ದಿನದ ಸುದ್ದಿ
‘ಈ ವಿಷಯದ ಕುರಿತು ನಾವೇಕೆ ಮಾತಾಡಬಾರದು..?’ : ರೈತ ಹೋರಾಟ ಕುರಿತು ಪಾಪ್ ಗಾಯಕಿ ರಿಹಾನ ಟ್ವೀಟ್..!
- ದಿನೇಶ್ ಕುಮಾರ್ ಎಸ್.ಸಿ.
ಇಷ್ಟೇ ಆಕೆ ಬರೆದದ್ದು. ಜತೆಗೆ ಸಿಎನ್ ಎನ್ ಸುದ್ದಿಸಂಸ್ಥೆ ಭಾರತದಲ್ಲಿ ನಡೆಯುತ್ತಿರುವ ರೈತ ಹೋರಾಟದ ಕುರಿತು ಮಾಡಿರುವ ವಿಸ್ತ್ರತ ವರದಿಯ ಲಿಂಕ್ ಶೇರ್ ಮಾಡಿದ್ದರು. ನೋಡನೋಡುತ್ತಿದ್ದಂತೆ ಅದು ಲಕ್ಷಾಂತರ ರೀಟ್ವೀಟ್ ಗಳಾದವು. #Rihanna ಮತ್ತು #FarmersProtest ಹ್ಯಾಶ್ ಟ್ಯಾಗ್ ಗಳು ಜಾಗತಿಕ ಟ್ರೆಂಡ್ ಆದವು.
ಆಕೆ ರಿಹಾನಾ. ಜಗತ್ತಿನ ಪ್ರಖ್ಯಾತ ಪಾಪ್ ಗಾಯಕಿ. ಟ್ವಿಟರ್ ಒಂದರಲ್ಲೇ ಆಕೆಯ ಅನುಯಾಯಿಗಳ ಸಂಖ್ಯೆ ಹತ್ತು ಕೋಟಿ! ಒಂಭತ್ತು ಗ್ರಾಮಿ ಅವಾರ್ಡ್, ಹದಿಮೂರು ಅಮೆರಿಕನ್ ಮ್ಯೂಸಿಕ್ ಅವಾರ್ಡ್, ಹನ್ನೆರಡು ಬಿಲ್ ಬೋರ್ಡ್ ಮ್ಯೂಸಿಕ್ ಅವಾರ್ಡ್ ಜತೆಗೆ ಆರು ಗಿನ್ನೆಸ್ ದಾಖಲೆಗಳು ಈಕೆಯ ಮಡಿಲಲ್ಲಿವೆ! ಜಗತ್ತಿನ ಯಾವುದೇ ಮಹಿಳಾ ಸಂಗೀತಗಾರ್ತಿಗಿಂತ ಹೆಚ್ಚು ಶ್ರೀಮಂತೆ ಈಕೆ. ಟೈಂ ಮ್ಯಾಗಜೀನ್ ನ ಜಗತ್ತಿನ ಅತಿಹೆಚ್ಚು ಪ್ರಭಾವಶಾಲಿ ಸೆಲೆಬ್ರಿಟಿಗಳಲ್ಲಿ ಈಕೆ ಹಲವಾರು ವರ್ಷ ಖಾಯಂ ಸ್ಥಾನ ಪಡೆದಿದ್ದಾರೆ. ಆಕೆಯ ಆಸ್ತಿಯ ಒಟ್ಟು ಮೌಲ್ಯ ಎಷ್ಟು ಗೊತ್ತೇ? 600 ಮಿಲಿಯನ್ ಡಾಲರ್!
ರಿಹಾನಾ ಕೆರೆಬಿಯನ್ ದ್ವೀಪ ಸಮೂಹದ ಬಾರ್ಬಡೋಸ್ ಎಂಬ ದೇಶದವರು. ಆಕೆಯ ಬಾಲ್ಯವೇ ಆಘಾತಕಾರಿಯಾಗಿತ್ತು. ಕುಡುಕ ಅಪ್ಪ ದಿನವೂ ಈಕೆಯ ತಾಯಿಯನ್ನು ಹೊಡೆಯುತ್ತಿದ್ದ. ರಿಹಾನಾಗೆ ವಿಪರೀತ ತಲೆನೋವು. ಅಮ್ಮ ಅಕೌಂಟೆಂಟ್, ಅಪ್ಪ ವೇರ್ ಹೌಸ್ ಒಂದರ ಸೂಪರ್ ವೈಜರ್. ಸಣ್ಣ ವಯಸ್ಸಿನಲ್ಲೇ ರಿಹಾನ ಬಟ್ಟೆ ವ್ಯಾಪಾರ ಮಾಡುತ್ತಿದ್ದಳು.
ಕುಡುಕ ಅಪ್ಪ ಕೊಕೈನ್ ಗೆ ಅಡಿಕ್ಟ್ ಆಗಿದ್ದ. ಪ್ರತಿನಿತ್ಯ ಮನೆ ರಣರಂಗವಾಗುತ್ತಿತ್ತು, ರಿಹಾನಾಳ ತಲೆನೋವೂ ನಿಯಂತ್ರಣಕ್ಕೆ ಬರುತ್ತಿರಲಿಲ್ಲ. ಕೊನೆಗೊಂದು ದಿನ ಈಕೆಗೆ ಹದಿನಾಲ್ಕು ವರ್ಷವಾಗಿದ್ದಾಗ ಅಪ್ಪ-ಅಮ್ಮ ಬೇರೆಯಾದರು. ರಿಹಾನಾಳ ತಲೆನೋವು ಸಂಪೂರ್ಣ ನಿಂತುಹೋಯಿತು!
ರಿಹಾನಾಗೆ ಸಂಗೀತದಲ್ಲಿ ಆಸಕ್ತಿಯಿತ್ತು. ನೀವು ಹೆಸರಾಂತ ಕ್ರಿಕೆಟಿಗರಾದ ಕ್ರಿಸ್ ಜೋರ್ಡಾನ್, ಕಾರ್ಲೋಸ್ ಬ್ರಥ್ ವೈಟ್ ಹೆಸರು ಕೇಳಿರುತ್ತೀರಿ. ಅವರ ಜತೆಯಲ್ಲೇ ಈಕೆ ಶಾಲೆಯಲ್ಲಿ ಓದಿದವಳು. 2003ರಲ್ಲಿ ರಿಹಾನ ತನ್ನ ಇಬ್ಬರು ಗೆಳತಿಯರೊಂದಿಗೆ ಸೇರಿ ಸಣ್ಣ ತಂಡ ಮಾಡಿಕೊಂಡು ಸಂಗೀತಾಭ್ಯಾಸ ಆರಂಭಿಸಿದಳು. ಅಮೆರಿಕದ ಮ್ಯೂಸಿಕ್ ಪ್ರೊಡ್ಯೂಸರ್ ಇವಾನ್ ರೋಜರ್ಸ್ ಎಂಬಾತನ ಕಣ್ಣಿಗೆ ಬಿತ್ತು ಈ ತಂಡ. ಆ ನಂತರ ರಿಹಾನಾಳ ಬದುಕಲ್ಲಿ ನಡೆದಿದ್ದೆಲ್ಲ ಪವಾಡ. ಆಕೆ ಮುಟ್ಟಿದ್ದೆಲ್ಲ ಚಿನ್ನ. ಸಂಗೀತ ಜಗತ್ತು ಅವಳನ್ನು ಆರಾಧಿಸಿತು. ಆಕೆ ಇಡೀ ಜಗತ್ತು ಸುತ್ತಿದಳು.
ಹತ್ತಾರು ಮ್ಯೂಸಿಕ್ ಆಲ್ಬಮ್ ಗಳು ಜನಪ್ರಿಯವಾದವು. ಹಣ, ಪ್ರಶಸ್ತಿ, ಖ್ಯಾತಿ ಎಲ್ಲವೂ ಆಕೆಯನ್ನು ಮುತ್ತಿಕೊಂಡವು. 2008ರ ಫೆಬ್ರವರಿ 22 ರಂದು ಅಂದಿನ ಬಾರ್ಬಡೋಸ್ ಸರ್ಕಾರ ರಿಹಾನಾಗೆ ಗೌರವ ನೀಡಲೆಂದು “ರಿಹಾನಾ ದಿನಾಚರಣೆ” (ರಿಹಾನಾ ಡೇ) ಆಚರಿಸಿತು. ಅದಾದ ನಂತರ ಪ್ರತಿವರ್ಷ ಫೆ.22ರಂದು ಬಾರ್ಬಡೋಸ್ ದೇಶದಲ್ಲಿ ರಿಹಾನಾ ಡೇ ಆಚರಿಸಲಾಗುತ್ತಿದೆ. ಬದುಕಿರುವಾಗಲೇ, ಅದೂ ಇಷ್ಟು ಸಣ್ಣ ವಯಸ್ಸಿಗೆ ಇಂಥ ಗೌರವ ಎಷ್ಟು ಜನರಿಗೆ ಸಿಕ್ಕೀತು ಹೇಳಿ?
ಇಂಥ ರಿಹಾನಾ ಈಗ ಭಾರತೀಯ ರೈತರ ಪರವಾಗಿ ಮಾತನಾಡಿದ್ದಾರೆ, ಅದು ಈಗ ಜಾಗತಿಕ ಸುದ್ದಿ. ರಿಹಾನಾ ಬೆನ್ನಲ್ಲೇ ಹಲವು ಜಾಗತಿಕ ಸೆಲೆಬ್ರಿಟಿಗಳು ಭಾರತದ ರೈತರ ಪ್ರತಿಭಟನೆಗಳನ್ನು ಬೆಂಬಲಿಸಿ ಹೇಳಿಕೆ ನೀಡುತ್ತಿದ್ದಾರೆ. ನಮ್ಮ ರೈತರ ಕೂಗಿಗೆ ಆನೆ ಬಲ ಬಂದಂತಾಗಿದೆ.
ಅಂದಹಾಗೆ ರಿಹಾನಾ ಈ ರೀತಿಯಲ್ಲಿ ಜಾಗತಿಕ ವಿದ್ಯಮಾನಗಳಿಗೆ ಸ್ಪಂದಿಸುವುದು ಹೊಸದೇನೂ ಅಲ್ಲ. ಸೂಡಾನ್, ನೈಜೀರಿಯಾಗಳಲ್ಲಿ ನಡೆಯುತ್ತಿರುವ ಸಾಮಾಜಿಕ ನ್ಯಾಯದ ಹೋರಾಟಗಳನ್ನು ಆಕೆ ಬೆಂಬಲಿಸಿದ್ದರು. ಮ್ಯಾನ್ಮಾರ್ ನ ಬೆಳವಣಿಗೆಗಳ ಕುರಿತೂ ಆಕೆ ಧ್ವನಿ ಎತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ನಂತರ ನಡೆದ ಐತಿಹಾಸಿಕ ಮಹಿಳಾ ರ್ಯಾಲಿಯಲ್ಲಿ ರಿಹಾನಾ ಭಾಗವಹಿಸಿದ್ದರು. ಹಲವಾರು ದೇಶಗಳ ಜನರಿಗೆ ವೀಸಾ ನಿರ್ಬಂಧಿಸಿದ ಟ್ರಂಪ್ ಸರ್ಕಾರದ ನಡೆಯನ್ನೂ ಅವರು ಹಿಂದೆ ಕಟುವಾಗಿ ಟೀಕಿಸಿದ್ದರು.
ಭಾರತದ ರೈತ ಹೋರಾಟದ ಕುರಿತು ರಿಹಾನಾ ನೀಡಿರುವ ಹೇಳಿಕೆ ಈಗ ‘ಗೇಮ್ ಚೇಂಜರ್’ ಎಂದೇ ಭಾವಿಸಲಾಗುತ್ತಿದೆ. ರಷ್ಯಾ, ಬ್ರೆಜಿಲ್ ಮತ್ತು ಭಾರತದಲ್ಲಿ ಈ ವರ್ಷದ ಬಹುದೊಡ್ಡ ಜನಹೋರಾಟಗಳು ನಡೆಯುತ್ತಿವೆ. ಆದರೆ ರಷ್ಯಾದ ಪ್ರತಿಭಟನೆಗಳಿಗೆ ಸಿಕ್ಕಷ್ಟು ಮಹತ್ವ ಭಾರತದ ರೈತರ ಪ್ರತಿಭಟನೆಗಳಿಗೆ ದೊರಕಿರಲಿಲ್ಲ. ಈಗ ರಿಹಾನಾ ಅವರ ಒಂದು ಟ್ವೀಟ್ ಎಲ್ಲವನ್ನೂ ಬದಲಿಸಿದೆ.
ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಒತ್ತಡ, ಮುಜುಗರಗಳಿಂದ ತಪ್ಪಿಸಿಕೊಳ್ಳಲು ಇರುವುದು ಏಕೈಕ ದಾರಿ, ರೈತರ ದಾರಿಯಲ್ಲಿ ಕಬ್ಬಿಣದ ಮುಳ್ಳುಗಳನ್ನು ನೆಡುವುದಲ್ಲ. ರೈತರು ಇಟ್ಟಿರುವ ಎರಡೇ ಬೇಡಿಕೆಗಳನ್ನು ಈಡೇರಿಸುವುದು. ಮೂರು ಕರಾಳ ಕೃಷಿ ಕಾನೂನುಗಳನ್ನು ಹಿಂದಕ್ಕೆ ಪಡೆಯಬೇಕು, ಎಂಎಸ್ ಪಿಗೆ ಕಾನೂನಿಗೆ ಬಲ ನೀಡಬೇಕು. ರೈತರು ಇನ್ನೇನೂ ಕೇಳುತ್ತಿಲ್ಲ.
ಅದಕ್ಕೆ ಹೊರತಾಗಿ ಸರ್ಕಾರ ಬೇರೆ ಏನನ್ನು ಮಾಡಿದರೂ ಜಗತ್ತಿನಾದ್ಯಂತ ಟೀಕೆಗಳಿಗೆ ಒಳಪಡಲಿದೆ ಮತ್ತು ಇದರ ಪರಿಣಾಮವಾಗಿ ನಮ್ಮ ದೇಶದ ಹೆಸರು, ಮೌಲ್ಯವನ್ನೂ ಕಡಿಮೆ ಮಾಡಿದ ಜವಾಬ್ದಾರಿಯನ್ನು ಮೋದಿ ಸರ್ಕಾರವೇ ಹೊರಬೇಕಾಗುತ್ತದೆ.
ರಿಹಾನ ಟ್ವೀಟ್
why aren’t we talking about this?! #FarmersProtest https://t.co/obmIlXhK9S
— Rihanna (@rihanna) February 2, 2021
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ವಿದ್ಯಾರ್ಥಿಗಳು ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು: ಹೆಚ್ ಎನ್ ಶಿವಕುಮಾರ್
ಸುದ್ದಿದಿನ,ರಾಣೇಬೆನ್ನೂರ: ಸಾಮಾಜಿಕ ಹಾಗೂ ಶೈಕ್ಷಣಿಕ ಜವಾಬ್ದಾರಿಗಳ ಅಗತ್ಯವು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.ಸದಾಕಾಲ ಜ್ಞಾನವನ್ನು ಪಡೆಯುವ ತನಕ ಹೊಂದಿ ಜ್ಞಾನಿಗಳಾಗುವ ಗುರಿ ಹೊಂದಲು ಬಾಪೂಜಿ ಮಹಾವಿದ್ಯಾಲಯ ಉಪ ಪ್ರಾಚಾರ್ಯರಾದ ಎಚ್ ಎನ್ ಶಿವಕುಮಾರ್ ನುಡಿದರು.
ಅವರು ಸ್ಥಳೀಯ ಬಿಎಜೆಎಸ್ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ಪುರಸ್ಕಾರ, ಬಿಳ್ಕೋಡಿಗೆ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ಒಕ್ಕೂಟದ, ಎನ್ ಎಸ್ ಎಸ್ ಚಟುವಟಿಕೆ, ಯುವ ರೆಡ್ ಕ್ರಾಸ್ ಘಟಕದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದ ಬಿಎ ಜೆಎಸ್ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಅಧಿಕಾರಿಗಳು ಡಾ.ಆರ್ ಎಂ ಕುಬೇರಪ್ಪ ಮಾತನಾಡಿ ವಿದ್ಯೆಯನ್ನು ವಿನಯದಿಂದ ವಿದ್ಯೆಕಲಿಯಬೇಕು ಸಂಸ್ಕಾರವಂತರಾಗ ಬೇಕು, ಸಂಸ್ಕಾರ ಹೊಂದಿರುವ ವ್ಯಕ್ತಿಗಳು ಪುರಸ್ಕಾರ ಪಡೆದರೆ ಸಂಸ್ಕಾರ ಇಲ್ಲದವರು ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗುವರು.ನಿಮ್ಮ ಬದುಕನ್ನು ನೀವೆ ಕಟ್ಟಿಕೊಳ್ಳುವ ನೆಲೆಯಲ್ಲಿ ಪ್ರಯತ್ನಿಸಬೇಕು ಎಂದು ನುಡಿದರು.
ಪ್ರಾಚಾರ್ಯರಾದ ಪ್ರಕಾಶ್ ಬಸಪ್ಪನವರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಎಚ್ ಎನ್ ಭೀಕ್ಷಾವರ್ತಿಮಠ ಹಾಗೂ ಕೆ ಕೆ ಹಾವಿನಾಳ ರವರು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.ಆರಂಭದಲ್ಲಿಪ್ರೋ.ಎಂ ಡಿ ಹೊನ್ನಮ್ಮನವರ ಸ್ವಾಗತಿಸಿದರು.ಪ್ರೋ.ಶ್ರೀಕಾಂತ ಕುಂಚೂರ, ಪ್ರಾಸ್ತಾವಿಕ ಮಾತನಾಡಿ ವಾರ್ಷಿಕ ವರದಿ ವಾಚಿಸಿದರು.
ಕೊನೆಯಲ್ಲಿ ಪ್ರೋ.ಪುಷ್ಟಾ ಕಬ್ಬಿನಾಲೆ ವಂದಿಸಿದರು.ಇದೆ ಸಮಾರಂಭದಲ್ಲಿ ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಸೇವೆಗಳಲ್ಲಿವಿದ್ಯಾರ್ಥಿಗಳ ಸಾಧನೆ ಗುರುತಿಸಿ ಪುರಸ್ಕಾರ ಮಾಡಲಾಯಿತು.ವರ್ಷದ ಮಹಾವಿದ್ಯಾಲಯ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರ ಪ್ರದಾನ ಮಾಡಲಾಯಿತು.ವಿವಿಧ ವಿಷಯದ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪಿಂಚಣಿ ದಾರರು ಸಕಾಲದಲ್ಲಿ ಜೀವಂತ ಪ್ರಮಾಣ ಪತ್ರ ಸಲ್ಲಿಸಿ
ಸುದ್ದಿದಿನ,ದಾವಣಗೆರೆ: ಪಿಂಚಣಿ ಪಡೆಯಲು ಜೀವಂತ ಸದಸ್ಯರ ಪ್ರಮಾಣ ಪತ್ರಗಳು ಕಡ್ಡಾಯವಾಗಿರುವುದರಿಂದ ಸಕಾಲಕ್ಕೆ ಸೂಕ್ತ ದಾಖಲಾತಿಗಳನ್ನು ನೀಡುವ ಮೂಲಕ ಸಹಕರಿಸಿ ಎಂದು ಉಪ ಮಹಾಲೇಖಪಾಲರಾದ ಸಚ್ಚಿನ್ ಕೃಷ್ಣ ಕೌಶಿಕ್ ತಿಳಿಸಿದರು.
ಶುಕ್ರವಾರ ಜೂನ್(19) ಬೆಂಗಳೂರಿನ ಮಹಾಲೇಖಪಾಲರು ದಾವಣಗೆರೆ ಜಿಲ್ಲಾ ಖಜಾನೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾಮಾನ್ಯ ಭವಿಷ್ಯ ನಿಧಿ ಹಾಗೂ ಲೆಕ್ಕಪತ್ರ ಸಮಸ್ಯೆಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪಿಂಚಣಿದಾರರು ತಮ್ಮ ಎಲ್ಲಾ ಬ್ಯಾಂಕ್ಗೆ 2ನೇ ವಾರ ಭೇಟಿ ನೀಡಿದರೆ ನಿಮ್ಮ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲಾಗುವುದು. ಜೀವಂತ ಸದಸ್ಯರ ದೃಢೀಕರಣ ಪತ್ರವನ್ನು ಪಡೆಯಲು ಸೈಬರ್ಕೆಫೆ ಇನ್ನಿತರ ಕೇಂದ್ರಗಳಿಗೆ ಅಲೆಯುವ ಅವಶ್ಯಕತೆ ಇಲ್ಲ. ನೀವು ಮನೆಯಲ್ಲಿ ಮೊಬೈಲ್ನಲ್ಲಿ ಅಫ್ ಲೋಡ್ ಮಾಡಿ ಪಡೆಯಬಹುದು. ಮತ್ತು ನಿಮ್ಮ ಸಮಸ್ಯೆಗಳನ್ನು ತಿಳಿಸುವಾಗ ಅರ್ಜಿಯಲ್ಲಿ ಇ-ಮೇಲ್ ವಿಳಾಸ, ಮೊಬೈಲ್ ನಂಬರ್ನ್ನು ಕಡ್ಡಾಯವಾಗಿ ನಮೂದಿಸಿದರೆ, ಇದರಿಂದ ನಿಮಗೆ ಮಾಹಿತಿ ನೀಡಲು ಅನುಕೂಲವಾಗುತ್ತದೆ ಎಂದರು.
ಪಿಂಚಣಿ ಅದಾಲತ್ ಎನ್ನುವುದು ನಿವೃತ್ತ ನೌಕರರು ಮತ್ತು ಪಿಂಚಣಿದಾರರ ದೀರ್ಘಕಾಲದ ಬಾಕಿ ಉಳಿದಿರುವ ಸಮಸ್ಯೆಗಳನ್ನು ಅಥವಾ ಕುಂದುಕೊರತೆಗಳನ್ನು ಪರಿಹರಿಸಲು ವಿಶೇಷ ವೇದಿಕೆಯಾಗಿದೆ. ಸ್ಥಳದಲ್ಲೇ ಅರ್ಜಿಗಳನ್ನು ಪರಿಶೀಲಿಸಿ, ಬ್ಯಾಂಕ್ ಅಧಿಕಾರಿಗಳ ಸಮ್ಮುಖದಲ್ಲಿ ತ್ವರಿತವಾಗಿ ಸಮಸ್ಯೆಗಳನ್ನು ಬಗೆಹರಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಮಹಾಲೇಖಪಾಲರ ಕಚೇರಿಯ ಹಿರಿಯ ಲೆಕ್ಕಪರಿಶೋಧನಾ ಅಧಿಕಾರಿ ನಾಗಸೇನಾ.ಟಿ.ವಿ, ಮತ್ತು ಪದ್ಮವತಿ, ಜಿಲ್ಲಾ ಖಜಾನೆಯ ಉಪನಿರ್ದೇಶಕರಾದ ರಮೇಶ್ ಅರೆಮಲ್ಲಾಪುರ, ಸಹಾಯಕ ಲೆಕ್ಕಪರಿಶೋಧನಾ ಆಧಿಕಾರಿ ಚಂದನ್ ಮತ್ತು ಜಾಬ್ಲೀನೋ, ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ದಾವಣಗೆರೆಯ ಪಾಪು ಗುರು ಆಯ್ಕೆ
ಸುದ್ದಿದಿನ,ದಾವಣಗೆರೆ: ಕವಿ ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ ಹಾಗೂ ಗವಿಸಿದ್ಧ ಎನ್. ಬಳ್ಳಾರಿ ಸಾಂಸ್ಕೃತಿಕ, ಕಲಾ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ, ಕೊಪ್ಪಳ ವತಿಯಿಂದ ನೀಡಲಾಗುವ **”ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ – 2026″**ಕ್ಕೆ ದಾವಣಗೆರೆಯ ಕವಿ ಹಾಗೂ ಪತ್ರಕರ್ತ ಪಾಪು ಗುರು ಅವರ “ಈ ಹೊತ್ತಿಗೆ ಇಷ್ಟು ಸಾಕು” ಕವನ ಹಸ್ತ ಪ್ರತಿ ಆಯ್ಕೆಯಾಗಿದೆ.
ಪ್ರಶಸ್ತಿಗೆ ಈ ಬಾರಿ ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 53 ಕವನ ಹಸ್ತಪ್ರತಿಗಳು ಬಂದಿದ್ದು, ಅಂತಿಮ ಆಯ್ಕೆ ಪ್ರಕ್ರಿಯೆಯಲ್ಲಿ ಪಾಪು ಗುರು ಅವರ ಕೃತಿ ಪ್ರಶಸ್ತಿಗೆ ಪಾತ್ರವಾಗಿದೆ.
ಪ್ರಶಸ್ತಿಯು ₹5,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ನವೆಂಬರ್ ತಿಂಗಳಲ್ಲಿ ಕೊಪ್ಪಳದಲ್ಲಿ ನಡೆಯಲಿರುವ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಸಾಹಿತ್ಯೋತ್ಸವದ ಸಂಚಾಲಕ ಮಹೇಶ್ ಬಳ್ಳಾರಿ ತಿಳಿಸಿದ್ದಾರೆ.
ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪಾಪು ಗುರು ಅವರ ‘ಮುಳ್ಳೆಲೆಯ ಮದ್ದು’, ‘ಮಣ್ಣೇ ಮೊದಲು’ ಕವನ ಸಂಕಲನಗಳು ಹಾಗೂ ‘ಸೂಜಿ’ ಕಾದಂಬರಿ ಪ್ರಕಟವಾಗಿವೆ. ಅಲ್ಲದೆ ‘ಕೆಂಪು ಕಾಂಡದ ಹೂ’ ಮತ್ತು ‘ಹಸಿರು ಹಾದಿಯ ಹೆಜ್ಜೆಗಳು’ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ. ಅವರ ಸೂಳೆಕೆರೆಯ ಇತಿಹಾಸದ ಹಿನ್ನೆಲೆ ಇರುವ ‘ಶಾಂತದೇವಿ’ ಕಾದಂಬರಿ ಮುದ್ರಣ ಹಂತದಲ್ಲಿದೆ.
ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸೃಜನಶೀಲ ಬರವಣಿಗೆಯ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ಪಾಪು ಗುರು ಅವರಿಗೆ ದೊರೆತಿರುವ ಈ ಪ್ರಶಸ್ತಿ ಸಾಹಿತ್ಯ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ. ಇವರಿಗೆ ಜಿಲ್ಲೆಯ ಅಭಿಮಾನಿಗಳು, ಪತ್ರಕರ್ತರು ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಸಂತೆಬೆನ್ನೂರು ಫೈಜ್ನಟ್ರಾಜ್ ಹಾಗೂ ಹೆಚ್ ಬಿ. ಇಂದ್ರಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


