ದಿನದ ಸುದ್ದಿ
ಕನ್ನಡ- ರಾಜ್ಯ ರಾಜ್ಯೋತ್ಸವ ಮತ್ತು ಕರ್ನಾಟಕ
- ನಾ ದಿವಾಕರ
“ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ” ಈ ಕವಿವಾಣಿ ಸದಾ ನಮ್ಮ ನಡುವೆ ಗುನುಗುನಿಸುತ್ತಿರುತ್ತದೆ. ಕನ್ನಡ ನಾಡು ಎನ್ನುವ ಅಮೂರ್ತ ಕಲ್ಪನೆಗೆ ಶತಮಾನಗಳ ಇತಿಹಾಸಿದೆ. ಮೂರ್ತ ರೂಪದ ಕನ್ನಡ ನಾಡು ಅಥವಾ ಕರ್ನಾಟಕ 64 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದೆ.
ಈ ಬಾರಿ ರಾಜ್ಯೋತ್ಸವದ ಉತ್ಸಾಹ ಮತ್ತು ಆಡಂಬರಕ್ಕೆ ಕೋವಿದ್19 ಅಡ್ಡಿಯುಂಟುಮಾಡಿದೆ. ಕೋವಿದ್ 19 ತನ್ನ ಪಯಣವನ್ನು ಮುಂದುವರೆಸಿದ್ದರೂ ಕನ್ನಡ ನಾಡಿನ ಸಾಹಿತ್ಯ ಲೋಕದ ಕೋವಿದರು ಹೆಚ್ಚು ಸದ್ದುಮಾಡಬೇಕಿತ್ತೇನೋ ಎನ್ನುವ ನೋವು ಮತ್ತು ವಿಷಾದದೊಂದಿಗೇ ಈ ಬಾರಿಯ ರಾಜ್ಯೋತ್ಸವವನ್ನು ಆಚರಿಸಬೇಕಿದೆ.
ರಾಜ್ಯೋತ್ಸವದ ಆಚರಣೆ ಎಂದರೆ ಹುಟ್ಟುಹಬ್ಬದ ಆಚರಣೆಯಂತಲ್ಲ ಎನ್ನುವ ವಾಸ್ತವವನ್ನು ಇನ್ನಾದರೂ ನಾವು ಅರ್ಥಮಾಡಿಕೊಳ್ಳಬೇಕಿದೆ. ತನಗೆ ಅರಿವಿಲ್ಲದೆಯೇ ಜನಿಸುವ ವ್ಯಕ್ತಿಯ ಹುಟ್ಟುಹಬ್ಬದಂತೆ ಒಂದು ಭೌಗೋಳಿಕ ಪ್ರದೇಶದ ಅಸ್ತಿತ್ವವನ್ನು ಆಚರಿಸುವ ಪರಂಪರೆಯಿಂದ ನಾವು ಹೊರಬರಬೇಕಿದೆ. ಇಂದು ಕನ್ನಡ ಒಂದು ಭಾಷೆಯಾಗಿ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದರೆ, ಕನ್ನಡವನ್ನು ಉಳಿಸಿ ಬೆಳೆಸಬೇಕಾದ ಕನ್ನಡ ನಾಡು ತನ್ನ ಸಾಂವಿಧಾನಿಕ ಅಸ್ತಿತ್ವಕ್ಕಾಗಿ ಹೋರಾಡಬೇಕಿದೆ. ಭೌಗೋಳಿಕವಾಗಿ, ಭೂಪಟದ ಸುಂದರ ಚಿತ್ತಾರದ ಮೂಲಕ ಕೆಂಪು ಹಳದಿ ಬಣ್ಣಗಳ ರಂಗಿನ ಲೋಕದಲ್ಲಿ ವಿಹರಿಸುವ ಮುನ್ನ ಈ ರಾಜ್ಯದ ಜನತೆಯ ಅಸ್ಮಿತೆ ಮತ್ತು ಅಸ್ತಿತ್ವ ಎದುರಿಸುತ್ತಿರುವ ಅಪಾಯಗಳನ್ನು ಕುರಿತು ಯೋಚಿಸಬೇಕಿದೆ.
“ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ” ಎನ್ನುವ ಮತ್ತೊಂದು ಕವಿವಾಣಿಯನ್ನು ಒಮ್ಮೆ ನೆನೆಯೋಣ. ಚರಿತ್ರೆಯ ಪುಟಗಳಲ್ಲಿ ಹುದುಗಿ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಸಂಭ್ರಮಿಸುವುದರ ನಡುವೆಯೇ ಕನ್ನಡ ನಮ್ಮ ಉಸಿರಾಗಿದೆಯೇ ಎಂದು ಪ್ರಶ್ನಿಸಿಕೊಳ್ಳಬೇಕಾದ ಸಂದರ್ಭ ಎದುರಾಗಿದೆ.
ಕನ್ನಡ ಒಂದು ಭಾಷೆಯಾಗಿ ಸಮೃದ್ಧವಾಗಿದೆ, ಜನಸಾಮಾನ್ಯರ ಬದುಕಿನಲ್ಲಿ ಒಂದಾಗಿದೆ, ಕೋಟ್ಯಂತರ ಜನತೆಯ ನಿತ್ಯ ಬದುಕಿನ ಒಂದು ಭಾಗವಾಗಿದೆ. ಆದರೆ ಕನ್ನಡ ಉಸಿರಾಗುವುದು ಎಂದರೆ ಇಷ್ಟೇ ಅಲ್ಲ. ಭುವನೇಶ್ವರಿ ಮತ್ತು ಭೂಪಟ, ಇವೆರಡರ ನಡುವೆ ಪಟಪಟಿಸುವ ಕೆಂಪು-ಹಳದಿ ಬಣ್ಣದ ಬಾವುಟ ಕನ್ನಡದ ಉಸಿರನ್ನು ಪ್ರತಿನಿಧಿಸುತ್ತಿದೆಯೇ ? ಈ ಪ್ರಶ್ನೆ ನಮ್ಮನ್ನು ಕಾಡಲೇಬೇಕಿದೆ ಅಲ್ಲವೇ ?
ಈ ಸಂದರ್ಭದಲ್ಲಿ ನಮ್ಮೊಳಗೆ ಮೂಡಬೇಕಾದ ಜಿಜ್ಞಾಸೆ ಎಂದರೆ ನಾವು ಪ್ರತಿವರ್ಷ ಆಚರಿಸುತ್ತಿರುವುದು ಕನ್ನಡ ರಾಜ್ಯೋತ್ಸವವನ್ನೋ ಅಥವಾ ಕರ್ನಾಟಕ ರಾಜ್ಯೋತ್ಸವವನ್ನೋ ? ಏಕೆಂದರೆ ಕನ್ನಡ ಅಮೂರ್ತ ಸ್ವರೂಪದ ಒಂದು ವಿರಾಟ್ ಅಸ್ಮಿತೆಯ ನೆಲೆಗಟ್ಟು. ಕರ್ನಾಟಕ ಮೂರ್ತ ಸ್ವರೂಪದ ಒಂದು ಭೌಗೋಳಿಕ ಚೌಕಟ್ಟು. ಗಡಿ ವಿವಾದಗಳನ್ನು ಹೊರತುಪಡಿಸಿದರೆ ಕರ್ನಾಟಕದ ಸಮಸ್ಯೆಗಳು ನಗಣ್ಯ. ಆದರೆ ಕನ್ನಡ ಸಮಸ್ಯೆಗಳು ಬೆಟ್ಟದಷ್ಟು. ಇಲ್ಲಿ ರಾಜ್ಯದ ಜನಸಾಮಾನ್ಯರನ್ನು ನಾವು “ ಕನ್ನಡದ ” ಭಾಗವಾಗಿ ನೋಡುತ್ತೇವೆಯೋ ಅಥವಾ “ ಕರ್ನಾಟಕದ ” ಭಾಗವಾಗಿ ನೋಡುತ್ತೇವೆಯೋ ?
ಭಾಷೆ ಮುಖ್ಯವಾಗುವುದು ಇಲ್ಲಿಯೇ. ಆಡುಭಾಷೆಯಾಗಿ, ಬಳಕೆಯ ಭಾಷೆಯಾಗಿ, ಸಾಹಿತ್ಯಕ ಅಭಿವ್ಯಕ್ತಿಯಾಗಿ, ಸಾಂಸ್ಕೃತಿಕ ಭೂಮಿಕೆಯಾಗಿ ಕನ್ನಡದ ಅಸ್ಮಿತೆ ತನ್ನ ಛಾಪು ಮತ್ತು ಹೊಳಹನ್ನು ಉಳಿಸಿಕೊಂಡಿದೆ. ಆದರೆ ಬದುಕಿನ ಭಾಷೆಯಾಗಿ, ಜೀವನ ಮತ್ತು ಜೀವನೋಪಾಯದ ನುಡಿಯಾಗಿ, ಅಸ್ತಿತ್ವದ ಭೂಮಿಕೆಯಾಗಿ ಕನ್ನಡದ ಅಸ್ಮಿತೆ ಏನಾಗಿದೆ ? ಮಾತೃಭಾಷಾ ಶಿಕ್ಷಣ, ಶಿಕ್ಷಣ ಮಾಧ್ಯಮವಾಗಿ ಕನ್ನಡ ಮತ್ತು ಕನ್ನಡ ಕಲಿಕೆಯ ಪ್ರಾಧಾನ್ಯತೆ ಈ ನೆಲೆಗಳಲ್ಲಿ ರಾಜ್ಯದ ಭೂಪಟವನ್ನು ಇರಿಸಿದಾಗ ನಮಗೆ ಕನ್ನಡ ತನ್ನ ಇರುವಿಕೆಯನ್ನು ತಾನೇ ಪ್ರಶ್ನಿಸಿಕೊಳ್ಳುತ್ತಿರುವಂತೆ ಕಾಣುತ್ತದೆ.
ಭಾಷೆಯ ಅಳಿವು ಉಳಿವು ಎಷ್ಟು ಗಂಭೀರ ಪ್ರಶ್ನೆಯಾಗಿ ನಮ್ಮ ಮುಂದಿರುವುದೋ, ಅಷ್ಟೇ ಗಂಭೀರವಾಗಿ ಭಾಷಿಕರ ಅಳಿವು ಉಳಿವು ಸಹ ಎದುರಾಗಿದೆ. ಭಾಷಿಕರು ಎಂದರೆ ಕನ್ನಡವನ್ನು ಮಾತೃಭಾಷೆಯನ್ನಾಗಿ ಹೊಂದಿರುವವರು ಮಾತ್ರವೇ? ಕರ್ನಾಟಕದ ಸಂದರ್ಭದಲ್ಲಿ ಹೀಗೆ ಹೇಳಲಾಗುವುದಿಲ್ಲ. ಕೊಂಕಣಿ, ತುಳು, ಹವ್ಯಕ, ಕೊಡವ, ಅರೆಭಾಷೆ ಹೀಗೆ ಕನ್ನಡ ಮತ್ತು ಕರ್ನಾಟಕದ ಚೌಕಟ್ಟಿನಲ್ಲಿ ಹಲವು ಆಯಾಮಗಳನ್ನು ಗುರುತಿಸಬೇಕಾಗುತ್ತದೆ.
ಹಾಗೆಯೇ ಹೊರ ರಾಜ್ಯಗಳಿಂದ ಬಂದು ತಮ್ಮದೇ ಆದ ಮಾತೃಭಾಷೆಯನ್ನೇ ಉಳಿಸಿಕೊಂಡಿದ್ದರೂ , ಕರ್ನಾಟಕ ಎನ್ನುವ ಭೌಗೋಳಿಕ ಅಸ್ತಿತ್ವದ ಉಳಿವಿಗೆ ಶ್ರಮಿಸಿರುವ, ಶ್ರಮಿಸುತ್ತಿರುವ ಜನರೂ ನಮ್ಮ ನಡುವೆ ಇದ್ದಾರೆ. ಈ ಸಮಸ್ತ ಜನತೆಯ ಅಸ್ತಿತ್ವ ಮತ್ತು ಅಸ್ಮಿತೆಯ ಪ್ರಶ್ನೆ ಎದುರಾದಾಗ ಕನ್ನಡ ರಾಷ್ಟ್ರೀಯತೆಯ ಪ್ರಶ್ನೆಯೂ ಎದುರಾಗುತ್ತದೆ.
ಕರ್ನಾಟಕದ ಸಂದರ್ಭದಲ್ಲಿ ಇಂದು ರಾಷ್ಟ್ರೀಯತೆಯ ಪ್ರಶ್ನೆ ಚರ್ಚೆಗೊಳಗಾಗುತ್ತಿಲ್ಲ. ಪ್ರಾದೇಶಿಕ ಅಸ್ಮಿತೆ ಭಾರತದ ರಾಷ್ಟ್ರೀಯತೆಯಲ್ಲಿ ಸಮ್ಮಿಳಿತವಾಗಿ ಮರೆಯಾಗುತ್ತಿದೆ. ಆದರೆ ಈ ರಾಜ್ಯದ ದುಡಿಯುವ ಜನತೆಗೆ, ದುಡಿಮೆಯನ್ನೇ ನಂಬಿ ಬದುಕುವ ಬಹುಸಂಖ್ಯಾತ ಜನತೆಗೆ ರಾಷ್ಟ್ರೀಯತೆ ಒಂದು ಗಂಭೀರ ಪ್ರಶ್ನೆಯಾಗಿ ಕಾಡಲೇಬೇಕಿದೆ.
ನಮ್ಮ ಭೌಗೋಳಿಕ ಅಸ್ಮಿತೆ ಮತ್ತು ಅಸ್ತಿತ್ವ ಎಂದರೆ ಸುಂದರವಾದ ಭೂಪಟವಲ್ಲ. ಈ ರಾಜ್ಯದ ನೈಸರ್ಗಿಕ ಸಂಪತ್ತು ಮತ್ತು ಸಂಪನ್ಮೂಲಗಳು, ಈ ರಾಜ್ಯದ ಶ್ರಮ ಮತ್ತು ಶ್ರಮ ಶಕ್ತಿ, ದುಡಿಮೆಯ ನೆಲೆಗಳು ಮತ್ತು ಉತ್ಪಾದನೆಯ ಮೂಲಗಳು, ಉತ್ಪಾದನೆಯ ಶಕ್ತಿಗಳು ಇವೆಲ್ಲವನ್ನೂ ನವ ಉದಾರವಾದ ಮತ್ತು ಜಾಗತೀಕರಣ ಮುಕ್ತ ಮಾರುಕಟ್ಟೆಯಲ್ಲಿ ಸಮ್ಮಿಳಿತಗೊಳಿಸುವುದರಲ್ಲಿ ಯಶಸ್ವಿಯಾಗಿದೆ.
ಅಂದರೆ ಕನ್ನಡ ಜನತೆಯ ಸವಾಲುಗಳು ಈಗ ಮುಕ್ತವಾಗಿ ಮುನ್ನೆಲೆಗೆ ಬಂದಿದೆ. ನೆಲ, ಜಲ, ಅರಣ್ಯ, ಭೂಗರ್ಭ, ಹಸಿರು ಘಟ್ಟಗಳು ಮತ್ತು ಈ ಎಲ್ಲ ಪ್ರಾಕೃತಿಕ ಸಂಪತ್ತಿನೊಡನೆ ಸಂವಾದಿಸುತ್ತಾ ತಮ್ಮ ಅಸ್ಮಿತೆಯನ್ನು, ಅಸ್ತಿತ್ವವನ್ನು ಕಂಡುಕೊಳ್ಳಲು ದಿನನಿತ್ಯ ಬೆವರು ಸುರಿಸುತ್ತಿರುವ ಕೋಟ್ಯಂತರ ಶ್ರಮಜೀವಿಗಳ ಬದುಕು. ಇದು ಇಂದು ಅಪಾಯ ಎದುರಿಸುತ್ತಿದೆ.
ಒಕ್ಕೂಟ ವ್ಯವಸ್ಥೆಯ ಸಾಂವಿಧಾನಿಕ ಸ್ವರೂಪದಲ್ಲಿ ನಮ್ಮ ಉಸಿರನ್ನು ಕಂಡುಕೊಳ್ಳುತ್ತಾ 70 ವರ್ಷಗಳ ಕಾಲ ನೆಮ್ಮದಿಯಿಂದ ಬದುಕಿದ ಕನ್ನಡ ಮತ್ತು ಕನ್ನಡಿಗರು ಇಂದು ತಮ್ಮ ಸ್ವಂತಿಕೆಯನ್ನು ಕಳೆದುಕೊಂಡು ಸಾಂಸ್ಕೃತಿಕ ರಾಷ್ಟ್ರೀಯತೆ ಮತ್ತು ಭಾರತೀಯ ರಾಷ್ಟ್ರೀಯತೆಯ ಸುಳಿಗೆ ಸಿಲುಕಿರುವುದನ್ನು ಗಂಭೀರವಾಗಿ ಗಮನಿಸಬೇಕಿದೆ. ಇದು ಕೇವಲ ಆಡಳಿತಾತ್ಮಕ ಪ್ರಶ್ನೆಗಳಲ್ಲ ಅಥವಾ ಆಡಳಿತಾರೂಢ ಸರ್ಕಾರಗಳ ನೀತಿಗಳ ಪ್ರಶ್ನೆಯಲ್ಲ ಎನ್ನುವುದನ್ನೂ ಗಮನಿಸಬೇಕಿದೆ.
ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಕೃಷಿ ಮಸೂದೆ, ಅರಣ್ಯ ಹಕ್ಕು ಕಾಯ್ದೆ, ಭೂ ಸ್ವಾಧೀನ ಕಾಯ್ದೆ, ಹೊಸ ಕಾರ್ಮಿಕ ಕಾನೂನುಗಳು, ಹೊಸ ಶಿಕ್ಷಣ ನೀತಿ ಮತ್ತು ಹಣಕಾಸು ನೀತಿಗಳು ಕನ್ನಡದ, ಕನ್ನಡಿಗರ ಮತ್ತು ಭೌಗೋಳಿಕ ಕರ್ನಾಟಕದ ಅಸ್ತಿತ್ವ ಮತ್ತು ಅಸ್ಮಿತೆ ಎರಡನ್ನೂ ಅಪಾಯದ ಅಂಚಿಗೆ ತಳ್ಳುತ್ತಿರುವುದನ್ನು ಗಂಭೀರವಾಗಿ ಅವಲೋಕನ ಮಾಡಬೇಕಿದೆ. ಬಂಡವಾಳದ ಜಾಗತೀಕರಣ ಮತ್ತು ಬಂಡವಾಳ ವ್ಯವಸ್ಥೆಯ ವಿಸ್ತರಣಾವಾದ ಈ ರಾಜ್ಯದ ಸಕಲ ಸಂಪನ್ಮೂಲಗಳನ್ನೂ ಮಾರುಕಟ್ಟೆಯ ಹರಾಜು ಕಟ್ಟೆಗಳಲ್ಲಿಟ್ಟು ಕಾರ್ಪೋರೇಟ್ ಉದ್ಯಮಿಗಳ ವಶಕ್ಕೆ ಒಪ್ಪಿಸಲು ಮುಂದಾಗಿರುವುದನ್ನು ಈ ಮೇಲಿನ ಮಸೂದೆಗಳಲ್ಲಿ, ಸಾಂವಿಧಾನಿಕ ತಿದ್ದುಪಡಿಗಳಲ್ಲಿ ಕಾಣಬಹುದು.
ಭಾರತದ ಸಂವಿಧಾನ ಭಾಷಾವಾರು ರಾಜ್ಯಗಳಿಗೆ ನೀಡಿರುವ ಮಾನ್ಯತೆಯ ಮೂಲ ಇರುವುದು ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಯಲ್ಲಿ. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿಯೊಂದು ರಾಜ್ಯಕ್ಕೂ ತನ್ನದೇ ಆದ ಸ್ವಾಯತ್ತ ಸಾಂಸ್ಥಿಕ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಕಲ್ಪಿಸಬೇಕಾದ್ದು ಕೇಂದ್ರ ಸರ್ಕಾರದ ಅಥವಾ ಪ್ರಭುತ್ವದ ಆದ್ಯತೆಯೂ ಹೌದು ಕರ್ತವ್ಯವೂ ಹೌದು.
ಆದರೆ ಇಂದು ಭಾರತ ಈ ಸಾಂವಿಧಾನಿಕ ಕರ್ತವ್ಯದಿಂದ ವಿಮುಖವಾಗಿದೆ. ಭಾರತದ ರಾಷ್ಟ್ರೀಯತೆ ಎಂದರೆ ಒಕ್ಕೂಟ ವ್ಯವಸ್ಥೆಯೊಳಗಿನ ಪ್ರಾದೇಶಿಕ ಅಸ್ಮಿತೆಗಳನ್ನೊಳಗೊಂಡ ಒಂದು ಪರಿಕಲ್ಪನೆ. ಆದರೆ ಇಂದು ನಾವು ಎದುರಿಸುತ್ತಿರುವ ರಾಷ್ಟ್ರೀಯತೆ ಮೂಲತಃ ಸಾಂಸ್ಕೃತಿಕ ನೆಲೆಯಲ್ಲಿ ಅನಾವರಣಗೊಳ್ಳುತ್ತಿದ್ದು, ಪ್ರಾದೇಶಿಕ ಅಸ್ಮಿತೆಯನ್ನು ನುಂಗಿಹಾಕುವಂತೆ ಕಾಣುತ್ತಿದೆ.
ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿ ಎನ್ನುವ ಘೋಷಣೆಯಲ್ಲೇ ಈ ಅಪಾಯವನ್ನು ನಾವು ಗುರುತಿಸಬಹುದಾಗಿದೆ. ಹಿಂದಿ ಹೇರಿಕೆಯನ್ನು ಜನಸಾಮಾನ್ಯರ ಪ್ರತಿರೋಧದ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿದ್ದರೂ ಇದು ದೀರ್ಘಕಾಲಿಕ ದೂರದೃಷ್ಟಿಯ ಯೋಜನೆ ಎನ್ನುವುದನ್ನು ಮರೆಯುವಂತಿಲ್ಲ.
ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಹೊಸ ಶಿಕ್ಷಣ ನೀತಿ ಇದನ್ನು ಸಾರ್ವತ್ರೀಕರಿಸುವುದಷ್ಟೇ ಅಲ್ಲದೆ ಸಾಂಸ್ಥಿಕವಾಗಿ ಜಾರಿಗೊಳಿಸಿಬಿಡುತ್ತದೆ. ಭಾಷೆಯ ಅಳಿವು ಉಳಿವು ಇಲ್ಲಿ ಪ್ರಶ್ನೆಗೊಳಗಾಗುತ್ತದೆ. ನಾವು ಕನ್ನಡಿಗರು ಎನ್ನುತ್ತಲೋ, ಕನ್ನಡ ನಾಡು ನಮ್ಮದು ಎನ್ನುತ್ತಲೋ ಅಬ್ಬರಿಸುವ ಮುನ್ನ ನಮ್ಮ ಕನ್ನಡದ ನೆಲೆಗಳು ಏನಾಗುತ್ತಿವೆ ಎನ್ನುವುದರ ಪರಿವೆ ನಮಗಿರಬೇಕಲ್ಲವೇ ?
ಕನ್ನಡಿಗರ ಶ್ರಮ, ಪರಿಶ್ರಮದ ಮೂಲಕವೇ ಬೆಳೆದು ನಿಂತ ಸಾಂವಿಧಾನಿಕ ನೆಲೆಗಳು ಇಂದು ಕೇಂದ್ರೀಕೃತ ಆಡಳಿತ ವ್ಯವಸ್ಥೆಯ ಚೌಕಟ್ಟಿನಲ್ಲಿ ನೇಪಥ್ಯಕ್ಕೆ ಸರಿಯುತ್ತಿವೆ. ಇದನ್ನು ನಾವು ಭೌಗೋಳಿಕ ರಾಷ್ಟ್ರೀಯತೆಯ ಉನ್ಮಾದದಲ್ಲಿ ಮರೆಯುತ್ತಿದ್ದೇವೆ. ಮತ್ತೊಂದೆಡೆ ಕನ್ನಡಿಗರೇ ಕಟ್ಟಿ ಬೆಳೆಸಿದ ಸಾಂಸ್ಥಿಕ ನೆಲೆಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿವೆ. ಇದನ್ನು ಸಾಂಸ್ಕøತಿಕ ಅಸ್ಮಿತೆಯ ಉನ್ಮಾದದಲ್ಲಿ ನಿರ್ಲಕ್ಷಿಸುತ್ತಿದ್ದೇವೆ. ಕನ್ನಡ ಮತ್ತು ಕನ್ನಡತನ ಉಳಿಯಬೇಕೆಂದರೆ ಕನ್ನಡಿಗರು ಕಟ್ಟಿ ಬೆಳೆಸಿದ ನೆಲೆಗಳೂ ಉಳಿಯಬೇಕಲ್ಲವೇ ? ಒಮ್ಮೆ ಹಿಂದಿರುಗಿ ನೋಡೋಣ.
ಕಳೆದ ಅರು ವರ್ಷಗಳಲ್ಲಿ ನಮ್ಮ ಅಸ್ಮಿತೆಯ ಕುರುಹಾಗಿದ್ದ, ನಮ್ಮ ಶ್ರಮಶಕ್ತಿಯ ಸ್ಥಾವರದಂತಿದ್ದ ಸಾಂಸ್ಥಿಕ ನೆಲೆಗಳು ಸದ್ದಿಲ್ಲದೆ ಮರೆಯಾಗುತ್ತಿಲ್ಲವೇ ? ಮೈಸೂರು ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ವಿಜಯಾ ಬ್ಯಾಂಕ್ ಈ ಎಲ್ಲವೂ ರಾಷ್ಟ್ರೀಕೃತ ಸಾರ್ವಜನಿಕ ಸಂಸ್ಥೆಗಳಾಗಿದ್ದವು. ಆದರೆ ಈ ಬ್ಯಾಂಕುಗಳ ಅಸ್ಮಿತೆ ಉಳಿದುಕೊಂಡು ಬಂದಿದ್ದುದು ಕನ್ನಡತನದಲ್ಲಿ, ಕನ್ನಡಿಗರ ನೆಲೆಯಲ್ಲಿ, ಕನ್ನಡ ಭಾಷೆಯ ನೆಲೆಯಲ್ಲಿ ಮತ್ತು ಈ ನೆಲದ ಶ್ರಮಿಕರ ಶ್ರಮದಲ್ಲಿ.
ಇಂದು ಈ ಬ್ಯಾಂಕುಗಳು ಇತಿಹಾಸದ ಪುಟಗಳಲ್ಲೂ ಕಾಣದಂತೆ ಮರೆಯಾಗಿಬಿಟ್ಟಿವೆ. ಕೆನರಾ ಮತ್ತು ಕರ್ನಾಟಕ ಬ್ಯಾಂಕ್ ಉಳಿದುಕೊಂಡಿದೆ. ಹೆಚ್ಚು ಕಾಲ ಇರುವುದಿಲ್ಲ ಎನ್ನುವುದನ್ನೂ ಅರ್ಥಮಾಡಿಕೊಳ್ಳಬೇಕಿದೆ. ಆದರೆ ಕನ್ನಡವೇ ನಮ್ಮ ಉಸಿರು ಎಂದು ಕೂಗಿ ಹೇಳುವ ದನಿಗಳಿಗೆ ಇದು ಒಂದು ಗಂಭೀರ ಸಮಸ್ಯೆ ಎನಿಸಲೇ ಇಲ್ಲ.
ಈಗ ನಾವೇ ಕಟ್ಟಿ ಬೆಳೆಸಿದ ಸಾರ್ವಜನಿಕ ಉದ್ದಿಮೆಗಳು ಬಲಿಪೀಠದತ್ತ ಸಾಗುತ್ತವೆ. ಕೋಲಾರ ಚಿನ್ನದ ಗಣಿ ಮುಚ್ಚಿ ಮೂರು-ನಾಲ್ಕು ದಶಕಗಳಾಗಿವೆ, ಪುನರಾರಂಭಿಸುವ ಯೋಜನೆಗಳೂ ಇವೆ. ಆದರೆ ಉಳಿದರೂ ನಮ್ಮ ಕೈಯ್ಯಲ್ಲಿ ಉಳಿಯುವುದಿಲ್ಲ. ಕಾರ್ಪೋರೇಟ್ ವಶವಾಗುತ್ತದೆ. ಬಿಹೆಚ್‍ಇಎಲ್, ಬಿಇಎಲ್, ಹೆಚ್‍ಎಂಟಿ, ಬಿಇಎಂಎಲ್, ಹೆಚ್‍ಎಎಲ್ ಹೀಗೆ ಸ್ವತಂತ್ರ ಭಾರತದ ದೇವಾಲಯಗಳು ಎಂದು ಗುರುತಿಸಲ್ಪಟ್ಟಿದ್ದ ಉದ್ದಿಮೆಗಳು ಕ್ರಮೇಣ ವಿದೇಶಿ/ಸ್ವದೇಶಿ ಕಾರ್ಪೋರೇಟ್ ಉದ್ಯಮಿಗಳ ಪಾಲಾಗುತ್ತದೆ.
ಇಂದಿನ ದುಡಿಯುವ ಕೈಗಳತ್ತ ಒಮ್ಮೆ ನೋಡಿದಾಗ, ಡಿಜಿಟಲೀಕರಣಗೊಂಡ ಔದ್ಯಮಿಕ ಲೋಕದಲ್ಲಿ ಸೇವೆ ಸಲ್ಲಿಸುತ್ತಿರುವ 30-40 ವಯೋಮಾನದ ಶೇ 75ರಷ್ಟು ದುಡಿಮೆಗಾರರು ಈ ಮೇಲೆ ಹೇಳಿದ ಸಾರ್ವಜನಿಕ ಉದ್ದಿಮೆಗಳ, ಬ್ಯಾಂಕುಗಳ ನೆಲೆಯಲ್ಲೇ ಬೆಳೆದುಬಂದಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಕರ್ನಾಟಕದಲ್ಲಿ ಹಿತವಲಯದಲ್ಲಿರುವ ಮಧ್ಯಮ ವರ್ಗಗಳು ಈ ಉದ್ದಿಮೆಗಳಲ್ಲಿ ದುಡಿದ ಜೀವಗಳ ಸಂತತಿ ಎನ್ನುವುದನ್ನು ಗಮನಿಸಬೇಕಿದೆ.
ಆದರೆ ಕನ್ನಡಿಗರೇ ಕಟ್ಟಿ ಬೆಳೆಸಿದ ಈ ಸಾರ್ವಜನಿಕ ಉದ್ದಿಮೆಗಳು ಕ್ರಮೇಣ ಈ ಬ್ಯಾಂಕುಗಳಂತೆಯೇ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಲಿವೆ. ಇತ್ತ ರೈಲು ಹಳಿಗಳೂ ನಮ್ಮದಾಗುವುದಿಲ್ಲ, ಕೃಷಿ ಭೂಮಿಯೂ ನಮ್ಮದಾಗುವುದಿಲ್ಲ, ಅರಣ್ಯ ಸಂಪತ್ತಿನ ಮೇಲೆಯೂ ನಮ್ಮ ಅಧಿಕಾರ ಇರುವುದಿಲ್ಲ, ಭೂಗರ್ಭದ ಖನಿಜಗಳೂ ನಮ್ಮದು ಎನ್ನಲಾಗುವುದಿಲ್ಲ. ರೈಲ್ವೆ ಮತ್ತು ವಿಮಾನ ನಿಲ್ದಾಣಗಳ ಹೆಸರುಗಳಲ್ಲಿ ಕನ್ನಡದ ಅಸ್ಮಿತೆಯನ್ನು ಕೆಂಪೇಗೌಡರ ಹೆಸರಿನಲ್ಲೋ, ನಾಲ್ವಡಿಯವರ ಹೆಸರಿನಲ್ಲೋ ಕಂಡು ಸಂಭ್ರಮಿಸುತ್ತೇವೆ. ಆದರೆ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ವಾರಸುದಾರರ ಒಡೆತನಕ್ಕೆ ಒಳಪಡುತ್ತವೆ.
ಇವೆಲ್ಲದಕ್ಕೂ ಮುಕುಟವಿಟ್ಟಂತೆ ಶೈಕ್ಷಣಿಕ ವಲಯದಲ್ಲಿನ ಬೆಳವಣಿಗೆಗಳನ್ನು ನೋಡಿದರೆ ನಮ್ಮ ವಿಶ್ವವಿದ್ಯಾಲಯಗಳೂ ಸಹ ಮತ್ತೊಂದು ವಿಶ್ವದ ಪಾಲಾಗುವ ಕಾಲ ಸನ್ನಿಹಿತವಾಗುತ್ತಿದೆ. ನಮ್ಮ ನಾಡಿನ ಹೆಮ್ಮೆ, ವಿಶ್ವೇಶ್ವರಯ್ಯನವರು, ಮೈಸೂರಿನ ನಾಲ್ವಡಿ ಒಡೆಯರ್ ಸ್ಥಾಪಿಸಿದ ಶೈಕ್ಷಣಿಕ, ಔದ್ಯಮಿಕ ಸಂಸ್ಥೆಗಳ ಪಟ್ಟಿ ವಾಟ್ಸಪ್ ವಿಶ್ವವಿದ್ಯಾಲಯದ ಸಂದೇಶಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆದರೆ ಈ ಸಂಸ್ಥೆಗಳಲ್ಲಿ ಹಲವು ಮುಚ್ಚಿಹೋಗಿವೆ ಇನ್ನುಳಿದವು ಕಾರ್ಪೋರೇಟ್ ವಲಯದಲ್ಲಿ ಲೀನವಾಗಲಿದೆ. ಜಲಸಂಪನ್ಮೂಲಗಳನ್ನೂ ಖಾಸಗೀಕರಣಕ್ಕೊಳಪಡಿಸುವ ದಿನಗಳು ದೂರವೇನಿಲ್ಲ. ಕೃಷ್ಣರಾಜಸಾಗರ, ಕಬಿನಿ ಜಲಾಶಯ ಸಹ ಒಬ್ಬ ಉದ್ಯಮಿಯ ಸೊತ್ತಾಗುತ್ತದೆ.
ಈ ಎಲ್ಲ ಬೆಳವಣಿಗೆಗಳನ್ನೂ ನಾವು ದೇಶದ ಅಭಿವೃದ್ಧಿ ಮತ್ತು ಪ್ರಗತಿಯ ಅನಿವಾರ್ಯತೆಗಳು ಎಂದು ಭಾವಿಸಿ, ಹಿತವಲಯಗಳಲ್ಲಿ ವಿಶ್ರಮಿಸುತ್ತಿದ್ದೇವೆ. 50 ವರ್ಷಗಳ ಕಾಲ ಒಂದು ಪೀಳಿಗೆ ಕಟ್ಟಿ ಬೆಳೆಸಿದ ಸಂಸ್ಥೆಗಳು ಅದೇ ಪೀಳಿಗೆಯ ಸಂತತಿಯ ಪಾಲಿಗೆ ಬಿಕರಿಯಾಗಬಹುದಾದ ಮಾರುಕಟ್ಟೆ ಸರಕುಗಳಂತೆ ಕಾಣುತ್ತಿದೆ.
ನಮ್ಮ ಮುಂದಿನ ಪೀಳಿಗೆಗೆ ಇದಾವುದೂ ಉಳಿಯುವುದಿಲ್ಲ ಎಂಬ ಸೂಕ್ಷ್ಮ ಪರಿಜ್ಞಾನವೂ ಇಲ್ಲದಂತೆ ನವ ಉದಾರವಾದ ಮತ್ತು ಬಲಪಂಥೀಯ ರಾಜಕಾರಣ ಉನ್ಮಾದ ಸೃಷ್ಟಿಸಿದೆ. ಮೀಸಲಾತಿಯ ಔಚಿತ್ಯವನ್ನು ಪ್ರಶ್ನಿಸುವ ಮನಸುಗಳು ಬಲವಾಗುತ್ತಿರುವಂತೆಯೇ ಮೀಸಲಾತಿಯ ನೆಲೆಗಳೂ ಕ್ರಮೇಣ ಧ್ವಂಸವಾಗುತ್ತಿರುವುದನ್ನು ಗಮನಿಸುತ್ತಿದ್ದೇವೆ ಆದರೆ ನಮ್ಮಲ್ಲಿ ಇದು ಆತಂಕ ಸೃಷ್ಟಿಸುತ್ತಿಲ್ಲ.
ಇದನ್ನು ನಿಷ್ಕ್ರಿಯತೆ ಎನ್ನೋಣವೋ, ನಿರ್ಲಿಪ್ತತೆ ಎನ್ನೋಣವೋ ? ಇಂದು, 31 ಅಕ್ಟೋಬರ್ ಬಾರತದ ಮೊಟ್ಟಮೊದಲ ಕಾರ್ಮಿಕ ಸಂಘಟನೆ ಎಐಟಿಯುಸಿ ತನ್ನ ನೂರನೆಯ ವರ್ಷವನ್ನು ಆಚರಿಸುತ್ತಿದೆ. ಈ ಸಂಘಟನೆಯ ಮತ್ತು ಇದರಿಂದಲೇ ಚದುರಿಹೋದ ಹತ್ತಾರು ಸಂಘಟನೆಗಳ ಹೋರಾಟಗಳಲ್ಲಿ ಕೆಂಬಾವುಟದ ಆಶ್ರಯದಲ್ಲಿ ತಮ್ಮ ಬದುಕು ರೂಪಿಸಿಕೊಂಡು ಇಂದು ಸುಸ್ಥಿರವಾದ ಹಿತವಲಯಗಳಲ್ಲಿ ವಿರಮಿಸಿರುವ ಒಂದು ವರ್ಗ ತನ್ನ ಅಸ್ತಿತ್ವದ ನೆಲೆ ಈ ಹೋರಾಟಗಳಲ್ಲಿದೆ ಎನ್ನುವುದನ್ನೂ ಮರೆತು “ ಅಭಿವೃದ್ಧಿ ಪಥ ”ದತ್ತ ನೋಡುತ್ತಿದೆ. ಈ ಅಭಿವೃದ್ಧಿ ಪಥದ ಹಾಸುಗಲ್ಲುಗಳ ನಡುವೆ ನಮ್ಮ, ಅಂದರೆ ಕನ್ನಡಿಗರ ಅಸ್ತಿತ್ವ, ಅಸ್ಥಿಯಂತೆ ಹೂತುಹೋಗುತ್ತಿರುವುದನ್ನು, ಕನ್ನಡದ ಮನಸುಗಳು ಗ್ರಹಿಸುತ್ತಲೇ ಇಲ್ಲ ಎಂದು ವಿಷಾದದಿಂದ ಹೇಳಬೇಕಿದೆ.
“ ಕನ್ನಡ ಮತ್ತು ಕನ್ನಡಿಗರು ” , “ ಕನ್ನಡತನ ಮತ್ತು ಕರ್ನಾಟಕ ” ಈ ಪದಪುಂಜಗಳ ಹಿಂದೆ ಒಂದು ಭೌಗೋಳಿಕ, ಸಾಂಸ್ಕೃತಿಕ, ಭಾಷಿಕ, ಪ್ರಾದೇಶಿಕ ಮತ್ತು ಭಾವುಕತೆಯ ಅಸ್ಮಿತೆಗಳಿದ್ದರೆ ಅದು ಈ ನಾಡಿನ ಸಮಸ್ತ ಜನತೆಯ ಅಸ್ತಿತ್ವಕ್ಕೆ ಸಂಬಂಧಿಸುವಂತಿರಬೇಕು. ಈ ನಿಟ್ಟಿನಲ್ಲಿ ಆಲೋಚನೆ ಮಾಡುವ ಕನ್ನಡ ಸಂಘಟನೆಗಳು ಎಷ್ಟಿವೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಸಂದಿಗ್ಧತೆಯಲ್ಲಿ ನಾವಿದ್ದೇವೆ. ಈ ಸಂದಿಗ್ಧತೆಯ ನಡುವೆಯೇ ಮತ್ತೊಂದು ಕನ್ನಡ ಮತ್ತು ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ನಿಂತ ಭೂಮಿಯೇ ಕುಸಿಯುತ್ತಿದ್ದರೂ ಭೂಪಟದಲ್ಲಿ ನಮ್ಮ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಕೆಂಪು ಹಳದಿ ಬಣ್ಣದ ನಡುವೆ ಕಾಣುತ್ತಾ ಸಂಭ್ರಮಿಸುತ್ತಿದ್ದೇವೆ.
ನಮ್ಮ ಆಲೋಚನಾ ಲಹರಿ ಮತ್ತು ಹೋರಾಟದ ಹಾದಿ ಎರಡೂ ಬದಲಾಗಬೇಕಿದೆ. “ಬೆವರು ನಮ್ಮದು, ದುಡಿಮೆ ನಮ್ಮದು, ಶ್ರಮ ನಮ್ಮದು ಒಡೆತನ ಮತ್ತಾರದೋ ” ಎನ್ನುವ ಸಾಲುಗಳು ಇಂದು ಹೆಚ್ಚು ಪ್ರಸ್ತುತ ಎನಿಸಬೇಕಲ್ಲವೇ ? ಈ ಭಾವನೆ ಮತ್ತು ಗ್ರಹಿಕೆ ನಾವು ಕಾಣುತ್ತಿರುವ ಅಭಿವೃದ್ಧಿ ಅಥವಾ ಪ್ರಗತಿಯ ಪಥದಲ್ಲಿ ಅನಿವಾರ್ಯವಾಗಿ ಮೂಡಲೇ ಬೇಕು ಎನ್ನುವ ಸೂಕ್ಷ್ಮವನ್ನು ಇನ್ನಾದರೂ ಗ್ರಹಿಸಬೇಕಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ
ಸುದ್ದಿದಿನ,ದಾವಣಗೆರೆ: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್. ಬಸವಂತಪ್ಪ ಅವರಿಗೆ ಸಚಿವ ಸ್ಥಾನ ದೊರೆತಿರುವುದು ದಾವಣಗೆರೆ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಣಮಿಸಿದೆ. ಹಲವು ವರ್ಷಗಳಿಂದ ಪಕ್ಷದ ಸಂಘಟನೆಗೆ ಸಲ್ಲಿಸಿರುವ ಸೇವೆ, ಕ್ಷೇತ್ರದ ಅಭಿವೃದ್ಧಿಗೆ ನೀಡಿರುವ ಆದ್ಯತೆ ಹಾಗೂ ಜನಸಾಮಾನ್ಯರೊಂದಿಗೆ ಹೊಂದಿರುವ ನಿಕಟ ಸಂಪರ್ಕವನ್ನು ಪರಿಗಣಿಸಿ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಚಿವರಾಗಿ ಆಯ್ಕೆಯಾದ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಮಾಯಕೊಂಡ ಕ್ಷೇತ್ರ ಸೇರಿದಂತೆ ದಾವಣಗೆರೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಭ್ರಮ ಮನೆಮಾಡಿತು. ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು. ಬಸವಂತಪ್ಪ ಅವರ ನಿವಾಸದ ಎದುರು ಬೆಳಗ್ಗಿನಿಂದಲೇ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ಜಮಾಯಿಸಿ ಅಭಿನಂದನೆ ಸಲ್ಲಿಸಿದರು. ಮಹಿಳೆಯರು ಆರತಿ ಬೆಳಗಿ ಸ್ವಾಗತ ಕೋರಿದರೆ, ಯುವಕರು ಘೋಷಣೆಗಳನ್ನು ಕೂಗಿ ಸಂಭ್ರಮಾಚರಣೆ ನಡೆಸಿದರು.
ಕೆ.ಎಸ್. ಬಸವಂತಪ್ಪ ಅವರು ಹಲವು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದು, ರೈತರ ಸಮಸ್ಯೆಗಳು, ಕುಡಿಯುವ ನೀರಿನ ಯೋಜನೆಗಳು, ಗ್ರಾಮೀಣ ರಸ್ತೆ ಅಭಿವೃದ್ಧಿ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ವಿಶೇಷ ಆದ್ಯತೆ ನೀಡುವ ಮೂಲಕ ಜನರ ವಿಶ್ವಾಸ ಗಳಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿರುವ ಕಾರಣದಿಂದಲೇ ಅವರಿಗೆ ಸಚಿವ ಸ್ಥಾನ ದೊರೆತಿದೆ ಎಂಬ ಅಭಿಪ್ರಾಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಮಾಯಕೊಂಡ ಕ್ಷೇತ್ರವು ಕೃಷಿ ಪ್ರಧಾನ ಪ್ರದೇಶವಾಗಿದ್ದು, ಇಲ್ಲಿ ನೀರಾವರಿ, ರಸ್ತೆ, ಶಿಕ್ಷಣ, ಕೈಗಾರಿಕಾ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಯಂತಹ ಹಲವು ಸವಾಲುಗಳಿವೆ. ಸಚಿವ ಸ್ಥಾನ ದೊರೆತಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ವೇಗ ಸಿಗಲಿದೆ ಎಂಬ ನಿರೀಕ್ಷೆ ಜನರಲ್ಲಿ ಮೂಡಿದೆ. ವಿಶೇಷವಾಗಿ ರೈತರು, ಯುವಕರು ಹಾಗೂ ಮಹಿಳಾ ಸಂಘಟನೆಗಳು ಹೊಸ ಸಚಿವರಿಂದ ಹೆಚ್ಚಿನ ಅಭಿವೃದ್ಧಿ ಯೋಜನೆಗಳನ್ನು ನಿರೀಕ್ಷಿಸುತ್ತಿವೆ.
ಸಚಿವ ಸ್ಥಾನ ಘೋಷಣೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆ.ಎಸ್. ಬಸವಂತಪ್ಪ ಅವರು, “ಈ ಜವಾಬ್ದಾರಿ ನನಗೆ ದೊರೆತಿರುವುದು ವೈಯಕ್ತಿಕ ಗೌರವ ಮಾತ್ರವಲ್ಲ, ಮಾಯಕೊಂಡ ಕ್ಷೇತ್ರದ ಪ್ರತಿಯೊಬ್ಬ ಮತದಾರನಿಗೂ ಸಂದ ಗೌರವವಾಗಿದೆ. ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ನಾಯಕರು ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಜನರ ನಿರೀಕ್ಷೆಗಳನ್ನು ಈಡೇರಿಸುವುದು ನನ್ನ ಮೊದಲ ಆದ್ಯತೆಯಾಗಿರುತ್ತದೆ” ಎಂದು ಹೇಳಿದರು.
ರಾಜ್ಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರ ಜೊತೆಗೆ, ದಾವಣಗೆರೆ ಜಿಲ್ಲೆಗೆ ಹೆಚ್ಚಿನ ಅಭಿವೃದ್ಧಿ ಯೋಜನೆಗಳನ್ನು ತರಲು ಪ್ರಯತ್ನಿಸಲಾಗುವುದು ಎಂದು ಅವರು ಭರವಸೆ ನೀಡಿದರು. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ, ಶಾಲೆಗಳು ಮತ್ತು ಆಸ್ಪತ್ರೆಗಳ ಸೌಲಭ್ಯಗಳ ಸುಧಾರಣೆ, ಯುವಕರಿಗೆ ಉದ್ಯೋಗಾವಕಾಶಗಳ ಸೃಷ್ಟಿ ಹಾಗೂ ಮಹಿಳಾ ಸಬಲೀಕರಣ ಕಾರ್ಯಕ್ರಮಗಳಿಗೆ ವಿಶೇಷ ಗಮನ ಹರಿಸಲಾಗುವುದು ಎಂದು ತಿಳಿಸಿದರು.
ಪಕ್ಷದ ಜಿಲ್ಲಾ ಮುಖಂಡರು ಮಾತನಾಡಿ, ಬಸವಂತಪ್ಪ ಅವರ ಸಚಿವ ಸ್ಥಾನದಿಂದ ಜಿಲ್ಲೆಗೆ ಹೆಚ್ಚಿನ ಅನುದಾನ ಮತ್ತು ಅಭಿವೃದ್ಧಿ ಯೋಜನೆಗಳು ಹರಿದು ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆಡಳಿತಾತ್ಮಕ ಮಟ್ಟದಲ್ಲಿ ಜಿಲ್ಲೆಯ ವಿವಿಧ ಯೋಜನೆಗಳಿಗೆ ವೇಗ ಸಿಗಲಿದ್ದು, ಬಾಕಿ ಉಳಿದಿರುವ ಹಲವು ಕಾಮಗಾರಿಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.
ವಿವಿಧ ಸಂಘಟನೆಗಳ ಪ್ರತಿನಿಧಿಗಳು ಸಹ ಸಚಿವರಿಗೆ ಅಭಿನಂದನೆ ಸಲ್ಲಿಸಿ, ಜಿಲ್ಲೆಯ ಬಹುಕಾಲದ ಬೇಡಿಕೆಗಳಾದ ನೀರಾವರಿ ಯೋಜನೆಗಳ ವಿಸ್ತರಣೆ, ಕೈಗಾರಿಕಾ ಹೂಡಿಕೆ, ಸರ್ಕಾರಿ ಆಸ್ಪತ್ರೆಗಳ ಉನ್ನತೀಕರಣ, ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಗ್ರಾಮೀಣ ರಸ್ತೆ ಸುಧಾರಣೆಗೆ ಆದ್ಯತೆ ನೀಡುವಂತೆ ಮನವಿ ಮಾಡಿದರು.
ಸಾಮಾಜಿಕ ಜಾಲತಾಣಗಳಲ್ಲಿಯೂ ಬಸವಂತಪ್ಪ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತು. ಸಾರ್ವಜನಿಕರು, ರಾಜಕೀಯ ಮುಖಂಡರು, ವಿವಿಧ ಸಂಘಟನೆಗಳು ಹಾಗೂ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸಿ, ಸಚಿವರ ಹೊಸ ಜವಾಬ್ದಾರಿ ಯಶಸ್ವಿಯಾಗಲಿ ಎಂದು ಹಾರೈಸಿದರು.
ರಾಜಕೀಯ ವಿಶ್ಲೇಷಕರ ಅಭಿಪ್ರಾಯದಂತೆ, ರಾಜ್ಯ ಸಚಿವ ಸಂಪುಟದಲ್ಲಿ ಮಾಯಕೊಂಡ ಕ್ಷೇತ್ರಕ್ಕೆ ದೊರೆತಿರುವ ಈ ಪ್ರತಿನಿಧಿತ್ವವು ದಾವಣಗೆರೆ ಜಿಲ್ಲೆಯ ರಾಜಕೀಯ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವ ಜೊತೆಗೆ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಸಚಿವರ ಪಾತ್ರ ಮಹತ್ವದ್ದಾಗಿರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮಾಯಕೊಂಡ ಕ್ಷೇತ್ರದ ಜನರು ಸಚಿವ ಸ್ಥಾನವನ್ನು ಕೇವಲ ರಾಜಕೀಯ ಸಾಧನೆಯಾಗಿ ನೋಡದೇ, ಅಭಿವೃದ್ಧಿಯ ಹೊಸ ಅಧ್ಯಾಯದ ಆರಂಭವಾಗಿ ಪರಿಗಣಿಸುತ್ತಿದ್ದಾರೆ. ಕುಡಿಯುವ ನೀರು, ರಸ್ತೆ, ಕೃಷಿ, ಶಿಕ್ಷಣ, ಆರೋಗ್ಯ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಗಮನಾರ್ಹ ಬದಲಾವಣೆಗಳು ಆಗಲಿವೆ ಎಂಬ ಆಶಾಭಾವನೆ ವ್ಯಕ್ತವಾಗಿದೆ.
ಕೆ.ಎಸ್. ಬಸವಂತಪ್ಪ ಅವರ ಸಚಿವ ಸ್ಥಾನವು ಮಾಯಕೊಂಡ ಕ್ಷೇತ್ರ ಹಾಗೂ ದಾವಣಗೆರೆ ಜಿಲ್ಲೆಗೆ ಹೊಸ ಅವಕಾಶಗಳನ್ನು ತೆರೆದಿದೆ. ಜನರ ವಿಶ್ವಾಸಕ್ಕೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಸರ್ಕಾರ ಮತ್ತು ಜನರ ನಡುವೆ ಪರಿಣಾಮಕಾರಿ ಸೇತುವೆಯಾಗಿ ಕಾರ್ಯನಿರ್ವಹಿಸುವ ನಿರೀಕ್ಷೆ ಎಲ್ಲ ವಲಯಗಳಲ್ಲೂ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಅವರ ಆಡಳಿತಾತ್ಮಕ ನಿರ್ಧಾರಗಳು ಹಾಗೂ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಜಿಲ್ಲೆಯ ಭವಿಷ್ಯದ ದಿಕ್ಕನ್ನು ನಿರ್ಧರಿಸಲಿವೆ ಎಂಬ ಅಭಿಪ್ರಾಯ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್
ಸುದ್ದಿದಿನ,ದಾವಣಗೆರೆ: ದಾವಣಗೆರೆಯ ಹೆಮ್ಮೆಯ ಶಿಕ್ಷಣ ತಜ್ಞೆ, ಉದ್ಯಮಿ ಹಾಗೂ Parvatha Global Ventures LLP ಸಂಸ್ಥೆಯ ಸಂಸ್ಥಾಪಕಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (Founder & CEO) ಡಾ. ಪ್ರೀತಿ ಅವರು ರಾಷ್ಟ್ರ ಮಟ್ಟದ ಪ್ರತಿಷ್ಠಿತ “Param Bhushan National Excellence Award – 2026” ಪ್ರಶಸ್ತಿಯನ್ನು ಪಡೆದಿದ್ದಾರೆ.
ಶಿಕ್ಷಣ, ಆಡಳಿತ, ಮಾನವ ಸಂಪನ್ಮೂಲ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಸಮಾಜಸೇವೆಯಲ್ಲಿ ನೀಡಿದ ಅತ್ಯುತ್ತಮ ಕೊಡುಗೆಗಳನ್ನು ಪರಿಗಣಿಸಿ Jivran Foundation ವತಿಯಿಂದ ಈ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಡಾ. ಪ್ರೀತಿ ಅವರು ವಿದೇಶಿ ವೈದ್ಯಕೀಯ ಶಿಕ್ಷಣ (MBBS Abroad), ಉದ್ಯೋಗ ಮಾರ್ಗದರ್ಶನ, ಶಿಕ್ಷಣ ಸಲಹಾ ಸೇವೆಗಳು, ಕೌಶಲ್ಯಾಭಿವೃದ್ಧಿ ಹಾಗೂ ಯುವಜನರ ಸಬಲೀಕರಣ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಈ ಪ್ರಶಸ್ತಿ ಅವರ ಸಾಧನೆಗೆ ಮಾತ್ರವಲ್ಲದೆ, ಕರ್ನಾಟಕದ ಶಿಕ್ಷಣ ಮತ್ತು ಉದ್ಯಮ ಕ್ಷೇತ್ರಕ್ಕೂ ರಾಷ್ಟ್ರೀಯ ಮಟ್ಟದಲ್ಲಿ ದೊರೆತ ಗೌರವವಾಗಿದೆ.
ಈ ಸಂದರ್ಭದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಮಾಜದ ಗಣ್ಯರು, ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳು ಡಾ. ಪ್ರೀತಿ ಅವರಿಗೆ ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಲೆಂದು ಶುಭ ಹಾರೈಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ
ಸುದ್ದಿದಿನ ಡೆಸ್ಕ್:ಹಲವಾರು ವರ್ಷಗಳ ಕಾಲ ಬಂಗಾಳಿ ಟೆಲಿವಿಷನ್ನಲ್ಲಿ ಕೆಲಸ ಮಾಡಿದ ನಂತರ ಮತ್ತು ನಂತರ ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನವನ್ನು ವಿಸ್ತರಿಸಿದ ನಂತರ, ಅಭಿನೇತಾ ಸುಶೋಭನ್ ಸೋನು ರಾಯ್ ಅವರು ‘ಟೇಕ್ ಕೇರ್ ಭಾಲೋಬಾಸ’ ಚಿತ್ರದ ಮೂಲಕ ಬಂಗಾಳಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ‘ಜಾಯ್’ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ, ಇದು ಸ್ನೇಹ, ಸಂಬಂಧಗಳು ಮತ್ತು ಕಾಲಾನುಕ್ರಮದಲ್ಲಿ ವಿಕಸನಗೊಳ್ಳುವ ಭಾವನೆಗಳ ಸುತ್ತ ಕೇಂದ್ರೀಕೃತವಾಗಿರುವ ಕಥೆಯಲ್ಲಿನ ಒಬ್ಬ ಸ್ನೇಹಿತ.
ನಿರ್ದೇಶಕ ಪಿಜೂಷ್ ಸಾಹಾ ಅವರ ಮಾರ್ಗದರ್ಶನದಲ್ಲಿ ಸುಶೋಭನ್ ಅವರ ಅಭಿನಯ ಪ್ರಯಾಣವು ಪ್ರಾರಂಭವಾಯಿತು, ಅಲ್ಲಿ ಅವರು ಸುಮಾರು ಎರಡು ವರ್ಷಗಳ ಕಾಲ ಅಭಿನಯ ಕಾರ್ಯಾಗಾರಗಳಲ್ಲಿ ಭಾಗವಹಿಸಿದರು. ನಿಯಮಿತ ಆಡಿಷನ್ಗಳ ನಂತರ, 2019 ರಲ್ಲಿ ಅವರು ಆಕಾಶ್ ಆಠ್ ಚಾನೆಲ್ನ ‘ಆನಂದಮಯೀ ಮಾ’ ಧಾರಾವಾಹಿಯ ಮೂಲಕ ತಮ್ಮ ಟೆಲಿವಿಷನ್ ಚೊಚ್ಚಲ ಪ್ರವೇಶವನ್ನು ಮಾಡಿದರು, ಇದನ್ನು ಮರಣೋತ್ತರ ನಿರ್ದೇಶಕ ದೇವಿದಾಸ್ ಭಟ್ಟಾಚಾರ್ಯ ನಿರ್ದೇಶಿಸಿದ್ದರು, ಅದರಲ್ಲಿ ಅವರು ವೈಷ್ಣವ ಭಕ್ತನ ಪಾತ್ರವನ್ನು ನಿರ್ವಹಿಸಿದರು. ನಂತರ ಅವರು ಸ್ಟಾರ್ ಜಲ್ಸಾದ ‘ಮೋಹರ್’, ‘ಕೋರಾಪಾಖಿ’, ‘ತಿತ್ಲಿ’ ಮತ್ತು ‘ಖೇಲಾಘರ್’, ಜೊತೆಗೆ ಜೀ ಬಂಗ್ಲಾದ ‘ಜಮುನಾ ಢಾಕಿ’ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು, ಹೀಗೆ ಬಂಗಾಳಿ ಟೆಲಿವಿಷನ್ನಲ್ಲಿ ತಮ್ಮ ಕೆಲಸವನ್ನು ಮುಂದುವರೆಸಿದರು.
COVID-19 ಸಾಂಕ್ರಾಮಿಕ ಸಮಯದಲ್ಲಿ, ಅಭಿನಯದ ಕೆಲಸಗಳು ಸೀಮಿತವಾದಾಗ, ಸುಶೋಭನ್ ಮಾಡೆಲಿಂಗ್ಗೆ ತಿರುಗಿದರು. 2023 ರಿಂದ ಪ್ರಾರಂಭಿಸಿ, ಅವರು ಹಾಲಿಡೇ ಇನ್ ಹೋಟೆಲ್, ಡಾಬರ್, ಟೈಟಾನ್ ಐ+, ವೆಲಾಸಿಟಿ ಐವೇರ್, ಅಮೆಜಾನ್, ಸ್ಪೆನ್ಸರ್ಸ್, ಕ್ಯಾಂಪಸ್ ಶೂಸ್, ಬಿಗ್ ಬಜಾರ್, ಬಯೋಟಿಕ್ ಮತ್ತು ಫಿಯಾಮಾ ಡಿ ವಿಲ್ಸ್ ಸೇರಿದಂತೆ ಹಲವಾರು ಬ್ರಾಂಡ್ಗಳೊಂದಿಗೆ ಕೆಲಸ ಮಾಡಿದರು. 2025 ರಲ್ಲಿ, ಕೋಲ್ಕತ್ತಾದಲ್ಲಿ ನಡೆದ ‘ಎತ್ನಿಕ್ ಎಲಿಗನ್ಸ್ 2025’ ಸೌಂದರ್ಯ ಸ್ಪರ್ಧೆಯಲ್ಲಿ ಅವರು ಪ್ರಥಮ ರನ್ನರ್-ಅಪ್ ಆಗಿ ಆಯ್ಕೆಯಾದರು.
ಹೌರಾದಲ್ಲಿ ಜನಿಸಿ ಕೋಲ್ಕತ್ತಾದಲ್ಲಿ ಬೆಳೆದ ಸುಶೋಭನ್, ಸುಮಾರು ಮೂರೂವರೆ ವರ್ಷದ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ನಂತರ ತಾಯಿಯಿಂದ ಬೆಳೆಸಲ್ಪಟ್ಟರು. ಅವರು ಕೋಲ್ಕತ್ತಾದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು 2016 ರಲ್ಲಿ ದಮ್ ದಮ್ ಮೋತಿಜೀಲ್ ರವೀಂದ್ರ ಮಹಾವಿದ್ಯಾಲಯದಿಂದ ವಾಣಿಜ್ಯದಲ್ಲಿ ಬಿ.ಕಾಮ್ ಪದವಿಯನ್ನು ಪಡೆದರು. ಅಭಿನಯವನ್ನು ಮುಂದುವರಿಸುವ ಮೊದಲು, ಅವರು ಸುಮಾರು ಎರಡು ವರ್ಷಗಳ ಕಾಲ ಪಾಶ್ಚಾತ್ಯ ನೃತ್ಯದಲ್ಲಿ ತರಬೇತಿ ಪಡೆದರು ಮತ್ತು ರಂಗ ಪ್ರದರ್ಶನಗಳಲ್ಲಿ ಭಾಗವಹಿಸಿದರು.
‘ಟೇಕ್ ಕೇರ್ ಭಾಲೋಬಾಸ’ ಸುಶೋಭನ್ ಅವರ ಮೊದಲ ಬಂಗಾಳಿ ಫೀಚರ್ ಫಿಲ್ಮ್ನಲ್ಲಿ ಕಾಣಿಸಿಕೊಳ್ಳುವುದನ್ನು ಸೂಚಿಸುತ್ತದೆ. ಈ ಚಿತ್ರದಲ್ಲಿ, ಜಾಯ್ ಅವರು ಕೆಲವೊಮ್ಮೆ ಸಂಯಮದಿಂದಿರುವ, ಆದರೆ ಉಷ್ಣತೆ, ಸ್ನೇಹಪರತೆ ಮತ್ತು ಸಹಜತೆಯನ್ನು ಪ್ರದರ್ಶಿಸುವ ಪಾತ್ರವಾಗಿ ಚಿತ್ರಿಸಲಾಗಿದೆ, ಇದು ಸಂಬಂಧಗಳು ಮತ್ತು ದೈನಂದಿನ ಭಾವನೆಗಳ ಅನ್ವೇಷಣೆಗೆ ಕೊಡುಗೆ ನೀಡುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಅನುದಾನ ದುರುಪಯೋಗ | ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಡಾ. ಅಶೋಕ್ ಡಿ.ಆರ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ6 days agoತುರ್ತು ಕುಡಿಯುವ ನೀರಿನ ಯೋಜನೆ ; 7 ಕೋಟಿ ಅನುದಾನದಲ್ಲಿ ಅವ್ಯವಹಾರ : ತನಿಖೆಗೆ ಆದೇಶಿಸಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಗೆ ದೂರು
-
ದಿನದ ಸುದ್ದಿ6 days agoಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ
-
ದಿನದ ಸುದ್ದಿ4 days agoಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್
-
ದಿನದ ಸುದ್ದಿ15 hours agoಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ

