Connect with us

ದಿನದ ಸುದ್ದಿ

ಆ ಗೆಳೆಯ ಮಹೇಶನ ನೆನಪಿನೊಂದಿಗೆ ರವಿ ಬೆಳಗೆರೆಗೆ ವಿದಾಯ

Published

on

 

  • ದಿನೇಶ್ ಅಮಿನ್ ಮಟ್ಟು

ಕೆಲವರು ಹೀಗೆ ಇರುತ್ತಾರೆ, ನೀವು ಅವರನ್ನು ಪ್ರೀತಿಸಬಹುದು, ದ್ವೇಷಿಸಬಹುದು, ಆದರೆ ನಿರ್ಲಕ್ಷಿಸುವಂತಿಲ್ಲ. ರವಿ ಬೆಳಗೆರೆ ಹೀಗೆ ಆರಾಧನೆ-ಅವಹೇಳನಗಳೆರಡನ್ನೂ ಆಹ್ಹಾನಿಸಿಕೊಂಡು ಬದುಕಿದ್ದ ವ್ಯಕ್ತಿ. ನನಗೇನು ಇವರು ಸ್ನೇಹಿತರಲ್ಲ. ಇವರನ್ನು ನಾನು ಎರಡು-ಮೂರು ಬಾರಿ ಸಮಾರಂಭಗಳಲ್ಲಿ ಭೇಟಿ ಮಾಡಿದ್ದೆ, ಎರಡು-ಮೂರು ಬಾರಿ ಮಾತನಾಡಿದ್ದೆ, ಕೊನೆಯ ಬಾರಿ ಅವರೇ ಪೋನ್ ಮಾಡಿ ಮಾತನಾಡಿದ್ದು ಹಕ್ಕುಚ್ಯುತಿಯ ಪ್ರಕರಣದಲ್ಲಿ ಪೊಲೀಸರು ಅವರನ್ನು ಬಂಧಿಸಲು ಹೊರಟ ಸಂದರ್ಭದಲ್ಲಿ.

ನನಗೆಂದೂ ಅವರನ್ನು ಭೇಟಿ ಮಾಡಬೇಕು, ಮಾತನಾಡಬೇಕೆಂದು ಅನಿಸಿರಲೇ ಇಲ್ಲ. ಸ್ನೇಹಿತರಾದ ಡಿ.ಉಮಾಪತಿ ಅವರಿಗೆ ರವಿ ಖಾಸಾದೋಸ್ತ್, ದೆಹಲಿಗೂ ಹಲವು ಬಾರಿ ಬಂದಿದ್ದರು. ನನ್ನನ್ನು ಅರಿತಿದ್ದ ಉಮಾಪತಿ ಎಂದೂ ಅವರನ್ನು ನನಗೆ ಭೇಟಿ ಮಾಡಿಸಿರಲಿಲ್ಲ. ನಾನೆಂದೂ ‘ಹಾಯ್ ಬೆಂಗಳೂರು’ ಪತ್ರಿಕೆಯನ್ನು ದುಡ್ಡು ಕೊಟ್ಟು ಖರೀದಿಸಿಲ್ಲ, ಎಲ್ಲಾದರೂ ಕಣ್ಣಿಗೆ ಬಿದ್ದರೆ ಪುಟಗಳನ್ನು ತಿರುವಿಹಾಕಿ ಖಾಸ್ ಬಾತ್ ಓದುತ್ತಿದ್ದೆ

ರವಿಯವರು ನಡೆಸುತ್ತಿದ್ದ ಪತ್ರಿಕೋದ್ಯಮ ಮತ್ತು ನಾನು ನಂಬಿರುವ ಪತ್ರಿಕೋದ್ಯೋಗ ಬೇರೆಬೇರೆ. ಟ್ಯಾಬ್ಲಾಯ್ಡ್ ಪತ್ರಿಕೆಗಳು ಎರಡಲಗಿನ ಕತ್ತಿ ಇದ್ದ ಹಾಗೆ. ಅದು ಲಂಕೇಶ್ ಪತ್ರಿಕೆಯೂ ಆಗಬಹುದು, ಹಾಯ್ ಬೆಂಗಳೂರು ಕೂಡಾ ಆಗಬಹುದು. ಲಂಕೇಶ್ ಪತ್ರಿಕೆಯನ್ನು ಒಂದು ತಲೆಮಾರಿನ ಕಣ್ಣು ತೆರೆಸಿದವರು ಎಂದು ಹೇಳುತ್ತಿದ್ದರು, ನನ್ನ ಕಣ್ಣು ತೆರೆಯಲು ಕೂಡಾ ಅವರ ಪತ್ರಿಕೆ ನೆರವಾಗಿರುವುದು ನಿಜ. ಆದರೆ ನನ್ನ ಪ್ರಕಾರ ರವಿ ಬೆಳಗೆರೆಗೆ ಕೂಡಾ ಅಂತಹ ಶಕ್ತಿ ಇತ್ತು, ಅದನ್ನು ಅವರು ಮಾಡದೆ ಹೋದರು ಎನ್ನುವುದು ಕೂಡಾ ಸತ್ಯ.

ನಮ್ಮ ಗುರಿ ಮತ್ತು ದಾರಿಯ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾದ ಸಂದರ್ಭದಲ್ಲಿ ನಾವೆಲ್ಲರೂ ನಮ್ಮನ್ನು ನಾವೇ ನಿಕಷಕ್ಕೆ ಒಡ್ಡಿಕೊಳ್ಳಬೇಕಾಗುತ್ತದೆ. ತಪ್ಪು ಗುರಿಯನ್ನು ಇಟ್ಟುಕೊಂಡು ಓಡುವ ಓಟಗಾರ ಎಷ್ಟೇ ಪ್ರತಿಭಾಶಾಲಿಯಾಗಿದ್ದರೂ ಆತನನ್ನು ಅನುಕರಿಸುವುದು ಕಷ್ಟ, ಗುಂಡಿಗೆ ಬೀಳುವ ಅಪಾಯ ಇದೆ. ಸರಿಯಾದ ಗುರಿಯನ್ನಿಟ್ಟುಕೊಂಡು ಓಡುವ ಓಟಗಾರನದ್ದು ಸಾಮಾನ್ಯ ಪ್ರತಿಭೆಯಾದರೂ ಆತನನ್ನು ಹಿಂಬಾಲಿಸಬಹುದು, ವಿಳಂಬವಾದರೂ ಸರಿಯಾದ ಗುರಿ ತಲುಪಬಹುದು.

ರವಿ ಬೆಳಗೆರೆಯವರದ್ದು ದೈತ್ಯ ಪ್ರತಿಭೆ ಅನ್ನುತ್ತಾರಲ್ಲಾ ಅಂತಹದ್ದು. ಓದುಗರನ್ನು ಸಮ್ಮೋಹನಗೊಳಿಸುವ ಅವರ ಭಾಷೆ ಮತ್ತು ಬರವಣಿಗೆಯ ಶೈಲಿ, ಅವರ ನೆನಪಿನ ಶಕ್ತಿ, ಮಾತುಗಳು ಎಲ್ಲವೂ ಅವರನ್ನು ಜನಪ್ರಿಯರನ್ನಾಗಿ ಮಾಡಿತ್ತು. ನನ್ನಂತಹರಲ್ಲಿಯೂ ಅಸೂಯೆ ಹುಟ್ಟಿಸುತ್ತಿತ್ತು. ರವಿ ತನ್ನ ಪ್ರತಿಭೆಯನ್ನು ಸರಿಯಾದ ಉದ್ದೇಶಕ್ಕೆ ಬಳಸದೆ ಹೋದರು. ಮನಸ್ಸಿನ ಮೇಲೆ ಎಚ್ಚರ ಇಲ್ಲದೆ ಓದಲು ಕಲಿತರೆ ನಮ್ಮನ್ನು ನಾವೆ ಅವರ ಕೈಗೆ ಒಪ್ಪಿಸಿಬಿಡುವಷ್ಟು ಪ್ರಭಾವಶಾಲಿಯಾಗಿ ಬರೆಯುತ್ತಿದ್ದ ರವಿ ಒಬ್ಬ ಸೃಜನಶೀಲ ಬರಹಗಾರ.

ಅವರ ಕೆಲವು ಕಾದಂಬರಿಗಳು ನನಗೆ ಇಷ್ಟ, ಅದಕ್ಕಿಂತಲೂ ಹೆಚ್ಚು ಮೆಚ್ಚಿಕೊಂಡಿರುವುದು ಅವರು ಈಟಿವಿ ಚಾನೆಲ್ ನಲ್ಲಿ ನಡೆಸಿಕೊಡುತ್ತಿದ್ದ ಸಂಗೀತ ಕಾರ್ಯಕ್ರಮಗಳನ್ನು. ಸೃಜನಶೀಲತೆಯ ಇನ್ನೊಂದು ಮುಖ ಅಶಿಸ್ತು. ಈ ಅಶಿಸ್ತು ರವಿ ಬದುಕನ್ನು ಅಡ್ಡಾದಿಡ್ಡಿ ದಾರಿಯಲ್ಲಿ ಕೊಂಡೊಯ್ದಿತ್ತು. ಅವರು ಮನಸ್ಸು ಮಾಡಿದ್ದರೆ, ಸರಿಯಾದ ಅವಕಾಶ ಸಿಕ್ಕಿದ್ದರೆ (ರವಿಯವರೇ ಅಭಿಮಾನ ಇಟ್ಟುಕೊಂಡಿರುವ) ಕನಿಷ್ಠ ಕನ್ನಡದ ಖುಷ್ ವಂತ್ ಸಿಂಗ್ ಆಗುತ್ತಿದ್ದರೇನೋ?

ಕಡುಕಷ್ಟದಲ್ಲಿ ಬೆಳೆದ ನೋವು ಮತ್ತು ತನ್ನ ಪ್ರತಿಭೆಗೆ ಸರಿಯಾದ ಅವಕಾಶ ಸಿಗಲಿಲ್ಲ, ಬಯಸಿದಂತೆ ಯಾವುದೂ ಆಗಲಿಲ್ಲ ಎಂಬ ಕೊರಗಿನಲ್ಲಿಯೇ ಹೆಚ್ಚುಕಡಿಮೆ ಅರ್ಧ ಆಯಷ್ಯವನ್ನು ಕಳೆದ ರವಿ ಬೆಳಗೆರೆ, ತನ್ನ ಪ್ರತಿಭೆಗೆ ಹಣವನ್ನು ಹುಟ್ಟಿಸುವ ಇನ್ನೊಂದು ಶಕ್ತಿ ಇದೆ ಎಂಬ ಅರಿವಾದಾಗ ತಪ್ಪು-ಸರಿ, ನ್ಯಾಯ-ಅನ್ಯಾಯದ ವಿಮರ್ಶೆಗೆ ಹೋಗದೆ ಆ ದಾರಿಯಲ್ಲಿ ಮುನ್ನುಗ್ಗಿ ಕಳೆದುಹೋಗಿಬಿಟ್ಟರು.

ಅವರಿಗೆ ಕನ್ನಡದ ಒಂದು ಮುಖ್ಯವಾಹಿನಿ ಪತ್ರಿಕೆ ಇಲ್ಲವೇ ಟಿವಿ ಚಾನೆಲ್ ನ ಸಂಪಾದಕರಾಗುವ ಅವಕಾಶ ಸಿಕ್ಕಿದ್ದರೆ, ನಾವೆಲ್ಲ ಬಯಸುವ ಪತ್ರಿಕೋದ್ಯಮವನ್ನು ಮುನ್ನಡೆಸುವ ಶಕ್ತಿ ಖಂಡಿತ ಇತ್ತು. ಆದರೆ ಅದರಲ್ಲಿ ಕಷ್ಟ-ನಷ್ಟ ಇತ್ತು, ರವಿ ಕೊನೆಗೆ ಹಿಡಿದ ದಾರಿಯಲ್ಲಿ ಸಿಕ್ಕ ದುಡ್ಡು ಮಾತ್ರ ಇರಲಿಲ್ಲ. ಆ ರೀತಿ ಭಿನ್ನವಾದ ದಾರಿ ಹಿಡಿದಿದ್ದರೆ ರವಿ ಇನ್ನೊಬ್ಬ ಅರ್ನಬ್ ಗೋಸ್ವಾಮಿ ಆಗುವ ಅಪಾಯ ಕೂಡಾ ಇತ್ತು.

ಕೊನೆಗೂ ರವಿಬೆಳಗೆರೆಯ ನೆನಪು ಉಳಿಸುವುದು ಅವರ ಪತ್ರಿಕೆಯ ಮುಖಪುಟದಲ್ಲಿ ರಾರಾಜಿಸುತ್ತಿದ್ದ ಹೆಡ್ಡಿಂಗ್ ಗಳು ಮಾತ್ರ, ಲೇಖನಗಳಲ್ಲ. ಶಾಶ್ವತವಾಗಿ ಅವರನ್ನು ಉಳಿಸಿರುವುದು ಅವರು ಬರೆದ ಕಾದಂಬರಿಗಳು,ಖಾಸ್ ಬಾತ್ ಅಂಕಣಗಳು, ನಡೆಸಿಕೊಡುತ್ತಿದ್ದ ಸಂಗೀತ ಕಾರ್ಯಕ್ರಮಗಳು ಮಾತ್ರ. ಇದನ್ನು ಪತ್ರಿಕೋದ್ಯಮ ಎಂದು ಹೇಳಬಹುದೇ?

ಬಹಳ ಮಂದಿ ರವಿಬೆಳಗೆರೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ, ಅವರಲ್ಲಿ ಯಾರಾದರೂ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಮೆಚ್ಚಿಕೊಂಡ ಎಷ್ಟು ವರದಿಗಳನ್ನು ಉಲ್ಲೇಖಿಸಲು ಸಾಧ್ಯವಿದೆ?

ಈ ಪೋಸ್ಟ್ ಜೊತೆ ರವಿ ಜೊತೆ ನಾನಿದ್ದ ಪೋಟೊ ಇದೆ. ಇದು ತುಮಕೂರಿನಲ್ಲಿದ್ದಾಗ ತೆಗೆದಿದ್ದ ಪೋಟೊ. ಅಲ್ಲಿ ನನಗೂ ಆತ್ಮೀಯನಾಗಿದ್ದ ಮಹೇಶ್ ಹೊನ್ನುಡಿಕೆ ಎಂಬ ರವಿಯ ಕಡುಅಭಿಮಾನಿ ಇದ್ದ.ಪತ್ರಕರ್ತ,ರಾಜಕಾರಣಿ,ಉದ್ಯಮಿ ಎಲ್ಲವೂ ಅರೆಕಾಲಿಕ ಆಗಿದ್ದ ಮಹೇಶನ ಪುಸ್ತಕ ಬಿಡುಗಡೆಗೆ ರವಿ ಬಂದಿದ್ದಾಗ ತೆಗೆದಿದ್ದ ಪೋಟೊ. ಹೊನ್ನುಡಿಕೆ ಪಾಲಿಗೆ ರವಿ ಆರಾಧ್ಯ ದೇವರಾಗಿದ್ದರು.

“ ಅವರ ಭಗ್ನಪ್ರೇಮದ ಕತೆ ನನ್ನದೂ ಕೂಡಾ ಸಾರ್, ಅವರು ಕುಡಿಯುವ ರಮ್ ನನ್ನ ಫೇವರೇಟ್ ಸಾರ್, ಅವರ ಬ್ರಾಂಡ್ ಖೋಡೆ ರಮ್ ಕೂಡಾ ನನ್ನದೇ ಬ್ರಾಂಡ್ ಸಾರ್, ಅವರ ಗಡ್ಡ ನನ್ನದೇ ಸಾರ್.” ಎಂದೆಲ್ಲ ರಾತ್ರಿ ಬಾರಿನಲ್ಲಿ ಕೂತು ಗಡ್ಡ ಕೆರೆಯುತ್ತಾ, ರಮ್ ಹೀರುತ್ತಾ ಮಹೇಶ್ ಬಡಬಡಿಸುವವ. ಕೊನೆಗೆ ಕುಡಿಯಬಾರದ್ದಷ್ಟನ್ನು ಕುಡಿದು ಸಾಯಬಾರದ ವಯಸ್ಸಿನಲ್ಲಿ ಮಹೇಶ್ ನಮ್ಮನಗಲಿ ಹೋದ.

ಈ ರೀತಿ ಕಣ್ಣುಮುಚ್ಚಿ ಆರಾಧಿಸುವ ಸಾವಿರಾರು ಯುವ ಅಭಿಮಾನಿಗಳು ರವಿ ಬೆಳಗೆರೆಗೆ ಇದ್ದರು, ರವಿ ಬೆಳಗೆರೆ ಖಾಸ್ ಬಾತ್ ಗಳು ಬಹಳ ಬೇಗ ಅವರಿಗೆ ಅರ್ಥವಾಗುತ್ತಿತ್ತು. ಅವರಿಗೆ ಕಣ್ಣು ತೆರೆಸುವ ನನ್ನಂತಹವರ ಮಾತುಗಳು ಅರ್ಥವಾಗುತ್ತಿರಲಿಲ್ಲ ಅರ್ಥಮಾಡಿಕೊಂಡಿದ್ದರೆ ಮಹೇಶ್ ಇಂದು ರವಿ ಮೃತದೇಹದ ಮುಂದೆ ಕಂಬನಿ ಸುರಿಸಲು ಬದುಕಿರುತ್ತಿದ್ದ.

ಆ ಗೆಳೆಯ ಮಹೇಶನ ನೆನಪಿನೊಂದಿಗೆ ರವಿ ಬೆಳಗೆರೆಗೆ ವಿದಾಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!

Published

on

ಆಗಸ್ಟ್ 2023 ರಿಂದ ಜುಲೈ 2026 ರವರೆಗೆ ₹28,759 ಕೋಟಿ ಸಬ್ಸಿಡಿ ಬಿಡುಗಡೆ; ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್‌ನಿಂದ ಕೋಟ್ಯಂತರ ಕುಟುಂಬಗಳ ಆರ್ಥಿಕ ಸಬಲೀಕರಣ

ಸುದ್ದಿದಿನ, ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ತನ್ನ 3 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿದೆ. `ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಸಹಕಾರ’ ಎಂಬ ಧ್ಯೇಯದೊಂದಿಗೆ ಆರಂಭವಾದ ಈ ಯೋಜನೆ ಇಂದು ಕೋಟ್ಯಂತರ ಕುಟುಂಬಗಳ ಬದುಕಿಗೆ ಬೆಳಕಾಗಿದೆ.

ಹೌದು! 2023ರ ಆಗಸ್ಟ್‌ನಲ್ಲಿ ಜಾರಿಗೆ ಬಂದ ಈ ಯೋಜನೆಯಡಿ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಪ್ರತಿ ತಿಂಗಳು 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್‌ಗೆ ದೊಡ್ಡ ಆಸರೆಯಾಗಿದೆ ಎಂದೇ ಹೇಳಬಹುದು.

http://Visit : www.suddidina.com

ಗೃಹಜ್ಯೋತಿ ಯೋಜನೆಯ ಸಾಧನೆಯ ಗಿರಿ: 

ಇಂಧನ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ರಾಜ್ಯದ್ಯಂತ ಬರೋಬ್ಬರಿ 1.65 ಕೋಟಿ. ಫಲಾನುಭವಿಗಳು ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆ, ಸೇವಾಸಿಂಧು ಪೋರ್ಟಲ್‌ನಲ್ಲಿ ಒಟ್ಟು 1,76,69,368 ಜನರು ನೋಂದಾಯಿಸಿಕೊಂಡಿದ್ದರೆ. ಒಟ್ಟು 2,06,65,451 ಗೃಹಬಳಕೆ ವಿದ್ಯುತ್ ಗ್ರಾಹಕರಿದ್ದಾರೆ. ಅಂದರೆ ಶೇ.85ಕ್ಕಿಂತ ಹೆಚ್ಚು ಗ್ರಾಹಕರು ಈ ಯೋಜನೆಯಡಿ ನೋಂದಾಯಿಸಿಕೊಂಡು ಲಾಭ ಪಡೆಯುತ್ತಿದ್ದಾರೆ.

ಆರ್ಥಿಕವಾಗಿ ನೋಡುವುದಾದರೆ, 2023ರ ಆಗಸ್ಟ್‌ನಿಂದ 2026ರ ಜುಲೈ ವರೆಗೆ, ಕಳೆದ ಮೂರು ವರ್ಷಗಳಲ್ಲಿ ಸರ್ಕಾರವು ಫಲಾನುಭವಿಗಳಿಗೆ ಒಟ್ಟು ₹28,759.54 ಕೋಟಿ ರೂಪಾಯಿ ಸಬ್ಸಿಡಿ ಬಿಡುಗಡೆ ಮಾಡಿದೆ. ಇದು ಸರ್ಕಾರದ ಬದ್ಧತೆ ಮತ್ತು ಜನಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ.

ಕುಟುಂಬದ ಬಜೆಟ್‌ಗೆ ಆಸರೆ, ಉಜ್ವಲ ಭವಿಷ್ಯಕ್ಕೆ ಬುನಾದಿ:

ಪ್ರತಿ ತಿಂಗಳು 1000 ದಿಂದ 1500 ರೂಪಾಯಿಗಳವರೆಗೆ ವಿದ್ಯುತ್ ಬಿಲ್ ಕಟ್ಟುತ್ತಿದ್ದ ಸಾಮಾನ್ಯ ಕುಟುಂಬಗಳಿಗೆ ಈಗ ಆ ಹಣ ಸಂಪೂರ್ಣವಾಗಿ ಉಳಿತಾಯವಾಗುತ್ತಿದೆ. ಈ ಉಳಿತಾಯದ ಹಣವನ್ನು ಅವರು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಇತರ ಅಗತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಗೃಹಿಣಿಯರಿಗೆ ಇದು ಆರ್ಥಿಕವಾಗಿ ದೊಡ್ಡ ನೆರವಾಗಿದೆ.

ಕೇವಲ ಉಚಿತ ವಿದ್ಯುತ್ ನೀಡುವುದಷ್ಟೇ ಅಲ್ಲ, ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದ್ದು, ರಾಜ್ಯದ ಜನರ ಜೀವನಮಟ್ಟ ಸುಧಾರಿಸಿದೆ. ಗೃಹ ಜ್ಯೋತಿ ಯೋಜನೆಯು ಕೇವಲ ಒಂದು ಯೋಜನೆಯಾಗಿ ಉಳಿಯದೆ, ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕುಟುಂಬಗಳನ್ನು ಈ ಯೋಜನೆಯಡಿ ತರಲು ಇಂಧನ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.

Continue Reading

ದಿನದ ಸುದ್ದಿ

ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – 20 ಸಾವಿರ ಕೋಟಿ ರೂ. ವೆಚ್ಚದ 8 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರದ ಅಸ್ತು!

Published

on

ಕರ್ನಾಟಕದ ವೈಟ್‌ಫೀಲ್ಡ್-ಬಂಗಾರಪೇಟೆ, ಹೊಸೂರು-ಓಮಲೂರು ಮಾರ್ಗ ಸೇರಿ 9 ರಾಜ್ಯಗಳ 1200 ಕಿ.ಮೀ ರೈಲು ಜಾಲ ವಿಸ್ತರಣೆಗೆ ಪ್ರಧಾನಿ ಮೋದಿ ಅಧ್ಯಕ್ಷತೆಯ ಸಂಪುಟ ಸಭೆಯಲ್ಲಿ ಅನುಮೋದನೆ

ಸುದ್ದಿದಿನ, ಹೊಸದಿಲ್ಲಿ: ದೇಶದ ರೈಲ್ವೆ ಮೂಲಸೌಕರ್ಯಕ್ಕೆ ಬೃಹತ್ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳ 20ಕ್ಕೂ ಹೆಚ್ಚು ಜಿಲ್ಲೆಗಳನ್ನು ಸಂಪರ್ಕಿಸುವ 20,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ 8 ಬಹು ಟ್ರ್ಯಾಕಿಂಗ್ (Multi-Tracking) ರೈಲು ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ (ಸೆ.09) ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಯೋಜನೆಗಳು ಪಿಎಂ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಅನುಷ್ಠಾನಗೊಳ್ಳಲಿವೆ.

http://Visit : www.suddidina.com

ಈ ಯೋಜನೆಗಳಿಂದ ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ಜಾಲವು ಬರೋಬ್ಬರಿ 1,200 ಕಿಲೋಮೀಟರ್‌ಗಳಷ್ಟು ವಿಸ್ತರಣೆಯಾಗಲಿದೆ. ಇದರಿಂದ 6,900ಕ್ಕೂ ಹೆಚ್ಚು ಗ್ರಾಮಗಳಿಗೆ ಸುಧಾರಿತ ಸಂಪರ್ಕ ಸಿಗಲಿದ್ದು, ರೈಲುಗಳ ಕಾರ್ಯಾಚರಣೆಯ ದಕ್ಷತೆ ಮತ್ತು ಸೇವಾ ವಿಶ್ವಾಸಾರ್ಹತೆ ಗಣನೀಯವಾಗಿ ಹೆಚ್ಚಾಗಲಿದೆ.

ಯಾವೆಲ್ಲ ಯೋಜನೆಗಳಿಗೆ ಅನುಮೋದನೆ?
ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದ ಪ್ರಮುಖ ಯೋಜನೆಗಳು ಹೀಗಿವೆ:

1. ಅರಾಕೋಣಂ-ರೇಣಿಗುಂಟಾ ಮತ್ತು ವೈಟ್‌ಫೀಲ್ಡ್-ಬಂಗಾರಪೇಟೆ ನಡುವೆ 3 ಮತ್ತು 4ನೇ ಮಾರ್ಗ: ಇದು ಕರ್ನಾಟಕ ಮತ್ತು ತಮಿಳುನಾಡು, ಆಂಧ್ರಪ್ರದೇಶಕ್ಕೆ ಅತ್ಯಂತ ಮಹತ್ವದ ಯೋಜನೆಯಾಗಿದೆ.

2. ಸಿಕಂದರಾಬಾದ್-ಕಾಜಿಪೇಟೆ ನಡುವೆ ಮಲ್ಟಿ ಟ್ರ್ಯಾಕಿಂಗ್: ತೆಲಂಗಾಣದ ಪ್ರಮುಖ ಮಾರ್ಗದ ದಟ್ಟಣೆ ಕಡಿಮೆ ಮಾಡಲಿದೆ.

3. ಹೊಸೂರು-ಓಮಲೂರು, ಸೇಲಂ-ಕರೂರ್-ದಿಂಡಿಗಲ್ ಜೋಡಿ ಹಳಿ ಯೋಜನೆ: ತಮಿಳುನಾಡು ಮತ್ತು ಕರ್ನಾಟಕದ ಗಡಿ ಭಾಗದ ಸಂಪರ್ಕವನ್ನು ಬಲಪಡಿಸಲಿದೆ.

4. ಖರಗ್‌ಪುರ-ಝಾರ್ಸುಗುಡ ಮತ್ತು ಕತ್ನಿ-ಪೆಂದ್ರ ರಸ್ತೆ ನಡುವೆ 4ನೇ ಮಾರ್ಗ ಮತ್ತು ಬಿಲಾಸ್‌ಪುರ್-ಪೆಂದ್ರ ರಸ್ತೆ ನಡುವೆ 3ನೇ ಮಾರ್ಗ: ಛತ್ತೀಸ್‌ಗಢ, ಒಡಿಶಾ, ಮಧ್ಯಪ್ರದೇಶದ ಕಲ್ಲಿದ್ದಲು ಮತ್ತು ಖನಿಜ ಸಾಗಣೆಗೆ ಸಹಕಾರಿಯಾಗಲಿದೆ.

ಈ ಎಲ್ಲಾ ಯೋಜನೆಗಳು ಕರ್ನಾಟಕ, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ, ಛತ್ತೀಸ್‌ಗಢ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳನ್ನು ಒಳಗೊಳ್ಳಲಿವೆ.

ಕರ್ನಾಟಕಕ್ಕೆ ಏನು ಲಾಭ?

ಈ ಬಹು ಟ್ರ್ಯಾಕಿಂಗ್ ಯೋಜನೆಗಳಿಂದ ಕರ್ನಾಟಕಕ್ಕೆ ಹಲವು ರೀತಿಯಲ್ಲಿ ಅನುಕೂಲವಾಗಲಿದೆ.ಕೈಗಾರಿಕೆಗಳಿಗೆ ಅನುಕೂಲ: ರಾಜ್ಯದ ಉಕ್ಕು ಕಾರ್ಖಾನೆಗಳಿಗೆ ಕಚ್ಚಾ ವಸ್ತುಗಳಾದ ಖನಿಜ ಸಾಗಿಸಲು ವಾಡಿ-ತಂದೂರು, ಮೋಟುಮಾರಿ-ವಿಷ್ಣುಪುರಂ ಮಾರ್ಗದಲ್ಲಿನ ಅಭಿವೃದ್ಧಿಯಿಂದ ಹೆಚ್ಚಿನ ಅನುಕೂಲವಾಗಲಿದೆ. ಹೂಟಗಿ, ಕೂಡಗಿ, ಯಾದ್ಲಾಪುರ, ಬಳ್ಳಾರಿ ಮತ್ತು ಯರಮರಸ್‌ನಲ್ಲಿರುವ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಸಾಗಣೆ ಇನ್ನಷ್ಟು ವೇಗ ಮತ್ತು ಸುಲಭವಾಗಲಿದೆ.

ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ದಟ್ಟಣೆ ಕಡಿಮೆ: ವೈಟ್‌ಫೀಲ್ಡ್-ಬಂಗಾರಪೇಟೆ ನಡುವಿನ 47 ಕಿ.ಮೀ ಉದ್ದದ 3 ಮತ್ತು 4ನೇ ಮಾರ್ಗವು ಅತ್ಯಂತ ದಟ್ಟಣೆಯ ಮನ್ಮಾಡ-ಹುಬ್ಬಳ್ಳಿ-ಬೆಂಗಳೂರು-ಜೋಳರಪೇಟೆ ವಿಭಾಗದಡಿ ಬರುತ್ತದೆ. ಇದು ಬೆಂಗಳೂರು-ಚೆನ್ನೈ ನಡುವಿನ ರೈಲು ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡಿ, ಹೆಚ್ಚಿನ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಿದೆ.

ಪ್ರವಾಸೋದ್ಯಮ ಮತ್ತು ಸರಕು ಸಾಗಣೆಗೆ ಉತ್ತೇಜನ: ಹೊಸೂರು-ಓಮಲೂರು ಜೋಡಿ ಹಳಿ ಮಾರ್ಗದಿಂದ ಕನ್ಯಾಕುಮಾರಿ, ರಾಮೇಶ್ವರಂನಂತಹ ಪುಣ್ಯಕ್ಷೇತ್ರಗಳಿಗೆ ತೆರಳುವ ಲಕ್ಷಾಂತರ ಯಾತ್ರಿಕರಿಗೆ ಅನುಕೂಲವಾಗಲಿದೆ. ಜೊತೆಗೆ ಬೆಂಗಳೂರು ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ಸರಕು ಸಾಗಣೆಯೂ ವೇಗವಾಗಲಿದೆ.ಒಟ್ಟಾರೆಯಾಗಿ, ಈ ಯೋಜನೆಗಳು ಕೇವಲ ರೈಲು ಮಾರ್ಗಗಳ ವಿಸ್ತರಣೆಯಷ್ಟೇ ಅಲ್ಲ, ದೇಶದ ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಪ್ರಾದೇಶಿಕ ಸಂಪರ್ಕಕ್ಕೆ ಹೊಸ ಶಕ್ತಿ ತುಂಬಲಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

Continue Reading

ದಿನದ ಸುದ್ದಿ

ಡಿಕೆಶಿ ಸರ್ಕಾರಕ್ಕೆ 100 ದಿನಗಳ ಸಂಭ್ರಮ – `ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜು

Published

on

ಸೆ.10 ರಂದು ವಿಧಾನಸೌಧದಲ್ಲಿ ಶತದಿನೋತ್ಸವ ಸಮಾರಂಭ; ಮಾಜಿ ಸಿಎಂ ಸಿದ್ದರಾಮಯ್ಯರಿಂದ ಉದ್ಘಾಟನೆ, ಗ್ಯಾರಂಟಿ ಫಲಾನುಭವಿಗಳೊಂದಿಗೆ ಸಿಎಂ ಡಿ.ಕೆ. ಶಿವಕುಮಾರ್ ಸಂವಾದ

ಸುದ್ದಿದಿನ, ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ತನ್ನ ಆಡಳಿತದ 100 ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಶತಕದ ಸಂಭ್ರಮವನ್ನು ಆಚರಿಸಲು ರಾಜ್ಯ ಸರ್ಕಾರವು `ದೃಢ ಕರ್ನಾಟಕದ ಸಂಕಲ್ಪ – ಶತಕದ ಪಥ, ಪ್ರಗತಿಯ ರಥ’ ಎಂಬ ವಿಶೇಷ ಮತ್ತು ಅದ್ಧೂರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

 

ಈ ಕಾರ್ಯಕ್ರಮವು ನಾಳೆ ಅಂದರೆ 2026ನೇ ಸೆಪ್ಟೆಂಬರ್ 10ರ ಗುರುವಾರ ಬೆಳಿಗ್ಗೆ 10 ಗಂಟೆಗೆ ವಿಧಾನಸೌಧದ ಪ್ರತಿಷ್ಠಿತ ಬ್ಯಾಂಕ್ವೇಟ್ ಸಭಾಂಗಣದಲ್ಲಿ ನಡೆಯಲಿದೆ. ಸರ್ಕಾರದ ನೂರು ದಿನಗಳ ಸಾಧನೆ, ಜನಪರ ಯೋಜನೆಗಳ ಅನುಷ್ಠಾನ ಮತ್ತು ಮುಂದಿನ ಅಭಿವೃದ್ಧಿಯ ದೂರದೃಷ್ಟಿಯನ್ನು ಜನರ ಮುಂದಿಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಗಣ್ಯರ ದಂಡು, ಸಿದ್ದರಾಮಯ್ಯರಿಂದ ಉದ್ಘಾಟನೆ:

ಈ ಶತದಿನೋತ್ಸವ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಇದು ಕಾಂಗ್ರೆಸ್ ಪಕ್ಷದಲ್ಲಿನ ಒಗ್ಗಟ್ಟು ಮತ್ತು ನಾಯಕತ್ವದ ನಿರಂತರತೆಯನ್ನು ಸಂಕೇತಿಸುತ್ತದೆ.

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ಜಿ. ಪರಮೇಶ್ವರ್, ರಾಜ್ಯ ಸಂಪುಟದ ಎಲ್ಲಾ ಸಚಿವರು, ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ರಾಜ್ಯದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ಭಾಗವಹಿಸಲಿದ್ದಾರೆ. ಇದರ ಜೊತೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಸರ್ಕಾರದ ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ.

http://Visit : www.suddidina.com

ಫಲಾನುಭವಿಗಳೊಂದಿಗೆ ನೇರ ಸಂವಾದ – ಕಾರ್ಯಕ್ರಮದ ಪ್ರಮುಖ ಆಕರ್ಷಣೆ

ಈ ಕಾರ್ಯಕ್ರಮದ ಅತ್ಯಂತ ಪ್ರಮುಖ ಆಕರ್ಷಣೆ ಎಂದರೆ ಮುಖ್ಯಮಂತ್ರಿಗಳೊಂದಿಗೆ ಫಲಾನುಭವಿಗಳ ನೇರ ಸಂವಾದ. ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ, ಯುವನಿಧಿ ಮತ್ತು ಗೃಹಜ್ಯೋತಿ ಯೋಜನೆಗಳ ಫಲಾನುಭವಿಗಳು ಈ ವೇದಿಕೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

ಕೇವಲ ಗ್ಯಾರಂಟಿ ಯೋಜನೆಗಳಷ್ಟೇ ಅಲ್ಲದೆ, ಸಮಾಜದ ವಿವಿಧ ವರ್ಗಗಳ ಶ್ರಮಿಕರು ಮತ್ತು ಕಾರ್ಮಿಕರು ಕೂಡ ಈ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೃಷಿಕರು, ಆಟೋ ಚಾಲಕರು, ಹಮಾಲಿಗಳು, ಗಿಗ್ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪೌರಕಾರ್ಮಿಕರು ತಮ್ಮ ಬದುಕಿನಲ್ಲಿ ಸರ್ಕಾರದ ಯೋಜನೆಗಳಿಂದ ಆಗಿರುವ ಬದಲಾವಣೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಮುಕ್ತವಾಗಿ ಮಾತನಾಡಲಿದ್ದಾರೆ.

100 ದಿನಗಳಲ್ಲಿ ಸರ್ಕಾರವು ಕೈಗೊಂಡಿರುವ ಜನಪರ ನಿರ್ಧಾರಗಳು, ಅಭಿವೃದ್ಧಿ ಕಾಮಗಾರಿಗಳು ಮತ್ತು ಆಡಳಿತದಲ್ಲಿ ತಂದಿರುವ ಪಾರದರ್ಶಕತೆಯ ಬಗ್ಗೆ ಈ ವೇದಿಕೆಯಲ್ಲಿ ಚರ್ಚೆ ನಡೆಯಲಿದೆ. ಸರ್ಕಾರದ ಸಾಧನೆಗಳನ್ನು ಕೇವಲ ಭಾಷಣದ ಮೂಲಕವಲ್ಲ, ಬದಲಾಗಿ ಫಲಾನುಭವಿಗಳ ಬಾಯಿಂದಲೇ ಜನರಿಗೆ ತಲುಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ದಿನಗಳಲ್ಲಿ ದೃಢ ಕರ್ನಾಟಕ’ ನಿರ್ಮಾಣದ ನಿಟ್ಟಿನಲ್ಲಿ ಸರ್ಕಾರದ ಮುಂದಿನ 5 ವರ್ಷಗಳ ಕಾರ್ಯಯೋಜನೆ ಮತ್ತು ರೂಪುರೇಷೆಗಳನ್ನು ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಕಟಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

Continue Reading

Trending