Connect with us

ನೆಲದನಿ

ಜೀವಸೆಲೆಯ ಕವಿ ಶರೀಫ್ ಹಸಮಕಲ್ ಅವರ ‘ಚಿಲ್ಲರೆಗೆ ಕದಲದ ಜಾಗ’

Published

on

ಹೊಸ ತಲೆಮಾರಿನ ತರುಣ ಬರಹಗಾರರಲ್ಲಿ ಶರೀಫ್ ಹಸಮಕಲ್ ಅವರು ಒಬ್ಬರಾಗಿದ್ದಾರೆ. ತನ್ನ ಮಣ್ಣಿನ ಸೊಗಡಿನೊಂದಿಗೆ ವರ್ತಮಾನದ ತಲ್ಲಣಗಳನ್ನು ತನ್ನ ಕಾವ್ಯಗಳಲ್ಲಿ ವ್ಯಕ್ತಪಡಿಸುತ್ತ ಬಂದಿರುವ ಗೆಳೆಯ ಶರೀಫ್ ಅವರ ಮೊದಲ ಕವನ ಸಂಕಲನ ‘ಚಿಲ್ಲರೆಗೆ ಕದಲದ ಜಾಗ’ವು ಸಮಕಾಲೀನ ಸಮಾಜಿಕ ಬದುಕನ್ನು ಪ್ರತಿಬಿಂಬಿಸುತ್ತದೆ. ಇಲ್ಲಿ ನೆಲಮೂಲ ಬದುಕಿನ ಜೀವಪರವಾದ ಕಾಳಜಿ ಸದಾ ಕ್ರಿಯಾಶೀಲವಾಗಿದೆ. ಸದಾ ಜೀವಪರವಾಗಿ ತುಡಿಯುವ ಈ ಕಾವ್ಯಗುಚ್ಚವು ತರುಣ ಬರಹಗಾರರು, ಯುವಕವಿಗಳ ಸಂವೇದನೆಗಳನ್ನು ಅನಾವರಣಗೊಳಿಸುವ ಕೃತಿಯಾಗಿದೆ. ಯಾವುದೇ ಸಾಹಿತ್ಯವಾಗಲಿ, ಸಾಹಿತಿಯಾಗಲಿ ಸಾರ್ವತ್ರಿಕವಾಗಿ ಜನ ಮನ್ನಣೆಯನ್ನು ಗಳಿಸುವುದಕ್ಕಾಗಲಿ ಅಥವಾ ಎಲ್ಲ ವರ್ಗದ ಜನರ ಮನಸ್ಸಿನಲ್ಲಿ ನೆಲೆಯೂರಬೇಕಾದರೆ ಅದು ಭೂತ, ವರ್ತಮಾನ, ಭವಿಷ್ಯತ್ತನ್ನು ಬೆಸೆಯುವ ಗುಣವನ್ನು ಹೊಂದಿರಬೇಕಾಗುತ್ತದೆ.

ಹಾಗೆಯೇ ಸಾಹಿತಿಯು ಜಾತಿ, ಮತವನ್ನು ಮೀರಿ ಮಾನವೀಯ ನೆಲೆಗಳನ್ನು ಬಿತ್ತರಿಸಿದಾಗ ಮಾತ್ರ ಅಂತಹ ಬರಹಗಳು ಹೆಚ್ಚು ಹೆಚ್ಚು ಜೀವಂತಿಕೆಯನ್ನು ಪಡೆದುಕೊಳ್ಳುತ್ತವೆ. ಇಂತಹ ಬರಹಗಳು ಸಹೃದಯನ ಸಂವೇದನೆಗಳನ್ನು ಬಡಿದೆಬ್ಬಿಸುತ್ತವೆ. ಈ ಕಾರಣದಿಂದಾಗಿ ಇಂದಿಗೂ ನಮ್ಮ ಜಾನಪದ ಸಾಹಿತ್ಯ, ಶರಣರ ವಚನ ಹಾಗೂ ತತ್ವಪದಗಳು ಜನಮಾನಸದಲ್ಲಿ ಜೀವಂತವಾಗಿ ನೆಲೆಯೂರಿವೆ. ಈ ಮಾತಿನ ಹಿಂದಿನ ಅರ್ಥವಿಷ್ಟೇ, ಯುವ ಕವಿಯಾಗಿರುವ ಶರೀಫ್ ಅವರ ಕಾವ್ಯಗಳಲ್ಲಿ ಈ ಅಂಶಗಳು ಕೆಲವೊಂದು ಕಡೆ ಸ್ಪಷ್ಟವಾಗಿ ಗೋಚರವಾಗುತ್ತವೆ.

ಅಸಮಾನತೆ, ಅನ್ಯಾಯ, ಶೋಷಣೆ ಹಾಗೂ ಡಂಬಾಚಾರಗಳನ್ನು ಬೆರಳು ಮಾಡಿ ತೋರುವ ಕವಿ, ಜೀವ ಜಗತ್ತಿಗೆ ಕಾರುಣ್ಯದ ಅಗತ್ಯತೆಯನ್ನು ಮಾನವೀಯ ನೆಲೆಯಲ್ಲಿ ಕಟ್ಟಿಕೊಡುತ್ತಾರೆ. ಈ ಕಾರಣದಿಂದಾಗಿ ಬರಡಾಗುತ್ತಿರುವ ಮತ್ತು ಸತ್ವಹೀನವಾಗುತ್ತಿರುವ ಕನ್ನಡ ಸಾಹಿತ್ಯ ವಲಯದಲ್ಲಿ ಇಂತಹ ಮೌಲ್ಯಯುತವಾದ ಸಾಹಿತ್ಯದ ಚಿಗುರು ಕನ್ನಡ ಸಾಹಿತ್ಯವನ್ನು ಆಧುನಿಕ ಯುಗದಲ್ಲಿಯೂ ಸಿಂಗಾರಗೊಳಿಸುವುದೆಂಬ ಆಶಯವು ಒಂದು ಕಡೆಯಲ್ಲಿ ಒಡಮೂಡುತ್ತದೆ.

ಸಾಹಿತ್ಯ ಎಂದರೆ ವರ್ಣಿಸಿಯೇ ಬರೆಯಬೇಕೆಂಬ ಮಾನದಂಡಗಳು ಒಂದು ಕಾಲದಲ್ಲಿ ರೂಪಿಸಿಕೊಂಡ ಚೌಕಟ್ಟಾಗಿತ್ತು. ಆದರೆ ಇಂದು ಅದರ ಸ್ವರೂಪ ಬದಲಾಗಿದೆ. ನಮ್ಮ ಬದುಕಿನ ಜೀವನ ಕ್ರಮವನ್ನು ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಅರಿಯುವ ಮಾನದಂಡವಾಗಿಯೂ ನಮ್ಮ ಸಾಹಿತ್ಯ ಪರಂಪರೆಯು ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ ಗಮನಿಸುವುದಾದರೆ, ಗೆಳೆಯನ ಕಾವ್ಯಶಕ್ತಿ ವರ್ತಮಾನದ ಬದುಕಿನ ವಿವಿಧ ನೆಲೆಗಳನ್ನು ಅನಾವರಣಗೊಳಿಸುತ್ತಿರುವ ಸ್ವರೂಪವನ್ನು ಅವರ ಕಾವ್ಯಗಳಲ್ಲಿ ಗುರುತಿಸಬಹುದಾಗಿದೆ.

ಸಮಾಜದಲ್ಲಿನ ಅಸಮಾನ ನೆಲೆಗಳನ್ನು ಮೆಟ್ಟಿನಿಂತು, ಸಮಸಮಾಜವನ್ನು ಬಯಸುವ ಮತ್ತು ಕಟ್ಟುವ ಆಶಯವೊಂದು ಇವರ ಕಾವ್ಯಗಳಲ್ಲಿ ಕಂಡುಬರುತ್ತದೆ. ಈ ಸಮಸಮಾಜದ ಆಶಯಗಳನ್ನು ಬಯಸುತ್ತಿರುವ ಕವಿಯು ತನ್ನ ದರ್ಶನದ ಮೂಲಕವಾಗಿ ಮತ್ತೇ ಬುದ್ಧನತ್ತ ಮುಖ ಮಾಡುತ್ತಾರೆ. ‘ಮತ್ತೊಮ್ಮೆ ಬುದ್ಧ ತಪಸ್ಸಿಗೆ’ ಎಂಬ ಕವಿತೆಯಲ್ಲಿ ಮೂಲಭೂತವಾದಿಗಳ ಕುತಂತ್ರಕ್ಕೆ ಬಲಿಯಾದ ಬುದ್ಧನ ಸಂಕಷ್ಟವನ್ನು ಅರಿತು, ಮತ್ತೊಮ್ಮೆ ಬುದ್ಧ ಜನ್ಮವೆತ್ತಿ ಬಂದು ತಾನು ನೀಡಿದ ದರ್ಶನವನ್ನು ಹುಡುಕಿಕೊಳ್ಳಬೇಕಾದ ಅನಿವಾರ್ಯತೆ

ಇಂದಿಗೆ ಇದೆ ಎಂದು ಸಾರುವ ಕವಿ,
ಇಳಿಸಂಜೆಯಲಿ ಬುದ್ಧನ ಬೆಳಕ ಕಂಡು
ದಂಡಿಗೆ ಬಂದು ಬಡಿದು ಕೂಗಿತು
ಬೆಳಕಿಗೆ ಬೀಗ ಬಿದ್ದಿದೆ ಎಂದು…

ಬುದ್ಧ ಈ ಜಗತ್ತಿಗೆ ನೀಡಿದ ಬೆಳಕಿಗೆ ಬೀಗ ಬಿದ್ದಿದೆ ಎಂಬುದನ್ನು ಪ್ರತಿಮಾತ್ಮಕವಾಗಿ ವಿಂಡಂಬನೆಗೆ ಒಳಪಡಿಸುತ್ತಾರೆ. ಇಲ್ಲಿ ಕವಿಯನ್ನು ಕಾಡುವ ಬಹುಮುಖ್ಯವಾದ ಪ್ರಶ್ನೆಯೆಂದರೆ, ಬಾಬಾಸಾಹೇಬರು ಬುದ್ಧನ ಮಾರ್ಗದಲ್ಲಿ ಮುಂದುವರೆದು, ಶತಮಾನಗಳಿಂದ ಶೋಷಣೆಗೆ ಗುರಿಯಾಗಿರುವ ದಮನಿತರ ಬದುಕಿಗಾಗಿ ಬೆಳಕೊಂದನ್ನು ನೀಡಿದರು. ಆ ಮೂಲಕವಾಗಿ ಬುದ್ಧನನ್ನು ಪರಿಚಯಿಸಿದರು. ಆದರೆ ಅದೇ ಬುದ್ಧನನ್ನು ಕೇಂದ್ರವಾಗಿಟ್ಟುಕೊಂಡು ಹಲವಾರು ಮೂಲಭೂತವಾದಿ ಶಕ್ತಿಗಳು ಸಮಾಜದಲ್ಲಿ ಅಸಮಾನತೆಯ ಬೀಜವನ್ನು ಬಿತ್ತುತ್ತಿರುವ ಕುರಿತು ಇಲ್ಲಿ ಆತಂಕವಿದೆ. ಈ ಆತಂಕದ ಬಿಡುಗಡೆಗೆ ಪರಿಹಾರವಾಗಿ ಮತ್ತೇ ಬುದ್ಧ ಜನ್ಮವೆತ್ತಬೇಕಾದ ಅನಿವಾರ್ಯತೆಯನ್ನು ಕವಿ ತನ್ನ ಕಾವ್ಯದ ಮೂಲಕ ಪ್ರತಿಪಾದಿಸುತ್ತಾರೆ. ಹಾಗೆಯೇ,

ಬುದ್ಧ ಕುಂತ ಜಾಗಕ್ಕೆ ನೀರು ಚಿಮುಕಿಸಿ
ಬೋರ್ಡೊಂದ ನೇತಾಕಿದೆ
ಮಾತು, ಮನಸು ಮಾರಾಟಕ್ಕಿವೆ ಎಂದು

ಇಂದು ಬುದ್ಧ ಹಾಗೂ ಆತನ ವಿಚಾರಧಾರೆಗಳು ಕಾರ್ಪೋರೇಟ್ ಶಕ್ತಿಗಳಿಗೆ ಆದಾಯದ ಮೂಲವಾಗಿದೆ. ಬುದ್ಧನನ್ನೇ ಅಸ್ತ್ರವಾಗಿ ಬಳಸಿಕೊಂಡು ನವ ಪುರೋಹಿತಶಾಹಿ ವರ್ಗವೊಂದು ರೂಪತಳೆಯತ್ತದೆ. ಈ ವರ್ಗಕ್ಕೆ ಜಗತ್ತಿಗೆ ಶಾಂತಿಯನ್ನು ಸಾರಿದ ಬುದ್ಧನ ಆಶಯಗಳಿಗಿಂತ ಮುಖ್ಯವಾಗುವುದು ಬಂಡವಾಳ. ಲೋಕದ ದುಖಃಕ್ಕೆ ಕಾರಣ ಹುಡುಕಲು ಹೊರಟ ಬುದ್ಧ ತನ್ನೇಲ್ಲ ಸಂಪತ್ತು, ಸುಖ, ಸಂತೋಷಗಳನ್ನು ತೊರೆದ. ಆದರೆ ಇಂದು ತಮ್ಮ ಅಸ್ತಿತ್ವದ ತಡಕಾಟಕ್ಕೆ ಮುಂದಾಗಿರುವ ಕಾರ್ಪೋರೇಟ್ ಮನಸುಗಳು ಬುದ್ಧನನ್ನು ಒಂದು ಸರಕಾಗಿ ಬಳಸಿಕೊಳ್ಳುತ್ತಿವೆ. ತನ್ನ ಸಂಸಾರ, ರಾಜ್ಯ, ಆಸ್ತಿ ಪಾಸ್ತಿ ಎಲ್ಲವನ್ನು ತೊರೆದು ಜಗತ್ತಿನ ಕಲ್ಯಾಣವನ್ನು ಅರಸಿ ಹೊರಟಂತಹ ಬುದ್ಧ ಬಂಡವಾಳದ ಸರಕಾಗಿರುವ ಬಗೆಗೆ ತರುಣ ಕವಿಯಾದ ಹಸಮಕಲ್ ಅವರಿಗೆ ಅಸಹನೆ ಇದೆ. ಇಂತಹ ಸೂಕ್ಷ್ಮ ಎಳೆಗಳ ಜಾಡು ಹಿಡಿದು ಹೊರಟ ಕವಿ,

ಗುಂಡಿಗೆಯ ಸದ್ದು ಗುಂಡು ನುಂಗುತ್ತಿವೆ ಎಂದು
ನೆತ್ತರಿನ ಕಲೆ ಹೊರೆಸಲು ಸುರಿದ ಬುದ್ಧಮಳೆ
ಕೆಂಪುಕಲೆ ಕರಗಲೆ ಇಲ್ಲ….
ತೋಡಿದಷ್ಟು ಗಟ್ಟಿಗೊಳ್ಳುವ ಮಣ್ಣು
ಸಸಿ ನೆಡದೆ
ಬಂದ ಬುದ್ಧ
ಅರಳಿಮರದತ್ತ ಮತ್ತೊಂದು ತಪಸ್ಸಿಗೆ…

ಎಂದು ಸಾರುವ ಕವಿಯು ಹಲವು ರೂಪಕಗಳ ಅಡಿಯಲ್ಲಿ ಸಮಕಾಲೀನ ಸಮಾಜದ ತಲ್ಲಣಗಳನ್ನು ಕಟ್ಟಿಕೊಡುತ್ತಲೇ ಶತಮಾನಗಳ ಚರಿತ್ರೆಯ ಕ್ರಿಯೆ ಹಾಗೂ ಪ್ರತಿಕ್ರಿಯೆಗಳನ್ನು ಬೆಸೆಯುವ ಪ್ರಯತ್ನ ಮಾಡುತ್ತಾರೆ. ‘ತೋಡಿದಷ್ಟು ಗಟ್ಟಿಗೊಳ್ಳುವ ಮಣ್ಣು’ ಎಂಬ ರೂಪಕವು ಸಾಮಾಜಿಕ ಸುಧಾರಣೆಗಾಗಿ ಹಲವಾರು ಸಮಾಜ ಸುಧಾರಕರು ನಡೆಸಿದ ಪ್ರಯತ್ನ ಹಾಗೂ ಅದರ ಪ್ರತಿಫಲಗಳನ್ನು ಅನಾವರಣಗೊಳಿಸುತ್ತದೆ. ಯುದ್ಧ, ಆಕ್ರಮಣ, ಭಯೋತ್ಪಾದಕತೆಯಂತಹ ಅಮಾನವೀಯ ಕೃತ್ಯಗಳು ಚರಿತ್ರೆಯುದ್ಧಕ್ಕೂ ನಿರಂತರವಾಗಿ ನಡೆಯುತ್ತಲೆ ಬಂದಿವೆ. ಆದರೆ ಇವುಗಳು ಅತಿಯಾದ ತಾರಕಕ್ಕೆ ಹೋದ ಸಂದರ್ಭದಲ್ಲಿ ಹಲವಾರು ಕ್ರಾಂತಿಪುರುಷರು ಜನ್ಮತಾಳಿದ್ದಾರೆ.

ಇಂತಹ ಸಮಾಜ ಸುಧಾರಕರಲ್ಲಿ ಬುದ್ಧ, ಬಸವ, ಫುಲೆ, ವಿವೇಕಾನಂದ, ಅಂಬೇಡ್ಕರ್ ಅವರಂತಹ ಹಲವಾರು ಯುಗಪುರುಷರು ಜನ್ಮವೆತ್ತು ಅಸಮಾನತೆ, ಅನ್ಯಾಯ ಹಾಗೂ ಅಸಹನೆಯ ವಿರುದ್ಧ ಹೋರಾಟ ನಡೆಸಿದ್ದಾರೆ. ಆದರೆ ಇವರೆಲ್ಲ ಲೋಕ ಕಲ್ಯಾಣಕ್ಕಾಗಿ ಅವಿರತವಾದ ಹೋರಾಟ ನಡೆಸಿ, ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಮುಂದಾದರು ಸಹ ಈ ಸಮಾಜದಲ್ಲಿ ಕ್ರೌರ್ಯದ ಸ್ವರೂಪವು ಮಾತ್ರ ಪ್ರಬಲಗೊಳ್ಳುತ್ತಲೆ ಮುನ್ನೆಡೆದು ಬಂದಿದೆ. ತನ್ನ ಸಮಕಾಲೀನ ಸಂದರ್ಭದ ಈ ಒತ್ತಡವನ್ನು ಪ್ರತಿರೋಧಿಸುವ ವಿಭಿನ್ನ ಆಯಾಮಗಳಲ್ಲಿ ಇಲ್ಲಿನ ಕವಿತೆಗಳು ಎದುರಾಗುತ್ತವೆ.

ಸಾಮಾಜಿಕ ಅಸಮಾನತೆಯನ್ನು ಕುರಿತು ಪ್ರತಿಭಟನಾತ್ಮಕ ನೆಲೆಯಲ್ಲಿ ತಮ್ಮ ವಿಚಾರಗಳನ್ನು ವ್ಯಕ್ತಪಡಿಸುವ ಕವಿಗಳು, ತಮ್ಮ ‘ಚಿಲ್ಲರೆಗೆ ಕದಲದ ಜಾಗ’ ಎಂಬ ಕವಿತೆಯ ಮೂಲಕ ತಳಸಮುದಾಯದ ಶೋಚನೀಯ ಬದುಕನ್ನು ಅನಾವರಣಗೊಳಿಸುತ್ತಾರೆ. ಉಳ್ಳವರ ಸಿರಿತನದ ದಾಹಕ್ಕೆ ಬಲಿಯಾಗುವ ದಮನಿತರ ಸ್ಥಿತಿಯನ್ನು ಕಂಡು ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸುವ ಬಗೆಯೊಂದು ಹೀಗಿದೆ;

ಬೀದಿ ದೀಪದಲಿ
ದುಂಡುಮಲ್ಲಿಗೆಯ ಅರೆನಗ್ನದಾಕೆ
ಸೆರಗ ಸರಿಸಿ ಎದೆಕಾಣಿಸಿ ಹಸಿದಹೊಟ್ಟೆ ಮುಚ್ಚಿ
ಸುಖಪಟ್ಟ ದೇಹಗಳ ದಾಟಿ
ತಂಗಿ ಗೌರಿಗೇಕೆ ಆ…ಪ್ರಶ್ನೆ

ಎಂಬುದಾಗಿ ತಮ್ಮ ಸಮಾಜದಲ್ಲಿ ಒಂದೊತ್ತಿನ ಊಟಕ್ಕೂ ದೇಹವನ್ನು ಮಾರಿಕೊಂಡು ಜೀವನ ಸಾಗಿಸುವ ಹೆಣ್ಣುಗಳನ್ನು ತನ್ನ ಅಕ್ಕ ತಂಗಿಯರೆಂದು ಮರುಗುವ ಮೂಲಕವಾಗಿ ಸಾಮಾಜಿಕ ವ್ಯವಸ್ಥೆಗೆ ಪ್ರತಿರೋಧ ವ್ಯಕ್ತಪಡಿಸುತ್ತಾರೆ. ಇಂದಿನ ಸಮಾಜದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಮೂಲಭೂತವಾದ ಮತ್ತು ಕೋಮುವಾದವು ದಿನದಿಂದ ದಿನಕ್ಕೆ ವಿಕೃತ ಸ್ವರೂಪವನ್ನು ತಾಳುತ್ತಿದೆ. ಆದರೆ ಇಲ್ಲಿ ಮಾನವೀಯ ಅಂತಃಕರಣದ ನೆಲೆಯಲ್ಲಿ ನಿಂತು ಅನ್ಯಧರ್ಮಿಯ ಹೆಣ್ಣೊಬ್ಬಳನ್ನು ತನ್ನ ತಂಗಿ ಎಂದು ಪರಿಭಾವಿಸುವ ಧಾಟಿಯು ವಿಶ್ವಮಾನವತ್ವದ ಪ್ರತಿರೂಪವಾಗಿ ಕಂಡುಬರುತ್ತದೆ. ಈ ಗುಣಗಳು ಸರ್ವಧರ್ಮಿರಲ್ಲಿ ಮೂಡಿದಾಗ ಮಾತ್ರ ಬದಲಾವಣೆಯೆಂಬುದು ಸಾಧ್ಯವಾಗುತ್ತದೆ. ಅನ್ಯಧರ್ಮಿಯರು ಪರಸ್ಪರ ಕಿತ್ತಾಟ ಮಾಡುವಂತಹ ಈ ಚಿಲ್ಲರೆ ಪ್ರವೃತ್ತಿಯಿಂದ ಸಾಮಾಜಿಕ ಬದಲಾವಣೆ ಸಾಧ್ಯವೆ ಇಲ್ಲ ಎಂಬುದನ್ನು ಎತ್ತಿಹಿಡಿಯುವ ಕವಿಗಳು, ಸಾಮಾಜಿಕ ಬದುಕಿನಲ್ಲಿ ಮನುಷ್ಯನ ವರ್ತನಗೆ ಬೇಸತ್ತು;

ಕಛೇರಿ ಗೋಡೆಗೆ ನೀಲಿ ದಪ್ಪಕ್ಷರಕ್ಕೆ
ಕಾಲೆತ್ತಿ ಉಚ್ಚಿ ಹೊಯ್ಯುವ ನಾಯಿಗೆ
ಅಚ್ಚ…
ಎನ್ನದೆ ಮುನ್ನಡೆದೆ

ಎನ್ನುವ ಕವಿಗೆ ಇಲ್ಲಿ ನಾಯಿಯ ವರ್ತನೆಗಿಂತ ಹಣ ಮತ್ತು ಕಾಮದಾಸೆಯ ಮಾನವನ ಪ್ರವೃತ್ತಿಯು ವಿಕೃತವಾಗಿ ಕಂಡುಬರುತ್ತದೆ. ಮಾನವ ಸಮಾಜದಲ್ಲಿ ನಡೆಯುವಂತಹ ಈ ಅಮಾನವೀಯ ಕೃತ್ಯಗಳನ್ನು ಪ್ರತಿಭಟಿಸುವ ಶಕ್ತಿಯನ್ನು ಕಳೆದುಕೊಂಡಿರುವ ನಮಗೆ ಆ ನಾಯಿಯ ಕೃತ್ಯವನ್ನು ತಡೆಯುವ ಯಾವುದೆ ನೈತಿಕ ಶಕ್ತಿ ಇಲ್ಲವೆಂಬುದನ್ನು ಕವಿಗಳು ಇಲ್ಲಿ ವ್ಯಕ್ತಪಡಿಸಿದ್ದಾರೆ. ಇಲ್ಲಿ ಕವಿ ಪ್ರಗತಿಪರ ನೆಲೆಯಲ್ಲಿ ನಿಂತು ಸಮಾಜವನ್ನು ನೋಡುವ ಸಂದರ್ಭದಲಿ, ಮನುಷ್ಯ ಮನುಷ್ಯನ ನಡುವೆ ನಿರ್ಮಾಣಗೊಂಡಿರುವ ಅಸಮಾನತೆಯನ್ನು ಮೆಟ್ಟಿನಿಲ್ಲುವ ನೆಲೆಯಲ್ಲಿ ತಮ್ಮ ಚಿಂತನೆಗಳನ್ನು ವ್ಯಕ್ತಪಡಿಸುತ್ತಾರೆ. ಬಡವರು, ದಮನಿತರ ಮೇಲೆ ಹೇರುತ್ತಿರುವ ಕಾಯ್ದೆ, ಕಾನೂನುಗಳ ಕ್ರೂರತ್ವವನ್ನು ಕುರಿತು ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಸರ್ಕಾರಿ ಕಾಯ್ದೆಗಳು ಸಾಮಾನ್ಯ ಜನತೆಯ ಮೇಲೆ ನಡೆಸುತ್ತಿರುವ ದಬ್ಬಾಳಿಗೆ ಕವಿಯ ಪ್ರತಿಕ್ರಿಯೆಯು ಪ್ರತಿರೋಧಿ ನೆಲೆಯಲ್ಲಿ ಮೂಡಿಬಂದಿದೆ.

ತುತ್ತಿಗೂ ತಂದಿದ್ದಾರೆ
ಕುತ್ತು
ಅವ್ವನ ತುತ್ತು
ಮಮತೆಯ ಮಡಿಲು
ಕಸಿದುಕೊಳ್ಳುವ ಕರಾರಿಗೆ
ಧಿಕ್ಕಾರ! ಧಿಕ್ಕಾರ!

ಎಂಬ ಕವಿಯ ಅಳಲು ಮಾನವೀಯತೆಯನ್ನು ಮರೆತ ಜಡ ಸಮಾಜವನ್ನು ವಿಡಂಬನೆಗೆ ಗುರಿಪಡಿಸುತ್ತದೆ. ಕವಿಯು ಯಾವಾಗೂ ಭೂತ, ಭವಿಷ್ಯತ್ತು ಮತ್ತು ವರ್ತಮಾನದ ಸರಪಳಿಯಂತೆ ಕಾರ್ಯನಿರ್ವಹಿಸಿದಾಗ, ಆತನ ಕಾವ್ಯ ಕುಲುಮೆಯಿಂದ ಮೂಡುವ ಕವಿತಾಶಕ್ತಿಯು ಜೀವಂತಿಕೆಯಿಂದ ಕೂಡಿರುತ್ತದೆ. ಸಮಕಾಲೀನ ಸಮಾಜದಲ್ಲಿ ನಿಂತು ಭೂತ ಮತ್ತು ಭವಿಷ್ಯತ್ತುಗಳನ್ನು ನೋಡುವ ಶರೀಫ್ ಹಸಮಕಲ್ ಅವರ ‘ಚಿಲ್ಲರೆಗೆ ಕದಲದ ಜಾಗ’ ಕಾವ್ಯಗುಚ್ಚವು ಜೀವಪರವಾದ ಆಶಯಗಳನ್ನು ಹೊಂದಿದೆ.

ತಾನು ಬೆಳೆದುಬಂದ ಪರಿಸರವನ್ನು, ತನ್ನ ಸುತ್ತಮುತ್ತಲಿನ ಜನಸಮುದಾಯವು ಅನುಭವಿಸುತ್ತಿರುವ ಸಂಕಷ್ಟಗಳನ್ನು ಪದಗಳ ಮೂಲಕ ಸೆರೆಹಿಡಿದು, ಅದಕ್ಕೆ ಜೀವತುಂಬುವ ಕಾಯಕದಲ್ಲಿ ಹೆಚ್ಚು ತೊಡಗಿರುವುದರ ಪ್ರತಿಫಲವೇ ಈ ಕವನ ಸಂಕಲನ. ಇದು ಬರೀ ಮನರಂಜನೆ ನೀಡುವ ಹೊತ್ತಿಗೆಯಲ್ಲ. ಶಾಂತಿಯ ನಾಡಲಿ ಅಶಾಂತಿಯನ್ನು ಸೃಷ್ಟಿಸಿ, ಸಮಾನತೆಯ ಜಾಗದಲ್ಲಿ ಅಸಮಾನತೆಯನ್ನು ಸೃಷ್ಟಿಸಿ, ಮನುಷ್ಯ ಮನುಷ್ಯನನ್ನು ಕೀಳಾಗಿ ನೋಡುವಂತಹ ಅಮಾನವೀಯ ಸಮಾಜದಲ್ಲಿ ಸಮಾನತೆಯ ಕನಸು ಕಾಣುವ ಜೀವಸೆಲೆ ಇದಾಗಿದೆ. ಇವರ ಜೀವಪರ ಕಾಳಜಿ ಹೀಗೆ ಮುಂದುವರೆಯಲಿ. ಕನ್ನಡ ಸಾಹಿತ್ಯಕ್ಕೆ ಮತ್ತಷ್ಟು ಜೀವದನಿ ಇವರ ಮೂಲಕ ಹರಿದು ಬರಲಿ.

(ಲೇಖಕರು: ಡಾ.ಕೆ.ಎ. ಓಬಳೇಶ್, ಸಂಶೋಧಕರು. ಇಮೇಲ್: eakantagiri@gmail.com. ಮೊ:
9538345639/ 9591420216 )

ಡಾ.ಕೆ.ಎ ಓಬಳೇಶ್ ಅವರು ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಐದು ಚಿನ್ನದ ಪದಕ ಹಾಗೂ ನಾಲ್ಕು ನಗದು ಬಹುಮಾನಗಳೊಂದಿಗೆ ಪಡೆದುಕೊಂಡು, ಚಿನ್ನದ ಹುಡುಗ ಎಂಬ ಕೀರ್ತಿಯನ್ನು ಕುವೆಂಪು ವಿಶ್ವವಿದ್ಯಾಲಯದಿಂದ ಪಡೆದುಕೊಂಡಿರುತ್ತಾರೆ. ಮೂರು ವರ್ಷಗಳ ಕಾಲ ದಾವಣಗೆರೆಯ ವಿವಿಧ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ. ನಂತರದಲ್ಲಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದ ಇವರು, ಇದೇ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ಸಂಶೋಧನೆ ಹಾಗೂ ಬರವಣಿಗೆಯಲ್ಲಿ ಆಸಕ್ತಿಯುಳ್ಳ ಇವರು ಸುಮಾರು ಮೂರು ವರ್ಷಗಳಿಂದ ವಿವಿಧ ಪತ್ರಕೆಗಳಲ್ಲಿ ತಮ್ಮ ಲೇಖನಗಳನ್ನು ಪ್ರಕಟಿಸುತ್ತ ಬಂದಿರುತ್ತಾರೆ. ಭೀಮವಾದ ಮಾಸ ಪತ್ರಿಕೆಯಲ್ಲಿ ದಲಿತ ಹೋರಾಟ ಕಥನ ಎಂಬ ಅಂಕಣವನ್ನು ಸತತವಾಗಿ ಮೂರು ವರ್ಷಗಳಿಂದ ಮುಂದುವರೆಸಿಕೊಂಡು ಬಂದಿರುತ್ತಾರೆ. ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿಯುಳ್ಳ ಇವರು 'ಅಸ್ಮಿತೆ ಮತ್ತು ಆತ್ಮವಿಮರ್ಶೆ' ಎಂಬ ಕೃತಿಯನ್ನು ಹಾಗೂ 'ವಿವೇಕಯಾನ' ಎಂಬ ನಾಟಕವನ್ನು ರಚಿಸಿರುತ್ತಾರೆ. ವಿವೇಕಯಾನ ನಾಟಕ ಕೃತಿಯು ನಾಟಕ ಅಕಾಡೆಮಿಯ ಪ್ರಶಸ್ತಿಗೆ ಭಾಜನವಾಗಿರುತ್ತದೆ. ಕಾವ್ಯ ರಚನೆಯಲ್ಲಿಯು ಆಸಕ್ತಿಯನ್ನು ಹೊಂದಿರುವ ಇವರಿಗೆ ೨೦೧೪ರಲ್ಲಿ 'ಸಾಹಿತ್ಯ ಸಿರಿ' ರಾಜ್ಯ ಪ್ರಶಸ್ತಿಯು ಲಭಿಸಿರುತ್ತದೆ. ಇಮೇಲ್: eakantagiri@gmail.com. ಮೊ: 9538345639/ 9591420216 )

ಅಂತರಂಗ

ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು

Published

on

~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ

ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.

ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.

 

ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.

ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

Continue Reading

ಅಂಕಣ

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

Published

on

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.

ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.

ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.

ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.

ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.

ಕನ್ನಡಿಗರ ಮನದ ಜಾನಕಿ

ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.

ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.

ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.

ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ

ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.

ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.

ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.

ಧ್ವನಿಯೊಳಗಿದ್ದ ಸಾವಿರ ರೂಪಗಳು

ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.

ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ

ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.

ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.

ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ

ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.

ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.

ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.

ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.

ಸರಳತೆಯೇ ಅವರ ಅಲಂಕಾರ

ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.

ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ

ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.

ಸಂಗೀತ ಲೋಕದ ಕಂಬನಿ

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.

ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ

ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.

ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.

ಸ್ವರ ಮೌನವಾದರೂ…

ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.

ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.

ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.

ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ9 hours ago

ಸ್ವಾತಂತ್ರ್ಯವೆಂದರೆ ಬರಿ ಹಕ್ಕಲ್ಲ ದೇಶದ ಬಗ್ಗೆ ಜವಾಬ್ದಾರಿ ಹೊಂದುವುದೂ ಕೂಡ : ಯೋಗೀಶ್ ಸಹ್ಯಾದ್ರಿ

ಸುದ್ದಿದಿನ,ಚಿತ್ರದುರ್ಗ : ಸ್ವಾತಂತ್ರ್ಯವೆಂದರೆ ಕೇವಲ ಹಕ್ಕುಗಳ ಅನುಭವವಲ್ಲ, ದೇಶದ ಬಗ್ಗೆ ಜವಾಬ್ದಾರಿ ಹೊಂದುವುದೂ ಸಹ ಹೌದು. ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳನ್ನು ಸದಾ ಸ್ಮರಿಸಬೇಕು....

ದಿನದ ಸುದ್ದಿ13 hours ago

ನವಿಲೇಹಾಳು | 80ನೇ ಸ್ವಾತಂತ್ರ್ಯ ದಿನಾಚರಣೆ ; ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸಿಹಿ ಹಂಚಿ ಸಂಭ್ರಮ

ಸುದ್ದಿದಿನ,ದಾವಣಗೆರೆ: ಜಿಲ್ಲೆಯ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ, ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನವಿಲೇಹಾಳು ಗ್ರಾಮದಲ್ಲಿ ಸಿಹಿ ಹಂಚುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರು...

ದಿನದ ಸುದ್ದಿ4 days ago

ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ನವಿಲೇಹಾಳು ಗ್ರಾಮ ಪಂಚಾಯಿತಿಗೆ ಭೇಟಿ ; ಗ್ರಾಮಸಭೆ – ಗ್ರಾಮಾಭಿವೃದ್ಧಿಗೆ ಮನವಿ

ಸುದ್ದಿದಿನ,ಚನ್ನಗಿರಿ: ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯು ಸೋಮೌಅರ ನವಿಲೇಹಾಳು ಗ್ರಾಮ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಅವರನ್ನು ಭೇಟಿಯಾಗಿ ಗ್ರಾಮಸಭೆಯನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ...

ಅಂತರಂಗ1 week ago

ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು

~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ...

ದಿನದ ಸುದ್ದಿ1 week ago

ನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್

ಸುದ್ದಿದಿನ,ದಾವಣಗೆರೆ: “ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ತಾವು ಮುಖ್ಯಮಂತ್ರಿಯಂತೆ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇನೆ” ಎಂದು ಶಾಸಕ ಶಿವಗಂಗಾ ಬಸವರಾಜ್ ಹೇಳಿದರು. ದಾವಣಗೆರೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್...

ದಿನದ ಸುದ್ದಿ1 week ago

ದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ

ಸುದ್ದಿದಿನ,ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿಯ ನೂತನ ವಿಜ್ಞಾನ ಸಭಾಂಗಣದಲ್ಲಿ ಕಂಪ್ಯೂಟರ್ ಅಪ್ಲಿಕೇಷನ್ಸ್ (ಎಮ್.ಸಿ.ಎ) ಹಾಗೂ ಕಂಪ್ಯೂಟರ್ ಸೈನ್ಸ್ (ಎಮ್.ಎಸ್ಸಿ) ವಿಭಾಗಗಳ ಸಂಯುಕ್ತಾಶ್ರಯದಲ್ಲಿ “ಸಂಶೋಧನಾ ಸಮಸ್ಯೆಯನ್ನು ಗುರುತಿಸುವ ವಿವಿಧ...

ದಿನದ ಸುದ್ದಿ2 weeks ago

ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ

ಸುದ್ದಿದಿನ,ದಾವಣಗೆರೆ: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್. ಬಸವಂತಪ್ಪ ಅವರಿಗೆ ಸಚಿವ ಸ್ಥಾನ ದೊರೆತಿರುವುದು ದಾವಣಗೆರೆ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಮಹತ್ವದ...

ದಿನದ ಸುದ್ದಿ2 weeks ago

ಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್

ಸುದ್ದಿದಿನ,ದಾವಣಗೆರೆ: ದಾವಣಗೆರೆಯ ಹೆಮ್ಮೆಯ ಶಿಕ್ಷಣ ತಜ್ಞೆ, ಉದ್ಯಮಿ ಹಾಗೂ Parvatha Global Ventures LLP ಸಂಸ್ಥೆಯ ಸಂಸ್ಥಾಪಕಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (Founder & CEO)...

ದಿನದ ಸುದ್ದಿ2 weeks ago

ಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ

ಸುದ್ದಿದಿನ ಡೆಸ್ಕ್:ಹಲವಾರು ವರ್ಷಗಳ ಕಾಲ ಬಂಗಾಳಿ ಟೆಲಿವಿಷನ್ನಲ್ಲಿ ಕೆಲಸ ಮಾಡಿದ ನಂತರ ಮತ್ತು ನಂತರ ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನವನ್ನು ವಿಸ್ತರಿಸಿದ ನಂತರ, ಅಭಿನೇತಾ ಸುಶೋಭನ್ ಸೋನು...

ದಿನದ ಸುದ್ದಿ3 weeks ago

ತುರ್ತು ಕುಡಿಯುವ ನೀರಿನ ಯೋಜನೆ ; 7 ಕೋಟಿ ಅನುದಾನದಲ್ಲಿ ಅವ್ಯವಹಾರ : ತನಿಖೆಗೆ ಆದೇಶಿಸಿ ವಕೀಲ ಡಾ‌.ಕೆ.ಎ.ಓಬಳಪ್ಪ ಲೋಕಾಗೆ ದೂರು

ಸುದ್ದಿದಿನ, ಚಿತ್ರದುರ್ಗ: ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗಗಳಲ್ಲಿ 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆಗೆ ಬಿಡುಗಡೆಯಾಗಿರುವ ಅಂದಾಜು 7...

Trending