ರಾಜಕೀಯ
ಲೋಕಸಭೆಗೆ ಪ್ರಜಾಕೀಯದಿಂದ ಎಲ್ಲಕ್ಷೇತ್ರಗಳಲ್ಲೂ ಸ್ಪರ್ಧೆ : ನಟ ಉಪೇಂದ್ರ
ಸುದ್ದಿದಿನ, ಬೆಂಗಳೂರು : ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ಸ್ಥಾಪಿಸಿರುವ ಯುಪಿಪಿ ಪಕ್ಷದಿಂದ ಈಬಾರಿ ಲೋಕಸಭೆಗೆ ಎಲ್ಲ 28 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸ್ಥಾಪಕ ಉಪೇಂದ್ರ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ ಯುಪಿಪಿ ಪಕ್ಷದ ಅಭ್ಯರ್ಥಿಗೆ ಸಾತ್ ನೀಡಲು ಬಂದಾಗ ಮಾತನಾಡಿದ ಉಪೇಂದ್ರ ನಮ್ಮದು ಜನಸಾಮಾನ್ಯರ ಪಕ್ಷ ಎಂದರು. ಈಬಾರಿ ಚುನಾವಣೆಯಲ್ಲಿ ರಾಜ್ಯದ 28ಕ್ಷೇತ್ರಗಳಿಗೂ ನಮ್ಮ ಪಕ್ಷದಿಂದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಕೂಡ ಉಪೇಂದ್ರ ತಿಳಿಸಿದರು. ಜೊತೆಗೆ ಈಗಾಗಲೇ ಹದಿನಾಲ್ಕು ಅಭ್ಯರ್ಥಿಗಳು ಇಂದು ಬೇರೆ ಬೇರೆ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸುತ್ತಿದ್ದಾರೆ, ಇಷ್ಟೇ ಅಲ್ಲದೇ ಎರಡನೇ ಹಂತದ ಚುನಾವಣೆಯಿರುವ ಕ್ಷೇತ್ರಗಳಿಗೂ ನಾವು ಅಭ್ಯರ್ಥಿಗಳನ್ನು ನಿಲ್ಲಿಸಲಿದ್ದೇವೆ ಎಂದರು.
ಇನ್ನು ಮಂಡ್ಯದಲ್ಲಿ ಸುಮಲತ ಹಾಗೂ ನಿಖಿಲ್ ಪರ ಉಪೇಂದ್ರ ಪ್ರಚಾರ ಮಾಡ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಒಂದು ಪಕ್ಷದಲ್ಲಿದ್ದು ಮತ್ತೊಂದು ಪಕ್ಷ ಅಥವಾ ವ್ಯಕ್ತಿಯ ಪರ ಪ್ರಚಾರಕ್ಕೆ ಹೋಗುವುದು ಹೇಗೆ ಸಾಧ್ಯ ಎಂದರು. ಈ ಮೂಲಕ ತಾನು ಪ್ರಕಾಶ್ ರೈ, ನಿಖಿಲ್, ಸುಮಲತಾ ಸೇರಿದಂತೆ ಯಾರ ಪರ ಪ್ರಚಾರಕ್ಕೂ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಈಜುಕೊಳದಲ್ಲಿ ಸಾವು ; ಪರಿಹಾರಕ್ಕೆ ಆದೇಶ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮೊಹಮ್ಮದ್ ಮುಕ್ತಿಯಾರ್ ಬಿನ್ ಎಸ್. ಆರ್ ಸಮೀವುಲ್ಲ ಇವರ ಮಗ ಮೊಹಮ್ಮದ್ ಮುಬಾರಕ್ @ ಮುಬಾರಕ್ ಈತ ಮತ್ತು ನಿಸಾರ್ ಅಹಮದ್ ಬಿನ್ ಮಹಮ್ಮದ್ ಅಬಿದ್ ಮತ್ತು ಇನ್ನೊಬ್ಬರು, ಬೇತೂರು ರೋಡ್, ಸಿದ್ಧರಾಮೇಶ್ವರ ಬಡಾವಣೆ ಇವರು ತಮ್ಮ ಮಗ ತಾಜು @ ತಾಜುದ್ದೀನ್ ಇವರು ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಾಡುವ ಸಂಧರ್ಭದಲ್ಲಿ ಮರಣ ಹೊಂದಿರುತ್ತಾರೆ.
ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 4ನೇ ಎದುರುದಾರರಾದ ಸದಾನಂದ ವಗಲೆ ಹಾಗೂ 1 ರಿಂದ 3ನೇ ಎದುರುದಾರರ ವಿರುದ್ಧ, ತಮ್ಮ ಸೇವೆಯಲ್ಲಿನ ನಿರ್ಲಕ್ಷತೆಯಿಂದ ಘಟನೆ ಸಂಭವಿಸಿದ್ದು ಎಂಬ ತೀರ್ಮಾನಕ್ಕೆ ಆಯೋಗವು ಬಂದಿದ್ದು, ಈಗಾಗಲೇ, 1 ರಿಂದ 3ನೇ ಎದುರುದಾರರು, ದೂರುದಾರರಿಗೆ ರೂ.500,000/- ಲಕ್ಷವನ್ನು ಪರಿಹಾರವಾಗಿ ಈಗಾಗಲೆ ಕೊಟ್ಟಿದ್ದು, ಆದ್ದರಿಂದ 1 ರಿಂದ 3ನೇ ಎದುರುದಾರರ ವಿರುದ್ಧ ಪ್ರಕರಣವನ್ನು ವಜಾ ಮಾಡಿದೆ.
4ನೇ ಎದುರುದಾರರಾದ ಸದಾನಂದ ವಗಲೆ, ಕಾಂಟ್ರಕ್ಟರ್, ಇವರು ಈ ಎರಡು ಪ್ರಕರಣದ ದೂರುದಾರರಿಗೆ ಆದೇಶಿಸಿದ ದಿನದಿಂದ ಒಂದು ತಿಂಗಳೊಳಗೆ ಆದೇಶದ ಪ್ರಕಾರ ಪಾವತಿಸುವಂತೆ ಮೇ.19 ರಂದು ಆದೇಶಿಸಿ ರೂ. 5 ಲಕ್ಷಗಳನ್ನು ಶೇಕಡಾ 6 ವಾರ್ಷಿಕ ಬಡ್ಡಿಯೊಂದಿಗೆ ಹಾಗೂ ದೂರು ಖರ್ಚು ಹಾಗೂ ಮಾನಸಿಕ ಯಾತನೆಗೆ ತಲಾ ರೂ.5 ಸಾವಿರದಂತೆ, ಒಟ್ಟು ರೂ.10,000/-ಗಳನ್ನು ಪರಿಹಾರ ರೂಪವಾಗಿ ದೂರುದಾರರಿಗೆ ನೀಡುವಂತೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪ್ರತ್ಯೇಕವಾಗಿ ಪಾವತಿಸುವಂತೆ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ ಹೆಚ್.ಎನ್.ಮೀನಾ ಮತ್ತು ಸದಸ್ಯರಾದ ಸಿ.ಎಸ್. ತ್ಯಾಗರಾಜನ್ ಆದೇಶಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಲೋಕಾಯುಕ್ತ ಪೋಲಿಸ್ ಇನ್ಸ್‌ಪೆಕ್ಟರ್ ಪ್ರಭು ಬಿ. ಸೂರಿನ ಅವರಿಂದ ಕಾನೂನು ಅರಿವು
ಸುದ್ದಿದಿನ,ಬನ್ನಿಕೋಡು: ಮಾ.ಸ.ಬ. ಕಾಲೇಜು, ದಾವಣಗೆರೆ ಹಾಗೂ ಬನ್ನಿಕೋಡು ಗ್ರಾಮದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಎನ್.ಎಸ್.ಎಸ್. (ರಾಷ್ಟ್ರೀಯ ಸೇವಾ ಯೋಜನೆ) ವಿಶೇಷ ಶಿಬಿರದ ಅಧ್ಯಕ್ಷತೆಯನ್ನು ಮಾ.ಸ.ಬ. ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವಿಜಯಕುಮಾರ್ ಎ.ಬಿ. ವಹಿಸಿದ್ದರು.
ಮುಖ್ಯ ಉಪನ್ಯಾಸಕರಾಗಿ ಕರ್ನಾಟಕ ಲೋಕಾಯುಕ್ತ, ದಾವಣಗೆರೆ ಇವರ ಪೋಲಿಸ್ ಇನ್ಸ್‌ಪೆಕ್ಟರ್ ಶ್ರೀ ಪ್ರಭು ಬಿ. ಸೂರಿನ ಭಾಗವಹಿಸಿ “ಕರ್ನಾಟಕ ಲೋಕಾಯುಕ್ತ ಕಾಯ್ದೆ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆ” ಕುರಿತು ಸಮಗ್ರ ಮಾಹಿತಿ ನೀಡಿದರು. ಕರ್ನಾಟಕ ಲೋಕಾಯುಕ್ತದ ಸ್ಥಾಪನೆ ಮತ್ತು ಹಿನ್ನೆಲೆ, ಸಂಸ್ಥೆಯ ವ್ಯಾಪ್ತಿ, ದೂರು ಸಲ್ಲಿಸುವ ವಿಧಾನ, ವಿಚಾರಣೆ ಕ್ರಮ, ಭ್ರಷ್ಟಾಚಾರ ತಡೆ ಕಾಯ್ದೆಯ ಪ್ರಮುಖ ಅಂಶಗಳು, ಲೋಕಾಯುಕ್ತ ಸಂಸ್ಥೆಯ ವೈಶಿಷ್ಟ್ಯತೆಗಳು, ಹಗರಣಗಳ ತನಿಖಾ ವಿಧಾನ ಹಾಗೂ ಸರ್ಕಾರಿ ಹಣದ ದುರುಪಯೋಗ ತಡೆ ಕ್ರಮಗಳ ಬಗ್ಗೆ ವಿವರಿಸಿದರು. ಉಪನ್ಯಾಸದ ಅಂತ್ಯದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಜಿಲ್ಲಾ ನೋಡಲ್ ಅಧಿಕಾರಿಗಳಾದ ಡಾ. ಹೆಚ್.ಆರ್. ತಿಪ್ಪೇಸ್ವಾಮಿ ಅವರು ಯುವಜನತೆ ಹಾಗೂ ಸಾಮಾಜಿಕ ಸಾಮರಸ್ಯ ಕುರಿತು ಪ್ರೇರಣಾದಾಯಕ ಸಂದೇಶ ನೀಡಿದರು.
ಶಿಬಿರಾಧಿಕಾರಿಗಳಾದ ಡಾ. ರಾಘವೇಂದ್ರ ಮತ್ತು ಡಾ. ಪ್ರವೀಣಕುಮಾರ್, ದೈಹಿಕ ನಿರ್ದೇಶಕರಾದ ಧನಂಜಯ್, ಗ್ರಾಮದವರಾದ ಬಸವರಾಜ್, ಹಾಲಪ್ಪ, ಮಹದೇವಪ್ಪ, ಕುರಿಯರ್ ದುರುಗಪ್ಪ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಕಾನೂನು ಜಾಗೃತಿ ಹಾಗೂ ಭ್ರಷ್ಟಾಚಾರ ವಿರೋಧಿ ಮನೋಭಾವ ಬೆಳೆಸುವಲ್ಲಿ ಯಶಸ್ವಿಯಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಶಿಕ್ಷಕರು, ವಾರ್ಡನ್‌ಗಳಿಗೆ ಪೋಕ್ಸೊ ಕಾಯ್ದೆ ತರಬೇತಿ ನೀಡಿ
ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ‘ಚೈಲ್ಡ್ ಹೆಲ್ಪ್‌ಲೈನ್’ ಸಂಖ್ಯೆಯನ್ನು ಪ್ರದರ್ಶಿಸಬೇಕು ಹಾಗೂ ಶಿಕ್ಷಕರು ಮತ್ತು ವಾರ್ಡನ್‌ಗಳಿಗೆ ಪೋಕ್ಸೊ ಕಾಯ್ದೆ, ಮಕ್ಕಳ ಹಕ್ಕುಗಳು ಹಾಗೂ ಆನ್‌ಲೈನ್ ವಂಚನೆಗಳ ಕುರಿತು ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ. ಶಮ್ಲಾ ಇಕ್ಬಾಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಹಮ್ಮಿಕೊಳ್ಳಲಾಗಿದ್ದ ದಾವಣಗೆರೆ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ತಂತ್ರಜ್ಞಾನ ಆಧಾರಿತ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ‘ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್’ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಸಭೆಯಲ್ಲಿದ್ದ ಜಿಲ್ಲಾಧಿಕಾರಿಗಳಾದ ಗಂಗಾಧರಸ್ವಾಮಿ ಜಿ.ಎಂ ಅವರು ಮಾಹಿತಿ ನೀಡಿ, ಈ ಯೋಜನೆಗಾಗಿ ಸುಮಾರು 20 ಕೋಟಿ ರೂಪಾಯಿಗಳ ಅನುದಾನವನ್ನು ಕೋರಲಾಗಿದ್ದು, ಪ್ರಾಥಮಿಕ ಹಂತವಾಗಿ ಕನಿಷ್ಠ 10 ಕೋಟಿ ರೂಪಾಯಿ ಬಿಡುಗಡೆಯಾದರೂ ತಕ್ಷಣವೇ ಕಾಮಗಾರಿ ಆರಂಭಿಸಲಾಗುವುದು ಎಂದರು. ಈ ಯೋಜನೆಗೆ ಸಂಬಂಧಿಸಿದಂತೆ ಸಚಿವರು ಹಾಗೂ ಐಟಿ ಇಲಾಖೆಯ ಉನ್ನತ ಅಧಿಕಾರಿಗಳು ಈಗಾಗಲೇ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ವಿವರಿಸಿದರು.
ಪ್ರಸ್ತುತ ಶಾಲಾ-ಕಾಲೇಜುಗಳಿಗೆ ರಜೆ ಇರುವುದರಿಂದ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಲ್ಲದಿದ್ದರೂ, ಮುಂಬರುವ ಹೊಸ ಶೈಕ್ಷಣಿಕ ವರ್ಷಕ್ಕೆ ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇನ್ನುಮುಂದೆ ಪ್ರತಿ ತಿಂಗಳು ವಸತಿ ನಿಲಯಗಳಲ್ಲಿ ಸಂಜೆ ವೇಳೆ ಅರ್ಧ ಗಂಟೆಗಳ ಕಾಲ ವಚನ ಸಾಹಿತ್ಯ, ದಲಿತ ಸಾಹಿತ್ಯ ಹಾಗೂ ಮಹಿಳಾ ಸಾಹಿತ್ಯದ ಕುರಿತು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದ್ದು, ಮುಂದಿನ ತಿಂಗಳಿಂದ ಮಾನ್ಯ ಸಂಸದರ ನೇತೃತ್ವದಲ್ಲಿ ಇದಕ್ಕೆ ಚಾಲನೆ ನೀಡಲಾಗುವುದು. ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿದ್ದ ಸಮಾಜ ಕಲ್ಯಾಣ, ಬಿ.ಸಿ.ಎಂ, ಅಲ್ಪಸಂಖ್ಯಾತರ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಎಲ್ಲಾ ವಸತಿ ನಿಲಯಗಳಿಗೆ ಸ್ವಂತ ನಿವೇಶನಗಳನ್ನು ಮಂಜೂರು ಮಾಡಲಾಗಿದ್ದು, ಅನುದಾನ ಬಂದ ತಕ್ಷಣ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದರು.
ವಸತಿ ನಿಲಯದ ಮಕ್ಕಳಿಗೆ ‘ಹೆಲ್ತ್ ಕಾರ್ಡ್’ ವಿತರಿಸಲಾಗುತ್ತಿದ್ದು, ಪ್ರತಿ ತಿಂಗಳು ಕಡ್ಡಾಯ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶವನ್ನು ಉತ್ತಮಪಡಿಸಲು ಶಿಕ್ಷಣ ಇಲಾಖೆ ವಿಶೇಷ ಶ್ರಮವಹಿಸುತ್ತಿದ್ದು, ಫಲಿತಾಂಶದಲ್ಲಿ ಹಿಂದುಳಿದಿರುವ ಶಾಲೆಗಳನ್ನು ಅಧಿಕಾರಿಗಳು ದತ್ತು ಪಡೆದುಕೊಂಡು ನಿರಂತರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಮತ್ತು ಸಿಇಒ ಸ್ವತಃ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಗುಣಮಟ್ಟವನ್ನು ಪರಿಶೀಲಿಸುತ್ತಿದ್ದು, ಹಿಂದುಳಿದ ವಿದ್ಯಾರ್ಥಿಗಳಿಗೆ ಮುಂಜಾನೆ ಮತ್ತು ಸಂಜೆ ವಿಶೇಷ ತರಗತಿಗಳನ್ನು ಆಯೋಜಿಸುತ್ತಿದ್ದಾರೆ ಎಂದರು.
ಕಳೆದ ವರ್ಷ ಜಿಲ್ಲೆಯಲ್ಲಿ ಯಾವುದೇ ಬಾಲ್ಯವಿವಾಹ ಪ್ರಕರಣಗಳು ದಾಖಲಾಗಿರಲಿಲ್ಲ. ಆದರೆ, ಕಳೆದ ತಿಂಗಳು ಶಾದಿಮಹಲ್‌ನಲ್ಲಿ ನಡೆಯುತ್ತಿದ್ದ ವಿವಾಹವೊಂದರ ಮೇಲೆ ದಾಳಿ ನಡೆಸಿ, ಅಪ್ರಾಪ್ತ ಬಾಲಕಿಯರ ಬಾಲ್ಯವಿವಾಹವನ್ನು ಯಶಸ್ವಿಯಾಗಿ ತಡೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳು ಸಭೆಗೆ ತಿಳಿಸಿದರು. ಇನ್ನು ಮುಖ್ಯ ಕಾರ್ಯದರ್ಶಿಗಳ ಆದೇಶದಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸಿ.ಇ.ಒ ಅವರು ಜಿಲ್ಲೆಯ ಆಸ್ಪತ್ರೆಗಳಿಗೆ ಆಕಸ್ಮಿಕ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೆಲವು ನರ್ಸಿಂಗ್ ಹೋಂಗಳಲ್ಲಿ ಶೇಕಡಾ 100 ರಷ್ಟು ಸಿಸೇರಿಯನ್ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ, ವೈದ್ಯರ ಸಭೆ ಕರೆದು ಕಡ್ಡಾಯವಾಗಿ ನೈಸರ್ಗಿಕ ಹೆರಿಗೆಗೆ ಆದ್ಯತೆ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ತಾಯಿ ಮರಣ ಪ್ರಮಾಣವನ್ನು ಯಶಸ್ವಿಯಾಗಿ ನಿಯಂತ್ರಿಸಲಾಗಿದ್ದು, ಪ್ರಸ್ತುತ ಇದು ರಾಜ್ಯದ ಸರಾಸರಿಗಿಂತ ಕಡಿಮೆ ಇರುವುದು ಜಿಲ್ಲೆಯ ದೊಡ್ಡ ಸಾಧನೆಯಾಗಿದೆ. ಜಿಲ್ಲೆಯಲ್ಲಿ ಸದ್ಯ ಚರ್ಮರೋಗ ತಜ್ಞರು, ಸ್ತ್ರೀರೋಗ ತಜ್ಞರು ಹಾಗೂ ಅರಿವಳಿಕೆ ತಜ್ಞರ ಹುದ್ದೆಗಳು ಖಾಲಿ ಇದ್ದು, ಲಭ್ಯವಿರುವ ಸಂಪನ್ಮೂಲಗಳಲ್ಲೇ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಕೃಷಿ, ನೀರಾವರಿ ಹಾಗೂ ನಾಗರಿಕ ಸೌಲಭ್ಯಗಳು
ಮುಂಬರುವ ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ ಸಂಪೂರ್ಣ ಸಜ್ಜಾಗಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಪ್ರಮಾಣದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ಅಡಿಕೆ-ತೆಂಗಿನ ಜೊತೆಗೆ ಹಣ್ಣು ಮತ್ತು ತರಕಾರಿ ಬೆಳೆಗಳಿಗೂ ಉತ್ತೇಜನ ನೀಡಲಾಗುತ್ತಿದ್ದು, ಹನಿ ನೀರಾವರಿ ಯೋಜನೆ ಸಬ್ಸಿಡಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ.
ಗ್ರಾಮೀಣ ಭಾಗದ ‘ಜಲಜೀವನ್ ಮಿಷನ್’ ಯೋಜನೆಯಡಿ ಪೈಪ್‌ಲೈನ್ ಮತ್ತು ನಲ್ಲಿ ಸಂಪರ್ಕ ಕಾರ್ಯಗಳು ಕೊನೆಯ ಹಂತದಲ್ಲಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗದಂತೆ ಇಂಜಿನಿಯರ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ನಗರದ ಪ್ರಮುಖ ರಸ್ತೆಗಳ ನವೀಕರಣ, ಸ್ಮಾರ್ಟ್ ರಸ್ತೆಗಳ ನಿರ್ಮಾಣ ಹಾಗೂ ಒಳಚರಂಡಿ ಆಧುನೀಕರಣ ಪ್ರಗತಿಯಲ್ಲಿದೆ. ಘನತ್ಯಾಜ್ಯ ನಿರ್ವಹಣೆಯನ್ನು ಮತ್ತಷ್ಟು ವ್ಯವಸ್ಥಿತಗೊಳಿಸಲು ಸೂಚಿಸಲಾಗಿದೆ.
ಸುಪ್ರೀಂ ಕೋರ್ಟ್ ಆದೇಶಕ್ಕೂ ಮುನ್ನವೇ ದಾವಣಗೆರೆಯಲ್ಲಿ ಬೀದಿನಾಯಿಗಳಿಗೆ ವ್ಯಾಕ್ಸಿನೇಷನ್ ಮತ್ತು ಸ್ಟೆರಿಲೈಸೇಶನ್ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದ್ದು, ಈಗಾಗಲೇ ಶೇಕಡಾ 80 ರಷ್ಟು ಯಶಸ್ಸು ಸಾಧಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಶೇಖರ್ ಹೆಚ್.ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿಗಳಾದ ಗಿತ್ತೆ ಮಾಧವ ವಿಠ್ಠಲರಾವ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days agoನಕಲಿ ಬಿಲ್ಲುಗಳ ಮೂಲಕ ಲಕ್ಷಾಂತರ ರೂಪಾಯಿ ಅವ್ಯವಹಾರ | ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ನಾಗರಾಜ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ7 days agoಬ್ಯಾಕ್ಲಾಗ್ ನಿಯಮಾವಳಿ ಉಲ್ಲಂಘನೆ ; ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕ ಕರಿಚಣ್ಣನವರ್ ವಿರುದ್ಧ ಲೋಕಾಗೆ ದೂರು
-
ಅಂಕಣ5 days agoನೀಟ್ ಸೃಷ್ಟಿಸಿದ ಅವಾಂತರಗಳು ಮತ್ತು ಅದರ ಬಹುಮುಖಿ ಬಿಕ್ಕಟ್ಟುಗಳು: ಒಂದು ವಿಮರ್ಶಾತ್ಮಕ ನೋಟ
-
ದಿನದ ಸುದ್ದಿ5 days agoಲಾರಿ, ಟ್ರಾಕ್ಟರ್ ಗಳಿಗೆ ಟ್ರಿಪ್ ಚೀಟಿ ಇಲ್ಲದೆ ಅಕ್ರಮ ಸಾಗಾಣಿಕೆ ; ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಶಾಮೀಲು..!?
-
ದಿನದ ಸುದ್ದಿ7 days ago‘ಹಿಟ್ಲರ್ ಕಲ್ಯಾಣ’ದ ನಾಯಕನ ಬದುಕಿನ ಪಯಣ ಹೀಗಿತ್ತು
-
ದಿನದ ಸುದ್ದಿ5 days agoಕೆ. ಶಿವರಾಜಕುಮಾರ್ ಅವರಿಗೆ ಪಿಎಚ್ ಡಿ ಪದವಿ
-
ದಿನದ ಸುದ್ದಿ4 days agoಶಿಕ್ಷಕರು, ವಾರ್ಡನ್‌ಗಳಿಗೆ ಪೋಕ್ಸೊ ಕಾಯ್ದೆ ತರಬೇತಿ ನೀಡಿ
-
ದಿನದ ಸುದ್ದಿ3 days agoಲೋಕಾಯುಕ್ತ ಪೋಲಿಸ್ ಇನ್ಸ್‌ಪೆಕ್ಟರ್ ಪ್ರಭು ಬಿ. ಸೂರಿನ ಅವರಿಂದ ಕಾನೂನು ಅರಿವು

