Connect with us

ದಿನದ ಸುದ್ದಿ

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ದ್ವಿತೀಯ ಸ್ಥಾನದ ಗರಿಮೆ : ಜಿಲ್ಲಾಧಿಕಾರಿ ಶ್ಲಾಘನೆ

Published

on

ಸುದ್ದಿದಿನ,ಚಿಕ್ಕಬಳ್ಳಾಪುರ : 2021-22 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.95.23 ರಷ್ಟು ಫಲಿತಾಂಶ ಪಡೆಯುವ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯು ಶೇಕಡವಾರು ಹೆಚ್ಚು ಫಲಿತಾಂಶ ಪಡೆದ ಜಿಲ್ಲೆಗಳ ಪಟ್ಟಿಯಲ್ಲಿ ರಾಜ್ಯದಲ್ಲಿಯೇ ಎರಡನೇ ಸ್ಥಾನ ಗಳಿಸಿದ ಗರಿಮೆಗೆ ಭಾಜನವಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದ್ದಾರೆ.

ಜಿಲ್ಲೆಯ ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶದ ಸಾಧನೆ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು. ಈ ಬಾರಿ ಜಿಲ್ಲೆಯಲ್ಲಿ 15,817 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 15,063 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ರಾಜ್ಯ ಮಟ್ಟದಲ್ಲಿ “ಎ” ಗ್ರೇಡ್ ಪಡೆದಿದೆ. 5 ವಿದ್ಯಾರ್ಥಿಗಳು 625 ಅಂಕಗಳಿಗೆ 625 ಅಂಕಗಳನ್ನು ಪಡೆದಿದ್ದಾರೆ. ಉತ್ತೀರ್ಣರಾದ 15,063 ವಿದ್ಯಾರ್ಥಿಗಳ ಪೈಕಿ 7,572 ಬಾಲಕಿಯರು ಉತ್ತೀರ್ಣರಾಗುವ ಮೂಲಕ ಮೇಲುಗೈ ಸಾಧಿಸಿ, ಶೇ.96.48ರಷ್ಟು ಫಲಿತಾಂಶ ಗಳಿಸಿದ್ದಾರೆ. 7,491 ಬಾಲಕರು ಉತ್ತೀರ್ಣರಾಗಿದ್ದು, ಶೇ.94 ರಷ್ಟು ಫಲಿತಾಂಶ ಗಳಿಸಿದ್ದಾರೆ. ಸರ್ಕಾರಿ ಶಾಲೆಗಳು ಒಟ್ಟು ಶೇ.93.77, ಅನುದಾನಿತ ಶಾಲೆಗಳು ಶೇ.93.68 ಮತ್ತು ಅನುದಾನರಹಿತ ಶಾಲೆಗಳು ಶೇ.97.95ರಷ್ಟು ಫಲಿತಾಂಶವನ್ನು ಪಡೆದಿವೆ ಎಂದು ತಿಳಿಸಿದರು.

ಕೊಂಚ ಹಿನ್ನಡೆಯಿಂದ ಕೈ ತಪ್ಪಿದ 1ನೇ ಸ್ಥಾನ

2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿ ಮೊಟ್ಟ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಮಟ್ಟಿಗೆ ಐತಿಹಾಸಿಕ ದಾಖಲೆಯಾಗಿತ್ತು. 2020-21ನೇ ಸಾಲಿನಲ್ಲಿ 625 ಅಂಕಗಳಿಗೆ 625 ಅಂಕಗಳನ್ನೂ ಪಡೆದ ರಾಜ್ಯದ 157 ವಿದ್ಯಾರ್ಥಿಗಳ ಪೈಕಿ ಜಿಲ್ಲೆಯ 30 ವಿದ್ಯಾರ್ಥಿಗಳು ಸ್ಥಾನ ಕಾಯ್ದುಕೊಂಡು ಇಡೀ ರಾಜ್ಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಜಿಲ್ಲೆಯಾಗಿ ಹೊರಹೊಮ್ಮಿತ್ತು.

ರಾಜ್ಯಮಟ್ಟದಲ್ಲಿ ಕಳೆದ ಎರಡು ಬಾರಿಯು ಅತ್ಯುತ್ತಮ ಸಾಧನೆ ಮಾಡಿ ಹೊಸ ದಾಖಲೆಯನ್ನು ಬರೆಯುವ ಮೂಲಕ ಜಿಲ್ಲೆಯ ಶೈಕ್ಷಣಿಕ ಪ್ರಗತಿಯ ಮುನ್ನೋಟಕ್ಕೆ ದಿಕ್ಸೂಚಿಯಾಗಿತ್ತು. ಈ ಬಾರಿಯೂ ಪ್ರಥಮ ಸ್ಥಾನವನ್ನು ಪಡೆಯುವಲ್ಲಿ ಕೊಂಚ ಪ್ರಮಾಣ (ಶೇ.0.37) ದಲ್ಲಿ ಹಿನ್ನಡೆಯಾಗಿ ಕೈತಪ್ಪಿದ್ದರೂ ಸಹ ದ್ವಿತೀಯ ಸ್ಥಾನಕ್ಕೆ ಪಾತ್ರವಾಗಿರುವುದು ಹರ್ಷ ಉಂಟು ಮಾಡಿದೆ ಎಂದರು.

ಶುಭ ಹಾರೈಕೆ

ಕಳೆದ ಮೂರು ವರ್ಷಗಳಿಂದ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಮಹತ್ತರ ಬದಲಾವಣೆಯಾಗಿರುವುದಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ಜಿಲ್ಲೆಯ ಸಮಸ್ತ ಜನತೆಗೆ, ಜನಪ್ರತಿನಿಧಿಗಳಿಗೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕೃತಜ್ಞತೆ ತಿಳಿಸಿದರು ಹಾಗೂ ಉತ್ತೀರ್ಣರಾಗಿರುವ ಎಲ್ಲಾ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯುವತ್ತ ಗಮನ ಹರಿಸಿ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಎಂದು ಸಾಧಕ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಗಳು ಶುಭ ಹಾರೈಸಿದ್ದಾರೆ.

ತಾಲ್ಲೂಕುವಾರು ಫಲಿತಾಂಶ

ಗುಡಿಬಂಡೆ ತಾಲೂಕು ಶೇ.99.20 ಫಲಿತಾಂಶ ಗಳಿಸಿ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಶಿಡ್ಲಘಟ್ಟ ತಾಲೂಕು ಶೇ.97.06 ರಷ್ಟು ದ್ವಿತೀಯ ಸ್ಥಾನ ಪಡೆದುಕೊಂಡಿದೆ ನಂತರದ ಸ್ಥಾನಗಳನ್ನು ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಚಿಂತಾಮಣಿ ಮತ್ತು ಗೌರಿಬಿದನೂರು ತಾಲೂಕುಗಳು ಪಡೆದುಕೊಂಡಿವೆ.

ಜಿಲ್ಲಾಡಳಿತ ಹಲವು ರಚನಾತ್ಮಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಕಾಲ ಕಾಲಕ್ಕೆ ಸೂಕ್ತ ಮಾರ್ಗದರ್ಶನ ಮತ್ತು ಸೂಚನೆಗಳನ್ನು ನೀಡಿತ್ತು. ಅಲ್ಲದೇ ಜಿಲ್ಲೆಯ ಎಲ್ಲಾ ಶಿಕ್ಷಕರಿಗೂ ವಿಶೇಷ ಕಾರ್ಯಾಗಾರಗಳನ್ನು ಹಮ್ಮಿಕೊಂಡಿತ್ತು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆಯೊಂದಿಗೆ ಆತ್ಮಸ್ಥೈರ್ಯವನ್ನೂ ತುಂಬುವ ಕೆಲಸವನ್ನು ಆಗಾಗ್ಗೆ ಶಿಕ್ಷಕರು ಮತ್ತು ಅಧಿಕಾರಿಗಳ ಮುಖಾಂತರ ಮಾಡಲಾಗಿತ್ತು.

ಮಕ್ಕಳ ಜೊತೆಗೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡು ಎಲ್ಲಿಯೂ ಕಲಿಕಾ ಪ್ರಕ್ರಿಯೆ ಮತ್ತು ಪರೀಕ್ಷಾ ಸಿದ್ದತೆಗಳು ಕಡಿತಗೊಳ್ಳದಂತೆ ನಿಗಾ ವಹಿಸಲಾಗಿತ್ತು. ಗುಣಾತ್ಮಕ ಬೋಧನೆ, ವಾರದ ಮತ್ತು ಮಾಸಿಕ ಪರೀಕ್ಷೆ, ಬಹು ಆಯ್ಕೆ ಪ್ರಶ್ನೆಗಳುಳ್ಳ ಮಾದರಿ ಪರೀಕ್ಷೆ ಆಯೋಜನೆ, ಪಠ್ಯಾಧಾರಿತ ರಸಪ್ರಶ್ನೆ ಸ್ಪರ್ಧೆಗಳು ಮತ್ತು ಪೂರ್ವ ಸಿದ್ದತಾ ಪರೀಕ್ಷೆಗಳು ಹಾಗೂ ವಿಶೇಷ ಆಸಕ್ತಿವಹಿಸಿ ಜಿಲ್ಲಾಡಳಿತವೇ ಸರಳೀಕರಿಸಿ ಸಿದ್ಧಪಡಿಸಿದ ಪ್ರಶ್ನೋತ್ತರ ಸಾಮಗ್ರಿ (ಸ್ಟಡಿ ಮೆಟೇರಿಯಲ್) ವಿತರಣೆ ಸೇರಿದಂತೆ ಈ ಎಲ್ಲಾ ಪೂರ್ವ ಸಿದ್ಧತಾ ಕ್ರಮಗಳು ಹಾಗೂ ವಿದ್ಯಾರ್ಥಿಗಳಿಗೆ ನೀಡಿದ ಪ್ರೋತ್ಸಾಹದ ಫಲವಾಗಿ ಈ ಬಾರಿ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಫಲಿತಾಂಶ ಜಿಲ್ಲೆಗೆ ಬರಲು ಸಾಧ್ಯವಾಗಿರುವುದು ಹೆಮ್ಮೆಯ ವಿಚಾರ ಎಂದರು.

ಪರೀಕ್ಷೆ ಬರೆದ ಜಿಲ್ಲೆಯ ವಿದ್ಯಾರ್ಥಿಗಳ ಪೈಕಿ 3,506 ವಿದ್ಯಾರ್ಥಿಗಳು ಎ.ಪ್ಲಸ್ ಗ್ರೇಡ್, 4,638 ವಿದ್ಯಾರ್ಥಿಗಳು ‘ಎ’ಗ್ರೇಡ್, 3,589 ವಿದ್ಯಾರ್ಥಿಗಳು ‘ಬಿ’ ಪ್ಲಸ್ ಗ್ರೇಡ್, 2,223 ವಿದ್ಯಾರ್ಥಿಗಳು ‘ಬಿ’ ಗ್ರೇಡ್, 996 ವಿದ್ಯಾರ್ಥಿಗಳು ‘ಸಿ’ ಪ್ಲಸ್ ಗ್ರೇಡ್ ಹಾಗೂ 111 ವಿದ್ಯಾರ್ಥಿಗಳು ‘ಸಿ’ ಗ್ರೇಡ್ ಪಡೆದಿರುತ್ತಾರೆ. ಒಟ್ಟಾರೆಯಾಗಿ ಜಿಲ್ಲೆಗೆ ಶೇ.95.23 ರಷ್ಟು ಫಲಿತಾಂಶ ಬಂದಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಎಸ್ ಎಸ್ ಎಲ್ ಸಿ ಫಲಿತಾಂಶ | ಭರತ್ ಜಿ ರಾಜ್ಯಕ್ಕೆ ಪ್ರಥಮ ; ನನ್ನ ಕ್ಷೇತ್ರದ ವಿದ್ಯಾರ್ಥಿ ಸಾಧನೆಗೆ ಸಲ್ಯೂಟ್ ಶಾಸಕ ಕೆ.ಎಸ್.ಬಸವಂತಪ್ಪ ಹರ್ಷ

Published

on

ಸುದ್ದಿದಿನ,ದಾವಣಗೆರೆ:ಇವತ್ತು ನನಗೆ ಬಹಳ ಸಂತೋಷದ ದಿನ. ನನ್ನ ಕ್ಷೇತ್ರದ ಕಬ್ಬಳ ಗ್ರಾಮದ ಒಬ್ಬ ರೈತ ಕುಟುಂಬದಿಂದ ಬಂದ ಜಿ.ಭರತ್ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 625ಕ್ಕೆ 625 ಅಂಕ ಪಡೆದಿರುವುದು ನನಗೆ ಬಹಳ ಹೆಮ್ಮೆ ತಂದಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.

ಕಬ್ಬಳ ಗ್ರಾಮದ ವಿದ್ಯಾಲಕ್ಷ್ಮಿ ಶಾಲೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಜಿ.ಭರತ್ ಮತ್ತು ಪೋಷಕರನ್ನು ಅಭಿನಂದಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರದ ವಿದ್ಯಾರ್ಥಿ ಇಷ್ಟು ದೊಡ್ಡ ಸಾಧನೆ ಮಾಡಿರುವುದು ಸಂತಸದ ವಿಷಯ. ವಿದ್ಯಾ ಲಕ್ಷ್ಮಿ ಶಾಲೆಯವರು ಬಹಳ ಪ್ರಾಮಾಣಿಕವಾಗಿ ಮಕ್ಕಳ ಶಿಕ್ಷಣದ ಬಗ್ಗೆ ಆಸಕ್ತಿ ತೋರಿಸಿ ಅವರನ್ನು ಉನ್ನತ ಮಟ್ಟಕ್ಕೆ ತರಲು ಶ್ರಮಿಸಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು.

ನಮಗೆ ಮೊದಲ ಆದ್ಯತೆ ದೇಗುಲಗಳಿಗಿಂತ ಶಾಲೆಗಳಿಗೆ ಇರಬೇಕು. ಇಂತಹ ಶಾಲೆಯೆಂಬ ದೇಗುಲದಿಂದ ಹೊರ ಬರುವ ಭರತ್‌ನಂತಹ ಮಕ್ಕಳು ಮುಂದಿನ ದಿನಗಳಲ್ಲಿ ಈ ದೇಶದ ಉನ್ನತ ಅಧಿಕಾರಿಗಳಾಗಿ ಅಥವಾ ವಿಜ್ಞಾನಿಗಳಾಗಿ ಸೇವೆ ಸಲ್ಲಿಸುವಂತಾಗಲಿ ಎಂದು ಶುಭ ಹಾರೈಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಏ 25 ರಂದು ಅಗ್ರಿಕಲ್ಚರ್ ಪ್ರಾಕ್ಟಿಕಲ್ ಪರೀಕ್ಷೆಗೆ ಉಚಿತ ತರಬೇತಿ

Published

on

ಸುದ್ದಿದಿನ,ದಾವಣಗೆರೆ : ನಗರದ ಧವನ್ ಕಾಲೇಜಿನಲ್ಲಿ Viksit47 ಅಕಾಡೆಮಿ ವತಿಯಿಂದ ಉಚಿತ ತರಬೇತಿ ಕಾರ್ಯಗಾರವನ್ನು ಇದೇ 25 ರಂದು ಆಯೋಜಿಸಲಾಗಿದೆ ಎಂದು ಮುಖ್ಯಸ್ಥರಾದ ತೇಜಸ್ ಹೆಚ್.ಎನ್ ಅವರು ತಿಳಿಸಿದ್ದಾರೆ.

ವೆಟರ್ನರಿ, ಬಿಎಸ್ಸಿ ಕೃಷಿ, ಬಿಎಸ್ಸಿ ತೋಟಗಾರಿಕೆ ಮುಂತಾದ 12 ಕೋರ್ಸುಗಳ ಪ್ರವೇಶಕ್ಕೆ ಕೃಷಿಕರ ಕೋಟಾದ ಅಡಿಯಲ್ಲಿ ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ರೈತರ ಮಕ್ಕಳಿಗೆ 50% ಮೀಸಲಾತಿ ಇರುತ್ತದೆ,ಈ ಮೀಸಲಾತಿಯನ್ನು ಪಡೆಯಲು KCET ಪರೀಕ್ಷೆಯ ಜೊತೆಗೆ ಕೃಷಿ ವಿಶ್ವವಿದ್ಯಾಲಯಗಳಲ್ಲಿ ನಡೆಸುವ ಪ್ರಾಯೋಗಿಕ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ. ಈ ಉಚಿತ ಕಾರ್ಯಗಾರದಲ್ಲಿ ಅಗ್ರಿ ಪ್ರಾಕ್ಟಿಕಲ್ ಪರೀಕ್ಷೆಯ ಕುರಿತು ಸಂಪೂರ್ಣ ತರಬೇತಿಯನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ದ್ಬಿತೀಯ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಈ ಸದುಪಯೋಗ ಪಡಿಸಿಕೊಳ್ಳಬೇಕು. ಅಕ್ಕ ಪಕ್ಕದ ಜಿಲ್ಲೆಯ ವಿದ್ಯಾರ್ಥಿಗಳು ಸಹ ಇದರ ಸದುಪಯೋಗ ಪಡಿಸಿಕೊಳ್ಳಬಹುದು,ಮತ್ತು ಕಾಲೇಜುಗಳ ಆಡಳಿತ ಮಂಡಳಿಯವರು ತಮ್ಮ ವಿದ್ಯಾರ್ಥಿಗಳನ್ನು ಈ ಉಚಿತ ಕಾರ್ಯಗಾರದಲ್ಲಿ ಭಾಗವಹಿಸುವಂತೆ ವಿನಂತಿಸಿದ್ದಾರೆ.

ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಲು ಮೊಬೈಲ್ ನಂ: 8217413646 ಗೆ ಕರೆಮಾಡಲು ಸೂಚಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚನ್ನಗಿರಿ | ಎಸ್ ಎಸ್ ಎಲ್ ಸಿ ಫಲಿತಾಂಶ ; ಕಬ್ಬಳ ಶಾಲೆಯ ವಿದ್ಯಾರ್ಥಿ ಭರತ್ ಜಿ ರಾಜ್ಯಕ್ಕೆ ಟಾಪರ್

Published

on

ಸುದ್ದಿದಿನ,ದಾವಣಗೆರೆ: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಣಿವೆಬಿಳಚಿ ಗ್ರಾಮದ ವಿದ್ಯಾರ್ಥಿ ಭರತ್ ಜಿ. ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

625ಕ್ಕೆ 625 ಅಂಕಗಳನ್ನು ಪಡೆದ ಭರತ್ ಅವರು ಕಬ್ಬಳ ಗ್ರಾಮದ ವಿದ್ಯಾಲಕ್ಷ್ಮಿ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆಯ ವಿದ್ಯಾರ್ಥಿ. ರಾಜ್ಯದ ಇತರ ಐದು ವಿದ್ಯಾರ್ಥಿಗಳೊಂದಿಗೆ ಅಗ್ರಸ್ಥಾನವನ್ನು ಭರತ್ ಅವರು ಹಂಚಿಕೊಂಡಿದ್ದಾರೆ. ಭರತ್ ಅವರ ತಂದೆ ಗಿರೀಶ್ ಕೃಷಿ ಹಾಗೂ ಗುತ್ತಿಗೆ ದಾರರು, ತಾಯಿ ಶಿಲ್ಪ ಗೃಹಿಣಿ.

ಗ್ರಾಮೀಣ ಭಾಗದಿಂದ ಬಂದ ಭರತ್ ರಾಜ್ಯಕ್ಕೆ ಟಾಪರ್ ಆಗಿ ದೊಡ್ಡ ಸಾಧನೆ ಮಾಡಿದ್ದಾರೆ.ನಮ್ಮ ಶಾಲೆಯು ಎರಡು ಬಾರಿ ಜಿಲ್ಲೆಗೆ ಹಾಗೂ ಎರಡು ಬಾರಿ ತಾಲ್ಲೂಕಿಗೆ ಟಾಪ‌ರ್ ಆಗಿತ್ತು. ಇದೀಗ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಯು ನಿರಂತರವಾಗಿ ಸಾಧನೆ ಮಾಡುತ್ತಿದ್ದು ಈ ಬಾರಿಯೂ ಶೇ 100ರಷ್ಟು ಫಲಿತಾಂಶ ನೀಡಿದೆ ಎಂದು ಮುಖ್ಯ ಶಿಕ್ಷಕಿ ಲಕ್ಷ್ಮೀದೇವಿ ಎ.ಎನ್ ಹರ್ಷ ವ್ಯಕ್ತಪಡಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending