Connect with us

ದಿನದ ಸುದ್ದಿ

ಸಿಎಂ ಮಗನ ಭ್ರಷ್ಟಾಚಾರದ ವೃತ್ತಾಂತ : ಪವರ್ ಟಿವಿ ಬಂದ್ ಹಿಂದಿನ ಒಳ ರಾಜಕೀಯ

Published

on

  • ದಿನೇಶ್ ಅಮೀನ್ ಮಟ್ಟು

ವರ್ ಟಿವಿ ಚಾನೆಲ್ ಗೆ ಸಂಬಂಧಿಸಿದ ಬೆಳವಣಿಗೆಗಳಲ್ಲಿ ಎರಡು ಭಾಗಗಳಿವೆ. ಮೊದಲನೆಯದು ಚಾನೆಲ್ ವರದಿ ಮಾಡಿರುವ ಭ್ರಷ್ಟಾಚಾರದ ಹಗರಣ, ಎರಡನೆಯದು ಟಿವಿ ಚಾನೆಲ್ ಪ್ರಸಾರವಾಗದಂತೆ ತಡೆಹಿಡಿದಿರುವ ಕ್ರಮ.

ಮುಖ್ಯಮಂತ್ರಿಯವರ ಕುಟುಂಬದವರು ಗುತ್ತಿಗೆದಾರರಿಂದ ಲಂಚ ವಸೂಲಿ ಮಾಡಿದ್ದಾರೆ ಎನ್ನುವುದು ಆರೋಪ. ಈ ಪ್ರಕರಣದಲ್ಲಿ ಮೂವರು ಪಾತ್ರಧಾರಿಗಳಿದ್ದಾರೆ. ಲಂಚ ಕೊಟ್ಟಿರುವ ಗುತ್ತಿಗೆದಾರ, ಲಂಚ ಪಡೆದಿರುವ ರಾಜಕಾರಣಿ ಮತ್ತು ವರದಿ ಮಾಡಿದ ಪತ್ರಕರ್ತ. ಅಧಿಕಾರಿಯೊಬ್ಬರು ಇದರಲ್ಲಿ ಪೋಷಕ ಪಾತ್ರದಲ್ಲಿದ್ದಾರೆ.

ಚಾನೆಲ್ ಭ್ರಷ್ಟಾಚಾರದ ಆರೋಪ ಮಾಡಿರುವುದು ಮುಖ್ಯಮಂತ್ರಿಯ ಮಗನ ವಿರುದ್ಧ. ಆದ್ದರಿಂದ ಮೇಲ್ನೋಟಕ್ಕೆ ಚಾನೆಲ್ ವರದಿ ಗುತ್ತಿಗೆದಾರನ ಪರ ಮತ್ತು ರಾಜಕಾರಣಿಯ ವಿರುದ್ಧ ಇದ್ದಂತೆ ಕಾಣಿಸುತ್ತಿತ್ತು. ವಿಚಿತ್ರವೆಂದರೆ ಪೊಲೀಸರಿಗೆ ದೂರು ನೀಡಿರುವುದು ರಾಜಕಾರಣಿ ಅಲ್ಲ, ಗುತ್ತಿಗೆದಾರ.

ಪತ್ರಿಕೆಯ ಮಾಲೀಕರು ತಿರುಚಿದ ದಾಖಲೆಗಳನ್ನು ತೋರಿಸಿ ಹಣವಸೂಲಿಗೆ ಪ್ರಯತ್ನಿಸಿದ್ದಾರೆ ಎನ್ನುವುದು ಗುತ್ತಿಗೆದಾರರ ದೂರು. ಆ ದೂರಿನನ್ವಯ ಸಿಸಿಬಿ ಪೊಲೀಸರು ಟಿವಿ ಚಾನೆಲ್ ಮಾಲೀಕರ ಮನೆಗೆ ವಿಚಾರಣೆಗೆ ಹೋಗಿದ್ದಾರೆ, ಚಾನೆಲ್ ನ ಕಚೇರಿಗೆ ಬಂದು ಅಲ್ಲಿನ ಕಂಪ್ಯೂಟರ್ ಗಳನ್ನು ವಶಕ್ಕೆ ತೆಗೆದುಕೊಂಡು ಜಾಲಾಡಿದ್ದಾರೆ.

ಕಾನೂನಿನ ದೃಷ್ಟಿಯಿಂದ ಈ ಹಂತದ ವರೆಗೆ ನಡೆದಿರುವುದು ವಿಚಾರಣೆಯ ಸಹಜ ಪ್ರಕ್ರಿಯೆ. ತಿರುಚಿದ ದಾಖಲೆಗಳ ಮೂಲ ಹುಡುಕಲು ಆರೋಪಿಗಳ ಕಂಪ್ಯೂಟರ್, ಮೊಬೈಲ್ ಗಳನ್ನು ವಶಕ್ಕೆ ಪಡೆಯುವುದು ಪೊಲೀಸ್ ವಿಚಾರಣೆಯ ಭಾಗ.ಪತ್ರಿಕೆ ಮತ್ತು ಚಾನೆಲ್ ಗಳ ಮಾಲೀಕರು ಇಲ್ಲವೇ ವರದಿಗಾರರ ವಿರುದ್ಧ ಆರೋಪ ಎದುರಾದಾಗ ಈ ರೀತಿಯ ವಿಚಾರಣೆ ಕರ್ನಾಟಕದಲ್ಲಿಯೇ ಅನೇಕ ಪ್ರಕರಣಗಳಲ್ಲಿ ನಡೆದಿವೆ.

ಎಡವಟ್ಟಾಗಿರುವುದು ಪ್ರಕರಣದ ಎರಡನೇ ಭಾಗದಲ್ಲಿ. ವಿಚಾರಣೆಗೆಂದು ಕಚೇರಿಗೆ ಹೋಗಿದ್ದ ಪೊಲೀಸರು ಒಂದು ಅತಿರೇಕದ ಹೆಜ್ಜೆ ಮುಂದಿಟ್ಟಿದ್ದಾರೆ. ಕಂಪ್ಯೂಟರ್ ಗಳನ್ನು ವಶಕ್ಕೆ ತೆಗೆದುಕೊಳ್ಳುವ ಜೊತೆಯಲ್ಲಿ ಚಾನೆಲ್ ಪ್ರಸಾರಕ್ಕೆ ಅತ್ಯಗತ್ಯವಾಗಿರುವ ಸರ್ವರ್ ಗಳನ್ನು ವಶಕ್ಕೆ ಪಡೆದಿದ್ದಾರೆ, ಅಷ್ಟು ಮಾತ್ರವಲ್ಲ ಫೇಸ್ ಬುಕ್, ಯುಟ್ಯೂಬ್ ಖಾತೆಗಳ ಪಾಸ್ ವರ್ಡ್ ಗಳನ್ನು ಬದಲಾಯಿಸಿದ್ದಾರೆ. ಚಾನೆಲ್ ಕಾರ್ಯನಿರ್ವಹಣೆಯನ್ನು ಸಂಪೂರ್ಣ ಸ್ಥಗಿತಗೊಳಿಸುವ ದುರುದ್ದೇಶದಿಂದಲೇ ಇದನ್ನು ಮಾಡಿದ್ದಾರೆ.

ಇಂತಹ ಕೆಲಸವನ್ನು ಪೊಲೀಸರು ತಾವಾಗಿಯೇ ಮಾಡುವುದಿಲ್ಲ. ಮೇಲಿನಿಂದ ಆದೇಶ ಬಂದರಷ್ಟೇ ಮಾಡುತ್ತಾರೆ. ಈ ಪ್ರಕರಣದಲ್ಲಿ ಆದೇಶ ಯಾರು ಕೊಟ್ಟಿರಬಹುದೆಂಬ ಬಗ್ಗೆ ಯಾರಿಗೂ ಸಂಶಯ ಇಲ್ಲ. ಅಧಿಕಾರ ಮತ್ತು ದುಡ್ಡಿನ ಮದವೇರಿದ ರಾಜಕಾರಣಿಗಳು ಸಾಮಾನ್ಯವಾಗಿ ಈ ರೀತಿ ತಮ್ಮ ಗೋರಿ ತಾವೇ ತೋಡಿಕೊಳ್ಳುತ್ತಾರೆ.

ಬಿ.ಎಸ್.ಯಡಿಯೂರಪ್ಪನವರ ಬಗ್ಗೆ ನನಗೆ ನಿಜಕ್ಕೂ ಕನಿಕರ ಇದೆ. ಅವರು ಈ ರೀತಿ ಸೇಡಿಗೆ ಇಳಿಯುವವರಲ್ಲ. ಅದರಲ್ಲೂ ಪತ್ರಕರ್ತರನ್ನು ಎದುರುಹಾಕಿಕೊಳ್ಳಲು ಹೋಗುವವರಲ್ಲ.( ಅವರು ಹಿಂದಿನ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಅವರ ವಿರುದ್ಧ ನಾನು ಹಲವಾರು ಅಂಕಣಗಳನ್ನು ಬರೆದಿದ್ದೆ. ಅವರೆಂದೂ ನೇರವಾಗಿ ಇಲ್ಲವೇ ಸಂಪಾದಕರ ಮೂಲಕ ನನ್ನ ಮೇಲೆ ಒತ್ತಡ ಹಾಕಿಲ್ಲ. ಅಂತಹ ಅಂಕಣಗಳು ಪ್ರಕಟವಾದ ದಿನ ಕೆಲವೊಮ್ಮೆ ಬೆಳಿಗ್ಗೆ ನನ್ನ ಹಿರಿಯ ಸಹದ್ಯೋಗಿಯಾಗಿದ್ದ ಅವರ ಮಾಧ್ಯಮ ಸಲಹೆಗಾರರು ನನಗೆ ಪೋನ್ ಮಾಡಿ ‘ದಿನೇಶ್ ಓದಿದೆ,ಚೆನ್ನಾಗಿದೆ’ ಎಂದಷ್ಟೇ ಹೇಳಿ ಪೋನ್ ಇಟ್ಟುಬಿಡುತ್ತಿದ್ದರು)

ಕಳೆದ ಬಾರಿ ಯಡಿಯೂರಪ್ಪನವರು ಜೈಲಿಗೆ ಹೋಗಿರುವುದು ಕೂಡಾ ಪೂರ್ಣವಾಗಿ ಅವರ ತಪ್ಪಿನಿಂದಲ್ಲ. ಈ ಪ್ರಕರಣದಲ್ಲಿಯೂ ಪವರ್ ಟಿವಿ ಮೇಲೆ ಅವರ ಮಗನ ಒತ್ತಡದಿಂದ ದಾಳಿಯಾಗಿದ್ದರೆ ಆ ಮಗನ ಬಗ್ಗೆ ನನಗೆ ಇನ್ನೂ ಹೆಚ್ಚು ಕನಿಕರ ಇದೆ. ಇದು ರಾಜಕೀಯದಲ್ಲಿ ಬೆಳೆಯಲು ಬಯಸುವ ಮಕ್ಕಳ ಲಕ್ಷಣ ಅಲ್ಲ. ಈ ದಾರಿಯಲ್ಲಿ ಅವರು ಬಹಳ ದೂರ ಖಂಡಿತ ಹೋಗಲಾರರು.

ಇವೆಲ್ಲದರ ನಡುವೆ ಈ ಪ್ರಕರಣದಲ್ಲಿ ನನಗೆ ಸುಲಭದಲ್ಲಿ ಅರ್ಥವಾಗದ ಕೆಲವು ಸಿಕ್ಕುಗಳಿವೆ. ಮೊದಲನೆಯದಾಗಿ, ಮಾಧ್ಯಮ ಸಂಸ್ಥೆಗಳ ಮಾಲೀಕರೇ ಸಂಪಾದಕರಾಗಿರುವ ಅನೇಕ ಉದಾಹರಣೆಗಳು ನಮ್ಮ ನಡುವೆ ಇರುವುದರಿಂದ ತಪ್ಪೆಂದು ಹೇಳಲಾಗುವುದಿಲ್ಲ. ಆದರೆ ಪವರ್ ಟಿವಿ ಚಾನೆಲ್ ನ ಮಾಲೀಕರು ತಮ್ಮನ್ನು ಸಂಪಾದಕರೆಂದು ಕರೆಸಿಕೊಂಡಿಲ್ಲ. ಚಾನೆಲ್ ಗೆ ಬೇರೆ ಸಂಪಾದಕರಿದ್ದಾರೆ.

ಹೀಗಿರುವಾಗ ಇಂತಹದ್ದೊಂದು ಮುಖ್ಯವಾದ ವರದಿಯನ್ನು ಅವರೇ ಪರದೆಯ ಮುಂದೆ ಬಂದು ಹೋರಾಟಗಾರನ ರೀತಿ ಪ್ರಸ್ತುತ ಪಡಿಸಿ ಅಬ್ಬರಿಸುತ್ತಿದ್ದುದು ನನಗೆ ವಿಚಿತ್ರವಾಗಿ ಕಂಡಿತ್ತು. ಯಾಕೆಂದರೆ ಮಾಲೀಕರಿಗೆ ಸಾಮಾನ್ಯವಾಗಿ ಬೇರೆ ವ್ಯವಹಾರಿಕವಾದ ಹಿತಾಸಕ್ತಿಗಳಿರುತ್ತವೆ. ಈ ಕಾರಣದಿಂದಾಗಿ ಚಾನೆಲ್ ಮಾಡಿರುವ ವರದಿ ಸತ್ಯನಿಷ್ಠವಾಗಿದ್ದರೂ ವೀಕ್ಷಕರಿಗೆ ಸಹಜವಾಗಿ ಕೆಲವು ಅನುಮಾನ ಮೂಡುತ್ತದೆ.

ಎರಡನೆಯದಾಗಿ, ತಮ್ಮ ಕಚೇರಿಯಲ್ಲಿ ಗಾಂಧಿ,ಅಂಬೇಡ್ಕರ್ ಜೊತೆ ಹೆಡಗೆವಾರ್ ಅವರ ಪೋಟೊಗಳನ್ನೂ ನೇತುಹಾಕಿರುವ ಪವರ್ ಟಿವಿ ಚಾನೆಲ್, ಸೆಕ್ಯುಲರ್, ಲಿಬರಲ್ ಚಾನೆಲ್ ಆಗಿರಲಿಲ್ಲ. ಕನ್ನಡದ ಉಳಿದ ಚಾನೆಲ್ ಗಿಂತ ಬಹಳ ಭಿನ್ನವಾಗಿ ಏನೂ ಇರಲಿಲ್ಲ. ಇತ್ತೀಚಿನ ಡಿ.ಜೆ.ಹಳ್ಳಿ, ಪಾದರಾಯನಪುರಕ್ಕೆ ಸಂಬಂಧಿಸಿದ ವರದಿಗಳನ್ನೇ ಗಮನಿಸಿರಬಹುದು.

ಇಂತಹ ಟಿವಿ ಚಾನೆಲ್ ಇದ್ದಕ್ಕಿದ್ದ ಹಾಗೆ ಮುಖ್ಯಮಂತ್ರಿ ಕುಟುಂಬದ ವಿರುದ್ಧ ತಿರುಗಿ ಬೀಳಲು ಏನು ಕಾರಣ? ಅದೂ ಯಡಿಯೂರಪ್ಪನವರ ಬದಲಾವಣೆಗಾಗಿ ಪಕ್ಷದೊಳಗಿಂದಲೇ ಪ್ರಯತ್ನಗಳು ನಡೆಯುತ್ತಿರುವ ಮತ್ತು ಈ ಬದಲಾವಣೆಯ ಸೂತ್ರವನ್ನು ದೆಹಲಿಯಲ್ಲಿ ಕೂತಿರುವ ಕರ್ನಾಟಕದ ನಾಯಕರೊಬ್ಬರು ಹಿಡ್ಕೊಂಡಿದ್ದಾರೆ ಎಂಬ ವರದಿಗಳು ಬರುತ್ತಿರುವ ಸಂದರ್ಭದಲ್ಲಿ.

ಮೂರನೆಯದಾಗಿ, ಪತ್ರಕರ್ತ/ರಾಜಕಾರಣಿ/ಶಿಕ್ಷಣ ತಜ್ಞರೆನಿಸಿಕೊಂಡಿರುವ ರವೀಂದ್ರ ರೇಷ್ಮೆಯವರ ಪಾತ್ರ. ಹೆಚ್ಚುಕಡಿಮೆ ಕಳೆದೊಂದು ದಶಕದಿಂದ ಬಿಜೆಪಿಯ ಜೊತೆ ಸೈದ್ಧಾಂತಿಕ ಸಹಮತವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಾ ಬಂದಿರುವವರು. ಬಿಎಸ್ ವೈ ಅವರು ಈ ಬಾರಿ ಮುಖ್ಯಮಂತ್ರಿಯಾದಾಗ ಅವರ ಸಂಭವನೀಯ ಮಾಧ್ಯಮ ಸಲಹೆಗಾರರ ಪಟ್ಟಿಯಲ್ಲಿ ಇವರ ಹೆಸರು ಕೂಡಾ ಕೇಳಿಬರುತ್ತಿತ್ತು.

ಹೀಗಿದ್ದವರು ಇದ್ದಕ್ಕಿದ್ದ ಹಾಗೆ ಬಿಎಸ್ ವೈ ಅವರ ವಿರುದ್ದದ ಭ್ರಷ್ಟಾಚಾರದ ಹೋರಾಟದಲ್ಲಿ ಕಣಕ್ಕಿಳಿಯಲು ಏನು ಕಾರಣ? ಬಿ.ಎಸ್.ಯಡಿಯೂರಪ್ಪನವರಾಗಲಿ, ಅವರ ಕುಟುಂಬವಾಗಲಿ ಕಳೆದ ಒಂದು ತಿಂಗಳಿನಿಂದ ಭ್ರಷ್ಟರಾದವರಲ್ಲವಲ್ಲ.

ಶ್ರೀರಾಮುಲು ಅವರ ಭ್ರಷ್ಟತೆಯನ್ನೇ ಸಹಿಸಿಕೊಂಡು ಅವರ ಜೊತೆ ಸೇರಿಕೊಂಡಿದ್ದ ರೇಷ್ಮೆ ಅವರು ದಿಡೀರನೇ ಭ್ರಷ್ಟಾಚಾರದ ವಿರುದ್ದದ ಉಗ್ರಹೋರಾಟಕ್ಕೆ ಇಳಿದಿರುವುದು ನನಗಂತು ಅಚ್ಚರಿ ಮೂಡಿಸಿದೆ. ಪ್ರಾಮಾಣಿಕವಾಗಿ ಇಂತಹದ್ದೊಂದು ಪರಿವರ್ತನೆ ಅವರಲ್ಲಿ ಆಗಿದ್ದರೆ ಅದನ್ನು ಸ್ವಾಗತಿಸುವವರಲ್ಲಿ ನಾನು ಮೊದಲಿಗ. ಅದನ್ನು ಮನವರಿಕೆ ಮಾಡಿಕೊಡುವ ಜವಾಬ್ದಾರಿ ಅವರಲ್ಲಿದೆ.

ಮಾಧ್ಯಮ ಸಂಸ್ಥೆಗಳ ಅದರಲ್ಲೂ ಮುಖ್ಯವಾಗಿ ಕನ್ನಡ ನ್ಯೂಸ್ ಚಾನೆಲ್ ಗಳ ಮಾಲೀಕರ ಬಗ್ಗೆ ನಾನೇನು ಮಾತನಾಡುವುದಿಲ್ಲ. ದುಡ್ಡು ಹಾಕಿದವರು ಯಾರೋ? ಮಾಲೀಕರೆಂದು ಕಾಣಿಸಿಕೊಳ್ಳುವವರು ಯಾರೋ? ಅವರಲ್ಲಿ ನಷ್ಟದ ಉದ್ಯಮವಾದ ಟಿವಿ ಚಾನೆಲ್ ಗಳಲ್ಲಿ ಬಂಡವಾಳ ಹಾಕುವ ಸಾರ್ವಜನಿಕ ಹಿತಾಸಕ್ತಿ ಯಾಕೆ ಉಕ್ಕಿ ಹರಿಯುತ್ತೋ ಒಂದೂ ನನಗೆ ಗೊತ್ತಾಗುವುದಿಲ್ಲ.

ಇವೆಲ್ಲ ಏನೇ ಇದ್ದರೂ ಪತ್ರಕರ್ತನನ್ನು ಸಾಯಿಸುವುದಷ್ಟೇ ಇಲ್ಲವೇ ಅದಕ್ಕಿಂತಲೂ ಹೀನ ಕೆಲಸ ಮಾಧ್ಯಮ ಸಂಸ್ಥೆಯನ್ನು ಸಾಯಿಸುವುದು. ಈ ದೃಷ್ಟಿಯಿಂದ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ ಕೊಲೆಗಡುಕ ಸರ್ಕಾರವೆಂದೇ ಹೇಳಬೇಕಾಗುತ್ತದೆ. ವ್ಯಕ್ತಿಯನ್ನು ಕೊಂದ ಪಾಪಕ್ಕೆ ಪರಿಹಾರ ಇಲ್ಲ, ಆದರೆ ಸಾಯಿಸಲು ಹೊರಟ ಸಂಸ್ಥೆಯನ್ನು ಬದುಕಿಸಲು ಸಾಧ್ಯ ಇದೆ.

ಈಗಲೂ ಕಾಲ ಮಿಂಚಿಲ್ಲ. ಬಿ.ಎಸ್.ಯಡಿಯೂರಪ್ಪನವರು ತಮ್ಮ ತಪ್ಪನ್ನು ಅರಿತುಕೊಂಡು ಚಾನೆಲ್ ಪ್ರಸಾರಕ್ಕೆ ಅವಕಾಶ ಮಾಡಿಕೊಡಬೇಕು ಅಳಿದುಳಿದ ಮಾನವನ್ನು ಉಳಿಸಿಕೊಳ್ಳಬೇಕು. ರಾಜ್ಯ ಸರ್ಕಾರದ ಸರ್ವಾಧಿಕಾರಿ ಧೋರಣೆಯಿಂದಾಗಿ ನೊಂದಿರುವ ,ಕಷ್ಟದಲ್ಲಿರುವ ಪವರ್ ಟಿವಿ ಚಾನೆಲ್ ನ ಪತ್ರಕರ್ತರೆಲ್ಲರ ಜೊತೆ ನಾನಿದ್ದೇನೆ. ಅಂದಹಾಗೆ ಈಗಿನ ಮುಖ್ಯಮಂತ್ರಿಗಳಿಗೊಬ್ಬರು ಮಾಧ್ಯಮ ಸಲಹೆಗಾರರಿದ್ದಾರಲ್ಲಾ, ಅವರೇನು ಮಾಡುತ್ತಿದ್ದಾರೆ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ವಿಶ್ವ ಮೊಸಳೆಗಳ ದಿನ ; ಮೊಸಳೆ ಬಗ್ಗೆ ನಿಮಗಿಷ್ಟು ತಿಳಿದಿರಲಿ

Published

on

  • ಸಂಜಯ್ ಹೊಯ್ಸಳ

ಪ್ರತಿ ವರ್ಷದ ಜೂನ್ 17 ನ್ನು ವಿಶ್ವ ಮೊಸಳೆ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವದಲ್ಲಿ ಪ್ರಮುಖವಾಗಿ 24 ಜಾತಿಯ ಮೊಸಳೆಗಳಿದ್ದು, ಭಾರತದಲ್ಲಿ ಸದ್ಯಕ್ಕೆ 3 ಪ್ರಬೇಧದ ಮೊಸಳೆ ಸಂತತಿಗಳಿವೆ. ಅವುಗಳೆಂದರೆ..

ಉಪ್ಪು ನೀರಿನ ಮೊಸಳೆ (Saltwater crocodile) 
ಮಗ್ಗರ್/ಮಾರ್ಷ್ (Mugger)
ಘಾರಿಯಲ್ (Gharial)

ಇವುಗಳಲ್ಲಿ ಕರ್ನಾಟಕದಲ್ಲಿನ ನದಿಗಳಲ್ಲಿ, ಕೆಲವು ದೊಡ್ಡ ಕೆರೆಗಳಲ್ಲಿ ಕಂಡುಬರುವ ಮೊಸಳೆಗಳು ಮಗ್ಗರ್/ಮಾರ್ಷ್ ಮೊಸಳೆಗಳಾಗಿವೆ. ಕರ್ನಾಟಕದಲ್ಲಿ ಮೊಸಳೆಗಳು ಹೆಚ್ಚಾಗಿ ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿ ಪಾತ್ರದಲ್ಲಿ ಕಂಡುಬರುತ್ತವೆ. ಇತ್ತೀಚೆಗೆ ಮೊಸಳೆಯ ದವಣೆಗೆ ಸಿಲುಕಿ‌ ಕೆಲವು ಸಾವು ನೋವಿನ ಪ್ರಕರಣಗಳು ಆ ಭಾಗದಲ್ಲಿ ವರದಿಯಾಗಿವೆ‌.

ಇನ್ನು ಉತ್ತರ ಕರ್ನಾಟಕದ ಭಾಗದ ಕೆಲವು ಪ್ರಮುಖ ನದಿಗಳ ಪಾತ್ರದಲ್ಲೂ ಮೊಸಳೆಗಳು ಆಗಾಗ್ಗೆ ಕಂಡುಬರುತ್ತವೆ. ನಾನು ನೋಡಿದಂತೆ ಉತ್ತರ ಕರ್ನಾಟಕ ಭಾಗಕ್ಕೆ ಹೋಲಿಸಿದರೆ ದಕ್ಷಿಣ ಕರ್ನಾಟಕ ಭಾಗದಲ್ಲಿ ಮೊಸಳೆಗಳ ದಾಳಿ ಪ್ರಕರಣಗಳು ತುಂಬಾ ಕಡಿಮೆ ಎನ್ನಬಹುದು. ಈ‌ ಭಾಗದ ನದಿಗಳಲ್ಲಿ ಮೊಸಳೆಗಳ ಸಂಖ್ಯೆ ಕಡಿಮೆ ಇರುವುದು ಇದಕ್ಕೆ ಕಾರ ಇರಬಹುದು.

ಕಾವೇರಿ ನದಿಯಲ್ಲಿ ಅತಿಹೆಚ್ಚು ಮೊಸಳೆಗಳು‌ ಕಂಡು ಬರುವುದು ಮಂಡ್ಯದ ಶ್ರೀರಂಗಪಟ್ಟಣ ತಾಲ್ಲೂಕಿನ ವಿಶ್ವವಿಖ್ಯಾತ ಪಕ್ಷಿ ಧಾಮವಾದ ರಂಗನತಿಟ್ಟು ಪಕ್ಷಿಧಾಮದಲ್ಲಿ. ಹಿಂದೆ ಪಂಚತಂತ್ರದಲ್ಲಿ ಮೊಸಳೆ ಮತ್ತು ಕೋತಿ‌ಕತೆಯಲ್ಲಿ ಮೊಸಳೆಯ ಹೆಂಡತಿಗೆ ಕೋತಿ‌ ನೇರಳೆ ಹಣ್ಣುಗಳನ್ನು ಹೊತ್ತೊಯ್ಯುವ ಕತೆಯಲ್ಲಿ ಗಂಡ ಮತ್ತು‌ ಹೆಂಡತಿ‌ ಮೊಸಳೆಯನ್ನು ಕಲ್ಪಿಸಿಕೊಂಡು ಮಾತ್ರ ನಾನು ಮೊದಲು ಅವುಗಳ ಸಹಜ ಆವಾಸಸ್ಥಾನದಲ್ಲಿ ಮೊಸಳೆಯನ್ನು ನೋಡಿದ್ದು ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಹರಿಯುವ ಲಕ್ಷ್ಮಣತೀರ್ಥ ನದಿಯಲ್ಲಿ. ನಂತರ ಬಂಡೀಪುರ ದಟ್ಟಡವಿಯಲ್ಲಿ ಹರಿಯುವ ಮೂಲೆಹೊಳೆ/ ನುಗು ನದಿಯಲ್ಲಿ…‌ ನಂತರದ ದಿನಗಳಲ್ಲಿ ಕಬಿನಿ, ಪಾಲರ್ ಸೇರಿ ಬಹಳಷ್ಟು ಕಡೆ ಬಹಳಷ್ಟು ಮೊಸಳೆಗಳನ್ನು ನೋಡುವ ಅವಕಾಶ ಸಿಕ್ಕಿತು.

ಘಾರಿಯಲ್ ಗಳು ತುಂಬಾ ಅಪರೂಪದ ಮೊಸಳೆ ಸಂತತಿಗಳಾಗಿದ್ದು, ಸದ್ಯ ಉತ್ತರ ಭಾರತದ ಕೆಲವು ನದಿಗಳು ಹಾಗೂ ನೇಪಾಳದಲ್ಲಿ ಮಾತ್ರ ಇವು ಕಾಣಸಿಗುತ್ತಿವೆ. ಇವುಳನ್ನು IUCN red list ಗೆ ಸೇರಿಸಿದ್ದು, ಇವುಗಳ ಸಂರಕ್ಷಣೆಗೆ ವಿಶೇಷ ಗಮನ ನೀಡಲಾಗಿದೆ.

ನಮಗೆಲ್ಲಾ ಗೊತ್ತಿರುವಂತೆ ಜೀವವೈವಿಧ್ಯತೆಯ ರಕ್ಷಣೆಯಲ್ಲಿ ಎಲ್ಲಾ ಜೀವಿಗಳ‌ ಇರುವಿಕೆ ಬಹಳ ಮುಖ್ಯ. ಜಲಚರಗಳಲ್ಲಿ ಅಗ್ರ ಪರಪಕ್ಷಕಗಳಲ್ಲಿ ಒಂದೆನಿಸಿದ ಮೊಸಳೆ ಜಲಚರ ಜೀವಿಗಳ ಸಮತೋಲನ ಸಾಧಿಸಿ ಅಲ್ಲಿನ ಜೀವವೈವಿಧ್ಯ ಕಾಪಾಡುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ನಾವು ಮೊಸಳೆಗಳನ್ನು ಕೂಡ ಇತರ ಪ್ರಾಣಿಗಳಂತೆ ರಕ್ಷಿಸಬೇಕು.

ಮುಖ್ಯವಾಗಿ ಅವುಗಳ ಆವಾಸಸ್ಥಾನವಾದ ನದಿ, ಸರೋವರದಂತಹ ಜಲಮೂಲಗಳನ್ನು ಸಂರಕ್ಷಿಸಬೇಕು. ಅಲ್ಲಿ ಅಕ್ರಮ ಮರಳುಗಾರಿಗೆ ತಡೆದು, ಜಲಮಾಲಿನ್ಯ ನಿಯಂತ್ರಣ ಮಾಡಬೇಕು. ಹಾಗೆ ಪ್ಲಾಸ್ಟಿಕ್ ತ್ಯಾಜ್ಯಗಳು ನದಿ, ಸರೋವರಗಳನ್ನು ಸೇರದಂತೆ ಕ್ರಮವಹಿಸಬೇಕು. ಹಾಗೆಯೇ ಎಲ್ಲಾದರೂ ಮೊಸಳೆಗಳು ಕಂಡುಬಂದರೆ ಗಾಬರಿಯಾಗದೆ ತಕ್ಷಣ ಅರಣ್ಯ ಇಲಾಖೆಯ ಗಮನಕ್ಕೆ ತರಬೇಕು. (ಬರಹ:ಸಂಜಯ್ ಹೊಯ್ಸಳ,ಫೇಸ್ ಬುಕ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಜುಲೈ 1 ರಿಂದ ಹೊಸ ಕ್ರಿಮಿನಲ್ ಕಾನೂನು ಜಾರಿ

Published

on

ಸುದ್ದಿದಿನಡೆಸ್ಕ್:ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮರು ಪರಿಶೀಲಿಸುತ್ತಿಲ್ಲ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಸ್ಪಷ್ಟಪಡಿಸಿದ್ದಾರೆ.

ಭಾರತೀಯ ದಂಡ ಸಂಹಿತೆ 1860, ಭಾರತೀಯ ಸಾಕ್ಷ್ಯ ಕಾಯ್ದೆ 1872 ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆ 1973 ಅನ್ನು ಬದಲಿಸುವ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ಅವರು ಹೇಳಿದ್ದಾರೆ. ಭಾರತೀಯ ನ್ಯಾಯ್ ಸಂಹಿತಾ, ಭಾರತೀಯ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ ಎಂಬ ಹೊಸ ಕ್ರಿಮಿನಲ್ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ತಿಳಿಸಿದ್ದಾರೆ.

“ಐಪಿಸಿ, ಸಿಆರ್‌ಪಿಸಿ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳು ಬದಲಾಗುತ್ತಿವೆ. ಸೂಕ್ತ ಸಮಾಲೋಚನೆ ಪ್ರಕ್ರಿಯೆ ಅನುಸರಣೆ ಹಾಗೂ ಕಾನೂನು ಆಯೋಗದ ವರದಿಗಳನ್ನು ಗಮನದಲ್ಲಿಟ್ಟುಕೊಂಡು ಈ ಮೂರು ಕಾನೂನುಗಳನ್ನು ಬದಲಾಯಿಸಲಾಗಿದೆ” ಎಂದು ಮೇಘವಾಲ್ ತಿಳಿಸಿದರು.”

ಈ ಮೂರು ಕಾನೂನುಗಳನ್ನು ಜುಲೈ 1 ರಿಂದ ಭಾರತೀಯ ನ್ಯಾಯ್ ಸಂಹಿತಾ, ಭಾರತೀಯ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ ಎಂಬ ಹೆಸರಿನಲ್ಲಿ ಜಾರಿಗೆ ತರಲಾಗುವುದು. ಮೂರು ಹೊಸ ಕಾನೂನುಗಳ ತರಬೇತಿ ಸೌಲಭ್ಯಗಳನ್ನು ಎಲ್ಲಾ ರಾಜ್ಯಗಳಿಗೂ ಒದಗಿಸಲಾಗುತ್ತಿದೆ” ಎಂದು ಮೇಘವಾಲ್ ವಿವರಿಸಿದ್ದಾರೆ.”

ನಮ್ಮ ನ್ಯಾಯಾಂಗ ಅಕಾಡೆಮಿಗಳು, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ಸಹ ಈ ಬಗ್ಗೆ ತರಬೇತಿ ನೀಡುತ್ತಿವೆ. ಎಲ್ಲವೂ ಜೊತೆಜೊತೆಯಾಗಿ ಸಾಗುತ್ತಿದೆ ಮತ್ತು ಜುಲೈ 1 ರಿಂದ, ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ನಿರ್ಣಾಯಕವಾದ ಈ ಎಲ್ಲಾ ಮೂರು ಕಾನೂನುಗಳನ್ನು ದೇಶದಲ್ಲಿ ಜಾರಿಗೆ ತರಲಾಗುವುದು” ಎಂದು ಅವರು ಸ್ಪಷ್ಟಪಡಿಸಿದರು.

ದೇಶದಲ್ಲಿ ಅಪರಾಧ ನ್ಯಾಯ ಸುಧಾರಣೆಯು ದೇಶದ ನ್ಯಾಯದಾನ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಇದು ಸೂಚಿಸುತ್ತದೆ. ಮಹಿಳೆಯರು, ಮಕ್ಕಳು ಮತ್ತು ರಾಷ್ಟ್ರದ ವಿರುದ್ಧದ ಅಪರಾಧಗಳನ್ನು ಇದು ಮುಂಚೂಣಿಯಲ್ಲಿರಿಸುತ್ತದೆ. ಅಲ್ಲದೆ ಇದು ವಸಾಹತುಶಾಹಿ ಯುಗದ ಕಾನೂನುಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ; ವ್ಯಾಪಕ ಟೀಕೆ

Published

on

ಸುದ್ದಿದಿನಡೆಸ್ಕ್: ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಟೀಕಿಸಿದ್ದಾರೆ.

ರಾಜ್ಯ ಸರ್ಕಾರ ಮೊನ್ನೆಯಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಿಸಿದ ನಂತರ ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 3 ರೂಪಾಯಿ ಹಾಗೂ ಡೀಸೆಲ್ 3.5 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಪ್ರತಿ ಕುಟುಂಬದ ಮಹಿಳೆಗೆ ತಿಂಗಳಿಗೆ 8 ಸಾವಿರದ 500 ರೂಪಾಯಿಗಳನ್ನು ವರ್ಗಾವಣೆ ಮಾಡುವ ಭರವಸೆಯನ್ನು ಈಡೇರಿಸುವ ಬದಲು, ಕಾಂಗ್ರೆಸ್ ಆಡಳಿತದ ಕರ್ನಾಟಕ ಸರ್ಕಾರವು, ರಾಜ್ಯದ ಜನರಿಗೆ ಹೊರೆಯಾಗಿದೆ ಎಂದು ಹರ್ದೀಪ್ ಸಿಂಗ್ ಪುರಿ ಸಾಮಾಜಿಕ ಜಾಲತಾಣದಲ್ಲಿ ದೂರಿದ್ದಾರೆ. ಇಂತಹ ನಿರ್ಧಾರ ಹಣದುಬ್ಬರದ ಬಗ್ಗೆ ಮಾತನಾಡುವ ಕಾಂಗ್ರೆಸ್‌ನ ಬೂಟಾಟಿಕೆ ಬಹಿರಂಗಪಡಿಸುತ್ತದೆ. ಆದರೆ ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪ್ರತಿ ಲೀಟರ್‌ಗೆ ಸುಮಾರು 8 ರೂಪಾಯಿಗಳಿಂದ 12 ರೂಪಾಯಿಗಳಷ್ಟು ಹೆಚ್ಚುವರಿ ವ್ಯಾಟ್ ಅನ್ನು ವಿಧಿಸುತ್ತಿದೆ ಎಂದು ಸಚಿವರು ಆರೋಪಿಸಿದ್ದಾರೆ.

ಈ ವಿಚಾರದ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯ ಸರ್ಕಾರ ಮುಂದಾಲೋಚನೆ ಇಲ್ಲದೇ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು, ಈಗ ಆರ್ಥಿಕ ಹೊರೆ ತಡೆಯಲು ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಮಾಡಿದೆ ಎಂದು ಹುಬ್ಬಳ್ಳಿಯಲ್ಲಿ ಆರೋಪಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಬಸ್ ದರ, ಹಾಲಿನ ದರ, ಅಗತ್ಯ ವಸ್ತುಗಳ ದರ ಹೆಚ್ಚಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಆಡಳಿತದ ವ್ಯವಸ್ಥೆ ಕುಸಿದುಹೋಗಿದೆ ಎಂದು ದೂರಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು ಎಂದು ಪ್ರಲ್ಹಾದ್ ಜೋಶಿ ಎಚ್ಚರಿಕೆ ನೀಡಿದ್ದಾರೆ.

ಮತ್ತೊಂದೆಡೆ, ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ದರ ಏರಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ವ್ಯಾಟ್ ಹೆಚ್ಚಳ ಬಳಿಕ ದಕ್ಷಿಣ ಭಾರತದ ರಾಜ್ಯಗಳಿಗಿಂತ ಕರ್ನಾಟಕದಲ್ಲಿಯೇ ದರ ಕಡಿಮೆ ಇದೆ. ಆರ್ಥಿಕವಾಗಿ ಬಲಿಷ್ಠವಾಗಿರುವ ಮಹಾರಾಷ್ಟ್ರಕ್ಕಿಂತಲ್ಲೂ ಹಾಗೂ ಗುಜರಾತ್ ಮತ್ತು ಮಧ್ಯಪ್ರದೇಶಕ್ಕಿಂತಲ್ಲೂ ನಮ್ಮ ರಾಜ್ಯದಲ್ಲಿ ದರ ಕಡಿಮೆ ಇದೆ ಎಂದು ಹೇಳಿದ್ದಾರೆ.

ಈ ಹಿಂದಿನ ಬಿಜೆಪಿ ಸರ್ಕಾರ ತೆರಿಗೆ ಕಡಿಮೆ ಮಾಡಿದ್ದರೂ, ಕೇಂದ್ರ ಸರ್ಕಾರ ಪದೇ ಪದೆ ವ್ಯಾಟ್ ಹೆಚ್ಚಳ ಮಾಡಿತ್ತು ಎಂದು ಆರೋಪಿಸಿದ್ದಾರೆ. ರಾಜ್ಯದ ತೆರಿಗೆ ಹೆಚ್ಚಳದಿಂದ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending