ನೆಲದನಿ
ನುಡಿಯ ಒಡಲು – 20 : ದಾರಿಯಾವುದಯ್ಯ ಕನ್ನಡ ಚಿಂತನೆಗೆ..?
- ಡಾ. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಒಂದೊಂದು ವರುಷವೂ ಕೂಡ ನವಂಬರ್ ತಿಂಗಳು ಕನ್ನಡ ನುಡಿ ಕುರಿತು ಚಿಂತಿಸುವ, ಯೋಚಿಸುವ ಹೆಚ್ಚುಗಾರಿಕೆಯನ್ನು ಪಡೆದಿದೆ. ದಿಟ, ಇಡೀ ಲೋಕದಲ್ಲಿಯೇ ಹೀಗೆ ನುಡಿ ಇಲ್ಲವೇ ಯಾವುದೇ ಸಾಮಾಜಿಕ-ಸಾಂಸ್ಕೃತಿಕ ಸಂಗತಿಗಳನ್ನು ಕೊಂಡಾಡುವುದಕ್ಕಾಗಿಯೇ ಒಂದೊಂದು ದಿನವನ್ನು ಗೊತ್ತುಪಡಿಸಿರುತ್ತಾರೆ.
ಯಾವುದು ಗತದ ನೆನಪಿನ ಸಂಕೇತವಾಗಿರುತ್ತದೆಯೋ? ಅದು ಯಾವಾಗಲೂ ಆಚರಣೆಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಇಂತಹ ಆಚರಣೆಗಳು ಚರಿತ್ರೆಯ ಯಾವುದೇ ಬಗೆಯ ಚಾರಿತ್ರಿಕ ತಿಳಿವು ಇಲ್ಲವೇ ನಂಟಸ್ತಿಕೆಯ ಹಿರಿಮೆಯನ್ನು ಹೆಚ್ಚಿಸುವ ಇರಾದೆಯನ್ನು ಹೊಂದಿರಲಾವು. ಮತ್ತು ಆ ಮೂಲಕ ಈ ಹೊತ್ತಿನ ಬದುಕಿನ ಏಳ್ಗೆಯ ಬಗೆಗಿನ ಚಿಂತನೆಗಳಾಗಿ ಮೈಪಡೆಯುವುದಿಲ್ಲ.
ಯಾವಾಗಲೋ ಕಂಡ ಕನಸನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಆನಂದಿಸುವ ಇಲ್ಲವೇ ಆತಂಕಪಡುವ ರೀತಿಯಲ್ಲಿ ಇಂತಹ ಕನಸುಗಳು ನೆರವಾಗುತ್ತವೆ ಹಾಗೂ ಅಂತಹ ಉದ್ದೇಶಕ್ಕಾಗಿಯೇ ಅವು ಮುಂದುವರೆಯುತ್ತವೆ. ಈಗ ಕನ್ನಡಕ್ಕೆ ಬೇಕಿರುವುದು ಕೇವಲ ಈ ಹಳೆ ಕನುಸುಗಳ ಹಳಹಳಿಕೆಯಲ್ಲ. ಬದಲಾಗಿ ಹೊಸ ಕನುಸುಗಳನ್ನು ಕಾಣುವ ಮತ್ತು ಅವುಗಳನ್ನು ಈಡೇರಿಸಿಕೊಳ್ಳುವ ತುಡಿತವನ್ನುಂಟು ಮಾಡುವ ಅಗತ್ಯವಿದೆ.
ಈ ತುಡಿತಗಳೇ ಆಯಾ ಜನರ ನುಡಿಗಳ ಮೂಲಕ ಅವರ ಬದುಕಿನ ಅಗತ್ಯಗಳನ್ನು ಪೂರೈಸಿಕೊಳ್ಳುವುದಕ್ಕೆ ಕಾರಣವಾಗುತ್ತವೆ. ತಮ್ಮ ನುಡಿಗಳ ಮೂಲಕವೇ ತಮ್ಮ ಬದುಕಿನ ದಾರಿಗಳನ್ನು ಸಜ್ಜುಗೊಳಿಸಲು ಸಾಧ್ಯವಾಗುತ್ತದೆ. ಕರ್ನಾಟಕ ಸಮುದಾಯಗಳ ಬದುಕಿನ ಕನಸುಗಳನ್ನು ನನಸಾಗಿಸುವ ದಾರಿಗಳು ಹೀಗೆ ರೂಪುಗೊಳ್ಳುತ್ತವೆ. ಅಂದರೆ ಕನ್ನಡ ನುಡಿಯೂ ಜನರ ಆಶೋತ್ತರಗಳನ್ನು ಈಡೇರಿಸಲು ಸಜ್ಜುಗೊಳ್ಳಬೇಕು ಎಂಬುದೇ ಈ ಮಾತಿನ ತಿರುಳು.
ನುಡಿಗಳನ್ನು ಸಜ್ಜುಗೊಳಿಸುವುದು ಎಂದರೇನು? ಹಾಗೂ ಅವುಗಳನ್ನು ಹೇಗೆ ಸಜ್ಜುಗೊಳಿಸಬೇಕು? ಈ ಎರಡೂ ಕೇಳ್ವಿಗಳು ಇಲ್ಲಿ ಕೇವಲ ರೆಟರಿಕ್‌ಆಗಿ ಕೇಳಿಸಬಹುದು, ಆದರೆ ಅವು ಹಾಗಿಲ್ಲ. ಅಂದರೆ ನುಡಿಗಳ ಬೆಳವಣಿಗೆಯೇ ಜನರ ಬೆಳವಣಿಗೆಯೂ ಆಗಿರಬೇಕು ಅನ್ನುವ ನೆಲೆಯೇ ನುಡಿಗಳನ್ನು ಸಜ್ಜುಗೊಳಿಸುವ ಬಗೆಯಾಗಿರುತ್ತದೆ. ಬಹುತೇಕವಾಗಿ ನುಡಿಗಳ ಬೆಳವಣಿಗೆ ಎಂಬುದು ಆಯಾ ದೇಶದ ನುಡಿ ನೀತಿ ಹಾಗೂ ನುಡಿ ಯೋಜನೆಗಳೊಂದಿಗೆ ತಳುಕು ಹಾಕಿಕೊಂಡಿರುತ್ತವೆ.
ಹಾಗಾಗಿಯೇ ಕನ್ನಡದಂತಹ ನುಡಿಗಳಿಗೆ ಸಂವಿಧಾನದ ಮೂಲಕ ಸವಲತ್ತು ಮತ್ತು ಅವಕಾಶಗಳು ತಾತ್ವಿಕವಾಗಿ ಸಿಕ್ಕಿರುತ್ತವೆ. ಆಚರಣೆಯ ನೆಲೆಗೆ ಬಂದಾಗ ಸಂವಿಧಾನದಿಂದ ಸವಲತ್ತು, ಹಕ್ಕು ಹಾಗೂ ಅವಕಾಶಗಳನ್ನು ಪಡೆದಿರುವ ಕನ್ನಡದಂತಹ ನುಡಿಗೂ ಹಾಗೂ ಇಂತಹ ಎಲ್ಲ ಸವಲತ್ತುಗಳಿಂದ ವಂಚಿತವಾಗಿರುವ ಬೇರೆಯ ನುಡಿಗಳಿಗೂ ಬಹುತೇಕವಾಗಿ ಏನು ವ್ಯತ್ಯಾಸಗಳು ಇರುವುದಿಲ್ಲ. ಅಂದರೆ ಸಮೂಹಗಳ ಏಳ್ಗೆಯನ್ನು ಗಮನದಲ್ಲಿಟ್ಟಕೊಂಡು ಈ ಮಾತನ್ನು ಹೇಳಲಾಗಿದೆ.
ಆದರೆ ನುಡಿಗಳ ಚಹರೆಗಳನ್ನು ಕಟ್ಟಿಕೊಡುವ ಬಗೆಗಳಲ್ಲಿ ಮಾತ್ರ ಅಂತರಗಳು ಇದ್ದೇ ಇರುತ್ತವೆ. ಸಂವಿಧಾನದಲ್ಲಿ ಗುರುತಿಸಿದ ನುಡಿ ಹಾಗೂ ಆಯಾ ಗುರುತನ್ನು ಪಡೆಯದಿರುವ ನುಡಿಗಳು ಎನ್ನುವ ವಿಂಗಡಣೆಯೇ ಈ ಅಂತರಗಳಿಗೆ ಕಾರಣವಾಗುತ್ತದೆ. ಕನ್ನಡವು ಇಂತಹ ಮೀತಿಗಳನ್ನು ಮೀರಿ, ತನ್ನ ತಿಳಿವಿನ ಸಂಪನ್ಮೂಲಗಳನ್ನು ಉತ್ಪಾದಿಸುವ, ಮತ್ತು ಅವುಗಳನ್ನು ಹಂಚುವ ಬಗೆಗಳನ್ನು ರೂಪಿಸುವ ಅಗತ್ಯಕ್ಕೆ ಅನುಗುಣವಾಗಿ ಇದು ಸಜ್ಜುಗೊಳ್ಳಬೇಕಿದೆ.
ಜನರಿಗೆ ಅವರ ನುಡಿಗಳಲ್ಲಿಯೇ ಚಿಂತನೆಗಳನ್ನು ಬೆಳೆಸಲು ಅನುವಾಗಬೇಕು. ಮತ್ತು ಈ ಚಿಂತನೆಗಳು ಕರ್ನಾಟಕದ ಸಮೂಹಗಳ ಏಳ್ಗೆಯನ್ನೇ ಗುರಿಯಾಗಿಸಿಕೊಂಡಿರಬೇಕು. ನುಡಿಯೊಂದು ಬೇರೊಂದು ನುಡಿಗೆ ತನ್ನನ್ನು ಹೋಲಿಸಿಕೊಂಡು ಕೀಳರಿಮೆಗೆ ಒಳಗಾಗಬಾರದು. ಈ ಬಗೆಯ ಸವಾಲು ಹಾಗೂ ಇಕ್ಕಟ್ಟುಗಳಿಂದ ನುಡಿಯನ್ನು ಪಾರು ಮಾಡುವ ನೆಲೆಗಳೂ ಕೂಡ ನುಡಿಯೊಂದನ್ನು ಸಜ್ಜುಗೊಳಿಸುವ ಬಗೆಯಾಗಿರುತ್ತವೆ.
ಕನ್ನಡದ ಚಿಂತನೆಯನ್ನು ಕಟ್ಟುವ ಬಗೆಯಲ್ಲಿಯೇ ಸಾಕಷ್ಟು ತೊಡಕುಗಳು ಎದುರಾಗಿವೆ. ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಕರ್ನಾಟಕ-ಕನ್ನಡ ಚಿಂತಕರು ಇಂತಹ ತೊಡಕಿನ ದಾರಿಗಳನ್ನೇ ಇಲ್ಲಿಯ ಸಮೂಹಗಳ ಬದುಕಿನ ದಾರಿಗಳೆಂದು ನೆಮ್ಮಿದ್ದರು ಹಾಗೂ ಎಲ್ಲರನ್ನೂ ಕೂಡ ನೆಮ್ಮಿಸಿದರು. ಹೇಗೆಂದರೆ ಜನತೆಯ ಬದುಕುಗಳ ಒಳಗಿರುವ ತಿಳಿವಿನ ಒಳಕಸುವನ್ನು ಹೊರತರುವ ಬದಲಾಗಿ ಕೇವಲ ಪರನುಡಿಗಳಿಂದಲೇ ತಿಳಿವನ್ನು ಕಡತಂದು ಕನ್ನಡವನ್ನು ಬೆಳೆಸಿದರು.
ಬೆಳವಣಿಗೆ ಎಂಬುದು ಗಾತ್ರವನ್ನು ಕುರಿತಾದದ್ದಲ್ಲ. ಅದು ತಿಳಿವಿನ ಮಾದರಿ ಹಾಗೂ ಬಗೆಗಳನ್ನು ಕಟ್ಟುವ ಕ್ರಮವಾಗಿರುತ್ತದೆ. ಅಂದರೆ ಕನ್ನಡವನ್ನೂ ಕೂಡ ಒಂದು ತಿಳಿವು ಕೊಡುವ ನುಡಿಯನ್ನಾಗಿ ಬೆಳೆಸಬೇಕಿದ್ದವರು ಹಾಗೆ ಬೆಳೆಸಲಿಲ್ಲ. ಪರಿಣಾಮವಾಗಿ ಕನ್ನಡ ನುಡಿ ಬೇರೆ ನುಡಿಗಳಿಂದ ಮಾತ್ರ ತಿಳಿವನ್ನು ಪಡೆಯುವ ನೆಲೆಗೆ ಸೀಮಿತಗೊಳಿಸಿದರು. ತಿಳಿವು ಎಂಬುದು ಸಮೂಹಗಳ ಒಡಲಲ್ಲಿಯೇ ಹುಟ್ಟುಬಹುದಾದ ಸಂಗತಿಯೆ ಹೊರತು, ಅದೇನು ಯಾವುದೇ ದೈವಿಕ ಇಲ್ಲವೇ ಮಾಂತ್ರಿಕ ಲೀಲೆಯಿಂದ ರೂಪುಗೊಳ್ಳುವಂತಹದಲ್ಲ ಎಂಬ ಸಾಮನ್ಯ ವಿವೇಕವು ಇಲ್ಲಿ ಕಣ್ಮರೆಯಾಗಿದೆ.
ಹಾಗಾಗಿ ಸಮೂಹಗಳಿಗೆ ಕಸುವು ದಕ್ಕುವುದು ಹಾಗೂ ಅವರ ಬಯಕೆ-ಬೇಡಿಕೆಗಳು ಈಡೇರುವುದು ಅವರಾಡುವ ನುಡಿಗಳ ಮೂಲಕ ಮಾತ್ರ. ನುಡಿಗಳ ನಡುವೆ ಕೀಳರಿಮೆ ಇಲ್ಲವೇ ಮೇಲರಿಮೆ ಎಂಬ ತಿಕ್ಕಾಟವು ವಾಸ್ತವವಾಗಿ ಇರುವುದಿಲ್ಲ. ಇವು ಸಾಮಾಜಿಕವಾಗಿ ಉಂಟಾಗುವ ನಿಲುವುಗಳೇ ಹೊರತು ನುಡಿಯೊಂದರ ಒಡಲಲ್ಲೇ ಉಂಟಾಗುವಂತಹ ಗುಣಗಳಲ್ಲ. ಸಮೂಹಗಳ ಬದುಕಿನ ದಾರಿಗಳನ್ನು ಗುರುತಿಸುವ ತಿಳಿವು ಅವರವರ ನುಡಿಗಳಲ್ಲಿಯೇ ಅಡಕವಾಗಿರುತ್ತದೆ ಎಂಬ ದಿಟವನ್ನು ಅರಿಯಬೇಕಿದೆ.
ಜನರ ಪರವಾಗಿ ಮಾತ್ನಾಡುತ್ತೇವೆ ಎನ್ನುವ ಕನ್ನಡದ ಚಿಂತಕರು ಯಾವಾಗಲೂ ಜನರಿಗೆ ಬೆನ್ನುಮಾಡಿ ಮಾತ್ನಾಡುತ್ತಾರೆ. ಜನರಿಗೆ ಮುಖಮಾಡಿ ಮಾತ್ನಾಡಿದರೆ ಮಾತ್ರ ಕನ್ನಡದ ಬಿಕ್ಕಟ್ಟುಗಳು ಎಂತಹವು ಎಂಬ ದಿಟ ನಮಗೆ ಗೊತ್ತಾಗುತ್ತದೆ. ಅಂದರೆ ತೊಡಕುಗಳು ಇರುವುದು ಜನರಲ್ಲಿ ಇಲ್ಲವೇ ನುಡಿಯಲ್ಲಿ ಅಲ್ಲ. ಜನ ಮತ್ತು ನುಡಿಗಳ ನಡುವಿನ ನಂಟಸ್ತಿಕೆಯ ವಿನ್ಯಾಸಗಳನ್ನು ಕುರಿತು ಯೋಚಿಸುವ ತಿಳುವಳಿಕೆಯಲ್ಲಿವೆ.
ಇಂತಹ ತೊಡಕುಗಳನ್ನು ಪರಿಹರಿಸಿಕೊಳ್ಳಲೂ ಕೂಡ ನಾವು ಮತ್ತೆ ನಮ್ಮದೇ ನುಡಿಗಳನ್ನು ನಂಬಿ ನಡೆಯಬೇಕು. ಈ ಕಾರಣಕ್ಕಾಗಿಯೇ ಬ್ರಿಟಿಶರು ತಮ್ಮ ತಿಳಿವು, ಆಚರಣೆ ಹಾಗೂ ತಾತ್ವಿಕ ಸಂಗತಿಗಳನ್ನು ನಮ್ಮ ಮೇಲೆ ಹೇರಲು, ಅವರು ಇಂಗ್ಲಿಶು ನುಡಿಯನ್ನೇ ನೆಮ್ಮಿಕೊಂಡಿದ್ದರು. ಒಂದೊಂದು ನುಡಿಯೂ ಕೂಡ ಅದನ್ನಾಡುವ ಜನರ ಸಾಮಾಜಿಕ ಬದುಕುಗಳ ವಿನ್ಯಾಸಗಳನ್ನು ಮಂಡಿಸುತ್ತದೆ.
ಆದ್ದರಿಂದ ಕನ್ನಡದ ಮಾಧ್ಯಮದಲ್ಲಿ ಕಲಿಸುವುದು ಎಂದರೆ, ಅದು ಕೇವಲ ಕನ್ನಡ ನುಡಿ ರಚನೆ, ಅಕ್ಷರಗಳಲ್ಲಿ ಮಂಡಿತವಾಗುವ ತಿಳಿವನ್ನು ಮಾತ್ರ ಕನ್ನಡ ಮಾಧ್ಯಮದ ಶಿಕ್ಷಣವೆಂದು ಹೇಳಲು ಆಗುವುದಿಲ್ಲ. ಆಯಾ ಜನರ ಬದುಕಿನ ಚೌಕಟ್ಟುಗಳ ಒಳಗೆಯೇ ಹುದುಗಿರುವ ಲೋಕತಿಳಿವು ಮತ್ತು ತಾತ್ವಿಕ ವಿನ್ಯಾಸಗಳನ್ನು ಮಂಡಿಸುವ ಬಗೆಯನ್ನು ಶಿಕ್ಷಣ ಮಾಧ್ಯಮವೆಂದು ನಿರ್ವಚಿಸಬಹುದಾಗಿದೆ.
ಹಾಗಾಗಿ ಒಂದೊಂದು ನುಡಿಯೂ ತನ್ನ ಸಮುದಾಯಗಳಲ್ಲಿ ಅಡಕವಾಗಿರುವ ತಿಳಿವು ಹಾಗೂ ಲೋಕನೋಟಗಳನ್ನು ತಾತ್ವಿಕಗೊಳಿಸುವ ಸವಾಲುಗಳನ್ನು ಯಾವಾಗಲೂ ಎದುರಿಸುತ್ತಲೇ ಇರುತ್ತದೆ. ಪರಿಣಾಮವಾಗಿ ಶಿಕ್ಷಣದಲ್ಲಿ ಏನನ್ನು? ಹೇಗೆ? ಯಾರಿಗೆ? ಎಲ್ಲಿ? ಯಾವಾಗ? ಕಲಿಸಬೇಕು ಎಂಬ ಗುರಿಗಳನ್ನು ನಿಚ್ಚಳಗೊಳಿಸುವ ಸವಾಲುಗಳು ಮತ್ತೆ ಮತ್ತೆ ಎದುರಾಗುತ್ತವೆ. ಏಕೆಂದರೆ ನುಡಿಗಳಲ್ಲಿ ತಮ್ಮದೆಯಾದ ತಿಳಿವಿನ ಬಗೆಗಳು ಅಂತಸ್ಥವಾಗಿರುತ್ತವೆ ಅನ್ನುವ ದಿಟವನ್ನು ಮರೆಮಾಚಲಾಗುತ್ತದೆ.
ನಮಗೆ ಬೇಕಾದ ತಿಳಿವು ಯಾವುದು? ಅದನ್ನು ತೀರ್ಮಾನಿಸುವವರು ಯಾರು? ಮತ್ತು ಈ ತಿಳಿವು ಯಾವ ಬಗೆಯ ನುಡಿಯಲ್ಲಿ ಸಿಗುತ್ತದೆ? ಎಂಬ ಕೇಳ್ವಿಗಳೂ ಇಲ್ಲಿ ಹುಟ್ಟುತ್ತವೆ. ನಮ್ಮ ಬದುಕಿನ ಎಲ್ಲ ಬಗೆಯ ಬೇಡಿಕೆಗಳನ್ನು ಯಾವ ತಿಳಿವು ಈಡೇರಿಸುವುದೋ, ಅದುವೇ ನಮಗೆ ಬೇಕಾದ ತಿಳಿವೂ ಆಗಿರುತ್ತದೆ. ತಮಗೆ ಬೇಕಾದ ತಿಳಿವನ್ನು ಆಯಾ ಭಾಷಿಕರೇ ತೀರ್ಮಾನಿಸುತ್ತಾರೆ.
ಜನರಾಡುವ ಎಲ್ಲ ನುಡಿಗಳಲ್ಲಿಯೂ ಇಂತಹ ತಿಳಿವು ನೆಲೆಗೊಂಡಿರುತ್ತದೆ. ತಿಳಿವು ಆಯಾ ಭಾಷಿಕರ ಸಂಪನ್ಮೂಲವು ಹೌದು ಮತ್ತು ಅದು ಅವರ ಹಕ್ಕು ಕೂಡ. ಆದರೆ ತಿಳಿವು ಎಂಬ ಸಂಪನ್ಮೂಲವು ನಮ್ಮ ಬದುಕಿನ ಹಕ್ಕಾಗದೇ ಅದು ಕೇವಲ ಖಾಸಗಿ ಒಡೆತನದ ಸ್ವತ್ತಾಗಿದೆ. ಈ ಒಡೆತನದ ಮಾದರಿಗಳನ್ನು ನಾಶಪಡಿಸುವ ದಾರಿಗಳನ್ನು ನಾವು ಮತ್ತೆ ನಮ್ಮದೇ ನುಡಿಗಳ ಮೂಲಕ ಕಟ್ಟಿಕೊಳ್ಳುವ ಜರೂರಿದೆ.
ಇಲ್ಲವಾದರೆ ತಿಳಿವು ತನ್ನತನದ ನೆಲೆಯಾಗದೆ, ಪರಕೀಯತೆಯನ್ನು ಹುಟ್ಟಿಸುವ ಬಗೆಯಾಗುತ್ತದೆ. ಈ ಕಾರಣಕ್ಕಾಗಿಯೇ, ಲೋಕದಲ್ಲಿ ಮಂಡಿತವಾಗುವ ಯಾವುದೇ ಚಿಂತನೆಗಳು ನಮ್ಮ ಸಾಮಾಜಿಕ ಅರಿವಿನ ಭಾಗವಾಗುವುದು ಎಂದರೆ, ನಮ್ಮ ನುಡಿಗಳು ಕಟ್ಟಿಕೊಡುವ ಅರಿವಿನ ವಿನ್ಯಾಸಕ್ಕೆ ಅವುಗಳು ಹೊಂದಿಕೆಯಾಗಬೇಕಾಗುತ್ತದೆ.
ಇಲ್ಲವಾದರೆ ಸಮೂಹಗಳಿಗೆ ಯಾವುದೇ ಬಗೆಯ ಸಾಮಾಜಿಕ ಏಳ್ಗೆಯನ್ನು ಕಾಣಲು ಆಗುವುದಿಲ್ಲ. ಕಾನೂನು, ವಾಣಿಜ್ಯ, ವಿಜ್ಞಾನ, ತಂತ್ರಜ್ಞಾನ, ಆರ್ಥಿಕ ನೀತಿಗಳು, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಹಾಗೂ ಇತರೆ ಯಾವುದೆ ತಿಳಿವಿನ ಸಂಕಥನಗಳು ಜನರ ಹಕ್ಕು ಮತ್ತು ಅವರಿಗೆ ಸೇರಿದ ಸಂಪನ್ಮೂಲವಾಗಬೇಕೆಂದರೆ, ಈ ತಿಳಿವು ಆಯಾ ಸಮೂಹಗಳ ಸಾಮಾಜಿಕ ಅರಿವಿನ ಮೂಲಕ ಮಂಡಿತವಾಗಬೇಕು. ಆಯಾ ಸಮೂಹಗಳು ನಂಬಿರುವ ನುಡಿಗಳಲ್ಲಿ ಮಾತ್ರ ಈ ಸಾಮಾಜಿಕ ಅರಿವು ನೆಲೆಗೊಂಡಿರುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
~ ಯೋಗೇಶ್ ಮಾಸ್ಟರ್
ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.
ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.
ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.
ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?
ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.
ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.
ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.
ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

ಅಂತರಂಗ
ದಿಮಾಗಿ ನಕ್ಸಲ್-ನಗರ ನಕ್ಸಲ್
~ರಹಮತ್ ತರೀಕೆರೆ, ಚಿಂತಕರು
ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.
ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.
ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.
ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.
ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.
ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.
ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.
ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.
ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ
ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.
ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.
ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.
ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

-
ಅಂತರಂಗ6 days agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
-
ದಿನದ ಸುದ್ದಿ3 days agoವಂಚನೆ | ಪ್ರಭಾರ ಕಾರ್ಯಪಾಲಕ ಅಭಿಯಂತರ ಸೋಮ್ಲನಾಯ್ಕ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
-
ದಿನದ ಸುದ್ದಿ4 days agoKPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
-
ದಿನದ ಸುದ್ದಿ3 days agoಇಂಗ್ಲಿಷ್ ಕಲಿಯಲು ಬಂದ ಜಪಾನ್ ಯುವಕ ಜೈಲು ಸೇರಿದ ; 75000 ಪರಿಹಾರ ಪಡೆದ
-
ದಿನದ ಸುದ್ದಿ4 days agoಸರ್ವರ್ ಡೌನ್, ಅಧಿಕಾರಿಗಳ ವಿಳಂಬ: ‘ಎ-ಖಾತೆ’ಗಾಗಿ ಕಾದು ಕುಳಿತ 60 ಸಾವಿರಕ್ಕೂ ಹೆಚ್ಚು ಅರ್ಜಿದಾರರು!
-
ದಿನದ ಸುದ್ದಿ4 days ago₹25 ಕೋಟಿ ಮೌಲ್ಯದ ಬಿಡಿಎ ಆಸ್ತಿ ವಶಕ್ಕೆ: ರಾಜಾಜಿನಗರ ಬಡಾವಣೆಯಲ್ಲಿ ಅನಧಿಕೃತ ನಿರ್ಮಾಣಕ್ಕೆ ಬಿತ್ತು ಬೀಗ
-
ದಿನದ ಸುದ್ದಿ4 days agoಭದ್ರಾ ಡ್ಯಾಂ ನೀರು ಹರಿಸುವಂತೆ ಆಗ್ರಹಿಸಿ ಕರೆ ನೀಡಿದ್ದ ದಾವಣಗೆರೆ ಬಂದ್ ನೀರಸ

