Connect with us

ಅಂತರಂಗ

ರಿವಲ್ವಾರ್ ತೋರಿಸಿ 500 ರೂ ಕೊಟ್ಟಿದ್ದ ಪ್ರೀತಿಯ ಮಾಂತ್ರಿಕ ರವಿ ಬೆಳಗೆರೆ ..!

Published

on

ಮುನ್ನಡಿ ಬರೆಯುವ ಮುನ್ನವೇ ಅಂತ್ಯವಾಡಿದ ಅಕ್ಷರಸಂತ

  • ರವಿಪಾಂಡವಪುರ, ಮೈಸೂರು

ನಾನೆಂದೂ ಆ ದಿನವನ್ನ ಮರೆಯಲು ಸಾಧ್ಯವೇ ಇಲ್ಲ. ಆವತ್ತು 2008 ಡಿಸೆಂಬರ್ 12 ನೇ ತಾರೀಖು. ಪತ್ರಿಕೋದ್ಯಮ‌ ಮುಗಿಸಿದ ಬಳಿಕ ಮೈಸೂರು ಮಿತ್ರದಲ್ಲಿ ಕೆಲಸ ಮಾಡುತ್ತಿದ್ದವನು ಬೆಂಗಳೂರಲ್ಲಿ ಕೆಲಸ ಮಾಡಬೇಕೆಂದು ಹಿಂದಿನ ದಿನ TV9 ಕಚೇರಿಯಲ್ಲಿ ಕೆಲಸಕ್ಕೆ ಸೇರಿದ್ದೆ. ಆದರೆ, ಒಲ್ಲದ ಮನಸು ಅಲ್ಲಿ ಕೆಲಸ ಬೇಡವೆಂದು ಮರುದಿನ ನನ್ನನ್ನ ಹಾಯ್ ಬೆಂಗಳೂರು ಕಚೇರಿ ಕಡೆಗೆ ಸೆಳೆಯುತ್ತಿತ್ತು. ಕಾರಣ, ನನಗೆ ಮೊದಲಿನಿಂದಲೂ ರವಿ ಬೆಳಗೆರೆ ಎಂದರೆ ಏನೋ ಒಂಥರ ಹುಚ್ಚು – ಪ್ರೀತಿ..!

ಕಾಲೇಜು ದಿನಗಳಲ್ಲಿ ಅವರ ಹಲವು ಅಂಕಣಗಳ ಓದಿ ಅಭಿಮಾನಿಯಾಗಿದ್ದ ನನಗೆ ಅವರೊಟ್ಟಿಗೆ ಕೆಲಸ ಮಾಡುವ ಹೆಬ್ಬಯಕೆ. ಆ ಹೊತ್ತಿಗೆ ನನ್ನ ಪಾಲಿಗೆ ಅಕ್ಷರಬ್ರಹ್ಮನಂತೆ ಕಾಣುತ್ತಿದ್ದ ಅವರನ್ನ ಭೇಟಿ ಮಾಡಿ ಕೆಲಸ ಗಿಟ್ಟಿಸಿಕೊಳ್ಳಬೇಕೆಂಬ ಮಹದಾಸೆ. ಆ ಕಾರಣದಿಂದಲೇ TV9 ಅಲ್ಲಿ ಕೆಲಸ ಸಿಕ್ಕಿದ್ದರೂ, ಮರು ದಿನವೇ ಹಾಯ್ ಬೆಂಗಳೂರು ಕಚೇರಿಯಲ್ಲಿ ಕೆಲಸಕ್ಕಾಗಿ ಕಾದು ಕುಳಿತಿದ್ದೆ.

ಆರಂಭದಲ್ಲಿ ಕಾವಲುಗಾರ ನನ್ನನ್ನ ಗೇಟ್ ಒಳಗೂ ಕೂಡ ಬಿಟ್ಟಿರಲಿಲ್ಲ.‌ ಬೆಳಗ್ಗೆ 10 ಗಂಟೆಗೆ ಹೋದವನು ಬೇಸರದಿಂದಲೇ ಗೇಟ್ ಹೊರಗೆ ನಿಂತಿದ್ದೆ. ಮಧ್ಯಾಹ್ನ 2.30 ರ ಸುಮಾರಿಗೆ ಕಪ್ಪು‌ಬಣ್ಣದ ಕಾರಲ್ಲಿ ಬಂದ ರವಿ‌ಬೆಳಗೆರೆ ಸರ್, ದೂರದಲ್ಲಿ ನಿಂತಿದ್ದ ನನ್ನನ್ನ ಕರೆದು ಏನು ಎಂದು ಕಪಾಳಕ್ಕೆ ಬಾರಿಸುವ ಧಾಟಿಯಲ್ಲೆ ಪ್ರಶ್ನಿಸಿದರು. ನಾನೋ ದಡ್ಡನಂತೆ, ಸರ್ ನಿಮ್ಮನ್ನ ಭೇಟಿಯಾಗಬೇಕು ಎಂದುಬಿಟ್ಟಿದ್ದೆ.( ಬಹುಶಃ ಕೆಲಸ ಬೇಕು ಎಂದಿದ್ದರೆ ಒಳಗೂ ಸೇರಿಸುತ್ತಿಲ್ಲ ಅನಿಸುತ್ತೆ )

ಕಾವಲುಗಾರನಿಗೆ ‘ನೋಡಪ್ಪಾ, ಆ‌ ಹುಡುಗನನ್ನ 15 ನಿಮಿಷ ಬಿಟ್ಟು ಡೈರೆಕ್ಟಾಗಿ ನನ್ ಹತ್ರ ಕಳ್ಸು’ ಅಂತ ಹೇಳಿ ಒಳಗೆ ಹೋದರು. ಇದಾದ 15-20 ನಿಮಿಷದ ಬಳಿಕ ಒಳಗೆ ಹೋದ ನನಗೆ ಅವರ ಕೊಠಡಿಗೆ ಹೋಗುವ ಅವಕಾಶ ಸಿಕ್ಕಿತ್ತು. ನನಗೋ, ಅವರ ಎದುರು ದೊಡ್ಡ ಆಲದ‌ಮರದ ಬಳಿ ಕುಳಿತ ಅನುಭವ.

ಲೇಖಕರು : ರವಿಪಾಂಡವಪುರ, ಮೈಸೂರು

ಅಷ್ಟೊತ್ತಿಗೆ ಮಾತು ಆರಂಭಿಸಿದ ರವಿ ಸರ್ ಬಾಯಲ್ಲಿ ಸಿಗರೇಟ್ ಇತ್ತು. ‘ಏಯ್ ಹೇಳೋ, ಯಾರೋ‌ ನೀನು, ಏನೋ‌ ನಿನ್ ಪ್ರಾಬ್ಲಂ, ಎಲ್ಲಿಂದ‌ ಬಂದಿದಿಯೋ ಅಂದವರೇ‌ ದುರುಗುಟ್ಟಿ ನೋಡಲು ಆರಂಭಿಸಿದರು. ನನಗೆ ಅವರ ಮಾತು, ನಡವಳಿಕೆ ವಿಚಿತ್ರ ಅಂತ ಅನಿಸಿದರೂ ಅವರ ಅಭಿಮಾನದ ಮೇಲಿನ ಹುಚ್ಚು ಇದೆಲ್ಲವನ್ನೂ ಮರೆಸಿತ್ತು. ನಾನು ಸರ್ ಒಂದ್ ಕೆಲಸ ಬೇಕು. ಪತ್ರಿಕೋದ್ಯಮ ಮುಗಿಸಿದ್ದೀನಿ. ಟಿರ್ವಿ ಅಲ್ಲಿ ಸದ್ಯ ಕೆಲಸ ಮಾಡ್ತಿದೀನಿ ಅಂದೆ.

ಬಾಯ್ ಮೇಲೆ ಬೆರಳಿಟ್ಟುಕೊಂಡು,‌ ಅಲೆಲೆಲೆ ಲೇ,‌ಎಷ್ಟೋ‌ ನಿಂಗ್ ವಯಸ್ಸು, ನೋಡಿದ್ರೆ ಒಂದ್ ಮೂವತ್ ಮೂವತ್ತೈದ್ ಕೆಜಿ‌ ತೂಕ‌ ಬರ್ತಿಯಾ..ಏನ್ ಓದಿದಿಯಾ, ಯಾವ್ ಊರಿಂದ‌ ಬಂದಿದಿಯಾ ಅಂದ್ರು. ನನಗೋ ಈ‌ ಸರಿ ಬೇಸರದ ನಡುವೆ ಅವಮಾನ, ನಾನ್ ಮಂಡ್ಯದ ಪಾಂಡವಪುರದಿಂದ ಬಂದಿದೀನಿ, ನಾನು ಪತ್ರಿಕೋದ್ಯಮದಲ್ಲಿ ಸ್ನಾತ್ತಕ‌ ಮುಗಿಸಿದೀನಿ, ಈ ರಿಸ್ಯೂಮ್‌ ನೋಡಿ‌ ಸರ್ ಅಂದೆ.

ಎಲ್ಲವನ್ನೂ ನೋಡಿದ ಅವರು ‘ಮಾಸ್ಟರ್ ಡಿಗ್ರಿ ಮುಗಿಸಿದ್ದೀಯಾ, ಮುಖದಲ್ಲಿ ಮೀಸೇನೆ ಬಂದಿಲ್ಲವಲ್ಲೋ’ ಎಂದವರೇ ಮೇಲೆದ್ದು ನಿಂತು ತಮ್ಮ ಪ್ಯಾಂಟಿನ ಜೇಬಿಗೆ ಕೈ ಹಾಕಿದ್ರು.
ನನಗೋ ಅಚ್ಚರಿ.. ಎರಡೂ‌ ಜೇಬಿಗೆ ಏಕಕಾಲಕ್ಕೆ ಕೈ ಹಾಕಿದ ಅವರು ಒಂದ್ ಕೈಯ್ಯಲ್ಲಿ ರಿವಲ್ವಾರ್ ತೆಗೆದು ಟೇಬಲ್‌ ಮೇಲೆ ಇಟ್ಟರೆ. ಮತ್ತೊಂದು‌‌ ಜೇಬಿಂದ ಪರ್ಸ್ ತೆಗೆದು 500 ರೂಪಾಯಿ ನೋಟು ತೆಗೆದು ತಗೋ ಇದನ್ನ ಎಂದು ಕೈಗೆ ಕೊಟ್ಟರು.
ಈ ಬಾರಿ ನನಗೆ ಅಚ್ಚರಿ..!, ಯಾಕ್ ಸರ್ ಎಂದು ಪ್ರಶ್ನಿಸಿದ ನನಗೆ, ‘ನೋಡೋ ರವಿ, ನಮ್ಮಲ್ಲಿ ಸದ್ಯಕ್ಕೆ‌ ಕೆಲಸ ಇಲ್ಲ. ಇದ್ರು ನಿನಗೆ ಕೊಡಲ್ಲ ಅಂದ್ರು’ ನನಗೆ ಸಿಟ್ಟು ಬರತೊಡಗಿತು.

ಮತ್ತೆ ಮಾತು ಮುಂದುವರಿಸಿ, ನಿನ್ನನ್ನ ನೋಡಿದ್ರೆ ಅಮಾಯಕನಂತೆ ಕಾಣ್ತೀಯ.‌ ಈ ಟ್ಯಾಬ್ಲೈಡ್ ಪತ್ರಿಕೆಯಲ್ಲಿ ಕೆಲಸ ಕಲಿಯೋಕೆ ಆಗಲ್ಲ. ಅದರಲ್ಲೂ ನಿನಗಿಲ್ಲಿ‌ ಭವಿಷ್ಯವಿಲ್ಲ. ನೀನು ಮಾಡುತ್ತಿರುವ ಸಂಸ್ಥೆಯಲ್ಲೇ ಮುಂದುವರಿ. ಇಲ್ಲಾಂದ್ರೆ ಊರಿಗೆ ಹೋಗಿ ಬೇರೆ ಏನಾದ್ರು ಮಾಡು.‌ಚೆನ್ನಾಗ್ ಬದುಕು ಅಂದ್ರು.

ನಾನು ಕೆಲಸವೇ ಕೊಡದ ಮೇಲೆ 500 ರೂಪಾಯಿ ಏಕೆ ಅಂತ ವಾಪಸ್ ಕೊಡಲು ಮುಂದಾದೆ. ರವಿ‌ಸರ್ ತಕ್ಷಣ ರಿವಲ್ವಾರ್ ಕೈಗೆ ಇಟ್ಕೊಂಡು ಶೂಟ್ ಮಾಡಿಬಿಡ್ತೀನಿ ಈಡಿಯಟ್, ದುಡ್ಡು ಕೊಟ್ಟದ್ದು ಊಟ ಮಾಡು ಅಂತ. ನನಗೆ ನೀನು ಬೆಳಗ್ಗಿನಿಂದ‌ ಇಲ್ಲೇ ಇದ್ದೀಯ ಅಂತ ಗೊತ್ತು. ನಿನಗೆ ಊಟ ಕೊಡಿಸೋಣ ಅಂದ್ರೆ ನಾನ್ ಹೊರಗೆ ಬರಲ್ಲ. ಮನೆಯಿಂದ ಈವತ್ತು ಊಟ ಕೂಡ ತಂದಿಲ್ಲ. ಇಲ್ಲಿ‌ ಕೆಲಸ ಮಾಡೋ ಎಲ್ಲರೂ ಅವರವರ ಬಾಕ್ಸ್ ಅಲ್ಲಿ ಊಟ ಮಾಡಿಕೊಂಡಿದ್ದಾರೆ. ಆ ಕಾರಣಕ್ಕೆ ದುಡ್ಡು ಕೊಟ್ಟದ್ದು ಎಂದವರ ಹೃನ್ಮನದಲ್ಲಿ ಪ್ರೀತಿಯ ಹೊಳೆಯೇ ಹರಿದಿತ್ತು.

ಇಷ್ಟೆಲ್ಲ ಘಟನಾವಳಿ ಬಳಿಕ ನಾನು ಮತ್ತೊಮ್ಮೆ , ನನಗೆ ನಿಮ್ಮ ಬಳಿ ಕೆಲಸ ಮಾಡುವ ಹೆಬ್ಬಯಕೆ ಇದೆ ಎಂದು ಹೇಳಿದೆ. ಅವರು ಮತ್ತದೇ ರಿವಲ್ವಾರ್ ತೋರಿಸಿ, ಅಯ್ಯೋ‌ ಹುಚ್ಚಾ.. ನಿನಗೆ ಈವಾಗ ನಾನ್ ಹೇಳ್ತಾ ಇರೋದು ಅರ್ಥ ಆಗ್ತಿಲ್ಲ. ಅರ್ಥವಾದಾಗ ನೀನೇ ಈ ಕಡೆ ಬರಲ್ಲ. ಹಾಗೂ ಅರ್ಥವಾದರೆ ಒಮ್ಮೆ ಭೇಟಿಯಾಗೋಣ ಎಂದಿದ್ದರು. ಅಂದೇ ಕೊನೆ ಅವರನ್ನ ಖುದ್ದು ಭೇಟಿ ಆಗಲು ಸಾಧ್ಯವೇ ಆಗಲಿಲ್ಲ.‌

ಇದಾದ ಭರ್ತಿ ಹತ್ತು ವರ್ಷದ ಬಳಿಕ ಒಮ್ಮೆ ಅವರ ನಂಬರಿಗೆ ಕರೆ ಮಾಡಿ,‌‌ ಘಟನಾವಳಿಗನ್ನೆಲ್ಲ ನೆನಪಿಸಿ, ಸರ್ ನಾನು ನಾಲ್ಕು ಪುಸ್ತಕ ಬರೆದಿರುವೆ.‌ನನ್ನ ನಾಲ್ಕನೇ ಪುಸ್ತಕ ನೀವೇ ಬಿಡುಗಡೆ ಮಾಡಬೇಕು ಎಂದು ಆಹ್ವಾನಿಸಿದ್ದೆ. ಅವರು ಹೊಟ್ಟೆ ಹುಣ್ಣಾಗುವಷ್ಟು ನಗು ಬಂತು ಕಣೋ ಎಂದವರು ಸಿಕ್ಕಾಪಟ್ಟೆ ಖುಷಿ ಆಯ್ತು ಒಳ್ಳೆದಾಗ್ಲಿ ಎಂದು ಹಾರೈಸಿದ್ದರು.
ಸಾರಿ ಕಣೋ, ಬೇಜಾರಾಗಬೇಡ.

ಬೆಂಗಳೂರಾದರೆ ಬರ್ತೀನಿ, ಮೈಸೂರಿನವರಗೆ ಆಗಲ್ಲ ಕಣೋ ಎಂದವರು ಮುಂದಿನ ಪುಸ್ತಕವನ್ನ ನನ್ನ ಕಚೇರಿಯಲ್ಲೆ ಬಿಡುಗಡೆ ಮಾಡ್ತೀಸ್ತೀನಿ ಎಂದಿದ್ದರು. ಅದಕ್ಕಾಗಿ ಸಿದ್ಧತೆ ನಡೆಸಿಕೊಂಡಿದ್ದ ನಾನು‌ಕೂಡ ಸಿದ್ಧತೆ ನಡೆಸಿಕೊಂಡಿದ್ದೆ. ಆ ಕೃತಿಯ ಅಚ್ಚುಪ್ರತಿಯನ್ನ ಕೊರಿಯರ್ ಮಾಡಿದ್ದೆ. ಕಾರಣ , ಆ ಪುಸ್ತಕಕ್ಕೆ ಅವರೇ ‘ಮುನ್ನುಡಿ’ ಬರೆಯಲು ಮನಸು ಮಾಡಿದ್ದರು. ದುರಂತ, ಆ ಮುನ್ನುಡಿ ಕೈ ಸೇರುವ ಮುನ್ನವೇ ಅವರ ಅಸ್ತಂಗತದ ಸುದ್ದಿ ಬಂದಿದೆ. ಕೊನೆಗೂ ಅವರನ್ನ ಭೇಟಿ‌ ಆಗುವ ಹಾಗೂ ಅವರ ಮುನ್ನಡಿ ಜೊತೆಗೆ ಪುಸ್ತಕ‌ ಬಿಡುಗಡೆಯ ಕನಸು ಕನಸಾಗಿಯೇ ಉಳಿದಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

Published

on

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.

ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.

ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.

ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.

ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.

ಕನ್ನಡಿಗರ ಮನದ ಜಾನಕಿ

ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.

ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.

ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.

ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ

ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.

ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.

ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.

ಧ್ವನಿಯೊಳಗಿದ್ದ ಸಾವಿರ ರೂಪಗಳು

ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.

ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ

ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.

ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.

ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ

ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.

ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.

ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.

ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.

ಸರಳತೆಯೇ ಅವರ ಅಲಂಕಾರ

ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.

ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ

ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.

ಸಂಗೀತ ಲೋಕದ ಕಂಬನಿ

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.

ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ

ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.

ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.

ಸ್ವರ ಮೌನವಾದರೂ…

ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.

ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.

ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.

ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ದೇವರ ಹೂವು

Published

on

~ ಡಾ. ಸಿ.ಬಿ.ಐನಳ್ಳಿ

ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ

ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ

ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ

ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ

ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending