Connect with us

ದಿನದ ಸುದ್ದಿ

ನೈತಿಕ ಪೊಲೀಸ್‍ಗಿರಿಗೆ ಅವಕಾಶ ಇಲ್ಲ ; ಸಿ.ಎಂ. ಸಿದ್ದರಾಮಯ್ಯ ಎಚ್ಚರಿಕೆ

Published

on

ಸುದ್ದಿದಿನ,ದಾವಣಗೆರೆ : ಪ್ರಜಾಪ್ರಭುತ್ವದಲ್ಲಿ ಜನರೇ ಮಾಲಿಕರಾಗಿದ್ದು ಜನರ ಆಶೋತ್ತರಗಳಿಗೆ ಸ್ಪಂಧಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸೂಚನೆ ನೀಡಿದರು.

ಅವರು ಸೋಮವಾರ ದಾವಣಗೆರೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಿದರು. ಜನ ಬದಲಾವಣೆ ಬಯಸಿದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸದೇ ಉಡಾಫೆ, ಅಸಡ್ಡೆ ಮಾಡುವ ಅಧಿಕಾರಿಗಳಿಗೆ ಜಾಗವಿಲ್ಲ, ಅವರ ಮೇಲೆ ಯಾರದೂ ಮುಲಾಜಿಲ್ಲದೇ ನಿರ್ಧಾಕ್ಷೀಣ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಅಧಿಕಾರಿಗಳು ಜನಪ್ರತಿನಿಧಿಗಳ ಜೊತೆ ಉತ್ತಮವಾದ ಸಂಬಂಧ ಇಟ್ಟುಕೊಳ್ಳಬೇಕು. ಅವರು ಪ್ರತಿನಿಧಿ, ಅಧಿಕಾರಿಗಳು ಜನ ಸೇವಕರು, ಜನರ ಕಷ್ಟ, ಸುಖಕ್ಕೆ ಸ್ಪಂದಿಸುವ ಕೆಲಸ ಮಾಡಬೇಕು. ಆದರೆ ವಿಳಂಬ ಮಾಡಬಾರದು. ವಿಳಂಬ ಮಾಡುವುದು ಸಹ ಒಂದು ರೀತಿಯ ಭ್ರಷ್ಟಾಚಾರ ಮಾಡಿದಂತೆ. ಜಿಲ್ಲಾ ಮಟ್ಟದಲ್ಲಿ ಜನಸ್ನೇಹಿ ಆಡಳಿತ ಇರಬೇಕು. ಜನರು ಕಚೇರಿಗಳಿಗೆ ಬಂದಾಗ ಗೌರವಯುತವಾಗಿ ನಡೆದುಕೊಂಡು, ಕಷ್ಟಗಳಿಗೆ ಪರಿಹಾರ ಮಾಡುವುದಲ್ಲದೇ ಜನರ ಜೊತೆ ಸೌಜನ್ಯಯುತವಾಗಿ ನಡೆದುಕೊಳ್ಳಬೇಕು ಎಂದರು.

ದಾವಣಗೆರೆ ಜಿಲ್ಲೆ ಇನ್ನಷ್ಟು ಪ್ರಗತಿ

ದಾವಣಗೆರೆ ಜಿಲ್ಲೆ ಬಹಳ ಪ್ರಗತಿ ಪರವಾದ ಜಿಲ್ಲೆಯಾಗಿದ್ದು ಇನ್ನಷ್ಟು ಪ್ರಗತಿ ಕಾಣಬೇಕಾಗಿದೆ. ಜಿಲ್ಲೆಯ ಅಭಿವೃದ್ದಿಯಲ್ಲಿ ವಿವಿಧ ಇಲಾಖೆಗಳ ಪಾತ್ರ ಬಹಳ ಪ್ರಮುಖವಾಗಿದೆ. ತಹಶೀಲ್ದಾರರ ಕಚೇರಿ ಜನರಿಗೆ ಹೆಚ್ಚು ಸೇವೆ ಕೊಡುವ ಕಚೇರಿಯಾಗಿದ್ದು ಇಲ್ಲಿ ಲಂಚಗುಳಿತನ, ಅಲೆದಾಡಿಸುವುದು ಹೆಚ್ಚಿದೆ ಎಂಬ ದೂರುಗಳಿವೆ, ಇದಕ್ಕೆ ಅವಕಾಶ ನೀಡುವುದಿಲ್ಲ. ತಹಶೀಲ್ದಾರ್ ಕಚೇರಿ, ಪೊಲೀಸ್ ಸ್ಟೇಷನ್, ತಾಲ್ಲೂಕು ಪಂಚಾಯತ್, ಕೃಷಿ, ರೇಷ್ಮೆ, ತೋಟಗಾರಿಕೆ, ಸಮಾಜ ಕಲ್ಯಾಣ ಸೇರಿದಂತೆ ಇಲಾಖೆಗಳು ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದರು.

ಅಧಿಕಾರಿಗಳ ಕ್ಷೇತ್ರ ಭೇಟಿಗೆ ಸೂಚನೆ

ಜಿಲ್ಲಾಧಿಕಾರಿ ತಹಶೀಲ್ದಾರರ ಕಚೇರಿಗೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗಳಿಗೆ, ಆಸ್ಪತ್ರೆಗಳಿಗೆ ಭೇಟಿ ನೀಡಬೇಕು. ಇದರಿಂದ ಕೆಳಗಿನ ಅಧಿಕಾರಿಗಳು ಜಾಗೃತರಾಗುವರು. ಅಧಿಕಾರಿಗಳು ತಮ್ಮ ಜವಾಬ್ದಾರಿ, ಕರ್ತವ್ಯವನ್ನು ಸಮಾಜದ ಅಭಿವೃದ್ದಿಗಾಗಿ ಮಾಡಬೇಕು. ಮೇಲಾಧಿಕಾರಿಗಳು ಪದೇ ಪದೇ ಭೇಟಿ ನೀಡಿ ಕೆಲಸ ಕಾರ್ಯಗಳ ಪರಿಶೀಲನೆ, ಉಸ್ತುವಾರಿ ಮಾಡಲಿಲ್ಲವೆಂದರೆ ಭ್ರಷ್ಟಾಚಾರ ಕಡಿಮೆಯಾಗುವುದಿಲ್ಲ. ಜಿಲ್ಲಾ ಮಟ್ಟದ ಆಡಳಿತ ಸದಾ ಪಾರದರ್ಶಕವಾಗಿರಬೇಕು ಎಂದರು.

ದೂರುಗಳಿಗೆ ಪ್ರತಿಕ್ರಿಯಿಸಿ

ಪತ್ರಿಕೆಗಳು, ಟಿ.ವಿ.ಗಳಲ್ಲಿ ಮತ್ತು ಸಾರ್ವಜನಿಕರಿಂದ ಬರುವ ದೂರುಗಳಿಗೆ ತಕ್ಷಣ ಸ್ಪಂದಿಸುವ ಕೆಲಸ ಮಾಡಬೇಕು. ಅನೇಕ ಅಧಿಕಾರಿಗಳು ಕ್ಷೇತ್ರಗಳಿಗೆ ಹೋಗದೆ ಹವಾನಿಯಂತ್ರಿತ ಕೊಠಡಿಗಳಲ್ಲಿ ಕೂತು ಹೋಗುತ್ತಾರೆ. ಸರ್ಕಾರ ವಾಹನ ಸೇರಿದಂತೆ ಎಲ್ಲಾ ಸೌಲಭ್ಯ ನೀಡಿದ್ದು ಐಷರಾಮಿ ಜೀವನ ಮಾಡಲಿ ಎಂದಲ್ಲ, ಜನರ ಕೆಲಸ ಮಾಡಲಿ ಎಂದು, ತಮ್ಮ ಅಧಿಕಾರ ದುರುಪಯೋಗ ಮಾಡಿಕೊಳ್ಳದೇ ಜನರ ಕೆಲಸ ಮಾಡಬೇಕೆಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು ಎಂದರು.

ಪೂರ್ವ ಮುಂಗಾರು ನಷ್ಟ ಪರಿಹಾರ

ಪೂರ್ವ ಮುಂಗಾರಿನಲ್ಲಿ ಬಿದ್ದ ಅಕಾಲಿಕ ಮಳೆಯಿಂದಾಗಿ ರಾಜ್ಯದಲ್ಲಿ ಸುಮಾರು 20 ಸಾವಿರ ಹೆಕ್ಟೇರ್ ಬೆಳೆಗಳಿಗೆ ಹಾನಿಯಾಗಿದ್ದು ಇದಕ್ಕೆ ಎಸ್.ಡಿ.ಆರ್.ಎಫ್ ಮಾರ್ಗಸೂಚಿಯನ್ವಯ ಪರಿಹಾರಕ್ಕೆ ಕೇಂದ್ರ ಸರ್ಕಾರಕ್ಕೆ ವರದಿ ಕಳುಹಿಸಲಾಗುತ್ತದೆ ಎಂದರು.

ಜೂನ್ 9 ರಿಂದ ಮುಂಗಾರು ಪ್ರವೇಶ; ಇದೇ ಜೂನ್ 9 ರಿಂದ ರಾಜ್ಯದಲ್ಲಿ ಮುಂಗಾರು ಮಳೆ ಪ್ರವೇಶಿಸುವ ಮುನ್ಸೂಚನೆ ಇದ್ದು ಕೃಷಿ ಚಟುವಟಿಕೆಗಳು ಹೆಚ್ಚಾಗಲಿವೆ. ಈ ವೇಳೆ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಜಂಟಿ ಕೃಷಿ ನಿರ್ದೇಶಕರು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಬಿತ್ತನೆ ಬೀಜ, ರಸಗೊಬ್ಬರ, ರಾಸಾಯಿನಿಕಗಳ ದಾಸ್ತಾನಿನ ಬಗ್ಗೆ ನಿಗಾವಹಿಸಬೇಕು. ಇದೇ ವೇಳೆ ಪ್ರವಾಹ ತಡೆಗೂ ಪೂರ್ವ ಸಿದ್ದತಾ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು ಎಂದರು.

ನೈತಿಕ ಪೊಲೀಸ್‍ಗಿರಿಗೆ ಅವಕಾಶ ಇಲ್ಲ

ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾ ರಕ್ಷಣಾಧಿಕಾರಿಯವರು ಕ್ರಮ ಕೈಗೊಳ್ಳಬೇಕು. ಸಮಾಜದಲ್ಲಿ ಅಶಾಂತಿ ಉಂಟು ಮಾಡುವವರ ಮೇಲೆ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಯಾವುದೇ ದೂರು ಬಾರದಂತೆ ನೋಡಿಕೊಳ್ಳಬೇಕು. ಆದರೆ ಯಾವುದೇ ನೈತಿಕ ಪೊಲೀಸ್‍ಗಿರಿಗೆ ಅವಕಾಶ ಇರಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಲ್ಲಿಕಾರ್ಜುನ್; ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಜಿಲ್ಲಾ ಮಂತ್ರಿಯಾಗುತ್ತಾರೆ. ಅವರು ಸುಧೀರ್ಘವಾಗಿ ಕೆಡಿಪಿ ಸಭೆಗಳನ್ನು ನಡೆಸುವರು. ಈ ವೇಳೆ ಜಿಲ್ಲೆಯ ಶಾಸಕರುಗಳು ಚರ್ಚಿಸಿ ಜಿಲ್ಲೆಯಲ್ಲಿ ಈ ಹಿಂದೆ ಏನಾಗಿತ್ತು, ಮುಂದೆ ಏನಾಗಬೇಕೆಂದು ಜಿಲ್ಲೆಯ ಅಭಿವೃದ್ದಿ ಕುರಿತು ಚರ್ಚೆ ಮಾಡಿ ಎಂದು ಸಲಹೆ ನೀಡಿದರು.

ಸ್ಮಾರ್ಟ್ ಸಿಟಿ ಕಾಮಗಾರಿ ಹಣ ಪಾವತಿ ತಡೆಯಿರಿ

ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಮಾತನಾಡಿ ದಾವಣಗೆರೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿಗಳು ನಡೆಯುತ್ತಿದ್ದು ಕೆಲವು ಕಡೆ ಅವೈಜ್ಞಾನಿಕವಾಗಿ ಮತ್ತು ಗುಣಮಟ್ಟದ ಕೊರತೆಯುಳ್ಳ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

ಈ ಕಾಮಗಾರಿಗಳನ್ನು ಪರಿಶೀಲಿಸುವವರೆಗೂ ಗುತ್ತಿಗೆದಾರರಿಗೆ ಹಣ ಪಾವತಿ ಮಾಡದೆ ತಡೆಹಿಡಿಯಲು ಸೂಚಿಸಿದ ಸಚಿವರು ಕೊಡಗನೂರು ಕೆರೆ ಕಳೆದ ಮುಂಗಾರಿನಲ್ಲಿ ಏರಿ ಕುಸಿದಿದ್ದು ಮೂರು ಭಾರಿ ಇದೇ ರೀತಿಯಾಗಿದೆ. ಆದರೆ ರಿಪೇರಿಗೆಂದು ಕೋಟ್ಯಾಂತರ ರೂ.ಗಳನ್ನು ವ್ಯಯ ಮಾಡಿದ್ದರೂ ಗುಣಮಟ್ಟದ ಕಾಮಗಾರಿ ಮಾಡಿಲ್ಲ, ಕೂಲಂಕುಷವಾಗಿ ಪರಿಶೀಲಿಸಲು ಜಿಲ್ಲಾಧಿಕಾರಿಗೆ ತಿಳಿಸಿದರು.

ಮಾಯಕೊಂಡ ಕ್ಷೇತ್ರದ ಶಾಸಕರಾದ ಕೆ.ಎಸ್.ಬಸವಂತಪ್ಪ ಮಾತನಾಡಿ ಇಂದಿರಾ ಕ್ಯಾಂಟಿನ್‍ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಇಎಸ್‍ಐ, ಪಿ.ಎಫ್ ಪಾವತಿಸಿಲ್ಲ, ಸಂಬಂಧಿಸಿದ ಏಜೆನ್ಸಿಯವರು ಪಾವತಿಸಲು ಕ್ರಮ ಕೈಗೊಳ್ಳಲು ತಿಳಿಸಿದರು.

ಹೊನ್ನಾಳಿ ಶಾಸಕರಾದ ಜಿ.ಡಿ.ಶಾಂತನಗೌಡ ರವರು ಹೊನ್ನಾಳಿಯಲ್ಲಿ ಇಂದಿರಾ ಕ್ಯಾಂಟಿನ್ ಆರಂಭವಾಗಿಲ್ಲ, ಆರಂಭಿಸಲು ಕ್ರಮ ಕೈಗೊಳ್ಳಲು ಮತ್ತು ನೆರೆ ಹಾವಳಿಯಿಂದ ಮನೆ ಬಿದ್ದವರನ್ನು ಸರಿಯಾಗಿ ಗುರುತಿಸದೇ ಕೈಬಿಡಲಾಗಿದ್ದು ಪರಿಶೀಲಿಸಿ ಪರಿಹಾರ ಒದಗಿಸಲು ಮನವಿ ಮಾಡಿದರು.

ಜಿಲ್ಲಾಧಿಕಾರಿ ಶಿವಾನಂದ ಕಾಪಶಿಯವರು ಜಿಲ್ಲೆಯ ಅಂಕಿ ಅಂಶಗಳ ಕುರಿತು ಸವಿವರವಾದ ಮಾಹಿತಿ ಪ್ರಸ್ತುತಪಡಿಸಿದರು.
ಉನ್ನತ ಶಿಕ್ಷಣ ಸಚಿವರಾದ ಎಂ.ಸಿ.ಸುಧಾಕರ್, ಚನ್ನಗಿರಿ ಶಾಸಕರಾದ ಬಸವರಾಜ ವಿ.ಶಿವಗಂಗ, ಜಗಳೂರು ಶಾಸಕರಾದ ಡಿ.ದೇವೇಂದ್ರಪ್ಪ, ಹರಿಹರ ಶಾಸಕರಾದ ಬಿ.ಪಿ.ಹರೀಶ್, ಹರಪನಹಳ್ಳಿ ಶಾಸಕರಾದ ಲತಾ ಮಲ್ಲಿಕಾರ್ಜುನ್, ಮೇಯರ್ ವಿನಾಯಕ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಡಾ; ಅರುಣ್.ಕೆ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದುರ್ಗಾಂಬಿಕಾದೇವಿ ಜಾತ್ರೆ ; ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆ

Published

on

ಸುದ್ದಿದಿನ,ದಾವಣಗೆರೆ:ಫೆಬ್ರವರಿ 23 ರಿಂದ 27 ರವರೆಗೆ ನಡೆಯುವ ದುರ್ಗಾಂಬಿಕಾದೇವಿ ಜಾತ್ರೆ ಪ್ರಯಕ್ತ ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ದೊಡ್ಡಪೇಟೆಯ ನಾಮದೇವ ಸಿಂಪಿ ಕಲ್ಯಾಣ ಮಂಟಪ, ವಿರಕ್ತಮಠ ಮತ್ತು ನಗರ ಕುಟುಂಬ ಕಲ್ಯಾಣ ಕೇಂದ್ರ-1, ಎಸ್.ಕೆ.ಪಿ ರಸ್ತೆಯ ಎಸ್.ವಿ.ಎಸ್.ಶಾಲೆ ಮತ್ತು ಕನ್ನಿಕಾಪರಮೇಶ್ವರಿ ದೇವಸ್ಥಾನ ಸಂಘ, ಮಾರ್ಕಂಡೇಶ್ವರ ಕಲ್ಯಾಣ ಮಂಟಪ, ಈ ಸ್ಥಳಗಳಲ್ಲಿರುವ ಶೌಚಾಲಯಗಳನ್ನು ಉಪಯೋಗಿಸುವ ಮೂಲಕ ದೇವಾಲಯದ ಸುತ್ತಮುತ್ತಲಿನ ಆವರಣವನ್ನು ಸ್ವಚ್ಚವಾಗಿಡಲು ಸಹಕರಿಸಬೇಕೆಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ : ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ -2025ಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನಗಳಿಗೆ ಆಕ್ಷೇಪಣೆ, ತಕರಾರು ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ.

ತಿರಸ್ಕೃತಗೊಂಡ ಅರ್ಜಿಗಳ ಅಭ್ಯರ್ಥಿಗಳ ಆಕ್ಷೇಪಣೆಗಳಿದ್ದಲ್ಲಿ, ಮಾರ್ಚ್ 13 ರೊಳಗೆ ನಿಗದಿಪಡಿಸಿದ ದಿನಾಂಕದೊಳಗಾಗಿ ಪೂರಕ ದಾಖಲಾತಿಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಗಂಗಾರ‍್ವಾಮಿ.ಜಿ.ಎಂ.ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ

Published

on

ಸುದ್ದಿದಿನ,ಬೆಂಗಳೂರು: ಜಗತ್ತಿನ ಟೆಕ್ ದೈತ್ಯ ಕಂಪನಿ ಗೂಗಲ್ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ. AI ಕಲಿಯದಿದ್ದರೆ ಉದ್ಯೋಗ ತೊರೆಯುವಂತೆ ಸೂಚಿಸಿದ್ದು, ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಘೋಷಿಸಿದೆ.

ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP)

AI ಕಲಿಯುವುದು ಅನಿವಾರ್ಯ: ಗೂಗಲ್ ಈಗ ಸಂಪೂರ್ಣವಾಗಿ ‘AI ಫಸ್ಟ್’ ಕಂಪನಿಯಾಗಿ ರೂಪಾಂತರಗೊಳ್ಳುತ್ತಿದೆ. ತಂತ್ರಜ್ಞಾನದ ವೇಗಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದ ಅಥವಾ AI ಕಲಿಯಲು ಆಸಕ್ತಿ ಇಲ್ಲದ ಉದ್ಯೋಗಿಗಳಿಗೆ ಗೌರವಯುತವಾಗಿ ಉದ್ಯೋಗ ತೊರೆಯಲು ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಯನ್ನು ಜಾರಿಗೊಳಿಸಿದೆ.

ಯಾರಿಗೆ ಅನ್ವಯಿಸುತ್ತದೆ?: ಇದು ಮುಖ್ಯವಾಗಿ ಗೂಗಲ್‌ನ ಗ್ಲೋಬಲ್ ಬಿಸಿನೆಸ್ ಆರ್ಗನೈಸೇಷನ್ (GBO) ವಿಭಾಗದ ಉದ್ಯೋಗಿಗಳಿಗೆ (ಸೇಲ್ಸ್, ಕಾರ್ಪೊರೇಟ್ ಡೆವಲಪ್ಮೆಂಟ್ ಮತ್ತು ಸೊಲ್ಯೂಷನ್ಸ್ ಟೀಮ್) ಗೆ ಅನ್ವಯಿಸುತ್ತದೆ. ಆದರೆ, ಗ್ರಾಹಕರೊಂದಿಗೆ ನೇರ ಸಂಪರ್ಕ ಹೊಂದಿರುವ ತಂಡಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.

ಇದು ಲೇ-ಆಫ್ ಅಲ್ಲ: ಇದು ಕಡ್ಡಾಯವಾಗಿ ಕೆಲಸದಿಂದ ತೆಗೆದುಹಾಕುವ ಪ್ರಕ್ರಿಯೆಯಲ್ಲ. ಬದಲಾಗಿ, ಸ್ವತಃ ಹೊರಹೋಗಲು ಬಯಸುವ ಉದ್ಯೋಗಿಗಳಿಗೆ ಉತ್ತಮ ಪರಿಹಾರ ಧನ (Severance Package) ಮತ್ತು ಇತರ ಸೌಲಭ್ಯಗಳನ್ನು ನೀಡಿ ಕಳುಹಿಸಿಕೊಡುವ ಯೋಜನೆಯಾಗಿದೆ.

ಕಾರಣವೇನು?: ತಂತ್ರಜ್ಞಾನ ಅತ್ಯಂತ ವೇಗವಾಗಿ ಬದಲಾಗುತ್ತಿದ್ದು, ಕಂಪನಿಗೆ AI ಮಿಷನ್‌ಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಮತ್ತು ಕ್ರಿಯಾತ್ಮಕವಾಗಿ ಕೆಲಸ ಮಾಡುವ ಕಾರ್ಯಪಡೆಯ ಅಗತ್ಯವಿದೆ ಎಂದು ಗೂಗಲ್‌ನ ಚೀಫ್ ಬಿಸಿನೆಸ್ ಆಫೀಸರ್ ಫಿಲಿಪ್ ಶೆಡ್ಲರ್ ತಿಳಿಸಿದ್ದಾರೆ.

ಭವಿಷ್ಯದ ಮುನ್ಸೂಚನೆ: ಅಮೆಜಾನ್, ಮೆಟಾ ಮತ್ತು ಮೈಕ್ರೋಸಾಫ್ಟ್‌ನಂತಹ ಇತರ ಟೆಕ್ ದೈತ್ಯ ಕಂಪನಿಗಳು ಕೂಡ ಇದೇ ಹಾದಿಯಲ್ಲಿ ಸಾಗುವ ಸಾಧ್ಯತೆ ಇದೆ. 2026ರಲ್ಲಿ ಈ ನಾಲ್ಕು ಕಂಪನಿಗಳು AI ತಂತ್ರಜ್ಞಾನಕ್ಕಾಗಿ ಸುಮಾರು 58.92 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಅಂದಾಜಿದೆ.

ಒಟ್ಟಾರೆಯಾಗಿ, ಭವಿಷ್ಯದ ಉದ್ಯೋಗ ಮಾರುಕಟ್ಟೆಯಲ್ಲಿ AI ಕೌಶಲ್ಯ ಅತ್ಯಂತ ಅನಿವಾರ್ಯ ಎಂಬ ಎಚ್ಚರಿಕೆಯ ಸಂದೇಶವನ್ನು ಗೂಗಲ್ ಈ ಮೂಲಕ ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending