Connect with us

ದಿನದ ಸುದ್ದಿ

ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್ ಸ್ಥಿತಿ-ಗತಿಗಳ ವಿವರವುಳ್ಳ ಬುಲೆಟಿನ್ ಬಿಡುಗಡೆಗೆ ಸೂಚನೆ : ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗಾಗಿ ಹೆಲ್ಪ್‍ಡೆಸ್ಕ್ ಪ್ರಾರಂಭಿಸಿ : ಸಚಿವ ಭೈರತಿ ಬಸವರಾಜ್

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ : ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿರುವ ಬೆಡ್‍ಗಳು, ವೆಂಟಿಲೇಟರ್, ಐಸಿಯು ಹಾಗೂ ಖಾಲಿ ಇರುವ ಬೆಡ್‍ಗಳ ಸಂಖ್ಯೆ ಸೇರಿದಂತೆ ಎಲ್ಲ ವಿವರಗಳು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲು ಎಲ್ಲ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗಾಗಿ ಹೆಲ್ಪ್‍ಡೆಸ್ಕ್ ಪ್ರಾರಂಭಿಸುವಂತೆ ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣ ಕುರಿತು ಕೈಗೊಳ್ಳಲಾಗಿರುವ ಹಾಗೂ ಕೈಗೊಳ್ಳಬೇಕಾಗಿರುವ ಮುಂಜಾಗ್ರತಾ ಕ್ರಮಗಳ ಕುರಿತು ಜಿಲ್ಲೆಯ ಜನಪ್ರತಿನಿಧಿಗಳ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್ ಸೋಂಕಿತರು ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಎಡತಾಕುತ್ತಿದ್ದು, ಅಲ್ಲಿ ಲಭ್ಯವಿರುವ ಬೆಡ್‍ಗಳ ವಿವರದ ಮಾಹಿತಿ ಸಮರ್ಪಕವಾಗಿ ದೊರೆಯದೆ, ಅಥವಾ ಜವಾಬ್ದಾರಿಯುತ ಅಧಿಕಾರಿಗಳಿಂದ ಮಾಹಿತಿ ಪಡೆಯದೆ ಆಸ್ಪತ್ರೆಯಿಂದ ಆಸ್ಪತ್ರೆಗಳಿಗೆ ರೋಗಿಗಳು ಅಲೆದಾಡುತ್ತಿದ್ದಾರೆ, ಆಸ್ಪತ್ರೆಗಳ ಪರಿಚಾರಕರು, ಗ್ರೂಪ್-ಡಿ ಸಿಬ್ಬಂದಿಗಳು, ಕಾವಲುಗಾರರೇ ಸಾರ್ವಜನಿಕರಿಗೆ ಇಲ್ಲಿ ಬೆಡ್ ಖಾಲಿ ಇಲ್ಲ ಎಂದು ರೋಗಿಗಳನ್ನು ಸಾಗಹಾಕುತ್ತಿದ್ದಾರೆ, ಆಂಬುಲೆನ್ಸ್ ವ್ಯವಸ್ಥೆ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂಬ ದೂರು, ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

ಹೀಗಾಗಿ ಆಸ್ಪತ್ರೆಗಳಲ್ಲಿ ಭರ್ತಿಯಾಗಿರುವ ಹಾಗೂ ಖಾಲಿ ಇರುವ ಬೆಡ್‍ಗಳ ವಿವರ ನಿಖರವಾಗಿ ಸಮಪರ್ಕವಾಗಿ ಸಾರ್ವಜನಿಕರಿಗೆ ದೊರೆಯುವಂತಾಗಲು, ಸರ್ಕಾರಿ ಹಾಗೂ ಎಲ್ಲ ಖಾಸಗಿ ಆಸ್ಪತ್ರೆಗಳ ಪ್ರವೇಶ ದ್ವಾರದಲ್ಲಿ ಸಾರ್ವಜನಿಕರಿಗಾಗಿ ಹೆಲ್ಪ್ ಡೆಸ್ಕ್ ಪ್ರಾರಂಭಿಸಬೇಕು. ಆಸ್ಪತ್ರೆವಾರು ಬೆಡ್‍ಗಳ ಭರ್ತಿ ಹಾಗೂ ಲಭ್ಯತೆ ಕುರಿತ ವಿವರವುಳ್ಳ ಬುಲೆಟಿನ್ ಅನ್ನು ನಿತ್ಯ ಜಿಲ್ಲಾಧಿಕಾರಿಗಳು ಪ್ರಕಟಿಸಬೇಕು.

ಜಿಲ್ಲೆಯಲ್ಲಿ ಆಸ್ಪತ್ರೆಗಳಿಗೆ ಆಮ್ಲಜನಕ ಹಾಗೂ ರೆಮ್‍ಡೆಸಿವರ್ ಔಷಧ ಸಮರ್ಪಕ ಪೂರೈಕೆ ಹಾಗೂ ಲಭ್ಯವಾಗುವಂತೆ ನೋಡಿಕೊಳ್ಳುವುದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.

ಇದನ್ನೂ ಓದಿ | ದಾವಣಗೆರೆ |ಆಮ್ಲಜನಕ ಪೂರೈಕೆ ಕಾರ್ಖಾನೆಗೆ ಉಸ್ತುವಾರಿ ಸಚಿವರ ಭೇಟಿ 

13 ಕೆ.ಎಲ್. ಸಾಮಥ್ರ್ಯದ ಆಮ್ಲಜನಕ ಘಟಕ : ಸದ್ಯ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 06 ಕೆ.ಎಲ್. ಸಾಮಥ್ರ್ಯದ ಆಕ್ಸಿಜನ್ ಘಟಕ ಸ್ಥಾಪಿಸಲಾಗಿದ್ದು, ಇದರಿಂದ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ. 13 ಕೆ.ಎಲ್. ಸಾಮಥ್ರ್ಯದ ಇನ್ನೊಂದು ಆಮ್ಲಜನಕ ಘಟಕ ಸ್ಥಾಪನೆಗೆ ಮಂಜೂರಾತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಮಂಜೂರಾತಿ ಪತ್ರಕ್ಕಾಗಿ ಕಾಯದೆ, 13 ಕೆ.ಎಲ್ ಸಾಮಥ್ರ್ಯದ ಆಮ್ಲಜನಕ ಘಟಕ ಸ್ಥಾಪನೆಗೆ ಬೇಕಾದ ಎಲ್ಲ ಪ್ರಕ್ರಿಯೆಗಳನ್ನು ನೀವು ಪ್ರಾರಂಭಿಸಿ. ಇದಕ್ಕೆ ಸಂಪೂರ್ಣ ಅಧಿಕಾರವನ್ನು ನಿಮಗೇ ಕೊಡುತ್ತಿದ್ದೇನೆ ಎಂದರು. ಜಿಲ್ಲಾಧಿಕಾರಿಗಳು ಉತ್ತರಿಸಿ, 13 ಕೆ.ಎಲ್. ಸಾಮಥ್ರ್ಯದ ಘಟಕ ತಕ್ಷಣದಲ್ಲಿ ದೊರೆಯುವುದು ಕಷ್ಟ.

ಇವು ಗುಜರಾತ್‍ನಲ್ಲಿ ಮಾತ್ರ ಉತ್ಪಾದನೆಯಾಗುತ್ತವೆ, ಆದರೂ ಸಂಬಂಧಪಟ್ಟವರಿಂದ ಮಾಹಿತಿ ಪಡೆದು, ಆದಷ್ಟು ಶೀಘ್ರ ಘಟಕ ಸ್ಥಾಪನೆಗೆ ಪ್ರಾಮಾಣಿಕ ಯತ್ನ ಮಾಡಲಾಗುವುದು ಎಂದರು. ಸಂಸದ ಜಿ.ಎಂ. ಸಿದ್ದೇಶ್ವರ್ ಅವರು ಪ್ರತಿಕ್ರಿಯಿಸಿ, 13 ಕೆ.ಎಲ್. ಸಾಮಥ್ರ್ಯದ ಘಟಕ ದೊರೆಯುವುದು ಕಷ್ಟವಿದ್ದಲ್ಲಿ, 06 ಕೆ.ಎಲ್. ಸಾಮಥ್ರ್ಯದ ಎರಡು ಘಟಕ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.

ಲಾಕ್‍ಡೌನ್ ಜಾರಿಗೆ ಒಕ್ಕೊರಲ ಮನವಿ : ಜಿಲ್ಲೆಯಲ್ಲಿ ಈವರೆಗೆ ಒಟ್ಟು 27222 ಕೋವಿಡ್ ಸೋಂಕು ಪತ್ತೆಯಾಗಿದ್ದು, ಈವರೆಗೆ ಒಟ್ಟಾರೆ 290 ಜನ ಮೃತಪಟ್ಟಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2534 ಸಕ್ರಿಯ ಪ್ರಕರಣಗಳಿವೆ. ಈ ವರ್ಷ ಏಪ್ರಿಲ್‍ನಿಂದ ಈವರೆಗೆ ಕೋವಿಡ್‍ನ 3485 ಪ್ರಕರಣ ಪತ್ತೆಯಾಗಿದ್ದು, 26 ಮರಣ ದಾಖಲಾಗಿದೆ.

ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಸರ್ಕಾರ ಜಾರಿಗೊಳಿಸಿದ್ದ ಜನತಾ ಕಫ್ರ್ಯೂ ಪರಿಣಾಮಕಾರಿಯಾಗಿಲ್ಲ. ಅಧಿಕಾರಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಉತ್ತಮವಾಗಿ ಕೆಲಸ ಮಾಡುತ್ತಿದ್ದರೂ, ಜನತಾ ಕಫ್ರ್ಯೂಗೆ ಸಾರ್ವಜನಿಕರ ಸಹಕಾರ ದೊರೆಯುತ್ತಿಲ್ಲ. ಹಳ್ಳಿಗಳಲ್ಲಿ ಇಸ್ಪೀಟ್ ಆಡಲು ಜೂಜು ಅಡ್ಡೆಗಳು ಪ್ರಾರಂಭವಾಗಿವೆ.

ಜನರು ತಮ್ಮ ಸ್ವಭಾವ ಬದಲಿಸಿಕೊಳ್ಳದಿದ್ದರೆ ಸರ್ಕಾರ ಮತ್ತು ಅಧಿಕಾರಿಗಳು ಏನೂ ಮಾಡಲು ಆಗಲ್ಲ. ಜನರ ಪ್ರಾಣದ ಹಿತದೃಷ್ಟಿಯಿಂದ ಕೋವಿಡ್ ಸರಪಳಿಯನ್ನು ತುಂಡರಿಸುವುದು ತೀವ್ರ ಅಗತ್ಯವಾಗಿದ್ದು, ಲಾಕ್‍ಡೌನ್ ಜಾರಿಗೊಳಿಸುವುದು ಅನಿವಾರ್ಯವಾಗಿದೆ.

ಹೀಗಾಗಿ ಮೇ. 31 ರವರೆಗೆ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಜಾರಿಗೊಳಿಸುವಂತೆ ಸಂಸದ ಜಿ.ಎಂ. ಸಿದ್ದೇಶ್ವರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ರೇಣುಕಾಚಾರ್ಯ, ಶಾಸಕರುಗಳಾದ ಮಾಡಾಳ್ ವಿರೂಪಾಕ್ಷಪ್ಪ, ಎಸ್.ಎ. ರವೀಂದ್ರ, ಪ್ರೊ. ಲಿಂಗಣ್ಣ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಒಕ್ಕೊರಲ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ತಮ್ಮ ಮನವಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಸೋಂಕು ಮುಚ್ಚಿಡಬೇಡಿ

ಜನರು ತಮ್ಮಲ್ಲಿ ಜ್ವರ, ಕೆಮ್ಮು, ನೆಗಡಿ ಸೇರಿದಂತೆ ಕೋವಿಡ್‍ನ ಯಾವುದೇ ರೋಗಲಕ್ಷಣಗಳು ಇದ್ದರೂ, ಪರೀಕ್ಷೆಗೆ ಒಳಗಾಗಲು ಮುಂದಾಗುತ್ತಿಲ್ಲ. ಜ್ವರ, ಕೆಮ್ಮಿಗೆ ಗುಳಿಗೆಗಳನ್ನು ನುಂಗಿ ಸುಮ್ಮನಾಗುವ ಪ್ರವೃತ್ತಿ ತೋರಿಸುತ್ತಿದ್ದಾರೆ. ಗ್ರಾಮಗಳಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಉತ್ತಮ ಸೇವೆ ಸಲ್ಲಿಸುತ್ತಿದ್ದು, ಇವರಿಗೂ ಸಹಕಾರ ನೀಡುತ್ತಿಲ್ಲ. ತೀವ್ರ ಉಸಿರಾಟ ತೊಂದರೆ ಪ್ರಾರಂಭವಾದಾಗ ಆಸ್ಪತ್ರೆಗೆ ಬರುತ್ತಾರೆ.

ರೋಗ ತೀವ್ರ ಉಲ್ಬಣವಾದಾಗ ಆಸ್ಪತ್ರೆಗೆ ಬಂದರೆ ಅವರಿಗೆ ಚಿಕಿತ್ಸೆ ದೊರಕುವುದು ಕಷ್ಟಸಾಧ್ಯ. ಹೀಗಾಗಿ ಸಾರ್ವಜನಿಕರು ರೋಗ ಮುಚ್ಚಿಡುವುದರಿಂದ ಆ ರೋಗಿಗೆ ಮಾತ್ರವಲ್ಲ ತಮ್ಮ ಕುಟುಂಬ, ಅಕ್ಕಪಕ್ಕದವರು, ಇಡೀ ಗ್ರಾಮವೇ ತೊಂದರೆಗೆ ಸಿಲುಕುತ್ತದೆ ಎಂಬ ಅಂಶವನ್ನು ಅರಿತು ಜವಾಬ್ದಾರಿಯಿಂದ ವರ್ತಿಸಬೇಕು. ಕಡ್ಡಾಯವಾಗಿ ಮಾಸ್ಕ್ ಅನ್ನು ಧರಿಸಬೇಕು.

ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಅನಗತ್ಯವಾಗಿ ಮನೆಯಿಂದ ಹೊರಗೆ ಅಡ್ಡಾಡುವುದನ್ನು ಬಿಡಬೇಕು ಎಂದು ಸಚಿವರು, ಸಂಸದರು ಒಳಗೊಂಡಂತೆ ಎಲ್ಲ ಶಾಸಕರುಗಳು, ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡರು.

ವಾರದೊಳಗೆ ಕೋವಿಡ್ ಇಳಿಮುಖವಾಗಬೇಕು

ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಸರ್ಕಾರ ಜಾರಿಗೊಳಿಸಿದ್ದ ಜನತಾ ಕಫ್ರ್ಯೂ ಪರಿಣಾಮಕಾರಿಯಾಗಿ ಜಾರಿಗೊಂಡಿಲ್ಲ. ಜನರು ಹಾಗೂ ವಾಹನಗಳು ನಿಗದಿತ ಅವಧಿಯ ಬಳಿಕವೂ ಅನಗತ್ಯವಾಗಿ ರಸ್ತೆಯಲ್ಲಿ ಸಂಚರಿಸುತ್ತಿರುವುದು ಕಂಡುಬರುತ್ತಿದೆ. ತರಕಾರಿ ಮತ್ತಿತರ ಸಾಮಗ್ರಿ ಖರೀದಿ ಸ್ಥಳದಲ್ಲಿ ಈಗಲೂ ಜನಸಂದಣಿ ಕಂಡುಬರುತ್ತಿದೆ.

ಹೀಗಾದಲ್ಲಿ ಕೋವಿಡ್ ಇನ್ನಷ್ಟು ವ್ಯಾಪಕವಾಗಿ ಹರಡಲು ಕಾರಣವಾಗುತ್ತದೆ. ಸದ್ಯ ಜಿಲ್ಲೆಯಲ್ಲಿ 2534 ಸಕ್ರಿಯ ಪ್ರಕರಣಗಳಿವೆ. ಬರುವ ಒಂದು ವಾರದ ಒಳಗಾಗಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖಗೊಳಿಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಇನ್ನಷ್ಟು ನಿರ್ದಾಕ್ಷಿಣ್ಯ ಹಾಗೂ ಕಠಿಣ ಕ್ರಮ ಜರುಗಿಸಲು ಮುಂದಾಗಬೇಕು. ತಹಸಿಲ್ದಾರರು, ಪೊಲೀಸ್ ಅಧಿಕಾರಿಗಳು ತಾಲ್ಲೂಕು ಮಟ್ಟದಲ್ಲಿ ಕಠಿಣಾತಿ ಕಠಿಣ ಕ್ರಮಗಳನ್ನು ಕೈಗೊಳ್ಳಲಿ.

ಯಾವುದೇ ಕಠಿಣ ಕ್ರಮಗಳಿಗೆ ನಾವು ಬೆಂಬಲ ನೀಡುತ್ತೇವೆ ಎಂದು ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದಕ್ಕೆ ಸಂಸದರು, ಶಾಸಕರುಗಳೂ ಕೂಡ ಬೆಂಬಲಿಸುವುದಾಗಿ ಭರವಸೆ ನೀಡಿದರು.

ಸಮರ್ಪಕ ಲಸಿಕೆ ದೊರಕಿಸಲು ಕ್ರಮ

ಜಿಲ್ಲೆಯಲ್ಲಿ ಈವರೆಗೆ 14697 ಆರೋಗ್ಯ ಕಾರ್ಯಕರ್ತರು, 5916 ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಹಾಕಲಾಗಿದೆ. 45 ವರ್ಷ ಮೇಲ್ಪಟ್ಟ 153130 ಜನರಿಗೆ ಮೊದಲ ಡೋಸ್, 25571 ಜನರಿಗೆ ಎರಡನೆ ಡೋಸ್ ಕೋವಿಡ್ ನಿರೋಧಕ ಲಸಿಕೆ ನೀಡಲಾಗಿದೆ.

ಈವರೆಗೆ ಚನ್ನಗಿರಿ ತಾಲ್ಲೂಕಿಗೆ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಸೇರಿದಂತೆ ಒಟ್ಟು 39700 ಡೋಸ್, ಹೊನ್ನಾಳಿ-32610, ಹರಿಹರ-29250, ಜಗಳೂರು-16270, ಹಾಗೂ ದಾವಣಗೆರೆ ತಾಲ್ಲೂಕಿಗೆ 67520 ಡೋಸ್ ಲಸಿಕೆ ಪೂರೈಸಲಾಗಿದೆ. ಈವರೆಗೆ ಒಟ್ಟು 1.84 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಹಾಗೂ 22620 ಡೋಸ್ ಕೋವ್ಯಾಕ್ಸಿನ್ ಲಸಿಕೆ ಪೂರೈಕೆ ಮಾಡಲಾಗಿದೆ.

ಕೋವಿಶೀಲ್ಡ್ ಲಸಿಕೆ ಪೂರೈಕೆಯಾಗುತ್ತಿದ್ದು, ಕೋವ್ಯಾಕ್ಸಿನ್ ಲಸಿಕೆ ಪೂರೈಕೆಯಾಗುತ್ತಿಲ್ಲ. ಕೋವ್ಯಾಕ್ಸಿನ್‍ನ 850 ಜನ ಎರಡನೆ ಡೋಸ್ ಪಡೆಯುವುದು ಬಾಕಿ ಉಳಿದಿದ್ದು, ಕೋವ್ಯಾಕ್ಸಿನ್ ಲಸಿಕೆ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಸದ್ಯ ಜಿಲ್ಲೆಯಲ್ಲಿ ಕೋವಿಶೀಲ್ಡ್‍ನ 2ನೇ ಡೋಸ್ ಬಾಕಿ ಇರುವವರಿಗೆ ಮಾತ್ರ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರ್.ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ ತಿಳಿಸಿದರು.

ಸಂಸದರು ಪ್ರತಿಕ್ರಿಯಿಸಿ ಜಿಲ್ಲೆಗೆ ನಿತ್ಯ 40 ರಿಂದ 50 ಸಾವಿರ ಡೋಸ್ ಲಸಿಕೆ ಪೂರೈಕೆಯಾಗಬೇಕು. ಅಂದಾಗ ಮಾತ್ರ ಲಸಿಕಾಕರಣ ಪರಿಣಾಮಕಾರಿಯಾಗಿಸಲು ಸಾದ್ಯ. ಈ ನಿಟ್ಟಿನಲ್ಲಿ ಸಚಿವರು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು. ಉತ್ತರಿಸಿದ ಸಚಿವರು ಸರ್ಕಾರ 3 ಕೋಟಿ ಲಸಿಕೆ ಖರೀದಿಗೆ ಕ್ರಮ ಕೈಗೊಂಡಿದೆ ಅಲ್ಲದೆ, 1.20 ಕೋಟಿ ರೆಮ್‍ಡೆಸಿವರ್ ಔಷಧಿ ಖರೀದಿಗೂ ಮುಂದಾಗಿದೆ. ಬರುವ ಒಂದು ವಾರದೊಳಗೆ ಲಸಿಕೆ ಪೂರೈಕೆ ಸಮರ್ಪಕವಾಗಲಿದೆ ಎಂದು ಭರವಸೆ ನೀಡಿದರು.

ಕೋವಿಡ್ ಕೇರ್ ಸೆಂಟರ್‍ಗೆ ಕರೆತನ್ನಿ

ಜಿಲ್ಲಾ ಕೇಂದ್ರ ಹಾಗೂ ಎಲ್ಲ ತಾಲ್ಲೂಕುಗಳಲ್ಲಿಯೂ ಹಾಸ್ಟೆಲ್ ಮುಂತಾದೆಡೆ ಕೋವಿಡ್ ಕೇರ್ ಸೆಂಟರ್‍ಗಳನ್ನು ಪ್ರಾರಂಭಿಸಿ ಉತ್ತಮ ಊಟೋಪಹಾರ, ವೈದ್ಯಕೀಯ ನೆರವು ಕಲ್ಪಿಸಲಾಗುತ್ತಿದೆ. ರೋಗಲಕ್ಷಣ ರಹಿತ ಹಾಗೂ ಕಡಿಮೆ ತೀವ್ರತೆಯ ಕೋವಿಡ್ ಸೋಂಕಿತರಿಗೆ ಮನೆಗಳಲ್ಲಿ ಪ್ರತ್ಯೇಕವಾದ ಮೂಲಭೂತ ಸೌಕರ್ಯ ಇಲ್ಲದಿದ್ದಲ್ಲಿ, ಹೋಂ ಐಸೋಲೇಷನ್‍ಗೆ ಯಾವುದೇ ಕಾರಣಕ್ಕೂ ಅವಕಾಶ ನೀಡದೆ ಅವರನ್ನು ಆದಷ್ಟು ಕೋವಿಡ್ ಕೇರ್ ಸೆಂಟರ್‍ಗೆ ಕರೆತರುವ ಪ್ರಯತ್ನವನ್ನು ಅಧಿಕಾರಿಗಳು ಮಾಡಬೇಕು.

ಸದ್ಯ ಜಿಲ್ಲೆಯಲ್ಲಿ 1095 ಜನ ಹೋಂ ಐಸೋಲೇಷನ್‍ನಲ್ಲಿದ್ದಾರೆ. ಕೋವಿಡ್ ಕೇರ್ ಸೆಂಟರ್‍ನಲ್ಲಿ ಉತ್ತಮ ಊಟೋಪಹಾರ, ವೈದ್ಯಕೀಯ ನೆರವು ಸೇರಿದಂತೆ ಸಮರ್ಪಕ ವ್ಯವಸ್ಥೆ ದೊರಕಿಸುವ ವಿಶ್ವಾಸವನ್ನು ಅಧಿಕಾರಿಗಳು ರೋಗಿಗಳಿಗೆ ನೀಡಬೇಕು. ಸಮರ್ಪಕ ವ್ಯವಸ್ಥೆ ಇಲ್ಲದೆ ಹೋಂ ಐಸೋಲೇಷನ್‍ಗೆ ಒಳಗಾಗುವವರು, ಸೋಂಕನ್ನು ವ್ಯಾಪಕವಾಗಿ ಹರಡಲು ಕಾರಣಕರ್ತರಾಗುತ್ತಾರೆ ಎಂಬುದನ್ನು ಅಧಿಕಾರಿಗಳು ಮರೆಯಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಹೇಳಿದರು.

ಸಭೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಶಾಸಕರುಗಳಾದ ಮಾಡಾಳ್ ವಿರೂಪಾಕ್ಷಪ್ಪ, ಎಸ್.ಎ. ರವೀಂದ್ರನಾಥ್, ಪ್ರೊ. ಲಿಂಗಣ್ಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯಮಹಾಂತೇಶ್ ದಾನಮ್ಮನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಮಹಾನಗರಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್, ಆಯುಕ್ತ ವಿಶ್ವನಾಥ ಮುದಜ್ಜಿ, ಡಿಹೆಚ್‍ಒ ಡಾ. ನಾಗರಾಜ್, ಜಿಲ್ಲಾ ಸರ್ಜನ್ ಡಾ. ಜಯಪ್ರಕಾಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲ್ಲೂಕುಗಳ ತಹಸಿಲ್ದಾರರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಚಿತ್ರದುರ್ಗ | ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಡಿ.ಡಿ ಬಿ.ಮಲ್ಲಿಕಾರ್ಜುನ, ಕ್ರೈಸ್ ಇ.ಡಿ ಬಿ.ಶಿವಸ್ವಾಮಿ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ಚಿತ್ರದುರ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ಶಾಲೆಗಳಿಗೆ (ಕ್ರೈಸ್) ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡದೆ ವಂಚಿಸುತ್ತಿರುವ ಶ್ರೀ ಶಿರಡಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಚಿತ್ರದುರ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಶಿವಸ್ವಾಮಿ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ವಸತಿ ಶಾಲೆಗಳಿಗೆ ಅಧಿಕೃತ ಟೆಂಡರುದಾರರಾದ ಶ್ರೀ ಶಿರಡಿ ಸಾಯಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರು ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡದೆ ಇರುವ ಅಧಿಕೃತ ಮಾಹಿತಿ ತಿಳಿದು, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ ಇವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರಾಂಶುಪಾಲರುಗಳಿAದ ಮಾಹಿತಿಹಕ್ಕು ಅಡಿಯಲ್ಲಿ ಪಡೆದ ದೃಢೀಕೃತ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಆಹಾರ ಸಾಮಾಗ್ರಿ ಸರಬರಾಜಿನಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿರುತ್ತವೆ.

ಆದ ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ನಾವು ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಪ್ರತ್ಯುತ್ತರವನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ದಿನಾಂಕ: 21-04-2026 ರಂದು ಜ್ಞಾಪನವನ್ನು ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ದೂರು ಅರ್ಜಿಗೆ ಸಂಬAಧಿಸಿದAತೆ ತನಿಖಾ ವರದಿಯನ್ನಾಗಲಿ ಅಥವಾ ಪ್ರತ್ಯುತ್ತರವನ್ನಾಗಲಿ ನೀಡಿರುವುದಿಲ್ಲ.

ಈ ಬಗ್ಗೆ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರಿಗೆ ದೂರು ನೀಡಲಾಗಿತ್ತು. ಆದರೆ ಇವರು ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ

Published

on

ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್‌ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ಆಶ್ರಯ, ತಾಲೂಕು ವಿಶ್ವಕರ್ಮ ಸೇವಾ ಸಮಾಜ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಜಂಟಿ ವತಿಯಿಂದ ಆಯೋಜಿಸಿರುವ ‘ವಿಶ್ವಕರ್ಮ ಜಯಂತಿ’ ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ರವಿಶಂಕರ್‌ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್‌ ಜಿ. ಸುರೇಂದ್ರ ಮೂರ್ತಿ ಅವರು ವಹಿಸಲಿದ್ದಾರೆ. ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ರೇವಣ್ಣ, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್‌ ಎನ್., ಪದಾಧಿಕಾರಿಗಳಾದ ಈಶ್ವರಾಚಾರ್‌, ಚೇತನ್‌ ಮೂರ್ತಿ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಲಿದ್ದು, ಬಳಿಕ ಅಲ್ಲಿಂದ ತಾಲೂಕು ಆಡಳಿತ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ.

ವಿಶೇಷವೆಂದರೆ, ಪ್ರಕಾಶಕರು ಹಾಗೂ ಆಯೋಜಕರ ಆಸಕ್ತಿಯ ಮೇರೆಗೆ ‘ನಿರಾಕಾರ ವಿಶ್ವಕರ್ಮ’ ಕೃತಿಯನ್ನು ತಿಂಗಳ ಅಂತರದಲ್ಲಿ ಮೂರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸೆಪ್ಟೆಂಬರ್‌ 17ರಂದು ಕೆ.ಆರ್.ನಗರದಲ್ಲಿ ಕೃತಿ ಬಿಡುಗಡೆಯಾದರೆ, ಸೆಪ್ಟೆಂಬರ್‌ 20ರಂದು ಬೆಂಗಳೂರಿನ ತಾತಗುಣಿಯ ವಿಶ್ವಕರ್ಮ ನಗರದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳಿಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಹಾಗೆಯೇ, ನವೆಂಬರ್‌ 22ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾವ್ಯಸ್ಪಂದನ ಪ್ರಕಾಶನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿಯೂ ಈ ಕೃತಿ ಬಿಡುಗಡೆಯಾಗಲಿದೆ.

ಮಾನವ ನಾಗರಿಕತೆಯ ಇತಿಹಾಸವನ್ನು ತೆರೆದರೆ, ಅದರ ಪ್ರತಿಯೊಂದು ಪುಟದ ಹಿಂದೆಯೂ ಶ್ರಮಿಸಿದ ಅನಾಮಿಕ ಕೈಗಳು ಕಾಣಿಸುತ್ತವೆ. ಆ ಕೈಗಳು ಕಲ್ಲನ್ನು ಕೆತ್ತಿ ದೇವಸ್ಥಾನವಾಗಿಸಿವೆ, ಕಬ್ಬಿಣವನ್ನು ಬಡಿದು ಆಯುಧವಾಗಿಸಿವೆ, ಮರಕ್ಕೆ ರೂಪ ಕೊಟ್ಟು ಬಾಗಿಲಾಗಿಸಿವೆ, ಮಣ್ಣಿಗೆ ಜೀವ ತುಂಬಿ ಮಡಕೆಯಾಗಿಸಿವೆ; ಹಾಗೆಯೇ ಬಣ್ಣಗಳ ಮೂಲಕ ಅಚ್ಚಳಿಯದ ಭಾವನೆಗಳನ್ನು ಮೂಡಿಸಿವೆ. ಆ ಸೃಷ್ಟಿಶೀಲ ಕೈಗಳಿಗೆ ಬಹುಶಃ ಇತಿಹಾಸದ ಅಧಿಕೃತ ಪುಟಗಳಲ್ಲಿ, ರಾಜ-ಮಹಾರಾಜರ ಕಥೆಗಳ ನಡುವೆ ದೊಡ್ಡ ಅಕ್ಷರಗಳಲ್ಲಿ ಹೆಸರು ಸಿಕ್ಕಿಲ್ಲದಿರಬಹುದು. ಆದರೆ ಅವರು ನಿರ್ಮಿಸಿದ ಕಲೆ, ಶಿಲ್ಪ, ವಾಸ್ತು, ಉಪಕರಣ ಮತ್ತು ಸೌಂದರ್ಯವೇ ನಮ್ಮ ನಾಗರಿಕತೆಯ ಉಸಿರಾಗಿ, ಜೀವಂತ ಸಾಕ್ಷಿಗಳಾಗಿ ಇಂದಿಗೂ ಉಳಿದಿವೆ. ಅಂತಹ ಸೃಜನಶೀಲ ಕೈಗಳ ಸಮೂಹ ಸ್ಮೃತಿಯನ್ನು, ಪರಂಪರೆಯನ್ನು ಮತ್ತು ಇತಿಹಾಸವನ್ನು ಅರಿಯುವ ಅರ್ಥಪೂರ್ಣ ಪ್ರಯತ್ನವನ್ನು ನಿರಾಕಾರ ವಿಶ್ವಕರ್ಮ ಕೃತಿಯಲ್ಲಿ ಲೇಖಕರಾದ ಚಂದ್ರಶೇಖರ ಗಂಧನಹಳ್ಳಿ ಅವರು ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!

Published

on

ಆಗಸ್ಟ್ 2023 ರಿಂದ ಜುಲೈ 2026 ರವರೆಗೆ ₹28,759 ಕೋಟಿ ಸಬ್ಸಿಡಿ ಬಿಡುಗಡೆ; ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್‌ನಿಂದ ಕೋಟ್ಯಂತರ ಕುಟುಂಬಗಳ ಆರ್ಥಿಕ ಸಬಲೀಕರಣ

ಸುದ್ದಿದಿನ, ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ತನ್ನ 3 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿದೆ. `ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಸಹಕಾರ’ ಎಂಬ ಧ್ಯೇಯದೊಂದಿಗೆ ಆರಂಭವಾದ ಈ ಯೋಜನೆ ಇಂದು ಕೋಟ್ಯಂತರ ಕುಟುಂಬಗಳ ಬದುಕಿಗೆ ಬೆಳಕಾಗಿದೆ.

ಹೌದು! 2023ರ ಆಗಸ್ಟ್‌ನಲ್ಲಿ ಜಾರಿಗೆ ಬಂದ ಈ ಯೋಜನೆಯಡಿ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಪ್ರತಿ ತಿಂಗಳು 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್‌ಗೆ ದೊಡ್ಡ ಆಸರೆಯಾಗಿದೆ ಎಂದೇ ಹೇಳಬಹುದು.

http://Visit : www.suddidina.com

ಗೃಹಜ್ಯೋತಿ ಯೋಜನೆಯ ಸಾಧನೆಯ ಗಿರಿ: 

ಇಂಧನ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ರಾಜ್ಯದ್ಯಂತ ಬರೋಬ್ಬರಿ 1.65 ಕೋಟಿ. ಫಲಾನುಭವಿಗಳು ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆ, ಸೇವಾಸಿಂಧು ಪೋರ್ಟಲ್‌ನಲ್ಲಿ ಒಟ್ಟು 1,76,69,368 ಜನರು ನೋಂದಾಯಿಸಿಕೊಂಡಿದ್ದರೆ. ಒಟ್ಟು 2,06,65,451 ಗೃಹಬಳಕೆ ವಿದ್ಯುತ್ ಗ್ರಾಹಕರಿದ್ದಾರೆ. ಅಂದರೆ ಶೇ.85ಕ್ಕಿಂತ ಹೆಚ್ಚು ಗ್ರಾಹಕರು ಈ ಯೋಜನೆಯಡಿ ನೋಂದಾಯಿಸಿಕೊಂಡು ಲಾಭ ಪಡೆಯುತ್ತಿದ್ದಾರೆ.

ಆರ್ಥಿಕವಾಗಿ ನೋಡುವುದಾದರೆ, 2023ರ ಆಗಸ್ಟ್‌ನಿಂದ 2026ರ ಜುಲೈ ವರೆಗೆ, ಕಳೆದ ಮೂರು ವರ್ಷಗಳಲ್ಲಿ ಸರ್ಕಾರವು ಫಲಾನುಭವಿಗಳಿಗೆ ಒಟ್ಟು ₹28,759.54 ಕೋಟಿ ರೂಪಾಯಿ ಸಬ್ಸಿಡಿ ಬಿಡುಗಡೆ ಮಾಡಿದೆ. ಇದು ಸರ್ಕಾರದ ಬದ್ಧತೆ ಮತ್ತು ಜನಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ.

ಕುಟುಂಬದ ಬಜೆಟ್‌ಗೆ ಆಸರೆ, ಉಜ್ವಲ ಭವಿಷ್ಯಕ್ಕೆ ಬುನಾದಿ:

ಪ್ರತಿ ತಿಂಗಳು 1000 ದಿಂದ 1500 ರೂಪಾಯಿಗಳವರೆಗೆ ವಿದ್ಯುತ್ ಬಿಲ್ ಕಟ್ಟುತ್ತಿದ್ದ ಸಾಮಾನ್ಯ ಕುಟುಂಬಗಳಿಗೆ ಈಗ ಆ ಹಣ ಸಂಪೂರ್ಣವಾಗಿ ಉಳಿತಾಯವಾಗುತ್ತಿದೆ. ಈ ಉಳಿತಾಯದ ಹಣವನ್ನು ಅವರು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಇತರ ಅಗತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಗೃಹಿಣಿಯರಿಗೆ ಇದು ಆರ್ಥಿಕವಾಗಿ ದೊಡ್ಡ ನೆರವಾಗಿದೆ.

ಕೇವಲ ಉಚಿತ ವಿದ್ಯುತ್ ನೀಡುವುದಷ್ಟೇ ಅಲ್ಲ, ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದ್ದು, ರಾಜ್ಯದ ಜನರ ಜೀವನಮಟ್ಟ ಸುಧಾರಿಸಿದೆ. ಗೃಹ ಜ್ಯೋತಿ ಯೋಜನೆಯು ಕೇವಲ ಒಂದು ಯೋಜನೆಯಾಗಿ ಉಳಿಯದೆ, ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕುಟುಂಬಗಳನ್ನು ಈ ಯೋಜನೆಯಡಿ ತರಲು ಇಂಧನ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.

Continue Reading

Trending