ಭಾವ ಭೈರಾಗಿ
ಕವಿತೆ | ಸೂಲಗಿತ್ತಿ ನರಸಮ್ಮ
ನಾರಿಯರ ಬಾಳನುದ್ಧರಿಸಲು
ಅವತಾರಿಸಿ ಬಂದ ಅಮ್ಮ
ನಾಡಿನ ಮೂಲೆ ಮೂಲೆಗಳಲ್ಲಿ
ಹೆಸರುವಾಸಿ ನರಸಮ್ಮ.
ತುಮಕೂರಿನ ಪಾವಗಡದ
ಕೃಷ್ಣಾಪುರದಿ ಹುಟ್ಟಿದೆ
ಅಲೆಮಾರಿಯ ಅಂಜಿನಪ್ಪನ
ಮನೆಯ ಮೆಟ್ಟಿದೆ.
ಜೀವಭಾಷೆ ತೆಲುಗು
ಮನೆಯಲ್ಲಿ ಆಡಿ ಬೆಳೆದೆ
ಜೀವನದ ಭಾಷೆ ಕನ್ನಡವ
ಜಗದಲ್ಲಿ ಕೊಂಡಾಡಿದೆ.
ಹನ್ನೆರಡು ಮಕ್ಕಳನ್ನು
ಹೆತ್ತು ಹೊತ್ತು ಸಾಕಿದೆ
ಇಪ್ಪತ್ತೆರಡು ಮೊಮ್ಮಕ್ಕಳನ್ನು
ಅಕ್ಕರೆಯಲ್ಲಿ ಪೊರೆದೆ.
ಮರಿಗೆಮ್ಮಜ್ಜಿಯಿಂದ ಹೆರಿಗೆ
ಮಾಡಿಸುವ ವಿದ್ಯೆ ತಿಳಿದೆ
ಗಿಡಮೂಲಿಕೆಗಳ ಸತ್ವವ
ಬುಡಬುಡಿಕೆರಿಂದ ಕೇಳಿದೆ.
ಹನುಮಕ್ಕಳ ಹೆರಿಗೆ ಮಾಡಿಸಿ
ಜನರನು ಚಕಿತಗೊಳಿಸಿದೆ
ಹದಿನೈದು ಸಾವಿರಕ್ಕೂ ಹೆಚ್ಚು
ಸಹಜ ಹೆರಿಗೆಯ ಮಾಡಿಸಿದೆ.
ಅನಕ್ಷರಸ್ಥಳಾದರು ಗೌರವ
ಡಾಕ್ಟರೇಟ್ ಪದವಿ ಪಡೆದೆ
ಅಕ್ಷರಸ್ಥರು ಹೆಮ್ಮೆ ಪಡುವಂತೆ
ಪದ್ಮಶ್ರೀ ಪುರಸ್ಕೃತಳಾದೆ.
ನೂರಾರು ಪುರಸ್ಕಾರಗಳಿಗೆ
ಭಾಜನಳಾದೆ ನರಸಮ್ಮ
ನೂರರ ಗಡಿ ದಾಟುವ
ಮುನ್ನವೇ ಮರೆಯಾದೆಯಮ್ಮ.
– ಶಿವಮೂರ್ತಿ.ಹೆಚ್

ದಿನದ ಸುದ್ದಿ
ನಮ್ಮ ಪೂರ್ವಿಕ ಶಿವನೂ ; ಅವರ ಡುಬಾಕು ಸನಾತನವೂ..

- ಹರ್ಷಕುಮಾರ್ ಕುಗ್ವೆ
ಲಿಂಗವು ದೇವರಲ್ಲ ಶಿವನು ದೇವರಲ್ಲ
ಶಕ್ತಿಯೂ ದೇವರಲ್ಲ. ಮನುಷ್ಯನ ಕಲ್ಪನೆಯ ಆಳವನ್ನು ಮೀರಿದ ಯಾವ ದೇವರೂ ಇಲ್ಲ. ಅಸಲಿಗೆ ಇಡೀ ಜಗತ್ತನ್ನು ನಡೆಸುವ ದೇವರೆಂಬುದೇ ಇಲ್ಲ.
ಶಿವನು ನಮ್ಮ ಪೂರ್ವಿಕ, ಗೌರಿ ಅತವಾ ಶಕ್ತಿ ನಮ್ಮ ಪೂರ್ವಿಕಳು. ಗಂಗೆ ನಮ್ಮ ಬದುಕು. ಶಿವನ ಕೊರಳಿನ ನಾಗ ನಮ್ಮ ಕುಲ. ಲಿಂಗ ಫಲವಂತಿಕೆಯ ಸಂಕೇತವೂ ಹೌದು, ಶಿವ ಶಕ್ತಿಯರ ಸಮಾಗಮದ ಸಂಕೇತವೂ ಹೌದು. ನಮ್ಮ ಜನರಿಗೆ ಸಂಕೇತಗಳು ಶಕ್ತಿಯಾಗಿದ್ದವು, ಪ್ರೇರಣೆಯಾಗಿದ್ದವು. ಡೊಳ್ಳು ಹೊಡೆದು ಕೇಕೆ ಹಾಕಿದಾಗ ಮಳೆ ಬಂದರೆ, ನಮ್ಮ ಡೊಳ್ಳಿನ ಸದ್ದಿನ ಶಕ್ತಿಯಿಂದಲೇ, ನಮ್ಮ ಕೇಕೆಯಿಂದಲೇ ಮಳೆ ಬಂತು ಎಂದು ನಂಬಿದರು. ಇದನ್ನು primitive magic ಪರಿಕಲ್ಪನೆ ಎನ್ನಲಾಗಿದೆ. ನಮ್ಮ ಬಳ್ಳಾರಿಯ ಸಂಗನಕಲ್ಲಿನಲ್ಲಿ 3000 ವರ್ಷಗಳ ಹಿಂದೆ ಕಲ್ಲು ಬಂಡೆಗಳ ಮೇಲೆ ಕೆತ್ತಿದ ಹೋರಿ ಮತ್ತು ಉದ್ದ ಕೊಂಬಿನ ಕೆತ್ತನೆಗಳು ಸಹ ಇಂತಹ ಒಂದು ಆದಿಮ ಮಾಂತ್ರಿಕ ಶಕ್ತಿಯ ಆಚರಣೆಯಾಗಿದೆ.
ನಂಬಿಕೆಗಳನ್ನು ಸಂಸ್ಕೃತಿಯಾಗಿ, ಪರಂಪರೆಯಾಗಿ ಗ್ರಹಿಸಬೇಕೇ ಹೊರತು ದೇವರಾಗಿ ಅಲ್ಲ. ದೇವ ಎಂಬ ಕಲ್ಪನೆಯೇ ದ್ರಾವಿಡರಲ್ಲಿ ಇರಲಿಲ್ಲ. 50 ಸಾವಿರ ವರ್ಷಗಳಿಂದ ಬಂದ ಲಿಂಗ- ಯೋನಿ ಪೂಜೆ, ಗೌರಿ ಪೂಜೆ, 9,000 ವರ್ಷಗಳಿಂದ ಬಂದ ಬೂಮ್ತಾಯಿ ಪೂಜೆ, ಅರಳಿ ಮರದ ಪೂಜೆ, ಐದು ಸಾವಿರ ವರ್ಷಗಳಿಂದ ಬಂದ ಶಿವನ ಪೂಜೆ, ಗಣಪತಿ ಪೂಜೆ, ನಾಗನ ಪೂಜೆ, 4000 ವರ್ಷಗಳಿಂದ ಬಂದ ಗತಿಸಿದ ಹಿರೀಕರ ಪೂಜೆ, ಇದರ ಮುಂದುವರಿಕೆಯಾಗಿಯೇ 2600 ವರ್ಷಗಳ ಹಿಂದೆ ಬುದ್ದ ಗುರುವು ತೀರಿದ ಬಳಿಕ ಅವನ ಅಸ್ತಿಯನ್ನು ಇಟ್ಟ ಸ್ತೂಪಗಳನ್ನು ಪೂಜಿಸಿದೆವು, ದೂಪ ಹಾಕಿದೆವು... ಇದುವೇ ಈ ನೆಲದ ಪೂಜನ ಸಂಸ್ಕತಿಯಾಗಿತ್ತು.
‘ದೇವ’ ಮತ್ತು ಅಸುರ ಇಬ್ಬರೂ ಬಂದಿದ್ದು ಮಧ್ಯ ಏಷ್ಯಾದಿಂದ ಹೊರಟಿದ್ದ ಆರ್ಯರಿಂದಲೇ. ಅವರಿಗೆ ಪೂಜೆ ಗೊತ್ತಿರಲಿಲ್ಲ. ಯಜ್ಞ ಗೊತ್ತಿತ್ತು, ಹೋಮ ಗೊತ್ತಿತ್ತು. ‘ದೇವ’ ಅತವಾ “ದ-ಏವ” ಕೂಡಾ ಮೂಲದಲ್ಲಿ ಆರ್ಯರ ಪೂರ್ವಿಕ ಕುಲ ನಾಯಕರೇ ಆಗಿದ್ದಾರು... ಹೀಗಾಗಿಯೇ ಆರ್ಯ ವೈದಿಕರ ದೇವ ಎಂದರೆ ಅವರ ದಾಯಾದಿಗಳಾಗಿದ್ದ ಪಾರ್ಸಿಯನ್ (ಜೊರಾಸ್ಟ್ರಿಯನ್) ಆರ್ಯ ಅವೆಸ್ತನ್ನರಿಗೆ ಕೆಡುಕಿನ ಸಂಕೇತವಾಗಿತ್ತು. ಹಾಗೇ ಆರ್ಯ ವೈದಿಕರು ಕೆಡುಕು ಎಂದ ಅಸುರ (ಅಹುರ) ಆರ್ಯ ಅವೆಸ್ತನ್ನರ ಪಾಲಿಗೆ “ನಾಯಕ”ನಾಗಿದ್ದ. ಅವರನ್ನು ಅಹುರ ಮಜ್ದಾ ಎಂದು ಕರೆದು ಆರಾದಿಸಿದರು.
ಭಾರತಕ್ಕೆ ಪ್ರವೇಶಿಸಿದ ಬಳಿಕ ಆರ್ಯ ವೈದಿಕರಿಗೆ ಈ ನೆಲದ ಮೊದಲ ನಿವಾಸಿಗಳ ಮೇಲೆ ಯಜಮಾನಿಕೆ ಸ್ತಾಪಿಸಬೇಕಿತ್ತು. ಅದಕ್ಕಾಗಿ ನಮ್ಮಿಂದ ಪೂಜೆಗೊಳ್ಳುತ್ತಿದ್ದ ಪೂರ್ವಿಕರನ್ನು ತಮ್ಮ “ದೇವರು” ಮಾಡಿದರು. ಆ ದೇವರ ಪೂಜೆಗೆ ಅವರೇ ನಿಂತರು. ತಮ್ಮ ಜುಟ್ಟು ಬಿಟ್ಟುಕೊಂಡು ನಮ್ಮ ಜುಟ್ಟು ಹಿಡಿದರು. ನಾವು ಪೂರ್ವಿಕರನ್ನು ಬಿಟ್ಟು ಕೊಟ್ಟು, ಅವರ ಕೈಯಲ್ಲಿ ದೇವರುಗಳ ಪೂಜೆ ನಡೆಯುವಾಗ ನಮ್ಮ ಪೂರ್ವಿಕರಿಗೆ ಗೊತ್ತೇ ಇರದಿದ್ದ ವೇದ ಮಂತ್ರಗಳನ್ನ ಕೇಳಿ ಪುನೀತರಾದೆವು. ಈ ಮಂತ್ರ ಭಾಷೆಯೇ ದೇವರಿಗೆ ಅರ್ಥವಾಗುವುದು ಎಂದು ಪುಂಗಿದ್ದಕ್ಕೆ ತಲೆಯಾಡಿಸಿ ಕೈಮುಗಿದು ಗರ್ಭಗುಡಿಯ ಹೊರಗೆ ಸಾಲಿನಲ್ಲಿ ನಿಂತೆವು. ಮುಂದಿನ 2000 ವರ್ಷಗಳ ಕಾಲ ಗುಲಾಮರಾದೆವು. ಪುರಾಣಗಳನ್ನು ಕೇಳಿದೆವು, ನಂಬಿದೆವು ಮತಿಗೆಟ್ಟೆವು, ಗತಿಗೆಟ್ಟೆವು.
ಇನ್ನೂ ಉಳಿದಿರುವುದೇನು?
ನಾವು ಶಿವನ ವಕ್ಕಲು, ಗೌರಿ- ಗಂಗೆಯರ ಒಕ್ಕಲು. ಅವರು ಇಂದ್ರ ಅಗ್ನಿಯರ ವಕ್ಕಲಾಗಿದ್ದವರು ತಮ್ಮ ದೇವರಿಗೆ ಕಿಮ್ಮತ್ತಿಲ್ಲ ಎಂದರಿತು ಅವರನ್ನೇ ಬಿಟ್ಟರು. ಈಗ ಹೇಳುತ್ತಾರೆ ನಾವೇ ಸನಾತನರು ಎಂದು! ಅವರ ಡುಬಾಕು ಸನಾತನದಲ್ಲಿ ನಮ್ಮತನ ಕಳೆದುಕೊಂಡ “ಶೂದ್ರ ಮುಂಡೇಮಕ್ಕಳಾಗಿ”, ಅವರಿಗಾಗಿ ಬಾಳು ಬದುಕು ಹಾಳುಮಾಡಿಕೊಂಡು, ಅವರ ಹೋಮ ಹವನ ಮಾಡಿಸಿ, ನಮ್ಮ ಉಳಿಕೆ ಕಾಸು ಕಳೆದುಕೊಂಡು, ಗೌರವ ಗನತೆ ಕಳೆದುಕೊಳ್ಳುವುದೇ ಇವತ್ತಿನ ಸನಾತನ!
– ಹರ್ಷಕುಮಾರ್ ಕುಗ್ವೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕವಿತೆ | ಗಾಯದ ಬೆಳಕು

- ಕಾವ್ಯ ಎಂ ಎನ್, ಶಿವಮೊಗ್ಗ
ನೋವ ಹಾಡುವುದನ್ನೇ ಕಲಿತೆ
ಬದುಕು ಬಿಕ್ಕಿತು..
ಗಾಯದ ಬೆಳಕು
ಹೊತ್ತಿ ಉರಿದು
ತಮವೆಲ್ಲ ತಣ್ಣಗಾದಾಗ
ಚುಕ್ಕಿಬೆರಳಿಗೆ ಮುಗಿಲು ತೋರಿದೆ
ಕೆಂಡದಂತ ಹಗಲು ನೆತ್ತಿಪೊರೆಯಿತು.
ಅದ್ಯಾವ ಕಾಡು ಮಲ್ಲಿಗೆಯ
ಹಾಡು ಕರೆಯಿತೊ ಏನೊ
ಎದೆ ಹಾದಿಯ ತುಂಬೆಲ್ಲಾ ಬೇಸಿಗೆ.
ಒಡಲು ತುಂಬಿ ಕಡಲು
ಜೀಕಿ ದಡ ಮುಟ್ಟಿದ
ಕಪ್ಪೆಚಿಪ್ಪಿನೊಳಗೆಲ್ಲಾ
ಸ್ವಾತಿ ಮುತ್ತು…
ಓಡುವ ಆಮೆಯಂತ ಗಡಿಯಾರ
ಮೈತುಂಬ ಮುಳ್ಳ ಹೊತ್ತು
ಸಾಗಿಸುತ್ತಿದೆ ಭವದ ಭಾರ.
ನನ್ನ ನಿನ್ನ ರೂಹು ತಿಳಿದ
ಕಾಡು ಗಿಡ ಮರ ಬೆಟ್ಟ ಬಯಲೆಲ್ಲಾ
ಕಥೆ ಕಟ್ಟಿ ಪಿಸುಗುಡುತ್ತಿವೆ
ಉಟ್ಟ ಉಸಿರಿನ ಬಟ್ಟೆ ಕಳಚಿದ ಮೇಲೆ
ಎಲ್ಲವೂ ಬೆತ್ತಲೆ…
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕವಿತೆ | ನಾನೊಲಿದೆನಯ್ಯಾ

- ರಮ್ಯ ಕೆ ಜಿ, ಮೂರ್ನಾಡು
ಅಲೆಯುತ್ತಿದೆ ಈ ರೂಹು
ನನ್ನೊಳಗಿಂದ ಚಿಗಿದು
ನಿನ್ನ ತುದಿಬೆರಳಲಿ ಕುಣಿದು
ಗಾಳಿತುಟಿಯ ಸೋಕಿದಾಕ್ಷಣ
ಬೆವೆತು,
ಮಳೆ ಹೊಯ್ಯಿಸಿ
ಮಣ್ಣ ಘಮದೊಳಗೆ
ಲೀನವಾಗುವಂತೆ.
ಹೊಳೆಯುತ್ತದೆ ನಿನ್ನ
ಕಣ್ಣಬೊಂಬೆಯೊಳಗೆ,
ಎಷ್ಟೋ ನೋವು ಕುಡಿದ
ನದಿಯೆದೆಯೊಳಗೆ,
ನೆನಪ ಮೀಟುವ ಘಳಿಗೆಗೆಲ್ಲ
ಪಾರಿಜಾತದ ಪರಿಮಳವುಳಿವಂತೆ.
ಕಲೆಯುತ್ತದೆ ಮತ್ತೆ,
ನಿನ್ನ ಮಾತು ಜೀವವಾಗುವಂತೆ
ನಗೆಬೆಳಕು ಕೈಹಿಡಿದು
ಜೊತೆ ನಡೆಯುವಂತೆ
ಅನಂತ ಬಾನು-
ಪ್ರೇಮಗಡಲಿಗೆ ಬಾಗುವಂತೆ
ತಿರುವುಗಳಲಿ ಹೊರಳಿ,
ಕವಲಾಗುವಾಗ
ಹಾಡೊಂದು ಕಾಡುವಂತೆ
ಜಪಮಣಿ ಎಣಿಸುವ
ಬೆರಳು, ಲೆಕ್ಕ ಮರೆತು
ಉಸಿರ ಪಲುಕನು
ಚಿತ್ರವಾಗಿಸುವಂತೆ.
ಕವಿತೆ : ರಮ್ಯ ಕೆ ಜಿ, ಮೂರ್ನಾಡು
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ; ಇಲ್ಲಿವೆ ಪ್ರಮುಖಾಂಶಗಳು
-
ದಿನದ ಸುದ್ದಿ4 days ago
ಮುಂದಿನ ನಾಯಕರಾಗಿ ತಯಾರಾಗಿ : ಪ್ರೊ ಇಗ್ನಿಸಿಯಸ್
-
ದಿನದ ಸುದ್ದಿ2 days ago
ಮಹಿಳಾ ಸಬಲೀಕರಣಕ್ಕೆ ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆಯೇ ಪೂರಕ : ಡಾ.ಬಾಬು
-
ದಿನದ ಸುದ್ದಿ2 days ago
ಸರ್ಕಾರಿ ವೈದ್ಯರು ಬೆಳಗ್ಗೆ 9 ಗಂಟೆಯಿಂದ 4 ಗಂಟೆಯವರೆಗೆ ಕಾರ್ಯ ನಿರ್ವಹಿಸುವುದು ಕಡ್ಡಾಯ:ಸಚಿವ ಶರಣಪ್ರಕಾಶ್ ಪಾಟೀಲ್
-
ದಿನದ ಸುದ್ದಿ2 days ago
ಸೌಜನ್ಯ ಸಾವು ; ನಾಡಿನಾದ್ಯಂತ ಜನಾಂದೋಲನ : ಹಿರಿಯ ಪತ್ರಕರ್ತ ಪುರಂದರ್ ಲೋಕಿಕೆರೆ
-
ದಿನದ ಸುದ್ದಿ8 hours ago
ಮಾರ್ಚ್ 15 ರಂದು ಬೃಹತ್ ಉದ್ಯೋಗ ಮೇಳ ; ಸಂಜೆ ಬಿಐಇಟಿ ಸಾಂಸ್ಕೃತಿಕ ಕೇಂದ್ರದಲ್ಲಿ ಸಂಗೀತ ಪ್ರಭ
-
ದಿನದ ಸುದ್ದಿ6 hours ago
ದಾವಣಗೆರೆಯಲ್ಲಿ ಉದ್ಯೋಗ ಮೇಳ | ಬನ್ನಿ ಭಾಗವಹಿಸಿ, ಉದ್ಯೋಗ ಪಡೆಯಿರಿ
-
ದಿನದ ಸುದ್ದಿ6 hours ago
ಚನ್ನಗಿರಿ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ’