ಲೈಫ್ ಸ್ಟೈಲ್
ರಕ್ತದಾನ–ಜೀವದಾನ
“ಮಾನವ ಮೂಳೆ ಮಾಂಸದ ತಡಿಕೆ” ಈ ಸಾಲನ್ನು ಕೇಳಿದ ಎಲ್ಲರಿಗೂ ಈ ವಿಚಾರ ತಿಳಿದೇ ಇರುತ್ತದೆ. ಮಾನವನ ದೇಹದ ಒಳಗೆ ಮಿದುಳು, ಹೃದಯ, ಯಕೃತ್ತು, ಮೂತ್ರಪಿಂಡ ಸೇರಿದಂತೆ ಇನ್ನೂ ಕೆಲವು ಅಂಗಗಳು ಮಾನವನ ‘ಜೀವ’ಕ್ಕೆ ಅವಶ್ಯಕವಾದರೆ ಕೇವಲ ಮೂಳೆ ಮಾಂಸಗಳನ್ನೊಳಗೊಂಡ ಕೈ ಕಾಲುಗಳು ‘ಜೀವನಕ್ಕೆ ಬೇಕಾಗಿವೆ.
ಜೀವ ಮತ್ತು ಜೀವನ ಎರಡೂ ಹೊಂದಿಕೊಂಡು ಸಾಗಬೇಕಾದರೆ ದೇಹದ ಒಳಗೆ ನಿತ್ಯವೂ ಪ್ರತಿಕ್ಷಣವೂ ಸಂಚರಿಸುವ ರಕ್ತ ಈ ಎಲ್ಲ ಅಂಗಾಂಗಗಳ ಜೀವಕ್ಕೆ ಬೇಕು. ಆದರೆ ದೇಹದಲ್ಲಿ ರಕ್ತದ ಪ್ರಮಾಣವೇ ಕಡಿಮೆಯಾದರೆ, ಜೀವ ಮತ್ತು ಜೀವನ ಎರಡಕ್ಕೂ ಅಪಾಯ ಕಟ್ಟಿಟ್ಟದ್ದು.
ಎಲ್ಲೋ ಒಂದು ರಸ್ತೆ ಅಪಘಾತವಾಗುತ್ತದೆ. ಕಾಲು ಮುರಿದು ವಿಪರೀತ ರಕ್ತಸ್ರಾವವಾಗಿ ಆಸ್ಪತ್ರೆಗೆ ಸಾಗಿಸಿದರೆ ಅಲ್ಲಿ ವೈದ್ಯರು ಬರೀ ಐ.ವಿ. ಫ್ಲೂಯಿಡ್ಸ್‍ನಲ್ಲಿ ಉಪಚರಿಸಲು ಸಾಧ್ಯವಾಗದೆ ರಕ್ತದ ಅವಶ್ಯಕತೆಯ ಬಗ್ಗೆ ತಿಳಿಸುತ್ತಾರೆ.
ಒಂದೊಮ್ಮೆ ಗರ್ಭಿಣಿ ತಿಂಗಳು ತುಂಬಿ ಪ್ರಸವದ ನಂತರ ತಡೆಯಲಾರದ ರಕ್ತಸ್ರಾವವಾಗಿ ವೈದ್ಯರು ರಕ್ತ ಬೇಕಾಗುತ್ತದೆ ಎನ್ನುತ್ತಾರೆ. ಇನ್ನೊಂದು ಕಡೆ ಒಬ್ಬ ವ್ಯಕ್ತಿ ಡೆಂಗ್ಯೂ ಜ್ವರಕ್ಕೆ ತುತ್ತಾಗಿ ರಕ್ತದಲ್ಲಿ ಪ್ಲೇಟಲೆಟ್ಸ್ ಕಡಿಮೆಯಾಗಿ ರಕ್ತ ಹಾಕದೇ ಉಳಿಗಾಲವಿಲ್ಲವೆಂಬ ಸ್ಥಿತಿಗೆ ತಲುಪುತ್ತಾನೆ. ಅಲ್ಲೊಬ್ಬ ತಲಸೀಮಿಯ, ಇಲ್ಲೊಬ್ಬ ಹೀಮೋಫೀಲಿಯ ರೋಗಗಳಿಂದ ಪೀಡಿತರಾಗಿರುತ್ತಾರೆ. ಈ ಎಲ್ಲಾ ಸನ್ನಿವೇಶಗಳನ್ನೂ ದಿನನಿತ್ಯ ಎಲ್ಲಾದರೊಂದು ಕಡೆ ಕಂಡಿರುತ್ತೇವೆ ಇಲ್ಲವೆ ಕೇಳಿರುತ್ತೇವೆ. ಈ ಎಲ್ಲಕ್ಕೂ ಪರಿಹಾರ ರಕ್ತವೇ ಆಗಿರುತ್ತದೆ. ಅಂದರೆ ದೇಹದಲ್ಲಿರುವ ರಕ್ತ ಅಥವಾ ರಕ್ತದ ಯಾವುದೇ ಒಂದು ಅಂಶ ಕಡಿಮೆಯಾದರೂ ರಕ್ತ ಹಾಕಬೇಕಾದ ಪರಿಸ್ಥಿತಿ ತಲುಪುತ್ತದೆ.
ಒಬ್ಬ ವ್ಯಕ್ತಿಗೆ ರಕ್ತ ಹಾಕಬೇಕಾದರೆ ಅದು ಇನ್ನೊಬ್ಬ ವ್ಯಕ್ತಿ ದಾನ ಮಾಡಿದರೇನೆ ಸಾಧ್ಯವಾಗುತ್ತದೆಯೇ ಹೊರತು ಬೇರೆಲ್ಲಿಂದಲೂ ಅಲ್ಲ. ರಕ್ತದಾನವೆಂದರೆ ಜೀವದಾನ. ಒಬ್ಬ ವ್ಯಕ್ತಿಯ ಒಂದು ಬಾಟಲಿ ರಕ್ತದಿಂದ ಮೂರು ಜೀವಗಳನ್ನು ಉಳಿಸಬಹುದು. ಒಬ್ಬ ವ್ಯಕ್ತಿಯ ಕೇವಲ ಐದು ನಿಮಿಷದ ಸಮಯ ಇನ್ನೊಬ್ಬರ ಜೀವಿತಾವಧಿಯೂ ಆಗಬಲ್ಲದು. ಹಾಗಿದ್ದರೆ ರಕ್ತದಾನದ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ.
ರಕ್ತವನ್ನು ಯಾರು ದಾನ ಮಾಡಬಹುದು?:
ಆರೋಗ್ಯವಂತ ವ್ಕಕ್ತಿ ಯಾರಾದರೂ ರಕ್ತವನ್ನು ದಾನ ಮಾಡಬಹುದು. ಆದರೂ ರಕ್ತದಾನದ ನಂತರ ದಾನಿಯ ಆರೋಗ್ಯವೂ ಮುಖ್ಯವಾಗುವ ಕಾರಣ ಕೆಲವು ನಿಬಂಧನೆಗಳನ್ನು ಹಾಕಲಾಗುತ್ತದೆ. ವಯೋಮಿತಿ 18 ರಿಂದ 60 ವರ್ಷಗಳೊಳಗೆ ಮತ್ತು ದೇಹದ ತೂಕ 50 ಕೆ.ಜಿ.ಗಿಂತ ಜಾಸ್ತಿಯಿರಬೇಕಾಗುತ್ತದೆ.
ರಕ್ತದಾನವನ್ನು ಯಾರು ಮಾಡಲಾಗುವುದಿಲ್ಲ?
- ರಕ್ತದಲ್ಲಿ ಹೀಮೊಗ್ಲೊಬಿನ್ ಅಂಶ ಕಡಿಮೆಯಿರುವವರು
- ಕಳೆದೊಂದು ವರ್ಷದಲ್ಲಿ ಯಾವುದೇ ಸಾಂಕ್ರಾಮಿಕ ರೋಗಗಳಿಂದ ಪೀಡಿತರಾಗಿದ್ದರೆ.
ಕಳೆದೊಂದು ವರ್ಷದಲ್ಲಿ ಯಾವುದೇ ಶಸ್ತ್ರಚಿಕಿತ್ಸೆಗಳಪಟ್ಟಿದ್ದರೆ ಸ್ವತಃ ರಕ್ತ ಹಾಕಿಸಿಕೊಂಡಿದ್ದರೆ. - ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿರುವವರು.
- ದೇಹದ ಒಳಗಿನ ಯಾವುದೇ ಅಂಗಾಂಗವು, ರೋಗಪೀಡಿತವಾಗಿದ್ದರೆ.
- ಕಳೆದ 6 ತಿಂಗಳಲ್ಲಿ ಹಚ್ಚೆ ಹಾಕಿಸಿಕೊಂಡಿದ್ದರೆ, ಕಿವಿ ಚುಚ್ಚಿಸಿಕೊಂಡಿದ್ದರೆ, ಅಥವಾ ಹಲ್ಲು ಕೀಳಿಸಿಕೊಂಡಿದ್ದರೆ.
- ಕಳೆದ ಮೂರು ದಿನಗಳಲ್ಲಿ ಯಾವುದೇ ಮಾತ್ರೆ, ಔಷಧಿ/ಇಂಜೆಕ್ಷನ್‍ಗಳನ್ನು ತೆಗೆದುಕೊಂಡಿದ್ದರೆ.
ರಕ್ತದಾನದ ಮೊದಲು ಅನುಸರಿಸಬೇಕಾದ ಅಂಶಗಳು
- ರಕ್ತದಾನದ ಮೂರು ದಿನಗಳ ಅವಧಿಯಲ್ಲಿ ಮಧ್ಯಪಾನ ಹಾಗೂ 10 ರಿಂದ 12 ತಾಸಿನ ಅವಧಿಯಲ್ಲಿ ಧೂಮಪಾನವನ್ನು ಮಾಡಿರಬಾರದು.
- ರಕ್ತದಾನದ ಹಿಂದಿನ ದಿನ ಸಾಕಷ್ಟು ನೀರು ಹಾಗೂ ಹೆಚ್ಚಿನ ದ್ರವ ಪದಾರ್ಥಗಳನ್ನು ಸೇವಿಸಿದ್ದರೆ ಒಳಿತು
- ರಕ್ತದಾನದ ಹಿಂದಿನ ರಾತ್ರಿ ಸಂಪೂರ್ಣ ನಿದ್ರೆ ಮಾಡಿರಬೇಕು.
- ಉಪಾಹಾರ ಹಾಗೂ ರಕ್ತದಾನ ಮಾಡುವ ನಡುವೆ 3 ತಾಸುಗಳಿಗಿಂತ ಜಾಸ್ತಿ ಸಮಯ ಕಳೆದಿರಬಾರದು, ಹಾಗೇನಾದರೂ ಇದ್ದಲ್ಲಿ ಇನ್ನೊಮ್ಮೆ ಉಪಾಹಾರ ಸೇವಿಸುವುದು ಸೂಕ್ತ
ರಕ್ತದಾನದ ನಂತರ ಅನುಸರಿಸಬೇಕಾದ ಅಂಶಗಳು
- ಮುಂದಿನ 2-3 ತಾಸುಗಳವರೆಗೆ ವಾಹನ ಚಲಾಯಿಸುವಂತಿಲ್ಲ, ಮತ್ತು ಅಂದಿನ ಯಾವುದೇ ಪ್ರಯಾಣಗಳನ್ನು ಮುಂದೂಡುವುದು ಸೂಕ್ತ.
- ನಂತರ ದಾನಿಗಳು ಮುಂದಿನ 2 ದಿನಗಳ ನಂತರ ಸಾಕಷ್ಟು ನೀರು ಮತ್ತು ಇತರೆ ದ್ರವ ಆಹಾರಗಳನ್ನು ಸೇವಿಸಬೇಕಾಗುತ್ತದೆ.
- ಮುಂದಿನ 3 ತಿಂಗಳವರೆಗೆ(ಪುರುಷರು) ಮತ್ತು 4 ತಿಂಗಳವರೆಗೆ(ಮಹಿಳೆಯರು) ಮತ್ತೆ ರಕ್ತದಾನ ಮಾಡುವಂತಿಲ್ಲ.
ರಕ್ತದಾನದ ನಂತರ ಸಂಭವಿಸಬಹುದಾದ ತೊಂದರೆಗಳು
- ರೋಗಿಯ ಆರೋಗ್ಯದಷ್ಟೇ ದಾನಿಯ ಆರೋಗ್ಯವು ಮುಖ್ಯವಾಗುತ್ತದೆ. ಆದ್ದರಿಂದ ರಕ್ತದಾನ ಮಾಡುವ ಸ್ಥಳಗಳಲ್ಲಿಯೇ ದಾನಿಗಳನ್ನು ಪರೀಕ್ಷಿಸಿ ಸಂಭವಿಸಬಹುದಾದ ತೊಂದರೆಗಳಿದ್ದಲ್ಲಿ ಅವರನ್ನು ಅನರ್ಹರೆಂದು ಪರಿಗಣ ಸಿ ತಿರಸ್ಕರಿಸಲಾಗುತ್ತದೆ ಮತ್ತು ಅರ್ಹರಾದವರನ್ನು ಆ ಅವಧಿಯ ಪೂರ್ತಿಯೂ ಪರಿವೀಕ್ಷಣೆಯಲ್ಲಿರಿಸಲಾಗುತ್ತದೆ.
- ಸುಸ್ತಾಗುವುದು, ನಿಶ್ಯಕ್ತಿಯೆನಿಸುಬಹುದು
ರಕ್ತ ತೆಗೆದುಕೊಂಡ ಜಾಗದಲ್ಲಿ ರಕ್ತಸ್ರಾವವಾಗಬಹುದು - ತುಂಬಾ ವಿರಳವಾಗಿ ಕೈ ಕಾಲುಗಳು ಸೆಳೆತಕ್ಕೊಳಗಾಗಬಹುದು.
- ಈ ಎಲ್ಲಾ ತೊಂದರೆಗಳನ್ನು ಗಮನಿಸಲೆಂದೇ ರಕ್ತದಾನದ ನಂತರ 10-15 ನಿಮಿಷಗಳ ಕಾಲ ದಾನಿಯನ್ನು ಅಲ್ಲೇ ಇರಿಸಿಕೊಳ್ಳಲಾಗುತ್ತದೆ. ಹಾಗೇನಾದರೂ ಸಂಭವಿಸಿದಲ್ಲಿ ತಕ್ಷಣದಲ್ಲಿ ಅವರಿಗೆ ಅಲ್ಲೇ ಉಪಚರಿಸಿ ಅಲ್ಲಿರುವ ವೈದ್ಯಾಧಿಕಾರಿಗಳ ಸಲಹೆಯಂತೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ.
ರಕ್ತದಾನದಿಂದಾಗುವ ಲಾಭಗಳೇನು?
ದೇಹದ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗುತ್ತದೆ
ದೇಹದಲ್ಲಿ ಹೊಸ ರಕ್ತಕಣಗಳ ಉತ್ಪತ್ತಿ ಹೆಚ್ಚಾಗುತ್ತದೆ
ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಅಂಶಗಳನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗುತ್ತದೆ
ಬೊಜ್ಜು ಕರಗಿಸುವಲ್ಲಿ ಸಹಕಾರಿಯಾಗುತ್ತದೆ
ವಿವಿಧ ಕಾನ್ಸರ್‍ಗಳ ಸಂಭವವನ್ನು ಕಡಿಮೆ ಮಾಡುತ್ತದೆ.
ಈ ಎಲ್ಲದಕ್ಕೂ ಹೆಚ್ಚಾಗಿ ಬೇರೊಬ್ಬರ ಜೀವ ಉಳಿಸುವಲ್ಲಿ ಸಹಕಾರಿಯಾಗುತ್ತದೆ. ಒಬ್ಬರಲ್ಲಿ ಹರಿಯುವ ರಕ್ತ ಇನ್ನೊಬ್ಬರ ಜೀವನಾಡಿಗಳಲ್ಲಿ ಸಂಚರಿಸಿ ಅವರ ಜೀವವನ್ನೂ ಕಾಪಾಡುತ್ತದೆ. ಇದಕ್ಕಿಂತ ಇನ್ಯಾವ ಸಾರ್ಥಕತೆ ಬೇಕು ಹೇಳಿ.
ದಿನದ ಸುದ್ದಿ
ಅತ್ಮಕತೆ | ನೀರು ಸಾಬರೂ – ಎಸಿ ಮದನಗೋಪಾಲರೂ..
- ರುದ್ರಪ್ಪ ಹನಗವಾಡಿ
ಈ ಮಧ್ಯೆ ನಂಜನಗೂಡು ಪಕ್ಕದ ತಾಲ್ಲೂಕಾದ ಗುಂಡ್ಲುಪೇಟೆಯಿಂದ ರಾಜಕಾರಣಿಯಾಗಿದ್ದ ಅಬ್ದುಲ್ ನಜೀರ್ ಸಾಬ್ ಅವರು ರಾಮಕೃಷ್ಣ ಹೆಗಡೆಯವರ ಸಂಪುಟದಲ್ಲಿ ಪ್ರಭಾವಿ ಮಂತ್ರಿಗಳಾಗಿದ್ದರು. ಗ್ರಾಮೀಣ ಪ್ರದೇಶದಲ್ಲಿ ಬೋರ್‌ವೆಲ್ ತೆಗೆಸಿ ಗ್ರಾಮೀಣ ಜನರಿಗೆ ಸ್ವಚ್ಛ ಕುಡಿಯುವ ನೀರು ಕೊಡುವಲ್ಲಿ ಯಶಸ್ವಿಯಾಗಿದ್ದರು. ಜನಪರ ಮಂತ್ರಿಗಳೂ ಆಗಿದ್ದರು.
ಗುಂಡ್ಲುಪೇಟೆಯಲ್ಲಿ ಭೂಸ್ವಾಧೀನ ಪ್ರಕರಣದಲ್ಲಿ ತಮ್ಮ ಸಂಬಂಧಿಕರೊಬ್ಬರ ಜಮೀನಿಗೆ ತಿರುಗಾಡಲು ದಾರಿಗಾಗಿ ಭೂಸ್ವಾಧೀನಪಡಿಸಲು ಹಿಂದಿನ ಎಸಿ ಅವರ ಅಳಿಯಂದಿರೇ ಆಗಿದ್ದ ಎಸ್.ಎ. ಸಾದಿಕ್ ಅವರು ಭೂಸ್ವಾಧೀನಕ್ಕಾಗಿ ಪ್ರಸ್ತಾವನೆಯನ್ನು ರ‍್ಕಾರಕ್ಕೆ ಸಲ್ಲಿಸಿದ್ದರು. ಆದರೆ ಪುನಃ ಅದು ವಿಚಾರಣೆಗೆ ಬಂದಾಗ ಈ ಭೂಸ್ವಾಧೀನವು ಸಾರ‍್ವಜನಿಕರ ಹಿತ ಕಾಯುತ್ತಿಲ್ಲವೆಂದು ಮದನ್ ಗೋಪಾಲ್ ಅವರು ಆ ಪ್ರಸ್ತಾವನೆಯನ್ನು ರದ್ದುಗೊಳಿಸಲು ಸರ‍್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ಭೂಸ್ವಾಧೀನ ಪ್ರಕರಣವನ್ನು ಮಂತ್ರಿಗಳ ಸಲಹೆ ಮೇರೆಗೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಿದ್ದು, ನಂತರ ಅದನ್ನು ಕೈಬಿಟ್ಟ ಬಗ್ಗೆ ನಜೀರ್ ಸಾಬ್ ಅವರು ಎಸಿ ಮದನ್ ಗೋಪಾಲ್ ಮೇಲೆ ಕೆಂಡಾಮಂಡಲವಾಗಿದ್ದರು. ಎಷ್ಟೇ ಅನುಭವೀ, ನಿಸ್ಪೃಹ ರಾಜಕಾರಣಿಯಾಗಿದ್ದರೂ ನಜೀರ್ ಸಾಬ್ ಅವರು ತಾವು ಹೇಳಿದ ಕೆಲಸ ಮಾಡದ ನೌಕರ ಎಸಿ ಮದನ್ ಗೋಪಾಲ್ ಮೇಲೆ ಕಂದಾಯ ಮಂತ್ರಿ ಮತ್ತು ಜಿಲ್ಲಾಧಿಕಾರಿಗಳ ಎದುರು ತಮ್ಮ ಅಸಮಾಧಾನವನ್ನು ಹೊರಹಾಕಿ ಕೂಗಾಡಿದ್ದರು.
ಇದೇ ಕಾರಣಕ್ಕಾಗಿ ಮದನ್ ಗೋಪಾಲ್ ಅವರನ್ನು ಕೆಲವೇ ದಿನಗಳಲ್ಲಿ ನಂಜನಗೂಡು ಉಪ ವಿಭಾಗದಿಂದ ಬೇರೆಡೆಗೆ ರ‍್ಗಾವಣೆ ಕೂಡ ಮಾಡಲಾಗಿತ್ತು. ಅವರ ವರ್ಗಾವಣೆಯನ್ನು ವಿರೋಧಿಸಿ ಸರ‍್ವಜನಿಕರು, ನಂಜಗೂಡು, ಗುಂಡ್ಲುಪೇಟೆಗಳಲ್ಲಿ ಯಶಸ್ವಿ ಬಂದ್ ಮಾಡಿ ಪ್ರತಿಭಟಿಸಿದ್ದರು. ಅವರ ವರ‍್ಗಾವಣೆ ಆಗಿ ನಂತರ ಮೂರು ತಿಂಗಳಲ್ಲಿ ಯೋಗೇಂದ್ರ ತ್ರಿಪಾಠಿ ಬಂದರು. ಈ ನಡುವೆ ನಾನು, ನಂತರ ಮಂಜುನಾಥ್ ನಾಯಕ್ ಹಾಗೂ ಶಿಕ್ಷಣರ‍್ಥಿ ಎಸಿಯಾಗಿದ್ದ ಕೆ. ಶಿವರಾಂ ಅವರು ಸುಮಾರು ಮೂರು ತಿಂಗಳ ಕಾಲ ಚಾರ್ಜ್ನಲ್ಲಿದ್ದೆವು. ಮದನ್ ಗೋಪಾಲ್ ಅವರು ವೈಯಕ್ತಿಕವಾಗಿ ಕಷ್ಟಪಟ್ಟು ದುಡಿಯುವ ವ್ಯಕ್ತಿಯಾಗಿದ್ದರು. ಆದರೆ ಚುನಾಯಿತ ಪ್ರತಿನಿಧಿಗಳ ಜೊತೆ ಅತಿರೇಕದ ನೇರ ನೇರ ಹಣಾಹಣಿ ಮಾಡಿಕೊಂಡು ಅವರು ಮಾಡುತ್ತಿದ್ದ ಒಳ್ಳೆಯ ಕೆಲಸಗಳು ಹಿನ್ನೆಲೆಗೆ ಸರಿಯುತ್ತಿದ್ದವು.
ಯೋಗೇಂದ್ರ ತ್ರಿಪಾಠಿಯವರು ಬರುವ ವೇಳೆಗಾಗಲೇ ನನ್ನ ನಂಜನಗೂಡು ತಾಲ್ಲೂಕ್ ಆಡಳಿತದಲ್ಲಿ ಒಂದು ವರ‍್ಷಕ್ಕೂ ಹೆಚ್ಚು ಸಮಯ ಕಳೆದಿದ್ದೆ. ಹಾಗಾಗಿ ತ್ರಿಪಾಠಿಯವರ ಜೊತೆ ಕೆಲಸ ಕಾರ‍್ಯಗಳು ಸಲೀಸಾಗಿ ಸಾಗುತ್ತಿದ್ದವು. ಈ ಮೊದಲು ಎಸಿ ಶಿಕ್ಷಣರ‍್ಥಿಯಾಗಿದ್ದ ಕೆ. ಶಿವರಾಂ ಅವರು ಅನೇಕ ಮೌಖಿಕ ಆದೇಶಗಳನ್ನು ಹೇಳಿ ಮಾಡುವಂತೆ ನನಗೆ ನಿರ‍್ದೇಶನ ನೀಡುತ್ತಿದ್ದರು. ನಾನು ಖುದ್ದು ಭೇಟಿ ಮಾಡಿ ಅವರು ಹೇಳಿದ ಕೆಲಸಗಳನ್ನು ಮಾಡಲಿಕ್ಕಾಗದ ಕಾರಣದ ವಿವರ ನೀಡಿದರೂ ಸಮಾಧಾನಗೊಳ್ಳದೆ, ಜನರೆದುರಿಗೆ ಎಸಿ ಮಾಡಲು ಹೇಳಿದರೂ ತಹಸೀಲ್ದಾರ್ ಮಾಡದೆ ತಮ್ಮ ವಿರುದ್ಧವಿದ್ದಾರೆಂಬ ಆಭಾವನೆ ಬರುವಂತೆ ನಡೆದುಕೊಳ್ಳುತಿದ್ದರು. ಅವರಿನ್ನೂ ಶಿಕ್ಷಣರ‍್ಥಿಗಳಾಗಿದ್ದರೂ ಆಗಲೇ ತನಗೆಲ್ಲ ಗೊತ್ತು ಎಂಬ ಅಹಂನಿಂದ ವರ‍್ತಿಸುತ್ತಿದ್ದ ಕಾರಣ ಬಹುಬೇಗ ನನ್ನ ಅವರ ನಡುವೆ ವಿಶ್ವಾಸದ ಕೊರತೆಯಾಗಿ, ಏನಾದರೂ ಮಾಡಬೇಕೆಂದರೆ ಲಿಖಿತ ಆದೇಶ ಕಳಿಸಲು ಅವರ ಮ್ಯಾನೇಜರ್ ಅವರಿಗೆ ನಾನು ದೂರವಾಣಿ ಮುಖಾಂತರ ಹೇಳುತ್ತಿದ್ದೆ. ಆ ನಂತರ ಮತ್ತೆ ಕೆಲವು ದಿನಗಳಲ್ಲಿ ಅವರನ್ನು ಬೇರೆ ತಾಲ್ಲೂಕಿಗೆ ತರಬೇತಿಗಾಗಿ ಕಳಿಸಿದ ಕಾರಣ ನನ್ನ ಮನಸ್ತಾಪ ಅಲ್ಲಿಗೆ ಮುಗಿದಿತ್ತು. ಆದರೆ ಮುಂದೆ ಅನೇಕ ಬಾರಿ ಅವರೊಡನೆ ಒಡನಾಡುವ ಸಂರ‍್ಭದಲ್ಲಿ ಇದ್ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಸರಳವಾಗಿ ನಡೆಸಿಕೊಂಡ ಕಾರಣದಿಂದಾಗಿ ಅವರ ಬಗ್ಗೆ ನನ್ನಲ್ಲಿದ್ದ ಕಹಿ ಕರಗಿ ಸಹಜತೆ ಮೂಡಿದೆ.
ನನ್ನ ಕಛೇರಿ ಕೆಲಸಗಳ ಜೊತೆ ಆಚರಿಸುತ್ತಿದ್ದ ರಾಷ್ಟ್ರೀಯ ಹಬ್ಬಗಳ ಸಮಯದಲ್ಲಿ ಮುಖ್ಯ ಅತಿಥಿಗಳಾಗಿ ನಮ್ಮ ಮೈಸೂರಿನ ಸಮಾಜವಾದಿ ಗೆಳೆಯರ ಜೊತೆ ಚರ್ಚಿಸಿ ಡಾ. ಎಲ್. ಬಸವರಾಜ್, ಸುಜನಾ, ಕೆ.ಎಸ್. ಭಗವಾನ್, ಕೆ. ರಾಮದಾಸ್ ಅವರನ್ನು ಕರೆಸಿ ನಮ್ಮ ತಾಲ್ಲೂಕಿನಲ್ಲಿ ಭಾಷಣ ಮಾಡಿಸುತ್ತಿದ್ದೆ. ಡಿಎಸ್‌ಎಸ್, ರೈತ ಸಂಘ ಮತ್ತು ಕನ್ನಡಪರ ಸಂಘಟನೆಗಳ ಅನೇಕ ಮಿತ್ರರು ನನ್ನ ಒಡನಾಟದಲ್ಲಿದ್ದರು.
ಈಗ ಹೆಸರಾಂತ ಸಾಹಿತಿ ಮತ್ತು ನನ್ನ ಮಿತ್ರನಾಗಿದ್ದ ಮಾದೇವನ ಊರಾದ ದೇವನೂರಿಗೂ ಹೋದಾಗ ಅವರ ಮನೆಗೂ ಹೋಗಿ ಬಂದಿದ್ದೆ. ಕೃಷ್ಣಪ್ಪ – ಇಂದಿರಾ ಅವರು ಮಕ್ಕಳಾದ ಶಾಲಿನಿ, ಸೀಮಾ ಅವರುಗಳ ಜೊತೆ ನಂಜನಗೂಡಿಗೆ ಬಂದು ಉಳಿದು ನಂಜುಂಡೇಶ್ವರ ದೇವಸ್ಥಾನದ ಹಬ್ಬದಲ್ಲಿ ಭಾಗವಹಿಸಿದ ನೆನಪು ಈಗಲೂ ಹಸಿರಾಗಿದೆ.
ಡಿಎಸ್‌ಎಸ್‌ನ ರಾಜ್ಯ ಮಟ್ಟದ ಕಲಿಕಾ ಸಮಾವೇಶವನ್ನು (study camp ) ನಂಜನಗೂಡು ತಾಲ್ಲೂಕಿನಲ್ಲಿನ ವಿದ್ಯಾಪೀಠದಲ್ಲಿ ಕೃಷ್ಣಪ್ಪನವರು ಸುಮಾರು ಒಂದು ವಾರದ ಕಾಲ ನಡೆಸಿದ್ದರು. ಆಗ ರಾಜ್ಯದ ಮೂಲೆಮೂಲೆಗಳಿಂದ ಬಂದು ಡಿಎಸ್‌ಎಸ್‌ನ ಹೋರಾಟದ ರೂಪುರೇಷೆಗಳನ್ನು ಚರ್ಚಿಸುತ್ತಿದ್ದುದನ್ನು ನಾನು ಭಾಗವಹಿಸದಿದ್ದರೂ ತಿಳಿದುಕೊಳ್ಳುತ್ತಿದ್ದೆ.
ಡಿಎಸ್‌ಎಸ್‌ನ ಅಂದಿನ ಬಹುತೇಕ ರ‍್ಚೆಗಳು ರ‍್ಕಾರದ ನಿಷ್ಕಿçಯತೆ, ದಲಿತ ಶಾಸಕರುಗಳ ಗುಲಾಮಿತನ, ದಲಿತರ ಮೇಲಿನ ದರ‍್ಜನ್ಯ, ದಲಿತರ ಕರ‍್ಯಕ್ರಮಗಳಲ್ಲಿನ ನಿಧಾನಗತಿ ಅನುಷ್ಠಾನ, ಇಂತಹವೇ ರ‍್ಚೆಯಾಗುತ್ತಿದ್ದವು. ಅಂತಹ ಸಂಘಟನೆಗೆ ತಹಸೀಲ್ದಾರನಾಗಿ ಭಾಗಿಯಾಗುವುದು, ಸಹಕಾರ ನೀಡುವುದು ಸರಿಯಲ್ಲವೆಂದು ನನಗೆ ನಮ್ಮ ಹಿರಿಯ ಸಿಬ್ಬಂದಿ ಹೇಳುತ್ತಿದ್ದರೂ ನಾನು ನನ್ನ ಇತರೆ ಸಾಮಾನ್ಯ ಕೆಲಸಗಳಲ್ಲಿ ಹಿಂದೆ ಬೀಳದೆ ಮತ್ತು ಇತರೆ ಸಾರ‍್ವಜನಿಕರಲ್ಲೂ ಯಾವುದೇ ತಗಾದೆ ಬಾರದಂತೆ ಕೆಲಸ ನಿರ‍್ವಹಿಸಿದ್ದರಿಂದ ಬೇರಾರೂ ಆಕ್ಷೇಪಿಸುತ್ತಿರಲಿಲ್ಲ. ಆದರೆ ಆಗ ನಂಜನಗೂಡಿನವರೇ ಆಗಿದ್ದ ಡಿಎಸ್‌ಎಸ್‌ನಲ್ಲಿ ಇದ್ದವನೊಬ್ಬ ಮಾದೇವ, ಕೃಷ್ಣಪ್ಪನವರನ್ನು ವೈಯಕ್ತಿಕವಾಗಿ ದ್ವೇಷಿಸುವ ಮನಸ್ಸಿನ ವ್ಯಕ್ತಿ. ನಮ್ಮ ಕಛೇರಿಯ ಸರ‍್ವೆಯರ್ ನೌಕರನನ್ನು ಸಹಾಯ ಪಡೆದು, ನಮ್ಮ ಕಛೇರಿಯ ಬಗ್ಗೆ ಕರಪತ್ರ ಹಾಕಿ `ಭ್ರಷ್ಟಾಚಾರದ ಕೂಪ ತಾಲ್ಲೂಕು ಕಛೇರಿ’ ಎಂದೆಲ್ಲ ದೂರಿದ್ದರು. ಆದರೆ ಅದಕ್ಕೆಲ್ಲ ಕುಮ್ಮಕ್ಕು ಕೊಟ್ಟವನು ನನ್ನ ಕಛೇರಿಯ ಸರ‍್ವೆಯರ್ ಸಂಬಂಧಿ ಡಿ.ಎಸ್.ಎಸ್.ನಲ್ಲಿಯೇ ಇದ್ದವನೊಬ್ಬ ಎಂದು ನನಗೆ ತಿಳಿದು ಬಂತು.
ಜೊತೆಗೆ ನಮ್ಮ ಕಚೇರಿಯ ರ‍್ವೇಯರ್ ದೈನಂದಿನ ಕೆಲಸದಲ್ಲಿ ನಿರ‍್ಲಕ್ಷ್ಯ ತೋರುತ್ತಿದ್ದ ಕಾರಣದಿಂದ ನಾನು ಮೊದಲೇ ಅವನನ್ನು ಅಮಾನತ್ತುಗೊಳಿಸಿದ್ದೆ. ಆ ಕಾರಣ ಅವನು ನನ್ನ ಬಗ್ಗೆ ಮೊದಲೇ ಅಸಮಾಧಾನಗೊಂಡಿದ್ದ. ನಂತರದ ದಿನಗಳಲ್ಲಿ ನಾನೇನೂ ಹೇಳದಿದ್ದರೂ ಕರಪತ್ರ ಹಾಕಿದ ಬಗ್ಗೆ ಬಂದು ತನ್ನ ನಡವಳಿಕೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದ. ಇದಕ್ಕೆಲ್ಲ ತನ್ನ ಭಾವ ಡಿಎಸ್‌ಎಸ್‌ನಲ್ಲಿರುವವನು ಕಾರಣ ಎಂದು ಹೇಳಿ ನನಗೆ ದಂಗುಬಡಿಸಿದ್ದ. ಇಂತಹ ವಿಷಯಗಳನ್ನೆಲ್ಲ ನಿಭಾಯಿಸುವ ಅನುಭವ ನನಗೆ ಇದ್ದುದರಿಂದ ಮತ್ತೇನು ಅದು ಬೆಳೆಯಲಿಲ್ಲ.
ನಂಜನಗೂಡಿನಲ್ಲಿ ನಾನಿರುವಾಗ ಪೋಲೀಸ್ ಇಲಾಖೆಯಲ್ಲಿ ಡಿ.ವೈ.ಎಸ್.ಪಿಯಾಗಿ ಪಿ.ಹೆಚ್. ರಾಣೆ, ಇಬ್ಬರು ಇನ್ಸ್ಪೆಕ್ಟರ್ ಮತ್ತು ನಾಲ್ಕು-ಐದು ಜನ ಸಬ್ ಇನ್ಸ್ಪೆಕ್ಟರ್‌ಗಳು ಇದ್ದರು. ನಾವೆಲ್ಲ ಊರಿನಲ್ಲಿರುವ ಯಾವುದೇ ಪ್ರತಿಷ್ಠಿತ ಮನರಂಜನೆಯ ಕ್ಲಬ್‌ಗಳಿಗೆ ಹೋಗುತ್ತಿರಲಿಲ್ಲ. ಅದರ ಬದಲು, ಪೋಲೀಸ್ ಸ್ಟೇಷನ್ ಬಳಿ ಇದ್ದ ವಿಶಾಲವಾದ ಮೈದಾನದಲ್ಲಿ ಬೆಳಗಿನ ಜಾವದಲ್ಲಿ ಬ್ಯಾಟ್‌ಮಿಂಟನ್, ಷಟಲ್ ಕಾಕ್ ಆಟ ಪ್ರಾರಂಭಿಸಿದ್ದೆವು. ಅಲ್ಲಿಗೆ ಕಂದಾಯ ಇಲಾಖೆಯಲ್ಲಿನ ವಿಎ, RI & ಸಬ್ ಇನ್ಸ್ಸ್ಪೆಕ್ರ‍್ಸ್ ಮತ್ತು ನನ್ನ ಬಿ.ಎ. ತರಗತಿಯ ಕ್ಲಾಸ್ ಮೇಟ್ ಆಗಿದ್ದ ನರಸಿಂಹಸ್ವಾಮಿ ಸೇರಿ ಒಂದೆರಡು ಘಂಟೆಗಳ ಕಾಲ ಆಟದಲ್ಲಿ ಕಳೆಯುತ್ತಿದ್ದೆವು. ಆಗಲೇ ತಾಲ್ಲೂಕಿನಲ್ಲಿನ ಸಮಸ್ಯೆಗಳನ್ನು ಸಾಂಧರ‍್ಭಿಕವಾಗಿ ಚರ‍್ಚಿಸಿ, ಶಾಂತಿ ಕಾಪಾಡಲು ಬೇಕಾದ ಕ್ರಮವಾಗಿ ಕೆಲವರನ್ನು ಒಂದೆರಡು ವಾರಗಳ ಕಾಲ ಸಬ್ ಜೈಲಿಗೆ ಕಳಿಸಲು ಕೋರುತ್ತಿದ್ದರು. ಇಲ್ಲವೇ ಪ್ರತಿ ವಾರವೂ ಹಾಜರಿರಲು ನೋಟಿಸ್ ನೀಡಿ ಬಾರದಿದ್ದಾಗ ದಸ್ತಗಿರಿ ಮಾಡಿ ತರಲು ನನ್ನಿಂದ ಅದೇಶ ಪಡೆದು ಕರೆತರುತ್ತಿದ್ದರು. ನಂತರ ವಿಚಾರಣೆ ಮಾಡಿ, ಒಳ್ಳೆಯ ನಡೆವಳಿಕೆಯ ಬಗ್ಗೆ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡುತ್ತಿದ್ದೆವು. ಇನ್ನು ಕೆಲವು ಭಾರಿ ಈ ಎಲ್ಲ ಅಖPಅ 107 ಪ್ರಕರಣದಲ್ಲಿದ್ದ ಆಪಾದಿತರನ್ನು, ಗ್ರಾಮ ಸಹಾಯಕರನ್ನು ಒಟ್ಟುಗೂಡಿಸಿ ನಮ್ಮ ಕಛೇರಿಯ ಆವರಣದಲ್ಲಿದ್ದ ಜಾಗದಲ್ಲಿ ಗಿಡ ನೆಡಲು ಬೇಕಾದ ಗುಂಡಿ ತೆಗೆಯಲು ತೊಡಗಿಸಿ ದಿನದ ಕೊನೆಯಲ್ಲಿ ಕೇಸು ಕರೆದು ಕೇಸನ್ನು ಮುಂದೂಡುತ್ತಿದ್ದೆನು. ಹೀಗಾಗಿ ತಾಲ್ಲೂಕಿನಲ್ಲಿ, ಜಾತಿ ಜಗಳಗಳಾಗಲೀ, ದೊಂಬಿಗಳಾಗಲೀ ಮಾಡಲು ಪುಂಡ ಪೋಕರಿಗಳಿಗೆ ಅವಕಾಶವಿರುತ್ತಿರಲಿಲ್ಲ.
ತಾಲ್ಲೂಕು ಮಟ್ಟದ ನಾಯಕರು
1986ರ ನಂತರ ಶಾಸಕರುಗಳ ಜೊತೆ ಜಿಲ್ಲಾ ಪರಿಷತ್ ಚುನಾವಣೆಗಳು ಮುಕ್ತಾಯಗೊಂಡು ತಾಲ್ಲೂಕುಮಟ್ಟದಲ್ಲಿ ಹೆಜ್ಜಿಗೆ ರಾಮಯ್ಯ, ದೇವನೂರ ಸಿದ್ದಪ್ಪ, ಬಸವರಾಜ್, ಕಳಲೆ ಸಿದ್ದ ನಾಯಕ್, ಶಶಿಕಲಾ ನಾಗರಾಜ್ ಮತ್ತು ಶಶಿಕಲಾ ಬಾಲರಾಜ್ ಜೊತೆಗೆ ನಂಜನಗೂಡು ಟೌನ್‌ನಲ್ಲಿ ಪುರಸಭೆಯ ಅಧ್ಯಕ್ಷ – ಉಪಾಧ್ಯಕ್ಷರೂ ಇರುತ್ತಿದ್ದರು. ಇವರೆಲ್ಲ ಸಣ್ಣಪುಟ್ಟ ಕೆಲಸಗಳಿಗೆ ಶಿಫಾರಸ್ಸು ಮಾಡಲು ತಾಲ್ಲೂಕು ಕಛೇರಿಗೆ ಬರುತ್ತಿದ್ದರು. ಆಗುವ ಕೆಲಸ ಮಾಡುವುದರಲ್ಲಿ ವಿಳಂಬವಾಗದಂತೆ, ಆಗದಿರುವ ಕೆಲಸಗಳಿಗೂ ನನ್ನ ಮಟ್ಟದಲ್ಲೇ ಅವರಿಗೆ ವಿವರಿಸಿ ಹೇಳುತ್ತಿದ್ದೆ. ಅವರುಗಳು ಒಮ್ಮೊಮ್ಮೆ ಅದೇ ವಿಷಯಗಳನ್ನು ಶಾಸಕರುಗಳ ಹತ್ತಿರವೂ ಪ್ರಸ್ತಾಪಿಸಿ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದರು. ನನ್ನ ವಿವರಣೆ ಶಾಸಕರುಗಳಿಗೂ ಅದೇ ಆಗಿರುತ್ತಿತ್ತು. ಹಾಗಾಗಿ ಆಗುವ ಕೆಲಸಗಳಿಗೆ ಯಾವ ಶಿಫಾರಸ್ಸು ತಂದರೂ ಆಗುವುದಿಲ್ಲ ಎಂಬ ನಂಬಿಕೆ ಅವರಿಗೆಲ್ಲ ತಿಳಿದು ಬಂದಿತ್ತು.
ಗೃಹಮಂತ್ರಿಯಾಗಿದ್ದ ರಾಚಯ್ಯನವರು ಕರ‍್ನಾಟಕ ಕಂಡ ಹಿರಿಯ ಸಜ್ಜನ ರಾಜಕಾರಣಿ. ಅವರು ತಾಲ್ಲೂಕಿನಲ್ಲಿ ಪ್ರವಾಸ ಇರುವಾಗ, `ಇತರೆ ಇಬ್ಬರು ಶಾಸಕರುಗಳು ಯುವಕರಾಗಿದ್ದ ಕಾರಣ ಏನಾದರೂ ನಿನ್ನಿಂದ ತಪ್ಪು ಮಾಡಿಸಿ, ಮುಂದೆ ನೀನಿನ್ನು ಎಸಿ, ಡಿಸಿ ಆಗಬೇಕಾದವನು, ಎಚ್ಚರದಿಂದ ಕೆಲಸ ನರ‍್ವಹಿಸಬೇಕೆಂದು’ ಸಲಹೆ ನೀಡುತ್ತಿದ್ದರು. ನನಗಿಂತ ವಯಸ್ಸಿನಲ್ಲಿ, ಅನುಭವದಲ್ಲಿ ಸುಮಾರು 20 ವರ‍್ಷಗಳ ಅಂತರವಿದ್ದ ಅವರ ಮಾತು ನನಗೆ ನಿಜವಾದ ಕಳಕಳಿಯಿಂದ ಕೂಡಿದ ಮಾತಾಗಿತ್ತು. ಅವರಿಗೆ ಜನರಿಗೆ ಒಳ್ಳೆಯ ಆಡಳಿತ ನೀಡಿದರೆ ಸಾಕಾಗಿತ್ತು. ಮತ್ತಾವ ಒಳ ಒಪ್ಪಂದಗಳ ಮಾತು ಅವರ ಆಡಳಿತದಲ್ಲಿ ಸುಳಿಯುತ್ತಿರಲಿಲ್ಲ.
ಕಂದಾಯ ನೌಕರರ ದಿನಾಚರಣೆ
ವಿಧಾನಸಭೆ ಚುನಾವಣೆ ಆಗಿ ಮೂರು ರ‍್ಷವಾಗಿತ್ತು. ಜಿಲ್ಲಾ ಪರಿಷತ್ ಆಗತಾನೆ ಚುನಾವಣೆಗಳಾಗಿ ಹೊಸ ಸದಸ್ಯರುಗಳು ಆಯ್ಕೆಯಾಗಿದ್ದರು. ಮಾಮೂಲಿ ಕಂದಾಯ ಮತ್ತು ತಾಲ್ಲೂಕು ದಂಡಾಧಿಕಾರಿಯ ಕೆಲಸಗಳನ್ನು ಬಿಟ್ಟರೆ ಮತ್ತಾವ ಒತ್ತಡದ ಕೆಲಸಗಳು ಇರಲಿಲ್ಲ. ಹೀಗಿರುವಾಗ ಕಂದಾಯ ಅಧಿಕಾರಿಗಳು ರ‍್ಷಪರ‍್ತಿ ದುಡಿತದಲ್ಲೇ ಇದ್ದು, ಕಲೆ ಸಂಸ್ಕೃತಿ, ಸಂಗೀತದ ಬಗ್ಗೆ ಮುಖ ಮಾಡುವುದೇ ಇಲ್ಲ. ಈ ಬಗ್ಗೆ ನಾವ್ಯಾಕೆ ಇಡೀ ಜಿಲ್ಲೆಯ ನೌಕರರನ್ನು ಒಳಗೊಂಡಂತೆ 1-2ದಿನ ನಮ್ಮ ಕಂದಾಯ ನೌಕರರ ದಿನಾಚರಣೆ ಆಚರಿಸಬಾರದು ಎಂದು ನಮ್ಮ ಎಸಿ ತ್ರಿಪಾಠಿಯವರ ಜೊತೆ ಚರ‍್ಚಿಸಿ, ನಂತರ ಡಿಸಿಗೂ ಹೇಳಿದೆ.
ಎಲ್ಲ ತಹಸೀಲ್ದಾರ್ ಮಿತ್ರರೊಡನೆ ಕೂಡ ಮೌಖಿಕವಾಗಿ ಚರ‍್ಚಿಸಿ ಅವರ ಸಹಕಾರವನ್ನು ಕೋರಿದೆ. ಅದರಂತೆ, ವಿವಿಧ ಆಟಗಳ ಸ್ಪರ್ಧೆ, ಹಾಡುಗಾರಿಕೆ, ಕೊನೆಯ ದಿನದಲ್ಲಿ ಮಹಾಭಾರತದ ಕುರುಕ್ಷೇತ್ರದ ನಾಟಕ ಎಂದೆಲ್ಲ ತಯಾರಿಗಳು ನಡೆದವು. ಹುಣಸೂರು, ಮೈಸೂರು ಮತ್ತು ನಂಜನಗೂಡು ಉಪ ವಿಭಾಗಗಳ ಉಪ ವಿಭಾಗಾಧಿಕಾರಿಗಳು, ಎಲ್ಲಾ ತಾಲ್ಲೂಕು ತಹಸೀಲ್ದಾರರು, ವಿಎ, ಆರ್‌ಐ ಹಾಗೂ ಕಛೇರಿ ಸಿಬ್ಬಂದಿ ಎಲ್ಲರೂ ಎಲ್ಲ ಆಟ ಪಾಠಗಳಲ್ಲಿ ಭಾಗವಹಿಸಿದ್ದರು. ಆಟಗಳಲ್ಲಿ ಕಬಡ್ಡಿ, ಬ್ಯಾಟ್ ಮಿಂಟನ್, ಷಟಲ್ ಕಾಕ್, ವಾಲಿಬಾಲ್, ಚೆಸ್ ಹೀಗೆಲ್ಲ ಸ್ರ‍್ಧೆಗಳನ್ನು ನರ‍್ವಹಿಸಲು ಎಇಓ ಅವರನ್ನು ಸಂರ‍್ಕಿಸಿ ಒಬ್ಬ ಕ್ರೀಡಾ ಅಧಿಕಾರಿಯನ್ನು ಕೋರಿದ್ದೆ. ಅವರು ಎಲ್ಲಾ ಕ್ರೀಡೆಗಳನ್ನು ವ್ಯವಸ್ಥೆಗೊಳಿಸಿ, ಆಡಿಸಿ ಬಹುಮಾನಿತರ ಪಟ್ಟಿ ನೀಡಿದ್ದರು. ನಿಯಮಿತ ಅಭ್ಯಾಸಗಳು ಇಲ್ಲದ ಆಟಗಾರರೊಬ್ಬರು ಕಬ್ಬಡಿ ಆಟದಲ್ಲಿ ಬಿದ್ದು ಅವರ ಕೈ ಮುರಿದಿತ್ತು. ಸದ್ಯ ಅವರನ್ನು ನಂಜನಗೂಡಿನಲ್ಲಿಯೇ ಉಪಚರಿಸಿ ಸುಧಾರಿಸುವಂತಾಯಿತು.
ಈ ಸಮಾರಂಭಕ್ಕೆ ಮೊದಲ ದಿನ ಎಲ್ಲಾ ಸ್ಪರ್ಧೆಗಳನ್ನು ನಡೆಸಿ ಎರಡನೇ ದಿನ ಸಮಾರೋಪ ಸಮಾರಂಭ ಮತ್ತು ನಾಟಕವಿತ್ತು. ಆಗ ಮೈಸೂರು ವಿಭಾಗಕ್ಕೆ ವಿಭಾಗಾಧಿಕಾರಿಗಳಾಗಿದ್ದ ನೀಲಕಂಠರಾಜು, ಡಿಸಿ ವಿ.ಪಿ. ಬಳಿಗಾರ್, ಹುಣಸೂರು ಎಸಿಯಾಗಿದ್ದ ಶಿವಲಿಂಗಮರ‍್ತಿ, ಮೈಸೂರು ಎಸಿ ಈಶ್ವರ್ ನಮ್ಮ ಎಸಿ ಯೋಗೇಂದ್ರ ತ್ರಿಪಾಠಿ ಎಲ್ಲ ಸಂತೋಷದಿಂದ ಭಾಗವಹಿಸಿದ್ದರು. ನಮ್ಮಲ್ಲಿದ್ದ 80 ಜನ ಗ್ರಾಮ ಸಹಾಯಕರಿಗೆ ವಿಶೇಷವಾದ ಸಮವಸ್ತ್ರ ಹೊಲಿಸಿ ಹೊಸ ಬೂಟುಗಳನ್ನು ಕೊಡಿಸಿ, ಅವರಿಗೆ ಪೋಲೀಸ್ ಪೇದೆಗಳಂತೆ ತರಬೇತಿಯನ್ನು ನೀಡಲು ನಮಲ್ಲಿಯೇ ಇದ್ದ ಕಸಬಾ ವಿಎ – ರಾಧಾಕೃಷ್ಣನಿಗೆ ಜವಾಬ್ದಾರಿ ನೀಡಿದ್ದೆ. ರಾಧಾಕೃಷ್ಣ VA ಆಗಿದ್ದರೂ ಒಬ್ಬ DSPಯಂತೆ ಪೊಲೀಸ್ ನಡವಳಿಕೆಗಳನ್ನು ರೂಢಿಸಿಕೊಂಡಿದ್ದ. ಅವನ ಕೆಳಗೆ ತರಬೇತಿಗೊಂಡ ನಮ್ಮ ಗ್ರಾಮ ಸಹಾಯಕರು ಶಿಸ್ತಿನ ಪೊಲೀಸ್ ಪೇದೆಗಳಂತೆ ನಡೆದುಕೊಳ್ಳುತ್ತಿದ್ದರು.
ಸಮಾರಂಭ ಪ್ರಾರಂಭವಾಗುವ ಮುನ್ನ ನಮ್ಮ ಗ್ರಾಮ ಸಹಾಯಕರೆಲ್ಲ ಒಟ್ಟಿಗೆ ಸಮವಸ್ತ್ರದಲ್ಲಿದ್ದು, ಪೋಲೀಸ್ ಇಲಾಖೆ ನೀಡುವ ‘ಗಾರ್ಡ್ ಆಫ್ ಆನರ್’ನಂತೆ ಎಲ್ಲ ಅತಿಥಿಗಳಿಗೂ ಗೌರವ ವಂದನೆ ನೀಡಿದಾಗ ‘you have summoned police personnel also here’ ಎಂದು ಡಿವಿಸಿ ಉದ್ಘಾರ ತೆಗೆದರು. ‘ನೋ ಸರ್, ಇವರೆಲ್ಲ ನಮ್ಮ ತಾಲ್ಲೂಕಿನ ಗ್ರಾಮ ಸಹಾಯಕರು’ ಎಂದಾಗ ಅವರು ಅಚ್ಚರಿ ವ್ಯಕ್ತಪಡಿಸಿ, ಪ್ರಶಂಸೆ ಕೂಡ ಮಾಡಿದ್ದರು. ಇಂತಹ ಕಂದಾಯ ದಿನಾಚರಣೆಯನ್ನು ನಾನು ಆಯೋಜಿಸಲು ಮುಂದಾಗಿದ್ದಕ್ಕೆ, ನರ‍್ವಹಿಸಿದ್ದಕ್ಕೆ ಡಿವಿಸಿ ಮೊದಲ್ಗೊಂಡು ಎಲ್ಲರೂ ಆಗ ನನ್ನನ್ನು ಪ್ರಶಂಸಿದರು.
ಎಲ್ಲರಿಗಿಂತಲೂ ಹೆಚ್ಚಾಗಿ ನಮ್ಮ ಎಸಿ ಯಾಗಿದ್ದ ತ್ರಿಪಾಠಿ ಅವರು ತುಂಬಾ ಖುಷಿಯಲ್ಲಿದ್ದರು. ಜೊತೆಗೆ ನಮ್ಮ ತಾಲ್ಲೂಕಿನ ಎಲ್ಲಾ ಸಿಬ್ಬಂದಿ ನಾವೆಲ್ಲ ಒಂದು ಕುಟುಂಬ ಎಂಬ ಭಾವನೆ ಮತ್ತು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಏನು ಬೇಕಾದರೂ ಸಾಧಿಸಬಹುದೆಂಬ ಸದ್ಭಾವನೆ ಮೂಡುವಂತಾಗಿತ್ತು. ಕೊನೆಯಲ್ಲಿ ಕಲಿತು ಪ್ರರ‍್ಶಿಸಿದ ನಾಟಕದ ಪ್ರಥಮ ದೃಶ್ಯದಲ್ಲಿ ನಾನು ಕೃಷ್ಣನ ಪಾತ್ರಧಾರಿಯಾಗಿ ಹಾಡೊಂದನ್ನು ಹಾಡಿ ಪ್ರಾರಂಭವಾಗುವಂತೆ ನಾಟಕದ ನರ‍್ದೇಶನ ಮಾಡಿದ್ದ ಮೇಷ್ಟರು ವ್ಯವಸ್ಥೆ ಮಾಡಿದ್ದರು. ನಾನು ಕೃಷ್ಣನ ಪಾತ್ರದ ಪೋಷಾಕಿನಲ್ಲಿ ಹಾಡಿ ಸಂತೋಷಪಟ್ಟಿದ್ದು ಈಗ 35 ವರ‍್ಷಗಳ ನಂತರವೂ ಹಸಿರಾಗಿದೆ.(ಬರಹ:ರುದ್ರಪ್ಪ ಹನಗವಾಡಿ)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಗೃಹ ಆರೋಗ್ಯ ಯೋಜನೆಗೆ ಸಿಎಂ ಚಾಲನೆ ; ಯಾವೆಲ್ಲಾ ಚಿಕಿತ್ಸೆಗಳು ಉಚಿತ..? ಇಲ್ಲಿದೆ ಸಂಪೂರ್ಣ ಮಾಹಿತಿ
ಸುದ್ದಿದಿನಡೆಸ್ಕ್:ಸಿಎಂ ಸಿದ್ದರಾಮಯ್ಯ ಸರ್ಕಾರ ಗೃಹ ಆರೋಗ್ಯ ಯೋಜನೆಗೆ ಗುರುವಾರ ಚಾಲನೆ ನೀಡಿದೆ. ಆ ಮೂಲಕ ಗ್ರಾಮೀಣ ಜನರ ಆರೋಗ್ಯ ರಕ್ಷಣೆಗೆ ಸರ್ಕಾರ ಮಹತ್ವದ ಹೆಜ್ಜೆಯನ್ನು ಇಟ್ಟಿದೆ.
ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಮೂಲಕ ಜನರ ಜೀವ ರಕ್ಷಣೆ ಮಾಡುವ ಕಾರ್ಯಕ್ರಮ ಇದಾಗಿದ್ದು, ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಕೋಲಾರ ಜಿಲ್ಲೆಯಿಂದ ಆರಂಭವಾಗಲಿರುವ ಗೃಹ ಆರೋಗ್ಯ ಯೋಜನೆ, ಜನವರಿ ತಿಂಗಳಿನಲ್ಲಿ ರಾಜ್ಯಾದ್ಯಂತ ಯೋಜನೆ ಜಾರಿ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಹಾಗಾದ್ರೆ ಯಾವ ಯಾವ ಗೃಹ ಆರೋಗ್ಯ ಯೋಜನೆ, ಹೇಗೆ ಕಾರ್ಯ ನಿರ್ವಹಿಸಲಿದೆ ಎಂದು ನೋಡೊದಾದ್ರೆ.
ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಸುರಕ್ಷಾಣಾಧಿಕಾರಿಗಳು ಸೇರಿದಂತೆ ಆಶಾ ಕಾರ್ಯಕರ್ತೆಯರು ಪ್ರತಿ ಮನೆಗಳಿಗೆ ಭೇಟಿ ನೀಡಿ 30 ವರ್ಷ ಮೇಲ್ಪಟ್ಟ ಜನರ ರಕ್ತದೊತ್ತಡ, ಮಧುಮೇಹ ತಪಾಸಣೆ ನಡೆಸಲಿದ್ದಾರೆ.
2ವಾರದಲ್ಲಿ ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರದಂದು ದಿನಕ್ಕೆ 15 ಮನೆಗಳಂತೆ ಭೇಟಿ ನೀಡಿ ತಪಾಸಣೆ ಕಾರ್ಯ ನಡೆಸಲಿದ್ದಾರೆ.
ಯಾವೆಲ್ಲಾ ಚಿಕಿತ್ಸೆಗಳು
• ಬಾಯಿ ಕ್ಯಾನ್ಸರ್, ಮಹಿಳೆಯರ ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್ ಸೇರಿದಂತೆ ಬೇರೆ ರೋಗಗಳ ಬಗ್ಗೆ ಪರೀಕ್ಷಿಸಲಾಗುತ್ತದೆ.
• ಅಸಂಕ್ರಾಮಿಕ ರೋಗಗಳಿಂದ ದೂರವಿರಲು ಜೀವನಶೈಲಿ ಮಾರ್ಪಾಡು ಮಾಡಲು ಆರೋಗ್ಯ ಸಿಬ್ಬಂದಿಯಿಂದ ಸಲಹೆ ನೀಡಲಾಗುತ್ತದೆ.
• ರೋಗಿಗಳಿಗೆ ದೃಢಪಟ್ಟ ಪ್ರಕರಣಗಳಿಗೆ ಅಗತ್ಯ ಔಷಧಿಗಳನ್ನು ಮಾತ್ರೆಯನ್ನ ಜನರ ಬಳಿಗೆ ಒದಗಿಸಲು ಯೋಜನೆಯಲ್ಲಿ ರೂಪ ರೇಷ ಸಿದ್ಧಪಡಿಸಲಾಗಿದೆ.
ಕೋಲಾರ ಜಿಲ್ಲೆಯಿಂದ ಯೋಜನೆ ಆರಂಭವಾಗುತ್ತಿದ್ದು, ಜನವರಿ ತಿಂಗಳ ಬಳಿಕ ರಾಜ್ಯಾದ್ಯಂತ ಯೋಜನೆ ಜಾರಿಗೆ ಬರಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಆತ್ಮಕತೆ | ಅನಾಗರಿಕ ಆಚರಣೆಯ ವಿರುದ್ಧ
- ರುದ್ರಪ್ಪ ಹನಗವಾಡಿ
ಸೊರಬ ತಾಲ್ಲೂಕಿನಲ್ಲಿ ಇನ್ನೊಂದು ಮುಖ್ಯ ಘಟನೆಯನ್ನು ಹೇಳಿ ಮುಂದೆ ಹೋಗುತ್ತೇನೆ. ಸೊರಬ ತಾಲ್ಲೂಕಿನಲ್ಲಿ ತಹಸೀಲ್ದಾರರಾಗಿ ರಾಮನಾಥ್ ಎಂಬ ಹಿರಿಯರಿದ್ದರು. ಅವರು ತಾಲ್ಲೂಕಿನಲ್ಲಿ ಎಲ್ಲಾ ಆಡಳಿತ ನೋಡಿಕೊಳ್ಳುತ್ತಿದ್ದರು.
ವಿಶೇಷ ತಹಸೀಲ್ದಾರರು ಸಾಮಾನ್ಯವಾಗಿ ಯಾವ ಉದ್ದೇಶಕ್ಕೆ ನಿಯೋಜಿಸಿದ್ದರೋ ಅದನ್ನು ಬಿಟ್ಟು ಇತರೆ ಸಾಮಾನ್ಯ ವಿಷಯಗಳಲ್ಲಿ ಅವರಿಗೆ ಸಂಬಂಧಿಸಿರುವುದಿಲ್ಲ. ಹಾಗಾಗಿ ನಾನು ನನ್ನ ಕೆಲಸಗಳನ್ನು ಬಿಟ್ಟು ತಾಲ್ಲೂಕು ಕಛೇರಿ ಕೆಲಸಗಳಲ್ಲಿ ತೊಡಗಿಕೊಂಡಿರಲಿಲ್ಲ. ಆದರೆ ಇದೇ ಸಮಯದಲ್ಲಿ ಸೊರಬ ತಾಲ್ಲೂಕಿನ ಚಂದ್ರಗುತ್ತಿ ಜಾತ್ರೆಯ ಬಗ್ಗೆ ಸರ್ಕಾರ ಮತ್ತು ಜಿಲ್ಲಾಡಳಿತದಿಂದ ವಿಶೇಷ ಸಭೆ ನಡೆಸಿ ಅಲ್ಲಿ ನಡೆಯುತ್ತಿದ್ದ ಬೆತ್ತಲೆ ಸೇವೆಯ ಆಚರಣೆಯನ್ನು ತಡೆಯಲು ಸೂಚನೆ ನೀಡಿತ್ತು.
ಬೆತ್ತಲೆಸೇವೆಯ ಈ ಅನಾಗರಿಕ ಆಚರಣೆಯ ಬಗ್ಗೆ ಪ್ರೊ. ಬಿ. ಕೃಷ್ಣಪ್ಪನವರು, ನಾನು ಸೊರಬಕ್ಕೆ ಬರುವ ಒಂದು ವರ್ಷ ಮುಂಚಿನಿAದ ಬೆತ್ತಲೆ ಸೇವೆಯ ಆಚರಣೆ ಒಂದು ಅನಾಗರಿಕ ಆಚರಣೆ ಎನ್ನುವ ಬಗ್ಗೆ ಅನೇಕ ಲೇಖನಗಳನ್ನು ಬರೆದು ಇದನ್ನು ತಡೆಗಟ್ಟಬೇಕೆಂದು ಅಂದಿನ ರಾಜ್ಯ ಸರ್ಕಾರಕ್ಕೆ ಆಗ್ರಹಿಸುವ ಪತ್ರ ಬರೆದು ಈ ವಿಷಯಗಳೆಲ್ಲಾ ದಿನಪತ್ರಿಕೆ ಮತ್ತು ಆಗ ಜಾಣಜಾಣೆಯರ ಪತ್ರಿಕೆ ಎಂದು ಹೇಳಿ ತರುತ್ತಿದ್ದ ಲಂಕೇಶ್ ಪತ್ರಿಕೆಯಲ್ಲೂ ಪ್ರಕಟಗೊಂಡಿತ್ತು.
1986ರ ಜಾತ್ರೆ ಸಮಯದಲ್ಲಿ ಜಿಲ್ಲಾಧಿಕಾರಿಗಳಾಗಿದ್ದ ತಂಗರಾಜ್ ಅವರು ಕಂದಾಯ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಸಭೆ ನಡೆಸಿ ಬೆತ್ತಲೆ ಹೋಗುವ ಜನರನ್ನು ಜಾಗೃತಗೊಳಿಸಿ ತಡೆಯಬೇಕೆಂದು ಜಿಲ್ಲಾಡಳಿತ ತೀರ್ಮಾನಿಸಿತ್ತು. ಕೃಷ್ಣಪ್ಪನವರ ಡಿಎಸ್‌ಎಸ್ ಸಂಘಟನೆಯ ಹೋರಾಟದ ಜೊತೆಗೆ ಶಿವಮೊಗ್ಗ-ಸಾಗರ-ಸೊರಬದಲ್ಲಿನ ಎಲ್ಲ ಪ್ರಗತಿಪರ ಸಂಘಟನೆಗಳು, ಕನ್ನಡ ಸಂಘ, ಪ್ರಗತಿಪರ ಮಹಿಳಾ ಲೇಖಕಿಯರ ಸಂಘಟನೆಗಳು ಕೈಜೋಡಿಸಿದ್ದವು. ಭದ್ರಾವತಿಯಿಂದ ಪ್ರೊ. ಚಂದ್ರಶೇಖರಯ್ಯ, ಡಿಎಸ್‌ಎಸ್ ಚಂದ್ರು, ತೋರಣಗಟ್ಟಿ ಚಂದ್ರಶೇಖರ್, ಬಿದರಳ್ಳಿ ನರಸಿಂಹಮೂರ್ತಿ, ಇನ್ನೂ ಅನೇಕ ಪ್ರಗತಿಪರ ಹೋರಾಟಗಾರರು ಭಾಗವಹಿಸಿದ್ದರು.
ನಾನು ಸರ್ಕಾರದ ಭಾಗವಾಗಿ ಸಂಜೆ ಹಳ್ಳಿಗಳಿಗೆ ಕರಪತ್ರಗಳನ್ನು ಹಂಚಿ, ‘ಯಾವ ದೇವರಿಗೂ ಬೆತ್ತಲೆ ಪೂಜೆ ಸಲ್ಲಿಸುವುದು ಇಷ್ಟವಾಗದು. ಇದೆಲ್ಲ ಹಿಂದುಳಿದವರನ್ನೂ, ದಲಿತರನ್ನೂ ಶೋಷಣೆ ಮಾಡುವ ಕ್ರೂರ ಪದ್ಧತಿ, ಇವನ್ನು ನಿವಾರಣೆಮಾಡಬೇಕೆಂದು ಭಾಷಣ ಮಾಡುತ್ತಾ ತಾಲ್ಲೂಕು ಕಛೇರಿಯ ಸಿಬ್ಬಂದಿಯನ್ನು ಹಲವು ತಂಡಗಳಾಗಿ ಮಾಡಿಕೊಂಡು ಹಳ್ಳಿಗಳಲ್ಲಿ ಪ್ರಚಾರ ಮಾಡುತ್ತಿದ್ದೆವು. ಸರ್ಕಾರದ ನಿರ್ದೇಶನವಿದ್ದುದರ ಜೊತೆಗೆ ಈ ವಿಷಯಗಳು ನನಗೆ ಇಷ್ಟವಾದ ಕೆಲಸವಾಗಿದ್ದರಿಂದ ಹೆಚ್ಚಿನ ಆಸಕ್ತಿಯಿಂದ ಬೆತ್ತಲೆ ಸೇವೆ ವಿರುದ್ಧ ಪ್ರಚಾರ ಮಾಡುತ್ತಿದ್ದೆವು. ಹೀಗೆ ಎಲ್ಲಾ ಕಡೆ ಪ್ರಚಾರ ಮಾಡಿದ ಮೇಲೆ ಪ್ರೊ.ಬಿ.ಕೆ ಮತ್ತು ಶಿವಪ್ಪ ಮಾಸ್ತರು ಇನ್ನು ಕೆಲವು ಗೆಳೆಯರು ನಮ್ಮಲ್ಲಿ ಊಟ ಉಪಚಾರ ಮಾಡಿ ಹೋಗುತ್ತಿದ್ದರು. ಇದರ ಸಂಪೂರ್ಣ ಘಟನೆಯ ವಿವರವನ್ನು ಈಗಾಗಲೇ ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್ 2010ರಲ್ಲಿ ಪ್ರಕಟಿಸಿರುವ ‘ಬಯಲು.. ಬೆತ್ತಲೆ..ಚಂದ್ರಗುತ್ತಿ’ ಎಂಬ ಪುಸ್ತಕದಲ್ಲಿನ ಮಾಹಿತಿಯನ್ನು ಇಲ್ಲಿ ಮುಂದುವರೆಸಲಾಗಿದೆ.
ಬೆತ್ತಲೆ ಸೇವೆ ನಡೆಯುವ ಒಂದು ವಾರ ಮುಂಚಿತವಾಗಿಯೇ ಕೃಷ್ಣಪ್ಪನವರ ನೇತೃತ್ವದಲ್ಲಿ ಡಿ.ಎಸ್.ಎಸ್. ಕಾರ್ಯಕರ್ತರು ಮತ್ತು ಪ್ರಗತಿಪರ ಸಂಘಟನೆಗಳೊಡನೆ ಸಂಜೆ ಹಳ್ಳಿಗಳಿಗೆ ಹೋಗಿ ಭಾಷಣಗಳ ಮುಖಾಂತರ ಬೆತ್ತಲೆ ಸೇವೆಯನ್ನು ವಿರೋಧಿಸುವ ಪ್ರಚಾರದಲ್ಲಿ ನಾನೂ ತೊಡಗಿಸಿಕೊಂಡಿದ್ದೆ. ಚಂದ್ರಗುತ್ತಿ ದೇವಸ್ಥಾನ ಸಮಿತಿಯ ಸಂಚಾಲಕರಾಗಿದ್ದ ಈಡೂರು ಪರಶುರಾಮಪ್ಪ ಮತ್ತು ಅವರ ಸ್ನೇಹಿತರು ವೈಯಕ್ತಿಕವಾಗಿ ಬೆತ್ತಲೆ ಸೇವೆಯನ್ನು ವಿರೋಧಿಸುವ ಹೋರಾಟಕ್ಕೆ ನಮ್ಮ ಬಳಿ ಸಮ್ಮತಿಸಿದ್ದರೂ ಇದನ್ನು ವಿರೋಧಿಸುವುದು ಹೇಗೆ ಎಂಬುದರ ಬಗ್ಗೆ ಅವರಲ್ಲಿ ದುಗುಡ ತುಂಬಿತ್ತು. ಆಗಿನ ಜನಪ್ರತಿನಿಧಿಗಳು ಯಾರೂ ಈ ಬಗ್ಗೆ ಚಕಾರವೆತ್ತುತ್ತಿರಲಿಲ್ಲ. ಇದೊಂದು ಅತಿ ಸೂಕ್ಷ್ಮ ವಿಚಾರವೆಂದೂ- ಏನಾದರೂ ಮಾತನಾಡಿದರೆ ಜನರಿಂದ ದೂರ ಆಗುವ ಆತಂಕ ರಾಜಕಾರಣಿಗಳ ಒಳ ಇಂಗಿತವಾಗಿತ್ತು. ಚುನಾವಣಾ ರಾಜಕೀಯದ ದೃಷ್ಟಿಯಿಂದ ಅವರಿಗೆ ಇದೆಲ್ಲ ಬೇಡದ ವಿಚಾರವಾಗಿತ್ತು.
ಈ ಹಿನ್ನೆಲೆಯಲ್ಲಿ ಬೆತ್ತಲೆಸೇವೆ ನಡೆಸುವ ಮೊದಲ ದಿನ ಸರ್ಕಾರವು ಸೂಚಿಸಿದಂತೆ ಡಿ.ಎಸ್.ಎಸ್. ಮತ್ತು ಇತರೆ ಸಂಘಟನೆಯ ಕಾರ್ಯಕರ್ತರು- ಬೆತ್ತಲೆ ಹೋಗುತ್ತಿದ್ದವರನ್ನು ತಡೆದು ಅವರಿಗಾಗಿ ಹೊಸ ಬಟ್ಟೆ ತಂದಿದ್ದ ಮಹಿಳಾ ಕಾರ್ಯಕರ್ತರು ಅವರಿಗೆ ಸುತ್ತಿ- ಕಳುಹಿಸುತ್ತಿದ್ದರು. ಅವರು ಸುತ್ತಿಕೊಂಡು ಮುಂದೆ ಹೋಗುತ್ತಿದ್ದಾಗ ಮತ್ತೆ ಬಿಚ್ಚಿಕೊಂಡು ಓಡುತ್ತಿದ್ದುದು ನಡೆಯುತ್ತಲೂ ಇತ್ತು. ಮೊದಲ ದಿನದ ಈ ಕರ‍್ಯ ಸಂಪೂರ್ಣವಾಗಿ ಶಾಂತಿಯುತವಾಗಿ ನಡೆಯಿತು. ಸರ್ಕಾರ ಮತ್ತು ಡಿಎಸ್‌ಎಸ್ ಕರ‍್ಯಕರ್ತರು ಕೂಡ ಇದು ಸಂಪೂರ್ಣ ಯಶಸ್ವಿಯಾಯಿತೆಂದೇ ಭಾವಿಸಿದೆವು.
ಆದರೆ ಎರಡನೇ ದಿನ ಅಂದರೆ, 20-3-1986ರಂದು ಬೆಳಿಗ್ಗೆಯಿಂದಲೇ ಜನಸಾಗರ ವಿವಿಧ ಕಡೆಗಳಿಂದ ಹರಿದು ಬರುತ್ತಿತ್ತು. ನಾನು ನನ್ನ ಸಿಬ್ಬಂದಿಯೊಡನೆ ಮಾಮೂಲಿನಂತೆ ಜಾತ್ರೆ ನಡೆಯುವ ಸ್ಥಳಕ್ಕೆ ಹೋಗುತ್ತಿದ್ದಾಗ ಬೆತ್ತಲೆ ಸೇವೆ ಮಾಡೋ ಹೆಂಗಸಿನ ಫೋಟೋ ತೆಗೆಯುತ್ತಿದ್ದ ಇನ್ನೊಬ್ಬ ಮಹಿಳಾ ಫೋಟೋಗ್ರಾಫರ್‌ನನ್ನು ನಮ್ಮ ಎದುರಿಗೆ ಅಡ್ಡಹಾಕಿ ಅವಳು ತೆಗೆದಿದ್ದ ಫೋಟೋ ರೀಲುಗಳನ್ನು ಹೊರತೆಗೆದು ಅವಳನ್ನು ನಮ್ಮ ಎದುರಿಗೆ ಥಳಿಸಲು ಮುಂದಾಗಿ, ಅವಳನ್ನು ನಗ್ನಗೊಳಿಸಿದರು. ಆಗ ಜೋಗಿತಿಯರನ್ನು ನಾನು ತಡೆಯಲು ಹೋದಾಗ ವಾಗ್ವಾದ-ತಳ್ಳಾಟ ಪ್ರಾರಂಭವಾಯಿತು.
ಸರ್ಕಾರ ಮತ್ತು ವಿವಿಧ ಸಂಘಟನೆಗಳನ್ನು ಜೋಗತಿಯರು ಎದುರು ಹಾಕಿಕೊಳ್ಳುವುದನ್ನು ಊಹಿಸದಿದ್ದ ನಮಗೆ ಇದೆಲ್ಲ ಅನಿರೀಕ್ಷಿತ ಬೆಳವಣಿಗೆಯಾಗಿತ್ತು. ಜನರು ಅಲ್ಲಿ ಡಿ.ಎಸ್.ಎಸ್. ಕಾರ್ಯಕರ್ತರನ್ನ ಹೊಡೆದರಂತೆ. ಇಲ್ಲಿ ಬಟ್ಟೆ ಬಿಚ್ಚಿದರಂತೆ, ಎಂಬ ವದಂತಿಗಳನ್ನ ಹಬ್ಬಿಸಿ ಸರ್ಕಾರದ ವ್ಯವಸ್ಥೆಯಲ್ಲಾಗಲೀ, ಡಿಎಸ್ ಎಸ್ ಮತ್ತಿತರ ಹೋರಾಟಗಾರರಾಗಲೀ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಏನೂ ತಿಳಿಯದಂತಾಗಿದ್ದರು. ನನ್ನೊಡನೆ ಇದ್ದ ಸಿಬ್ಬಂದಿ ಚದುರಿ ಹೋಗಿ ನಾನು ರಕ್ಷಣೆಗಾಗಿ ಪೋಲೀಸ್ ವ್ಯಾನಿಗೆ ಹತ್ತಿಕೊಂಡಿದ್ದೆ. ನಾವು ತಂದಿದ್ದ ಜೀಪಿಗೆ ಬೆಂಕಿ ಹಚ್ಚಿಟ್ಟು ಜೋಗತಿಯರು ಅಟ್ಟಹಾಸ ಮೆರೆದಿದ್ದರು. ನಾವು ವ್ಯಾನಿನ ಒಳಗೆ ಇದ್ದು, ಇನ್ನು ಮುಂದೆ ಏನಾಗುವುದೋ ಅನ್ನೋ ಆತಂಕದಲ್ಲಿದ್ದಾಗ ನನಗೆ ಪರಿಚಿತ ವ್ಯಕ್ತಿಯೊಬ್ಬ ಓಡಿಬಂದು ನನ್ನ ಪರಿಚಯ ಗುರುತು ಸಿಗದಂತೆ ಭಂಡಾರ ಹಾಕಿ ಅಲ್ಲಿಂದ ತನ್ನ ಮನೆಗೆ ಕರೆದುಕೊಂಡು ಹೋಗಿ ತನ್ನ ಪಂಚೆ ನೀಡಿ ಪ್ಯಾಂಟ್ ಷರಟು ತೆಗೆಸಿ ನಾನು ಯಾರೋ ಅನ್ನೋ ರೀತಿ ಮಾಡಿಕೊಂಡು ತನ್ನ ರಾಜದೂತ್ ಮೋಟಾರ್‌ಬೈಕ್‌ನಲ್ಲಿ ಸೊರಬಕ್ಕೆ ತಂದುಬಿಟ್ಟರು.
ಅಲ್ಲಿಂದ ಎಲ್ಲರಿಗೂ ಫೋನ್ ಮಾಡಿ ಆಗಿದ್ದ ಅನಾಹುತವನ್ನು ತಿಳಿಸಿದೆ. ಇದು ಸುಮಾರು ಮಧ್ಯಾಹ್ನ 3.00 ಘಂಟೆಯ ತನಕ ಜೋಗತಿಯರ ಅಟ್ಟಹಾಸಕ್ಕೆ ಗುರಿಯಾದ ಡಿ.ಎಸ್.ಎಸ್. ಮತ್ತು ಇತರೆ ಕರ‍್ಯಕರ್ತರು ತಮಗೆ ಸಿಕ್ಕ ಸಿಕ್ಕ ಕಡೆ ಚದುರಿ ಪ್ರಾಣ ಉಳಿಸಿಕೊಳ್ಳಲು ತಪ್ಪಿಸಿಕೊಂಡು ಪರಾರಿಯಾದರು. ಈ ಸಂದರ್ಭದಲ್ಲಿ ಕೃಷ್ಣಪ್ಪನವರೇನಾದರೂ ಈ ಜೋಗತಿಯರ ಕೈಗೆ ಸಿಕ್ಕಿದ್ದರೆ ಬಹುಶಃ ಅಂದೇ ಅವರ ಕೊಲೆ ಮಾಡಲು ಹೇಸುತ್ತಿರಲಿಲ್ಲ.
ಸುಮಾರು 4.00 ಘಂಟೆಯ ಸುಮಾರಿಗೆ ಹೆಚ್ಚಿನ ಪೋಲೀಸ್ ಬಂದು ಇಡೀ ಜೋಗತಿಯರ ಸಮೂಹವನ್ನು ಬೆತ್ತಲೆಯಾಗಿಯೇ ಅರೆಸ್ಟ್ ಮಾಡಿ ಸೊರಬ ಪೋಲೀಸ್ ಠಾಣೆಯಲ್ಲಿ ಕೂಡಿ ಹಾಕಿದ್ದರು. ಸುಮಾರು 5-6 ಘಂಟೆಯ ಸುಮಾರಿಗೆ ಪೋಲೀಸ್ ಬಂದು ಇವರಲ್ಲಿ ಯಾರು ನಿಮ್ಮ ಮೇಲೆ ಹಲ್ಲೆ ಮಾಡಿದರು ಗುರ್ತಿಸಿ ಎಂದು ಹೇಳಿದರು.
ಪೊಲೀಸರೊಡನೆ ಹೋಗಿ ನೋಡುತ್ತೇನೆ, ಅದೊಂದು ಭಯಂಕರ ದೃಶ್ಯ. ಪೀಚಲು ದೇಹಗಳ ಅನಾರೋಗ್ಯವೇ ಮೂರ್ತಿವೆತ್ತ- ಕುಡಿತದ ಅಮಲಿನಲ್ಲಿದ್ದ ಅವರಿಗೆ ತಾವೇನು ಮಾಡಿದ್ದೆವು ಅನ್ನುವುದೇ ಅವರಿಗೆ ಗೊತ್ತಿರಲಿಲ್ಲ. ಯಾವುದೋ ಕಾಡಿನ ಪ್ರಾಣಿಗಳಂತೆ ಪಿಳಿಪಿಳಿ ಕಣ್ಣು ಬಿಡುತ್ತಾ ಆ ರೂಮಿಗೆ ಬಂದವರನ್ನು ನೋಡುತ್ತಿದ್ದರು. ನನಗೆ `ಯಾರು ಏನು ಮಾಡಿದರು ಎನ್ನುವುದನ್ನ ಯಾರ ಮೇಲೆ ಹೇಳಲಿ’ ಎನ್ನುತ್ತಾ ಈಚೆಗೆ ಬಂದೆ. ಆದರೆ ಈ ಜೋಗತಿಯರು ಅಂತಹ ಸ್ಥಿತಿಯಲ್ಲೂ ತಮ್ಮ ಬಳಿ ಬೆಳಗಿನಿಂದ ದೋಚಿದ ಒಡವೆಗಳು ಮತ್ತು ಹಣ ಇರುವುದು ಸಣ್ಣ ಸಣ್ಣ ಚೀಲಗಳಲ್ಲಿರುವುದು ಪರಿಶೀಲಿಸಿದಾಗ ಕಂಡು ಬಂತು.
ಈ ಘಟನೆಯ ನಂತರ ಆದ ಮಾರನೇ ದಿನ ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪ್ರಮುಖ ಸುದ್ದಿಯಾಗಿ ವರದಿಗಳು ಪ್ರಕಟಗೊಂಡವು. ನಾನು ಆತಂಕದಿAದ ನನ್ನ ಹೆಂಡತಿಗೆ ‘I ಚಿm Sಚಿಜಿe’ ಎಂದು ತಂತಿ ನೀಡಿದಾಗ ಅವಳು ಗಲಿಬಿಲಿಗೊಂಡು ಫೋನ್ ಮಾಡಿದಳು. ಇತ್ತ ನನ್ನ ಹಳ್ಳಿ ಹನಗವಾಡಿಯಿಂದ ಬಂದಿದ್ದ ಜೋಗತಿಯರಿಂದಲೇ ರೋಚಕವಾಗಿ ತಲುಪಿದ್ದ ಸುದ್ದಿಯಿಂದ, ವರದಿಗಳನ್ನು ಕೇಳಿಕೊಂಡ ನಮ್ಮ ಊರಿನ ಜನರು ಮತ್ತು ನಮ್ಮ ಅವ್ವ, ಅಣ್ಣ-ತಮ್ಮಂದಿರು ಮತ್ತು ಮಿತ್ರರ ದಂಡು ಸೊರಬಕ್ಕೆ ನನ್ನನ್ನು ನೋಡಲು ಬಂದಿದ್ದರು. ಅವರು ನಾನು ಮಾಮೂಲಿನಂತೆ ಇದ್ದುದನ್ನು ನೋಡಿ ನೆಮ್ಮದಿಗೊಂಡರು. ನನ್ನ ತಮ್ಮನೊಬ್ಬ ನಿನ್ನನ್ನು ಆಸ್ಪತ್ರೆಯಲ್ಲಿ ಬ್ಯಾಂಡೇಜ್ ಸಮೇತ ನೋಡುವ ಕಲ್ಪನೆಯಲ್ಲಿಯೆ ಓಡಿ ಬಂದೆವು ಎಂದಾಗ ನಾನು ಕೂದಲೆಳೆಯಲ್ಲಿ ಸಾವು ತಪ್ಪಿದ್ದನ್ನು ವಿವರಿಸಲಿಲ್ಲ.
ನಾನು ತಹಶೀಲ್ದಾರನಾಗಿ ಹೊಸದರಲ್ಲಿ ಆಗಿದ್ದ ಈ ಘಟನೆ ಇಂದಿಗೂ ನನಗೆ ಎಚ್ಚರಿಕೆಯ ಮಾರ್ಗ ಸೂಚಿಯಾಗಿದೆ. ಒಂದು ವಿಷಾದದ ಸಂಗತಿಯೆAದರೆ ನಮ್ಮ ಪೋಲೀಸರು ಇಂದಿಗೂ ಯಥಾಸ್ಥಿತಿಯ ರಕ್ಷಕರಾಗಿಯೇ ಉಳಿದಿದ್ದಾರೆ. ಅವರನ್ನು ಬದಲಾಗುತ್ತಿರುವ ಕಾಲಮಾನದ ಜೊತೆಗೆ ಬದಲಾವಣೆಯ ರೂವಾರಿಗಳಾಗುವಂತೆ ತರಬೇತಿ ನೀಡುವಲ್ಲಿ ಸರ್ಕಾರವು ಒತ್ತು ನೀಡುವುದು ಇಂದಿನ ಅಗತ್ಯವಾಗಿದೆ.
ಈ ಘಟನೆಯ ನಂತರದ ಆದ ಬೆಳವಣಿಗೆಯ ಹಿನ್ನೆಲೆಯಲ್ಲಿ ಒಂದು ಮಹತ್ತರ ಬದಲಾವಣೆ ಆ ಪ್ರದೇಶದಲ್ಲಿ ಆಗಿದೆ. ಬೆತ್ತಲೆ ಸೇವೆಯನ್ನು ಸರ್ಕಾರ ನಿಷೇಧಿಸಿದೆ. ಅದರೊಟ್ಟಿಗೆ ಅನೇಕ ಸಾಮಾಜಿಕ ಅನಿಷ್ಟಗಳ ಬಗ್ಗೆ ಸಾಮಾನ್ಯ ಜನರ ಮಧ್ಯದಲ್ಲಿ ಚರ್ಚೆಗಳಾಗಿವೆ. ಕೃಷ್ಣಪ್ಪನವರ ಹೋರಾಟ ಹೊಸ ದಿಕ್ಕಿನೆಡೆಗೆ ಸಮಾಜವನ್ನು ಮುಖ ಮಾಡಿಸಿದೆ. ಇದು ಅವರ ಆತ್ಮಕ್ಕೆ ನೆಮ್ಮದಿಯನ್ನು ನೀಡಿದೆ ಎಂದರೆ ತಪ್ಪಾಗಲಾರದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ಚನ್ನಗಿರಿ |ಶ್ರೀ ಶಿವಲಿಂಗೇಶ್ವರ ಸ್ವಾಮಿ ಪ್ರಥಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ
-
ದಿನದ ಸುದ್ದಿ6 days ago
ವಿಶಾಖಪಟ್ಟಣಂನಲ್ಲಿ ಆಲ್ ಇಂಡಿಯ ಕ್ರೀಡಾಕೂಟಕ್ಕೆ ಪೇದೆ ಕೆ.ಆರ್.ಹುಲಿರಾಜ ಆಯ್ಕೆ
-
ದಿನದ ಸುದ್ದಿ3 days ago
ದಾವಣಗೆರೆ | 14 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪ್ರೊ.ಎ.ಬಿ.ರಾಮಚಂದ್ರಪ್ಪ ಆಯ್ಕೆ
-
ದಿನದ ಸುದ್ದಿ1 day ago
ಮಾಜಿ ಸಿಎಂ ಎಸ್ ಎಂ ಕೃಷ್ಣ ನಿಧನ ; ನಾಳೆ ಸರ್ಕಾರಿ ರಜೆ ಘೋಷಣೆ