ಲಿ ಗುರುತಿಸಬಹುದಾಗಿದೆ.
( ಲೇಖಕರು: ಕೆ.ಎ.ಓಬಳೆಶ್, ಸಂಶೋಧನ ವಿದ್ಯಾರ್ಥಿ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ ಕನ್ನಡ ವಿಶ್ವವಿದ್ಯಾಲಯ, ಹಂಪಿ)

ನೆಲದನಿ
ಮ್ಯಾಸ ನಾಯಕ ಬುಡಕಟ್ಟಿನಲ್ಲಿ ದೂಲಿ ಹಬ್ಬದ ಆಚರಣೆ

- ಡಾ. ಸಿ ಬಿ ಅನ್ನಪೂರ್ಣ ಜೋಗೇಶ್, ನಿವೃತ್ತ ಪ್ರಾಂಶುಪಾಲರು, ಬೆಂಗಳೂರು
ಭಾರತ ತನ್ನ ಭೌಗೋಳಿಕ ಸ್ವರೂಪದಲ್ಲಿ ವೈವಿಧ್ಯತೆಯನ್ನು ಹೊಂದಿರುವಂತೆ ಅನೇಕ ಬಗೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ. ದೇಶದ ಪ್ರತಿಯೊಂದು ಸಮುದಾಯವು ಬದುಕಿನ ಕ್ರಮದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದ್ದು ಹಬ್ಬಗಳ ಆಚರಣೆಯಲ್ಲಿಯೂ ಈ ಭಿನ್ನತೆಯನ್ನು ಕಾಣಬಹುದಾಗಿದೆ.
ಈಗ ನಡೆಯುತ್ತಿರುವ ದೀಪಾವಳಿ ಹಬ್ಬದ ಆಚರಣೆಯೂ ಇದರಿಂದ ಹೊರತಾಗಿಲ್ಲ. ಇಡೀ ಭಾರತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ ಎಂಬುದು ಸಾಮಾನ್ಯವಾದ ಹೇಳಿಕೆಯಾಗಿರುತ್ತದೆ. ದೀಪಾವಳಿ ಎಂದರೆ ದೀಪವನ್ನು ಬೆಳಗಿಸುವ ಹಬ್ಬ.
ಜಗದ ಕತ್ತಲೆಯನ್ನು, ಮನದ ಕತ್ತಲೆಯನ್ನು, ಕಳೆಯುವ ಹಬ್ಬ ಎಂಬುದು ಒಂದು ನಂಬಿಕೆಯಾದರೆ ಬಲಿಚಕ್ರರ‍್ತಿಯನ್ನು ವರ್ಷಕೊಮ್ಮೆ ನೆನಪಿಸಿಕೊಳ್ಳುವುದು, ನರಕಾಸುರನನ್ನು ಶ್ರೀ ಕೃಷ್ಣ ಪರಮಾತ್ಮ ಕೊಂದು ಆತನ ಸೆರೆಯಲ್ಲಿದ್ದ ಅಸಂಖ್ಯಾತ ಮಹಿಳೆಯರಿಗೆ ಬಿಡುಗಡೆ ದೊರಕಿಸಿದ ದಿನವಿದು ಎಂದು ನೆನೆಪಿಸಿಕೊಳ್ಳುವುದು ಹೀಗೆಲ್ಲಾ ಪ್ರಚಲಿತ ಪುರಾಣಮೂಲಗಳಿಂದ ಈ ಹಬ್ಬದ ಆಚರಣೆಯ ಸಾಂಕೇತಿಕತೆಯನ್ನು ಅರ್ಥೈಸಲಾಗುತ್ತದೆ.
ಈ ಎರಡೂ ಘಟನೆಗಳನ್ನು ಕುರಿತು ಬೇರೆ ಬೇರೆ ನೆಲೆಯಿಂದ ಯೋಚಿಸಿದಾಗ ಇದನ್ನು ದೇಶದಾದ್ಯಂತ ಎಲ್ಲರೂ ಸಡಗರಿಸಬೇಕೆ? ಆಳುವವರ ಸಡಗರ ಎಲ್ಲರ ಸಡಗರವಾಗಲೇಬೇಕಾದ ಅನಿವಾರ್ಯವೇ? ಎಂಬ ನೆಲೆಗಳಿಂದ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗುತ್ತದೆ.
ನಿಸರ್ಗಮೂಲ ಸಿದ್ದಾಂತವನ್ನು ಅನ್ವಯಿಸಿಕೊಂಡರೇ ಬಹುಶಃ ಈ ದೀಪಾವಳಿಯ ತಿಂಗಳು, ಅಂದರೇ ಕಾರ್ತಿಕ ಮಾಸ ಹವಾಮಾನದಲ್ಲಿ ವಿಶೇಷತೆಯಿದೆ. ಕಾರ್-ಅಂದರೇ ಮಳೆ ಸುರಿಯುವುದು. ಕರ‍್ತೀಕ ಅಂದರೇ ಮಳೆಗಾಲದ ಕೊನೆಯ ದಿನಗಳಿವು, ಹಿಂಗಾರಿನ ಕೊನೆಯ ಮಳೆಗಳು ಸುರಿಯುವ ಮತ್ತು ಇದರೊಂದಿಗೆ ಚಳಿಗಾಲವೂ ಆರಂಭವಾಗುವುದರಿಂದ ಮಂಜುಮುಸುಕಿದ ವಾತಾವರಣವೂ ಜೊತೆಗೂಡಿ ಕತ್ತಲೆಯ ಆಧಿಕ್ಯ ಹೆಚ್ಚು.
ಬಹುಶಃ ಈ ಕತ್ತಲೆಯನ್ನು ನಿವಾರಿಸಿಕೊಳ್ಳಲು ಮನೆಮನೆಯ ಮುಂದೆ ದೀಪಗಳನ್ನು ಹಚ್ಚಿ ಬೆಳಕನ್ನು ಕಂಡುಕೊಳ್ಳುವ ಉದ್ದೇಶವೂ ಇರಬಹುದೆನ್ನಿಸುತ್ತದೆ. ಒಟ್ಟಾರೆ ನಾಡಿನಾದ್ಯಂತ ಆಚರಿಸಲಾಗುವ ಈ ದೀಪಾವಳಿ ಹಬ್ಬವನ್ನು ಮ್ಯಾಸಮಂಡಲದಲ್ಲಿಯೂ ಆಚರಿಸಲಾಗುತ್ತದೆ. ಮ್ಯಾಸಬುಡಕಟ್ಟಿನ ದೇವರು ಕಾಣದ ಲೋಕದವರಲ್ಲ.
ಪ್ರಕೃತಿಯ ವಿಶಿಷ್ಟ್ಯತೆಯನ್ನೇ ದೈವ ಎಂದು ಭಾವಿಸಿ ಪೂಜಿಸುವುದು, ಸೃಷ್ಟಿಗೆ ಕಾರಣವಾಗುವ ತಾಯಿಯನ್ನೇ ಮೊದಲ ದೈವ ಎಂದು ಪೂಜಿಸುವುದು, ತಮಗೆ ಬದುಕನ್ನು ಕಟ್ಟಿಕೊಟ್ಟು ತನ್ನನ್ನು ಮುನ್ನಡೆಸಿದ ಹಿರಿಯರನ್ನೇ, ನಾಯಕರನ್ನೇ ತಮ್ಮದೇವರು ಎಂದು ಪೂಜಿಸುವುದು, ಮತ್ತು ತಮ್ಮ ಬದುಕಿಗೆ ಆಧಾರವಾಗಿದ್ದ ಪಶುಸಂಪತ್ತನ್ನೇ ತಮ್ಮ ಹಿರಿಯರೊಂದಿಗೆ ಸಮೀಕರಿಸಿ ದೈವಗಳೆಂದು ಭಾವಿಸಿ ಪೂಜಿಸುವುದು ಈ ಬುಡಕಟ್ಟಿನ ವಿಶೇಷತೆ. ತಮ್ಮ ನಾಯಕ ಅಥವಾ ನಾಯಕಿ ಬಳಸುತ್ತಿದ್ದ ವಸ್ತುವನ್ನು ಬಿದಿರಿನ ಬುಟ್ಟಿಯಲ್ಲಿಟ್ಟು, ಕೆಲವು ಕಡೆ ಸಾಲಿಗ್ರಾಮಗಳನ್ನು ಮತ್ತು ನಾಯಕ/ನಾಯಕಿ ಬಳಸುತ್ತಿದ್ದ ಬಿಲ್ಲು, ಬಾಣ/ ಖಡ್ಗವನ್ನೇ ದೇವರೆಂದು ನಂಬಿ ಪೂಜಿಸುವ ಸಮುದಾಯದಲ್ಲಿ ದೀಪಾವಳಿಯನ್ನು ಇವುಗಳಿಗೆ ಪೂಜೆ ಸಲ್ಲಿಸುವ ಮೂಲಕವೇ ಆಚರಿಸಲಾಗುತ್ತದೆ.
ಮ್ಯಾಸಮಂಡಲದ ಎಲ್ಲಾ ಗುಡಿಕಟ್ಟುಗಳಲ್ಲಿಯೂ ಮತ್ತು ಇದಕ್ಕೆ ಸಂಬಂಧಿಸಿದ ಎತ್ತಿನಗೂಡುಗಳಲ್ಲಿ ಈ ಹಬ್ಬದ ಆಚರಣೆ ನಡೆಯುತ್ತದೆ. ದೀಪಾವಳಿ ಅಮಾವಾಸ್ಯೆಕಳೆದು ಪಾಡ್ಯದ ಸೋಮವಾರ ಹೀರೆಹಳ್ಳಿಯ ದಡ್ಡಿಸೂರನಾಯಕನ ಗುಡಿಗೆ ಈತನಿಂದ ಸಂರಕ್ಷಿಸಲ್ಪಟ್ಟ ದನಕರುಗಳ ಪರಂಪರೆಯಿಂದ ಇಂದಿಗೂ ಉಳಿದು ಬಂದಿರುವ ಆಕಳ ಗೂಡಿನಿಂದ (ಗುಡೇಕೋಟಿ ಬಳಿ ಇರುವ} ಕಿಲಾರಿಗಳು ಮೊಸರು,ತುಪ್ಪವನ್ನು ತಂದು ಸೋಮವಾರ ಸಂಜೆ ಗುಡಿಗೆ ಒಪ್ಪಿಸುತ್ತಾರೆ. ತಮ್ಮ ಹೊಲಗಳಲ್ಲಿ ಬೆಳೆದ ಹಸನಾದ ಸಜ್ಜೆಯತೆನೆಗಳನ್ನು ತಂದು ಒಪ್ಪಿಸುವ ವಾಡಿಕೆಯೂ ಇದೆ.
ರಾತ್ರಿಯಿಡಿ ಎಲ್ಲರೂ ಸೇರಿ ಗುಡಿಯಲ್ಲಿ ಹುರುಳಿ, ಗುಗ್ಗರಿ ಬೇಯಿಸಿ ಜೋಳ ಅಥವಾ ಸಜ್ಜೆಯ ಅನ್ನ ಮಾಡಿ ಗೂಡಿನಿಂದ ತಂದ ಮೊಸರನ್ನು ಸೇರಿಸಿ ಬೆಳಗಿನಜಾವ ದಡ್ಡಿಸೂರನಾಯಕನಿಗೆ ನೈವೇದ್ಯ ಮಾಡಲಾಗುತ್ತದೆ. ರಾತ್ರಿಯಿಡೀ ಉರುಮೆ ವಾದ್ಯದ ಸೇವೆ, ನಾಯಕನನ್ನು ಕುರಿತು ಪದ ಹೇಳುವುದು ನಡೆಯುತ್ತದೆ, ಹೀಗೆ ಗುಡಿಯಲ್ಲಿ ನಡೆಯುವ ಪೂಜೆಯೇ ತಮಗೆ ದೀಪಾವಳಿ ಹಬ್ಬದ ಆಚರಣೆಯಾಗಿದ್ದು ಮನೆ ಮನೆಯ ಮುಂದೆ ದೀಪ ಬೆಳಗಿಸುವ, ರಂಗೋಲಿ ಹಾಕುವ, ಪಟಾಕಿ ಸಿಡಿಸುವ ಆಚರಣೆಗಳು ಇಲ್ಲಿ ಇರುವುದಿಲ್ಲ.
ಕಂಪಳ ದೇವರ ಹಟ್ಟಿಯಲ್ಲಿ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಹಬ್ಬದ ಆಚರಣೆ ನಡೆಯುತ್ತದೆ. ಮಾಘ ಮಾಸದಲ್ಲಿ ನಡೆಯುವ ಗುಗ್ಗರಿ ಹಬ್ಬದಲ್ಲಿ ಮಾಡುವಂತೆ ಈ ಸಮಯದಲ್ಲಿಯೂ ಅಮಾವಾಸ್ಯೆ ನಂತರದ ಶುಕ್ರವಾರದಂದು ಪೆಟ್ಟಿ ದೇವರನ್ನು ಗುಡಿಯಿಂದ ತಂದು ಹಟ್ಟಿಯ ಹೊರವಲಯದಲ್ಲಿ ಹೊಸ ಉದಿ/ಪದಿಯನ್ನು ಕಟ್ಟಿ ಇದರಲ್ಲಿ ಕೂರಿಸಿ ಮೂರು ದಿನಗಳ ಹಬ್ಬದ ಆಚರಣೆ ನಡೆಸಲಾಗುತ್ತದೆ. ಮ್ಯಾಸ ಭಾಷೆಯಲ್ಲಿ ಇದನ್ನು ‘ದೂಲಿ ಪಂಡುವ’ ಎಂದು ಕರೆಯಲಾಗುತ್ತದೆ.
ಕಂಪಳ ದೇವರ ಪೆಟ್ಟಿಯೊಂದಿಗೆ ಜಗಲೂರು ಪಾಪನಾಯಕನನ್ನು ಸಂಕೇತಿಸುವ ಬಿಲ್ಲು ದೇವರನ್ನೂ ತಂದು ಪೂಜಿಸಲಾಗುತ್ತದೆ. ಆಕಳಗೂಡಿನ ಮೀಸಲು ಮೊಸರು ಮತ್ತು ಬೆಣ್ಣೆಯನ್ನು ಅರ್ಪಿಸುವುದು
ಇಲ್ಲಿ ಬಹಳ ವಿಶೇಷವಾದುದು. ಗತಿಸಿದ ಎತ್ತು ಮತ್ತು ಆಕಳಿಂದ ಸಂಗ್ರಹಿಸಿದ ಕೊಂಬನ್ನು ಇಲ್ಲಿ ಬೆಣ್ಣೆಯನ್ನು ಶೇಕರಿಸಲು ಬಳಸಲಾಗುತ್ತದೆ. ಬುಡಕಟ್ಟಿನ ಜನತೆ ತಮಗೆ ಸಿಗುವ ವಸ್ತುಗಳನ್ನೇ ಸಲಕರಣೆಗಳನ್ನಾಗಿ ಬಳಸುವ ವಿಧಾನ ಇಲ್ಲಿ ಗಮನ ಸೆಳೆಯುತ್ತದೆ.
ಹೀಗೆ ಸಂಗ್ರಹಿಸಿದ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿ ಪದಿಯಲ್ಲಿ ದೀಪವನ್ನು ಉರಿಸಲಾಗುತ್ತದೆ. ಮೊಸರು,ಜೋಳದ/ಸಜ್ಜೆಯ ಅನ್ನ,ಬಾಳೆಹಣ್ಣು,ಬೆಲ್ಲವನ್ನು ಬೆಳಗಿನಜಾವದಲ್ಲಿ ನೈವೇದ್ಯ,ಮಾಡಲಾಗುತ್ತದೆ. ಇದರೊಂದಿಗೆ ಎತ್ತುಗಳನ್ನೂ ಹರಿಯಿಸುವುದು, ಮಣೇವು, ಉರಿಯುವ ಪಂಜುಗಳನ್ನೇ ನುಂಗುವುದು ಈ ಹಬ್ಬದ ಪ್ರಮುಖ ಆಚರಣೆಗಳಾಗಿವೆ.
ನನ್ನಿವಾಳದ ಕಟ್ಟಿಮನೆಗೆ ಸೇರಿದ ಬಂಗಾರುದೇವರ ಹಟ್ಟಿಯಲ್ಲಿ ದೇವರುಗಳನ್ನು ಮತ್ತು ಬೆಳಗಟ್ಟದ ಸೂರೆಯರಗಾಟನಾಯಕನಿಗೆ ಸಂಬಂಧಿಸಿದಂತೆ, ಬೋಸೇದೇವರ ಹಟ್ಟಿಯ ಬೋಸೇರಂಗಯ್ಯನ ಪೆಟ್ಟಿಗೆಯನ್ನು, ದೊಣಮಂಡಲಹಟ್ಟಿಯ ಮಂಡಬೊಮ್ಮದೇವರನ್ನು ಹಟ್ಟಿಯಿಂದ ಹೊರಗೆ ತಂದು ಊರ ಹೊರಗೆ ಹೊಸ ಪದಿಯನ್ನು ಕಟ್ಟಿ, ಗೂಡಿನಿಂದ ಎತ್ತುಗಳನ್ನು ಕರೆಸಿ ಗೌರವಿಸಿ ಪೂಜಿಸುವ ಕ್ರಮವಿದೆ. ಒಟ್ಟಾರೆ ಈಮ್ಯಾಸಮಂಡಲದ ದೀಪಾವಳಿ ಹಬ್ಬಕ್ಕೆ ಆಯಾ ಗುಂಪಿನವರೆಲ್ಲರೂ ಕಾಸು,ಹಾಲು, ಮೊಸರನ್ನು ಅರ್ಪಿಸಿ ಪಾಲ್ಗೊಳ್ಳುವಿಕೆಯೇ ಇಲ್ಲಿ ಸಾಮುದಾಯಿಕತೆಯ ಮಹತ್ವವನ್ನು ಪಡೆಯುತ್ತದೆ.
ಈ ದೀಪಾವಳಿ ಹಬ್ಬದ ಆಚರಣೆಯಲ್ಲಿಎಲ್ಲಾ ಪದಿಗಳಲ್ಲಯೂ ದಾಸೋಹ ವಿಶೇಷವಾಗಿ ನಡೆಯುತ್ತದೆ.ಮುಂಗಾರು ಮಳೆ ಸುರಿದು ಸೊಂಪಾಗಿ ಬೆಳೆದ ಹುಲ್ಲನ್ನು ತಿಂದು ಹಸುಗಳು ಸಾಕಷ್ಟು ಹಾಲನ್ನು ಕೊಡುವುದರಿಂದ ಸಮೃದ್ಧವಾದ ಹಾಲು,ಮೊಸರು ಈ ಹಬ್ಬಕ್ಕೆ ಒದಗುತ್ತದೆ.ಇದನ್ನು ಎಡೆ ಮಾಡಿದ ನಂತರ ಎಲ್ಲರಿಗೂ ದಾಸೋಹದಲ್ಲಿ ನೀಡಲಾಗುತ್ತದೆ.
ಈ ಬುಡಕಟ್ಟಿನ ದೀಪಾವಳಿ ಹಬ್ಬದ ಆಚರಣೆಯ ಹಿಂದೆ ನಮ್ಮ ಭಾರತದ ಪೌರಾಣಿಕ ಕಥನಗಳಾವುವು ಕೇಳಿ ಬರುವುದಿಲ್ಲ.ಮನೆ ಮನೆಯ ಮುಂದೆ ದೀಪಗಳನ್ನು ಹಚ್ಚಿ ಸಡಗರಿಸುವುದು ಇಲ್ಲಿಲ್ಲ.
ರಂಗೋಲಿ ಹಾಕುವುದಂತೂ ಬುಡಕಟ್ಟಿನ ನಿಶೇಧಗಳಲ್ಲಿ ಒಂದಾಗಿರುವುದರಿAದ ಆ ಪ್ರಸ್ತಾಪವೇ ಇಲ್ಲಿಲ್ಲ. ಬದಲಾಗಿ ತಮ್ಮ ಮನೆ ದೇವರಾದ ಪೆಟ್ಟಿಗೆ ದೇವರು/ಬಿಲ್ಲು ದೇವರು/ಎತ್ತುಗಳನ್ನು ಗೌರವಿಸಿ ಪೂಜಿಸುವುದು. ಈ ಮೂಲಕವಾಗಿಯೇ ತಮ್ಮ ಮುಂದಿನ ಬದುಕಿಗೆ ಬೇಕಾದ ಬೆಳಕನ್ನು, ಚೈತನ್ಯವನ್ನು ಕೋರುವುದು ಇಲ್ಲಿ ಮುಖ್ಯವಾಗಿರುತ್ತದೆ.
ತಾನು ಬದುಕಿರುವ ಪರಿಸರ, ತಮಗೆ ಬದುಕನ್ನು ಕಟ್ಟಿಕೊಡುವ ಪ್ರಾದೇಶಿಕತೆ ಮತ್ತು ಭೌತಿಕ ಪ್ರಪಂಚ ಮತ್ತು ತನಗೆ ನೈತಿಕ ಬೆಂಬಲವಾಗಿ ನಿಂತ ತನ್ನ ಸಾಂಸ್ಕೃತಿಕ ಜಗತ್ತು ಈ ಎಲ್ಲವುಗಳ ಮೂಲಕ ಒಡಮೂಡುವ ದೇಸಿತನ ಆಯಾ ಬುಡಕಟ್ಟಿನ ಆಚರಣೆಗಳಿಗೆ ಸೈದ್ಧಾಂತಿಕತೆಯನ್ನು ಒದಗಿಸಿಕೊಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮ್ಯಾಸಬೇಡ ಬುಡಕಟ್ಟಿನ ಈ ದೀಪಾವಳಿ ಆಚರಣೆಯಲ್ಲಿ ಈ ದೇಸಿತನವೇ ಒಡಮೂಡಿರುವುದನ್ನು ಕಾಣಬಹುದಾಗಿದೆ.ಆದಿವಾಸಿಗಳ ಧರ‍್ಮಿಕ ಜಗತ್ತಿನಲ್ಲಿ ಸರ‍್ಪಣಾಭಾವ ಮತ್ತು ಪಾರಂಪರಿಕ ಸಂಬAಧ ಮುಖ್ಯವಾಗಿರುತ್ತದೆ.ಈ ಆಚರಣೆಗಳನ್ನು ಸಮುದಾಯದ ಸಾಂಸ್ಕೃತಿಕ ಅಸ್ಮಿತೆಗಳು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ನೆಲದನಿ
ಜಾನಪದದ ಬೇರು, ಶಿಕ್ಷಣ-ರಂಗಭೂಮಿಯ ತೇರು ‘ಡಾ.ಎಂ.ಜಿ. ಈಶ್ವರಪ್ಪ’

- ಡಾ.ಗೀತಾ ಬಸವರಾಜು,ಉಪನ್ಯಾಸಕರು,ಎ.ವಿ.ಕೆ ಮಹಿಳಾ ಪದವಿ ಪೂರ್ವಕಾಲೇಜು,ದಾವಣಗೆರೆ
ಕರ್ನಾಟಕ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ, ವೈಚಾರಿಕತೆ ಮತ್ತು ಮಾನವೀಯತೆಯ ನೆಲೆವೀಡು. ಈ ನಾಡು ಪಂಪ, ರನ್ನ, ಪೊನ್ನ, ಜನ್ನ, ಹರಿಹರ, ರಾಘವಾಂಕ, ಕುಮಾರವ್ಯಾಸರಂತಹ ಅನೇಕ ಕವಿಗಳು ನೆಲೆಸಿದ್ದ ಪುಣ್ಯಭೂಮಿ. ಕನ್ನಡ ಸಾಹಿತ್ಯ ಪರಂಪರೆಯಲ್ಲಿಜನಪದಕ್ಕೆ ಶ್ರೀಸಾಮಾನ್ಯರ, ವಚನಕ್ಕೆ ಶರಣರ, ಕೀರ್ತನ ಸಾಹಿತ್ಯಕ್ಕೆದಾಸರಕೊಡುಗೆಅಪಾರವಾಗಿದ್ದು ದೇಸಿ ನೆಲೆಗಟ್ಟಿನೊಂದಿಗೆ ಮೌಲ್ಯಪ್ರಜ್ಞೆ ಬಿತ್ತುವಲ್ಲಿ ಸಿದ್ಧಹಸ್ತವಾಗಿವೆ. ಕವಿವಾಣಿ ಹೂವಾದರೆಜನವಾಣಿ ಬೇರಾಗಿ ಕಂಗೊಳಿಸುತ್ತದೆ.
ಇಂತಹಜನಪದ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿಜಾನಪದ ವಿದ್ವಾಂಸರಾಗಿ ಗುರುತಿಸಿಕೊಂಡಿರುವ ಹಲವರಲ್ಲಿ ಮಧ್ಯಕರ್ನಾಟಕದ ಹೃದಯ ಭಾಗವಾದದಾವಣಗೆರೆ ನಗರದಲ್ಲಿ ನೆಲೆಸಿರುವ ಜಾನಪದತಜ್ಞರಾದಡಾ.ಎಂ.ಜಿ.ಈಶ್ವರಪ್ಪ ಪ್ರಮುಖರು.
ಬಾಲ್ಯ ಮತ್ತು ಶಿಕ್ಷಣ
ಜ್ಞಾನದಿಂ ಮೇಲಿಲ್ಲ, ಶ್ವಾನನಿಂ ಕೀಳಿಲ್ಲ
ಭಾನುವಿನಿಂದಧಿಕ ಬೆಳಕಿಲ್ಲ ಜಗದೊಳಗೆ
ಜ್ಞಾನವೇ ಮಿಗಿಲು ಸರ್ವಜ್ಞ
ಎಂಬ ನುಡಿಗೆ ಪೂರಕವಾಗಿಜ್ಞಾನದ ಹಾದಿಯನ್ನು ಹಿಡಿದು ಶಿಕ್ಷಣ ತಜ್ಞರಾಗಿ, ಸಾಹಿತಿಯಾಗಿ, ಚಿಂತಕರಾಗಿ, ವಿದ್ಯಾರ್ಥಿಗಳ ಅಚ್ಚು ಮೆಚ್ಚಿನಅಧ್ಯಾಪಕರಾಗಿ, ಉತ್ತಮ ಮಾತುಗಾರರಾಗಿ, ಸರ್ವರ ಮನಸ್ಸನ್ನುಗೆದ್ದಿರುವಡಾ.ಎಂ.ಜಿ. ಈಶ್ವರಪ್ಪ ಶಿವಮೊಗ್ಗ ಜಿಲ್ಲೆಯ ಹಾಡೋನಹಳ್ಳಿ ಎಂಬ ಗ್ರಾಮದಲ್ಲಿ ಶ್ರೀಮತಿ ಗಿರಿಜಮ್ಮ ಮತ್ತು ಶ್ರೀ ರುದ್ರಪ್ಪ ದಂಪತಿಗಳ ಪುತ್ರರಾಗಿ 02-12-1950ರಲ್ಲಿ ಜನಿಸಿದರು.ತಂದೆ ಕೃಷಿ ಕಾಯಕವನ್ನು ಅವಲಂಬಿಸಿದ್ದರಿಂದ ಕೃಷಿ ಚಟುವಟಿಕೆಗಳನ್ನು ರೂಢಿಸಿಕೊಂಡು ಗ್ರಾಮೀಣ ಸೊಗಡನ್ನುಆಸ್ವಾದಿಸುತ್ತಿದ್ದರು.
ಪದವಿ ಶಿಕ್ಷಣವನ್ನು ವಿಜ್ಞಾನ ವಿಷಯದಲ್ಲಿ ಪೂರೈಸಿ ನಂತರ ಮೈಸೂರು ವಿಶ್ವವಿದ್ಯಾನಿಲಯದಿಂದಕನ್ನಡ ವಿಷಯದಲ್ಲಿಸ್ನಾತಕೋತ್ತರ ಪದವಿಯನ್ನು ಪಡೆದರು. ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಇವರುಖ್ಯಾತಜಾನಪದ ವಿದ್ವಾಂಸರಾದ ಜಿ.ಶಂ.ಪರಮಶಿವಯ್ಯ ಅವರ ಮಾರ್ಗದರ್ಶನದಲ್ಲಿ ‘ವ್ಯವಸಾಯಜಾನಪದ’ ಎಂಬ ವಿಷಯದ ಮೇಲೆ ಪಿಹೆಚ್.ಡಿ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದಿದ್ದಾರೆ.
ಅಧ್ಯಾಪಕರಾಗಿ ಎಂ.ಜಿ.ಈಶ್ವರಪ್ಪ
ಅರ್ಚಕಸ್ಯ ಪ್ರಭಾವೇನ ಶಿಲಾಭವತಿ ಶಂಕರಃ
ಆಚಾರ್ಯಸ್ಯ ಪ್ರಭಾವೇನ ಶಿಷ್ಯಭವತಿ ಸುಶಿಕ್ಷಿತಃ
ಎಂಬ ನುಡಿಯಂತೆ ವಿದ್ಯಾರ್ಥಿಗಳ ಮೆಚ್ಚಿನಅಧ್ಯಾಪಕರಾಗಿದಾವಣಗೆರೆಯ ಪ್ರತಿಷ್ಟಿತ ವಿದಾಕೇಂದ್ರವಾದ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಧ್ಯಾಪಕ ಸಂಘ, ವಿದ್ಯಾರ್ಥಿ ಸಂಘಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಇವರುಎನ್,ಎಸ್.ಎಸ್‌ಅಧಿಕಾರಿಯಾಗಿ 11 ವರ್ಷಗಳ ಕಾಲ 6 ಶಿಬಿರಗಳನ್ನು ನಡೆಸಿ ಗ್ರಾಮೀಣಜನಜೀವನದ ಸಮಸ್ಯೆಗಳ ಪರಿಚಯವನ್ನು ಮಾಡಿಕೊಂಡರು. ನಂತರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ.
ರಂಗಭೂಮಿ ಮತ್ತುಈಶ್ವರಪ್ಪ
ಒಳ್ಳೆಯ ನಟ, ನಿರ್ದೇಶಕರಾಗಿಎಲ್ಲಾ ಕ್ಷೇತ್ರಗಳಲ್ಲೂ ಆಸಕ್ತಿ ಹೊಂದಿರುವಈಶ್ವರಪ್ಪನವರು ವಿದ್ಯಾರ್ಥಿದೆಸೆಯಿಂದಲೆ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ನಾಟಕಅಕಾಡೆಮಿಯ ಅಫಿಲಿಯೇಶನ್ ಪಡೆದಿರುವದಾವಣಗೆರೆಯ ಪ್ರತಿಷ್ಟಿತ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾದ “ಪ್ರತಿಮಾ ಸಭಾ” ದ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ 25 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. 1979ರಲ್ಲಿ ವಿಶ್ವವಿದ್ಯಾನಿಲಯದಧನಸಹಾಯಆಯೋಗದಿಂದ ನಡೆದರಾಷ್ಟ್ರ ಮಟ್ಟದರಂಗಭೂಮಿ, ರಂಗನಟನೆ, ರಂಗ ನಿರ್ದೇಶನಕುರಿತಂತೆ ಕೇರಳದ ತ್ರಿಚೂರಿನ ಸ್ಕೂಲ್‌ಆಫ್‌ಡ್ರಾಮಾದಲ್ಲಿ ಭಾಗಿಯಾಗಿ, ಪ್ರತಿಮಾ ಸಭಾ ನಡೆಸಿದ ರಂಗ ಶಿಬಿರದಲ್ಲಿ ಕ್ರಿಯಾತ್ಮಕವಾಗಿ ಪಾಲ್ಗೊಂಡಿದ್ದಾರೆ.
ಈಡಿಪಸ್, ಸಂಕ್ರಾಂತಿ, ಸಂತೆಯಲ್ಲಿ ನಿಂತಕಬೀರ, ಸೆಜುವಾನಿನ ಸಾಧ್ವಿ, ಕೊಡೆಗಳು ಮುಂತಾದ ನಾಟಕಗಳಲ್ಲಿ ನಟಿಸಿದ್ದಾರೆ.ಜಾತ್ರೆ, ಸಾಯೋಆಟ, ಅಪ್ಪ, ಕಡೇಮನೆಕಡೇಗಲ್ಲಿ, ಹಳ್ಳಿಚಿತ್ರ, ಹಳ್ಳಿಮೇಷ್ಟು, ಮಾರೀಚನ ಬಂಧುಗಳು, ಇಲಿಬೋನು, ನಾಗನ ಕತೆ ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ.ನಾಗನ ಕತೆ ನಾಟಕಕ್ಕೆಕನ್ನಡ ಸಾಹಿತ್ಯ ಪರಿಷತ್ತು ನಡೆಸಿದ ಅಖಿಲ ಕರ್ನಾಟಕ ಮಕ್ಕಳ ಸಮ್ಮೇಳನದಲ್ಲಿ ಪ್ರಥಮ ಬಹುಮಾನ ಲಭಿಸಿದೆ.
1979 ರಲ್ಲಿ ಹೆಗ್ಗೋಡಿನಲ್ಲಿ ನಡೆದ ಚಲನಚಿತ್ರ ಸಹೃದಯ ಶಿಬಿರ, 1983 ರಲ್ಲಿರಂಗ ನಿರ್ದೇಶಕರ ಶಿಬಿರ, 1984ರಲ್ಲಿ ನಾಟಕಅಕಾಡೆಮಿಕೊಂಡಜ್ಜಿಯಲ್ಲಿ ನಡೆಸಿದ ನಾಟಕ ರಚನಾ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. 1983ರಲ್ಲಿಕರ್ನಾಟಕ ನಾಟಕಅಕಾಡೆಮಿ ನೀಡಿದ ಧನಸಹಾಯದಿಂದ ದಿಗ್ಗಜ ಶ್ರೀ. ಬಿ.ವಿ ಕಾರಂತರ ಮಾರ್ಗದರ್ಶನದಲ್ಲಿ ಮಧ್ಯಪ್ರದೇಶದ ಭೋಪಾಲ್ ಮತ್ತುದೆಹಲಿಯಲ್ಲಿರಂಗಭೂಮಿಅಧ್ಯಯನ ನಡೆಸಿದ್ದಾರೆ.
1982 ರಲ್ಲಿ ಖ್ಯಾತ ಜಾನಪದ ವಿದ್ವಾಂಸರಾದ ಡಾ.ಜಿ.ಶಂ.ಪರಮಶಿವಯ್ಯ ಹಾಗೂ ದೆಹಲಿಯ ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾನಿಲಯದ ವತಿಯಿಂದ ನಡೆದಚಿತ್ರದುರ್ಗ, ಬಳ್ಳಾರಿ, ಧಾರವಾಡ ಜಿಲ್ಲೆಗಳ ಜಾನಪದಕಲಾವಿದರು ಮತ್ತುತಂತಿ ವಾದ್ಯಗಳ ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ.ಕರ್ನಾಟಕದ ಇತರೆಡೆಗಳಲ್ಲಿ ನಡೆದಜಾನಪದ ಸಾಹಿತ್ಯ ಸಮ್ಮೇಳನ ಮತ್ತು ಕಲಾಮೇಳಗಳಿಗೆ ಹಲವು ಬಾರಿಕಲಾವಿದರ ತಂಡಗಳ ನೇತೃತ್ವವನ್ನು ವಹಿಸಿದ್ದಾರೆ.
1986ರಲ್ಲಿಬೆಂಗಳೂರಿನಲ್ಲಿ ನಡೆದ ಸಾರ್ಕ್ ಸಮ್ಮೇಳನದಲ್ಲಿ ಚಿತ್ರದುರ್ಗಜಿಲ್ಲೆಯಕಿನ್ನರಿಜೋಗಿತಂಡದ ನೇತೃತ್ವವನ್ನು ವಹಿಸಿರುತ್ತಾರೆ.1987 ರಲ್ಲಿಕರ್ನಾಟಕ ವಿಶ್ವವಿದ್ಯಾನಿಲಯ ಮತ್ತು ಬಾಪೂಜಿ ವಿದ್ಯಾಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದಜಾನಪದ ಸಾಹಿತ್ಯ ಸಮ್ಮೇಳನ ಮತ್ತು ಕಲಾಮೇಳದ ಸಂಘಟನೆಯನ್ನು ಮಾಡಿಜಾನಪದರಂಗ ಪ್ರಕಾರಗಳನ್ನು ಆಧುನಿಕರಂಗಭೂಮಿಗೆ ಅಳವಡಿಸಿಕೊಳ್ಳಲು ಚಿಂತನೆ ನಡೆಸಿದ್ದಾರೆ.
ಅಷ್ಟೇ ಅಲ್ಲದೆಜಾನಪದರಂಗಭೂಮಿಕುರಿತು ಸಾಕಷ್ಟು ತಜ್ಞ ಉಪನ್ಯಾಸಗಳನ್ನು ಆಕಾಶವಾಣಿಯಲ್ಲಿ ನೀಡಿದ್ದಾರೆ.1986 ಮತ್ತು1990 ರಲ್ಲಿಕರ್ನಾಟಕಜಾನಪದ ಮತ್ತುಯಕ್ಷಗಾನಅಕಾಡೆಮಿ ನಡೆಸಿದ ಜಾನಪದತಜ್ಞರ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.
ಸಾಹಿತ್ಯ ಸೇವೆ
ಪುಸ್ತಕಗಳು ಜ್ಞಾನದ ಭಂಡಾರವಿದ್ದಂತೆ ಅವು ಮನುಷ್ಯನನ್ನುಉತ್ತಮ ಭವಿಷ್ಯಕ್ಕೆಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ನಮ್ಮಜ್ಞಾನವನ್ನುತಣಿಸುವ ಆಲಯಗಳಿವು ಎಂಬುದನ್ನರಿತ ಶ್ರೀಯುತರು ಮ್ಯಾಸಬೇಡರು, ಬೇಸಾಯ ಪದ್ಧತಿ, ಬಂಗಾರಕೂದಲ ಜೈರಾಣಿ, ಜಾನಪದ ಇಬ್ಬನಿಗಳು, ಸಾಹಿತ್ಯ ಸಂಚಲನ, ಕೃಷಿ ಜಾನಪದ, ಹುನಗುಂದ ಬಾಬಣ್ಣ…..ಹೀಗೆ ಸುಮಾರು 18 ಪುಸ್ತಕಗಳನ್ನು ಸಾಹಿತ್ಯಕ್ಷೇತ್ರಕ್ಕೆಕೊಡುಗೆಯಾಗಿ ನೀಡಿದ್ದಾರೆ.ಅಲ್ಲದೆ ಹಲವಾರು ಲೇಖನಗಳನ್ನು ಪ್ರಕಟಿಸಿದ್ದಾರೆ.
ಜೊತೆಗೆಜನಪದ, ವಚನ, ಬಂಡಾಯ ಮತ್ತುದಲಿತ ಸಾಹಿತ್ಯ ವಿಷಯಗಳ ಮೇಲೆ ವಿದ್ಯಾರ್ಥಿಗಳು ಪ್ರೌಢಪ್ರಬಂಧವನ್ನು ರಚಿಸಿ ಪಿಹೆಚ್.ಡಿ ಪದವಿ ಪಡೆಯಲು ಕುವೆಂಪು ವಿಶ್ವವಿದ್ಯಾನಿಲಯದಿಂದ ಮಾರ್ಗದರ್ಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ನಾಡಿನಎಲ್ಲ ಭಾಗಗಳಲ್ಲಿಯೂ ಸಂಚರಿಸಿ ಸಾಹಿತ್ಯಿಕ ಮತ್ತುಜಾನಪದ ವಿಷಯಗಳನ್ನು ಕುರಿತು ಉಪನ್ಯಾಸಗಳನ್ನು ನೀಡಿದ್ದಾರೆ. ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ 2 ಜಿಲ್ಲಾ ಸಮ್ಮೇಳನಗಳನ್ನು 2 ತಾಲೂಕು ಸಮ್ಮೇಳನಗಳನ್ನು ಹಾಗೂ ಗುಣಮಟ್ಟದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಸಂದ ಪ್ರಶಸ್ತಿಗಳು
ಶ್ರೀಯುತರ ಸಾಹಿತ್ಯ, ಜಾನಪದ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
- 1993ರಲ್ಲಿ ಗುಂಡ್ಮಿಜಾನಪದ ಪ್ರಶಸ್ತಿ
- 1995 ಕು.ಶಿ. ಹರಿದಾಸ ಭಟ್ಟ ಪ್ರಶಸ್ತಿ
- 2000 ಕರ್ನಾಟಕ ನಾಟಕಅಕಾಡೆಮಿಗೌರವ ಫೆಲೋಷಿಪ್
- 2003 ಕರ್ನಾಟಕಜಾನಪದಅಕಾಡೆಮಿಯತಜ್ಞ ಪ್ರಶಸ್ತಿ
- 2010 ಹ.ಕ. ರಾಜೇಗೌಡಜಾನಪದ ಪ್ರಶಸ್ತಿ
2011ರಂಗ ಸಂಸ್ಥಾನ ಜಾನಪದ ಪ್ರಶಸ್ತಿ
- 2014ಮಹಲಿಂಗರಂಗ ಪ್ರಶಸ್ತಿ
- 2020ಕರ್ನಾಟಕರಾಜ್ಯೋತ್ಸವ ಪ್ರಶಸ್ತಿ
ತನ್ನ ನೋಡಲಿ ಎಂದುಕನ್ನಡಿಯುಕರೆವುದೆ
ತನ್ನಲ್ಲಿ ಜ್ಞಾನವುದಿಸಿದ ಮಹಾತ್ಮನು
ಕನ್ನಡಿಯಂತೆ ಸರ್ವಜ್ಞ
ಎಂಬ ನುಡಿಗೆ ಪೂರಕವಾಗಿ ಬದುಕುತ್ತಿರುವ ಡಾ.ಎಂ.ಜಿಈಶ್ವರಪ್ಪ ಒಳ್ಳೆಯ ಅಧ್ಯಾಪಕರಾಗಿ, ಜಾನಪದ ವಿದ್ವಾಂಸರಾಗಿ, ಶಿಕ್ಷಣ ತಜ್ಞರಾಗಿ, ಸಾಹಿತಿಯಾಗಿ, ಸರ್ವರ ಮನಸ್ಸನ್ನುಗೆದ್ದಿರುವಇವರು ಸದಾಕಾಲ ಹಸನ್ಮುಖಿ.ಎಲ್ಲರನ್ನು ಪ್ರೀತಿತುಂಬಿದ ಮನಸ್ಸಿನಿಂದ ಮಾತನಾಡಿಸುವ ಸರಳ ಸಜ್ಜನಿಕೆಯ ವ್ಯಕ್ತಿತ್ವದವರು.
ನಮ್ಮಂತಹ ಅನೇಕ ಕಿರಿಯ ಅಧ್ಯಾಪಕರಿಗೆ ಮಾರ್ಗದರ್ಶಕರಾಗಿರುವ ಈಶ್ವರಪ್ಪನವರುರಾಜ್ಯಮಟ್ಟದ 5 ನೇ ಭಕ್ತಿ ಸಾಹಿತ್ಯ ಸಮ್ಮೇಳನ ಪಂ.ಪುಟ್ಟರಾಜ ಸಾಹಿತ್ಯೋತ್ಸವದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸದ ವಿಷಯ. ಅಲ್ಲದೆ ನವೆಂಬರ್ 8 ರಂದು ಸಾಣೇಹಳ್ಳಿಯಲ್ಲಿ ನಡೆಯಲಿರುವರಾಷ್ಟ್ರೀಯ ನಾಟಕೋತ್ಸವ ಸಮಾರೋಪ ಸಮಾರಂಭದಲ್ಲಿ ಕೊಡಮಾಡುವ ಶ್ರೀ ಶಿವಕುಮಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ ಪರಮಪೂಜ್ಯ ಡಾ.ಶ್ರೀ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಪಡೆಯುತ್ತಿರುವ ಡಾ.ಎಂ.ಜಿ.ಈಶ್ವರಪ್ಪನವರ ಸಾಧನೆಯ ಬದುಕು ನಮಗೆಲ್ಲ ಸ್ಫೂರ್ತಿಯಾಗಲಿ ಎಂಬ ಆಶಯದೊಂದಿಗೆ.
[ಅಕ್ಟೋಬರ್-30 ರಂದು ದಾವಣಗೆರೆಯಲ್ಲಿ ನಡೆಯಲಿರುವ 05ನೆಯ ರಾಜ್ಯಮಟ್ಟದ ಭಕ್ತಿ ಸಾಹಿತ್ಯ ಸಮ್ಮೇಳನ (ಪಂ.ಪುಟ್ಟರಾಜ ಸಾಹಿತ್ಯೋತ್ಸವ-2022)ದ ಸಮ್ಮೇಳನಾಧ್ಯಕ್ಷರಾಗಿ ಜಾನಪದ ವಿದ್ವಾಂಸ ಡಾ.ಎಂ.ಜಿ.ಈಶ್ವರಪ್ಪ ಆಯ್ಕೆಯಾಗಿದ್ದು ತನ್ನಿಮಿತ್ತ ಈ ಲೇಖನ]
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಒಡಲುಗೊಂಡವ ಹುಸಿಯ: ಜಿ. ರಾಜಶೇಖರ

- ಎಚ್ ಪಟ್ಟಾಭಿರಾಮ ಸೋಮಯಾಜಿ, ಮಂಗಳೂರು
Beneath those rugged elms, that yew tree’s shade,
Where heaves the turf in many a moldering heap,
Each in his narrow cell forever laid,
The rude forefathers of the hamlet sleep.
…
Oft did the harvest to their sickle yield,
Their furrow oft the stubborn glebe has broke;
How jocund did they drive their team afield!
How bowed the woods beneath their sturdy stroke!
Let not Ambition mock their useful toil,
Their homely joys, and destiny obscure;
Nor Grandeur hear with a disdainful smile
The short and simple annals of the poor.
The boast of heraldry, the pomp of power,
And all that beauty, all that wealth e’er gave,
Awaits alike the inevitable hour.
The paths of glory lead but to the grave….
Full many a gem of purest ray serene,
The dark unfathomed caves of ocean bear:
Full many a flower is born to blush unseen,
And waste its sweetness on the desert air.
Yet even these bones from insult to protect
Some frail memorial erected nigh,
With uncouth rhymes and shapeless sculpture decked,
Implores the passing tribute of a sigh.
-(Thomas Gray: “Elegy Written in a Country Churchyard”; 1754/1751)
” ಬೋಳಿಮಗನೆ, ಬಹುವಚನ ಅಂತೆ ಬಹುವಚನ. ಏಕವಚನ ಮಾಡ್ತೇವೆ ನೋಡ್ತಾ ಇರು, ಸೂಳೆಮಗನೆ. ಇದು ಮಡಿಕೇರಿ, ತಿಳ್ಕೊ” ಎಂದು ವಿಕಾರವಾಗಿ ಕಿರುಚುತ್ತಾ ಸುಮಾರು ಮೂವತ್ತರಿಂದ ನಲವತ್ತರಷ್ಟು ಜನ ಸ್ಟೇಜಿಗೆ ನುಗ್ಗಿ ಕೈಯಲ್ಲಿದ್ದ ಟಿಪ್ಪಣಿ ಕಾಗದಗಳ ಕಟ್ಟನ್ನು ಬಲಾತ್ಕಾರದಿಂದ ಕಸಿದು ಹರಿದು ಬಿಸಾಡಿ, ಮೈಕನ್ನು ಕಿತ್ತು, ಕಾಲರನ್ನು ಹಿಡಿದು ಎಳೆದಾಡಿ ನನ್ನ ಮೇಲೆ ಏಕಾಏಕಿ ನುಗ್ಗಿದರು. ವಿವರವಾದ ಸುದೀರ್ಘ ಟಿಪ್ಪಣಿಗಳ ಆ ಕಾಗದದ ಕಟ್ಟಿನಲ್ಲಿ ಆ ಕಾಲದ ನನ್ನ ಯೋಚನೆಗಳನ್ನು ಭಟ್ಟಿಯಿಳಿಸುವ ಪ್ರಯತ್ನವಿತ್ತು; ಮಹಾತ್ಮಾ ಗಾಂಧಿ, ಮಾರ್ಟಿನ್ ಹೈಡೆಗರ್, ಸಾದತ್ ಹಸನ್ ಮಾಂಟೋ, ರಾಮಕೃಷ್ಣ ಪರಮಹಂಸ ಮುಂತಾದವರಿಂದ ನಾನು ತಯಾರಿಸಿಕೊಂಡ ಟಿಪ್ಪಣಿಗಳೂ ತರ್ಜುಮೆಗಳೂ ಅದರಲ್ಲಿ ಸೇರಿದ್ದವು; ಅದನ್ನು ಕಳೆದುಕೊಂಡ ನೋವು ಈಗಲೂ ನನ್ನನ್ನು ಮಾಯದ ಹಳೆಯ ಗಾಯದಂತೆ ಬಾಧಿಸುವುದು.
ಇದು ಈಗ ಇಪ್ಪತ್ತು ವರ್ಷಗಳ ಹಿಂದಿನ ಮಾತು. ಸ್ಥಳ, ಮಡಿಕೇರಿಯ ಕೋಟೆಯ (ಕೋಟೆ ಎಂದರೆ ನಿಜಕ್ಕೂ ಕೋಟೆಯೇ) ಆವರಣದೊಳಗಿರುವ ಜಿಲ್ಲಾಧಿಕಾರಿ ಕಛೇರಿಯ ಸೆನೆಟ್ ಸಭಾಂಗಣ. ಅಂದು ಭಾನುವಾರ. “ಬಹುವಚನ ಕೊಡಗು” ಎಂಬ ಹೆಸರಿನ ನಮ್ಮ ಪುಟ್ಟ ಬಳಗದಿಂದ ಆಯೋಜಿತವಾಗಿದ್ದ ಮಹತ್ವಾಕಾಂಕ್ಷೆಯ ಇಡೀ ಒಂದು ದಿನದ ನಿಬಿಡ ವಿಚಾರ ಸಂಕಿರಣ. “ಕೋಮುವಾದದ ಕರಾಳ ಮುಖಗಳು” ಎಂಬ ಶೀರ್ಷಿಕೆಯಲ್ಲಿ ನಡೆಯಬೇಕಾಗಿದ್ದ ಈ ಸಂಕಿರಣದ ಶೀರ್ಷಿಕೆಯ ಕುರಿತು ಆರಂಭದಲ್ಲೇ, ನಮ್ಮ ಪುಟ್ಟ ಬಳಗದ ಒಳಗೆಯೇ, ಒಬ್ಬರಿಂದ ಎದ್ದ ಅಪಸ್ವರದ ಕಾರಣದಿಂದಾಗಿ “ಕೋಮುವಾದದ ಹಲವು ಅವತಾರಗಳು” ಎಂದು ಮರುನಾಮಕರಣಗೊಂಡಿತ್ತು; ಆ ಕುರಿತು ನನಗೆ ಅಷ್ಟೇನೂ ಸಮಾಧಾನವಿರಲಿಲ್ಲ ಎಂಬುದು ಬೇರೆ ಮಾತು. ಜಿ ರಾಜಶೇಖರ, ರಹಮತ್ ತರೀಕೆರೆ ಮುಂತಾಗಿ ರಾಜ್ಯದ ಮುಂಚೂಣಿ ಚಿಂತಕ-ಹೋರಾಟಗಾರರು ನಮ್ಮ ಸಂಪನ್ಮೂಲ ವ್ಯಕ್ತಿಗಳು. ಹಾಗಾಗಿ, ಸಹಜವಾಗಿಯೇ ಈ ವಿಚಾರ ಸಂಕಿರಣಕ್ಕೆ ಬಹಳ ದೊಡ್ಡ ಸಂಖ್ಯೆಯ ಜನರು ಹಾಜರಾಗುವವರಿದ್ದರು. ಸಂಪನ್ಮೂಲ ವ್ಯಕ್ತಿಗಳು ಬಂದು ಅದಾಗಲೇ ಸಭಾಂಗಣದ ಮುಂದಿನ ಸಾಲಿನಲ್ಲಿ ಕುಳಿತಿದ್ದರು. ಮಡಿಕೇರಿ ಮತ್ತು ಸುತ್ತಮುತ್ತಲಿನ ಪತ್ರಕರ್ತ ಬಳಗ ಕೂಡಾ ಅದಾಗಲೇ ಹಾಜರಿತ್ತು.
ಸಭಿಕರು ಕೇವಲ ಬೆರಳೆಣಿಕೆಯಷ್ಟಿದ್ದರು; ಅವರಿನ್ನೂ ಬರುವುದರಲ್ಲಿದ್ದರು (ದೊಡ್ಡ ಸಂಖ್ಯೆಯಲ್ಲಿ ಆ ಮೇಲೆ ಬಂದರು ಕೂಡಾ). ಆದರೆ ಸಂಕಿರಣದ ಸುದೀರ್ಘ ಚರ್ಚೆಯು ಒತ್ತಡಕ್ಕೊಳಗಾಗಬಾರದು, ಹಾಗಾಗಿ ಸಮಯ ವ್ಯರ್ಥಮಾಡಬಾರದು ಎಂದು, “ಬಹುವಚನ ಕೊಡಗು” ಕುರಿತು, ದಿನದ ಕಾರ್ಯಕ್ರಮದ ಸ್ವರೂಪದ ಕುರಿತು, ಹಾಗೂ ಮುಖ್ಯವಾಗಿ ವಿಚಾರ ಸಂಕಿರಣದ ಆಶಯದ ಕುರಿತು– ಹತ್ತು ಗಂಟೆಗೆ ಸರಿಯಾಗಿ ನಾನು ವೇದಿಕೆಯಿಂದ ಮಾತನಾಡಲು ಪ್ರಾರಂಭ ಮಾಡಿದೆ. ಆಗ ಇದ್ದಕಿದ್ದಂತೆ ಸಾಲು ಸಾಲಾಗಿ ಆ ಮೂವತ್ತು ನಲವತ್ತರಷ್ಟು ಧಾಂಡಿಗರು ಸಭಾಂಗಣದೊಳಕ್ಕೆ ಲಗುಬಗೆಯಿಂದ ಬಂದರು. ಅವರ ವರ್ತನೆ ಹಾವಭಾವಗಳಾಗಲೀ ವೇಷಭೂಷಣಗಳಾಗಲೀ ಉತ್ತೇಜನಕಾರಿಯಾಗಿ ಕಂಡುಬರದಿದ್ದರೂ ಬಂದವರು ಕುಳಿತುಕೊಳ್ಳಲಿ ಎಂದು ಮಾತುಗಳನ್ನು ಅರ್ಧಕ್ಕೇ ನಿಲ್ಲಿಸಿ ನಾನು ಕಾದೆ. ಅವರು ಕೆಂಡದ ಮೇಲೆ ಕೂತವರಂತೆ ಕುರ್ಚಿಗಳಲ್ಲಿ ಕೂತರು. “ಬಹುವಚನ ಕೊಡಗು…” ಎಂದು ನಾನು ಮಾತುಗಳನ್ನು ಪುನರಾರಂಭಿಸುತ್ತಿದ್ದಂತೆ, ಅಷ್ಟೂ ಜನ ಏಕಾಏಕಿಯಾಗಿ ರಭಸದಿಂದ ನನ್ನ ಮೇಲೆ ನುಗ್ಗಿ ಬಂದರು.
ಆ ಕಾಲಕ್ಕೆ ಆ ರೀತಿ ಸಭೆಗಳಿಗೆ ಅನಾಗರಿಕವಾಗಿ ನುಗ್ಗಿ ನಿರ್ಲಜ್ಜವಾಗಿ ದಾಳಿ ಮಾಡುವುದು ಈಗಿನಷ್ಟು ವ್ಯಾಪಕವಾಗಲೀ, ಸಹಜವಾಗಲೀ, ಸುಲಭವಾಗಲೀ ಆಗಿರಲಿಲ್ಲ. ನಮ್ಮಂತೆ ಆ ಪುಂಡರಿಗೂ ಅದು ಹೊಸತೇ ಅನುಭವ. ನಮ್ಮ ಬಹುವಚನದ ಪುಟ್ಟ ಬಳಗದವರಿಗಂತೂ ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಈ ಅನಾಹುತ ಶುರುವಾಗಿತ್ತು. ಇದ್ದಬದ್ದ ವಿವೇಕವನ್ನು ಒಗ್ಗೂಡಿಸಿಕೊಂಡು, ಸಂಪನ್ಮೂಲ ವ್ಯಕ್ತಿಗಳ ಸುರಕ್ಷತೆಯೇ ತಮ್ಮ ತುರ್ತು ಆದ್ಯ ಕರ್ತವ್ಯವೆಂದು ಬಗೆದು ಸಂಪನ್ಮೂಲ ವ್ಯಕ್ತಿಗಳನ್ನು ಕ್ಷಿಪ್ರವಾಗಿ ಕರೆದುಕೊಂಡು ಅವರು ಕೋಟೆಯ ಆಚೆಗೆ ಹೊರಟುಹೋದರು. ಪತ್ರಕರ್ತರಿಗೆ ಈ ದಾಂಧಲೆಕೋರರ ಗುರುತು ಹತ್ತಿತು; ಸಂಭಾವ್ಯ ಘಟನಾವಳಿಗಳನ್ನು ಅವರು ಕ್ಷಣಮಾತ್ರದಲ್ಲಿ ಊಹಿಸಿ, ಅದನ್ನು ವರದಿ ಮಾಡಲೆಂದು ಅವರೂ ಎದ್ದು ಹೊರಟು ಹೋದರು. ಆಗಲೇ ಹೇಳಿದಂತೆ, ಸಭಿಕರು ಇನ್ನೂ ಅಷ್ಟಾಗಿ ಬಂದಿರಲಿಲ್ಲ, ಬಂದಿದ್ದವರೂ ಕಂಗಾಲಾಗಿ ದಿಕ್ಕಾಪಾಲಾಗಿ ಚದುರಿ ಹೋದರು; ಕೋಟೆಯ ಹೊರಬಾಗಿಲ ಬಳಿ ನಿಂತುಕೊಂಡು ನಮ್ಮ ಬಳಗದವರೊಬ್ಬರು ಸಂಕಿರಣಕ್ಕಾಗಿ ಒಳಗೆ ಬರುತ್ತಿದ್ದ ಜನರನ್ನು ತಡೆದು, “ಒಳಗೆ ದಾಂಧಲೆ ನಡೆಯುತ್ತಿದೆ, ಹೋಗಬೇಡಿ, ಸುರಕ್ಷಿತವಲ್ಲ” ಎಂದು ಹಿಂದೆ ಕಳುಹಿಸುತ್ತಿದ್ದರು. ಸರಿ ಸುಮಾರು ಮೂವತ್ತರಿಂದ ನಲವತ್ತು ನಿಮಿಷ ಒಳಾಂಗಣ-ಸಭಾಂಗಣ ರಣಾಂಗಣವಾಗಿ ಮಾರ್ಪಟ್ಟಿತ್ತು. ನಾನು ಒಬ್ಬಂಟಿ, ಆದರೆ ವಿಚಲಿತನಾಗಿರಲಿಲ್ಲ.
ಮಡಿಕೇರಿಯಲ್ಲಿ ಆಗ ‘ಪ್ರಜಾವಾಣಿ’ ಪತ್ರಿಕೆಯ ಮುಖ್ಯ ವರದಿಗಾರರಾಗಿದ್ದ, ಆರಡಿಗಿಂತ ಎತ್ತರದ ಆಜಾನುಬಾಹು ರಾಜೇಂದ್ರಪ್ರಸಾದ್ ರವರು, ಯಾರೂ ನನ್ನ ಮೈ ಮುಟ್ಟದಂತೆ ಧೀರೋದಾತ್ತವಾಗಿ ನನ್ನ ರಕ್ಷಣೆಗೆ ನಿಂತರು; ಅವರ ಪತ್ರಿಕಾ ವೃತ್ತಿ ವರ್ಚಸ್ವಿಯಾದುದಾಗಿತ್ತು; ಅಲ್ಲದೇ ದಿನಂಪ್ರತಿ ಎದುರು ಸಿಗುವ ಇಂಥ ಪ್ರಮುಖ ಪತ್ರಕರ್ತರೊಬ್ಬರನ್ನು ಕಡೆಗಣಿಸಿ ನನ್ನ ಮೇಲೆ ದೈಹಿಕ ಹಲ್ಲೆ ಮಾಡುವಷ್ಟು ಭಂಡ ಧೈರ್ಯವಾಗಲೀ ತರಬೇತಿಯಾಗಲೀ ಅಯಾಚಿತ ಸಾರ್ವಜನಿಕ ಬೆಂಬಲವಾಗಲೀ ಆ ಪುಂಡರಿಗೆ ಇರಲಿಲ್ಲ. ನಮ್ಮ ಮಾಧ್ಯಮಲೋಕದಲ್ಲಿ ರಾಜೇಂದ್ರಪ್ರಸಾದರಂಥ ವಿವೇಕಿಗಳಿದ್ದರೆ ಹೇಗೆ ಸಾಮಾಜಿಕ ದುಸ್ಥಿತಿ ಮತ್ತು ಅರಾಜಕತೆಗಳನ್ನು ಸ್ವಲ್ಪಕಾಲವಾದರೂ ತಹಬಂದಿಗೆ ತರಬಹುದು ಎಂಬುದು ಒಂದು ವಿರಳ ರೂಪಕದಂತೆ, ಈ ಘಟನೆಯಿಂದಾಗಿ, ನನ್ನ ಮನಸ್ಸಿನಲ್ಲಿ ಇವತ್ತಿಗೂ ನಾಟಿದೆ.ಇಷ್ಟೂ ಹೊತ್ತು, ಈ ದಾಂಧಲೆಕೋರ ಹುಳಪಾರ್ಟಿಗಳು ನನ್ನನ್ನು ಜಿ ರಾಜಶೇಖರ ಎಂದೇ ತಿಳಿದಿದ್ದರು.
ದಾಂಧಲೆ ಮಾಡುತ್ತಿರುವವರು ಯಾರು, ದಾಂಧಲೆಗೆ ಒಳಗಾಗುತ್ತಿರುವವರು ಯಾರು, ಯಾಕೆ? ಇದನ್ನು ತಡೆಯಬಲ್ಲವರು ಯಾರು, ಹೇಗೆ? ಎಂಬ ಗೆರೆಗಳೆಲ್ಲ ತೆಳುವಾಗುತ್ತ ಅಳಿಸಿಹೋಗಿ ಕಲಸುಮೇಲೋಗರವಾಗಿರುವ ದುರಂತಕ್ಕೆ ಈಗಂತೂ ನಾವೆಲ್ಲರೂ ಅಸಹಾಯಕ ಸಾಕ್ಷಿಗಳು. ಅದೇನಿದ್ದರೂ, ಕರಾವಳಿ ಕರ್ನಾಟಕದಲ್ಲಿ ಆಗಷ್ಟೇ ಉಲ್ಬಣಕ್ಕೆ ಬರುತ್ತಿದ್ದ ಹಿಂದೂತ್ವವಾದೀ ಹಿಂಸಾಚಾರವನ್ನು ಕ್ಲಿನಿಕಲ್ ಅಚ್ಚುಕಟ್ಟುತನದಿಂದ, ಇಲ್ಲಿನ ಕ್ರೂರ ಸತ್ಯವನ್ನು ಮುಕ್ಕಾಗದಂತೆ ವರದಿ ಮಾಡಿ ಆಗ ತಿಳಿಸುತ್ತಿದ್ದ ಏಕಮಾತ್ರ ವ್ಯಕ್ತಿ ಜಿ ರಾಜಶೇಖರ. ಕೋರೈಸುವ ಸತ್ಯ ಮತ್ತು ತರ್ಕಶುದ್ಧತೆಗಳ ಕಾರಣದಿಂದಾಗಿಯೇ ಅವರ ವರದಿಗಳು, ಹುಟ್ಟಾ ಅಜ್ಞಾನಿಗಳಾದ ಹಿಂದೂತ್ವವಾದಿಗಳಿಗೂ ಅಷ್ಟರಮಟ್ಟಿಗೆ ಅರ್ಥವಾಗುವಂತಿತ್ತು. ಆ ಕಾಲದ ವಿಷಯ ಸದ್ಯ ಒತ್ತಟ್ಟಿಗಿರಲಿ, ಕರಾವಳಿ ಕರ್ನಾಟಕದಲ್ಲಿ ಈಗ ಮೂರು ದಶಕಗಳಿಂದ ಹಗಲೂರಾತ್ರಿ ನಡೆಯುತ್ತಿರುವ ಹಿಂದೂತ್ವವಾದೀ ಬರ್ಬರ ಹಿಂಸಾಚಾರದ ಕುರಿತು ನಾನೋ ನೀವೋ ಆಡುವ ಮಾತುಗಳನ್ನು ಕರ್ನಾಟಕದ ಉಳಿದ ಕಡೆಯ ಜನರು, “ಇವರದ್ದೊಂದು ಉತ್ಪ್ರೇಕ್ಷಿತ ಕಟ್ಟುಕತೆ; ಕರ್ನಾಟಕವು ಲಾಗಾಯ್ತಿನಿಂದಲೂ ಸರ್ವಜನಾಂಗದ ಶಾಂತಿಯ ತೋಟ” ಎಂಬ ದೃಢ ನಂಬಿಕೆಯಲ್ಲೇ ಇತ್ತೀಚಿನವರೆಗೂ ವ್ಯವಹರಿಸುತ್ತ ಬಂದದ್ದಿದೆ. ಆ ಉದಾಸಿನಕ್ಕೆ ಮದ್ದಿಲ್ಲ. ಇದನ್ನು ನೆನೆದರೆ ಜಿ ರಾಜಶೇಖರ ಏಕಾಂಗಿಯಾಗಿ ನಡೆಸುತ್ತ ಬಂದ ಹೋರಾಟ ಇಮ್ಮಖವಾದುದು ಎಂಬುದೂ ತಿಳಿದೀತು: ಎದುರಾಳಿಗಳೂ, ಸಹಚರರೂ– ಇಬ್ಬಣಗಳೂ– ಅವರಿಗೆ ಎಡೆಬಿಡದ ಗಮನಕೇಂದ್ರಗಳು.
1998ರಲ್ಲಿ ಮಡಿಕೇರಿಯಲ್ಲಿ ನಾನು ಕೆಲಸಕ್ಕೆ ಸೇರಿದ ಹೊಸದರಲ್ಲಿ ಸುರತ್ಕಲ್ ನಲ್ಲಿ ನಡೆದ ಹಿಂದೂತ್ವವಾದೀ ಭೀಕರ ಹಿಂಸಾಚಾರದಿಂದಾಗಿ ನನಗೆ ಜಿ ರಾಜಶೇಖರರ ನಿಕಟ ಸಂಪರ್ಕ ಬೇಕೆನ್ನಿಸಿತು, ಉಂಟಾಯಿತು. ಆ ಕಾಲದಲ್ಲಿ ಅತ್ಯಂತ ಪ್ರಭಾವಶಾಲಿ ರಾಷ್ಟ್ರೀಯ ನಾಯಕಿಯಾಗಿದ್ದ ಶ್ರೀಮತಿ ಸೋನಿಯಾ ಗಾಂಧಿಯವರೇ ಸ್ವತಃ ಸುರತ್ಕಲ್ ಗೆ ಭೇಟಿಕೊಡಬೇಕಾಗಿ ಬರುವಷ್ಟು ಆ ಹಿಂಸಾಚಾರ ಢಾಳಾಗಿತ್ತು, ಕ್ರೂರವಾಗಿತ್ತು, ದೇಶದ ಗಮನ ಸೆಳೆದಿತ್ತು. ಗೊತ್ತಿರುವವರಿಗೆ ಗೊತ್ತಿರುವಂತೆ, ಈ ಹಿಂದೂತ್ವವಾದೀ ಭೀಕರ ಹಿಂಸಾಚಾರವನ್ನು “ಸುರತ್ಕಲ್ ಗಲಭೆ” ಎಂಬ ರಂಗಿನ ರಂಗೋಲಿಯ ಕೆಳಗೆ ಅಡಗಿಸುವ ಹೊಸ ಭಾಷೆ, ವ್ಯಾಪಕ ವ್ಯಾಕರಣ ಮತ್ತು ಮೀಮಾಂಸೆ ಹುರಿಗಟ್ಟುತ್ತಿದ್ದ ಕಾಲ ಅದು. ಇಲ್ಲಿ ನಡೆದಿರುವುದು ಸಾಂದರ್ಭಿಕ ಕೋಮು ಗಲಭೆಯಲ್ಲ, ಇವತ್ತು ಕಂಡು ನಾಳೆ ಮರೆಯಾಗುವ ಕ್ಷಣಿಕ ಅಪಭ್ರಂಶವಲ್ಲ, ಎರಡೂ ಕಡೆಯವರು ಸೇರಿ ನಡೆಸಿದ ಜೋಡಾಟವೋ ಜುಗಲ್ಬಂದಿಯೋ ಅಲ್ಲ; ಬದಲಾಗಿ, ವ್ಯವಸ್ಥಿತವಾದ, ವ್ಯಾಪಕವಾದ ಹಿಂದೂತ್ವವಾದೀ ದುಷ್ಟಕೂಟದ ಪ್ರಯೋಗವಾಗಿರುವ ಕ್ರೌರ್ಯ ಮತ್ತು ವಿಷ ಎಂದು ಸಾಧಾರವಾಗಿ, ನಿಖರವಾಗಿ, ವಿವರವಾಗಿ ದಾಖಲಿಸಿದವರು ಜಿ ರಾಜಶೇಖರ. ಹಾವನ್ನು ಹಗ್ಗ ಎಂದು ಅವರು ಎಂದೂ ಹೇಳಲಿಲ್ಲ: He had called the spade, the spade. ಎರಡಕ್ಕೆ ಎರಡು ಕೂಡಿಸಿದರೆ ನಾಲ್ಕು, ಎಂಬ ಸರಳಸತ್ಯವನ್ನು ಹೇಳುವುದು ಕೂಡಾ ಒಂದು ದಿಟ್ಟತನವೂ ಹೌದು, ಕಲೆಯೂ ಹೌದು.
ನಾನೊಬ್ಬ ಸಾಹಿತ್ಯದ ಅಧ್ಯಾಪಕ ಹಾಗೂ ವಿದ್ಯಾರ್ಥಿ. ವಿದ್ಯಾರ್ಥಿಯಾಗಿರುವಾಗಲೇ ನನ್ನ ಮೇಲೆ ಅತ್ಯಂತ ಪ್ರಭಾವ ಬೀರಿದ್ದ, ಈಗಲೂ ಸ್ಫೂರ್ತಿದಾಯಕವಾಗಿ ಉಳಿದುಬಂದಿರುವ ಬರಹಗಳಲ್ಲಿ ಬಹುಮುಖ್ಯವಾದ ಒಂದು ಕೃತಿ ಆಲ್ಬರ್ಟ್ ಕಮೂ ಬರೆದ “ದಿ ಔಟ್ ಸೈಡರ್” (1942). ಭಾಷೆ ಎಂಬುದು ಬರಿಯ ಪದವೋ ಪದಾರ್ಥವೋ ಅಲ್ಲ, ಎದುರು ಹರಡಿರುವ ವಸ್ತುಗಳಿಗೆ ಅಚ್ಚುಕಟ್ಟಾಗಿ ಮಾಡಿರುವ ನಾಮಕರಣವೂ ಅಲ್ಲ, ಅದು ಗರಗಸದಂತೆ ಹೋಗುತ್ತ ಕುಯ್ವುದು ಬರುತ್ತ ಕುಯ್ವುದು; ಭಾಷೆ ಎಂಬುದು, ಪ್ರಭುತ್ವವು ಹಲವು ಹೊಂಚುಗಳಲ್ಲಿ ಸ್ಥಿತಗೊಂಡಿರುವ, ಪ್ರಕಟಗೊಳ್ಳುವ, ಸ್ಥಿರೀಕರಣಗೊಳ್ಳುವ, ಬಗೆಬಗೆಯಾಗಿ ಪುನರಾವರ್ತನೆಗೊಳ್ಳುವ, ಏನನ್ನು ಬೇಕಾದರೂ ಲೋಕಜ್ಞಾನವೆಂಬಂತೆ– ಉಸಿರಾಡುವ ಗಾಳಿ, ನೋಟ ಒದಗಿಸುವ ಬೆಳಕಿನಂತೆ– ಸಹಜವಾದದ್ದು ಎಂದು ಯಶಸ್ವಿಯಾಗಿ ನಂಬಿಸಬಲ್ಲ ವ್ಯಾಪಕವಾದ ಜಾಲ. ಸ್ಥೂಲವಾಗಿ ಹೇಳುವುದಾದರೆ, ಇದು ಆ ಕೃತಿಯಲ್ಲಿ ಕಾಣುವ ಹೊಳಹು. ಇದು, ಯೂರೊಪ್ ಕಂಡ ಮಹಾಯುದ್ಧಗಳು ಹಾಗೂ ಫ್ಯಾಶಿಸ್ಮ್ ನ ವಿಕರಾಳ ಕ್ರೌರ್ಯಗಳ ಮೂಸೆಯಲ್ಲಿ ತಯಾರಾದ ಹೊಸ ತಿಳುವಳಿಕೆಯಾಗಿತ್ತು. ಕಮೂ ತನ್ನ ಈ ಕಾದಂಬರಿಯಲ್ಲಿ ನಮ್ಮ ದಿನನಿತ್ಯದ, ಸರ್ವಸಾಮಾನ್ಯವೆಂಬಂತೆ ಕಾಣುವ, ಭಾಷೆಯನ್ನು ಹಾಗೂ ವಿದ್ಯಮಾನಗಳನ್ನು ಸಂಪೂರ್ಣ ಬೆತ್ತಲೆಗೊಳಿಸಿ ನಿರ್ಭಾವುಕವಾಗಿ ಅದರ ಹುನ್ನಾರಗಳನ್ನು ಜಗಜ್ಜಾಹೀರು ಮಾಡಿದವನು.
ಮಡಿಕೇರಿಯಲ್ಲಿ ಕೆಲಸಕ್ಕೆ ಸೇರಿದ್ದ ಹೊಸತರಲ್ಲಿ, ಸುರತ್ಕಲ್ ನ ಹಿಂದೂತ್ವವಾದೀ ಹಿಂಸಾಚಾರದ ಕುರಿತು ಸುದೀರ್ಘವಾದ, ಸಣ್ಣಪುಟ್ಟ ವಿವರಗಳನ್ನೂ ಬಿಡದಂತೆ ಅಚ್ಚುಕಟ್ಟಾಗಿ ಒಳಗೊಂಡ ವರದಿಯನ್ನು ನಾನು ‘ಲಂಕೇಶ್ ಪತ್ರಿಕೆ’ಯಲ್ಲಿ ಓದಿದೆ. ಹಲವು ಕಂತುಗಳಲ್ಲಿ ಪ್ರಕಟವಾದ ಆ ವರದಿ ಈಗಲೂ ನನಗೆ ಕಣ್ಣಿಗೆ ಕಟ್ಟಿದಂತಿದೆ. ಅದರಲ್ಲಿ ಲೇಖಕನ ಸ್ವಂತ ಮಾತುಗಳಾಗಲೀ, ಅಭಿಪ್ರಾಯಗಳಾಗಲೀ, ವಾದಗಳಾಗಲೀ, ಸಮರ್ಥನೆ ಖಂಡನೆ ಮಂಡನೆಗಳಾಗಲೀ ಇರಲಿಲ್ಲ. ಬಲಿಪಶುಗಳಾದ, ಬಲಿ ತೆಗೆದುಕೊಂಡ, ನಮಗ್ಯಾಕೆ ಎಂದು ಕೈಚೆಲ್ಲಿ ಸಾಕ್ಷಿ ನಿಂತ ನಿರ್ಲಿಪ್ತ ವ್ಯಕ್ತಿಗಳ ಹೆಸರು, ವಯಸ್ಸು, ವರಮಾನ, ಉದ್ಯೋಗ, ಮನೆ, ಊರು, ನೆರೆಹೊರೆ, ದೈನಿಕ ಜೀವನ, ಈಗ ಅವರ ಕಣ್ಣೆದುರು ನಡೆದ ಘಟನೆಗಳು ಮುಂತಾಗಿ ಕರಾರುವಾಕ್ಕಾದ ಕ್ಲಿನಿಕಲ್ ವಿವರಗಳಷ್ಟೇ ಇದ್ದವು. ಲೇಖಕ ಸಂಪೂರ್ಣ ಮರೆಗೆ ಸಂದು, ಪಾತ್ರಗಳೇ ಮೈ ತಳೆದು ನಿಂತಿದ್ದವು. ಆ ಪಾತ್ರಗಳು ತಮಗೆ ಕಂಡಷ್ಟನ್ನೇ ಕಂಡಂತೆಯೇ ಭಯ ದಿಗಿಲು ಭರವಸೆಗಳ ಗೋಜಲಿನಲ್ಲಿ ಹೇಳಿದ್ದವು. ಕಮೂ ಕಾದಂಬರಿಯಲ್ಲಿ ನಾನು ಅಚ್ಚರಿಯಲ್ಲಿ ಏನನ್ನು ಕತೆಯಾಗಿ ಕಂಡಿದ್ದೆನೋ ಅದು ಇಲ್ಲಿ ನಮ್ಮದೇ ಕಾಲಬುಡದಲ್ಲಿ ಜೀವನವಾಗಿ ಮರುಕಳಿಸಿದ್ದನ್ನು ಕಂಡು ನಾನು ನಡುಗಿ ಹೋದೆ. ಈ ವರದಿ ಬರೆದವರು ಜಿ ರಾಜಶೇಖರ.
ತಾನು ಸಾಯುವ ಕಾಲಕ್ಕೆ ಬರೆದ ಕೊನೆಯ ಸಂಪಾದಕೀಯದಲ್ಲಿ ಲಂಕೇಶರು ಜಿ ರಾಜಶೇಖರರ ಕುರಿತು ಅಭಿಮಾನ ತೋರಿದ್ದು ಸುಖಾಸುಮ್ಮನೆ ಅಲ್ಲ. ಆ ಹೊತ್ತಲ್ಲಿ ಕೆ ಎನ್ ಫಣಿಕ್ಕರ್ ಸಂಪಾದಕರಾಗಿ ಪ್ರಕಟಿಸಿದ “ಕಾಮನ್ ಮ್ಯಾನ್ಸ್ ಗೈಡ್ ಟು ಕಮ್ಯೂನಲಿಸ್ಮ್” ಎಂಬ ಹೊಸ ಪುಸ್ತಕವನ್ನೂ ನಾನು ಓದಿದ್ದೆ; ಅದು ಬಹಳ ಪ್ರಭಾವಶಾಲಿಯಾದ ಪುಸ್ತಕ. ಈ ಕಾಕತಾಳೀಯಗಳು ಸೇರಿದ್ದರಿಂದಾಗಿ, “ಬಹುವಚನ ಕೊಡಗು” ಎಂಬ ಬಳಗ ಮತ್ತು ಅದರಿಂದ ಹಲವು ಕಾರ್ಯಕ್ರಮಗಳು ಘಟಿಸಿದವು. ಜಿ ರಾಜಶೇಖರ, ಹಾಗೂ ಅವರನ್ನು ಬಗ್ಗುಬಡಿಯುವ ಉದ್ದೇಶದ ಪುಂಡ ಪಟಾಲಂ ಮಡಿಕೇರಿಗೆ ಅವರನ್ನು ಹಿಂಬಾಲಿಸಿ ಬಂದದ್ದು ಹೀಗೆ.
2003ರಲ್ಲಿ ನಾನು ತಿರುಗಿ ಮಂಗಳೂರಿಗೆ ಬಂದು ಕೆಲಸಕ್ಕೆ ಸೇರಿದೆ. ದೂರದ ಗೋದ್ರಾ-ಗುಜರಾತ್ ಮಾತ್ರವಲ್ಲದೇ ಇಲ್ಲೇ ಆದಿ ಉಡುಪಿಯಲ್ಲೂ ಹಿಂದೂತ್ವವಾದೀ ಹಿಂಸಾಚಾರದ ಅಟ್ಟಹಾಸ ಉಲ್ಬಣಾವಸ್ಥೆಗೆ ಏರಿದ್ದ ಉಚ್ಛ್ರಾಯ ಕಾಲ. ಹಾಗಾಗಿ, ಕರಾವಳಿಯಾದ್ಯಂತ, ಮುಖ್ಯವಾಗಿ ಮಂಗಳೂರು ಉಡುಪಿಗಳಲ್ಲಿ, ಜಿ ರಾಜಶೇಖರ ಮತ್ತು ನಾನು ಹಲವು ಪ್ರತಿಭಟನಾ ಸಭೆಗಳಲ್ಲಿ ಪದೇಪದೇ, ಮತ್ತು ತನಿಖಾ ವರದಿಗಳಿಗಾಗಿ ಆಗಾಗ ಜೊತೆಯಾಗುವ ಸಂದರ್ಭಗಳು ಉಂಟಾದವು. ನಮ್ಮ ಈ ಒಡನಾಟಕ್ಕೆ ಸಂಬಂಧಿಸಿ, ಸಂಕ್ಷಿಪ್ತವಾಗಿ ನಾಲ್ಕು ವಿವರಗಳನ್ನಾದರೂ ನಾನಿಲ್ಲಿ ನೆನೆಯಬೇಕು: 2006ರ ಹಿಂದೂತ್ವವಾದೀ ಹಿಂಸಾಕಾಂಡ; ಉಡುಪಿಯ ಸೌಹಾರ್ದ ಸಾಹಿತ್ಯ ಸಮ್ಮೇಳನ; ಹತ್ತು ವರ್ಷಗಳ ಹಿಂದೆ ಮಂಗಳೂರಲ್ಲಿ ನನ್ನ ಮೇಲೆ ನಡೆದ ದೈಹಿಕ ಹಲ್ಲೆ; ಹಾಗೂ, ಮುಸ್ಲಿಮರು ಸಂಘಟಿತರಾಗಲು ಮಾಡಿದ ಪ್ರಯತ್ನದಲ್ಲಿ ನನ್ನ ಮತ್ತು ಜಿ ರಾಜಶೇಖರರ ಪಾಲುದಾರಿಕೆ.
2006ರಲ್ಲಿ, ಮುಖ್ಯವಾಗಿ ಮಂಗಳೂರು ನಗರ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ವಾರಗಟ್ಟಲೆ ಹಿಂದೂತ್ವವಾದೀ ಹಿಂಸಾಚಾರ ನಡೆಯಿತು. ಇಬ್ಬರು ಮುಸ್ಲಿಮರ ಕೊಲೆಯಾಯಿತು. ಪ್ರಭುತ್ವ ಕಳ್ಳರಂತೆ ಅಡಗಿ ಕೂತು ಚಳಿ ಕಾಯಿಸಿಕೊಳ್ಳುತ್ತಿತ್ತು. ಮನುಷ್ಯತ್ವವೇ ಹೊತ್ತಿ ಹೋಗಿ ದಕ್ಷಿಣಕನ್ನಡ ರಕ್ತಸಿಕ್ತ ರಣರಂಗವಾಗಿತ್ತು. ಅಳಿದುಳಿದವರ ಆರ್ತನಾದದ ಆ ದಿನಗಳನ್ನು ನೆನೆಸಿಕೊಂಡರೆ ಈಗಲೂ ಮೈ ನಡುಗುತ್ತದೆ. ಒಂದು ದಿನ, ಜಿ ರಾಜಶೇಖರರವರು ಫೋನ್ ಮಾಡಿ, ಹಿಂಸಾಚಾರಕ್ಕೆ ಈಡಾದ ಪ್ರದೇಶಗಳು ಮತ್ತು ವ್ಯಕ್ತಿಗಳ ಕುರಿತು ವಿವರವಾದ ಮಾಹಿತಿ ಮತ್ತು ಸಂಪರ್ಕಗಳಿರುವ ಒಬ್ಬ ತರುಣನಿದ್ದಾನೆ; ಸಾಧ್ಯವಿದ್ದರೆ ಕೆಲಸಕ್ಕೆ ರಜೆ ಹಾಕಿ ಬಿಡುವು ಮಾಡಿಕೊಂಡು ಬನ್ನಿ, ಏನು ನಡೆದಿದೆ ಎಂಬುದನ್ನು ನೋಡಬೇಕು ಎಂದರು. ಹಾಗೆ, ನಾವಿಬ್ಬರು ಹರ್ಷದ್ ವರ್ಕಾಡಿ ಎಂಬ ತರುಣನ ಮಾರ್ಗದರ್ಶನದಲ್ಲಿ ಜೊತೆಯಾಗಿ, ಆದಷ್ಟೂ ಕೂಲಂಕಷವಾಗಿ ಭೇಟಿ, ಸಂದರ್ಶನ, ಸುತ್ತಾಟ, ಮಾಹಿತಿ ಸಂಗ್ರಹಣೆ ಮಾಡಿದೆವು. ಅಗತ್ಯ ಕಂಡ ಕಡೆಗಳಿಗೆ ಹಲವು ಬಾರಿ ಹೋಗಬೇಕಾಗಿ ಬಂತು. ಸಂತ್ರಸ್ತರು ಮತ್ತು ಅಪರಾಧಿಗಳು ಒಬ್ಬರ ದಾರಿ ಮತ್ತೊಬ್ಬರು ತೋರಿಸಿ ಈ ಕಗ್ಗಂಟಿನ ಹಿಂದೆ ಮುಂದೆ ಒಳಹೊರಗೆ ಸುತ್ತಿ ಸುದೀರ್ಘವಾದ ವರದಿಯನ್ನು ತಯಾರಿಸಿದೆವು. ಆ ವರದಿ ಕಂತು ಕಂತುಗಳಾಗಿ ‘ಲಂಕೇಶ್ ಪತ್ರಿಕೆ’ಯಲ್ಲಿ ಪ್ರಕಟವಾಯಿತು. ‘ಕರ್ನಾಟಕ ಕೋಮು ಸೌಹಾರ್ದ ವೇದಿಕೆ’ ಅದನ್ನು ಒಂದು ಪುಸ್ತಕವಾಗಿ ಪ್ರಕಟಿಸಿತು. ಅದನ್ನು ನನ್ನಿಂದ ಇಂಗ್ಲಿಷ್ ಗೆ ಅನುವಾದಿಸಿ ತೀಸ್ತಾ ಸೆಟಲ್ ವಾಡ್ ತಮ್ಮ ‘ಕಮ್ಯೂನಲಿಸ್ಮ್ ಕಾಂಬ್ಯಾಟ್’ ಪತ್ರಿಕೆಯಲ್ಲಿ ಪ್ರಕಟಿಸಿದರು. ಈ ಸಂಬಂಧವಾಗಿ ತೀಸ್ತಾ ಸೆಟಲ್ ವಾಡ್ ಸ್ವತಃ ಮಂಗಳೂರಿಗೆ ಬಂದು (ಮಾಧ್ಯಮಲೋಕ ಅದಾಗಲೇ ಕುಲಗೆಟ್ಟು ಹಿಂದೂತ್ವವಾದಿಯಾಗಿ ಮತಾಂತರಗೊಂಡಿದ್ದಾಗಲೂ) ಪತ್ರಿಕಾಗೋಷ್ಠಿ ಕರೆದು, ವಿವರಗಳನ್ನು ಸಾರ್ವಜನಿಕರ ಎದುರು ತೆರೆದಿಟ್ಟರು.
ಈ ವರದಿಯ ಉಳಿದ ಫಲಿತಗಳೇನೇ ಇರಲಿ, ನಾನು ಜಿ ರಾಜಶೇಖರರಿಂದ ಆಗ ಕಲಿತದ್ದು ಬಹಳ. ಅದು ಬಹಳ ಅಮೂಲ್ಯ ಕೂಡಾ. ಅಪರಾಧಿಗಳಿರಲಿ, ತಟಸ್ಥರಿರಲಿ, ಸಂತ್ರಸ್ತರಿರಲಿ, ಪ್ರಭುತ್ವವಿರಲಿ– ನಾವು ಭಾವಾವೇಶಕ್ಕೆ ಎಡೆಯಾಗದಂತೆ, ಸಣ್ಣಪುಟ್ಟದು ಎಂಬ ಅಸಡ್ಡೆಯಲ್ಲಿ ಯಾವ ವಿವರಗಳೂ ಕೈ ಜಾರದಂತೆ, ಸಂದರ್ಭದ ಕಗ್ಗಂಟಾದ ಮಗ್ಗುಲುಗಳಿಗೂ ಸಂಕೀರ್ಣತೆ ಸಂದಿಗ್ಧಗಳಿಗೂ ಕುರುಡಾಗದಂತೆ, ಹುಂಬ ಪಕ್ಷಪಾತಿಗಳಾಗದಂತೆ, ಆದರೆ ಸತ್ಯಕ್ಕೆ ಧಕ್ಕೆ ಬರದಂತೆ, ಪ್ರಭುತ್ವದ ಅಟ್ಟಹಾಸದಿಂದ ಕೊಂಕದಂತೆ ನಡೆದ ಈ ತನಿಖೆಯನ್ನು, ಅದರ ಒಂದು ಉದಾಹರಣೆಯ ಮುಖಾಂತರ ಹೇಳುವುದಾದರೆ: ಈ ವರದಿ ತಯಾರಾದ ನಂತರ ದೇಶದ ಬೇರೆ ಭಾಗಗಳಿಂದ ಹಾಗೂ ಹೊರದೇಶಗಳಿಂದ ಕೆಲವು ವರದಿಗಾರರು ಮತ್ತು ಮಾಧ್ಯಮ ಅಧ್ಯಯನ ವಿದ್ಯಾರ್ಥಿಗಳು ಆಗಾಗ ನನ್ನ ಬಳಿ ಬರುತ್ತಿದ್ದರು; ಅವರನ್ನು ಪದೇಪದೇ ನಾನೊಬ್ಬನೇ ಕರೆದುಕೊಂಡು ಹೋಗಬೇಕಾದ ಸಂದರ್ಭಗಳು ಬರುತ್ತಿದ್ದವು. ಆಗ ನನ್ನ ಬಳಿ, ನಾವು ತಯಾರಿಸಿದ ವರದಿಯ ಪುಸ್ತಕಗಳ ಪ್ರತಿಗಳು ಇರುತ್ತಿದ್ದವು. ಗೂಡಂಗಡಿಗಳು, ಬಟ್ಟೆ ಚಪ್ಪಲಿ ತರಕಾರಿ ಅಂಗಡಿಗಳು, ದೂರದೂರದ ಒಂಟಿ ಮನೆಗಳು– ಮುಂತಾದ ಎಲ್ಲ ಕಡೆ ಈ ಪುಸ್ತಕ ನೋಡಿ, ಅದರಲ್ಲಿ ತಮ್ಮ ಹೆಸರು ಮತ್ತು ನಡೆದ ಘಟನೆಗಳ ವಿವರಗಳನ್ನು ನೋಡಿ ಆ ನತದೃಷ್ಟ ಅಮಾಯಕರು ಸಂತಸಗೊಳ್ಳುತ್ತಿದ್ದರು. ಅವರ ಕಣ್ಣಂಚಲ್ಲಿ ತಮ್ಮ ಅಳಲು ನಿರರ್ಥಕವಲ್ಲವೇನೋ ಎಂಬ ಮಿಂಚು ಒಮ್ಮೊಮ್ಮೆ ಮೂಡುತ್ತಿತ್ತು. ಕ್ರೂರ ವ್ಯಂಗ್ಯವೋ ಎಂಬಂತೆ ನನಗೆ ಬೇಂದ್ರೆಯವರ “ಸಾಯೋ ಆಟ” ನಾಟಕದ ಈ ಸಾಲುಗಳು ಬೇಡಬೇಡವೆಂದರೂ ನೆನಪಾಗುತ್ತಿದ್ದವು: “ನಾಲ್ಕು ಜನ ನೋಡುವವರಿದ್ದರೆ ಅತ್ತರೂ ಚೆಂದ, ಸತ್ತರೂ ಚೆಂದ.” ಮನುಷ್ಯರು ಕಡೆಗೂ ಬದುಕಿ ಉಳಿಯುವುದು ಗೋಡೆಗಳಿಗಾದರೂ ಹೇಳಲ್ಪಡುವ ಕತೆಗಳಲ್ಲಿ. (ಹಾಗೊಂದು ಜನಪದ ಕತೆಯೂ– Tell It To The Walls: ಎ ಕೆ ರಾಮಾನುಜನ್– ಇದೆ). ಈ ಅಮಾಯಕರು ಯಾರೋ, ಜಿ ರಾಜಶೇಖರ ಯಾರೋ; ಒಂದರ್ಥದಲ್ಲಿ ಪರಸ್ಪರ ಅವರು ಅಪರಿಚಿತ ಅನಾಮಧೇಯರು. ರಾಜಶೇಖರರಂತೆ, ಅಳಿಸಿ ಹೋಗುವ ನಮ್ಮ ಹೆಜ್ಜೆ ಗುರುತಿಗೂ ಗುರುತು ಬರುವಂತೆ, ಮರೆಯಾಗುವುದು ಸುಲಭವಲ್ಲ.
ಪ್ರಭುತ್ವ ಮತ್ತು ಮಠಮಾನ್ಯಗಳ ಕೃಪೆಯಲ್ಲೂ, ಜಾಗತೀಕರಣವು ಮಂಗಳೂರಿನ ವಿಶೇಷ ಆರ್ಥಿಕ ವಲಯದ ಅವತಾರದಲ್ಲಿ ಸೃಷ್ಟಿಸುತ್ತಿರುವ ದುರಂತಗಳಲ್ಲೂ, ಇವುಗಳ ಹೆಣಿಗೆಯಾಗಿರುವ ದಿವ್ಯ ನಿರ್ಲಕ್ಷ್ಯಗಳ ಹಾಸುಹೊಕ್ಕಿನಲ್ಲೂ– ಕರಾವಳಿ ಕರ್ನಾಟಕದ ಹಿಂದೂತ್ವವಾದೀ ಅಟ್ಟಹಾಸವನ್ನು ಅದೃಶ್ಯಗೊಳಿಸಿ, ಸಾಹಿತ್ಯ-ಸಂಸ್ಕೃತಿ ಎಂಬ ಸುವರ್ಣ ಚೌಕಟ್ಟನ್ನು ಸಾಹಿತ್ಯ ಪರಿಷತ್ತು ಸಿದ್ಧಪಡಿಸುತ್ತಿರುವಾಗಲೇ, ಅದಕ್ಕೆ ಎದುರಾಗಿ ಉತ್ತರವಾಗಿ ಸವಾಲಾಗಿ ಉಡುಪಿಯಲ್ಲಿ ಸೌಹಾರ್ದ ಸಾಹಿತ್ಯ ಸಮ್ಮೇಳನ ನಡೆಯಿತು. ಅದು ಬಹಳ ಅರ್ಥಪೂರ್ಣವೂ ಆಗಿತ್ತು. ಜಿ ರಾಜಶೇಖರ ಮೆಚ್ಚಿಕೊಂಡ ನನ್ನ ಆಶಯ ಭಾಷಣ ಕೂಡಾ ಅದರ ಭಾಗವಾಗಿತ್ತು. ಮಂಗಳೂರಲ್ಲಿ ನನ್ನ ಮೇಲೆ ದೈಹಿಕ ಹಲ್ಲೆ ನಡೆದುದನ್ನು ಖಂಡಿಸಿ ಜಿ ರಾಜಶೇಖರ ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿಯ ಎದುರು ಸಾರ್ವಜನಿಕ ಭಾಷಣ ಮಾಡಿದರು. ‘ಲಂಕೇಶ್ ಪತ್ರಿಕೆ’ಗಾಗಿ ನನ್ನ ಕುರಿತು ಬರೆದರು. ಜೀವಂತ ಇರುವಾಗಲೇ ಶೃದ್ಧಾಂಜಲಿ ಲೇಖನ ಓದಿದಷ್ಟು ಸಂತೋಷವಾಯಿತು ಎಂಬ ನನ್ನ ಪ್ರತಿಕ್ರಿಯೆಗೆ ಮನಃಪುರ್ವಕವಾಗಿ ಅಪರೂಪದ ನಗೆ ನಕ್ಕರು.
ಮುಸ್ಲಿಮರು ಹಲವರು ತಾವು ಸಂಘಟಿತರಾಗಲು ಬಯಸಿ ನಡೆಸಿದ ಪ್ರಯತ್ನಗಳ ಕುರಿತು ಕೆಲವಾದರೂ ಮಾತುಗಳನ್ನು ನಾನು ಹೇಳುವುದಿದೆ. ಧರ್ಮವು ಉತ್ಸವಮೂರ್ತಿಯಾಗಿ, ಆರ್ಥಿಕತೆ ಬೇಕಾಬಿಟ್ಟಿ ಜಾಗತೀಕರಣವಾಗಿ ನಿರ್ದಯವಾಗಿ ಎದುರು ನಿಂತಿರುವ ಕಾಲ ನಮ್ಮದು. ಯಾವ ಕಡೆ ತಿರುಗಿದರೂ ಮನುಷ್ಯತ್ವದ ಪಸೆ ಕಾಣದಂತಾಗಿದೆ. ಸಂಘಪರಿವಾರದ ಅಟ್ಟಹಾಸ ಮೇರೆ ಮೀರಿದೆ. ಪ್ರಭುತ್ವವು ಹಿಂದೂತ್ವವಾದದಲ್ಲಿ ಪರೋಕ್ಷವಾಗಿಯಷ್ಟೇ ಅಲ್ಲದೇ ನೇರವಾಗಿ ಪಾಲುದಾರವಾಗಿದೆ. ಉಳಿದ ರಾಜಕೀಯ ಪಕ್ಷಗಳೂ ಜಾತ್ಯತೀತತೆ ಎಂಬುದನ್ನು ಅನುಕೂಲ ಶಾಸ್ತ್ರವನ್ನಾಗಿ ಮಾರ್ಪಡಿಸಿವೆ. ಒಂದು ಕಾಲಕ್ಕೆ ಬಹಳ ಪ್ರಭಾವಶಾಲಿಯಾಗಿದ್ದ ಎಡಪಕ್ಷಗಳ ವರ್ಚಸ್ಸು ಜಾಗತೀಕರಣದ ಬಂಡವಾಳಶಾಹಿಯ ದಾಳಿಗೆ ಪೇಲವಗೊಳ್ಳುತ್ತಿದೆ. ಕೋಮುವಾದ ಮತ್ತು ನವ ಬಂಡವಾಳಶಾಹಿಗಳ ನಾಗಾಲೋಟದ ಎದುರು, ಚಳುವಳಿಗಳು ಏದುಸಿರುಬಿಡುತ್ತಿವೆ. ನನ್ನನ್ನೇ ಉದಾಹರಣೆಯಾಗಿಟ್ಟು ಆತ್ಮಮರುಕವಿಲ್ಲದೇ ಇಷ್ಟಂತೂ ಹೇಳಬಲ್ಲೆ: ನಾನು ಉದ್ಯೋಗ ಮಾಡುತ್ತಿದ್ದ ಸಂಸ್ಥೆಗಳ ಆಡಳಿತ, ಬಹುಪಾಲು ನನ್ನ ವಿದ್ಯಾರ್ಥಿಗಳು, ಸಂಘಪರಿವಾರದ ಬೀದಿ ಪುಂಡರು ನೇತಾರರು, ಅಷ್ಟೇ ಏಕೆ ಬಸ್ಸು ರಿಕ್ಷಾ ಅಂಗಡಿ ಹೊಟೇಲು ನೆರೆಹೊರೆಯವರು ನನ್ನನ್ನು ಕಂಡದ್ದು ಒಬ್ಬ ಕ್ರಿಮಿನಲ್ ಮತ್ತು ಜನ ಶತ್ರು ಎಂಬಂತೆ. ಅವು ಅಸುರಕ್ಷಿತತೆಯ ಬೇತಾಳ ಹೆಗಲೇರಿದ ದಿನರಾತ್ರಿಗಳು. ಸವಲತ್ತುಗಳ ನಡುವೆಯೂ ನನ್ನ ಪರಿಸ್ಥಿತಿಯೇ ಹೀಗನ್ನಿಸಿದರೆ, ಉಳಿದವರ ಪಾಡು ಕರುಣಾಜನಕ. ಕರ್ನಾಟಕ ಫೋರಮ್ ಫಾರ್ ಡಿಗ್ನಿಟಿ ಹುಟ್ಟಿದ್ದು ಈ ಸಂಧಿಕಾಲದಲ್ಲಿ. ಆ ಆರಂಭದ ದಿನಗಳಿಂದಲೂ ನಾನು ಮತ್ತು ಜಿ ರಾಜಶೇಖರ ಹೆಚ್ಚೂಕಡಿಮೆ ಅವರ ಎಲ್ಲ ಕಾರ್ಯಕ್ರಮಗಳಲ್ಲೂ ಭಾಷಣಕಾರರು ಮತ್ತು ಬೆಂಬಲಿಗರು. ಕೋಮುಸೌಹಾರ್ದ ವೇದಿಕೆಯಲ್ಲಿ ಎಡೆಬಿಡದೇ ಸಕ್ರಿಯರಾಗಿದ್ದುಕೊಂಡೇ ಕೆ ಎಫ್ ಡಿ/ಪಿ ಎಫ್ ಐಗೆ ನಾವು ಜೊತೆಯಾದವರು. ನಮ್ಮದೇ ಸ್ನೇಹಿತರು ನಮ್ಮನ್ನು ಮುಸ್ಲಿಮ್ ಸಂಘಟನೆಗಳಿಂದ ಹೊರಗೆಳೆಯಲು ಮಾಡಿದ ಪ್ರಯತ್ನಗಳ ದೊಡ್ಡ ಕತೆಯೇ ಇದೆ. ಅದೇನೇ ಇದ್ದರೂ, ನನ್ನ ಮತ್ತು ರಾಜಶೇಖರರ ನಿಲುವು ಆಗಲೂ ಈಗಲೂ ಬದಲಾಗದೇ ಉಳಿಯಿತು.
ಕಾರಣ ಇಷ್ಟೇ. ನನ್ನ ವಾದ ಸರಳವಾದದ್ದು, ಆದರೆ ದೃಢವಾದದ್ದು. ಭೋಳೆ ಎನ್ನುವವರ ಬಾಯಿ ಮುಚ್ಚಿಸುವ ದರ್ದು ಅದಕ್ಕಿಲ್ಲ: (೧) ಉದಾರವಾದೀ ಪ್ರಜಾತಂತ್ರ ವ್ಯವಸ್ಥೆಯಲ್ಲಿ, ಎಲ್ಲ ವ್ಯಕ್ತಿಗಳೂ ವ್ಯಕ್ತಿಗಳಾಗಿ ಕೇವಲ ಒಂದು ವೋಟು ಮಾತ್ರ; ಅವರು ಸಂಘಟಿತ ಸ್ವರವಾಗದಿದ್ದರೆ ಅವರನ್ನು ಕೇಳುವವರಿಲ್ಲ. ಕೇಳಿದರೂ, ಕೇಳುವವರು ತೋರಿಸುವ ಕೃಪೆ-ಔದಾರ್ಯ ಬಹಳ ಉಪಯುಕ್ತವೂ ಅಲ್ಲ, ಬಾಳಿಕೆ ಬರುವಂಥದ್ದೂ ಅಲ್ಲ, ಪಡೆಯುವವರ ಘನತೆಗೆ ಹೊಂದುವಂಥದ್ದೂ ಅಲ್ಲ. ಹಾಗಾಗಿ, ಸಂಘಟಿತರಾದರೆ ಉಂಟಾಗಬಹುದಾದ ವಿಕಾರಗಳು ಮತ್ತು ಅಪಾಯಗಳನ್ನು ವಾದಗಳನ್ನಾಗಿ ಸದಾ ಕಾಲ ಚಾಲ್ತಿಯಲ್ಲಿಡಲು ಅವಕಾಶಗಳೂ ಇಲ್ಲ. (೨) ಎರಡನೆಯ ಆರೋಪ ಹೆಚ್ಚು ತೀಕ್ಷ್ಣವಾದದ್ದು, ಕಟುವಾದದ್ದು: ಇದು ಕೇವಲ ಮುಸ್ಲಿಮರ ಸಂಘಟನೆ; ಇದು ಸಂಘಪರಿವಾರದ್ದೇ ಪಡಿಯಚ್ಚು; ಇವರೂ ಕೋಮುವಾದಿಗಳು; ಇವರೂ ಹಲ್ಲೆ ದೊಂಬಿ ದಾದಾಗಿರಿ ನಡೆಸುತ್ತಾರೆ; ಮುಸ್ಲಿಮ್ ಹೆಣ್ಣುಮಕ್ಕಳನ್ನು ಸಂಘಟನೆಯಲ್ಲಿ ಸೇರಿಸಿಕೊಳ್ಳುವುದಿಲ್ಲ, ಅವರು ಸಮಾನತೆಯ ಹಕ್ಕುಗಳನ್ನು ಮಾನ್ಯಮಾಡುವುದಿಲ್ಲ, ಮುಂತಾಗಿ.
ಈ ವಿವರಗಳು ನನಗೆ ಅಷ್ಟು ಮುಖ್ಯವೆಂದು ಅನ್ನಿಸುವುದಿಲ್ಲ. ಅವರ ಘೋಷಿತ ನಿಲುವುಗಳೇನು ಎಂಬುದಷ್ಟೇ ನನಗೆ ಮುಖ್ಯವಾದುದು. ಏಕೆಂದರೆ, ತಪ್ಪುಗಳು ಸಂಭವಿಸಿದ ಸಂದರ್ಭಗಳಲ್ಲಿ ಅದೇ ಘೋಷಿತ ನಿಲುವುಗಳ ಮೂಲಕ ಅವರ ಜೊತೆ ವಾಗ್ವಾದ-ಸಂವಾದ ನಡೆಸಬಹುದಾದ ಬಾಗಿಲು ತೆರೆದೇ ಇದೆ. ಇದನ್ನು ಸಂಘಪರಿವಾರದ ವಿಷಯದಲ್ಲಿ ಹೇಳುವಂತಿಲ್ಲ. ಸಾವರ್ಕರ್, ಗೋಳ್ವಲ್ಕರ್ ಅಥವಾ ಇನ್ನಾವುದೇ ಸಂಘಪರಿವಾರದ ಮುಖವಾಣಿಗಳಾದ ಜನರನ್ನು ಹಾಗೂ ಅವರ ಘೋಷಿತ ನಿಲುವುಗಳನ್ನು ಯಾವ ನಾಗರಿಕ ಸಮಾಜವೂ ಸಮರ್ಥಿಸುವುದು ಸಾಧ್ಯವಿಲ್ಲ. ಅಲ್ಲದೇ, ಬಹುಸಂಖ್ಯಾತ ಕೋಮುವಾದವನ್ನು ಮಾಮೂಲು ತಕ್ಕಡಿಯಲ್ಲಿ ತೂಗುವುದು ಸರ್ವಥಾ ಸಾಧುವಲ್ಲ. ಇದು ನನ್ನ ಖಡಾಖಂಡಿತವಾದ ಲಾಗಾಯ್ತಿನ ನಿಲುವು. ನನಗೆ ತಿಳಿದಮಟ್ಟಿಗೆ ರಾಜಶೇಖರರ ನಿಲುವು ಕೂಡಾ ಇದೇ ಸ್ವರೂಪದ್ದು. ಹಾಗಲ್ಲದೇ, ಮುಸ್ಲಿಮರು ರಾಜಶೇಖರರನ್ನು ತಮ್ಮ ಆಪತ್ಬಾಂಧವ ಎಂದು ತಿಳಿಯಲು ವಿಶೇಷ ಕಾರಣಗಳಿಲ್ಲ.
ರಾಜಶೇಖರರು ಪಡೆಯಬಹುದಾಗಿದ್ದ ಪ್ರಶಸ್ತಿಗಳು ಸನ್ಮಾನಗಳು ಹಲವು. ಕಿರುಚು ಕಂಠದ ಕುಲಗೆಟ್ಟ ಮುಂಚೂಣಿ ಜನರು ಅದನ್ನು ತಡೆದರು. ಅದರಿಂದ ರಾಜಶೇಖರರಿಗೇನೂ ನಷ್ಟವಾಗಲಿಲ್ಲ. ಅಂಥ ಹಲವು ಪ್ರಶಸ್ತಿ ಸನ್ಮಾನಗಳು ಕೂಡಾ ಅವರು ಎದುರಾಳಿಯಾಗಿ ನಿಂತು ಹೋರಾಡಿದ ರಿವಾಜುಗಳ ಕೂಸುಗಳೇ ಆಗಿರುವುದರಿಂದ, ಅಪ್ಪಿ ತಪ್ಪಿ ಅಂಥದ್ದೊಂದು ಪ್ರಶಸ್ತಿ ಬಂದಾಗಲೂ ಅವರು ಅದನ್ನು ನಿರಾಕರಿಸಿದರು. ಆದರೆ ಉಡುಪಿಯಲ್ಲಿ ಮುಸ್ಲಿಮ್ ಸಂಘಟನೆಗಳವರು, ಮಂಗಳೂರಲ್ಲಿ ‘ಪ್ರಸ್ತುತ ಬಳಗ’ದವರು ಕೊಟ್ಟ ಪ್ರಶಸ್ತಿ-ಸನ್ಮಾನಗಳನ್ನು ತನ್ನ ಹೋರಾಟಗಳ ಮುಂದುವರಿಕೆಯಾಗಿಯೇ ಅವರು ಸಂತೋಷದಿಂದ ಸ್ವೀಕರಿಸಿದರು. ಪ್ರಶಸ್ತಿಯನ್ನು ಸ್ವೀಕರಿಸುವುದೂ ಪ್ರಶಸ್ತಿಯನ್ನು ನಿರಾಕರಿಸುವಷ್ಟೇ ಅರ್ಥಪೂರ್ಣವಾದುದು ಎಂಬುದನ್ನು, ಪ್ರಶಸ್ತಿ ಸ್ವೀಕರಿಸುವಾಗ ಅವರು ಆಡಿದ ಮಾತುಗಳು ಕೂಡಾ ಸ್ಪಷ್ಟಪಡಿಸಿವೆ. ಈ ನಿಸ್ಪೃಹತೆ ವಿರಳಾತಿವಿರಳವಾದುದು. ನಿಜವಾಗಿಯೂ ದೊಡ್ಡವರಾಗಿರುವ ನಮ್ಮ ನಡುವಿನ ಹಲವು ಹಿರಿಯರಲ್ಲಿ ಕೂಡಾ ಈ ಗುಣ ದುರ್ಲಭವಾದುದು. ಈ ವಿಷಯದಲ್ಲಿ ದಾಕ್ಷಿಣ್ಯಕ್ಕೆ ಬಸುರಾಗದೇ ಉಳಿದವರ ಸಂಖ್ಯೆ ಬಹಳ ಕಡಿಮೆ.
ಆದರೆ, ಅದಕ್ಕಿಂತ ಮುಖ್ಯವಾದ ವಿಶೇಷವೊಂದಿದೆ. ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಲು ನಾನು ಆರಂಭಿಸಿದ್ದು, ಮುಖ್ಯವಾಗಿ ನೃತ್ಯ, ಸಂಗೀತ ಮುಂತಾದ ಶಾಸ್ತ್ರೀಯ ಕಲೆಗಳ ಅತ್ಯುತ್ತಮ ವಕ್ತಾರರ ಮುಖಾಂತರ. ಆದರೆ ಅದು ಕೇವಲ “ಕಲೆಗಾಗಿ ಕಲೆ” ಎಂಬಂತಾಗುವ ಅಪಾಯಗಳನ್ನು ತಪ್ಪಿಸುವ ಕಷ್ಟಗಳೇನು ಎಂಬುದು ಅನುಭವದಿಂದ ನನ್ನ ತಿಳುವಳಿಕೆಗೆ ಬಂದಿದೆ. ಆದರೆ ನಾನು ಭಾಗವಹಿಸುವ ಸಾರ್ವಜನಿಕ ಹೋರಾಟ ಪ್ರತಿಭಟನೆ ಮುಂತಾದವು ಢಾಳಾಗಿ ರಾಜಕೀಯ ನಿಲುವುಗಳನ್ನು ಹೊಂದಿರುವಂಥವು. ಇಲ್ಲಿನ ಕೊರತೆಯೆಂದರೆ ಕಲೆಯ ನಯ ನವಿರು ನಾಜೂಕು ಸೂಕ್ಷ್ಮಗಳ ಗೈರುಹಾಜರಿ. ಸೂಕ್ಷ್ಮಗಳಿಗೆ ಒಡ್ಡಿಕೊಳ್ಳದೇ, ಎದುರಾಳಿಯ ಸಂಕಟ-ತಲ್ಲಣಗಳನ್ನು ಗ್ರಹಿಸದೇ, ಅದದೇ ಜನರೆದುರು ಅದದೇ ಮಾತುಗಳನ್ನಾಡುತ್ತ, ಘೋಷಣೆಗಳ ಬುರುಗು ಗೀಳಿನಲ್ಲಿ ಕರಗುತ್ತ ಹೋಗುವ ಅಪಾಯದಿಂದ ತಪ್ಪಿಸಿಕೊಂಡು ಸ್ತಿಮಿತದಲ್ಲಿ ಉಳಿಯುವುದು ಇಂಥಲ್ಲಿ ಕಡುಕಷ್ಟ. ರಾಜಶೇಖರರು ಈ ಇರುಸುಮುರುಸನ್ನು ಮೇಲಿಂದ ಮೇಲೆ ಅನುಭವಿಸಿದ್ದಾರೆ ಎಂದೇ ನನ್ನ ಭಾವನೆ. ಹೀಗಿದ್ದೂ ಗೊಡ್ಡಾಗದೇ ಉಳಿದದ್ದು ಅವರ ಇನ್ನೊಂದೇ ಅಂತರಂಗದ ಹೋರಾಟವಿದ್ದೀತು. ಏಕೆಂದರೆ, ನಿಜಕ್ಕಾದರೆ ದಿನನಿತ್ಯದ ಏಕತಾನದ ಬುರ್ನಾಸು ಸಾಮಾನ್ಯತೆಯಲ್ಲಿ ಕರಗಿಹೋಗದ ಸೂಕ್ಷ್ಮವೇ ಅವರ ಅಡಿಪಾಯ– langue. ದೈನಿಕದ ರಾಜಕೀಯ ಹೋರಾಟ ಮತ್ತು ನಿಲುವುಗಳಾಗಿ ಬೀದಿಗಳಲ್ಲಿ ಅವರು ನಮಗೆ ಕಾಣಿಸಿದ್ದು ಆ ಅಭಿಜಾತ ಅಭಿರುಚಿಯ ಒಂದು ಝಲಕ್– parole. ವಿಪರ್ಯಾಸವೆಂದರೆ, ಜಾರ್ಜ್ ಲುಕಾಕ್ಸ್ ಹೇಳುವಂತೆ, ಉಪಯುಕ್ತವಾದ ಒಂದು ಸರ್ವಸಾಮಾನ್ಯ ಮೇಜನ್ನು ತಯಾರಿಸುವುದಕ್ಕೂ, ನಮ್ಮ ಈ ದುಷ್ಕಾಲದಲ್ಲಿ, ಮೈಖೆಲ್ ಏಂಜೆಲೋನ ಪ್ರತಿಭೆಯೇ ಬೇಕು.
ಸಾಮಾನ್ಯರ ನಡುವೆ ಸಾಮಾನ್ಯರಾಗಿ ಇರುವುದೂ ಒಂದು ಅಸಾಮಾನ್ಯ ಸಾಧನೆ. ನನಗೆ ತಿಳಿದಮಟ್ಟಿಗೆ ರಾಜಶೇಖರರ ಜೀವನಪೂರ್ತಿಯ ಪ್ರಜ್ಞಾಪೂರ್ವಕ ಹುಡುಕಾಟವಿದ್ದುದು ಸಾಮಾನ್ಯ ಜೀವನದ ಸಹಜ ಅಸಾಮಾನ್ಯತೆಯಲ್ಲಿ. ಅನಾಮಧೇಯನಾಗಿ ಉಳಿಯಬೇಕೆಂಬ ಹಠದಲ್ಲಿ.
1992ರ ಡಿಸೆಂಬರ್ ಕೊನೆಯ ಭಾಗದ ಒಂದು ಭಾನುವಾರ. ‘ಸಾಪ್ತಾಹಿಕ ಪ್ರಭ’ದಲ್ಲಿ “ಅಕ್ಕರೆಯ ರಾಮಲಾಲನಿಗೆ ಅಕಾಲ ಮುಪ್ಪು” ಎಂಬ ನನ್ನ ಲೇಖನ ಪ್ರಕಟವಾಗಿತ್ತು. ಮಹಾತ್ಮಾ ಗಾಂಧಿ, ಮಾರ್ಟಿನ್ ಹೈಡೆಗರ್, ಸಾದತ್ ಹಸನ್ ಮಾಂಟೋ ಮತ್ತು ರಾಮಕೃಷ್ಣ ಪರಮಹಂಸರ ವಿಚಾರಗಳಿಗೆ ನಾನು ಮರುಳಾಗಿದ್ದ ಕಾಲ. ಧ್ವಂಸಗೊಂಡ ಬಾಬರೀ ಮಸೀದಿಯ ಕಲ್ಲು ಇಟ್ಟಿಗೆಗಳ ಸಂದಿಯಲ್ಲಿ ಅನಾಥವಾಗಿ ಬಿದ್ದಿದ್ದ ಅಯೋಧ್ಯೆಯ ರಾಮಲಲ್ಲಾನ ಚಿತ್ರವೊಂದನ್ನು ‘ಫ್ರಂಟ್ ಲೈನ್’ ಪತ್ರಿಕೆಯಲ್ಲಿ ಕಂಡಿದ್ದೆ. ರಾಮಕೃಷ್ಣ ಪರಮಹಂಸರ ರಾಮ, ರಾಮಲಾಲ, ಮುದ್ದಿನ ಹಸುಗೂಸು. ಬಿಲ್ಲುಬಾಣ ಹೆದೆಯೇರಿಸಿ, ಇಲ್ಲದ ಶತ್ರುವನ್ನು ನಿರ್ನಾಮ ಮಾಡಬೇಕೆನ್ನುವ ವ್ಯಗ್ರ ಉಮೇದಿನ ಸೆಟೆದು ನಿಂತ ರಾಮನಲ್ಲ. ಹಾಗೆಂದು ಬರೆದಿದ್ದೆ. ಎರಡೇ ದಿನದಲ್ಲಿ ರಾಜಶೇಖರರಿಂದ ಮೆಚ್ಚುಗೆಯ ಪತ್ರ ಹಾಗೂ ಇಂಗ್ಲಿಷ್ ಲೇಖನವೊಂದರ ಛಾಯಾಪ್ರತಿ ಅಂಚೆಯಲ್ಲಿ ಬಂತು. ಇಂಗ್ಲಿಷ್ ಲೇಖನದ ಛಾಯಾಪ್ರತಿ ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯಲ್ಲಿ ಮರುದಿನ ಮಹಾತ್ಮಾ ಗಾಂಧಿಯವರ ಮೊಮ್ಮಗ ರಾಮಚಂದ್ರ ಗಾಂಧಿ ಬರೆದದ್ದು. ರಾಮಕೃಷ್ಣ ಪರಮಹಂಸರ ರಾಮಲಲ್ಲಾನ ಸುತ್ತ ನಾನು ಬರೆದಿದ್ದ ಅದದೇ ವಿವರಗಳು ಅದರಲ್ಲಿದ್ದವು. ರಾಜಶೇಖರರು ತಮ್ಮ ಪತ್ರದಲ್ಲಿ, “ಇಲ್ಲಿ ನೋಡಿ, ನಿಮ್ಮ ಲೇಖನ ಒಂದು ದಿನ ತಡವಾಗಿ ಪ್ರಿಂಟಾಗಿದ್ದರೆ ನೀವು ರಾಮಚಂದ್ರ ಗಾಂಧಿಯವರ ಲೇಖನವನ್ನು ನಕಲು ಮಾಡಿದ್ದೀರಿ ಎಂಬ ಅಪವಾದವನ್ನು ಹೊರಬೇಕಾಗುತ್ತಿತ್ತು.”
ಮಾರ್ಟಿನ್ ಹೈಡೆಗರ್ ಹೇಳುವಂತೆ, “One is ready to die as soon as one is born.” ಸಾವೆಂಬುದು ಹುಟ್ಟಿನೊಂದಿಗೇ ಅಂಟಿಬರುವ ಮಾರಣಾಂತಿಕ ಶಾಪ ಎಂಬುದನ್ನು ತಿಳಿಯದವರು ಯಾರು? ತಿಳಿದು ನಡೆದವರು ಯಾರು? ಈ ಜೀವಜಗತ್ತು ಆಸೆಗಳ ಸ್ವರ್ಗವನ್ನೇ ನಮ್ಮೆದುರು ಹರಡಿದೆ. ಆದರೆ ಸಾವು ಎಲ್ಲ ಸಂಭ್ರಮಗಳನ್ನೂ ಕಸಿಯಲು ಅಲ್ಲೇ ಹೊಂಚಿ ಕೂತಿದೆ. ನಮ್ಮ ಅದಮ್ಯ ಆಸೆಗಳನ್ನು ನಿಷ್ಕರುಣ ಅಸಡ್ಡೆಯಿಂದ ತಿರಸ್ಕರಿಸುತ್ತದೆ ಎಂದಾದರೆ ಈ ಬದುಕಿಗೆ ಏನು ಅರ್ಥ? ಸಾವಿನಿಂದ ಶಪಿತವಾದ ಜೀವ ಸ್ವಹತ್ಯೆ ಮಾಡಿಕೊಳ್ಳದೇ ಬದುಕಿರಬೇಕಾದದ್ದಾದರೂ ಯಾಕೆ ಎಂಬುದೇ ಮೂಲಭೂತ ಪ್ರಶ್ನೆ ಎಂದು ಕಮೂ ಹೇಳುತ್ತಾನೆ. ಗುಡ್ಡದ ಬುಡದಿಂದ ಹಲ್ಲುಕಚ್ಚಿ ಪ್ರಯಾಸಪಟ್ಟು ಬಂಡೆಯೊಂದನ್ನು ದೂಡಿ ತುದಿ ಮುಟ್ಟಿಸಿ ಅದು ಉರುಳಿಬೀಳುವುದನ್ನು ಅಸಹಾಯಕತೆಯಲ್ಲಿ ನೋಡುವ, ಪುನರಪಿ ಬಂಡೆಯನ್ನು ಮೇಲಕ್ಕೆ ತಳ್ಳುವ ಸಿಸಿಫಸ್ ಪುರಾಣವೇ ಕಮೂವಿನ ಪ್ರಕಾರ ನಮ್ಮ ಜೀವನ. ಆದರೆ ಸಿಸಿಫಸ್-ಕಮೂ ಸಿನಿಕರಂತೆ ಕೈಚೆಲ್ಲುವುದಿಲ್ಲ. ಬಂಡೆಯನ್ನು ಮೇಲಕ್ಕೆ ದೂಡುವ ಅವಿರತ ಪ್ರಯಾಸ ಹಾಗೂ ಬಂಡೆ ಉರುಳಿ ಕೆಳಕ್ಕೆ ಬೀಳುವುದನ್ನು ನೋಡುತ್ತ ನಿಂತ ಅಸಹಾಯಕ ಸಾಕ್ಷಿತ್ವದ ನಡುವೆ ಸಂದು ಕಡಿಯುವ ಬೆಳ್ಳಿಯ ಗೆರೆಯೊಂದಿದೆ. ಇನ್ನೊಮ್ಮೆ ಬಂಡೆಯನ್ನು ಮೇಲಕ್ಕೆ ದೂಡಲು ಕೆಳಗಿಳಿಯುವ ಕ್ಷಿಪ್ರ ಬಿಡುವೊಂದಿದೆ. ಅದು ನಿರಾಳ ಕಾಲ. ಅದು ಶಾಪದಿಂದ ಕಸಿದ ನಮ್ಮದೇ ಪಾಲು. ಬಂಡೆಯ ನೂಕಾಟದ ನಡುವೆ ಅರ್ಥ ಹೀಗೆ ಹಠಾತ್ತನೆ ಜಿನುಗುವುದು. ಹಾಗಲ್ಲದೇ, ಪರರ ನೋವು ಸಂಕಟ ಸಾವುಗಳ ಸತತ ಧ್ಯಾನ ರಾಜಶೇಖರರಿಗೆ ಒದಗಲು ಸಾಧ್ಯವಿತ್ತೇ?
(ಎಚ್ ಪಟ್ಟಾಭಿರಾಮ ಸೋಮಯಾಜಿ
104ಸಿ, 4ನೇ ಅಡ್ಡರಸ್ತೆ, ಗಿರಿನಗರ
ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್
ದೇರೇಬೈಲ್ ಕೊಂಚಾಡಿ
ಮಂಗಳೂರು, 575008
ಫೋನ್:9448325705
ಇಮೆಯ್ಲ್:somayajihp@gmail.com)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days ago
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ
-
ದಿನದ ಸುದ್ದಿ3 days ago
ಉಚಿತ ಲ್ಯಾಪ್‍ಟಾಪ್ ಪಡೆಯಲು ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ : ಪೊಲೀಸ್ ಕಮೀಷನರ್ ದಯಾನಂದ್
-
ದಿನದ ಸುದ್ದಿ4 days ago
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ