ಬಹಿರಂಗ
ಶಿಕ್ಷಣದ ಮಾರುಕಟ್ಟೆಯೂ ಆನ್ ಲೈನ್ ಹರಾಜುಕಟ್ಟೆಯೂ
- ನಾ ದಿವಾಕರ
ಕೋವಿದ್ 19 ಭಾರತದ ಸಾಮಾಜಿಕ ಚೌಕಟ್ಟಿನಲ್ಲಿರುವ ಎಲ್ಲ ರೀತಿಯ ತಾರತಮ್ಯ, ದೌರ್ಜನ್ಯ, ಕ್ರೌರ್ಯ ಮತ್ತು ಅನಿಷ್ಟಗಳನ್ನೂ ಹೊರಹಾಕಿರುವಂತೆಯೇ, ನಮ್ಮ ಆಡಳಿತ ವ್ಯವಸ್ಥೆಯಲ್ಲಿರುವ ದೌರ್ಬಲ್ಯ, ನಿಷ್ಕ್ರಿಯತೆ ಮತ್ತು ವ್ಯವಧಾನದ ಕೊರತೆಯನ್ನೂ ಹೊರಹಾಕಿಬಿಟ್ಟಿದೆ.
ಕಳೆದ ಮೂರು ತಿಂಗಳ ಅವಧಿಯಲ್ಲಿ ಭಾರತೀಯ ಸಮಾಜ ಎದುರಿಸಿರುವ ಕ್ಲಿಷ್ಟ ಸನ್ನಿವೇಶಗಳು ಜನಸಾಮಾನ್ಯರನ್ನು ಗೊಂದಲಕ್ಕೆ ಸಿಲುಕಿಸಿದ್ದರೆ ಅದಕ್ಕೆ ಮೂಲ ಕಾರಣ ಕೊರೋನಾ ಅಲ್ಲ. ಸಮಗ್ರ ಚಿಂತನೆ ಇಲ್ಲದೆ, ಪೂರ್ವಭಾವಿ ನೀಲನಕ್ಷೆಯಿಲ್ಲದೆ, ವ್ಯಾಪಕ ಅಧ್ಯಯನ ಮತ್ತು ಗ್ರಹಿಕೆ ಇಲ್ಲದೆ, ಆ ಕ್ಷಣದ ಅನಿವಾರ್ಯತೆಗಳನ್ನೇ ಆದ್ಯತೆಗಳೆಂದು ಪರಿಗಣಿಸುವ ಯಾವುದೇ ಆಡಳಿತ ವ್ಯವಸ್ಥೆ ಈ ರೀತಿಯ ಗೊಂದಲ ಸೃಷ್ಟಿಸುವುದು ಸಹಜ.
ಕೊರೋನಾ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಜ್ಜೆ ಹೆಜ್ಜೆಗೂ ಇದೇ ಪ್ರಮಾದ ಎಸಗುತ್ತಿರುವುದನ್ನು ಗಮನಿಸುತ್ತಲೇ ಬಂದಿದ್ದೇವೆ. ಲಾಕ್ ಡೌನ್ ಜಾರಿಗೊಳಿಸುವುದರಿಂದ ಹಿಡಿದು ಸಡಿಲಗೊಳಿಸುವವರೆಗೂ ಸರ್ಕಾರಗಳ ನಿರ್ಧಾರಗಳು ಅವೈಜ್ಞಾನಿಕತೆಯ ನೆಲೆಯಲ್ಲೇ ಕಂಡುಬರುತ್ತಿವೆ.
ಇದರ ಒಂದು ಪರಿಣಾಮವನ್ನು ವಲಸೆ ಕಾರ್ಮಿಕರ ಬವಣೆಯಲ್ಲಿ ಕಾಣುತ್ತಿದ್ದೇವೆ. ಕೊರೋನಾಗೂ ವಲಸೆ ಕಾರ್ಮಿಕರಿಗೂ ಸಂಬಂಧ ಇಲ್ಲ, ಆದರೆ ಲಾಕ್ ಡೌನ್ ಘೋಷಣೆಗೂ ವಲಸೆ ಕಾರ್ಮಿಕರ ಸಮಸ್ಯೆಗೂ ಸಂಬಂಧವಿದೆ. ನಿತ್ಯ ಸಾವಿನ ಪಯಣ ನಡೆಸುತ್ತಿರುವ ಲಕ್ಷಾಂತರ ಶ್ರಮಜೀವಿಗಳಿಗೆ ಕೊರೋನಾ ಸಂಬಂಧಿತ ಲಾಕ್ ಡೌನ್ ಮಾರಕವಾಗಿರುವುದಂತೂ ಸತ್ಯ.
ಭಾರತ ಎರಡು ತಿಂಗಳಿಗೂ ಹೆಚ್ಚು ಕಾಲ ಲಾಕ್ ಡೌನ್ ಅನುಭವಿಸಿದೆ. ಇನ್ನೂ ಒಂದು ತಿಂಗಳು ಮುಂದುವರೆಯಲಿದೆ. ಅರ್ಥವ್ಯವಸ್ಥೆಯ ವ್ಯತ್ಯಯಗಳನ್ನು ಗಮನದಲ್ಲಿಟ್ಟುಕೊಂಡು ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಸುವುದು ತಪ್ಪೇನಲ್ಲ. ಆದರೆ ಅರ್ಥವ್ಯವಸ್ಥೆ ಎಂದರೆ ಕೇವಲ ಮಾರುಕಟ್ಟೆ ಮಾತ್ರವೇ ಅಲ್ಲ. ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ತರುವ ಚಟುವಟಿಕೆಗಳಷ್ಟೇ ಆರ್ಥಿಕತೆ ಅಲ್ಲ. ಹಣಕಾಸು ಬಂಡವಾಳ, ಸರಕುಗಳ ಮಾರುಕಟ್ಟೆಯಲ್ಲಿ ಕಾಣುವ ವಿದ್ಯಮಾನ.
ಔದ್ಯಮಿಕ ಬಂಡವಾಳ ಉತ್ಪಾದನೆಯ ಮಾರುಕಟ್ಟೆಯಲ್ಲಿ ಕಾಣುವ ವಿದ್ಯಮಾನ. ಇದನ್ನೂ ಮೀರಿದ ಒಂದು ವಿದ್ಯಮಾನ ಸಾಮಾಜಿಕ ಬಂಡವಾಳ. ಈ ಸಾಮಾಜಿಕ ಬಂಡವಾಳವೇ ಸಮಾಜದ ಅಭ್ಯುದಯಕ್ಕೆ ಸುಭದ್ರ ತಳಪಾಯ ಒದಗಿಸುತ್ತದೆ. ಇತಿಹಾಸದ ಎಲ್ಲ ಕಾಲಘಟ್ಟಗಳಲ್ಲೂ ಈ ಅಗೋಚರ ಬಂಡವಾಳವನ್ನು ಸಂರಕ್ಷಿಸುವ ಪ್ರಯತ್ನಗಳನ್ನು ಕಾಣುತ್ತಲೇ ಬಂದಿದ್ದೇವೆ.
ಈ ಸಾಮಾಜಿಕ ಬಂಡವಾಳದ ಮೂಲ ಆಕರ ಇರುವುದು ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯಲ್ಲಿ. ಪ್ರಾಥಮಿಕ ಶಿಕ್ಷಣ ಮತ್ತು ಪ್ರಾಥಮಿಕ ಆರೋಗ್ಯ ಸುಸ್ಥಿತಿಯಲ್ಲಿರುವ ಯಾವುದೇ ದೇಶ ಶೀಘ್ರಗತಿಯಲ್ಲಿ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯ ಎನ್ನುವುದಕ್ಕೆ ಇಂದಿಗೂ ಹಲವು ರಾಷ್ಟ್ರಗಳು ಸಾಕ್ಷಿಯಾಗಿವೆ.
ಅನೇಕ ಬಂಡವಾಳಶಾಹಿ ರಾಷ್ಟ್ರಗಳಲ್ಲೂ ಸಹ ಈ ಎರಡೂ ವಲಯಗಳಲ್ಲಿ ಸಾರ್ವಜನಿಕ ಬಂಡವಾಳಹೂಡಿಕೆ ಹೆಚ್ಚಾಗಿರುತ್ತದೆ, ಸರ್ಕಾರದ ಪಾಲ್ಗೊಳ್ಳುವಿಕೆ ಹೆಚ್ಚಾಗಿರುವುದನ್ನು ಇಂದಿಗೂ ಗಮನಿಸಬಹುದು. ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ ಇದು ಪ್ರಥಮ ಆದ್ಯತೆಯಾಗಬೇಕಿತ್ತು.
ಭಾರತದ ಸಂವಿಧಾನದಲ್ಲಿ ಪ್ರಾಥಮಿಕ ಆರೋಗ್ಯ ಮತ್ತು ಸಾರ್ವತ್ರಿಕ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವ ಮೂಲ ಉದ್ದೇಶವೂ ಇದೇ ಆಗಿತ್ತು. ಆದರೆ ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ಈ ಎರಡೂ ವಲಯಗಳು ಅಕ್ಷರಶಃ ಹರಾಜು ಮಾರುಕಟ್ಟೆಗಳಾಗಿವೆ. ಆರೋಗ್ಯ ವ್ಯವಸ್ಥೆಯ ದುರವಸ್ಥೆ ಕೊರೋನಾ ಸಂದರ್ಭದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಈಗ ವಾಣಿಜ್ಯೀಕರಣಗೊಂಡ ಶಿಕ್ಷಣ ವ್ಯವಸ್ಥೆ ಮತ್ತೊಮ್ಮೆ ಬಲಿಪೀಠದಲ್ಲಿ ಕುಳಿತಿದೆ. ಶಿಕ್ಷಣ ಎಂದರೆ ಕೇವಲ ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆ ಅಲ್ಲ, ಅಥವಾ ಮಕ್ಕಳಿಗೆ ಅರ್ಥವಾಗದ್ದನ್ನು ಅರ್ಥಮಾಡಿಸುವ ಪ್ರಕ್ರಿಯೆಯೂ ಅಲ್ಲ. ಜ್ಞಾನಾರ್ಜನೆಯ ಮಾರ್ಗವಾಗಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ಶಿಕ್ಷಣ ವ್ಯವಸ್ಥೆ ಒಂದೆಡೆ ಬದುಕು ಕಲಿಸಿದರೆ ಮತ್ತೊಂದೆಡೆ ಬದುಕಲು ಕಲಿಸುತ್ತದೆ.
ಬದುಕು ಕಲಿಸುವ ಮಾರ್ಗ ಸಾಮಾಜಿಕ ಬಂಡವಾಳ ವೃದ್ಧಿಗೆ ಬುನಾದಿ ಹಾಕುತ್ತದೆ. ಬದುಕಲು ಕಲಿಸುವ ಮಾರ್ಗ ಆರ್ಥಿಕ ಬಂಡವಾಳಕ್ಕೆ ಅಡಿಪಾಯ ಹಾಕುತ್ತದೆ. ಕಳೆದ ಮೂರು ನಾಲ್ಕು ದಶಕಗಳಿಂದಲೂ ಭಾರತದ ಶಿಕ್ಷಣ ವ್ಯವಸ್ಥೆ ಎರಡನೆಯ ಮಾರ್ಗವನ್ನೇ ಅಧಿಕೃತವಾಗಿ ಅನುಸರಿಸುತ್ತಿದೆ. ಭಾರತದ ಶಾಲಾ ಕಾಲೇಜುಗಳಿಂದ ಹೊರಹೊಮ್ಮುತ್ತಿರುವ ಜ್ಞಾನಾರ್ಜನೆಯ ಭೌತಿಕ ಸರಕುಗಳು ಆರ್ಥಿಕ ಮಾರುಕಟ್ಟೆಗೆ ಬೃಹತ್ ಪ್ರಮಾಣದ ಕಚ್ಚಾ ವಸ್ತುಗಳನ್ನು ಒದಗಿಸುತ್ತಿದೆ.
ಹಣಕಾಸು ಬಂಡವಾಳ ವ್ಯವಸ್ಥೆಗೆ ಈ ಕಚ್ಚಾವಸ್ತುಗಳೇ ಸುಭದ್ರ ಬುನಾದಿಯಾಗಿದೆ. ಆದರೆ ಸಾಮಾಜಿಕ ವ್ಯವಸ್ಥೆಯಲ್ಲಿನ ಲೋಪಗಳತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ. ಕ್ಷಣಮಾತ್ರದಲ್ಲಿ ಜಗತ್ತಿನ ಮತ್ತೊಂದು ತುದಿಗೆ ಜಿಗಿದು ಎಲ್ಲವನ್ನೂ ಗ್ರಹಿಸುವ ಒಂದು ವರ್ಗ ತಮ್ಮ ಮೂಗಿನಡಿಯಲ್ಲೇ ಇರುವ ಕ್ರೌರ್ಯ ಮತ್ತು ದೌರ್ಜನ್ಯಗಳನ್ನು ಗುರುತಿಸಲು ಸಾಧ್ಯವಾಗದಿರುವುದನ್ನು ಈ ಹಿನ್ನೆಲೆಯಲ್ಲೇ ನೋಡಬೇಕಿದೆ.
ಈ ಜ್ಞಾನಾರ್ಜನೆಯ ಮಾರ್ಗಗಳು ಭಾರತೀಯ ಸಮಾಜಕ್ಕೆ ಬದುಕು ಕಲಿಸುತ್ತಿವೆಯೇ ಎನ್ನುವ ಪ್ರಶ್ನೆ ಎದುರಾದಾಗ ನಿರುತ್ತರರಾಗುತ್ತೇವೆ. ನಿಜ, ಸಮಾಜದ ಒಂದು ವರ್ಗಕ್ಕೆ ಬದುಕಲು ಕಲಿಸುತ್ತಿರುವ ಭಾರತದ ಶಿಕ್ಷಣ ವ್ಯವಸ್ಥೆ ಜಾಗತಿಕ ಮಟ್ಟದ ಜ್ಞಾನ ಭಂಡಾರಗಳನ್ನು ಸೃಷ್ಟಿಸಿದೆ. ಪ್ರತಿವರ್ಷ ಲಕ್ಷಾಂತರ ಕಾಲೇಜುಗಳಿಂದ ಮಾರುಕಟ್ಟೆಯ ಜಗುಲಿಯಲ್ಲಿ ಬಂದು ಬೀಳುವ ಬೌದ್ಧಿಕ ಸರಕುಗಳು ಈ ದೇಶದ ಜಿಡಿಪಿ ವೃದ್ಧಿಸಲು, ಮಾರುಕಟ್ಟೆ ವಿಸ್ತರಿಸಲು ಮತ್ತು ಮಾರುಕಟ್ಟೆ ಸೂಚ್ಯಂಕನ್ನು ಹೆಚ್ಚಿಸಲು ನೆರವಾಗುತ್ತಿವೆ.
ಆದರೆ ಒಂದು ಪ್ರಬುದ್ಧ ಸಮಾಜದ ನಿರ್ಮಾಣಕ್ಕೆ ಅಗತ್ಯವಾದ ಸಂಯಮ, ಸೌಜನ್ಯ, ಸೌಹಾರ್ದತೆ ಮತ್ತು ಬೌದ್ಧಿಕ ಕ್ಷಮತೆಯನ್ನು ಕಲಿಸುತ್ತಿಲ್ಲ. ಸಮಾಜ ನಿರ್ಮಾಣಕ್ಕೆ ಅತ್ಯಗತ್ಯವಾದ ಕಚ್ಚಾವಸ್ತುಗಳು ಇವು. ಮಾರುಕಟ್ಟೆಯ ಬೇಡಿಕೆಗಳನ್ನು ಪೂರೈಸುವ ಸಲುವಾಗಿಯೇ ಸಿದ್ಧಪಡಿಸಲಾಗುವ ಪಠ್ಯಕ್ರಮಗಳು ಕೀಲಿಮಣೆಯ ಕೂಲಿಗಳನ್ನು ಸೃಷ್ಟಿಸುತ್ತಿವೆ, ಸಂವೇದನಾಶೀಲ ಸಮಾಜವನ್ನು ರೂಪಿಸುತ್ತಿಲ್ಲ ಎನ್ನುವುದು ವಾಸ್ತವ.
ಮೂರು ವರ್ಷದ ಮಗು ಶಾಲೆಯ ಮೊದಲ ಮೆಟ್ಟಿಲು ಏರಿದ ಕ್ಷಣದಿಂದ 25 ನೆಯ ವರ್ಷದಲ್ಲಿ ಯಾವುದೋ ಒಂದು ವೃತ್ತಿಪರ ಶಿಕ್ಷಣದ ಪ್ರಮಾಣಪತ್ರ ಗಳಿಸಿ ಹೊರಬರುವವವರೆಗೂ ನಾವು ಕಾಣುತ್ತಿರುವುದು ಒಂದು ವಿಸ್ತಾರವಾದ, ವಿಶಾಲವಾಗಿರುವ, ಬೃಹತ್ ಷಾಪಿಂಗ್ ಮಾಲ್ ಮಾತ್ರ,. ಸರ್ಕಾರಿ ಶಾಲೆಗಳು ಇನ್ನೂ ಉಸಿರಾಡುತ್ತಿವೆಯಾದರೂ, ಖಾಸಗಿ ಶಾಲೆಗಳ ದಂಧೆ ಗ್ರಾಮೀಣ ಮಕ್ಕಳನ್ನೂ ಆವರಿಸಿದೆ.
ಜನ ಏಕೆ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಬೇಕು ಎನ್ನುವ ಪ್ರಶ್ನೆ ಸಹಜವಾದದ್ದೇ. ಆದರೆ ಪಠ್ಯಕ್ರಮವನ್ನಾಧರಿಸಿದ ಶಿಕ್ಷಣ ಮತ್ತು ಈ ಶೈಕ್ಷಣಿಕ ವ್ಯವಸ್ಥೆಯ ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳೇ ಮಕ್ಕಳ ಬದುಕನ್ನು ರೂಪಿಸುವ ಏಕೈಕ ಮಾರ್ಗ ಎನ್ನುವ ಒಂದು ಪರಿಸ್ಥಿತಿಯನ್ನು ಮಾರುಕಟ್ಟೆ ವ್ಯವಸ್ಥೆ ಸೃಷ್ಟಿಸಿದೆ. ಈ ವ್ಯವಸ್ಥೆಯಲ್ಲಿ ಬದುಕಬೇಕಾದವರು ಸಿದ್ಧಸೂತ್ರವನ್ನೇ ಅನುಸರಿಸುವುದು ಸಹಜ.
ಅತಿ ಹೆಚ್ಚಿನ ಅಂಕ ಗಳಿಸುವುದು, ನೂರಕ್ಕೆ ನೂರು ಅಂಕ ಗಳಿಸುವುದು, ಸಕಲ ವಿದ್ಯಾಪಾರಂಗತರಾಗಿ ಹೊರಹೊಮ್ಮುವುದು, ಸ್ಪರ್ಧಾತ್ಮಕ ಮಾರುಕಟ್ಟೆಗೆ ಸಿದ್ಧರಾಗುವುದು ಈ ಎಲ್ಲ ಲಕ್ಷಣಗಳು ಮಕ್ಕಳನ್ನು ವಸ್ತುಶಃ ಯಂತ್ರಗಳನ್ನಾಗಿ ಮಾಡಿಬಿಟ್ಟಿವೆ. ಈ ಯಂತ್ರಗಳನ್ನು ಸಂಸ್ಕರಿಸಿ, ಪರಿಷ್ಕೃತಗೊಳಿಸಿ, ತಿದ್ದಿ ತೀಡಿ ಶಿಲ್ಪಕಲೆಯಂತೆ ಸಿದ್ಧಪಡಿಸಲು ಖಾಸಗಿ ವಿದ್ಯಾ ಸಂಸ್ಥೆಗಳು ನಾಯಿಕೊಡೆಗಳಂತೆ ತಲೆಎತ್ತುತ್ತಿವೆ.
ಅತ್ಯಂತ ಶ್ರೇಷ್ಠ ಬೋಧನೆ, ಅತ್ಯಂತ ಪರಿಣತ ಬೋಧಕರು, ಅತ್ಯಾಧುನಿಕ ಸುಸಜ್ಜಿತ ಮೂಲ ಸೌಕರ್ಯಗಳು ಮತ್ತು ವಿಶ್ವ ಶ್ರೇಷ್ಠ ಶೈಕ್ಷಣಿಕ ಪರಿಸರ ಇರುವ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳೂ ಸಹ ಮತ್ತೊಂದು ಕೋಚಿಂಗ್ ಕೇಂದ್ರದ ಮೊರೆ ಹೋಗದಿದ್ದರೆ ಅಂಕಪಟ್ಟಿ ಮೂಲೆಗುಂಪಾಗಿಬಿಡುತ್ತದೆ. ಈ ಪರಿಸ್ಥಿತಿಗೆ ಕಾರಣ ಬಂಡವಾಳ ಮಾರುಕಟ್ಟೆಯ ಲಾಭಕೋರತನ ಮತ್ತು ಈ ದೇಶದ ಆಡಳಿತ ವ್ಯವಸ್ಥೆ.
ಶಿಕ್ಷಣ ಮತ್ತು ಕಲಿಕೆಯ ಮೂಲ ಉದ್ದೇಶ ಜ್ಞಾನಾರ್ಜನೆಯೇ ಆದರೂ ಅದು ಬದುಕಲು ಅವಕಾಶ ಒದಗಿಸುವ ಜೊತೆಗೆ ಬದುಕು ಕಲಿಸುವ ಧ್ಯೇಯ ಹೊಂದಿರಬೇಕು. ಕಳೆದ ನಾಲ್ಕು ದಶಕಗಳಲ್ಲಿ ಭಾರತದ ಶೈಕ್ಷಣಿಕ ವ್ಯವಸ್ಥೆ ತಯಾರಿಸುತ್ತಿರುವ ಜ್ಞಾನಯಂತ್ರಗಳಲ್ಲಿ ಸಾಧನೆಯ ಹಪಹಪಿ, ಪ್ರಗತಿಯ ಉತ್ಸುಕತೆ ಮತ್ತು ಅಭಿವೃದ್ಧಿಯ ಮುನ್ನೋಟ ಹೇರಳವಾಗಿ ಕಂಡುಬಂದರೂ, ಸುತ್ತಲಿನ ಸಮಾಜದತ್ತ ಕಣ್ಣೆತ್ತಿ ನೋಡುವ ವ್ಯವಧಾನವನ್ನು ಕಾಣಲಾಗುವುದಿಲ್ಲ. ಇದಕ್ಕೆ ಕಾರಣ ಖಾಸಗಿ ವಿದ್ಯಾಸಂಸ್ಥೆಗಳ ಸ್ಪರ್ಧಾತ್ಮಕ ಧೋರಣೆ ಮತ್ತು ಮಾರುಕಟ್ಟೆ ಕೇಂದ್ರಿತ ಬೋಧನೆ. ಆಧುನಿಕ ಮಾರುಕಟ್ಟೆ ವ್ಯವಸ್ಥೆಯಲ್ಲಿ ಬಂಡವಾಳ ಹೂಡಿಕೆ ಮತ್ತು ಲಾಭಗಳಿಕೆಯೇ ಔದ್ಯಮಿಕ ಮಂತ್ರವಾಗಿರುವುದರಿಂದ ಶಿಕ್ಷಣವೂ ಸಹ ಲಾಭಗಳಿಕೆಯ ಕ್ಷೇತ್ರಗಳಾಗಿವೆ.
ಕೊರೋನಾ ಸಂದರ್ಭದಲ್ಲಿ ಈ ಕಡುಲೋಭಿಗಳ ಮೂಲ ಲಕ್ಷಣಗಳು ಸ್ಪಷ್ಟವಾಗಿ ಹೊರಹೊಮ್ಮುತ್ತಿವೆ. ಸಿಕ್ಕ ಅವಕಾಶವನ್ನು ಬಾಚಿಕೊಂಡು ಸಾಧ್ಯವಾದಷ್ಟೂ ಲಾಭಗಳಿಸುವ ಮಾರುಕಟ್ಟೆ ತಂತ್ರಕ್ಕೆ ಶಿಕ್ಷಣ ಕ್ಷೇತ್ರವೂ ಬಲಿಯಾಗುತ್ತಿದೆ. ಈ ದೇಶದ ಹಿತವಲಯದ ವರ್ಗಗಳೂ ಸಹ ಈ ಪೈಪೋಟಿಯಲ್ಲಿ ತಮಗೆ ಬೇಕಾದ್ದನ್ನು ಬಾಚಿಕೊಳ್ಳುವ ಮೂಲಕ ಭವಿಷ್ಯದ ಬುನಾದಿಯನ್ನು ಭದ್ರಪಡಿಸಿಕೊಳ್ಳುತ್ತಿವೆ.
ಇಲ್ಲಿ ಅವಕಾಶವಂಚಿತ ಸಮುದಾಯಗಳು ಅಬ್ಬೇಪಾರಿಗಳಂತೆ ಅಂಚಿಗೆ ತಳ್ಳಲ್ಪಡುತ್ತಿದ್ದಾರೆ. ಇವರೇ ಬಹುಸಂಖ್ಯಾತರು ಎನ್ನುವುದು ವಾಸ್ತವ. ಈ ಅವಕಾಶವಂಚಿತರಿಗೆ ಆಸರೆಯಾಗಿ ನಿಲ್ಲಬೇಕಾದ ಪ್ರಭುತ್ವ ಮತ್ತು ಸರ್ಕಾರಗಳು ತಮ್ಮ ನೈತಿಕ-ಸಾಂವಿಧಾನಿಕ ಹೊಣೆಗಾರಿಕೆಯನ್ನೇ ಮರೆತು, ಮಾರುಕಟ್ಟೆಯ ತಾಳಕ್ಕೆ ಹೆಜ್ಜೆ ಹಾಕುತ್ತಿರುವುದು ದುರಂತ.
ಕೊರೋನಾ ಸಂದರ್ಭದಲ್ಲಿ ಕಾಣುತ್ತಿರುವ ಆನ್ ಲೈನ್ ಶಿಕ್ಷಣದ ದಂಧೆ ಮಾರುಕಟ್ಟೆ ವ್ಯವಸ್ಥೆಯ ಕರಾಳ ಮುಖವನ್ನು ಶೈಕ್ಷಣಿಕ ವಲಯದಲ್ಲಿ ಅನಾವರಣಗೊಳಿಸಿದೆ. ಒಂದನೆ ತರಗತಿಯ ಮಕ್ಕಳಿಗೂ ಆನ್ ಲೈನ್ ಶಿಕ್ಷಣ ಒದಗಿಸುವ ಮಟ್ಟಿಗೆ ಶಿಕ್ಷಣ ಸಂಸ್ಥೆಗಳು ಧನದಾಹಿಗಳಾಗಿವೆ.
ರಾಜ್ಯ ಸರ್ಕಾರ ಪ್ರಸ್ತುತ ಶೈಕ್ಷಣಿಕ ವರ್ಷವನ್ನು ಜುಲೈ ಅಥವಾ ಆಗಸ್ಟ್ ತಿಂಗಳಿಂದ ಆರಂಭಿಸಿದರೂ ರಜಾ ದಿನಗಳನ್ನು ಕಡಿಮೆ ಮಾಡುವ ಮೂಲಕ ಪಠ್ಯಕ್ರಮ ಬೋಧನೆಯನ್ನು ಪೂರೈಸಬಹುದು. ಆದರೆ ಖಾಸಗಿ ಶಾಲೆಗಳಿಗೆ ಶುಲ್ಕದ ಚಿಂತೆ. ಆನ್ ಲೈನ್ ಶಿಕ್ಷಣದ ಮೂಲಕ ವರ್ಷದ ಶುಲ್ಕವನ್ನು ವಸೂಲಿ ಮಾಡಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಖಾತರಿಪಡಿಸಿಕೊಳ್ಳುವ ದುರುದ್ದೇಶದ ಹೊರತಾಗಿ ಈ ಪ್ರಯತ್ನದಲ್ಲಿ ಮತ್ತಾವ ಪುರುಷಾರ್ಥವನ್ನೂ ಕಾಣಲಾಗುವುದಿಲ್ಲ.
ಈ ಸಂದರ್ಭದಲ್ಲಿ ಸರ್ಕಾರ ಪ್ರಬುದ್ಧತೆ ತೋರಬಹುದಿತ್ತು. ಶಿಕ್ಷಣ ವ್ಯವಸ್ಥೆಯನ್ನು ರಾಷ್ಟ್ರೀಕರಣ ಮಾಡುವ ಆತ್ಮಸ್ಥೈರ್ಯವನ್ನು ಕಳೆದುಕೊಂಡಿರುವ ಆಳುವ ವರ್ಗಗಳು ಕನಿಷ್ಟ ಖಾಸಗಿ ವಿದ್ಯಾಸಂಸ್ಥೆಗಳ ಮೇಲೆ ನಿಯಂತ್ರಣ ಸಾಧಿಸಲಾದರೂ ಮುಂದಾಗಬಹುದು. ಹತ್ತನೆ ತರಗತಿಯ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಈಗಾಗಲೇ ಬೇರೂರಿರುವ ತಾರತಮ್ಯಗಳನ್ನು ಮತ್ತಷ್ಟು ಒರೆಹಚ್ಚಿ ನೋಡಿರುವ ರಾಜ್ಯಸರ್ಕಾರ ಎಲ್ಲ ಮಕ್ಕಳಿಗೂ ಉಚಿತ ಲ್ಯಾಪ್ ಟಾಪ್ ಅಥವಾ ಟ್ಯಾಬ್ ಒದಗಿಸುವ ಮೂಲಕ ಎಲ್ಲ ವರ್ಗಗಳಿಗೂ ನೆರವಾಗಬಹುದು.
ಅಂತರ್ಜಾಲ ಸಿಗ್ನಲ್ ಸಮಸ್ಯೆಯನ್ನು ಬಗೆಹರಿಸುವುದು ಕಷ್ಟವೇನಲ್ಲ. ಆದರೆ ನಮ್ಮ ಸರ್ಕಾರಗಳಿಗೆ ಒಂದೆಡೆ ಇಚ್ಚಾಶಕ್ತಿಯ ಕೊರತೆ ಇದ್ದರೆ ಮತ್ತೊಂದೆಡೆ ಖಾಸಗಿ ವಿದ್ಯಾಸಂಸ್ಥೆಗಳ ವಿರೋಧ ಕಟ್ಟಿಕೊಳ್ಳುವ ಧೈರ್ಯವೂ ಇಲ್ಲ. ಬಹುಪಾಲು ಶೈಕ್ಷಣಿಕ ಸಂಸ್ಥೆಗಳು ರಾಜಕೀಯ ನಾಯಕರುಗಳ ಒಡೆತನದಲ್ಲಿರುವುದು ಅಥವಾ ಈ ಪಕ್ಷಗಳನ್ನು ಪೋಷಿಸುವ ಮಠಗಳ ಮಾಲಿಕತ್ವದಲ್ಲಿರುವುದು ಇದಕ್ಕೆ ಕಾರಣ.
ಈ ದುರಂತದ ನಡುವೆಯೇ ಖಾಸಗಿ ಶಾಲೆಗಳು ಆನ್ ಲೈನ್ ಶಿಕ್ಷಣದ ನೆಪ ಹೂಡಿ ಪೋಷಕರಿಂದ ಹಣ ವಸೂಲಿ ಮಾಡುವ ದಂಧೆಗೆ ಇಳಿದಿವೆ. 8-9ನೆಯ ತರಗತಿ ಮಕ್ಕಳಿಗೆ ಸ್ಮಾರ್ಟ್‍ಫೋನ್ ನೀಡಿದರೆ ಏನಾಗುತ್ತದೆಯೋ ಎನ್ನುವ ಆತಂಕ ಪ್ರತಿಯೊಬ್ಬ ಪೋಷಕರಲ್ಲೂ ಇರುವುದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕಿದೆ. ಈ ಆತಂಕಕ್ಕೆ ಕಾರಣಗಳೂ ಇಲ್ಲದಿಲ್ಲ.
ಖಾಸಗಿ ಶಾಲೆಯಲ್ಲಿ ಮಕ್ಕಳನ್ನು ಸೇರಿಸುವವರೆಲ್ಲರೂ ಸ್ಮಾರ್ಟ್‍ಫೋನ್ ಹೊಂದಿರುತ್ತಾರೆ ಎನ್ನುವ ಭ್ರಮೆಯಿಂದಲೂ ಖಾಸಗಿ ಶಿಕ್ಷಣೋದ್ಯಮಿಗಳು ಹೊರಬರಬೇಕಿದೆ. ನಗರವಾಸಿ ಹಿತವಲಯಗಳಿಗೆ, ಶ್ರೀಮಂತರಿಗೆ ಶಿಕ್ಷಣ ಎನ್ನುವುದು ಮುನ್ನಡೆಯ ಮೆಟ್ಟಿಲಾಗಿ ಮಾತ್ರವೇ ಕಾಣುತ್ತದೆ. ಹಾಗಾಗಿಯೇ ಅಂಕಪಟ್ಟಿಯ ವ್ಯಸನ, ಪೈಪೋಟಿಯ ಧಾವಂತ ಮತ್ತು ಮಾರುಕಟ್ಟೆಯ ತವಕ. ಆದರೆ ಭಾರತದ ಬಹುಪಾಲು ಜನತೆಗೆ ಶಿಕ್ಷಣ ಬದುಕು ಕಟ್ಟಿಕೊಡಬೇಕಾದ ಒಂದು ಮಾರ್ಗ.
ಭವಿಷ್ಯದ ಸಮಾಜವನ್ನು ನಿರ್ಮಿಸುವ ಒಂದು ಸಾಧನ. ಈ ಸಮಾಜವೇ ಈ ಬಹುಜನರ ಭವಿಷ್ಯದ ಭೂಮಿಕೆಯಾಗುತ್ತದೆ. ಹಣ ಮತ್ತು ಬಂಡವಾಳ ಜೀವನದ ಅನಿವಾರ್ಯತೆಗಳೇ ಆಗಿದ್ದರೂ ಆದ್ಯತೆ ಆಗಕೂಡದು. ಇದು ಶಿಕ್ಷಣ ವ್ಯವಸ್ಥೆ ಜನತೆಗೆ ಕಲಿಸಬೇಕಾದ ಪಾಠ.
ದುರಂತ ಎಂದರೆ ಶಿಕ್ಷಣದ ವಾಣಿಜ್ಯೀಕರಣ ಶಾಲೆಗಳನ್ನು ಹರಾಜು ಮಾರುಕಟ್ಟೆಗಳನ್ನಾಗಿ ಪರಿವರ್ತಿಸಿದೆ. ಒಂದೆಡೆ ವಿದ್ಯಾಸಂಸ್ಥೆಗಳ ದಂಧೆ ಮತ್ತೊಂದೆಡೆ ಕೋಚಿಂಗ್ ದಂಧೆಯ ನಡುವೆ ಮಧ್ಯಮ ವರ್ಗಗಳೂ ಸಹ ಬಸವಳಿದು ಹೋಗಿರುವುದನ್ನು ಗಮನಿಸಬಹುದು. ಸದೃಢ ಭಾರತ, ವಿಶ್ವಗುರು ಭಾರತ, ಬಲಿಷ್ಟ ಭಾರತ ನಿರ್ಮಿಸುವ ಕನಸು ಕಾಣುತ್ತಿರುವ ಆಳುವ ವರ್ಗಗಳಿಗೆ ಈ ಸೂಕ್ಷ್ಮ ಅರಿವಾಗಿದ್ದರೆ ಕೋವಿದ್ ಸಂದರ್ಭದಲ್ಲಾದರೂ ಶಿಕ್ಷಣದ ವಾಣಿಜ್ಯೀಕರಣದ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದವು.
ಕೋವಿದ್ 19 ಸಮಸ್ಯೆಯ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಒದಗಿಸಿ, ಮಕ್ಕಳ ಆರೋಗ್ಯ ಕಾಪಾಡುವುದೇ ಸರ್ಕಾರದ ಆದ್ಯತೆಯಾಗಿದ್ದಲ್ಲಿ, ಸಾರ್ವತ್ರಿಕ ಶಿಕ್ಷಣದ ರಾಷ್ಟ್ರೀಕರಣಕ್ಕೆ ಮುಂದಾಗುತ್ತಿತ್ತು. ತಾರತಮ್ಯ ಇಲ್ಲದೆ ಎಲ್ಲ ವರ್ಗದ ಮಕ್ಕಳಿಗೂ ಸಮಾನ ಶಿಕ್ಷಣ ಒದಗಿಸಲು ಮುಂದಾಗುತ್ತಿತ್ತು.
ಆದರೆ ಈಗಾಗಲೇ ದೇಶದ ಆರ್ಥಿಕತೆಯನ್ನು ಕಾರ್ಪೋರೇಟ್ ಉದ್ಯಮಿಗಳಿಗೆ ಒಪ್ಪಿಸಿರುವ ಭಾರತದ ಆಳುವ ವರ್ಗಗಳು ಬಹುಶಃ ಕೊರೋನಾ ನಾಶವಾಗುವ ಮುನ್ನವೇ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನೂ ವಿನಾಶದತ್ತ ಕೊಂಡೊಯ್ಯುವ ಸಾಧ್ಯತೆಗಳಿವೆ. ಆರ್ಥಿಕ ಬಿಕ್ಕಟ್ಟು, ಬಂಡವಾಳದ ಕೊರತೆ, ಬಿಗಡಾಯಿಸಿರುವ ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತರುವ ಹೊರೆ, ಸರ್ಕಾರದ ವೆಚ್ಚ ಮತ್ತು ಬಂಡವಾಳ ಹೂಡಿಕೆಯಲ್ಲಿ ಕಡಿತ ಈ ಎಲ್ಲ ಕಾರಣಗಳನ್ನು ಮುಂದೊಡ್ಡಿ ದೇಶದ ಶೈಕ್ಷಣಿಕ ವ್ಯವಸ್ಥೆಯನ್ನು ಸಂಪೂರ್ಣ ಖಾಸಗೀಕರಣಗೊಳಿಸುವ ನೀಲನಕ್ಷೆ ಸಿದ್ಧವಾಗಿದ್ದರೂ ಅಚ್ಚರಿಯೇನಿಲ್ಲ. ಬಿಎಸ್‍ಎನ್‍ಎಲ್ ಸಂಸ್ಥೆಯನ್ನು ಮುಳುಗಿಸುವ ಹುನ್ನಾರದೊಂದಿಗೇ ಆನ್ ಲೈನ್ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಇದನ್ನೇ ಸೂಚಿಸುತ್ತದೆ.
ಔದ್ಯಮಿಕ ವಲಯದಲ್ಲಿ ಶೈಕ್ಷಣಿಕ ಪರಿಸರ ಇದ್ದರೆ ಸಮಾಜದ ಮುನ್ನಡೆಗೆ ನೆರವಾಗುತ್ತದೆ. ಶೈಕ್ಷಣಿಕ ವಲಯದಲ್ಲಿ ಔದ್ಯಮಿಕ ಪರಿಸರ ಇದ್ದರೆ ಸಮಾಜ ವಿನಾಶದತ್ತ ಸಾಗುತ್ತದೆ. ಕೊರೋನಾ ಭಾರತೀಯ ಸಮಾಜದಲ್ಲಿ ಆತ್ಮನಿರ್ಭರತೆಯನ್ನು ಸೃಷ್ಟಿಸಿದೆಯೋ ಇಲ್ಲವೋ ಹೇಳಲಾಗದು, ಆದರೆ ಆಳುವ ವರ್ಗಗಳಲ್ಲಿ ಆತ್ಮಸಾಕ್ಷಿ ಇಲ್ಲ ಎನ್ನುವುದನ್ನು ಸ್ಪಷ್ಟವಾಗಿ ನಿರೂಪಿಸಿದೆ. ಹಾಗಾಗಿಯೇ ಶಿಕ್ಷಣದಿಂದ ವಂಚಿತರಾದ ಮಕ್ಕಳೂ ನಮಗೆ ಕಾಣುವುದಿಲ್ಲ, ಹಸಿವಿನಿಂದ ಸಾಯುವ ಮಕ್ಕಳೂ ಕಾಣುವುದಿಲ್ಲ. ಸರ್ಕಾರಕ್ಕೆ ಕಣ್ಣಿಲ್ಲ, ಸಮಾಜಕ್ಕೆ ಇರಬೇಕಲ್ಲವೇ ? ಆದ್ಯತೆಯ ಮಸೂರಗಳನ್ನು ತೆರೆದಿಟ್ಟು ಒಮ್ಮೆ ನೋಡೋಣವೇ ?
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕೆಪಿಸಿಸಿಯ ನೂತನ ಸಾರಥಿ ಬಿ.ಕೆ. ಹರಿಪ್ರಸಾದ್ ರಾಜಕೀಯ ಪಯಣ
ಕರ್ನಾಟಕ ಕಾಂಗ್ರೆಸ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದಾಗಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಂಡ ಬಳಿಕ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಈ ಮಹತ್ವದ ಜವಾಬ್ದಾರಿಯನ್ನು ಬಿ.ಕೆ. ಹರಿಪ್ರಸಾದ್ ಅವರಿಗೆ ನೀಡಿದೆ.
ಈ ನೇಮಕ ಕೇವಲ ಸಂಘಟನಾತ್ಮಕ ಬದಲಾವಣೆಯಲ್ಲ. ಕರ್ನಾಟಕ ಕಾಂಗ್ರೆಸ್‌ನ ಮುಂದಿನ ರಾಜಕೀಯ ದಿಕ್ಕು, ಪಕ್ಷದ ಒಳಾಂಗಣ ಸಮತೋಲನ ಮತ್ತು ಭವಿಷ್ಯದ ಚುನಾವಣಾ ತಂತ್ರಗಳಿಗೆ ಇದು ಪ್ರಮುಖ ಸೂಚನೆಯಾಗಿದೆ. ಹಲವು ದಶಕಗಳ ರಾಜಕೀಯ ಅನುಭವ, ಸಂಘಟನಾ ಕೌಶಲ್ಯ ಮತ್ತು ಹೈಕಮಾಂಡ್‌ಗೆ ನಿಕಟ ಸಂಪರ್ಕ ಹೊಂದಿರುವ ಹರಿಪ್ರಸಾದ್ ಅವರು ಈಗ ರಾಜ್ಯ ಕಾಂಗ್ರೆಸ್‌ನ ನೂತನ ಸಾರಥಿಯಾಗಿ ಹೊರಹೊಮ್ಮಿದ್ದಾರೆ.
ಆರಂಭಿಕ ಜೀವನ ಮತ್ತು ಶಿಕ್ಷಣ
ಬಿ.ಕೆ. ಹರಿಪ್ರಸಾದ್ ಅವರು 1954ರ ಜುಲೈ 29ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎ. ಕೆಂಪಯ್ಯ ಹಾಗೂ ತಾಯಿ ಕೆ. ಗುಣಾವತಿ. ಬಾಲ್ಯದಿಂದಲೇ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳತ್ತ ಆಸಕ್ತಿ ಹೊಂದಿದ್ದ ಅವರು ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಲ್ಲಿ ಬಿ.ಕಾಂ ಪದವಿ ಶಿಕ್ಷಣ ಪಡೆದರು. ವಿದ್ಯಾರ್ಥಿ ಜೀವನದಲ್ಲಿಯೇ ಕಾಂಗ್ರೆಸ್ ಚಟುವಟಿಕೆಗಳೊಂದಿಗೆ ಗುರುತಿಸಿಕೊಂಡ ಅವರು ಮುಂದೆ ಪೂರ್ಣಾವಧಿ ರಾಜಕಾರಣಿಯಾಗಿ ಬೆಳೆದರು.
ವಿದ್ಯಾರ್ಥಿ ರಾಜಕಾರಣದಿಂದ ರಾಷ್ಟ್ರೀಯ ಮಟ್ಟದ ನಾಯಕತ್ವದವರೆಗೆ
ಹರಿಪ್ರಸಾದ್ ಅವರ ರಾಜಕೀಯ ಬದುಕು ವಿದ್ಯಾರ್ಥಿ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಸಂಘಟನೆಗಳಿಂದ ಆರಂಭವಾಯಿತು. ಸಂಘಟನಾ ರಾಜಕಾರಣದಲ್ಲಿ ತೋರಿದ ಸಾಮರ್ಥ್ಯದಿಂದ ಅವರು ಶೀಘ್ರದಲ್ಲೇ ಪಕ್ಷದ ಹಿರಿಯ ನಾಯಕರ ಗಮನ ಸೆಳೆದರು.
ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲೂ ಕಾಂಗ್ರೆಸ್ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ ಅವರು, ಹಲವು ರಾಜ್ಯಗಳ ಕಾಂಗ್ರೆಸ್ ವ್ಯವಹಾರಗಳ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ. ಪಕ್ಷದ ಹೈಕಮಾಂಡ್‌ನೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ನಾಯಕರಲ್ಲಿ ಹರಿಪ್ರಸಾದ್ ಪ್ರಮುಖರು ಎಂದು ಪರಿಗಣಿಸಲಾಗುತ್ತದೆ.
ಬಿ.ಕೆ. ಹರಿಪ್ರಸಾದ್ ಅವರು ಹಲವು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 1990ರಿಂದಲೇ ಅವರು ರಾಷ್ಟ್ರೀಯ ರಾಜಕಾರಣದಲ್ಲಿ ಸಕ್ರಿಯ ಪಾತ್ರ ವಹಿಸುತ್ತಾ ಬಂದಿದ್ದಾರೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪರವಾಗಿ ಹಲವು ವಿಷಯಗಳ ಬಗ್ಗೆ ಧ್ವನಿ ಎತ್ತಿದ ಅವರು ಸಂಸತ್ತಿನ ಚರ್ಚೆಗಳಲ್ಲಿ ಗಮನ ಸೆಳೆದಿದ್ದರು.
ಅವರು ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ಪ್ರತಿಪಕ್ಷಗಳ ಒಕ್ಕೂಟದ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿ ಎನ್‌ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ವಿರುದ್ಧ ಪೈಪೋಟಿ ನಡೆಸಿದ್ದರು. ಸೋಲು ಕಂಡಿದ್ದರೂ ರಾಷ್ಟ್ರೀಯ ರಾಜಕೀಯದಲ್ಲಿ ಅವರ ಸ್ಥಾನಮಾನ ಮತ್ತಷ್ಟು ಬಲವತ್ತಾಯಿತು.
1999ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿಯ ಹಿರಿಯ ನಾಯಕ ಅನಂತ್ ಕುಮಾರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಜಯ ಸಾಧಿಸಲು ಸಾಧ್ಯವಾಗದಿದ್ದರೂ ಅವರು ಕಾಂಗ್ರೆಸ್‌ನ ಪ್ರಮುಖ ಮುಖವಾಗಿ ಗುರುತಿಸಿಕೊಂಡರು.
ಸಂಘಟನಾ ರಾಜಕಾರಣದಲ್ಲಿ ಹೆಚ್ಚು ಸಕ್ರಿಯರಾಗಿದ್ದ ಕಾರಣ, ಚುನಾವಣಾ ಗೆಲುವಿಗಿಂತ ಪಕ್ಷ ನಿರ್ಮಾಣದಲ್ಲಿ ಅವರ ಪಾತ್ರವೇ ಹೆಚ್ಚು ಗಮನ ಸೆಳೆಯಿತು.
ಕಾಂಗ್ರೆಸ್ ಸಂಘಟನೆಯಲ್ಲಿ ‘ಟಾಸ್ಕ್ ಮಾಸ್ಟರ್’
ಕಾಂಗ್ರೆಸ್ ಪಕ್ಷದಲ್ಲಿ ಹರಿಪ್ರಸಾದ್ ಅವರನ್ನು ಸಂಘಟನಾ ತಜ್ಞ ಎಂದು ಕರೆಯಲಾಗುತ್ತದೆ. ಪಕ್ಷ ಎದುರಿಸಿದ ಸಂಕಷ್ಟದ ಸಂದರ್ಭಗಳಲ್ಲಿ ಹಲವು ರಾಜ್ಯಗಳಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಿ ಸಂಘಟನೆಯನ್ನು ಬಲಪಡಿಸಿದ ಅನುಭವ ಅವರಿಗೆ ಇದೆ.
ಇತ್ತೀಚಿನ ಅವಧಿಯಲ್ಲಿ ಅವರು ಹರಿಯಾಣ ಕಾಂಗ್ರೆಸ್ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾಜ್ಯ ರಾಜಕೀಯದ ಸೂಕ್ಷ್ಮ ಸಮೀಕರಣಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಮತ್ತು ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಸಾಧಿಸುವ ಶೈಲಿ ಅವರ ವಿಶೇಷತೆ ಎಂದು ಪಕ್ಷದ ನಾಯಕರು ಹೇಳುತ್ತಾರೆ.
ಕರ್ನಾಟಕ ಕಾಂಗ್ರೆಸ್‌ನಲ್ಲಿ ಹರಿಪ್ರಸಾದ್ ಅವರು ಹಲವು ದಶಕಗಳಿಂದ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಪಕ್ಷದ ಒಳಗಿನ ಭಿನ್ನಾಭಿಪ್ರಾಯಗಳ ಸಂದರ್ಭದಲ್ಲೂ ಅವರು ಸಮತೋಲನ ಸಾಧಿಸುವ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಅವರು, 2022 ರಿಂದ 2023ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸರ್ಕಾರದ ನೀತಿಗಳ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸುವ ಮೂಲಕ ಅವರು ಗಮನ ಸೆಳೆದಿದ್ದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ
2026ರಲ್ಲಿ ಕರ್ನಾಟಕ ರಾಜಕೀಯದಲ್ಲಿ ನಡೆದ ನಾಯಕತ್ವ ಬದಲಾವಣೆಯ ಬಳಿಕ ಮುಖ್ಯಮಂತ್ರಿ ಹುದ್ದೆಯನ್ನು ಡಿ.ಕೆ. ಶಿವಕುಮಾರ್ ವಹಿಸಿಕೊಂಡರು. ಇದರ ಪರಿಣಾಮವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಪಕ್ಷದೊಳಗೆ ಹಲವು ನಾಯಕರ ಹೆಸರುಗಳು ಕೇಳಿಬಂದಿದ್ದರೂ ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಬಿ.ಕೆ. ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಿತು.
ಈ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹೈಕಮಾಂಡ್ ಸಂಘಟನಾ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿ ಪರಿಗಣಿಸಿದೆ. ಪಕ್ಷದ ಸರ್ಕಾರ ಮತ್ತು ಪಕ್ಷ ಸಂಘಟನೆಯ ನಡುವೆ ಸಮತೋಲನ ಕಾಯ್ದುಕೊಳ್ಳಲು ಹರಿಪ್ರಸಾದ್ ಅವರ ಅನುಭವ ನೆರವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಬಿ.ಕೆ. ಹರಿಪ್ರಸಾದ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಹಿಂದೆ ಹಲವು ರಾಜಕೀಯ ಕಾರಣಗಳಿವೆ. ಮೊದಲನೆಯದಾಗಿ, ಅವರು ಯಾವುದೇ ಒಂದು ಗುಂಪಿಗೆ ಸೀಮಿತವಾಗದ ನಾಯಕ ಎಂಬ ಚಿತ್ರಣ ಹೊಂದಿದ್ದಾರೆ. ಎರಡನೆಯದಾಗಿ, ಸಂಘಟನಾ ಅನುಭವ ಅಪಾರವಾಗಿದೆ. ಮೂರನೆಯದಾಗಿ, ಹೈಕಮಾಂಡ್‌ಗೆ ಅತ್ಯಂತ ವಿಶ್ವಾಸಾರ್ಹ ನಾಯಕರಲ್ಲಿ ಒಬ್ಬರು. ನಾಲ್ಕನೆಯದಾಗಿ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳು ಮತ್ತು ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಸಾಮರ್ಥ್ಯ ಅವರಿಗಿದೆ ಎಂದು ಕಾಂಗ್ರೆಸ್ ನಾಯಕತ್ವ ನಂಬಿದೆ.
ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಅವರ ಮುಂದಿರುವ ಸವಾಲುಗಳು ಸಣ್ಣದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಸಂಘಟನೆಯನ್ನು ಸದೃಢವಾಗಿಡುವುದು ದೊಡ್ಡ ಜವಾಬ್ದಾರಿ. ಕಾರ್ಯಕರ್ತರ ಅಸಮಾಧಾನ, ಸಚಿವ ಸ್ಥಾನಾಕಾಂಕ್ಷಿಗಳ ಒತ್ತಡ, ಪ್ರಾದೇಶಿಕ ಸಮೀಕರಣಗಳು ಮತ್ತು ಜಾತಿ ಆಧಾರಿತ ರಾಜಕೀಯ ಬೇಡಿಕೆಗಳನ್ನು ಸಮತೋಲನಗೊಳಿಸಬೇಕಾಗಿದೆ.
ಇದರ ಜೊತೆಗೆ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಕಾಂಗ್ರೆಸ್ ಸಂಘಟನೆಯನ್ನು ನಿರಂತರ ಚಟುವಟಿಕೆಯಲ್ಲಿ ಇರಿಸುವುದು ಅವರ ಪ್ರಮುಖ ಗುರಿಯಾಗಲಿದೆ.
ಹರಿಪ್ರಸಾದ್ ಅವರು ಹೆಚ್ಚು ಪ್ರಚಾರಪ್ರಿಯ ರಾಜಕಾರಣಿಯಲ್ಲ. ಸಂಘಟನೆಯೊಳಗೆ ಕೆಲಸ ಮಾಡುವ ನಾಯಕ ಎಂಬ ಹೆಗ್ಗಳಿಕೆ ಅವರಿಗೆ ಇದೆ. ಕಾರ್ಯಕರ್ತರೊಂದಿಗೆ ನೇರ ಸಂಪರ್ಕ, ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಮತ್ತು ತಾಳ್ಮೆಯ ರಾಜಕೀಯ ಅವರ ಕಾರ್ಯಶೈಲಿಯ ಮುಖ್ಯ ಲಕ್ಷಣಗಳು.
ಅವರ ರಾಜಕೀಯ ಜೀವನದಲ್ಲಿ ಅನೇಕ ಏರಿಳಿತಗಳು ಬಂದಿದ್ದರೂ ಪಕ್ಷದ ಮೇಲಿನ ನಿಷ್ಠೆ ಪ್ರಶ್ನಾತೀತವಾಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಹಲವು ಬಾರಿ ಅವರಿಗೆ ಪ್ರಮುಖ ಜವಾಬ್ದಾರಿಗಳನ್ನು ನೀಡಿದೆ.
ರಾಜಕೀಯದ ಜೊತೆಗೆ ಸರಳ ಜೀವನಶೈಲಿಗೆ ಹೆಸರುವಾಸಿಯಾಗಿರುವ ಹರಿಪ್ರಸಾದ್ ಅವರು ಉಷಾ ಅವರೊಂದಿಗೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಅವರಿಗೆ ಒಬ್ಬ ಪುತ್ರಿಯಿದ್ದಾರೆ. ಕುಟುಂಬ ಜೀವನವನ್ನು ರಾಜಕೀಯದಿಂದ ಸಾಧ್ಯವಾದಷ್ಟು ದೂರ ಇಡುವ ನಾಯಕ ಎಂಬ ಹೆಸರನ್ನು ಅವರು ಗಳಿಸಿದ್ದಾರೆ.
ಭವಿಷ್ಯದ ರಾಜಕೀಯ ಪಾತ್ರ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಹರಿಪ್ರಸಾದ್ ಅವರ ರಾಜಕೀಯ ಜೀವನದ ಮತ್ತೊಂದು ಮಹತ್ವದ ಅಧ್ಯಾಯವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರ ಮತ್ತು ಪಕ್ಷ ಸಂಘಟನೆಯ ನಡುವೆ ಸಮನ್ವಯ ಸಾಧಿಸುವಲ್ಲಿ ಅವರ ಪಾತ್ರ ನಿರ್ಣಾಯಕವಾಗಲಿದೆ.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಮಟ್ಟದ ತಂತ್ರ ರೂಪಿಸುವುದು, ಕಾರ್ಯಕರ್ತರ ಬಲವರ್ಧನೆ, ಚುನಾವಣಾ ಸಿದ್ಧತೆ ಮತ್ತು ಹೈಕಮಾಂಡ್‌ನೊಂದಿಗೆ ಸಮನ್ವಯ ಸಾಧಿಸುವ ಪ್ರಮುಖ ಹೊಣೆಗಾರಿಕೆ ಅವರ ಮೇಲಿದೆ. ಈ ಎಲ್ಲ ಸವಾಲುಗಳನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಕರ್ನಾಟಕ ಕಾಂಗ್ರೆಸ್‌ನ ಮುಂದಿನ ರಾಜಕೀಯ ಭವಿಷ್ಯ ಬಹುಮಟ್ಟಿಗೆ ಅವಲಂಬಿತವಾಗಿದೆ.
ಸುಮಾರು ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಕಾಂಗ್ರೆಸ್ ಸಂಘಟನೆಯಲ್ಲಿ ದುಡಿದಿರುವ ಬಿ.ಕೆ. ಹರಿಪ್ರಸಾದ್ ಇಂದು ಕರ್ನಾಟಕ ಕಾಂಗ್ರೆಸ್‌ನ ಅತ್ಯುನ್ನತ ಸಂಘಟನಾ ಹುದ್ದೆಯನ್ನು ಅಲಂಕರಿಸಿದ್ದಾರೆ. ವಿದ್ಯಾರ್ಥಿ ರಾಜಕಾರಣದಿಂದ ಆರಂಭವಾದ ಅವರ ಪಯಣ ರಾಜ್ಯಸಭೆ, ರಾಷ್ಟ್ರೀಯ ಸಂಘಟನೆ, ವಿಧಾನ ಪರಿಷತ್ ಮತ್ತು ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನವರೆಗೆ ತಲುಪಿದೆ.
ಅನುಭವ, ಸಂಘಟನಾ ಕೌಶಲ್ಯ, ರಾಜಕೀಯ ಪ್ರೌಢಿಮೆ ಮತ್ತು ಪಕ್ಷದ ಮೇಲಿನ ನಿಷ್ಠೆ ಎಂಬ ನಾಲ್ಕು ಅಂಶಗಳು ಅವರ ರಾಜಕೀಯ ವ್ಯಕ್ತಿತ್ವದ ಪ್ರಮುಖ ಗುರುತುಗಳಾಗಿವೆ. ಕರ್ನಾಟಕ ಕಾಂಗ್ರೆಸ್ ಹೊಸ ರಾಜಕೀಯ ಹಾದಿಯಲ್ಲಿ ಸಾಗುತ್ತಿರುವ ಈ ಸಂದರ್ಭದಲ್ಲಿ, ಬಿ.ಕೆ. ಹರಿಪ್ರಸಾದ್ ಅವರ ನಾಯಕತ್ವ ಪಕ್ಷಕ್ಕೆ ಹೊಸ ಶಕ್ತಿ ತುಂಬುತ್ತದೆಯೇ ಎಂಬುದನ್ನು ರಾಜ್ಯದ ರಾಜಕೀಯ ಕುತೂಹಲದಿಂದ ಗಮನಿಸುತ್ತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ
-
ದಿನದ ಸುದ್ದಿ2 days agoದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ
-
ಅಂತರಂಗ5 hours agoಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
-
ದಿನದ ಸುದ್ದಿ20 hours agoನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್


