Connect with us

ದಿನದ ಸುದ್ದಿ

ರಾಜ್ಯ ಬಿಜೆಪಿ ನಾಯಕರು ಪ್ರಧಾನಿ ಭೇಟಿ ಮಾಡೋಕೇ ಹೆದರುತ್ತಾರೆ, ಇದೊಂದು ಮಹಾ ಪುಕ್ಕಲು ಸರ್ಕಾರ : ಸಿದ್ದರಾಮಯ್ಯ

Published

on

ಸುದ್ದಿದಿನ,ಬೆಂಗಳೂರು: ಕೊರೊನಾ ಸೋಂಕಿಗೆ ಒಳಗಾಗಿದ್ದ ನಾನು ಇದೀಗ ಸಂಪೂರ್ಣ ಗುಣಮುಖನಾಗಿದ್ದೇನೆ. ಕೊರೊನಾ ವಾಸಿಯಾಗದ ಕಾಯಿಲೆ ಏನಲ್ಲ. ಆದರೆ, ಮುಂಜಾಗ್ರತೆ ವಹಿಸುವುದು ಅವಶ್ಯಕ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಸ್ಕ್ ಮತ್ತು ಸ್ಯಾನಿಟೈಸರ್ ಅನ್ನು ಕಡ್ಡಾಯವಾಗಿ ಬಳಸಿದರೆ ಸೋಂಕು ತಗುಲುವುದರಿಂದ ದೂರವಿರಬಹುದು. ವೈದ್ಯರ ಸಲಹೆ ಮೇರೆಗೆ ನಾನು ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದೆ. ಇಂದಿನಿಂದ ಮತ್ತೆ ಸಕ್ರಿಯ ರಾಜಕಾರಣದಲ್ಲಿ ಭಾಗಿಯಾಗುತ್ತೇನೆ. ಮುಂದಿನ ವಾರ ಬಾದಾಮಿಗೆ ಸಹ ಭೇಟಿ ನೀಡುವವನಿದ್ದೇನೆ ಎಂದರು.

ರಾಜ್ಯಗಳ ಬಗ್ಗೆ ಕಾಳಜಿಯೇ ಇಲ್ಲದಿರುವ ಅತ್ಯಂತ ಕೆಟ್ಟ ಸರ್ಕಾರ ಕೇಂದ್ರದಲ್ಲಿದ್ದರೆ, ಅದನ್ನು ಪ್ರಶ್ನಿಸುವ ಧೈರ್ಯವಿಲ್ಲದ ಹೇಡಿ ಸರ್ಕಾರ ನಮ್ಮ ರಾಜ್ಯದಲ್ಲಿದೆ. ಬಿಜೆಪಿಯೇತರ ರಾಜ್ಯ ಸರ್ಕಾರಗಳು ಕೇಂದ್ರವು ಜಿಎಸ್‌ಟಿ ಪರಿಹಾರ ನೀಡದಿರುವ ನಿರ್ಧಾರವನ್ನು ವಿರೋಧ ಮಾಡಿವೆ. ರಾಜ್ಯ ಸರ್ಕಾರಕ್ಕೆ ಧೈರ್ಯವಿದ್ದರೆ ನೀವೇ ಸಾಲ ತೆಗೆದುಕೊಂಡು ನಮಗೆ ಜಿ.ಎಸ್.ಟಿ ಪರಿಹಾರ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಕೇಳಲಿ ಮತ್ತು ಸರ್ವ ಪಕ್ಷ ನಿಯೋಗ ಕೊಂಡೊಯ್ದು ಕೇಂದ್ರದ ಮೇಲೆ ಒತ್ತಡ ಹೇರಲಿ. ರಾಜ್ಯದ ಹಿತದೃಷ್ಟಿಯಿಂದ ಕೇಂದ್ರದ ಮೇಲೆ ಒತ್ತಡ ಹೇರುವ ಕೆಲಸವನ್ನು ರಾಜ್ಯ ಸರ್ಕಾರ ಈಗ ಮಾಡಬೇಕು ಎಂದು ಹೇಳಿದರು.

ಈ ವರ್ಷವೂ ಪ್ರವಾಹ ಬಂದಿದ್ದು 56 ತಾಲೂಕುಗಳ 1000 ಹಳ್ಳಿಗಳು ಪ್ರವಾಹದಿಂದ ಬಾಧಿಸಲ್ಪಟ್ಟಿದೆ. ಸುಮಾರು 1 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ, ಸಾವಿರಾರು ಮನೆಗಳು ಕುಸಿದುಬಿದ್ದಿವೆ, ಜಾನುವಾರುಗಳು ಸಾವಿಗೀಡಾಗಿವೆ. ರಾಜ್ಯ ಸರ್ಕಾರವೇ ಸುಮಾರು ರೂ.4 ಸಾವಿರ ಕೋಟಿಗಳಷ್ಟು ನಷ್ಟವಾಗಿದೆ ಎಂದಿದೆ.

ಕಳೆದ ಬಾರಿಯ ಪ್ರವಾಹ ಪರಿಹಾರ ಧನವನ್ನೇ ಕೇಂದ್ರ ಸರ್ಕಾರ ಸರಿಯಾಗಿ ಕೊಟ್ಟಿಲ್ಲ. ರೂ.35,000 ಕೋಟಿ ಪರಿಹಾರ ಕೇಳಿದ್ದರೆ ಬರೀ ರೂ.1800 ಕೋಟಿ ಪರಿಹಾರ ಮಾತ್ರ ಕೇಂದ್ರದಿಂದ ಬಂದಿದೆ. ಇನ್ನೂ ಹಲವೆಡೆ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಕೊಟ್ಟಿಲ್ಲ, ಹಳ್ಳಿಗಳ ಸ್ಥಳಾಂತರವಾಗಿಲ್ಲ, ಶಾಲೆಗಳ ಪುನರ್ ನಿರ್ಮಾಣ ಕಾರ್ಯವೂ ಆಗಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಯಡಿಯೂರಪ್ಪನವರು ಹೆಲಿಕಾಪ್ಟರ್ ಮೂಲಕ ಸರ್ವೇ ಮಾಡಿದರು, ಆದರೆ ಸರ್ಕಾರದ ಬೇರೆ ಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಜನರ ಬಳಿಗೆ ಹೋಗಿ ಅವರ ಕಷ್ಟ ಆಲಿಸಬೇಕೋ ಬೇಡವೋ? ಸಚಿವರಾದ ಅಶೋಕ್ ಅವರು ಕೇಂದ್ರದಿಂದ ಪರಿಹಾರ ಕೇಳಿದ್ದೇವೆ, ಅವರ ತಂಡ ಬಂದು ಸರ್ವೇ ಮಾಡಿ ಪರಿಹಾರ ನೀಡುತ್ತದೆ ಎನ್ನುತ್ತಾರೆ, ಆದರೆ ಅಧಿಕಾರಿಗಳು ಹೇಳುವ ಮಾತೇ ಬೇರೆ.

ಕೇಂದ್ರದ ವಿತ್ತ ಸಚಿವರನ್ನು ಭೇಟಿ ಮಾಡಿ ಮನವಿ ಕೊಟ್ಟು, ಪ್ರಧಾನಿಗಳ ಮನವೊಲಿಸಿ ಪರಿಹಾರ ಸಿಗುವವರೆಗೂ ಪಟ್ಟು ಬಿಡಬಾರದು. ನಮ್ಮ ಸರ್ಕಾರವಿದ್ದಾಗ ಪದೇ ಪದೇ ಪ್ರಧಾನಿಗಳನ್ನು ಭೇಟಿ ಮಾಡಿ ಪರಿಹಾರಕ್ಕಾಗಿ ಆಗ್ರಹಿಸುತ್ತಿದ್ದೆವು, ಆದರೆ ರಾಜ್ಯ ಬಿಜೆಪಿ ನಾಯಕರು ಪ್ರಧಾನಿಗಳನ್ನು ಭೇಟಿ ಮಾಡೋಕೇ ಹೆದರುತ್ತಾರೆ.ಇದೊಂದು ಮಹಾ ಪುಕ್ಕಲು ಸರ್ಕಾರ ಎಂದು ಕಿಡಿಕಾರಿದರು.

ಸಂಗೊಳ್ಳಿ ರಾಯಣ್ಣನ ಪ್ರತಿಮೆ ನಿರ್ಮಾಣ ವಿಚಾರದಲ್ಲಿ ರಾಜ್ಯ ಸರ್ಕಾರ ಬೇಗನೆ ಒಂದು ನಿರ್ಧಾರ ತೆಗೆದುಕೊಂಡಿದ್ದರೆ ಇಂದು ರಾಯಣ್ಣ ವರ್ಸಸ್ ಶಿವಾಜಿ, ಕನ್ನಡಿಗರು ವರ್ಸಸ್ ಮರಾಠಿಗರು ಎಂಬ ಪರಿಸ್ಥಿತಿಯೇ ನಿರ್ಮಾಣವಾಗುತ್ತಿರಲಿಲ್ಲ. ಸರ್ಕಾರದ ನಿರ್ಲಕ್ಷ ಧೋರಣೆಯೇ ಇಂದಿನ ರಾಯಣ್ಣ ಪ್ರತಿಮೆ ವಿವಾದಕ್ಕೆ ನೇರ ಕಾರಣ.

ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿಯವರಿಗೆ 2 ಬಾರಿ ಕರೆ ಮಾಡಿ ಮಾತನಾಡಿದ್ದೇನೆ. ರಾಯಣ್ಣನಂಥ ಮಹಾನ್ ವ್ಯಕ್ತಿಗಳ ವಿಚಾರವನ್ನು ವಿವಾದ ಮಾಡಿಕೊಳ್ಳುವುದೇ ದೊಡ್ಡ ತಪ್ಪು. ಸರ್ಕಾರ ನಿನ್ನೆ ಮಾಡಿದ ಕೆಲಸವನ್ನು ಮೊದಲೇ ಮಾಡಿದ್ದರೆ ರಾಯಣ್ಣನ ಪ್ರತಿಮೆ ನಿರ್ಮಾಣದ ವಿಚಾರ ವಿವಾದವೇ ಆಗುತ್ತಿರಲಿಲ್ಲ.

ಶಿವಾಜಿಯೂ ಸ್ವಾತಂತ್ರ್ಯ ಹೋರಾಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಶಿವಾಜಿಯಂತೆ ರಾಯಣ್ಣ ಕೂಡ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರು. ಇಬ್ಬರೂ ಗೌರವಕ್ಕೆ ಸಮಾನ ಅರ್ಹರು. ಇಂತಹಾ ಮಹಾನ್ ವ್ಯಕ್ತಿಗಳ ಮಧ್ಯೆ ಸಂಘರ್ಷ ಉಂಟಾಗಲು ಸರ್ಕಾರ ಅವಕಾಶ ಮಾಡಿಕೊಡಬಾರದು. ಈ ಹೋರಾಟದಲ್ಲಿ ದಾಖಲಾದ ಎಲ್ಲರ ಮೇಲಿನ ಮೊಕದ್ದಮೆಗಳನ್ನು ತಕ್ಷಣವೇ ಸರ್ಕಾರ ವಾಪಾಸು ಪಡೆಯಬೇಕು ಎಂದು ಒತ್ತಾಯಿಸಿದರು.

ಟಿಪ್ಪು ಸುಲ್ತಾನ್ ವಿಚಾರದಲ್ಲಿ ವಿಧಾನ ಪರಿಷತ್ ಸದಸ್ಯರಾದ ವಿಶ್ವನಾಥ್ ಅವರು ಸತ್ಯವನ್ನೇ ಹೇಳಿದ್ದಾರೆ. ಅವರು ಸತ್ಯಕ್ಕೆ ಸಮರ್ಥನೆ ನೀಡುವ ಅಗತ್ಯವೇ ಇಲ್ಲ. ತಮ್ಮ ಹೇಳಿಕೆಗೆ ಮುಂದೆಯೂ ಬದ್ಧರಾಗಿದ್ದರೆ ಸಾಕು. ಹಾಗೆಯೇ ಟಿಪ್ಪು ಈ ಮಣ್ಣಿನ ಮಗ ಎಂಬುದನ್ನು ಬಿಜೆಪಿಯವರು ಒಪ್ಪಿಕೊಳ್ಳಲಿ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ

Published

on

ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್‌ಲೈನ್ ರಸ್ತೆಯಲ್ಲಿ ನಡೆದಿದೆ.

23 ವರ್ಷದ ಅಂಜಲಿ ಕೊಲೆಯಾದ ಯುವತಿಯಾಗಿದ್ದು, ರಾಜೀವ್ ಬಂಧಿತ ಆರೋಪಿ. ಕಳೆದ ಮೂರು-ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಪರಿಚಯವಾಗಿ ಸ್ನೇಹ ಬೆಳೆದು, ಬಳಿಕ ಅದು ಪ್ರೀತಿಗೆ ತಿರುಗಿತ್ತು.

ಆದರೆ ರಾಜೀವ್‌ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ ಅಂಜಲಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಕುಟುಂಬಸ್ಥರನ್ನು ಒಪ್ಪಿಸಲು ರಾಜೀವ್ ಪ್ರಯತ್ನಿಸಿದ್ದರೂ ಫಲಿಸಿರಲಿಲ್ಲ. ಇತ್ತೀಚೆಗೆ ಪೋಷಕರ ಒತ್ತಾಯಕ್ಕೆ ಮಣಿದ ಅಂಜಲಿ ರಾಜೀವ್‌ನಿಂದ ದೂರವಾಗಲು ಆರಂಭಿಸಿದ್ದಳು. ಇಂದು ಸಂಜೆ ಅಂಜಲಿಯನ್ನು ಊಟದ ನೆಪದಲ್ಲಿ ಕರೆಸಿಕೊಂಡಿದ್ದ ರಾಜೀವ್, ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ರಾಜೀವ್ ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಇರಿದಿದ್ದಾನೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃ*ತಪಟ್ಟಿದ್ದಾಳೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್‌ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್‍ ಆಹ್ವಾನ

Published

on

ಸುದ್ದಿದಿನ ಡೆಸ್ಕ್:ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಸಂಸ್ಥೆಯಡಿ ಪ್ರಿಯಾ ಸುದೀಪ್‍ ನಿರ್ಮಿಸಿದ ಮೊದಲ ಚಿತ್ರ ‘ಮ್ಯಾಂಗೋ ಪಚ್ಚ’. ಸಂಚಿತ್‍ ಸಂಜೀವ್‍ ಅಭಿನಯದ ಈ ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ.

ಈ ಸೋಲನ್ನು ಹಿಂದಕ್ಕೆ ಹಾಕಿ, ಪ್ರಿಯಾ ಸುದೀಪ್‍ ಇನ್ನಷ್ಟು ಹೊಸ ಕಥೆಗಳನ್ನು ತೆರೆಗೆ ತರುವುದಕ್ಕೆ, ಹೊಸ ಚಿತ್ರಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಕಥೆಗಾರರಿಗೆ ಆಹ್ವಾನ ನೀಡಿದ್ದಾರೆ. ‘ನಾವು ಹುಡುಕುತ್ತಿರುವುದು ಕೇವಲ ಕಥೆಗಳಲ್ಲ. ಮನಸ್ಸುಗಳನ್ನು ಮುಟ್ಟುವ ಭಾವನೆಗಳು, ಚಿಂತನೆಗೆ ಹಚ್ಚುವ ವಿಚಾರಗಳು ಮತ್ತು ಪರದೆಯ ಮೇಲೆ ಹೊಸ ಇತಿಹಾಸ ಬರೆಯುವ ಕಲ್ಪನೆಗಳು.

ನಿಮ್ಮ ಬಳಿ ಮೌಲಿಕ ಕಥೆ-ಚಿತ್ರಕಥೆ ಇದ್ದರೆ ಅಥವಾ ವಿಶಿಷ್ಟ ಕಥಾ ಪರಿಕಲ್ಪನೆ ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಮತ್ತು ಸೃಜನಾತ್ಮಕತೆಯನ್ನು ಹೊಂದಿರುವ ಲೇಖಕರು, ಕಥೆಗಾರರು ಮತ್ತು ಸೃಜನಶೀಲ ಮನಸ್ಸುಗಳನ್ನು ನಾವು ಸ್ವಾಗತಿಸುತ್ತೇವೆ. ಎಲ್ಲಾ ಪ್ರಕಾರಗಳು ಮತ್ತು ಎಲ್ಲಾ ಮಾದರಿಗಳಲ್ಲಿನ ಕಥಾ ಸಲ್ಲಿಕೆಗಳನ್ನು ನಾವು ಸ್ವಾಗತಿಸುತ್ತೇವೆ. ನಿಮ್ಮ ಕಥೆಯೇ ಮುಂದಿನ ದೊಡ್ಡ ಪ್ರಯಾಣದ ಆರಂಭವಾಗಬಹುದು’ ಎಂದು ಪ್ರಿಯಾ ಸುದೀಪ್‍, ಸೋಷಿಯಲ್‍ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಜೊತೆಗೆ ಒಂದು ಮೊಬೈಲ್‍ ಸಂಖ್ಯೆಯನ್ನು ಸಹ ಹಂಚಿಕೊಂಡಿದ್ದಾರೆ. ಆದರೆ, ಕರೆ ಮಾಡುವಂತಿಲ್ಲ. ಚಾಟ್‍ ಮಾತ್ರ ಮಾಡಬಹುದು. ಕಥೆಗಳಿದ್ದರೆ 6663307434 ಸಂಖ್ಯೆಯನ್ನು ಸಂಪರ್ಕಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದುರಂತ | ಮೇಲ್ಛಾವಣಿ ಕುಸಿದು ಮೂವರು ಸಾವು

Published

on

ಸುದ್ದಿದಿನ,ರಾಯಚೂರು: ಕಟ್ಟಡದ ಮೇಲ್ಛಾವಣಿಯ ಸಜ್ಜಾ ಏಕಾಏಕಿ ಕುಸಿದು ಬಿದ್ದು ಮೂವರು ಯುವಕರು ಮೃತಪಟ್ಟ ದುರ್ಘಟನೆ ಭಾನುವಾರ ಜಿಲ್ಲೆಯ ದೇವದುರ್ಗ ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪ ಸಂಭವಿಸಿದೆ.

ಮೃತರನ್ನು ದೇವದುರ್ಗ ತಾಲೂಕಿನ ಸಮುದ್ರ ಗ್ರಾಮದ ರವಿಚಂದ್ರ (35), ಕ್ಯಾದಿಗೆರಾ ಗ್ರಾಮದ ನಾಗರಾಜ್ (30) ಹಾಗೂ ಕೊತ್ತಿಗುಡ್ಡದ ಅರ್ಜುನ್ (21) ಎಂದು ಗುರುತಿಸಲಾಗಿದೆ.

ಕಟ್ಟಡದ ಅವಶೇಷಗಳಡಿ ಸಿಲುಕಿ ರವಿಚಂದ್ರ ಹಾಗೂ ನಾಗರಾಜ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅರ್ಜುನ್‌ ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಾಹಿತಿಯ ಪ್ರಕಾರ, ಯುವಕರು ತಾವೇ ನಿರ್ಮಿಸಿದ್ದ ‘ಅಂತ್ಯವಾಯ್ತು’ ಎಂಬ ಕಿರುಚಿತ್ರದ ಪೋಸ್ಟರ್ ಅಂಟಿಸಲು ಕಟ್ಟಡದ ಬಳಿ ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ.

ಕಟ್ಟಡದ ಮೇಲ್ಛಾವಣಿಯ ಒಂದು ಭಾಗವು, ಅದಕ್ಕೆ ಜೋಡಣೆಯಾಗಿದ್ದ ಕಬ್ಬಿಣದ ಮೆಟ್ಟಿಲುಗಳ ಸಹಿತ ಕುಸಿದು ಬಿದ್ದಿದೆ. ಘಟನೆಯಲ್ಲಿ ಉಮೇಶ್, ಪ್ರಭು ಹಾಗೂ ಅಭಿಷೇಕ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಘಟನಾ ಸ್ಥಳಕ್ಕೆ ದೇವದುರ್ಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯ ನಂತರ ನಿಖರ ಕಾರಣ ತಿಳಿಯಲಿದೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ದೇವದುರ್ಗ ಶಾಸಕಿ ಕರೆಮ್ಮ ನಾಯಕ ಭೇಟಿ ನೀಡಿ, ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending