Connect with us

ದಿನದ ಸುದ್ದಿ

ಮೆಡಿಕಲ್ ಮಾಫಿಯಾ : ರೋಗಿಯ ಜೀವಕ್ಕೆ ಬೆಲೆ ಇದೆಯಾ..?

Published

on

  • ನಾಗೇಶ್ ಹೆಗಡೆ 

ಖಾಸಗಿ ಆಸ್ಪತ್ರೆಗಳು ಈಗಿನ ಕೋವಿಡ್ ಸಂಕಟಕಾಲದಲ್ಲಿ ಅದೆಷ್ಟು ರೀತಿ ರೋಗಿಗಳ ಸುಲಿಗೆಯಲ್ಲಿ ತೊಡಗಿವೆ ಎಂಬುದರ ವರದಿ ದಿನದಿನವೂ ಬರುತ್ತಿದೆ. ಸರಕಾರಿ ನಿಗಾ ಇದ್ದರೂ ಕ್ಯಾರೇ ಇಲ್ಲದೆ ಇವು ಲಂಗು ಲಗಾಮಿಲ್ಲದಂತೆ ವಸೂಲಿ ದಂಧೆಗೆ ಇಳಿದಿವೆ. ಈ ಮಾಫಿಯಾಗಳ ಕುರಿತು ವಿವೇಕ್ ಬಿಂದ್ರ ಎರಡು ವರ್ಷಗಳ ಹಿಂದೆ ದನಿ ಎತ್ತಿ, ಹಿಂದಿಯಲ್ಲಿ ಕೂಗಾಡಿದ ವಿಡಿಯೊ ಇಲ್ಲಿದೆ.

ಹಿಂದೀ ಭಾಷೆ ಗೊತ್ತಿಲ್ಲದವರಿಗೆ ನಾಗೇಶ ಹೆಗಡೆ ಮಾಡಿದ ಅದರ ಅಜಮಾಸು ತರ್ಜುಮೆ ಇದು (ಆವರಣದಲ್ಲಿ ಕೊಟ್ಟ ಸಂಖ್ಯೆಗಳು ಈ ವಿಡಿಯೊದ ಕಾಲಕ್ರಮವನ್ನು ತೋರಿಸುತ್ತವೆ). ಕನ್ನಡದಲ್ಲಿ ಇಷ್ಟೇ ಗಟ್ಟಿ ದನಿಯಲ್ಲಿ ಗರ್ಜಿಸಬಲ್ಲ ಯಾರಾದರೂ ಇದ್ದರೆ ಈ ಮಾಹಿತಿಯನ್ನು ಬಳಸಿಕೊಂಡು ವಿಡಿಯೊ ಮಾಡಬಹುದು. ಹಿಂದೀ ಭಾಷೆ ಗೊತ್ತಿದ್ದವರು ಯುಟ್ಯೂಬಿನಲ್ಲಿ ಅಥವಾ ಗೂಗಲ್‌ನಲ್ಲಿ vivek bindra ಇವರ ಇನ್ನೂ ಅಬ್ಬರದ, ಇನ್ನೂ ರೋಚಕ ಉದ್ದೀಪನ ಉಪನ್ಯಾಸಗಳನ್ನು ನೋಡಬಹುದು. ಖಾಸಗಿ ಆಸ್ಪತ್ರೆಗಳ ತಮ್ಮ ಅನುಭವವನ್ನು ಇಲ್ಲಿ ಹಂಚಿಕೊಳ್ಳಬಹುದು.


(0.15: ಸೆಕೆಂಡು) ದೇಶದಲ್ಲಿ ಬಿಳಿಕೋಟಿನ ಲೂಟಿಖೋರರ, ಖೂನಿದಾರರ ಹಾವಳಿ ಅತಿಯಾಗಿದೆ. ಈ ಖಾಸಗಿ ಆಸ್ಪತ್ರೆಗಳೆಂಬ ದೋಚುದಾಣಗಳು (ಅವುಗಳ ಹೆಸರನ್ನು ಹೇಳುವುದಿಲ್ಲ ನಾನು) ದುಡ್ಡು ಮಾಡ್ಕೊಳ್ಳಿ, ಬೇಜಾರಿಲ್ಲ ಆದರೆ ಈ ರೀತಿ ಲೂಟಿಗೆ ಇಳಿಯಬೇಡಿ. ನಾನು ಬಿಸಿನೆಸ್ ಕೋಚಿಂಗ್ ಕೊಡ್ತೇನೆ; ಬಿಸಿನೆಸ್ ಹೇಗೆ ಮಾಡಬಾರದು ಅನ್ನೋದನ್ನು ಇಲ್ಲಿ ಹೇಳ್ತೇನೆ. ನಮ್ಮ ದೇಶದ ಡಾಕ್ಟರ್ಗಳಿಗೆ ದುಡ್ಡನ್ನು ಗಳಿಸುವ ಅಧಿಕಾರ ಇದೆ. ಒಪ್ಪೋಣ. ಅದನ್ನು ಖುಷಿಖುಷಿಯಿಂದ, ಜವಾಬ್ದಾರಿಯಿಂದ, ನೈತಿಕವಾಗಿ ಗಳಿಸಲು ಸಾಧ್ಯ ಇದೆ.

(1.00) ಆದರೆ ಇಲ್ಲ, ಇವರಿಗೆ ಅದೇನೂ ಬೇಕಾಗಿಲ್ಲ. ಇವರಿಗೆ ಡಯಗ್ನೋಸ್ಟಿಕ್ ಲ್ಯಾಬ್ನಿಂದಲೂ ಹಣ ಬೇಕು; ಅಂಬುಲೆನ್ಸ್ ಮೂಲಕ ರೆಫರೆನ್ಸ್ ಪೇಶಂಟ್ಗಳನ್ನು ಸೆಳೆದುಕೊಂಡು ಅಲ್ಲಿಂದಲೂ ಹಣ ನುಂಗುತ್ತಾರೆ. ನಿಮಗೆ ಗೊತ್ತಿರಬೇಕು- ಅಂಬುಲೆನ್ಸ್ ಡ್ರೈವರಿಗೆ ಹೇಳುತ್ತಾರೆ “ನೋಡಪ್ಪಾ ಪೇಶಂಟ್ ಗಳನ್ನು ನಮ್ಮಲ್ಲಿಗೇ ಕರ್ಕೊಂಡು ಬಾ, ಕಮೀಶನ್ ಕೊಡ್ತೇನೆ” ಎನ್ನುತ್ತಾರೆ. ಡ್ರೈವರು ಜಾಸ್ತಿ ಹಣ ಸಿಗುವ ರಾಂಗ್ ಡಾಕ್ಟರ್ ಬಳಿ ಒಯ್ಯುವಾಗ ದಾರಿಯಲ್ಲೇ ರೋಗಿ ಸಾಯಬಹುದು.

ಈ ಡಾಕ್ಟರ್ ಗಳಿಗೆ ಔಷಧ ಅಂಗಡಿಗಳಿಂದಲೂ ದುಡ್ಡು ಬೇಕು. ಇವರು ಔಷಧ ತಯಾರಿಸುವ ಕಂಪನಿಗಳನ್ನೂ ಲೂಟಿ ಮಾಡುತ್ತಾರೆ. ಕಂಪನಿಗಳಿಗೆ ಇವರು ಹೇಳುತ್ತಾರೆ: “ನನ್ನ ಮಗಳು ಮತ್ತು ಅವಳ ಗೆಳೆಯನಿಗೆ ನ್ಯೂಯಾರ್ಕಿಗೆ ಹೋಗುವುದಿದೆ. ಅಲ್ಲಿಂದ ನ್ಯೂಜೆರ್ಸಿ, ಅಲ್ಲಿಂದ ನ್ಯೂಝಿಲ್ಯಾಂಡ್ ಹೋಗಿ ವಾಪಸ್ ನ್ಯೂಡಿಲ್ಲಿಗೆ ಬರ್ತಾರೆ; ತುಸು ಅವರ ಖರ್ಚುವೆಚ್ಚ ನೋಡಿಕೊಳ್ಳಿ” ಎನ್ನುತ್ತಾರೆ. “ನನಗೆ ಈವೆಂಟ್ ಮಾಡೋದಿದೆ, ಖರ್ಚು ನೋಡಿಕೊಳ್ಳಿ…” ಈ ಡಾಕ್ಟರ್ ಗಳ ಬೇಡಿಕೆಗಳಿಗೆ ಮಿತಿಯೇ ಇಲ್ಲ. ಫಾರ್ಮಾ ಕಂಪನಿಗಳಿಂದ ಇವರಿಗೆ ಹಣ ಬೇಕು, ರೋಗಿಗಳಿಂದ ಹಣ ಬೇಕು; ಆಸ್ಪತ್ರೆಗಳಿಂದಲೂ ಹಣ ಬೇಕು…

(1.30) ಅಲ್ಲಾರೀ, ಹಣ ಸಂಪಾದನೆ ಮಾಡೀಪ್ಪ; ಆದರೆ ಯಾರದೋ ದೌರ್ಬಲ್ಯದ ಲಾಭ ಪಡೆಯಬೇಡಿ! ಆ ಫಾರ್ಮಾ ಕಂಪನಿ ತನಗೆ ಬಂದ ಎಲ್ಲ ಖರ್ಚನ್ನೂ ಔಷಧಕ್ಕೆ ಸೇರಿಸಿ, ಔಷಧದ ಬೆಲೆಯನ್ನು ಆಕಾಶಕ್ಕೇರಿಸಿ ರೋಗಿಗಳನ್ನು ಲೂಟಿ ಮಾಡುತ್ತಾರೆ. ಭಾರೀ ದೊಡ್ಡ ಸ್ಕ್ಯಾಂಡಲ್ ಇದು.

(1.45) ಇಂಥ ಲೂಟಿ ಮಾಡದೇ ಹಣ ಮಾಡುವ ‘ಸ್ಕೇಲೆಬಲ್ “ ವಿಧಾನವನ್ನು ನಾನು ಅದೆಷ್ಟೋ ಬಿಸಿನೆಸ್ ಕಂಪನಿಗಳಿಗೆ ತಿಳಿಸಿಕೊಟ್ಟಿದ್ದೇನೆ. ಆರೋಗ್ಯರಂಗದಲ್ಲೂ ಅಂತಹ ಮಾದರಿಗಳು ನಮ್ಮ ದೇಶದಲ್ಲಿ ಅದೆಷ್ಟೋ ಇವೆ.

(2.00) ಈಗ ನೋಡಿ: ಪ್ಯಾಥ್ ಲ್ಯಾಬ್ (ಡಯಗ್ನೋಸ್ಟಿಕ್ ಲ್ಯಾಬ್) ಆರಂಭಿಸುವ ವ್ಯಕ್ತಿ ತಾನು ತುಂಬ ಅಚ್ಚುಕಟ್ಟಾದ, ಅತ್ಯಾಧುನಿಕ ತಂತ್ರಜ್ಞಾನದ ಪ್ರಯೋಗಶಾಲೆಯನ್ನು ಸ್ಥಾಪಿಸುವ ಕನಸು ಕಾಣುತ್ತಾನೆ. ಆದರೆ ಪೇಶಂಟ್ಗಳು ತಾವಾಗಿ ಬರುವುದಿಲ್ಲ. ಆತ ಡಾಕ್ಟರ್ ಬಳಿ ಹೋಗಿ, ನಮ್ಮ ಲ್ಯಾಬಿಗೆ ರೋಗಿಗಳನ್ನು ಕಳಿಸಿ ಎನ್ನುತ್ತಾನೆ.

ಡಾಕ್ಟರ್ ಸುಮ್ನೆ ಕಳಿಸ್ತಾನಾ? “ನನಗೆ 50% ಕಮಿಶನ್ ಬೇಕು’’ ಎನ್ನುತ್ತಾನೆ. ಸೂಪರ್ ಸ್ಪೆಶಾಲಿಟಿ ಡಾಕ್ಟರಂತೂ 60% ಕಮಿಶನ್ ಹೊಡಿತಾನೆ. ಅಲ್ಲಿಗೆ ನೀವು ಲ್ಯಾಬಿಗೆ ಕೊಡುವ ಸ್ಯಾಂಪಲ್ಲಿನ ಸರಿಯಾದ ಪರೀಕ್ಷೆ ಕೂಡ ಆಗುವುದಿಲ್ಲ. ಬರೀ “ಬೇಸಿನ್ ಟೆಸ್ಟ್’’ ಮಾಡುತ್ತಾರೆ. ಬೇಸಿನ್ ಟೆಸ್ಟ್ ಎಂದರೆ, ನಿಮ್ಮ ತೋಳಿನಿಂದ ರಕ್ತ ತೆಗಿ ವಾಶ್ ಬೇಸಿನ್ ಗೆ ಸುರಿ…. ಇದು ಭಾರೀ ದೊಡ್ ಸ್ಕ್ಯಾಂಡಲ್.

(2.40) ಬಿಸಿನೆಸ್ ಗೊತ್ತಿಲ್ಲದ ಇಂಥ ದಡ್ಡಪಿಪಾಸುಗಳಿಂದಾಗಿ ನಮ್ಮ ದೇಶ ಎಂಥಾ ದುಃಸ್ಥಿತಿಯಲ್ಲಿದೆ ನೋಡಿ: ಅಂತರರಾಷ್ಟ್ರೀಯ ಆರೋಗ್ಯ ಸೂಚ್ಯಂಕದಲ್ಲಿ ನಮ್ಮ ದೇಶದ ಸ್ಥಾನ 154ರಷ್ಟು ಕೆಳಗಿದೆ. ಮೊದಲ 150 ಸ್ಥಾನಗಳಲ್ಲಿ ನಮಗೆ ಸ್ಥಾನವೇ ಇಲ್ಲ.

ನಾವು ಡಾಕ್ಟರನ್ನು ದೇವರ ಸಮಾನ ಎಂದು ನಂಬುತ್ತೇವೆ. ಡಾಕ್ಟರ್ ತನ್ನನ್ನು ದೇವರ ಸಮಾನ ಅಲ್ಲ; ಸಾಕ್ಷಾತ್ ದೇವನೇ ತಾನು ಎಂದುಕೊಂಡಿದ್ದಾನೆ. ತಾನೇ ಸರ್ವಶಕ್ತನೆಂದು ಲೂಟಿ ಮಾಡುತ್ತಾನೆ, ಪ್ರಾಣ ಹೀರುತ್ತಾನೆ.

(3.30) ಗೊತ್ತಾ ನಿಮಗೆ? ಹೈಟೆಕ್ ಆಸ್ಪತ್ರೆಗಳಲ್ಲಿ ‘ಸೇಲ್ಸ್ ರಿವ್ಯೂ’ ಮಾಡಲಾಗುತ್ತದೆ. ಡಾಕ್ಟರ್ ಗಳನ್ನು ಕೂರಿಸಿಕೊಂಡ ‘ಎಷ್ಟು ಲಾಭ ಬಂತು?’ ಎಂದು ನೋಡಲು ಮೀಟಿಂಗ್’ ನಡೆಸುತ್ತವೆ.
ಯಾವ ಡಾಕ್ಟರು ಎಷ್ಟು ಜಾಸ್ತಿ ರೋಗಿಗಳ ಅಡ್ಮಿಶನ್ ಮಾಡಿಸಿಕೊಳ್ಳುತ್ತಾನೊ ಅವನಿಗೆ ಜಾಸ್ತಿ ಕಮಿಶನ್ ಸಿಗುತ್ತದೆ. ಡಾಕ್ಟರ್ಗೆ ಹಬ್ಬವೋ ಹಬ್ಬ. ‘ಕರಿ, ಕರಿ ಅವನ್ನ, ಸೇರ್ಸು ಅವನ್ನ ವಾರ್ಡಿಗೆ’… ಅವರನ್ನ ಇವರನ್ನ ಎಲ್ಲರನ್ನೂ ಆಸ್ಪತ್ರೆಗೆ ಸೇರ್ಸು..

ಈ ಡಾಕ್ಟರುಗಳಿಗೆ ಆಸ್ಪತ್ರೆಯ ಮಾಲಿಕ ‘ಆಪರೇಶನ್ ಟಾರ್ಗೆಟ್’ ಕೊಡುತ್ತಾನೆ. “ನೀನು ಎಷ್ಟು ಆಪರೇಶನ್ ಮಾಡಿದೆ? ಎಷ್ಟು ಲ್ಯಾಬ್ ಟೆಸ್ಟ್ ಮಾಡಿಸಿದೆ?… ಮತ್ತೆ ಎಷ್ಟು ದಿನ ಏನೂ ಟ್ರೀಟ್ಮೆಂಟ್ ಇಲ್ಲದೆ ಬೆಡ್ ಮೇಲೆ ಖಾಲಿ ಮಲಗಿಸಿದೆ? ಎಷ್ಟು ಗಳಿಕೆ ಬಂತು ಆಸ್ಪತ್ರೆಗೆ? ಪ್ರೈವೇಟ್ ಬೆಡ್ ಎಷ್ಟಿತ್ತು? ಜನರಲ್ ವಾರ್ಡಿಗೆ ಎಷ್ಟು ರೋಗಿಗಳನ್ನು ಹಾಕಿದೆ?”

ಇದು ಪಕ್ಕಾ ಧಂಧೆ ಆಗಿಬಿಟ್ಟಿದೆ. ಇಂತಿಷ್ಟೇ ಪೇಶಂಟುಗಳ ಸುಲಿಗೆ ಮಾಡಬೇಕು ಎಂಬ ಟಾರ್ಗೆಟ್ ಕೊಟ್ಟಿರ್ತಾರೆ ಡಾಕ್ಟರಿಗೆ. ‘ನೀನು ಟಾರ್ಗೆಟ್ ದಾಟಿದರೆ ನಿನ್ನ ಪ್ರೊಮೋಶನ್ ಪಕ್ಕಾ’ ಎನ್ನುತ್ತಾರೆ. “…ನೀನು ಯಾವ ಔಷಧ ಶಿಫಾರಸು ಮಾಡ್ತೀಯ? ಅಲ್ಪವೆಚ್ಚದ್ದಾ? ಬೇಡ ಬೇಡ ಬೇಡ… ಆ ದುಬಾರಿ ಔಷಧವನ್ನೇ ತರಿಸು… ಕಂಪನಿಯಿಂದ ಕಮಿಷನ್ ಬರುವ ಔಷಧವನ್ನೇ ನೀನು ರೋಗಿಗೆ ಕೊಡಬೇಕು…’’

(4.00) ಒಂದು ಮಾತು ಹೇಳ್ತೀನಿ… ನಿಮ್ಮ ಚಿಕಿತ್ಸೆಯ ಅಸಲೀ ವೆಚ್ಚ ಒಟ್ಟೂ ಬಿಲ್ಲಿನ ಕೇವಲ ಹತ್ತೇ ಪರ್ಸೆಂಟ್ ಅಷ್ಟೆ. ಇನ್ನುಳಿದ 90 ಈ ಎಲ್ಲರ ಕಮೀಶನ್ನೇ ಆಗಿದೆ! ನಿಮ್ಮ ಬಿಲ್ ಎರಡು ಲಕ್ಷ ರೂಪಾಯಿ ಆಗಿದೆಯೆಂದರೆ, ಅದು 20 ಸಾವಿರ ಅಷ್ಟೆ ಆಗಬೇಕಿತ್ತು. ಈ ಇವರು ಇನ್ಶೂರನ್ಸ್ ಕಂಪನಿಗಳನ್ನೂ ಬಿಡುವುದಿಲ್ಲ. ಕಮೀಶನ್ ಕೊಡದಿದ್ದರೆ ಅಂಥ ವಿಮಾ ಕಂಪನಿಯ ಹೆಸರನ್ನೇ ಪ್ಯಾನೆಲ್ಲಿನಿಂದ ಕಿತ್ತು ಹಾಕುತ್ತಾರೆ. ಮಾಫಿಯಾ, ದೊಡ್ಡ ಮಾಫಿಯಾ ಇವರೆಲ್ಲ.

(4.30) ಈ ಡಾಕ್ಟರ್ ಗಳಿಗೂ ಟ್ರೇನಿಂಗ್ ಸಿಕ್ಕಿರುತ್ತದೆ. ಟ್ರೇನಿಂಗ್ ಏನೂ ಅಂದ್ರೆ, ಪೇಶಂಟ್ ಮೇಲೆ ಒತ್ತಾಯ ಹೇರಬೇಡಿ. ತುಸು ಹೆದರಿಸಿಬಿಡಿ… ಜಾಸ್ತಿಯಲ್ಲ, ತುಸುವೇ ಹೆದರಿಸಿಬಿಡಿ… ‘ನಾಳೆ ಇದೇ ದೊಡ್ಡದಾಗಿ ತೀರಾ ಕಾಂಪ್ಲಿಕೇಟ್ ಆಗಬಹದು… ಹೃದಯದ ಕಾಯಿಲೆ ಸೀರಿಯಸ್ ಇದೆ… ನಿಮ್ಮ ಬದುಕು, ನಿಮ್ಮ ಅಪ್ಪ ಅಮ್ಮ..’ ಎಲ್ಲವನ್ನೂ ಮೆಲ್ಲಗೆ ಹೇಳಿ, ‘ಇನ್ನುಳಿದಿದ್ದು ನಿಮ್ಮ ಆಯ್ಕೆ’ ಎಂದು ಬಿಡಿ ಸಾಕು. ಆತ ಹೆದರಿ ಕೈಜೋಡಿಸುತ್ತಾನೆ.. ‘ಒಳ್ಳೇದು ಡಾಕ್ಟರೆ ನೀವು ಹೇಳಿದ ಹಾಗೆ ದೊಡ್ಡ ..’ ಎಂದು ಕೈಜೋಡಿಸುತ್ತಾನೆ.
ಒಂದೇ ಏಟಿನಲ್ಲಿ ಇವರು ನಿಮ್ಮ ಇಡೀ ಬದುಕಿನಲ್ಲಿ ಉಳಿಸಿದ ಎಲ್ಲ ಹಣವನ್ನೂ ಸ್ವಾಹಾ ಮಾಡುತ್ತಾರೆ. ಸ್ವಲ್ಪವೂ ನಾಚಿಕೆಯಿಲ್ಲ ಇವರಿಗೆ.

(5.00) ನಿಮಗೆ ಗೊತ್ತೆ, 2010ರ ಮೊದಲು ನಮ್ಮ ದೇಶದಲ್ಲಿ ಸಿಝೇರಿಯನ್ ಹೆರಿಗೆಯ ಪ್ರಮಾಣ ಕೇವಲ ಶೇಕಡಾ ಎಂಟೂವರೆಯಷ್ಟಿತ್ತು. ಆಗೆಲ್ಲ ಗರ್ಭವತಿಗೆ ಅಥವಾ ಅವಳ ಮಗುವಿಗೆ ಅಪಾಯವಿದೆ ಎಂದಿದ್ದಾಗ ಮಾತ್ರ ಸಿಝೇರಿಯನ್ ಹೆರಿಗೆ ಮಾಡಿಸುತ್ತಿದ್ದರು. ಇಂದು ಈಗ ‘ರಿಸ್ಕ್ ಇದೇರೀ, ರಿಸ್ಕಿದೆ’ ಎಂದೆಲ್ಲ ಹೆದರಿಸಿ ಒಂದಲ್ಲ ಒಂದು ಸುಳ್ಳು ನೆಪ ಹೇಳಿ ಗರ್ಭಿಣಿಯ ಹೊಟ್ಟೆ ಕೊಯ್ದು ಶಿಶುವನ್ನು ಹೊರಕ್ಕೆ ತೆಗೆಯುತ್ತಾರೆ.

ನಗರಗಳಲ್ಲಿ ಸಿಝೇರಿಯನ್ ಶೇಕಡಾ 40ಕ್ಕೆ ಏರಿದೆ. ಟಾರ್ಗೆಟ್ ಕೊಟ್ಟಿದ್ದಾರಲ್ಲ! ಆ ಬಡಪಾಯಿ ಗರ್ಭಿಣಿ ಮತ್ತು ಅವಳ ಗಂಡ, “ನಾವು ನಾರ್ಮಲ್ ಡೆಲಿವರಿವರೆಗೆ ಕಾಯುತ್ತೇವೆ ಎಂದು ಹೇಳಿದರೆ ಮುಗೀತು. ಅವರೆದುರು ದೊಡ್ಡ ದೊಡ್ಡ ಮೆಡಿಕಲ್ ಶಬ್ದಗಳನ್ನು ಉದುರಿಸಿ, ಹೆದರಿಸಬೇಕು.

ಅರೇ! ಈ ಖಾಸಗಿಯ ಆಸ್ಪತ್ರೆಯ ಡಾಕ್ಟರುಗಳಿಗೆಲ್ಲ ಟಾರ್ಗೆಟ್ ಕೊಡಲಾಗಿದೆ. ಯಾರು ಜಾಸ್ತಿ ಸಿ-ಸೆಕ್ಷನ್ (ಸಿಝೇರಿಯನ್) ಮಾಡುತ್ತಾರೊ ಅವರಿಗೆ ಮುಂಬಡ್ತಿ ಕೊಡೋದು. ಇಡೀ ವೈದ್ಯಲೋಕವೇ ಧಂಧೆಗೆ ಇಳಿದಿದೆರೀ, ದಂಧೆಗೆ!

(6.00) ನಿಮಗೆ ನೆನಪಿರಬೇಕು, ಆತನಿಗೆ ಸಾಮಾನ್ಯ ವಾಂತಿಯಾಗಿತ್ತು ಅಷ್ಟೆ! ಎಳನೀರು ಅಥವಾ ಸಾಕಷ್ಟು ಬೆಲ್ಲದ ನೀರು (ಓಆರ್ಎಸ್) ಕೊಟ್ಟಿದ್ದರೆ ವಾಸಿ ಆಗುತ್ತಿತ್ತು. ಏನಾಯ್ತು… ಅಂದ್ರೆ ‘ನಿನ್ನ ಅಪೆಂಡಿಕ್ಸ್ ಊದಿದೆ, ಅದು ಬಿರಿದುಕೊಂಡಿದೆ’ ಎಂದು ಹೆದರಿಸಿ ಒಂದೂವರೆ ಲಕ್ಷ ಕಕ್ಕಿಸಿ ಆತನ ಹೊಟ್ಟೆಗೆ ಬ್ಲೇಡ್ ಹಾಕಿದ್ದು, ಹೊಲಿಗೆ ಹಾಕಿದ್ದು ಅಷ್ಟೆ. ಒಂದೂವರೆ ಲಕ್ಷ…

(6.10) ನಾನು ಬರೀ ನೆಗೆಟಿವ್ ಮಾತಾಡುತ್ತಿಲ್ಲ ಇಲ್ಲಿ. ಡಾ. ದೇವಿಶೆಟ್ಟಿ ಅನ್ನೋರು ಇದ್ದಾರೆ. ಅವರ ಬಗ್ಗೆ ಇಡೀ ದೇಶಕ್ಕೇ ಗೊತ್ತಿದೆ. ಪದ್ಮಶ್ರೀ, ಪದ್ಮಭೂಷಣ ಎಂದೆಲ್ಲ ಸಂಮಾನಿತರಾಗಿದ್ದಾರೆ. 23 ಆಸ್ಪತ್ರೆಗಳನ್ನು ಸ್ಥಾಪಿಸಿದ್ದಾರೆ. ಏಳು ಹಾರ್ಟ್ ಸೆಂಟರ್ ಗಳನ್ನು ಆರಂಭಿಸಿದ್ದಾರೆ. ಇವರು ಕಡಿಮೆ ಖರ್ಚಿನಲ್ಲಿ ಹೆಚ್ಚು ಹೆಚ್ಚು ಜನರಿಗೆ ಹಾರ್ಟ್ ಆಪರೇಶನ್ ಮಾಡುತ್ತಾರೆ.

ಇದಕ್ಕೆ ಇಕಾನಮಿ ಆಫ್ ಸ್ಕೇಲ್ ಎನ್ನುತ್ತಾರೆ. ಹೆನ್ರಿ ಫೋರ್ಡ್ ಮಾದರಿಯಲ್ಲಿ (ಅಂದರೆ, ಮೆಕ್ಯಾನಿಕ್ ನಿಂತಲ್ಲೇ ನಿಂತಿರುತ್ತಾನೆ, ಅರೆ ನಿರ್ಮಿತ ಕಾರುಗಳು ಆತನ ಎದುರು ಸಾಲಾಗಿ ಬರುತ್ತಿರುತ್ತವೆ. ಚಕ್ರ ಜೋಡಿಸುವವನು ಚಕ್ರ ಜೋಡಿಸುತ್ತಿರುತ್ತಾನೆ; ಗಾಜು ಕೂರಿಸುವವನು ಗಾಜು ಕೂರಿಸುತ್ತಾನೆ. ಮುಂದೆ ಮಡ್ಗಾರ್ಡ್… ಕಾರು ಇಡಿಯಾಗುತ್ತ ಹೋಗುತ್ತಿರುತ್ತದೆ).

(6.45) ಡಾಕ್ಟರ್ ದೇವಿಶೆಟ್ಟಿ ಅದೇರೀತಿ ತೆರೆದ ಹೃದಯದ ಶಸ್ತ್ರಚಿಕಿತ್ಸೆಯನ್ನು ಅಸೆಂಬ್ಲಿ ಲೈನ್ ಮಾದರಿಯಲ್ಲಿ ಮಾಡುತ್ತಾರೆ. ಬೇರೆ ಬೇರೆ ತಜ್ಞರು ಸಾಲಾಗಿ ನಿಂತಿರುತ್ತಾರೆ. ಪೇಶಂಟ್ ಮಲಗಿದ ಮಂಚವೇ ಸಾಗುತ್ತಿರುತ್ತದೆ.

ಒಬ್ಬ ಎಕ್ಸರೇ ತೆಗೀತಾನೆ, ಇನ್ನೊಬ್ಬ ಅನೆಸ್ತೀಶಿಯಾ ಕೊಡುತ್ತಾನೆ. ಮುಂದಿದ್ದವ ಸರ್ಜರಿ ಮಾಡುತ್ತಾನೆ. ನಂತರದವ ಹೊಲಿಗೆ ಹಾಕುತ್ತಾನೆ….. ಸರಸರ ಎಂದು ಅತ್ಯಂತ ವೇಗದಲ್ಲಿ ಸರ್ಜರಿ ದಾಖಲೆ ವೇಗದಲ್ಲಿ, ದಿನಕ್ಕೆ ಮುನ್ನೂರು ಮುನ್ನೂರು ಆಪರೇಶನ್ ಆಗುತ್ತಿರುತ್ತದೆ.

ಜಾಸ್ತಿ ಪೇಶಂಟ್ ಗಳಿಗೆ ಚಿಕಿತ್ಸೆ ಕೊಡುತ್ತ ಹೋದರೆ ಹಣದ ಸುರಿಮಳೆ ತಂತಾನೇ ಆಗುತ್ತಿರುತ್ತದೆ. ಯಾಕೆ ಪೇಶಂಟ್ ಗಳ ಲೂಟಿ ಮಾಡುತ್ತೀರಿ ? ಜಾಸ್ತಿ ಪೇಶಂಟ್ ಗಳು ಬರುತ್ತಿದ್ದರೆ ಜಾಸ್ತಿ ಆಪರೇಶನ್ ಮಾಡಿದರೆ ಹಣ ಹೇಗೂ ಬರುತ್ತದೆ ನಿಮಗೆ!

ನಿಮಗೆ ಗೊತ್ತೆ ಡಾ. ದೇವೀಶೆಟ್ಟಿ ಕಳೆದ ವರ್ಷ ಒಂದೂಮುಕ್ಕಾಲು ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ. ಐಪಿಓದಲ್ಲಿ ಇವರ ಮೌಲ್ಯ ನೂರು ಕೋಟಿ ಡಾಲರ್ ! ಇವರ ಆಸ್ಪತ್ರೆಗಳಲ್ಲಿ 14 ಸಾವಿರ ಕೆಲಸಗಾರರಿದ್ದಾರೆ. ಅವರಂತೆ ವಾಲ್ಯೂಮ್ ಹೆಚ್ಚಿಸಿಕೊಂಡು ಹಣ ಮಾಡಿ, ಲೂಟಿಯಿಂದಲ್ಲ…

(7.45) ನಿಮಗೆ ಗೊತ್ತೆ? ಭಾರತದಲ್ಲಿ ನೈತಿಕವಾಗಿ ಆಸ್ಪತ್ರೆ ನಡೆಸುತ್ತಲೇ ಹಣ ಗಳಿಸುವುದು ತೀರ ಸುಲಭ. ಇಷ್ಟು ದೊಡ್ಡ ಜನಸಂಖ್ಯೆ, ಇಷ್ಟು ದೊಡ್ಡ ದೇಶ… ಇಷ್ಟು ದೊಡ್ಡ ಸಂಖ್ಯೆ! ಗೋವಿಂದಪ್ಪ ವೆಂಕಟಸ್ವಾಮಿ.. ಅರವಿಂದ್ ಐ ಕೇರ್ ಹಾಸ್ಪಿಟಲ್. ಇವರು ಮೆಕ್ಡೊನಾಲ್ಡ್ ಕಂಪನಿಯಿಂದ ಪಾಠ ಕಲಿತವರು. ಆತ ದಿನಕ್ಕೆ ನೂರು ಕೋಟಿ ಬರ್ಗರ್ ತಯಾರಿಸಿ ಮಾರುತ್ತಾನೆ.

ನಮ್ಮ ದೇಶ ಅಂದರೆ ಜಗತ್ತಿನಲ್ಲೇ ಅತಿ ಜಾಸ್ತಿ ಸಂಖ್ಯೆಯ ಅಂಧರಿದ್ದಾರೆ. ಅಮೆರಿಕದಲ್ಲಿ 2000 ಡಾಲರ್ಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡುವುದಾದರೆ ನಾನು ಹತ್ತೇ ಡಾಲರ್ ಗಳಲ್ಲಿ ಮಾಡುತ್ತೇನೆ ಎಂದವರು ಇವರು. ಇತರೆಲ್ಲ ಡಾಕ್ಟರ್ಗಳು ರೋಗಿಗಳ ನಗ, ನಾಣ್ಯ, ಆಸ್ತಿಪಾಸ್ತಿಯನ್ನು ಲೂಟಿ ಮಾಡಲು ನಿಂತಿರುವಾಗ ಈ ಗೋವಿಂದಪ್ಪ ವೆಂಕಟಸ್ವಾಮಿ ತಮ್ಮ ನಗ, ನಾಣ್ಯ ಆಸ್ತಿಪಾಸ್ತಿಯನ್ನು ಗಿರವಿ ಇಟ್ಟು ಅರವಿಂದ್ ಐ ಕೇರ್ ಆರಂಭಿಸಿದರು.

(8.30) ಅಥವಾ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಉದಾಹರಣೆ ನೋಡಿ: ಇವರು ಎರಡು ವಿಭಾಗಗಳನ್ನು ಮಾಡಿದ್ದಾರೆ. ಒಂದು ಕಡೆ ಅನುಕೂಲಸ್ಥರಿಗೆ ಜಾಸ್ತಿ ಶುಲ್ಕ ವಿಧಿಸುವುದು, ಇನ್ನೊಂದು ಕಡೆ ಅದೇ ಹಣದಿಂದ ಬಡ-ಮಧ್ಯಮ ವರ್ಗದವರಿಗೆ ಅತಿ ಕಡಿಮೆ ಅಥವಾ ಉಚಿತವಾಗಿ ವೈದ್ಯಸೇವೆ ಒದಗಿಸುವುದು.

ಭಾಳಾ ಅದ್ಭುತ ಕೆಲಸ ಮಾಡುತ್ತಿದ್ದಾರೆ. ಯಾವ ಕ್ಯಾನ್ಸರ್ ಔಷಧಿಗೆ ಒಂದು ಲಕ್ಷ ರೂಪಾಯಿ ಬೆಲೆ ಇದೆಯೊ ಅದನ್ನು (ಶುಷ್ರೂಷೆಗೆ ಬರುವವರ ಸಂಖ್ಯೆ ಹೆಚ್ಚಿಸುವ ಮೂಲಕ) ಒಂದು ಸಾವಿರ ರೂಪಾಯಿಗಳಿಗೆ ಒದಗಿಸುವ ವ್ಯವಸ್ಥೆ ಮಾಡುತ್ತಿದ್ದಾರೆ.

(9.00) ಇದು ಸಾಧ್ಯವಿದೆ, ಸಾಧ್ಯವಿದೆ. ಅದಕ್ಕೇ ನಾನು ಹೇಳೋದು, ಬಿಸಿನೆಸ್ ಮಾಡಲು ಸುಲಭ ಮಾರ್ಗಗಳಿವೆ. ಈ ಲೂಟಿಖೋರರಿಗೆ ಅದು ಗೊತ್ತಿಲ್ಲ. ಒಂದೇ ಸಾರಿ ಕತ್ತರಿಸು! ಒಂದೇ ಬಾರಿಗೆ ಲೂಟಿ ಮಾಡು…

(9.10) ನನ್ನದು ಒಂದೇ ಒಂದು ಚಿಕ್ಕ ವಿನಂತಿ ಇದೆ. ಈ ವಿಡಿಯೊವನ್ನು ಡೌನ್‌ಲೋಡ್ ಮಾಡಿ ಹಂಚಿ. ನಮ್ಮ ದೇಶದ ಎಂಟು ಲಕ್ಷ ಡಾಕ್ಟರ್‌ಗಳಿಗೆ ಸಂದೇಶ ತಲುಪುವಂತೆ ಮಾಡಿ. ದೇಶದ ಆರೋಗ್ಯ ಸಚಿವರಿಗೆ ಇದು ತಲುಪುವಂತೆ ಮಾಡಿ. ದನಿ ಎತ್ತಿ. ಇವೊತ್ತು ನನ್ನೊಂದಿಗೆ ನೀವು ದನಿ ಎತ್ತಿ ಕೂಗದಿದ್ದರೆ ನಾಳೆ ನಿಮ್ಮನ್ನೂ ಇವರು ಲೂಟಿ ಮಾಡುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending