ದಿನದ ಸುದ್ದಿ
ಮಾಯಕೊಂಡ ಗುಡ್ಡದಹಳ್ಳಿಗೆ ಕೆ.ಎಸ್.ಆರ್.ಟಿ.ಸಿ.ಬಸ್ ಸೌಕರ್ಯ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
ಸುದ್ದಿದಿನ,ದಾವಣಗೆರೆ:ಮಕ್ಕಳ ಭವಿಷ್ಯ ಉಜ್ವಲವಾಗಲು ಅವರಿಗೆ ಸರಿಯಾದ ಶಿಕ್ಷಣ ಲಭಿಸಿ ಉತ್ತಮ ಆರೋಗ್ಯ ಸಂರಕ್ಷಣೆ ಸಿಕ್ಕಾಗ ಅವರ ಸಂಪೂರ್ಣ ಅಭಿವೃದ್ದಿಯಾಗಲಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕ್ಷೇತ್ರ ಸಂಚರಿಸಿ ಶಾಲೆ, ಗ್ರಾಮದ ಮೂಲಭೂತ ಸೌಕರ್ಯದ ಕಡೆ ಹೆಚ್ಚು ಗಮನಿಸುತ್ತೇನೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಅವರು ಮಾಯಕೊಂಡ ಕ್ಷೇತ್ರದ ಗುಡ್ಡದಹಟ್ಟಿಯಲ್ಲಿ ಕೆ.ಎಸ್.ಆರ್.ಟಿ.ಸಿ.ಯಿಂದ ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿ ಸಮಾರಂಭದಲ್ಲಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿನ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ ಸಿಗಬೇಕು. ಇದು ಲಭಿಸಿದಾಗ ಅವರ ಶಿಕ್ಷಣಕ್ಕೆ ಸರಿಯಾದ ಅಡಿಪಾಯ ಹಾಕಿದಂತಾಗುತ್ತದೆ. ಇದರ ಜೊತೆಗೆ ಗ್ರಾಮೀಣ ಪ್ರದೇಶದ ಮಕ್ಕಳು ಸೇರಿದಂತೆ ಜನರಿಗೆ ಆರೋಗ್ಯ ಸೌಕರ್ಯಗಳು ಸಿಗಬೇಕೆಂದು ತಿಳಿಸಿದರು.
ಸರ್ಕಾರಿ ಶಾಲೆಯಲ್ಲಿ ಮೂಲಭೂತ ಸೌಕರ್ಯ ಇನ್ನೂ ಅಗತ್ಯವಾಗಿದೆ, ಸರ್ಕಾರಿ ಶಾಲೆಯಲ್ಲಿ ಓದಿದವರು ಅನೇಕ ಉನ್ನತ ಹುದ್ದೆ, ಸ್ಥಾನದಲ್ಲಿದ್ದಾರೆ. ಈ ಎಲ್ಲಾ ಹಳೆ ವಿದ್ಯಾರ್ಥಿಗಳನ್ನು ಒಂದುಗೂಡಿಸಿ ಶಾಲಾಭಿವೃದ್ದಿ ಮಾಡಲು ಎಸ್.ಡಿ.ಎಂ.ಸಿ.ಯವರು ಹಳೆ ವಿದ್ಯಾರ್ಥಿಗಳ ಸಂಘ ಸ್ಥಾಪನೆ ಮಾಡುವ ಮೂಲಕ ಅವರಿಂದ ಆರ್ಥಿಕ ಸಹಕಾರ, ಸಲಹೆಗಳನ್ನು ಪಡೆದು ತಮ್ಮ ಶಾಲೆಯ ಕೊಠಡಿ, ಶಾಲಾಭಿವೃದ್ದಿ ಮಾಡಬಹುದಾಗಿದೆ. ಸರ್ಕಾರಿ ಶಾಲೆಯ ಶಿಕ್ಷಕರು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ಹೊಂದುವುದರಿಂದ ಇವರು ಉತ್ತಮ ಶಿಕ್ಷಕರಾಗಿರುವರು. ಶಿಕ್ಷಕರ ಸದ್ಬಳಕೆಯಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ದಿ ಮತ್ತು ಶಾಲೆಯ ಮೂಲಭೂತ ಸೌಕರ್ಯದ ಅಭಿವೃದ್ದಿ ಮಾಡುವಲ್ಲಿ ಗ್ರಾಮಸ್ಥರ ಪಾತ್ರ ಬಹಳ ಮುಖ್ಯವಾಗಿರುತ್ತದೆ ಎಂದರು.
ಕ್ಷೇತ್ರದ ಜನರ ಹಾಗೂ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಸಂಸದರ ಕಚೇರಿಯನ್ನು ಆರಂಭಿಸಲಾಗಿದ್ದು ಜನರು ಇಲ್ಲಿಗೆ ಬಂದು ಯಾವುದೇ ಹಿಂಜರಿಕೆ ಇಲ್ಲದೆ ತಮ್ಮ ಕುಂದುಕೊರತೆಗಳ ಅಹವಾಲುಗಳನ್ನು ನೀಡಬಹುದಾಗಿದೆ. ಮುಂದಿನ ದಿನಗಳಲ್ಲಿ ನಾನು ಸಹ ದಾವಣಗೆರೆಯಲ್ಲಿರದೆ ಕ್ಷೇತ್ರದಲ್ಲಿ ಸಂಚರಿಸುವ ಮೂಲಕ ಜನರ ಅಹವಾಲುಗಳನ್ನು ಆಲಿಸಿ ಪರಿಹಾರಿಸಲಾಗುತ್ತದೆ ಎಂದರು.
ಗುಡ್ಡದಹಳ್ಳಿಗೆ ಬಸ್ ಬೇಡಿಕೆ ಸಾಕಷ್ಟು ದಿನಗಳಿಂದ ಇದ್ದು ಇದನ್ನು ಪರಿಹರಿಸಲಾಗಿದೆ. ಮಾಯಕೊಂಡ ರಸ್ತೆ ಅಭಿವೃದ್ದಿಯಾಗಬೇಕೆಂದು ಜನರು ಕೇಳುತ್ತಿದ್ದು ರಸ್ತೆ ನಿರ್ಮಾಣಕ್ಕೆ ರೂ.8 ಕೋಟಿ ಮಂಜೂರಾಗಿದ್ದು ಮುಂದಿನ ದಿನಗಳಲ್ಲಿ ಕೆಲಸ ಪ್ರಾರಂಭವಾಗಲಿದೆ ಎಂದರು.
ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ ಮಾತನಾಡಿ ಗುಡ್ಡದಹಳ್ಳಿ ತಾಲ್ಲೂಕಿನ ಕೊನೆಯ ಭಾಗದಲ್ಲಿದ್ದು ಇಲ್ಲಿಗೆ ಬಸ್ ಸಂಪರ್ಕವಿಲ್ಲದೆ ಜನರಿಗೆ ಸಾಕಷ್ಟು ಅನಾನುಕೂಲವಾಗಿತ್ತು. ಬಸ್ ಸೌಕರ್ಯ ಕಲ್ಪಿಸಿದ್ದರಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ಮೂಡಿದೆ. ಭಾವಿಹಾಳ್ ಮೂಲಕ ಗುಡ್ಡದಹಳ್ಳಿ, ನರಗÀನಹಳ್ಳಿ ಮೂಲಕ ದಾವಣಗೆರೆಗೆ ಪ್ರಯಾಣಿಸಬಹುದು. ಈ ಬಸ್ ಗ್ರಾಮಕ್ಕೆ ಬೆಳಗ್ಗೆ 8.45 ಕ್ಕೆ ಬರಲಿದ್ದು ಮಧ್ಯಾಹ್ನ 1.30 ಕ್ಕೆ ದಾವಣಗೆರೆಯಿಂದ ಗ್ರಾಮಕ್ಕೆ ಮತ್ತು ಸಂಜೆ 4 ಗಂಟೆಗೆ ದಾವಣಗೆರೆಯಿಂದ ಬಾವಿಹಾಳ್ ಮಾರ್ಗವಾಗಿ ಗುಡ್ಡದಹಳ್ಳಿ ತಲುಪಲಿದೆ. ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ತಾಯಂದಿರು ಮೊದಲನೆಯದಾಗಿ ಈ ಸೌಲಭ್ಯ ಪಡೆಯುವಂತಾಗಲಿ ಎಂದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ ಗ್ರಾಮದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಬೇಕು, ಎಲ್ಲೆಂದರಲ್ಲಿ ಹಾಕಿರುವ ಪ್ಲಾಸ್ಟಿಕ್ ತೆಗೆದು ಸ್ವಚ್ಚತೆ ಕಾಪಾಡಬೇಕು. ಗ್ರಾಮಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಶಾಸಕರು, ಸಂಸದರು ಕಲ್ಪಿಸಲಿದ್ದು ತಾವುಗಳು ಗ್ರಾಮವನ್ನು ಸಂಪೂರ್ಣವಾಗಿ ಸ್ವಚ್ಚವಾಗಿಟ್ಟುಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಜಿ.ಕೊಟ್ರೇಶ್, ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಕರಾದ ಸಿದ್ದೇಶ್ ಹೆಬ್ಬಾಳ್, ತಹಶೀಲ್ದಾರ್ ಡಾ; ಅಶ್ವಥ್, ಕಾರ್ಯನಿರ್ವಾಹಕ ಅಧಿಕಾರಿ ರಾಮಭೋವಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ನಾಗರಾಜ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ನಕಲಿ ವೈದ್ಯರಿಗೆ ದಂಡ ; ಮೆಡಿಕಲ್ ಸ್ಟೋರ್ ಮುಚ್ಚಲು ಆದೇಶ
ಸುದ್ದಿದಿನ,ದಾವಣಗೆರೆ:ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆ ನಕಲಿ ವೈದ್ಯ ಹಾಗೂ ಲಿಂಗಾಪುರದಲ್ಲಿ ಫಾರ್ಮಾಸಿಸ್ಟ್ ನಡೆಸುತ್ತಿದ್ದ ಕ್ಲಿನಿಕ್ ಮುಚ್ಚಿಸಿ ತಲಾ ಲಕ್ಷ ರೂ.ಗಳ ದಂಡ ಪಾವತಿಸುವಂತೆ ಜಿಲ್ಲಾಧಿಕಾರಿ ಹಾಗೂ ಕೆಪಿಎಂಇ ನೊಂದಣಿ ಪ್ರಾಧಿಕಾರ ಹಾಗೂ ಸಾರ್ವಜನಿಕ ಕುಂದುಕೊರತೆ ನಿವಾರಣಾ ಸಮಿತಿ ಅಧ್ಯಕ್ಷರಾದ ಜಿ.ಎಂ.ಗಂಗಾಧರಸ್ವಾಮಿ ಆದೇಶಿಸಿದ್ದಾರೆ.
ಭದ್ರಾವತಿ ತಾಲ್ಲೂಕಿನ ಸನ್ಯಾಸಿಕೊಡಮಗ್ಗಿ ಗ್ರಾಮದ 57 ವರ್ಷದ ಶ್ರೀನಿವಾಸ್ ತಂದೆ ತಿಮ್ಮಪ್ಪ ಇವರು ಹೊನ್ನಾಳಿ ತಾಲ್ಲೂಕಿನ ಲಿಂಗಾಪುರದಲ್ಲಿ ಶೀನಪ್ಪಗೌಡ ಎಂಬುವರ ಮನೆ ಬಾಡಿಗೆ ಪಡೆದು ಹಲವು ವರ್ಷಗಳಿಂದ ಶ್ರೀ ರಾಮಾಂಜನೇಯ ಮೆಡಿಕಲ್ಸ್ ಮತ್ತು ಜನರಲ್ ಸ್ಟೋರ್ ಎಂದು ಪರವಾನಗಿ ಪಡೆದು ಜೊತೆಗೆ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಾ ಜನರಿಗೆ ಚಿಕಿತ್ಸೆ ನೀಡುತ್ತಿದ್ದನು. ಇವರು ಪಡೆದ ಮೆಡಿಕಲ್ ಸ್ಟೋರ್ ಲೈಸೆನ್ಸ್ ರದ್ದುಪಡಿಸಿ ಒಂದು ಲಕ್ಷ ದಂಡ ವಿಧಿಸಲಾಗಿದೆ.
ಮತ್ತೊಬ್ಬ ನಕಲಿ ವೈದ್ಯ ಹಿರೇಕೇರೂರು ತಾಲ್ಲೂಕಿನ ಹಿರೇ ಮರಬ ಗ್ರಾಮದ 45 ವರ್ಷದ ಲಕ್ಷ್ಮಣ ಬಿನ್ ಫಕ್ಕೀರಪ್ಪ ಇವರು ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆ ಗ್ರಾಮದಲ್ಲಿ ದೇವಸ್ಥಾನದ ಹತ್ತಿರ ಬಸವನಗೌಡ ಎಂಬುವರಿಂದ ಮನೆ ಬಾಡಿಗೆ ಪಡೆದು ಹಲವು ವರ್ಷಗಳಿಂದ ಅನಧಿಕೃತ ಕ್ಲಿನಿಕ್ ನಡೆಸುತ್ತಾ ಬಂದಿದ್ದರು. ತಪಾಸಣೆ ವೇಳೆ ಬಿಇಎಂಎಸ್ ಪ್ರಮಾಣ ಪತ್ರ ಹೊಂದಲಾಗಿದೆ ಎಂಬ ಮಾಹಿತಿ ನೀಡಿದ್ದು ಇದು ಅಮಾನ್ಯ ಪ್ರಮಾಣ ಪತ್ರವಾಗಿರುವುದರಿಂದ ನಕಲಿ ಎಂದು ಪರಿಗಣಿಸಿ ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ.
ಈ ನಕಲಿ ಕ್ಲಿನಿಕ್ ಗಳ ಬಗ್ಗೆ ಹೊನ್ನಾಳಿ ಉಪ ವಿಭಾಗಾಧಿಕಾರಿ ಅಭಿಷೇಕ್ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್ ಸ್ಥಳ ಮಹಾಜರು ಮಾಡಿ ಸಮಗ್ರ ವರದಿ ನೀಡಿದ್ದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಕೆಪಿಎಂಇ ನೊಂದಣಿ ಸದಸ್ಯ ಕಾರ್ಯದರ್ಶಿ ಡಾ.ಷಣ್ಮುಖಪ್ಪ ಜಿಲ್ಲಾಧಿಕಾರಿಗಳಿಗೆ ಸಮಗ್ರ ವರದಿಯೊಂದಿಗೆ ಕ್ರಮಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
AI ವಲಯದಲ್ಲಿ ಜಗತ್ತಿನ ನೂರು ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿ ಪ್ರಕಟ
ಸುದ್ದಿದಿನಡೆಸ್ಕ್:ಕೃತಕ ಬುದ್ಧಿಮತ್ತೆ ವಲಯದಲ್ಲಿ ಜಗತ್ತಿನ ನೂರು ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯನ್ನು ಟೈಮ್ ಪತ್ರಿಕೆ ಪ್ರಕಟಿಸಿದ್ದು, ಅದರಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಸ್ಥಾನ ಪಡೆದಿದ್ದಾರೆ.
ಅಶ್ವಿನಿ ವೈಷ್ಣವ್ ಅವರನ್ನು ಶಾರ್ಪರ್ ವರ್ಗದಲ್ಲಿ ಹೆಸರಿಸಲಾಗಿದ್ದು, ಅವರ ನಾಯಕತ್ವದಲ್ಲಿ ಮುಂದಿನ 5 ವರ್ಷಗಳಲ್ಲಿ ಸೆಮಿಕಂಡಕ್ಟರ್ ತಯಾರಿಕಾ ಕ್ಷೇತ್ರದ ಮೊದಲ 5 ದೇಶಗಳಲ್ಲಿ ಭಾರತ ಸ್ಥಾನ ಪಡೆಯುವ ಆಶಯದಲ್ಲಿದೆ ಎಂದು ಟೈಮ್ ಮ್ಯಾಗ್‌ಜೀನ್ ಬರೆದಿದೆ.
ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತವನ್ನು ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿಸುವ ಪ್ರಯತ್ನದಲ್ಲಿ ಸಚಿವರು ನಿರ್ವಹಿಸಿದ ಮಹತ್ವದ ಪಾತ್ರದ ಹಿನ್ನೆಲೆಯಲ್ಲಿ ಪಟ್ಟಿಯಲ್ಲಿ ಅವರ ಹೆಸರು ನಮೂದಿತವಾಗಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.
ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಮುಖ ಕೊಡುಗೆ ನೀಡಿದ ಇನ್ಫೋಸೀಸ್‌ನ ಸಹ ಸಂಸ್ಥಾಪಕ ನಂದನ್ ನಿಲೇಕಣಿ, ಸಿಇಓಗಳಾದ ಗೂಗಲ್‌ನ ಸುಂದರ್ ಪಿಚಾಯಿ, ಮೈಕ್ರೋಸಾಫ್ಟ್‌ನ ಸತ್ಯ ನಾದೆಲ್ಲಾ, ಓಪನ್‌ಎಐ ನ ಸ್ಯಾಮ್ ಅಲ್ಟ್‌ಮನ್, ಮೆಟಾದ ಮಾರ್ಕ್ ಝುಕೇರ್‌ಬರ್ಗ್ ಟೈಮ್ ಪ್ರಕಟಿಸಿದ ಪಟ್ಟಿಯಲ್ಲಿ ಸೇರಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರಾಜಧಾನಿಯಲ್ಲಿ ಅಪಾಯಕಾರಿ ಮರಗಳನ್ನು ಕತ್ತರಿಸುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆ
ಸುದ್ದಿದಿನಡೆಸ್ಕ್:ರಾಜಧಾನಿ ಬೆಂಗಳೂರಿನಲ್ಲಿ 15 ದಿನದೊಳಗೆ ಗುಂಡಿ ಮುಚ್ಚುವಂತೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ಸೂಚಿಸಿದ್ದಾರೆ.
ವಿದೇಶ ಪ್ರವಾಸಕ್ಕೂ ಮುನ್ನ ವೈಯಾಲಿಕಾವಲ್ ಬಿಬಿಎಂಪಿ ಕಚೇರಿಯಲ್ಲಿ ಅಧಿಕಾರಿಗಳ ಜತೆ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಇಂದು ಸಭೆ ನಡೆಸಿದ ಅವರು ಸರಿಯಾಗಿ ಕಾರ್ಯನಿವಹಿಸದ ಅಧಿಕಾರಿಗಳನ್ನು ಅಮಾನತುಗೊಳಿಸುವ ಎಚ್ಚರಿಕೆ ನೀಡಿದ್ದಾರೆ.
ಸೆಪ್ಟಂಬರ್‌ನಲ್ಲಿ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ತಿಳಿಸಿದ ಅವರು, ಅಪಾಯಕಾರಿ ಮರಗಳಿದ್ದರೆ, ಕತ್ತರಿಸುವಂತೆ ಸೂಚಿಸಿದ್ದಾರೆ.
ಯಾವುದೇ ದೂರು ಬಂದರೆ ಅಧಿಕಾರಿಗಳೇ ನೇರ ಹೊಣೆ ಎಂದಿದ್ದಾರೆ. ಸಭೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತ ಮೌನೀಶ್ ಮೌದ್ಗೀಲ್, ಬಿಎಂಆರ್ಡಿಎ ಆಯುಕ್ತ, ಉಪಮುಖ್ಯಮಂತ್ರಿಗಳ ಕಾರ್ಯದರ್ಶಿ ರಾಜೇಂದ್ರ ಚೋಳನ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ಪರಿಶಿಷ್ಟ ಜಾತಿ ಯುವಕ , ಯುವತಿಯರಿಗೆ ಜಿಮ್ ಫಿಟ್ನೆಸ್, ಬ್ಯೂಟೀಷಿಯನ್, ಚಾಟ್ಸ್ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ರಾಯಚೂರು | ಶಾಲಾ ಬಸ್ ಅಪಘಾತ ; ಇಬ್ಬರು ವಿದ್ಯಾರ್ಥಿಗಳು ಸಾವು
-
ದಿನದ ಸುದ್ದಿ5 days ago
ಇಂದು ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ
-
ದಿನದ ಸುದ್ದಿ4 days ago
ಆತ್ಮಕತೆ | ಸರಳ ಹಾಗೂ ಒಲವಿನ ಮದುವೆಗಳ ಸಾಲುಸಾಲು
-
ದಿನದ ಸುದ್ದಿ6 days ago
ಸರ್ಕಾರಿ ಐಟಿಐ ಪ್ರವೇಶಕ್ಕೆ ಆಹ್ವಾನ
-
ದಿನದ ಸುದ್ದಿ5 days ago
ಭಾನುವಾರವೂ ಕ್ಯಾಶ್ ಕೌಟರ್ ಓಪನ್ ; ವಿದ್ಯುತ್ ಬಿಲ್ ಬಾಕಿ ಪಾವತಿಸಿ : ಬೆಸ್ಕಾಂ
-
ದಿನದ ಸುದ್ದಿ4 days ago
ರಿವರ್ ಕ್ರಾಸಿಂಗ್ ತರಬೇತಿ ; ಬೋಟ್ ಮುಳುಗಿ ಇಬ್ಬರು ಕಮಾಂಡೋಗಳು ಸಾವು
-
ದಿನದ ಸುದ್ದಿ5 days ago
ಹತ್ತು ವರ್ಷಗಳ ಬಳಿಕ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧಾರ