ದಿನದ ಸುದ್ದಿ
ಹೆಚ್ಚುತ್ತಿರುವ ಅತ್ಯಾಚಾರ-ಕೊಲೆ ಪ್ರಕರಗಳು | ಜನರ ಆಕ್ರೋಶ ಮತ್ತು ಆತಂಕ : ಹಲವು ಅಭಿಪ್ರಾಯಗಳ ಸಂಗ್ರಹ ಇಲ್ಲಿವೆ, ಮಿಸ್ ಮಾಡ್ದೆ ಓದಿ
- ನಮ್ಮ ದೇಶದ ಜನರು ಪೇಶ್ವೆ ಕಾಲದಲ್ಲಿ ದಲಿತರ ಮೇಲೆಸಗಿದ ಅನ್ಯಾಯ, ಅತ್ಯಾಚಾರ ಎಲ್ಲವೂ ನನಗೆ ನೆನಪಿದೆ. ಹಾಗೂ ಮುಂಬರುವ ಸ್ವಾಂತಂತ್ರ್ಯ ದೇಶದಲ್ಲೂ ಇದೇ ಅತ್ಯಾಚಾರಗಳಾಗುತ್ತವೆಯೇನೋ ಎನ್ನುವ ಭಯವೂ ನನಗಿದೆ.
–ಡಾ.ಬಿ.ಆರ್. ಅಂಬೇಡ್ಕರ್
ಉತ್ತರ ಪ್ರದೇಶದ ‘ಹತ್ರಾಸ್‘ ನಲ್ಲಿ ಮನಿಷಾ ವಾಲ್ಮೀಕಿ ಎಂಬ ದಲಿತ ಯುವತಿಯನ್ನು ಅತ್ಯಾಚಾರವೆಸಗಿ ನಂತರ ಕತ್ತುಹಿಸುಕಿ, ನಾಲಗೆ ಕತ್ತರಿಸಿ ಸಾಯಿಸಲು ಪ್ರಯತ್ನಿಸಿದ ನಂತರ ಬಿಟ್ಟು ಓಡಿಹೋಗಿದ್ದ ಕಾರಣ ಆಕೆಯ ಗೋಣು ಮುರಿದಿತ್ತು, ಬೆನ್ನುಮೂಳೆಗೆ ಹಾನಿಯಾಗಿತ್ತು. ಅರೆಪ್ರಜ್ಞೆಯಲ್ಲಿದ್ದ ಆಕೆಯನ್ನು ಮನೆಗೆ ಹೊತ್ತುತರುತ್ತಾರೆ. ಅಲ್ಲಿಂದ ಮೋಟಾರ್ ಸೈಕಲ್ ನಲ್ಲಿ ಕೂರಿಸಿ ಸಮೀಪದ ಠಾಣೆಗೆ ಕರೆದೊಯ್ದು ಕಲ್ಲುಚಪ್ಪಡಿ ಮೇಲೆ ಮಲಗಿಸುತ್ತಾರೆ. ಪೊಲೀಸರು ದೂರು ದಾಖಲಿಸಿಕೊಳ್ಳಲು ನೂರೆಂಟು ಪ್ರಶ್ನೆ ಕೇಳಿ ಸತಾಯಿಸಿ ಸಮಯ ಕೊಲ್ಲುತ್ತಾರೆ. ಅಲ್ಲಿಂದ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಅಟೋ ರಿಕ್ಷಾದಲ್ಲಿ ಕಳಿಸುತ್ತಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನಿರಾಕರಿಸಿದ ಕಾರಣ ಆಕೆಯನ್ನು ಆಲಿಗಡ್ ಗೆ ಕೊಂಡೊಯ್ಯಲು ಕುಟುಂಬದ ಸದಸ್ಯರು ಅಂಬ್ಯುಲೆನ್ಸ್ ಗೆ ಪೋನ್ ಮಾಡ್ತಾರೆ. ಎರಡು ಗಂಟೆ ನಂತರ ಅಂಬ್ಯುಲೆನ್ಸ್ ಬರುತ್ತದೆ. ಅಲ್ಲಿಂದ ಆಲಿಗಡ್ ಆಸ್ಪತ್ರೆಗೆ ಸಾಗಿಸುತ್ತಾರೆ. ಅಲ್ಲಿ ಹದಿನಾಲ್ಕು ದಿನಗಳ ಕಾಲ ಚಿಕಿತ್ಸೆ ನೀಡಿ ಕೊನೆಗೆ ದೆಹಲಿ ಸಫ್ದರ್ ಜಂಗ್ ಆಸ್ಪತ್ರೆಗೆ ಕೊಂಡೊಯ್ಯುತ್ತಾರೆ. ಅಲ್ಲಿ 24 ಗಂಟೆಗಳ ಕಳೆಯುವುದರಲ್ಲಿ ಯುವತಿ ಸೆಪ್ಟೆಂಬರ್ 29 ರಂದು ಪ್ರಾಣ ಬಿಡುತ್ತಾಳೆ.
ಕೇವಲ ಎರಡು ದಿನಗಳಲ್ಲಿ ಆದಿತ್ಯನಾಥನ ಆಡಳಿತದ ಉತ್ತರಪ್ರದೇಶದಲ್ಲಿ ದಾಖಲಾಗಿರುವ ಅತ್ಯಾಚಾರ-ಸಾಮೂಹಿಕ ಅತ್ಯಾಚಾರ, ಅತ್ಯಾಚಾರ ಪ್ರಯತ್ನದ ಪ್ರಕರಣಗಳು ಒಟ್ಟು ಹದಿನೆಂಟು. ಅಂದರೆ ಸರಾಸರಿ ದಿನಕ್ಕೆ ಒಂಭತ್ತು. ಮನೀಷಾ ಪ್ರಕರಣವನ್ನು ಬಯಲಿಗೆಳೆದು ದೇಶದ ಗಮನ ಸೆಳೆಯಲು ಯಶಸ್ವಿಯಾದ ರೋಹಿಣಿ ಸಿಂಗ್ ಈ ಮಾಹಿತಿಯನ್ನು ನೀಡಿದ್ದಾರೆ.
ಮೀರತ್ ನಲ್ಲಿ ನಿರ್ಭಯ ಪ್ರಕರಣದ ಮಾದರಿಯಲ್ಲೇ ಚಲಿಸುವ ಬಸ್ ನಲ್ಲಿ ಡ್ರೈವರ್ ಸುನಿಲ್ ಚೌಧರಿ, ಕಂಡಕ್ಟರ್, ಕ್ಲೀನರ್ ಅತ್ಯಾಚಾರವೆಸಗಿದ್ದಾರೆ. ಮೀರತ್ ಅಲ್ಲದೆ ಅಯೋಧ್ಯೆ, ಫತೇಪುರ್, ಬಹರೈಚ್, ಬಲರಾಮಪುರ, ಆಜಂಗಡ, ಕಾನ್ಪುರ, ಲಕ್ನೋ, ಸಂತ ಕಬೀರ್ ನಗರಗಳಲ್ಲಿ ಪ್ರಕರಣಗಳು ನಡೆದಿವೆ. ಅಯೋಧ್ಯೆ ಒಂದರಲ್ಲೇ ಕಳೆದ 48 ಗಂಟೆಗಳಲ್ಲಿ ನಾಲ್ಕು ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಇವೆಲ್ಲ ವರದಿಯಾಗಿರುವ ಪ್ರಕರಣಗಳಷ್ಟೆ. ಅತ್ಯಾಚಾರದಂಥ ಪ್ರಕರಣಗಳು ವರದಿಯಾಗುವುದು ಕಡಿಮೆ, ಜನರು ಮರ್ಯಾದೆಗಂಜಿ ಪ್ರಕರಣ ದಾಖಲಿಸುವುದಕ್ಕೆ ಹಿಂದೇಟು ಹಾಕುತ್ತಾರೆ. ವರದಿಯಾದ ಪ್ರಕರಣಗಳೇ ಹದಿನೆಂಟಾದರೆ ಆಗದ ಪ್ರಕರಣಗಳು ಎಷ್ಟಿರಬಹುದು..?
ಈ ಘಟನೆಯ ಹಿನ್ನೆಲೆಯಲ್ಲಿ ವಿವಿಧ ಸ್ತರದ ಜನರನ್ನು ‘ಸುದ್ದಿದಿನ.ಕಾಂ‘ ಮಾತನಾಡಿಸಿದ್ದು, ಅತ್ಯಾಚಾರಿಗಳು – ಉತ್ತರ ಪ್ರದೇಶದ ಯೋಗಿ ಆದಿಥ್ಯನಾಥನ ಸರ್ಕಾರದ ವಿರುದ್ಧ ಆಕ್ರೋಶ, ವ್ಯಕ್ತಪಡಿಸಿದ್ದು, ಕಾನೂನು ವ್ಯವಸ್ಥೆ ಬಲಗೊಳ್ಳಬೇಕು, ಅತ್ಯಾಚಾರಿಗಳಿಗೆ ಕ್ರೂರ ಶಿಕ್ಷೆಯಾಗಬೇಕು ಹಾಗೇ ಕೆಲವು ಆತಂಕದ ಮಾತುಗಳನ್ನು ಕೂಡ ಹೇಳಿದ್ದಾರೆ. ಅವರ ಅಭಿಪ್ರಾಯಗಳು ಈ ಕೆಳಕಂಡಂತಿವೆ.
“ಹಥ್ರಾಸ್ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವು ಈ ದೇಶದ ಸಾಮಾಜಿಕ ಹಿನ್ನಡೆಯ ಜ್ವಲಂತ ಉದಾಹರಣೆ. ಇಂತಹ ಘಟನೆಗಳಾದಾಗ ನ್ಯಾಯ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನಗಳು ವ್ಯಾಪಕವಾಗಿ ಬೇಕು. ಅವುಗಳಿಗೆ ಆಡಳಿತ ಸಕಾರಾತ್ಮಕವಾಗಿ ಸ್ಪಂದಿಸಬೇಕು.
ಆದರೆ ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತವರು ವಿಕೃತರ ರಕ್ಷಣೆಗೆ ನಿಂತಾಗ ಅಧಿಕಾರರೂಢರು ಮತ್ತು ವಿರೋಧ ಪಕ್ಷಗಳವರು ಪ್ರಬಲ ರಾಜಕೀಯ ಇಚ್ಛಾಶಕ್ತಿಯೊಂದಿಗೆ ಅತ್ಯಾಚಾರವೆಸಗಿದವರಿಗೆ ಶಿಕ್ಷೆ ಕೊಡಿಸುವುದರೊಂದಿಗೆ ಕಾನೂನನ್ನು ಮತ್ತಷ್ಟು ಬಲಗೊಳಿಸುವುದರ ಕಡೆಗೆ ಆದ್ಯತೆ ನೀಡಬೇಕು. ವಿಕೃತಿಯನ್ನು ರಕ್ಷಿಸುವ ವಿಚಿತ್ರ ಮನಸ್ಥಿತಿಯಿಂದ ಹೊರಬಂದು ಸಾಮಾಜಿಕ ಮುನ್ನಡೆಗೆ ಪೂರಕ ವಾತಾವರಣ ಸೃಷ್ಟಿಸಬೇಕು.”
| ಡಾ.ಎನ್.ಕೆ. ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಉಜಿರೆ
“ದೇಶದಲ್ಲಿ ನಡೆಯುತ್ತಿರುವ ಹೆಣ್ಣು ಮಕ್ಕಳ ಮೇಲಿನ ಎಲ್ಲಾ ದೌರ್ಜನ್ಯ ಪ್ರಕರಣಗಳು ಹಾಗೂ
ನಿರಂತರಅತ್ಯಾಚಾರ ಪ್ರಕರಣ ಗಳು ದೇಶದ ತಳ ಸಮುದಾಯಗಳ ಮೇಲೆ ನಡೆಯುತ್ತಿರುವುದು ನೋವಿನ ಸಂಗತಿಯಾಗಿದೆ. ಭಾರತೀಯ ಆಳುವ ವರ್ಗಗಳ ಅಮಾನವೀಯ ನಡವಳಿಕೆ ಅಸಹ್ಯ ಹುಟ್ಟಿಸುತ್ತಿದೆ.
ದೌರ್ಜನ್ಯ ದಬ್ಬಾಳಿಕೆಗಳು, ಅತ್ಯಾಚಾರಗಳು ಆಳುವ ವರ್ಗಗಳ ಮೇಲೆ ಎಂದು ನಡೆಯುವುದಿಲ್ಲ. ಶೋಷಿತ ಸಮುದಾಯ ಆಳುವ ವರ್ಗವಾಗುವುದೊಂದೇ ಇದಕ್ಕೆ ಪರಿಹಾರ ವಾಗಬಲ್ಲದು. ಸಂತಾಪ ಸೂಚನೆ, ಮೇಣದ ಬತ್ತಿ, ಮೆರವಣಿಗೆಗಳಿಂದ ಏನು ಪ್ರಯೋಜನ ವಾಗಲಾರದು.”
| ಎ.ಡಿ. ಈಶ್ವರಪ್ಪ, ಪ್ರಜಾ ಪರಿವರ್ತನಾ ವೇದಿಕೆ, ರಾಜ್ಯ ಪ್ರಧಾನ ಕಾರ್ಯದರ್ಶಿ, ಹೊನ್ನಾಳಿ
“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸ್ವತಂತ್ರವಾಗಿ ಬಾಳುವ ಹಕ್ಕಿದೆ. ಆದರೆ ಇದೇ ಪ್ರಜಾತಂತ್ರದಲ್ಲಿ ನಮ್ಮ ಅಕ್ಕ ತಂಗಿಯರ ಮೇಲೆ ದಿನದಿಂದ ದಿನಕ್ಕೆ ಹಲ್ಲೆ, ಅತ್ಯಾಚಾರಗಳು ಅಧಿಕವಾಗುತ್ತಿವೆ. ಇದು ಆಳುವ ವರ್ಗ ವೈಫಲ್ಯ ಮತ್ತು ಪ್ರಚೋದನೆಯೂ ಹೌದು.
ಆಡು ಹಗಲೇ ಅಪಹರಣ, ಅತ್ಯಾಚಾರ, ಹಲ್ಲೆಗಳು ನಡೆಯುತ್ತಿದ್ದರು ಮೌನ ತಾಳುವ ಸರ್ಕಾರದ ನಡೆಯನ್ನು ಗಮನಿಸಿದರೆ ಇದರಲ್ಲಿ ಪ್ರಭುತ್ವದ ಪಾಲು ಎದ್ದು ಕಾಣುತ್ತದೆ. ರಾಮರಾಜ್ಯದ ಹೆಸರಿನಲ್ಲಿ ಗೂಂಡಾ ರಾಜ್ಯ ನಿರ್ಮಾಣವಾಗುತ್ತಿದೆ. ಇದು ಜಗತ್ತಿನ ಎದುರು ಭಾರತ ತಲೆ ತಗ್ಗಿಸುವಂತಹ ನಡೆ. ಹೆಣ್ಣಿಗೆ ಸೂಕ್ತ ರಕ್ಷಣೆ ನೀಡಲು ವಿಫಲವಾಗಿರುವ ಸರ್ಕಾರದ ನಡೆಯು ಅತ್ಯಂತ ಖಂಡನೀಯ.”
| ಡಾ.ಕೆ.ಎ.ಓಬಳೇಶ್
ರಾಜ್ಯ ಪ್ರಧಾನ ಕಾರ್ಯದರ್ಶಿ
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ-ಕರ್ನಾಟಕ
“ಪ್ರತಿಯೊಂದು ಅತ್ಯಾಚಾರದ ಘಟನೆಗಳು ನಡೆದಾಗಲೂ ಮುನ್ನೆಲೆಗೆ ಬರುವ ವಿಷಯ ಕ್ರಿಮಿನಲ್ಗಳಿಗೆ ಶಿಕ್ಷೆಯಾಗಬೇಕು. ಆದರೆ ನಾವ್ಯಾಕೆ ಇಂತಹ ಕೃತ್ಯಗಳನ್ನು ನಡೆಯದಂತೆ ಮುಂಜಾಗ್ರತೆ ವಹಿಸಲು ಸಾಧ್ಯವಾಗಿಲ್ಲ ಎಂಬುದನ್ನು ಯೋಚಿಸಲು ಮರೆತಿದ್ದೇವೆ.
ನಿರ್ಭಯಾ, ಆಸೀಫಾ,ಉನ್ನಾವೋ, ದಿಶಾ ಈಗ ಮನಿಷಾ ಮತ್ತು ಪಟ್ಟಿ ಮುಂದುವರೆಯಲೂ ಬಹುದು! ಪ್ರತಿ ಘಟನೆಗಳು ನಡೆದಾಗಲೂ ಕಾನೂನನ್ನು ಬಿಗಿಗೊಳಿಸಿದ್ದೇವೆ, ಇನ್ನೂ ಅತ್ಯಾಚಾರಿಗಳಿಗೆ ಉಳಿಗಾಲವಿಲ್ಲ ಎಂಬ ಉದ್ದುದ್ದ ಭಾಷಣಗಳನ್ನು ನಂಬಿ ಇನ್ನೇನು ನಮ್ಮನೆ ಹೆಣ್ಮಕ್ಕಳು ಸುರಕ್ಷಿತ ಎಂದು ಮಲಗವಷ್ಟರಲ್ಲಿ ಮತ್ತೊಬ್ಬ ಹೆಣ್ಣು ಜೀವ ಕಳೆದುಕೊಂಡಿರುತ್ತಾಳೆ.
ಹಾಗಿದ್ದರೆ ಕಾನೂನುಗಳು ನಿಜಕ್ಕೂ ಅಷ್ಟು ಬಿಗಿಯಾಗಿವೆಯೇ.,ಅಥವಾ ಕಾನೂನಿನ ಭಯ ಜನಕ್ಕೆ ಇಲ್ಲದಾಗಿದೆಯೇ? ನಿರ್ಭಯ ಹತ್ಯೆಯ ನಂತರ ಒಂದಷ್ಟು ಸುಧಾರಣೆಗಳನೋ ಆದವು ಆದರೂ ಹೆಣ್ಣಿನ ಚೀರಾಟವೇನೂ ನಿಂತಿಲ್ಲ,ಗಲ್ಲು ಶಿಕ್ಷೆಯಂತಹ ಕಾನೂನನ್ನು ತಂದರೂ ಯಾವ ಸುಧಾರಣೆಯನ್ನೂ ಕಾಣಲಾಗಿಲ್ಲ..ಆದರೂ ಮನುಷ್ಯನ ಕಾಮ ವಾಂಛೆಯನ್ನ ಕಾನೂನಿನ ಮೂಲಕ ನಿಯಂತ್ರಿಸ ಬೇಕಾಗಿರುವುದು ದುರಂತವೇ ಸರಿ.
ಕಾನೂನು ಚೌಕಟ್ಟಿನಾಚೆ ನಮ್ಮ ಜವಾಬ್ದಾರಿಗಳೇನು ಎಂದು ಯೋಚಿಸಬೇಕಾಗಿದೆ.. ಅತ್ಯಾಚಾರ ಮಾಡುವುದು ಎಂದರೆ ವ್ಯಕ್ತಿಯು ತನ್ನ ಪೌರುಷವನ್ನು ಅವಳ ಒಪ್ಪಿಗೆ ಇಲ್ಲದೆ ಸ್ಥಾಪಿಸಲು ಮಾಡುವ ಬಲವಂತದ ಪ್ರಯತ್ನವಷ್ಟೆ. ಇದಕ್ಕೆ ಮುಖ್ಯ ಕಾರಣ ಗಂಡು ತಾನು ಮಾಡಿದ್ದೆಲ್ಲವೂ ಸರಿ., ಸಮಾಜದಲ್ಲಿ ತಾನೊಂದು ಮೇಲ್ಪಂಕ್ತಿ ಎಂಬ ಅಹಂಭಾವವೇ ಆಗಿದೆ.
ಇಂದಿನ ಡಿಜಿಟಲ್ ಯುಗದಲ್ಲಿ ಹೆಣ್ಣನ್ನು ಸುಖಿಸುವುದು ಎಂದರೆ ಹಿಂಸಿಸುವದು ಎಂದೇ ಮನದಟ್ಟು ಮಾಡುವಂತಹ ವಿಡಿಯೋಗಳಿಗೇನೂ ಕೊರತೆ ಇಲ್ಲ! ಗಂಡಸ್ತನದ ಅಹಮ್ಮಿನಿಂದ ಆಚೆ ಹೆಣ್ಣು ಗಂಡಿಗೆ ಸರಿಸಮಾನಳು, ಅವಳನ್ನು ಗೌರವಿಸುದ ಹೊರತು ನಿನ್ನ ಗಂಡುಜನ್ಮಕ್ಕೆ ಬೆಲೆ ಇಲ್ಲ ಎಂಬುದನ್ನು ಮನದಟ್ಟು ಮಾಡಿಕೊಡಬೇಕಾಗಿದೆ.
ಪುರುಷ ಪ್ರಧಾನ ವ್ಯವಸ್ಥೆಯಿಂದ ಆಚೆ ಬಂದು ಮಾನವೀಯ ಮೌಲ್ಯಗಳನ್ನು ಕಲಿಸದ ಹೊರತು ಹೆಣ್ಣೆತ್ತವರ ಕಣ್ಣೀರಿಗೆ ಕೊನೆಯಿಲ್ಲ. ಅತ್ಯಾಚಾರದ ಭೀಕರ ಹಿಂಸೆ ಅನುಭವಿಸಿ ವಾರಗಟ್ಟಲೆ ಸಾವು ಬದುಕಿನೊಡನೆ ಒದ್ದಾಡಿ ಜೀವ ಬಿಡುವ ಹೆಣ್ಣು ಯಾಕಾದರೂ ಹುಟ್ಟಿದೆನೋ ಎಂದು ಅದೆಷ್ಟು ನಿಟ್ಟುಸಿರು ಬಿಟ್ಟಿರುತ್ತಾಳೋ ಅದು ಕಲ್ಪನಾತೀತ.”
| ವೈಶಾಲಿ ದುರ್ಗಪ್ಪ, ಚಿತ್ರದುರ್ಗ
“ಅತ್ಯಾಚಾರ ಅಂದ್ರೆ ಏನು ಅಂತ ಅರಿಯದ ಮಕ್ಕಳ ಮೇಲೂ ಅತ್ಯಾಚಾರ ಆಗ್ತಾ ಇರೋ ದೇಶ ನಮ್ಮದು. ಭಯ ಆಗುತ್ತೆ ಹೊರಗೆ ಹೋಗೋಕೆ. ಯಾವಾಗ ಏನಾಗುತ್ತೋ ಗೊತ್ತಿಲ್ಲ. ಅತ್ಯಾಚಾರಕ್ಕೆ ಜಾತಿ ಇಲ್ಲ ಹೆಣ್ಣೊಂದೇ ಜಾತಿ. ಆದರೆ ನ್ಯಾಯಕ್ಕೆ ಮಾತ್ರ ಜಾತಿ ಯಾಕೆ ಅಂತ ಗೊತ್ತಿಲ್ಲ.
ಏನೇ ಆದರೂ ಅತ್ಯಾಚಾರ ನಡೆಯದೇ ಇರೋ ಹಾಗೆ ಮಾಡೋದು ಹೇಗೆ? ಗೊತ್ತಿಲ್ಲ. ನಾವು ನಮ್ಮ ಮಕ್ಕಳನ್ನು ಸರಿಯಾಗಿ ಬೆಳೆಸದೆ ಇದ್ದರೆ ನಾಳೆ ನಮ್ಮ ಮಕ್ಕಳು ನಮ್ಮನ್ನೇ ಅತ್ಯಾಚಾರ ಮಾಡೋ ಕಾಲ ದೂರ ಇಲ್ಲ. ಸರ್ಕಾರ ಸರಿಯಾದ ಕ್ರಮ ತಗೋಬೇಕು. ಕಾನೂನು ಬಲವಾಗಬೇಕು.”
| ಬಿಂದು ರಕ್ಷಿದಿ, ನಟಿ
“ಕೆಲವು ವರ್ಷಗಳ ಹಿಂದೆ ಟೀವಿ ಮಾದ್ಯಮವೊಂದರ ಸಂದರ್ಶನದಲ್ಲಿ ಚಿಂತಕರೊಬ್ಬರು ಮುಂದೆ ಅತ್ಯಾಚಾರ ಕಾನೂನುಬದ್ಧವಾಗುವ ಅಪಾಯವನ್ನು ಕುರಿತು ಮಾತನಾಡಿದ್ದರು. ಆ ಎಲ್ಲಾ ಸಾಧ್ಯತೆಗಳನ್ನು ನಾವೀಗ ಕಣ್ಮುಂದೆ ಕಾಣುತ್ತಿದ್ದೇವೆ.
ಪ್ರಭುತ್ವದ ಪ್ರತಿಕ್ರಿಯೆಗಳು ಅತ್ಯಂತ ಆತಂಕಕಾರಿಯಾಗಿದ್ದು ಅದು ಬಲಿಷ್ಠ ಜಾತಿಗಳ ಪರವಾಗಿ ಮೃಧು ಧೋರಣೆಯನ್ನು ತಾಳುತ್ತ ಅಪರಾಧಿಗಳನ್ನು ರಕ್ಷಿಸಲು ಹೊರಟಿರುವುದು ಮುಂಬರಲಿರುವ ಕರಾಳ ಅಧ್ಯಾಯದ ಆರಂಭವಾಗಿದೆ.
ಇತ್ತೀಚೆಗಷ್ಟೇ ಎಲ್ಲಾ ಸಮುದಾಯದ ಹೆಣ್ಣುಮಕ್ಕಳ ಮೇಲೆ ಬಂಧನ ಸಡಿಲಗೊಳ್ಳುತ್ತಿರುವ ಪರಿವರ್ತನೆಯನ್ನು ಕಂಡು ಸಮಾಧಾನ ಪಟ್ಟುಕೊಳ್ಳುತ್ತಿದ್ದೆವು ಆದರೆ ಈ ನಿತ್ಯದ ಸರಣಿ ಅತ್ಯಾಚಾರಗಳು ಹೆಣ್ಣನ್ನು ಮತ್ತೆ ಬಂಧನದ ಅವಸ್ಥೆಗೆ ತಳ್ಳುತ್ತಿವೆ ಎಂಬುದಂತೂ ಸತ್ಯ.
ಮೇಲ್ಜಾತಿಗಳು ಯಾವೇ ಆಗಿದ್ದರೂ ಎಲ್ಲಿಯೇ ಇದ್ದರು ಅವು ತಳ ಜಾತಿಗಳನ್ನು ಅದರಲ್ಲೂ ತಳ ಸಮುದಾಯದ ಹೆಣ್ಣುಮಕ್ಕಳನ್ನು ಭೋಗದ ವಸ್ತುವಾಗಿಯೇ ಕಾಣುತ್ತವೆ ಎಂಬುದಕ್ಕೆ ಚಾರಿತ್ರಿಕ ಆಧಾರಗಳಿವೆ. ಪ್ರಭುತ್ವದ ಬಲ ಅದರ ರಕ್ಷಣೆಗಿದ್ದಾಗಲಂತೂ ಮುಗಿದೇ ಹೋಯಿತು. ನಮ್ಮ ದೇಶ ಈಗ ಈ ಅವಸ್ಥೆಯಲ್ಲಿದೆ.”
| ಸುರೇಶ ಎನ್ ಶಿಕಾರಿಪುರ, ಉಪನ್ಯಾಸಕರು
“ಒಂದು ಹೆಣ್ಣು ನಿರ್ಭಯವಾಗಿ ರಾತ್ರಿ 12 ಗಂಟೆಯಲ್ಲಿ ನಡೆಯುವಳೋ ಅಂದು ನಿಜವಾದ ಸ್ವಾತಂತ್ರ್ಯ. ನಿಜವಾದರೂ ನಮ್ಮ ಮುಂದಿರುವ ಪ್ರಶ್ನೆಯೆಂದರೆ, ಜನನಿಬೀಡ ಪ್ರದೇಶದಲ್ಲೂ ಹಗಲಲ್ಲೆ ಸುರಕ್ಷತೆ ಇಲ್ಲ. ಹೆಣ್ಣಿನ ಮೇಲಿನ ಅತ್ಯಚಾರ ಸರಣಿಯಂತೆ ನಡೆಯುತ್ತಲಿದೆ, ಇದಕ್ಕೆ ತಿಂಗಳ ಮಗುವಿನಿಂದ ಹಿಡಿದು, ವೃದ್ದೆಯನ್ನು ಬಿಡುತಿಲ್ಲ ಕಾಮ ಪಿಶಾಚಿಗಳು.
ಭಿಕ್ಷುಕಿಯರಾದಿಯಾಗಿ ಬಲಿಯಾಗುತ್ತಿದ್ದಾರೆ. ಹೆಚ್ಚಾಗಿ ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳು ನಡೆಯುತ್ತಲಿವೆ. ಇದಕ್ಕೆ ಉದಾಹರಣೆಯಾಗಿ ಮನಿಷಾ ವಾಲ್ಮೀಖಿ ಎಂಬ ದಲಿತಮಗಳು ಕಾಮುಕರ ಕಪಿ ಮುಷ್ಟಿಯಲ್ಲಿ ನರಳಿ ಜೀವ ಬಿಟ್ಟಳು. ಸರ್ಕಾರ ಯಾಕೆ ಮೌನವಾಗಿದೆ.
ಇದ್ದಕಿದ್ದಂತೆ ನಡುರಾತ್ರಿಯಲ್ಲಿ ಬದಲಾಗುವ ಕಾನುನುಗಳು, ಮಸೂದೆಗಳು ಎಂದಿಗೂ ಅತ್ಯಚಾರಿಗಳ ವಿರುದ್ದ ಕಠಿಣಕ್ರಮ ಜಾರಿ ಮಾಡುವುದೇ ಇಲ್ಲ. ನಮ್ಮ ರಕ್ಣಣೆಗೆ ಸದಾ ಇರುತ್ತಾರೆ ಎಂದು ಅರಕ್ಷರನ್ನು ನಂಬಿದರೆ, ಅವರೆ ಇಂದು ಮಾನವೀಯತೆಯನ್ನು ಮರೆತಂತಿದೆ.
ಹೆಣ್ಣಿಲ್ಲದ ಜೀವಜಗತ್ತು ಅದು ಸ್ಮಶಾನಕ್ಕೆ ಸಮಾನ, ಅದು ಜೀವಜಗತ್ತಿನವಿನಾಶ ಕೂಡ ಹೌದು. ಹೆಣ್ಣಿನ ಮೇಲಿನ ಮೃಗೀಯ ವರ್ತನೆಯನ್ನು ದಯಮಾಡಿ ನಿಲ್ಲಿಸಿ, ಮನಿಷಾಳ ಸಾವಿಗೆ ನ್ಯಾಯ ಸಿಗಲಿ.ಇವಳ ಅತ್ಯಾಚಾರ ಪ್ರಕರಣವೇ ಕೊನೆಯದಾಗಲಿ. ಕೊನೆಯಾಗುವಂತೆ ನಾವೆಲ್ಲರು ಒಗ್ಗಟ್ಟಾಗಿ ಹೋರಾಡುವ ತುರ್ತಿದೆ.”
| ಡಾ.ಪುಷ್ಪಲತ.ಸಿ, ಭದ್ರಾವತಿ
“ಹಾಥರಸ್ ಅತ್ಯಾಚಾರ ಪ್ರಕರಣ ಡಿಜಿಟಲೀಕರಣದ ಹೊತ್ತಿನಲ್ಲಿ ಉಳ್ಳವರ ದಬ್ಬಾಳಿಕೆಯ ಮತ್ತಿನಲ್ಲಿ,
ಏನೂ ಆಗಿಯೇ ಇಲ್ಲವೆಂಬ ಸಮರ್ಥ ನೆಗೆ ರಾಜಕಾರಣದ ಸಂರಕ್ಷಣೆಯಲ್ಲಿ ಯಾವುದೇ ಹೆಣ್ಣಿನ
ಮೇಲೆ ನಡೆಯುವ ಅತ್ಯಾಚಾರವು
ಎಗ್ಗಿಲ್ಲದೆ ಸಾಗುವುದಕ್ಕೆ ನೈತಿಕ
ಶಿಕ್ಷಣದ ಒತ್ತಾಸೆಯಿಲ್ಲದಿರುವುದೇ
ಕಾರಣ.
ಅಂತೆಯೇ ಎಲ್ಲವೂ ನಾನೇ, ನನಗಾಗಿ ಎನ್ನುವ ಹಪಾಹಪಿಯನ್ನು ಕಲಿಸುತ್ತಿರುವ ಸಮಾಜದ ಧುರೀಣ ರು,ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳು,ಎಲ್ಲವೂ ಮನೆ ಬಾಗಿಲಿಗೆ ಎಂಬ ಘನಘೋರ ಸಂಚು ಕೂಡ ದುರ್ಬಲರು, ಮಹಿಳೆಯರ ಮೇಲೆ
ನಿರಂತರ ಅತ್ಯಾಚಾರವೆಸಗಲು
ರಹದಾರಿಯಾಗಿದೆ. ಅತ್ಯಾಚಾರ ಖಂಡನೆಗಿಂತ,ಪ್ರಜ್ಞಾವಂತರೆಲ್ಲರೂ
ನಮ್ಮ ಬದುಕಿನ ಭಾಗವಾಗಿ
ಅಂತಃಕರಣವನ್ನು ರೂಪಿಸಿಕೊಂಡಿದ್ದೇ ಆದರೆ ಅತ್ಯಾಚಾರ ಪ್ರಕರಣಗಳಿಗೆ ತೆರೆಬೀಳಬಹುದು.”
| ಪಂಚಾಕ್ಷರಯ್ಯ ಕೆ.ಎಂ.,ಅಧ್ಯಾಪಕರು, ದಾವಣಗೆರೆ
“ಈ ದೇಶದ ಮಣ್ಣಿನಲ್ಲಿ ಒಂದು ಜೀವ,ಹೆಣ್ಣಾಗಿ ಬಂದು ಈ ಸಮಾಜದ ಕಣ್ಣಾಗುವ ಹೊತ್ತಿಗೆ, ಅವಳ ಮೇಲೆ ಹಲ್ಲೆಯಾಗಿ, ಅತ್ಯಾಚಾರವಾಗಿ, ಅವಳು ನರಳಿ ನರಳಿ ನಾಶವಾದ ಘಟನೆಯಷ್ಟು ಭೀಕರವಾದ ಮತ್ತೊಂದು ಘಟನೆ ಇರಲಾರದು! ಇದು ಪ್ರತಿ ಹೆತ್ತೊಡಲ ಮಡಿಲಿನ ತಾಯ್ತನಕ್ಕೆ, ಹೆಣ್ತನಕ್ಕೆ ಮಾಡಿದ ದ್ರೋಹ.
ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಜಾಗೃತಿಯ ದಿನಗಳಲ್ಲೂ ಸಾಮೂಹಿಕ ಅತ್ಯಾಚಾರಗಳಾಗುತ್ತಿರುವುದು ವಿಕೃತ ಮನಸ್ಸುಗಳ ಅತಿರೇಕ ವರ್ತನೆಯ ತುತ್ತ ತುದಿ. ಆಡಳಿತ ವ್ಯವಸ್ಥೆ ಇಂತಹ ಹೀನಕೃತ್ಯಗಳ ವಿರುದ್ಧ ಮೊದಲು ಸಿಡಿದೇಳಬೇಕು. ನಂತರ ನೊಂದ ಮನಸ್ಸುಗಳ ಪರ ಮನಮಿಡಿಯುವ ಪ್ರಾಥಮಿಕ ವರ್ತನೆ ಮೊದಲಾಗಬೇಕು. ಪ್ರತಿ ನೋವಿಗೂ ಜೀವಂತ ಸಂಬಂಧಿಗಳಾಗಬೇಕು. ಆಗ ಮಾತ್ರ ಮನುಷ್ಯ ಪ್ರಜ್ಞೆಯನ್ನು ಕಾಪಾಡಿಕೊಳ್ಳಲು ಸಾಧ್ಯ.”
| ಡಾ.ಗಿರೀಶ್ ಮೂಗ್ತಿಹಳ್ಳಿ, ಚಿಕ್ಕಮಗಳೂರು
“ಭಾರತದಂತಹ ಶಾಂತಿಯ ನೆಲವನ್ನು ಹಲ್ಲೆ, ಅತ್ಯಾಚಾರದಂತಹ ಹೀನ ಕೃತ್ಯಗಳು ಕಂಗೆಡಿಸುತ್ತಿವೆ. ಹೆಣ್ಣು ಈ ಜಗದ ಕಣ್ಣು. ಅಂತಹ ಕಣ್ಣನ್ನು ನೀವು ಕಳೆದುಕೊಂಡರೆ ಏನನ್ನು ಸಾಧಿಸಲಾರಿರಿ. ಹೆಣ್ಣನ್ನು ಗೌರವಿಸಿ, ಅತ್ಯಾಚಾರದಂತಹ ಹೀನತೆಯನ್ನು ವಿರೋಧಿಸಿ. ಅತ್ಯಾಚಾರಕ್ಕೆ ಮುಂದಾಗುವ, ಅತ್ಯಾಚಾರವನ್ನು ಬೆಂಬಲಿಸುವ ಮತ್ತು ಅತ್ಯಾಚಾರಕ್ಕೆ ಪ್ರಚೋದಿಸುವ ಹೀನ ಮನಸುಗಳಿಗೆ ಧಿಕ್ಕಾರ.”
| ಡಾ.ರೇಖಾ,ಪೋಸ್ಟ್ ಡಾಕ್ಟರಲ್ ಫೆಲೋ,
ಕನ್ನಡ ವಿಶ್ವವಿದ್ಯಾಲಯ, ಹಂಪಿ
“ಹೆಣ್ಣಿನ ಮೇಲೆ ನಡೆಯುವಂತಹ ಅತ್ಯಾಚಾರದಿಂದ ಮಾನವ ಕುಲವ ತಲೆ ತಗ್ಗಿಸುವಂತಾಗಿದೆ. ಇದು ಅತ್ಯಂತ ನೋವಿನ ಸಂಗತಿ. ಸಂವಿಧಾನದಂತಹ ಪ್ರಬಲವಾದ ರಕ್ಷಣೆ ಇದ್ದಾಗಲೂ ಹೆಣ್ಣು ಧೈರ್ಯವಾಗಿ ಹೊರ ಬರಲಾರದ ಸ್ಥಿತಿಯೊಂದು ನಿರ್ಮಾಣವಾಗಿರುವುದು ಆಳುವ ವರ್ಗದ ದೌರ್ಬಲ್ಯವನ್ನು ಎತ್ತಿ ಹಿಡಿಯುತ್ತದೆ. ಅತ್ಯಾಚಾರದ ಮನಸ್ಥಿತಿಯುಳ್ಳವರಿಗೆ ನಮ್ಮ ಧಿಕ್ಕಾರ.”
| ಡಾ.ರೇಣುಕುಮಾರಿ ಆರ್.ಟಿ, ಚಿತ್ರದುರ್ಗ
“ಗೋವಿಗೆ ಮಾತೆ ಎಂದು ಪೂಜಿಸುವ ಯೋಗಿ ನಾಡಲ್ಲಿ ( ಉತ್ತರ ಪ್ರದೇಶ) ಅತಿ ಹೆಚ್ಚು ಮಹಿಳೆಯರ ಮತ್ತು ಮಕ್ಕಳ ಮೇಲೆ ನಿರಂತರವಾಗಿ ಅತ್ಯಾಚಾರಗಳು ನಡಿಯುತ್ತಲೆ ಇವೆ. ಅದರಲ್ಲೂ ದಲಿತ ಮತ್ತು ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳೆಗೆ ನಮ್ಮ ದೇಶದಲ್ಲಿ ರಕ್ಷಣೆ ಇಲ್ಲದಂತಾಗಿದೆ. 19 ವರ್ಷದ ಮನಿಷಾಳನ್ನು ಕಾಮುಕರು ನಾಲಿಗೆ ಕತ್ತರಿಸಿ ಬೆನ್ನುಮೂಳೆಯ ಮೂರಿದು ಅವಳ ಮೇಲೆ ವಿಕೃತವಾಗಿ ಅತ್ಯಾಚಾರ ಎಸಗಿದ್ದಾರೆ.
ಅಷ್ಟೇ ಅಲ್ಲದೆ ರಾತ್ರೋರಾತ್ರಿ ಅಲ್ಲಿಯ ಸರ್ಕಾರದ ಮನಿಷಾಳ ಶವವನ್ನು ಯಾರಿಗೂ ತಿಳಿಯದಂತೆ ಸುಟ್ಟು ಹಾಕಿದ್ದಾರೆ. ಈ ವಿಕೃತ ಕೃತ್ಯವೆಸಗಿದ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕು. ಈ ಪ್ರಕರಣವನ್ನು ಮುಚ್ಚ ಹಾಕಲು ಯತ್ನಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕಠಿಣ ಕ್ರಮ ಕೈಗೊಳ್ಳಬೇಕು.
ಹೆಣ್ಣಿಗೆ ರಕ್ಷಣೆ ನೀಡದ ಬಿಜೆಪಿ ಸರ್ಕಾರ ಕೆಳಗಿಳಿಸಬೇಕು ಎಲ್ಲದಕ್ಕೂ ಕುಮ್ಮಕ್ಕು ನೀಡುತ್ತಿರುವ ಯೋಗಿ ಆದಿತ್ಯನಾಥ ರಾಜಿನಾಮೆ ಕೊಡಬೇಕು. ಹೆಣ್ಣನ್ನು ರಕ್ಷಿಸುವ ನೆಲದಲ್ಲಿ ಕಾಮುಕರ ರಕ್ಷಣೆ ಮಾಡುತ್ತಿರುವ ನಾಲಾಯಕ ಸರ್ಕಾರಕ್ಕೆ ನನ್ನ ಧಿಕ್ಕಾರವಿದೆ.”
| ಪ್ರಿಯಾಂಕ ಮಾವಿನಕರ್, ವರದಿಗಾರರು, ಬೆಂಗಳೂರು
“ಶತ ಶತಮಾನಗಳ ಕಾಲ ಶೋಷಣೆಗೆ ಒಳಗಾದ ಹೆಣ್ಣು ಈಗ ತಾನೇ ಸ್ವಾಭಿಮಾನದಿಂದ ಸ್ವಾವಲಂಭಿ ಬದುಕು ರೂಪಿಸಿಕೊಳ್ಳಲು ಮುಂದಾಗುತ್ತಿದ್ದಾಳೆ. ಇಂತಹ ಸಂದರ್ಭದಲ್ಲಿ ಅತ್ಯಾಚಾರದಂತಹ ಹೇಯ್ಯ ಕೃತ್ಯಗಳು ಸ್ತ್ರೀ ಕುಲವನ್ನು ಕಂಗೆಡಿಸುತ್ತಿವೆ. ಇಂತಹ ನೀಚ ಮನಸ್ಥಿತಿ ಅತ್ಯಂತ ಅಪಾಯಕಾರಿ. ಇದನ್ನು ಸ್ತ್ರೀ ಕುಲ ಮಾತ್ರವಲ್ಲ, ಮಾನವ ಜಗತ್ತೇ ಖಂಡಿಸಬೇಕು. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು.”
| ಡಾ. ನಿರ್ಮಲ ಮಂಜು,ಕನ್ನಡ ವಿಶ್ವವಿದ್ಯಾಲಯ, ಹಂಪಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚಿತ್ರದುರ್ಗ | ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಡಿ.ಡಿ ಬಿ.ಮಲ್ಲಿಕಾರ್ಜುನ, ಕ್ರೈಸ್ ಇ.ಡಿ ಬಿ.ಶಿವಸ್ವಾಮಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ಚಿತ್ರದುರ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ಶಾಲೆಗಳಿಗೆ (ಕ್ರೈಸ್) ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡದೆ ವಂಚಿಸುತ್ತಿರುವ ಶ್ರೀ ಶಿರಡಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಚಿತ್ರದುರ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಶಿವಸ್ವಾಮಿ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ವಸತಿ ಶಾಲೆಗಳಿಗೆ ಅಧಿಕೃತ ಟೆಂಡರುದಾರರಾದ ಶ್ರೀ ಶಿರಡಿ ಸಾಯಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರು ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡದೆ ಇರುವ ಅಧಿಕೃತ ಮಾಹಿತಿ ತಿಳಿದು, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ ಇವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರಾಂಶುಪಾಲರುಗಳಿAದ ಮಾಹಿತಿಹಕ್ಕು ಅಡಿಯಲ್ಲಿ ಪಡೆದ ದೃಢೀಕೃತ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಆಹಾರ ಸಾಮಾಗ್ರಿ ಸರಬರಾಜಿನಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿರುತ್ತವೆ.
ಆದ ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ನಾವು ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಪ್ರತ್ಯುತ್ತರವನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ದಿನಾಂಕ: 21-04-2026 ರಂದು ಜ್ಞಾಪನವನ್ನು ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ದೂರು ಅರ್ಜಿಗೆ ಸಂಬAಧಿಸಿದAತೆ ತನಿಖಾ ವರದಿಯನ್ನಾಗಲಿ ಅಥವಾ ಪ್ರತ್ಯುತ್ತರವನ್ನಾಗಲಿ ನೀಡಿರುವುದಿಲ್ಲ.
ಈ ಬಗ್ಗೆ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರಿಗೆ ದೂರು ನೀಡಲಾಗಿತ್ತು. ಆದರೆ ಇವರು ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ
ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ಆಶ್ರಯ, ತಾಲೂಕು ವಿಶ್ವಕರ್ಮ ಸೇವಾ ಸಮಾಜ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಜಂಟಿ ವತಿಯಿಂದ ಆಯೋಜಿಸಿರುವ ‘ವಿಶ್ವಕರ್ಮ ಜಯಂತಿ’ ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ರವಿಶಂಕರ್ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಜಿ. ಸುರೇಂದ್ರ ಮೂರ್ತಿ ಅವರು ವಹಿಸಲಿದ್ದಾರೆ. ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ರೇವಣ್ಣ, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್ ಎನ್., ಪದಾಧಿಕಾರಿಗಳಾದ ಈಶ್ವರಾಚಾರ್, ಚೇತನ್ ಮೂರ್ತಿ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಲಿದ್ದು, ಬಳಿಕ ಅಲ್ಲಿಂದ ತಾಲೂಕು ಆಡಳಿತ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ.
ವಿಶೇಷವೆಂದರೆ, ಪ್ರಕಾಶಕರು ಹಾಗೂ ಆಯೋಜಕರ ಆಸಕ್ತಿಯ ಮೇರೆಗೆ ‘ನಿರಾಕಾರ ವಿಶ್ವಕರ್ಮ’ ಕೃತಿಯನ್ನು ತಿಂಗಳ ಅಂತರದಲ್ಲಿ ಮೂರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸೆಪ್ಟೆಂಬರ್ 17ರಂದು ಕೆ.ಆರ್.ನಗರದಲ್ಲಿ ಕೃತಿ ಬಿಡುಗಡೆಯಾದರೆ, ಸೆಪ್ಟೆಂಬರ್ 20ರಂದು ಬೆಂಗಳೂರಿನ ತಾತಗುಣಿಯ ವಿಶ್ವಕರ್ಮ ನಗರದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳಿಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಹಾಗೆಯೇ, ನವೆಂಬರ್ 22ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾವ್ಯಸ್ಪಂದನ ಪ್ರಕಾಶನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿಯೂ ಈ ಕೃತಿ ಬಿಡುಗಡೆಯಾಗಲಿದೆ.
ಮಾನವ ನಾಗರಿಕತೆಯ ಇತಿಹಾಸವನ್ನು ತೆರೆದರೆ, ಅದರ ಪ್ರತಿಯೊಂದು ಪುಟದ ಹಿಂದೆಯೂ ಶ್ರಮಿಸಿದ ಅನಾಮಿಕ ಕೈಗಳು ಕಾಣಿಸುತ್ತವೆ. ಆ ಕೈಗಳು ಕಲ್ಲನ್ನು ಕೆತ್ತಿ ದೇವಸ್ಥಾನವಾಗಿಸಿವೆ, ಕಬ್ಬಿಣವನ್ನು ಬಡಿದು ಆಯುಧವಾಗಿಸಿವೆ, ಮರಕ್ಕೆ ರೂಪ ಕೊಟ್ಟು ಬಾಗಿಲಾಗಿಸಿವೆ, ಮಣ್ಣಿಗೆ ಜೀವ ತುಂಬಿ ಮಡಕೆಯಾಗಿಸಿವೆ; ಹಾಗೆಯೇ ಬಣ್ಣಗಳ ಮೂಲಕ ಅಚ್ಚಳಿಯದ ಭಾವನೆಗಳನ್ನು ಮೂಡಿಸಿವೆ. ಆ ಸೃಷ್ಟಿಶೀಲ ಕೈಗಳಿಗೆ ಬಹುಶಃ ಇತಿಹಾಸದ ಅಧಿಕೃತ ಪುಟಗಳಲ್ಲಿ, ರಾಜ-ಮಹಾರಾಜರ ಕಥೆಗಳ ನಡುವೆ ದೊಡ್ಡ ಅಕ್ಷರಗಳಲ್ಲಿ ಹೆಸರು ಸಿಕ್ಕಿಲ್ಲದಿರಬಹುದು. ಆದರೆ ಅವರು ನಿರ್ಮಿಸಿದ ಕಲೆ, ಶಿಲ್ಪ, ವಾಸ್ತು, ಉಪಕರಣ ಮತ್ತು ಸೌಂದರ್ಯವೇ ನಮ್ಮ ನಾಗರಿಕತೆಯ ಉಸಿರಾಗಿ, ಜೀವಂತ ಸಾಕ್ಷಿಗಳಾಗಿ ಇಂದಿಗೂ ಉಳಿದಿವೆ. ಅಂತಹ ಸೃಜನಶೀಲ ಕೈಗಳ ಸಮೂಹ ಸ್ಮೃತಿಯನ್ನು, ಪರಂಪರೆಯನ್ನು ಮತ್ತು ಇತಿಹಾಸವನ್ನು ಅರಿಯುವ ಅರ್ಥಪೂರ್ಣ ಪ್ರಯತ್ನವನ್ನು ನಿರಾಕಾರ ವಿಶ್ವಕರ್ಮ ಕೃತಿಯಲ್ಲಿ ಲೇಖಕರಾದ ಚಂದ್ರಶೇಖರ ಗಂಧನಹಳ್ಳಿ ಅವರು ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!
ಸುದ್ದಿದಿನ, ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ತನ್ನ 3 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿದೆ. `ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಸಹಕಾರ’ ಎಂಬ ಧ್ಯೇಯದೊಂದಿಗೆ ಆರಂಭವಾದ ಈ ಯೋಜನೆ ಇಂದು ಕೋಟ್ಯಂತರ ಕುಟುಂಬಗಳ ಬದುಕಿಗೆ ಬೆಳಕಾಗಿದೆ.
ಹೌದು! 2023ರ ಆಗಸ್ಟ್‌ನಲ್ಲಿ ಜಾರಿಗೆ ಬಂದ ಈ ಯೋಜನೆಯಡಿ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಪ್ರತಿ ತಿಂಗಳು 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್‌ಗೆ ದೊಡ್ಡ ಆಸರೆಯಾಗಿದೆ ಎಂದೇ ಹೇಳಬಹುದು.
http://Visit : www.suddidina.com
ಗೃಹಜ್ಯೋತಿ ಯೋಜನೆಯ ಸಾಧನೆಯ ಗಿರಿ:
ಇಂಧನ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ರಾಜ್ಯದ್ಯಂತ ಬರೋಬ್ಬರಿ 1.65 ಕೋಟಿ. ಫಲಾನುಭವಿಗಳು ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆ, ಸೇವಾಸಿಂಧು ಪೋರ್ಟಲ್‌ನಲ್ಲಿ ಒಟ್ಟು 1,76,69,368 ಜನರು ನೋಂದಾಯಿಸಿಕೊಂಡಿದ್ದರೆ. ಒಟ್ಟು 2,06,65,451 ಗೃಹಬಳಕೆ ವಿದ್ಯುತ್ ಗ್ರಾಹಕರಿದ್ದಾರೆ. ಅಂದರೆ ಶೇ.85ಕ್ಕಿಂತ ಹೆಚ್ಚು ಗ್ರಾಹಕರು ಈ ಯೋಜನೆಯಡಿ ನೋಂದಾಯಿಸಿಕೊಂಡು ಲಾಭ ಪಡೆಯುತ್ತಿದ್ದಾರೆ.
ಆರ್ಥಿಕವಾಗಿ ನೋಡುವುದಾದರೆ, 2023ರ ಆಗಸ್ಟ್‌ನಿಂದ 2026ರ ಜುಲೈ ವರೆಗೆ, ಕಳೆದ ಮೂರು ವರ್ಷಗಳಲ್ಲಿ ಸರ್ಕಾರವು ಫಲಾನುಭವಿಗಳಿಗೆ ಒಟ್ಟು ₹28,759.54 ಕೋಟಿ ರೂಪಾಯಿ ಸಬ್ಸಿಡಿ ಬಿಡುಗಡೆ ಮಾಡಿದೆ. ಇದು ಸರ್ಕಾರದ ಬದ್ಧತೆ ಮತ್ತು ಜನಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ.
ಕುಟುಂಬದ ಬಜೆಟ್‌ಗೆ ಆಸರೆ, ಉಜ್ವಲ ಭವಿಷ್ಯಕ್ಕೆ ಬುನಾದಿ:
ಪ್ರತಿ ತಿಂಗಳು 1000 ದಿಂದ 1500 ರೂಪಾಯಿಗಳವರೆಗೆ ವಿದ್ಯುತ್ ಬಿಲ್ ಕಟ್ಟುತ್ತಿದ್ದ ಸಾಮಾನ್ಯ ಕುಟುಂಬಗಳಿಗೆ ಈಗ ಆ ಹಣ ಸಂಪೂರ್ಣವಾಗಿ ಉಳಿತಾಯವಾಗುತ್ತಿದೆ. ಈ ಉಳಿತಾಯದ ಹಣವನ್ನು ಅವರು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಇತರ ಅಗತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಗೃಹಿಣಿಯರಿಗೆ ಇದು ಆರ್ಥಿಕವಾಗಿ ದೊಡ್ಡ ನೆರವಾಗಿದೆ.
ಕೇವಲ ಉಚಿತ ವಿದ್ಯುತ್ ನೀಡುವುದಷ್ಟೇ ಅಲ್ಲ, ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದ್ದು, ರಾಜ್ಯದ ಜನರ ಜೀವನಮಟ್ಟ ಸುಧಾರಿಸಿದೆ. ಗೃಹ ಜ್ಯೋತಿ ಯೋಜನೆಯು ಕೇವಲ ಒಂದು ಯೋಜನೆಯಾಗಿ ಉಳಿಯದೆ, ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕುಟುಂಬಗಳನ್ನು ಈ ಯೋಜನೆಯಡಿ ತರಲು ಇಂಧನ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.

















