ದಿನದ ಸುದ್ದಿ
ಹುಬ್ಬಳ್ಳಿ- ಧಾರವಾಡ ಬೈಪಾಸ್ ರಸ್ತೆಯಲ್ಲಿ ಸಂಚಾರಿ ನಿಯಮಗಳ ಪಾಲನೆಗೆ ಕಟ್ಟುನಿಟ್ಟಿನ ಕ್ರಮ : ಜಿಲ್ಲಾಧಿಕಾರಿ ನಿತೇಶ ಪಾಟೀಲ

ರಸ್ತೆ ಅಪಘಾತಗಳನ್ನು ತಪ್ಪಿಸಲು ಇಲಾಖೆಗಳು ಸಮನ್ವಯತೆಯಿಂದ ಕಾರ್ಯಮಾಡಬೇಕು : ಜಿಲ್ಲಾಧಿಕಾರಿ ನಿತೇಶ ಪಾಟೀಲ
ಸುದ್ದಿದಿನ,ಧಾರವಾಡ : ಕಳೆದ ಸಾಲಿಗೆ ಹೋಲಿಸಿದರೆ ಧಾರವಾಡ ಜಿಲ್ಲೆಯಲ್ಲಿ 2020 ನೇ ಸಾಲಿಗೆ ಕಡಿಮೆ ಪ್ರಮಾಣದಲ್ಲಿ ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿದ್ದು, ಸಾರಿಗೆ, ಪೊಲೀಸ್, ಲೊಕೋಪಯೋಗಿ. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿದರೆ ರಸ್ತೆ ಅಪಘಾತಗಳು ಸಂಭವಿಸದಂತೆ ಸಂಪೂರ್ಣವಾಗಿ ನಿಯಂತ್ರಿಸಬಹುದು ಎಂದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಭವನದಲ್ಲಿ ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಇರುವ ರಾಷ್ಟ್ರೀಯ ಹೆದ್ದಾರಿ 4 ರಲ್ಲಿನ 30 ಕಿ.ಮೀ ರಸ್ತೆಯಲ್ಲಿನ ಅಪಘಾತಗಳನ್ನು ತಪ್ಪಿಸಲು ಸಂಚಾರಿ ನಿಯಮಗಳ ಪಾಲನೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಪ್ರತಿ ಕಿ.ಮೀ.ಗೆ 60 ವೇಗದ ಮಿತಿ ಇದ್ದರೂ ಬಸ್, ಟ್ರಕ್, ಮಿನಿಬಸ್, ಕಾರ್ ಮುಂತಾದ ವಾಹನಗಳ ಚಾಲಕರು ನಿಯಮ ಪಾಲಿಸದೇ ವೇಗವಾಗಿ ವಾಹನ ಚಾಲನೆ, ವಾಹನಗಳ ಓವರ್‍ಟೆಕ್ ಮಾಡುತ್ತಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಅಪಘಾತ, ಸಾವು-ನೋವು ಆಗುತ್ತಿವೆ.
ರಸ್ತೆ ನಿರ್ವಾಹಕ ಗುತ್ತಿಗೆದಾರ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹುಬ್ಬಳ್ಳಿ-ಧಾರವಾಡ ಬೈಪಾಸ್‍ನ 30 ಕಿ.ಮೀ ರಸ್ತೆ ಪರಿಶೀಲಿಸಿ ಮುಂದಿನ 72 ಗಂಟೆಗಳಲ್ಲಿ ಅಪಾಯಕಾರಿ ಸ್ಥಳ, ಸೇತುವೆ ತಿರುವು ಗುರುತಿಸಿ ಅಲ್ಲಿ ಕನಿಷ್ಠ 20 ಎಚ್ಚರಿಕೆ ಫಲಕ, ವೇಗದ ಮೀತಿ ಸೂಚಿಸುವ ಮತ್ತು ಸುರಕ್ಷತಾ ನಿಯಮಗಳ ಫಲಕಗಳನ್ನು ಅಳವಡಿಸಿ ವರದಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.
ಹುಬ್ಬಳ್ಳಿ-ಧಾರವಾಡದ 30 ಕಿ.ಮೀ. ಬೈಪಾಸ್ ರಸ್ತೆಯ ಮಧ್ಯದಲ್ಲಿ ರಬ್ಬರ ಮತ್ತು ಫೈಬರ್ ಸಾಧನ ಬಳಸಿ, ರಸ್ತೆ ವಿಭಜಕಗಳನ್ನು ನಿರ್ಮಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದರು. ರಸ್ತೆ ಅಗಲೀಕರಣ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಆಗಿದ್ದು, ಅನುಮತಿ ಬಂದ ತಕ್ಷಣ ಈ ಕುರಿತು ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯ ಫುಟ್‍ಪಾತ್ ಅತಿಕ್ರಮಿಸಿ ಅನೇಕ ರೀತಿಯ ಅಂಗಡಿ, ವ್ಯಾಪಾರಗಳು ಅನಧಿಕೃತವಾಗಿ ನಡೆಯುತ್ತಿವೆ. ಟೊಲ್ ಪಕ್ಕದಲ್ಲಿಯೇ ಗುತ್ತಿಗೆದಾರರಿಗೆ ನೀಡಿರುವ ಜಾಗದಲ್ಲಿ ನಿಯಮ ಉಲ್ಲಂಘಿಸಿ ಅಂಗಡಿ ನಿರ್ಮಾಣ, ವಾಹನ ನಿಲುಗಡೆಗೆ ಸ್ಥಳಾವಕಾಶ ನೀಡಲಾಗಿದೆ. ಈ ಕುರಿತು ರಸ್ತೆ ನಿರ್ವಾಹಕ ಗುತ್ತಿಗೆದಾರ ಸಂಸ್ಥೆಗೆ ನೋಟೀಸ್ ನೀಡಿ ಮತ್ತು ಸೂಕ್ತ ಬಂದೋಬಸ್ತ್‍ನಲ್ಲಿ ಎಲ್ಲ ಅತಿಕ್ರಮಣಗಳನ್ನು ಶೀಘ್ರದಲ್ಲಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದರು.
ಇತ್ತೀಚಿಗೆ ಬೈಪಾಸ್ ರಸ್ತೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಅಸುನೀಗಿದವರ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಮತ್ತು ಟಿಪ್ಪರ್ ವಾಹನದ ಚಾಲಕನ ಮೇಲೆ ಅಜಾಗರೂಕತೆಯ ವಾಹನ ಚಾಲನೆ ಸೇರಿದಂತೆ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಬಿ.ಆರ್.ಟಿ.ಎಸ್. ರಸ್ತೆಯಲ್ಲಿ ಖಾಸಗಿ ಹಾಗೂ ಕೆಲವು ಸರಕಾರಿ ಇಲಾಖೆ ವಾಹನಗಳು ಸಂಚರಿಸುತ್ತಿರುವುದು ಕಂಡು ಬರುತ್ತಿದೆ. ನಗರ ಪೊಲೀಸ್ ಆಯುಕ್ತರು ಬಿಆರ್‍ಟಿಎಸ್ ರಸ್ತೆಯಲ್ಲಿ ಬಿಆರ್‍ಟಿಎಸ್ ಬಸ್‍ಗಳನ್ನು ಹೊರತುಪಡಿಸಿ ಯಾವ ತುರ್ತು ವಾಹನಗಳು ಸಂಚರಿಸಬೇಕೆಂದು ನಿರ್ಧರಿಸಿ, ಅಧಿಸೂಚನೆ ಹೊರಡಿಸಬೇಕು. ಮತ್ತು ಅಧಿಸೂಚಿತವಲ್ಲದ ವಾಹನಗಳು ಸಂಚರಿಸಿದರೆ ತಕ್ಷಣ ದಂಡ ವಿಧಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಗೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ರಾಜ್ಯ ಕಾನೂನು, ಸುವ್ಯವಸ್ಥೆ ಹಾಗೂ ಸಂಚಾರಿ ವಿಭಾಗದ ಅಪರ ಪೊಲೀಸ್ ಮಹಾನಿರ್ದೇಶಕ ಪ್ರತಾಪರೆಡ್ಡಿ ಅವರು ಮಾತನಾಡಿ, ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ವಾಹನ ಹಾಗೂ ವಾಹನ ಚಾಲಕರಿಂದ ಕಾನೂನು ಹಾಗೂ ನಿಯಮಗಳ ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸಬೇಕು. ಅಪಾಯಕಾರಿ ರಸ್ತೆ, ತಿರುವು, ಸೇತುವೆಗಳ ಸಮೀಪದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಬೇಕು. ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯಲ್ಲಿ ಅಪಘಾತ ವಲಯಗಳನ್ನು ಗುರುತಿಸಿ, ಎಚ್ಚರಿಕೆ ಸಂದೇಶಗಳನ್ನು ಚಾಲಕರಿಗೆ ಎದ್ದು ಕಾಣುವಂತೆ ಅಳವಡಿಸಬೇಕು ಎಂದು ಹೇಳಿದರು.
ಉತ್ತರವಲಯದ ಪೊಲೀಸ್ ಮಹಾನಿರೀಕ್ಷಕ ರಾಘವೇಂದ್ರ ಸುಹಾಸ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ, ತಿರುವು, ಸೇತುವೆಗಳ, ಸುಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಬೇಕು. ರಸ್ತೆ ಸುರಕ್ಷತೆ ಹಾಗೂ ಎಚ್ಚರಿಕೆ ಸಂದೇಶದ ಫಲಕಗಳ ಅಳವಡಿಕೆ, ನಿರ್ವಹಣೆ ಕುರಿತು ಮೇಲುಸ್ತುವಾರಿ ಮಾಡಿ ನಿಗಾವಹಿಸಬೇಕು. ಗುತ್ತಿಗೆದಾರನ ನಿರ್ವಹಣೆ ಕುರಿತು ನಿಯಮಗಳ ಪಾಲನೆ ಆಗಿರುವುದನ್ನು ಪರಿಶೀಲಿಸಬೇಕೆಂದು ತಿಳಿಸಿದರು.
ನಗರ ಪೊಲೀಸ್ ಆಯುಕ್ತ ಲಾಬೂರಾಮ ಅವರು ಮಾತನಾಡಿ, ರಸ್ತೆ ಸುರಕ್ಷತಾ ಹಾಗೂ ಸಂಚಾರಿ ನಿಯಮಗಳ ಪಾಲನೆಗೆ ಆಧ್ಯತೆ ನೀಡಬೇಕು. ಹೆದ್ದಾರಿ ಸೇರಿದಂತೆ ನಗರ ಹಾಗೂ ಗ್ರಾಮೀಣ ಭಾಗದ ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ. ಈಗಾಗಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಬೈಪಾಸ್, ಬಿಆರ್‍ಟಿಎಸ್ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳನ್ನು ಪರಿಶೀಲಿಸಿ, ಸೂಕ್ತ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ದೇಶಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ಮಾತನಾಡಿ, ವಾಹನಗಳ ಚಾಲಕರು ರಾತ್ರಿ ಸಂಚರಿಸುವಾಗ ಪ್ರಖರ ಬೆಳಕಿನ ಹೆಡ್‍ಲೈಟ್ ಬಳಸುತ್ತಾರೆ. ಇದರಿಂದಾಗಿ ಎದುರಿಗೆ ಬರುವ ವಾಹನಗಳಿಗೆ ದಾರಿ ಕಾಣದಾಗುತ್ತದೆ. ತಿರುವುಗಳಲ್ಲಿ ಮತ್ತು ನಿರ್ಧಿಷ್ಟಪಡಿಸಿದ ವೇಗದ ಮಿತಿ ಪಾಲಿಸದೇ ವೇಗವಾಗಿ ವಾಹನ ಚಲಾಯಿಸುತ್ತಾರೆ. ಸಾರಿಗೆ ಇಲಾಖೆ ಅಧಿಕಾರಿಗಳು ವಾಹನಗಳ ನೋಂದಣಿ ಹಾಗೂ ಫಿಟ್‍ನೆಸ್ ಸರ್ಟಿಫಿಕೇಟ್ ಕೊಡುವಾಗ ಇವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಡಾ.ಬಿ. ಸುಶೀಲ ಅವರು ರಸ್ತೆ ಸುರಕ್ಷತೆ, ಅಪಘಾತಗಳ ನಿಯಂತ್ರಣ ಕುರಿತು ಸಭೆಯಲ್ಲಿ ಮಾತನಾಡಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲ್ವತ್ತವಾಡಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ, ಡಿವೈಎಸ್‍ಪಿಗಳಾದ ಎಂ.ಬಿ. ಸಂಕದ, ರಾಮನಗೌಡ ಹಟ್ಟಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಯಶವಂತ ಮದೀನಕರ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಎಸ್.ಬಿ. ಚೌಡನ್ನವರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರ ಆರ್.ಕೆ. ಮಠದ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎಲ್. ಹಂಚಾಟೆ, ನೈಸ್ ಸಂಸ್ಥೆಯ ಪ್ರತಿನಿಧಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸದಸ್ಯರು, ರಸ್ತೆ ನಿರ್ವಹಣಾ ಗುತ್ತಿಗೆದಾರರು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೊರೋನ ಲಸಿಕೆ ಪಡೆದ ಸಂಸದ ಜಿ.ಎಂ.ಸಿದ್ದೇಶ್ವರ್

ಸುದ್ದಿದಿನ,ದಾವಣಗೆರೆ: ಕೋವಿಡ್ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಮೂರನೇ ಹಂತದ ಕೋವಿಡ್-19 ಲಸಿಕೆ ನೀಡುವ ಅಭಿಯಾನವನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಮಂಗಳವಾರ ನಗರದ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಅಭಿಯಾನದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ (69) ಹಾಗೂ ಅವರ ಪತ್ನಿ ಗಾಯತ್ರಮ್ಮ.ಜಿ.ಎಸ್ (66), ಹಿರಿಯ ನಾಗರೀಕರು ಹಾಗೂ 45 ವರ್ಷಕ್ಕಿಂತ ಮೇಲ್ಪಟ್ಟ ಅನಾರೋಗ್ಯ ಪೀಡಿತರು ಸೇರಿದಂತೆ ಒಟ್ಟು 74 ಜನರು ಲಸಿಕೆ ಪಡೆದುಕೊಂಡರು.
ಈ ವೇಳೆ ಸಂಸದ ಜಿ.ಎಂ.ಸಿದ್ದೇಶ್ವರ ತಮ್ಮ ಮಡದಿಯೊಂದಿಗೆ ಲಸಿಕೆ ಪಡೆದು ಮಾತನಾಡಿ, ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿದ ಕೊರೋನ ನಿಯಂತ್ರಣಕ್ಕೆ 10 ತಿಂಗಳೊಳಗಾಗಿ ಲಸಿಕೆ ಕಂಡುಹಿಡಿದಿರುವುದು ಅಭಿನಂದನಾರ್ಹ.
ಮೊದಲ ಹಂತದಲ್ಲಿ ಕೋವಿಡ್ ನಿಯಂತ್ರಣ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದ ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ. ನಂತರ ಕಂದಾಯ, ಪೌರಾಡಳಿತ, ಪಂಚಾಯತ್ ರಾಜ್ ಇಲಾಖೆ, ಪೊಲೀಸ್ ಇಲಾಖೆ ಫಲಾನುಭವಿಗಳಿಗೆ ನೀಡಲಾಗಿದೆ. ಈ ಲಸಿಕೆ ಸುರಕ್ಷಿತವಾಗಿದ್ದು, ಇದುವರೆಗೂ ಯಾರಿಗೂ ತೊಂದರೆಯಾಗಿಲ್ಲ ಎಂದು ತಿಳಿಸಿದರು.
ಮಾರ್ಚ್ 1 ರಂದು ಲಸಿಕೆ ಪಡೆಯಬೇಕಿತ್ತು. ಕಾರಣಾಂತರಗಳಿಂದ ಲಸಿಕೆ ಪಡೆಯಲು ಸಾಧ್ಯವಾಗಲಿಲ್ಲ. ಇಂದು ಸ್ವ-ಇಚ್ಚೆಯಿಂದ ನನ್ನ ಮಡದಿಯೊಂದಿಗೆ ಬಂದು ಲಸಿಕೆ ಪಡೆದಿದ್ದು, ಯಾವುದೇ ತೊಂದರೆಯಾಗಿಲ್ಲ. ಸುರಕ್ಷಿರಾಗಿದ್ದೇವೆ. ಲಸಿಕೆ ಪಡೆಯುವುದಕ್ಕು ಮುನ್ನ ಇಲ್ಲಿ ಲಸಿಕೆ ಪಡೆದ ಹಿರಿಯರನ್ನು ವಿಚಾರಿಸಿದ್ದು, ಯಾವುದೇ ರೀತಿಯ ಅಡ್ಡಪರಿಣಾಮ ಸಂಭವಿಸಿಲ್ಲ ಎಂದು ಭರವಸೆ ನೀಡಿದ್ದಾರೆ.
ಆದ್ದರಿಂದ ಲಸಿಕೆ ಪಡೆಯದ ಎಲ್ಲಾ ಹಿರಿಯ ನಾಗರೀಕರು ಹಾಗೂ 45 ವರ್ಷ ಮೇಲ್ಪಟ್ಟ ಎಲ್ಲಾ ಅನಾರೋಗ್ಯ ಪೀಡಿತರು ಯಾವುದೇ ಭಯವಿಲ್ಲದೇ, ಹಿಂಜರಿಯದೆ ಲಸಿಕೆ ಪಡೆದುಕೊಂಡು ದೇಶಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು.
ಅಭಿಯಾನದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಎರಡನೇ ಹಂತದಲ್ಲಿ ಮುಂಚೂಣಿ ಕೊರೋನ ವಾರಿಯರ್ಸ್ಗೆ ಕೋವಿಡ್ ಲಸಿಕೆ ನೀಡಲಾಗಿದ್ದು, ಮಾರ್ಚ್ 1 ರಿಂದ ಮೂರನೇ ಹಂತದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ಇತರೆ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಅಂತಹವರು ತಮ್ಮ ಆಧಾರ ಕಾರ್ಡ್ನೊಂದಿಗೆ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಮೊದಲ ಹಂತದಲ್ಲಿ ಶೇಕಡ 80 ರಷ್ಟು ಜನರು ಲಸಿಕೆ ಪಡೆದುಕೊಂಡಿದ್ದು, ನಂತರ ಮುಂಚೂಣಿ ಕೊರೋನ ವಾರಿಯರ್ಸ್ಗಳಲ್ಲಿ ಶೇಕಡ 70 ರಷ್ಟು ಜನರು ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಇನ್ನೂ ಕಂದಾಯ ಇಲಾಖೆಯಲ್ಲಿ ಶೇಕಡ 55 ರಷ್ಟು ಹಾಗೂ ಇನ್ನಿತರರು ಸೇರಿ ಶೇಕಡ 60 ರಷ್ಟು ಜನರು ಲಸಿಕೆ ಪಡೆದುಕೊಂಡಿದ್ದು, ಲಸಿಕೆ ಪಡೆಯದವರಿಗೆ ಮಾ.6 ರವರೆಗೆ ಕಾಲವಕಾಶವಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು.
ಇದನ್ನೂ ಓದಿ | ಎ ಸಿ ಬಿ ಬಲೆಗೆ ಬಿದ್ದ ಕೊಪ್ಪಳದ ಬಿ ಇ ಓ ಮತ್ತು ಎಫ್ ಡಿ ಎ
ಮಾರ್ಚ್ 1 ರಿಂದ ಮೂರನೇ ಹಂತದ ಲಸಿಕೆ ಅಭಿಯಾನ ಪ್ರಾರಂಭವಾಗಿದ್ದು, ಮೊದಲ ದಿನ 11 ಜನ ಲಸಿಕೆ ಪಡೆದಿದ್ದರು. ಆದರೆ ಇಂದು ಸರ್ಕಾರಿ ಹಾಗೂ ಖಾಸಗಿ ಎರಡು ವಲಯಗಳು ಸೇರಿ 63 ಜನರು ಲಸಿಕೆ ಪಡೆದುಕೊಂಡಿದ್ದು, ಒಟ್ಟು 74 ಜನರು ಕೋವಿಡ್ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಮಂಗಳವಾರ ಸಂಸದರಾದ ಸಿದ್ದೇಶ್ವರ ಹಾಗೂ ಅವರ ಪತ್ನಿ ಲಸಿಕೆ ಹಾಕಿಸಿಕೊಂಡಿದ್ದು ಯಾವುದೇ ತೊಂದರೆಗಳು ಸಂಭವಿಸಿಲ್ಲ. ಆದ ಕಾರಣ ಯಾರು ಭಯ ಪಡದೇ, ಲಸಿಕೆ ಕುರಿತು ಪೂರ್ವಾಗ್ರಹ ಇಟ್ಟುಕೊಳ್ಳದೇ, ಧೈರ್ಯದಿಂದ ಮುಂದೆ ಬಂದು ಕೋವಿಶೀಲ್ಡ್ ವ್ಯಾಕ್ಸಿನ್ ತೆಗೆದುಕೊಳ್ಳಬೇಕು. ತಮ್ಮನ್ನು ತಾವು ರಕ್ಷಿಸಿಕೊಳ್ಳುವುದರೊಂದಿಗೆ ತಮ್ಮ ಕುಟುಂಬದವರನ್ನು ರಕ್ಷಣೆ ಮಾಡಬೇಕು. ಕೊರೋನ ಮುಕ್ತ ದೇಶವನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.
ಅಭಿಯಾನದಲ್ಲಿ ಸಂಸದರ ಪತ್ನಿ ಗಾಯತ್ರಮ್ಮ ಜಿ.ಎಸ್, ಕಾರ್ಪೋರೇಟರ್ ಆರ್.ಎಲ್.ಶಿವಪ್ರಕಾಶ್, ಆರ್ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧೀಕ್ಷಕ ನೀಲಕಂಠ, ಯುವ ಮುಖಂಡರಾದ ಶಿವಕುಮಾರ್, ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಎ ಸಿ ಬಿ ಬಲೆಗೆ ಬಿದ್ದ ಕೊಪ್ಪಳದ ಬಿ ಇ ಓ ಮತ್ತು ಎಫ್ ಡಿ ಎ

ಸುದ್ದಿದಿನ,ಕೊಪ್ಪಳ : ಬಂದ್ ಆಗಿರುವ ಶಾಲೆಯ ಡಿಪಾಸಿಟ್ ಅನ್ನು ವಾಪಾಸ್ ಪಡೆಯಲು ಮೂರುವರೆ (3.500ರೂ) ಲಂಚ ಕೇಳಿದ್ದ ಬಿ ಇ ಓ ಮತ್ತು ಎಫ್ ಡಿ ಎ ಇಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಭಾಗ್ಯನಗರದ ಎಸ್ ಎಸ್ ಕರ ಶಾಲೆಯ ಬಾಲಚಂದ್ರ ಕಬಾಡೆ ಎಂಬುವವರ ದೂರಿನ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ, ಮೂರೂವರೆ ಸಾವಿರ ಲಂಚ ಪಡೆಯುವಾಗವಾಗ ಬಿಇಓ ಉಮಾದೇವಿ ಸೊನ್ನದ, ಎಫ್ ಡಿ ಎ ಎ ಆರುಂಧತಿ ಬಲೆಗೆ ಬಿದ್ದಿದ್ದಾರೆ. ಶಾಲೆ 2002ರಲ್ಲಿ ಆರಂಭವಾಗಿದ್ದು ೨೦೦೯ 2009 ರಲ್ಲಿ ಬಂದಾಗಿತ್ತು.
ಇದನ್ನೂ ಓದಿ | ಅಶ್ಲೀಲ ಸಿಡಿ ವೈರಲ್ | ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ; ಆರೋಪ ಮುಕ್ತನಾದ ಮೇಲೆ ಸಚಿವ ಸ್ಥಾನ ನೀಡಿ
ಬಳ್ಳಾರಿ ಎಸ್ಪಿ ಗುರುನಾಥ ಮತ್ತೂರ ಮಾರ್ಗದರ್ಶನದಲ್ಲಿ ಡಿಎಸ್ಪಿ ಶಿವಕುಮಾರ್, ಎಸ್ ಐ ಎಸ್ ಎಸ್ ಬೀಳಗಿ, ಎಸೈ ಬಾಳನಗೌಡ ತಂಡವು ಈ ದಾಳಿ ನಡೆಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಅಶ್ಲೀಲ ಸಿಡಿ ವೈರಲ್ | ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ; ಆರೋಪ ಮುಕ್ತನಾದ ಮೇಲೆ ಸಚಿವ ಸ್ಥಾನ ನೀಡಿ

ಸುದ್ದಿದಿನ, ಬೆಂಗಳೂರು : ಅಶ್ಲೀಲ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಮುಜುಗರ ಆಗಬಾರದೆಂದು ನೈತಿಕ ಹೊಣೆ ಹೊತ್ತು ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಅವರಿಗೆ ರವಾನೆ ಮಾಡಿದ್ದು ತಮ್ಮ ನಿಲುವನ್ನು ತಿಳಿಸಿದ್ದಾರೆ.
ಇದನ್ನೂ ಓದಿ | ಕೊಟ್ಟ ಮಾತಿನಂತೆ ನಡೆದ ಡಿ ಬಾಸ್ ದರ್ಶನ್; ಕುದುರೆಯ ತಡಿ ನೀಡಿ, ಎಸ್.ಎಸ್.ಮಲ್ಲಿಕಾರ್ಜುನಗೆ ಕೃತಜ್ಞತೆ
ಅಶ್ಲೀಲ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಮುಜುಗರ ತಪ್ಪಿಸಲು, ನೈತಿಕ ಹೊಣೆ ಹೊತ್ತು ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಪ್ರಕರಣದಲ್ಲಿ ನಾನು ಆರೋಪ ಮುಕ್ತನಾದ ಬಳಿಕ ನನಗೆ ಸಚಿವ ಸ್ಥಾನ ನೀಡಿ ಎಂದು ಸಿಎಂಬಿ.ಎಸ್.ಯಡಿಯೂರಪ್ಪಗೆ ರವಾನಿಸಿರುವ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ರಾಜಕೀಯ7 days ago
ದೇವರಮನೆ ಶಿವಕುಮಾರ್ ಬಿಜೆಪಿ ಸೇರ್ಪಡೆ | ನಾವು ಯಾರಿಗೂ ಆಮಿಷ ಒಡ್ಡಿಲ್ಲ : ಸಂಸದ ಜಿಎಂ ಸಿದ್ದೇಶ್ವರ್
-
ಬಹಿರಂಗ7 days ago
ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದೇ ಮೊದಲ ತಪ್ಪು..!
-
ಕ್ರೀಡೆ6 days ago
ಅತಿ ಕಡಿಮೆ ಪಂದ್ಯ ; 400 ವಿಕೆಟ್ : ದಾಖಲೆ ಬರೆದ ಸ್ಪಿನ್ನರ್ ಆರ್ ಅಶ್ವಿನ್
-
ಲೈಫ್ ಸ್ಟೈಲ್6 days ago
ರೆಸಿಪಿ | ಖರ್ಜೂರದ ಹೋಳಿಗೆ ಮಾಡೋದು ಹೇಗೆ ಗೊತ್ತಾ..?
-
ಕ್ರೀಡೆ6 days ago
ರಾಜ್ಯದ ಕ್ರೀಡಾ ವಿಜ್ಞಾನ ಸಂಸ್ಥೆಯಿಂದ ಪ್ರತಿಭಾನ್ವಿತ ಕ್ರೀಡಾಪಟುಗಳ ಆಯ್ಕೆ
-
ದಿನದ ಸುದ್ದಿ5 days ago
ಅಸ್ಸಾಂ | ಅಥ್ಲೀಟ್ ಹಿಮಾ ದಾಸ್ ಡಿಎಸ್ಪಿಯಾಗಿ ನೇಮಕ ; ನನ್ನ ಮತ್ತು ತಾಯಿಯ ಕನಸು ನನಸಾದ ದಿನವಿದು : ಹಿಮಾ ಭಾವುಕ ನುಡಿ
-
ದಿನದ ಸುದ್ದಿ7 days ago
ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ 25 ರೂ ಹೆಚ್ಚಳ ; ಇತಿಹಾಸದಲ್ಲೇ ಮೊದಲ ಸಲ ಒಂದೇ ತಿಂಗಳಲ್ಲಿ ಮೂರನೇ ಬಾರಿಗೆ ಗ್ಯಾಸ್ ಬೆಲೆ ಏರಿಕೆಯಾಗಿದ್ದು..!
-
ದಿನದ ಸುದ್ದಿ7 days ago
ಹೆಚ್.ಎ.ಎಲ್ ನಲ್ಲಿ ತರಬೇತಿಗಾಗಿ ಅರ್ಜಿ ಆಹ್ವಾನ